ವಿಷಯಕ್ಕೆ ಹೋಗಿ

ಜರ್ನಲಿಸಂ ಅಧ್ಯಯನ- ಅಲುಮ್ನಿ ಮೀಟ್., ತೋಬತೇಕ ಸಿಂಗ್ ನಾಟಕ. ಮಧುರ ನೆನಪುಗಳು ಮತ್ತು ಮಡುಗಟ್ಟಿರುವ ನೋವು

ವಿಶ್ವವಿದ್ಯಾಲಯ... ಅರಿವಿನ (ಜ್ಞಾನ) ದೊಡ್ಡ ವಿಶ್ವವೇ ತೆರಕೊಳ್ಳುವ ತಾಣ. ನಾವು ಆಯ್ದುಕೊಂಡ ವಿಷಯದ ಸಮಗ್ರ ವಿಶ್ವವೇ ಅಲ್ಲಿ ದರ್ಶನವಾಗಬೇಕು. ಹೀಗಾಗುವುದುಂಟೆ!(?)

ಪತ್ರಿಕೋದ್ಯಮ ಎಂದರೆ ಪತ್ರಿಕೆಗೆ ಕೆಲಸ ಮಾಡುವುದು... ಅದನ್ನು ಹೇಗೆ ಮಾಡಬೇಕು? ಇದನ್ನು ಕಲಿಸುವುದೇ ವಿಶ್ವವಿದ್ಯಾಲಯ! ಹೀಗೆಂದುಬಿಟ್ಟರೆ... ಬರವಣಿಗೆ, ವರದಿ, ಎಡಿಟಿಂಗ್... ಬಗ್ಗೆ ಟಿಪ್ಸ್ ಕೊಡುವ ಕೆಲಸ ಮಾತ್ರ ವಿವಿಗಳದ್ದಾಗಿಬಿಡುತ್ತದೆ. ಸುಮಾರು ವರ್ಷಗಳ ಹಿಂದೆ ವಿವಿಗಳ ಸ್ಥಿತಿ (ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಅಧ್ಯಯನಕ್ಕೆ ಸಂಬಂಧಿಸಿ) ಇದಕ್ಕೂ ಭಿನ್ನವೇನಿರಲಿಲ್ಲ. ಇದೇ ಸ್ಥಿತಿ ಈಗಲೂ ಇರಬಹುದು. ಕಾಲೇಜುಗಳಲ್ಲೂ...

ಆದರೆ, ಇದೆಲ್ಲ ಮಿತಿಗಳನ್ನು ಮೀರಿ ಎಂಎ ಮಾಸ್ ಕಮ್ಯುನಿಕೇಷನ್ ಅಂಡ್ ಜರ್ನಲಿಸಂ ಅನ್ನು ತುಂಬ ಆಸ್ಥೆಯಿಂದ, ಆಸಕ್ತಿಯಿಂದ ಮತ್ತು ಅರ್ಥಪೂರ್ಣವಾಗಿ ಅಧ್ಯಯನ ಮಾಡುವ ಉಮೇದಿಯ ನನ್ನಂಥ ಹುಡುಗರು ಅನೇಕರಿದ್ದರು. ಸಮೂಹ ಮಾದ್ಯಮ ಅಥವಾ ಒಟ್ಟಾರೆ ಮಾಧ್ಯಮ ಪರಿಕಲ್ಪನೆಯ ಬಗ್ಗೆ ನನಗಂತೂ ಚೆನ್ನಾಗಿ ತಿಳಿದಿತ್ತು. ಥಿಯೇಟರ್, ಸಿನಿಮಾ, ಟಿವಿ, ಡಾಕ್ಯುಮೆಂಟರಿ, ಬೀದಿನಾಟಕ, ಸಾಕ್ಷರತಾ ಚಳವಳಿ, ಜಾಥಾ, ಶಿಬಿರ... ಹೀಗೆ ಮಾಧ್ಯಮದ ಹಲವು ಆಯಾಮಗಳಲ್ಲಿ ನಾನಾಗಲೇ ಸಕ್ರಿಯನಾಗಿ ತೊಡಗಿಕೊಂಡಿದ್ದವ. ಸಮೂಹ ಮಾದ್ಯಮದ ಕೆಲಸ, ಪಾತ್ರ ಮತ್ತು ಅದರ ಪರಿಣಾಮ, ಫಲಿತಾಂಶಗಳ ಬಗ್ಗೆಯೂ ಚೆನ್ನಾಗಿ ಅರಿವಿಟ್ಟುಕೊಂಡೇ ವಿವಿ ಶಿಕ್ಷಣದ ಹೊಸ್ತಿಲು ತುಳಿದಿದ್ದೆ (ಈ ವಿಭಾಗಕ್ಕೆ ಬರಲು ಪ್ರೇರಣೆಯಾಗಿದ್ದ ಗೆಳೆಯ ಎ.ವೈ. ಹಾದಿಮನಿ ಮತ್ತು ಹೊಸಮನಿ ಅವರನ್ನು ಹಾಗೂ ಒಬ್ಬ ಪ್ರೊಫೆಸರ್ ಗಿಂತ ಅಪಾರ ಜ್ಞಾನ ಹೊಂದಿದ್ದ ಮತ್ತು ಜರ್ನಲಿಸಂ ಮಹತ್ವವನ್ನು ಮನದಟ್ಟು ಮಾಡಿಕೊಡುತ್ತಿದ್ದ ಮಹೇಶ್ ನಾವಳ್ಳಿ ಎನ್ನುವ ಗ್ರೇಟ್ ಸೋಲ್ ಅನ್ನು ಪ್ರೀತಿಯಿಂದ ನೆನೆಯುತ್ತೇನೆ). ಅದಕ್ಕೂ ಮುಂಚೆ ಎಂಎಸ್ಸಿ ಎರಡು ವರ್ಷ ಮಣ್ಣೆಳೆದು, ಏನೇನೋ ತಲೆಕೆಡಿಸಿಕೊಂಡು ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಹಾಳುಮೂಳು ಓದಿ, ಬರೆದು ಸುಸ್ತಾಗಿ ಅದನ್ನು ಎಡಗಾಲಿಂದ ಒದ್ದು ಬಂದಿದ್ದೆ.

ಪ್ರಗತಿಪರ ಧೋರಣೆಯ ಚಿಂತನೆಗಳು ನಮ್ಮೊಳಗೆ ಉಸಿರಾಡುತ್ತಲೇ ಇದ್ದ ದಿನಗಳವು. ಈ ಸಮಾಜಕ್ಕೆ, ಜಗತ್ತಿಗೆ ಏನನ್ನಾದರೂ ಅರ್ಥಪೂರ್ಣವಾದುದನ್ನು ಕೊಡಬೇಕು. ಆ ಮೂಲಕ ನಾವೂ ಬೆಳೆಯಬೇಕು. ಹುಟ್ಟಿದ್ದು ಸಾರ್ಥಕ ಎನ್ನುವಂಥ ಕೆಲಸ ಮಾಡಬೇಕು ಅಂದುಕೊಂಡಂಥ ಗೆಳೆಯರ ಸಮರ್ಥ ಪಡೆಯೇ ಆಗಿತ್ತು. ಅಂಥವರಲ್ಲಿ ನಾನೂ ಒಬ್ಬನಾಗಿದ್ದೆ ಎಂದು ಖಚಿತವಾಗಿ ಹೇಳಬಲ್ಲೆ.

ನಾನಿನ್ನೂ ಡಿಗ್ರಿ (ಫಿಜಿಕ್ಸ್, ಎಲೆಕ್ಟ್ರಾನಿಕ್ಸ್) ಓದುತ್ತಿದ್ದೆ. ನಮ್ಮದೊಂದು ಮ್ಯಾಡ್ಸ್ (ಮ್ಯಾಥ್ಯೂ, ಆನಂದ್, ದಿಲ್, ಶ್ರೀಧರ್... ಈ ನಾಲ್ಕೂ ಹೆಸರಿನ ಮೊದಲ ಲೆಟರ್ ಸೇರಿ ಆಗಿದ್ದೇ ಮ್ಯಾಡ್ಸ್) ಗ್ಯಾಂಗ್ ಇತ್ತು. ಚರ್ಚೆ, ವಿಚಾರಸಂಕಿರಣ, ರೆಡಿಯೊ ಕಾರ್ಯಕ್ರಮ, ಬೀದಿನಾಟಕ, ಸ್ಟೇಜ್ ಶೋ... ಹೀಗೆಲ್ಲ ದೊಡ್ಡ ಹರವು ನಮ್ಮದು.

ಪ್ರತಿ ಶನಿವಾರ ಸಂಜೆ ನಾವೊಂದು ಗ್ರಾಮಕ್ಕೆ ತೆರಳುತ್ತಿದ್ದೆವು. ಬಸ್ ನಲ್ಲಿ ಹೋಗುವಾಗ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಮಗೆ ತೋಚಿದ ವಿಚಾರಗಳನ್ನು ಭಾಷಣ, ಚರ್ಚೆ ಮಾಡುತ್ತ ಸಾಗುತ್ತಿದ್ದೆವು. ಪ್ರಯಾಣಿಕರು ತುಂಬ ಕುತೂಹಲದಿಂದ ನಮ್ಮ ವಿಚಾರಗಳನ್ನು ಆಲಿಸುತ್ತಿದ್ದರು. ರಿಯಾಕ್ಟ್ ಮಾಡುತ್ತಿದ್ದರು.

ಸಂಜೆ ಹಳ್ಳಿಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಬೀದಿನಾಟಕದ ಶೋ ನೀಡುತ್ತಿದ್ದೆವು. ಬಡತನ, ಅನಕ್ಷರತೆ, ಲಂಚ, ಭ್ರಷ್ಟಾಚಾರ, ವಿಜ್ಞಾನ, ಮೂಢನಂಬಿಕೆ, ಕೋಮುವಾದ, ಏಯ್ಡ್ಸ್... ಹೀಗೆ ಎಲ್ಲದರ ಬಗ್ಗೆ ನಮ್ಮದೇ ಚಿಂತನೆಗಳನ್ನು ಹೇಳುವ ಬೀದಿನಾಟಕಗಳು, ವಿಚಾರಸಂಕಿರಣಗಳು... ಅದೆಷ್ಟು ಮಾಡಿದೆವೋ...

