ವಿಷಯಕ್ಕೆ ಹೋಗಿ

ಬಳ್ಳಾರಿ ಕೆ ಶೋಲೆ!


ರೆಡ್ಡಿ/ಶ್ರೀರಾಮುಲು ಫೈಲ್:
ಖಾಸಗಿ ಫೈನಾನ್ಸ್ (Ennoble Savings and Investment India Pvt. Ltd) ಕಂಪೆನಿ ತೆಗೆದು ಬಳ್ಳಾರಿ ತುಂಬ ರೆಡ್ಡಿ (ಗಾಲಿ ಜನಾರ್ಧನ ರೆಡ್ಡಿ, ಕರುಣಾಕರ ರೆಡ್ಡಿ) ಶ್ರೀಮಂತಿಕೆಯ ಧೂಳು ಎಬ್ಬಿಸಿದ್ದರು. 200 ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪೆನಿ ಇಕ್ಕಟ್ಟಿಗೂ ಸಿಕ್ಕಿತ್ತು. ಈಗದು ಇತಿಹಾಸ. ಯಾವಾಗ ಚೀನಾಗೆ ಬಳ್ಳಾರಿಯ ಅದಿರು ಸಾಗತೊಡಗಿತೋ ಇವರ ನಸೀಬೇ ಚೇಂಜ್ ಆಯ್ತು. ಬಿಸಿಲು ನಾಡಿನ ರಸ್ತೆಯ ಮೇಲೇಳುತ್ತಿದ್ದ ಧೂಳು ಆಕಾಶಕ್ಕೆ ಟ್ರಾನ್ಸಫರ್ ಆಯ್ತು. ಅಕ್ರಮ ಅದಿರು ಸಾಗಾಣಿಕೆಯ ಆರೋಪದ ಹಿನ್ನೆಲೆಯಲ್ಲಿ ಇವರನ್ನು 'ಅದಿರುಗಳ್ಳರು' ಎಂದು ಟೀಕಿಸಲಾಗುತ್ತಿದೆ.
* * *
ಶ್ರೀರಾಮುಲು:
ಬಳ್ಳಾರಿ ಚುನಾವಣೆ ಸಂದರ್ಭದಲ್ಲಿ ಶ್ರೀರಾಮುಲು ಅವರನ್ನು ಪೊಲೀಸರು ಎರಡು ಬಾರಿ ಬಂಧಿಸಿದ್ದರು.
ಪ್ರಕರಣಗಳು:
1 ಕಾಂಗ್ರೆಸ್ ಅಭ್ಯರ್ಥಿ ಲಾಡ್ ಕಾರುಗಳನ್ನು ಸುಟ್ಟು ಹಾಕಿದ್ದು.
2 ಕಾಂಗ್ರೆಸ್ ಕಾರ್ಯಕರ್ತನನ್ನು ಪ್ರಜ್ಞೆತಪ್ಪುವಂಥ ಸ್ಥಿತಿಗೆ ಬರುವ ಹಾಗೆ ಥಳಿಸಿದ್ದು.
ಇವೆರಡೂ ಪ್ರಕರಣಗಳಲ್ಲಿ ಗಾಲಿ ಜನಾರ್ಧನ ರೆಡ್ಡಿ , ಶ್ರೀರಾಮುಲು ಬೆನ್ನಿಗೆ ನಿಂತುಕೊಂಡರು. ಗಣಿ ವ್ಯವಹಾರದಲ್ಲೂ ಇಬ್ಬರೂ ಸಾಥಿ. ಶ್ರೀರಾಮುಲು ಹಿಂದುಳಿದ ವರ್ಗಕ್ಕೆ ಸೇರಿದವರು. ರೆಡ್ಡಿ ಪ್ರಬಲ ಕೋಮಿನವರು. ಒಂದೇ ಪರಿವಾರದ ಸದಸ್ಯರಂತಿದ್ದಾರೆ. "ಶೋಲೆ" ಸಿನಿಮಾದ ಧರ್ಮೆಂದ್ರ ಮತ್ತು ಅಮಿತಾಬ್ ಜೋಡಿಯಂತೆ ಇವರು ಅನಿಸುತ್ತಾರೆ.

ಏ ದೋಸ್ತಿ ಹಮ್ ನಹೀ ಛೋಡೆಂಗೆ, ತೋಡೆಂಗೆ ದಮ್ ಮಗರ್ ತೇರಾ ಸಾಥ್ ನಾ ಛೋಡೆಂಗೆ... ಎಂದು ಒಂದೊಮ್ಮೆ ಬಳ್ಳಾರಿ ಗಲ್ಲಿ ಗಲ್ಲಿಗಳಲ್ಲಿ ಇಬ್ಬರೂ ಥೇಟು 'ಶೋಲೆ' ಸಿನಿಮಾದ ಜೋಡಿಯಂತೆ ದೋಸ್ತಿ ಹಾಡು ಹಾಡಿದ್ದಿದೆ.

