ವಿಷಯಕ್ಕೆ ಹೋಗಿ

ಪೊನ್ನಪ್ಪ ಅವರ ಪ್ರಗತಿಪರ ಧೋರಣೆಗೆ ದಿಲ್ ಸೇ ಸಲಾಂ...

Whoso loveth father or mother more than me is not worthy of me....
Conflicts between conscience and law, in which the true Christian will feel bound to honour the man who follows his own conscience rather than the dictates of the law...

ಹೀಗೆ ಒಂದಷ್ಟು ಕ್ರೈಸ್ತ ನಂಬಿಕೆಗಳನ್ನಿಟ್ಟುಕೊಂಡು ಬರ್ಟ್ರಂಡ್ ರಸೆಲ್ ಕುಟುಂಬ ಕಲ್ಪನೆಯ ಬಗ್ಗೆ ಪುಸ್ತಕವೊಂದರಲ್ಲಿ ಚರ್ಚಿಸಿದ್ದಾನೆ. ಮದುವೆ ಮತ್ತು ಆದರ್ಶ ಕಲ್ಪನೆಯ ಬಗ್ಗೆ  ಅರ್ಥಪೂರ್ಣ ಪ್ರಸ್ತಾಪ ಮಾಡಿದ್ದಾನೆ. ಅವನ ಒಟ್ಟು ಉದ್ದೇಶ ಹೇಗೆ ಕುಟುಂಬ ಕಲ್ಪನೆಗಳು ಮತ್ತು ಅದರ ಮೇಲೆ ಧರ್ಮದ ಹಿಡಿತಗಳು ಆದರ್ಶದ ಹೆಸರಲ್ಲಿ ಕಟ್ಟಲ್ಪಡುತ್ತವೆ, ಪುರಾತನ ನಂಬಿಕೆಗಳು ಮತ್ತು ಆಧುನಿಕ ಧೋರಣೆಗಳ ನಡುವಿನ ಸಂಘರ್ಷಗಳು ಹೇಗೆ ಒಂದಕ್ಕೊಂದು ತಿಕ್ಕಾಟ ನಡೆಸುತ್ತವೆ... ಎಂದು ಅದರಲ್ಲಿ ವಿವರಿಸುವ ಯತ್ನ ಮಾಡಿದ್ದಾನೆ.

ಧರ್ಮ ಮತ್ತು ಸಂಪ್ರದಾಯಗಳ ಸೀಮಿತ ಕಟ್ಟಳೆಗಳನ್ನು ಮೀರಿ ಮನುಷ್ಯ ತನ್ನ ಅಂತಃಪ್ರೇರಣೆಗೆ ಹೆಚ್ಚು ಮಹತ್ವ ಕೊಡುವುದರ ಮೂಲಕ ಅವನ ವ್ಯಕ್ತಿತ್ವ ಪ್ರಖರಗೊಳ್ಳುತ್ತಾ ಸಾಗುತ್ತದೆ ಎನ್ನುವುದು ಮಾತ್ರ ಸ್ಪಷ್ಟ. ಪುರಾತನ ಕಾಲದ ಕ್ರೈಸ್ತರು ಧರ್ಮದ ಕಟ್ಟಳೆಗಳಿಗೆ ಮಹತ್ವ ಕೊಡುತ್ತ ಬಂದಿದ್ದರು. ಅದಕ್ಕೂ ಹಿಂದೆ ಯಾವ ಮಿತಿಗಳೂ ಇರಲಿಲ್ಲ. ಆಗಿನ ಭೀಕರ ಸ್ಥಿತಿಯಿಂದ ಒಂದಷ್ಟು ಪ್ರಗತಿ ಸಾಧನೆಗೆ ಆ ಥರದ ಧರ್ಮ ಬಳಕೆಯಾಯ್ತಾದರೂ ಕಾಲಾ ನಂತರದಲ್ಲಿ ಅದರ ಮಿತಿಗಳೂ ಪ್ರಶ್ನಾರ್ಹ ಎನಿಸಿಕೊಂಡವು. ಅಂತೆಯೇ ಅದನ್ನು ಮೀರುವ ಕ್ರಾಂತಿಕಾರಕ ನಿರ್ಧಾರಗಳು ಮುಂದಿನ ತಲೆಮಾರುಗಳ ಅಟಿಟ್ಯೂಡ್ ಅಥವಾ ಆದರ್ಶಗಳಾಗಿ ಮೂಡಿಬಂದವು. ವಿಶೇಷವಾಗಿ ಪಶ್ಚಿಮ ರಾಷ್ಟ್ರಗಳಲ್ಲಿ.  ಇದು ಏಷ್ಯದ ಇಸ್ಲಾಂ ಮತ್ತಿತರ ಧರ್ಮೀಯರಲ್ಲೂ ಆಗುವಂಥದೇ. ಆಗುತ್ತಿದೆ... !

