ವಿಷಯಕ್ಕೆ ಹೋಗಿ

ನಾ ತುಕಾರಾಂ ಅಲ್ಲ: ಇಳಿಹೊತ್ತಿನಲ್ಲಿ ಕಳೆದುಹೋದ ಕಾಲದ ಮೆಲುಕು

ನಾ ತುಕಾರಾಂ ಅಲ್ಲ
ಮೂಲ: ಹೆರ್ಬ್ ಗಾರ್ಡನರ್ ಅವರ  ಐ ಯಾಮ್ ನಾಟ್ ರಾಪಪೋರ್ಟ್
ಕನ್ನಡಕ್ಕೆ:  ಸುರೇಂದ್ರನಾಥ್


ನಾಟಕ ಅಂದರೆ ಕೇವಲ ಸಂಭಾಷಣೆಯೇ? ಅಭಿನಯ ಅನ್ನೋದು ಕೂತಲ್ಲಿಂದಲೇ ಬರಿಯ ಕಾಗೆ ಹಾರಿಸೋದಾ? ಇಲ್ಲಿ ಎರಡು ಪಾತ್ರಗಳು ಹೆಚ್ಚಾಗಿ ಮಾಡೋದು ಇದನ್ನೇ.
ಇಬ್ಬರೂ ಪ್ರತಿಭಾನ್ವಿತರು. ಒಬ್ಬರಂತೂ ಅಭಿನಯ ಪಯಣದಲ್ಲಿ ಅನೇಕ ಮೇರು ಕೃತಿಗಳ ಪ್ರಮುಖ ಪಾತ್ರಗಳನ್ನು ತುಂಬ ಸೊಗಸಾಗಿ ಅಭಿನಯಿಸಿದವರು.
ಸಾಮಾನ್ಯವಾಗಿ 'ನಾ ತುಕಾರಾಂ ಅಲ್ಲ' ತರಹದ ನಾಟಕಗಳಲ್ಲಿ ವಸ್ತುವಿನ ಭಾವಸಾಂದ್ರತೆಯ ಹರವು ಅಷ್ಟು ವ್ಯಾಪಕವಾಗಿರೋದಿಲ್ಲ. ಒಂದು ಭಾವುಕ ನೆಲೆಯಲ್ಲಿ ಪ್ರೇಕ್ಷಕನಿಗೆ ಏನನ್ನೋ ನೆನಪಿಸಿಕೊಡುವ, ತಲುಪಿಸುವ ಸಣ್ಣ ಹಟಕ್ಕೆ ಇಂಥ ನಾಟಕಗಳು ಬೀಳೋದೇ ಹೆಚ್ಚು. ನಮ್ಮ ನಿಜಜೀವನದ ಅಂದರೆ ನಿತ್ಯಬದುಕಿನ ಬವಣೆಯ ಒಂದಿಷ್ಟು ಪಾಕ ಬಳಸಿಕೊಂಡು, ರಂಗದ ಮೇಲೆ ಅದನ್ನೆಲ್ಲ ಪಾತ್ರಗಳ ಮೂಲಕ ಹರಿಯಬಿಟ್ಟು ಪ್ರೇಕ್ಷಕರ ಮೆಚ್ಚುಗೆ, ಒಂದಷ್ಟು ಕಂಬನಿ, ಮರುಕತನ, ಚಪ್ಪಾಳೆಯನ್ನಷ್ಟೇ ನಿರೀಕ್ಷಿಸುವ ಇಂಥ ನಾಟಕಗಳಿಂದ ಅರಿವಿನ ವಿಸ್ತಾರವಾಗಲಿ, ಭಾವಸಂಘರ್ಷವನ್ನಾಗಲಿ ಅತ್ಯಂತ ಆಳವಾಗಿ ಅಥವಾ ದಟ್ಟವಾಗಿ ಅನುಭವಿಸಲು ಸಾಧ್ಯವಾಗುವುದಿಲ್ಲ. ಮೇಲ್ಪದರದಲ್ಲಿಯೇ ವಸ್ತು ಕ್ಷಣ ಕಾಲ ಕಾಡಿ ಮತ್ತೆ ಮರೆವಿಗೆ ಸಂದಾಯವಾಗಿಬಿಡುತ್ತದೆ. ಅನುಭವದ ಜತೆಗಿನ ಅನುಸಂಧಾನ ಪ್ರೇಕ್ಷಕರಿಗೆ ಅಷ್ಟು ಸಾಧ್ಯವಾಗುವುದಿಲ್ಲ. ಟಿಕೆಟ್ ಕೊಟ್ಟು ಇಂಥ ನಾಟಕಗಳನ್ನು ನೋಡುವುದಾದರೆ ಕೊಟ್ಟ ಕಾಸಿಗೆ ಮೋಸವಿಲ್ಲ ಎಂದು ಸಮಾಧಾನಪಟ್ಟುಕೊಳ್ಳಬಹುದೇನೋ.
