ವಿಷಯಕ್ಕೆ ಹೋಗಿ

ತಮಸ್ಸು: ಕಗ್ಗತ್ತಲಲ್ಲೊಂದು ಆಶಾಕಿರಣ...

 ಆಲ್ಟರನೇಟ್ ಪವರ್ ಸೊಲ್ಯುಷನ್ ಎನ್ನುವ ಮಾರುಕಟ್ಟೆಯ ಲಾಬಿಗೆ ಆಡಳಿತ ಶರಣಾಗಿದ್ದರಿಂದ ಇಡೀ ರಾಜ್ಯವೀಗ ಕಗ್ಗತ್ತಲಲ್ಲೇ ಇದೆ. ಕತ್ತಲು ಕವಿದಾಗೆಲ್ಲ ಟ್ಯೂಬ್ ಲೈಟ್ ಹಚ್ಚುವ ಹಿಂದೂ-ಹಿಂದೂತ್ವದ ಪೌರೋಹಿತ್ಯ ನಡೆಸುವವರಿಗೆ ಅದರ ಜನಕ ಥಾಮಸ್ ಆಲ್ವಾ ಎಡಿಸನ್ ಕ್ರೈಸ್ತ ಅನ್ನೋದು ಗಮನಕ್ಕೆ ಬರೋದಿಲ್ಲ!?  ಮತಾಂತರ ವಿರೋಧದ ಹೆಸರಲ್ಲಿ ಕ್ರೈಸ್ತ ಮಷಿನರಿಗಳ ಕನಿಷ್ಠ ಧಾರ್ಮಿಕ ಆಶಯಗಳ ಮೇಲೆ ಹರಿಹಾಯುವುದು ಇಲ್ಲಿ ನಡೆಯುತ್ತಲೇ ಇದೆ. ಇದೊಂದು ಥರದ ತಮಸ್ಸು!

 ಅಮೀರ್ ಖಾನ್, ರಷೀದ್ ಖಾನ್, ಅಮ್ಜದ್ ಅಲಿ ಖಾನ್, ಝಾಕೀರ್ ಹುಸೇನ್, ಅಲಿ ಅಕ್ಬರ್ ಖಾನ್ ಅವರಂಥವರ ಕೈಯಲ್ಲಿ ಅಸಂಖ್ಯ ಮುಸ್ಲಿಮೇತರರು ಹಿಂದೂಸ್ತಾನಿ ಸಂಗೀತದ ದೀಕ್ಷೆ ಪಡೆಯುವಾಗ ಈ ಉಸ್ತಾದ್ ಗಳೆಲ್ಲ ಮುಸಲ್ಮಾನರು ಎನ್ನುವುದು ಮುಖ್ಯವಾಗೋದೇ ಇಲ್ಲ.

"ಕಭೀ ಕಭೀ ಮೇರೆ ದಿಲ್ ಮೇ ಖಯಾಲ್ ಆತಾ ಹೈ, ಕೆ ಜೈಸೆ ತುಝಕೋ ಬನಾಯಾ ಗಯಾ ಹೈ ಮೇರೆ ಲಿಯೆ, ತೂ ಅಬ್ ಸೇ ಪೆಹಲೇ ಸಿತಾರೋಂ ಮೆ ಬಸರಹೀ ಥಿ ಕಹ್ಞೀ, ತುಝೇ ಜಮೀನ್ ಪೆ ಬುಲಾಯಾ ಗಯಾ ಹೈ ಮೇರೆ ಲಿಯೆ..." ಎನ್ನುವ ಸಾಹಿರ್ ಸಾಲುಗಳು ಕನ್ನಡದಲ್ಲಿ "ಅನಿಸುತಿದೆ ಯಾಕೋ ಇಂದು, ನೀನೇನೆ ನನ್ನವಳೆಂದು, ಮಾಯದ ಲೋಕದಿಂದ ನನಗಾಗಿ ಬಂದವಳೆಂದು" ಎಂದು ಹಾಡಾಗಿ ವರ್ಲ್ಡ್ ಫೇಮಸ್ ಆಗುತ್ತದೆ! ಸಾಹಿರ್ ಕೂಡ ಒಬ್ಬ ಮುಸಲ್ಮಾನ.  ಇದೆಲ್ಲ ನಾವು ಮುಸಲ್ಮಾನರಿಂದ ಸಾಂಸ್ಕೃತಿಕವಾಗಿ  ಪಡಕೊಂಡದ್ದು ಎಂದೆನಿಸೋದೇ ಇಲ್ಲ.!!

 ಸಿತಾರ್ ನಂಥ ವಾದ್ಯವನ್ನು ಈ ನೆಲದಲ್ಲಿ ಧ್ವನಿಸಿದ ಮುಸಲ್ಮಾನರಿಂದ ದೀಕ್ಷೆ ಪಡಕೊಂಡ ಮುಸ್ಲಿಮೇತರರು 'ಭಾರತ ರತ್ನ'ರಾಗುತ್ತಾರೆ. ಅದನ್ನು ಧೇನಿಸುವವರೆಲ್ಲ ವಿಲಾಯತ್ ಖಾನ್ ರಂತೆ ಮಣ್ಣು ಸೇರಿಕೊಳ್ಳುತ್ತಲೇ ಇರುತ್ತಾರೆ. ಇದೂ ಒಂದು ಥರದ ತಮಸ್ಸಲ್ಲವೇ?
 
 ಶಾರೂಕ್ ಖಾನ್, ಸಲ್ಮಾನ್ ಖಾನ್, ಅಮೀರ್ ಖಾನ್... . ದಿಲೀಪಕುಮಾರ್, ಮೆಹಬೂಬ್ ಖಾನ್, ಫಿರೋಜ್ ಖಾನ್, ಕಮಲ್ ಅಮ್ರೋಹಿ ಸಿನಿಮಾಗಳಿಂದ ಮನರಂಜನೆ ಪಡೆವಾಗೆಲ್ಲ, ಮೆಹದಿ ಹಸನ್, ತಲತ್ ಮೆಹಮೂದ್, ಗುಲಾಂ ಅಲಿ, ಮೊಹಮ್ಮದ್ ರಫೀ ಗಜಲ್, ಹಾಡು ಸವಿಯುವಾಗೆಲ್ಲ, ಬಣ್ಣ, ರೇಖೆ, ಕುಂಚಗಳ ಅದ್ಭುತ ಸ್ಟ್ರೋಕ್ ಮೂಲಕ ಪೇಂಟಿಂಗ್ ಖುಷಿ ಕೊಡುವ ಎಂ.ಎಫ್. ಹುಸೇನ್ ಕಲಾಕೃತಿ ನೋಡಿದಾಗೆಲ್ಲ... ಇವರೂ ಮುಸಲ್ಮಾನರು ಅನ್ನೋದು ನೆನಪಿಗೇ ಬರಲ್ಲ.

 ಆದರೆ, ಒಬ್ಬ ದಾರಿತಪ್ಪಿದ ಅಥವಾ ಡಿಟರ್ಮೈನ್ಡ್ ಟೆರರಿಸ್ಟ್ ಕಸಾಬ್, ಹೇಗ್ಹೇಗೋ ಸಿಕ್ಕಿಹಾಕಿಕೊಂಡ ಅಥವಾ ಸಿಕ್ಕಿಹಾಕಿಸಲ್ಪಟ್ಟ ಕೆಲವರು ಮಾಡಿದ ತಪ್ಪು ಇಸ್ಲಾಂಗೆ ತಳಕು ಹಾಕಿಕೊಂಡು ಇಡೀ ಸಮುದಾಯವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿಬಿಡುತ್ತದೆ. ಆಗ ಮುಸಲ್ಮಾನರೆಲ್ಲ ಭಯೋತ್ಪಾದಕ ಧರ್ಮದ ಅನುಯಾಯಿಗಳೆಂದು ತಟ್ಟನೆ ಅನಿಸಿಬಿಡುತ್ತಾರೆ!

 ದೇಶದ ಮಹಾತ್ಮ, ರಾಷ್ಟ್ರಪಿತ ಎನಿಸಿಕೊಂಡ ಮೋಹನದಾಸ ಕರಮಚಂದ ಗಾಂಧಿ ಅವರನ್ನು ಕೊಂದ ನಾಥೂರಾಂ ಗೋಡ್ಸೆ ಒಬ್ಬ ಚಿತ್ಪಾವನ ಬ್ರಾಹ್ಮಣ. ತಮಾಷೆ ಎಂದರೆ  ಅವನು ಬ್ರಾಹ್ಮಣ ಎನ್ನುವುದು ಅಷ್ಟು ಮುಖ್ಯವಾಗೋದೇ ಇಲ್ಲ ನೋಡಿ ಎಷ್ಟೋ ಜನಕ್ಕೆ. ಆತ ಮಾಡಿದ ತಪ್ಪು ಇಡೀ ಬ್ರಾಹ್ಮಣ ಸಮುದಾಯವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸೋದೇ ಇಲ್ಲ. ಇದಕ್ಕಾಗಿ ಪುರೋಹಿತಷಾಹಿ ವರ್ಗವೆಲ್ಲ ನಾಚಿಕೆಯಿಂದ ತಲೆ ತಗ್ಗಿಸಬೇಕಿಲ್ಲ ಸಾಮುದಾಯಿಕವಾಗಿ!! ಒಬ್ಬ ಗಾಂಧಿಯನ್ನು ಕೊಲ್ಲೋದು ಎಂದರೆ ಒಂದಿಡೀ ದೇಶವನ್ನೇ ಕೊಂದ ಹಾಗಲ್ಲವೇನು?