ಶ್ರೀಧರ್ ಎನ್ನುವ ಗೆಳೆಯ ಪ್ರತಿ ಭಾನುವಾರ ದಿ ಹಿಂದೂ ಪೇಪರ್ ಖರೀದಿಸುತ್ತಿದ್ದ. ಅದನ್ನು ಕೂತು ಎಲ್ಲರೂ ಪೇಜ್ ಹಂಚಿಕೊಂಡು ಓದುತ್ತಿದ್ದೆವು. ಸುಮಾರು ಹೆಚ್ಚೂ ಕಮ್ಮಿ ನಲವತ್ತು ಪುಟದಷ್ಟು ಬರುತ್ತಿದ್ದ ಆ ಪೇಪರ್ ಮುಗಿಯುವತನಕ ನಾವು ಆಜಾದ್ ಉಪವನ ಬಿಟ್ಟು ಕದಲುತ್ತಿರಲಿಲ್ಲ. ಆನಂದ ಆಗಲೇ ಟೈಂಸ್, ರೀಡರ್ಸ್ ಡೈಜೆಸ್ಟ್ ಚಂದಾದಾರನಾಗಿದ್ದ. ಆಗಾಗ ಫ್ರಂಟ್ ಲೈನ್.... ಏನೇನೋ ಮ್ಯಾಗಜೀನ್, ಏನೆಲ್ಲ ಹೊಸ ಪುಸ್ತಕಗಳನ್ನು ತರುತ್ತಿದ್ದ. ಅವನ್ನೆಲ್ಲ ಓದ್ತಾ ಇದ್ದೆವು. ಅಲ್ಲಿನ ಎಷ್ಟೊ ವಿಚಾರಗಳು ನಮ್ಮ ವಿಚಾರಕ್ಕೆ ಹೋಲುತ್ತವಲ್ಲಾ... ಎನ್ನುವ ಅಚ್ಚರಿಯೂ ನಮ್ಮೊಳಗಿತ್ತು.

ಎನ್ ಎಸ್ ಎಸ್ ನಮ್ಮ ಇಂಥ ವಿಚಾರಗಳಿಗೆ ಬಹುಮುಖ್ಯವಾದ ಪ್ಲ್ಯಾಟ್ ಫಾರಂ ಆಗಿತ್ತು ಎನ್ನುವುದು ನನ್ನ ಭಾವನೆ. ಸುಮಾರು ನೂರು ವಿದ್ಯಾರ್ಥಿಗಳ ಬ್ಯಾಚಿಗೆ ನಾನು ಲೀಡರ್. ಅದಕ್ಕಾಗಿ ನಡೆದ ಚುನಾವಣೆಯಲ್ಲಿ ಭಾರಿ ಬಹುಮತದಿಂದ ಆಯ್ಕೆಯಾಗಿದ್ದೆ. ನಾವು ಆಗ ಮಾಡಿದ ಅದೆಷ್ಟು ಕೆಲಸಗಳು ಜನಮೆಚ್ಚುಗೆ ಗಳಿಸಿಕೊಂಡಿದ್ದವು.

ಪ್ರತಿವಾರದ ಕ್ಯಾಂಪಸ್ ಚಟುವಟಿಕೆಗಳು ಮತ್ತು ಎನ್ ಎಸ್ ಎಸ್ ಬಗ್ಗೆ ನಾನೇ ಸ್ವತಃ ವರದಿ ತಯಾರಿಸಿ, ಅದಕ್ಕೆ ಫೋಟೊ (ಬ್ಲಾಕ್ ಅಂಡ್ ವೈಟ್) ಹೊಂದಿಸಿಕೊಂಡು ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ವಿಶ್ವವಾಣಿ, ಕನ್ನಡಮ್ಮ, ನವನಾಡು, ವಿಶಾಲ ಕರ್ನಾಟಕ, ಹಿಂದೂ, ಇಂಡಿಯನ್ ಎಕ್ಸ್ ಪ್ರೆಸ್... ಪೇಪರುಗಳ ಹುಬ್ಬಳ್ಳಿ ಕಚೇರಿಗಳಿಗೆ ಕೊಟ್ಟು ಬರ್ತಿದ್ದೆ. ಸೋಮವಾರ ಅಷ್ಟೆಲ್ಲ ಪೇಪರುಗಳನ್ನು ಖರೀದಿಸಿ ವರದಿಗಳನ್ನು ಕತ್ತರಿಸಿ ಒಂದು ಡ್ರಾಯಿಂಗ್ ಶೀಟ್ ಮೇಲೆ ನೀಟಾಗಿ ಅಂಟಿಸಿ ಕಾಲೇಜಿನ ನೋಟಿಸ್ ಬೊರ್ಡಿಗೆ ಹಚ್ಚುತ್ತಿದ್ದೆ. ಬೆಳಿಗ್ಗೆ ಕ್ಯಾಂಪಸ್ ಹುಡುಗ, ಹುಡುಗಿಯರೆಲ್ಲ ಮುಗಿಬಿದ್ದು ನೋಡುತ್ತಿದ್ದರು. ಪ್ರತಿ ಸೋಮವಾರ ಎಲ್ಲರೂ ನೋಟಿಸ್ ಬೋರ್ಡ್ ನಿರೀಕ್ಷಿಸುವ ಹಾಗೆ ಮಾಡುತ್ತಿದ್ದುದು ನನಗೆ ತುಂಬ ಖುಷಿ ಕೊಡುತ್ತಿತ್ತು.

ವಾರ್ಷಿಕ ಎನ್ ಎಸ್ ಎಸ್ ವಿಶೇಷ ಶಿಬಿರಕ್ಕೆಂದು (ಒಂದು ತಿಂಗಳಿಗೂ ಹೆಚ್ಚು ಅವಧಿಯದ್ದು) ಹಳ್ಳಿಗೆ ತೆರಳುತ್ತಿದ್ದೆವು. ಆ ಹಳ್ಳಿಯಲ್ಲಿ ನಮ್ಮ ಇಡೀ ಕಾಲೇಜು ತಂಡ ಫೇಮಸ್ ಆಗಿತ್ತು. ನಾನಲ್ಲಿ ಹಲವಾರು ಬೀದಿ ನಾಟಕಗಳನ್ನು ರಚಿಸಿ, ನಿರ್ದೇಶಿಸಿದೆ. ನೂರಾರು ಕ್ರಾಂತಿ ಹಾಡುಗಳನ್ನು ಹಾಡಿದೆ. ಸಿದ್ದಲಿಂಗಯ್ಯನವರ 'ಯಾರಿಗೆ ಬಂತು ಎಲ್ಲಿಗೆ ಬಂತು 47ರ ಸ್ವಾತಂತ್ರ್ಯ...' ಹಾಡು ಹೇಳುವಾಗಲಂತೂ ಮೈಕೂದಲು ನೆಟ್ಟಗಾಗುತ್ತಿದ್ದ ಉತ್ಸಾಹ, ಫೋರ್ಸ್ ಪುಟಿದೇಳುತ್ತಿದ್ದ ವಯಸ್ಸು ಅದು. ಅತ್ಯಂತ ಕಡಿಮೆ ಅವಧಿಯಲ್ಲೇ ಇಡೀ ಊರಿನ ಒಂದೊಂದು ಮನೆಗೂ ನಾವು ಅವರ ಮನೆಯ ಮಕ್ಕಳಂತೆ ಆಗಿಬಿಟ್ಟಿದ್ದೆವು.

ವಿಶೇಷ ಶಿಬಿರಕ್ಕೆ ಹಲವು ಗಣ್ಯರು ಬರುತ್ತಿದ್ದರು. ಕಾಲೇಜು ಪ್ರಿನ್ಸಿಪಾಲ್ ದೇವಧರ್ ತಪ್ಪದೇ ಬರುತ್ತಿದ್ದರು. ಪ್ರೊ ವಿಕ್ಟರ್ ನಿತ್ಯ ಬೈಬಲ್ ಓದಿ ಹೇಳುತ್ತಿದ್ದರು. ನಮಗೆಲ್ಲ ಪ್ರಾರ್ಥನೆ ಮಾಡಿಸುತ್ತಿದ್ದರು. ನಮಗ್ಯಾರಿಗೂ ಅದೊಂದು ಮುಜುಗರ ತರಲೇ ಇಲ್ಲ, ಬದಲಾಗಿ ಬೈಬಲ್ ದರ್ಶನವಾಯ್ತಲ್ಲ ಎನ್ನುವ ಭಾವನೆ ಬೆಳೆದಿತ್ತು. ಬಂದ ಗಣ್ಯರಿಗೆಲ್ಲ ಪ್ರಿನ್ಸಿಪಾಲ್ ನನ್ನನ್ನು ವಿಶೇಷವಾಗಿ ಪರಿಚಯಿಸಿ ನಮ್ಮ ಕಾಲೇಜಿನ ಹೆಮ್ಮೆಯ ಲೀಡರ್ ಎಂದು ಬೆನ್ನು ತಟ್ಟಿದ್ದನ್ನು ಮತ್ತು ಕಾಲೇಜಿನ ಸಾವನೀರ್ ನಲ್ಲಿ ಪ್ರಿನ್ಸಿಪಾಲ್ ಬರೆವ ಕಾಲೇಜಿನ ವಾರ್ಷಿಕ ವರದಿಯಲ್ಲಿ ನನ್ನ ಹೆಸರನ್ನೂ ಪ್ರಸ್ತಾಪ ಮಾಡಿದ್ದು ನನ್ನಲ್ಲಿ ಸಾರ್ಥಕ ಭಾವ ಮೂಡಿಸಿತ್ತು. ಅದನ್ನು ನಾನೆಂದೂ ಮರೆಯಲಾರೆ ( ಇಂಥದೇ ಅಭಿಮಾನ ನಾನು ಎಂಎಸ್ಸಿ ಓದುತ್ತಿದ್ದಾಗ ವಿಭಾಗದ ವಾರ್ಷಿಕ ವರದಿಯಲ್ಲಿ ನನಗೆ ಒಲಿದಿತ್ತು). ಶಿಬಿರ ಮುಗಿದಾಗ ಸಮಾರೋಪ ಸಮಾರಂಭದ ನಂತರ ಮಂಡಿಹಾಳ ಊರ ಜನರೆಲ್ಲ ಸೇರಿ ನನಗೊಂದು ಸನ್ಮಾನ ಮಾಡಿದರು. ದೊಡ್ಡ ಹಾರ ಹಾಕಿ, ಕೈಗಷ್ಟು ಹೋಗುಚ್ಛ ನೀಡಿ, ಸಣ್ಣ ಕಾಣಿಕೆಯೊಂದನ್ನು ಕೊಟ್ಟು ಕೆಲವರು ಬೆನ್ನು ತಟ್ಟಿ, ಹಣೆಗೆ ಮುತ್ತನ್ನಿಟ್ಟು ತೋರಿದ ಅಕ್ಕರೆ, ಕೆಲಸ ಗುರುತಿಸಿ ನೀಡಿದ ಮನ್ನಣೆ ನನ್ನ ನೆನಪಿನಲ್ಲಿ ಸದಾ ಹಸಿರು. ಆ ಕ್ಷಣಗಳನ್ನು ನಾನೆಂದೂ ಮರೆಯಲಾರೆ.