ಸ್ವಲ್ಲ ಬಳ್ಳಾರಿ ಪಾಲಿಟಿಕ್ಸ್ ಮೇಲೊಂದು ಪ್ಯಾನ್.. :

ಬಳ್ಳಾರಿ ಇಡೀ ದೇಶದ ರಾಜಕೀಯ ಶಕ್ತಿ ಕೇಂದ್ರವೂ ಆಗಿದೆ. ಸೋನಿಯಾ ಗಾಂಧಿ ಇಲ್ಲಿ ಇಲೆಕ್ಷನ್ ನಿಂತರು. ಗೆದ್ದರು. ಸೋತ ಬಿಜೆಪಿಯ ಸುಷ್ಮಾ ಸ್ವರಾಜ್ ಬಿಜೆಪಿಯ "ಮಹಾಲಕ್ಷ್ಮಿ"ಯನ್ನು ಇಲ್ಲೇ ಪ್ರತಿಷ್ಠಾಪಿಸುವಲ್ಲಿ ತೊಡಗಿಕೊಂಡರು. ವರಮಹಾಲಕ್ಷ್ಮಿ ವೃತ ಮಾಡಿ, ಬಳ್ಳಾರಿಯ ನೆಲದಲ್ಲಿ 'ಮಹಾಲಕ್ಷ್ಮಿ ಕೃಪೆ'ಯಿಂದ ಬಿಜೆಪಿ ಅಧಿಕಾರಕ್ಕೆ ಬರಲಿ ಎಂದು ಹರಕೆ ಹೊತ್ತಿದ್ದರೇನೋ! ಅಂತೂ 1999ರ ಲೋಕಸಭಾ ಚುನಾವಣೆಯಿಂದೀಚೆಗೆ ಬಿಜೆಪಿ ಗರಿಗೆದರಿತು.
ಇಲ್ಲಿ ಸುಷ್ಮಾ , ದಿವಾಕರ ಬಾಬು ಉತ್ತರಾಧಿಕಾರಿ ಎಂದೇ ಬಿಂಬಿತವಾದ ಶ್ರೀರಾಮುಲು 'ಮಹಾಲಕ್ಷ್ಮಿ'ಯ ಭಾರೀ ಕೃಪೆಯಿದ್ದರೂ ಸೋತರು ಎನ್ನುವುದು ಗಮನಾರ್ಹ. ಜನತೆ ಸೋನಿಯಾ 'ಕೈ' ಬಿಡಲಿಲ್ಲ. ಸೋತ ಸುಷ್ಮಾಗೆ ಸಿಕ್ಕಿದ್ದು ರೆಡ್ಡಿ  ಮತ್ತು ಶ್ರೀರಾಮುಲು ಎಂಬ ಮಾನಸ ಪುತ್ರರು. ಬಿಜೆಪಿ ಆಶಾಕಿರಣಗಳು!