 "ಭಯೋತ್ಪಾದನೆ ವಿರುದ್ಧ ನಮ್ಮೆಲ್ಲರ ಯುದ್ಧ.  ಈ ಸಮರದಲ್ಲಿ ನಾವೆಲ್ಲ ಯೋಧರು. ಪರಿಚಯ ಪಡೆದೇ ಬಾಡಿಗೆ ಮನೆ ಕೊಡಿ, ವದಂತಿ ಹರಡದಿರಿ, ಹರಡಲು ಬಿಡಬೇಡಿ..."- ಎಂದು ಬೊಗಳುವ ರೇಡಿಯೊಗಳ ಜನಹಿತಕ್ಕಾಗಿ ಜಾರಿ ಎನ್ನುವ ಸಂದೇಶಗಳು ಪರೋಕ್ಷ ಎಚ್ಚರಿಕೆಗಳಾಗಿ ಧ್ವನಿಸುತ್ತಿವೆ ಎನಿಸುತ್ತದೆ. ಮುಸಲ್ಮಾನರೆಂದರೆ ಮನೆ ಬಾಡಿಗೆ ಕೊಡಲೂ ಹಿಂಜರಿಯುವಂತೆ ದ್ವೇಷ ಹಬ್ಬಿಸಿಟ್ಟು ಈ ನೆಲದ ಮೇಲೆ ಬೆವರು ಹರಿಸದೇ ಹೊಟ್ಟೆ ಹರಿಯುವಂತೆ ಮುಕ್ಕುತ್ತಲೇ ಇರುವ ಪುರೋಹಿತಷಾಹಿ ವರ್ಗ ಇಂಡಿಯಾದ ಬಹುದೊಡ್ಡ ವಿಲನ್. ಎಲ್ಲ ಅವಾಂತರ, ಸಮಸ್ಯೆಗಳ ಪಿತಾಮಹರು! ಅಸ್ಪೃಶ್ಯತೆಯಂಥ ಅಮಾನವೀಯ ಮೌಲ್ಯಗಳ ಆರಾಧಿಸುವ ಈ ವರ್ಗ ಇಡೀ ಇಂಡಿಯನ್ನರನ್ನು ಅಸಮಾನತೆಯ ಕುಲುಮೆಯಲ್ಲಿ ಬೇಯಿಸಿದ್ದು ಇಂಡಿಯಾದ ದೊಡ್ಡ ದುರಂತಗಳಲ್ಲಿ ಬಹುಮುಖ್ಯವಾದ್ದು. ಭಯೋತ್ಪಾದನೆ ಎನ್ನುವ ಅಂತರರಾಷ್ಟ್ರೀಯ ಕೋಡ್ ವರ್ಡ್ ಅಡಿಯಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವ ಪುರೋಹಿತಷಾಹಿಯೇ ಇಂದಿನ ಹೊಸ ಬಿಕ್ಕಟ್ಟು, ಅವಾಂತರಗಳನ್ನು ಸೃಷ್ಟಿಸುತ್ತಿರುವುದು.


 ಮೊನ್ನೆ (ಜೂನ್ 20, 2010) ಅಗ್ನಿ ಶ್ರೀಧರ್ ಅವರ ನಿರ್ದೇಶನದ "ತಮಸ್ಸು" ಚಿತ್ರ ನೋಡಿದೆ. ಈ ನಿಜವಾದ ವಿಲನ್ ಗಳು  ಚಿತ್ರದಲ್ಲಿ ಎಲ್ಲೂ ಕಾಣಿಸಲಿಲ್ಲ. ಇದು ಚಿತ್ರದಲ್ಲಿ ಕಾಣಿಸಿದ ವಿಷಯಕ್ಕೆ ಸಂಬಂಧಿಸಿದ ಒಂದು factual error ಎಂದು ನನಗನ್ನಿಸಿತು.

ನಿರ್ದೇಶಕರೇ,
 ಭಯೋತ್ಪಾದನೆ ಮತಾಂಧ ಮುಸಲ್ಮಾನರದೇ ಸೃಷ್ಟಿ ಮತ್ತು  ಮದರಸಾ, ಮೌಲ್ವಿಗಳ ಧರ್ಮಾಂಧತೆಯ ಔಟ್ ಗ್ರೂಥ್ ಎನ್ನುವಂತೆ ಸರಳೀಕರಿಸುವ ಅಗತ್ಯವೇನಿಲ್ಲ.  "ಹೋಗಿ ಕಾಲೇಜು ಓದಿ, ಮೌಲ್ವಿಗಳ ಧರ್ಮಾಂಧತೆಯ ಪಾಠದಲ್ಲೇ ಏಕೆ ಮುಳುಗಿ ಹೋಗಿದ್ದೀರಿ?  ಭಯೋತ್ಪಾದನೆಯ ನಿರ್ಮೂಲನೆ ನಿಮ್ಮ ಕೈಯಲ್ಲೇ ಇದೆ. " ಎನ್ನುವರ್ಥದಲ್ಲಿ ಯಂಗ್ ಮುಸ್ಲಿಮ್ಸ್ ಮತ್ತು ಒಟ್ಟಾರೆ ಮುಸಲ್ಮಾನರಿಗೆ ಬುದ್ಧಿವಾದ ಹೇಳಿದ್ದೀರಿ. ತಲೆಕೆಟ್ಟ ಕೆಲ ದುಷ್ಟರು ಭಯೋತ್ಪಾದನೆ ತಂತ್ರ ಬಳಸಿಕೊಳ್ಳುತ್ತಿರುವುದನ್ನು ಕಂಡಾಗೆಲ್ಲ ನಿಮ್ಮ ಬುದ್ಧಿವಾದ ಸರಿ ಎನಿಸುತ್ತದೆ. ಮತ್ತು ಒಳ್ಳೆಯ ಪಾಠವನ್ನೇ ಹೇಳಿದ್ದೀರಿ.

 ಧರ್ಮಾಂಧತೆಗೆ ಅಮಾಯಕ ಮುಸಲ್ಮಾನರು ಬಲಿಪಶುವಾಗುತ್ತಿದ್ದಾರೆ ಎಂದು ಹೇಳಲು ಇಮ್ರಾನ್ ಕ್ಯಾರೆಕ್ಟರ್ ಅನ್ನು ಮತಾಂಧ ಮೌಲ್ವಿ ಜತೆ ಸಂವಾದಿಯಾಗಿಸಿದ್ದೀರಿ. ಇದು ಉತ್ತಮ ನಿಲುವು. ಈ ದೃಶ್ಯವನ್ನು ಇನ್ನಷ್ಟು ಅರ್ಥಪೂರ್ಣವಾಗಿಸಬಹುದಿತ್ತು. ಮೌಲ್ವಿಯ ಇಸ್ಲಾಂ ಮತ್ತು ಆ ಧಾರ್ಮಿಕ ಶಿಕ್ಷಣದಿಂದ ಕಂಡುಕೊಂಡ ಇಮ್ರಾನ್ ಇಸ್ಲಾಂ ಆಚರಣೆಗೂ ಇರುವ ಭಿನ್ನಾಭಿಪ್ರಾಯ ಇನ್ನಷ್ಟು ಸ್ಪಷ್ಟಗೊಳ್ಳಬೇಕಿತ್ತು. ಕ್ಲೋಸ್ ಕೌಂಟರಿನಲ್ಲಿ ಇಮ್ರಾನ್ ನನ್ನು ಮುಂಗೋಪಿ, ದಕ್ಷ, ನಿಷ್ಠಾವಂತ ಪೊಲೀಸ್ ಲೇಬಲ್ಲಿನ ಎಸಿಪಿ ಶಂಕರ ಹೊಸಕಿ ಹಾಕುವುದನ್ನು ತೋರಿಸಿ, ಕೊಲೆಪಾತಕಿ ಎಸಿಪಿಯನ್ನು ಪಾಪನಿವೇದನೆಯ ಮೂಲಕ ಆತ್ಮಶೋಧನೆಗೆ ಹಚ್ಚುತ್ತೀರಿ.  ಶಿವರಾಜ್ ಕುಮಾರ್ ಅಭಿನಯಿಸಿದ ಈ ಪಾತ್ರ ಒಬ್ಬ ಪೊಲೀಸ್ ಅಧಿಕಾರಿ ವೈಯಕ್ತಿಕ ಮಟ್ಟದಲ್ಲಿ ಪಡುವ ಸಂಕಟವನ್ನಷ್ಟೇ ಪ್ರತಿನಿಧಿಸುತ್ತಿದೆ ಅನಿಸಿತು. ಇದು ಇಡೀ ಪೊಲೀಸ್ ವ್ಯವಸ್ಥೆಯ ಆತ್ಮವಿಮರ್ಶೆಯಾಗಿ ಹಬ್ಬಬೇಕಿತ್ತು. ಈ ಎಲಿಮೆಂಟೇ ತುಸು ಜಾಸ್ತಿ ಆಗಿದ್ದರೆ ಚಿತ್ರಕ್ಕೊಂದು ಗಂಭೀರವಾದ ನೆಲೆಯಲ್ಲಿ ಹೊಸದೊಂದು ಆಯಾಮ ದಕ್ಕುತ್ತಿತ್ತು.

(ಪೊಲೀಸ್ ಧಿರಿಸು ಹಾಕದೇ ಈ ಪಾತ್ರ ಪೋಷಣೆ ಮಾಡಿದ್ದು ಒಳ್ಳೆಯದು. ಈ ಹೊಸತನ ಬಾಲಿವುಡ್ ನ ಸರ್ಫರೋಷ್ ಚಿತ್ರದಲ್ಲಿ ಈಗಾಗಲೇ ಕಾಣಿಸಿದೆ. ಅಮೀರ್ ಖಾನ್ ನಿರ್ವಹಿಸಿದ ಎಸಿಪಿ ರಾಠೋಡ್ ಕ್ಯಾರೆಕ್ಟರಿಗೂ ಮತ್ತು ತಮಸ್ಸಿನ ಎಸಿಪಿ ಶಂಕರನಿಗೂ ಕೊಂಚ ಸಾಮ್ಯತೆ ಕಾಣಿಸಿತು. ನಮ್ಮ ರಾಜ್ಯದ ಪೊಲೀಸ್ ಮಹಾನಿರ್ದೇಶಕ ಹೆಸರೂ ಶಂಕರ..)