ನಾಟಕದಲ್ಲಿ ಅಷ್ಟಾಗಿ ನಾಟಕೀಯ ಘಟನೆಗಳೇ ಘಟಿಸುವುದಿಲ್ಲ. ಅಂಥ ತಿರುವುಗಳೂ ಇಲ್ಲಿ ಸಂಭವಿಸುವುದಿಲ್ಲ. ಇದ್ದರೂ ಅವು ತುಂಬ ಸಾಂಕೇತಿಕವಾಗಿವೆ.
ಮಧ್ಯದಲ್ಲಿ ಒಬ್ಬ ಹುಡುಗಿ ಬರ್ತಾಳೆ. ತನ್ನ ಪಾಡಿಗೆ ತಾನು ಪಾರ್ಕನಲ್ಲಿ ಕೂತು ನಂತರ ಮಾಯವಾಗುತ್ತಾಳೆ. ಒಬ್ಬ ಮುದುಕನ ಕಚೇರಿಯ ಅಧಿಕಾರಿ ವಾಕ್ ಗೆಂದು ಬಂದು ಹೋಗುತ್ತಾನೆ. ಮತ್ತೊಮ್ಮೆ ಆಟೊ ಡ್ರೈವರ್ ಬರ್ತಾನೆ, ಕೊನೆಗೆ ಮತ್ತೊಬ್ಬ ಮುದುಕನ ಮಗಳು ಬರ್ತಾಳೆ... ಇವೆಲ್ಲ ಬಂದು ಹೋಗುವ ಪಾತ್ರಗಳೇ. ಇವುಗಳ ಜತೆಗಿನ ಒಡನಾಟ ಈ ಎರಡೂ ಪಾತ್ರಗಳಿಗೆ ಅಷ್ಟಕ್ಕಷ್ಟೇ. ತಂದೆ-ಮಗಳ ದೃಶ್ಯ ಸೆಂಟಿಮೆಂಟಲ್ ದೃಷ್ಟಿಯಿಂದ ಪ್ರೇಕ್ಷಕರ ಚಣಕಾಲ ಹಿಡಿದು ಕೂರಿಸಿತಷ್ಟೇ. ಅಲ್ಲೂ ಬರಿಯ ಮಾತುಗಳು. ಹೀಗಾಗಿ ಎಲ್ಲವನ್ನು ಮಾತುಗಳಲ್ಲೇ ಕಟ್ಟಿಕೊಡುವ ಮಿತಿಗೆ ಇಡೀ ಪ್ರಯೋಗ ಒಳಪಡುತ್ತದೆ. ಪ್ರೇಕ್ಷಕರು ಪಾತ್ರಗಳ ಮಾತಿನ ಮೂಲಕವೇ ಆದ ಘಟನೆಗಳನ್ನು ಕಣ್ಮುಂದೆ ತಂದುಕೊಳ್ಳಬೇಕು. ಭಾಷೆಯ ಧ್ವನಿ ಮತ್ತು ಸಂಭಾಷಣೆಯ ಶಾರ್ಪನೆಸ್ ಗ್ರಹಿಸಬಲ್ಲವರು ಕೊಂಚ ಭಿನ್ನವಾಗಿ ಪ್ರಯೋಗದ ನಾಟಕ ವಸ್ತುವನ್ನು ಒಳಕ್ಕಿಳಿಸಿಕೊಳ್ಳಬಲ್ಲರೇನೋ!..
