ವಿಷಯಕ್ಕೆ ಹೋಗಿ

ಆ ಕನಸಿನ ಬಣ್ಣಗಳು... ಹಾಲ್ಕುರಿಕೆ ಥಿಯೇಟರ್ ಮೂಡಿಸಿದ ಅದ್ಭುತ ರಂಗಹಾದಿ

ಥಿಯೇಟರ್ ಆಫ್ ಎಮೋಷನ್ಸ್...
ಬದುಕು ತುಂಬ ಸಂಕೀರ್ಣತೆಗಳಿಂದ ಕೂಡಿರುವಂಥದು. ಯಾವುದೂ ಅಷ್ಟು ಸರಳವಲ್ಲ. ಹಾಗೆ ನೋಡಿದರೆ ಮನುಷ್ಯ ಪ್ರೀತಿ ಮತ್ತು ಒಟ್ಟಾರೆಯಾಗಿ ಬದುಕು ಅತ್ಯಂತ ಸರಳ ಹಾಗೂ ಸಹಜತೆಯಿಂದ ಕೂಡಿರಬೇಕಿತ್ತು. ಹಾಗಾಗುತ್ತಿಲ್ಲ. ಬದುಕು ಇತ್ತೀಚೆಗಂತೂ ತುಂಬ ಸಂಕೀರ್ಣಗೊಳ್ಳುತ್ತ ಸಾಗಿದೆ. ಅದು ಮುಂಚಿನ ಸಹಜ ಸಂಭ್ರಮಗಳಿಂದ ದೂರವಾಗಿ, ಮೈಗೂಡಿಸಿಕೊಂಡ ಚಟ ಮತ್ತು ಖಯಾಲಿಗಳಿಂದ ನರಳುತ್ತಿದೆ.

 ಮಟಿರಿಯಲಿಸ್ಟಿಕ್ ಜಗತ್ತು ವಸ್ತುಗಳಲ್ಲಿ ಸುಖವನ್ನು ತೋರಿಸುತ್ತಿದೆ. ಅದನ್ನು ಕೊಂಡುಕೊಳ್ಳುವುದಕ್ಕೇ ನಾವೆಲ್ಲ ಇಷ್ಟು ದುಡಿಯೋದು ಮತ್ತು ಸಂಪಾದಿಸೋದು ಎಂದು ಜಾಹಿರಾತುವಿನ ಮೂಲಕ, ಸೀರಿಯಲ್, ಸಿನಿಮಾ ಮೂಲಕ ಹೇಳುತ್ತಿದೆ. ನಾವದನ್ನು ನಂಬಿ ಕೂತಿದ್ದೇವೆ. ಹೆಚ್ಚು ಸಂಪಾದನೆ ಅಂದರೆ ಹೆಚ್ಚೆಚ್ಚು ಚಾಯ್ಸ್! ವಸ್ತು ಹೊಂದುವುದಕ್ಕೆ ಚಾಯ್ಸ್ ಹೇಗೋ ಸುಖಕ್ಕೂ ವಿವಿಧ ನಮೂನೆಗಳು... ಹಣ ಎಲ್ಲವನ್ನು ತಂದುಕೊಡಲ್ಲ ಎಂದು ನಾವೆಲ್ಲ ಹೇಳಿಕೊಳ್ಳುತ್ತಿದ್ದೆವು. ಆದರೆ, ಇಂದು ಹಣ ಎಲ್ಲವನ್ನು ಸಾಧ್ಯವಾಗಿಸುತ್ತಿದೆಯಲ್ಲ!

ಸೆಕ್ಸ್ ಕೂಡ ಎರಡು ಆರ್ಗನ್ ನಡುವಿನ ಸಂಬಂಧ, ಎರಡೂ ಲಿಂಗಗಳಿಗೆ ಪರಸ್ಪರ ಕೊಡುಕೊಳ್ಳುವಿಕೆ ಮಾತ್ರ ಮುಖ್ಯವಾಗಿದೆ. ಅದು  ವಿಜಾತಿ ಮತ್ತು ಸಜಾತಿ ಎರಡೂ ಆದೀತು. ಅದೂ ಸಿಕ್ಕದಿದ್ದರೆ ನೇರವಾಗಿ ನಿಮ್ಮದೇ ಒಂದನ್ನು ಸಿದ್ಧಪಡಿಸಿಕೊಂಡರಾಯ್ತು! ಇಷ್ಟು ಸಿಂಪಲ್ ಆಗಿದೆ ಸುಖದ ಕಲ್ಪನೆ!