ಗಲಭೆ ಸಂದರ್ಭದಲ್ಲಿ ಇಮ್ರಾನ್ ಮನೆಯಲ್ಲಿ ಬಂದು ಸೇರಿಕೊಳ್ಳುವ ಎಸಿಪಿ ಶಂಕರ ಅಂಥ ಗಂಭೀರ ಗಾಯಾಳು ಏನಾಗಿರಲಿಲ್ಲ. ಆತ ಅಲ್ಲಿಂದ ಹೇಗೋ ಹೊರ ನಡೆದು ತನ್ನ ಕರ್ತವ್ಯ ನಿರ್ವಹಿಸಬಹುದಾಗಿತ್ತು. ಆಕಸ್ಮಿಕವಾಗಿ ಇಮ್ರಾನ್ ಫೊಟೊ ನೋಡುವ ಎಸಿಪಿ ಕ್ಷಣಕಾಲ ವಿಚಲಿತನಾಗುತ್ತಾನೆ. ಇಮ್ರಾನ್ ಮನೆಯಲ್ಲೇ ತಾನಿರುವ ಬಗ್ಗೆ ಆತನಲ್ಲೊಂದು ಪಾಪ ಪ್ರಜ್ಞೆ ಕಾಡಲಾರಂಭಿಸುತ್ತದೆ. ಆತನಿಗೆ ತಾನು ಎಸಗಿದ ಪಾತಕ ಕೃತ್ಯ ನೆನಪಾಗುತ್ತದೆ. ಅದು ಆತ್ಮವಿಮರ್ಶೆಗೆ ಪ್ರೇರೇಪಿಸುತ್ತದೆ. ಈ ಎಲಿಮೆಂಟ್  ತುಂಬ ಆಪ್ತವಾಗಿ ಮೂಡಬೇಕಿತ್ತು. ಆತ ಆತ್ಮವಿಮರ್ಶೆ ಮಾಡಿಕೊಳ್ಳುವಂಥ ಮೂಡಿಗೆ ಹೋಗಲು ಇನ್ನೂ ಏನೋ ಬೇಕಿತ್ತು ಅನಿಸಿತು. ಏಕೆಂದರೆ, ಕಥೆಯ ನಿಜವಾದ ಆತ್ಮವೇ ಇಲ್ಲಿದೆ. ಇದಕ್ಕೆ ಕೊಟ್ಟ ಟ್ರೀಟಮೆಂಟ್ ಸಾಕಾಗಲಿಲ್ಲ ಎನಿಸಿತು.

 ಸ್ವಂತ ಮಗನ ಅನ್ಯಾಯವಾಗಿ ಕೊಂದ ಪಾತಕಿ ತನ್ನ ಮನೆಯೊಳಗೇ ಇದ್ದಾನೆ ಎನ್ನುವ ವಿಷಯ ತಂದೆಯ ಗಮನಕ್ಕೆ ಬಂದಾಗ,  ಸ್ವಂತ ಅಣ್ಣನನ್ನೇ ಹೊಸಕಿ ಹಾಕಿದ ಮತ್ತು  ತನ್ನ ಭವಿಷ್ಯದ ಬಾಳು ಹಾಳಾಗುವುದಕ್ಕೆ ಮೂಲ ಕಾರಣಕರ್ತನಾದ ಪೊಲೀಸ್ ಅಧಿಕಾರಿ ಇಮ್ರಾನ್ ತಂಗಿ ಆಮ್ರೀನ್ ಎದುರಿಗೇ ನಿಂತಾಗ... ಇಬ್ಬರಲ್ಲೂ ಆಗುವ ಸಂಕಟ, ಸೇಡು, ಪ್ರತೀಕಾರದ ಭಾವನೆಗಳು ಮತ್ತು ಅದನ್ನು ಎದುರಿಸುವ ಪೊಲೀಸ್ ಅಧಿಕಾರಿಯ ತಲ್ಲಣಗಳು ಬೇರೆಯದೇ ಆಯಾಮ ಬಯಸುವಂಥ ಎಲಿಮೆಂಟ್ ಗಳು. ಇಲ್ಲಿ ಭಾವ ಸಂಘರ್ಷಕ್ಕೆ ಒಂದು ಡೆಪ್ತ್ ಬೇಕಿತ್ತು. ಎಲ್ಲ ಪಾತ್ರಗಳು ಒಂದು ಮಟ್ಟಿನ ಸ್ಪಿರಿಚುಯಲ್ ಹಂತಕ್ಕೇರಬೇಕಿತ್ತು. ಆಗ ಭಾವ ಸಂಘರ್ಷಕ್ಕೊಂದು ತಾತ್ವಿಕ ನೆಲೆಯೂ ದಕ್ಕಬಹುದಿತ್ತು. ಅದು ನೋಡುಗನ ಅಂತರಾಳ ಪ್ರವೇಶಕ್ಕೆ ಪ್ರೇರೇಪಿಸಬಹುದಿತ್ತು. ಇದು ಕೇವಲ ಸಿಕ್ವೆನ್ಸ್ ಅಥವಾ ಟ್ವಿಸ್ಟ್ ಎನ್ನುವ ತಂತ್ರವಾಗಷ್ಟೇ ಕಾಣಿಸಿತು. ಎತ್ತಿಕೊಂಡ ವಿಷಯ  ಪ್ರಮುಖ ಕಥಾಹಂತದಲ್ಲಿ ಒಂದು ಮೇಲ್ಮಟ್ಟಕ್ಕೇಳಲಿಲ್ಲ ಎನಿಸಿತು. ಮುಂದಿನದ್ದೆಲ್ಲ ಮಾತು, ಸಂಭಾಷಣೆಗೆ ಸಿಲುಕಿತು. ಚಿತ್ರದಲ್ಲಿ ಮೂಡಿಬಂದ ಮುಸ್ಲಿಂ ಲೀಡರ್ ಪಾತ್ರ ಜಾಫರ್ ಷರೀಫ್, ಸಿ.ಎಂ. ಇಬ್ರಾಹಿಂ, ಗೌಡನ ಕ್ಯಾರೆಕ್ಟರ್ ಜಾತ್ಯತೀತ ಜನತಾದಳ ನಾಯಕ ದೇವೇಗೌಡ, ಕುಮಾರಸ್ವಾಮಿ ಎಂದು ವಾಚ್ಯಾರ್ಥದಲ್ಲಿ ಅನಿಸತೊಡಗಿತು.

 ಯಾವುದೇ ಧರ್ಮದಲ್ಲಿರುವಂತೆ ಇಸ್ಲಾಂನಲ್ಲೂ ಮತಾಂಧರಿದ್ದಾರೆ. ಎಲ್ಲ ಧರ್ಮದಲ್ಲಿರುವಂತೆ ಧಾರ್ಮಿಕ ಸಂಘ ಸಂಸ್ಥೆಗಳು ಇಸ್ಲಾಂನಲ್ಲೂ ಇವೆ. ಸಂಸ್ಕೃತ ಪಾಠಶಾಲೆ, ಮಠಗಳ ದಾಸೋಹದ ಶಾಲೆಗಳಲ್ಲಿ ಕಲಿಸುವ ಹಾಗೆಯೇ ಧಾರ್ಮಿಕ ಬೊಧನೆಯನ್ನು ಮದರಸಾಗಳೂ ಕಲಿಸುತ್ತಿವೆ. ವಿಷಯ ಬೇರೆ, ಭಾಷೆ ಬೇರೆ, ಆದರೆ, ಧಾರ್ಮಿಕ ಆಶಯ ಒಂದೇ.  ತಮಸ್ಸು ಚಿತ್ರದ ಮೌಲ್ವಿಯಂಥ ಕೆಲವೇ ಕೆಟ್ಟ ಶಕ್ತಿಗಳ ಮತಾಂಧತೆಗೆ ಇಡೀ ಇಸ್ಲಾಂ ಅನ್ನು ದೂರುವುದಕ್ಕೆ ಅವಕಾಶವಾಗಬಾರದು. ಆ ಪಾತ್ರ ಕೊಂಚ ಪ್ರಭಾವಿಯಾಗಿದ್ದರಿಂದ ಹಾಗನ್ನಿಸುವುದಕ್ಕೆ ಅವಕಾಶವಾಯಿತು.
 ಭಯೋತ್ಪಾದನೆ ಅನ್ನೋದು ಕೇವಲ ಇಸ್ಲಾಂ ಉಳಿವಿಗೆ ಮತ್ತು ಅದರ ಹರವು ವಿಸ್ತರಣೆಗೆಂದೇ ಹುಟ್ಟಿಕೊಂಡ ಕಲ್ಪನೆ ಏನಲ್ಲ. ಹಾಗೆ ವ್ಯಾಖ್ಯಾನಿಸುವುದು ಜಗದ ಚಾಳಿ ಆಗಿಹೋಗಿದೆ. ಇಂದಿನ ಬಹುಮುಖಿ ಸಂಸ್ಕೃತಿಯ ಇಂಡಿಯಾದ ಸ್ಥಿತಿಯಲ್ಲಿ ಇದು ಬಹುದೊಡ್ಡ ಸಾಮಾಜಿಕ ಅಪರಾಧವೇ ಆಗುತ್ತದೆ.

