ವಿಷಯಕ್ಕೆ ಹೋಗಿ

ಚೌಗಲೆಯವರ 'ಕಸುವಿನ ಕಸ್ತೂರಬಾ'

ಗಾಂಧೀಜಿಯವರ ಮೊಮ್ಮಗಳು (ರಾಮದಾಸ್ ಗಾಂಧಿ ಮಗಳು) ಸುಮಿತ್ರಾ ಕುಲಕರ್ಣಿ ತಮ್ಮ "ಮಹಾತ್ಮಾ ಗಾಂಧಿ- ಮೇರೆ ಪಿತಾಮಹ" ಪುಸ್ತಕದಲ್ಲಿ  ಋಷಿಪತ್ನಿ ಅರುಂಧತಿಯ ಪ್ರಸ್ತಾಪ ಮಾಡಿದ್ದಾರೆ. ಅರುಂಧತಿ ಬ್ರಹ್ಮರ್ಷಿ ವಸಿಷ್ಠರ (ರಾಮನ ತಂದೆ ದಶರಥನಿಗೆ ಇವರು ರಾಜಗುರುವಾಗಿದ್ದರಂತೆ) ಸಹಧರ್ಮಿಣಿ.  ಋಷಿಯ ಶ್ರೇಷ್ಠ ಪತ್ನಿ. ತ್ರಿಕಾಲಜ್ಞಾನಿ ವಶಿಷ್ಠರದು ನ್ಯಾಯನೀತಿಯ ಬದುಕು. ಹೀಗಾಗಿ ಸಪ್ತಋಷಿ ಮಂಡಲದಲ್ಲಿ ವಶಿಷ್ಠರಿಗೆ ಸ್ಥಾನ ಕಲ್ಪಿಸಲಾಗಿದೆಯಂತೆ. ರಾತ್ರಿ ಆಕಾಶದಲ್ಲಿ ಏಳು ಚುಕ್ಕೆಗಳ ಒಂದು ಆಕೃತಿ ಥೇಟು ಸುಂದರ ಸ್ತ್ರೀಯ ಮೂಗುನತ್ತಿನಂತೆ ಹೊಳೆಯುತ್ತಿರುವುದನ್ನು ಗಮನಿಸಿರಬಹುದು. ಅದಕ್ಕೆ ಸಪ್ತರ್ಷಿ ಮಂಡಲ (ಹೀಗೊಂದು ನಂಬಿಕೆಯಷ್ಟೇ)  ಎಂದು ಕರೆಯುತ್ತಾರೆ. ಅದರ ಜತೆಗೊಂದು ಪುಟಾಣಿ ನಕ್ಷತ್ರ ಫಳ ಫಳಂತ ಹೊಳೆಯುತ್ತಿರುತ್ತದೆ. ತಾರಾಮಂಡಲದಲ್ಲಿ ಅದೆಷ್ಟೊ ನಕ್ಷತ್ರಗಳ ರಾಶಿಯಲ್ಲಿ ಸಪ್ತರ್ಷಿ ಮಂಡಲದ ಜತೆ ಹೊಳೆಯುವ ಸೌಭಾಗ್ಯ ಈ ಪುಟಾಣಿ ನಕ್ಷತ್ರಕ್ಕೆ ಮಾತ್ರವಿದೆ ಎನ್ನುವುದು ವಿಶೇಷ. ಅದಕ್ಕೆ ಅರುಂಧತಿ ಎಂದು ಹೆಸರು.
ಗಾಂಧೀಜಿ ಎನ್ನುವ ಮಹಾಸಂತ, ಋಷಿಗುಣದ ವ್ಯಕ್ತಿಗೆ ಸೂಕ್ತ ಪತ್ನಿಯಾಗಿ ಅವರೆಲ್ಲ ನ್ಯಾಯನೀತಿಯ ಹೋರಾಟಕ್ಕೆ ಸಾಥ್ ಕೊಟ್ಟವರು ಕಸ್ತೂರಬಾ. ಹೀಗಾಗಿ ಕಸ್ತೂರಬಾ ನಿಸ್ಸಂದೇಹವಾಗಿ ಅರುಂಧತಿಯ ಸ್ಥಾನಕ್ಕೇರುವಂಥ ಹೆಣ್ಣು ಎನ್ನುವುದು ಸುಮಿತ್ರಾ ಕುಲಕರ್ಣಿಯವರ ವರ್ಣನೆ, ಮತ್ತು ಹೋಲಿಕೆ.
ಕಸ್ತೂರಬಾ ಗಾಂಧಿ ವ್ಯಕ್ತಿತ್ವದ ಪ್ರಖರತೆ ಮತ್ತು ಮಹತ್ವದ ಬಗ್ಗೆ ಅಷ್ಟಾಗಿ ದಾಖಲಾಗಿಲ್ಲ. ಅಲ್ಲಲ್ಲಿ ಬಿಡಿ ಬಿಡಿಯಾಗಿ ಒಂದಷ್ಟು ಉಲ್ಲೇಖವಾಗಿದೆಯಷ್ಟೇ. ಸಂತ, ಸೂಫಿ, ಫಕೀರ ಮತ್ತು ಪ್ರವಾದಿಯ ಹಾಗೆ ಗಾಂಧೀಜಿ ಒಂದಿಡೀ ಪ್ರದೇಶದ ಚರಿತ್ರೆಯಲ್ಲಿ ಬೃಹದಾಕಾರವಾಗಿ ನಿಂತುಬಿಟ್ಟಿದ್ದಾರೆ. ಅವರ ಅಕ್ಕಪಕ್ಕ ಯಾರೇ ನಿಂತರೂ ಗೌನವೆನಿಸುತ್ತಾರೆ. ಕಸ್ತೂರಬಾ ಅವರು ಗಾಂಧಿ ಜೀವನದಲ್ಲಿ ಬಹುಮುಖ್ಯವಾದ ಭೂಮಿಕೆ ನಿಭಾಯಿಸಿದ್ದರೂ, ಅವರನ್ನು ಗಾಂಧೀಜಿ ಪತ್ನಿ ಎಂದಷ್ಟೇ ಸೀಮಿತವಾಗಿ ಕಾಣಲಾಗಿದೆ.
ಇಂಥ ಮಿತಿಗಳು ಮತ್ತು ತುಂಬ ಸರಳ ವ್ಯಕ್ತಿತ್ವವನ್ನು ಹರವಿಕೊಂಡು, ಒಟ್ಟಾರೆ ಸೂಕ್ಷ್ಮಗಳನ್ನು ಗ್ರಹಿಸಿ ಒಂದು ಪೂರ್ಣ ಪ್ರಮಾಣದ ನಾಟಕ ಕಟ್ಟಿಕೊಡುವುದು ನಿಜಕ್ಕೂ ಸವಾಲಿನ ಕೆಲಸ. ಕಲಾವಿದ, ನಾಟಕಕಾರ ಡಿ.ಎಸ್. ಚೌಗಲೆ ಅವರು ಆಯ್ದುಕೊಂಡ ಕಸ್ತೂರಬಾ ವ್ಯಕ್ತಿತ್ವ ನಾಟಕ ರೂಪವಾಗಿ ನಮ್ಮ ಮುಂದಿದೆ. ಇದು ಸ್ತ್ರೀಪರ ಚಿಂತನೆಯ ಮೂಲಸೆಲೆಯಿಂದ ಹೊಮ್ಮಿದ ವಸ್ತು ಎಂದು ತಟ್ಟನೆ ಅನಿಸಿದರೂ ದೃಶ್ಯದಿಂದ ದೃಶ್ಯಕ್ಕೆ ಮಾನವೀಯ ಸ್ಪರ್ಶದೊಂದಿಗೆ ಬೆಳೆಯುವ ನಾಟಕ ಇಡೀ ಮನುಷ್ಯ ಅಂತಃಕರಣ, ಸಹಬಾಳ್ವೆಯ ಹರವು ಪಡಕೊಂಡಿದೆ. ಸತ್ವಯುತವಾದ ಸಂಭಾಷಣೆಯೊಂದಿಗೆ ನಾಟಕ ಓದಿಗೂ ಆಪ್ತವಾಗಿಬಿಡುತ್ತದೆ.
ಅಗರ್ಭ ಶ್ರೀಮಂತ ವ್ಯಾಪಾರಿ ಕುಟುಂಬದಿಂದ ಬಂದ ಕಸ್ತೂರಬಾ, ನಿಜವಾಗಿಯೂ ಫಕೀರನಾಗುವತ್ತ ಮುಖಮಾಡಿ ನಿಂತಿದ್ದ ಮೋಹನದಾಸ ಕರಮಚಂದ ಗಾಂಧಿ ಎನ್ನುವ ವೈಷ್ಣವನ ಮನೆಗೆ ಬೆಳಕಾಗೇ ಕಾಲಿಡುತ್ತಾರೆ. ಗಾಂಧೀಜಿಯ ಸಿಟ್ಟು, ಸೆಡವು, ಸಣ್ಣತನ... ಎಲ್ಲ ಸಹನೀಯ ಮತ್ತು  ಅಸಹನೀಯ ಆದೇಶಗಳನ್ನು ಚಾಚುತಪ್ಪದೆ ಪಾಲಿಸಿಕೊಂಡು ಬಂದ ಕಸ್ತೂರಬಾ ಭಾರತೀಯ ಸಂಪ್ರದಾಯದಲ್ಲಿ ಆದರ್ಶ ಪತ್ನಿಯಾಗೇ ಈ ನಾಟಕದಲ್ಲಿ ಕಾಣಿಸುತ್ತಾರೆ.
ಗಾಂಧೀಜಿ ದೃಷ್ಟಿಯಲ್ಲಿ ಕಸ್ತೂರಬಾ ಎನ್ನುವ ನೆಲೆಯಲ್ಲೇ ನಾಟಕ ಕಟ್ಟಲು ಯತ್ನಿಸಿದಂತಿದೆ. ಅದಕ್ಕೆ ಸಾಕ್ಷಿ ಎಂಬಂತೆ ನಾಟಕದ ಮೊದಲ ಮತ್ತು ಕೊನೆಯ ಮಾತೇ ಗಾಂಧೀಜಿಯವರದು. ಮೊದಲ ದೃಶ್ಯದ ಮೊದಲ ಮಾತಿನಲ್ಲಿಡೀ ಗಾಂಧೀಜಿಯವರ ಚಾಳೀಸಿನಲ್ಲಿ ಕಸ್ತೂರಬಾ ಕಾಣಿಸಿಕೊಳ್ಳಲಾರಂಭಿಸುತ್ತಾರೆ. ಹಾಗೇ ನೇರವಾಗಿ ಕಸ್ತೂರಬಾ ರಂಗದ ಮೇಲೆ ಇಳಿದುಬಿಟ್ಟಿದ್ದರೆ ಚೆನ್ನಿತ್ತು. ಆದರೆ ನಿರೂಪಕನ ಮಾತಿಗೆ ಕಸ್ತೂರಬಾ ಜಾರುತ್ತಾರೆ. ಹೀಗೆ ನಾಟಕ ಮುಂದಿನ ದೃಶ್ಯದಲ್ಲೇ ನಿರೂಪಕನ ಕೈಗೆ ಬಂದುಬಿಡುತ್ತೆ . ಕಸ್ತೂರಬಾ ಪಾತ್ರದ ಬಿಲ್ಡ್ ಅಪ್ ಗೆ ಇದು ನೆರವಾದೀತೆನ್ನುವುದು ಒಂದು ಲೆಕ್ಕಾಚಾರ. ಗಾಂಧೀಜಿ ಮತ್ತು ಕಸ್ತೂರಬಾ ಮದುವೆ ಮತ್ತು ಆ ನಂತರದ ಆರಂಭಿಕ ಬದುಕಿನ ಕೆಲ ದೃಶ್ಯಗಳನ್ನು ಕಟ್ಟಿಕೊಡಬಹುದಿತ್ತೇನೋ...  ಅದು ಕೊಂಚ ಕಷ್ಟವೂ ಇದೆ. ಇಬ್ಬರದೂ ಬಾಲ್ಯ ವಿವಾಹವಾದ್ದರಿಂದ ಇನ್ನೂ ಕಷ್ಟ.
ಚೌಗಲೆಯವರು, ಗಾಂಧೀಜಿಯವರ ನಿಷ್ಠುರತೆ ಮತ್ತು ಹಟದ ಜತೆಗೆ ಕಸ್ತೂರಬಾ ಅವರ ಸೌಮ್ಯ ಸ್ವಭಾವ ಮತ್ತು ಆಗಾಗ ಹೊಮ್ಮುವ ಕ್ರಾಂತಿಕಾರಕ ಒಳದನಿ ತುಂಬ ಮನಮುಟ್ಟುವಂತೆ ಸಂಭಾಷಣೆಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಗಾಂಧೀಜಿ ತುಂಬ ರೋಮ್ಯಾಂಟಿಕ್ ವ್ಯಕ್ತಿತ್ವದವರಾಗಿದ್ದರು ಎಂದು ಹಲವೆಡೆ ಉಲ್ಲೇಖವೂ ಆಗಿದೆ. ಅದಿನ್ನೂ ನಾಟಕದಲ್ಲಿ ಬಂದಿದ್ದರೆ ಚೆನ್ನಿತ್ತು. ಆಗ ಕಸ್ತೂರಬಾ ಪ್ರತಿಕ್ರಿಯೆ ನಮಗೆ ಎಂಥದೋ ಒಂದು ರಂಗಮಜ ಕೊಡುತ್ತಿತ್ತು.