ದೃಶ್ಯ ಜೋಡಣೆಗಂತೂ ನಾಟಕದಲ್ಲಿ ಅವಕಾಶ ಕಮ್ಮಿ. ಹೀಗಾಗಿ ಇದು ತುಂಬ ಸರಳವಾದ ಪ್ರಯೋಗ. ಇಂಥದ್ದಕ್ಕೆ ನಿರೂಪಣೆ ಸರಳವೆನಿಸಿದರೂ ನಟರ ಪ್ರಬುದ್ಧತೆಯನ್ನೇ ಇಡೀ ಪ್ರಯೋಗ ಆಶ್ರಯಿಸಬೇಕಾಗುವುದು ಅನಿವಾರ್ಯ.
ದೃಶ್ಯದಿಂದ ದೃಶ್ಯಕ್ಕೆ ನಾಟಕ ಬೆಳೆಯುತ್ತ ಹೋದಂತೆ ಅದರ ಭಾವನೆಗಳೂ ವಿಸ್ತಾರಗೊಳ್ಳುತ್ತ ಸಾಗುತ್ತವೆ. ಈ ಭಾವ ಪ್ರಪಂಚದಲ್ಲಿ ಪ್ರೇಕ್ಷಕರೂ ಕೂಡ ನಿಧಾನವಾಗಿ ಹರಿದಾಡುತ್ತಾರೆ. ತಮ್ಮ ಭಾವಕೋಶದಲ್ಲಿ ಇದನ್ನು ಇಟ್ಟುಕೊಂಡು ಕೊಂಚ ಚಡಪಡಿಸುತ್ತಾರೆ, ನಿರಾಳರಾಗುತ್ತಾರೆ, ನಗುತ್ತಾರೆ, ಮರುಗುತ್ತಾರೆ, ಮನರಂಜನೆಗೂ ಹಾತೊರೆಯುತ್ತಾರೆ. ಇದೆಲ್ಲ ನಾಟಕೀಯ ಅಂಶಗಳ ಮೂಲಕ ಪ್ರೇಕ್ಷಕರಿಗೆ ಸಂದಾಯವಾಗುವಂಥದು. ಇಂಥ ರಂಗಕ್ರಿಯೆ ಅತ್ಯಂತ ಮುಖ್ಯವಾಗುತ್ತದೆ. ನಾಟಕೀಯ ಘಟನೆಗಳಲ್ಲಿ ಪ್ರೇಕ್ಷಕರು ತಮ್ಮದೂ ಒಂದನ್ನು ಕಲ್ಪಿಸಿಕೊಳ್ಳುವುದಕ್ಕೆ ಇದೆಲ್ಲ ನೆರವಾಗುತ್ತದೆ. ಆದರೆ, ಈ ನಾಟಕದಲ್ಲಿ ಇಂಥ ರಂಗಕ್ರಿಯೆಗೆ ಅವಕಾಶ ಕಮ್ಮಿ ಎನ್ನುವುದೇ ಒಂದು ದೊಡ್ಡ ಕೊರತೆ.
ಇಲ್ಲಿ ಬರಿಯ ಮಾತುಗಳು ಇರೋದರಿಂದ ಭಾಷೆಯ ಸೊಗಸಿಗಿನಿಂದ ಮತ್ತು ವಿಷಯವನ್ನು ತೇಲಿಸಿಬಿಟ್ಟ ಪರಿಯಿಂದಾಗಿ ಪ್ರೇಕ್ಷಕರಲ್ಲಿ ಆಸಕ್ತಿ ಆರಂಭಕ್ಕೆ ಕೆರಳಿಸಬಹುದೇನೋ. ಮುಂದೆ ಕ್ರಮೇಣ ಅದೇ ಏಕತಾನವಾಗಿ ನಾಟಕದ ಮಾತುಗಳು ಪ್ರವಚನದ ಹಾದಿ ಹಿಡಿಯತೊಡಗುತ್ತವೆ.
