ವಿಷಯಕ್ಕೆ ಹೋಗಿ

ದಿಲ್ ಏಕ್ ಮಂದಿರ್ ಹೈ...

'ದಿಲ್' ಪುಟ್ಟ ಗೂಡಿಗೆ ಎರಡು ಪ್ರೇಮ ಹಕ್ಕಿಗಳು ಹಾರಿ ಬಂದಿದ್ದವು. ನಿನ್ನೆ (26/12/2009)  ಒಂದು ಹಗಲು ಮತ್ತು ಒಂದಿಡೀ ರಾತ್ರಿ ಈ ಗೂಡಲ್ಲೇ ತಂಗಿದ್ದವು. ಏನವುಗಳ ಕಲರವ!. ತಮ್ಮ ಪ್ರೇಮ ಪಯಣದ ಹಾದಿಯಲ್ಲಿ ಒಂದಷ್ಟು ಕಾಲ ಈ ಗೂಡಲ್ಲಿ ತಂಗಿದ್ದಕ್ಕೆ ಅದೆಷ್ಟು ಕೃತಜ್ಞತೆ ಹೇಳಲಿ..

ನೋಡಿ ಇಂಟರ್ ನೆಟ್ ಎನ್ನುವ ಮಾಯಾಂಗನೆ ಅದೆಂಥ ಮಾಟ ಮಾಡಿದಳು! ಯಾವುದೋ ಒಂದು ಖಾಲಿ ಭಾವದ ಹೊತ್ತಲ್ಲಿ ಆರ್ಕುಟ್, ಟ್ವಿಟರ್ ಎನ್ನುವ ಸೋಶಿಯಲ್ ತಾಣಗಳಲ್ಲಿ ಹರಿದಾಡಿದ ಮನಸುಗಳಿಗೆ ಎಂಥ ಅದೃಷ್ಟು ಖುಲಾಯಿಸಿತು! ತನ್ನ ಗೆಳತಿಯೊಬ್ಬಳು ನೀಡಿದ ಸಲಹೆಗೆ ಈ ಹುಡಗಿ ಒಂದು ಚಾನ್ಸ್ ನೋಡೋಣ ಎಂದು ಸಂದೇಶ ರವಾನಿಸಲು ಶುರುವಿಟ್ಟುಕೊಂಡಳು. ಆ ಕಡೆಯಿಂದ ಹುಡುಗ ಒಳ್ಳೆಯ ಸ್ಪಂದನೆ ನೀಡಿದ. ಪ್ರೇಮ ಲೋಕ ತೆರಕೊಳ್ಳಲು ಅದೆಷ್ಟು ಸಮಯ ಬೇಕು? ಆನ್ ಲೈನ್ ಪ್ರಣಯದ ಕ್ಷಣಗಳು ಹಾಗೇ ಗರಿಬಿಚ್ಚಿ ನಲಿದಾಡಲು ಆರಂಭಿಸಿದವು. ಆ ಕ್ಷಣಗಳಿಗೆ ಅದೆಂಥ ಮೋಡಿ ಇತ್ತೊ ಅಂತೂ ಒಂದು ಬಂಧ ಗಟ್ಟಿ ಬುನಾದಿ ಪಡಕೊಂಡಿತು.

ಹುಡುಗ ಮುಂಬೈನಲ್ಲಿ ಕಂಪೆನಿಯೊಂದರ ಕಾಲ್ ಸೆಂಟರ್ ಉದ್ಯೋಗಿ. ಹುಡುಗಿ ನಾಡಿನ ಹೆಸರಾಂತ ಇಂಗ್ಲಿಷ್ ದೈನಿಕದ ಪತ್ರಕರ್ತೆ. ದೂರದ ಪಶ್ಚಿಮ ಬಂಗಾಳದವಳು. ಒಂದು ದಿನ ಹುಡುಗಿಯನ್ನು ಕಾಣಲು ಹುಡುಗ ಮುಂಬೈನಿಂದ ಬೆಂಗಳೂರಿಗೆ ಬಂದ. ಹುಡುಗಿಗೆ ಏನು ಮಾಡಬೇಕೊ ತೋಚದಾಯಿತು. ಬಂಧ ಗಟ್ಟಿಗೊಳ್ಳುವ ಈ ಪರಿಯ ಸ್ಪೀಡ್ ಗೆ ಆಕೆ ದಿಗಿಲಿಗೊಂಡಿರಬೇಕು. ವಿಷಯ ನನಗೂ ಮನದಟ್ಟು ಮಾಡಿಕೊಟ್ಟಳು. ಬೆಂಗಳೂರಿನಲ್ಲಿ ತನ್ನ ವಿಧವೆ ತಾಯಿಯೊಬ್ಬಳನ್ನು ಬಿಟ್ಟರೆ ಬೇರಾರನ್ನೂ ಅಷ್ಟು ಹತ್ತಿರದಿಂದ ಬಲ್ಲವಳಲ್ಲ ಈ ಹುಡುಗಿ. ಆಕೆಗೆ ಕೊಂಚ ನಾನೇ ಹತ್ತಿರದವ. ಆಕೆಯ ತಾಯಿಗೂ ನನ್ನ ಮೇಲೆ ಅದೇನೋ ಅಕ್ಕರೆ, ಪ್ರೀತಿ ಮತ್ತು ಎಲ್ಲದಕ್ಕೂ ಹೆಚ್ಚಾಗಿ ಬಂಧು ಎನ್ನುವಂಥ ದೊಡ್ದ ನಂಬಿಕೆ.

