ವಿಷಯಕ್ಕೆ ಹೋಗಿ

ವೈಯಕ್ತಿಕವಾದದ ರಾಜಕೀಯ ಇನ್ನೂ ಅನಿವಾರ್ಯವೇ?

ಲೋಕಸಭೆ, ವಿಧಾನಸಭೆಗೆ ನಡೆವ ಚುನಾವಣೆಗಳಲ್ಲಿ ವೈಯಕ್ತಿಕವಾದವೇ ವಿಜೃಂಭಿಸುತ್ತಿದೆ. ಇಡೀ ದೇಶ ಸೋನಿಯಾ, ರಾಹುಲ್, ಅಡ್ವಾಣಿ... ಎನ್ನುವ ಹೆಸರುಗಳ ಆಧಾರದಲ್ಲಿ ಒಂದು ವ್ಯವಸ್ಥೆಯನ್ನು ರೂಪಿಸಿಕೊಳ್ಳುತ್ತಿದೆ.

ಕಾಶ್ಮೀರದಲ್ಲಿ ಫಾರೂಕ್, ಓಮರ್ ಅಬ್ದುಲಾ. ಉತ್ತರ ಪ್ರದೇಶದಲ್ಲಿ ಮಾಯಾವತಿ, ಮುಲಾಯಂ. ಗುಜರಾತಿನಲ್ಲಿ ನರೇಂದ್ರ ಮೋದಿ. ಬಿಹಾರದಲ್ಲಿ ಲಾಲೂ ಯಾದವ್, ನಿತೀಶ್ ಕುಮಾರ್. ದಕ್ಷಿಣದ ತಮಿಳುನಾಡಿನಲ್ಲಿ ಕರುಣಾನಿಧಿ, ಜಯಲಲಿತಾ. ಆಂಧ್ರದಲ್ಲಿ ನಾಯ್ಡು, ಚಿರಂಜೀವಿ, ಜಗನ್ ಮತ್ತು ಕರ್ನಾಟಕದಲ್ಲಿ ಯಡಿಯೂರಪ್ಪ, ದೇವೇಗೌಡ, ಕುಮಾರಸ್ವಾಮಿ... ಮತ್ತಿತರರ ವೈಯಕ್ತಿಕ ಮಹತ್ವಾಕಾಂಕ್ಷೆ, ರಾಜಕೀಯ ಹಿತಾಸಕ್ತಿಗಳೇ ಈಗ ಹೆಚ್ಚು ಮಹತ್ವ ಪಡೆದುಕೊಳ್ಳುತ್ತಿರುವುದನ್ನು ಪ್ರಾದೇಶಿಕ ಮಟ್ಟದಲ್ಲೂ ಕಾಣುತ್ತಿದ್ದೇವೆ. ವೈಯಕ್ತಿಕವಾದದ ಹಿತಾಸಕ್ತಿ ಕಾಪಾಡಲು ತಮ್ಮದೇ ಸಿದ್ಧಾಂತಗಳು, ಪಕ್ಷ ಮತ್ತು ಸಮೀಕರಣಗಳನ್ನು ಇವರು ರೂಪಿಸಿಕೊಳ್ಳುತ್ತಾರೆ. ಜಾತಿ, ಹಣ, ತೋಳ್ಬಲಗಳ ಬಳಕೆಯೂ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಇದೆಲ್ಲ ಪ್ರಜಾಪ್ರಭುತ್ವ ಹೆಸರಲ್ಲಿ ತತ್ವರಹಿತ ರಾಜಕೀಯ. ಅರಸೊತ್ತಿಗೆಯ ಮತ್ತೊಂದು ರೂಪದಂತಿದೆ.
* * *
ಗುಜರಾತಿನಲ್ಲಿ ಮೋದಿಯಿಂದಾಗಿ ಬಿಜೆಪಿ ಉಳಿದುಕೊಂಡಿದೆ. ಬಿಹಾರದಲ್ಲಿ ನಿತೀಶ್ ಕುಮಾರನಿಂದಾಗಿ ಎನ್ ಡಿ ಎ ಬದುಕುಳಿಯುತ್ತಿದೆ. ಉತ್ತರ ಪ್ರದೇಶದಲ್ಲಿ ಮಾಯಾವತಿಯಿಂದಾಗೇ ಬಿಎಸ್ಪಿ ಉಸಿರಾಡುತ್ತಿದೆ. ತಮಿಳುನಾಡಿನಲ್ಲಿ ಡಿಎಂಕೆ ಉಸಿರಾಡುತ್ತಿರುವುದೆಲ್ಲ ಕರುಣಾನಿಧಿ ಉಸಿರನ್ನೇ. ಎಐಎಡಿಎಂಕೆಗೆ ಜಯಲಲಿತಾ ಜೀವಜಲ. ಕರ್ನಾಟಕಕ್ಕೆ ಮಾತ್ರ ಹೀಗೆ ವ್ಯಕ್ತಿಗಳು ಅನಿವಾರ್ಯವಾಗಿರಲೇ ಇಲ್ಲ. ಆದರೆ ಈಗ ಪರಿಸ್ಥಿತಿ ಭಿನ್ನವಾಗಿದೆ. ದೇವೇಗೌಡ, ಕುಮಾರಸ್ವಾಮಿ, ಯಡಿಯೂರಪ್ಪ ಸುತ್ತ ಇಡೀ ರಾಜ್ಯದ ರಾಜಕೀಯ ಗಿರಕಿ ಹೊಡೆಯುತ್ತಿದೆ. ಗೌಡರ ಪರಿವಾರವಿಲ್ಲದೇ ಜೆಡಿಎಸ್ ಬಾಳದು. ಯಡಿಯೂರಪ್ಪ (ಲಿಂಗಾಯತ ವೋಟ ಬ್ಯಾಂಕ್ ದೃಷ್ಟಿಯಿಂದ) ಹೊರಗಿಟ್ಟು ಬಿಜೆಪಿ ಅಧಿಕಾರದಲ್ಲಿ ಉಳಿಯುತ್ತಾ? ಈ ನೆಲೆಯಲ್ಲಿ ಕರ್ನಾಟಕದ ಸ್ಥಿತಿ ಗಮನಿಸಿದಾಗ ವಿಷಯ, ಜನಪರ ಕಾಳಜಿ, ಸಿದ್ಧಾಂತಗಳ ಬದಲು ಬರಿಯ ವೈಯಕ್ತಿಕವಾದದತ್ತ ರಾಜಕೀಯ ಸರಿಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿ ಕಾಡುತ್ತದೆ.
ಗುಜರಾತ್ ಮತ್ತು ಕರ್ನಾಟಕದ ಸ್ಥಿತಿಯನ್ನಿಟ್ಟುಕೊಂಡು ಹೀಗೊಂದಿಷ್ಟು ರಾಜಕೀಯ ನೋಟ್
* * *
ಗುಜರಾತ್ (ಮೋದಿ)-ಅಭಿವೃದ್ಧಿ!
ಗುಜರಾತಿನಲ್ಲಿ ನರೇಂದ್ರ ಮೋದಿಗೆ ಬಿಜೆಪಿ ಒಂದು ಬ್ರಾಂಡ್ ಅಷ್ಟೇ. ಗೋಧ್ರಾ ರಕ್ತ ಮೆತ್ತಿಕೊಂಡ ಮುಖ ಮರೆಮಾಚಲು ಅಭಿವೃದ್ಧಿ ಎನ್ನುವ ಫಳಫಳಿಸುವ ಮಾಸ್ಕ್ ಈ ಮನುಷ್ಯನಿಗೆ ಅನಿವಾರ್ಯವಾಗಿತ್ತು. ಅವರ ಅಭಿವೃದ್ಧಿ ಮಂತ್ರದಲ್ಲಿ ಸರ್ವ ವರ್ಗದ ಜನಸಾಮಾನ್ಯರ ಒಳಗೊಳ್ಳುವಿಕೆ ಎಷ್ಟರಮಟ್ಟಿಗಿದೆಯೋ?  ಆದರೆ, ನಿಸ್ಸಂದೇಹವಾಗಿ ಗುಜರಾತಿನ Merchantile n industrial (ಹಿಂದೂ, ಮುಸ್ಲಿಂ) ಅಥವಾ ಉಳ್ಳವರ ಜನವರ್ಗಕ್ಕೆ ಅವರೀಗ "ನೆಚ್ಚಿನ ಹೀರೋ". ದೇಶದ ಪತ್ರಿಕೆಗಳು , ಟಿವಿ ಚಾನೆಲ್ ಗಳಲ್ಲಿ ದಂಡಿಯಾಗಿ ಮೂಡಿ ಬಂದ ಸರ್ಕಾರಿ ಜಾಹಿರಾತುಗಳ ತುಂಬ ಮೋದಿ ಮುಖ ರಾರಾಜಿಸಿದೆ. 'ಮೋದಿ- ಅಭಿವೃದ್ಧಿಗೆ ಮತ್ತೊಂದು ಹೆಸರು' ಎನ್ನುವರ್ಥದಲ್ಲಿ ಮಾಧ್ಯಮಗಳು ಬಣ್ಣಿಸುತ್ತಿವೆ. ಇದೆಲ್ಲ ಅರ್ಥವಾಗುವಂಥದೇ.

ಹೊಸದೇನಿದೆ?
ಗುಜರಾತಿನ ತುಂಬ ಎಲ್ಲೆಲ್ಲಿ ತಮಗೆ ಅನುಕೂಲವಿದೆಯೊ ಅಲ್ಲೆಲ್ಲ ರಸ್ತೆ, ವಿದ್ಯುತ್ ದೀಪ ವ್ಯವಸ್ಥೆಯನ್ನು ಸುಧಾರಿಸಿದ್ದು, ಹಿಂದೆ ರೂಪಿಸಿದ ರಸ್ತೆಗಳಿಗೇ ಕಪ್ಪು ಡಾಂಬರು ಗಿಲೀಟು ಹಾಕಿದ್ದು, ಕಿರಿದಾದ ರಸ್ತೆಗಳ ಕೊಂಚ ಅಗಲೀಕರಿಸಿದ್ದು, ಅಲ್ಲಲ್ಲಿ ಹೈಮಾಸ್ಟ್ ಲೈಟ್ ಅಳವಡಿಕೆಯ ಮೂಲಕ ಬೆಳಕಿನಂಥ ಭವ್ಯತೆಯ ಭ್ರಮೆ ಹುಟ್ಟಿಸಿದ್ದು, ಟೂರಿಸಂಗಾಗಿ ನೌಟಂಕಿಗಳನ್ನು ಬಳಸಿಕೊಂಡು "ಕಛ್ ನಹೀ ದೇಖಾ ತೊ ಆಪ್ ಕುಛ್ ನಹೀ ದೇಖಾ"... ಎನ್ನುವಂಥ ಪ್ರಚಾರ ಮಾಡಿಸಿದ್ದು, ಜತೆಯಲ್ಲಿ ಒಂದಷ್ಟು ಜನಪ್ರಿಯ ಯೋಜನೆ (ಅವೂ ಎಲ್ಲ ಸರ್ಕಾರಗಳು ರೂಪಿಸುತ್ತ ಬಂದಂತೆ. ಕೊಂಚ ವ್ಯವಸ್ಥಿತವಾಗಿ ಅಷ್ಟೇ) ರೂಪಿಸುತ್ತಿರುವುದು ಇಂದಿನ ಮೋದಿ ಗುಜರಾತ್ ಅಭಿವೃದ್ಧಿ. ಇದಷ್ಟನ್ನು ತುಂಬ ಅಪ್ಯಾಯಮಾನವಾಗಿಸಿದ್ದು ಅವರ ಹೆಚ್ಚುಗಾರಿಕೆ. ನಮ್ಮ ಬಡ, ಮಧ್ಯಮ ವರ್ಗದ ಮನಸ್ಥಿತಿಗಳು ಇಷ್ಟನ್ನೇ ಅಭಿವೃದ್ಧಿ ಎಂದು ನಂಬಿಬಿಡುತ್ತವೆ. ಮೋದಿ ನಂಬಿಸಿದ್ದಾರೆ ಕೂಡ. ಕಾಂಟ್ರ್ಯಾಕ್ಟರುಗಳು, ಶ್ರೀಮಂತರು, ಕರೋಡ್ ಪತಿಗಳು ಹೆಚ್ಚು ಉದ್ಧಾರವಾಗುವಂಥ ಈ ಅಭಿವೃದ್ಧಿ ಮಂತ್ರ ಸರ್ವೇ ಜನ ಸುಖಿನೋಭವಂತು ಎನ್ನುವ ಭಜನೆಯೊಂದಿಗೆ ಸಮೂಹ ಸನ್ನಿಯಾಗುತ್ತಿರುವುದು ಎದ್ದು ಕಾಣಿಸುವ ಅಂಶ. ಬಿಜೆಪಿಗಿಂತ ಇಲ್ಲಿ ಅತ್ಯಂತ ಸುಲಭವಾಗಿ ಮೋದಿ ಈಸ್ ಶೈನಿಂಗ್! ಇದನ್ನೇ ಯಡಿಯೂರಪ್ಪ ಕರ್ನಾಟಕದಲ್ಲಿ ಅನುಸರಿಸ ಹೊರಟಿದ್ದರು.