2001ರ ಬಳ್ಳಾರಿ ಮುನ್ಸಿಪಲ್ ಎಲೆಕ್ಷನ್ ನಲ್ಲಿ ಬಿಜೆಪಿಯ 'ಮಹಾಲಕ್ಷ್ಮಿ' ಕರಾಮತ್ತು ಮಾಡಿಯೇಬಿಟ್ಟಳು. ಕಾಂಗ್ರೆಸ್ ತೆಕ್ಕೆಯಲ್ಲಿದ್ದ ಮುನ್ಸಿಪಲ್ ಅನ್ನು ರೆಡ್ಡಿ ಬ್ರದರ್ಸ್, ಶ್ರೀರಾಮುಲು ಅನಾಮತ್ತಾಗಿ ಕಿತ್ತು ಕಮಲದ ದಳದಲ್ಲಿ ಇಟ್ಟರು. ಬಿಜೆಪಿ 'ಮಹಾಲಕ್ಷ್ಮಿ' ಕಮಲದ ಮೇಲೆ ಆರಾಮಾಗಿ ತೇಲಲಾರಂಭಿಸಿದ್ದು ಆಗಲೇ. ಈ ಮಹಾಲಕ್ಷ್ಮಿ 2004ರ ವಿಧಾನಸಭಾ ಚುನಾವಣೆಯಲ್ಲಿ ಮತ್ತಷ್ಟು ಕಂಗೊಳಿಸಿದಳು. 1952ರಿಂದ ಕಾಂಗ್ರೆಸ್ಸಿಗೇ ಅಂಟಿಕೊಂಡಿದ್ದ ಬಳ್ಳಾರಿ ಲೋಕಸಭಾ ಕ್ಷೇತ್ರವನ್ನು 'ಮಹಾಲಕ್ಷ್ಮಿ' ಬಿಜೆಪಿಗೆ ತಂದುಕೊಟ್ಟಳು. ರೆಡ್ಡಿ ಗೆದ್ದರು. ಜಿಲ್ಲಾ, ತಾಲೂಕು ಪಂಚಾಯತು, ಸ್ಥಳೀಯ ಚುನಾವಣೆಗಳೆಲ್ಲದರಲ್ಲಿ 'ಮಹಾಲಕ್ಷ್ಮಿ' ಬಿಜೆಪಿಗೆ ಗೆಲುವು ತರುತ್ತಲೇ ಸಾಗಿದಳು. ರೆಡ್ಡಿ ಬ್ರದರ್ಸ್, ಶ್ರೀರಾಮುಲು ಗೆಲುವಿನ ಗಾಲಿ ಉರುಳುತ್ತಲೇ ಸಾಗಿತು. ರೆಡ್ಡಿ-ಶ್ರೀರಾಮುಲು ಬಳ್ಳಾರಿಯ "ಶೋಲೆ"ಗಳಾದರು..
* * *'ಶೋಲೆ' ಚಿತ್ರದ ಕಥೆ ಹೀಗಿದೆ:
ಪೊಲೀಸ್ ಅಧಿಕಾರಿ ಚೌಧರಿ ಢಾಕೂ ಗಬ್ಬರಸಿಂಗ್ ಜತೆ ಜಟಾಪಟಿಗೆ ಬೀಳುತ್ತಾನೆ. ಆತನಿಗೆ ಚೌಧರಿ ಜೈಲಿನ ರುಚಿ ಬೇರೆ ತೋರಿಸಿರುತ್ತಾನೆ. ಸೇಡಿನ ಭಾವದಿಂದ ಚೌಧರಿಯ ಕುಟುಂಬದ ಮೇಲೆ ಗಬ್ಬರ್ ದಾಳಿ ನಡೆಸಿ ಕುಟುಂಬವನ್ನೇ ಮುಗಿಸಿಹಾಕುತ್ತಾನೆ. ಪ್ರತಿಯಾಗಿ ಚೌಧರಿ ಅವನನ್ನು ಅಟ್ಟಾಡಿಸಿಕೊಂಡು ಹೋಗುತ್ತಾನೆ. ಗಬ್ಬರ್ ಈತನ ಕಟ್ಟಿಹಾಕಿ 'ಏ ಹಾಥ್ ಮುಝೆ ದೇದೇ ಠಾಕೂರ್' ಎಂದು ಕಿತ್ತುಕೊಂಡು ಬಿಡುತ್ತಾನೆ. ಸೋತು, ಕೈ ಕಳಕೊಂಡ ಚೌಧರಿ ಸೇಡು ತೀರಿಸಿಕೊಳ್ಳುವ ಒಂದೇ ಗುರಿಯಿಂದ ದಾರಿ ಹುಡುಕಾಡಲಾರಂಭಿಸುತ್ತಾನೆ. ಆಗ ನೆನಪಾದವರೇ ವೀರೂ ಮತ್ತು ಜೈ ಎನ್ನುವ ಮಹಾ ಕಿಲಾಡಿಗಳು. ಕಳ್ಳತನ, ಚಾಲಾಕಿತನದಿಂದ ಶ್ರೀಮಂತರಾಗಲು ಯತ್ನಿಸಿ ಆಗಾಗ ಜೈಲು ಸೇರುತ್ತಲೇ ಇದ್ದ ಇಬ್ಬರನ್ನು ಬಳಸಿಕೊಂಡು ತನ್ನ ಶತ್ರು ಬೇಟೆಗೆ ಚೌಧರಿ ಯೋಜನೆ ರೂಪಿಸುತ್ತಾನೆ. ಅವರ ಶ್ರಮ, ತಾಕತ್ತು ಮತ್ತು ಚಾಕಚಕ್ಯತೆಯನ್ನು ತನ್ನ ಕೇವಲ ಗುರಿ ಸಾಧನೆಗೆ ಬಳಸಿಕೊಳ್ಳುತ್ತಾನೆ. ಚೌಧರಿ ಅಣತಿಯಂತೆ ವೀರೂ ಮತ್ತು ಜೈ ತಮ್ಮ ಜೀವ ಲೆಕ್ಕಿಸದೇ ಶತ್ರು ಪಾಳಯದತ್ತ ಮುನ್ನುಗ್ಗತ್ತಲೇ ಸಾಗುತ್ತಾರೆ. ಕ್ಲೈಮ್ಯಾಕ್ಸ್ ನಲ್ಲಿ ಜೈ ಗೆಳೆಯನ ಜೀವ ಉಳಿಸಿ ವೀರಮರಣವನ್ನಪ್ಪುತ್ತಾನೆ. ಚೌಧರಿ ಗುರಿ ಈಡೇರಿಕೆಗೆ ವೀರೂ ನೆರವಾಗುತ್ತಾನೆ.
* * *