 ಭಯೋತ್ಪಾದನೆಗೆ ಜಾಗತಿಕ ಮಟ್ಟದ ವ್ಯಾಪ್ತಿ ಇದೆ. ಅದು ಮಾರುಕಟ್ಟೆ ವಿಸ್ತರಣೆಗೆ ಬಳಸಲ್ಪಡುತ್ತಿರುವ ಬಹುದೊಡ್ಡ ಅಸ್ತ್ರ.  ಶಸ್ತ್ರಗಳ ಪೈಪೋಟಿ ಜಗತ್ತಿಗೆ ಮತ್ತು ಸೆಕ್ಯುರಿಟಿ ಟೆಕ್ನಾಲಜಿ ಮಾರಾಟಕ್ಕೆ ಪೀಠಿಕೆ ಹಾಕುವ ಪ್ರಮುಖ ಚಾನೆಲ್. ಈ ಸಂಕೀರ್ಣತೆಯಲ್ಲಿ ಮುಗ್ಧ ಮುಸ್ಲೀಮರನ್ನು ಬಂಧಿಯಾಗಿಸಲಾಗುತ್ತಿದೆ. ಅವರ ಮೇಲೆ ಅಸ್ತ್ರ ಪ್ರಯೋಗಕ್ಕೆ ಮತ್ತು ಎರಡು ಪಂಗಡ ಅಥವಾ ದೇಶಗಳ ನಡುವೆ ಯುದ್ಧದ ಕಿಡಿ ಹೊತ್ತಿಸಿ ಅದಕ್ಕೆ ಅಗತ್ಯ ಪರಿಕರ ಒದಗಿಸುವ ಕಂಪೆನಿಗಳ ಉತ್ಪಾದನಾ ತೆವಲಿಗೆ  ಇಷ್ಟೆಲ್ಲ ಅನಾಹುತಗಳು ನಡೆಯುತ್ತಿವೆ. ಅಮೆರಿಕದ ಡಾಲರ್ ಸೊಕ್ಕು, ಮಧ್ಯಪ್ರಾಚ್ಯ ರಾಷ್ಟ್ರಗಳ ಪೆಟ್ರೊಮನಿ ಕೊಬ್ಬಿಗೆ ಹುಟ್ಟಿಕೊಂಡ ಶೈತಾನವತಾರವಿದು. ಯಾವಾಗ ಡಬ್ಲುಟಿಸಿ ಅವಳಿ ಗೋಪುರ ಬೂದಿಯಾಗಿ ಮಣ್ಣುಸೇರಿತೊ, ಅವತ್ತಿನಿಂದ ಇಡೀ ಜಗತ್ತು ಭಯೋತ್ಪಾದನೆಯ ಕರಿನೆರಳಲ್ಲಿದೆ ಎನ್ನುವ ಠೇಂಕಾರವನ್ನು ಅಮೆರಿಕ ಮತ್ತಿತರ ರಾಷ್ಟ್ರಗಳು  ಶುರುವಿಟ್ಟುಕೊಂಡವು. ಎಲ್ಲೆಡೆ ಮುಸ್ಲೀಮರನ್ನೇ ಗುರಿಯಾಗಿರಿಸಿಕೊಂಡು ಅವರ ಸರ್ಕಾರಗಳನ್ನು ಉರುಳಿಸುವ ಕೆಲಸ ನಡೆಯಿತು. ಮುಸ್ಲಿಂ ರಾಷ್ಟ್ರಗಳ  ಜನನಾಯಕರ ಕೊರಳಿಗೆ ಉರುಳು ಹಾಕುವ ಸಂಪ್ರದಾಯ ಶುರುವಾಗಿಬಿಟ್ಟಿತು. ಇದು ಅತ್ಯಂತ ಕೆಟ್ಟ ಬೆಳವಣಿಗೆ. ಮಾರುಕಟ್ಟೆ ಪೈಪೋಟಿಯಲ್ಲಿ ಭಯೋತ್ಪಾದನೆಯ  ತಾಯಿಬೇರಿದೆ. ನಮ್ಮ ಗುಜರಾತಿನ ಅಹಮದಾಬಾದಿನಲ್ಲಿ ಮಾರ್ವಾಡಿಗಳು ಮುಸಲ್ಮಾನರ ನಡುವೆ ಮತ್ತು ಮುಂಬೈನಂಥ ಶಹರುಗಳಲ್ಲಿ ಮುಸ್ಲೀಮರು ಮತ್ತು ಮುಸ್ಲಿಮೇತರರ ನಡುವೆ ಮಾರುಕಟ್ಟೆ ಪೈಪೋಟಿ ಇದೆ. ನಮ್ಮ ಹುಬ್ಬಳ್ಳಿಯಲ್ಲಿ ಇದಗಾ ಮೈದಾನದ ಸುತ್ತ ಶಾಪಿಂಗ್ ಕಾಂಪ್ಲೆಕ್ಸ್ ಏನಾದರೂ ರೂಪುಗೊಂಡಿದ್ದರೆ, ದುರ್ಗದಬೈಲ, ಕಮರಿಪೇಟೆ, ಹಳೇಹುಬ್ಬಳ್ಳಿಯಲ್ಲಿ ವ್ಯಾಪಾರ ನಡೆಸುತ್ತಿದ್ದವರಿಗೆ ದೊಡ್ಡ ಲುಕ್ಸಾನಾಗುತ್ತಿತ್ತು. ಪಟ್ಟೆಗಾರರು, ಮಾರ್ವಾಡಿಗಳು, ಬಣಜಿಗರು, ಲಿಂಗಾಯತ ಶೆಟ್ಟರು ಅಲ್ಲಿ ಸುರಿದ ಬಂಡವಾಳಕ್ಕೆ ದೊಡ್ಡ ಏಟು ಬೀಳುವ ಸಂಭವವಿತ್ತು. ಈ ಕಾಂಪ್ಲೆಕ್ಸನಿಂದ ಮುಸಲ್ಮಾನರ ಆರ್ಥಿಕ ಶಕ್ತಿ ಕೊಂಚ ಮೇಲಾಗುವ ಸಾಧ್ಯತೆಯೂ ಇತ್ತು. ಇದು ಬಿಕ್ಕಟ್ಟಿಗೆ, ವಿವಾದಕ್ಕೆ ಕಾರಣವಾಗಿ ಧ್ವಜ ವಿವಾದ ಹಾರಾಡಿಬಿಟ್ಟಿತು. ಮಾರುಕಟ್ಟೆ ಪೈಪೋಟಿ ಕೋಮು ಗಲಭೆಯಾಗಿ ರಾಕ್ಷಸ ರೂಪ ತಾಳಿತು.  ಈ ಆಯಾಮದಲ್ಲೂ ಭಯೋತ್ಪಾದನೆ ಪರಿಕಲ್ಪನೆ ಬಗ್ಗೆ ಯೋಚನೆ ಮಾಡಬೇಕಿದೆ. ಇದಕ್ಕೆ ಪರಿಹಾರ ಹುಡುಕೋದಾದರೆ ಇದೆಲ್ಲ ಗಮನದಲ್ಲಿಟ್ಟುಕೊಂಡೇ ಯೋಚಿಸಬೇಕಾಗುತ್ತದೆ.

 ತಮಸ್ಸು ಚಿತ್ರದಲ್ಲಿ ಇಮ್ರಾನ್ ಅವರಂಥ ಅಮಾಯಕ ಮುಸಲ್ಮಾನರನ್ನು ದಾಳಿ ಹೆಸರಲ್ಲಿ, ಎನ್ ಕೌಂಟರ್ ಹೆಸರಲ್ಲಿ ಹೊಡೆದುರುಳಿಸುವುದು ಜಾಗತಿಕ ಮಟ್ಟದಲ್ಲಿ ಮತ್ತು ಸ್ಥಳೀಯವಾಗಿ ಭಯೋತ್ಪಾದನೆಯಿಂದ ಆದ ಗಾಯಗಳನ್ನು ಮತ್ತಷ್ಟು ಕೆರೆದಂತೆನಿಸಿಬಿಡುತ್ತದೆ..

ಎಸಿಪಿ ಶಂಕರ ದಕ್ಷತೆಯ ಲೇಬಲ್ ಜತೆ ಸೈಕ್ ಥರ ವರ್ತಿಸುತ್ತಿದ್ದವನು ಕ್ರಮೇಣ ಹ್ಯೂಮನ್ ಆಗುತ್ತ ಸಾಗುತ್ತಾನೆ. ಕ್ರಮೇಣ ದೊಡ್ಡ ಹೀರೋ ಆಗಿಬಿಡುತ್ತಾನೆ. ಅವನ ಒಳ್ಳೆಯತನ, ಸಹಾನುಭೂತಿ, ಅನುಕಂಪೆಯಲ್ಲಿ ಇಮ್ರಾನ್ ತಂದೆ ಮತ್ತು ಆತನ ಸಹೋದರಿ ಆಮ್ರೀನ್ ಕರಗಿ ಹೋಗುತ್ತಾರೆ. ಕೊನೆಯಲ್ಲಿ ಡಾಕ್ಟರ್ ಸಾಕಿದ ಮಗು ಭಾರತಿಯನ್ನು ಇಮ್ರಾನ್ ತಂದೆ ಅಪ್ಪಿಕೊಳ್ಳುತ್ತಾನೆ. ಇಂಡಿಯಾ ಅನ್ನೋ ದೇಶ ಇಂಥವರೇ ಹೆತ್ತ ಕೂಸೇನಲ್ಲ. ಅದನ್ನು ಎಲ್ಲರೂ ಎತ್ತಿ ಆಡಿಸಿ ಬೆಳೆಸಿದ್ದು, ಅದು ಎಲ್ಲರಿಗೂ ಸೇರಿದ್ದು, ಯಾರೊಬ್ಬರ ಸೊತ್ತಲ್ಲ ಎನ್ನುವುದನ್ನು ಭಾರತಿ ಎನ್ನುವ ಮಗು ಸಾಂಕೇತಿಸುವುದು ಅರ್ಥಪೂರ್ಣವಾಗಿದೆ.
 ಈ ನೆಲದ ಬಹುಸಂಖ್ಯಾತರ ಮೆಹರ್ಬಾನಗಿ, ಸಹಾನುಭೂತಿ, ಅನುಕಂಪೆಯಲ್ಲೇ ಮುಸ್ಲೀಮರು ತಮ್ಮ ಬದುಕನ್ನೇನು ಕಾಣಬೇಕಿಲ್ಲ. ಧರ್ಮ ಹೆಚ್ಚಾಗಿ ಒಂದು ಐಡೆಂಟಿಟಿ ಪ್ರಶ್ನೆ. ಇಂಡಿಯಾದಲ್ಲಿ ಮುಸಲ್ಮಾನರ ಐಡೆಂಟಿಟಿಯೇ ಮುಸ್ಲಿಮೇತರರಿಗೆ ಹಿಂಸೆಯಾಗುತ್ತಿದೆ. ಇದು ಬೇಸಿಕ್ ಸಮಸ್ಯೆ.