'ನಮ್ಮಂತೆಯೇ ನಮ್ಮ ಮಕ್ಕಳೂ ಸಹ ಇಂಥದೇ ಮಾರ್ಗದಲ್ಲಿ ಸಾಗುವಂತಾಗಲಿ' ಎಂದು ಹೆಚ್ಚಿನ ಪಾಲಕರು ಅಥವಾ ಪೋಷಕರು ಆಶಿಸುತ್ತಾರೆ. ಅದಕ್ಕಾಗಿ ಯತ್ನಿಸುತ್ತಾರೆ. ನಮ್ಮ ಬಹುಪಾಲು ಕುಟುಂಬ ಕಲ್ಪನೆಯಲ್ಲಿ ಇದೇ ದೊಡ್ಡ ಆದರ್ಶ ಅಥವಾ ಸಂಪ್ರದಾಯವಾಗಿ ಬೆಳೆದು ಬಂದಿದೆ. ಎಲ್ಲೋ ಕೆಲವರು ಇದನ್ನು ಮೀರಲು ನೋಡುತ್ತಾರೆ.ಮಗ ಅಥವಾ ಮಗಳು ಸೀಮಿತ ಚೌಕಟ್ಟನ್ನು ಮೀರಲು ನಿಂತಾಗ  ಕುಟುಂಬಗಳಲ್ಲಿ ದೊಡ್ಡ ಸಂಘರ್ಷವೇ ನಡೆಯುತ್ತದೆ. ಇಂಥ ಸಂದರ್ಭದಲ್ಲಿ ಬಹುಪಾಲು ಕುಟುಂಬದ ಯಜಮಾನರು ಮಕ್ಕಳ ಕನಸುಗಳಿಗೆ ವಿರುದ್ಧವಾಗೇ ವರ್ತಿಸಿಬಿಡುತ್ತಾರೆ.
ಸಂಪ್ರದಾಯಸ್ಥರಂತೆ ಎಷ್ಟೋ ಪ್ರಗತಿಪರರೂ, ಬಂಡಾಯಗಾರರು ಇಂಥ ಪ್ರವೃತ್ತಿಯನ್ನು ಬೆಳೆಸಿಕೊಂಡ ಬೇಕಾದಷ್ಟು ಉದಾಹರಣೆಗಳಿವೆ. ಅಂತಸ್ತು ಅಥವಾ ಜಾತಿ, ಧರ್ಮದ ಸೀಮಿತ ವಲಯದಲ್ಲೇ ಸಂಬಂಧಗಳನ್ನು ಕಾಣುವ ಸಂಕುಚಿತ ಮನಸ್ಥಿತಿ ಇಂಥವರಲ್ಲಿರುತ್ತದೆ. ಇದೂ ಸಮಾಜದ ಅಂಧಕಾರಕ್ಕೆ, ಅಶಾಂತಿಗೆ, ಹಿಂಸೆಗೆ ಮೂಲ ಕಾರಣವಾಗಿರುವುದನ್ನು ಇವರು ಒಪ್ಪುವುದೇ ಇಲ್ಲ. ತಮ್ಮ ವಾದ, ಪ್ರತಿವಾದಗಳಿಂದ ಅಥವಾ ಹರಿತ ಬೌದ್ಧಿಕ ಪಿತೂರಿಗಳಿಂದ ಎಲ್ಲವನ್ನು ಸಮರ್ಥಿಸಿಕೊಂಡುಬಿಡುತ್ತಾರೆ.

