ವಿಷಯಕ್ಕೆ ಹೋಗಿ

ಚರ್ಚ್ ದಾಳಿಯಂಥ ಬೂಟಾಟಿಕೆ ತಡೆಗೆ ಗಣರಾಜ್ಯೋತ್ಸವ ಆಚರಣೆ ಅಗತ್ಯ


ಮೈಸೂರಿನ ಹಿನಕಲ್ ಹೋಲಿ ಚರ್ಚ್ ಮತ್ತು ಮುರುಡೇಶ್ವರ ಸಮೀಪದ ಪೆರ್ನಮಕ್ಕಿ ಗ್ರಾಮದ ಚರ್ಚ್ ಮೇಲೆ ದಾಳಿ ನಡೆದಿದೆ. ದೇಶದ ಗಣರಾಜ್ಯೋತ್ಸವಕ್ಕೆ 60 ವರ್ಷಗಳೇ ಸಂದಿವೆ. ಗಣರಾಜ್ಯೋತ್ಸವವನ್ನು ಸ್ವಾತಂತ್ರ್ಯೋತ್ಸವಕ್ಕಿಂತ ಸಂಭ್ರಮದಿಂದ ಮತ್ತು ತುಂಬ ಹೆಮ್ಮೆಯಿಂದ ಆಚರಿಸಬೇಕಾದ ಅಗತ್ಯವಿದೆ. ಏಕೆಂದರೆ ಇದು ಹಕ್ಕುಗಳ ಬಗ್ಗೆ ಹೇಳುವ ಆಚರಣೆ. ಆಗಸ್ಟ್ 15  ಸಾಧನೆ. ಗಣರಾಜ್ಯೋತ್ಸವ ನಿತ್ಯದ ಬದುಕಿನ ಸಂಭ್ರಮಕ್ಕೆ ಭದ್ರ ಅಡಿಪಾಯ.

ಹಕ್ಕುಗಳಲ್ಲಿ ಅತ್ಯಂತ ಪ್ರಮುಖವಾದದ್ದು ಧಾರ್ಮಿಕ ಹಕ್ಕು. ನಂಬಿಕೆಗಳ ಹಕ್ಕು, ಆಚರಣೆ, ಸಂಪ್ರದಾಯ ಪಾಲನೆ, ಪೂಜಿಸುವ, ಪ್ರಾರ್ಥಿಸುವ ಹಕ್ಕು. ಇದಕ್ಕೆ ಲಿಖಿತ ಸಂವಿಧಾನದ ಹಕ್ಕುಪತ್ರವಿದೆ. ಇದಕ್ಕಾಗಿ ಯಾರಪ್ಪನ ಅನುಮತಿಯೂ ಬೇಕಿಲ್ಲ. ಮತ್ತು ಇದನ್ನು ತಡೆಯುವ ಹಕ್ಕು ಯಾರಿಗೂ ಇಲ್ಲ. ಅಥವಾ ಬಲಪ್ರಯೋಗದ ಮೂಲಕ, ಪುಂಡಾಟಿಕೆ, ಬೂಟಾಟಿಕೆ ಮೂಲಕ ಹತ್ತಿಕ್ಕಲೂ ಸಾಧ್ಯವಿಲ್ಲ.

ಭಾರತದಂಥ ಬಹುಮುಖಿ ಸಂಸ್ಕೃತಿಯ ದೇಶಕ್ಕೆ ಇದೆಲ್ಲ ಬಹುದೊಡ್ಡ ಸವಾಲೇನಲ್ಲ. ಒಂದು ಪ್ರಭುತ್ವ ಮೂಲದಲ್ಲಿ ನೆಲದ ಆಶಯಗಳನ್ನು, ಪರಂಪರೆಯ ಮೌಲ್ಯಗಳನ್ನು ಅಡಿಪಾಯಾಗಿಟ್ಟುಕೊಂಡು ತನ್ನ ಕಾರ್ಯಚಟುವಟಿಕೆಗಳನ್ನು ರೂಪಿಸಿಕೊಳ್ಳಬೇಕಾಗುತ್ತದೆ. ಆದರೆ ನಮ್ಮ ರಾಜ್ಯದ ಕಥೆಯೇ ಬೇರೆಯಾಗಿದೆ. ದೇಶದ ಯಾವುದೋ ಒಂದು ರಾಜ್ಯದಲ್ಲಿ ಯಶಸ್ವಿಯಾದ ಕೇಸರಿ ಪ್ರಾಜೆಕ್ಟ್ ಅನ್ನು ಅದೇ ಸ್ವರೂಪದಲ್ಲಿ ಇಲ್ಲಿಯೂ ತುರುಕುವ ಯತ್ನ ಇಲ್ಲೀಗ ನಡೆಯುತ್ತಿದೆ. ಈಗೀಗ ಹೆಚ್ಚುತ್ತಿರುವ ಚರ್ಚ್ ಮೇಲಿನ ಹಲ್ಲೆಗಳು ಇದಕ್ಕೆ ಸಾಕ್ಷಿಯಾಗಿ ನಿಂತಿವೆ.


