ವಿಷಯಕ್ಕೆ ಹೋಗಿ

ತಾಯ್ತನದ ಸಂಭ್ರಮಕ್ಕೆ ತಿಪ್ಪಣ್ಣ ದಂಪತಿ ಕೊಟ್ಟ ಅರ್ಥಪೂರ್ಣ ಕಳೆ..

ಸಂಬಂಧಗಳಲ್ಲಿ ಮೂಲಭೂತ ಕ್ರಾಂತಿಯುಂಟಾದಾಗ ಎಲ್ಲೂ ಯುದ್ಧವಿರದು. ಮೊದಲು ನಮ್ಮೊಳಗೆ ನಾವೇ ರೂಪಿಸಿಕೊಂಡ ಬಿಂಬಗಳನ್ನು ಒಡೆದು ಹಾಕಬೇಕು. ನಾನು ಮುಸ್ಲಿಂ, ನಾನು ಹಿಂದೂ, ನಾನು ಕ್ರೈಸ್ತ, ನಾನು ಸಿಖ್, ನಾನು ಬೌದ್ಧ... ಎನ್ನುವ ನಮ್ಮ ಬಗ್ಗೆ ನಾವೇ ನಮ್ಮೊಳಗೆ ರೂಪಿಸಿಕೊಂಡ ಈ ಬಿಂಬಗಳನ್ನು ನಾಶಮಾಡಿಕೊಳ್ಳದೇ ನಮಗೆ ಶಾಂತಿ ಇಲ್ಲ...
ಹೀಗೆ ಹೆಸರಾಂತ ಬುದ್ಧಿಜೀವಿ ಜೆ. ಕೃಷ್ಣಮೂರ್ತಿ ವಿಚಾರ ಲಹರಿ ಸಾಗುತ್ತದೆ.

ಸಂಬಂಧವೆಂದರೇನು? ಸಂಬಂಧವಿರುವುದು ಎಂದರೇನು?
ಸಂಬಂಧವೆಂದರೆ ಮತ್ತೊಬ್ಬ ಮನುಷ್ಯ ಜೀವಿಯೊಡನೆ ಸಂಪರ್ಕ. ಒಟ್ಟಾಗಿ ಇರುವುದು, ಅವನ ಎಲ್ಲ ಕಷ್ಟ, ಸಮಸ್ಯೆ, ಕಾರ್ಪಣ್ಯ, ಕಳವಳಗಳೊಡನೆ ಅವು ನಿಮ್ಮವೇ ಎಂಬಂತೆ ತತ್ ಕ್ಷಣ ಸಂಪರ್ಕ ಕಲ್ಪಿಸಿಕೊಳ್ಳೋದು.
ಕೃಷ್ಣಮೂರ್ತಿ ಅವರಂತೆ ಅನೇಕರು ಇಂಥ ವಿಚಾರಗಳ ಬಗ್ಗೆ ಮಾತಾಡಿದ್ದಾರೆ.

ನನಗೆ ಅನಿಸೋದು ಇಷ್ಟು.
ಮನುಷ್ಯ ಇಂಡಿಪೆಂಡೆಂಟ್ ಅಲ್ಲವೇ ಅಲ್ಲ. ಆತ ಇಂಟರ್ ಡಿಪೆಂಡೆಂಟ್ ಎಂದು ಹೇಳಬಹುದು. ಹೌದು, ಆತನಿಗೆ ಇತರರ ಜತೆಗಿನ ಸಾಂಗತ್ಯ, ಒಡನಾಟ ಇಲ್ಲದಿದ್ದರೆ ಬದುಕೇ ಕಷ್ಟ. ಏಕಾಂಗಿಯಾಗಿರಲು ಸಾಧ್ಯವೇ ಇಲ್ಲ. ಕಡೆಪಕ್ಷ ತನ್ನ ಜತೆಗೆ ತಾನಾದರೂ ಮಾತಾಡಬೇಕು. ಅಂದರೆ ತನ್ನೊಳಗಿನ ಅವನು ಮತ್ತು ಅವನಿಂದ ಕಳಚಿಕೊಂಡು ಎಲ್ಲೊ ಅಲೆದಾಡುತ್ತಿರುವ ಇವನು ಪರಸ್ಪರ ಸ್ಪಂದಿಸಲೇಬೇಕು. ಮಾತಾಡಿಕೊಳ್ಳಲೇಬೇಕು. ಕಲ್ಪಿಸಿಕೊಂಡ ವ್ಯಕ್ತಿತ್ವ ಮತ್ತು ಒಳಗೇ ಇರುವ ಬೈ ಡಿಫಾಲ್ಟ್ ವ್ಯಕ್ತಿತ್ವಗಳೆರಡರ ನಡುವಿನ ತಿಕ್ಕಾಟ ಇರಲೇಬೇಕು. ಸ್ಪಿರಿಚ್ಯುಯಲ್ ಅಂದರೆ ಇದೇ. ತನ್ನ ಜತೆ ತಾನು ಮಾತಾಡಿಕೊಳ್ಳುವುದು, ತನ್ನನ್ನು ತಾನು ಅರಿತುಕೊಳ್ಳೋದು... ಇದು ಒಂದು ಅತ್ಯಂತ ಪ್ರಮುಖ ಹಂತ.