ಕಸ್ತೂರಬಾ ಒಬ್ಬ ಸಾಧಾರಣ ಗೃಹಿಣಿ ಆಗಿರದೇ ಪತಿಯ ಹೋರಾಟದ ಬದುಕನ್ನೂ ಮೈಗೂಡಿಸಿಕೊಂಡಿದ್ದರು. ಆ ಮೂಲಕ ಅವದೂ ಒಂದು ಗಮನಾರ್ಹ ವ್ಯಕ್ತಿತ್ವ ಎನ್ನುವುದು ಈ ನಾಟಕದಲ್ಲಿ ಕಾಣುವ ಬಹುದೊಡ್ಡ ಅಂಶ. ಇದಕ್ಕೂ ಹೆಚ್ಚಾಗಿ ಅವರಲ್ಲಿನ ತಾಯ್ತನ ಮತ್ತು ಸರಳ ಜೀವನ ಇಡೀ ಸ್ತ್ರೀಕುಲವೇ ಹೆಮ್ಮೆ ಪಡುವಂಥದು ಎನ್ನುವುದು ಇಲ್ಲಿನ ಪ್ರಮುಖ ಒಳದನಿ.
 ದೃಶ್ಯ 7ರಲ್ಲಿ ಕಸ್ತೂರಬಾ ಅದು ಹೇಗೆ ವಿದೇಶಿ ಜೈಲುಗಳಲ್ಲೂ ಹೋರಾಟಕ್ಕಿಳಿಯುತ್ತಾರೆ ಎನ್ನುವುದರ ಚಿತ್ರಣವಿದೆ. ಇಲ್ಲಿ ಕಸ್ತೂರಬಾ ಮಾನವಹಕ್ಕುಗಳ ಹೋರಾಟಗಾರ್ತಿಯಂತೆ ಗಮನ ಸೆಳೆಯುತ್ತಾರೆ. ಅವರ ಮಾತುಗಳಲ್ಲಿನ ಆಕ್ರೋಶ ಗಾಂಧೀಜಿ ಭಾಷೆಯ ಗತ್ತನ್ನೇ ಹೊಂದಿದೆ. ಹೋರಾಟದ ಸ್ವರೂಪ ಕೂಡ ಅವರದೇ. ಗಾಂಧೀಜಿ ಹೆಜ್ಜೆಯಲ್ಲಿ ಹೆಜ್ಜೆ ಹಾಕಿದ ಅಪ್ಪಟ ಸಹಧರ್ಮಿಣಿ ಎನ್ನುವುದಕ್ಕೆ ಇದೂ ಸಾಕ್ಷಿ.
ಕಸ್ತೂರಬಾ ಅವರ ಕೆಲ ಸಂಭಾಷಣೆಗಳು ಹೀಗಿವೆ...

