ವಿಷಯಕ್ಕೆ ಹೋಗಿ

ಗೂಡು ಕಳಕೊಂಡ ಗುಬ್ಬಚ್ಚಿಗಳು...!

ಈ ಚಿತ್ರ ನೋಡಿ ನಿಮಗೇನನ್ನಿಸಿತು? ಯಾವುದೋ ಕಟ್ಟಡದೊಳಗೆ ಗುಬ್ಬಚ್ಚಿಗಳು  ಕೂತಿದ್ದನ್ನು ಮೊಬೈಲ್ ಫೋನಿನಲ್ಲಿ ಸೆರೆಹಿಡಿದಿದ್ದು ಅಂತನ್ನಿಸಿರಬೇಕು. ಹೌದು ಇದು ಮೋಬೈಲ್ ಫೋನಿನ ಕ್ಯಾಮೆರಾದಿಂದ ನಾನೇ ಸೆರೆಹಿಡಿದಿದ್ದು.
ಈ ಕಟ್ಟಡ ನಮ್ಮ ಬೆಂಗಳೂರು
ಇಂಟರ್ ನ್ಯಾಷನಲ್  ಏರ್ ಪೋರ್ಟ್...  ಅದರೊಳಗಿನ ಕ್ಯಾಂಟಿನ್ ನಲ್ಲಿ ತೆಗೆದ ಚಿತ್ರಗಳಿವು. ಅಲ್ಲಿ ಗುಬ್ಬಚ್ಚಿಗಳದ್ದೇ ಸದ್ದು, ಪಿಸುಮಾತು, ಚಿನಕುರಳಿ ಮಾತು... ನೋವಿನ ದನಿ...  ಕೇಳಿಸುತ್ತಿತ್ತು...!  


                                                                                                                                                                                                                  
ಅದೆಷ್ಟು ಸ್ವಚ್ಚಂದವಾಗಿ ಹಾರಾಡುತ್ತಿದ್ದ ಗುಬ್ಬಚ್ಚಿಗಳ ಗೂಡುಗಳಿಲ್ಲಿ ಮುರುಟಿಹೋಗಿವೆಯೋ? ನೂರಾರು ಎಕರೆ ಜಮೀನಿನಲ್ಲಿ  ಹೀಗೆ ಕಾಂಕ್ರೀಟ್ ಕಾಡೊಂದನ್ನು ಕಟ್ಟಿ ಅಲ್ಲಿಂದ ಲೋಹದ ಹಕ್ಕಿಗಳ ಹಾರಾಟಕ್ಕೆ ಜಾಗ ಮಾಡಿಕೊಡಲು ಅದೆಷ್ಟು ಮರಗಳು ಉರುಳಿದವೋ.. ಅಲ್ಲೆಲ್ಲ ಗೂಡು ಕಟ್ಟಿ ಪ್ರೀತಿ, ಪ್ರಣಯ, ಮೈಥುನ, ಮರಿಗಳ ಆರೈಕೆಯಲ್ಲಿ ತೊಡಗಿದ್ದ  ಗುಬ್ಬಚ್ಚಿಗಳು ಇದ್ದಕ್ಕಿದ್ದಂತೆ ಕಳಕೊಂಡ ನೆಲೆಯಿಂದ ಅದೆಷ್ಟು  ಕಂಗಾಲಾದವೋ...