ಇನ್ನು ಸಹಜವಾದ ಸಾಮಾಜಿಕ ಬದುಕು ಕೂಡ ಅತ್ಯಂತ ಮುಖ್ಯವಾದುದು. ಮನುಷ್ಯ ಏಕಕಾಲಕ್ಕೆ ವೈಯಕ್ತಿಕವಾಗಿಯೂ ಮತ್ತು ಸಾಮಾಜಿಕವಾಗಿಯೂ ಬದುಕುತ್ತಾನೆ.  ನಮ್ಮೆಲ್ಲ ಯತ್ನಗಳು ವೈಯಕ್ತಿಕ ಗುರಿ ಸಾಧನೆಗಳಿಗೇ ಹೆಚ್ಚಾಗಿ ನಡೆಯುತ್ತವೆ. ಈ ದಾರಿಯಲ್ಲಿ ಎಷ್ಟೊ ಸಾರಿ ನಮ್ಮಿಂದ ನಮಗೇ ಹಿಂಸೆಯಾಗುತ್ತದೆ. ಲಾಭ, ನಷ್ಟಗಳ ಲೆಕ್ಕಾಚಾರದಲ್ಲಿ ಮಾನಸಿಕ ನೆಮ್ಮದಿ ದೂರವಾಗಿರುತ್ತದೆ. ನಡುವೆಲ್ಲ ಕಂಡುಂಡ ನೋವು, ನಲಿವುಗಳ ಅನುಭವ ಹಂಚಿಕೊಳ್ಳಲಾದರೂ ಯಾರೋ ಬೇಕೆನಿಸುತ್ತದೆ. ಅತ್ಯಂತ ಹತ್ತಿರದ ಕೆಲವು ಸಂಬಂಧಗಳಲ್ಲಿ ಇದೆಲ್ಲವನ್ನು ಯಥಾರೀತಿ ಬಿಚ್ಚಿಡುವ ಸಾಧ್ಯತೆಗಳೂ ಕಡಿಮೆ. ಇವುಗಳಾಚೆಗಿನ ಸಂಬಂಧಗಳಲ್ಲಿ ಹೇಳಿಕೊಂಡು ಹಗುರಾಗುವ ಮಾರ್ಗ ಬಿಟ್ಟು ಇನ್ನಾವುದೇ ಮಾರ್ಗಗಳಿರೋದಿಲ್ಲ.

ಹೀಗೆ ಅನಿವಾರ್ಯತೆಗಾದರೂ ಸಂಬಂಧ ಬೇಕೆನಿಸುತ್ತದೆ. ಆದರೆ, ಇಂಥ ಕೃತಕ ಸಂಬಂಧಗಳಲ್ಲಿ ಮಾನಸಿಕ ನೆಮ್ಮದಿ ಅತ್ಯಂತ ಸಹಜವಾಗಿರೋದಿಲ್ಲ. ಇದು ತೂಕ ಇಳಿಸುವುದಕ್ಕೆ ಅನಿವಾರ್ಯವಾಗಿ ಮಾಡುವ ಮಾರ್ನಿಂಗ್ ವಾಕ್ ಥರ ಆಗಿ ಹೋಗುತ್ತದೆ.

ನಿಜವಾದ ಸಂಬಂಧಗಳು ಗಟ್ಟಿಯಾಗೋದು ಯಾವುದೋ ಸ್ವಾರ್ಥದ ನಿರೀಕ್ಷೆಗಳಿಲ್ಲದ ಮನುಷ್ಯ ಸಹಜ ಪ್ರೀತಿಯ ಬುನಾದಿಯಲ್ಲಿ ರೂಪುಗೊಂಡ ಸ್ಪಂದನೆಗಳಿಂದ. ಸಂವೇದನೆಗಳಿಂದ. ಮನುಷ್ಯ ಅಂತಃಕರಣ ಅನ್ನೋದು ನಮ್ಮೊಳಗಿನ ಜೀವಜಲದಂತೆ. ಅದಕ್ಕೂ ಯಾವುದೇ ಶೇಪ್ ಇಲ್ಲ. ಬಣ್ಣವಿಲ್ಲ. ಅದಕ್ಕೆ ಭಾವನೆಗಳಿವೆ. ಇಂಥದೂ ಒಂದು ಭಾವುಕ ಜಗತ್ತು ನಮ್ಮ ಜೀವಜಲವನ್ನು, ಪ್ರೀತಿಯನ್ನು  ಕಾಪಾಡಬಲ್ಲುದು. ಮನುಷ್ಯ ಜೀವನದ ಸಾರ್ಥಕತೆ ಇರೋದೇ ಇಂಥ ಸಂಬಂಧಗಳ ಹೊಂದುವುದರಲ್ಲಿ. ಬೆಳೆಸಿಕೊಳ್ಳೋದರಲ್ಲಿ.