ಏಸು ಜನ್ಮದ ಸಂದರ್ಭದಿಂದ ಹಿಡಿದು ಈತನಕದ ಮಾನವ ಇತಿಹಾಸದಲ್ಲಿ ಇದೆಲ್ಲ ಹೊಸದೇನೂ ಅಲ್ಲ. ಸ್ವತಃ ಏಸು ಕೂಡ ಕಲ್ಲೇಟು ಎದುರಿಸಿದವನು. ನಾಗರಿಕತೆ ಬೆಳೆದು ಬಂದಂತೆ ಅದರ ಜತೆಗೆ ಬದುಕಿನ  ಹೊಸ ಮೌಲ್ಯಗಳೂ ಹುಟ್ಟಿಕೊಳ್ಳುತ್ತಲೇ ಬಂದವು. ಆಯಾ ನೆಲದ ಗುಣ, ಪರಿಸರ ಮತ್ತು ಆ ಕಾಲದ ಅಗತ್ಯಗಳಿಗನುಗುಣವಾಗಿ ನಾಗರಿಕತೆಗಳು ರೂಪುಗೊಂಡವು. ಜೀವನ ಶೈಲಿ, ಬದುಕಿನ ಮೌಲ್ಯಗಳ ಹೆಚ್ಚಿಸಲು ಧರ್ಮಗಳು, ಪಂಥಗಳು, ವಿವಿಧ ಸಂಸ್ಕೃತಿ ಹುಟ್ಟಿಕೊಂಡವು. ಆಯಾ ಜನರು ತಮ್ಮ ಬದುಕಿನ ಆಶಯಗಳು ಮತ್ತು ಕನಸುಗಳಿಗೆ ಸಂಬಂಧಿಸಿದಂತೆ ಅನುಕೂಲಕರವಾದ ಸಂಸ್ಕೃತಿಯೊಂದನ್ನು ಒಪ್ಪಿ, ಅನುಸರಿಸಿಕೊಂಡು ಬರುವ ಪ್ರಕ್ರಿಯೆ ಕೂಡ ಹೊಸದೇನೂ ಅಲ್ಲ. ನಂಬಿಕೆಗಳ ಆಧಾರದಲ್ಲೇ ನಡೆಯುವ ದೈವತ್ವದ ಕಲ್ಪನೆ ಮತ್ತು ಆದರ್ಶದ ಬದುಕು ವೈಯಕ್ತಿಕ ನಿರ್ಧಾರ ಅಷ್ಟೇ. ಅಂಥವರ ಸಂಖ್ಯೆ ಹೆಚ್ಚುತ್ತ ಸಾಗಿದಂತೆ ಅದರ ಪ್ರಭಾವವೂ ವಿಸ್ತಾರಗೊಳ್ಳುತ್ತ ಸಾಗುತ್ತದೆ. ನಂತರ ಅದೊಂದು ಸಾಂಘಿಕ ಮನೋಧರ್ಮವನ್ನೂ ರೂಪಿಸುತ್ತದೆ.