structural demolition
 ಮನುಷ್ಯ ದೇಹದಲ್ಲಿನ ನರವ್ಯೂಹ ರಚನೆಯಲ್ಲಿ ಒಂದು ಮೇನ್ ಸಿಸ್ಟಂ ಡೀಫಂಕ್ಟ್ ಮಾಡಿದರೆ ಏನಾಗುತ್ತೆ? ಇಡೀ ದೇಹ ಶಾಶ್ವತ ವೈಕಲ್ಯಕ್ಕೆ ನೂಕಲ್ಪಡುತ್ತದೆ. ಅದು ಸಾವನ್ನು ತಕ್ಷಣಕ್ಕೆ ತರದು, ಆದರೆ ಬದುಕಿದಷ್ಟು ದಿನ ಸಾಯುತ್ತಲೇ ಇರುವಂತಾಗುತ್ತದೆ ಮನುಷ್ಯ ಜೀವದ ಸ್ಥಿತಿ.
 ಇಂಡಿಯಾ ದೇಶದ ದೇಹರಚನೆಯಲ್ಲಿ ಸೆಕ್ಯುಲರಿಸಂ,  ಟಾಲರೆನ್ಸ್ ಅನ್ನೋದು ಒಂದು ಮನೋಧರ್ಮ. ಇನ್ನೂ ಸರಳವಾಗಿ ಹೇಳಬೇಕೆಂದರೆ ಕೂಡಿಬಾಳುವ ಪರಿಕಲ್ಪನೆ ಒಂದು ನರಮಂಡಲ ವ್ಯವಸ್ಥೆಯಂತೆ. ಇದು ಒಂದು ಮಟ್ಟಿನಲ್ಲಾದರೂ ಜೀವಂತವಾಗಿತ್ತು.. ಹೀಗಾಗಿ ದೇಶವೂ ಕೊಂಚ ಶಾಂತಿಯಿಂದ ಬದುಕುತ್ತ ಬಂದಿತು. ಆದರೆ, ಈಗ ಈ ನರಮಂಡಲದ ಮೇನ್ ಸಿಸ್ಟಂ ಡೀಫಂಕ್ಟ್ ಆಗಿ ಸೆಕ್ಯುಲರಿಸಂ ಅಥವಾ ಸಹಿಷ್ಣುತಾ ಭಾವನೆ ಶಾಶ್ವತ ಅಂಗವೈಕಲ್ಯಕ್ಕೆ ಸರಿದಿದೆ. ಸೆಕ್ಯುಲರ್ ಸ್ಟೇಟ್ ಎನ್ನುವ ಸ್ಟ್ರಕ್ಚರ್ ಈಗ ಡ್ಯಾಮೇಜ್ ಆಗಿದೆ. ಇಂಡಿಯಾದಲ್ಲಿ ನೆಲೆಗೊಂಡಿರುವ ಬ್ರಾಹ್ಮಣರ ರಾಜಕೀಯ ಪಿತೂರಿಯಿಂದ ಇಂಥದೊಂದು structural demolition ಆಗಿದ್ದು ಬಾಬ್ರಿ ಮಸೀದಿ ಧ್ವಂಸಗೊಳ್ಳುವ ಮೂಲಕ.  ಇದು ಸಮಕಾಲೀನ ಸಂದರ್ಭದ ವಾಸ್ತವ. ಇಂಥ ಡೆಮಾಲಿಷನ್ ಕಲ್ಚರ್  ಇತಿಹಾಸದುದ್ದಕ್ಕೂ ಉಸಿರಾಡಿಕೊಂಡೇ ಬಂದಿದೆ. ಸೋಮನಾಥ ದೇವಾಲಯವನ್ನು ಮೊಘಲ್ ದೊರೆಗಳು ಆಕ್ರಮಣದ ವೇಳೆ ವಿಗ್ರಹಾರಾಧನೆ ವಿರೋಧಿ ಹೆಸರಲ್ಲಿ ಡ್ಯಾಮೇಜ್ ಮಾಡಿದ್ದು , ಬ್ರಾಹ್ಮಣರು ಬೌದ್ಧರ ಮೇಲೆ, ಜೈನ ಬಸದಿಗಳ ಮೇಲೆ, ಜೈನರು ಬ್ರಾಹ್ಮಣರ ದೇವಾಲಯಗಳ ಮೇಲೆ ದಾಳಿ ನಡೆಸಿದ್ದು, ವೈಷ್ಣವರು ಶೈವರು ಪರಸ್ಪರ ವಿಗ್ರಹಭಂಜನೆಯಲ್ಲಿ ತೊಡಗಿದ್ದು, ಬುದ್ಧನ ದೊಡ್ಡ ಪ್ರತಿಮೆಗಳನ್ನು, ಕಲ್ಲು ವಿಗ್ರಹಗಳನ್ನು  ತಾಲಿಬಾನಿಗಳು ಡೆಮಾಲಿಷನ್ ಮಾಡಿದ್ದು... ಎಲ್ಲವೂ structural demolition ಆಗಿ ನನಗೆ ಕಾಣಿಸುತ್ತಿದೆ.

(ತಮಸ್ಸು ಚಿತ್ರದಲ್ಲಿ ಕೂಡ ಸ್ಟೇಟ್ ಟೆರರಿಸಂ ಮೂಲಕ ಇಮ್ರಾನ್ ಕುಟುಂಬದ ಸ್ಟ್ರಕ್ಚರಲ್ ಡ್ಯಾಮೇಜ್ ಕೆಲಸ ನಡೆಯುತ್ತದೆ. ಕುಟುಂಬ ಎಂದರೆ, ಅಪ್ಪ, ಅಮ್ಮ, ಮಗ, ಮಗಳು... ಇದರಲ್ಲಿನ ಯಾವುದೋ ಒಂದರ ಜೀವ ತೆಗೆದುಬಿಡೋದು ಎಂದರೆ ಆ ಕುಟುಂಬ ಎನ್ನುವ ಸ್ಟ್ರಕ್ಚರ್ ಅನ್ನೇ ಡೆಮಾಲಿಷ ಮಾಡಲೆತ್ನಿಸಿದಂತಲ್ಲವೇ? ಇದು ಮುಸ್ಲೀಮರನ್ನು ಅಭದ್ರಗೊಳಿಸಲು, ಅತಂತ್ರಗೊಳಿಸಲು ಮತ್ತು ಅವರನ್ನು ಮುಖ್ಯವಾಹಿನಿಯಿಂದ ಆಚೆ ನೂಕುವುದಕ್ಕೆ ಮುಸ್ಲಿಂ ವಿರೋಧಿ ವ್ಯವಸ್ಥೆ ಅನುಸರಿಸುತ್ತಿರುವ ಒಂದು ವಿಧಾನ)

 ಸಮಕಾಲೀನ ಸಂದರ್ಭದಲ್ಲಿ ಬಾಬ್ರಿ ಮಸೀದಿ ಧ್ವಂಸ ಕೃತ್ಯ ಇಂಡಿಯಾ ದೇಶದ ಸಮೃದ್ಧ ಸೆಕ್ಯುಲರಿಸಂ ಸ್ಟ್ರಕ್ಚರ್ ಅನ್ನು ಹೊಡೆದುರುಳಿಸಿತು. ಆನಂತರದ ಇಂಡಿಯಾ ರಾಜಕೀಯದಲ್ಲಿ ಅದೆಂಥ ಪಲ್ಲಟಗಳಾದವು ಎನ್ನುವುದು ಗಮನಾರ್ಹ. ಸೆಕ್ಯುಲರಿಸಂ ತತ್ವ ಇಟ್ಟುಕೊಂಡು ಆಡಳಿತ ನಡೆಸಿಕೊಂಡು ಬಂದ ಕಾಂಗ್ರೆಸ್ ರಾಜಕೀಯ ಪರಿಕಲ್ಪನೆಯನ್ನು ಹೊಡೆದು ಹಾಕೋದು ಪ್ರಮುಖ ವಿರೋಧ ಪಕ್ಷಗಳ ಅಜೆಂಡಾ ಆಗಿತ್ತು. ಅದಕ್ಕಾಗಿ ಕಾಯುತ್ತಿದ್ದ ಸಂಘ ಪರಿವಾರದ ಮನಸ್ಥಿತಿಗಳಿಗೆ ಸೌತ್ ಇಂಡಿಯಾದಿಂದ ಬಂದ ಬ್ರಾಹ್ಮಣ ಪ್ರಧಾನಿ ನರಸಿಂಹರಾವ್ ಅವರ ಅಧಿಕಾರದ ಅವಧಿ ಒಂದು ದೊಡ್ಡ ಅವಕಾಶವಾಗಿ ಕಾಣಿಸಿತು. ಸಮಯ ನೋಡಿ ಸಂಘಪರಿವಾರದ ಮನಸ್ಥಿತಿಗಳು ಹೊಡೆತ ಹಾಕೇಬಿಟ್ಟವು. ಮಾಧ್ಯಮಗಳಲ್ಲಿನ ಪುರೋಹಿತಷಾಹಿ ಮನಸ್ಥಿತಿಗಳು ವೋ ಎಂದು ಸಾಥ್ ಕೊಟ್ಟವು. ಆ ಕ್ಷಣದಿಂದಲೇ ಕಾಂಗ್ರೆಸ್ ಸೆಕ್ಯುಲರಿಸಂ ರಾಜಕೀಯಕ್ಕೆ ಅಂಗವೈಕಲ್ಯ ಅಮರಿಕೊಂಡಿತು. ಇದು ಇಂಡಿಯಾ ರಾಜಕೀಯದ ಒಂದು ಹಂತದ ಸ್ಟ್ರಕ್ಚರಲ್ ಡೆಮಾಲಿಷನ್. ಇದರಲ್ಲಿ ಮುಸಲ್ಮಾನರನ್ನು ಕಾಂಗ್ರೆಸ್ಸಿನಿಂದ ದೂರ ಸರಿಸುವ ಯತ್ನಕ್ಕೆ ದೊಡ್ಡ ಗೆಲುವೇ ದಕ್ಕಿತು. ಇದರ ಲಾಭವನ್ನು ಪ್ರಾದೇಶಿಕ ಮಟ್ಟದಲ್ಲಿ ಮುಲಾಯಂ ಸಿಂಗ್ (ಉತ್ತರ ಪ್ರದೇಶದಲ್ಲಿ), ಲಾಲೂ ಪ್ರಸಾದ ಯಾದವ್ (ಬಿಹಾರದಲ್ಲಿ) ಮತ್ತು ದೇವೇಗೌಡ (ಕರ್ನಾಟಕದಲ್ಲಿ) ಮತ್ತಿತರರು ಚೆನ್ನಾಗೇ ಬಳಸಿಕೊಂಡರು. ಕಾಂಗ್ರೆಸ್ಸಿನಿಂದ ದೂರವಾಗತೊಡಗಿದ್ದ ಮುಸಲ್ಮಾನರನ್ನು  ತಮ್ಮ ಸಖ್ಯಕ್ಕೆ ಸೆಳೆದುಕೊಂಡರು. ಇದರ ಫಲವಾಗಿ ಕಾಂಗ್ರೆಸೇತರ ಶಕ್ತಿಗಳಿಗೆ ಬಹುದೊಡ್ಡ ಅವಕಾಶವೇ ತೆರಕೊಂಡಿತು. ಕಾಂಗ್ರೆಸ್ ನ ಸೆಕ್ಯುಲರಿಸಂ ರಾಜಕೀಯಕ್ಕೆ ಅಂಗವೈಕಲ್ಯ ಅಮರಿದ್ದ ಲಾಭವನ್ನು ಸಂಘ ಪರಿವಾರ ಸುಲಭವಾಗೇ ಬಳಸಿಕೊಂಡಿತು. ಅದು ಹಿಂದೂತ್ವ ಮತ್ತು ಹಿಂದೂ ಸಂಘಟನೆಯ ಹೆಸರಲ್ಲಿ ಕೆಳವರ್ಗದ ಮೇಲೆ ವಿಪರೀತ ಮಮಕಾರದ ಜಾಲ ಬೀಸಿತು. ವಾಜಪೇಯಿ ಎನ್ನುವ ಬ್ರಾಹ್ಮಣ ಮುಖವೊಂದನ್ನಿಟ್ಟುಕೊಂಡು, ಅಡ್ವಾಣಿ ನಡೆಸಿದ ರಾಮನ ರಥಯಾತ್ರೆಯ ದಿಗ್ವಿಜಯ ಇಟ್ಟುಕೊಂಡು, ಪಾಕ್ ಕಡೆ ಬೆರಳೆತ್ತುತ್ತ ನಮ್ಮೊಳಗಿನ ಮುಸಲ್ಮಾನರನ್ನು ಹೊರಗಿನವರನ್ನಾಗಿಸುವ ಯತ್ನವೊಂದನ್ನು ಬಿಜೆಪಿ ವ್ಯವಸ್ಥಿತ ರಾಜಕೀಯವಾಗಿ ನಡೆಸಿತು. ಕುವೈತ್ ಯುದ್ಧ, ತಾಲಿಬಾನ್ ಬೆಳವಣಿಗೆ ಮತ್ತು ದೇಶದೊಳಗೇ ನಡೆದ ಬಾಂಬ್ ಸ್ಫೋಟಗಳು, ಕಾರ್ಗಿಲ್ ಯುದ್ಧ ಇತ್ಯಾದಿಗಳನ್ನು ಮುಸಲ್ಮಾನರ ಮೇಲೆ ಗೂಬೆ ಕೂರಿಸುವುದಕ್ಕೆ ಬಳಸಿಕೊಂಡಿತು.