ಅಜ್ಜ, ಅಜ್ಜಿ, ತಾತ, ಮುತ್ತಾತ, ಅಪ್ಪ, ಅಮ್ಮ, ಮಕ್ಕಳು, ಮೊಮ್ಮಕ್ಕಳು... ಎನ್ನುವ ದೊಡ್ಡ ಹರವು ಕುಟುಂಬ ಕಲ್ಪನೆಯಲ್ಲಿತ್ತು. ಅದೀಗ ಕೇವಲ ಅಪ್ಪ, ಅಮ್ಮ ಮತ್ತು ಮಕ್ಕಳವರೆಗೆ ಮಾತ್ರ ಸೀಮಿತಗೊಂಡಿದೆ. ಇದು ಕಾಲದ ಒತ್ತಡ ಎಂದು ಬೇಕಾದರೆ ಅನ್ನಿ. ಇದೇ ಕಾಲದ ವಿಶೇಷತೆ ಎಂದರೆ, ಮಕ್ಕಳೂ ತಮ್ಮದೇ ಕುಟುಂಬ ಕಲ್ಪನೆಗಳನ್ನು (ಜಾತಿ, ಧರ್ಮ, ವರ್ಣ, ದೇಶ, ಪ್ರದೇಶ, ಅಂತಸ್ತು, ವಯಸ್ಸು.. ಮಿತಿ ಇಲ್ಲದ) ರೂಪಿಸಿಕೊಳ್ಳಲು ಹಾತೊರೆಯುತ್ತಿರುವುದು. ಈಗಿನ ಬಹುಪಾಲು ಯುವಕರಲ್ಲಿ ಇಂಥ ಸಾಹಸಿ ಪ್ರವೃತ್ತಿ ಹೆಚ್ಚುತ್ತಿರುವುದು ಗಮನಾರ್ಹ.

ಹೊಸ ವರ್ಷದ ಮೊದಲ ಭಾನುವಾರ (3 ಜನವರಿ 2009), ಬೆಂಗಳೂರಿನಲ್ಲಿ ನಮ್ಮ ಪತ್ರಿಕಾರಂಗದ ಹಿರಿಯರಾದ ಎಂ.ಎ. ಪೊನ್ನಪ್ಪ ಅವರ ಮಗಳ ರಿಸೆಪ್ಷನ್ ನಡೆಯಿತು. ಬನ್ನೇರುಘಟ್ಟ ರಸ್ತೆಯಲ್ಲಿರುವ ಚಂದ್ರೋದಯ ಕಲ್ಯಾಣ ಮಂಟಪದಲ್ಲಿ ಬಹಳ ಅದ್ದೂರಿಯಾಗೇ ಸಮಾರಂಭ ನಡೆಯಿತು. ಕೊಡವ ಸಂಸ್ಕೃತಿಯಲ್ಲಿ ಬೆಳೆದ ಪೊನ್ನಪ್ಪ ಅವರ ಪುತ್ರಿ ತನ್ನ ಬಾಳಸಂಗಾತಿಯನ್ನಾಗಿ ಆಯ್ಕೆ ಮಾಡಿದ್ದು ಸಪ್ತಸಾಗರದಾಚೆಗಿನ ಸಂಸ್ಕೃತಿಯವನನ್ನು. ಅಪ್ಪಟ ವಿದೇಶಿಯೊಬ್ಬನನ್ನು ಪ್ರೀತಿಸಿ, ಅವನನ್ನೇ ಬಾಳಸಂಗಾತಿಯಾಗಿಸಿಕೊಳ್ಳುವ ಮಗಳ ನಿರ್ಧಾರವನ್ನು ತಂದೆಯಾಗಿ ಪೊನ್ನಪ್ಪ ಅವರು ಪ್ರೋತ್ಸಾಹಿಸಿದ ಮತ್ತು ಅದನ್ನು ಮನಸಾರೆ ಸ್ವಾಗತಿಸಿದ ರೀತಿಗೆ ಸಲಾಂ ಹೇಳಬೇಕೆನಿಸಿತು.