ಕಸ್ತೂರಬಾ: ನಿಮ್ಮ ಮೇಲಧಿಕಾರಿಗೆ ಸ್ಪಷ್ಟವಾಗಿ ಹೇಳ್ರಿ. ನಾವು ಹೋರಾಟದ ಕೈದಿಗಳು. ಕ್ರಿಮಿನಲ್ ಗಳಲ್ಲ. ನಮ್ಮ ಹಕ್ಕಿಗಾಗಿ ಹೋರಾಡಿದೀವಿ. ನಮ್ಮಂಥವರಿಗೆ ಶುದ್ಧ ವಾತಾವರಣ ಬೇಡೇನು?...
(ಕೈದಿಗಳಿಗೆ ನೀಡುವ ಕನಿಷ್ಠ ಸೌಲಭ್ಯಗಳಲ್ಲೂ ನಿರ್ಲಕ್ಷ್ಯ ಕಂಡು ಕಸ್ತೂರಬಾ ವಾರ್ಡನ್ ನನ್ನು ತರಾಟೆಗೆ ತೆಗೆದುಕೊಂಡ ಸಂದರ್ಭ)
ಈ ಮಾತಲ್ಲಿ ಕಸ್ತೂರಬಾ ಅವರ ಹೋರಾಟದ ಕೆಚ್ಚಿನ ರಾಜಕೀಯ ಚಿಂತನೆ ಕೂಡ ಅತ್ಯಂತ ಪ್ರಖರವಾಗೇ ಗೋಚರಿಸುತ್ತದೆ.
ಮತ್ತೊಂದು ಸಂಭಾಷಣೆ
ಕಸ್ತೂರಬಾ: ಹರಕು ಕೊಳಕಿನ ಈ ಸವಲತ್ತನ್ನು ಧಿಕ್ಕರಿಸುತ್ತೇವೆ. ಛೆ ಛೆ ಇನ್ನು ತಾಳಿ ಪ್ರಯೋಜನವಿಲ್ಲ. ನೋಡಿರಿ, ನಮಗೆ ಒಳ್ಳೆ ಆಹಾರ, ಹಣ್ಣು ಸಿಗದೆ ಹೋದರೆ ಜೈಲಿನೊಳಗೂ ಹೋರಾಟಕ್ಕಿಳಿತಿವಿ. ಜಾಗೃತೆ! ಅದೂ ಸಹ ಅಹಿಂಸಾತ್ಮಕ ಹೋರಾಟ.
ಅವರ ಮಾನವಹಕ್ಕುಗಳಿಗೆ ಸಂಬಂಧಿಸಿದ ಹೋರಾಟದ ಕೆಚ್ಚು ಈ ಮಾತಲ್ಲಿ ಸೊಗಸಾಗಿ ಕಟ್ಟಿಕೊಡುತ್ತಾರೆ ಚೌಗಲೆ. ಇಂಥ ಕೆಲವು ಮಾತುಗಳು ದೃಶ್ಯಗಳನ್ನು ಶ್ರೀಮಂತಗೊಳಿಸಿವೆ. ಒಟ್ಟಾರೆ ನಾಟಕದ ಓಘ ಒಂದು ಲಯಬದ್ಧ ಚಲನೆಯಂತಿದೆ. ಮಂದ್ರವಾಗಿ ಕೇಳುವ ಸಂಜೆಯ ಸಂಗೀತದಂತೆ ಅನಿಸುತ್ತದೆ.

ತನ್ನ ಹೊಟ್ಟೆಯಲ್ಲಿ ಹುಟ್ಟಿದ ಮಗ ಯಾಕೋ ಬದುಕಿನ ಟ್ರ್ಯಾಕಿಗೇ ಬರುತ್ತಿಲ್ಲವಲ್ಲಾ ಎನ್ನುವ ಕೊರಗು ಕಸ್ತೂರಬಾ ಅವರನ್ನು ಹಿಂಡಿಹಾಕಿರುತ್ತದೆ. ಅಂಥದೊಂದು ದೃಶ್ಯದಲ್ಲಿ ಕಸ್ತೂರಬಾ ಅವರ ತಾಯ್ತತನದ ಸಹಜ ತುಡಿತವನ್ನು ಚೌಗಲೆ ತುಂಬ ಕಕ್ಕುಲಾತಿಯಿಂದ ಕಟ್ಟಿಕೊಡುತ್ತಾರೆ. ಇಡೀ ದೃಶ್ಯ ಅವರು ಹೆಣ್ಣನ್ನು ಕಾಣುವ ದೃಷ್ಟಿಕೋನಕ್ಕೆ ನಿದರ್ಶನದಂತಿದೆ. ದೃಶ್ಯ 15 ಅಂಥದೊಂದು ಮನಮಿಡಿಯುವುದರ ಚಿತ್ರಣ.