* * *
ಖಡಕ್ ಮತ್ತು ಕಣ್ಣೀರು!
ಮೋದಿಗಿರುವ ಖಡಕ್ ನಿಲುವುಗಳು ಯಡಿಯೂರಪ್ಪ ಅವರಲ್ಲಿ ಕಾಣಿಸುವುದಿಲ್ಲ. ಮೋದಿ ತೋರಿಕೆಗಾದರೂ ಗುಡುಗುತ್ತಾರೆ. ಯಡಿಯೂರಪ್ಪ ನಿಜವಾಗಲೂ ಸಾರ್ವಜನಿಕರೆದುರು ಅತ್ತೇ ಬಿಡುತ್ತಾರೆ. ಮೋದಿಗೆ ಮದಿರೆ, ಹೆಣ್ಣುಗಳ ಹಂಗಿಲ್ಲ. ಅದಕ್ಕಾಗಿ ಹಂಬಲಿಸುವ ಜುಜುಬಿ ವ್ಯಕ್ತಿತ್ವವೂ ಅಲ್ಲ. ಖಡಕ್ ಆಸಾಮಿ. ಆಡಳಿತದಲ್ಲಿ ಗತ್ತಿನ ಮನುಷ್ಯ. ರೋಮ್ಯಾಂಟಿಕ್ ಅಲ್ಲವೇನೊ ಅನಿಸುವಂಥ ಈ ಮನುಷ್ಯನಲ್ಲಿ ಮತೀಯ ಭಾವನೆಯೇ ಸರ್ವಸ್ವ. ಹಿಂದುಳಿದ ವರ್ಗಕ್ಕೆ ಸೇರಿದ್ದರೂ ಬಿಜೆಪಿಯ ಬ್ರಾಹ್ಮಣರ, ಇತರ ಮೇಲ್ವರ್ಗದವರ ಶ್ರದ್ಧಾಳುವಿನಂತೆ ವರ್ತಿಸುತ್ತಾರೆ. ಹೀಗಾಗಿ ಬಹುಮುಖಿ ಸಂಸ್ಕೃತಿಯ, ಸಾಮರಸ್ಯ ಮತ್ತು ಸರ್ವರಿಗೂ ಸಮಪಾಲು, ಸಮಬಾಳು ಎನ್ನುವ ಹಿಂದೂಸ್ತಾನದ ನೆಲದಲ್ಲಿ ಅಸಲಿ ಖಳನಾಯಕನಂತೆ ಅನಿಸುತ್ತಾರೆ. ಕೆಲವರ "ಹೀರೋ" ಕೂಡ! ಯಡಿಯೂರಪ್ಪ?
* * *
ಯಡಿಯೂರಪ್ಪ ಮತ್ತು ಮೊದಲ ಪಾಪ
ಹಿಂದೆ ವಿರೋಧ ಪಕ್ಷದ ನಾಯಕರಾಗಿ, ಬಿಜೆಪಿ ಕಟ್ಟಿ ಬೆಳೆಸಿದವರಲ್ಲಿ ಒಬ್ಬರಾಗಿ ಯಡಿಯೂರಪ್ಪ ಅಷ್ಟೇನೂ ಪ್ರಭಾವಿ ಅನಿಸಿರಲಿಲ್ಲ. ಯಾವಾಗ ರಾಜ್ಯದಲ್ಲಿ ಕಾಂಗ್ರೆಸ್ ನಿಸ್ತೇಜಗೊಂಡಿತೊ ಬಿಜೆಪಿಗೆ ಗರಿಗೆದರಿಕೊಳ್ಳುವ ಅವಕಾಶವೊಂದು ಸೃಷ್ಟಿಯಾಯಿತು. ಜೆಡಿಎಸ್ ಆ ಕ್ಷಣದ ಲಾಭಕ್ಕೆ ತನ್ನ ಹೊರೆಹೊತ್ತ ಮಹಿಳೆಯನ್ನು ಕಮಲದ ಮೇಲೆ ತೇಲಿಬಿಟ್ಟಿತು. ಕಾಂಗ್ರೆಸ್ ದುರ್ಬಲಗೊಳಿಸುವ ಅವಕಾಶವನ್ನು ಗೌಡರು ಯಾವತ್ತೂ ಬಿಡೋದೇ ಇಲ್ಲ. ಅದರ ಭಾಗವಾಗೇ ಜೆಡಿಎಸ್-ಬಿಜೆಪಿ ಜಂಟಿಯಾಗಿ ರೂಪಿಸಿಕೊಂಡ 20:20 ಅಧಿಕಾರ ಹಂಚಿಕೆಯ ಸೂತ್ರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂತು. ಯಡಿಯೂರಪ್ಪ ಲೈಮ್ ಲೈಟ್ ಗೆ ಬಂದಿದ್ದು ಆಗಲೇ.
20:20 ಸೂತ್ರ ರಾಜ್ಯ ರಾಜಕೀಯದ ಮೊದಲ ಪಾಪ (ಟ್ವೆಂಟಿ ಟ್ವೆಂಟಿ ಟ್ರೆಂಡ್ ಇಡೀ ಕ್ರಿಕೆಟ್ ಅನ್ನು ವ್ಯಭಿಚಾರದಂಗಳ ಮಾಡಿಟ್ಟಿರುವಂತೆ). ಅಧಿಕಾರ ದಾಹದ ಈ ಮಿಲಾಪ್ ಪ್ರಜಾಪ್ರಭುತ್ವದ ನೆಲಕ್ಕೆ ಅನೈತಿಕ ಮತ್ತು ದೊಡ್ಡ ಅವಮಾನವೆಂದೇ ಟೀಕೆಗೊಳಗಾಯಿತು. ಅಧಿಕಾರದಾಟದಲ್ಲಿ  ಈ ಸೂತ್ರ ದಾಳದಂತೆ ಬಳಕೆಯಾಗಿ ಒಂದಿಬ್ಬರು ವೈಯಕ್ತಿಕವಾಗಿ ಬೆಳೆಯುವುದಕ್ಕೆ ದಾರಿಯಾಯಿತಷ್ಟೇ. ಇದರ ನಾಯಕತ್ವ ವಹಿಸಿಕೊಂಡವರ ವೈಯಕ್ತಿಕ ವರ್ಚಸ್ಸುಗಳು ಅಂದುಕೊಂಡಂತೆಯೇ ಬೆಳೆದವು. ಅದರ ಬೆನ್ನಲ್ಲೇ ಪರಸ್ಪರ ಮತ್ಸರ, ಪೈಪೋಟಿಗಳೂ ಹುಟ್ಟಿಕೊಂಡವು. ಹೀಗಾಗೇ "ರೆಸಾರ್ಟ್ ರಾಜಕಾರಣ"ದ ಆಟಗಳು ಸಹಜವೆಂಬಂತೆ ಇಲ್ಲಿ ಬೆಳೆದು ನಿಂತಿವೆ. ಆರಂಭದಲ್ಲಿ ಈ ಬೆಳವಣಿಗೆಯನ್ನು ಫಾರ್ ಎ ಚೇಂಜ್ ಎಂದು ಸಹಿಸಿಕೊಂಡಿದ್ದ ರಾಜ್ಯ ಜನತೆ ಅಷ್ಟೇ ಬೇಗ ಭ್ರಮನಿರಸನಗೊಂಡರು.
* * *
ಬಲೀ ಕಾ ಬಕರಾಗಳು ಮತ್ತು ಮೇಲ್ವರ್ಗದ ಅಧಿಕಾರ:
  ಹಣ, ಜಾತಿಯಿಂದ ಪ್ರಬಲರಾದ ಮೇಲ್ವರ್ಗದವರೇ ಈತನಕದ ಅಧಿಕಾರದಲ್ಲಿ ಮುಂಚೂಣಿಯಲ್ಲಿದ್ದಾರೆ. 'ಅಧಿಕಾರ ಏನಿದ್ದರೂ ನಮ್ಮ ಹಕ್ಕು' ಎನ್ನುವುದು ಇವರ ಬಹುದೊಡ್ಡ ಆದರ್ಶ. ರಾಜ್ಯದ ಮೊದಲ ಮುಖ್ಯಮಂತ್ರಿಯಿಂದ ಹಿಡಿದು ಇಲ್ಲಿಯವರೆಗೆ ಅಧಿಕಾರದ ಗದ್ದುಗೆ ಹಿಡಿದವರಲ್ಲಿ ಬಹುತೇಕರು ಪ್ರಬಲ ಕೋಮಿನವರೇ. ಅಧಿಕಾರಕ್ಕಾಗಿ ಮಿಕ್ಕವರನ್ನು ದಾಳಗಳಂತೆ ಬಳಸಿಕೊಳ್ಳುವುದು ಇವರ ಚಾಳಿಯಾಗೇ ಬೆಳೆದುಬಂದಿದೆ. 20:20 ಪರಿಕಲ್ಪನೆ ಕೂಡ ಇಂಥದೇ ಒಂದು ವ್ಯವಸ್ಥೆ.
ಮೇಲ್ವರ್ಗದ ನಾಯಕರು ಒಬ್ಬರು ಮತ್ತೊಬ್ಬರನ್ನು ಸಹಿಸಿಕೊಳ್ಳದ ಮನಸ್ಥಿತಿಗೆ ಬಂದಾಗೆಲ್ಲ ಆವೇಶ, ಆಕ್ರೋಶಗಳನ್ನು ಸ್ಫೋಟಿಸುವುದು ಆರ್ಥಿಕ ಮತ್ತು ಸಾಮಾಜಿಕವಾಗಿ ದುರ್ಬಲಗೊಂಡಿರುವ ವರ್ಗದವರಿಂದಲೇ. ಎರಡು ಬಣಗಳಾಗಿ ಪರಸ್ಪರ ಪೈಪೋಟಿಗಿಳಿಯುವ ಸಂದಿಗ್ಧ ಸ್ಥಿತಿಯನ್ನು ರೂಪಿಸುವ ಆಟವನ್ನೂ ಇವರೇ ಕಟ್ಟುತ್ತಾರೆ. ಆ ಸಂದರ್ಭದ ರಾಜಕೀಯ ಸಂದಿಗ್ಧತೆ ನಿವಾರಣೆಗೆ ಮೇಲ್ವರ್ಗದವರನ್ನೇ ಅನಿವಾರ್ಯದ ನಾಯಕರೆಂದುಕೊಂಡು ಅವರ ಹಿಂದೆ ಅಹಿಂದರು ನಿಂತುಬಿಡುವಂಥ ಸ್ಥಿತಿ ರೂಪಿಸುತ್ತಾರೆ. ಉಳ್ಳವರ, ಪ್ರಬಲರ ವ್ಯವಸ್ಥಿತ ರಾಜಕೀಯ ಪಿತೂರಿಗಳೇ ಹೀಗಿರುವುದರಿಂದ ಇಲ್ಲಿ ಮುಖ ಕೆಡಿಸಿಕೊಳ್ಳುವವರು ದುರ್ಬಲ ವರ್ಗದವರೇ. ಲಾಭದ ದೃಷ್ಟಿಯಿಂದ  ಮೇಲ್ವರ್ಗದ ನಾಯಕರನ್ನು ಬಿಟ್ಟರೆ ಮಿಕ್ಕವರೆಲ್ಲ ಬಲೀ ಕಾ ಬಕರಾಗಳೇ.