ಕಳೆದ ಕೆಲ ದಿನಗಳ ಹಿಂದಷ್ಟೇ ತಿಪಟೂರಿನ ಗೆಳೆಯರ ತುಂಬ ಅರ್ಥಪೂರ್ಣ ಸಂತೋಷ ಕೂಟಕ್ಕೆ ಹೋಗಿದ್ದೆ. ಅದು ತಾಯ್ತನದ ಸಂಭ್ರಮಕ್ಕೆಂದು ಏರ್ಪಡಿಸಿದ್ದ ತುಂಬ ಆತ್ಮೀಯರ ಪ್ರೀತಿಯೂಟ. ಗೆಳೆಯ ಶ್ರೀಕಾಂತ್ ಹೆಂಡತಿ ಒಡಲಲ್ಲಿ ಹೊಸ ಜೀವವೊಂದು ಈ ಜಗತ್ತಿಗೆ ಬರಲು ಕಾತರಿಸುತ್ತಿರುವ ಹೊತ್ತಲ್ಲಿ, ಬದುಕಿಗೆ ಅದು ಕಣ್ಣು ತೆರಕೊಳ್ಳುವ ಮುನ್ನ ಮನುಷ್ಯ ಪ್ರೀತಿ, ಅಂತಃಕರಣದ ಪ್ರೀತಿ ಜೋಗುಳ ಕೇಳಿಸುವ ಮನಸು ನಮ್ಮ ಆತ್ಮೀಯ ಗೆಳೆಯ ತಿಪ್ಪಣ್ಣ ಅವರದು.

 ಜಿ. ತಿಪ್ಪೇಸ್ವಾಮಿ (ನಮ್ಮೆಲ್ಲರ ಪ್ರೀತಿಯ ತಿಪ್ಪಣ್ಣ)   ತಿಪಟೂರು ಕಲ್ಪತರು ಕಾಲೇಜಿನ ಹಿರಿಯ ಗ್ರಂಥಪಾಲಕರು. ತಮ್ಮ ಮಗಳಂತೆ ಲೈಬ್ರರಿಯ ಅಸಂಖ್ಯಾತ ಪುಸ್ತಕಗಳನ್ನೂ ಕಾಳಜಿಯಿಂದ, ಪ್ರೀತಿಯಿಂದ ನೋಡಿಕೊಳ್ಳುವ ತಾಯ್ತನದ ಜೀವವದು. ಅದೆಷ್ಟು ಅಹೋರಾತ್ರಿ ಲೈಬ್ರರಿಯ  ತುಂಬ ಓಡಾಡಿಕೊಂಡು ಮಗುವಿನ ತಲೆ, ಕೆನ್ನೆ ಸವರುವ ತಾಯಿಯಂತೆ ಪುಸ್ತಕಗಳ ನೇವರಿಸುತ್ತ, ಅವುಗಳ ಇರವನ್ನು ಅರ್ಥಪೂರ್ಣಗೊಳಿಸುವ ಮಹಾ ಜೀವಪ್ರೀತಿಯ ಮನುಷ್ಯ.

ಗೆಳೆಯ ಶ್ರೀಕಾಂತ್ ಬದುಕಲ್ಲಿ ಇನ್ನೇನು  ಹೊಸಬೆಳಕು ಮೂಡಲಿದೆ!  (ಇತ್ತೀಚೆಗಷ್ಟೇ ಶ್ರೀಕಾಂತ್ ಮನೆಯ ಒಂದು ದೀಪದ ಬೆಳಕು ಮಹಾಬೆಳಕಿನತ್ತ ಪಯಣ ಬೆಳೆಸಿತು. ತಂದೆ ಕಾಲನ ಗರ್ಭಕ್ಕೆ ಸೇರಿಹೋದರು. ಈಗ ಅದೇ ಬೆಳಕು ಹೊಸಬೆಳಕಾಗಿ ಬರಲಿದೆ. ಮನುಷ್ಯ ಜನ್ಮವೆಂದರೆ ಇಷ್ಟೇ ತಾನೆ. ಹಾಗೆ ಹೋಗಿ ಮತ್ತೆ ಹೀಗೆ ಹಿಂದಿರುಗೋದು?) ಅದನ್ನು ಬರಮಾಡಿಕೊಳ್ಳುವ ಸಿದ್ಧತೆಯಲ್ಲಿರುವ ಶ್ರೀಕಾಂತ್ ಗೆ ಶುಭ ಕೋರುವ ಮತ್ತು  ಆ ಹೊಸಬೆಳಕನ್ನು ಈ ಜಗತ್ತಿಗೆ ಕರುಣಿಸಲಿರುವ  ತಾಯಿಯ ಒಡಲಿಗೊಂದು ಕೃತಜ್ಞತೆ ಸೂಚಿಸಲು  ತಿಪ್ಪಣ್ಣ ತಮ್ಮ ಮನೆಯಲ್ಲಿ ಆತ್ಮೀಯ ಗೆಳೆಯರ ಸಮ್ಮುಖದಲ್ಲಿ ಶ್ರೀಕಾಂತ್ ದಂಪತಿಗೆ ಊಟ ಇಟ್ಟುಕೊಂಡಿದ್ದರು. ಅದಕ್ಕೆ ನಾನೂ ಸಾಕ್ಷಿಯಾಗುವ ಭಾಗ್ಯ ಪಡಕೊಂಡೆ. ತುಂಬ ಖುಷಿ ಕೊಟ್ಟ ಘಳಿಗೆಯದು.  ಗೆಳೆಯ ವಿಷ್ಣುಕುಮಾರ್ ಮತ್ತು  ಆತನ ಸಂಗಾತಿ ಹರ್ಷಿತಾ, ಮನೋಹರ್ ಪಟೇಲ್, ತಿಪ್ಪಣ್ಣ ಅವರ ಆತ್ಮೀಯ ಗೆಳೆಯ ಚಾಮುಂಡಿ ಕೂಡ ಅಲ್ಲಿದ್ದರು.