'ಶಿಬಿರವಾಣಿ'

ಶಿಬಿರಕ್ಕೆ ಬಂದವರ ಭಾಷಣ, ವಿಚಾರ ಕೇಳಿಸಿಕೊಂಡು ನಾನೇ ವರದಿ ಬರೆಯುತ್ತಿದ್ದೆ. ಈ ಸಲ ಅವನ್ನು ಪತ್ರಿಕೆಗೆ ಕೊಡುವುದರ ಜತೆಗೆ ನಾನೇ ಒಂದು ಪುಟ್ಟ ಪತ್ರಿಕೆ ರೂಪಿಸಿ ಅದರಲ್ಲಿ ಪ್ರಕಟಿಸುವುದನ್ನು ಪ್ರಾರಂಭಿಸಿದೆ. ಅದೆಂಥ ಪತ್ರಿಕೆ ಗೊತ್ತಾ... ಒಂದಷ್ಟು ಡ್ರಾಯಿಂಗ್ ಶೀಟುಗಳು, ಅದರ ಮೇಲೆ ನೀಟಾಗಿ ಇಂಡಿಯನ್ ಇಂಕ್ ನಿಂದ ವರದಿ ಬರೆಯುತ್ತಿದ್ದೆ. ನನ್ನಣ್ಣ ತಂದುಕೊಟ್ಟ ಒಂದು ಪುಟ್ಟ ಕ್ಯಾಮೆರಾ ಇತ್ತು. ಅದರಿಂದ ತೆಗೆದ ಫೊಟೊಗಳನ್ನು ಧಾರವಾಡಕ್ಕೆ ತೆರಳಿ, ಡೆವಲಪ್ ಮಾಡಿಸಿ, ಪ್ರಿಂಟ್ ಹಾಕಿಸಿಕೊಂಡು ಬರುತ್ತಿದ್ದೆ. ಅವೇ ಫೊಟೊಗಳನ್ನು ಕ್ಯಾಪ್ಷನ್ ಸಮೇತ ವರದಿಗಳ ನಡುವೆ ಅಂಟಿಸುತ್ತಿದ್ದೆ. ಜತೆಗೆ ಕಿರುಕಥೆ, ಕವಿತೆ, ಚುಟುಕು, ಜನರಲ್ ನಾಲೆಡ್ಜ್, ಕಾರ್ಟೂನ್ ಇತ್ಯಾದಿ ವಿಶೇಷವೂ ಪತ್ರಿಕೆಯಲ್ಲಿ ಇರುತ್ತಿತ್ತು. ಶಿಬಿರಾರ್ಥಿಗಳು ಬೆಳಿಗ್ಗೆ ಕಣ್ಣೊರೆಸಿಕೊಳ್ಳುವಷ್ಟೊತ್ತಿಗೆ ನೋಟಿಸ್ ಬೊರ್ಡ್ ಮೇಲೆ ಅದು ಪ್ರಕಾಶನಗೊಳ್ಳುತ್ತಿತ್ತು. ಆ ಪತ್ರಿಕೆ ಹೆಸರು 'ಶಿಬಿರವಾಣಿ' . ಲೋಗೊ ಶಾಂತಿ ಸಂದೇಶ ಸಾರುವ ಪಾರಿವಾಳ ಮತ್ತು ಎಲ್ಲ ಧರ್ಮಗಳ ಸಿಂಬಲ್ ಪ್ರತಿನಿಧಿಸುವ ಒಂದು ಚಿತ್ರ. ಹೀಗೆ ನನ್ನ ಕಲ್ಪನೆಯ ಜರ್ನಲಿಸಂ ಆಗಲೇ ಗರಿಗೆದರಿತ್ತು.

ವಿದ್ಯಾ ಸಮಾಚಾರ

ನನ್ನ ಪುಟಾಣಿ ಜರ್ನಲಿಸಂ ಕನಸಿಗೆ ಕವಿವಿ ದೊಡ್ಡ ಹರವು ಕೊಟ್ಟೀತೆಂಬ ನಿರೀಕ್ಷೆಯಿಂದಲೇ ಎಂಎ ಮಾಸ್ ಕಮ್ಯುನಿಕೇಷನ್ ಅಂಡ್ ಜರ್ನಲಿಸಂ ಸೇರಿಕೊಂಡೆ. ಅಲ್ಲಿನ ಸಿಲಬಸ್ ನನಗೇನು ಅಂಥ ಭಾರಿ ಅನಿಸಲೇ ಇಲ್ಲ. ಮಾಸ್ ಮೀಡಿಯಾ, ಕಮ್ಯುನಿಕೇಷನ್ ವಿಷಯದ ಸಾರ ನನಗಂತೂ ಹೊಸದು ಅನ್ನಿಸಲೇ ಇಲ್ಲ. ಯಾಕೆಂದರೆ ಪ್ರ್ಯಾಕ್ಟಿಕಲ್ ರೂಪವನ್ನು ನಾನಾಗಲೇ ಅನುಭವಿಸಿಯಾಗಿತ್ತು. ಆದರೆ, ಥಿಯರಿಗೆ ಅದರದೇ ಆದ ಸ್ವರೂಪ ಇದ್ದೇ ಇರುತ್ತೆ. ಅದನ್ನು ತುಂಬ ಪ್ರೀತಿಯಿಂದಲೇ ಓದುತ್ತಿದ್ದೆ. ಕಮ್ಯುನಿಕೇಷನ್ ಥಿಯರಿ, ಜರ್ನಲಿಸಂ, ಕಮ್ಯುನಿಕೇಷನ್ ಮಾಡೆಲ್ಸ್, ಜಾಹಿರಾತು ತುಂಬ ಮೆಚ್ಚಿನ ವಿಷಯಗಳಾಗಿದ್ದು ಸಹಜವೇ ಆಗಿತ್ತು ನನ್ನ ಮಟ್ಟಿಗೆ. ಆದರೆ ವಿಭಾಗದ ಮುಖ್ಯಸ್ಥರಿಗೆ ಇಂಗ್ಲಿಷ್ ಮಾತನಾಡುವ ಮತ್ತು ಬರೆಯುವವರ ಬಗ್ಗೆ ಹೆಚ್ಚು ಒಲವಿತ್ತು. ನಾವೂ ಇಂಗ್ಲಿಷ್ ನಲ್ಲೇ ಪರೀಕ್ಷೆಗಳನ್ನು ಬರೆದವರು ಆ ಮಾತು ಬೇರೆ. ಇಂಗ್ಲಿಷ್ ನಲ್ಲಿ ಅವರು ಸಾಧಾರಣ ವಿಚಾರ ಹೇಳಿದರೂ ಅದು ಎಚ್ ಒ ಡಿ ದೃಷ್ಟಿಯಲ್ಲಿ ಗ್ರೇಟ್ ಅನಿಸುತ್ತಿತ್ತು. ಕನ್ನಡದಲ್ಲಿ ಸ್ವಲ್ಪ ಅರ್ಥಪೂರ್ಣ ಮಾತುಗಳನ್ನಾಡಿದರೆ ಹ್ಞೂ ಹ್ಞೂ ಪರವಾಗಿಲ್ಲ ಎನ್ನುವ ಎಂಥದೋ ಅಸಡ್ಡೆ ಇತ್ತು. ಅದು ಅವರ ಸೂಪಿರಿಯಾರಿಟಿ ಕಾಂಪ್ಲೆಕ್ಸೊ, ಮಿತಿಯೋ ನನಗಂತೂ ಕನಫ್ಯೂಸ್ ಆಗ್ತಿತ್ತು.

ವಿದ್ಯಾ ಸಮಾಚಾರ ದೊಡ್ಡ ತಲೆನೋವಿನ ಸಂಗತಿ ಎಂದು ಬಹುಜನ ಭಾವಿಸಿದ್ದರು. ನನಗೆ ಅದು ಅಂಥ ಮಹಾ ಅನ್ನಿಸಿರಲೇ ಇಲ್ಲ. ಆದರೆ, ಅದರ ಮುದ್ರಣದ ಕೆಲಸ ಮಾತ್ರ ತಲೆನೋವಿನದ್ದಾಗಿತ್ತು. ಅದು ವಿವಿ ವ್ಯವಸ್ಥೆ. ಮೀಡಿಯಾ ಸ್ಟಡೀಸ್ ದೃಷ್ಟಿಯಿಂದ ಅತ್ಯಂತ ಕೆಟ್ಟ ವ್ಯವಸ್ಥೆಯಾಗಿತ್ತು. ಆ ತಾಂತ್ರಿಕ ಕಾರಣಗಳಿಗಾಗಿ ನಾವೆಲ್ಲ ಎಚ್ ಒ ಡಿ ಕಡೆ ಉಗಿಸಿಕೊಳ್ಳಬೇಕಾಗುತ್ತಿತ್ತು. ಹಾಗೆ ನೋಡಿದರೆ ಇಂಥ ಕೆಟ್ಟ ವ್ಯವಸ್ಥೆ ಇಟ್ಟುಕೊಂಡಿದ್ದಕ್ಕೆ ನಾವೇ ಉಗೀಬೇಕಾಗಿತ್ತು. ಆ ವಿಷಯ ಬೇರೆ.

ವಿದ್ಯಾಸಮಾಚಾರದಲ್ಲಿ ಹೊಸ ಕಾಲಂ ಗಳ ಸಂಪ್ರದಾಯ ನಮ್ಮಿಂದಲೇ ಶುರುವಾಗಿತ್ತು. ರಂಗಭೂಮಿ, ಕಲೆ, ಸಾಹಿತ್ಯ... ಎಲ್ಲದರ ಬಗ್ಗೆ ವಿಮರ್ಶೆ ಅದರಲ್ಲಿ ಪ್ರಕಟಿಸುತ್ತಿದ್ದೆವು. ಕೆಲವು ಲೊಗೊ ನಾನೇ ಮಾಡಿದ್ದೆ. ನಮ್ಮ ಪಾಳಿ ಬಂದಾಗೆಲ್ಲ ಅವನ್ನು ಬಳಸಿಕೊಂಡಿದ್ದಿದೆ. ನಾನಾಗಲೇ ಧಾರವಾಡದ ರಂಗಭೂಮಿಯ ವಿಮರ್ಶೆಗಳನ್ನು ಬರೆಯುತ್ತಿದ್ದೆ. ಸಂಯುಕ್ತ ಕರ್ನಾಟಕ, ಕನ್ನಡಮ್ಮ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಿದ್ದುದರಿಂದ ಫೇಮಸ್ ಆಗಿದ್ದೆ. ಹಿಂದೂಸ್ತಾನಿ ಸಂಗೀತದ ಭಯಂಕರ ಹುಚ್ಚಿನಿಂದ ಆಗ ನಡೆಯುತ್ತಿದ್ದ ರೆಹಮತ್ ಸಂಗೀತ ಸಮಾರೋಹ, ರಾಜಗುರು, ಸವಾಯಿ ಗಂಧರ್ವ, ಕುಂದುಗೋಳ ಸಂಗೀತ ಸಮಾರೋಹಗಳಿಗೆಲ್ಲ ಅಹೋರಾತ್ರಿ ರಂಗಗೆಳೆಯರ ಜತೆ ಹಾಜರಾಗುತ್ತಿದ್ದೆ. ಕೆಲವು ಸಂಗೀತ ಸಮಾರಂಭಗಳ ರಿವ್ಯೂ ಕೂಡ ಬರೆದಿದ್ದೇನೆ.