* * *
ರಾಜ್ಯದ ಇತಿಹಾಸದಲ್ಲಿ ದೇವರಾಜ್ ಅರಸು ಅವಧಿ ಬಿಟ್ಟರೆ ಹಿಂದುಳಿದ ವರ್ಗದವರಿಗೆ ಮಾನ್ಯತೆ ಕಮ್ಮಿಯೇ. ಆಗಲೇ ಹಿಂದುಳಿದವರು ಚೂರು ಪಾರು ಕಾಲ ಅಧಿಕಾರಭಾಗ್ಯ ಕಂಡವರು. ಅರಸು, ಎಸ್. ಬಂಗಾರಪ್ಪ ಅವಧಿಯಲ್ಲೇ ಹೆಚ್ಚು ಕ್ರಾಂತಿಕಾರಿ ಬದಲಾವಣೆಗಳು, ಜನಪರ ಕಾರ್ಯಗಳು ನಡೆದಿದ್ದು ಎನ್ನುವುದು ಸುಳ್ಳಲ್ಲ. ಆದರೆ ಕಾಂಗ್ರೆಸ್ ಈ ಇಬ್ಬರನ್ನೂ ದೊಡ್ಡ ನಾಯಕರನ್ನಾಗಿ ಉಳಿಸಿಕೊಳ್ಳಲಿಲ್ಲ. ಕಾಲಾಂತರದಲ್ಲಿ ಈ ಇಬ್ಬರೂ ಕಾಂಗ್ರೆಸ್ಸಿಗೆ ಸೆಡ್ಡು ಹೊಡೆದವರೇ. ಬಂಗಾರಪ್ಪ ಕ್ರಾಂತಿರಂಗದಿಂದ ಹಿಡಿದು ಸಮಾಜವಾದಿ ಪಾರ್ಟಿವರೆಗೆ ಪಕ್ಷ ಕಟ್ಟುವಲ್ಲಿ ಮುಂಚೂಣಿಯಲ್ಲಿದ್ದವರು, ಕ್ರಾಂತಿರಂಗ ಯಶಸ್ವಿಗೊಳಿಸಿದರು ಕೂಡ. ಕೆಸಿಪಿ ಮತ್ತು ಸಮಾಜವಾದಿ ಪಾರ್ಟಿ ಕಟ್ಟಿ ಕಾಂಗ್ರೆಸ್ಸಿಗೆ ತಿರುಗೇಟು ನೀಡುವ ಸಾಮರ್ಥ್ಯ ಪ್ರದರ್ಶಿಸಿದವರು. ಬಿಜೆಪಿ ಸೇರಿ ಅದರ ಬೇರುಗಳನ್ನು ಗಟ್ಟಿಗೊಳಿಸಿದವರಲ್ಲಿ ಇವರೂ ಪ್ರಮುಖರು. ಇವತ್ತು ಬಿಜೆಪಿ ಇಷ್ಟರಮಟ್ಟಿಗೆ ಬೆಳೆಯುವುದಕ್ಕೆ ಮತ್ತು ಕಾಂಗ್ರೆಸ್ ನೆಲಕಚ್ಚುವುದಕ್ಕೆ ಇಂಥವರ ಸಿಟ್ಟು, ಸೇಡಿನ ಮನೋಭಾವವೂ ಬಹುದೊಡ್ಡ ಕಾರಣ ಎನ್ನಬಹುದು. ಈ ಬಂಡಾಯ, ಸಿಟ್ಟು, ಆಕ್ರೋಶಗಳಿಗೆ ಸಂಬಂಧಿಸಿದಂತೆ ಬಹುಮುಖ್ಯವಾಗಿ ಗಮನಿಸಬೇಕಾದ್ದು ಮೇಲ್ವರ್ಗ ಬಿಟ್ಟರೆ ಅಹಿಂದ ನ ಯಾರನ್ನೂ ರಾಷ್ಟ್ರೀಯ ಪಕ್ಷಗಳು ಅರಗಿಸಿಕೊಳ್ಳದೇ ಇರೋದು. ಕಾಂಗ್ರೆಸ್ ಮಾತ್ರ ಹಿಂದುಳಿದವರಿಗೆ ಒಂದಷ್ಟಾದರೂ ಅವಕಾಶ ಕಲ್ಪಿಸಿದೆ ಅನ್ನೋದು ಸತ್ಯ. ಅದೂ ಹೈಕಮಾಂಡ್ ಗೆ ವಿಧೇಯರಾಗಿದ್ದವರಿಗೆ ಅಂಥ ಭಾಗ್ಯ. ಸ್ವಂತ ವ್ಯಕ್ತಿತ್ವದವರಿಗೆ ಮತ್ತು ವರ್ಚಸ್ವಿಗಳಿಗೆ ಅಲ್ಲಿ ಕಷ್ಟ. ಅದರಲ್ಲೂ ಅಹಿಂದರನ್ನು ಅಲ್ಲಿನ ಮೇಲ್ವರ್ಗ ಸಹಿಸುವುದು ದುರ್ಲಭ. ಅರಸು ಒಬ್ಬರನ್ನು ಬಿಟ್ಟರೆ ಉಳಿದ ಪ್ರಬಲವಲ್ಲದ ಕೋಮುಗಳಿಗೆ ಸೇರಿದವರು ಹೆಚ್ಚು ಕಾಲ ಅಧಿಕಾರ ಪೂರೈಸಲಾಗಲಿಲ್ಲ. ಅಥವಾ ಅದಕ್ಕೆ ಅವಕಾಶವೇ ಸಿಗಲಿಲ್ಲ. ಈತನಕ ಇಲ್ಲಿ ಒಬ್ಬ ದಲಿತ, ಮುಸಲ್ಮಾನ, ಕ್ರೈಸ್ತ (ಆಸ್ಕರ್ ಗೆ ಒಂದು ಸಾಧ್ಯತೆ ಇದೆ. ಅದಕ್ಕೆ ಕಾರಣ ಬೇರೆ ಹೇಳಬೇಕಿಲ್ಲ) ಮುಖ್ಯಮಂತ್ರಿಯಾಗಿಲ್ಲ  ಎನ್ನುವುದು ಏನನ್ನು ಧ್ವನಿಸುತ್ತದೆ?
* * *
ಗೌಡರ ಜಾತ್ಯತೀತ ಕಾರ್ಡ್:
20:20 ಅಧಿಕಾರ ಹಂಚಿಕೆಯ ಸೂತ್ರದಂತೆ ನಡೆದುಕೊಳ್ಳದ ಜೆಡಿಎಸ್, ನೇರ ಬಿಜೆಪಿ ಪ್ರಾಬಲ್ಯಕ್ಕೆ ಹಾದಿ ಮಾಡಿಕೊಟ್ಟಿತು. ಇದು ಕಾಂಗ್ರೆಸ್ಸಿಗೆ ತಾನು ಕೊಟ್ಟ ಎಚ್ಚರಿಕೆ ಮತ್ತು ಶಾಕ್ ಟ್ರೀಟಮೆಂಟ್ ಎನ್ನುವರ್ಥದಲ್ಲಿ ಜೆಡಿಎಸ್ ಗಹಗಹಿಸಿತು. ಇದರ ಲಾಭ ಯಡಿಯೂರಪ್ಪನವರಿಗೆ ಆಯ್ತು. ಗೌಡರ ಮೇಲಿನ ಸಿಟ್ಟು ಲಿಂಗಾಯತರಲ್ಲಿ ಬಹುದೊಡ್ಡ ಜಾತಿ ಧ್ರುವೀಕರಣಕ್ಕೆ ಕಾರಣವಾಯ್ತು. ಲಿಂಗಾಯಿತರ ಅನುಕಂಪ ಗಳಿಸಿಕೊಳ್ಳುವಲ್ಲಿ ಯಡಿಯೂರಪ್ಪ ಯಶಸ್ವಿಯಾದರು. ಲಿಂಗಾಯತರು ಬಿಜೆಪಿ ವೋಟ್ ಬ್ಯಾಂಕ್ ಆಗುವಷ್ಟು ಪಕ್ಷ ಕಚ್ಚಿಕೊಂಡರು. ಹೀಗಾಗದಿದ್ದಲ್ಲಿ ಬಿಜೆಪಿ ದಕ್ಷಿಣ ಭಾರತದಲ್ಲಿ ಮೊದಲ ಸರ್ಕಾರ ರಚಿಸುವುದಕ್ಕೆ, ಯಡಿಯೂರಪ್ಪ ಸಿಎಂ ಅನಿಸಿಕೊಳ್ಳೋದಕ್ಕೆ ಇನ್ನೆಷ್ಟು ಕಾಲ ಬೇಕಾಗುತ್ತಿತ್ತೊ? ಈ ಅರ್ಥದಲ್ಲಿ ಯಡಿಯೂರಪ್ಪ ಗೌಡರ ಋಣದಲ್ಲೇ ಇದ್ದಾರೆ. ಮತ್ತೊಂದರ್ಥದಲ್ಲಿ ಇದು ಪ್ರಬಲ ಕೋಮುಗಳಾದ  ಬ್ರಾಹ್ಮಣರು-ಗೌಡರು-ಲಿಂಗಾಯತರ ನಡುವಿನ ಅಂಡರಸ್ಟ್ಯಾಂಡಿಂಗ್ ಎಂತಲೂ ಅನಿಸುತ್ತದೆ. ಒಮ್ಮೆ ನೀವು ಮತ್ತೊಮ್ಮೆ ನಾವು; ಒಟ್ಟಿನಲ್ಲಿ ಅಧಿಕಾರ ನಮ್ಮದೇ ಎನ್ನುವರ್ಥದಲ್ಲಿ.

ಕೆಲವು ಚುನಾವಣೆಗಳ ಫಲಿತಾಂಶದಿಂದ ಜೆಡಿಎಸ್ ಹೇಗೆ ಆಟವಾಡಿದರೂ ಸೂಕ್ತ ನಡೆಯಾಗೇ ಕಾಣಿಸತೊಡಗಿತ್ತು. ಯಾವುದಕ್ಕೂ ಸ್ಪಷ್ಟ ಬಹುಮತ ಇರದಂಥ ಜನಾದೇಶ ಬಂದಾಗೆಲ್ಲ ಕಾಂಗ್ರೆಸ್ ಜತೆ ಸೆಕ್ಯುಲರಿಸಂ ಹೆಸರಲ್ಲಿ ಅಧಿಕಾರ ಹಿಡಿಯಲು ಜೆಡಿಎಸ್ ಮುಂದಾಗತೊಡಗಿತು.  ಇದು ಸೆಕ್ಯುಲರಿಸಂ ಪಾಲಿಟಿಕ್ಸ್ ಗೆ ಸಂಬಂಧಿಸಿದಂತೆ 'ನಮ್ಮನ್ನು ಬಿಟ್ಟು ಕಾಂಗ್ರೆಸ್ ಇಲ್ಲೇನೂ ಮಾಡುವ ಹಾಗಿಲ್ಲ' ಎನ್ನುವ ಗಹಗಹಿಸುವ ನಡೆಯಂತೆನಿಸುತ್ತದೆ.  