ಹಾಗೆ ಒಂದು ಊಟದ ನೆವದಲ್ಲಿ ಸೇರಿದ ನಾವೆಲ್ಲ ಅಂದು ಹಂಚಿಕೊಂಡ ಪ್ರೀತಿ ಮತ್ತು ಅಪ್ಪಟ ಮಾನವೀಯ ಅನುಭವಗಳೇ  ಆ ಮಗುವಿಗೆ ಹಾರೈಕೆಗಳು.  ತಿಪ್ಪಣ್ಣ ದಂಪತಿ ಅವತ್ತು ಮಾಡಿದ ಅಡುಗೆಯಲ್ಲಿ ಅವರ ಪ್ರೀತಿಯ ರುಚಿಕಟ್ಟಿತ್ತು. ಮಗಳು ನಿಕ್ಕಿ (ಅವರ ಪಾಲಿನ ಗಿಣಿ) ಮನೆತುಂಬ ಓಡಾಡಿಕೊಂಡಿರೋದು ಅಪ್ಪಟ ಗಿಣಿಯಂಥ ಕಲರವ ಮೂಡಿಸಿತ್ತು.  ಗೆಳೆಯ ವಿಷ್ಣುವಿನ ಜೀವಪ್ರೀತಿ ಉಕ್ಕಿಸುವ ಸೆನ್ಸ್ ಆಫ್ ಹ್ಯೂಮರ್ ಅವತ್ತಿನ ಊಟದ ಸವಿ ಹೆಚ್ಚಿಸಿತ್ತು. ಸಹಜ, ಸರಳ ನಡೆ ನುಡಿಯ ಸಜ್ಜನ ಚಾಮುಂಡಿಯ ಮುಗ್ಧ ನಗೆಯ ಮಿಂಚಿತ್ತು. ಪರಿಸರದ ಕಾಳಜಿಗಳನ್ನೇ ಸೂಸುವ ಮನೋಹರ್ ಪಟೇಲ್ ಶಾಂತಮೂರ್ತಿಯಂತೆ ಕೂತು ಉಣ್ಣುವ ರೀತಿಯಲ್ಲಿ ಬುದ್ಧನದೇ ಕಳೆ ಇತ್ತು.  ಎಲ್ಲರ ತಟ್ಟೆಗಳಲ್ಲಿ ತಿಪ್ಪಣ್ಣ ದಂಪತಿಯ ಪ್ರೀತಿಸಾಂಬಾರಿನ ಘಮಘಮವಿತ್ತು... ಊಟದ ನಡುವೆಲ್ಲ ಚಿಮ್ಮುವ ನಗೆಯಲ್ಲಿ ಬದುಕಿನ ಬೆಳಕಿತ್ತು...
ಆ ತಾಯಿಯ ಉಡಿ ತುಂಬ ಹೂವು, ಹಣ್ಣು, ಕಾಯಿ...
ಏನಿದೆಲ್ಲ?
ಆ ಊಟದ ರುಚಿಕಟ್ಟು ಯಾವುದರ ಸಂಕೇತ? ಜೀವರಸದ ಸಂಕೇತ. ನಮ್ಮ ಜೀವರಸ ಅಷ್ಟು ರುಚಿಕಟ್ಟಾಗಿರಲಿ ಎನ್ನುವುದು ಅದರ ಆಶಯ. ಊಟದ ರುಚಿ ಬರಿಯ  ಎಂಟಿಆರ್ ಮಸಾಲೆಯಲ್ಲಿದೆ ಅನ್ನೋದು ಒಂದು ಭ್ರಮೆ. ನಿಜವಾದ ಪ್ರೀತಿ ಪಾಕ ಅದಕ್ಕೆ ಸೇರಿದಾಗಲೇ ಊಟ ರುಚಿಕಟ್ಟಾಗೋದು. ತುಂಬ ಪ್ರೀತಿಯ ಮನಸ್ಸಿನಿಂದ ಮತ್ತು ಅದು ಆತ್ಮದ ಸಂದೇಶಗಳಿಗೆ ಸ್ಪಂದಿಸುತ್ತ ಮಾಡಿದಾಗಲೇ ಅದು ಅಡುಗೆ. ಮನಸು ಸ್ವಚ್ಛವಾಗಿಟ್ಟುಕೊಂಡವರು ಮಾತ್ರ ರುಚಿಕಟ್ಟಾದ ಅಡುಗೆ ಮಾಡಬಲ್ಲರು. ಅಂಥ ರುಚಿ ಆ ಮಗುವಿನ ಬದುಕಿಗಿರಲಿ ಎನ್ನುವುದು ಇದರ ಒಟ್ಟು ಆಶಯ.
 ದಿಲ್ ದಾರ್ ಮಾತ್ರ ನಗಬಲ್ಲ, ನಗಿಸಬಲ್ಲ. ಮತ್ತೊಬ್ಬರ ನೋವ ಮರೆಸಿ ನಗೆಯ ಬುಗ್ಗೆ ಉಕ್ಕಿಸಬಲ್ಲ. ವಿಷ್ಣು ಉಕ್ಕಿಸಿದ ನಗೆಯ ಬುಗ್ಗೆಗಳೆಲ್ಲ   ಬದುಕಿನ ಉತ್ಸಾಹದ ಸಂಕೇತ. ಅಂಥ ಉತ್ಸಾಹ ಹೊತ್ತುಕೊಂಡೇ ಆ ಜೀವ ಹೊರಬರಲಿ ಎನ್ನುವುದು ಕಾಳಜಿ.