ರಂಗದೀಪ್ತಿ ಪ್ರಶಸ್ತಿ ಮತ್ತು ನ್ಯಾಷನಲ್ ಲೇವಲ್ ಯೂತ್ ಫೆಸ್ಟಿವಲ್ ಗೆ ನನ್ನ ನಾಟಕ ತೋಬತೇಕ್ ಸಿಂಗ್

ರಂಗದೀಪ್ತಿ ಪ್ರಶಸ್ತಿ ನಮ್ಮ ವಿವಿಯ ಬಹುಪ್ರತಿಷ್ಠಿತ ಪ್ರಶಸ್ತಿ ಆಗಿಹೋಗಿತ್ತು. ಈ ಹಿಂದಿನ ಕೆಲ ಸ್ಪರ್ಧೆಯಲ್ಲಿ ಅದು ಮಿಸ್ ಆಗಿತ್ತು. ಒಂದು ಸಲ ಕೂದಲೆಳೆಯಲ್ಲಿ ಕಳಕೊಂಡಿದ್ದೆ. ಕೆಲ ಸಾಂಸ್ಕೃತಿಕ ರಾಜಕಾರಣ ನನ್ನ ನಾಟಕಕ್ಕೆ ಆ ಪ್ರಶಸ್ತಿಯನ್ನು ತಪ್ಪಿಸಿ ರನರ್ ಅಪ್ ಪ್ರಶಸ್ತಿಗೆ ಸೀಮಿತಗೊಳಿಸಿತ್ತು. ಮುಂದಿನ ವರ್ಷದಲ್ಲೇ ತೋಬತೇಕ್ ಸಿಂಗ್ (ಸಾದತ್ ಹಸನ್ ಮಾಂಟೊ ಅವರ ಸಣ್ಣ ಕಥೆ ಆಧರಿಸಿ ನಾನೇ ಸ್ಕ್ರಿಪ್ಟ್ ಬರೆದು, ನನ್ನದೇ ಅಂದಾಜಿನ ಸಂಗೀತ ಸಂಯೋಜಿಸಿ ಗೀತಾ ಮೆಂಡೀಗೇರಿ, ನೀತಾ ಕುಲಕರ್ಣಿ ಅವರ ಆಲಾಪಗಳನ್ನು ಬಳಸಿಕೊಂಡು ನಾಟಕವಾಗಿಸಿದ್ದೆ.) ನಾಟಕ ರಂಗದೀಪ್ತಿಯನ್ನು ಎತ್ತಿಹಿಡಿಯಿತು. ಹತ್ತಿರ ಸಾವಿರ ವಿದ್ಯಾರ್ಥಿಗಳು ಗಾಂಧೀಭವನದಂಥ ಕೆಟ್ಟ ಅಡಿಟೋರಿಯಂನಲ್ಲಿ ಪಿನ್ ಡ್ರಾಪ್ ಸೈಲೆನ್ಸ್ ಮೋಡ್ ನಲ್ಲಿ ಕುಳಿತು ವೀಕ್ಷಿಸಿದ್ದರು. ಅವರೆಲ್ಲ ಕಣ್ಣಾಲಿಗಳನ್ನು ಹಸಿಗೊಳಿಸಿಕೊಂಡಿದ್ದು ನನ್ನ ದಿಲ್ ನೊಳಕ್ಕೆ ನೆನಪಾಗಿ ಹಾಗೇ ಉಳಿದಿದೆ. ಆ ಕೊನೆಯ ಸೀನ್ ಗೆ ಬಿದ್ದ ಚಪ್ಪಾಳೆಗಳು, ಹೆಣ್ಣು, ಗಂಡು ಭೇದವಿಲ್ಲದೇ ತೊಟ್ಟಿಕ್ಕಿದ ಆ ಕಣ್ ಹನಿಗಳು ನನಗೆ ಈಗಲೂ ಅದೇ ಫ್ರೇಮನಲ್ಲಿ ಭದ್ರವಾಗಿ ಚಿತ್ತಭಿತ್ತಿಯಲ್ಲಿದೆ. ಸೌತ್ ಇಂಡಿಯಾ ಕಾಂಪಿಟಿಷನ್ ನಲ್ಲಿ ಎನ್ ಎಸ್ ಡಿ, ನೀನಾಸಂ ಹುಡುಗರೆಲ್ಲ ಮಾಡಿಸಿದ ನಾಟಕಗಳನ್ನು ಬದಿಗೊತ್ತಿ ನ್ಯಾಷನಲ್ ಲೇವಲ್ ಗೆ ಆಯ್ಕೆಯಾದ ನನ್ನ 'ತೋಬತೇಕ್ ಸಿಂಗ್' ಗೆ ಬಹುತೇಕ ವಿವಿ ಹುಡುಗರು, ಅವರ ತಂಡಗಳ ಮ್ಯಾನೇಜರ್ ಗಳೇ ಫ್ಯಾನ್ ಆಗಿದ್ದರು. ಮತ್ತು ಕಣ್ಣು ಹಸಿ ಮಾಡಿಕೊಂಡು ಬಂದು ನಮ್ಮೆಲ್ಲರ ಪರಿಚಯ ಮಾಡಿಕೊಂಡ ಅದೆಷ್ಟು ಹುಡುಗಿಯರು, ಮ್ಯಾಡಂಗಳನ್ನು ನೆನಪಿಸಿಕೊಳ್ಳಲಿ...! ಓಹ್ ಗಾಡ್. ಅದೊಂದು ಅವಿಸ್ಮರಣೀಯ ಕ್ಷಣ. ನಮ್ಮ ಹುಡುಗರೆಲ್ಲ ನನ್ನ ಎತ್ತಿಕೊಂಡು ಕುಣಿದಾಡಿದರು. ಮುತ್ತುಗಳ ಮಳೆಗರೆದರು. ನಮ್ಮ ಕ್ಯಾಂಪಸ್ ನಲ್ಲಿ ದೊಡ್ಡ ಮೆರವಣಿಗೆ. ಇಷ್ಟಲಿಂಗ ಸಿರ್ಸಿ, ಇಮ್ತಿಯಾಜ್, ಗರುಡ, ಸಂಜೂ ಮಾಲಗತ್ತಿ, ನೀಲಗುಂದ, ಹಿರೇಮಠ, ದೀಪ್ತಿ, ಸುಧಾಕರ್, ಪ್ರೀತಿ, ಜೋತ್ಸ್ನಾ, ಬಸಂತಿ ಇವರೆಲ್ಲ ಸಂಭ್ರಮಿಸಿದ ರೀತಿ ಅಬ್ಬಾ... ಆಸ್ಕರ್ ಪ್ರಶಸ್ತಿ ಸಿಕ್ಕಷ್ಟು ಸಂಭ್ರಮಪಟ್ಟಿದ್ದರು. ನ್ಯಾಷನಲ್ ಲೇವಲ್ ತಯಾರಿ ನಡೆಯುತ್ತಿದ್ದ ಸಂದರ್ಭ ಕುಲಪತಿ ಮತ್ತು ರೆಜಿಸ್ಟ್ರಾರ್ ಪೂರ್ವಭಾವಿ ಪ್ರದರ್ಶನದ ಆಸಕ್ತಿ ತೋರಿದರು. ತೋಬತೇಕ್ ಸಿಂಗ್ ಅವರೆಲ್ಲರ ಕಣ್ಣಾಲಿಗಳ ಹಸಿಗೊಳಿಸಿಬಿಟ್ಟ. ನಾವಿದ್ದ  ಎರಡು ವರ್ಷದಲ್ಲಿ ಒಮ್ಮೆ ಮತ್ತು ಆ ನಂತರದ ವರ್ಷ ನಾನೇ ನಾಟಕ ನಿರ್ದೇಶಿಸಿದ್ದೆ. ಆ ಮೂರೂ ವರ್ಷ ನಮ್ಮ ವಿಭಾಗವೇ ಜನರಲ್ ಚಾಂಪಿಯನ್! (ನಾನು ಎಂಎಸ್ಸಿ ಓದುವಾಗಲೂ ಜನರಲ್ ಚಾಂಪಿಯನ್ ಆಗಿದ್ದೆವು.)

ಮೊದಲ ವರ್ಷ ಜನರಲ್ ಚಾಂಪಿಯನ್ ಆಗಿದ್ದಾಗ ಬೃಹತ್ ಗಾತ್ರದ ಪಾರಿತೋಷಕ ಎತ್ತಿಕೊಂಡು ವಿಭಾಗಕ್ಕೆ ಹೋದೆವು. ನಾನು ಮೊದಲೇ ಹೇಳಿದ್ದೆ ಎಚ್ ಒ ಡಿ ಗೆ ಮಾಧ್ಯಮ ಅಂದರೆ ವರದಿ, ಲೇಖನ, ಅದೇ ಭಾಷೆ, ಕಾಗುಣಿತ ಅಷ್ಟೇ ಕಣೋ... ಇದೆಲ್ಲ ಅವರ ತಲೆಗೆ ಹೋಗಲ್ಲ ಎಂದೆ ನಮ್ಮ ಹುಡುಗರಿಗೆ. ಕೇಳಲಿಲ್ಲ. ಸಯೀದ್ ಸನದಿ, ನೌಶಾದ್, ಶಿವಕುಮಾರ್... ಎಲ್ಲರೂ ಚೇಂಬರ್ ಹೊಕ್ಕರು. ಎಚ್ ಒ ಡಿ ಏನು ಹೇಳಿದರು ಗೊತ್ತಾ... ಆಯ್ತರಯ್ಯಾ ಟ್ರೋಫಿ ಅಲ್ಲೇ ಎಲ್ಲಾದರೂ ಜಾಗ ಸಿಕ್ಕರೆ ಇಡಿ, ವಿದ್ಯಾ ಸಮಾಚಾರ ಎಲ್ಲಿಗೆ ಬಂತ್ರಯ್ಯ ಎಂದೆಲ್ಲ ಉಗಿದು ಕಳುಹಿಸಿದ್ರು. ನಾನು ಹೊರಗೆ ಮುಸಿ ಮುಸಿ ನಗುತ್ತಾ ನಿಂತಿದ್ದೆ ಇದನ್ನೆಲ್ಲ ಮೊದಲೇ ಗ್ರಹಿಸಿದ್ದೆ...

ತೋಬತೇಕ ಸಿಂಗ್ ನಾಟಕ ನ್ಯಾಷನಲ್ ಲೇವಲ್ಗೆ ಸೆಲೆಕ್ಟ್ ಆದಾಗಲೇ ಎಚ್ ಒ ಡಿ ಗೆ ಮಾಧ್ಯಮದ ವಿಸ್ತಾರದಲ್ಲಿ ಪತ್ರಿಕೋದ್ಯಮ ಒಂದು ಪ್ರಕಾರವಷ್ಟೇ ಮತ್ತು ಅದಷ್ಟೇ ಮಾಧ್ಯಮ ಹರವು ಅಲ್ಲ ಅಂತ ಗೊತ್ತಾಗಿರಬೇಕು. ನಮ್ಮ ಹುಡುಗರಿಗೆ ಟ್ರೀಟ್ ಕೊಟ್ರು. ಹೆಮ್ಮೆಯಿಂದ ಹೇಳಿಕೊಂಡರು.