ಈ ದೃಷ್ಟಿಯಿಂದ ನೋಡಿದರೆ, ರಾಜ್ಯದಲ್ಲಿ ಕಾಂಗ್ರೆಸ್ ಹಿನ್ನೆಡೆಗೆ  ಮುಖ್ಯ ಕಾರಣ ಜೆಡಿಎಸ್. ಬಿಜೆಪಿ ಅಲ್ಲ. ಕಾಂಗ್ರೆಸ್ಸಿನ ಜಾತ್ಯತೀತ ಶಕ್ತಿಯಲ್ಲೇ ಜೆಡಿಎಸ್ ಪಾಲು ಕಸಿದುಕೊಳ್ಳುತ್ತಿದೆ. ಜೆಡಿಎಸ್ ಗೆ ರಾಜ್ಯದ ಪ್ರಬಲ ಕೋಮಿನಲ್ಲೊಂದಾದ ಒಕ್ಕಲಿಗರ ಬಹುದೊಡ್ಡ ವೋಟ್ ಬ್ಯಾಂಕ್ ಇದೆ. ಹಿಂದುಳಿದವರ, ದಲಿತರ ಕಡೆಗಣನೆ, ಬಾಬರಿ ಮಸೀದಿ ಧ್ವಂಸದಂತಹ ಪ್ರಕರಣದಿಂದ ಕಾಂಗ್ರೆಸ್ ಮೇಲೆ ಅಸಮಧಾನಗೊಂಡ ಅಹಿಂದ ಎಲಿಮೆಂಟ್ ಗಳನ್ನು ಪ್ರಾದೇಶಿಕ ಮಟ್ಟದಲ್ಲಿ ಯುಪಿ, ಬಿಹಾರ ಮಾದರಿಯಲ್ಲಿ ಸೇರಿಸಿಕೊಂಡಿದ್ದು ಜೆಡಿಎಸ್ ನ ಮತ್ತೊಂದು ಶಕ್ತಿ.  ಹೀಗಾಗೇ ಜಾತ್ಯತೀತ ಬೆಂಬಲಿಗರ ಸಂಖ್ಯೆ ಹಂಚಿ ಹೋಗುತ್ತ  ಅದರ ಸಾಂಘಿಕ ಮನೋಧರ್ಮವೇ ಕ್ಷೀಣಿಸುತ್ತಿದೆ. ಬಿಜೆಪಿ ಬೆಳೆಯುವುದಕ್ಕೆ ಇದು  ಪೂರಕ ವಾತಾವರಣವನ್ನೇ ಸೃಷ್ಟಿಸುತ್ತಿದೆ. ಯಡಿಯೂರಪ್ಪ ಹಿಂದೆ ಒಂದು ಪ್ರಬಲ ಕೋಮಿನ ವೋಟ್ ಬ್ಯಾಂಕ್ ರಾಜಕಾರಣಕ್ಕೆ ಮಠಗಳೂ ಕೈಜೋಡಿಸಿವೆ. ಹೀಗಾಗಿ ರಾಜ್ಯದಲ್ಲಿ ಒಂದೆಡೆ ಒಕ್ಕಲಿಗರ ಗುಂಪು ಮತ್ತೊಂದೆಡೆ ಲಿಂಗಾಯತರ ಗುಂಪು. ಒಂದು ಸಾಮಾಜಿಕ-ಸಾಂಸ್ಕೃತಿಕ ನೆಲೆಗಟ್ಟಿನ ಬಹುದೊಡ್ಡ ಚಳವಳಿ, ಕ್ರಾಂತಿ ನಡೆಯದೇ ಹೋದರೆ ಈ ಗುಂಪುಗಾರಿಕೆ ರಾಜಕಾರಣ ಕರ್ನಾಟಕವನ್ನು ವಿಕೃತ ರಾಜ್ಯವನ್ನಾಗಿಸುವ ಅಪಾಯ ಇದ್ದೇ ಇದೆ.
* * *
ಗೌಡರಿಗೆ ಕಾಂಗ್ರೆಸ್ ಯಾವತ್ತೂ ಬಿಸಿ ತುಪ್ಪ. ದೇವೇಗೌಡರು ದೇಶದ ಪ್ರಧಾನಿ ಆಗಿದ್ದು ಕಾಂಗ್ರೆಸ್ ಮೆಹರ್ಬಾನಗಿಯಿಂದಲೇ. ಮತ್ತು ಕೆಳಕ್ಕಿಳಿದಿದ್ದು ಕಾಂಗ್ರೆಸ್ ತಂತ್ರದಿಂದಲೇ. ಜಾತ್ಯತೀತ ಕಾರ್ಡ್ ಬಳಸಿ ಜೆಡಿಎಸ್ ದೇಶ ಮತ್ತು ಇಡೀ ರಾಜ್ಯದ ಮೇಲೆ ಏಕಾಂಗಿಯಾಗಿ ಪ್ರಭುತ್ವ ಸಾಧಿಸುವುದು ಕಷ್ಟ. ಅದಕ್ಕೆ ಒಂದು  ಸಖ್ಯ ಬೇಕೇ ಬೇಕು. ಕಾಂಗ್ರೆಸ್ ಅದರ ಸುಲಭದ ಸಖ. ಕೇಂದ್ರ ಮತ್ತು ರಾಜ್ಯ ರಾಜಕೀಯ ಆಟದಲ್ಲಿ ಚಲಾವಣೆಯ ದಾಳವಾಗಲು ಗೌಡರಿಗೆ ಅನಿವಾರ್ಯದ ಸಂಗಾತಿ ಬೇಕೇ ಬೇಕು. ಕಾಂಗ್ರೆಸ್ ಕೂಡ ಅನಿವಾರ್ಯ ಸಂದರ್ಭದಲ್ಲಿ ಈ ಸಖ್ಯ ಸಹಿಸಿಕೊಂಡಿದೆ.
ಕಾಂಗ್ರೆಸ್ ನೆಚ್ಚಿಕೊಂಡು ದೇವೇಗೌಡ, ಕುಮಾರಸ್ವಾಮಿ ಈಚೆಗೆ ಬಿಜೆಪಿ ಸರ್ಕಾರ ಉರುಳಿಸುವ ತಂತ್ರ ರೂಪಿಸಿದರು. ಕಾಂಗ್ರೆಸ್ ಅಳೆದು ತೂಗಿ ನಿರ್ಣಾಯಕ ಹಂತದಲ್ಲಿ ತಟಸ್ಥ ಎನ್ನುವ ತನ್ನ ಸೇಫ್ ಲೆಕ್ಕಾಚಾರಕ್ಕೆ ಸರಿದು ನಿಂತಿತು. ಆ ಮೂಲಕ ಇದು ತನ್ನ ಒಂದು ಮಟ್ಟಿನ ರಾಜಕೀಯ ಪ್ರಬುದ್ಧತೆ ಮತ್ತು ನೈತಿಕತೆ ಎನ್ನುವ ಸಂದೇಶ ಧ್ವನಿಸಲು ಯತ್ನಿಸಿತು. ದುಡುಕಿ ಬಿಜೆಪಿ ಸರ್ಕಾರ ಉರುಳಿಸುವುದಕ್ಕೆ ಮುಂದಾಗಿದ್ದಲ್ಲಿ ಸೆಕ್ಯುಲರಿಸಂ ಇಮೇಜಿನ ಕ್ರೆಡಿಟ್ ಜೆಡಿಎಸ್ ಗೆ ಸಂದಾಯವಾಗುತ್ತಿತ್ತು ಎನ್ನುವುದು ಕಾಂಗ್ರೆಸ್ ಗೆ ಚೆನ್ನಾಗೇ ತಿಳಿದಿತ್ತು. ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಯಾವತ್ತೂ ಇಕ್ಕಟ್ಟಿಗೆ ಸಿಕ್ಕಿಸುವ ಮೂಲಕ ತಮ್ಮ ರಾಜಕೀಯ ಜಾಣ್ಮೆ ಮೆರೆಯಬಯಸುವ ದೇವೇಗೌಡರ ತಂತ್ರವನ್ನು ಈ ಬಾರಿ ಸೋಲಿಸಲಾಯಿತು. ಒಟ್ಟಿನಲ್ಲಿ ಇಂತಹ ಸೋಲು ಕಾಣಿಸುವ ಮೂಲಕ ರಾಜ್ಯ ರಾಜಕಾರಣಕ್ಕೆ ಸಂಬಂಧಿಸಿದಂತೆ ದೇವೇಗೌಡರನ್ನು ಅಪ್ರಸ್ತುತವಾಗಿಸುತ್ತ ಹೋಗುವುದು ಬಿಜೆಪಿ ಮತ್ತು ಕಾಂಗ್ರೆಸ್ಸಿನ ರಾಜಕೀಯ ಅನಿವಾರ್ಯತೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕೂಡ ಬಿಜೆಪಿ ಜತೆ ಅಡ್ಜಸ್ಟಮೆಂಟ್ ಸೂತ್ರಕ್ಕೆ ಜೋತುಬಿತ್ತು.
ಗೌಡರ ವರಸೆ:
ಉತ್ತರ ಪ್ರದೇಶದಲ್ಲಿ ಮುಲಾಯಂ ಸಿಂಗ್ ಮತ್ತು ಮಾಯಾವತಿ ಅಲ್ಲಿನ ಉತ್ತಮ ಸಂಖ್ಯೆಯಲ್ಲೇ ಇರುವ ಮುಸಲ್ಮಾನರು ಮತ್ತಿತರ ಅಲ್ಪಸಂಖ್ಯಾತ ಕೋಮುಗಳನ್ನು ಚೆನ್ನಾಗೇ ನೋಡಿಕೊಳ್ಳುವ ತಂತ್ರ ಬಳಸುತ್ತಿದ್ದರು. ಬಿಹಾರದಲ್ಲೂ ಅಷ್ಟೇ. ಲಾಲೂ ಮುಸಲ್ಮಾನರನ್ನು, ಹಿಂದುಳಿದವರನ್ನು ತುಂಬ ಆಪ್ತವಾಗೇ ಕಂಡವರು. ಹೀಗಾಗಿ ಕಾಂಗ್ರೆಸ್ ನದೇ ವೋಟ್ ಬ್ಯಾಂಕ್ ಮೇಲೆ ಆಗಾಗ ಮೋಡಿ ಮಾಡುವುದು ಇವರಿಗೆ ಸಾಧ್ಯವಾಗುತ್ತದೆ. ಈ ಇಬ್ಬರೂ ಯಾದವರ ಅಹಂಕಾರಕ್ಕೆ, ಮುಸಲ್ಮಾನರು ಮತ್ತು ಹಿಂದುಳಿದವರನ್ನು ಟೇಕ್ ಇಟ್ ಫಾರ್ ಗ್ರಾಂಟೆಡ್ ಎನ್ನುವಂತೆ ಕಂಡ ಧೋರಣೆಗೆ ಬಹುದೊಡ್ಡ ಶಿಕ್ಷೆಯೇ ಆಗಿದೆ. ದೇವೇಗೌಡರು ಕೂಡ ಈ ಜಾಡಿನಲ್ಲೇ ಸಾಗುತ್ತಿರುವ ರಾಜಕೀಯ ಕಸಬುದಾರ. ಆದರೆ ಮುಲಾಯಂ, ಲಾಲೂಗಿರುವ ಆ ವರ್ಗಗಳ ಬಗೆಗಿನ ಕನಿಷ್ಠ ಮೃದು ನಿಲುವು ದೇವೇಗೌಡರಿಗೆ ದಕ್ಕುತ್ತಿಲ್ಲ. ಗೌಡರು ಯಾವತ್ತಿದ್ದರೂ ಮುಸಲ್ಮಾನರು ಮತ್ತು ಹಿಂದುಳಿದವರ ಹೆಗಲ ಮೇಲೆ ಕೈ ಇಟ್ಟು, ತಲೆ ಸವರಿ ನಿರ್ಣಾಯಕ ಹಂತದಲ್ಲಿ "ಮಣ್ಣೆಳೆಯುತ್ತಾರೆ" ಎನ್ನುವಂಥ ಮೆಸೇಜ್ ಅವರ ರಾಜಕೀಯ ನಡವಳಿಕೆಯಿಂದ ಯಾವತ್ತೋ ಮಿಂಚಿಬಿಟ್ಟಿದೆ. ಹೀಗಾಗೇ ಒಂದು ಕಾಲದ ಅವರ ಭಂಟರಾಗಿದ್ದ ಸಿದ್ದರಾಮಯ್ಯ, ಸಿ.