ದೇಹ ಸಂಬಂಧ ಮತ್ತು ಪ್ರೀತಿ ಎರಡಕ್ಕೂ ಅಂಥ ಸಂಬಂಧವೇನೂ ಇಲ್ಲ. ಸೆಕ್ಸ್ ಎಂದರೆ ಒಬ್ಬರನ್ನು ಸೇರಿ ನಮ್ಮದಷ್ಟು ಅವರಿಗೆ ಮತ್ತು ಅವರಿಂದ ಸಾಕಷ್ಟನ್ನು ನಾವು ಪಡಕೊಳ್ಳುವ ಹಂಬಲವಾಗಿದೆ. ಎಲ್ಲೋ, ಹೇಗೋ ಸೇರಿದಾಗ ಒಂದಿಷ್ಟು ಸುಖಿಸುವುದರಲ್ಲಿ ತಪ್ಪೇನಿದೆ? ಕೆಲಸದ ಧಾವಂತದಲ್ಲಿ, ಸಂಪಾದನೆಯ ಗುಂಗಿನಲ್ಲಿ ಒಂದು ಜಾಗೆಯಿಂದ ಮತ್ತೊಂದು ಜಾಗೆಗೆ ಹಾಗೇ ಎಲ್ಲೆಡೆ ಸರಿದಾಡುತ್ತಲೇ ಇರುವ ನಾವು ಸದಾ ನಮ್ಮವರ ಜತೆಯಲ್ಲೇ ಎಲ್ಲಿ ಇರೋಕಾಗುತ್ತೆ? ದಿನ ದುಡಿದು ಸುಸ್ತಾದ ಜೀವಕ್ಕೆ ಏನೋ ಬೇಕೆನಿಸುವಂತೆ ದೇಹಕ್ಕೂ ಬೇಕಲ್ಲ?!... ಇಲ್ಲೇ ರಂಗೀಲಾ, ಮಟಿರಿಯಲಿಸ್ಟಿಕ್ ಜಗತ್ತು ನಮ್ಮನ್ನು ಕೊಡವಿ ಹಾಕೋದು. ನಮ್ಮ ಅನೈತಿಕ ಭಾವನೆಗಳ ಉನ್ಮತ್ತಲೋಕ ಸೆಳೆದುಬಿಡೋದು. ಈ ಕಾಲದ ಬಹುದೊಡ್ಡ ಅವಕಾಶಗಳ ಬೆಟ್ಟವೆಂದರೆ ಇದೇ. ಇಲ್ಲಿ ನಾವೆಲ್ಲ ತಂಗಲು ಹಾತೊರೆಯುತ್ತಿದ್ದೇವೆ.

 ಹಾದರ ಅನ್ನೋದು ನಮ್ಮ ಜನಪದರಲ್ಲಿ ರಸಿಕತೆ, ಶೃಂಗಾರ ರಸಕ್ಕಷ್ಟೇ ಸೀಮಿತಗೊಂಡಿತ್ತು. ಬಿತ್ತನೆ ಮತ್ತು ರಾಶಿಯ ಸಂಭ್ರಮದಲ್ಲಿ ಕಳೆದುಹೋಗಲು ಮತ್ತು ಆದ ದಣಿವು ಆರಿಸಿಕೊಳ್ಳಲು ಕೆಲ ಉನ್ಮತ್ತ ಕ್ಷಣಗಳಿಗಾಗಿ ಅವರಲ್ಲೂ ತಹತಹಿಕೆ ಇತ್ತು. ಆಗಲೇ ಅವರಲ್ಲಿ ರಸಿಕನೊಬ್ಬ ಹುಟ್ಟಿಕೊಳ್ಳುತ್ತಿದ್ದ, ಹಾದರದ ಅಗ್ನಿಕುಂಡ ಹೊತ್ತಿ ಉರಿಯುತ್ತಿತ್ತು. ಮತ್ತು ತನ್ನ ಮೈಯಲ್ಲೆಲ್ಲ ಕೆನ್ನಾಲಗೆ ಚಾಚಿದ ಅಗ್ನಿ ಶಮನಕ್ಕೆ ಮಳೆಗಾಗಿ ಕಾತರಿಸುವ ಮಣ್ಣಿನಂಥ  ಹೆಣ್ಣು ಯಾವಾಗಲೂ ಇದ್ದಾಳೆ. ಹೀಗಾಗಿ ಹಾದರ ಮನುಷ್ಯ ಚರಿತ್ರೆಯ ಒಂದು ಭಾಗವೇ ಆಗಿದೆ.