ಮೊದಲ ಸಲ ತನ್ನ ಹುಡುಗನನ್ನು ಭೇಟಿ ಆಗುವ ದಿನದಂದು ಹುಡುಗಿ ನನ್ನ ಕರೆದಳು. ಇಬ್ಬರನ್ನು ಎಂ.ಜಿ ರಸ್ತೆಯ ಎಂ.ಜಿ ಹೋಟೇಲಿನಲ್ಲಿ ಕೂರಿಸಿಕೊಂಡು ನಮ್ಮ ಉತ್ತರ ಕರ್ನಾಟಕದ ಜೋಳದ ರೊಟ್ಟಿ ಊಟ ಮಾಡಿಸಿ ಪ್ರೀತಿ ಹರಟೆ ಕಟ್ಟೆಗೆ ಅವರನ್ನೆಳೆದೆ. ಹುಡುಗನ ಮನಸು ಕಟ್ಟೆಯಲ್ಲಿ ತುಂಬ ಪ್ರಾಂಜಲವಾಗಿ ತೆರಕೊಂಡಿತು. ಅದರಲ್ಲಿ ಅವನ ನಯ, ವಿನಯ ಹೆಚ್ಚಾಗಿ ಅವನ ಬದ್ಧತೆ ನನ್ನ  ಸೆಳೆಯಿತು. ಅವಳಿಗೆ ಹೇಳಿದೆ. ಪ್ರೀತಿ ಒಂದು ದೊಡ್ಡ ಅದೃಷ್ಟ, ದೇವರ ಕಾಣಿಕೆ ಎಂದು ನೀನು ನಂಬೋದಾದರೆ ಇವನ ಪ್ರೀತಿ ಬಟ್ಟಲನ್ನು ಎತ್ತಿಕೊಂಡುಬಿಡು ಎಂದೆ. ಅವಳು ಒಂದರೆಕ್ಷಣ ನನ್ನ ಕಣ್ಣುಗಳನ್ನೇ ನೋಡಿದಳು. ಅವಳಿಗೆ ಅಲ್ಲಿ ಪ್ರಾಮಾಣಿಕ ಅಭಿಪ್ರಾಯದ ಬೆಳಕು ಕಂಡಿತು. ಆಕೆ ಮುಖವನ್ನರಳಿಸಿ ಅವನತ್ತ ನೋಡಿದಳು. ಅವನು ಧನ್ಯ ಧನ್ಯ...

ಹುಡುಗ ಬೆಂಗಳೂರಿನಲ್ಲಿ ಆಕೆಯೊಂದಿಗೆ ಕಳೆದ ಮೊದಲ ಒಂದಷ್ಟು ದಿನಗಳಲ್ಲೇ ಅವಳನ್ನು ತನ್ನ ಬಾಳ ಸಂಗಾತಿಯಾಗಿಸಿಕೊಳ್ಳುವ ನಿರ್ಧಾರ ಮಾಡಿಬಿಟ್ಟ. ಅವಳ ಜನ್ಮದಿನ ಕೂಡ ಆಗಲೇ ಇತ್ತು. ಅವಳ ಆಫೀಸಿನಲ್ಲಿ ಎಲ್ಲರೆದುರು ಮಂಡಿಯೂರಿ ಕೈಯಲ್ಲಿ ಹೂಗುಚ್ಛ ಹಿಡಿದು ಪ್ರಪೋಸ್ ಮಾಡಿಯೇಬಿಟ್ಟ. ಎಲ್ಲರೆದುರು ಆಫೀಸಿನಲ್ಲಿ ಕೇಕ್ ಕತ್ತರಿಸಿ ಅವಳ ಜತೆ ಖುಷಿ ಹಂಚಿಕೊಂಡ. ಹೊರ ಬಂದವನೇ  ನನ್ನ ಕೈಹಿಡಿದು, 'ದಿಲ್ ಭಾಯ್ ಈ ಪ್ರೇಮ ಕ್ಷಣಗಳಿಗೆ ನೀವೇ ದೊಡ್ಡ ಸಾಕ್ಷಿ. ನಮ್ಮಿಬ್ಬರ ಮದುವೆ ಮಾಡಿಸುವ ಕೆಲಸಕ್ಕೆ ಸಂಬಂಧಿಸಿದಂತೆ ನೀವು ಮುಂಚೂಣಿಯಲ್ಲಿ ನಿಂತು ಮಾತುಕತೆ ಮುಂದುವರಿಸಬೇಕು' ಎಂದ.
 ಅವಳೂ ಅಷ್ಟೇ. 'ದಿಲ್, ನನಗೆ ಬೇರಾರೂ ಬಂಧುಗಳಿಲ್ಲ. ನಿನ್ನ ಮೇಲೆ ನನಗೆ ಭರವಸೆ, ಪ್ರೀತಿ, ನಂಬಿಕೆ ಇದೆ. ನನ್ನ ಪರವಾಗಿ ನೀನೇ ಹುಡುಗನ ಮನೆಯಲ್ಲಿ ಮಾತುಕತೆ ನಡೆಸಬೇಕು' ಎಂದಳು. ಅವಳ ತಾಯಿಯೂ ಇದೇ ಮಾತನ್ನು ಹೇಳಿದರು. ನನಗೆ ಇದಕ್ಕಿಂತ ಪುಣ್ಯ ಬೇಕೆ? ಎಂದುಕೊಂಡೆ.


 ಮುಂಬೈ ಗೆ ಹೋಗುವ ಪ್ಲಾನ್ ಸಿದ್ಧಗೊಂಡೇಬಿಟ್ಟಿತು. ಡಿಸೆಂಬರ್ 5ರಂದು ಬೆಳಿಗ್ಗೆ 8.30ಕ್ಕೆ ಮುಂಬೈ ಯತ್ತ ವಿಮಾನ ಹಾರಿತು. ಅವಳ ಎದೆ ಬಡಕೊಳ್ಳಲು ಶುರುವಿಟ್ಟುಕೊಂಡಿತು. ಟೇಕಾಫ್ ಆದಾಗಲಂತೂ ಅವಳ ತವಕ, ತಲ್ಲಣಗಳು... ಬಾಪ್ ರೇ... ಮುಂಬೈನಲ್ಲಿ ಲ್ಯಾಂಡ್ ಆದಾಗಲೂ ಅಷ್ಟೇ...ಆತ  ಮುಂಬೈ ಗೆ ಬರಹೇಳಿ ಕೈಕೊಟ್ಟರೆ! ಎನ್ನುವ ಆತಂಕ ಅವಳಲ್ಲಿ ಮನೆ ಮಾಡಿತ್ತೊ ಏನೋ!? ಆದರೆ,  ಅವನು ಬಂದ, ನಮ್ಮನ್ನು ರಿಸೀವ್ ಮಾಡಿಕೊಂಡ! ನಮಗೆ ಸಮಾಧಾನ.