'ಬಳ್ಳಾರಿ ಕೆ ಶೋಲೆ' ಕಥೆ...
ಬಳ್ಳಾರಿ ಲೋಕಸಭಾ ಎಲೆಕ್ಷನ್ ನಲ್ಲಿ 'ಮಹಾಲಕ್ಷ್ಮಿ'ಯ ತಾವರೆಯಿಂದಲಂಕೃತ 'ಕೈ'ಗಳನ್ನು ಜನ ಕಿತ್ತುಕೊಂಡರು. ಚೌಧರಿಯಂತೆ ಸೋತು ಸುಣ್ಣವಾಗಿದ್ದ ಸುಷ್ಮಾ (ಪ್ರಧಾನಿ ಕನಸಿನ ಬ್ರಾಹ್ಮಣ ಕುಲದ ಹೆಣ್ಣು) ತಮ್ಮ ಕನಸಿನ ಸಾಕಾರಗಳಿಗಾಗಿ ಬಳ್ಳಾರಿಯ ಮಾನಸ ಪುತ್ರರನ್ನು ಬೆಳೆಸುವ, ಬಳಸಿಕೊಳ್ಳುವ ಕೈಂಕರ್ಯ ಶುರುವಿಟ್ಟುಕೊಂಡರು (ಇದು ವಿರೋಧ ಪಕ್ಷಗಳ ಟೀಕೆ ಕೂಡ). ಅದು ಒಳ್ಳೆಯ ಫಲಿತಾಂಶವನ್ನೇ ತರುತ್ತ ಸಾಗಿದೆ. ದಕ್ಷಿಣದಲ್ಲಿ ಬಿಜೆಪಿ ಸರ್ಕಾರ ರಚನೆಯಾದುದರಲ್ಲಿ ಬಳ್ಳಾರಿ "ಮಹಾಲಕ್ಷ್ಮಿ"ಯ ಪಾತ್ರ ದೊಡ್ಡದೇ ಇದೆ. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ 'ಬಳ್ಳಾರಿ ಕೆ ಶೋಲೆ'ಗಳನ್ನು ಚೆನ್ನಾಗೇ ಬಳಸಿಕೊಂಡರು. ಮತ್ತು ನೋಡಿಕೊಂಡರು.

(ಸುಷ್ಮಾ, ಯಡಿಯೂರಪ್ಪ ಕಂಡಾಗೆಲ್ಲ 'ಶೋಲೆ' ಚಿತ್ರದ ಸಂಜೀವಕುಮಾರ್ ನಿರ್ವಹಿಸಿದ ವಿಕಲಾಂಗ ಚೌಧರಿಯ ಪಾತ್ರ ನೆನಪಿಗೆ ಬರುತ್ತದೆ. ಚೌಧರಿ ಪಾತ್ರಕ್ಕೆ ಚಿತ್ರದಲ್ಲಿ ಬೇರೆಯದೇ ವೇಟೇಜ್ ಇದೆ. ಗುರಿ ಸಾಧನೆಗೆ ಇತರರನ್ನು ಬಳಸಿಕೊಳ್ಳುವ ಚಿತ್ರದಲ್ಲಿನ ಈ ತಂತ್ರವಷ್ಟೇ ಇಲ್ಲಿ ಮುಖ್ಯ. ಅದಕ್ಕಷ್ಟೇ ಈ ರೆಫರೆನ್ಸ್ ಅನ್ವಯ )

ದೆಹಲಿಯಲ್ಲಿದ್ದುಕೊಂಡು ಸುಷ್ಮಾ ಮಾಡೋದೇಲ್ಲ ಏನು? ಈ 'ಬಳ್ಳಾರಿ ಕೆ ಶೋಲೆ'ಗಳನ್ನು ಇಟ್ಟುಕೊಂಡು ಕಾಂಗ್ರೆಸ್ ಮತ್ತು ರಾಜ್ಯ ರಾಜಕಾರಣವನ್ನು ಒಟ್ಟೊಟ್ಟಿಗೆ ಅಲ್ಲಾಡಿಸುತ್ತಲೇ ಇರೋದಲ್ಲವೇ? ಇದಕ್ಕೆ 'ಕುಲಬಾಂಧವ' ಅನಂತಕುಮಾರ್ ಸಾಥ್ ಇದೆ ಎನ್ನುವ ವದಂತಿಗಳಿವೆ. ಯಾಕೆಂದರೆ ಬಿಜೆಪಿ ಹಿಂದೂತ್ವ ಮಂತ್ರ ಹೇಳಿಕೊಂಡು ಅಧಿಕಾರಕ್ಕೆ ಬಂತು ತಾನೆ? ಅದರ ಪಾಲನೆ ಅಂದುಕೊಂಡಂತೆ ಆಗುತ್ತಿಲ್ಲ. ಅಂದರೆ ಹಿಂದೂತ್ವದ ಮುಂಚೂಣಿ ನಾಯಕರಾದ ಬ್ರಾಹ್ಮಣರು ರಾಜ್ಯ ರಾಜಕೀಯದ ಮುಂಚೂಣಿಗೆ ಬರುತ್ತಿಲ್ಲ ಎನ್ನುವುದು ಬಿಜೆಪಿ ಒಳಗಿನ ಕೆಲವರ ಸಂಕಟ. ಇಂಥ ಹಲವರಿಗೆಲ್ಲಾ ಇರುವ ಒಳುರಿ ಏನು ಗೊತ್ತಾ? ಯಡಿಯೂರಪ್ಪ ಬ್ರಾಹ್ಮಣೇತರ. ಅಥವಾ ಹಿಂದೂ ಅಲ್ಲ ವೀರಶೈವ! (ಚಿಮೂ ಅಂಥವರು ವೀರಶೈವ ಅಥವಾ ಲಿಂಗಾಯತ ಅನ್ನೋದು ಪ್ರತ್ಯೇಕ ಧರ್ಮವಲ್ಲ ಎಂದು ನಿರೂಪಿಸಲೆತ್ನಿಸುತ್ತಾರೆ ಅದು ಬೇರೆ ವಿಚಾರ. ಈ ಟೆಕ್ನಿಕಲ್ ಪ್ರಾಬ್ಲಂ ನಿಂದ ತನ್ನ ಕುಲಬಾಂಧವರೊಬ್ಬರು ಸಿಎಂ ಆಗಿದ್ದಕ್ಕೆ ವೃತಾ ತಕರಾರುಗಳು ಏಳಬಾರದಲ್ಲ ಎಂದುಕೊಂಡು ಲಿಂಗಾಯತರು/ಬ್ರಾಹ್ಮಣೇತರರು 'ಮೌನಿ'ಯಾಗಿದ್ದಾರೆ.)