ಸಾಂಘಿಕ ಮನೋಧರ್ಮ ಒಂದು ಬೃಹತ್ ಶಕ್ತಿಗಣವಾದಾಗಲೇ ಸವಾಲುಗಳು ಹುಟ್ಟಿಕೊಳ್ಳುತ್ತವೆ. ನಂಬಿಕೆಗಳ ಪ್ರಭಾವ ವ್ಯಾಪಕವಾದಂತೆ, ಜೀವನಶೈಲಿಯಲ್ಲಿ ಸುಧಾರಣೆ ಕನಸು ಗರಿಗೆದರಿದಂತೆ ಮನುಷ್ಯನಲ್ಲಿ ಸ್ಥಿತ್ಯಂತರದ ಮನೋಭಾವನೆ ಮೂಡುವುದು ಸಹಜ. ಹೀಗೆ ಮತಾಂತರದ ಪ್ರಕ್ರಿಯೆ ಸಹಜವಾಗೇ ಶುರುವಾಗುತ್ತದೆ. ಕ್ರೈಸ್ತರ ವಿಷಯಕ್ಕೆ ಬಂದಾಗ ಏಸು ಅಥವಾ ಮೇರಿ ಮೇಲಿನ ಮಮತೆ, ನಂಬಿಕೆ ಹೀಗೆ ಗಟ್ಟಿಗೊಳ್ಳುತ್ತಲೇ ಬಂದಿದ್ದು ಗಮನಕ್ಕೆ ಬರುತ್ತದೆ. ಅದರಲ್ಲಿ ಕಂಡುಕೊಳ್ಳುವ ಒಬ್ಬರ ನೆಮ್ಮದಿ ಮತ್ತೊಬ್ಬರಿಗೂ ಪ್ರೇರಣೆಯಾಗಲು ಸಾಧ್ಯವಿದೆ. ಇದು ಮತಾಂತರಕ್ಕೆ ಉಳಿದವರನ್ನು ಸೆಳೆಯುವ ಸಾಧ್ಯತೆಯೂ ಸಹಜವಾಗೇ ಸೃಷ್ಟಿಯಾಗುತ್ತದೆ. ಇದೇಕೆ ಕ್ರೈಸ್ತರಲ್ಲದವರ ಹೊಟ್ಟೆ ಉರಿಸಬೇಕು?

ಶಿವಾಜಿನಗರದ ಸಂತ ಮೇರಿ ಜಾತ್ರೆ ಈಚೆಗೆ ಭರ್ಜರಿಯಾಗೇ ನಡೆಯಿತು. ಹಿಂದೆ ಈ ಜಾತ್ರೆಗೆ ಕೆಲವೇ ಲಕ್ಷ ಜನ ಸೇರುತ್ತಿದ್ದರು. ಈಗದು ಲಕ್ಷಾಂತರಕ್ಕೆ ಹಬ್ಬಿದೆ. ಇದು ಇಡೀ ಬೆಂಗಳೂರಿನಲ್ಲಿ ಕ್ರೈಸ್ತರ ಮೇಲೆ ಇತರರ ಕಣ್ಣು ಕೆಂಪಾಗಿಸಿದೆ. ಅದರಲ್ಲೂ ಸ್ಥಳೀಯ ಸರ್ಕಾರದ ರಾಜಕೀಯ ಪಕ್ಷ ಮತ್ತದರ ಸಂಘಟನೆಗಳ ನಿದ್ದೆಗೆಡಿಸಿದೆ.

ಒಂದೆಡೆ ಮುಸಲ್ಮಾನರು ಪವಿತ್ರ ರಂಜಾನ ಮಾಸಾಚರಣೆಯಲ್ಲಿ ಮತ್ತಿತರ ಆಚರಣೆಗಳಲ್ಲಿ ಧಾರ್ಮಿಕವಾಗೇ ಪಾಲ್ಗೊಳ್ಳುತ್ತಾರೆ.  ಮತ್ತೆ ಅವರು ಒಟ್ಟಾಗಿ ಸೇರಿ ಆಚರಿಸುವ ಹಬ್ಬಗಳೇ ಬೆರಳೆಣಿಕೆಯಷ್ಟು. ಸಾಂಘಿಕ ಶಕ್ತಿ, ತಮ್ಮದೇ ಧಾರ್ಮಿಕ ವಿಧಾನ, ಸ್ಪಷ್ಟ ನಾಗರಿಕತೆ ಮತ್ತು ಸಂಸ್ಕೃತಿಯಲ್ಲಿ ಅವರೆಲ್ಲ ನೆಮ್ಮದಿ ಕಂಡುಕೊಂಡಿದ್ದಾರೆ. ಅವರ ಈ ನಡಾವಳಿ, ಸಂಸ್ಕೃತಿ ಇತರರಿಗೂ ಆಕರ್ಷಣೀಯವಾಗುವ ಸಾಧ್ಯತೆ ಇದೆ. ಅವರಂತೆ ನಾವ್ಯಾಕಾಗಬಾರದು ಎನ್ನುವ ಸಣ್ಣ ಆಶಯ ಇತರರಲ್ಲಿ ಮೂಡುವುದು ಸಹಜ. ಹೀಗೆ ಕ್ರೈಸ್ತರು ಮತ್ತು ಮುಸಲ್ಮಾನರು ತಮ್ಮ ಜೀವನಶೈಲಿ, ವೈವಿಧ್ಯತೆಯಲ್ಲಿ, ಸಾಂಘಿಕ ಶಕ್ತಿಯಲ್ಲಿ ಇತರರಿಗಿಂತ ಭಿನ್ನರಾಗಿ ಕಾಣಿಸುತ್ತಾರೆ. ಈ ಭಿನ್ನತೆ ಆಕರ್ಷಣೀಯವಾಗುತ್ತಿರುವುದೇ ಬಹುದೊಡ್ಡ ಸಂಕಟದ ಸ್ಥಿತಿಯನ್ನು ಕೆಲವರಲ್ಲಿ ರೂಪಿಸಿದೆ. ಇದು ಚರ್ಚ್ ಮೇಲಿನ ದಾಳಿಯಂಥ ಯಡವಟ್ಟುಗಳಿಗೆ ಪ್ರೇರೇಪಿಸುತ್ತದೆ.