 ಮುಂಬೈನ ರಸ್ತೆಗಳಿಗೆ ನಮ್ಮ ಟ್ಯಾಕ್ಸಿ ಹೆಜ್ಜೆ ಹಾಕಲಾರಂಭಿಸಿತು. ದೇವಸ್ಥಾನವೊಂದರ ಬಳಿ ಟ್ಯಾಕ್ಸಿ ನಿಂತಿತು. ನಾನಂದೆ, ಅರೇ, ಮೊದಲು ಮನೆಗೆ ಹೋಗೋದಲ್ವಾ? ತಾಯಿಗಿಂತ ದೇವರಾ? ಎಂದೆ. ಅದಕ್ಕವನು, 'ನನ್ನ ತಾಯಿಯ ಬಹುದೊಡ್ಡ ನಂಬಿಕೆಯೊಂದಿದೆ, ನನಗದು ಮುಖ್ಯ' ಎಂದ. ಮುಂದುವರಿದು 'ನನ್ನ ಮೌಂಸಿ ಆಶಿರ್ವಾದ ಇಲ್ಲದೇ ನನ್ನ ತಾಯಿ ಏನನ್ನೂ ಮಾಡಲ್ಲ. ಅವಳ ಆಶಿರ್ವಾದ ಪಡೆದುಕೊಂಡು ಹೋಗೋಣ' ಎಂದ. ದೇವಸ್ಥಾನದ ಹಿಂದೆ ಇದ್ದ ಒಂದು ಪುಟ್ಟ ಮನೆಗೆ ಕರೆದೊಯ್ದ. ದೇವಸ್ಥಾನಕ್ಕೆ ಹೋಗುತ್ತಿದ್ದಾನೆಂದುಕೊಂಡಿದ್ದೆ, ಆದರೆ ಆತ ದೇವಸ್ಥಾನ ದಾಟಿಕೊಂಡು ಅಲ್ಲೇ ಹಿಂದಿದ್ದ ಮನೆಯತ್ತ ಹೊರಟ. ಅಲ್ಲೊಬ್ಬ ಎಂಭತ್ತರ ಹರೆಯದ ಹೆಂಗಸು!...

 'ಇದು ನನ್ನ ಮೌಂಸಿ, ಆಶಿರ್ವಾದ ತೆಗೆದುಕೊಳ್ಳೋಣ' ಎಂದು ಇಬ್ಬರೂ ಆ ಹೆಂಗಸಿನ ಕಾಲಿಗೆರಗಿದರು. ಆ ಹೆಂಗಸು ಕೈಯಲ್ಲಿ ಸಕ್ಕರೆ, ಮತ್ತು ನೀರು ಹಿಡಿದುಕೊಂಡಿದ್ದಳು. ಇಬ್ಬರ ಬಾಯಿಗೆ ಸಕ್ಕರೆ ಹಾಕಿ ಆಶೀರ್ವಾದ ಮಾಡಿದಳು. ಅದೂ ಕೂಡ ಬೆಂಗಾಲಿ ಕುಟುಂಬ ಎಂದು ತಿಳಿದಿದ್ದು ಆಗಲೇ... ಹೋ, ಈ ಕೆಲಸ ಅಷ್ಟೇನು ಕಷ್ಟದ್ದಲ್ಲ ಅಂದುಕೊಂಡೆ. ನಾನೂ ಆ ಹೆಂಗಸಿನ ಮುಖ ನೋಡಿ ನಕ್ಕೆ, ಆಕೆ ಕೈ ಎತ್ತಿ ಹಾರೈಸಿದಳು. ನನ್ನ ಬಾಯಿಗೂ ಸಕ್ಕರೆ...  ಹೊರ ಬಂದಾಗ ಹುಡುಗನ ಕೇಳಿದೆ. ಇದು ನಿನ್ನ ತಾಯಿಯ ಅಕ್ಕನಾ? ಎಂದೆ. 'ಅದಕ್ಕೂ ಹೆಚ್ಚು' ಎಂದ ಆತ. 'ನನ್ನ ತಾಯಿ ಇವರನ್ನು ತನ್ನ ಅಕ್ಕ, ಬಂಧುವಿಗಿಂತಲೂ ಹೆಚ್ಚು ಎಂದು ಭಾವಿಸುತ್ತಾಳೆ. ಇವರಿಗೆ ಹೇಳದೇ ಯಾವ ಕೆಲಸವನ್ನು ನನ್ನ ತಾಯಿ ಮಾಡಲ್ಲ'  ಎಂದ.