'ಬಳ್ಳಾರಿ ಕೆ ಶೋಲೆ' ಗೆ ಒಂದಷ್ಟು ಹೋಮದ ತುಪ್ಪ ಸುರಿದಾಗೆಲ್ಲ ಇಲ್ಲಿ ಸಿಎಂ ಉರಿ ಉರಿಯಾಗುತ್ತಾರೆ. ಕುರ್ಚಿ ಅಲುಗಾಡಲಾರಂಭಿಸುತ್ತದೆ. ಹೀಗೆ ತನ್ನೊಳಗಿರುವ ಶತ್ರುವಿನ ಮಸಲತ್ತುಗಳು ರಾಜ್ಯ ಬಿಜೆಪಿಗೆ ಸವಾಲಾಗಿ ನಿಂತಿವೆ. ಇದಕ್ಕೊಂದು ತಾರ್ಕಿಕ ಅಂತ್ಯ ನೀಡಲು ಯಡಿಯೂರಪ್ಪ ಕೂಡ ಹೊಂಚು ಹಾಕುತ್ತಲೇ ಇದ್ದರು. ಕಾಂಗ್ರೆಸ್ ಸಿಬಿಐ ತನಿಖೆಗೆ ಒಪ್ಪುವಂತೆ ಮಾಡುತ್ತಿರುವ ಪಾದಯಾತ್ರೆ ಯಡಿಯೂರಪ್ಪಗೆ ಪರೋಕ್ಷ ಚಾನ್ಸ್ ಆಗೇ ಕಾಣಿಸುತ್ತದೆ. ಈಗ ಪರಿಸ್ಥಿತಿ ಹೇಗಿದೆ ಎಂದರೆ 'ಬಳ್ಳಾರಿ ಕೆ ಶೋಲೆ' ಮೇಲೆ ತನ್ನೀರು ಹಾಕುವ ಮೂಲಕವೇ ಪರಿಹಾರ ಕಂಡುಕೊಳ್ಳುವ ಅನಿವಾರ್ಯತೆ ಎಲ್ಲರಿಗೂ ಇದೆ. ಸುಷ್ಮಾ ಛೂಬಿಟ್ಟರೆನ್ನಲಾದ ವೀರೂ-ಜೈ (ರೆಡ್ಡಿ-ಶ್ರೀರಾಮುಲು) ಜೋಡಿ ಅಜೆಂಡಾ ಶುರುವಿಟ್ಟುಕೊಂಡಿದೆ. ಶ್ರೀರಾಮುಲು ತಲೆಬೋಳಿಸಿಕೊಂಡು ಯಾರದೋ ತಿಥಿ ಮಾಡಲು ಹೊರಟಂತೆ ಕಾಣಿಸುತ್ತಿದ್ದಾರೆ (ಬಚ್ಚೇಗೌಡರ ಕಮೆಂಟು ನೆನೆದು)! ಅಥವಾ ಸ್ವತಃ ರಾಜಕೀಯ ತಿಥಿ ಕಾಣಲು ಹೊರಟಿದ್ದಾರೋ? ಅಂತೂ ರೆಡ್ಡಿ ಬ್ರದರ್ಸ್ ಮೇಲಿನ ನಿಷ್ಠೆ, 'ಅಮ್ಮ' ಸುಷ್ಮಾ ಮೇಲಿನ ಕುರುಡು ಮಮತೆ ಅವರನ್ನು ಶೋಲೆ ಪಿಕ್ಚರಿನ ಜೈ ಹಾಗೆ ಮುನ್ನುಗ್ಗುವಂತೆ ಮಾಡಿದೆ.