 ಅದು ಬರಿಯ ಈ ಕಾಲದ ತಲ್ಲಣ ಎಂದೇನಲ್ಲ. ಆಗದು ಸಹಜ ಬಯಕೆ ಅನ್ನಿಸಿಕೊಂಡಿತ್ತು. ತಣಿದಾಗ ಪಾಪ ಪ್ರಜ್ಞೆಯಿಂದಲೂ ನರಳುವಂಥ ಸಹಜತೆ ಆಗಿತ್ತು. ಆದರೆ ಈಗದು ಚಟವಾಗಿದೆ. ಸ್ಟೈಲ್, ಅಹಮಿಕೆಯ ವಿಷಯವಾಗಿದೆ. ಕಾಲದ ಇಂಥದೂ ಒಂದು ಸೊಬಗಿನಲ್ಲಿ ಕಳೆದುಹೋಗುವ ಬಯಕೆಯಿಂದ ಯಾರು ಮುಕ್ತವಾಗಿದ್ದಾರೆ? ಪಾಪ ಪ್ರಜ್ಞೆಯಿಂದ ನರಳುವವರು ಚರ್ಚ್ ಒಳಗೆ ಪಾಪನಿವೇದನೆ ಮಾಡಿಕೊಳ್ಳುವಂತೆ ಈಗಿನ ಮನೋವೈದ್ಯರು ಮತ್ತು ಲೈಂಗಿಕ ತಜ್ಞರ ಸಾಂತ್ವನ ಕೇಳಿದರೂ ಸಾಕು...

ಎಲ್ಲ ನನ್ನ ಸುತ್ತ ಸುತ್ತಬೇಕು. ನನ್ನ ಸೇರುವ ಹಂಬಲ ಹೊಂದಬೇಕು. ಬಯಸಿದ್ದೆಲ್ಲ ಈ ಸೌಂದರ್ಯಕ್ಕೆ, ಸಂಪತ್ತಿಗೆ ದಕ್ಕಬೇಕು. ಎನ್ನುವ ಉಮೇದಿ ಬಹುತೇಕರಲ್ಲಿ ನಿತ್ಯ ಇಂಚಿಂಚು ಹೆಚ್ಚುತ್ತಲೇ ಇದೆ. ಒಬ್ಬ ಝೋಪಡಪಟ್ಟಿಯವ ಕೂಡ ತನ್ನ ಮಗ ಅಥವಾ ಮಗಳಿಗೆ ಉಳ್ಳವರ ಮನೆಯಿಂದ ಸಂಬಂಧ ಬಯಸುತ್ತಿದ್ದಾನೆ.  ಹಸಿವಿನ, ನೋವಿನ, ದುಡಿಮೆಯ ರುಚಿಯನ್ನು ಅವನೂ ಕಳೆದುಕೊಳ್ಳುತ್ತಿದ್ದಾನೆ. ನಮ್ಮ ಮಹಾನಗರಗಳಿಗೆ ಫ್ಲೈ ಓವರ್, ಮೆಟ್ರೊ ಕಾಮಗಾರಿಗೆ ಬರುವ ದೂರದ ಹಳ್ಳಿಯ ರೈತ ಬರಿಯ ಹೊಟ್ಟೆಗೆ ಗಂಜಿ ಕಾಣಲು ಮತ್ತು ಬರದಿಂದ ಭಯಗೊಂಡು ಬಂದದ್ದಲ್ಲ. ಅವನಲ್ಲೂ  ಸಂಪಾದನೆಯ ಗುಂಗು ಹಿಂಡಿಹಾಕುತ್ತಿದೆ. ಬರದಿಂದ ತತ್ತರಿಸಿದ ಉತ್ತರ ಪ್ರದೇಶದ ಕೆಲ ಹಳ್ಳಿಗಳಲ್ಲಿನ ಹೆಣ್ಣುಗಳು ಅವರ ಗಂಡಂದಿರಿಂದಲೇ ಮಾರಲ್ಪಡುತ್ತಿವೆ. ಮಹಿಳೆಯೇ ಮುಖ್ಯಮಂತ್ರಿ ಆಗಿರುವ ನಾಡಿನ ಎಷ್ಟೋ ಬಡ ಹೆಣ್ಣುಗಳು ಹೊಟ್ಟೆ ಹೊರೆದುಕೊಳ್ಳಲು ಬಾಡಿಗೆ ತಾಯಿಗಳಾಗುತ್ತಿವೆ!