ಈ ಅಕ್ಕರೆಗೆ, ಇಂಥ ನಂಬಿಕೆಗಳಿಗೆ ದಿಲ್ ಪೂರ್ವಕ ಸಲಾಂ, ಶರಣು!... ಟ್ಯಾಕ್ಸಿ ವಿರಾರ್ ಮುಟ್ಟುವಷ್ಟೊತ್ತಿಗೆ ತನ್ನಿಡೀ ಬದುಕು, ಕುಟುಂಬ, ನಂಬಿಕೆ, ಕಾಳಜಿಗಳ ಬಗ್ಗೆ ಆತ ಹೇಳುತ್ತಲೇ ಇದ್ದ. ಅವನ ಮನೆಗೆ ಕಾಲಿಟ್ಟಾಗ, ಬಳಗವನ್ನೆಲ್ಲ ಕಂಡಾಗ ಕೇಳಿದ ಎಲ್ಲವೂ ಕಡಿಮೆಯೇ ಅನ್ನಿಸಿತು. ಇವರು ಈಸ್ಟ್ ಬೆಂಗಾಲ್ ಯಾನೇ ಬಾಂಗ್ಲಾದೇಶದ ಮೂಲದವರು. ದೇಶ ವಿಭಜನೆಯ ಗಾಯವನ್ನು ಹೊತ್ತೇ ಮುಂಬೈ ಸೇರಿಕೊಂಡವರು. ಬಂಗಾಲದ ಯಾವ ಸಂಸ್ಕೃತಿಯನ್ನೂ ಬಿಟ್ಟುಕೊಟ್ಟವರಲ್ಲ. ಹಾಗೆಯೇ ಮುಂಬೈ ಕಲ್ಚರ್ ಕೂಡ ಕಡೆಗಣಿಸಿದವರಲ್ಲ. ಬಾಳಾ ಠಾಕ್ರೆ, ರಾಜ್ ಠಾಕ್ರೆಯ ಬೆದರಿಕೆಗಳಿಗೂ ಎದೆಗುಂದುವವರೂ ಅಲ್ಲ. ಆದರೆ, ಏನಾದರೂ ಆದರೆ ಎನ್ನುವ ಆತಂಕವಂತೂ ಇವರನ್ನು ಕಾಡುತ್ತಿದೆ ಎನಿಸಿತು.

 ವಿರಾರ್, ಮುಂಬೈನಿಂದ ಎಪ್ಪತ್ತು ಕಿಮೀ ದೂರದಲ್ಲಿದೆ. ದಶಕಗಳಿಂದ ಇಲ್ಲೇ ಫ್ಲ್ಯಾಟ್ ಕೊಂಡು ವಾಸವಿರುವ ಬೆಂಗಾಲಿ ಕುಟುಂಬವಿದು. ಐವರು ಹೆಣ್ಣು ಮಕ್ಕಳ ಜತೆ ಬೆಳೆದ ಕುಟುಂಬದ ಏಕೈಕ ಗಂಡು ಸಂತಾನ ಈತ. ನಾಲ್ವರು ಅಕ್ಕಂದಿರು ಒಬ್ಬ ತಂಗಿ ಈತನ ಮೇಲೆ ಅತೀವ ಪ್ರೀತಿ ಇಟ್ಟುಕೊಂಡವರು. ಪಕ್ಕಾ ಹಿಂದೂ ಸಂಪ್ರದಾಯಸ್ಥರು. ಇವರ ಕುಟುಂಬದ ಮದುವೆಯಂಥ ಬಹುಮುಖ್ಯ ಕಾರ್ಯಕ್ಕೆ ನಾನು ಪ್ರಮುಖ ಸಾಕ್ಷಿ.! ನಾನೊಬ್ಬ ಮುಸಲ್ಮಾನ. ನಂಬಿಕೆಗಳ ಬಹುದೊಡ್ಡ ವಿಶ್ವ ಎಂದರೆ ಇದೇ. ಹಿಂದೂಸ್ತಾನದ ಅಸಲಿಯತ್ತು ಕೂಡ ಇದೇ. ಭಾವುಕತೆ ಎಂದಷ್ಟೇ ಅಂದುಕೊಳ್ಳಲಾಗದು ಈ ನಂಬಿಕೆಯನ್ನ!




ಹುಡುಗನ ಇಡೀ ಕುಟುಂಬ ನಮ್ಮನ್ನು ನೋಡಿಕೊಂಡ ಪರಿ ಅದ್ಭುತವಾಗಿತ್ತು. ಅವರ ಮನೆಯಲ್ಲಿ ಆಪ್ತ ಸಂಬಂಧಿಯೊಬ್ಬರ ನಿಧನದಿಂದ ಶೋಕಾಚರಣೆ ನಡೆಯುತ್ತಿದ್ದ ಸಮಯ ಅದಾಗಿತ್ತು. ನಾವೂ ಕೂಡ ತಿಂಗಳು ಮುಂಚೆಯೇ ಪ್ರವಾಸ ನಿಗದಿಗೊಳಿಸಿ, ಏರ್ ಲೈನ್ಸ್ ಟಿಕೆಟ್ ಕೂಡ ಮುಂಗಡ ಪಡೆದಿದ್ದರಿಂದ ಪ್ರವಾಸ ರದ್ದುಪಡಿಸುವಂತೆಯೂ ಇರಲಿಲ್ಲ. ಮತ್ತು ಈ ಶೋಕಾಚರಣೆಯ ಬಗ್ಗೆ ಅವರು ನಮಗೆ ಮಾಹಿತಿ ನೀಡಿರಲಿಲ್ಲ. ಅವರು ಹೇಳಿದ್ದಿಷ್ಟು. 'ನೋಡಿ ನಾವು ಶೋಕಾಚರಣೆಯಲ್ಲಿರೋದರಿಂದ ಯಾವುದೇ ಮಹತ್ವದ ಕೌಟುಂಬಿಕ ನಿರ್ಧಾರಗಳನ್ನು ಕೈಗೊಳ್ಳುವಂತಿಲ್ಲ. ಇದು ನಮ್ಮ ಕುಟುಂಬದಲ್ಲಿ ಪಾಲಿಸಿಕೊಂಡು ಬಂದ ನಂಬಿಕೆ. ಆದರೂ, ತಾವು ಅಷ್ಟು ದೂರದಿಂದ ಬಂದಿದ್ದೀರಿ. ನಮ್ಮ ನಂಬಿಕೆಗಳನ್ನು ಕೊಂಚ ಸಡಿಲಿಸಿಕೊಳ್ಳುತ್ತೇವೆ. ಮಂಗಳ ಕಾರ್ಯಕ್ಕೆ ಇಂಥದೇ ದಿನಾಂಕ ಅಥವಾ ಇನ್ನಿತರ ನಿರ್ಧಾರ ಕೈಗೊಳ್ಳುವುದು ಸದ್ಯಕ್ಕೆ ಬೇಡ. ಬರುವ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ದಿನಾಂಕ ನಿಗದಿ ಮಾಡಿಬಿಡೋಣ' ಎಂದು ಹುಡುಗನ ತಾಯಿ ಹೇಳಿದರು.