ದೃಶ್ಯ 15
ಕಸ್ತೂರಬಾ: ಕೇವಲ ಮಹಾದೇವ ದೇಸಾಯಿನ ನೆನೆದು ಹೊಸ ಹರಿಯನ್ನ ಸೃಷ್ಟಿಸಲು ಬರತದೆ ಏನು? ಅವನನ್ನು ಕರೆದು ಕೂರಿಸಿ ಬುದ್ಧಿ ಹೇಳಿರಿ. ಹೊಲಸುಗೆಲಸ ಬಿಟ್ಟು ಬಾ ಎನ್ನಿರಿ. ಆತ ಖಂಡಿತ ಬರತಾನೆ. ಮತ್ತೆ ಗರಿಗೆದರಿದ ಹೊಸ ಹಕ್ಕಿಯಂತೆ ರೆಕ್ಕೆ ಬಡಿದು ಮೇಲೇಳತಾನೆ. ಅವ ಬೆಂಕಿಯಾದಷ್ಟು ನಾವು ತಂಪೆರೆವುದು ಬೇಡವೇನು? ಪ್ರಪಂಚದ ಡೊಂಕಿಗೆ ಸ್ಪಂದಿಸುವ ನೀವು ಮಗನ ನೇರಗೊಳಿಸದಿದ್ದರೆ ಹೇಗೆ? ನನ್ನ ಮಗನನ್ನು ಹೀಗೆ ಅನಾಥವಾಗಿ ಅಲೆವಂತೆ ಮಾಡಬೇಡಿರಿ, ಅವನೂ ತನ್ನ ಬಳಗದೊಂದಿದೆ ಬೆರೆಯುವಂತೆ ಮಾಡಿರಿ...
ಮಗ ಬದುಕಿನ ಹೊನಲಿಗೆ ಮತ್ತೆ ಬರಲಿ. ಕಳೆದು ಹೋದ ಸಂಗಾತಿಯ ಸಖ್ಯವನ್ನು ಹೊಸ ಸಾಂಗತ್ಯದಲ್ಲಿ ಕಾಣುವಂತಾಗಲಿ. ಜೋಡಿ ಕಳಕೊಂಡ ಹಕ್ಕಿ ಒಂಟಿಯಾಗಿ ಹಲಬುವುದಕ್ಕಿಂತ ಹೊಸದೊಂದು ಜೋಡಿ ಹುಡುಕಿಕೊಳ್ಳಲಿ ಎಂದು ಹಂಬಲಿಸುವ ಆ ತಾಯಿ ಮಮತೆ ಅನನ್ಯ. ತಾಯಿ ಪ್ರೀತಿ ಎಲ್ಲ ಮಕ್ಕಳಿಗೂ ಸಮಾನವಾದುದು. ನಿಜವಾದ ಸಮತಾವಾದಿ ಎಂದರೆ ತಾಯಿಯೇ. ಆಕೆಗೆ ಮಕ್ಕಳು ದೊಡ್ಡವು, ಚಿಕ್ಕವು, ನೆಟ್ಟಗಿನವು, ಸೊಟ್ಟಗಿನವು, ಕಪ್ಪು-ಬಿಳುಪು ಹೀಗೆ ಯಾವ ಭೇದ ಭಾವಗಳಿರುವುದಿಲ್ಲ. ಪಕ್ಕಾ ಹಕ್ಕಿಯ ಗುಣವದು.

ಉಡತೇ ಹುವೇ ಪರಿಂದೋಂಕೋ ದೇಖೊ, ಉನ್ ಮೇ ರಸ್ಮ ನಹೀ ಹೋತಾ, ಕಭೀ ಮಸಜಿದ್ ಪೇ ಜಾ ಬೈಠತೆ ಹೈ ತೊ, ಕಭೀ ಮಂದಿರ್ ಕೀ ವೋರ್ ಉಢತೇ ಹೈ...
(ಹಾರಾಡುವ ಹಕ್ಕಿಗೆಲ್ಲಿಯ ಜಾತಿ, ಧರ್ಮ, ಭೇದ-ಭಾವ? ಅವು ಮಸೀದಿ ಮೇಲೆ ಕುಳಿತಂತೆ, ಮಂದಿರದ ಮೇಲೂ ಕೂರುತ್ತವೆ)
ಎನ್ನುವ ಉರ್ದು ಶಾಯರಿಯಂತೆ, ಹಕ್ಕಿಗುಣ ಅವಳ ತಾಯ್ತನದಲ್ಲಿ ಅರ್ಥಪೂರ್ಣವಾಗಿ ಹರಿದಾಡಿದೆ.

ಗಾಂಧೀಜಿಯವರಿಗಿದ್ದ ಸೂಕ್ಷ್ಮತೆ ಕೆಲ ವಿಷಯಗಳಲ್ಲಿ ಕಸ್ತೂರಬಾಗೆ ಇರಲಿಲ್ಲವೇನೋ, ಮತ್ತು ಸಹಜವಾಗಿ ಗಂಡ ಹೆಂಡತಿ ಎಂದಾಗ ವ್ಯಕ್ತಿತ್ವದ ಹರವು ಭಿನ್ನವಾಗೇ ಇರುತ್ತದೆ. ಕೆಲವು ಗಾಂಧಿಯವರ ವಿಚಾರಗಳು ಕಸ್ತೂರಬಾಗೆ ಹಿಡಿಸುತ್ತಿರಲಿಲ್ಲ. ಹಾಗಂತ ರಚ್ಚೆ ಹಿಡಿದು ಹಟ ಮಾಡುವ ಗುಣವೂ ಅವರದಲ್ಲ. ರಾಜಕೀಯ ಮತ್ತು ಧಾರ್ಮಿಕ ವಿಷಯಗಳಲ್ಲಿ ಕಸ್ತೂರಬಾರದು ತುಂಬ ಮುಗ್ಧ ಮನಸು.
ಗಾಂಧೀಜಿ ಮಗ ಹರಿಲಾಲ ಮತಾಂತರಗೊಂಡಾಗ ಇಬ್ಬರಲ್ಲೂ ಮೂಲಭೂತವಾಗಿ ಆಘಾತವೇ ಆಗುತ್ತದೆ. ಗಾಂಧೀಜಿ ಅದನ್ನು ತುಂಬ ಬ್ಯಾಲೆನ್ಸ್ ಆಗಿ ನೋಡುತ್ತಾರೆ. ಆದರೆ ಕಸ್ತೂರಬಾ ಅದನ್ನು ತುಂಬ ಸಂಕಟದಿಂದಲೇ ನೋಡುತ್ತಾರೆ.
ಅಂಥ ಸೂಕ್ಷ್ಮ ಸಂದರ್ಭದಲ್ಲಿ ಯಾರಿಗಾದರೂ ಒಂದು ಮಟ್ಟಿನ ಆಘಾತವಾಗೋದೇ. ಆದರೆ, ಅವರು ಸಂಯಮ ಕಳೆದುಕೊಳ್ಳದೇ ತುಂಬ ಜಾಗರೂಕತೆಯಿಂದ ಪ್ರತಿಕ್ರಿಯಿಸುತ್ತಾರೆ. ದೃಶ್ಯ 17ರಲ್ಲಿ ಗಾಂಧೀಜಿ ಹೀಗೆ ಹೇಳ್ತಾರೆ-
ಗಾಂಧಿ: ಮತಾಂತರ ವ್ಯಕ್ತಿಯ ಸ್ವಂತ ಹಕ್ಕು ಒಪ್ಪತೇನೆ. ಆದರೆ, ಅದು ಆ ವ್ಯಕ್ತಿಯ ಸ್ವಂತದ ಅಧ್ಯಾತ್ಮಿಕ ಪ್ರೇರಣೆಯಿಂದ ಆಗಬೇಕು. ಈ ನನ್ನ ಸುಪುತ್ರ ಸುಖಭೋಗದ ಬೆನ್ನಟ್ಟಿದವ. ಇಂಥವನಿಂದ ಇಸ್ಲಾಂನ ಗೌರವಕ್ಕೆ ಧಕ್ಕೆಯುಂಟಾಗಬಹುದು.