ನ್ಯೂಸ್ ಪೇಪರ್, ಮ್ಯಾಗಜೀನ್ ಆಗಲಿ ಅಥವಾ ಸಿನಿಮಾ, ಥಿಯೇಟರ್ ಆಗಲಿ... ಹೇಳುವ ವಿಷಯ ಮತ್ತು ಅದನ್ನು ಮುಟ್ಟಿಸುವ ವಿಧಾನ ಮುಖ್ಯ. ಅದಕ್ಕೆ ಬೇಕಾದ ಸೆನ್ಸಿಬಿಲಿಟಿ, ಸೆನ್ಸಿಟಿವಿಟಿ, ಕ್ರಿಯೇಟಿವಿಟಿ, ಆಳವಾದ ಜ್ಞಾನ ಮುಖ್ಯ. ಭಾಷೆ, ಬೊಗಳೆ, ಸಾಹಿತ್ಯ ಮುಖ್ಯವಲ್ಲ. ಲೇಖನಗಳನ್ನು ಒಬ್ಬ ಪೋಸ್ಟ್ ಮ್ಯಾನ್, ಬೀಡಾ ಅಂಗಡಿಯವ ಕೂಡ ಬರೆಯಬಲ್ಲ. ಬರೆಯುವುದನ್ನು ಕಲಿತ, ಯೋಚಿಸುವ ತಲೆ ಇದ್ದ ಎಲ್ಲರೂ ಬರೆಯಬಲ್ಲ ಒಂದು ಬರವಣಿಗೆಯ ಪ್ರಕಾರ ಅಷ್ಟೇ. ಅಲ್ಲಿ ಭಾಷೆ, ಕಾಗುಣಿತ, ಮಣ್ಣು ಮಸಿ ಎಲ್ಲ ಮುಖ್ಯವಲ್ಲ. ಅದರ ವಿಚಾರ ಮುಖ್ಯ. ಬರವಣಿಗೆಯೇ ಜರ್ನಲಿಸಂ ಎಂದು ಯಾವ ಮುಠ್ಠಾಳ ಹೇಳಿದ್ದಾನೋ...! ಇಷ್ಟು ಸಾಮಾನ್ಯ ಜ್ಞಾನ ಇರದವರೂ ಈ ಮಾಧ್ಯಮ ದುನಿಯಾದಲ್ಲಿದ್ದಾರೆ. ಇಂದು ಪತ್ರಿಕಾಜಗತ್ತು ಅಂದರೆ ವಿಫಲ ಸಾಹಿತಿಗಳ ಪುನರ್ವಸತಿ ಕೇಂದ್ರಗಳಾಗುತ್ತಿವೆ ಅನಿಸುತ್ತಿದೆ. ಪರಿಕಲ್ಪನೆಗಳಿಗಿಂತ ಬರೆವಣಿಗೆಯ ಸಿದ್ಧಮಾದರಿ, ಪರಿಕರಗಳು, ವ್ಯಾಕರಣ ಮುಖ್ಯವಾಗುತ್ತಿದೆ. ಲಿಟರರಿ ಸೆನ್ಸಿಬಿಲಿಟಿ ಸೋಗಿನಿಂದ, ಶಬ್ದ ಸೊಕ್ಕಿನಿಂದ ಮುದ್ರಣ ಮಾಧ್ಯಮ ಹೊರಬರಬೇಕು ಎನ್ನುವುದು ನನ್ನ ಆಶಯ, ಕಾಳಜಿ.

ತೋಬತೇಕ ಸಿಂಗ್ ನಾಟಕದ ನ್ಯಾಷನಲ್ ಲೇವಲ್ ಕಾಂಪಿಟಿಷನ್ ತಯಾರಿ ಹೊತ್ತಲ್ಲೇ ನನಗೆ ಕೆಲಸ ಸಿಕ್ಕಿದ್ದು. ಅಲ್ಲಿಯತನಕ ನನ್ನ ಮನಸು ತುಂಬ ಮುಂಬೈ ಬಾಲಿವುಡ್, ನವದೆಹಲಿಯ ಎನ್ ಎಸ್ ಡಿ ಕನಸುಗಳದ್ದೇ ದರ್ಬಾರು ನಡೀತಿತ್ತು. ಬೆಂಗಳೂರಿಗೆ ಹೊರಡುವಷ್ಟು ದುಡ್ಡು ಕೂಡ ನನ್ನಲ್ಲಿರಲಿಲ್ಲ. ಮುಂಬೈ ನ್ಯಾಷನಲ್ ಯೂತ್ ಫೆಸ್ಟಿವಲ್ ಗೆ ಕೆಲವೇ ದಿನ ಬಾಕಿ ಇರುವಾಗ ನನಗೆ ಕೆಲಸ ಸಿಕ್ಕ ಬಗ್ಗೆ ಹುಡುಗರಿಗೆ ತಿಳಿದಿದ್ದು. ಅವರೆಲ್ಲ ಸೇರಿ ನನಗೊಂದು ಲಕೋಟೆ ನೀಡಿದರು. ಸರ್ ಇದನ್ನು ಬಸ್ ಹತ್ತಿದ ಮೇಲೆ ತೆಗೆದು ನೋಡಬೇಕೆಂದು ಕಂಡೀಷನ್ ಹಾಕಿದ್ದರು. ಅಂತೂ ನಾನು ಬೆಂಗಳೂರಿಗೆ ಬಸ್ ಹತ್ತಿದೆ. ನನ್ನ ಕಳುಹಿಸಲು ಇಡೀ ತಂಡವೇ ಬಂದಿತ್ತು. ಕನಿಷ್ಠ 40 ವಿದ್ಯಾರ್ಥಿಗಳು ಬಸ್ ನತ್ತ ಕೈಬೀಸಿದ್ದನ್ನು ಹೇಗೆ ಮರೆಯಲಿ... ಲಕೋಟೆ ತೆರೆದು ನೋಡಿದರೆ ನನ್ನ ಖರ್ಚಿಗೆ ಸಾಕಾಗುವಷ್ಟು ದುಡ್ಡಿತ್ತು!

ಮರೆಯಲಾಗದ ಕ್ಷಣಗಳು ಮತ್ತಷ್ಟು...

ಇಂಟರ್ನಶಿಪ್ ಮಾಡಿದ್ದು ಉದಯವಾಣಿಯಲ್ಲಿ. ಆಗ ಭಟ್ಟರೊಬ್ಬರು ಅದರ ಸಂಪಾದಕರಾಗಿದ್ದರು. ನನ್ನೊಂದಿಗೆ ಇನ್ನೂ ಇಬ್ಬರು ಜೂನಿಯರ್ಸ್ ಕೂಡ ಇಂಟರ್ನಶಿಪ್ ಗಾಗಿ ಸೇರಿಕೊಂಡಿದ್ದರು. ನಾನಾಗ ಮಾಡಿದ ಕೆಲಸ ಅಬ್ಬಾ! ಯಾವ ಸೀನಿಯರ್ ಕೂಡ ಅಷ್ಟು ಮಾಡಿರಲಿಕ್ಕಿಲ್ಲ. ವರದಿಗೆ ಸಂಬಂಧಿಸಿದಂತೆ ಜನರಲ್, ವಿಧಾನಮಂಡಲ ಕಲಾಪ, ಕ್ರೈಂ ಮತ್ತು ರಂಗಭೂಮಿ, ನೃತ್ಯ, ಯಕ್ಷಗಾನ ರಿವ್ಯೂ, ಸಿನಿಮಾ ಬಗ್ಗೆ, ಇನ್ನಿತರ ಹಲವಾರು ಲೇಖನಗಳನ್ನು, ವರದಿಗಳನ್ನು ಇಂಡಿಪೆಂಡೆಂಟ್ ಆಗೇ ಬರೆದೆ. ಪತ್ರಿಕೆ ವಿನ್ಯಾಸದಲ್ಲೂ ಗಮನಹರಿಸಿದೆ. ಎಷ್ಟರಮಟ್ಟಿಗೆ ಪ್ರಭಾವ ಬೀರಿದ್ದೆನೆಂದರೆ ಇಂಟರ್ನಶಿಪ್ ಮುಗಿದ ಮೇಲೆ ಭಟ್ಟರು ಊರಿಗೆ ಹೋಗದಂತೆ ತಾಕೀತು ಮಾಡಿದರು. ಸದ್ಯ ಕೆಲಸಕ್ಕೆ ಸೇರಿಸಿಕೊಳ್ಳುತ್ತೇನೆ. ಇಲ್ಲೇ ಇನ್ನಷ್ಟು ದಿನ ಟ್ರೈಲ್ ಬೇಸ್ ಮೇಲೆ ಕೆಲಸ ಮಾಡಿ, ನಂತರ ಖಾಯಂ ಮಾಡ್ತೀನಿ ಎಂದರು. ಕೆಲವು ಕಂತ್ರಿ ಭಟ್ಟರು ನನ್ನ ವಿರುದ್ಧ ಕತ್ತಿ ಮಸೆದರು. ಸಾಲದ್ದಕ್ಕೆ ಅಲ್ಲಿನ ಗುರಾಯಿಸುವ ಆಂಟಿ ಕೂಡ ಭಟ್ಟರ ತಲೆಗೆ ಏನನ್ನೋ ರವಾನಿಸಿದ್ದಳು ಅನಿಸುತ್ತದೆ. ಅದೇ ಟೈಮಿಗೆ ಅದಾವುದೊ ಪುಟಗೋಸಿ ಭರತನಾಟ್ಯ ಡಾನ್ಸರ್ ಒಬ್ಬಳು ತನ್ನ ಪ್ರೊಫೈಲ್ ಗಾಗಿ ನನ್ನ ಭೇಟಿ ಮಾಡಿದ್ದು ಮತ್ತು ಆಕೆಯ ಸುಂದರ ದನಿಯ ಫೋನುಗಳ ರಿಂಗಣವೇ ದೊಡ್ಡದಾಯಿತು ಆ ಸಂಪಾದಕರಿಗೆ! ಹಾಗೆ ಗಾಸಿಪ್ ಮಾಡಿದ್ದಳೇನೋ ಆ ಆಂಟೀ... ನೀನಿಷ್ಟು ಫೇಮಸ್ ಆಗಿಬಿಟ್ಟಿದಿಯಾ... ಕರಾವಳಿ ಸುಂದರಿಯರ ತಲೆ ಕೆಡಿಸುವಷ್ಟು ಫೇಮಸ್ ಫಿಗರ್ ಆಗಬಹುದು ನೀನು... ಅಂದುಕೊಂಡರೇನೋ! ಹಾ, ಹೂ... ಎಂದೆಲ್ಲ ರೇಗಿಬಿಟ್ಟರು. ನಾನಾಗಲೇ ಡಿಸೈಡ್ ಮಾಡಿಬಿಟ್ಟೆ. ಬೇರೆ ಏನಾದರೂ ಮಾಡುವಾ, ಜಾಬ್ ಮಡೋದೇ ಆದರೆ ನಾನು ಇದೇ ಬೆಂಗಳೂರಿನಲ್ಲಿ ಜಾಬ್ ಮಾಡ್ತಿನಿ. ಇದೆಲ್ಲಕ್ಕೂ ತಲೆಕೆಡಿಸಿಕೊಳ್ಳಲ್ಲ... ಆದರೆ ನನ್ನ ತಾಯಾಣೆ ಯಾವ ಅಂಥ ಚಿಲ್ಲರೆ ಕನಸುಗಳು ನನ್ನೊಳಕ್ಕಿರಲಿಲ್ಲ. ಈಗಲೂ ಅಷ್ಟೇ. ನನಗಿರೋದೊಂದೇ ಕನಸು ಈ ಬದುಕು ಸಾರ್ಥಕ ಎನಿಸುವಂಥ ಕೆಲಸ ಮಾಡಬೇಕು ಅನ್ನೋದು ಎಂದು ಹೇಳಿ ಮತ್ತೆ ದೂಸರಾ ಮಾತಾಡದೇ ಹೊರಕ್ಕೆ ಬಂದೆ. ಜೋರು ಮಳ ಸುರೀತಿತ್ತು. ಮಳೆಯಲ್ಲಿ ನಡಕೊಂಡೇ ಶಿವಾಜಿನಗರ ಬಸ್ ಸ್ಟಾಪ್ ಗೆ ಬಂದೆ. ಮತ್ತೆ ನಾನೆಂದೂ ಆ ಕಡೆ ತಲೆ ಹಾಕಲಿಲ್ಲ.