 ತುಂಬ ಸೌಮ್ಯ ಸ್ವಭಾವದ, ಸಮಚಿತ್ತ ಭಾವದ ಹುಡುಗನ ತಾಯಿ ಮೊದಲ ಮಾತಲ್ಲೇ ನಮ್ಮನ್ನೆಲ್ಲ ಸೆಳೆದುಬಿಟ್ಟಿದ್ದರು. ತಂದೆ ಹಳೆಯ ಕಮ್ಯುನಿಸ್ಟ್ ಗತ್ತಲ್ಲೇ ಇದ್ದವರು. ಹೆಚ್ಚು ಮಾತಾಡಲಿಲ್ಲ. ತಾಯಿಯೇ ನಿರ್ಣಾಯಕ ಅನ್ನೋದು ಸ್ಪಷ್ಟವಾಗಿತ್ತು. ಹುಡುಗನ ಅಕ್ಕಂದಿರು ಇಂದೋರ್, ನಾಸಿಕ್... ಹತ್ತಿರದ ಶಹರುಗಳಿಂದ ಧಾವಿಸಿದರು. ಹುಡುಗಿಯನ್ನು ನೋಡಿದರು. ನನ್ನ ಉದ್ದ ಕೂದಲು ನೋಡಿ ಹುಡುಗಿ ನಾನೆಂದುಕೊಂಡೀರಿ ಎಂದು ಜೋಕ್ ಮಾಡಿದೆ. ಅವರಿಗೆಲ್ಲ ನಮ್ಮ ಸೆನ್ಸ್ ಆಫ್ ಹ್ಯೂಮರ್ ಮತ್ತು ಸ್ನೇಹದ ಪರಿ ಇಷ್ಟವಾಗಿತ್ತು. ರಾತ್ರಿ ಎಲ್ಲರೂ ಹರಟಿದೆವು. ನಮ್ಮ ನಮ್ಮ ಅಂತರಂಗ ಅಲ್ಲೆಲ್ಲ ಅನಾವರಣಗೊಂಡಿದ್ದವು. ಎಲ್ಲರೂ ಎಲ್ಲರಿಗೂ ಅರ್ಥವಾಗಿದ್ದೆವು. ಪರಸ್ಪರ ಇಷ್ಟವಾಗಿದ್ದೆವು. ಹುಡುಗನಿಗೆ ತಾಯಿಯ ಕಡೆಯಿಂದ ಗ್ರೀನ್ ಸಿಗ್ನಲ್ ಸಿಕ್ಕಾಗಿತ್ತು. ಒಬ್ಬನೇ ಮಗ, ಅದೆಷ್ಟು ಕನಸುಗಳ ಕಟ್ಟಿಕೊಂಡಿರಬೇಡ ಆ ಜೀವ!... ಆದರೂ ಮಗನ ಮನಸ್ಸು ಒಪ್ಪಿದ ಹುಡುಗಿಯನ್ನೇ ಸೊಸೆಯಾಗಿಸಿಕೊಳ್ಳುವ ಅವಳ ನಿರ್ಧಾರ ನನ್ನ ಮಂತ್ರಮುಗ್ಧಗೊಳಿಸಿತ್ತು. ಪ್ರೀತಿಗೆ ಆಕೆ ಕೊಟ್ಟ ಸಮ್ಮಾನ, ಗೌರವಕ್ಕೆ ನಾನು ತಲೆಬಾಗಿದೆ. ಅವರು ನನ್ನ ತಲೆ ಮೇಲೆ ಕೈ ಇಟ್ಟು ಆಶಿರ್ವದಿಸಿ, 'ನೀವೇ ನಿಂತು ಮದುವೆ ಮಾಡಬೇಕು. ಅದು, ಇದು, ರಜೆ ಇಲ್ಲ... ಅವೆಲ್ಲ ಕುಂಟು ನೆಪ ಹೇಳಿ ಮದುವೆ ತಪ್ಪಿಸಿಕೊಳ್ಳುವ ಹಾಗೇ ಇಲ್ಲ. ಈಗಲೇ ಹೇಳಿದಿನಿ' ಎಂದು ಅವರು ಹೊರಡುವ ಮುನ್ನ ಹೇಳಿದ ಮಾತು ನನ್ನ ಎದೆಯಾಳದಲ್ಲಿ ನಂಬಿಕೆಯ ಬಹುದೊಡ್ಡ ಸ್ಥಾನವನ್ನಲಂಕರಿಸಿದೆ.

ಹಾಜಿ ಅಲಿ ದರ್ಗಾಕ್ಕೆ ತೆರಳಿ, ನಾನೀ ಪ್ರೇಮಿಗಳಿಗಾಗಿ ದುವಾ ಮಾಡಿದೆ. ಮರ್ಕಜ್ ಗೆ ನಂಬಿಕೆಗಳ ದಾರದ ಗಂಟು ಬಿಗಿದು ಬಂದಿರುವೆ. ಹಾಗೆ ಪ್ರೇಮಕ್ಕೊಂದು ಅಧೀಕೃತ ಪರ್ಮಿಟ್ ಪಡಕೊಂಡು ಬಂದ ನಂತರದಲ್ಲಿ ಮೊದಲ ಬಾರಿಗೆ ಆ ಹುಡುಗ ಬೆಂಗಳೂರಿಗೆ ಬಂದ. ನನ್ನ ಮನೆಯಲ್ಲೇ ಅವರಿಬ್ಬರೂ ಉಳಿದುಕೊಂಡರು. ಇಬ್ಬರೂ ತಮ್ಮ ತಾಯಂದಿರಿಗೆ ಸುಳ್ಳು ಹೇಳಿ ಬಂದಿದ್ದರು. ಪ್ರೇಮ, ಪ್ರೀತಿ, ಯುದ್ಧದಲ್ಲಿ ಎಲ್ಲವೂ ಒಪ್ಪಿತವೇ ಎಂದು ನಾನನವರಿಗೆ ನೆನಪಿಸಿದೆ. ಹುಡುಗಿಗೆ ತನ್ನ ವಿಧವೆ ತಾಯಿಯನ್ನು ಏಕಾಂಗಿಯಾಗಿ ಮನೆಯಲ್ಲಿ ಬಿಟ್ಟು, ಇನಿಯನ ಸೇರಲು ಏನೋ ಸುಳ್ಳು ಹೇಳಿ ಇಲ್ಲಿಗೆ ಬಂದೆನಲ್ಲ ಎನ್ನುವ ಭಾವನೆ. ನಾನು ಸ್ವಾರ್ಥಿ ಆದೆನಲ್ಲ ಎನ್ನುವ ಹಳವಂಡ... ಆದರೆ, ನಾನೇ ಬಲವಂತ ಮಾಡಿ ರಾತ್ರಿ ಉಳಿದುಕೊಳ್ಳಲು ಒತ್ತಾಯಿಸಿದ್ದೆ.