 ನಂತರದ ಜಾಗತಿಕ ಮಟ್ಟದ ಬೆಳವಣಿಗೆಗಳಲ್ಲಿ ಪ್ರತೀಕಾರದ ರೂಪವಾಗಿ ನಡೆದ ಡಬ್ಲುಟಿಸಿ ಧ್ವಂಸ ಕೃತ್ಯ ಬಹುಮುಖ್ಯವಾದ ಜಾಗತಿಕ ಸ್ಥಿತ್ಯಂತರಕ್ಕೆ ನಾಂದಿ ಹಾಡಿತು. ಇದು ಜಾಗತಿಕ ಮಟ್ಟದ ಬಹೊದೊಡ್ಡ ಸ್ಟ್ರಕ್ಚರಲ್ ಡೆಮಾಲಿಷನ್. ಅಲ್ಲಿಂದೀಚೆ ಅಫ್ಘಾನಿಸ್ತಾನ, ಇರಾಕ್ ಯುದ್ಧ, ಸದ್ದಾಂ ಹುಸೇನನ ಗಲ್ಲು... ಪಾಕಿಸ್ತಾನದ ಮೇಲೆ ಒತ್ತಡದ ತಂತ್ರಗಳೆಲ್ಲ ತೃತೀಯ ಜಗತ್ತಿನ ಮುಸಲ್ಮಾನರ ಬದುಕನ್ನು ಅಕ್ಷರಶಃ ನರಕಗೊಳಿಸಿದವು.

 ಈ ಎಲ್ಲ ಅವಾಂತರಗಳ ನಡುವೆಯೇ ಮುಸಲ್ಮಾನರಲ್ಲೂ ಧಾರ್ಮಿಕವಾಗಿ ಮತ್ತು ಶೈಕ್ಷಣಿಕವಾಗಿ ಬಹುದೊಡ್ಡ ಬದಲಾವಣೆಗಳೇ ನಡೆದಿವೆ. ಮದರಸಾಗಳ ಮೂಲಕ ಅವರು ಕಂಡುಕೊಳ್ಳಹೊರಟಿದ್ದು ಹೊಸದೊಂದು ಶೈಕ್ಷಣಿಕ ಕ್ರಾಂತಿಯನ್ನು. ಅದು ಕ್ರೈಸ್ತರ ಮಿಷಿನರಿಗೆ ಮತ್ತು ಇಂಗ್ಲೀಷಿನ ಮೊನಾಪಲಿಗೆ ಪರ್ಯಾಯವಾಗಿ ಅರಬಿ, ಉರ್ದು ಬೆಳೆಸುವ ಉಮೇದಿನ ಕ್ರಾಂತಿಕಾರಿ ಬೆಳವಣಿಗೆ ಅನ್ನೋದು ಸಮಕಾಲೀನ ಇಸ್ಲಾಂನ ನಂಬಿಕೆ. ಇದು ಕ್ರೈಸ್ತರ ಮಿಷಿನರಿಗೆ ಹೇಗೆ ದೊಡ್ಡ ಸವಾಲೋ, ಹಾಗೇ ಸಂಸ್ಕೃತ ಪಾಠಶಾಲೆಗಳಿಗೂ ದೊಡ್ಡ ಸವಾಲು. ಈ ಹಿನ್ನೆಲೆಯಲ್ಲಿ ಅಲ್ಲೊಬ್ಬ ಡಾ. ಹನೀಫ್ ಅಮಾಯಕ ಬಲಿಪಶುವಾಗುತ್ತಾನೆ, ಇಲ್ಲೊಬ್ಬ ಕಸಾಬ್ ತಲೆಕೆಟ್ಟು ನಿಲ್ಲುತ್ತಾನೆ. ಹೀಗೆ ಇವರ ಸಮುದಾಯಕ್ಕೆ ಸೇರಿದವರೆಲ್ಲರೂ ಸಂಕಷ್ಟಕ್ಕೆ ಸಿಲುಕಿ ಬಿಡುತ್ತಾರೆ. ತಮಸ್ಸು ಚಿತ್ರದ ಇಮ್ರಾನ್ ಈ ಅರ್ಥದಲ್ಲಿಯೂ ಬಲಿಪಶುವಾಗಿ ನನಗೆ ಕಾಣಿಸುತ್ತದೆ. ಎಸಿಪಿ ಶಂಕರನ ಮನಸ್ಥಿತಿ ಪ್ರತಿನಿಧಿಸುವುದು ಇಡೀ ವ್ಯವಸ್ಥೆಯ ಮುಸ್ಲಿಂ ವಿರೋಧಿ ಸೈಕ್ ಅನ್ನು. ಕೆಲ ಮಾಧ್ಯಮಗಳಲ್ಲಿ ಬಂದ ವಿಶ್ಲೇಷಣೆಗಳಂತೆ ಇದು ಗುಜರಾತಿನಲ್ಲಿ ನಡೆದ ಸ್ಟೇಟ್ ಟೆರರಿಸಂ ನ ಒಂದು ನಮೂನೆಯಷ್ಟೇ. ಈ ಹಿನ್ನೆಲೆಯಲ್ಲಿ  ಚಿತ್ರದಲ್ಲಿನ ಗಿರೀಶ ಮಟ್ಟೆನ್ನವರ್ ಮತ್ತು ವಾಸ್ತವ ಜಗತ್ತಿನ ಮುತಾಲಿಕ್ ಥರದವರ ಸೈಕ್ ಗೆ ಹೀರೋಯಿಸಂ ಬಂದುಬಿಡುತ್ತದೆ. ಆದರೆ, ಪೊಲೀಸ್ ವ್ಯವಸ್ಥೆ ಮಾಡಿದ ಇಮ್ರಾನ್ ಬಲಿ ಬೈಮಿಸ್ಟೇಕ್ ಅಥವಾ ಅಚಾತುರ್ಯದಿಂದ ನಡೆದ ಒಂದು ಘಟನೆಯಷ್ಟಾಗೇ ಕಾಣುವುದಲ್ಲವೇ?

 ಕರ್ನಾಟಕ ಮತ್ತೊಂದು ಗುಜರಾತ್ ಆಗುವ ಅಪಾಯವೊಂದು ಗೋಚರಿಸುತ್ತಿದ್ದ ಹೊತ್ತಲ್ಲಿ ಬಂದ "ತಮಸ್ಸು" ಚಿತ್ರ ಕೊಂಚ ಅಡ್ವಾನ್ಸ್ ಎಚ್ಚರಿಕೆಯಂತೆ ಅನಿಸುತ್ತದೆ. ಎಸಿಪಿ ಶಂಕರ್ ಆತ್ಮಶೋಧನೆಯ ಮನಸ್ಥಿತಿ ಈಗಿರುವ ಪೊಲೀಸ್ ವ್ಯವಸ್ಥೆಗೂ ಬರುವಂತಾಗಲಿ ಎನ್ನುವ ಆಶಯವನ್ನೂ ಈ ಚಿತ್ರ ಪ್ರತಿನಿಧಿಸಿದೆ.