ಎಂ. ಇಬ್ರಾಹಿಂ ಸರಕ್ಕನೇ ಸರಿದುಕೊಂಡಿದ್ದು. ನಂತರದಲ್ಲಿ ಗೌಡರು ಯಾರ ಹೆಗಲ ಮೇಲೆ ಕೈ ಇಟ್ಟರೋ ಅವರು ಒಂದೋ ತುಂಬ ಕೇವಲವಾದರು ಇಲ್ಲ ಕೈಲಾಸ ಸೇರಿಕೊಂಡರು. ಜಾತ್ಯತೀತ ಕಾರ್ಡ್ ಆಟ ಮುಂದುವರಿಸಲು ಗೌಡರಿಗೆ ಮತ್ತೆ ಸಿದ್ದರಾಮಯ್ಯ, ಸಿ.ಎಂ. ಇಬ್ರಾಹಿಂ ಬೇಕೇ ಬೇಕು. ಕಾಂಗ್ರೆಸ್ ಕೂಡ ಗೌಡರ ಶಕ್ತಿ ಕುಂದಿಸುವ ತಂತ್ರದ ಭಾಗವಾಗೇ ದೇಶಪಾಂಡೆ, ರೋಶನ್ ಬೇಗ್, ರಮೇಶ್ ಕುಮಾರ್, ಸಿದ್ದರಾಮಯ್ಯ, ಸಿ.ಎಂ. ಇಬ್ರಾಹಿಂ ಮತ್ತಿತರ ಜನತಾ ಪರಿವಾರದ ಗೂಡಿಗೆ  ಕೈ ಹಾಕಿದ್ದು. 'ಹೊರಗಿನವರು' ಎಂಬ ಕಾರಣಕ್ಕೆ ಈ ಎಲ್ಲರೂ ಕಾಂಗ್ರೆಸ್ಸಿನಲ್ಲಿ ಈಗೀಗ ತುಂಬ ನಿರ್ಲಕ್ಷ್ಯಕ್ಕೊಳಗಾಗುತ್ತಿದ್ದಾರೆ. ಗೌಡರ ಹಾಗೆ ಜನತಾ ಪರಿವಾರದವರೆಲ್ಲ ಒಂದಾಗೋಣ ಎನ್ನುವ ಹಿಂದಿನ ಜನತಾದಳ ಕರೆಯನ್ನೇ ಈಗ ಮತ್ತೆ ಹೂಂಕರಿಸುವುದು ಇವರಿಗೂ ಅನಿವಾರ್ಯ. ಕುಮಾರಸ್ವಾಮಿ ನೇತೃತ್ವದಲ್ಲಿ ಈ ಬಗ್ಗೆ ರಂಗ ತಾಲೀಮು ಮಲ್ಲೂ ಇಬ್ರಾಹಿಂ ಮನೆಯಲ್ಲಿ ನಡೆಯುತ್ತಿರುತ್ತದೆ. ಕಾಂಗ್ರೆಸ್ ಒಳಗೇ ಇದ್ದುಕೊಂಡು ಅದನ್ನೇ ಬಳಸಿಕೊಂಡು ಬಿಜೆಪಿ ಸರ್ಕಾರ ಉರುಳಿಸಿ 'ಕೈ'ಗೇ ಕೈಕೊಟ್ಟು ಹಳೆಯ ಗಾಲಿ ಮೇಲೆ ಸವಾರಿ ಹೊರಡುವ ಜನತಾಪರಿವಾರದವರ ಕನಸು ಕೂಡ ಇಬ್ರಾಹಿಂ ಮನೆಯಲ್ಲೇ  ಗರಿಗೆದರಿದ್ದು. ಈ ವಾಸನೆ ಹಿಡಿದೇ ಬಿಜೆಪಿ ಸರ್ಕಾರ ಉರುಳಿಸುವ ಯತ್ನಕ್ಕೆ ಕಾಂಗ್ರೆಸ್ ಹಿಂದೇಟು ಹಾಕಿದ್ದು.
ಆದರೆ ಗೌಡರ ಅಂಗಳದಲ್ಲಿ ಈಗ ಕ್ರಾಂತಿರಂಗ ಜಮಾನಾದ ಸಾಥಿ ಬಂಗಾರಪ್ಪ ಬಂದು ನಿಂತಿದ್ದಾರೆ. ಜತೆಯಲ್ಲಿ ಸಿಂಧ್ಯ ಕೂಡ ಇದ್ದಾರೆ. ಇದು ಸಿದ್ದರಾಮಯ್ಯ, ಇಬ್ರಾಹಿಂ ಅಂಥವರಿಗೆ ಗೌಡರ ಬಾಗಿಲು ಮುಚ್ಚಿದಂತೆನಿಸಲೂಬಹುದು. ಕುಮಾರಣ್ಣನ ಪಟ್ಟಾಭಿಷೇಕ ಗೌಡರ ಮಹತ್ವಾಕಾಂಕ್ಷೆ. ಅದಕ್ಕೆ ಬಂಗಾರಪ್ಪನವರೂ ಸಂಪೂರ್ಣ ಬೆಂಬಲ ಘೋಷಿಸಿಯಾಗಿದೆ. ಇನ್ನು ಸಿದ್ದರಾಮಯ್ಯನವರಿಗೆ ಅಲ್ಲೇನು ಕೆಲಸ?

ಸರ್ಕಾರ ಉರುಳಿಸುವ ಮತ್ತು ಉಳಿಸಿಕೊಳ್ಳುವ ಸರ್ಕಸ್ ಕೂಡ ಇಂಥ ವೈಯಕ್ತಿವಾದದ ನೆಲೆಯಲ್ಲೇ ನಡೆಯುತ್ತದೆ. ಯಡಿಯೂರಪ್ಪ ಅವರನ್ನು ಸಿಎಂ ಗಾದಿಯಿಂದ ಕೆಳಕ್ಕಿಳಿಸುವ ಜೆಡಿಎಸ್ ನ ಯತ್ನ ಈ ಹಿನ್ನೆಲೆಯದ್ದೇ. ಬಿಜೆಪಿ ಸರ್ಕಾರ ಪತನಗೊಳಿಸಿ ಮಧ್ಯಂತರ ಅವಧಿ ಚುನಾವಣೆ ತಪ್ಪಿಸಲು ಒಂದು ಪ್ಯಾಚಪ್ ಸರ್ಕಾರ ರೂಪಿಸುವುದು ಮತ್ತು ಸಿಎಂ ಗಾದಿಗೆ ರೇವಣ್ಣ ತರುವುದು ಗೌಡರ ಜೆಡಿಎಸ್ ನ ಈ ಹಿಂದಿನ ಯೋಜನೆಯಾಗಿತ್ತು. ಅಥವಾ ಅಂಥದೊಂದು ಸಾಧ್ಯತೆಗೆ ತೀವ್ರ ವಿರೋಧ ವ್ಯಕ್ತವಾದಲ್ಲಿ ಕಾಂಗ್ರೆಸ್ಸಿನಲ್ಲಿರುವ ಜನತಾ ಪರಿವಾರದ ಸಿದ್ದರಾಮಯ್ಯ ಅವರನ್ನಿಟ್ಟುಕೊಂಡು ಬೇರೆ ಆಟ ಆಡುವ ಯೋಜನೆ ಮತ್ತೊಂದು ಆಪ್ಷನ್ ಆಗಿತ್ತು. ಕುಮಾರಸ್ವಾಮಿಯವರ ತರಾತುರಿಯ ಓಡಾಟ ನೋಡಿದ ಯಾರಿಗಾದರೂ ಈ ಅಂಶ ಸ್ಪಷ್ಟವಾಗುತ್ತಿತ್ತು. ಆದರೀಗ ರಾಜಕೀಯ ಧ್ರುವೀಕರಣದ ಗಾಳಿ. ಯಾರು ಎಲ್ಲಿ, ಯಾವಾಗ, ಏತಕ್ಕೆ ಕೈಜೋಡಿಸಿ ನಿಲ್ಲುವರೋ?!
ಬ್ರಾಹ್ಮಣರ ರಾಜಕಾರಣ:
ಈ ನಡುವೆ ಬ್ರಾಹ್ಮಣರ ರಾಜಕೀಯ ಕಾರ್ಡ್ ಬಳಕೆ ಚಲಾವಣೆಗೆ ಬಂತು. ಅದೃಷ್ಟವೊ, ದುರಾದೃಷ್ಟವೋ ಹಾಗೆ ಬಂದು ಹೀಗೆ ಹೋಯ್ತು. ಬ್ರಾಹ್ಮಣ ರಾಜಕಾರಣಕ್ಕೆ ರಾಮಕೃಷ್ಣ ಹೆಗಡೆ ಒಂದು ಐಡಲ್. ಮೇಲ್ನೋಟಕ್ಕೆ ಜಾತ್ಯತೀತ ಪೋಸು ಕೊಡುತ್ತ ಒಳಗೇ ಬ್ರಾಹ್ಮಣ ಅಧಿಕಾರಶಾಹಿಯನ್ನು ಬೆಳೆಸಿದ್ದರು ಹೆಗಡೆ. ಮಾಧ್ಯಮ ರಂಗದಲ್ಲಿ  ವಿಪ್ರರು ಬೇಜಾನ್ ಮಿಂಚತೊಡಗಿದ್ದ ಕಾಲವೂ ಅದಾಗಿತ್ತು. ವಿಪ್ರಮೀಡಿಯಾಂಗನೆಯರು ಹೆಗಡೆ ಎನ್ನುವ ರಾಜಕೀಯ ರಂಗದ ಖಾಯಂ ಕಟೌಟ್ ಮಾಡಿಟ್ಟಿದ್ದರು. ಗುಂಡೂರಾಯರದೇ ಮತ್ತೊಂದು ನಡೆಯಾಗಿತ್ತು. ಈಗ ಅಂಥ ಚತುರ ವಿಪ್ರೋತ್ತಮರು ರಾಜ್ಯ ರಾಜಕಾರಣದಲ್ಲಿ ಇಲ್ಲವಾದರೂ, ಅದಕ್ಕೂ ಭಿನ್ನವಾದ ತಂತ್ರಗಾರಿಕೆ ಮೆರೆಯಬಲ್ಲ ಅನಂತಕುಮಾರ್  ವಿಪ್ರೋತ್ತಮರ ಅನಭಿಷಕ್ತ ದೊರೆಯಾಗಿದ್ದಾರೆ. ಸುರೇಶ್ ಕುಮಾರ್ ತುಂಬ ಸಾಫ್ಟ್. ಹಾಗಿದ್ದುಕೊಂಡೇ ಬ್ರಾಹ್ಮಣ ರಾಜಕಾರಣದ "ಸಾಫ್ಟ್ ವೇರ್" ರೆಡಿ ಮಾಡಿಟ್ಟುಕೊಳ್ಳುತ್ತಿದ್ದಾರೆ. ಈಚೆಗೆ ಮುಖ್ಯಮಂತ್ರಿ ಸ್ಥಾನಕ್ಕೆ ಅವರ ಹೆಸರು ಕೇಳಿಬಂದಿದ್ದು ಅವರ ಹಿಂದಿರುವ "ಸಾಫ್ಟ್ ವೇರ್ ಶಕ್ತಿ"ಯ ಒಂದು ಸ್ಯಾಂಪಲ್.