 ಯುದ್ಧ ಅನ್ನೋದು ಸಮರಕಲೆಯಂತೆ ಮೋಜು ಕೊಡುತ್ತಿದೆ. ಅದು ಅಷ್ಟಕ್ಕೇ ಸೀಮಿತಗೊಂಡಿಲ್ಲ. ವ್ಯಾಪಾರದ ಸರಕಾಗಿದೆ. ರೊಟ್ಟಿ, ಬೆಣ್ಣೆ ತರುವುದಲ್ಲ... ಬಾಂಬ್, ಗನ್ ಮತ್ತು ಒಟ್ಟು 'ರಕ್ಷಣೆ' ಅನ್ನೋದನ್ನೇ ಮಾರಾಟ ಮಾಡುವ ವ್ಯಾಪಾರದ ಸೆನ್ಸೇಶನಲ್ ಜಾಹಿರಾತಾಗಿದೆ. ಭಯದ ವಾತಾವರಣ ಸೃಷ್ಟಿಸಿ ರಕ್ಷಣೆಯ ಪುಕ್ಕಲುತನ ಬೆಳೆಸುತ್ತಿದೆ. ವಸ್ತುಗಳು ಸೂಕ್ತ ರಕ್ಷಣೆ ನೀಡಬಲ್ಲವು, ತಂತ್ರಜ್ಞಾನ ಜೀವ ಕಾಪಾಡಬಲ್ಲವು ಎಂದು ನಂಬಿಸಲು ಯುದ್ಧಗಳು ನಡೆಯುತ್ತವೆ. ಅಲ್ಲಿ ಸಿಡಿಯುವ ಪ್ರತಿ ಬಾಂಬ್ ಜೀವವನ್ನು ಉಳಿಸಿಕೊಳ್ಳಲು ಬಂದೂಕಿನ, ಅಸ್ತ್ರ, ಶಸ್ತ್ರಗಳ ನೆರವು ಪಡೆದುಕೊಳ್ಳಿ ಎಂದು ದೇಶ ದೇಶಗಳಿಗೆ ಸಾರುತ್ತಿದೆ. ಸೆಕ್ಯುರಿಟಿ ಟೆಕ್ನಾಲಜಿ ಮಾರಾಟವಾಗುತ್ತಿರುವುದು ಈ ಕಾರಣದಿಂದಲೇ. ದೇಶವೊಂದು ರಕ್ಷಣೆಗಾಗಿ ಕೊಲ್ಲುವ ಉಪಾಯಗಳನ್ನು, ತಂತ್ರಗಳನ್ನು ಅಭ್ಯಾಸ ಮಾಡಬೇಕಾಗುತ್ತದೆ. ಅಣುಶಕ್ತಿ, ಕ್ಷಿಪಣಿ ಅಭಿವೃದ್ಧಿ ಎನ್ನುವ ಸಾವಿನ ಸರಕುಗಳ ತಯಾರಿಕೆಗೆ ವಿಜ್ಞಾನಿಗಳನ್ನು ಸೃಷ್ಟಿಸಲಾಗುತ್ತದೆ. ಕೊಲ್ಲುವ ಏಜೆಂಟರಂತೆ ಸೈನ್ಯ ಬಳಸಿಕೊಳ್ಳಲಾಗುತ್ತದೆ....
 ಹೀಗೆ ಹೆಣ್ಣು ಮತ್ತು ದೇಶವನ್ನು ಭೋಗಿಸುವವರ ತೆವಲಿಗೆ ಇಡೀ ಮನುಷ್ಯ ಬದುಕು ನರಳಬೇಕಾಗಿದೆ.

 ನಮ್ಮ ನಡುವಿನ ತಪ್ಪು ಗ್ರಹಿಕೆಗಳು,  ಪ್ರೀತಿ ಮತ್ತು ವಿಶ್ವಾಸದ ಕೊರತೆಯಿಂದ ಎದ್ದ ಅಪನಂಬಿಕೆಗಳು ಒಂದು ಸುಂದರ ಸಂಬಂಧದ ನಡುವೆ ಮಲಗಿಬಿಡುತ್ತವೆ. ನೆಮ್ಮದಿ ಜಾಡಿಸಿ ಒದ್ದು ಹೊರಕ್ಕೆ ಹೋಗಿಬಿಡುತ್ತದೆ. ಅಂದುಕೊಂಡ ಬಣ್ಣಗಳು, ಬೆರಗು ಹುಟ್ಟಿಸಿದ ಬಣ್ಣಗಳೆಲ್ಲ ಮಾಸತೊಡಗುತ್ತವೆ. ಜತೆಯಲ್ಲಿ ಆಗಲೇ ಒಂದಿಷ್ಟು ಕಲ್ಪಿಸಿಕೊಂಡ ಕನಸಿನ ಬಣ್ಣಗಳು ಕಾಡತೊಡಗುತ್ತವೆ. ಹತಾಶೆ ಸೆಟೆದೆದ್ದು ನಿಲ್ಲುತ್ತದೆ. ಯಾವ ಸಾಂತ್ವನಗಳೂ ಮುರಿದ ಮನಸುಗಳಿಗೆ ಮದ್ದು ತಂದುಕೊಡಲ್ಲ...