 ಚಿತ್ರ ಮಾಸ್ ಗೆ ರೀಚ್ ಆಗದಿರೋದಕ್ಕೆ ಕಾರಣಗಳು ಹಲವು. ಹಿಂದೂ-ಮುಸ್ಲಿಂ ಭೇದ ಭಾವ ಕರ್ನಾಟಕದಲ್ಲಿ ಹಿಂದಿನಿಂದಲೂ ಅಷ್ಟರಮಟ್ಟಿಗೆ ಹದಗೆಟ್ಟ ಸ್ಥಿತಿಯಲ್ಲಿ ಇಲ್ಲ. ಈಗ ಹದಗೆಡಿಸುವ ಯತ್ನ ನಡೆಯುತ್ತಿದೆ ಎನ್ನುವುದನ್ನು ಗಮನಿಸಬೇಕು. ಮತ್ತು ಮುಸ್ಲೀಮರಲ್ಲೂ ಶೈಕ್ಷಣಿಕವಾಗಿ ಕೆಲ ಮಹತ್ವದ ಬದಲಾವಣೆಗಳೂ ಆಗುತ್ತಿವೆ. ಮದರಸಾ ಶಿಕ್ಷಣದ ಜತೆ ಇತರ ಶಿಕ್ಷಣದ ಶಿಸ್ತನ್ನು ಅವರೂ ಅಳವಡಿಸಿಕೊಳ್ಳುತ್ತಿದ್ದಾರೆ. (ಮೆಕ್ಯಾನಿಕ್, ವಾಚ್ ರಿಪೇರಿ, ಮೊಬೈಲ್ ರಿಪೇರಿ, ಇತರ ಕರಕುಶಲ ಕಲೆಗಾರಿಕೆ ಇವೆಲ್ಲವೂ ಶಿಕ್ಷಣದ ಸ್ವರೂಪಗಳೇ ಅಲ್ಲವೇನು?) ಹೀಗಾಗಿ ಇಸ್ಲಾಮಿನ ಬಗ್ಗೆಯೂ ಮುಸಲ್ಮಾನರಲ್ಲಿ ತುಂಬ ದೊಡ್ಡ ಅವೇರನೆಸ್ ಬಂದುಬಿಟ್ಟಿದೆ. ಭಯೋತ್ಪಾದನೆ ಜತೆ ಇಸ್ಲಾಂ ಅನ್ನು ತಳಕುಹಾಕುವುದು ಅವರಿಗೂ ಇಷ್ಟವಾಗಲ್ಲ. ಮಾಧ್ಯಮ ಜಗತ್ತಿನ ಅಡ್ವಾನ್ಸ್ ಮೆಂಟ್ ನಿಂದಾಗಿ ಅವರಲ್ಲೂ ಮಾಹಿತಿಗಳು ಹರಿದಾಡುತ್ತಿವೆ. ಪರ ವಿರೋಧ ವಾದಗಳು ಮತ್ತು ತಾತ್ವಿಕ ಸಂಘರ್ಷಗಳನ್ನು ಅವರೂ ಗಮನಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ 'ಅಮೀರ್' , 'ವೆಡ್ನಸ್ಡೇ' ಇಲ್ಲವೇ 'ಖುದಾ ಕೆ ಲಿಯೇ' ಥರದ ಚಿತ್ರಗಳ  ನವಿರು ಮನೋಧರ್ಮದ ಸೂಕ್ಷ್ಮತೆ ತಮಸ್ಸು ಚಿತ್ರಕ್ಕೆ ಇನ್ನೂ ಬೇಕಿತ್ತು ಅನಿಸಿತು.

 ತಮಸ್ಸು ಪ್ಲಾಟ್ ಬಾಲಿವುಡ್ ಚಿತ್ರವಾಗಲು ಸೂಕ್ತವಾಗಿದೆ. ಕೆಲ ಮಾರ್ಪಾಡುಗಳೊಂದಿಗೆ ಶಾರೂಕಖಾನ್ ಇಲ್ಲವೇ ಅಮೀರಖಾನ್ ಹಾಕಿಕೊಂಡು ಚಿತ್ರ ಮಾಡಿದಲ್ಲಿ ಒಂದು ಸೆನ್ಸಿಬಲ್, ಸಕ್ಸೆಸಫುಲ್ ಚಿತ್ರವಾಗೋದರಲ್ಲಿ ಸಂದೇಹವಿಲ್ಲ.

ಒಟ್ಟಾರೆಯಾಗಿ ಒಂದು ಒಳ್ಳೆಯ ಸೆನ್ಸಿಬಲ್ ಸಿನಿಮಾ ಕೊಡುವ ಮತ್ತು ಈಗಾಗಲೇ ಇರುವ ನಮ್ಮ ಟಿಪಿಕಲ್ ಸಿನಿಮಾ ಮನಸ್ಥಿತಿಯ ಹಳಸಲು ಫಾರ್ಮುಲಾಗಳ ಸ್ಟ್ರಕ್ಚರ್ ಅನ್ನು ಹೊಡೆದುರುಳಿಸಿ ಹೊಸತನ್ನು ಕಟ್ಟುವ ಯತ್ನ ಮಾಡಿದ್ದು ಗ್ರೇಟ್ ಎಫರ್ಟ್.

ನಮ್ಮ ಸಿನಿಮಾಗಳಲ್ಲಿ ಈತನಕ ಕಳ್ಳರು, ಭಯೋತ್ಪಾದಕರು, ರೌಡಿಗಳು ಇಲ್ಲವೇ ಮೆಕ್ಯಾನಿಕ್, ಆಟೋ ಡ್ರೈವರ್ ಪಾತ್ರಗಳಾಗೇ ಕಾಣಿಸಿಕೊಳ್ಳುತ್ತಿದ್ದ ಮುಸ್ಲೀಮರು ಹೀರೋ ಆಗುವುದಾಗಲಿ, ಮುಸಲ್ಮಾನರ ಪರ ಅಥವಾ ಅವರನ್ನೂ ಪರಿಗಣಿಸುವ ವಸ್ತುಗಳು ಚಿತ್ರವೊಂದರ ಪ್ರಮುಖ ಅಂಶವಾಗಿ ಬರೋದಾಗಲಿ ಕನಸಷ್ಟೇ ಆಗಿತ್ತು.  ಆದರೆ, ಮುಸ್ಲಿಂ ವಿಷಯವನ್ನು ಕೇಂದ್ರವಾಗಿಟ್ಟುಕೊಂಡು "ತಮಸ್ಸು" ಸಿನಿಮಾ ರೂಪಿಸಿದ ನಿಮ್ಮ ಉತ್ತಮ ಯತ್ನ ಮತ್ತು ಎದೆಗಾರಿಕೆಗೆ ದಿಲ್ ಸೇ ಸಲಾಂ.

ಕಾಮೆಂಟ್‌ಗಳು

ಅನಾಮಧೇಯಹೇಳಿದ್ದಾರೆ…
WOW! Brilliant explanation... nammantha chikavaru Tamassu film inda yochana sthiti nalli mulugidhu nija eega nimma writing innastu yochane maaduva hamshagalanu yethi torisidake danyavaada...Dil awarige namma kade inda Dil se Thanks :-)

Veena Narasasetty

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮನುಷ್ಯ ಜಾತಿ ತಾನೊಂದೇ ವಲಂ...

ಭಾರತದಲ್ಲಿ ಜಾತಿ ವ್ಯವಸ್ಥೆ ಹೇಗೆ ಹುಟ್ಟಿತು ಎಂಬುದಕ್ಕೆ ಯಾವುದೇ ನಿರ್ಧಿಷ್ಟ ಥಿಯರಿ ಇಲ್ಲ. ಆದರೆ, ಇಲ್ಲಿನ ವರ್ಗ ಸೃಷ್ಟಿ ಮಾತ್ರ ಇರಾನ್ ವ್ಯವಸ್ಥೆಯಂತೇ ಇದೆ.  ಪುರಾತನ ಇರಾನಿನ ಚರಿತ್ರೆಯಲ್ಲಿ ಇಂಥದೊಂದು ವ್ಯವಸ್ಥೆ ಇತ್ತು. ಅದಕ್ಕೆ ಪಿಸ್ತ್ರಾಸ್ ಎನ್ನುತ್ತಾರೆ. ನಮ್ಮಲ್ಲಿ ಅದು ಚಾತುರ್ವರ್ಣವಾಗಿದೆ. ಅಲ್ಲಿ ಅಥ್ರವಾನ್ಸ್ (ಪ್ರೀಸ್ಟ್ ಕ್ಲಾಸ್), ರಥೈಸ್ತಾ (ವಾರಿಯರ್ಸ್), ವಸ್ತ್ರಿಯಾ (ಮರ್ಕಂಟೈಲ್ ಕ್ಲಾಸ್) ಮತ್ತು ಹ್ಯುತಿ (ಆರ್ಟಿಸನ್) ಎನ್ನುವ ವರ್ಗ ವ್ಯವಸ್ಥೆ ಇದೆ. ನಮ್ಮಲ್ಲಿ ಇದನ್ನು ಕಲ್ಪಿಸಿಕೊಂಡರೆ ಪುರೋಹಿತ ಅಥವಾ ಬ್ರಾಹ್ಮಣ (ಅಥ್ರವಾನ್ಸ್), ಕ್ಷತ್ರಿಯ  (ರಥೈಸ್ತಾ), ವೈಶ್ಯ  (ವಸ್ತ್ರಿಯಾ) ಮತ್ತು ಶೂದ್ರ (ಹ್ಯುತಿ) ಎಂದು ಅರ್ಥೈಸಿಕೊಳ್ಳಬಹುದು.  ಆದಿ ಕಾಲದ ಇರಾನಿಯನ್ ವ್ಯವಸ್ಥೆ ಹೀಗೇ ಇತ್ತು. ಅದೇ ನಾಲ್ಕು ವರ್ಗಗಳು ಭಾರತದಲ್ಲೂ ಈಗಲೂ ಚಾಲ್ತಿಯಲ್ಲಿವೆ. ಹೀಗೆ ಒಂದು ಇರಾನ್ ಸಂಬಂಧ ಭಾರತಕ್ಕಿದೆ. ಚರ್ಮದ ಬಣ್ಣ, ನಯ ನಾಜೂಕು, ಕಣ್ಣು, ಬುದ್ಧಿವಂತಿಕೆಯನ್ನು ಹೋಲಿಸಿದರೆ ಭಾರತದ ಅದರಲ್ಲೂ ಉತ್ತರ ಭಾರತದ ಕಾಶ್ಮೀರಿ ಪಂಡಿತರು, ಉತ್ತರ ಪ್ರದೇಶದ ಪಂಡಿತ್, ಚಿತ್ಪಾವನ ಬ್ರಾಹ್ಮಣರು, ನಮ್ಮ ಕರಾವಳಿ ಮತ್ತು ಉತ್ತರ ಕನ್ನಡದ ಹವ್ಯಕರು ಹೆಚ್ಚೂ ಕಮ್ಮಿ ಇರಾನಿಗಳನ್ನು ಹೋಲುತ್ತಾರೆ (ಮೇಲ್ನೋಟಕ್ಕೆ).  ಬಹುಶಃ ಹೀಗೂ ಆಗಿರಬಹುದು, ಆಗ ಇರಾನ್ ನಲ್ಲಿ ಕ್ರೈಸ್ತ ಮತ್ತು ಇಸ್ಲಾಂ ಮುಂಚೆಯೂ ಹಲವಾರು ಸುಧಾರಣಾವಾದಿಗಳ ಅಥವಾ ಬಂಡುಕೋರರ