ಸ್ಪೋರ್ಟ್ಸ್ ವಿಭಾಗದ ಮುಖ್ಯಸ್ಥರಾಗಿ ಅವರು ಕಂಡ ಸ್ಪೋರ್ಟ್ಸ್ ಮ್ಯಾನ್ ಸ್ಪಿರಿಟ್ ಅನ್ನು ನಿಜ ಬದುಕಿನಲ್ಲಿ ತಂದ ರೀತಿ ಅದ್ಭುತ ಎನಿಸಿತು. ನಾವು ಮಾಡುವ ಕೆಲಸ ಮತ್ತು ಪರ್ಸನಲ್ ಲೈಫಿನಲ್ಲಿ ನಾವಿರುವ ಸಾಮಾಜಿಕ, ಧಾರ್ಮಿಕ ಸ್ಥಿತಿಯ ನಂಬಿಕೆಗಳಿಂದ ಒಂದು ನಿರ್ಧಿಷ್ಟ ದೂರ ಕಾಯ್ದುಕೊಳ್ಳುವ ಪ್ರವೃತ್ತಿಯೇ ನಮ್ಮಲ್ಲಿ ಹೆಚ್ಚಿರುತ್ತದೆ. ನಾವು ಮಾಡುವ ಕೆಲಸ ಸಾಮಾಜಿಕ ಸಾಮರಸ್ಯ, ಜಾತ್ಯತೀತ, ನಿಷ್ಪಕ್ಷಪಾತ ಮನೋಧರ್ಮ ಬಯಸುತ್ತಿರುತ್ತದೆ. ಆದರೆ ನಿಜ ಜೀವನದಲ್ಲಿ ಅದ್ಯಾವುದೂ ನಮ್ಮ  ಎಷ್ಟೋ ಜನರ ಮನೋಧರ್ಮವೇ ಆಗಿರುವುದಿಲ್ಲ. ಪೂರ್ವಗ್ರಹೀತ ಮನಸ್ಥಿತಿಯೇ ನಮ್ಮ ಕೆಲಸದಲ್ಲೂ ಪ್ರಭಾವ ಮಾಡತೊಡಗಿರುತ್ತದೆ. ಒಟ್ಟಾರೆ ಆಶಯಗಳೆಲ್ಲ ತೀವ್ರ ಹಾನಿಯನ್ನು ಅನುಭವಿಸುವುದು ಈ ಹಿನ್ನೆಲೆಯಿಂದಲೇ. ಹೀಗಾಗಿ ಕರ್ತವ್ಯ, ಕೆಲಸವೆನ್ನುವುದು ಯಾಂತ್ರಿಕಗೊಳ್ಳುತ್ತ ಸಮಾಜದ ಸಮಷ್ಠಿಪರ ಆಶಯಗಳೆಲ್ಲ ಸೊರಗತೊಡಗುತ್ತವೆ.
 