 ರಂಗಗೆಳೆಯ ಹಾಲ್ಕುರಿಕೆ ಶಿವಶಂಕರ್ ಶುಕ್ರವಾರ (6-11-2009 ಸಂಜೆ 7ಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಯೋಗಾತ್ಮಕ ಪ್ರಯೋಗ ಆ ಕನಸಿನ ಬಣ್ಣಗಳು ಪ್ರದರ್ಶನಗೊಂಡಿತು ) ಕೆಲವು ಪಾತ್ರಗಳ ಮೂಲಕ ಇಂಥ ಹಲವು 'ಆಘಾತಕಾರಿ' ಕನಸುಗಳ ಬಣ್ಣಗಳನ್ನು ತಮ್ಮ ವಿಶಿಷ್ಠ ರಂಗಪ್ರಯೋಗ ಮತ್ತು ರಂಗಭಾಷೆಯ ಸೊಗಡಿನಿಂದ ರಂಗದ ಮೇಲೆ ಹಿಂಡಿಹಾಕಿದರು. ಎಷ್ಟೊಂದು ಹಿಂಸೆ ಮತ್ತು ಭ್ರಮೆಗಳು ಆ ಬಣ್ಣಗಳಲ್ಲಿ!... ಒಂದು ಕಾಲದ ಜೀವನಶೈಲಿಯ ಬೆಚ್ಚಿಬೀಳಿಸುವ ಅನೇಕ ಸತ್ಯಗಳನ್ನು ಶಿವಶಂಕರ್ ತುಂಬ ಬೋಲ್ಡ್ ಆಗಿ ಹೇಳಿದ್ದಾರೆ.

 ಅವರ ಎಲ್ಲ ಪಾತ್ರಗಳು ತಮ್ಮೆಲ್ಲ ಕನಸು ಮತ್ತು ಭ್ರಮೆಗಳ ಜತೆ ಮನಸಿನ ವಿಕಾರಗಳನ್ನು ಹೊರ ಹಾಕಿ ಪರಿಹಾರಕ್ಕೆ ಅರ್ಜಿ ಸಲ್ಲಿಸಿದವು. ರಂಗದ ಮೇಲೆ ನಡೆದ ಇಂಥ ಅನಾವರಣಕ್ಕೆ ನಾಟಕಕಾರ ಮತ್ತು ನಿರ್ದೇಶಕ, ಅಲ್ಲೇ ಪರಿಹಾರ ಹುಡುಕುವ ಯತ್ನ ನಡೆಸದೇ ಮನೋವಿಜ್ಞಾನ ಮತ್ತು ಫಿಲಾಸಫಿ ಅನ್ನು ಕೂಡ ಅಸಹಾಯಕ ಸ್ಥಿತಿಗೆ ನೂಕಬಲ್ಲ ಈ ಕಾಲದ ತಲ್ಲಣಗಳಿವು, ಸಮಸ್ಯೆ, ಸಂಕೀರ್ಣತೆಗಳಿವು ಎಂದು ನಿರೂಪಿಸಿದರು. ತಾವೇ ಅಥವಾ ನಾಟಕದ ಅಂತಿಮ ಉದ್ದೇಶ ಪ್ರವಚನಕ್ಕೆ ನಿಲ್ಲೋದು ಬೇಡ ಎನ್ನುವ ತೀರ್ಮಾನವನ್ನೂ ಪ್ರಕಟಿಸಿದರು. ರಂಗದ ಮೇಲೆ ಅವರ ಒಂದೊಂದು ಪಾತ್ರಗಳು ತಮ್ಮೊಳಗಿನದೆಲ್ಲ ಅನಾವರಣಗೊಳಿಸಿದಂತೆಲ್ಲ ನಟರ ಮತ್ತು ಪ್ರೇಕ್ಷಕರ ನಡುವಿನ ಅನುಸಂಧಾನ ನಡೆದೇ ಇತ್ತು.

ನಾಟಕ ನೋಡುತ್ತಿದ್ದಂತೆ ನನ್ನಲ್ಲೂ ಹಲವು ಪ್ರಶ್ನೆಗಳು, ಆತಂಕಗಳು, ತಲ್ಲಣಗಳು ಇಣುಕಿದವು, ಕೆಣಕಿದವು. ನಾಟಕದ ವಿಚಾರಗಳು ನನ್ನಲ್ಲೂ ಪ್ರವಹಿಸಲು ನಿಂತವು. ಅಂತೆಯೇ ಇಷ್ಟೆಲ್ಲವನ್ನು ನನಗೂ ಮನವರಿಕೆ ಮಾಡಿಕೊಟ್ಟವು. ಒಂದಷ್ಟನ್ನು ಯೋಚಿಸುವಂತೆ, ಹೊರಹಾಕುವಂತೆ ಮಾಡಿದವು.