ಬಹುಶಃ ಈ ಗುಬ್ಬಚ್ಚಿಗಳು ತಾವು ಕಳಕೊಂಡ ಬದುಕನ್ನಿಲ್ಲೇ ಮತ್ತೆ ಹುಡುಕಿಕೊಳ್ಳಲು ಅಲೆಯುತ್ತಿರಬಹುದೇ? ಅಥವಾ ಕಟ್ಟುವ, ಕೆಡವುವ ಪ್ರಕ್ರಿಯೆಯಲ್ಲಿ ಪ್ರಾಣ ಕಳಕೊಂಡ ತಮ್ಮವರ, ಪೂರ್ವಜರ ಮರೆಯಲಾಗದೇ  ಇಲ್ಲೇ ಅವರಾತ್ಮಗಳ ಸ್ಮರಣೆಯಲ್ಲೇ ಕಾಲ ಕಳೆಯ ಬಂದಿರಬಹುದೇ... ತಮ್ಮ ಗೂಡುಗಳ ನೆನಪುಗಳಿಂದ ಜೀವ ತಡೆಯಲಾಗದೇ ಇಲ್ಲೇ ಬಿಕ್ಕಳಿಸುತ್ತ ಅಲೆಯುತ್ತಿರಬಹುದೇ.... ನಮ್ಮ ನೆಲೆ, ಅನ್ನದ ಮೂಲವನ್ನೇ ಕಿತ್ತುಕೊಂಡು ನಿಮ್ಮ ಲೋಹದ ಹಕ್ಕಿಗಳ ಹಾರಾಟ ನೋಡುತ್ತ ಮೋಜು ಮಾಡುತ್ತಿರುವ ಮನುಜರೇ ನಿಮ್ಮ ಬದುಕು ಇನ್ನಷ್ಟು ಸುಂದರವಾಗಿರಲಿ ಎಂದು ಉಲಿಯುತ್ತಿವೆಯೋ?... ನಮ್ಮ ಜಾಗೆ ನಮಗೆ ಕೊಟ್ಟುಬಿಡಿ ಎಂದೇನೂ ನಾವು ಕೇಳಲ್ಲ... ನಿಮ್ಮ ಹಾಗೆ ಪರಿಹಾರವನ್ನೂ ಕೇಳಲ್ಲ...? ಕೇಳುವುದಾದರೂ ಯಾರನ್ನ?... ಎಂದು ಚುಚ್ಚುತ್ತಿವೆಯೋ...!

 ನಾವೂ ನಿಮ್ಮ ಒಡನಾಡಿಯಾಗೇ ಅನಾದಿ ಕಾಲದಿಂದಲೂ ನಿಮ್ಮ ಜತೆಗೇ ಇದ್ದವರು. ನಾಡಲ್ಲಿ ನೀವು ಮರಗಳನ್ನೆಲ್ಲ ಕಡಿದು ಮನೆ ಕಟ್ಟಿಕೊಂಡಿರಿ...  ಕೆಲವು ಪುಣ್ಯವಂತರು ನೆಟ್ಟ ಪುಟ್ಟ ಮರಗಳಲ್ಲೇ ನಾವು ಹ್ಯಾಗೊ ಬದುಕ ಕಟ್ಟಿಕೊಂಡಿದ್ದೆವು. ನಿಮ್ಮ ಕಿವಿಗಳಿಗೆ ಚಿಂವ್ ಚಿಂವ್ ಸುಪ್ರಭಾತ ಹೇಳುತ್ತ ಮುಂಜಾವಿನ ಶುಭ ಸಂದೇಶ ಹೊತ್ತು ನಿಮ್ಮ ದಿನದ ಬದುಕಿಗೆ ಹಾರೈಸುತ್ತ ಇದ್ದೆವು... ಆದರೆ, ಮೆಟ್ರೊ, ರಸ್ತೆ ಅಗಲೀಕರಣ, ಬಹುಮಹಡಿ ಕಟ್ಟಡ, ಶಾಪಿಂಗ್ ಮಾಲ್ ಎಂದೆಲ್ಲ ನಮ್ಮನ್ನು ನಿಮ್ಮ ಬದುಕಿನಿಂದಲೇ ಕಿತ್ತು ಬಿಸಾಕಿದಿರಿ... ಈಗ ಊರಾಚೆ ಇಲ್ಲಾದರೂ ರೈತರ ಜತೆ ಒಡನಾಡಿಯಾಗಿರೋಣ ಎಂದರೆ ಲೋಹದ ಹಕ್ಕಿಗಳ ಸಾಕಿಕೊಂಡ ನೀವುಗಳು ಅವುಗಳ ಹಾರಾಟಕ್ಕೆ ಕೊನೆಗೆ ನಮ್ಮ ಗೂಡುಗಳನ್ನೇ ಕಿತ್ತುಕೊಂಡಿರಿ...  ಅಷ್ಟಾದರೂ ನಾವು ನಿಮ್ಮ ಮೇಲೆ ಕೋಪ ಮಾಡಿಕೊಳ್ಳಲಿಲ್ಲ... ನಿಮ್ಮನ್ನೆಲ್ಲ ಆ ಗ್ಲೋಬಲ್ ವಾರ್ಮಿಂಗ್ ಭೂತ ಎದ್ದಿದೆಯಲ್ಲ ಅದೇ ಬುದ್ಧಿ ಕಲಿಸುತ್ತದೆ...