 ಇಬ್ಬರೂ ಮೊದಲ ಬಾರಿಗೆ ಒಟ್ಟಿಗೆ ಕುಳಿತು ಆಪ್ತವಾಗಿ ಹರಟಿದರು. ಹುಡುಗ ತನ್ನವಳಿಗಾಗಿ ಮೀನಿನ ಸಾರು ಮಾಡಿ ಉಣಬಡಿಸಿದ. ಪ್ರತಿಯಾಗಿ ನಾನು ಅವರಿಗೆ ದಾಲ್ ಫ್ರೈ ಮಾಡಿ ಬಡಿಸಿದೆ. ರಾತ್ರಿ ತುಂಬ ಹೊತ್ತು ಪ್ರೀತಿ, ಪ್ರೇಮದ ಮಾತುಗಳು... ಹರಟೆ ನಡೆಯಿತು. ರಾತ್ರಿ ಇಬ್ಬರೂ ನನ್ನ ಬೆಡ್ ರೂಮಿನಲ್ಲೆ ಮಲಗಿದರು. ಬಹುಶಃ ಇದೇ ಮೊದಲ ಸಲ ಅವರಿಬ್ಬರೂ ಅಕ್ಕಪಕ್ಕ ಮಲಗಿದ್ದಿರಬಹುದು... ಅಂತೂ ಒಂದಿಡೀ ದಿನ ಈ ಪ್ರೇಮಿಗಳ ಕಲರವದಿಂದ ದಿಲ್ ಗೂಡು ತುಂಬ ಪ್ರೀತಿ, ಪ್ರೇಮದ್ದೇ ರಿಂಗಣ.

 ಹೀಗೆ ಒಂದಿಡೀ  ದಿನ ದಿಲ್ ಗೂಡು ತುಂಬ ಪ್ರೇಮ ಹಬ್ಬದ ವಾತಾವರಣ ಸೃಷ್ಟಿಸಿ, ತಮ್ಮ ಪ್ರೀತಿ ಗುರಿಯತ್ತ ಮತ್ತೆ ಈ ಹಕ್ಕಿಗಳು ಪಯಣ ಬೆಳೆಸಿದವು. ನನ್ನ ದಿಲ್ ಗೂಡು ಯಾಕೋ ಬರಿದಾಯ್ತು ಅನಿಸಿತು...

ನನ್ನ ಪುಟ್ಟ ಗೂಡಿಗೆ ದಿಲ್ ಎಂದು ಹೆಸರಿಟ್ಟಿದ್ದು ಸಾರ್ಥಕವೆನಿಸುತ್ತದೆ. ಅದೆಷ್ಟು ಪ್ರೇಮಿಗಳು ಇಲ್ಲಿ ಬಂದು ಹೋಗಿದ್ದಾರೆ! ನನ್ನ ಕೆಲ ಗೆಳಯರು ತಮ್ಮ ಪ್ರೇಮಿಗಳ ಜತೆ ಇಲ್ಲಿಗೆ ಬಂದು ನನ್ನ ಆತಿಥ್ಯ ಸ್ವೀಕರಿಸಿ ಗೂಡನ್ನು ಪವಿತ್ರಗೊಳಿಸಿದ್ದಾರೆ!...  ಹಾಗೇ ಈ ಎರಡು ಪ್ರೇಮ ಹಕ್ಕಿಗಳು... ಮತ್ತೆ ನೀವೂ ಬನ್ನಿ ಪ್ರೀತಿ ಹೊತ್ತು...

 ದಿಲ್ ಏಕ್ ಮಂದಿರ್ ಹೈ... ಪ್ಯಾರ್ ಕೀ ಜಿಸ್ ಮೇ ಹೋತೀ ಹೈ ಪೂಜಾ.. ಏ ಪ್ರೀತಂ ಕಾ ಘರ್ ಹೈ...

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮನುಷ್ಯ ಜಾತಿ ತಾನೊಂದೇ ವಲಂ...