ಎಲ್ಲೆಡೆ ಸಿದ್ಧ ಮಾದರಿಗಳೇ ಚಲಾವಣೆಯಲ್ಲಿರೋದು. ಸಿದ್ಧ ಉಡುಪು, ಸಿದ್ಧ ಆಹಾರ, ಸಿದ್ಧ ಸೂತ್ರಗಳನ್ನು ನೆಚ್ಚಿಕೊಂಡ ಈಗಿನ ಜನರೇಶನ್ ಹೊಸದೊಂದು ಬೆರಗು ಮೂಡಲೆಂದು ಕಾತರಿಸುತ್ತಿದ್ದ ಹೊತ್ತಲ್ಲಿ ಹಾಲ್ಕುರಿಕೆ ಶಿವಶಂಕರ್ ಎಂಥ ಅದ್ಭುತ ಬೆರಗು ಮೂಡಿಸಿಬಿಟ್ಟರು. ಚಿಂತನೆಯ ಹೊಸ ಹರವನ್ನು ಕಟ್ಟಿಕೊಟ್ಟರು!

ಕಡೇ ಮಾತು:
 ಟಿವಿ ಮಾಧ್ಯಮ ರಿಯಾಲಿಟಿ ಶೋ ಮತ್ತು ಲೈವ್ ಪ್ರಸಾರದ ಮೂಲಕ ಜೀವಂತ ರಂಗಮಂಚವೊಂದರ ಅಸ್ತಿತ್ವಕ್ಕೇ ಚೆಕ್ ಕೊಟ್ಟು ಕೂತಿದೆ. ನಾಟಕ ನೋಡಲು ಜನಾ ಬರ್ತಿಲ್ಲ ಎಂಬ ಗೊಣಗಾಟ ನಡೆದ ಹೊತ್ತಲ್ಲಿ,  ಹಾಲ್ಕುರಿಕೆ ಶಿವಶಂಕರ್ ತಮ್ಮ ಹೊಸ ಪ್ರಯೋಗದ ಮೂಲಕ ಎಷ್ಟೊಂದು ಪ್ರೇಕ್ಷಕರನ್ನು ಸೆಳೆದುಬಿಟ್ಟರು!.. ಕಲಾಕ್ಷೇತ್ರದ ನಾಟಕಗಳಿಗೆ ಮಾಮೂಲಾಗಿ ಸೇರುತ್ತಿದ್ದ ಹಳಸಲು ಮುಖಗಳ್ಯಾವೂ ಅಲ್ಲಿ ಕಾಣಿಸಲಿಲ್ಲ. ಎಲ್ಲ ಫ್ರೆಶ್ ಮುಖಗಳು! ನಾಟಕ ಮುಗಿಯುವ ತನಕ ತಾವೂ ಪಾತ್ರಗಳ ಆತಂಕಗಳಲ್ಲಿ ತಮ್ಮವಷ್ಟನ್ನೂ ಕಂಡರು. ಹೊಸ ನಾಟಕ ಭಾಷೆ, ಪ್ರಯೋಗದ ಹೊಸ ಸೂತ್ರ... ಹೀಗೆಲ್ಲ ಇಡೀ ರಂಗಭೂಮಿಗೆ ಹೊಸದನ್ನು ಅದೆಷ್ಟು ಸರಳವಾಗಿ ಒಪ್ಪಿಸಿಬಿಟ್ಟರು!... ಇಟ್ಸ್ ಅಮೇಜಿಂಗ್...

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಷ್ಕ್‌ ಕೆ ಇಮ್ತೆಹಾನ್‌ ಔರ್‌ ಭೀ ಹೈ’.. ಇಮ್ರಾನ್‌ ಖಾನ್‌!