ಗಾಂಧಿಯ ಈ ಬ್ಯಾಲೆನ್ಸ್ಡ್ ಪ್ರತಿಕ್ರಿಯೆ ಕಸ್ತೂರಬಾಗೆ ಸಾಧ್ಯವಾಗೋದಿಲ್ಲ. ಅವಳು ಸಹಜ ಸಂಕಟದಿಂದಲೇ ಅದನ್ನು ನೋಡುತ್ತಾಳೆ. ಆಗ ಅವಳ ಕಾಳಜಿ ಮಗನಿಗೆ ಸೀಮಿತವಾಗಿಬಿಡುತ್ತದೆ. ಅದರಾಚೆ ಅವರು ಏನನ್ನೂ ಪರಿಗಣಿಸುವುದಿಲ್ಲ. ಅವರು ಹೇಳ್ತಾರೆ-
ಕಸ್ತೂರಬಾ: ಅವನಿಗೆ ನಾನಿತ್ತ ಸಂಸ್ಕಾರಗಳು ಹುಸಿಹೋದವೇನು? ಜಾತ್ಯಾಂಧರು ಎಲ್ಲೆಡೆಯೂ ಇರೋರೆ! ಆದರೆ ಒಬ್ಬ ವಿವೇಕಶೂನ್ಯನನ್ನು ಹೀಗೆ ಬಳಸಿಕೊಳ್ಳುವುದು ಯಾವ ನ್ಯಾಯ?
ಮತ್ತೆ ಅವರು ಸಾವರಿಸಿಕೊಂಡು ಮುಂದೆ ಹೇಳ್ತಾರೆ-
ಕಸ್ತೂರಬಾ: .... ಅವನದೆಲ್ಲ ಕೇಳಿ ಕೇಳಿ ಕಿವಿ ಹಣ್ಣಾಗಿವೆ. ಗುಂಡಿಗೆ ಕಲ್ಲಾಗಿದೆ. ಆದರೂ ಕರುಳು ಸಾಂತ್ವನ ಬಯಸತದೆ. ಅಂವ ಯಾವ ಜಾತಿ-ಧರ್ಮ ಸೇರಿದರೂ ಚೆಂದಾಗಿದ್ದರೆ ಸಾಕು. ಒಬ್ಬ ತಾಯಿ ಇನ್ನೇನು ಬಯಸತಾಳೆ?
ಹೀಗೆ ಅವರು ಧಾರ್ಮಿಕ-ರಾಜಕೀಯ ಜಂಜಡಗಳ ಬಗ್ಗೆ ತಲೆ ಕೆಡೆಸಿಕೊಳ್ಳದೇ ಕೇವಲ ಹರಿಲಾಲ ತಾಯಿಯಾಗಿ ಮಾತ್ರ ಯೋಚಿಸುತ್ತಾರೆ. ಅವನಿಗೆ ಈ ಗತಿ ಬರೋದಿಕ್ಕೆ ಅನ್ಯರೇ ಕಾರಣ ಎನ್ನುವ ತಾಯಿಯ ಸಹಜ ಮನೋಧರ್ಮವನ್ನೇ ಅವರೂ ಪ್ರತಿಪಾದಿಸುತ್ತಾರೆ.
ಮತಾಂತರದಿಂದ ತನ್ನ ಗೌರವ, ಸಂಸ್ಕಾರಗಳಿಗೇ ಆಪತ್ತು ಎನ್ನುವುದು ಕಸ್ತೂರಬಾ ತಿಳುವಳಿಕೆ. ಧರ್ಮ, ರಾಜಕೀಯದ ಬಗ್ಗೆ ಖಚಿತ ನಿಲುವುಗಳನ್ನು ಹೊಂದುವ ಗೋಜಿಗೂ ಅವರು ಹೋದಂತಿಲ್ಲ. ಓದಿನ ಕೊರತೆಯೂ ಬಹುಶಃ ಇದಕ್ಕೆ ಕಾರಣವಿರಬಹುದು. ಹೀಗೆ  ಯಾವುದೇ ಸೈದ್ಧಾಂತಿಕ ನಿಲುವುಗಳಿಗೆ ದಕ್ಕದ ಕಸ್ತೂರಬಾ ಸಹಜ ಮನುಷ್ಯಳಾಗಿ ಕಾಣಿಸುತ್ತಾರೆ. ಅದೇ ಅವರ ವ್ಯಕ್ತಿತ್ವದ ಕಸುವು.
ಗಾಂಧೀಜಿ ಶಿಸ್ತು, ಸಮಯ ಪಾಲನೆ, ಸಹಿಷ್ಣುತೆ ಮತ್ತು ದಾರ್ಶನಿಕ ಬದುಕಿನ ಪ್ರೇರಣೆಯನ್ನು ಇಸ್ಲಾಂ ಮತ್ತು ಕ್ರೈಸ್ತ ಧರ್ಮದ ನಂಬಿಕೆಗಳ ಮೂಲಕ ಸಾಕಷ್ಟು ಪಡಕೊಂಡಿದ್ದಿದೆ.
ಒಂದು ದೃಷ್ಟಾಂತವನ್ನು ನಾನಿಲ್ಲಿ ನೆನೆಯುತ್ತೇನೆ.
638 (ಎಡಿ)ರಲ್ಲಿ ಜೇರುಸಲೇಂ ಅನ್ನು ವಶಕ್ಕೆ ತೆಗೆದುಕೊಂಡ ಮೇಲೆ ಮೂರನೇ ಖಲೀಫಾ ಓಮರ್ ಒಮ್ಮೆ ಆ ನಗರ ಪ್ರದಕ್ಷಿಣೆಗೆ ಹೋಗ್ತಾರೆ. ಗ್ರೀಕ್ ದೊರೆಯೊಬ್ಬ ಅವರ ಜತೆಯಲ್ಲಿರುತ್ತಾನೆ. ಅಲ್ಲಿನ ಹೆಸರಾಂತ ಚರ್ಚ್ ಗೆ ಹತ್ತಿರ ಬರುವಷ್ಟೊತ್ತಿಗೆ ನಮಾಜಿನ ಸಮಯ. ತಾವು ಈ ಚರ್ಚ್ ಪಕ್ಕದಲ್ಲೇ ಯಾಕೆ ನಮಾಜು ಮಾಡಬಾರದು? ಎಂದು ಗ್ರೀಕ್ ದೊರೆ ವಿನಂತಿಸಿಕೊಳ್ಳುತ್ತಾನೆ. ಖಲೀಫಾ ಒಮರ್ ದೊರೆಯ ಮನವಿ ನಿರಾಕರಿಸುತ್ತಾರೆ. ಬದಲಿಗೆ ಪಕ್ಕದ ಬೀದಿಯಲ್ಲಿ ನಿಂತು ನಮಾಜು ಮುಗಿಸುತ್ತಾರೆ. ಆ ಮೇಲೆ ಹೇಳ್ತಾರೆ -ನಾನು ಚರ್ಚ್ ಪಕ್ಕದಲ್ಲೇ ನಮಾಜು ಮಾಡಿದ್ದಲ್ಲಿ ಕೆಲವು ತಿಳಿಗೇಡಿ ಮುಸಲ್ಮಾನರಿಗೆ ಬೇರೆಯದೇ ಸಂದೇಶ ಹೋಗುತ್ತಿತ್ತು. ಇಸ್ಲಾಮಿನ ದಿಗ್ವಿಜಯ ಎಂದರೆ ಹೀಗೆ ಎಂದು ಭಾವಿಸುವ ಸಾಧ್ಯತೆಯೂ ಇತ್ತು. ಕಾಲಾಂತರದಲ್ಲಿ ಅವರೆಲ್ಲ ಚರ್ಚ್ ಕೆಡವಿ ಅಲ್ಲೊಂದು ಮಸೀದಿ ಕಟ್ಟಿಸುವ ಹುಚ್ಚಾಟ ನಡೆಸುವುದಕ್ಕೆ ಪ್ರೇರಣೆಯೂ ಆಗಬಹುದಿತ್ತು. ಹಾಗಾಗುವುದು ನನಗೆ ಬೇಕಿಲ್ಲ...
(ಈ ಸಹಿಷ್ಣುತೆಯ ಕುರುಹಾಗಿ ಚರ್ಚ್ ಸಮೀಪ ಒಮರ್ ನಮಾಜು ಮಾಡಿದ ಸ್ಥಳದಲ್ಲಿ ಒಂದು ಪುಟ್ಟ ಮಸೀದಿ ನಿರ್ಮಾಣಗೊಳ್ಳುತ್ತದೆ. ಇವತ್ತಿಗೂ ಆ ಮಸೀದಿ ಇದೆ. ಕ್ರೈಸ್ತ ಬಾಂಧವರು ನಮ್ಮ ಸಹಜೀವಿಗಳು. ತಮ್ಮ ಪ್ರಾರ್ಥನೆಗಾಗಿ ಚರ್ಚ್ ಹೊಂದಬಹುದು ಎನ್ನುವ ಫರ್ಮಾನಿಗೆ ಖಲೀಫಾ ಮೊಹರು ಹಾಕುತ್ತಾರೆ.)