ಸರಳತೆ, ಸಜ್ಜನಿಕೆ, ಸಹಜತೆ, ಮುಗ್ಧತೆ... ಇವೇ ಮನುಷ್ಯನ ಜೀವಂತಿಕೆಯ ಲಕ್ಷಣಗಳು. ಚಾಮುಂಡಿಯವರ ಮುಗ್ಧ ನಗೆಯಲ್ಲಿ ಬುದ್ಧನ ಶಾಂತಚಿತ್ತವಿದೆ. ನೆಲ್ಸನ್ ಮಂಡೇಲಾನ ಗೆಲುವಿದೆ.. ಅಂಥ ಗುಣಗಳೂ ಮಗುವಿನ ವ್ಯಕ್ತಿತ್ವಕ್ಕಿರಲಿ ಎನ್ನುವುದು ಅಭಿಲಾಷೆ.

ಮನುಷ್ಯನೆಂದರೆ ಈ ಪರಿಸರದ ಬಹು ಜವಾಬ್ದಾರಿಯುತ ಜೀವ. ಇಡೀ ಜೀವಸಂಕುಲವನ್ನು ತನ್ನ ಅಣತಿಗೆ ತಕ್ಕಂತೆ ಕಬಳಿಸುವ ಕ್ರೂರ ಪ್ರಾಣಿಯಲ್ಲ. ನಿಸರ್ಗದ ಎಲ್ಲ ಸವಲತ್ತುಗಳನ್ನು ಭೋಗಿಸುವುದಷ್ಟೇ ಅವನ ಗುರಿಯಲ್ಲ. ಇಡೀ ಭೂಮಿಯನ್ನು ತನ್ನ ತಾಯಿಯಂತೆ ಕಾಣಬೇಕು. ಅವಳ ಪ್ರೀತಿ ಉಣ್ಣುವುದಷ್ಟೇ ನಮ್ಮ ಕೆಲಸವಲ್ಲ. ಅವಳ ಋಣ ತೀರಿಸುವುದೂ ನಮ್ಮ ಬಹುಮುಖ್ಯ ಹೊಣೆಗಾರಿಕೆ. ತಾನೂ ಬಾಳಿ ಬದುಕಿ ಇತರರನ್ನೂ ಇತರ ಜೀವಸಂಕುಲವನ್ನೂ ಬಾಳಿಸುವ ಮನೋಧರ್ಮ ಮನುಷ್ಯನದು. ಮನೋಹರ್ ಪಟೇಲ್ ಅವರಂಥ ಪರಿಸರ ಕಾಳಜಿಯ ಜೀವಕ್ಕೆ ಇಂಥದೇ ಹತ್ತಾರು ಕಾಳಜಿಗಳು. ಜತೆಯಲ್ಲಿ ಶ್ರೀಕಾಂತ್ ಗೂ ಇಂಥದೇ ಕನಸುಗಳು. ಈ ಕನಸುಗಳು ಆ ಮಗುವಿಗೂ ಇರಲಿ...

ಜ್ಞಾನ, ಅರಿವು, ಹೃದಯ ವಿಶಾಲತೆ ಇರುವ ಮನುಷ್ಯನಲ್ಲಿ ಸೂಜಿಗಲ್ಲಿನಂಥ ಸೆಳೆಯುವ ವ್ಯಕ್ತಿತ್ವವಿರುತ್ತದೆ. ಬಂದೆಲ್ಲ ಸವಾಲುಗಳಿಗೆ ಎದೆಯೊಡ್ಡಿ ಆತ್ಮವಿಶ್ವಾಸದ ಅಸ್ತ್ರದಿಂದಲೇ ಎಲ್ಲ ಗೆಲ್ಲಬಲ್ಲ ಛಾತಿ ಇರುತ್ತದೆ. ನಗುತ್ತಲೇ ತನ್ನ ಬಳಿ ಬರುವ ಎಲ್ಲ ಜೀವಗಳ ಲೇಸನ್ನೇ ಬಯಸುವ, ಸಾಧನೆಯ ಹಂಬಲದ ಮನಸುಗಳಿಗೆ ಒತ್ತಾಸೆಯಾಗಿ ನಿಲ್ಲುವ ಮನೋಧರ್ಮ ಪರಿಪಕ್ವ ವ್ಯಕ್ತಿತ್ವದ ಸಂಕೇತ. ಮನುಷ್ಯ ಪ್ರೀತಿಯನ್ನೇ ಶ್ರೇಷ್ಠ ಎಂದು ಭಾವಿಸುವ ಮನೋಧರ್ಮ ದಾರ್ಶನಿಕ ವ್ಯಕ್ತಿತ್ವದ ಸಂಕೇತ. ಅಂಥ ಗೆಳೆಯ, ಚಿಂತಕ, ದಾರ್ಶನಿಕ ವ್ಯಕ್ತಿತ್ವದ ತಿಪ್ಪೇಸ್ವಾಮಿ ಅಪ್ಪಟ ಮನುಷ್ಯ ಜೀವಿ. ಇದೇ ಅಲ್ಲವೇ ಮನುಷ್ಯ ಸಾಧಿಸಬೇಕಾದ ಗುರಿ. ಅಂಥದೊಂದು ಗುರಿ ಇರಲಿ ಆ ಕಂದನಿಗೆ....