ಎಷ್ಟೋ ಪ್ರಗತಿಪರರು (ಎಲ್ಲರೂ ಅಂತೇನಲ್ಲ)  ಭಾಷಣ, ಕಾವ್ಯ, ಲೇಖನಗಳಿಗೆ ಮಾತ್ರ ಆದರ್ಶಗಳನ್ನು ಸೀಮಿತಗೊಳಿಸಿಕೊಂಡಿದ್ದಿದೆ. ಸಾಮಾಜಿಕ ಬದಲಾವಣೆ ತರುವ ಬರಿಯ ಸೋಗಲಾಡಿತನವನ್ನು ಹೊಂದಿದ ಬೇಕಾದಷ್ಟು ಉದಾಹರಣೆಗಳಿವೆ. ಆದರೆ, ಇದೆಲ್ಲವನ್ನು ಮೀರಿ ಸದ್ದಿಲ್ಲದೇ ಅಪ್ಪಟ ಪ್ರಗತಿಪರ ಧೋರಣೆಯನ್ನು ಮೆರೆದ ಪೊನ್ನಪ್ಪ ಅವರ ದಿಟ್ಟತನ, ತಂದೆಯಾಗಿ ಸಂಪ್ರದಾಯಗಳಿಗೆ ಶರಣಾಗದೇ, ಮಗಳ ಕನಸು, ಆಶಯಗಳನ್ನೇ ಮುಖ್ಯವೆಂದು ಭಾವಿಸಿದ ಪರಿ ಅಭಿಮಾನ ಮೂಡಿಸುವಂಥದು. ಎಷ್ಟೋ ಪ್ರಗತಿಪರ ಸೋಗಿನವರು ತಮ್ಮ ಸಣ್ಣ ಜಾತಿ, ಅಂತಸ್ತಿನ ಮಿತಿಯನ್ನೇ ಮೀರುವ ಧೈರ್ಯ ತೋರುವುದಿಲ್ಲ. ಅಂಥದರಲ್ಲಿ ಮಗಳ ಸೀಮೋಲ್ಲಂಘನ ಸಾಹಸಕ್ಕೆ ತಂದೆಯಾಗಿ ಪೊನ್ನಪ್ಪ ಚಪ್ಪಾಳೆ ತಟ್ಟಿ 'ಷಹಬ್ಬಾಸ್ ಮಗಳೇ' ಎಂದಿದ್ದು ನೋಡಿ ಖುಷಿಯಾಯಿತು. ನಾನು ಭಾಗವಹಿಸಿದ ಮೊತ್ತ ಮೊದಲ ಇಂಥ ಸಮಾರಂಭ ಇದಾದ್ದರಿಂದ ತುಂಬ ಖುಷಿ ಎನಿಸಿತು. ಇದನ್ನೂ ಮೀರಿದ ಸಾಹಸ ಮಾಡಿದವರೂ ಇರಬಹುದು. ಇದನ್ನು ಮೀರಿದ ಜಂಟಲ್ ಮನ್ಶಿಪ್ ಮೆರೆದವರೂ ಇರಬಹುದು. ಆದರೆ ನನ್ನ ಮಟ್ಟಿಗೆ ಇದು ಗ್ರೇಟ್. ನಮ್ಮ ನಡುವಿನ ಹಿರಿಯ ಸಹೋದ್ಯೋಗಿಯೊಬ್ಬರು  ಹೊಸ ತಲೆಮಾರಿನ ಆಶಯಗಳಿಗೆ ಇಂಥ ದೊಡ್ಡ ಮಾನ್ಯತೆ ಕೊಡುವ ಮನೋಧರ್ಮ ವ್ಯಕ್ತಪಡಿಸಿದ್ದು ನಿಜಕ್ಕೂ ಹೆಮ್ಮೆ ಮೂಡಿಸುವಂಥದು. ಇದು ನನ್ನ ಪ್ರಾಮಾಣಿಕ ಭಾವನೆ.

ಪೊನ್ನಪ್ಪ ಅವರಂಥ ಹಿರಿಯ ಜೀವಿಯ ಇಂಥ ಪ್ರಗತಿಪರ ಧೋರಣೆಗೆ ದಿಲ್ ಸೇ ಸಲಾಂ...

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮನುಷ್ಯ ಜಾತಿ ತಾನೊಂದೇ ವಲಂ...