ಇತ್ತ ಕಾಂಗ್ರೆಸ್ಸಿನಲ್ಲಿರುವ ಚೌಧರಿಗಳೇನೂ ಕಮ್ಮಿ ಇಲ್ಲ. "ಲೋಹಾ ಲೋಹೆ ಕೋ ಕಾಟತಾ ಹೈ" (ಮುಳ್ಳನ್ನು ಮುಳ್ಲಿಂದಲೇ ತೆಗೆಯಬೇಕು ಎನ್ನುವರ್ಥದಲ್ಲಿ) ಎಂದುಕೊಳ್ಳುತ್ತಾ ಸಿದ್ದರಾಮಯ್ಯ ಹೆಗಲ ಮೇಲೆ ತಮ್ಮ ಗುರಿಗಳನ್ನಿಟ್ಟು ಪಾದಯಾತ್ರೆಯಲ್ಲಿ ಸಂತರ ಹಾಗೆ ಹೆಜ್ಜೆ ಹಾಕುತ್ತಾ, ಡೋಲು ಬಾರಿಸುತ್ತಾ ಸಾಗಿದ್ದಾರೆ. ಅಕ್ರಮ ಗಣಿಗಾರಿಕೆ ಅಥವಾ ರೆಡ್ಡಿ ದರ್ಬಾರು ಅಂತ್ಯಕ್ಕಾಗಿ ಹೊರಟ ಪಾದಯಾತ್ರೆ ಈಗ ಸಿದ್ದರಾಮಯ್ಯ ವರ್ಸಸ್ ಶ್ರೀರಾಮುಲು ಜಂಗಿ ನಿಕಾಲಿ ಕುಸ್ತಿಯೂ ಆಗಿಹೋಗುತ್ತಿದೆ. ಹಾಗೆ ನೋಡಿದರೆ ರಾಜ್ಯದಲ್ಲಿ ಸಿದ್ದರಾಮಯ್ಯ-ಶ್ರೀರಾಮುಲು 'ಶೋಲೆ' ಪಿಕ್ಚರಿನ ವೀರೂ-ಜೈ ಜೋಡಿಯಂತಾಗಬೇಕಿತ್ತು. ಹಾಗಾಗಿದ್ದರೆ ಅಹಿಂದ ವರ್ಗಕ್ಕೊಂದು ಸಿಎಂ ಕುರ್ಚಿ ಸಲೀಸಾಗಿ ಒಲಿದುಬರುತ್ತಿತ್ತೇನೋ? ಶ್ರೀರಾಮುಲು ಕೂಡ ಕೆಳಸಮುದಾಯದಿಂದಲೇ ಬಂದವರು. ಸಿದ್ದರಾಮಯ್ಯ ಅವರಂಥ ಮುತ್ಸದ್ದಿಯನ್ನು ಅವರು ಅರ್ಥ ಮಾಡಿಕೊಳ್ಳಬೇಕಿತ್ತು. ಹಾಗಾಗಲು ಈ ರಾಜಕೀಯದೊಳಗಿನ "ಚೌಧರಿ"ಗಳು ಬಿಡಬೇಕಲ್ಲ?

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

'ಅನಭಿಜ್ಞ ಶಾಕುಂತಲ': ನೆನಪು ಮರೆವಿನಾಟ

 ಜೀವನವೇ ಒಂದು ನಾಟಕವೆಂದಾದರೆ. ಸಂಬಂಧ ಅನ್ನೋದು ಕಟ್ಟಿಕೊಂಡ ಆಟ. ಅಂದರೆ ನಾಟಕದಂತೆ ಬದುಕು ಕೂಡ ಆಟ ಕಟ್ಟುವ ಕ್ರಿಯೆ. ಇಲ್ಲಿ ಗುರಿ ಎಂದರೆ ಸುಖದ ಅಥವಾ ಸಾರ್ಥಕತೆಯ ದಡ ಸೇರುವುದು. ಈ ಆಟದ ಒಂದು ಹಂತದಲ್ಲಿ ಕಷ್ಟದ ಅಡವಿ ಸೇರುವುದೂ ಇದೆ! 'ಆಡಾಡ್ತ ಅಡವಿ ಸೇರುವುದು' ಅಂತಾರಲ್ಲ ಹಾಗೆ. ಅಡವಿ ಅಂದರೆ ಇಲ್ಲಿ ಸಂಕೀರ್ಣತೆ, ಸಂಕಷ್ಟ ಅವಘಡ, ಸಂದಿಗ್ಧತೆ ಎಂದು ಭಾವಿಸಿಕೊಳ್ಳಬಹುದು. ಬದುಕಿನ ದಾರಿಯಲ್ಲಿ ಒಮ್ಮೆ ಈ 'ಅಡವಿ' ಎದುರಾಗೇ ಆಗುತ್ತದೆ ಎನ್ನುವುದು ವಿಧಿಲಿಖಿತವೇ? ಗೊತ್ತಿಲ್ಲ. ಪ್ರೀತಿ-ಪ್ರೇಮ-ಕಾಮ ಎನ್ನುವ ಬದುಕಿನ ಒಟ್ಟಾರೆ ಆಟ- ಕೂಟದಲ್ಲಿ ಪಡಕೊಳ್ಳುವುದೆಲ್ಲ ಜೀವಕಾರುಣ್ಯವಷ್ಟೇ ಅಲ್ಲ. ಸಂಕಷ್ಟ ಮತ್ತು ಸಂದಿಗ್ಧತೆಯೂ ಜತೆಯಲ್ಲಿರುತ್ತದೆ ಎನ್ನುವುದು ಸಹಜ ಮನೋಧರ್ಮ.  ಬದುಕಿನ ಆಟಕ್ಕೆ ತೆರಕೊಂಡವರಲ್ಲಿ ಹಲವರು ಅನುಭವಿಸಿದ ಮಧುರ ಘಳಿಗೆಗಳನ್ನು ಕಡೆತನಕ ನೆನಪಿಟ್ಟುಕೊಳ್ಳುತ್ತಾರೆ. ಕೆಲವರು ಮರೆತೇ ಬಿಡುತ್ತಾರೆ!?..  ಕಾಳಿದಾಸನ ಮಹಾಕಾವ್ಯ ಶಾಕುಂತಲೆಯಲ್ಲಿ ಈ ಬದುಕು, ಮನುಷ್ಯ ಪ್ರೀತಿ ಪಯಣದ ನೆನಪು ಮತ್ತು ಮರೆವಿನಾಟ ಮನಮಿಡಿಯುವಂತೆ ಚಿತ್ರಣಗೊಂಡಿದೆ. ಈ ಕಾವ್ಯದಲ್ಲಿ ಎಲ್ಲವನ್ನು ವಿಧಿಯೇ ನಿರ್ಧರಿಸಿದಂತೆನಿಸುತ್ತದೆ. ಫೇಟಲಿಸಂ ವಾದಕ್ಕೆ ಪೂರಕವಾದ ಚಿಂತನೆ ಇದೆನ್ನಬಹುದು. ಆಧುನಿಕ ಯುಗದ ಶೇಕ್ಸಪಿಯರ್ ನ ಹಲವು ನಾಟಕಗಳಲ್ಲಿಯೂ ಈ ಫೇಟಲಿಸಂ ಪ್ರಧಾನ ಪಾತ್ರದಂತೆ ವರ್ತಿಸುವುದನ್ನು ಗಮನಿಸಬಹುದು. *