ಆದರೆ ಇಂಟರ್ನಶಿಪ್ ಮುಗಿದ ದಿನ ಕೊಟ್ಟ ಪತ್ರ ಮಾತ್ರ ಅದ್ಭುತವಾಗಿತ್ತು. ಈ ಹುಡುಗ ಆಗಲೇ ಪರಿಪೂರ್ಣ ಪತ್ರಕರ್ತ ಆಗಿದ್ದಾನೆ, ಸೊಗಸಾಗಿ ಬರೀತಾನೆ, ವಿನ್ಯಾಸವನ್ನೂ ಮಾಡ್ತಾನೆ ಎಂದೆಲ್ಲ ವಿಶೇಷವಾಗಿ ಹೊಗಳಿದ್ದರು. ಆದರೆ ಮಾರ್ಕು ಮಾತ್ರ ಹುಡುಗಿಯರಿಗಿಂತ ಕಮ್ಮಿ ಕೊಟ್ಟಿದ್ದರು!

ಒಂದು ದಿನ ವಿಭಾಗದ ಎಚ್ ಒ ಡಿ ಗೆ ಲೆಟರ್ ಕೊಟ್ಟು, ಮಾರ್ಕ್ಸ್ ಕಾರ್ಡ್ ಪಡೆದುಕೊಳ್ಳೋಣ ಅಂತ ಹೋದೆ. ಎಚ್ ಒ ಡಿ ಕೇಳಿದರು. ಏನಪ್ಪಾ ನಿನ್ನ ಹೆಸರು? ಅಪ್ಲಿಕೇಶನ್ ಬೇಕಿತ್ತಾ? ಅಂದರು. ಇಲ್ಲಾ ನಾನು ಆಗಲೇ ಇಲ್ಲೇ ಎಂಎ ಕೋರ್ಸ್ ಮುಗಿಸಿದೆ. ಮಾರ್ಕ್ಸ್ ಕಾರ್ಡ್ ಬೇಕಿತ್ತು ಅದಕ್ಕೆ ಬಂದೆ ಎಂದೆ. ಓಹ್, ಏನು ಹೆಸರು ನಿಮ್ಮದು? ಯಾವ ಬ್ಯಾಚ್? ಎಂದರು. ಸಾವಿರಾರು (ನಾವಿದ್ದದ್ದೇ 13 ಜನ ವಿದ್ಯಾರ್ಥಿಗಳು)! ವಿದ್ಯಾರ್ಥಿಗಳಲ್ಲಿ ನನ್ನನ್ನೆಲ್ಲಿ ನೆನಪಿಟ್ಟಿರಬೇಕು ಪಾಪ... ಎಂದುಕೊಂಡು ಒಂದು ಬಿಳಿ ಹಾಳೆಯ ಮೇಲೆ ನನ್ನ ಪೂರ್ತಿ ಹೆಸರು, ಬ್ಯಾಚ್ ವಿವರ, ಇಸವಿ ಎಲ್ಲ ಬರೆದು ಟೇಬಲ್ಲಿಗಿಟ್ಟೆ.

ಮೂರೇ ತಿಂಗಳಲ್ಲಿ ನನ್ನ ಕೆಲಸ ಮೆಚ್ಚಿ, ಇಡೀ ಕಚೇರಿಯ ಸಿಬ್ಬಂದಿ ಮುಂದೆ ನನ್ನ ಹೊಗಳಿ ಇದ್ದರೆ ಇರಬೇಕು ಇಂಥ ಟ್ಯಾಲೆಂಟ್ ಎಂದೆಲ್ಲ ಹೊಗಳಿ ಕೆಲಸಕ್ಕೆ ನೀನಿಲ್ಲೇ ಸೇರಿಕೋಬೇಕು ಎಂದೆಲ್ಲ ಮಾತಾಡಿ ಮತ್ತೆ ಜುಜುಬಿ ಹುಡುಗಿಯೊಬ್ಬಳ ಫೋನ್ ಕಾಲ್ ಗೆ ಗರಂ ಆಗಿ ನನ್ನ ಮೇಲೆ ರೇಗಾಡಿ ಅಷ್ಟರೊಳಗೆ ಅತಿಯಾಗಿ ಗುರುತಿಸಿದ ಈ ಸಂಪಾದಕರೆಲ್ಲಿ? ಎರಡು ವರ್ಷ ನಮಗೆ ಕಲಿಸಿ ಅದೂ ಕಮ್ಯುನಿಕೇಷನ್, ಜರ್ನಲಿಸಂ ಹೇಳಿಕೊಟ್ಟು, ಬೀಳ್ಕೊಡುವ ಸಮಾರಂಭದಲ್ಲಿ ವಿಶೇಷವಾಗಿ ನನ್ನ ಹೆಸರನ್ನೂ ಪ್ರಸ್ತಾಪಿಸಿ ಇಂಥ ಹೆಮ್ಮೆಯ ವಿದ್ಯಾರ್ಥಿಗಳು ನಮ್ಮ ವಿಭಾಗದಲ್ಲಿದ್ದುದು ಖುಷಿ ಕೊಟ್ಟಿತು ಎಂದೆಲ್ಲ ಹೇಳಿದ ಎಚ್ ಒ ಡಿ ಕಡೆಗೆ ಗುರುತೇ ಹಿಡಿಯದಷ್ಟು ನಾನು ಬದಲಾಗಿಬಿಟ್ಟಿದ್ದೆನಾ? ಎನಿಸಿತು. ಈ ಪರಿಯ ಕಮ್ಯುನಿಕೇಷನ್ ನ ದೊಡ್ಡ ಪಾಠ ನನ್ನ ಬುತ್ತಿಯೊಳಗಿಟ್ಟ ವಿಷದಂತಿದೆ.

ಇದಕ್ಕೂ ದೊಡ್ಡ ವಿಷದ ವಿಷಯವೆಂದರೆ ತಾರತಮ್ಯ!

ನನಗೆ ಗೊತ್ತಿದ್ದ ಹಾಗೆ ಒಂದೆರಡು ಬ್ಯಾಚ್ ಗಳಲ್ಲಿ ಗೋಲ್ಡ್ ಮೆಡಲ್ ನೀಡುವುದಕ್ಕೆ ಸಂಬಂಧಿಸಿದಂತೆ ಘೋರ ಅನ್ಯಾಯವೇ ನಡೆದಿದೆ ಎನ್ನುವ ಅನುಮಾನ.  ಒಬ್ಬ ವಿದ್ಯಾರ್ಥಿ  ಫೈನಲ್   ಈಯರ್ ನಲ್ಲಿ ಕ್ಯಾಂಪಸ್ ಗೆ, ಕ್ಲಾಸಿಗೆ ಬಂದಿದ್ದು  ಅಪರೂಪ. ಫೈನಲ್ ಈಯರ್ ಓದು ಆರಂಭಗೊಂಡ ಸ್ವಲ್ಪ ದಿನಗಳಲ್ಲೇ ಆತನಿಗೆ ದೂರದ ಬೆಂಗಳೂರಿನ ಪ್ರತಿಷ್ಠಿತ ಇಂಗ್ಲಿಷ್ ಪತ್ರಿಕೆಯಲ್ಲಿ ಕೆಲಸ ಸಿಕ್ಕಿತ್ತು. ಪರೀಕ್ಷೆಗೆ ಸುಲಭವಾಗೇ ಕುಳಿತ. ಆದರೆ ಒಂದೆರಡಷ್ಟೇ ಅಟೆಂಡೆನ್ಸ್ ಶಾರ್ಟ್ ಇದ್ದವರು ಅದೆಷ್ಟು ಉಗಿಸಿಕೊಂಡರು.  ಆ ಹುಡುಗನಿಗೆ ಪರೀಕ್ಷೆ  ಬರೆದದ್ದಷ್ಟೇ  ಅಲ್ಲ ಮೆಡಲ್ ಗಳು ಕೂಡ ಅವನ ಕೊರಳು ಅಲಂಕರಿಸಿದವು! ಆತನ ಹಿಂದೆ ಕ್ಲೋಸ್ ರೇಸ್ ನಲ್ಲಿದ್ದ ಮತ್ತು ಮೊದಲ ವರ್ಷದಲ್ಲೇ ಸ್ವಲ್ಪ ಮುನ್ನಡೆ ಹೊಂದಿದ್ದ ಕುರುಬರ ಹುಡುಗನಿಗೇಕೆ ಅದು ಒಲಿಯಲಿಲ್ಲ? ಆತನಿಗೆ ನ್ಯಾಯವಾಗಿ ದಕ್ಕಬೇಕಿದ್ದ ಮೆಡಲ್ ಕೆಲವೇ ಮಾರ್ಕುಗಳಲ್ಲಿ ತಪ್ಪಿತು. ಯಾವ ಘನಂದಾರಿ ಸಾಧನೆ ಮಾಡಿತು ಶಿಕ್ಷಣ ವ್ಯವಸ್ಥೆ? (ಇದೆಲ್ಲ ನನ್ನ ಅಸಮಧಾನ, ಭಾವನೆಗಳು ಅಷ್ಟೇ. ಆರೋಪವಲ್ಲ)

ನಮ್ಮ ಬ್ಯಾಚ್ ವಿಷಯದಲ್ಲೂ ಇಷ್ಟೇ ಆಗಿದ್ದು. ಅದಾವುದೋ ಕೀನ್ಯಾ ಹುಡುಗನಿಗೆ ಮೆಡಲ್. ಆತ ಕ್ಲಾಸಿಗೇ ಬರಲಿಲ್ಲ ನೆಟ್ಟಗೆ. ಆತ ವಿದ್ಯಾಸಮಾಚಾರ ಕೆಲಸವನ್ನಾಗಲಿ, ಡಿಸರ್ಟೇಷನ್ ಆಗಲಿ ಸೀರಿಯಸ್ ಆಗಿ ಮಾಡಿದನೋ ಅಥವಾ ಯಾರದೋ ಕೃಪೆಯಿಂದ ಅವನ್ನೆಲ್ಲ ನಿಭಾಯಿಸಿದ್ದನೊ ಗೊತ್ತಿಲ್ಲ..  ಆತನ ಹಿಂದೆ ರೇಸ್ ನಲ್ಲಿ ಬ್ರಾಹ್ಮಣರ ಹುಡುಗನ (ಆತ ಕೆಲವು ಇಂಟರ್ನಲ್ ಎಕ್ಸಾಮ್ ಅಥವಾ ಕಡ್ಡಾಯ ಟೆಸ್ಟ್ ತಪ್ಪಿಸಿಕೊಂಡು ಹಿಂದೆ ಬಿದ್ದಿದ್ದ.) ಜತೆ ನಾವು ಕೆಲವು ಮುಸಲ್ಮಾನ ಹುಡುಗರಿದ್ದೆವು.!..

