ವಿಷಯಕ್ಕೆ ಹೋಗಿ

ಮೈಕಲ್ ಜಾಕಸನ್: ಕರಿಯ ಕುಣಿದ ದಮನಿತರ ಕಾವ್ಯ


ಶನಿವಾರದ ಸೂರ್ಯ ಮುಳುಗುತ್ತಿದ್ದ ಹೊತ್ತು
ನನ್ನ ಮಗುವಿನೊಂದಿಗೆ ಹೊರಟು ನಿಂತಿರುವೆ
ಹೊಸ ಸೂರ್ಯ ಮೂಡುವ ದಿಕ್ಕಿನೆಡೆಗೆ.
ಮಗು ಗಂಡೊ ಹೆಣ್ಣೊ?
ಯಾವುದಾದರೇನು ಸ್ವಾಮಿ, ಎಲ್ಲ ಒಂದೇ..
ಎರಡೂ ಅಂದುಕೊಳ್ಳಿ..
ನಾನು ಪವಾಡಗಳ ನಂಬುವೆ.
ಈ ರಾತ್ರಿಯೇ ಆ ಪವಾಡ ನಡೆದುಹೋಗಿದೆ.

ನೀವು ನನ್ನ ಕಂದನ ಬಗ್ಗೆ ಯೋಚಿಸುತ್ತೀರಿ ಎಂದಾದರೆ,
ನೀವು ಕರಿಯರೊ ಬಿಳಿಯರೊ ಎನ್ನುವುದು ನನಗೆ ಮುಖ್ಯವೇ ಅಲ್ಲ.
ನನ್ನ ಮಕ್ಕಳು ಶನಿವಾರದ ಸೂರ್ಯನ ಕುಂಡೆ ಮೇಲೆ ಬರೆ ಎಳೆದು
ನಾಳಿನ ಸೂರ್ಯನ ಹಣೆಯ ಮೇಲೆ ನನ್ನ ಸಂದೇಶ ಬರೀತಾರೆ.
ನಾನ್ಯಾರಿಗೂ ಕಮ್ಮಿ ಅಲ್ಲ ಎಂದು.

ಮತ್ತು ನಾನವರಿಗೆ ಹೇಳಿದ್ದೇನೆ, ಸಮಾನತೆಯ ಬಗ್ಗೆ.
ನೀವು ಒಪ್ಪುತ್ತೀರೊ, ಬಿಡುತ್ತೀರೋ ಸಮಾನತೆಯೊಂದೇ ಸತ್ಯ.
ನೀವು ನನ್ನ ಕಂದನ ಬಗ್ಗೆ ಯೋಚಿಸುತ್ತೀರಿ ಎಂದಾದರೆ,
ನೀವು ಕರಿಯರೊ ಬಿಳಿಯರೊ ಎನ್ನುವುದು ನನಗೆ ಮುಖ್ಯವೇ ಅಲ್ಲ.

ನಾನೀ ರಕ್ಕಸನ (ರೇಸಿಸಂ) ಜತೆ ಸೆಣಸಿ ಹೈರಾಣಾಗಿರುವೆ.
ಗುದಮುರಗಿ ಹಾಕುತ್ತ ದಣಿದಿರುವೆ, ಈ ಉಸಾಬರಿಯಿಂದ ಸುಸ್ತಾಗಿರುವೆ
ಉಪಟಳ ಹೆಚ್ಚಾದಾಗೆಲ್ಲ ಅದರ ಕುಂಡೆ ಮೇಲೆ ಒದ್ದಿರುವೆ
ಹೋರಾಟಕೆ ನಾನ್ಯಾರಿಗೂ ಅಂಜೆನು, ನಿಮ್ಮ ಶೈತಾನನ ಸಂತಾನಕೂ..

ಗುಂಪುಗಾರಿಕೆ, ಕ್ಲಬ್, ರಾಷ್ಟ್ರಗಳಿಗೇ ಎಲ್ಲಾ ರಕ್ಷಣೆ...
ಇಲ್ಲಿ ಕೇಳುವವರೇ ಇಲ್ಲ ಮನುಷ್ಯ ಕುಲದ ಬವಣೆ?
ಇದೆಲ್ಲ ಬೊಗಳೆ ವ್ಯವಹಾರ ಜಗದ ತುಂಬ. ಇದೆಲ್ಲ ಸುಮ್ಮನೇ ಯುದ್ಧ!
ಪರ ವಿರೋಧದ ಕಥೆ ಕೇಳಿ ಏನಾಗಬೇಕು?
ಸತ್ಯ ತಿಳಕೊಳ್ಳಿ...!
ಇದು ಬಣ್ಣದ ಯುದ್ಧವಲ್ಲ... ಬರಿಯ ಸಾಮ್ರಾಜ್ಯ ವಿಸ್ತರಣೆಯ ಕಸರತ್ತು.
ಇಲ್ಲಿ ಸ್ಥಳ ಮುಖ್ಯ ಮತ್ತು ಮುಖಗಳೂ...

ರಕುತದ ಹನಿ ಹುಟ್ಟುವ ಜಾಗದಿಂದಲೇ ನಿಮ್ಮದೇ ವಿಶ್ವ ತೆರಕೊಂಡಿದೆ,
ಅದರ ಹರವು ಈ ವಿಶಾಲ ಆಕಾಶ!
ಬಿಳಿ ಬಣ್ಣ ಮಿಂಚು ಕಳಕೊಳ್ಳುವ ಸತ್ಯವ ನಾ ಕಂಡೆ.
ಈ ಬಣ್ಣದ ಮೋಹಕ್ಕಾಗೇ ನಾ ಬದುಕ ವ್ಯರ್ಥಮಾಡಿಕೊಳ್ಳಲಾರೆ.

ನನ್ನ ಕಣ್ಣಿಗೆ ಮಣ್ಣೆರಚುವದ ಕಂಡಿರುವೆ,
ಹೇಳದಿರಷ್ಟೇ ನಿನ್ನ ಮಾತಿಗೆ ನಮ್ಮ ಸಹಮತ ಎಂದು..
ಕೇವಲ ಕನಿಕರದ ಮತ್ತು ಆತ್ಮಾನುಕಂಪದ ಬರಿಯ ಮಾತಿಗೆ ನಾ ಬೆಲೆ ಕೊಡಲಾರೆ.
ನೀವು ನನ್ನ ಕಂದನ ಬಗ್ಗೆ ಯೋಚಿಸುತ್ತೀರಿ ಎಂದಾದರೆ,
ನೀವು ಕರಿಯರೊ ಬಿಳಿಯರೊ ಎನ್ನುವುದು ನನಗೆ ಮುಖ್ಯವೇ ಅಲ್ಲ.
ನೀವು, ನಾನೇ ನಿನ್ನ ಕಂದ ಎಂದುಕೊಳ್ಳುವಿರಾದರೆ,
 ನೀವು ಕರಿಯರೊ ಬಿಳಿಯರೊ ಎನ್ನುವುದು ನನಗೆ ಮುಖ್ಯವೇ ಅಲ್ಲ.
ನೀವು ನನ್ನ ಬಂಧು ಎಂದುಕೊಳ್ಳುವಿರಾದರೆ,
ನೀವು ಕರಿಯರೊ ಬಿಳಿಯರೊ ಎನ್ನುವುದು ನನಗೆ ಮುಖ್ಯವೇ ಅಲ್ಲ.

ಈ ಕಪ್ಪು, ಬಿಳುಪು... ಈ ಒಣಪು..
ಈ ಬಿಳುಪು, ಕಪ್ಪು... ಈ ಒಣಪು..
ಕಷ್ಟವೇ ಬಿಳುಪಾಗೋದು?  ...