ಆದರೂ ಸ್ವಾಮೀ... ಇಲ್ಲಿ ರೈತ ಬೆಳೆದ ಕಾಳುಗಳಲ್ಲಿ ನಾವೂ ಒಂದಷ್ಟು ಹೊಟ್ಟೆಗಿಳಿಸಿಕೊಂಡು ಸಂತೋಷದಿಂದ ಹಾರಾಡಿಕೊಂಡದ್ದೆವು. ಈಗೆಲ್ಲಿ?  ಆ ಭೂಮಿ ಮೇಲೆ ನಿಮ್ಮ ಮಹಲು ನಿಂತಿದೆ. ವಿದೇಶಿಯರು ವಾ ವಾ ಎನ್ನುವಂಥ ಮಹಲು ಕಟ್ಟಿಕೊಂಡವರು ನೀವು.... ನಿಮ್ಮಲ್ಲೊಂದೇ ಮನವಿ. ನಿಮ್ಮ ಹಲ್ಲುಗಳ ಸಂದಿಯಷ್ಟೇ ಅಗಲವಾಗಿರುವ ನಮ್ಮ ಹೊಟ್ಟೆಗೆ ನೀವು ತಿಂದು ಎಸೆದ ಒಂದಗುಳ ಅನ್ನವಾದರೂ  ಕೊಡಿ ಸ್ವಾಮಿ.. ಎಂದು ಗುಬ್ಬಚ್ಚಿಗಳು ಚಿಂವ್ ಚಿಂವ್ ಗುಟ್ಟುತ್ತಿವೆಯೋ...  ಅಷ್ಟಕ್ಕೂ ಮನುಷ್ಯರ ಹಾಗೆ ಅವರದೂ ಒಂದು ಬದುಕಿದೆಯಲ್ಲವೇ..?

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಷ್ಕ್‌ ಕೆ ಇಮ್ತೆಹಾನ್‌ ಔರ್‌ ಭೀ ಹೈ’.. ಇಮ್ರಾನ್‌ ಖಾನ್‌!

ಪಾಕಿಸ್ತಾನದ ಬಗ್ಗೆ ಮಾತನಾಡುವುದು ಮಹಾ ಪಾಪದ ಕೆಲಸವೇನಲ್ಲ. ಹಾಗೆ ಭಾವಿಸಬೇಕಿಲ್ಲ. ಅದು ಒಪ್ಪಿತವೊ ಇಲ್ಲವೋ, ಅದರ ಬಗ್ಗೆ ಅಲಕ್ಷ್ಯವೋ ನಿರ್ಲಕ್ಷ್ಯವೊ ಏನೇ ಆದರೂ ಅದು ಒಂದು ದೇಶ. ನೆರೆಯ ರಾಷ್ಟ್ರ. ‘ಪಡೋಸಿ...’ ಸಂಬಂಧದಲ್ಲಿ ನಮ್ಮದೇ ಕರುಳಬಳ್ಳಿ. ಭಾಷೆ, ಜನಜೀವನ ಶೈಲಿಯಲ್ಲಿ ಬದಲಾದರೂ ಮನುಷ್ಯ ಭಾವ, ಬದುಕುವ ಸಾಮಾನ್ಯ ಕಾಳಜಿ  ಒಂದೇ. ಹಾಗೆ ನೋಡಿದರೆ ಸಾಂಸ್ಕೃತಿಕವಾಗಿ ಎರಡೂ ದೇಶಗಳು ಅಭಿನ್ನ. ನಮ್ಮಲ್ಲಿರುವ ಹಾಗೆ ಅಲ್ಲಿಯೂ ಪ್ರಜಾಪ್ರಭುತ್ವ ಇದೆ. ಅಲ್ಲಿ ನಡೆಯುವುದು ಇಲ್ಲೂ ನಡೆಯುತ್ತದೆ. ಅಲ್ಲಿ ನಡೆಯಲೇಬಾರದ್ದು ಇಲ್ಲೂ ನಡೆಯಲೇಬಾರದು.  ತೀವ್ರವಾದ ನಮ್ಮಲ್ಲಿನದಕ್ಕಿಂತ ಅಲ್ಲಿ ತುಸು ಹೆಚ್ಚು ಸವಾರಿಗೆ ಹವಣಿಸಿದೆ. ಅಲ್ಲಿನ ಮಿಲಿಟರಿ ಅತಿರೇಕದ್ದು. ಅಕ್ಷಮ್ಯ. ಮತ್ತೆ ದೇಶ ಪುಟ್ಟದಾದಷ್ಟು ಅದಕ್ಕೆ ಭಯಗಳು ಜಾಸ್ತಿ. ಮಿಲಿಟರಿ ಕವಚದಲ್ಲಿ ಅದು ಸುರಕ್ಷಾ ಭಾವವನ್ನು ಕಲ್ಪಿಸಿಕೊಳ್ಳುತ್ತದೆ. ಅದೊಂದು ತರಹದ ಸಮಾಧಾನ. ಆದರೆ ಭ್ರಮೆಯಿಂದ ಕೂಡಿದ್ದು. ಭಯೋತ್ಪಾದನೆ ಕೂಡ ಒಂದರ್ಥದಲ್ಲಿ ಪುಕ್ಕಲುತನವೇ ಆಗುತ್ತದೆ. ಹಿಂಸಾ ಪ್ರವೃತ್ತಿಗೆ ಹೆದರಿಸುವುದೇ ಕೆಲಸ. ಹೆದರಿಸುವವರು ಶೂರರು, ಧೀರರು ಮತ್ತು ಜೀನಿಯಸ್‌ ಆಗಿರಲು ಹೇಗೆ ಸಾಧ್ಯ? ಮುಖ್ಯವಾಗಿ ಅಲ್ಲಿನ ವಿದ್ಯಮಾನಗಳನ್ನು ಗಮನಿಸುವುದಾದರೆ, ಮಿಲಿಟರಿ, ಮತಾಂಧರು, ಭಯೋತ್ಪಾದಕರು, ಭ್ರಷ್ಟರು ಇದೆಲ್ಲದರಿಂದ ಪಾಕಿ ತುಂಬ ರೋಸಿ ಹೋಗಿದ್ದಾನೆ. ಒಂದು ಸೂಕ್ತ ಪರ್ಯಾಯಕ್ಕಾಗಿ ಹಂಬಲಿಸಿದ್...

