ವಿಷಯಕ್ಕೆ ಹೋಗಿ

ತಪಸ್ಸು! ಹೀಗೂ ಒಂದು ಬಂಡಾಯ

ಅಂಗೀ ತೆಗೆದು
ಅಂಗಾತಾಗಿ ಮಲಗಿದ್ದ
ಸಂಗಾತಿಯನ್ನು
ಕಂಡು
ಸಂಗೀತವಾದಳು ಅವಳು
ಕಾಮ್ರೇಡ್, ಕಾಮ್ರೇಡ್
ಅನ್ನುತ್ತ... ಕಾಮಾಗಿ
ರೇಡ್
ಮಾಡಿದಳು

ಬಿಡುವಿನ ವೇಳೆ ಆಫೀಸಿನ ಲೈಬ್ರರಿಯಲ್ಲಿ ಒಂದು ಸಣ್ಣ ಸುತ್ತು ಹಾಕುತ್ತಿದ್ದೆ,  ಇಂಗ್ಲೀಷ್ ಪ್ರೊಫೆಸರ್ ಚಂಪಾ ಚಿತ್ರ ಹೊಂದಿದ ಕನ್ನಡದ ಪುಟ್ಟ ಪುಸ್ತಕ ಕಣ್ಣಿಗೆ ಬಿತ್ತು. ಅದು ಅವರದೇ ಹನಿಗವನಗಳ ಪುಟ್ಟ ಸಂಕಲನ. ಓದುತ್ತಾ ಒಂದಷ್ಟು ನಕ್ಕೆ. ಕೆಲ ಹನಿಗವನಗಳ 'ಹಣಿ'ಯುವ ಪರಿ ಸೆಳೆyiತು. ಈ ಮೇಲಿನ ಕವಿತೆ ಓದಿದ ಮೇಲೆ. ಡಾ. ಸಿದ್ಧನಗೌಡ ಪಾಟೀಲರು (ಸಿಪಿಐ ರಾಜ್ಯ ಕಾರ್ಯದರ್ಶಿ) ನೆನಪಾದರು. ಫೋನ್ ಮಾಡಿದೆ. 'ಬಾಗಲಕೋಟ್ಯಾಗ  ಇದೀನಿ' ಅಂದ್ರು.  ಕವಿತೆ ಓದಿ ಹೇಳಿದೆ. ಅವರೂ ನಕ್ಕರು. ಪ್ರತಿಯಾಗಿ ಒಂದಷ್ಟು ಕುಟುಕಿದರು. ಅದನ್ನಿಲ್ಲಿ ಹೇಳುವುದು ಅನಗತ್ಯ.