 ಹೀಗೆ ಕುಣಿತದ ಜತೆ ಬದುಕಿನ ಸಹಜ ಹಾಡು ಹೇಳುವ ಮೈಕಲ್ ಜಾಕ್ ಸನ್, ಮನುಷ್ಯ ಚಹರೆಗಳನ್ನು ತೋರಿಸುತ್ತ ಅದರ ತೊಗಲಿನ ಬಣ್ಣ ವೈವಿಧ್ಯ ಹೇಳುತ್ತ... ಬಣ್ಣದ ಮೋಹ ಪದರು ಕಳಚಿಹಾಕುತ್ತಾನೆ. ಕಡೆಗೆ ಮನುಷ್ಯನ ಅಸಲಿ ಗುರುತು, ಅವನ ಜೀವಂತಿಕೆ ಮತ್ತು ಜೀವಕಳೆ ಎನ್ನುತ್ತಾನೆ. ಈ ಬಣ್ಣದ ಮೇಲ್ಪದರ ಕಳಚಿ ನೋಡಿ ಅಲ್ಲಿ ಬುದ್ಧನ ನಗು, ಪೈಗಂಬರ ಮೊಹಮ್ಮದ್ ನಗು, ಜೀಸಸ್ ಗಾಡ್ ನಗು... ಮತ್ತು ನಿಮ್ಮ ನಗುವೂ ಮಿಂಚುತ್ತದೆ ಎನ್ನುವ ಆಶಯ ಹೇಳುತ್ತಾನೆ.
ಈ ಹಾಡಿನ ತುಂಬ ಕರಿಯ-ಬಿಳಿಯ ಎನ್ನುವ ವರ್ಣಭೇದ ನೀತಿ ವಿರೋಧಿಸುವ ಮೈಕಲ್ ಜಾಕ್ ಸನ್ ಪೊಯಟ್ರಿ ಎನ್ನುವ ಮೇಲ್ವರ್ಗದ ಬೌದ್ಧಿಕ ಧಿಮಾಕಿನ ಹಂಗು ತೊರೆದು, ಛಂದಸ್ಸು, ಸಂಧಿ ಸಮಾಸದ, ಲಘು, ಗುರು ಮಾತ್ರಯಗಳ ಸೋಗಲಾಡಿತನ ಕಳಚಿ ಹಾಕುತ್ತಾನೆ. ಭಾವನೆಗಳನ್ನೇ ಪ್ರಧಾನವಾಗಿಟ್ಟುಕೊಂಡು ಕಾವ್ಯ ನಾಚುವಂಥ ಹೊಸ ಅಭಿವ್ಯಕ್ತಿ ಪಥ ತೋರಿಸುತ್ತಾನೆ. ಎಲ್ಲವೂ ಸಹಜ, ಸರಳವಾಗಿರಬೇಕು.  ಅದುವೇ ಸತ್ಯ, ಸುಂದರ ಮತ್ತು ಶ್ರೇಷ್ಠ ಎಂದು ಹೇಳಲು ಯತ್ನಿಸುತ್ತಾನೆ. ಇದು ಅವನ ಹಾಡಿನ ಯಥಾವತ್  ಅನುವಾದ ಎಂದೇನೂ ಭಾವಿಸಬೇಕಿಲ್ಲ.  ಮೈಕಲ್ ಜಾಕ್ ಸನ್ ನನಗೆ ಹೀಗೆ ಅರ್ಥವಾದ ಒಂದು ಪರಿಯನ್ನು ನಾನಿಲ್ಲಿ ಹಿಡಿದಿಡಲು ಯತ್ನಿಸಿದೆನಷ್ಟೇ.
ವರ್ಷದ (2009) ಹಿಂದೆ ಅಗಲಿದ ಆ ಮಹಾನ್ ಚೇತನಕ್ಕೆ ನನ್ನ ನಮನ. ದಿಲ್ ಪೂರ್ವಕ ಸಲಾಂ.


ಕರಿಯನ ಹಾಡು, ಕುಣಿತ, ಕಾವ್ಯ ಮತ್ತು ಹೋರಾಟ

 ಪ್ರತಿ ಹಾಡುಗಳ ದೃಶ್ಯ ಸಂಯೋಜನೆಗಳು ಅವನ ಅದ್ಭುತ ಕ್ರಾಂತಿ ಕಾವ್ಯದ ಶಾರ್ಪನೆಸ್ ಹೊಂದಿರುವಂಥವು. ಒಂದು ಹಾಡಿನಲ್ಲಿ ಆತ ಆಫ್ರಿಕಾದ ಕಾಡಿನಿಂದ ಹಿಡಿದು, ಲಂಡನ್, ಪ್ಯಾರಿಸ್ ಮತ್ತು ಅಮೆರಿಕದ ಸ್ಟ್ಯಾಚ್ಯು ಆಫ್ ಲಿಬರ್ಟಿವರೆಗೂ ಮನುಷ್ಯ ಚಹರೆಗಳ ಅಸಲಿಯತ್ತು ಹುಡುಕಲೆತ್ನಿಸುತ್ತಾನೆ. ಆ ಹಾಡಿನ ದೃಶ್ಯವೊಂದರಲ್ಲಿ  ಸ್ಟ್ಯಾಚ್ಯು ಆಫ್ ಲಿಬರ್ಟಿ ಸುತ್ತ ಕ್ಯಾಮೆರಾ ಮೂವ್ ಆಗಿದೆ. ಅದರ ಕೆಳಗೆಲ್ಲ ಇಡೀ ಅಮೆರಿಕ ಕಾಣಿಸುತ್ತದೆ. ಅಂದರೆ, ಪ್ರತಿಮೆಯ ನೆರಳು ಬಿದ್ದಲ್ಲೆಲ್ಲ ಬಿಳಿಯರ ಕಪ್ಪು ಲೋಕ ತೋರಿಸುವುದು ಅವನ ಉದ್ದೇಶ.
 ಏಯ್ ಪ್ರತಿಮೆಯೇ ನೋಡು! ನಿನ್ನ ನೆರಳು ಬಿದ್ದಲ್ಲೆಲ್ಲ ಬಿಳಿಯರ ಕಪ್ಪು ಪ್ರಪಂಚ ಹೇಗೆ ಕಾಣಿಸುತ್ತಿದೆ! ಕಳ್ಳರು, ದಗಾಕೋರರು, ಯುದ್ಧಪಿಪಾಸುಗಳೆಲ್ಲ... ನಿನ್ನ ನೆರಳಲ್ಲೇ ಹೇಗೆ ಅವಿತುಕೊಂಡಿದ್ದಾರೆ ಮತ್ತು ಅವಿತುಕೊಳ್ಳತ್ತಲೇ ಇರುತ್ತಾರೆ!... ನೀನು ಇವರನ್ನೆಲ್ಲ ಬಚ್ಚಿಟ್ಟುಕೊಂಡು ಇಡೀ ಜಗತ್ತಿಗೆ ಲಿಬರ್ಟಿ ಬಗ್ಗೆ ಉಪದೇಶ ಬೇರೆ ಹೇಳುತ್ತಿದ್ದಿಯಾ?... ಶುದ್ಧ ಬೊಸುಡಿ ನೀನು... ಎನ್ನುವಂತಿದೆ ಆ ದೃಶ್ಯದ ಶಾರ್ಪನೆಸ್.

ಜಸ್ಟ್ ಬೀಟ್ ಇಟ್...
 ಈ ಹಾಡಿನ ಆಲ್ಬಂ ಬಂದಾಗ ಮೈಕಲ್ ಆಗಿನ್ನೂ ಕರಿಯನಾಗಿದ್ದ. ಹೀಗೆ ಬಿಳಿಯಾಗಿರಲಿಲ್ಲ (ಮೈಬಣ್ಣ ಕುರಿತಷ್ಟೇ). ಕರಿಯರು ಬಿಳಿಯರ ನಡುವಿನ ಘರ್ಷಣೆಗಳನ್ನೇ ಮೂಲ ದ್ರವ್ಯವಾಗಿಸಿಕೊಂಡಿದ್ದ ಆತನ ಜಸ್ಟ್ ಬೀಟ್ ಇಟ್... ಹಾಡು ತುಂಬ ಹಿಂದಿನದು. ಇದು ಕರಿಯರಲ್ಲಿ ಮತ್ತು ಒಟ್ಟಾರೆಯಾಗಿ ದಮನಿತರಲ್ಲಿ ಹೋರಾಟದ ಕೆಚ್ಚು ಹೆಚ್ಚಿಸಿತ್ತು. ಅವರೂ ತಮ್ಮ ದನಿ ಜೋರಾಗೇ ಎತ್ತುವಂತೆ ಪ್ರೇರೇಪಿಸಿತ್ತು. ಅಮೆರಿಕದಲ್ಲಿ ಕರಿಯರೆಲ್ಲ ಬೀದಿಯಲ್ಲಿ ನಿಂತು ಅತ್ಯಂತ ದಿಟ್ಟವಾಗಿ ಹೀಗೆ ತಮ್ಮ ಬದುಕಿನ ಹಕ್ಕುಗಳನ್ನು ಕೇಳುವಂತಾಗಿದ್ದು ಇಂಥ ಸಾಂಸ್ಕೃತಿಕ ಯತ್ನವೊಂದರ ಮೂಲಕ ಎನ್ನುವುದು ಮುಖ್ಯ.