ಅನಂತಕುಮಾರ್, ಆಚಾರ್ಯ, ಜನಾರ್ಧನ ರೆಡ್ಡಿ, ಈಶ್ವರಪ್ಪ, ಡಿ.ಬಿ. ಚಂದ್ರೇಗೌಡ... ಇಂಥ ಕೆಲವರ ರಾಜಕೀಯ ಮಹತ್ವಾಕಾಂಕ್ಷೆಗಳು ರಾಜ್ಯ ರಾಜಕಾರಣದ ದಿಕ್ಕುತಪ್ಪಿಸುವಂಥ ನಡೆಗಳಾಗೇ ಕಾಣಿಸುತ್ತವೆ. ಅನಂತಕುಮಾರ್ ಬ್ರಾಹ್ಮಣ ಸಮುದಾಯದ ನಾಯಕ. ತನ್ನ ಕ್ಷೇತ್ರದ ತುಂಬ ವಿಪ್ರರೇ ದೊಡ್ಡ ಸಂಖ್ಯೆಯಲ್ಲಿರೋದರಿಂದ ಕನಿಷ್ಠ ರಾಜಕೀಯ ಉಳಿವಿಗಾದರೂ ಸಮುದಾಯದ ಹಿತಾಸಕ್ತಿ ಮುಖ್ಯವಾಗೋದು ಸಹಜವೇ. ಹಿಂದೂತ್ವದ ಹೂಂಕಾರ ಎಬ್ಬಿಸಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರದಲ್ಲಿ ಇವರನ್ನೊಮ್ಮೆ ಮುಖ್ಯಮಂತ್ರಿಯಾಗಿಸಬೇಕು ಎನ್ನುವುದು ರಾಜಕೀಯ ಮತ್ತು ಮಾಧ್ಯಮದಲ್ಲಿರುವ ಬ್ರಾಹ್ಮಣರ ಒಂದಂಶದ ಕಾರ್ಯಕ್ರಮ. ಜನಸಂಖ್ಯೆಗೆ ಹೋಲಿಸಿದರೆ ತುಂಬ ಹೆಚ್ಚೇ ಎನಿಸುವಷ್ಟು ಸಂಖ್ಯೆಯ ಬ್ರಾಹ್ಮಣ ಶಾಸಕರು ಬಿಜೆಪಿಯಲ್ಲಿದ್ದಾರೆ. ಅನಂತಕುಮಾರೇ ಮುಮಂ ಆಗಲಿ ಎಂದು ಪಟ್ಟುಹಿಡಿದು ಕೂರಲು ವಿಪ್ರರ ಸಂಖ್ಯಾಬಲ ಸಾಕಷ್ಟಿಲ್ಲ. ಅದನ್ನು ತೂಗಿಸಲು ಜನಾರ್ಧನ ರೆಡ್ಡಿ ಅಗ್ರೆಸ್ಸಿವನೆಸ್ ಬಳಸಿಕೊಳ್ಳಲು ಅನಂತ ಬಳಗ ಸುಷ್ಮಾ ಸ್ವರಾಜ್ ಮೂಲಕ ಯತ್ನಿಸುತ್ತಿದೆ. ಲಿಂಗಾಯತರನ್ನೇ ಸ್ಪ್ಲಿಟ್ ಮಾಡಲು ಶೆಟ್ಟರ್ ಎಲಿಮೆಂಟ್ ಅನ್ನು ಬಳಸಿಕೊಳ್ಳುತ್ತಿದೆ. ಜನಪ್ರಿಯ ಮಾಧ್ಯಮವನ್ನು ಈ ಕಾರಣಕ್ಕೆ ಬಳಸಿಕೊಳ್ಳುವಂಥ ಜಾಣ್ಮೆ ಇಲ್ಲಿನ ಬ್ರಾಹ್ಮಣರಿಗೆ ಬಿಟ್ಟರೆ ಇನ್ನಾರಿಗೆ ಸಾಧ್ಯ? ಈಶ್ವರಪ್ಪನಂಥವರನ್ನು ಬರಿಯ ಆಕ್ರೋಶಕ್ಕೆ ಬಳಸಿಕೊಳ್ಳುವ ತಂತ್ರ ಇವರಿಗೆ ಹೊಸದೇನೂ ಅಲ್ಲ. ರೆಡ್ಡಿ ಮತ್ತು ಈಶ್ವರಪ್ಪ 'ಸಿಡಿತಲೆ'ಗಳಾಗೇ ಬಿಜೆಪಿಯಲ್ಲಿ ಬಳಕೆಯಾಗುವಂತೆ ಇವರು ನೋಡಿಕೊಳ್ಳುತ್ತಾರೆ.
ನವಬ್ರಾಹ್ಮಣನಂತಿರುವ  ಚಂದ್ರೇಗೌಡರಂಥವರು ಒಂದು ಕಾಲದ ಮುತ್ಸದ್ದಿ ಎನ್ನಬಹುದಾದಂಥ ರಾಜಕಾರಣಿಯಾಗಿದ್ದರು. ಆದರೆ, ಮಂತ್ರಿಗಿರಿ ಎಲ್ಲಾ ಅನುಭವಿಸಿಯೂ ಕಾಂಗ್ರೆಸ್ಸಿನಲ್ಲಿ ಸೂಕ್ತ ಪ್ರಾತಿನಿಧ್ಯ ದೊರೆಯುತ್ತಿಲ್ಲ ಎನ್ನುವ ಕಾರಣವೊಡ್ಡಿ ಕೋಮುವಾದಿ ಪಕ್ಷಕ್ಕೆ ಸರಿದು ನಿಲ್ಲುವ ಮೂಲಕ ಅವರೊಬ್ಬ ಸಾಧಾರಣ ಕಸಬುದಾರ ರಾಜಕಾರಣಿಯಾಗಿ ಈಗ ಕಾಣಿಸುತ್ತಿದ್ದಾರೆ. ಹಿಂದೊಮ್ಮೆ ತನ್ನ ಪಕ್ಷದ ಹಿರಿಯ ಮುತ್ಸದ್ದಿಯಾಗಿದ್ದ ಮತ್ತು ಒಮ್ಮೆಯಾದರೂ ಈ ರಾಜ್ಯದ ಮುಖ್ಯಮಂತ್ರಿ ಗದ್ದುಗೆ ಏರಲೇಬೇಕಾದಂಥ ಸಮರ್ಥ ವ್ಯಕ್ತಿತ್ವದ, ರಾಜ್ಯಕ್ಕೆ ರೈಲ್ವೆ ಕೊಡುಗೆ ಕೊಟ್ಟ ಜಾಫರ್ ಷರೀಫ್ ವಿರುದ್ಧ ನಿಂತು ಮುತ್ಸದ್ದಿಯನ್ನು ಮಖಾಡೆ ಮಲಗಿಸಲೆತ್ನಿಸುತ್ತಾರೆಂದರೆ ಎಂಥಾ ಆದರ್ಶ! ಎಂಥಾ ದುರಂತ! ಅವರೇ ಪ್ರತಿಪಾದಿಸುತ್ತಿದ್ದ ರಾಜಕೀಯ ಸಿದ್ಧಾಂತ, ನೀತಿ, ನೈತಿಕತೆ, ಸೌಹಾರ್ದ ತತ್ವ ಎಲ್ಲಿ ಹೋಯಿತು? ಬ್ರಹ್ಮಾಂಡ ಭ್ರಷ್ಟಾಚಾರದ ರಣಕಹಳೆ ಮೊಳಗುತ್ತಿದ್ದಾಗ ಪಕ್ಷದ ಕಳಂಕಿತ ಮುಖ್ಯಮಂತ್ರಿ ಬೆನ್ನಿಗೆ ನಿಂತು ಕುರ್ಚಿ ಉಳಿಸುವ ಸಾಹಸ ಮಾಡಿದ್ದು, ಆ ಮೂಲಕವೇ ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳುವಂಥ ಸ್ಥಿತಿಗೆ ಬಂದಿದ್ದು ಇನ್ನೂ ದೊಡ್ಡ ದುರಂತ.
ರಾಜ್ಯ ಕಂಡ ಅಪರೂಪ:
ರಾಜ್ಯದಲ್ಲಿ ಸಮಾಜವಾದಿ ಚಿಂತನೆ ಬಿತ್ತಿ ಹಲವರನ್ನು ರಾಜಕೀಯದಲ್ಲಿ ಬೆಳೆಸಿದ ಗೋಪಾಲಗೌಡರು ಒಮ್ಮೆಯಾದರೂ ಅಧಿಕಾರಕ್ಕೆ ಬರಲು ಸಾಧ್ಯವಾಯಿತೇ? ಗ್ರಾಮೀಣಾಭಿವೃದ್ಧಿ ಹರಿಕಾರ ನೀರ್ ಸಾಬ್ ಎಂದೇ ಹೆಸರಾದ ನಜೀರ್ ಸಾಬ್ ಗಿಂತ ಮಿಗಿಲಾದ ನಾಯಕ ಮುಖ್ಯಮಂತ್ರಿ ಸ್ಥಾನಕ್ಕೆ ಬೇಕೆ? ಒಬ್ಬ ನಜೀರ್ ಸಾಬ್ ಅವರನ್ನು ನಾವು ರಾಜಕೀಯ ಆದರ್ಶವಾಗಿ, ನಾಯಕತ್ವವಾಗಿ ಕಾಣಲು ಸಾಧ್ಯವೇ ಆಗಲಿಲ್ಲ ಎಂದರೆ ಈ ರಾಜ್ಯದ ರಾಜಕೀಯ ಪ್ರಬುದ್ಧತೆಯಾದರೂ ಎಂಥದು?
ಭೈರೇಗೌಡ, ಅಜೀಜ್ ಸೇಠ, ಡಿ.ಕೆ. ನಾಯ್ಕರ್, ಷರೀಫ್, ಖರ್ಗೆ, ಸಿದ್ದರಾಮಯ್ಯ,  ಬಿ ಎ ಮೊಯಿದ್ದೀನ್, ಎಂ.ಸಿ. ನಾಣಯ್ಯ, ಸಗೀರ ಅಹ್ಮದ್, ಪ್ರೊ. ಸನದಿ, ಹಿಂಡಸಗೇರಿ.... ಇಂಥ ಸಜ್ಜನರೂ, ಸಮರ್ಥರೂ ರಾಜ್ಯ ರಾಜಕಾರಣದಲ್ಲಿದ್ದವರು. ಇವರಲ್ಲಿನ ಹಲವರು ಈಗಲೂ ರಾಜಕಾರಣಿಗಳಾಗಿ ಕ್ರಿಯಾಶೀಲರಾಗಿದ್ದಾರೆ. ಇವರಲ್ಲೂ ಉತ್ತಮ ಆಡಳಿತದ ಮುಖ್ಯಮಂತ್ರಿ ಸಿಕ್ಕೇ ಸಿಗುತ್ತಾರೆ. ಆಯ್ಕೆಗೆ ಸಾಮರ್ಥ್ಯ ಮಾನದಂಡವಾಗಬೇಕು. ಆದರೆ ಜಾತಿ, ಸಮುದಾಯ, ಮಠ ಮಾನ್ಯಗಳ ಬೆಂಬಲದ 'ಹುಸಿ ನಾಯಕ'ರಿಗೆ ಪಟ್ಟ ದಕ್ಕುತ್ತಿರುವುದು ದೊಡ್ಡ ದುರಂತ.

ರಾಜ್ಯ ರಾಜಕೀಯಕ್ಕೆ ಹೊಸ ತತ್ವ, ಸಿದ್ಧಾಂತದ ಗಾಳಿಯಂತೆ ಬೀಸಬಲ್ಲ ಸರ್ವೋದಯದ ದೇವನೂರು ಮಹದೇವ, ಡಾ. ಸಿದ್ದನಗೌಡ ಪಾಟೀಲ್ (ಸಿಪಿಐ) , ಶ್ರೀರಾಮರೆಡ್ಡಿ, ಜಿ ಎನ್ ನಾಗರಾಜ್ (ಸಿಪಿಎಂ), ಕಾಂಗ್ರೆಸ್ಸಿನಲ್ಲೇ  ಇರುವ ಸುದರ್ಶನ್ ಇವರಲ್ಲೆಲ್ಲ ಗುಣಾತ್ಮಕ ಮತ್ತು ಸಮರ್ಥ ನಾಯಕತ್ವ ಕಾಣಿಸೋದೇ ಇಲ್ವೆ? ಇವರೆಲ್ಲ ಸಾಂಘಿಕ ಮನೋಧರ್ಮದಲ್ಲಿ ನಂಬಿಕೆ ಇಟ್ಟುಕೊಂಡವರು. ವೈಯಕ್ತಿಕವಾದದಿಂದ ಆಚೆ ನಿರೀಕ್ಷಿಸಬಹುದಾದಂಥ ಮುಖಗಳಿವು. ಇದು ತುಂಬ ಮುಖ್ಯವಾಗಿ ಗಮನಿಸಬೇಕಾದ ಅಂಶ.