ಇಲ್ಲಿನ ಎರಡು ಪಾತ್ರಗಳು ಓಲ್ಡ್ ಏಜ್ ಸಮಸ್ಯೆಗಳನ್ನು ಪ್ರತಿನಿಧಿಸುವಂಥವು. ಒಂದು ವೃದ್ಧಾಪ್ಯವನ್ನು ಸಹಜ ಎಂಬಂತೆ ಸ್ವೀಕರಿಸಿದ್ದರೆ ಮತ್ತೊಂದು ವೃದ್ಧಾಪ್ಯ ಅನ್ನೋದು ಅಷ್ಟು ಭಾರ ಯಾಕಾಗಬೇಕು? ಯೌವನದಲ್ಲಿದ್ದಂತೆ ಈಗಲೂ ಇರಬಹುದಲ್ಲ ಎನ್ನುವ ಮನಸ್ಥಿತಿಯದು. ಎರಡೂ ಕಳೆದು ಹೋದ ಮಧುರ ನೆನಪುಗಳನ್ನು ಪ್ರಜ್ಞಾಪೂರ್ವಕವಾಗಿ ತಾಜಾ ಮಾಡಿಕೊಳ್ಳಲೆತ್ನಿಸದೇ, ಅದರ ವಿಸ್ಮೃತಿಯಲ್ಲಿ ಕಳೆದು ಹೋಗಲೆತ್ನಿಸುವಂಥವು. ಈ ಕಳೆದುಹೋಗುವಿಕೆಗೆ ಅಂಥ ಅಧ್ಯಾತ್ಮದ ಸ್ಪರ್ಶವಿಲ್ಲ. ಅದೇ ಮನುಷ್ಯ ಸಹಜ ಬಯಕೆಗಳ ಕಾಡಲ್ಲಿ ಕಂಡಷ್ಟು ದೂರ ಕ್ರಮಿಸುತ್ತ, ಎಲ್ಲೋ ಒಂದೆಡೆ ವಿಶ್ರಾಂತಿಗಾಗಿ ಹಂಬಲಿಸುತ್ತ ಕಡೆಗೆ ಪಯಣವೇ ಸಾಕೆಂದು ಸುಸ್ತಾಗಿ ಸಿಕ್ಕ ದಿಬ್ಬದ ಮೇಲೆ ಕುಳಿತುಕೊಳ್ಳುವ ಹೈರಾಣಾದ ಜೀವಗಳಿವು. ಈತನಕ ಕ್ರಮಿಸಿದ ಹಾದಿಯನ್ನು ನೆನಪಿಸಿಕೊಳ್ಳುತ್ತ ಗತಜೀವನಕ್ಕೆ ಹೋಗಿ ನಿಂತು ಒಂದಷ್ಟು ಹುಮ್ಮಸ್ಸು ತಂದುಕೊಳ್ಳಲೆತ್ನಿಸುವ ಸಾಧಾರಣ ಜೀವಿಗಳು.