ಡೋಂಟ್ ಸ್ಟಾಪ್ ಟಿಲ್ ಯು ಗೆಟ್ ಇನಫ್...
  ಅವನ ಈ ಸಂದೇಶ ಕರಿಯರ ಕೆಚ್ಚಿಗೆ ಹೋರಾಟದ ಸ್ಪಷ್ಟತೆಯನ್ನು ತುಂಬಿದ್ದು. ಹೋರಾಟ ಎನ್ನುವುದು ಬರಿಯ ಫ್ಯಾಷನ್ ಅಲ್ಲ ಅಥವಾ ಬರಿಯ ಆಕ್ರೋಶ ವ್ಯಕ್ತಪಡಿಸುವ ವೇದಿಕೆ ಅಷ್ಟೇ ಆಗಬಾರದು. ಗುರಿ ಮುಟ್ಟುವತನಕ ಸಂಘರ್ಷ ಅವಿರತವಾಗಿರಲಿ. ಗೆಲ್ಲುವತನಕ ವಿರಮಿಸಕೂಡದು ಎನ್ನುವ ಖಚಿತ ನಿಲುವುಗಳನ್ನು ಹೋರಾಟಗಾರರಲ್ಲಿ ತುಂಬುವಂಥದ್ದಾಗಿತ್ತು  ಹಾಡಿನ ಒಟ್ಟಾರೆ ಆಶಯ. ಬದುಕಿನ ಪಾಲು ಪಡಕೊಳ್ಳುವುದು ನಿನ್ನ ಹಕ್ಕು, ಕರ್ತವ್ಯ. ಅದಕ್ಕಾಗಿ ನೀನೇ ಹೋರಾಡಬೇಕು. ಹೋರಾಟ ಎಲ್ಲಿಯತನಕ...? ಡೋಂಟ್ ಸ್ಟಾಪ್ ಟಿಲ್ ಯು ಗೆಟ್ ಇನಫ್... ಎಂದು ಪ್ರತಿ ಕರಿಯನನ್ನು ಹುರಿದುಂಬಿಸುವಂತಿದೆ ಈ ಹಾಡು.

ದೇ ಡೋಂಟ್ ಕೇರ್ ಅಬೌಟ್ ಅಸ್...

 ಹಾಡಿನಲ್ಲಿ ಇಡೀ ಜಗದ ಕರಿಯರು ಮತ್ತು ದಮನಿತರ ಎದೆಯಾಳದ ನೋವನ್ನು ಜಾಕ್ ಸನ್ ತೋಡಿಕೊಳ್ಳುತ್ತಾನೆ. ನೀವು ನನ್ನ ಏನಾದರೂ ಅಂದುಕೊಳ್ಳಿ, ನನ್ನ ಛೇಡಿಸಿ, ಹೀಯಾಳಿಸಿ, ಜಾಡಿಸಿ ಒದೆಯಿರಿ ಬೇಕಿದ್ದರೆ, ಆದರೆ, ನಾನು ಹೇಳುವುದಿಷ್ಟೇ ಇವರು (ಬಿಳಿಯರು) ನಮ್ಮ ನ್ನು ಕಡೆಗಣಿಸುತ್ತಾರೋ... ಎನ್ನುವುದು ಹಾಡಿನ ಒಡಲುರಿ.
 ಹೀಗೆ ಬಿಳಿಯರ ವಿರುದ್ಧ ಆತನದು ಅತ್ಯಂತ ದಿಟ್ಟ ನಿಲುವು. ಅದರಲ್ಲಿ ಅತ್ಯಂತ ಸ್ಪಷ್ಟತೆ ಇತ್ತು ಎನ್ನುವುದು ನಿರ್ವಿವಾದ....
ಪಕ್ಕಾ ಕರಿಯನಾಗೇ ಹುಟ್ಟಿದ ಜಾಕ್ ಸನ್, ತನ್ನ ಇಡೀ ದೇಹದ ತೊಗಲನ್ನು ಬಿಳಿಯಾಗಿಸಿಕೊಂಡ. ಆ ಮೂಲಕ ಆತ ನಿರೂಪಿಸಲೆತ್ನಿಸಿದ್ದು ಬಹುಮುಖ್ಯವಾದ ವಿಚಾರವನ್ನೇ. ...ಬಿಳಿ ಗೂಬೆಗಳಾ ನಾನು ಮನಸು ಮಾಡಿದರೆ ಅಥವಾ ಕರಿಯನೊಬ್ಬ ಮನಸು ಮಾಡಿದರೆ ಇಡೀ ಮೈಯನ್ನೇ ಬಿಳುಪಾಗಿಸಿಕೊಳ್ಳಬಹುದು, ಆದರೆ, ನನ್ನ ಮತ್ತು ನನ್ನವರ ಸಂಗೀತ, ನೃತ್ಯ ಕಲೆಯನ್ನು ಮೀರಿಸುವಂಥ ಪ್ರತಿಭೆ ನಿಮಗೆ ಸಾಧ್ಯವಾ? ಅಷ್ಟು ಸುಲಭವಾಗಿ ನೀವು ನಾನಾಗಲು ಸಾಧ್ಯವೇ? ತಾಕತ್ತಿದ್ದರೆ ಸಾಧಿಸಿ ತೋರಿಸಿ!.. ಎನ್ನುವ ಸವಾಲೂ ಅದಾಗಿತ್ತು.
ನೆವರ್ ಲ್ಯಾಂಡ್ ಎನ್ನುವ ಬೃಹತ್ ಸೌಧ ಕಟ್ಟುವ ಅವನ ಸಾಧನೆಯ ಹಿಂದೆ ಕೂಡ ಒಂದು ಮಹತ್ವದ ಸಂದೇಶವಿತ್ತು. ಕರಿಯರು, ದಮನಿತರು ಮನಸು ಮಾಡಿದರೆ, ತಮ್ಮದೇ ಸಾಮ್ರಾಜ್ಯ ಕಟ್ಟಬಹುದು. ನಾನು ಅದನ್ನು ಸಾಧ್ಯವಾಗಿಸಿದೆ. ಇದು ನಾಳಿನ ಒಬಾಮಾಗಳು ಇಡೀ ಜಗತ್ತಿನಲ್ಲಿ ತಮ್ಮ ಸಾಮ್ರಾಜ್ಯ ಕಟ್ಟುವುದಕ್ಕೆ ಪ್ರೇರಣೆಯಾಗಲಿ, ಅವರಲ್ಲೂ ಅಂಥದೊಂದು ಆತ್ಮವಿಶ್ವಾಸ ಮೂಡಲಿ ಎನ್ನುವುದಾಗಿತ್ತು.