ಕರಾವಳಿಯ ಈ ಕೆಟ್ಟ ಸಂಪ್ರದಾಯ ಇಡೀ ನಾಡಿಗೆ ಹಬ್ಬುತ್ತಿರುವುದು ಬಹಳ ನಾಚಿಕೆಗೇಡಿನ ಬೆಳವಣಿಗೆ. ಇದನ್ನು ಮಟ್ಟಹಾಕಬೇಕು ಎನ್ನುವುದು ನಮ್ಮ ದೇಶದ ಸಂವಿಧಾನದ ಮೂಲ ಗುರಿಯೂ ಆಗಿದೆ. ಬಹುಸಂಸ್ಕೃತಿಯನ್ನು ಒಪ್ಪಿಕೊಂಡ ನಮ್ಮ ಸಂವಿಧಾನಕ್ಕೆ ಇಂಥ ಬೂಟಾಟಿಕೆಯನ್ನು ತಡೆಯುವ ಮತ್ತು ಶಿಕ್ಷಿಸುವ ತಾಕತ್ತಿದೆ. ಇಡೀ ರಾಜ್ಯವನ್ನು ರೋಗಗ್ರಸ್ಥವಾಗಿಸುವ ಇಂಥ ಬೆಳವಣಿಗೆಗಳು ಸರ್ಕಾರದ ಕೃಪಾಪೋಷಿತ ಕೃತ್ಯಗಳಾಗದಂತೆ ತಡೆಯಬೇಕಾದ ಕೆಲಸ ಮೊದಲು ಆಗಬೇಕು. ಇಲ್ಲಿ ಬಿಜೆಪಿ ಅಥವಾ ಇನ್ನಾವುದೋ ಪಕ್ಷಗಳ ಆಡಳಿತ ಬರಲಿ. ಅವೆಲ್ಲ ಭಾರತದ ಸಂವಿಧಾನದ ಅಡಿಯಲ್ಲೇ ಕೆಲಸ ಮಾಡಬೇಕು. ಅದು ಬಹುಮುಖಿ ಸಂಸ್ಕೃತಿಯನ್ನು ಪ್ರತಿಪಾದಿಸುವ ಲಿಖಿತ ಸಂವಿಧಾನ ಎನ್ನುವುದನ್ನು ಯಾರೂ ಮರೆಯಲೇಬಾರದು.