 ತಿಪ್ಪಣ್ಣ ಅವರ ಶ್ರೀಮತಿಯ ಸರಳತೆ, ತಾಯಿ ಪ್ರೀತಿ, ನಿಕ್ಕಿಯ ಗಿಣಿ ಮಾತುಗಳ ಕಲರವ, ಉತ್ಸಾಹ... ಮಗುವಿಗಿರಲಿ. ಅವರು ತಾಯಿಯ ಉಡಿತುಂಬ ಹಾಕಿದ ಹೂವಿನ ಪರಿಮಳ, ಹಣ್ಣಿನ ಸವಿ, ಕಾಯಿಯ ಒಳಗೆಲ್ಲೊ ಕಾಯ್ದಿಟ್ಟುಕೊಳ್ಳುವ ಜೀವಜಲದ ಗುಣ... ಆ ಜೀವಕ್ಕೂ ದಕ್ಕಲಿ...

ಜೀವಜಗತ್ತಿಗೆ ಬರಲು ಸಜ್ಜಾಗಿ ನಿಂತ ಹೊಸ ಕುಡಿಗೆ ಮನುಷ್ಯ ಪ್ರೀತಿಯ ಇಂಥ ಜೋಗುಳ ರೂಪದ ಫೀಡ್ ಅವಶ್ಯಕ. ಒಟ್ಟು ಇಂಥ ಕಾಳಜಿಗಳ ಸಂಕೇತವೇ ತಿಪ್ಪಣ್ಣ ಅವರು ಹಮ್ಮಿಕೊಂಡ ಅಂದಿನ ಕಾರ್ಯಕ್ರಮ.
ಕೊನೆಗೊಂದು ಮಾತು:  ಒಂದು ಹೊಸ ಜನ್ಮ ಕೊಡುವ ತಾಯಿಯ ಭಾಗ್ಯ ಹೆಣ್ಣಿಗೆ ಮಾತ್ರ. ಗಂಡಸಿಗೆ ಅದರ ತಂದೆ ಎನ್ನುವ ಧಿಮಾಕು ಅಷ್ಟೇ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮನುಷ್ಯ ಜಾತಿ ತಾನೊಂದೇ ವಲಂ...

ಭಾರತದಲ್ಲಿ ಜಾತಿ ವ್ಯವಸ್ಥೆ ಹೇಗೆ ಹುಟ್ಟಿತು ಎಂಬುದಕ್ಕೆ ಯಾವುದೇ ನಿರ್ಧಿಷ್ಟ ಥಿಯರಿ ಇಲ್ಲ. ಆದರೆ, ಇಲ್ಲಿನ ವರ್ಗ ಸೃಷ್ಟಿ ಮಾತ್ರ ಇರಾನ್ ವ್ಯವಸ್ಥೆಯಂತೇ ಇದೆ.  ಪುರಾತನ ಇರಾನಿನ ಚರಿತ್ರೆಯಲ್ಲಿ ಇಂಥದೊಂದು ವ್ಯವಸ್ಥೆ ಇತ್ತು. ಅದಕ್ಕೆ ಪಿಸ್ತ್ರಾಸ್ ಎನ್ನುತ್ತಾರೆ. ನಮ್ಮಲ್ಲಿ ಅದು ಚಾತುರ್ವರ್ಣವಾಗಿದೆ. ಅಲ್ಲಿ ಅಥ್ರವಾನ್ಸ್ (ಪ್ರೀಸ್ಟ್ ಕ್ಲಾಸ್), ರಥೈಸ್ತಾ (ವಾರಿಯರ್ಸ್), ವಸ್ತ್ರಿಯಾ (ಮರ್ಕಂಟೈಲ್ ಕ್ಲಾಸ್) ಮತ್ತು ಹ್ಯುತಿ (ಆರ್ಟಿಸನ್) ಎನ್ನುವ ವರ್ಗ ವ್ಯವಸ್ಥೆ ಇದೆ. ನಮ್ಮಲ್ಲಿ ಇದನ್ನು ಕಲ್ಪಿಸಿಕೊಂಡರೆ ಪುರೋಹಿತ ಅಥವಾ ಬ್ರಾಹ್ಮಣ (ಅಥ್ರವಾನ್ಸ್), ಕ್ಷತ್ರಿಯ  (ರಥೈಸ್ತಾ), ವೈಶ್ಯ  (ವಸ್ತ್ರಿಯಾ) ಮತ್ತು ಶೂದ್ರ (ಹ್ಯುತಿ) ಎಂದು ಅರ್ಥೈಸಿಕೊಳ್ಳಬಹುದು.  ಆದಿ ಕಾಲದ ಇರಾನಿಯನ್ ವ್ಯವಸ್ಥೆ ಹೀಗೇ ಇತ್ತು. ಅದೇ ನಾಲ್ಕು ವರ್ಗಗಳು ಭಾರತದಲ್ಲೂ ಈಗಲೂ ಚಾಲ್ತಿಯಲ್ಲಿವೆ. ಹೀಗೆ ಒಂದು ಇರಾನ್ ಸಂಬಂಧ ಭಾರತಕ್ಕಿದೆ. ಚರ್ಮದ ಬಣ್ಣ, ನಯ ನಾಜೂಕು, ಕಣ್ಣು, ಬುದ್ಧಿವಂತಿಕೆಯನ್ನು ಹೋಲಿಸಿದರೆ ಭಾರತದ ಅದರಲ್ಲೂ ಉತ್ತರ ಭಾರತದ ಕಾಶ್ಮೀರಿ ಪಂಡಿತರು, ಉತ್ತರ ಪ್ರದೇಶದ ಪಂಡಿತ್, ಚಿತ್ಪಾವನ ಬ್ರಾಹ್ಮಣರು, ನಮ್ಮ ಕರಾವಳಿ ಮತ್ತು ಉತ್ತರ ಕನ್ನಡದ ಹವ್ಯಕರು ಹೆಚ್ಚೂ ಕಮ್ಮಿ ಇರಾನಿಗಳನ್ನು ಹೋಲುತ್ತಾರೆ (ಮೇಲ್ನೋಟಕ್ಕೆ).  ಬಹುಶಃ ಹೀಗೂ ಆಗಿರಬಹುದು, ಆಗ ಇರಾನ್ ನಲ್ಲಿ ಕ್ರೈಸ್ತ ಮತ್ತು ಇಸ್ಲಾಂ ಮುಂಚೆಯೂ ಹಲವಾರು ಸುಧಾರಣಾವಾದಿಗಳ ಅಥವಾ ಬಂಡುಕೋರರ