ರಿಮೆಂಬರ್ ದಿ ಟೈಂ (1992)
 ಒಂದು ಮ್ಯಾಜಿಕ್ ನೊಂದಿಗೆ ಅರಮನೆ ಪ್ರವೇಶಿಸುವ ಜಾಕ್ ಸನ್ ರಾಜನನ್ನು ಚಕಿತಗೊಳಿಸುತ್ತಾನೆ. ಹಾಡು, ಕುಣಿತ ಆರಂಭಿಸುತ್ತಾನೆ. ಹಾಗೆ ಹಾಡುತ್ತ ರಾಣಿಯ ಅಂತರಂಗದ ರಾಗ ಹಾಡಿಬಿಡುತ್ತಾನೆ. ಅವಳ ಬಯಕೆಗಳನ್ನೆಲ್ಲ ಕುಣಿಯುತ್ತಾನೆ! ರಾಜನ ಕಟ್ಟಾಜ್ಞೆ, ಬಲವಂತದ ಪ್ರಣಯದಲ್ಲಿ ಒದ್ದಾಡಿದಂತಿದ್ದ ರಾಣಿ ಈ ಮಾಯಾವಿಯ ಹಾಗೆ ಸ್ವಚ್ಛಂದವಾಗಿ, ಕಲಾತ್ಮಕವಾಗಿ ಬದುಕಬೇಕಲ್ಲವೇ ಎಂದುಕೊಳ್ಳುತ್ತಾಳೆ. ಮೆಲ್ಲಗೆ ಮನಸೋಲುತ್ತಾಳೆ. ರಾಣಿಯ ಮನದಿಂಗಿತವೆಲ್ಲ ಆತನ ಹೆಜ್ಜೆಯ ವೇಗದಲ್ಲಿ ಹರಿದಾಡುತ್ತದೆ.. ತನ್ನ ರಾಣಿ ಆತನಿಗೆ ಮನಸೋತಿದ್ದು ರಾಜನಿಗೂ ಸೆನ್ಸ್ ಆಗುತ್ತದೆ. ಭಟರನ್ನು ಕರೆದು ಆತನನ್ನು ಕೊಲ್ಲಲು ಆಜ್ಞಾಪಿಸುತ್ತಾನೆ... ಅದೇ ಮ್ಯಾಜಿಕ್ ನಿಂದ ಜಾಕ್ ಸನ್ ಪಾರಾಗುತ್ತಾನೆ.
ಅರಸೊತ್ತಿಗೆಯನ್ನು ಗೇಲಿ ಮಾಡುವ ಈ ಹಾಡು ಮಾಸ್ಟರ್ -ಸ್ಲೇವರ್ ವ್ಯವಸ್ಥೆಯನ್ನೇ ನೇರ ತಿವಿಯುತ್ತದೆ. ಇಂಥ ಬಂಧನಗಳಲ್ಲಿ ಹೆಣ್ಣು ತನ್ನಂತರಂಗವನ್ನು ಅದು ಹೇಗೆ ಅದುಮಿಟ್ಟುಕೊಳ್ಳುತ್ತಾಳೆ, ಸ್ವಚ್ಛ ಗಾಳಿ, ಹೊರಗಿನ ಹಸಿರಿನಂಥ ಸಹಜ ಬದುಕಿಗೆ ಹೇಗೆ ಹಾತೊರೆಯುತ್ತಾಳೆ ಎನ್ನುವುದನ್ನು ಹೇಳುತ್ತದೆ ಈ ಹಾಡು. ಅಂದರೆ ಬಂಧನದಲ್ಲಿ, ಕಂಫರ್ಟ್ ಝೋನ್ ಗಳಲ್ಲಷ್ಟೇ ಬದುಕಿನ ಅಸಲಿ ಖುಷಿ ಇಲ್ಲ, ಅದನ್ನು ಬಲವಂತದಿಂದ, ದರ್ಪದಿಂದ ಹಿಡಿದಿಟ್ಟುಕೊಳ್ಳಲು ಸಾಧ್ಯವಿಲ್ಲ. ಹಾಗೆ ಮಾಡೋದು  ಬಿಳಿಯರ ಸೋಗಲಾಡಿತನದ ವ್ಯವಸ್ಥೆಯಷ್ಟೇ ಎನ್ನುವುದು ಈ ದೃಶ್ಯ ಸಂಯೋಜನೆಯ ಒಳದನಿ.

 ಅವನ ಹಾಡು, ಕುಣಿತದ ಎಲ್ಲ ಭಾವನೆಗಳು ಈ ಜಗತ್ತಿನ ವರ್ಣಭೇದ ನೀತಿ ಹೋಗಲಾಡಿಸುವುದನ್ನು ಒತ್ತಿ ಹೇಳುತ್ತಿತ್ತು. ಅದಕ್ಕೆ ಚಳವಳಿ, ಹೋರಾಟದ ಕೆಚ್ಚು ಬೇಕು ಎಂದು ಹೇಳುತ್ತಿತ್ತು. ಆತ ಹಾಕುವ ಪ್ರತಿ ಹೆಜ್ಜೆಗಳ ಫೋರ್ಸ್ ಹೇಗಿತ್ತೆಂದರೆ, ಎದುರಿನ ಜೊಳ್ಳು ಹಾರಿ ಹೋಗುವಂತಿತ್ತು. ಹಾಗೆ ಕರಿಯರ ಹೋರಾಟದ ಫೊರ್ಸ್ ಗೆ ಬಿಳಿಯರ ಸೌಧಗಳೆಲ್ಲ ಧೂಳಿಪಟವಾಗಬೇಕು ಎಂದು ಹೇಳುತ್ತಿತ್ತು. ಕರಿಯರು ಮತ್ತು ದಮನಿತರೆಲ್ಲ ಮನುಜಮತದ ಗಟ್ಟಿ ಕಾಳುಗಳಾಗಬೇಕು, ಬಿಳಿಯರ, ಉಳ್ಳವರ ಅಟ್ಟಹಾಸಕ್ಕೆ ತರೆಗೆಲೆಗಳಂತೆ ಆಗದಿರಿ ಎಂದು ಹೇಳುತ್ತಿತ್ತು.
 ಒಂದು ಹಾಡಿನಲ್ಲಿ ಬೆಟ್ಟವಾಗಿ ಭಯಹುಟ್ಟಿಸಿ, ಕಾಡೆಮ್ಮೆಯಂತೆ ಹೂಂಕರಿಸಿ ಮುನ್ನುಗ್ಗಿ ಹಿಂಡು ಹಿಂಡಾಗಿ... ಹೆಬ್ಬುಲಿಯ ತೊರಡು ಬೀಜಗಳು ಉದುರುವಂತೆ ಕೊಂಬುಗಳ ಜಾಡಿಸಿ ಬೆದರಿಸಿ, ಹಿಮ್ಮೆಟ್ಟಿಸಿ... ಎಂದೆಲ್ಲ ಕ್ರಾಂತಿಕಾರಿಯಾಗಿ ಜಾಕ್ ಸನ್ ಸಿಡಿಯುತ್ತಾನೆ. ಮಾರ್ಟಿನ್ ಲೂಥರ್ ಕಿಂಗ್ ಮಾಡಿದ ಕರಿಯರ ಪರ ದನಿಗೂ ಇದಕ್ಕೂ ಅಂಥ ವ್ಯತ್ಯಾಸವೇನಿಲ್ಲ. ಹಾಗೆ ನೋಡಿದರೆ ಮಾರ್ಟಿನ್ ಲೂಥರ್ ಕಿಂಗ್ ಗೆ ಪರೋಕ್ಷವಾಗಿ ಚರ್ಚ್ ಬೆಂಬಲವಾದರೂ ಇತ್ತು. ಕ್ರೈಸ್ತ ಧರ್ಮ ತನ್ನ ಲಾಭಕ್ಕಾಗಿ ಕರಿಯರ ಬಗ್ಗೆ ಕೊಂಚ ಮೃದು ಧೋರಣೆ ತಳೆದಿತ್ತು ಅನಿಸುತ್ತಿತ್ತು. ಆನಂತರದ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕರಿಯರ ಹೋರಾಟಕ್ಕೆ ಮಾರ್ಟಿನ್ ಲೂಥರ್ ಕಿಂಗ್ ಪ್ರೇರಣೆಯಿಂದ ಬೇರೆಯದೇ ಅಗ್ರೆಸಿವ್ ನೆಸ್ ಬಂದಿರಬೇಕು... ಅದು ಬೇರೆ ವಿಚಾರ.
 ಜಾಕ್ ಸನ್ ಮಾತ್ರ ಸಾರಿದ್ದು ಸಾಮಾಜಿಕ ಮತ್ತು ಸಾಂಸ್ಕೃತಿಕ ಯುದ್ಧ. ಅದು ರಾಜಕೀಯ ಯುದ್ಧಕ್ಕೂ ಶಕ್ತಿಯುತ ಆಗಿರುವಂಥದು. ಅದಕ್ಕಾಗಿ ಎಷ್ಟೋ ಸಾರಿ ಆತ ಚರ್ಚ್  ಎದುರು ಹಾಕಿಕೊಂಡಿದ್ದಿದೆ. ಒಬ್ಬ ಕರಿಯ ಬರಾಕ್ ಒಬಾಮಾ ಅಮೆರಿಕದ ಅಧ್ಯಕ್ಷ ಗಾದಿಗೇರುವುದು ಎಂದರೆ ತಮಾಷೆನಾ? ಅದರ ಹಿಂದೆ ಇಂಥ ಹಲವಾರು ಸಾಂಸ್ಕೃತಿಕ ಸಂಘರ್ಷಗಳ. ಹೋರಾಟಗಳ ಶ್ರಮವಿದೆ, ಬೆವರಿದೆ ಎನ್ನುವುದನ್ನು ಗಮನಿಸಬೇಕು. ಮತ್ತು ಅದನ್ನು ಪರಿಗಣಿಸಿಯೇ ಬರಾಕ್ ಒಬಾಮಾ ಸಾಧನೆ ನೋಡಬೇಕು.
 ಆತ ಹೆಚ್ಚಾಗಿ ಬಳಸುತ್ತಿದ್ದ ಕೆಂಪು ಜಾಕೆಟ್, ಕೆಂಪು ಅಂಗಿ ಅವನ ಕಮ್ಯುನಿಸಂ ಸಿದ್ಧಾಂತವನ್ನು ಮತ್ತು ಕ್ರಾಂತಿಕಾರಿ ಮನೋಧರ್ಮವನ್ನು ಹೇಳುತ್ತಿತ್ತು.  ಆತನ ದನಿ, ಮೈಕಟ್ಟು, ಉದ್ದ ಕೂದಲು ಇವೆಲ್ಲದರಲ್ಲಿ ಫೆಮಿನೈನ್ ಎಲಿಮೆಂಟ್ ಇತ್ತು. ಆತ ಒಬ್ಬ ಗಂಡಸು. ಆದರೂ ಇದೆಲ್ಲ ಫೆಮಿನೈನ್ ಕ್ಯಾರೆಕ್ಟರ್ ಅನ್ನು ತನ್ನೊಳಕ್ಕೆ ಪ್ರಜ್ಞಾಪೂರ್ವಕವಾಗೇ ಬಿಟ್ಟುಕೊಂಡಿದ್ದ. ಆ ಮೂಲಕ ಗಂಡು-ಹೆಣ್ಣು ಭೇದ, ಭಾವವನ್ನೆಲ್ಲ ಮೀರಿ ನಿಂತಿದ್ದ. ಅದೆಲ್ಲ ನಾವು ಮಾಡಿಕೊಂಡ ಪ್ರತ್ಯೇಕತೆ. ದೇವರ ಮುಂದೆ ನಾವೆಲ್ಲ ಗಂಡು ಅಥವಾ ಹೆಣ್ಣು ಯಾವುದೂ ಅಲ್ಲ. ಒಂದು ಮನುಷ್ಯ ಜೀವ ಅಷ್ಟೇ. ಅವನ ಮುಂದೆ ನಾವೆಲ್ಲ ನಿರ್ಲಿಂಗಿಗಳು ಎನ್ನುವ ನಂಬಿಕೆಯ ಅಕ್ಷರಶಃ ಪ್ರತಿರೂಪವಾಗಿದ್ದ. ಅವನ ಹಾಗೆ ಸಿಡಿಯಲು ಮತ್ತು ಬದ್ಧತೆ ಹೊಂದಲು ಎದೆಗಾರಿಕೆ ಬೇಕು. ಅಂಥ ಎದೆಗಾರಿಕೆಯ ಒಬ್ಬನೇ ಒಬ್ಬ ಗಂಡಸು ಈಗೆಲ್ಲಿ?