ಸ್ಟಡಿ ಟೂರಿಗೆ ಹೋಗಿದ್ದೆವು. ನಮ್ಮ ಜತೆ ಬಂದ ಶಿಕ್ಷಕ ಮಹಾಶಯರು ಚೆಲ್ಲಾಟಕ್ಕೆ ಹರಿಸಿದಷ್ಟು ಗಮನ ಬೇರೆ ವಿಷಯದಲ್ಲಿ ವಹಿಸಲೇ ಇಲ್ಲ. ಅವರೊಂದಿಗೆ ನಮ್ಮ ಕೆಲ ಕೋತಿ ವಿದ್ಯಾರ್ಥಿಗಳು ಸೇರಿಕೊಂಡಿದ್ದರು. ಇವರೆಲ್ಲ ಚಟ ಬಿಟ್ಟು ಬೇರೆನನ್ನೂ ಟೂರ್ ನಲ್ಲಿ ಮಾಡಿಲ್ಲ. ನಾನು ಮತ್ತು ಕೆಲವರು ತುಂಬ ಸೀರಿಯಸ್ ಆಗಿ ತೊಡಗಿಕೊಂಡಿದ್ದೆವು. ನನ್ನ ಟೂರ್ ರಿಪೋರ್ಟ್ ಜಬರ್ದಸ್ತ್ ಆಗಿತ್ತು. ಸ್ವತಃ ಈ ಶಿಕ್ಷಕರೇ ಕ್ಯಾಂಪಸ್ ನ ಒಂದು ರಸ್ತೆಯಲ್ಲಿ ಕಾರು ನಿಲ್ಲಿಸಿ ನನ್ನ ರಿಪೋರ್ಟ್ ಬಗ್ಗೆ ತುಂಬ ಹೇಳಿದ್ದರು ಮೆಚ್ಚಿಕೊಂಡಿದ್ದರು. ಅದ್ಭುತ ಎಂದಿದ್ದರು. ಕೆಲವರಂತೂ ನೆಪಮಾತ್ರದ ವರದಿ ನೀಡಿ, ಇವರೊಂದಿಗೆ ಇಡೀ ಟೂರ್ ತುಂಬ ಹರಟಿದ್ದರು. ಆದರೆ ವರದಿಗೆ ಮಾರ್ಕು ಮಾತ್ರ ನನಗೆ ಕಮ್ಮಿ ಬಂದಿತ್ತು.

ನಮ್ಮ ಬಗ್ಗೆ ಮುಂಚೆ ಕೋಪ ಇಟ್ಟುಕೊಂಡಿದ್ದ ಮತ್ತು ಫೈನಲ್ ಬಂದಾಗ ಆತ್ಮೀಯರಾಗಿದ್ದ ಒಬ್ಬ ಪ್ರೊಫೆಸರ್ ಮಾತ್ರ ಪ್ರೀತಿ ತೋರಿದ್ದು. ಅಕ್ಕರೆಯಿಂದ ಕಂಡಿದ್ದು. ಒಳ್ಳೆಯ ಕೆಲಸಕ್ಕೆ ಷಹಬ್ಬಾಸ್ ಎಂದು ಬೆನ್ನು ತಟ್ಟಿದ್ದು.

ಅಲುಮ್ನಿ ಮೀಟ್ ನೆವದಲ್ಲಿ ಇಷ್ಟೆಲ್ಲ ನೆನಪುಗಳು ಬಿಚ್ಚಿಕೊಂಡವು. ಗೆಳೆಯರು , ಜತೆಯಲ್ಲಿ ಓದಿದವರೊಂದಿಗೆ ನೆನಪು ಹಂಚಿಕೊಳ್ಳಲು ಅಲುಮ್ನಿ ಮೀಟ್ ಒಳ್ಳೆಯ ನೆವ. ಆದರೆ, ಕೆಲವರಿಗೆಂದೇ ಸೃಷ್ಟಿಯಾದಂತಿರುವ, ಕೆಲವರ ಜ್ಞಾನವನ್ನೇ ಶ್ರೇಷ್ಠವೆಂದು ಭಾವಿಸಿದಂತಿರುವ, ಅವರಿಗೇ ಮನ್ನಣೆ, ಗೌರವ ನೀಡುವ, ಅವರಿಗೆಂದೇ ಗೋಲ್ಡ್ ಮೆಡಲ್ ಗಳನ್ನು ರೂಪಿಸಿಟ್ಟುಕೊಂಡಂತಿರುವ, ಅವರಿಗೇ ಹೇಗಾದರೂ ಅವನ್ನು ತಲುಪಿಸುವ, ಅಥವಾ ತಮಗಿಷ್ಟವಾದವರ ಕೊರಳಿಗೇ ಅದು ಬೀಳುವಂತೆ ಮಾಡುವ, ಇನ್ನು ಕೆಲವರಿಗಂತೂ ಅದರ ಕನಸೂ ಕಾಣದಂತಾಗಿಸುವ, ಅಥವಾ ಅದನ್ನು ಅಸಾಧ್ಯವಾಗಿಸುವ ಮನೋಧರ್ಮದ ಮತ್ತು ಕೆಲವರ ಮೇಲೆ ಅನಗತ್ಯ ಕನಿಕರ, ಮೆಹರ್ಬಾನಗಿ ತೋರುವಂಥ ವರ್ತನೆ ಹೊಂದಿರುವಂತಿದೆ ಎನಿಸುವ ಶಿಕ್ಷಣ ವ್ಯವಸ್ಥೆ ಮತ್ತು ಅದರ ನಿರ್ವಹಣೆಯಲ್ಲಿ ತೊಡಗಿದವರ ಗುರುತಿಸುವಲ್ಲಿನ ಅಸಡ್ಡೆ, ಉಡಾಫೆ, ತರತಮ ನೀತಿ ನನ್ನೊಳಗೊಂದು ತಿರಸ್ಕಾರದ ಭಾವನೆ ಮೂಡಿಸಿದೆ. ದೊಡ್ಡ ನೋವು ಅದು. ಹೀಗಾಗಿ ನಾನು ಮೀಟ್ ನಲ್ಲಿ ಪಾಲ್ಗೊಳ್ಳಲಾಗುತ್ತಿಲ್ಲ. ಆದರೆ ಕೆಲ ಗೆಳೆಯರ ಒಡನಾಟದ ನೆನಪು, ಜತೆಯಲ್ಲಿ ಓದಿದ ಹೆಮ್ಮೆಯ ಮುಂದೆ ನನ್ನ ಮುನಿಸದೆಂಥದು... ಮೀಟ್ ಗೆ ಬರಲಾಗಿದ್ದಕ್ಕೆ ಕ್ಷಮೆ ಇರಲಿ. ನೆನಪಿರಲಿ ನಿಮಗೆಲ್ಲಾ: ಕೆಚ್ಚೆದೆ, ಪ್ರತಿಭಟನಾ ಮನೋಧರ್ಮ, ನೈತಿಕತೆ, ಧೈರ್ಯ ಇರಲಿ. ಜರ್ನಲಿಸಂ ಗೆ ಅದು ಬೇಕು. ಪಿಆರ್ ಥರ ಬರಿಯ ಡಿಪ್ಲೊಮ್ಯಾಟಿಕ್ ಮನೋಧರ್ಮ ಅಲ್ಲ.

ಶಾಲ್ಮಲೆಯಲ್ಲಿ ಬಹುಶಃ ಹೊಸ ನೀರು ಹರಿದಿರಬಹುದು... ಕೊಂಚ ಎಲ್ಲದರಲ್ಲಿ ಸುಧಾರಣೆ ಬಂದಿರಲೂಬಹುದು. ನ್ಯಾಯಯುತವಾದ ಮನ್ನಣೆ ಅರ್ಹರಿಗೇ ದಕ್ಕಿದ್ದಲ್ಲಿ ಅವರಿಗೆ ನನ್ನ ದಿಲ್ ಪೂರ್ವಕ ಶುಭಾಶಯಗಳು.

'ಫಲಾನುಭವಿ'ಗಳನ್ನು ಹೊರತುಪಡಿಸಿ, ಹಾಗೇ ವಿಶಾಲ ಮನೋಧರ್ಮ, ಯಾವುದೋ ಭಾವುಕತೆ, ಭ್ರಮೆಯನ್ನೇ ಪ್ರಧಾನ ಎಂದುಕೊಂಡು ಮೀಟ್ ನಲ್ಲಿ ಪಾಲ್ಗೊಂಡ ಮುಗ್ಧ ಅಲುಮ್ನಿಗಳಿಗೆ, ಗೆಳೆಯರಿಗೆ ನನ್ನ ನಮನಗಳು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮನುಷ್ಯ ಜಾತಿ ತಾನೊಂದೇ ವಲಂ...