"ಮಣೆಗಾರ" ಬಸಿದಿಟ್ಟ ಒಡಲಾಳದ ನೋವು ನೆನೆದು...

ಹಾಲ್ಕುರಿಕೆ ಥಿಯೇಟರ್ ಕಾನ್ಸೆಪ್ಟ್ ಕನ್ನಡ ರಂಗಭೂಮಿಯಲ್ಲಿ ಹೊಸದೊಂದು ಸಂಚಲನವನ್ನುಂಟು ಮಾಡುತ್ತಿದೆ. ಒಟ್ಟಾರೆ ಭಾರತೀಯ ರಂಗಭೂಮಿ ಕಾಣುತ್ತಿರುವ ಹೊಸತನಕ್ಕೆ ಇದು ಮುಖ್ಯವಾದ ಸಾಕ್ಷಿ. ಅತ್ಯಂತ ಕ್ರಿಯಾಶೀಲ ತುಡಿತದ ರಂಗಕರ್ಮಿ ಹಾಲ್ಕುರಿಕೆ ಶಿವಶಂಕರ (ನಿರ್ದೇಶಕ/ನಾಟಕಕಾರ) ಇತ್ತೀಚೆಗೆ "ಮಣೆಗಾರ" (ತುಂಬಾಡಿ ರಾಮಯ್ಯನವರ ಆತ್ಮಕಥೆ) ಎನ್ನುವ ದಲಿತ ಕಥಾನಕವೊಂದನ್ನು ರಂಗದ ಮೇಲೆ ಅನಾವರಣಗೊಳಿಸಿದರು. ಪ್ರಯೋಗದ ದೃಷ್ಟಿಯಿಂದ ಕೆಲವು ಕೊರತೆಗಳು, ದೋಷಗಳು ಇವೆ. ಅದು ಯಾವುದೇ ಪ್ರಯೋಗಕ್ಕೆ ಇರುವಂಥವೇ. ಆದರೆ ಸಮುದಾಯವೊಂದರ ಒಡಲಾಳದ ನೋವನ್ನು ರಂಗದ ಮೇಲೆ ಬಸಿದಿಟ್ಟಾಗ  ಬೆಚ್ಚಿ ಬೀಳುವಂತಾಯಿತು. ವಿಶೇಷವಾಗಿ ದಲಿತೇತರಲ್ಲಿ ಸಾಮಾಜಿಕ ಪ್ರಜ್ಞೆ, ಜವಾಬ್ದಾರಿಯನ್ನು ಬಡಿದೆಬ್ಬಿಸುವಂಥ ಕಥಾನಕವದು. "ಮಣೆಗಾರ" ಪ್ರೊಸಿನಿಯಂಗಿಂತ ಆಪ್ತರಂಗಭೂಮಿಗೆ ಸೂಕ್ತವಾದ ವಸ್ತು. ಪ್ರಯೋಗ ಒಟ್ಟಾರೆ ಮನುಷ್ಯ ಬದುಕಿನ ನಡುವಿರುವ ಗ್ರೇ ಏರಿಯಾವೊಂದರ ದರುಶನ ಮಾಡಿಸಿತು. ಮೇಲ್ವರ್ಗ ಸಹಮಾನವರನ್ನು ಅದು ಹೇಗೆ ಅಸ್ಪೃಶ್ಯರು ಎಂದು ದೂರಕ್ಕಿಟ್ಟಿತ್ತು, ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿತ್ತು ಎನ್ನುವುದು ಇದರ ಮೂಲ ಸಂಕಟ. ಇಡೀ ನಾಟಕದಲ್ಲಿ ಬದುಕಿಗಾಗೇ ಸಂಘರ್ಷವಿದೆ. ಆಹಾರಕ್ಕಾಗಿ ಹಾಹಾಕಾರವಿದೆ. socio-cultural  ನೆಲೆಯಲ್ಲಿ ದೊಡ್ಡ ಸಂಘರ್ಷವಿದೆ. ಇದು ರಾಜಕೀಯ ಆಯಾಮದಲ್ಲೂ ಬಹುಮುಖ್ಯವಾದ ಸಂಘರ್ಷವೇ. ಶಿಕ್ಷಣ ಮತ್ತು ಅದರ ಆಧಾರದಲ್ಲಿ ಹುಟ