'ಹೀಲ್ ದಿ ವರ್ಲ್ಡ್'
 ಮೈಕಲ್ ನ ಅಗ್ರೆಸಿವ್ ನೆಸ್ ಯಾವ ಮಟ್ಟದಲ್ಲಿತ್ತು ಮತ್ತು ಆತ ಇಡೀ ಜಗತ್ತಿಗೆ ಸೋಸಿಯೋ-ಕಲ್ಚರಲ್ ನೆಲೆಯಲ್ಲಿ ಎಂಥ ಪರಿಹಾರ ಹುಡುಕ ಹೊರಟಿದ್ದ ಎನ್ನುವುದಕ್ಕೆ  'ಹೀಲ್ ದಿ ವರ್ಲ್ಡ್' ಒಂದು ಬಹುಮುಖ್ಯ ಉದಾಹರಣೆ.
ಆಗಷ್ಟೇ ಕಣ್ಣು ಬಿಟ್ಟ ಮಗು, ಭವಿಷ್ಯ ಅವನ ಕದ ತಟ್ಟುವ ಹೊತ್ತು... ಅಲ್ಲೊಂದು ಯುದ್ಧ ಭೂಮಿ, ತೋಪು, ಬಂದೂಕು, ಟ್ಯಾಂಕರ್ ಗಳ ಆರ್ಭಟ, ದೃಶ್ಯದ ತುಂಬ ಹಿನ್ನೆಲೆಯಲ್ಲಿ ಕ್ರಿಸ್ತನ ಶಿಲುಬೆ ಹೊತ್ತಿ ಉರಿಯುತ್ತಿರುತ್ತದೆ. ಯುದ್ಧಪಿಪಾಸುಗಳ ಧರ್ಮಾಂಧತೆಗೆ ಅಲ್ಲಿ ಕಪ್ಪು ಜನರ ನಾಡಿನಲ್ಲಿ ನೆತ್ತರು, ವಿಯೆಟ್ನಾಂನಿಂದ ಹಿಡಿದು ಮಧ್ಯಪ್ರಾಚ್ಯ ರಾಷ್ಟ್ರಗಳವರೆಗೆ ನೆತ್ತರದೋಕುಳಿ ...
 ಇದೆಲ್ಲ ಇಟ್ಟುಕೊಂಡು ಅವನು ವಿಶ್ವಶಾಂತಿಯ ಸಂದೇಶ ಕೊಡುತ್ತಾನೆ- ಈ ಎಲ್ಲದರ ಹಂಗು ತೊರೆದು ಬದುಕಿ, ಹೊಸ ಮಾನವರಾಗಿ... ಎಂದು. ದೃಶ್ಯಗಳ ಮೂಲಕವೂ ಅದೆಷ್ಟು ಸೊಗಸಾಗಿ ಹೇಳಿದ್ದಾನೆ!
 ಹಾಡಿನಲ್ಲಿ ಕರಿಯರ ಜತೆಯಲ್ಲಿ ಬಿಳಿಯರು ಮತ್ತು ಬಿಳಿಯರ ಜತೆಯಲ್ಲಿ ಕರಿಯರ ಮುದ್ದು ಮಕ್ಕಳು ಯುದ್ಧಭೂಮಿಯಲ್ಲಿ ಫುಟ್ಬಾಲ್ ಆಡುತ್ತಿರುತ್ತಾರೆ! ಮಕ್ಕಳು ಫುಟ್ಬಾಲ್ ಅನ್ನು ಕಾಲಿನಿಂದ ಮನಬಂದಂತೆ ಒದೆಯುವಂತೆ ಮತ್ತೊಂದೆಡೆ ಯುದ್ಧಕೋರರು ಇಡೀ ಜಗತ್ತನ್ನೇ ಫುಟ್ಬಾಲ್ ಥರ ಬಳಸಲು ಹವಣಿಸುತ್ತಿರುತ್ತಾರೆ. ಮಕ್ಕಳು ಚೆಂಡು ಎಸೆದಂತೆ ಯೋಧರು ಬಾಂಬ್ ಎಸೆಯುತ್ತಿರುತ್ತಾರೆ. ಮಕ್ಕಳು ಆಡುತ್ತ ಈ ಯುದ್ಧ ಭೂಮಿಗೇ ಪ್ರವೇಶಿಸುತ್ತಾರೆ. ಯೋಧರು ಕಕ್ಕಾಬಿಕ್ಕಿ! ಈ ಮಕ್ಕಳ ಧೈರ್ಯ ಮತ್ತು ಯಾವುದಕ್ಕೂ ಎದೆಗುಂದದ ಮುಗ್ಧತೆಗೆ ಅವಕ್ಕಾಗುತ್ತಾರೆ. ಒಂದು ಮಗು ಯುದ್ಧನಿರತ ಯೋಧನ ಕೈಗೆ ಗುಲಾಬಿ ಹೂವನ್ನಿಡುತ್ತ, ಮನುಷ್ಯನ ಕೈಯಲ್ಲಿ ಅರಳುವ ಹೂವಿರಬೇಕು, ಕೊಲ್ಲುವ ಬಂದೂಕಲ್ಲ... (ಬಂದೂಕಿನ ನಳಿಕೆಯಲ್ಲಿ ಗುಬ್ಬಿ ಗೂಡು ಕಟ್ಟಲಿ.. ಎನ್ನುವ ಕನ್ನಡದ ಮಹತ್ವದ ಕವಿ, ಚಿಂತಕ ರಂಜಾನ್ ದರ್ಗಾ ಕವಿತೆ ಆಶಯಗಳನ್ನು ನೆನಪಿಸುತ್ತಿಲ್ಲವೇ ಇದು!) ಎಂದು ಬುದ್ಧಿ ಹೇಳಿದಂತೆನಿಸುತ್ತದೆ...
 ಅಲ್ಲೊಬ್ಬ ಕರಿಯ ಯೋಧ ತನ್ನ ಮುಖದ ಮೇಲಿನ ಹೆಲ್ಮೆಟ್ ಗಾಜು ತೆರೆದು ನೋಡುತ್ತಾನೆ... ಎದುರಿಗೆ ಕರಿಯ ಹುಡುಗರ ಹಿಂಡು ಓಡಿ ಬರುತ್ತಿದೆ... ಒಂದೆಡೆ ಬಾಂಬ್, ಗುಂಡು ಸಿಡಿಯುತ್ತಲೇ ಇವೆ.. ಮಕ್ಕಳು ಓಡೋಡಿ ಬರುತ್ತಲೇ ಇವೆ... ಅವನಿಗೆ ರಿಯಲೈಜ್ ಆಗುತ್ತದೆ... ಅಯ್ಯೋ! ನಾ ಕೊಲ್ಲುತ್ತಿರುವುದು ನಮ್ಮ ಮಕ್ಕಳನ್ನೇ... ಛೇ, ಕೊಲ್ಲುವುದು ಬಂದೂಕು ಅಂದುಕೊಂಡಿದ್ದೆ, ಅದಕ್ಕೇನು ಗೊತ್ತು ಇವರು ನಮ್ಮ ಮಕ್ಕಳೆಂದು? ಯಾರೋ ನನ್ನ ಕೈಗಿತ್ತ ಬಂದೂಕಿನಿಂದ ಅವರ ಗುರಿ ಸಾಧಿಸಲು ನೆರವಾಗುತ್ತಿದ್ದೇನೆಂಬ ಭ್ರಮೆ ನನಗೆ... ಅವರು ಗುರಿಯಾಗಿಸಿದ್ದು ನಮ್ಮ ಮಕ್ಕಳನ್ನೇ!...
-ಇದು ಯುದ್ಧನಿರತ ಪ್ರತಿ ಯೋಧನ ಅಂತರಂಗದ ತಳಮಳವಾಗಿಬಿಡುತ್ತದೆ. ಹಿನ್ನೆಲೆಯಲ್ಲಿ ಶಿಲುಬೆ ಮತ್ತಷ್ಟು ಧಗ ಧಗಿಸುತ್ತದೆ. ದಟ್ಟ ಹೊಗೆ, ಬಂದೂಕು, ಗುಂಡುಗಳ ಸದ್ದು, ಚಕಮಕಿ, ಟ್ಯಾಂಕರ್ ಗಳ ಆರ್ಭಟ... ಇದಾವುದನ್ನೂ ಲೆಕ್ಕಿಸದೇ ಮಕ್ಕಳು ಯುದ್ಧಭೂಮಿ ತುಂಬ ಓಡಾಡುತ್ತವೆ, ಕರಿಯರ ಕೈಹಿಡಿದ ಬಿಳಿಯರು, ಬಿಳಿಯರ ಕೈಹಿಡಿದ ಕರಿಯರು... ಪ್ರೀತಿ ಒಂದೇ ಸಾಕಲ್ಲವೇ ನಾವೆಲ್ಲ ಕೂಡಿ ಬದುಕಲು... ಅದರ ರಕ್ಷಣೆಗೆ ಬೇಕಾ ನಮಗೆ ಬಂದೂಕು, ಬುಲೆಟ್ ಗಳು? ಎನ್ನುವ ಒಂದೇ ಮುಗ್ಧ ಸಂದೇಶ ಹೊತ್ತು!
 ಯೋಧರು ಕೈಯಲ್ಲಿನ ಕೋವಿಗಳನೆಲ್ಲ ಕೆಳಕ್ಕೆ ಚೆಲ್ಲಿ ನಿಲ್ಲುತ್ತಾರೆ. ಅಶೋಕ ಚಕ್ರವರ್ತಿ ಶಸ್ತ್ರ ಚೆಲ್ಲಿ, ಬುದ್ಧನೆಡೆಗೆ ಮುಖಮಾಡಿ ನಿಂತ ಹಾಗೆ! ಕೆಲವು ಬಂದೂಕು, ರೈಫಲ್ ಗಳು ಆಕಾಶಕ್ಕೆ ತೂರಲ್ಪಡುತ್ತವೆ. ಅವು ಹಾರಿ ದೊಪ್ಪನೆ ನೆಲಕ್ಕುರುಳುತ್ತವೆ. ಇನ್ನಿವುಗಳ ಹಂಗು ಬೇಕಿಲ್ಲ... ಈ ಶಿಲುಬೆ ಹೀಗೆ ಹೊತ್ತಿ ಉರಿಯಬೇಕಿಲ್ಲ... ಇಷ್ಟು ದಟ್ಟ ಹೊಗೆ ಇಡೀ ಭೂಮಿಯನ್ನಾವರಿಸಬೇಕಿಲ್ಲ... ಎನ್ನುವಂತೆ! ಈ ಕಗ್ಗತ್ತಲು ಕರಗಲೇಬೇಕು... ಹಾಗಿದ್ದರೆ ಹಚ್ಚಿ ಕ್ಯಾಂಡಲ್ ಲೈಟ್... ಅದು ಜೀಸಸ್ ನ ಶಾಂತಿ ಸಂದೇಶದ ಬೆಳಕು. ಬುದ್ಧನ ಜ್ಞಾನ ದೀವಿಗೆ. ಬಸವನ ಅರಿವಿನ ಬೆಳಕು. ಮೊಹಮ್ಮದನ ಸಮಾನತೆ, ಸಹಬಾಳುವೆಯ ದಿವ್ಯ ಚೇತನವದು..! ಸುಟ್ಟುಹಾಕುವ ಬರಿಯ ಬೆಂಕಿಯಲ್ಲ.
 ಹಚ್ಚಿ ಎಲ್ಲರೂ ಪ್ರೀತಿಯ ಕ್ಯಾಂಡೆಲ್.  ಹಬ್ಬಿಸಿ ಭೂಮಿ ಹಿಂದೆಂದೂ ಕಂಡಿರದ ಮಹಾಬೆಳಕನ್ನು ... ಬನ್ನಿ ಜಗದ ನೋವುಗಳಿಗೆ ಮುಲಾಮು ಹಚ್ಚೋಣ... ಗಾಯಗಳ ಅಳಿಸೋಣ...
 ಇಂಥ ಅದ್ಭುತ ಆಶಯಗಳ ಆ ಹಾಡು ಅವನೊಳಗಿನ ಸೂಫಿ, ದರವೇಶಿಯ ದರ್ಶನ ಮಾಡಿಸುವಂಥದು.
ನನ್ನ ದೃಷ್ಟಿಯಲ್ಲಿ ಸಮಕಾಲೀನ ಜಗತ್ತಿಗೆ ಈ ಹಾಡು ಅಸಲಿ ವಿಶ್ವಮಾನವ ಸಂದೇಶ ಎನಿಸುತ್ತದೆ. ಮನುಜ ಮತ ವಿಶ್ವಪಥ (.ಕವಿ ಕುವೆಂಪು ).. ಎನ್ನುವಂಥ ಆಶಯಗಳಿಗೆ ಇದೇನು ಕಮ್ಮಿ?