 ಸೈದ್ಧಾಂತಿಕವಾಗಿ ಶಾಂತವೇರಿ ಗೋಪಾಲಗೌಡ ಮತ್ತು ಅಬ್ದುಲ್ ನಜೀರಸಾಬ್ ಇವರಿಬ್ಬರಂತೂ ರಾಜ್ಯದ ಮುಖ್ಯಮಂತ್ರಿಯಾಗಲೇಬೇಕಿತ್ತು. ಆಗಲಿಲ್ಲ. ಇದು ರಾಜ್ಯ ರಾಜಕೀಯದ ಅಪ್ರಬುದ್ಧತೆಯ ಬಹುದೊಡ್ಡ ಸಂಕೇತವಾಗಿ ಕಾಡುವಂಥದು. ಈಗಲೂ ಷರೀಫ್, ಸಿದ್ದರಾಮಯ್ಯ, ಖರ್ಗೆ... ಮುಖ್ಯಮಂತ್ರಿ ಪಟ್ಟಕ್ಕೇರದಿದ್ದರೆ ರಾಜ್ಯ ರಾಜಕಾರಣಕ್ಕೆ ಸಂಬಂಧಿಸಿದಂತೆ ಅದಕ್ಕಿಂತ ರಾಜಕೀಯ ಅಪ್ರಬುದ್ಧತೆ ಮತ್ತೊಂದಿಲ್ಲ. ದೇಶ, ರಾಜ್ಯ ಸಾಮರಸ್ಯ, ಜಾತ್ಯತೀತ ತತ್ವದ ತಳಹದಿ ಗಟ್ಟಿಗೊಳಿಸುವುದಕ್ಕೆ ಮತ್ತಾವ ಮಾರ್ಗಗಳಿವೆ?

ಅಭಿವೃದ್ಧಿ ರಾಜಕಾರಣ:
 ಅಭಿವೃದ್ಧಿ ಯೋಜನೆಗಳೆಂದರೆ ದುಡ್ಡು ಹೊಡೆಯುವುದಕ್ಕೊಂದು ಸುಲಭದ ರಾಜಮಾರ್ಗ ಎನ್ನುವಂಥ ಸ್ಥಿತಿ ನಿರ್ಮಾಣವಾಗಿದ್ದು ಬಹಳ ಹಿಂದಿನಿಂದ. ಈಗಿನ ಸಂದರ್ಭದಲ್ಲಿ ಮೆಟ್ರೊ, ವೊಲ್ವೊ ಬಸ್ ವಿಷಯವನ್ನೇ ತೆಗೆದುಕೊಳ್ಳಿ. ಆರು ಕೋಟಿ ಜನತೆಯ ಪಾಲ್ಗೊಳ್ಳುವಿಕೆಗೆ ಇವೆಷ್ಟು ಪೂರಕವಾದ ಅಭಿವೃದ್ಧಿ ಕಾರ್ಯಗಳು? ಮೆಟ್ರೊ ಮತ್ತು ವೊಲ್ವೊ ಬಸ್ ಉಳ್ಳವರ ಶೋಕಿಗಾಗಿ. ತಂತ್ರಜ್ಞಾನದ ಮೋಹಕತೆ ಮತ್ತು ಆರ್ಥಿಕ ಅಹಂಕಾರಿಗಳಿಗೆ ಸೂಕ್ತವಾದವು ಎನಿಸುತ್ತದೆ. ಬರಿಯ ಬೈಕ್, ಕಾರ್, ಅತ್ಯಾಧುನಿಕ ವಾಹನಗಳ ಓಡಾಟಕ್ಕೆ ಅನುಕೂಲ ಮಾಡಿಕೊಡುವ ಏಕೋದ್ದೇಶದಿಂದ ಮೆಟ್ರೊ, ಫ್ಲೈ ಓವರ್, ರಸ್ತೆ ಅಗಲೀಕರಣದಂಥ ಸಾಹಸಕ್ಕಿಳಿದಿದ್ದು ಎದ್ದು ಕಾಣಿಸುವಂಥ ಅಂಶ. ಆದರೆ, ಇದಕ್ಕೂ ಮುಖ್ಯವಾಗಿ ನಗರ, ಪಟ್ಟಣ ಪ್ರದೇಶ, ರಾಜ್ಯದ ಪ್ರತಿ ಹಳ್ಳಿಗೆ ಸೂಕ್ತವಾದ ರಸ್ತೆಗಳು ಮತ್ತು ಒಂದನ್ನೊಂದು ಪೂರಕವಾಗಿ ಸಂಪರ್ಕಿಸಬಲ್ಲ, ಸಂವಹನಿಸಬಲ್ಲ ವ್ಯವಸ್ಥೆ ತುರ್ತಾಗಿ ಬೇಕಿತ್ತಲ್ಲವೇ?
* * *
ರೈತರ ಹೆಸರಲ್ಲಿ ಅಧಿಕಾರ ಹಿಡಿದ ಬಿಜೆಪಿ ಸರ್ಕಾರಕ್ಕೆ ರೈತರೇ ಹೆಚ್ಚಿರುವ ಪ್ರದೇಶಗಳಿಗೆ ಕನಿಷ್ಠ ಸೌಲಭ್ಯ ವೃದ್ಧಿಸುವ ಹೊಣೆಗಾರಿಕೆ ಇತ್ತು. ಮತ್ತು ಈ ಕೆಲಸ ರಾಜ್ಯದ ಜನತೆಯ ಕಂದಾಯ ಮತ್ತಿತರ ಸೇವಾ ಶುಲ್ಕಗಳ ಸಮರ್ಪಕ ಕ್ರೋಡೀಕರಣ ಮತ್ತು ಅದರ ವ್ಯವಸ್ಥಿತ ನಿರ್ವಹಣೆಯಿಂದ ಅತ್ಯಂತ ಸುಲಭವಾಗಿ ನಡೆಯುವಂಥದು. ಜನತೆ ಕಂದಾಯ, ಕರ ಕಟ್ಟುತ್ತಿಲ್ಲವೇ? ಸಂದಾಯವಾದ ಹಣದ ಸಮರ್ಪಕ ಬಳಕೆ ಆಗುತ್ತಿಲ್ಲವೇ?

ಅದಿರುಗಳ್ಳರ ಹಗಲು-ರಾತ್ರಿ ದರೋಡೆಗೆ ಕುಂದು ಬಾರದಿರಲೆಂದು ಆಯಾ ಪ್ರದೇಶದ ರಸ್ತೆಗಳನ್ನು ಗಣಿಧಣಿಗಳ ರಾಜಮಾರ್ಗವನ್ನಾಗಿಸಲಾಗುತ್ತಿದೆ. ಅವರ ನೆರವಿಗೆ ಬರುವ ಹಿಂದುಳಿದ ಕೆಲವೇ ನಾಯಕರನ್ನು ಎಲ್ಲೆಡೆ ಮಿಂಚಿಸಿ ಕಡೆಗೆ ಅವರ ಹಣೆಗೇ ಎಲ್ಲ ಅಪರಾಧ, ಅನೈತಿಕ ವಿಷಯಗಳ ಮೆತ್ತುವ ಕೆಲಸ ನಡೆಯುತ್ತದೆ.
 ಅಭಿವೃದ್ಧಿ ಕಾರ್ಯಗಳೆಂದರೆ ಅದರಲ್ಲಿ ಎಲ್ಲ ವರ್ಗದ ಜನರ ಪಾಲ್ಗೊಳ್ಳುವಿಕೆಗೆ ಅವಕಾಶ ರೂಪಿಸುವುದು ಆಗಬೇಕಿತ್ತು. ದುರಂತವೆಂದರೆ, ಸೀರೆ, ಪುಸ್ತಕ, ಸೈಕಲ್ ಹಂಚುವ ಮೂಲಕ ಬಡವರ ಮೇಲೆ ದಯೆ, ಕರುಣೆ ತೋರಿಸಲಾಗುತ್ತಿದೆ. ಆ ಮೂಲಕ ಅವರನ್ನು ಸ್ವಾಭಿಮಾನ ಮತ್ತು ಸ್ವಾವಲಂಬಿ ಬದುಕಿನಿಂದ ಮತ್ತು ಒಟ್ಟಾರೆ ಅಭಿವೃದ್ಧಿ ಕಾರ್ಯದಲ್ಲಿನ ಪಾಲ್ಗೊಳ್ಳುವಿಕೆಯಿಂದ ದೂರ ಸರಿಸಲಾಗುತ್ತಿದೆ. ಚುನಾವಣೆ ಬಂದಾಗ ನೂರು, ಸಾವಿರದ ನೋಟುಗಳಿಗೆ ಅವರ ಕೈ ಸುಲಭವಾಗಿ ಚಾಚಿಕೊಳ್ಳುವಂತೆ ನೋಡಿಕೊಳ್ಳಲಾಗುತ್ತಿದೆ. ಇವೆಲ್ಲ ಬಹುಸಂಖ್ಯೆಯ ಬಡವರು, ದುರ್ಬಲರು, ಅಲ್ಪಸಂಖ್ಯಾತರು, ಹಿಂದುಳಿದವರು, ಮಧ್ಯಮವರ್ಗದವರ ಕಡೆಗಣನೆಯನ್ನು ಸಾರಿ ಹೇಳುತ್ತಿಲ್ಲವೇ? ಅವರೆಲ್ಲ ಬದಲಾವಣೆ, ಕ್ರಾಂತಿಕಾರಕ ಪ್ರಜ್ಞೆಗಳಿಂದ ದೂರ ಉಳಿಯುವಂತೆ ನೋಡಿಕೊಳ್ಳುವ ಅಧಿಕಾರ ದಾಹಿಗಳ ಹುನಾರು ಅನಿಸುತ್ತಿಲ್ಲವೇ?
 ನಮಗೇನು ಬೇಕು?
ನಾವು ಮತಚಲಾವಣೆಯ ಮೂಲಕ ಒಂದು ವ್ಯವಸ್ಥೆಯನ್ನು ಆಯ್ಕೆ ಮಾಡಿಕೊಳ್ಳುತ್ತೇವೆ. ಯಾರೋ ಒಬ್ಬ ವ್ಯಕ್ತಿಯನ್ನಲ್ಲ. ಆಯ್ದುಕೊಂಡ ವ್ಯವಸ್ಥೆಯ ನಿರ್ವಹಣೆಗೆಂದು ಒಬ್ಬ ನಾಯಕನ ಮಾಡಿಕೊಳ್ಳುತ್ತೇವಷ್ಟೇ. ಪ್ರಧಾನಿ, ಮುಖ್ಯಮಂತ್ರಿ... ಆಯ್ಕೆ ಈ ನೆಲೆಯಲ್ಲಿ ನಡೆಯುವಂಥದು. ಈ ಅರ್ಥದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ವ್ಯಕ್ತಿನಿಷ್ಠವಲ್ಲ. ದುರಂತವೆಂದರೆ ವ್ಯವಸ್ಥೆ ವ್ಯಕ್ತಿ ಕೇಂದ್ರಿತಗೊಳ್ಳುತ್ತಿದೆ. ಇದರಿಂದ ಹೊರಕ್ಕೆ ಬರಲು ನಮಗೀಗ ಬೇಕಿರುವುದು ಬರಿಯ ನಾಯಕತ್ವವಲ್ಲ ವಿಷಯಾಧಾರಿತವಾದ ಒಂದು ಸುವ್ಯವಸ್ಥೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮನುಷ್ಯ ಜಾತಿ ತಾನೊಂದೇ ವಲಂ...