ಭಾರತದಲ್ಲಿ ಜಾತಿ ವ್ಯವಸ್ಥೆ ಹೇಗೆ ಹುಟ್ಟಿತು ಎಂಬುದಕ್ಕೆ ಯಾವುದೇ ನಿರ್ಧಿಷ್ಟ ಥಿಯರಿ ಇಲ್ಲ. ಆದರೆ, ಇಲ್ಲಿನ ವರ್ಗ ಸೃಷ್ಟಿ ಮಾತ್ರ ಇರಾನ್ ವ್ಯವಸ್ಥೆಯಂತೇ ಇದೆ.  ಪುರಾತನ ಇರಾನಿನ ಚರಿತ್ರೆಯಲ್ಲಿ ಇಂಥದೊಂದು ವ್ಯವಸ್ಥೆ ಇತ್ತು. ಅದಕ್ಕೆ ಪಿಸ್ತ್ರಾಸ್ ಎನ್ನುತ್ತಾರೆ. ನಮ್ಮಲ್ಲಿ ಅದು ಚಾತುರ್ವರ್ಣವಾಗಿದೆ. ಅಲ್ಲಿ ಅಥ್ರವಾನ್ಸ್ (ಪ್ರೀಸ್ಟ್ ಕ್ಲಾಸ್), ರಥೈಸ್ತಾ (ವಾರಿಯರ್ಸ್), ವಸ್ತ್ರಿಯಾ (ಮರ್ಕಂಟೈಲ್ ಕ್ಲಾಸ್) ಮತ್ತು ಹ್ಯುತಿ (ಆರ್ಟಿಸನ್) ಎನ್ನುವ ವರ್ಗ ವ್ಯವಸ್ಥೆ ಇದೆ. ನಮ್ಮಲ್ಲಿ ಇದನ್ನು ಕಲ್ಪಿಸಿಕೊಂಡರೆ ಪುರೋಹಿತ ಅಥವಾ ಬ್ರಾಹ್ಮಣ (ಅಥ್ರವಾನ್ಸ್), ಕ್ಷತ್ರಿಯ  (ರಥೈಸ್ತಾ), ವೈಶ್ಯ  (ವಸ್ತ್ರಿಯಾ) ಮತ್ತು ಶೂದ್ರ (ಹ್ಯುತಿ) ಎಂದು ಅರ್ಥೈಸಿಕೊಳ್ಳಬಹುದು.  ಆದಿ ಕಾಲದ ಇರಾನಿಯನ್ ವ್ಯವಸ್ಥೆ ಹೀಗೇ ಇತ್ತು. ಅದೇ ನಾಲ್ಕು ವರ್ಗಗಳು ಭಾರತದಲ್ಲೂ ಈಗಲೂ ಚಾಲ್ತಿಯಲ್ಲಿವೆ. ಹೀಗೆ ಒಂದು ಇರಾನ್ ಸಂಬಂಧ ಭಾರತಕ್ಕಿದೆ. ಚರ್ಮದ ಬಣ್ಣ, ನಯ ನಾಜೂಕು, ಕಣ್ಣು, ಬುದ್ಧಿವಂತಿಕೆಯನ್ನು ಹೋಲಿಸಿದರೆ ಭಾರತದ ಅದರಲ್ಲೂ ಉತ್ತರ ಭಾರತದ ಕಾಶ್ಮೀರಿ ಪಂಡಿತರು, ಉತ್ತರ ಪ್ರದೇಶದ ಪಂಡಿತ್, ಚಿತ್ಪಾವನ ಬ್ರಾಹ್ಮಣರು, ನಮ್ಮ ಕರಾವಳಿ ಮತ್ತು ಉತ್ತರ ಕನ್ನಡದ ಹವ್ಯಕರು ಹೆಚ್ಚೂ ಕಮ್ಮಿ ಇರಾನಿಗಳನ್ನು ಹೋಲುತ್ತಾರೆ (ಮೇಲ್ನೋಟಕ್ಕೆ).  ಬಹುಶಃ ಹೀಗೂ ಆಗಿರಬಹುದು, ಆಗ ಇರಾನ್ ನಲ್ಲಿ ಕ್ರೈಸ್ತ ಮತ್ತು ಇಸ್ಲಾಂ ಮುಂಚೆಯೂ ಹಲವಾರು ಸುಧಾರಣಾವಾದಿಗಳ ಅಥವಾ ಬಂಡುಕೋರರ

"ಮಣೆಗಾರ" ಬಸಿದಿಟ್ಟ ಒಡಲಾಳದ ನೋವು ನೆನೆದು...