ಅದು ಇದು ಮಾತನಾಡುತ್ತ ಬಂಡಾಯ ಸಂಘಟನೆಯ ಬಗ್ಗೆ ಪ್ರಸ್ತಾಪಿಸಿದರು. ಚಿತ್ರದುರ್ಗದ ಸಭೆ ಬಗ್ಗೆಯೂ ಹೇಳಿದರು. ಬೆಳಗಾವಿಗೆ ಕಾಮ್ರೆಡ್ ಒಬ್ಬರ ಅಂತಿಮ ದರ್ಶನ ಮಾಡಿಕೊಂಡು ಬರುವಾಗ ಧಾರವಾಡ-ಹಳಿಯಾಳ ರಸ್ತೆಯಲ್ಲಿ ಕಂಡ ಪ್ರಸಂಗವೊಂದನ್ನು ಹೀಗೆ ವಿವರಿಸಿದರು.
-ಅಲ್ಲಿ ಜನಸಾಗರವಿತ್ತು. ರಸ್ತೆಯ ಪಕ್ಕದಲ್ಲಿ ಕಟೌಟ್ ಗಳ ಭರಾಟೆಯೂ ಕಾಣಿಸಿತು. ನೆರೆದವರನ್ನು ವಿಚಾರಿಸಿದರೆ, ರಸ್ತೆಗೆ ಹತ್ತಿರದ ಬೆಟ್ಟವೊಂದರ ಮೇಲೆ ಸ್ವಾಮಿಗಳೊಬ್ಬರು ಲೋಕಕಲ್ಯಾಣಕ್ಕೆಂದು ತಿಂಗಳ ಕಾಲ ತಪಸ್ಸು ಕೈಗೊಂಡಿದ್ದಾರಂತೆ ಎಂದೆಲ್ಲ ಹೇಳಿದರು.
ಸ್ವಾಮೀಜಿ ಇಲ್ಲೇ ಯಾಕೆ ತಪಸ್ಸು? ಎಂದು ಕುತೂಹಲದಿಂದ ಕೇಳಿದೆ.
 ಸ್ವಾಮೀಜಿ ಇದೇ ಮಾರ್ಗದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದರಂತೆ, ರಸ್ತೆಯಲ್ಲಿ ಕಾರಿನ ಎದುರು ಬಸವಣ್ಣನೇ ಬಂದು ನಿಂತಂತೆನಿಸಿತಂತೆ. ಕೆಳಕ್ಕಿಳಿದರೆ ಸುಂದರ ಬೆಟ್ಟ! ಬೆಟ್ಟದ ಸುತ್ತ ಬಸವಣ್ಣ ನಡೆದಾಡುವುದು ಕಾಣಿಸಿತಂತೆ... ಹೀಗಾಗಿ ಬೆಟ್ಟದ ಮೇಲೆ ಪುಟ್ಟದಾಗಿ ಕಟ್ಟಿದ ಗುಡಿಯಲ್ಲಿ ಸ್ವಾಮಿಗಳು ತಪಸ್ಸು ಕೂತರಂತೆ. ಅವರು ತಪಸ್ಸಿನಲ್ಲಿ ಏನೇನು ಕಾಣ್ತಿದಾರೋ! ಅಂತೂ ಸ್ವಾಮೀಜಿ ಕಾಣಲು ಜನ  ಸೇರುತ್ತಿದ್ದಾರಂತೆ... ಎಂದು ಗೌಡರು ನಕ್ಕರು.
 ಸ್ವಾಮೀಜಿಗೆ ಬಸವಣ್ಣ ಕಂಡರೋ ಇಲ್ಲವೋ ಗೊತ್ತಿಲ್ಲ. ಆ ಬೆಟ್ಟ ಮಾತ್ರ ಪ್ರಶಸ್ತ ಜಾಗ!