 ದುರಂತವೆಂದರೆ ಇಡೀ ಮಾಧ್ಯಮ ಲೋಕ ಆತನ ವಿಲನ್ ಮಾಡುವುದಕ್ಕೇ ಗಮನ ಹರಿಸಿತು. ಅದು ನೋವಿನ ದನಿಯೊಂದನ್ನು, ಆಕ್ರೋಶದ ಸಿಡಿಯೊಂದನ್ನು ಹಾಗೇ ಹೊಸಕುವ ಹುನಾರು. ಇಡೀ ಜಗತ್ತಿನ ದೃಷ್ಟಿಯಲ್ಲಿ ಆರಾಧ್ಯ ದೈವವೇ ಆಗಿದ್ದ ಜಾಕ್ ಸನ್ ನನ್ನು ಶೈತಾನನಾಗಿಸುವ ಯತ್ನವದು. ಆತನ ಮೇಲಿನ ಸೆಕ್ಸ್ ರಿಲೇಟೆಡ್ ಅಲಿಗೇಷನ್ ಗಳಿಗೆ, ಅವನ ವೈಯಕ್ತಿಕ ಬದುಕಿನ ಬಗ್ಗೆ ಹುಟ್ಟಿದ ಅಥವಾ ಸೃಷ್ಟಿಸಿದ ಕಥೆಗಳಿಗೆ ಆತನ ಮಹಾನ್ ವ್ಯಕ್ತಿತ್ವವನ್ನಾಗಲಿ, ಅವನ ಬಗೆಗೆ ಜನರಲ್ಲಿದ್ದ ಭಾವನೆಯನ್ನಾಗಲಿ ಕೊಂಕಿಸಲಾಗಲಿಲ್ಲ. ಈ ಅಪಮಾನಗಳು, ಅವಮಾನಗಳು ಅವನಿಗೆ ಹೊಸದೂ ಆಗಿರಲಿಲ್ಲ. ಇಂಥ ವಿರೋಧ, ಪ್ರತಿಭಟನೆಗಳು ಜೀಸಸ್, ಪ್ರವಾದಿ ಮೊಹಮ್ಮದ ಮತ್ತು ಬಸವನಿಗೂ ಬಿಟ್ಟಿಲ್ಲವಲ್ಲ! ಆತ ಕಡೆಯ ಉಸಿರಿನತನಕ ಎದೆಯುಬ್ಬಿಸಿಯೇ ಕುಣಿದ, ಹೆಜ್ಜೆಗಳ ಫೋರ್ಸ್ ಅನ್ನು ಕುಗ್ಗಿಸಲೇ ಇಲ್ಲ, ಎಂದಿನ ಕ್ರಾಂತಿ ಸಿಡಿಗಳನ್ನು ಸಿಡಿಸುತ್ತಲೇ ನಡೆದ..  ಸೂಫಿ, ದರವೇಶಿಯ ಹಾಗೆ ಎಲ್ಲ ಸೋಗಲಾಡಿತನ ಧಿಕ್ಕರಿಸಿದವನಿಗೆ ಯಾವುದರ ಹೆದರಿಕೆ? ಯಾವುದರ ಹಂಗು!?