ಚರ್ಚ್ ಮೇಲಿನ ದಾಳಿಯಂಥ ಕೃತ್ಯಗಳನ್ನು ಸಿಬಿಐ ತನಿಖೆಗೆ ಆದೇಶಿಸಿ ಕೈತೊಳೆದುಕೊಳ್ಳುವ ಹಾಗೂ ಕಂಡಲ್ಲಿ ಗುಂಡಿಕ್ಕುವ ಆದೇಶಗಳ ಮೂಲಕ ಮಾತ್ರ ತಡೆಯಬಹುದೆನ್ನುವುದು ಕೇವಲ ಭ್ರಮೆ. ಬದುಕುವ ಹಕ್ಕಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ಆಶಯಗಳನ್ನು ಗಟ್ಟಿಗೊಳಿಸುವ ಅಭಿವೃದ್ಧಿ ಯೋಜನೆಗಳ ಮೂಲಕ ಮಾಡಬೇಕಾದ ಕೆಲಸವಿದು. ಸರ್ಕಾರ ಅಭಿವೃದ್ಧಿಯ ಫಲವನ್ನು ಎಲ್ಲ ಸಮೂದಾಯಗಳಲ್ಲಿ ಸಮನಾಗಿ ಹಂಚುವ ಮೂಲಕವಷ್ಟೇ ಇದು ಸಾಧ್ಯ.

ಆದರೆ ಈ ನೆಲದ ಸಾಮರಸ್ಯದ, ಬಹುಮುಖಿ ಸಂಸ್ಕೃತಿಯ, ಜಾತ್ಯತೀತದ ಕಾನೂನು ಯಾಕೋ ಸಡಿಲಗೊಳ್ಳುತ್ತಿದೆ ಎನ್ನುವ ಅನುಮಾನ ಮೂಡುತ್ತಿದೆ. ಇಲ್ಲಿ ಕೆಲವರಿಗೆ ಬದುಕೇ ಹಿಂಸೆಯಾಗುವ ಅಪಾಯ ಕಾಣಿಸುತ್ತಿದೆ. ನಾಗರಿಕ ಸಮಾಜಕ್ಕೆ ಇಂಥ ದುರವಸ್ಥೆ ಎಂದೂ ಬರಬಾರದಲ್ಲವೇ?

ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಷ್ಕ್‌ ಕೆ ಇಮ್ತೆಹಾನ್‌ ಔರ್‌ ಭೀ ಹೈ’.. ಇಮ್ರಾನ್‌ ಖಾನ್‌!

ಪಾಕಿಸ್ತಾನದ ಬಗ್ಗೆ ಮಾತನಾಡುವುದು ಮಹಾ ಪಾಪದ ಕೆಲಸವೇನಲ್ಲ. ಹಾಗೆ ಭಾವಿಸಬೇಕಿಲ್ಲ. ಅದು ಒಪ್ಪಿತವೊ ಇಲ್ಲವೋ, ಅದರ ಬಗ್ಗೆ ಅಲಕ್ಷ್ಯವೋ ನಿರ್ಲಕ್ಷ್ಯವೊ ಏನೇ ಆದರೂ ಅದು ಒಂದು ದೇಶ. ನೆರೆಯ ರಾಷ್ಟ್ರ. ‘ಪಡೋಸಿ...’ ಸಂಬಂಧದಲ್ಲಿ ನಮ್ಮದೇ ಕರುಳಬಳ್ಳಿ. ಭಾಷೆ, ಜನಜೀವನ ಶೈಲಿಯಲ್ಲಿ ಬದಲಾದರೂ ಮನುಷ್ಯ ಭಾವ, ಬದುಕುವ ಸಾಮಾನ್ಯ ಕಾಳಜಿ  ಒಂದೇ. ಹಾಗೆ ನೋಡಿದರೆ ಸಾಂಸ್ಕೃತಿಕವಾಗಿ ಎರಡೂ ದೇಶಗಳು ಅಭಿನ್ನ. ನಮ್ಮಲ್ಲಿರುವ ಹಾಗೆ ಅಲ್ಲಿಯೂ ಪ್ರಜಾಪ್ರಭುತ್ವ ಇದೆ. ಅಲ್ಲಿ ನಡೆಯುವುದು ಇಲ್ಲೂ ನಡೆಯುತ್ತದೆ. ಅಲ್ಲಿ ನಡೆಯಲೇಬಾರದ್ದು ಇಲ್ಲೂ ನಡೆಯಲೇಬಾರದು.  ತೀವ್ರವಾದ ನಮ್ಮಲ್ಲಿನದಕ್ಕಿಂತ ಅಲ್ಲಿ ತುಸು ಹೆಚ್ಚು ಸವಾರಿಗೆ ಹವಣಿಸಿದೆ. ಅಲ್ಲಿನ ಮಿಲಿಟರಿ ಅತಿರೇಕದ್ದು. ಅಕ್ಷಮ್ಯ. ಮತ್ತೆ ದೇಶ ಪುಟ್ಟದಾದಷ್ಟು ಅದಕ್ಕೆ ಭಯಗಳು ಜಾಸ್ತಿ. ಮಿಲಿಟರಿ ಕವಚದಲ್ಲಿ ಅದು ಸುರಕ್ಷಾ ಭಾವವನ್ನು ಕಲ್ಪಿಸಿಕೊಳ್ಳುತ್ತದೆ. ಅದೊಂದು ತರಹದ ಸಮಾಧಾನ. ಆದರೆ ಭ್ರಮೆಯಿಂದ ಕೂಡಿದ್ದು. ಭಯೋತ್ಪಾದನೆ ಕೂಡ ಒಂದರ್ಥದಲ್ಲಿ ಪುಕ್ಕಲುತನವೇ ಆಗುತ್ತದೆ. ಹಿಂಸಾ ಪ್ರವೃತ್ತಿಗೆ ಹೆದರಿಸುವುದೇ ಕೆಲಸ. ಹೆದರಿಸುವವರು ಶೂರರು, ಧೀರರು ಮತ್ತು ಜೀನಿಯಸ್‌ ಆಗಿರಲು ಹೇಗೆ ಸಾಧ್ಯ? ಮುಖ್ಯವಾಗಿ ಅಲ್ಲಿನ ವಿದ್ಯಮಾನಗಳನ್ನು ಗಮನಿಸುವುದಾದರೆ, ಮಿಲಿಟರಿ, ಮತಾಂಧರು, ಭಯೋತ್ಪಾದಕರು, ಭ್ರಷ್ಟರು ಇದೆಲ್ಲದರಿಂದ ಪಾಕಿ ತುಂಬ ರೋಸಿ ಹೋಗಿದ್ದಾನೆ. ಒಂದು ಸೂಕ್ತ ಪರ್ಯಾಯಕ್ಕಾಗಿ ಹಂಬಲಿಸಿದ್...