ಇಷ್ಕ್‌ ಕೆ ಇಮ್ತೆಹಾನ್‌ ಔರ್‌ ಭೀ ಹೈ’.. ಇಮ್ರಾನ್‌ ಖಾನ್‌!

ಪಾಕಿಸ್ತಾನದ ಬಗ್ಗೆ ಮಾತನಾಡುವುದು ಮಹಾ ಪಾಪದ ಕೆಲಸವೇನಲ್ಲ. ಹಾಗೆ ಭಾವಿಸಬೇಕಿಲ್ಲ. ಅದು ಒಪ್ಪಿತವೊ ಇಲ್ಲವೋ, ಅದರ ಬಗ್ಗೆ ಅಲಕ್ಷ್ಯವೋ ನಿರ್ಲಕ್ಷ್ಯವೊ ಏನೇ ಆದರೂ ಅದು ಒಂದು ದೇಶ. ನೆರೆಯ ರಾಷ್ಟ್ರ. ‘ಪಡೋಸಿ...’ ಸಂಬಂಧದಲ್ಲಿ ನಮ್ಮದೇ ಕರುಳಬಳ್ಳಿ. ಭಾಷೆ, ಜನಜೀವನ ಶೈಲಿಯಲ್ಲಿ ಬದಲಾದರೂ ಮನುಷ್ಯ ಭಾವ, ಬದುಕುವ ಸಾಮಾನ್ಯ ಕಾಳಜಿ  ಒಂದೇ. ಹಾಗೆ ನೋಡಿದರೆ ಸಾಂಸ್ಕೃತಿಕವಾಗಿ ಎರಡೂ ದೇಶಗಳು ಅಭಿನ್ನ. ನಮ್ಮಲ್ಲಿರುವ ಹಾಗೆ ಅಲ್ಲಿಯೂ ಪ್ರಜಾಪ್ರಭುತ್ವ ಇದೆ. ಅಲ್ಲಿ ನಡೆಯುವುದು ಇಲ್ಲೂ ನಡೆಯುತ್ತದೆ. ಅಲ್ಲಿ ನಡೆಯಲೇಬಾರದ್ದು ಇಲ್ಲೂ ನಡೆಯಲೇಬಾರದು.  ತೀವ್ರವಾದ ನಮ್ಮಲ್ಲಿನದಕ್ಕಿಂತ ಅಲ್ಲಿ ತುಸು ಹೆಚ್ಚು ಸವಾರಿಗೆ ಹವಣಿಸಿದೆ. ಅಲ್ಲಿನ ಮಿಲಿಟರಿ ಅತಿರೇಕದ್ದು. ಅಕ್ಷಮ್ಯ. ಮತ್ತೆ ದೇಶ ಪುಟ್ಟದಾದಷ್ಟು ಅದಕ್ಕೆ ಭಯಗಳು ಜಾಸ್ತಿ. ಮಿಲಿಟರಿ ಕವಚದಲ್ಲಿ ಅದು ಸುರಕ್ಷಾ ಭಾವವನ್ನು ಕಲ್ಪಿಸಿಕೊಳ್ಳುತ್ತದೆ. ಅದೊಂದು ತರಹದ ಸಮಾಧಾನ. ಆದರೆ ಭ್ರಮೆಯಿಂದ ಕೂಡಿದ್ದು. ಭಯೋತ್ಪಾದನೆ ಕೂಡ ಒಂದರ್ಥದಲ್ಲಿ ಪುಕ್ಕಲುತನವೇ ಆಗುತ್ತದೆ. ಹಿಂಸಾ ಪ್ರವೃತ್ತಿಗೆ ಹೆದರಿಸುವುದೇ ಕೆಲಸ. ಹೆದರಿಸುವವರು ಶೂರರು, ಧೀರರು ಮತ್ತು ಜೀನಿಯಸ್‌ ಆಗಿರಲು ಹೇಗೆ ಸಾಧ್ಯ? ಮುಖ್ಯವಾಗಿ ಅಲ್ಲಿನ ವಿದ್ಯಮಾನಗಳನ್ನು ಗಮನಿಸುವುದಾದರೆ, ಮಿಲಿಟರಿ, ಮತಾಂಧರು, ಭಯೋತ್ಪಾದಕರು, ಭ್ರಷ್ಟರು ಇದೆಲ್ಲದರಿಂದ ಪಾಕಿ ತುಂಬ ರೋಸಿ ಹೋಗಿದ್ದಾನೆ. ಒಂದು ಸೂಕ್ತ ಪರ್ಯಾಯಕ್ಕಾಗಿ ಹಂಬಲಿಸಿದ್ದಾನೆ. ಸಹಜ

ಮನುಷ್ಯ ಜಾತಿ ತಾನೊಂದೇ ವಲಂ...