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

'ಅನಭಿಜ್ಞ ಶಾಕುಂತಲ': ನೆನಪು ಮರೆವಿನಾಟ

 ಜೀವನವೇ ಒಂದು ನಾಟಕವೆಂದಾದರೆ. ಸಂಬಂಧ ಅನ್ನೋದು ಕಟ್ಟಿಕೊಂಡ ಆಟ. ಅಂದರೆ ನಾಟಕದಂತೆ ಬದುಕು ಕೂಡ ಆಟ ಕಟ್ಟುವ ಕ್ರಿಯೆ. ಇಲ್ಲಿ ಗುರಿ ಎಂದರೆ ಸುಖದ ಅಥವಾ ಸಾರ್ಥಕತೆಯ ದಡ ಸೇರುವುದು. ಈ ಆಟದ ಒಂದು ಹಂತದಲ್ಲಿ ಕಷ್ಟದ ಅಡವಿ ಸೇರುವುದೂ ಇದೆ! 'ಆಡಾಡ್ತ ಅಡವಿ ಸೇರುವುದು' ಅಂತಾರಲ್ಲ ಹಾಗೆ. ಅಡವಿ ಅಂದರೆ ಇಲ್ಲಿ ಸಂಕೀರ್ಣತೆ, ಸಂಕಷ್ಟ ಅವಘಡ, ಸಂದಿಗ್ಧತೆ ಎಂದು ಭಾವಿಸಿಕೊಳ್ಳಬಹುದು. ಬದುಕಿನ ದಾರಿಯಲ್ಲಿ ಒಮ್ಮೆ ಈ 'ಅಡವಿ' ಎದುರಾಗೇ ಆಗುತ್ತದೆ ಎನ್ನುವುದು ವಿಧಿಲಿಖಿತವೇ? ಗೊತ್ತಿಲ್ಲ. ಪ್ರೀತಿ-ಪ್ರೇಮ-ಕಾಮ ಎನ್ನುವ ಬದುಕಿನ ಒಟ್ಟಾರೆ ಆಟ- ಕೂಟದಲ್ಲಿ ಪಡಕೊಳ್ಳುವುದೆಲ್ಲ ಜೀವಕಾರುಣ್ಯವಷ್ಟೇ ಅಲ್ಲ. ಸಂಕಷ್ಟ ಮತ್ತು ಸಂದಿಗ್ಧತೆಯೂ ಜತೆಯಲ್ಲಿರುತ್ತದೆ ಎನ್ನುವುದು ಸಹಜ ಮನೋಧರ್ಮ.  ಬದುಕಿನ ಆಟಕ್ಕೆ ತೆರಕೊಂಡವರಲ್ಲಿ ಹಲವರು ಅನುಭವಿಸಿದ ಮಧುರ ಘಳಿಗೆಗಳನ್ನು ಕಡೆತನಕ ನೆನಪಿಟ್ಟುಕೊಳ್ಳುತ್ತಾರೆ. ಕೆಲವರು ಮರೆತೇ ಬಿಡುತ್ತಾರೆ!?..  ಕಾಳಿದಾಸನ ಮಹಾಕಾವ್ಯ ಶಾಕುಂತಲೆಯಲ್ಲಿ ಈ ಬದುಕು, ಮನುಷ್ಯ ಪ್ರೀತಿ ಪಯಣದ ನೆನಪು ಮತ್ತು ಮರೆವಿನಾಟ ಮನಮಿಡಿಯುವಂತೆ ಚಿತ್ರಣಗೊಂಡಿದೆ. ಈ ಕಾವ್ಯದಲ್ಲಿ ಎಲ್ಲವನ್ನು ವಿಧಿಯೇ ನಿರ್ಧರಿಸಿದಂತೆನಿಸುತ್ತದೆ. ಫೇಟಲಿಸಂ ವಾದಕ್ಕೆ ಪೂರಕವಾದ ಚಿಂತನೆ ಇದೆನ್ನಬಹುದು. ಆಧುನಿಕ ಯುಗದ ಶೇಕ್ಸಪಿಯರ್ ನ ಹಲವು ನಾಟಕಗಳಲ್ಲಿಯೂ ಈ ಫೇಟಲಿಸಂ ಪ್ರಧಾನ ಪಾತ್ರದಂತೆ ವರ್ತಿಸುವುದನ್ನು ಗಮನಿಸಬಹುದು. *

ಇಷ್ಕ್‌ ಕೆ ಇಮ್ತೆಹಾನ್‌ ಔರ್‌ ಭೀ ಹೈ’.. ಇಮ್ರಾನ್‌ ಖಾನ್‌!