ಭಾರತದಲ್ಲಿ ಜಾತಿ ವ್ಯವಸ್ಥೆ ಹೇಗೆ ಹುಟ್ಟಿತು ಎಂಬುದಕ್ಕೆ ಯಾವುದೇ ನಿರ್ಧಿಷ್ಟ ಥಿಯರಿ ಇಲ್ಲ. ಆದರೆ, ಇಲ್ಲಿನ ವರ್ಗ ಸೃಷ್ಟಿ ಮಾತ್ರ ಇರಾನ್ ವ್ಯವಸ್ಥೆಯಂತೇ ಇದೆ.  ಪುರಾತನ ಇರಾನಿನ ಚರಿತ್ರೆಯಲ್ಲಿ ಇಂಥದೊಂದು ವ್ಯವಸ್ಥೆ ಇತ್ತು. ಅದಕ್ಕೆ ಪಿಸ್ತ್ರಾಸ್ ಎನ್ನುತ್ತಾರೆ. ನಮ್ಮಲ್ಲಿ ಅದು ಚಾತುರ್ವರ್ಣವಾಗಿದೆ. ಅಲ್ಲಿ ಅಥ್ರವಾನ್ಸ್ (ಪ್ರೀಸ್ಟ್ ಕ್ಲಾಸ್), ರಥೈಸ್ತಾ (ವಾರಿಯರ್ಸ್), ವಸ್ತ್ರಿಯಾ (ಮರ್ಕಂಟೈಲ್ ಕ್ಲಾಸ್) ಮತ್ತು ಹ್ಯುತಿ (ಆರ್ಟಿಸನ್) ಎನ್ನುವ ವರ್ಗ ವ್ಯವಸ್ಥೆ ಇದೆ. ನಮ್ಮಲ್ಲಿ ಇದನ್ನು ಕಲ್ಪಿಸಿಕೊಂಡರೆ ಪುರೋಹಿತ ಅಥವಾ ಬ್ರಾಹ್ಮಣ (ಅಥ್ರವಾನ್ಸ್), ಕ್ಷತ್ರಿಯ  (ರಥೈಸ್ತಾ), ವೈಶ್ಯ  (ವಸ್ತ್ರಿಯಾ) ಮತ್ತು ಶೂದ್ರ (ಹ್ಯುತಿ) ಎಂದು ಅರ್ಥೈಸಿಕೊಳ್ಳಬಹುದು.  ಆದಿ ಕಾಲದ ಇರಾನಿಯನ್ ವ್ಯವಸ್ಥೆ ಹೀಗೇ ಇತ್ತು. ಅದೇ ನಾಲ್ಕು ವರ್ಗಗಳು ಭಾರತದಲ್ಲೂ ಈಗಲೂ ಚಾಲ್ತಿಯಲ್ಲಿವೆ. ಹೀಗೆ ಒಂದು ಇರಾನ್ ಸಂಬಂಧ ಭಾರತಕ್ಕಿದೆ. ಚರ್ಮದ ಬಣ್ಣ, ನಯ ನಾಜೂಕು, ಕಣ್ಣು, ಬುದ್ಧಿವಂತಿಕೆಯನ್ನು ಹೋಲಿಸಿದರೆ ಭಾರತದ ಅದರಲ್ಲೂ ಉತ್ತರ ಭಾರತದ ಕಾಶ್ಮೀರಿ ಪಂಡಿತರು, ಉತ್ತರ ಪ್ರದೇಶದ ಪಂಡಿತ್, ಚಿತ್ಪಾವನ ಬ್ರಾಹ್ಮಣರು, ನಮ್ಮ ಕರಾವಳಿ ಮತ್ತು ಉತ್ತರ ಕನ್ನಡದ ಹವ್ಯಕರು ಹೆಚ್ಚೂ ಕಮ್ಮಿ ಇರಾನಿಗಳನ್ನು ಹೋಲುತ್ತಾರೆ (ಮೇಲ್ನೋಟಕ್ಕೆ).  ಬಹುಶಃ ಹೀಗೂ ಆಗಿರಬಹುದು, ಆಗ ಇರಾನ್ ನಲ್ಲಿ ಕ್ರೈಸ್ತ ಮತ್ತು ಇಸ್ಲಾಂ ಮುಂಚೆಯೂ ಹಲವಾರು ಸುಧಾರಣಾವಾದಿಗಳ ಅಥವಾ ಬಂಡುಕೋರರ

"ಮಣೆಗಾರ" ಬಸಿದಿಟ್ಟ ಒಡಲಾಳದ ನೋವು ನೆನೆದು...

ಹಾಲ್ಕುರಿಕೆ ಥಿಯೇಟರ್ ಕಾನ್ಸೆಪ್ಟ್ ಕನ್ನಡ ರಂಗಭೂಮಿಯಲ್ಲಿ ಹೊಸದೊಂದು ಸಂಚಲನವನ್ನುಂಟು ಮಾಡುತ್ತಿದೆ. ಒಟ್ಟಾರೆ ಭಾರತೀಯ ರಂಗಭೂಮಿ ಕಾಣುತ್ತಿರುವ ಹೊಸತನಕ್ಕೆ ಇದು ಮುಖ್ಯವಾದ ಸಾಕ್ಷಿ. ಅತ್ಯಂತ ಕ್ರಿಯಾಶೀಲ ತುಡಿತದ ರಂಗಕರ್ಮಿ ಹಾಲ್ಕುರಿಕೆ ಶಿವಶಂಕರ (ನಿರ್ದೇಶಕ/ನಾಟಕಕಾರ) ಇತ್ತೀಚೆಗೆ "ಮಣೆಗಾರ" (ತುಂಬಾಡಿ ರಾಮಯ್ಯನವರ ಆತ್ಮಕಥೆ) ಎನ್ನುವ ದಲಿತ ಕಥಾನಕವೊಂದನ್ನು ರಂಗದ ಮೇಲೆ ಅನಾವರಣಗೊಳಿಸಿದರು. ಪ್ರಯೋಗದ ದೃಷ್ಟಿಯಿಂದ ಕೆಲವು ಕೊರತೆಗಳು, ದೋಷಗಳು ಇವೆ. ಅದು ಯಾವುದೇ ಪ್ರಯೋಗಕ್ಕೆ ಇರುವಂಥವೇ. ಆದರೆ ಸಮುದಾಯವೊಂದರ ಒಡಲಾಳದ ನೋವನ್ನು ರಂಗದ ಮೇಲೆ ಬಸಿದಿಟ್ಟಾಗ  ಬೆಚ್ಚಿ ಬೀಳುವಂತಾಯಿತು. ವಿಶೇಷವಾಗಿ ದಲಿತೇತರಲ್ಲಿ ಸಾಮಾಜಿಕ ಪ್ರಜ್ಞೆ, ಜವಾಬ್ದಾರಿಯನ್ನು ಬಡಿದೆಬ್ಬಿಸುವಂಥ ಕಥಾನಕವದು. "ಮಣೆಗಾರ" ಪ್ರೊಸಿನಿಯಂಗಿಂತ ಆಪ್ತರಂಗಭೂಮಿಗೆ ಸೂಕ್ತವಾದ ವಸ್ತು. ಪ್ರಯೋಗ ಒಟ್ಟಾರೆ ಮನುಷ್ಯ ಬದುಕಿನ ನಡುವಿರುವ ಗ್ರೇ ಏರಿಯಾವೊಂದರ ದರುಶನ ಮಾಡಿಸಿತು. ಮೇಲ್ವರ್ಗ ಸಹಮಾನವರನ್ನು ಅದು ಹೇಗೆ ಅಸ್ಪೃಶ್ಯರು ಎಂದು ದೂರಕ್ಕಿಟ್ಟಿತ್ತು, ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿತ್ತು ಎನ್ನುವುದು ಇದರ ಮೂಲ ಸಂಕಟ. ಇಡೀ ನಾಟಕದಲ್ಲಿ ಬದುಕಿಗಾಗೇ ಸಂಘರ್ಷವಿದೆ. ಆಹಾರಕ್ಕಾಗಿ ಹಾಹಾಕಾರವಿದೆ. socio-cultural  ನೆಲೆಯಲ್ಲಿ ದೊಡ್ಡ ಸಂಘರ್ಷವಿದೆ. ಇದು ರಾಜಕೀಯ ಆಯಾಮದಲ್ಲೂ ಬಹುಮುಖ್ಯವಾದ ಸಂಘರ್ಷವೇ. ಶಿಕ್ಷಣ ಮತ್ತು ಅದರ ಆಧಾರದಲ್ಲಿ ಹುಟ

"ಬದುಕು-ಬಯಲು" ನಾಟಕ ಮತ್ತು ಮಾನವೀಯ ನೆಲೆಯ ಹುಡುಕಾಟ

ಫ್ರಾನ್ಸ್ ನ ಬರಹಗಾರ ಅಲ್ಫ್ರೆಡ್ ಜೆರಿ ಬರೆದ 'ದಿ ಸೂಪರ್ ಮೇಲ್' ಎನ್ನುವ ಕಾದಂಬರಿಯ ಪ್ರೊಟಗಾನಿಸ್ಟ್ ಆ್ಯಂಡ್ರಿ ಮಾರ್ಕೆಲ್ ಒಬ್ಬ ಜಂಟಲ್ ಮನ್, ವಿಜ್ಞಾನಿ ಕೂಡ. ಅವನಿಗೆ ಮಾನವ ಸಾಮರ್ಥ್ಯಕ್ಕೆ ಮಿತಿ ಎಂಬುದೇ ಇಲ್ಲ ಎನ್ನುವುದರಲ್ಲಿ ಬಲವಾದ ನಂಬಿಕೆ. ಆತ ಉಗಿಬಂಡಿ ಜತೆಗೂ ಯಾವುದೇ ವಿಶ್ರಾಂತಿ ಮತ್ತು ತ್ರಾಸಿಲ್ಲದೇ ಕ್ರಮಿಸಿ  ರೇಸ್ ಗೆಲ್ಲಬಲ್ಲ (ಕಾದಂಬರಿಯಲ್ಲಿ ರೈಲು ಮತ್ತು ಸೈಕ್ಲಿಸ್ಟ್ ನಡುವೆ ಒಂದು ರೇಸ್ ನಡೆಯುತ್ತದೆ). ಒಂದೇ ಹೆಂಗಸಿನ ಜತೆ 24 ಗಂಟೆಗಳಲ್ಲಿ 82 ಬಾರಿ ಸಂಭೋಗ ನಡೆಸಬಲ್ಲ 'ಕಾಮಪಟುತ್ವ'ದ ಸಾಹಸಗಳನ್ನೂ ಮಾಡಬಲ್ಲ. ಇದನ್ನು ಪುರುಷಪರಾಕ್ರಮದ ನೆಲೆಯಲ್ಲಿ ನೋಡೋದಾ? ಇಲ್ಲಾ ನಿಸರ್ಗ ಸಹಜ ಸಾಧ್ಯತೆಯ ನೆಲೆಯಲ್ಲಿ ನೋಡುವುದಾ?... - ಇದು ಒಂದು ರೀತಿಯ ವಿಕ್ಷಿಪ್ತ ಮನೋಧರ್ಮದ, ಸೈನ್ಸ್ ಫಿಕ್ಷನ್ ಕಾದಂಬರಿಯ ಸಂಕ್ಷಿಪ್ತ ನೋಟ. ಅಲ್ಫ್ರೆಡ್ ಜೆರಿ ಉತ್ತಮ ನಾಟಕಕಾರನೂ ಹೌದು. ಆತನ 'ಉಬು ರೊಯ್' ಹೆಸರಾಂತ ನಾಟಕಗಳಲ್ಲೊಂದು.    * * * ಜೆರಿ ಬಗ್ಗೆ ಓದುತ್ತಿದ್ದ ಹೊತ್ತಲ್ಲಿ ಹಿಜಡಾವೊಬ್ಬರ ಆತ್ಮಕಥನ ಆಧರಿಸಿದ "ಬದುಕು-ಬಯಲು" ಎನ್ನುವ ನಾಟಕ ವೀಕ್ಷಣೆಗೆ ತಿಪಟೂರಿನ ರಂಗ ಗೆಳೆಯ ನೀನಾಸಂ ಚಂದ್ರು ಆಹ್ವಾನ ನೀಡಿದರು.  ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ ನೋಡಿದೆ. ಅದಕ್ಕೂ ಮುಂಚೆ ನಾಟಕದ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಸಿ.ಎಸ್. ದ್ವಾರಕಾನಾಥ್, ಗೌರಿ ಲಂಕೇಶ್ ಮತ್ತಿತರ ಚಿಂತಕರ ವಿ