ನಾನು ನೀನಾಸಂ ಪದವೀಧರನಲ್ಲ...

ನೀನಾಸಂ ಪದವಿ ನನ್ನ ತಲೆಗೆ ಅನಗತ್ಯ ಭಾರ ಸ್ವಾಮೀ. ಅಷ್ಟು ಕಪ್ಪು ಸುಂದರಿಯರ ಭಾರವೇ ನನ್ನ ತಲೆಗೆ ಸಾಕಾಗಿ ಹೋಗಿದೆ. ಇನ್ನು ಇಷ್ಟು 'ವಜನ್' ಪದವಿ ಕಿರೀಟ ಬೇಡವೇ ಬೇಡ. ಸುಮ್ಮನೇ ಖಾಸಗಿಯಾಗಿ ಡೈರಿಯ ಹಾಗೆ ಬೆಚ್ಚಗೆ ನನ್ನ ಜತೆಗೆ ಸದಾ ಇರಲಿ ಎಂದುಕೊಂಡು ಈ ಬ್ಲಾಗ್ ರೂಪಿಸಿದ್ದೇನಷ್ಟೇ. ಅವಧಿ ಬ್ಲಾಗ್ ನನ್ನ ಈ ಪುಟ್ಟ ಯತ್ನಕ್ಕೆ ಬೆನ್ನು ತಟ್ಟಿದ್ದು ಸಂತೋಷವೇ. ಆದರೆ, ನನ್ನ ಬಗ್ಗೆ ಬೆನ್ನುತಟ್ಟುವ ಸಾಲುಗಳ ಬರೆಯುತ್ತ ನೀನಾಸಂ ಪದವೀಧರ ಎನ್ನುವ ಒಂದು ತಪ್ಪು ಮಾಹಿತಿ ಕೂಡ ನುಸುಳಿಕೊಂಡಿದೆ. ಸ್ವಾಮೀ ನಾನೀ ನೀನಾಸಂ ಸುದ್ದಿಗೇ ಹೋದವನಲ್ಲ. ಅಲ್ಲಿ ಕಲಿತು ಬಂದವರ ಜತೆ 'ಬೇಜಾನ್' ಜಗಳ ಮಾಡಿದಿನಿ ಅಷ್ಟೇ.