ಸ್ವಾಮೀಜಿ ಬೆಳಗಾವಿಗೆ ಹತ್ತಿರದವರು. ಲೋಕಕಲ್ಯಾಣಕ್ಕೆ ಆಯ್ದುಕೊಂಡ ಜಾಗ, ತಪಸ್ಸಿನ ಮಾರ್ಗವೂ ಸೂಕ್ತವಾಗೇ ಇದೆ.
 ಅಲ್ಲಾ ಗೌಡರೆ, ಬೆಟ್ಟಗಳು, ಗುಡ್ಡಗಳ ಮೇಲೆ ಎಷ್ಟೆಲ್ಲ ಜನಾ ಕಣ್ಣು ಹಾಕ್ತಾರೆ... ಕಲ್ಲು, ಅದಿರು, ಗ್ರಾನೈಟ್ ಅಂತೆಲ್ಲ ಎಂಥಿಂಥ ಮಹಾತ್ಮರು ಬೆಟ್ಟ, ಗುಡ್ಡ ನುಂಗ್ತಿದಾರೆ..  ಪಾಪ ಈ ಸ್ವಾಮೀಜಿ ಜಪ, ತಪದ ನೆಪದಲ್ಲಾದರೂ ಹಿಗೂ ಬೆಟ್ಟ ರಕ್ಷಣೆ ಮಾಡ್ತಾರೆ ಬಿಡಿ. ಬಳ್ಳಾರಿ, ಸೊಂಡೂರು, ಗದಗ ಕಪ್ಪತಗುಡ್ಡದಂಥ ನೂರಾರು ಬೆಟ್ಟ ಗುಡ್ಡಗಳತ್ತಲೂ ಸ್ವಾಮೀಜಿ ಕಣ್ಣು ಹಾಯಿಸಲಿ. ಅಲ್ಲೂ  ಬಸವಣ್ಣ ಕಂಡಾನು... ಅಲ್ಲೂ ಜಪ, ತಪ ಮಾಡಲಿ... ಕನಿಷ್ಠ ಅಳಿದುಳಿದ ಕೆಲ ಬೆಟ್ಟಗಳಾದರೂ ಗಣಿಚೋರರಿಂದ ರಕ್ಷಣೆಯಾದರೂ ಪಡಕೋತಾವೆ ಎಂದೆ ನಾನು.
ಬಳ್ಳಾರಿ ಬೆಟ್ಟಗಳ ಮೇಲೆ ಸ್ವಾಮೀಜಿ ಕಣ್ಣು ಹಾಕಿದ್ರಂತ ಇಟ್ಕೊ, ಗಣಿಧಣಿಗಳು ಸುಮ್ಮನೇ ಬಿಡ್ತಾರಾ ಅಂದ್ರು ಗೌಡ್ರು.
ಅದೂ ನಿಜಾನೇ. ಆಗಲೇ ಅಗೆದು ಹಾಕಿದ ಜಾಗದಲ್ಲಿ ದೊಡ್ಡ ಕಂದರಗಳಿದಾವಲ್ಲ, ಅಲ್ಲಿ ಕಣ್ಣು ಹಾಕಿದವರನ್ನೆಲ್ಲಾ ಲಿಂಗೈಕ್ಯ ಮಾಡಿಸಿಬಿಡ್ತಾರಂತೀರೇನು? ಅಂದೆ.
ಗೌಡ್ರು ಮತ್ತೆ ನಕ್ಕರು. ಆದ್ರೂ ಬಂಡೆಗಳ ಮೇಲೆ ಸ್ವಾಮೀಜಿಗಳದು ಹೀಗೂ ಒಂದು ಬಂಡಾಯ ಚಿಗುರಲಿ ಇದೂ ಒಳ್ಳೆಯ ಐಡಿಯ ಅಲ್ವೇನ್ರಿ ಗೌಡರೆ ಅಂದೆ.
ಹೌದು ತಾಳು. ಇದಕ್ಕೇನಾರೂ ಒಂದು ಮಾಡೋಣ ಅಂದ್ರು ಗೌಡರು.
ನನಗೆ ಚಂಪಾ ಅವರ ಈ 'ಹಣಿ'ಯುವ ಕವಿತೆ ನೆನಪಾಯ್ತು. 