ಹಾಲ್ಕುರಿಕೆ ಥಿಯೇಟರ್ ಕಾನ್ಸೆಪ್ಟ್ ಕನ್ನಡ ರಂಗಭೂಮಿಯಲ್ಲಿ ಹೊಸದೊಂದು ಸಂಚಲನವನ್ನುಂಟು ಮಾಡುತ್ತಿದೆ. ಒಟ್ಟಾರೆ ಭಾರತೀಯ ರಂಗಭೂಮಿ ಕಾಣುತ್ತಿರುವ ಹೊಸತನಕ್ಕೆ ಇದು ಮುಖ್ಯವಾದ ಸಾಕ್ಷಿ. ಅತ್ಯಂತ ಕ್ರಿಯಾಶೀಲ ತುಡಿತದ ರಂಗಕರ್ಮಿ ಹಾಲ್ಕುರಿಕೆ ಶಿವಶಂಕರ (ನಿರ್ದೇಶಕ/ನಾಟಕಕಾರ) ಇತ್ತೀಚೆಗೆ "ಮಣೆಗಾರ" (ತುಂಬಾಡಿ ರಾಮಯ್ಯನವರ ಆತ್ಮಕಥೆ) ಎನ್ನುವ ದಲಿತ ಕಥಾನಕವೊಂದನ್ನು ರಂಗದ ಮೇಲೆ ಅನಾವರಣಗೊಳಿಸಿದರು. ಪ್ರಯೋಗದ ದೃಷ್ಟಿಯಿಂದ ಕೆಲವು ಕೊರತೆಗಳು, ದೋಷಗಳು ಇವೆ. ಅದು ಯಾವುದೇ ಪ್ರಯೋಗಕ್ಕೆ ಇರುವಂಥವೇ. ಆದರೆ ಸಮುದಾಯವೊಂದರ ಒಡಲಾಳದ ನೋವನ್ನು ರಂಗದ ಮೇಲೆ ಬಸಿದಿಟ್ಟಾಗ  ಬೆಚ್ಚಿ ಬೀಳುವಂತಾಯಿತು. ವಿಶೇಷವಾಗಿ ದಲಿತೇತರಲ್ಲಿ ಸಾಮಾಜಿಕ ಪ್ರಜ್ಞೆ, ಜವಾಬ್ದಾರಿಯನ್ನು ಬಡಿದೆಬ್ಬಿಸುವಂಥ ಕಥಾನಕವದು. "ಮಣೆಗಾರ" ಪ್ರೊಸಿನಿಯಂಗಿಂತ ಆಪ್ತರಂಗಭೂಮಿಗೆ ಸೂಕ್ತವಾದ ವಸ್ತು. ಪ್ರಯೋಗ ಒಟ್ಟಾರೆ ಮನುಷ್ಯ ಬದುಕಿನ ನಡುವಿರುವ ಗ್ರೇ ಏರಿಯಾವೊಂದರ ದರುಶನ ಮಾಡಿಸಿತು. ಮೇಲ್ವರ್ಗ ಸಹಮಾನವರನ್ನು ಅದು ಹೇಗೆ ಅಸ್ಪೃಶ್ಯರು ಎಂದು ದೂರಕ್ಕಿಟ್ಟಿತ್ತು, ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿತ್ತು ಎನ್ನುವುದು ಇದರ ಮೂಲ ಸಂಕಟ. ಇಡೀ ನಾಟಕದಲ್ಲಿ ಬದುಕಿಗಾಗೇ ಸಂಘರ್ಷವಿದೆ. ಆಹಾರಕ್ಕಾಗಿ ಹಾಹಾಕಾರವಿದೆ. socio-cultural  ನೆಲೆಯಲ್ಲಿ ದೊಡ್ಡ ಸಂಘರ್ಷವಿದೆ. ಇದು ರಾಜಕೀಯ ಆಯಾಮದಲ್ಲೂ ಬಹುಮುಖ್ಯವಾದ ಸಂಘರ್ಷವೇ. ಶಿಕ್ಷಣ ಮತ್ತು ಅದರ ಆಧಾರದಲ್ಲಿ ಹುಟ