‘ಪಲ್ಲಟ’ ಒಂದು ಪ್ರಾಮಾಣಿಕ ಪ್ರಯತ್ನ

  (ಇನ್ನೂ ತೆರೆ ಕಾಣದ ‘ಪಲ್ಲಟ’ ಕನ್ನಡ ಸಿನಿಮಾದ ಪ್ರೀಮಿಯರ್‌ ಶೋ  ಬಗ್ಗೆ ) ಸಿನಿಮಾದ ಸೊಗಸೇ ಅಂಥದು. ಯಂತ್ರಗಳಿಂದ ಸೆರೆ ಹಿಡಿದ ಬದುಕು ತೆರೆಯ ಮೇಲೆ ಬಾಳುವಾಗ ಆ ಕ್ಷಣಕ್ಕೆ ಎಲ್ಲ ಹೊಸತೇ ಆಗಿ ಕಾಣಿಸುತ್ತದೆ. ಗತ ಬದುಕು ಹೊಸ ಬದುಕಿನಂತೆ ಹೊಳೆಯುತ್ತದೆ. ಪರದೆ ಮೇಲಿನ ಮೂರು ಗಂಟೆಯ ಬಾಳಲ್ಲಿ ಪ್ರೇಕ್ಷಕ ಅದರ ಅಸಲಿ ನೋವು, ನಲಿವುಗಳ ಬದುಕಿಗಿಳಿಯುತ್ತ ಮೆಲ್ಲಗೆ ಅದರ ಒಟ್ಟು ಹರವಿನಗುಂಟ ಸಾಗಬಹುದು. ಆ ಪುಟ್ಟ ಜರ್ನಿಯಲ್ಲಿ  ಅವನೊಳಗಿನ ಬದುಕಿಗೆ ಹೊಸ ಕಣ್ಣುಗಳು ಮೂಡಬಹುದು. ಅಂತಃಕರಣದ ಸೆಲೆಗಳು ಮತ್ತಷ್ಟು ಜಿನುಗಬಹುದು. ಸಿನಿಮಾದ ಸಾಧ್ಯತೆಗಳು, ಪರಿಣಾಮಗಳು ಹಲವು. ಸಿನಿಮಾಗೆ ಅದರ ಅಂತಃಸತ್ವ ಮುಖ್ಯ. ನೋಡಿ ತಿಳಿವ ಪ್ರಾಸೆಸ್‌ ಇದಾದ್ದರಿಂದ ವಿಶ್ಯುಯಲ್‌ ಟ್ರೀಟಮೆಂಟ್‌ ಕೂಡ ಮುಖ್ಯ.  ‘ಪಲ್ಲಟ’ ಕನ್ನಡ ಸಿನಿಮಾದ ವಸ್ತು  ಸ್ಥಳೀಯ ಸಂಸ್ಕೃತಿಗಳ ಸ್ಥಿತ್ಯಂತರ ಹೇಗೆ ನಿಜ ಜೀವನದಲ್ಲಿ ಕೆಲವರ ಬದುಕನ್ನೇ ಮುಗಿಸಿಬಿಡುತ್ತದೆ ಎನ್ನುವುದು. ಇದು ಅಮಾನವೀಯ ಎನ್ನುವುದು ಚಿತ್ರದ ಒಳದನಿ. ಬಹುಕಾಲ ನಿಲ್ಲಬಲ್ಲ ಮತ್ತು ಕಾಡಬಲ್ಲ ಸಿನಿಮಾ ಆಗುವ ಅವಕಾಶವನ್ನು ಇದು ಸ್ವಲ್ಪದರಲ್ಲಿಯೇ ಕಳಕೊಂಡಿದೆ. ಇದರಾಚೆಗೂ ಚಿತ್ರ ಕೆಲವು ವಿಚಾರಗಳಿಗೆ ಸಂಬಂಧಿಸಿ ಚರ್ಚೆಗೆ ಯೋಗ್ಯವಾಗಿದೆ. ನಾಗರಿಕತೆ ಎಂಬುದು ಜನರೇ ಸೃಜಿಸಿಕೊಂಡಿದ್ದು. ಆಯಾ ಜನಪ್ರದೇಶಗಳಲ್ಲಿ ಕಾಲದ ಅಗತ್ಯಗಳಿಗೆ ತಕ್ಕುದಾದ ವ್ಯವಸ್ಥೆಯೊಂದು ರೂಪುಗೊಂಡಿರುತ್ತದ...