ಭಾರತದಲ್ಲಿ ಜಾತಿ ವ್ಯವಸ್ಥೆ ಹೇಗೆ ಹುಟ್ಟಿತು ಎಂಬುದಕ್ಕೆ ಯಾವುದೇ ನಿರ್ಧಿಷ್ಟ ಥಿಯರಿ ಇಲ್ಲ. ಆದರೆ, ಇಲ್ಲಿನ ವರ್ಗ ಸೃಷ್ಟಿ ಮಾತ್ರ ಇರಾನ್ ವ್ಯವಸ್ಥೆಯಂತೇ ಇದೆ.  ಪುರಾತನ ಇರಾನಿನ ಚರಿತ್ರೆಯಲ್ಲಿ ಇಂಥದೊಂದು ವ್ಯವಸ್ಥೆ ಇತ್ತು. ಅದಕ್ಕೆ ಪಿಸ್ತ್ರಾಸ್ ಎನ್ನುತ್ತಾರೆ. ನಮ್ಮಲ್ಲಿ ಅದು ಚಾತುರ್ವರ್ಣವಾಗಿದೆ. ಅಲ್ಲಿ ಅಥ್ರವಾನ್ಸ್ (ಪ್ರೀಸ್ಟ್ ಕ್ಲಾಸ್), ರಥೈಸ್ತಾ (ವಾರಿಯರ್ಸ್), ವಸ್ತ್ರಿಯಾ (ಮರ್ಕಂಟೈಲ್ ಕ್ಲಾಸ್) ಮತ್ತು ಹ್ಯುತಿ (ಆರ್ಟಿಸನ್) ಎನ್ನುವ ವರ್ಗ ವ್ಯವಸ್ಥೆ ಇದೆ. ನಮ್ಮಲ್ಲಿ ಇದನ್ನು ಕಲ್ಪಿಸಿಕೊಂಡರೆ ಪುರೋಹಿತ ಅಥವಾ ಬ್ರಾಹ್ಮಣ (ಅಥ್ರವಾನ್ಸ್), ಕ್ಷತ್ರಿಯ  (ರಥೈಸ್ತಾ), ವೈಶ್ಯ  (ವಸ್ತ್ರಿಯಾ) ಮತ್ತು ಶೂದ್ರ (ಹ್ಯುತಿ) ಎಂದು ಅರ್ಥೈಸಿಕೊಳ್ಳಬಹುದು.  ಆದಿ ಕಾಲದ ಇರಾನಿಯನ್ ವ್ಯವಸ್ಥೆ ಹೀಗೇ ಇತ್ತು. ಅದೇ ನಾಲ್ಕು ವರ್ಗಗಳು ಭಾರತದಲ್ಲೂ ಈಗಲೂ ಚಾಲ್ತಿಯಲ್ಲಿವೆ. ಹೀಗೆ ಒಂದು ಇರಾನ್ ಸಂಬಂಧ ಭಾರತಕ್ಕಿದೆ. ಚರ್ಮದ ಬಣ್ಣ, ನಯ ನಾಜೂಕು, ಕಣ್ಣು, ಬುದ್ಧಿವಂತಿಕೆಯನ್ನು ಹೋಲಿಸಿದರೆ ಭಾರತದ ಅದರಲ್ಲೂ ಉತ್ತರ ಭಾರತದ ಕಾಶ್ಮೀರಿ ಪಂಡಿತರು, ಉತ್ತರ ಪ್ರದೇಶದ ಪಂಡಿತ್, ಚಿತ್ಪಾವನ ಬ್ರಾಹ್ಮಣರು, ನಮ್ಮ ಕರಾವಳಿ ಮತ್ತು ಉತ್ತರ ಕನ್ನಡದ ಹವ್ಯಕರು ಹೆಚ್ಚೂ ಕಮ್ಮಿ ಇರಾನಿಗಳನ್ನು ಹೋಲುತ್ತಾರೆ (ಮೇಲ್ನೋಟಕ್ಕೆ).  ಬಹುಶಃ ಹೀಗೂ ಆಗಿರಬಹುದು, ಆಗ ಇರಾನ್ ನಲ್ಲಿ ಕ್ರೈಸ್ತ ಮತ್ತು ಇಸ್ಲಾಂ ಮುಂಚೆಯೂ ಹಲವಾರು ಸುಧಾರಣಾವಾದಿಗಳ ಅಥವಾ ಬಂಡುಕೋರರ

"ಮಣೆಗಾರ" ಬಸಿದಿಟ್ಟ ಒಡಲಾಳದ ನೋವು ನೆನೆದು...

ಹಾಲ್ಕುರಿಕೆ ಥಿಯೇಟರ್ ಕಾನ್ಸೆಪ್ಟ್ ಕನ್ನಡ ರಂಗಭೂಮಿಯಲ್ಲಿ ಹೊಸದೊಂದು ಸಂಚಲನವನ್ನುಂಟು ಮಾಡುತ್ತಿದೆ. ಒಟ್ಟಾರೆ ಭಾರತೀಯ ರಂಗಭೂಮಿ ಕಾಣುತ್ತಿರುವ ಹೊಸತನಕ್ಕೆ ಇದು ಮುಖ್ಯವಾದ ಸಾಕ್ಷಿ. ಅತ್ಯಂತ ಕ್ರಿಯಾಶೀಲ ತುಡಿತದ ರಂಗಕರ್ಮಿ ಹಾಲ್ಕುರಿಕೆ ಶಿವಶಂಕರ (ನಿರ್ದೇಶಕ/ನಾಟಕಕಾರ) ಇತ್ತೀಚೆಗೆ "ಮಣೆಗಾರ" (ತುಂಬಾಡಿ ರಾಮಯ್ಯನವರ ಆತ್ಮಕಥೆ) ಎನ್ನುವ ದಲಿತ ಕಥಾನಕವೊಂದನ್ನು ರಂಗದ ಮೇಲೆ ಅನಾವರಣಗೊಳಿಸಿದರು. ಪ್ರಯೋಗದ ದೃಷ್ಟಿಯಿಂದ ಕೆಲವು ಕೊರತೆಗಳು, ದೋಷಗಳು ಇವೆ. ಅದು ಯಾವುದೇ ಪ್ರಯೋಗಕ್ಕೆ ಇರುವಂಥವೇ. ಆದರೆ ಸಮುದಾಯವೊಂದರ ಒಡಲಾಳದ ನೋವನ್ನು ರಂಗದ ಮೇಲೆ ಬಸಿದಿಟ್ಟಾಗ  ಬೆಚ್ಚಿ ಬೀಳುವಂತಾಯಿತು. ವಿಶೇಷವಾಗಿ ದಲಿತೇತರಲ್ಲಿ ಸಾಮಾಜಿಕ ಪ್ರಜ್ಞೆ, ಜವಾಬ್ದಾರಿಯನ್ನು ಬಡಿದೆಬ್ಬಿಸುವಂಥ ಕಥಾನಕವದು. "ಮಣೆಗಾರ" ಪ್ರೊಸಿನಿಯಂಗಿಂತ ಆಪ್ತರಂಗಭೂಮಿಗೆ ಸೂಕ್ತವಾದ ವಸ್ತು. ಪ್ರಯೋಗ ಒಟ್ಟಾರೆ ಮನುಷ್ಯ ಬದುಕಿನ ನಡುವಿರುವ ಗ್ರೇ ಏರಿಯಾವೊಂದರ ದರುಶನ ಮಾಡಿಸಿತು. ಮೇಲ್ವರ್ಗ ಸಹಮಾನವರನ್ನು ಅದು ಹೇಗೆ ಅಸ್ಪೃಶ್ಯರು ಎಂದು ದೂರಕ್ಕಿಟ್ಟಿತ್ತು, ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿತ್ತು ಎನ್ನುವುದು ಇದರ ಮೂಲ ಸಂಕಟ. ಇಡೀ ನಾಟಕದಲ್ಲಿ ಬದುಕಿಗಾಗೇ ಸಂಘರ್ಷವಿದೆ. ಆಹಾರಕ್ಕಾಗಿ ಹಾಹಾಕಾರವಿದೆ. socio-cultural  ನೆಲೆಯಲ್ಲಿ ದೊಡ್ಡ ಸಂಘರ್ಷವಿದೆ. ಇದು ರಾಜಕೀಯ ಆಯಾಮದಲ್ಲೂ ಬಹುಮುಖ್ಯವಾದ ಸಂಘರ್ಷವೇ. ಶಿಕ್ಷಣ ಮತ್ತು ಅದರ ಆಧಾರದಲ್ಲಿ ಹುಟ