ಗಾಂಧಿ ತಮ್ಮ ದಾರ್ಶನಿಕ ಬದುಕಿಗೆ ಇಂಥದ್ದರಿಂದಲೇ ಪ್ರೇರಣೆ ಪಡಕೊಂಡಿದ್ದಾರೆ. ಅವರು ತಮ್ಮ ಪ್ರಯೋಗಗಳಿಗೆ ಇಸ್ಲಾಂನಿಂದ, ಪ್ರವಾದಿ ಮೊಹಮ್ಮದ್ ಜೀವನಶೈಲಿಯಿಂದ ಮತ್ತು ಕ್ರೈಸ್ತ ಧರ್ಮ ಮತ್ತು ಜೀಸಸ್ ವ್ಯಕ್ತಿತ್ವದಿಂದ ಸಾಕಷ್ಟು ಪಡಕೊಂಡಿದ್ದಿದೆ. ತಮ್ಮ ವೈಯಕ್ತಿಕ ಬದುಕಿನಲ್ಲಿ ಈ ಎಲ್ಲವನ್ನು ಅವರೂ ರೂಢಿಸಿಕೊಂಡಿದ್ದಿದೆ.
ಗಾಂಧೀಜಿಯ ಪ್ರಖರ ವ್ಯಕ್ತಿತ್ದದಲ್ಲಿ ಕಳೆದು ಹೋದಂತಿದ್ದ ಕಸ್ತೂರಬಾರ ಒಟ್ಟಾರೆ ವ್ಯಕ್ತಿತ್ವವನ್ನು ಬೆಳಕಿಗೆ ತಂದು ನಿಲ್ಲಿಸಿರುವ ಚೌಗಲೆ, ಸ್ತ್ರೀ ಸಂವೇದನೆಗೆ ಹೊಸ ಐಕನ್ ರೂಪಿಸಿಕೊಟ್ಟಿದ್ದಾರೆ. ಆ ಮೂಲಕ ಸ್ತ್ರೀ ಪರ ಚಿಂತನೆಗೆ ಅರ್ಥಪೂರ್ಣ ಆಯಾಮ ಒದಗಿಸಿಕೊಟ್ಟಿದ್ದಾರೆ.
ಆದರೆ, ನನ್ನದೊಂದು ಅನುಮಾನ- ಮದುವೆಗೂ ಮುನ್ನ ಲೈಂಗಿಕ ಸಂಬಂಧಕ್ಕೆ ಸಂಬಂಧಿಸಿದಂತೆ ನೀಡುವ ಹೇಳಿಕೆಗಳಿಂದ ನಟಿ ಖುಷಬೂ, ಕೇವಲ ಸುಂದರ ಅಂಗಸೌಷ್ಠವ ಹೊಂದಿದ ವಿಶ್ವಸುಂದರಿಯರು, ವಯ್ಯಾರದ ನಟಿಯರು, ರಾಜಕೀಯ ಮುದಿಗೂಬೆಗಳ ಸಂಗದಿಂದ ನಾಯಕಿಯರಾಗುವ ಚತುರೆಯರು ಇಂದಿನ ಸ್ತ್ರೀಯರ ಐಕನ್ ಗಳಾಗುತ್ತಿರುವ ಈ ಹೊತ್ತಲ್ಲಿ,  ಮಹತ್ತರ ಆಶಯಗಳು ಮತ್ತು ಒಟ್ಟಾರೆ ಬದುಕಿನ ಸಾರ್ಥಕತೆಗೆ ತನ್ನ ಸರ್ವಸ್ವವನ್ನೇ ಧಾರೆ ಎರೆವ ಅಪ್ಪಟ ಹೆಣ್ಣು, ಸಂಗಾತಿ ಕಸ್ತೂರಬಾ ಅವರ ಸಹಜ, ಸರಳ ಜೀವನ ಇಂದಿನ ಯಾವ ಸ್ತ್ರೀಯರಿಗೆ ಐಕನ್ ಆಗಬಲ್ಲುದು?
ಚೌಗಲೆ ಅವರ ಕಸ್ತೂರಬಾ ನಾಟಕ, ಸ್ತ್ರೀ ಪರ ಚಿಂತನೆಗೆ ನಿಜಕ್ಕೂ ಹೊಸ ಶಕ್ತಿ ತುಂಬುವಂಥ ಕಸುವನ್ನು ಹೊಂದಿದೆ. ರಾಜಕೀಯ ರಂಗದಲ್ಲಿ ಶೇ 33ರ ಗಾಳಿ ಬೀಸುತ್ತಿರುವ ಈ ಸಂದರ್ಭದಲ್ಲಿ ನಾಡಿನ ಹೆಣ್ಣುಗಳು ಕಸ್ತೂರಬಾ ಅವರಿಂದ ಸಾಕಷ್ಟು ಕಲಿಯೋದಿದೆ. ಹೆಣ್ಣು ಎನ್ನುವ ವ್ಯಕ್ತಿತ್ವವೇ ಭಿನ್ನ ಸ್ವರೂಪ ಪಡಕೊಳ್ಳಬೇಕಿದೆ. ಆ ಮೂಲಕ ಹೆಣ್ಣು-ಗಂಡು ತರತಮದ ಸಮಾಜ ಪರಿವರ್ತನೆಯತ್ತ ಹೆಜ್ಜೆ ಹಾಕಿ ಸಮಾನತೆಗೆ ಕಾರಣವೂ ಆಗಬೇಕಿದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮನುಷ್ಯ ಜಾತಿ ತಾನೊಂದೇ ವಲಂ...