"ಬದುಕು-ಬಯಲು" ನಾಟಕ ಮತ್ತು ಮಾನವೀಯ ನೆಲೆಯ ಹುಡುಕಾಟ

ಫ್ರಾನ್ಸ್ ನ ಬರಹಗಾರ ಅಲ್ಫ್ರೆಡ್ ಜೆರಿ ಬರೆದ 'ದಿ ಸೂಪರ್ ಮೇಲ್' ಎನ್ನುವ ಕಾದಂಬರಿಯ ಪ್ರೊಟಗಾನಿಸ್ಟ್ ಆ್ಯಂಡ್ರಿ ಮಾರ್ಕೆಲ್ ಒಬ್ಬ ಜಂಟಲ್ ಮನ್, ವಿಜ್ಞಾನಿ ಕೂಡ. ಅವನಿಗೆ ಮಾನವ ಸಾಮರ್ಥ್ಯಕ್ಕೆ ಮಿತಿ ಎಂಬುದೇ ಇಲ್ಲ ಎನ್ನುವುದರಲ್ಲಿ ಬಲವಾದ ನಂಬಿಕೆ. ಆತ ಉಗಿಬಂಡಿ ಜತೆಗೂ ಯಾವುದೇ ವಿಶ್ರಾಂತಿ ಮತ್ತು ತ್ರಾಸಿಲ್ಲದೇ ಕ್ರಮಿಸಿ  ರೇಸ್ ಗೆಲ್ಲಬಲ್ಲ (ಕಾದಂಬರಿಯಲ್ಲಿ ರೈಲು ಮತ್ತು ಸೈಕ್ಲಿಸ್ಟ್ ನಡುವೆ ಒಂದು ರೇಸ್ ನಡೆಯುತ್ತದೆ). ಒಂದೇ ಹೆಂಗಸಿನ ಜತೆ 24 ಗಂಟೆಗಳಲ್ಲಿ 82 ಬಾರಿ ಸಂಭೋಗ ನಡೆಸಬಲ್ಲ 'ಕಾಮಪಟುತ್ವ'ದ ಸಾಹಸಗಳನ್ನೂ ಮಾಡಬಲ್ಲ. ಇದನ್ನು ಪುರುಷಪರಾಕ್ರಮದ ನೆಲೆಯಲ್ಲಿ ನೋಡೋದಾ? ಇಲ್ಲಾ ನಿಸರ್ಗ ಸಹಜ ಸಾಧ್ಯತೆಯ ನೆಲೆಯಲ್ಲಿ ನೋಡುವುದಾ?... - ಇದು ಒಂದು ರೀತಿಯ ವಿಕ್ಷಿಪ್ತ ಮನೋಧರ್ಮದ, ಸೈನ್ಸ್ ಫಿಕ್ಷನ್ ಕಾದಂಬರಿಯ ಸಂಕ್ಷಿಪ್ತ ನೋಟ. ಅಲ್ಫ್ರೆಡ್ ಜೆರಿ ಉತ್ತಮ ನಾಟಕಕಾರನೂ ಹೌದು. ಆತನ 'ಉಬು ರೊಯ್' ಹೆಸರಾಂತ ನಾಟಕಗಳಲ್ಲೊಂದು.    * * * ಜೆರಿ ಬಗ್ಗೆ ಓದುತ್ತಿದ್ದ ಹೊತ್ತಲ್ಲಿ ಹಿಜಡಾವೊಬ್ಬರ ಆತ್ಮಕಥನ ಆಧರಿಸಿದ "ಬದುಕು-ಬಯಲು" ಎನ್ನುವ ನಾಟಕ ವೀಕ್ಷಣೆಗೆ ತಿಪಟೂರಿನ ರಂಗ ಗೆಳೆಯ ನೀನಾಸಂ ಚಂದ್ರು ಆಹ್ವಾನ ನೀಡಿದರು.  ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ ನೋಡಿದೆ. ಅದಕ್ಕೂ ಮುಂಚೆ ನಾಟಕದ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಸಿ.ಎಸ್. ದ್ವಾರಕಾನಾಥ್, ಗೌರಿ ಲಂಕೇಶ್ ಮತ್ತಿತರ ಚಿಂತಕರ ವಿ