'ನಾವು ಬಂಡೆಗಳ ಮೇಲೆ
ಚಿಗುರಬೇಕಾಗಿದೆ'
-ಎಂದು ಬಂಡಾಯ ಕವಿಯೊಬ್ಬ
ಚೀರಿಕೊಂಡ.
ನಮ್ಮ ಅಗ್ರಹಾರದ
ಅನಂತಮುಖೀ ಭಟ್ಟ
ಬೋಳು ತಲೆ ಮೇಲೆ ನಿಗುರಿ ನಿಂತ
ಚಂಡಿಕೆ ನೇವರಿಸುತ್ತ,
'ನಾವೂ ಹೀಗೇ ಚಿಗುರಿದ್ದು'
-ಎಂದುಕೊಂಡ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಷ್ಕ್‌ ಕೆ ಇಮ್ತೆಹಾನ್‌ ಔರ್‌ ಭೀ ಹೈ’.. ಇಮ್ರಾನ್‌ ಖಾನ್‌!

ಪಾಕಿಸ್ತಾನದ ಬಗ್ಗೆ ಮಾತನಾಡುವುದು ಮಹಾ ಪಾಪದ ಕೆಲಸವೇನಲ್ಲ. ಹಾಗೆ ಭಾವಿಸಬೇಕಿಲ್ಲ. ಅದು ಒಪ್ಪಿತವೊ ಇಲ್ಲವೋ, ಅದರ ಬಗ್ಗೆ ಅಲಕ್ಷ್ಯವೋ ನಿರ್ಲಕ್ಷ್ಯವೊ ಏನೇ ಆದರೂ ಅದು ಒಂದು ದೇಶ. ನೆರೆಯ ರಾಷ್ಟ್ರ. ‘ಪಡೋಸಿ...’ ಸಂಬಂಧದಲ್ಲಿ ನಮ್ಮದೇ ಕರುಳಬಳ್ಳಿ. ಭಾಷೆ, ಜನಜೀವನ ಶೈಲಿಯಲ್ಲಿ ಬದಲಾದರೂ ಮನುಷ್ಯ ಭಾವ, ಬದುಕುವ ಸಾಮಾನ್ಯ ಕಾಳಜಿ  ಒಂದೇ. ಹಾಗೆ ನೋಡಿದರೆ ಸಾಂಸ್ಕೃತಿಕವಾಗಿ ಎರಡೂ ದೇಶಗಳು ಅಭಿನ್ನ. ನಮ್ಮಲ್ಲಿರುವ ಹಾಗೆ ಅಲ್ಲಿಯೂ ಪ್ರಜಾಪ್ರಭುತ್ವ ಇದೆ. ಅಲ್ಲಿ ನಡೆಯುವುದು ಇಲ್ಲೂ ನಡೆಯುತ್ತದೆ. ಅಲ್ಲಿ ನಡೆಯಲೇಬಾರದ್ದು ಇಲ್ಲೂ ನಡೆಯಲೇಬಾರದು.  ತೀವ್ರವಾದ ನಮ್ಮಲ್ಲಿನದಕ್ಕಿಂತ ಅಲ್ಲಿ ತುಸು ಹೆಚ್ಚು ಸವಾರಿಗೆ ಹವಣಿಸಿದೆ. ಅಲ್ಲಿನ ಮಿಲಿಟರಿ ಅತಿರೇಕದ್ದು. ಅಕ್ಷಮ್ಯ. ಮತ್ತೆ ದೇಶ ಪುಟ್ಟದಾದಷ್ಟು ಅದಕ್ಕೆ ಭಯಗಳು ಜಾಸ್ತಿ. ಮಿಲಿಟರಿ ಕವಚದಲ್ಲಿ ಅದು ಸುರಕ್ಷಾ ಭಾವವನ್ನು ಕಲ್ಪಿಸಿಕೊಳ್ಳುತ್ತದೆ. ಅದೊಂದು ತರಹದ ಸಮಾಧಾನ. ಆದರೆ ಭ್ರಮೆಯಿಂದ ಕೂಡಿದ್ದು. ಭಯೋತ್ಪಾದನೆ ಕೂಡ ಒಂದರ್ಥದಲ್ಲಿ ಪುಕ್ಕಲುತನವೇ ಆಗುತ್ತದೆ. ಹಿಂಸಾ ಪ್ರವೃತ್ತಿಗೆ ಹೆದರಿಸುವುದೇ ಕೆಲಸ. ಹೆದರಿಸುವವರು ಶೂರರು, ಧೀರರು ಮತ್ತು ಜೀನಿಯಸ್‌ ಆಗಿರಲು ಹೇಗೆ ಸಾಧ್ಯ? ಮುಖ್ಯವಾಗಿ ಅಲ್ಲಿನ ವಿದ್ಯಮಾನಗಳನ್ನು ಗಮನಿಸುವುದಾದರೆ, ಮಿಲಿಟರಿ, ಮತಾಂಧರು, ಭಯೋತ್ಪಾದಕರು, ಭ್ರಷ್ಟರು ಇದೆಲ್ಲದರಿಂದ ಪಾಕಿ ತುಂಬ ರೋಸಿ ಹೋಗಿದ್ದಾನೆ. ಒಂದು ಸೂಕ್ತ ಪರ್ಯಾಯಕ್ಕಾಗಿ ಹಂಬಲಿಸಿದ್...

ನಾನು ನೀನಾಸಂ ಪದವೀಧರನಲ್ಲ...

ನೀನಾಸಂ ಪದವಿ ನನ್ನ ತಲೆಗೆ ಅನಗತ್ಯ ಭಾರ ಸ್ವಾಮೀ. ಅಷ್ಟು ಕಪ್ಪು ಸುಂದರಿಯರ ಭಾರವೇ ನನ್ನ ತಲೆಗೆ ಸಾಕಾಗಿ ಹೋಗಿದೆ. ಇನ್ನು ಇಷ್ಟು 'ವಜನ್' ಪದವಿ ಕಿರೀಟ ಬೇಡವೇ ಬೇಡ. ಸುಮ್ಮನೇ ಖಾಸಗಿಯಾಗಿ ಡೈರಿಯ ಹಾಗೆ ಬೆಚ್ಚಗೆ ನನ್ನ ಜತೆಗೆ ಸದಾ ಇರಲಿ ಎಂದುಕೊಂಡು ಈ ಬ್ಲಾಗ್ ರೂಪಿಸಿದ್ದೇನಷ್ಟೇ. ಅವಧಿ ಬ್ಲಾಗ್ ನನ್ನ ಈ ಪುಟ್ಟ ಯತ್ನಕ್ಕೆ ಬೆನ್ನು ತಟ್ಟಿದ್ದು ಸಂತೋಷವೇ. ಆದರೆ, ನನ್ನ ಬಗ್ಗೆ ಬೆನ್ನುತಟ್ಟುವ ಸಾಲುಗಳ ಬರೆಯುತ್ತ ನೀನಾಸಂ ಪದವೀಧರ ಎನ್ನುವ ಒಂದು ತಪ್ಪು ಮಾಹಿತಿ ಕೂಡ ನುಸುಳಿಕೊಂಡಿದೆ. ಸ್ವಾಮೀ ನಾನೀ ನೀನಾಸಂ ಸುದ್ದಿಗೇ ಹೋದವನಲ್ಲ. ಅಲ್ಲಿ ಕಲಿತು ಬಂದವರ ಜತೆ 'ಬೇಜಾನ್' ಜಗಳ ಮಾಡಿದಿನಿ ಅಷ್ಟೇ.