"ಬದುಕು-ಬಯಲು" ನಾಟಕ ಮತ್ತು ಮಾನವೀಯ ನೆಲೆಯ ಹುಡುಕಾಟ

ಫ್ರಾನ್ಸ್ ನ ಬರಹಗಾರ ಅಲ್ಫ್ರೆಡ್ ಜೆರಿ ಬರೆದ 'ದಿ ಸೂಪರ್ ಮೇಲ್' ಎನ್ನುವ ಕಾದಂಬರಿಯ ಪ್ರೊಟಗಾನಿಸ್ಟ್ ಆ್ಯಂಡ್ರಿ ಮಾರ್ಕೆಲ್ ಒಬ್ಬ ಜಂಟಲ್ ಮನ್, ವಿಜ್ಞಾನಿ ಕೂಡ. ಅವನಿಗೆ ಮಾನವ ಸಾಮರ್ಥ್ಯಕ್ಕೆ ಮಿತಿ ಎಂಬುದೇ ಇಲ್ಲ ಎನ್ನುವುದರಲ್ಲಿ ಬಲವಾದ ನಂಬಿಕೆ. ಆತ ಉಗಿಬಂಡಿ ಜತೆಗೂ ಯಾವುದೇ ವಿಶ್ರಾಂತಿ ಮತ್ತು ತ್ರಾಸಿಲ್ಲದೇ ಕ್ರಮಿಸಿ  ರೇಸ್ ಗೆಲ್ಲಬಲ್ಲ (ಕಾದಂಬರಿಯಲ್ಲಿ ರೈಲು ಮತ್ತು ಸೈಕ್ಲಿಸ್ಟ್ ನಡುವೆ ಒಂದು ರೇಸ್ ನಡೆಯುತ್ತದೆ). ಒಂದೇ ಹೆಂಗಸಿನ ಜತೆ 24 ಗಂಟೆಗಳಲ್ಲಿ 82 ಬಾರಿ ಸಂಭೋಗ ನಡೆಸಬಲ್ಲ 'ಕಾಮಪಟುತ್ವ'ದ ಸಾಹಸಗಳನ್ನೂ ಮಾಡಬಲ್ಲ. ಇದನ್ನು ಪುರುಷಪರಾಕ್ರಮದ ನೆಲೆಯಲ್ಲಿ ನೋಡೋದಾ? ಇಲ್ಲಾ ನಿಸರ್ಗ ಸಹಜ ಸಾಧ್ಯತೆಯ ನೆಲೆಯಲ್ಲಿ ನೋಡುವುದಾ?... - ಇದು ಒಂದು ರೀತಿಯ ವಿಕ್ಷಿಪ್ತ ಮನೋಧರ್ಮದ, ಸೈನ್ಸ್ ಫಿಕ್ಷನ್ ಕಾದಂಬರಿಯ ಸಂಕ್ಷಿಪ್ತ ನೋಟ. ಅಲ್ಫ್ರೆಡ್ ಜೆರಿ ಉತ್ತಮ ನಾಟಕಕಾರನೂ ಹೌದು. ಆತನ 'ಉಬು ರೊಯ್' ಹೆಸರಾಂತ ನಾಟಕಗಳಲ್ಲೊಂದು.    * * * ಜೆರಿ ಬಗ್ಗೆ ಓದುತ್ತಿದ್ದ ಹೊತ್ತಲ್ಲಿ ಹಿಜಡಾವೊಬ್ಬರ ಆತ್ಮಕಥನ ಆಧರಿಸಿದ "ಬದುಕು-ಬಯಲು" ಎನ್ನುವ ನಾಟಕ ವೀಕ್ಷಣೆಗೆ ತಿಪಟೂರಿನ ರಂಗ ಗೆಳೆಯ ನೀನಾಸಂ ಚಂದ್ರು ಆಹ್ವಾನ ನೀಡಿದರು.  ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ ನೋಡಿದೆ. ಅದಕ್ಕೂ ಮುಂಚೆ ನಾಟಕದ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಸಿ.ಎಸ್. ದ್ವಾರಕಾನಾಥ್, ಗೌರಿ ಲಂಕೇಶ್ ಮತ್ತಿತರ ಚಿಂತಕರ ವಿ