ಇದರಲ್ಲಿನ ಒಂದು ಪಾತ್ರ ಕ್ರಾಂತಿಕಾರಕ ಪ್ರಜ್ಞೆಯನ್ನೇನೋ ಹೊರಸೂಸುತ್ತದೆ. ಆದರೆ, ಅದು ತನ್ನ ಈಗಿನ ಸ್ಥಿತಿಗಿಂತ ಹಿಂದಿನ ಸ್ಥಿತಿಯ ಸಂಭ್ರಮಗಳನ್ನು ಹೆಕ್ಕಿ ಹೆಕ್ಕಿ ಬಿಚ್ಚಿಡಲು ನೋಡುತ್ತದೆ. ಆ ಮೂಲಕ ತಾನೆಷ್ಟು ಪರಾಕ್ರಮಿ ಆಗಿದ್ದೆ, ಕಾರ್ಮಿಕ ವರ್ಗದ ಹಿತಾಸಕ್ತಿಗೆ ಹೋರಾಟ ನಡೆಸುತ್ತಿದ್ದೆ... ಎಂದೆಲ್ಲ ಬಡಾಯಿ ಕೊಚ್ಚಿಕೊಳ್ಳುವುದರಲ್ಲಿ ಸಂತೋಷ ಕಾಣಲು ಹಾತೊರೆಯುತ್ತದೆ. ಮತ್ತೊಂದು ಜೀವ, ಸ್ವಾಮಿನಿಷ್ಠೆಯನ್ನೇ ಜೀವನಾದರ್ಶ ಎಂದುಕೊಳ್ಳುವ ಮತ್ತು 'ಯಾಕೆ ನಮಗೆ ಉಸಾಬರಿ'... ಎನ್ನುವ ಸೇಫ್ ಝೋನ್ ಬಯಸುವ ಮನೋಧರ್ಮದ್ದು.  ಈ ದೇಹವೆಂಬ ಚೀಲವನ್ನು ಹ್ಯಾಗೊ ತುಂಬಿಸಿಕೊಂಡು ಕಡೆಗೊಮ್ಮೆ 'ಗೋವಿಂದಾ' ಅಂದರಾಯಿತು ಎನ್ನುವ ಮನಸ್ಥಿತಿಯದು.
ಒಟ್ಟಾರೆ ಎರಡು ಪ್ರಮುಖ ಪಾತ್ರಗಳ ಮೂಲಕ ಜೀವನದ ಸಂಜೆ ಹೊತ್ತಲ್ಲಿರುವ ಹಿರಿಯ ಜೀವಗಳು, ಗತಕಾಲದ ಮೆಲುಕು ಹಾಕುತ್ತ, ವರ್ತಮಾನದ ಹಂಗು ತೊರೆಯುತ್ತ ಹೇಗೆ ಇಡೀ ಬದುಕಿನ ಬಗ್ಗೆ ನಿರ್ಲಿಪ್ತತೆಗೆ ಜಾರುತ್ತಾರೆ... ಮತ್ತು ತಮಗಾಗುತ್ತಿರುವ ನೋವಿನ ಬಗ್ಗೆ ಮರುಕಪಡುವ ಇಲ್ಲವೇ, ಉದಾಸೀನ ಮನೋಭಾವ ತೋರುವ ಭಾವುಕ ಜೀವಿಗಳಾಗೇ ಉಳಿದುಬಿಡುತ್ತಾರೆ... ಜತೆಗೆ ಅಂಥದೊಂದು ಅನಿವಾರ್ಯ ಸ್ಥಿತಿಗೆ ಅವರೇಕೆ ಬಂದು ನಿಲ್ಲುತ್ತಾರೆ... ಯಂಗ್ ಜನರೇಶನ್ ಅಸಡ್ಡೆ ಇದಕ್ಕೆ ಕಾರಣವೇ? ಅನ್ನೋದು 'ನಾ ತುಕಾರಾಂ ಅಲ್ಲ' ನಾಟಕದ ಒಳನೋವು.