ಪಾಕಿಸ್ತಾನದ ಬಗ್ಗೆ ಮಾತನಾಡುವುದು ಮಹಾ ಪಾಪದ ಕೆಲಸವೇನಲ್ಲ. ಹಾಗೆ ಭಾವಿಸಬೇಕಿಲ್ಲ. ಅದು ಒಪ್ಪಿತವೊ ಇಲ್ಲವೋ, ಅದರ ಬಗ್ಗೆ ಅಲಕ್ಷ್ಯವೋ ನಿರ್ಲಕ್ಷ್ಯವೊ ಏನೇ ಆದರೂ ಅದು ಒಂದು ದೇಶ. ನೆರೆಯ ರಾಷ್ಟ್ರ. ‘ಪಡೋಸಿ...’ ಸಂಬಂಧದಲ್ಲಿ ನಮ್ಮದೇ ಕರುಳಬಳ್ಳಿ. ಭಾಷೆ, ಜನಜೀವನ ಶೈಲಿಯಲ್ಲಿ ಬದಲಾದರೂ ಮನುಷ್ಯ ಭಾವ, ಬದುಕುವ ಸಾಮಾನ್ಯ ಕಾಳಜಿ  ಒಂದೇ. ಹಾಗೆ ನೋಡಿದರೆ ಸಾಂಸ್ಕೃತಿಕವಾಗಿ ಎರಡೂ ದೇಶಗಳು ಅಭಿನ್ನ. ನಮ್ಮಲ್ಲಿರುವ ಹಾಗೆ ಅಲ್ಲಿಯೂ ಪ್ರಜಾಪ್ರಭುತ್ವ ಇದೆ. ಅಲ್ಲಿ ನಡೆಯುವುದು ಇಲ್ಲೂ ನಡೆಯುತ್ತದೆ. ಅಲ್ಲಿ ನಡೆಯಲೇಬಾರದ್ದು ಇಲ್ಲೂ ನಡೆಯಲೇಬಾರದು.  ತೀವ್ರವಾದ ನಮ್ಮಲ್ಲಿನದಕ್ಕಿಂತ ಅಲ್ಲಿ ತುಸು ಹೆಚ್ಚು ಸವಾರಿಗೆ ಹವಣಿಸಿದೆ. ಅಲ್ಲಿನ ಮಿಲಿಟರಿ ಅತಿರೇಕದ್ದು. ಅಕ್ಷಮ್ಯ. ಮತ್ತೆ ದೇಶ ಪುಟ್ಟದಾದಷ್ಟು ಅದಕ್ಕೆ ಭಯಗಳು ಜಾಸ್ತಿ. ಮಿಲಿಟರಿ ಕವಚದಲ್ಲಿ ಅದು ಸುರಕ್ಷಾ ಭಾವವನ್ನು ಕಲ್ಪಿಸಿಕೊಳ್ಳುತ್ತದೆ. ಅದೊಂದು ತರಹದ ಸಮಾಧಾನ. ಆದರೆ ಭ್ರಮೆಯಿಂದ ಕೂಡಿದ್ದು. ಭಯೋತ್ಪಾದನೆ ಕೂಡ ಒಂದರ್ಥದಲ್ಲಿ ಪುಕ್ಕಲುತನವೇ ಆಗುತ್ತದೆ. ಹಿಂಸಾ ಪ್ರವೃತ್ತಿಗೆ ಹೆದರಿಸುವುದೇ ಕೆಲಸ. ಹೆದರಿಸುವವರು ಶೂರರು, ಧೀರರು ಮತ್ತು ಜೀನಿಯಸ್‌ ಆಗಿರಲು ಹೇಗೆ ಸಾಧ್ಯ? ಮುಖ್ಯವಾಗಿ ಅಲ್ಲಿನ ವಿದ್ಯಮಾನಗಳನ್ನು ಗಮನಿಸುವುದಾದರೆ, ಮಿಲಿಟರಿ, ಮತಾಂಧರು, ಭಯೋತ್ಪಾದಕರು, ಭ್ರಷ್ಟರು ಇದೆಲ್ಲದರಿಂದ ಪಾಕಿ ತುಂಬ ರೋಸಿ ಹೋಗಿದ್ದಾನೆ. ಒಂದು ಸೂಕ್ತ ಪರ್ಯಾಯಕ್ಕಾಗಿ ಹಂಬಲಿಸಿದ್...

ನಾನು ನೀನಾಸಂ ಪದವೀಧರನಲ್ಲ...

ನೀನಾಸಂ ಪದವಿ ನನ್ನ ತಲೆಗೆ ಅನಗತ್ಯ ಭಾರ ಸ್ವಾಮೀ. ಅಷ್ಟು ಕಪ್ಪು ಸುಂದರಿಯರ ಭಾರವೇ ನನ್ನ ತಲೆಗೆ ಸಾಕಾಗಿ ಹೋಗಿದೆ. ಇನ್ನು ಇಷ್ಟು 'ವಜನ್' ಪದವಿ ಕಿರೀಟ ಬೇಡವೇ ಬೇಡ. ಸುಮ್ಮನೇ ಖಾಸಗಿಯಾಗಿ ಡೈರಿಯ ಹಾಗೆ ಬೆಚ್ಚಗೆ ನನ್ನ ಜತೆಗೆ ಸದಾ ಇರಲಿ ಎಂದುಕೊಂಡು ಈ ಬ್ಲಾಗ್ ರೂಪಿಸಿದ್ದೇನಷ್ಟೇ. ಅವಧಿ ಬ್ಲಾಗ್ ನನ್ನ ಈ ಪುಟ್ಟ ಯತ್ನಕ್ಕೆ ಬೆನ್ನು ತಟ್ಟಿದ್ದು ಸಂತೋಷವೇ. ಆದರೆ, ನನ್ನ ಬಗ್ಗೆ ಬೆನ್ನುತಟ್ಟುವ ಸಾಲುಗಳ ಬರೆಯುತ್ತ ನೀನಾಸಂ ಪದವೀಧರ ಎನ್ನುವ ಒಂದು ತಪ್ಪು ಮಾಹಿತಿ ಕೂಡ ನುಸುಳಿಕೊಂಡಿದೆ. ಸ್ವಾಮೀ ನಾನೀ ನೀನಾಸಂ ಸುದ್ದಿಗೇ ಹೋದವನಲ್ಲ. ಅಲ್ಲಿ ಕಲಿತು ಬಂದವರ ಜತೆ 'ಬೇಜಾನ್' ಜಗಳ ಮಾಡಿದಿನಿ ಅಷ್ಟೇ.