ಭಾರತದಲ್ಲಿ ಜಾತಿ ವ್ಯವಸ್ಥೆ ಹೇಗೆ ಹುಟ್ಟಿತು ಎಂಬುದಕ್ಕೆ ಯಾವುದೇ ನಿರ್ಧಿಷ್ಟ ಥಿಯರಿ ಇಲ್ಲ. ಆದರೆ, ಇಲ್ಲಿನ ವರ್ಗ ಸೃಷ್ಟಿ ಮಾತ್ರ ಇರಾನ್ ವ್ಯವಸ್ಥೆಯಂತೇ ಇದೆ.  ಪುರಾತನ ಇರಾನಿನ ಚರಿತ್ರೆಯಲ್ಲಿ ಇಂಥದೊಂದು ವ್ಯವಸ್ಥೆ ಇತ್ತು. ಅದಕ್ಕೆ ಪಿಸ್ತ್ರಾಸ್ ಎನ್ನುತ್ತಾರೆ. ನಮ್ಮಲ್ಲಿ ಅದು ಚಾತುರ್ವರ್ಣವಾಗಿದೆ. ಅಲ್ಲಿ ಅಥ್ರವಾನ್ಸ್ (ಪ್ರೀಸ್ಟ್ ಕ್ಲಾಸ್), ರಥೈಸ್ತಾ (ವಾರಿಯರ್ಸ್), ವಸ್ತ್ರಿಯಾ (ಮರ್ಕಂಟೈಲ್ ಕ್ಲಾಸ್) ಮತ್ತು ಹ್ಯುತಿ (ಆರ್ಟಿಸನ್) ಎನ್ನುವ ವರ್ಗ ವ್ಯವಸ್ಥೆ ಇದೆ. ನಮ್ಮಲ್ಲಿ ಇದನ್ನು ಕಲ್ಪಿಸಿಕೊಂಡರೆ ಪುರೋಹಿತ ಅಥವಾ ಬ್ರಾಹ್ಮಣ (ಅಥ್ರವಾನ್ಸ್), ಕ್ಷತ್ರಿಯ  (ರಥೈಸ್ತಾ), ವೈಶ್ಯ  (ವಸ್ತ್ರಿಯಾ) ಮತ್ತು ಶೂದ್ರ (ಹ್ಯುತಿ) ಎಂದು ಅರ್ಥೈಸಿಕೊಳ್ಳಬಹುದು.  ಆದಿ ಕಾಲದ ಇರಾನಿಯನ್ ವ್ಯವಸ್ಥೆ ಹೀಗೇ ಇತ್ತು. ಅದೇ ನಾಲ್ಕು ವರ್ಗಗಳು ಭಾರತದಲ್ಲೂ ಈಗಲೂ ಚಾಲ್ತಿಯಲ್ಲಿವೆ. ಹೀಗೆ ಒಂದು ಇರಾನ್ ಸಂಬಂಧ ಭಾರತಕ್ಕಿದೆ. ಚರ್ಮದ ಬಣ್ಣ, ನಯ ನಾಜೂಕು, ಕಣ್ಣು, ಬುದ್ಧಿವಂತಿಕೆಯನ್ನು ಹೋಲಿಸಿದರೆ ಭಾರತದ ಅದರಲ್ಲೂ ಉತ್ತರ ಭಾರತದ ಕಾಶ್ಮೀರಿ ಪಂಡಿತರು, ಉತ್ತರ ಪ್ರದೇಶದ ಪಂಡಿತ್, ಚಿತ್ಪಾವನ ಬ್ರಾಹ್ಮಣರು, ನಮ್ಮ ಕರಾವಳಿ ಮತ್ತು ಉತ್ತರ ಕನ್ನಡದ ಹವ್ಯಕರು ಹೆಚ್ಚೂ ಕಮ್ಮಿ ಇರಾನಿಗಳನ್ನು ಹೋಲುತ್ತಾರೆ (ಮೇಲ್ನೋಟಕ್ಕೆ).  ಬಹುಶಃ ಹೀಗೂ ಆಗಿರಬಹುದು, ಆಗ ಇರಾನ್ ನಲ್ಲಿ ಕ್ರೈಸ್ತ ಮತ್ತು ಇಸ್ಲಾಂ ಮುಂಚೆಯೂ ಹಲವಾರು ಸುಧಾರಣಾವಾದಿಗಳ ಅಥವಾ ಬಂಡುಕೋರರ

"ಮಣೆಗಾರ" ಬಸಿದಿಟ್ಟ ಒಡಲಾಳದ ನೋವು ನೆನೆದು...