ಭಾರತದಲ್ಲಿ ಜಾತಿ ವ್ಯವಸ್ಥೆ ಹೇಗೆ ಹುಟ್ಟಿತು ಎಂಬುದಕ್ಕೆ ಯಾವುದೇ ನಿರ್ಧಿಷ್ಟ ಥಿಯರಿ ಇಲ್ಲ. ಆದರೆ, ಇಲ್ಲಿನ ವರ್ಗ ಸೃಷ್ಟಿ ಮಾತ್ರ ಇರಾನ್ ವ್ಯವಸ್ಥೆಯಂತೇ ಇದೆ.  ಪುರಾತನ ಇರಾನಿನ ಚರಿತ್ರೆಯಲ್ಲಿ ಇಂಥದೊಂದು ವ್ಯವಸ್ಥೆ ಇತ್ತು. ಅದಕ್ಕೆ ಪಿಸ್ತ್ರಾಸ್ ಎನ್ನುತ್ತಾರೆ. ನಮ್ಮಲ್ಲಿ ಅದು ಚಾತುರ್ವರ್ಣವಾಗಿದೆ. ಅಲ್ಲಿ ಅಥ್ರವಾನ್ಸ್ (ಪ್ರೀಸ್ಟ್ ಕ್ಲಾಸ್), ರಥೈಸ್ತಾ (ವಾರಿಯರ್ಸ್), ವಸ್ತ್ರಿಯಾ (ಮರ್ಕಂಟೈಲ್ ಕ್ಲಾಸ್) ಮತ್ತು ಹ್ಯುತಿ (ಆರ್ಟಿಸನ್) ಎನ್ನುವ ವರ್ಗ ವ್ಯವಸ್ಥೆ ಇದೆ. ನಮ್ಮಲ್ಲಿ ಇದನ್ನು ಕಲ್ಪಿಸಿಕೊಂಡರೆ ಪುರೋಹಿತ ಅಥವಾ ಬ್ರಾಹ್ಮಣ (ಅಥ್ರವಾನ್ಸ್), ಕ್ಷತ್ರಿಯ  (ರಥೈಸ್ತಾ), ವೈಶ್ಯ  (ವಸ್ತ್ರಿಯಾ) ಮತ್ತು ಶೂದ್ರ (ಹ್ಯುತಿ) ಎಂದು ಅರ್ಥೈಸಿಕೊಳ್ಳಬಹುದು.  ಆದಿ ಕಾಲದ ಇರಾನಿಯನ್ ವ್ಯವಸ್ಥೆ ಹೀಗೇ ಇತ್ತು. ಅದೇ ನಾಲ್ಕು ವರ್ಗಗಳು ಭಾರತದಲ್ಲೂ ಈಗಲೂ ಚಾಲ್ತಿಯಲ್ಲಿವೆ. ಹೀಗೆ ಒಂದು ಇರಾನ್ ಸಂಬಂಧ ಭಾರತಕ್ಕಿದೆ. ಚರ್ಮದ ಬಣ್ಣ, ನಯ ನಾಜೂಕು, ಕಣ್ಣು, ಬುದ್ಧಿವಂತಿಕೆಯನ್ನು ಹೋಲಿಸಿದರೆ ಭಾರತದ ಅದರಲ್ಲೂ ಉತ್ತರ ಭಾರತದ ಕಾಶ್ಮೀರಿ ಪಂಡಿತರು, ಉತ್ತರ ಪ್ರದೇಶದ ಪಂಡಿತ್, ಚಿತ್ಪಾವನ ಬ್ರಾಹ್ಮಣರು, ನಮ್ಮ ಕರಾವಳಿ ಮತ್ತು ಉತ್ತರ ಕನ್ನಡದ ಹವ್ಯಕರು ಹೆಚ್ಚೂ ಕಮ್ಮಿ ಇರಾನಿಗಳನ್ನು ಹೋಲುತ್ತಾರೆ (ಮೇಲ್ನೋಟಕ್ಕೆ).  ಬಹುಶಃ ಹೀಗೂ ಆಗಿರಬಹುದು, ಆಗ ಇರಾನ್ ನಲ್ಲಿ ಕ್ರೈಸ್ತ ಮತ್ತು ಇಸ್ಲಾಂ ಮುಂಚೆಯೂ ಹಲವಾರು ಸುಧಾರಣಾವಾದಿಗಳ ಅಥವಾ ಬಂಡುಕೋರರ

"ಮಣೆಗಾರ" ಬಸಿದಿಟ್ಟ ಒಡಲಾಳದ ನೋವು ನೆನೆದು...

ಹಾಲ್ಕುರಿಕೆ ಥಿಯೇಟರ್ ಕಾನ್ಸೆಪ್ಟ್ ಕನ್ನಡ ರಂಗಭೂಮಿಯಲ್ಲಿ ಹೊಸದೊಂದು ಸಂಚಲನವನ್ನುಂಟು ಮಾಡುತ್ತಿದೆ. ಒಟ್ಟಾರೆ ಭಾರತೀಯ ರಂಗಭೂಮಿ ಕಾಣುತ್ತಿರುವ ಹೊಸತನಕ್ಕೆ ಇದು ಮುಖ್ಯವಾದ ಸಾಕ್ಷಿ. ಅತ್ಯಂತ ಕ್ರಿಯಾಶೀಲ ತುಡಿತದ ರಂಗಕರ್ಮಿ ಹಾಲ್ಕುರಿಕೆ ಶಿವಶಂಕರ (ನಿರ್ದೇಶಕ/ನಾಟಕಕಾರ) ಇತ್ತೀಚೆಗೆ "ಮಣೆಗಾರ" (ತುಂಬಾಡಿ ರಾಮಯ್ಯನವರ ಆತ್ಮಕಥೆ) ಎನ್ನುವ ದಲಿತ ಕಥಾನಕವೊಂದನ್ನು ರಂಗದ ಮೇಲೆ ಅನಾವರಣಗೊಳಿಸಿದರು. ಪ್ರಯೋಗದ ದೃಷ್ಟಿಯಿಂದ ಕೆಲವು ಕೊರತೆಗಳು, ದೋಷಗಳು ಇವೆ. ಅದು ಯಾವುದೇ ಪ್ರಯೋಗಕ್ಕೆ ಇರುವಂಥವೇ. ಆದರೆ ಸಮುದಾಯವೊಂದರ ಒಡಲಾಳದ ನೋವನ್ನು ರಂಗದ ಮೇಲೆ ಬಸಿದಿಟ್ಟಾಗ  ಬೆಚ್ಚಿ ಬೀಳುವಂತಾಯಿತು. ವಿಶೇಷವಾಗಿ ದಲಿತೇತರಲ್ಲಿ ಸಾಮಾಜಿಕ ಪ್ರಜ್ಞೆ, ಜವಾಬ್ದಾರಿಯನ್ನು ಬಡಿದೆಬ್ಬಿಸುವಂಥ ಕಥಾನಕವದು. "ಮಣೆಗಾರ" ಪ್ರೊಸಿನಿಯಂಗಿಂತ ಆಪ್ತರಂಗಭೂಮಿಗೆ ಸೂಕ್ತವಾದ ವಸ್ತು. ಪ್ರಯೋಗ ಒಟ್ಟಾರೆ ಮನುಷ್ಯ ಬದುಕಿನ ನಡುವಿರುವ ಗ್ರೇ ಏರಿಯಾವೊಂದರ ದರುಶನ ಮಾಡಿಸಿತು. ಮೇಲ್ವರ್ಗ ಸಹಮಾನವರನ್ನು ಅದು ಹೇಗೆ ಅಸ್ಪೃಶ್ಯರು ಎಂದು ದೂರಕ್ಕಿಟ್ಟಿತ್ತು, ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿತ್ತು ಎನ್ನುವುದು ಇದರ ಮೂಲ ಸಂಕಟ. ಇಡೀ ನಾಟಕದಲ್ಲಿ ಬದುಕಿಗಾಗೇ ಸಂಘರ್ಷವಿದೆ. ಆಹಾರಕ್ಕಾಗಿ ಹಾಹಾಕಾರವಿದೆ. socio-cultural  ನೆಲೆಯಲ್ಲಿ ದೊಡ್ಡ ಸಂಘರ್ಷವಿದೆ. ಇದು ರಾಜಕೀಯ ಆಯಾಮದಲ್ಲೂ ಬಹುಮುಖ್ಯವಾದ ಸಂಘರ್ಷವೇ. ಶಿಕ್ಷಣ ಮತ್ತು ಅದರ ಆಧಾರದಲ್ಲಿ ಹುಟ

"ಬದುಕು-ಬಯಲು" ನಾಟಕ ಮತ್ತು ಮಾನವೀಯ ನೆಲೆಯ ಹುಡುಕಾಟ

ಫ್ರಾನ್ಸ್ ನ ಬರಹಗಾರ ಅಲ್ಫ್ರೆಡ್ ಜೆರಿ ಬರೆದ 'ದಿ ಸೂಪರ್ ಮೇಲ್' ಎನ್ನುವ ಕಾದಂಬರಿಯ ಪ್ರೊಟಗಾನಿಸ್ಟ್ ಆ್ಯಂಡ್ರಿ ಮಾರ್ಕೆಲ್ ಒಬ್ಬ ಜಂಟಲ್ ಮನ್, ವಿಜ್ಞಾನಿ ಕೂಡ. ಅವನಿಗೆ ಮಾನವ ಸಾಮರ್ಥ್ಯಕ್ಕೆ ಮಿತಿ ಎಂಬುದೇ ಇಲ್ಲ ಎನ್ನುವುದರಲ್ಲಿ ಬಲವಾದ ನಂಬಿಕೆ. ಆತ ಉಗಿಬಂಡಿ ಜತೆಗೂ ಯಾವುದೇ ವಿಶ್ರಾಂತಿ ಮತ್ತು ತ್ರಾಸಿಲ್ಲದೇ ಕ್ರಮಿಸಿ  ರೇಸ್ ಗೆಲ್ಲಬಲ್ಲ (ಕಾದಂಬರಿಯಲ್ಲಿ ರೈಲು ಮತ್ತು ಸೈಕ್ಲಿಸ್ಟ್ ನಡುವೆ ಒಂದು ರೇಸ್ ನಡೆಯುತ್ತದೆ). ಒಂದೇ ಹೆಂಗಸಿನ ಜತೆ 24 ಗಂಟೆಗಳಲ್ಲಿ 82 ಬಾರಿ ಸಂಭೋಗ ನಡೆಸಬಲ್ಲ 'ಕಾಮಪಟುತ್ವ'ದ ಸಾಹಸಗಳನ್ನೂ ಮಾಡಬಲ್ಲ. ಇದನ್ನು ಪುರುಷಪರಾಕ್ರಮದ ನೆಲೆಯಲ್ಲಿ ನೋಡೋದಾ? ಇಲ್ಲಾ ನಿಸರ್ಗ ಸಹಜ ಸಾಧ್ಯತೆಯ ನೆಲೆಯಲ್ಲಿ ನೋಡುವುದಾ?... - ಇದು ಒಂದು ರೀತಿಯ ವಿಕ್ಷಿಪ್ತ ಮನೋಧರ್ಮದ, ಸೈನ್ಸ್ ಫಿಕ್ಷನ್ ಕಾದಂಬರಿಯ ಸಂಕ್ಷಿಪ್ತ ನೋಟ. ಅಲ್ಫ್ರೆಡ್ ಜೆರಿ ಉತ್ತಮ ನಾಟಕಕಾರನೂ ಹೌದು. ಆತನ 'ಉಬು ರೊಯ್' ಹೆಸರಾಂತ ನಾಟಕಗಳಲ್ಲೊಂದು.    * * * ಜೆರಿ ಬಗ್ಗೆ ಓದುತ್ತಿದ್ದ ಹೊತ್ತಲ್ಲಿ ಹಿಜಡಾವೊಬ್ಬರ ಆತ್ಮಕಥನ ಆಧರಿಸಿದ "ಬದುಕು-ಬಯಲು" ಎನ್ನುವ ನಾಟಕ ವೀಕ್ಷಣೆಗೆ ತಿಪಟೂರಿನ ರಂಗ ಗೆಳೆಯ ನೀನಾಸಂ ಚಂದ್ರು ಆಹ್ವಾನ ನೀಡಿದರು.  ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ ನೋಡಿದೆ. ಅದಕ್ಕೂ ಮುಂಚೆ ನಾಟಕದ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಸಿ.ಎಸ್. ದ್ವಾರಕಾನಾಥ್, ಗೌರಿ ಲಂಕೇಶ್ ಮತ್ತಿತರ ಚಿಂತಕರ ವಿ