ಭಾರತದಲ್ಲಿ ಜಾತಿ ವ್ಯವಸ್ಥೆ ಹೇಗೆ ಹುಟ್ಟಿತು ಎಂಬುದಕ್ಕೆ ಯಾವುದೇ ನಿರ್ಧಿಷ್ಟ ಥಿಯರಿ ಇಲ್ಲ. ಆದರೆ, ಇಲ್ಲಿನ ವರ್ಗ ಸೃಷ್ಟಿ ಮಾತ್ರ ಇರಾನ್ ವ್ಯವಸ್ಥೆಯಂತೇ ಇದೆ.  ಪುರಾತನ ಇರಾನಿನ ಚರಿತ್ರೆಯಲ್ಲಿ ಇಂಥದೊಂದು ವ್ಯವಸ್ಥೆ ಇತ್ತು. ಅದಕ್ಕೆ ಪಿಸ್ತ್ರಾಸ್ ಎನ್ನುತ್ತಾರೆ. ನಮ್ಮಲ್ಲಿ ಅದು ಚಾತುರ್ವರ್ಣವಾಗಿದೆ. ಅಲ್ಲಿ ಅಥ್ರವಾನ್ಸ್ (ಪ್ರೀಸ್ಟ್ ಕ್ಲಾಸ್), ರಥೈಸ್ತಾ (ವಾರಿಯರ್ಸ್), ವಸ್ತ್ರಿಯಾ (ಮರ್ಕಂಟೈಲ್ ಕ್ಲಾಸ್) ಮತ್ತು ಹ್ಯುತಿ (ಆರ್ಟಿಸನ್) ಎನ್ನುವ ವರ್ಗ ವ್ಯವಸ್ಥೆ ಇದೆ. ನಮ್ಮಲ್ಲಿ ಇದನ್ನು ಕಲ್ಪಿಸಿಕೊಂಡರೆ ಪುರೋಹಿತ ಅಥವಾ ಬ್ರಾಹ್ಮಣ (ಅಥ್ರವಾನ್ಸ್), ಕ್ಷತ್ರಿಯ  (ರಥೈಸ್ತಾ), ವೈಶ್ಯ  (ವಸ್ತ್ರಿಯಾ) ಮತ್ತು ಶೂದ್ರ (ಹ್ಯುತಿ) ಎಂದು ಅರ್ಥೈಸಿಕೊಳ್ಳಬಹುದು.  ಆದಿ ಕಾಲದ ಇರಾನಿಯನ್ ವ್ಯವಸ್ಥೆ ಹೀಗೇ ಇತ್ತು. ಅದೇ ನಾಲ್ಕು ವರ್ಗಗಳು ಭಾರತದಲ್ಲೂ ಈಗಲೂ ಚಾಲ್ತಿಯಲ್ಲಿವೆ. ಹೀಗೆ ಒಂದು ಇರಾನ್ ಸಂಬಂಧ ಭಾರತಕ್ಕಿದೆ. ಚರ್ಮದ ಬಣ್ಣ, ನಯ ನಾಜೂಕು, ಕಣ್ಣು, ಬುದ್ಧಿವಂತಿಕೆಯನ್ನು ಹೋಲಿಸಿದರೆ ಭಾರತದ ಅದರಲ್ಲೂ ಉತ್ತರ ಭಾರತದ ಕಾಶ್ಮೀರಿ ಪಂಡಿತರು, ಉತ್ತರ ಪ್ರದೇಶದ ಪಂಡಿತ್, ಚಿತ್ಪಾವನ ಬ್ರಾಹ್ಮಣರು, ನಮ್ಮ ಕರಾವಳಿ ಮತ್ತು ಉತ್ತರ ಕನ್ನಡದ ಹವ್ಯಕರು ಹೆಚ್ಚೂ ಕಮ್ಮಿ ಇರಾನಿಗಳನ್ನು ಹೋಲುತ್ತಾರೆ (ಮೇಲ್ನೋಟಕ್ಕೆ).  ಬಹುಶಃ ಹೀಗೂ ಆಗಿರಬಹುದು, ಆಗ ಇರಾನ್ ನಲ್ಲಿ ಕ್ರೈಸ್ತ ಮತ್ತು ಇಸ್ಲಾಂ ಮುಂಚೆಯೂ ಹಲವಾರು ಸುಧಾರಣಾವಾದಿಗಳ ಅಥವಾ ಬಂಡುಕೋರರ