ರಂಗಭೂಮಿಯ ಮೇರುನಟ ನಟರಾಜ್ ಏಣಗಿ ಮಾತ್ರ ಪೋಷಕ ಪಾತ್ರವಾದರೂ ಕೆಲವೇ ಡೈಲಾಗ್ ಗಳ ಮೂಲಕ ಇಡೀ ಪ್ರಯೋಗವನ್ನು ತಮ್ಮ ಹತೋಟಿಗೆ ಎಳಕೊಂಡುಬಿಡುತ್ತಾರೆ. ನಾಟಕದುದ್ದಕ್ಕೂ ಡಾಮಿನೇಟ್ ಮಾಡಲು ಹವಣಿಸುತ್ತಲೇ ಇದ್ದ ಬಿ.ಸುರೇಶ್ (ನಾಟಕದ ಪ್ರಮುಖ ಪಾತ್ರ) ಕಡೆಗೆ ಏಣಗಿ ಮಾತುಗಳ (ಸಂಭಾಷಣೆ) ಮೊನಚಿನ ಮುಂದೆ ಮಂಕಾಗಿಬಿಡುತ್ತಾರೆ. ಹೆರ್ಬ್ ಗಾರ್ಡನರ್ ರಚಿಸಿದ 'ಐ ಯಾಮ್ ನಾಟ್ ರಾಪಪೋರ್ಟ್' ಎನ್ನುವ ಮೂಲಕೃತಿಯಿಂದ ವಸ್ತು ಆಯ್ದುಕೊಂಡ ಸುರೇಂದ್ರನಾಥ್ ಅದನ್ನು ಕನ್ನಡಕ್ಕೆ ಒಗ್ಗಿಸುವ ಯತ್ನ ಮಾಡಿದ್ದಾರೆ. ಅವರ ಸ್ಕ್ರಿಪ್ಟ್ ಕುಸುರಿ ಸೊಗಸಾಗಿದೆ ಮತ್ತು ನಾಟಕದ ಕೆಲ ಮಾತುಗಳಲ್ಲಿ ತೂಕವಿದೆ. ಇದೇ ತೂಕ ಒಟ್ಟಾರೆ ಪ್ರಯೋಗಕ್ಕೆ ಇನ್ನಷ್ಟು ದಕ್ಕಬೇಕಿತ್ತು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮನುಷ್ಯ ಜಾತಿ ತಾನೊಂದೇ ವಲಂ...

ಭಾರತದಲ್ಲಿ ಜಾತಿ ವ್ಯವಸ್ಥೆ ಹೇಗೆ ಹುಟ್ಟಿತು ಎಂಬುದಕ್ಕೆ ಯಾವುದೇ ನಿರ್ಧಿಷ್ಟ ಥಿಯರಿ ಇಲ್ಲ. ಆದರೆ, ಇಲ್ಲಿನ ವರ್ಗ ಸೃಷ್ಟಿ ಮಾತ್ರ ಇರಾನ್ ವ್ಯವಸ್ಥೆಯಂತೇ ಇದೆ.  ಪುರಾತನ ಇರಾನಿನ ಚರಿತ್ರೆಯಲ್ಲಿ ಇಂಥದೊಂದು ವ್ಯವಸ್ಥೆ ಇತ್ತು. ಅದಕ್ಕೆ ಪಿಸ್ತ್ರಾಸ್ ಎನ್ನುತ್ತಾರೆ. ನಮ್ಮಲ್ಲಿ ಅದು ಚಾತುರ್ವರ್ಣವಾಗಿದೆ. ಅಲ್ಲಿ ಅಥ್ರವಾನ್ಸ್ (ಪ್ರೀಸ್ಟ್ ಕ್ಲಾಸ್), ರಥೈಸ್ತಾ (ವಾರಿಯರ್ಸ್), ವಸ್ತ್ರಿಯಾ (ಮರ್ಕಂಟೈಲ್ ಕ್ಲಾಸ್) ಮತ್ತು ಹ್ಯುತಿ (ಆರ್ಟಿಸನ್) ಎನ್ನುವ ವರ್ಗ ವ್ಯವಸ್ಥೆ ಇದೆ. ನಮ್ಮಲ್ಲಿ ಇದನ್ನು ಕಲ್ಪಿಸಿಕೊಂಡರೆ ಪುರೋಹಿತ ಅಥವಾ ಬ್ರಾಹ್ಮಣ (ಅಥ್ರವಾನ್ಸ್), ಕ್ಷತ್ರಿಯ  (ರಥೈಸ್ತಾ), ವೈಶ್ಯ  (ವಸ್ತ್ರಿಯಾ) ಮತ್ತು ಶೂದ್ರ (ಹ್ಯುತಿ) ಎಂದು ಅರ್ಥೈಸಿಕೊಳ್ಳಬಹುದು.  