ನಾನು ನೀನಾಸಂ ಪದವೀಧರನಲ್ಲ...

ನೀನಾಸಂ ಪದವಿ ನನ್ನ ತಲೆಗೆ ಅನಗತ್ಯ ಭಾರ ಸ್ವಾಮೀ. ಅಷ್ಟು ಕಪ್ಪು ಸುಂದರಿಯರ ಭಾರವೇ ನನ್ನ ತಲೆಗೆ ಸಾಕಾಗಿ ಹೋಗಿದೆ. ಇನ್ನು ಇಷ್ಟು 'ವಜನ್' ಪದವಿ ಕಿರೀಟ ಬೇಡವೇ ಬೇಡ. ಸುಮ್ಮನೇ ಖಾಸಗಿಯಾಗಿ ಡೈರಿಯ ಹಾಗೆ ಬೆಚ್ಚಗೆ ನನ್ನ ಜತೆಗೆ ಸದಾ ಇರಲಿ ಎಂದುಕೊಂಡು ಈ ಬ್ಲಾಗ್ ರೂಪಿಸಿದ್ದೇನಷ್ಟೇ. ಅವಧಿ ಬ್ಲಾಗ್ ನನ್ನ ಈ ಪುಟ್ಟ ಯತ್ನಕ್ಕೆ ಬೆನ್ನು ತಟ್ಟಿದ್ದು ಸಂತೋಷವೇ. ಆದರೆ, ನನ್ನ ಬಗ್ಗೆ ಬೆನ್ನುತಟ್ಟುವ ಸಾಲುಗಳ ಬರೆಯುತ್ತ ನೀನಾಸಂ ಪದವೀಧರ ಎನ್ನುವ ಒಂದು ತಪ್ಪು ಮಾಹಿತಿ ಕೂಡ ನುಸುಳಿಕೊಂಡಿದೆ. ಸ್ವಾಮೀ ನಾನೀ ನೀನಾಸಂ ಸುದ್ದಿಗೇ ಹೋದವನಲ್ಲ. ಅಲ್ಲಿ ಕಲಿತು ಬಂದವರ ಜತೆ 'ಬೇಜಾನ್' ಜಗಳ ಮಾಡಿದಿನಿ ಅಷ್ಟೇ.

ಕಲೆ ಮತ್ತು ನೈತಿಕತೆ

ಕಲಾವಿದನೊಬ್ಬನ ಕಲೆಯ ಬಗೆಗಿನ ಅನುರಾಗ, ಶ್ರದ್ಧೆ, ವಿಶ್ವಾಸಾರ್ಹತೆ ಮತ್ತು ಧ್ಯಾನ ಎಲ್ಲವೂ ಬದ್ಧತೆಯಿಂದ ಕೂಡಿರುತ್ತದೆ. ಅವನೊಳಗೇ ಒಂದು ಸ್ವರ್ಗ ಸಮಾನವಾದ ಜಗತ್ತೊಂದು ರೂಪುಗೊಂಡಿರುತ್ತದೆ. ಅದನ್ನು ಬೇಕಿದ್ದರೆ ಕಾವ್ಯದ  ಅಂತಃದೃಷ್ಟಿ, ಅಂತಃಪ್ರಜ್ಞೆ ಅಥವಾ ಅಂತಃ ಸೂಕ್ಷ್ಮತೆ ಅಂತ ಅನ್ನಿ. ಕಾವ್ಯ ಎಂದಾಕ್ಷಣ ಅಕ್ಷರಗಳ ಕಲಾಕೃತಿ ಅಲ್ಲ. ಕಾವ್ಯ ಅಥವಾ ಪೊಯಟ್ರಿ ಅನ್ನೋದು ಎಲ್ಲದರೊಳಗೂ ಇರುವ ಅವ್ಯಕ್ತ ಸೂಕ್ಷ್ಮ. ಅದನ್ನು ಅಭಿವ್ಯಕ್ತಿಸಲು ನಾವು ಕಂಡುಕೊಳ್ಳುವ ಮಾರ್ಗಗಳಲ್ಲಿ ಅಕ್ಷರ, ಶಬ್ದ, ಧ್ವನಿ, ಚಿತ್ರ, ಅಭಿನಯ.. ಎಲ್ಲವೂ ಒಂದು ಮಾಧ್ಯಮ. ಕಲಾವಿದ ಅಥವಾ ಕವಿ ತಾನು ಸೃಜಿಸಹೊರಟ ಕೃತಿಯಲ್ಲಿ ಇದೆಲ್ಲವನ್ನು ಪ್ರಯೋಗಕ್ಕೊಳಪಡಿಸಿ ಅದರ ಸಾರವನ್ನೇ ಅಭಿವ್ಯಕ್ತಿಯಲ್ಲಿ ಎರಕಹೊಯ್ಯುತ್ತಾನೆ. ಹಾಗಾದಾಗ ಆ ಕಲಾಕೃತಿಯಲ್ಲಿ ಧ್ವನಿಸುತ್ತಿರುವುದು ಅವನ ದೃಷ್ಟಿ, ಪ್ರಜ್ಞೆ, ತತ್ವ, ಅಭಿಪ್ರಾಯ ಆಗುತ್ತದೆ. ಇದಕ್ಕೂ ಮಿಗಿಲಾಗಿ ಅದು ಆತನ ಅನುಭಾವ ಪರಪಂಚವೇ ಆಗುತ್ತದೆ. ಪ್ರತಿನಿಧಿಸುವ ತತ್ವ ಅವನದೇ ಆಗಬಹುದು. ಅದಕ್ಕವನು ಬದ್ಧನೂ ಆಗಬಹುದು. ಇಲ್ಲವೇ ಅರಾಜಕತೆಯ ಹಾಗೊಂದು ಭಾವದಲ್ಲಿ ತನಗೂ ತನ್ನ ಕಲಾಕೃತಿಗೂ ಸಂಬಂಧವೇ ಇಲ್ಲ ಎಂದು ವಾದಿಸಬಹುದು. ಅರಾಜಕತೆಯಿಂದ ಕೂಡಿದ ಯಾವುದೂ ಬಹುಕಾಲ ಬಾಳಿ ಬದುಕುವಂಥದ್ದಲ್ಲ ಎನ್ನುವ ಎಚ್ಚರ ಕೂಡ ಮುಖ್ಯ.   ಮತ್ತೆ ಕಲಾವಿದನ ಅಭಿವ್ಯಕ್ತಿಯನ್ನು ಬರಿಯ ಸಾಂಸ್ಕೃತಿಕ ನೆಲೆಯಲ್ಲಿ ಮಾತ್ರ ಕಾಣಬೇಕಿಲ್ಲ. ಅದು ಸಮ...