ಪಾಕಿಸ್ತಾನದ ಬಗ್ಗೆ ಮಾತನಾಡುವುದು ಮಹಾ ಪಾಪದ ಕೆಲಸವೇನಲ್ಲ. ಹಾಗೆ ಭಾವಿಸಬೇಕಿಲ್ಲ. ಅದು ಒಪ್ಪಿತವೊ ಇಲ್ಲವೋ, ಅದರ ಬಗ್ಗೆ ಅಲಕ್ಷ್ಯವೋ ನಿರ್ಲಕ್ಷ್ಯವೊ ಏನೇ ಆದರೂ ಅದು ಒಂದು ದೇಶ. ನೆರೆಯ ರಾಷ್ಟ್ರ. ‘ಪಡೋಸಿ...’ ಸಂಬಂಧದಲ್ಲಿ ನಮ್ಮದೇ ಕರುಳಬಳ್ಳಿ. ಭಾಷೆ, ಜನಜೀವನ ಶೈಲಿಯಲ್ಲಿ ಬದಲಾದರೂ ಮನುಷ್ಯ ಭಾವ, ಬದುಕುವ ಸಾಮಾನ್ಯ ಕಾಳಜಿ  ಒಂದೇ. ಹಾಗೆ ನೋಡಿದರೆ ಸಾಂಸ್ಕೃತಿಕವಾಗಿ ಎರಡೂ ದೇಶಗಳು ಅಭಿನ್ನ. ನಮ್ಮಲ್ಲಿರುವ ಹಾಗೆ ಅಲ್ಲಿಯೂ ಪ್ರಜಾಪ್ರಭುತ್ವ ಇದೆ. ಅಲ್ಲಿ ನಡೆಯುವುದು ಇಲ್ಲೂ ನಡೆಯುತ್ತದೆ. ಅಲ್ಲಿ ನಡೆಯಲೇಬಾರದ್ದು ಇಲ್ಲೂ ನಡೆಯಲೇಬಾರದು.  ತೀವ್ರವಾದ ನಮ್ಮಲ್ಲಿನದಕ್ಕಿಂತ ಅಲ್ಲಿ ತುಸು ಹೆಚ್ಚು ಸವಾರಿಗೆ ಹವಣಿಸಿದೆ. ಅಲ್ಲಿನ ಮಿಲಿಟರಿ ಅತಿರೇಕದ್ದು. ಅಕ್ಷಮ್ಯ. ಮತ್ತೆ ದೇಶ ಪುಟ್ಟದಾದಷ್ಟು ಅದಕ್ಕೆ ಭಯಗಳು ಜಾಸ್ತಿ. ಮಿಲಿಟರಿ ಕವಚದಲ್ಲಿ ಅದು ಸುರಕ್ಷಾ ಭಾವವನ್ನು ಕಲ್ಪಿಸಿಕೊಳ್ಳುತ್ತದೆ. ಅದೊಂದು ತರಹದ ಸಮಾಧಾನ. ಆದರೆ ಭ್ರಮೆಯಿಂದ ಕೂಡಿದ್ದು. ಭಯೋತ್ಪಾದನೆ ಕೂಡ ಒಂದರ್ಥದಲ್ಲಿ ಪುಕ್ಕಲುತನವೇ ಆಗುತ್ತದೆ. ಹಿಂಸಾ ಪ್ರವೃತ್ತಿಗೆ ಹೆದರಿಸುವುದೇ ಕೆಲಸ. ಹೆದರಿಸುವವರು ಶೂರರು, ಧೀರರು ಮತ್ತು ಜೀನಿಯಸ್‌ ಆಗಿರಲು ಹೇಗೆ ಸಾಧ್ಯ? ಮುಖ್ಯವಾಗಿ ಅಲ್ಲಿನ ವಿದ್ಯಮಾನಗಳನ್ನು ಗಮನಿಸುವುದಾದರೆ, ಮಿಲಿಟರಿ, ಮತಾಂಧರು, ಭಯೋತ್ಪಾದಕರು, ಭ್ರಷ್ಟರು ಇದೆಲ್ಲದರಿಂದ ಪಾಕಿ ತುಂಬ ರೋಸಿ ಹೋಗಿದ್ದಾನೆ. ಒಂದು ಸೂಕ್ತ ಪರ್ಯಾಯಕ್ಕಾಗಿ ಹಂಬಲಿಸಿದ್ದಾನೆ. ಸಹಜ

ಮನುಷ್ಯ ಜಾತಿ ತಾನೊಂದೇ ವಲಂ...

ಭಾರತದಲ್ಲಿ ಜಾತಿ ವ್ಯವಸ್ಥೆ ಹೇಗೆ ಹುಟ್ಟಿತು ಎಂಬುದಕ್ಕೆ ಯಾವುದೇ ನಿರ್ಧಿಷ್ಟ ಥಿಯರಿ ಇಲ್ಲ. ಆದರೆ, ಇಲ್ಲಿನ ವರ್ಗ ಸೃಷ್ಟಿ ಮಾತ್ರ ಇರಾನ್ ವ್ಯವಸ್ಥೆಯಂತೇ ಇದೆ.  ಪುರಾತನ ಇರಾನಿನ ಚರಿತ್ರೆಯಲ್ಲಿ ಇಂಥದೊಂದು ವ್ಯವಸ್ಥೆ ಇತ್ತು. ಅದಕ್ಕೆ ಪಿಸ್ತ್ರಾಸ್ ಎನ್ನುತ್ತಾರೆ. ನಮ್ಮಲ್ಲಿ ಅದು ಚಾತುರ್ವರ್ಣವಾಗಿದೆ. ಅಲ್ಲಿ ಅಥ್ರವಾನ್ಸ್ (ಪ್ರೀಸ್ಟ್ ಕ್ಲಾಸ್), ರಥೈಸ್ತಾ (ವಾರಿಯರ್ಸ್), ವಸ್ತ್ರಿಯಾ (ಮರ್ಕಂಟೈಲ್ ಕ್ಲಾಸ್) ಮತ್ತು ಹ್ಯುತಿ (ಆರ್ಟಿಸನ್) ಎನ್ನುವ ವರ್ಗ ವ್ಯವಸ್ಥೆ ಇದೆ. ನಮ್ಮಲ್ಲಿ ಇದನ್ನು ಕಲ್ಪಿಸಿಕೊಂಡರೆ ಪುರೋಹಿತ ಅಥವಾ ಬ್ರಾಹ್ಮಣ (ಅಥ್ರವಾನ್ಸ್), ಕ್ಷತ್ರಿಯ  (ರಥೈಸ್ತಾ), ವೈಶ್ಯ  (ವಸ್ತ್ರಿಯಾ) ಮತ್ತು ಶೂದ್ರ (ಹ್ಯುತಿ) ಎಂದು ಅರ್ಥೈಸಿಕೊಳ್ಳಬಹುದು.  ಆದಿ ಕಾಲದ ಇರಾನಿಯನ್ ವ್ಯವಸ್ಥೆ ಹೀಗೇ ಇತ್ತು. ಅದೇ ನಾಲ್ಕು ವರ್ಗಗಳು ಭಾರತದಲ್ಲೂ ಈಗಲೂ ಚಾಲ್ತಿಯಲ್ಲಿವೆ. ಹೀಗೆ ಒಂದು ಇರಾನ್ ಸಂಬಂಧ ಭಾರತಕ್ಕಿದೆ. ಚರ್ಮದ ಬಣ್ಣ, ನಯ ನಾಜೂಕು, ಕಣ್ಣು, ಬುದ್ಧಿವಂತಿಕೆಯನ್ನು ಹೋಲಿಸಿದರೆ ಭಾರತದ ಅದರಲ್ಲೂ ಉತ್ತರ ಭಾರತದ ಕಾಶ್ಮೀರಿ ಪಂಡಿತರು, ಉತ್ತರ ಪ್ರದೇಶದ ಪಂಡಿತ್, ಚಿತ್ಪಾವನ ಬ್ರಾಹ್ಮಣರು, ನಮ್ಮ ಕರಾವಳಿ ಮತ್ತು ಉತ್ತರ ಕನ್ನಡದ ಹವ್ಯಕರು ಹೆಚ್ಚೂ ಕಮ್ಮಿ ಇರಾನಿಗಳನ್ನು ಹೋಲುತ್ತಾರೆ (ಮೇಲ್ನೋಟಕ್ಕೆ).  ಬಹುಶಃ ಹೀಗೂ ಆಗಿರಬಹುದು, ಆಗ ಇರಾನ್ ನಲ್ಲಿ ಕ್ರೈಸ್ತ ಮತ್ತು ಇಸ್ಲಾಂ ಮುಂಚೆಯೂ ಹಲವಾರು ಸುಧಾರಣಾವಾದಿಗಳ ಅಥವಾ ಬಂಡುಕೋರರ