"ಬದುಕು-ಬಯಲು" ನಾಟಕ ಮತ್ತು ಮಾನವೀಯ ನೆಲೆಯ ಹುಡುಕಾಟ

ಫ್ರಾನ್ಸ್ ನ ಬರಹಗಾರ ಅಲ್ಫ್ರೆಡ್ ಜೆರಿ ಬರೆದ 'ದಿ ಸೂಪರ್ ಮೇಲ್' ಎನ್ನುವ ಕಾದಂಬರಿಯ ಪ್ರೊಟಗಾನಿಸ್ಟ್ ಆ್ಯಂಡ್ರಿ ಮಾರ್ಕೆಲ್ ಒಬ್ಬ ಜಂಟಲ್ ಮನ್, ವಿಜ್ಞಾನಿ ಕೂಡ. ಅವನಿಗೆ ಮಾನವ ಸಾಮರ್ಥ್ಯಕ್ಕೆ ಮಿತಿ ಎಂಬುದೇ ಇಲ್ಲ ಎನ್ನುವುದರಲ್ಲಿ ಬಲವಾದ ನಂಬಿಕೆ. ಆತ ಉಗಿಬಂಡಿ ಜತೆಗೂ ಯಾವುದೇ ವಿಶ್ರಾಂತಿ ಮತ್ತು ತ್ರಾಸಿಲ್ಲದೇ ಕ್ರಮಿಸಿ  ರೇಸ್ ಗೆಲ್ಲಬಲ್ಲ (ಕಾದಂಬರಿಯಲ್ಲಿ ರೈಲು ಮತ್ತು ಸೈಕ್ಲಿಸ್ಟ್ ನಡುವೆ ಒಂದು ರೇಸ್ ನಡೆಯುತ್ತದೆ). ಒಂದೇ ಹೆಂಗಸಿನ ಜತೆ 24 ಗಂಟೆಗಳಲ್ಲಿ 82 ಬಾರಿ ಸಂಭೋಗ ನಡೆಸಬಲ್ಲ 'ಕಾಮಪಟುತ್ವ'ದ ಸಾಹಸಗಳನ್ನೂ ಮಾಡಬಲ್ಲ. ಇದನ್ನು ಪುರುಷಪರಾಕ್ರಮದ ನೆಲೆಯಲ್ಲಿ ನೋಡೋದಾ? ಇಲ್ಲಾ ನಿಸರ್ಗ ಸಹಜ ಸಾಧ್ಯತೆಯ ನೆಲೆಯಲ್ಲಿ ನೋಡುವುದಾ?... - ಇದು ಒಂದು ರೀತಿಯ ವಿಕ್ಷಿಪ್ತ ಮನೋಧರ್ಮದ, ಸೈನ್ಸ್ ಫಿಕ್ಷನ್ ಕಾದಂಬರಿಯ ಸಂಕ್ಷಿಪ್ತ ನೋಟ. ಅಲ್ಫ್ರೆಡ್ ಜೆರಿ ಉತ್ತಮ ನಾಟಕಕಾರನೂ ಹೌದು. ಆತನ 'ಉಬು ರೊಯ್' ಹೆಸರಾಂತ ನಾಟಕಗಳಲ್ಲೊಂದು.    * * * ಜೆರಿ ಬಗ್ಗೆ ಓದುತ್ತಿದ್ದ ಹೊತ್ತಲ್ಲಿ ಹಿಜಡಾವೊಬ್ಬರ ಆತ್ಮಕಥನ ಆಧರಿಸಿದ "ಬದುಕು-ಬಯಲು" ಎನ್ನುವ ನಾಟಕ ವೀಕ್ಷಣೆಗೆ ತಿಪಟೂರಿನ ರಂಗ ಗೆಳೆಯ ನೀನಾಸಂ ಚಂದ್ರು ಆಹ್ವಾನ ನೀಡಿದರು.  ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ ನೋಡಿದೆ. ಅದಕ್ಕೂ ಮುಂಚೆ ನಾಟಕದ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಸಿ.ಎಸ್. ದ್ವಾರಕಾನಾಥ್, ಗೌರಿ ಲಂಕೇಶ್ ಮತ್ತಿತರ ಚಿಂತಕರ ವಿ