ಹಾಲ್ಕುರಿಕೆ ಥಿಯೇಟರ್ ಕಾನ್ಸೆಪ್ಟ್ ಕನ್ನಡ ರಂಗಭೂಮಿಯಲ್ಲಿ ಹೊಸದೊಂದು ಸಂಚಲನವನ್ನುಂಟು ಮಾಡುತ್ತಿದೆ. ಒಟ್ಟಾರೆ ಭಾರತೀಯ ರಂಗಭೂಮಿ ಕಾಣುತ್ತಿರುವ ಹೊಸತನಕ್ಕೆ ಇದು ಮುಖ್ಯವಾದ ಸಾಕ್ಷಿ. ಅತ್ಯಂತ ಕ್ರಿಯಾಶೀಲ ತುಡಿತದ ರಂಗಕರ್ಮಿ ಹಾಲ್ಕುರಿಕೆ ಶಿವಶಂಕರ (ನಿರ್ದೇಶಕ/ನಾಟಕಕಾರ) ಇತ್ತೀಚೆಗೆ "ಮಣೆಗಾರ" (ತುಂಬಾಡಿ ರಾಮಯ್ಯನವರ ಆತ್ಮಕಥೆ) ಎನ್ನುವ ದಲಿತ ಕಥಾನಕವೊಂದನ್ನು ರಂಗದ ಮೇಲೆ ಅನಾವರಣಗೊಳಿಸಿದರು. ಪ್ರಯೋಗದ ದೃಷ್ಟಿಯಿಂದ ಕೆಲವು ಕೊರತೆಗಳು, ದೋಷಗಳು ಇವೆ. ಅದು ಯಾವುದೇ ಪ್ರಯೋಗಕ್ಕೆ ಇರುವಂಥವೇ. ಆದರೆ ಸಮುದಾಯವೊಂದರ ಒಡಲಾಳದ ನೋವನ್ನು ರಂಗದ ಮೇಲೆ ಬಸಿದಿಟ್ಟಾಗ  ಬೆಚ್ಚಿ ಬೀಳುವಂತಾಯಿತು. ವಿಶೇಷವಾಗಿ ದಲಿತೇತರಲ್ಲಿ ಸಾಮಾಜಿಕ ಪ್ರಜ್ಞೆ, ಜವಾಬ್ದಾರಿಯನ್ನು ಬಡಿದೆಬ್ಬಿಸುವಂಥ ಕಥಾನಕವದು. "ಮಣೆಗಾರ" ಪ್ರೊಸಿನಿಯಂಗಿಂತ ಆಪ್ತರಂಗಭೂಮಿಗೆ ಸೂಕ್ತವಾದ ವಸ್ತು. ಪ್ರಯೋಗ ಒಟ್ಟಾರೆ ಮನುಷ್ಯ ಬದುಕಿನ ನಡುವಿರುವ ಗ್ರೇ ಏರಿಯಾವೊಂದರ ದರುಶನ ಮಾಡಿಸಿತು. ಮೇಲ್ವರ್ಗ ಸಹಮಾನವರನ್ನು ಅದು ಹೇಗೆ ಅಸ್ಪೃಶ್ಯರು ಎಂದು ದೂರಕ್ಕಿಟ್ಟಿತ್ತು, ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿತ್ತು ಎನ್ನುವುದು ಇದರ ಮೂಲ ಸಂಕಟ. ಇಡೀ ನಾಟಕದಲ್ಲಿ ಬದುಕಿಗಾಗೇ ಸಂಘರ್ಷವಿದೆ. ಆಹಾರಕ್ಕಾಗಿ ಹಾಹಾಕಾರವಿದೆ. socio-cultural  ನೆಲೆಯಲ್ಲಿ ದೊಡ್ಡ ಸಂಘರ್ಷವಿದೆ. ಇದು ರಾಜಕೀಯ ಆಯಾಮದಲ್ಲೂ ಬಹುಮುಖ್ಯವಾದ ಸಂಘರ್ಷವೇ. ಶಿಕ್ಷಣ ಮತ್ತು ಅದರ ಆಧಾರದಲ್ಲಿ ಹುಟ

"ಬದುಕು-ಬಯಲು" ನಾಟಕ ಮತ್ತು ಮಾನವೀಯ ನೆಲೆಯ ಹುಡುಕಾಟ

ಫ್ರಾನ್ಸ್ ನ ಬರಹಗಾರ ಅಲ್ಫ್ರೆಡ್ ಜೆರಿ ಬರೆದ 'ದಿ ಸೂಪರ್ ಮೇಲ್' ಎನ್ನುವ ಕಾದಂಬರಿಯ ಪ್ರೊಟಗಾನಿಸ್ಟ್ ಆ್ಯಂಡ್ರಿ ಮಾರ್ಕೆಲ್ ಒಬ್ಬ ಜಂಟಲ್ ಮನ್, ವಿಜ್ಞಾನಿ ಕೂಡ. ಅವನಿಗೆ ಮಾನವ ಸಾಮರ್ಥ್ಯಕ್ಕೆ ಮಿತಿ ಎಂಬುದೇ ಇಲ್ಲ ಎನ್ನುವುದರಲ್ಲಿ ಬಲವಾದ ನಂಬಿಕೆ. ಆತ ಉಗಿಬಂಡಿ ಜತೆಗೂ ಯಾವುದೇ ವಿಶ್ರಾಂತಿ ಮತ್ತು ತ್ರಾಸಿಲ್ಲದೇ ಕ್ರಮಿಸಿ  ರೇಸ್ ಗೆಲ್ಲಬಲ್ಲ (ಕಾದಂಬರಿಯಲ್ಲಿ ರೈಲು ಮತ್ತು ಸೈಕ್ಲಿಸ್ಟ್ ನಡುವೆ ಒಂದು ರೇಸ್ ನಡೆಯುತ್ತದೆ). ಒಂದೇ ಹೆಂಗಸಿನ ಜತೆ 24 ಗಂಟೆಗಳಲ್ಲಿ 82 ಬಾರಿ ಸಂಭೋಗ ನಡೆಸಬಲ್ಲ 'ಕಾಮಪಟುತ್ವ'ದ ಸಾಹಸಗಳನ್ನೂ ಮಾಡಬಲ್ಲ. ಇದನ್ನು ಪುರುಷಪರಾಕ್ರಮದ ನೆಲೆಯಲ್ಲಿ ನೋಡೋದಾ? ಇಲ್ಲಾ ನಿಸರ್ಗ ಸಹಜ ಸಾಧ್ಯತೆಯ ನೆಲೆಯಲ್ಲಿ ನೋಡುವುದಾ?... - ಇದು ಒಂದು ರೀತಿಯ ವಿಕ್ಷಿಪ್ತ ಮನೋಧರ್ಮದ, ಸೈನ್ಸ್ ಫಿಕ್ಷನ್ ಕಾದಂಬರಿಯ ಸಂಕ್ಷಿಪ್ತ ನೋಟ. ಅಲ್ಫ್ರೆಡ್ ಜೆರಿ ಉತ್ತಮ ನಾಟಕಕಾರನೂ ಹೌದು. ಆತನ 'ಉಬು ರೊಯ್' ಹೆಸರಾಂತ ನಾಟಕಗಳಲ್ಲೊಂದು.    * * * ಜೆರಿ ಬಗ್ಗೆ ಓದುತ್ತಿದ್ದ ಹೊತ್ತಲ್ಲಿ ಹಿಜಡಾವೊಬ್ಬರ ಆತ್ಮಕಥನ ಆಧರಿಸಿದ "ಬದುಕು-ಬಯಲು" ಎನ್ನುವ ನಾಟಕ ವೀಕ್ಷಣೆಗೆ ತಿಪಟೂರಿನ ರಂಗ ಗೆಳೆಯ ನೀನಾಸಂ ಚಂದ್ರು ಆಹ್ವಾನ ನೀಡಿದರು.  ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ ನೋಡಿದೆ. ಅದಕ್ಕೂ ಮುಂಚೆ ನಾಟಕದ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಸಿ.ಎಸ್. ದ್ವಾರಕಾನಾಥ್, ಗೌರಿ ಲಂಕೇಶ್ ಮತ್ತಿತರ ಚಿಂತಕರ ವಿ