"ಮಣೆಗಾರ" ಬಸಿದಿಟ್ಟ ಒಡಲಾಳದ ನೋವು ನೆನೆದು...

ಹಾಲ್ಕುರಿಕೆ ಥಿಯೇಟರ್ ಕಾನ್ಸೆಪ್ಟ್ ಕನ್ನಡ ರಂಗಭೂಮಿಯಲ್ಲಿ ಹೊಸದೊಂದು ಸಂಚಲನವನ್ನುಂಟು ಮಾಡುತ್ತಿದೆ. ಒಟ್ಟಾರೆ ಭಾರತೀಯ ರಂಗಭೂಮಿ ಕಾಣುತ್ತಿರುವ ಹೊಸತನಕ್ಕೆ ಇದು ಮುಖ್ಯವಾದ ಸಾಕ್ಷಿ. ಅತ್ಯಂತ ಕ್ರಿಯಾಶೀಲ ತುಡಿತದ ರಂಗಕರ್ಮಿ ಹಾಲ್ಕುರಿಕೆ ಶಿವಶಂಕರ (ನಿರ್ದೇಶಕ/ನಾಟಕಕಾರ) ಇತ್ತೀಚೆಗೆ "ಮಣೆಗಾರ" (ತುಂಬಾಡಿ ರಾಮಯ್ಯನವರ ಆತ್ಮಕಥೆ) ಎನ್ನುವ ದಲಿತ ಕಥಾನಕವೊಂದನ್ನು ರಂಗದ ಮೇಲೆ ಅನಾವರಣಗೊಳಿಸಿದರು. ಪ್ರಯೋಗದ ದೃಷ್ಟಿಯಿಂದ ಕೆಲವು ಕೊರತೆಗಳು, ದೋಷಗಳು ಇವೆ. ಅದು ಯಾವುದೇ ಪ್ರಯೋಗಕ್ಕೆ ಇರುವಂಥವೇ. ಆದರೆ ಸಮುದಾಯವೊಂದರ ಒಡಲಾಳದ ನೋವನ್ನು ರಂಗದ ಮೇಲೆ ಬಸಿದಿಟ್ಟಾಗ  ಬೆಚ್ಚಿ ಬೀಳುವಂತಾಯಿತು. ವಿಶೇಷವಾಗಿ ದಲಿತೇತರಲ್ಲಿ ಸಾಮಾಜಿಕ ಪ್ರಜ್ಞೆ, ಜವಾಬ್ದಾರಿಯನ್ನು ಬಡಿದೆಬ್ಬಿಸುವಂಥ ಕಥಾನಕವದು. "ಮಣೆಗಾರ" ಪ್ರೊಸಿನಿಯಂಗಿಂತ ಆಪ್ತರಂಗಭೂಮಿಗೆ ಸೂಕ್ತವಾದ ವಸ್ತು. ಪ್ರಯೋಗ ಒಟ್ಟಾರೆ ಮನುಷ್ಯ ಬದುಕಿನ ನಡುವಿರುವ ಗ್ರೇ ಏರಿಯಾವೊಂದರ ದರುಶನ ಮಾಡಿಸಿತು. ಮೇಲ್ವರ್ಗ ಸಹಮಾನವರನ್ನು ಅದು ಹೇಗೆ ಅಸ್ಪೃಶ್ಯರು ಎಂದು ದೂರಕ್ಕಿಟ್ಟಿತ್ತು, ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿತ್ತು ಎನ್ನುವುದು ಇದರ ಮೂಲ ಸಂಕಟ. ಇಡೀ ನಾಟಕದಲ್ಲಿ ಬದುಕಿಗಾಗೇ ಸಂಘರ್ಷವಿದೆ. ಆಹಾರಕ್ಕಾಗಿ ಹಾಹಾಕಾರವಿದೆ. socio-cultural  ನೆಲೆಯಲ್ಲಿ ದೊಡ್ಡ ಸಂಘರ್ಷವಿದೆ. ಇದು ರಾಜಕೀಯ ಆಯಾಮದಲ್ಲೂ ಬಹುಮುಖ್ಯವಾದ ಸಂಘರ್ಷವೇ. ಶಿಕ್ಷಣ ಮತ್ತು ಅದರ ಆಧಾರದಲ್ಲಿ ಹುಟ

"ಬದುಕು-ಬಯಲು" ನಾಟಕ ಮತ್ತು ಮಾನವೀಯ ನೆಲೆಯ ಹುಡುಕಾಟ

ಫ್ರಾನ್ಸ್ ನ ಬರಹಗಾರ ಅಲ್ಫ್ರೆಡ್ ಜೆರಿ ಬರೆದ 'ದಿ ಸೂಪರ್ ಮೇಲ್' ಎನ್ನುವ ಕಾದಂಬರಿಯ ಪ್ರೊಟಗಾನಿಸ್ಟ್ ಆ್ಯಂಡ್ರಿ ಮಾರ್ಕೆಲ್ ಒಬ್ಬ ಜಂಟಲ್ ಮನ್, ವಿಜ್ಞಾನಿ ಕೂಡ. ಅವನಿಗೆ ಮಾನವ ಸಾಮರ್ಥ್ಯಕ್ಕೆ ಮಿತಿ ಎಂಬುದೇ ಇಲ್ಲ ಎನ್ನುವುದರಲ್ಲಿ ಬಲವಾದ ನಂಬಿಕೆ. ಆತ ಉಗಿಬಂಡಿ ಜತೆಗೂ ಯಾವುದೇ ವಿಶ್ರಾಂತಿ ಮತ್ತು ತ್ರಾಸಿಲ್ಲದೇ ಕ್ರಮಿಸಿ  ರೇಸ್ ಗೆಲ್ಲಬಲ್ಲ (ಕಾದಂಬರಿಯಲ್ಲಿ ರೈಲು ಮತ್ತು ಸೈಕ್ಲಿಸ್ಟ್ ನಡುವೆ ಒಂದು ರೇಸ್ ನಡೆಯುತ್ತದೆ). ಒಂದೇ ಹೆಂಗಸಿನ ಜತೆ 24 ಗಂಟೆಗಳಲ್ಲಿ 82 ಬಾರಿ ಸಂಭೋಗ ನಡೆಸಬಲ್ಲ 'ಕಾಮಪಟುತ್ವ'ದ ಸಾಹಸಗಳನ್ನೂ ಮಾಡಬಲ್ಲ. ಇದನ್ನು ಪುರುಷಪರಾಕ್ರಮದ ನೆಲೆಯಲ್ಲಿ ನೋಡೋದಾ? ಇಲ್ಲಾ ನಿಸರ್ಗ ಸಹಜ ಸಾಧ್ಯತೆಯ ನೆಲೆಯಲ್ಲಿ ನೋಡುವುದಾ?... - ಇದು ಒಂದು ರೀತಿಯ ವಿಕ್ಷಿಪ್ತ ಮನೋಧರ್ಮದ, ಸೈನ್ಸ್ ಫಿಕ್ಷನ್ ಕಾದಂಬರಿಯ ಸಂಕ್ಷಿಪ್ತ ನೋಟ. ಅಲ್ಫ್ರೆಡ್ ಜೆರಿ ಉತ್ತಮ ನಾಟಕಕಾರನೂ ಹೌದು. ಆತನ 'ಉಬು ರೊಯ್' ಹೆಸರಾಂತ ನಾಟಕಗಳಲ್ಲೊಂದು.    * * * ಜೆರಿ ಬಗ್ಗೆ ಓದುತ್ತಿದ್ದ ಹೊತ್ತಲ್ಲಿ ಹಿಜಡಾವೊಬ್ಬರ ಆತ್ಮಕಥನ ಆಧರಿಸಿದ "ಬದುಕು-ಬಯಲು" ಎನ್ನುವ ನಾಟಕ ವೀಕ್ಷಣೆಗೆ ತಿಪಟೂರಿನ ರಂಗ ಗೆಳೆಯ ನೀನಾಸಂ ಚಂದ್ರು ಆಹ್ವಾನ ನೀಡಿದರು.  ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ ನೋಡಿದೆ. ಅದಕ್ಕೂ ಮುಂಚೆ ನಾಟಕದ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಸಿ.ಎಸ್. ದ್ವಾರಕಾನಾಥ್, ಗೌರಿ ಲಂಕೇಶ್ ಮತ್ತಿತರ ಚಿಂತಕರ ವಿ