ಕಲೆ ಮತ್ತು ನೈತಿಕತೆ

ಕಲಾವಿದನೊಬ್ಬನ ಕಲೆಯ ಬಗೆಗಿನ ಅನುರಾಗ, ಶ್ರದ್ಧೆ, ವಿಶ್ವಾಸಾರ್ಹತೆ ಮತ್ತು ಧ್ಯಾನ ಎಲ್ಲವೂ ಬದ್ಧತೆಯಿಂದ ಕೂಡಿರುತ್ತದೆ. ಅವನೊಳಗೇ ಒಂದು ಸ್ವರ್ಗ ಸಮಾನವಾದ ಜಗತ್ತೊಂದು ರೂಪುಗೊಂಡಿರುತ್ತದೆ. ಅದನ್ನು ಬೇಕಿದ್ದರೆ ಕಾವ್ಯದ  ಅಂತಃದೃಷ್ಟಿ, ಅಂತಃಪ್ರಜ್ಞೆ ಅಥವಾ ಅಂತಃ ಸೂಕ್ಷ್ಮತೆ ಅಂತ ಅನ್ನಿ. ಕಾವ್ಯ ಎಂದಾಕ್ಷಣ ಅಕ್ಷರಗಳ ಕಲಾಕೃತಿ ಅಲ್ಲ. ಕಾವ್ಯ ಅಥವಾ ಪೊಯಟ್ರಿ ಅನ್ನೋದು ಎಲ್ಲದರೊಳಗೂ ಇರುವ ಅವ್ಯಕ್ತ ಸೂಕ್ಷ್ಮ. ಅದನ್ನು ಅಭಿವ್ಯಕ್ತಿಸಲು ನಾವು ಕಂಡುಕೊಳ್ಳುವ ಮಾರ್ಗಗಳಲ್ಲಿ ಅಕ್ಷರ, ಶಬ್ದ, ಧ್ವನಿ, ಚಿತ್ರ, ಅಭಿನಯ.. ಎಲ್ಲವೂ ಒಂದು ಮಾಧ್ಯಮ. ಕಲಾವಿದ ಅಥವಾ ಕವಿ ತಾನು ಸೃಜಿಸಹೊರಟ ಕೃತಿಯಲ್ಲಿ ಇದೆಲ್ಲವನ್ನು ಪ್ರಯೋಗಕ್ಕೊಳಪಡಿಸಿ ಅದರ ಸಾರವನ್ನೇ ಅಭಿವ್ಯಕ್ತಿಯಲ್ಲಿ ಎರಕಹೊಯ್ಯುತ್ತಾನೆ. ಹಾಗಾದಾಗ ಆ ಕಲಾಕೃತಿಯಲ್ಲಿ ಧ್ವನಿಸುತ್ತಿರುವುದು ಅವನ ದೃಷ್ಟಿ, ಪ್ರಜ್ಞೆ, ತತ್ವ, ಅಭಿಪ್ರಾಯ ಆಗುತ್ತದೆ. ಇದಕ್ಕೂ ಮಿಗಿಲಾಗಿ ಅದು ಆತನ ಅನುಭಾವ ಪರಪಂಚವೇ ಆಗುತ್ತದೆ. ಪ್ರತಿನಿಧಿಸುವ ತತ್ವ ಅವನದೇ ಆಗಬಹುದು. ಅದಕ್ಕವನು ಬದ್ಧನೂ ಆಗಬಹುದು. ಇಲ್ಲವೇ ಅರಾಜಕತೆಯ ಹಾಗೊಂದು ಭಾವದಲ್ಲಿ ತನಗೂ ತನ್ನ ಕಲಾಕೃತಿಗೂ ಸಂಬಂಧವೇ ಇಲ್ಲ ಎಂದು ವಾದಿಸಬಹುದು. ಅರಾಜಕತೆಯಿಂದ ಕೂಡಿದ ಯಾವುದೂ ಬಹುಕಾಲ ಬಾಳಿ ಬದುಕುವಂಥದ್ದಲ್ಲ ಎನ್ನುವ ಎಚ್ಚರ ಕೂಡ ಮುಖ್ಯ.   ಮತ್ತೆ ಕಲಾವಿದನ ಅಭಿವ್ಯಕ್ತಿಯನ್ನು ಬರಿಯ ಸಾಂಸ್ಕೃತಿಕ ನೆಲೆಯಲ್ಲಿ ಮಾತ್ರ ಕಾಣಬೇಕಿಲ್ಲ. ಅದು ಸಮ...