ಕಲೆ ಮತ್ತು ನೈತಿಕತೆ

ಕಲಾವಿದನೊಬ್ಬನ ಕಲೆಯ ಬಗೆಗಿನ ಅನುರಾಗ, ಶ್ರದ್ಧೆ, ವಿಶ್ವಾಸಾರ್ಹತೆ ಮತ್ತು ಧ್ಯಾನ ಎಲ್ಲವೂ ಬದ್ಧತೆಯಿಂದ ಕೂಡಿರುತ್ತದೆ. ಅವನೊಳಗೇ ಒಂದು ಸ್ವರ್ಗ ಸಮಾನವಾದ ಜಗತ್ತೊಂದು ರೂಪುಗೊಂಡಿರುತ್ತದೆ. ಅದನ್ನು ಬೇಕಿದ್ದರೆ ಕಾವ್ಯದ  ಅಂತಃದೃಷ್ಟಿ, ಅಂತಃಪ್ರಜ್ಞೆ ಅಥವಾ ಅಂತಃ ಸೂಕ್ಷ್ಮತೆ ಅಂತ ಅನ್ನಿ. ಕಾವ್ಯ ಎಂದಾಕ್ಷಣ ಅಕ್ಷರಗಳ ಕಲಾಕೃತಿ ಅಲ್ಲ. ಕಾವ್ಯ ಅಥವಾ ಪೊಯಟ್ರಿ ಅನ್ನೋದು ಎಲ್ಲದರೊಳಗೂ ಇರುವ ಅವ್ಯಕ್ತ ಸೂಕ್ಷ್ಮ. ಅದನ್ನು ಅಭಿವ್ಯಕ್ತಿಸಲು ನಾವು ಕಂಡುಕೊಳ್ಳುವ ಮಾರ್ಗಗಳಲ್ಲಿ ಅಕ್ಷರ, ಶಬ್ದ, ಧ್ವನಿ, ಚಿತ್ರ, ಅಭಿನಯ.. ಎಲ್ಲವೂ ಒಂದು ಮಾಧ್ಯಮ. ಕಲಾವಿದ ಅಥವಾ ಕವಿ ತಾನು ಸೃಜಿಸಹೊರಟ ಕೃತಿಯಲ್ಲಿ ಇದೆಲ್ಲವನ್ನು ಪ್ರಯೋಗಕ್ಕೊಳಪಡಿಸಿ ಅದರ ಸಾರವನ್ನೇ ಅಭಿವ್ಯಕ್ತಿಯಲ್ಲಿ ಎರಕಹೊಯ್ಯುತ್ತಾನೆ. ಹಾಗಾದಾಗ ಆ ಕಲಾಕೃತಿಯಲ್ಲಿ ಧ್ವನಿಸುತ್ತಿರುವುದು ಅವನ ದೃಷ್ಟಿ, ಪ್ರಜ್ಞೆ, ತತ್ವ, ಅಭಿಪ್ರಾಯ ಆಗುತ್ತದೆ. ಇದಕ್ಕೂ ಮಿಗಿಲಾಗಿ ಅದು ಆತನ ಅನುಭಾವ ಪರಪಂಚವೇ ಆಗುತ್ತದೆ. ಪ್ರತಿನಿಧಿಸುವ ತತ್ವ ಅವನದೇ ಆಗಬಹುದು. ಅದಕ್ಕವನು ಬದ್ಧನೂ ಆಗಬಹುದು. ಇಲ್ಲವೇ ಅರಾಜಕತೆಯ ಹಾಗೊಂದು ಭಾವದಲ್ಲಿ ತನಗೂ ತನ್ನ ಕಲಾಕೃತಿಗೂ ಸಂಬಂಧವೇ ಇಲ್ಲ ಎಂದು ವಾದಿಸಬಹುದು. ಅರಾಜಕತೆಯಿಂದ ಕೂಡಿದ ಯಾವುದೂ ಬಹುಕಾಲ ಬಾಳಿ ಬದುಕುವಂಥದ್ದಲ್ಲ ಎನ್ನುವ ಎಚ್ಚರ ಕೂಡ ಮುಖ್ಯ.   ಮತ್ತೆ ಕಲಾವಿದನ ಅಭಿವ್ಯಕ್ತಿಯನ್ನು ಬರಿಯ ಸಾಂಸ್ಕೃತಿಕ ನೆಲೆಯಲ್ಲಿ ಮಾತ್ರ ಕಾಣಬೇಕಿಲ್ಲ. ಅದು ಸಮ...