ಆದಿ ಕಾಲದ ಇರಾನಿಯನ್ ವ್ಯವಸ್ಥೆ ಹೀಗೇ ಇತ್ತು. ಅದೇ ನಾಲ್ಕು ವರ್ಗಗಳು ಭಾರತದಲ್ಲೂ ಈಗಲೂ ಚಾಲ್ತಿಯಲ್ಲಿವೆ. ಹೀಗೆ ಒಂದು ಇರಾನ್ ಸಂಬಂಧ ಭಾರತಕ್ಕಿದೆ. ಚರ್ಮದ ಬಣ್ಣ, ನಯ ನಾಜೂಕು, ಕಣ್ಣು, ಬುದ್ಧಿವಂತಿಕೆಯನ್ನು ಹೋಲಿಸಿದರೆ ಭಾರತದ ಅದರಲ್ಲೂ ಉತ್ತರ ಭಾರತದ ಕಾಶ್ಮೀರಿ ಪಂಡಿತರು, ಉತ್ತರ ಪ್ರದೇಶದ ಪಂಡಿತ್, ಚಿತ್ಪಾವನ ಬ್ರಾಹ್ಮಣರು, ನಮ್ಮ ಕರಾವಳಿ ಮತ್ತು ಉತ್ತರ ಕನ್ನಡದ ಹವ್ಯಕರು ಹೆಚ್ಚೂ ಕಮ್ಮಿ ಇರಾನಿಗಳನ್ನು ಹೋಲುತ್ತಾರೆ (ಮೇಲ್ನೋಟಕ್ಕೆ).  ಬಹುಶಃ ಹೀಗೂ ಆಗಿರಬಹುದು, ಆಗ ಇರಾನ್ ನಲ್ಲಿ ಕ್ರೈಸ್ತ ಮತ್ತು ಇಸ್ಲಾಂ ಮುಂಚೆಯೂ ಹಲವಾರು ಸುಧಾರಣಾವಾದಿಗಳ ಅಥವಾ ಬಂಡುಕೋರರ

"ಮಣೆಗಾರ" ಬಸಿದಿಟ್ಟ ಒಡಲಾಳದ ನೋವು ನೆನೆದು...

ಹಾಲ್ಕುರಿಕೆ ಥಿಯೇಟರ್ ಕಾನ್ಸೆಪ್ಟ್ ಕನ್ನಡ ರಂಗಭೂಮಿಯಲ್ಲಿ ಹೊಸದೊಂದು ಸಂಚಲನವನ್ನುಂಟು ಮಾಡುತ್ತಿದೆ. ಒಟ್ಟಾರೆ ಭಾರತೀಯ ರಂಗಭೂಮಿ ಕಾಣುತ್ತಿರುವ ಹೊಸತನಕ್ಕೆ ಇದು ಮುಖ್ಯವಾದ ಸಾಕ್ಷಿ. ಅತ್ಯಂತ ಕ್ರಿಯಾಶೀಲ ತುಡಿತದ ರಂಗಕರ್ಮಿ ಹಾಲ್ಕುರಿಕೆ ಶಿವಶಂಕರ (ನಿರ್ದೇಶಕ/ನಾಟಕಕಾರ) ಇತ್ತೀಚೆಗೆ "ಮಣೆಗಾರ" (ತುಂಬಾಡಿ ರಾಮಯ್ಯನವರ ಆತ್ಮಕಥೆ) ಎನ್ನುವ ದಲಿತ ಕಥಾನಕವೊಂದನ್ನು ರಂಗದ ಮೇಲೆ ಅನಾವರಣಗೊಳಿಸಿದರು. ಪ್ರಯೋಗದ ದೃಷ್ಟಿಯಿಂದ ಕೆಲವು ಕೊರತೆಗಳು, ದೋಷಗಳು ಇವೆ. ಅದು ಯಾವುದೇ ಪ್ರಯೋಗಕ್ಕೆ ಇರುವಂಥವೇ. ಆದರೆ ಸಮುದಾಯವೊಂದರ ಒಡಲಾಳದ ನೋವನ್ನು ರಂಗದ ಮೇಲೆ ಬಸಿದಿಟ್ಟಾಗ  ಬೆಚ್ಚಿ ಬೀಳುವಂತಾಯಿತು. ವಿಶೇಷವಾಗಿ ದಲಿತೇತರಲ್ಲಿ ಸಾಮಾಜಿಕ ಪ್ರಜ್ಞೆ, ಜವಾಬ್ದಾರಿಯನ್ನು ಬಡಿದೆಬ್ಬಿಸುವಂಥ ಕಥಾನಕವದು. "ಮಣೆಗಾರ" ಪ್ರೊಸಿನಿಯಂಗಿಂತ ಆಪ್ತರಂಗಭೂಮಿಗೆ ಸೂಕ್ತವಾದ ವಸ್ತು. ಪ್ರಯೋಗ ಒಟ್ಟಾರೆ ಮನುಷ್ಯ ಬದುಕಿನ ನಡುವಿರುವ ಗ್ರೇ ಏರಿಯಾವೊಂದರ ದರುಶನ ಮಾಡಿಸಿತು. ಮೇಲ್ವರ್ಗ ಸಹಮಾನವರನ್ನು ಅದು ಹೇಗೆ ಅಸ್ಪೃಶ್ಯರು ಎಂದು ದೂರಕ್ಕಿಟ್ಟಿತ್ತು, ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿತ್ತು ಎನ್ನುವುದು ಇದರ ಮೂಲ ಸಂಕಟ. ಇಡೀ ನಾಟಕದಲ್ಲಿ ಬದುಕಿಗಾಗೇ ಸಂಘರ್ಷವಿದೆ. ಆಹಾರಕ್ಕಾಗಿ ಹಾಹಾಕಾರವಿದೆ. socio-cultural  ನೆಲೆಯಲ್ಲಿ ದೊಡ್ಡ ಸಂಘರ್ಷವಿದೆ. ಇದು ರಾಜಕೀಯ ಆಯಾಮದಲ್ಲೂ ಬಹುಮುಖ್ಯವಾದ ಸಂಘರ್ಷವೇ. ಶಿಕ್ಷಣ ಮತ್ತು ಅದರ ಆಧಾರದಲ್ಲಿ ಹುಟ

"ಬದುಕು-ಬಯಲು" ನಾಟಕ ಮತ್ತು ಮಾನವೀಯ ನೆಲೆಯ ಹುಡುಕಾಟ

ಫ್ರಾನ್ಸ್ ನ ಬರಹಗಾರ ಅಲ್ಫ್ರೆಡ್ ಜೆರಿ ಬರೆದ 'ದಿ ಸೂಪರ್ ಮೇಲ್' ಎನ್ನುವ ಕಾದಂಬರಿಯ ಪ್ರೊಟಗಾನಿಸ್ಟ್ ಆ್ಯಂಡ್ರಿ ಮಾರ್ಕೆಲ್ ಒಬ್ಬ ಜಂಟಲ್ ಮನ್, ವಿಜ್ಞಾನಿ ಕೂಡ. ಅವನಿಗೆ ಮಾನವ ಸಾಮರ್ಥ್ಯಕ್ಕೆ ಮಿತಿ ಎಂಬುದೇ ಇಲ್ಲ ಎನ್ನುವುದರಲ್ಲಿ ಬಲವಾದ ನಂಬಿಕೆ. ಆತ ಉಗಿಬಂಡಿ ಜತೆಗೂ ಯಾವುದೇ ವಿಶ್ರಾಂತಿ ಮತ್ತು ತ್ರಾಸಿಲ್ಲದೇ ಕ್ರಮಿಸಿ  ರೇಸ್ ಗೆಲ್ಲಬಲ್ಲ (ಕಾದಂಬರಿಯಲ್ಲಿ ರೈಲು ಮತ್ತು ಸೈಕ್ಲಿಸ್ಟ್ ನಡುವೆ ಒಂದು ರೇಸ್ ನಡೆಯುತ್ತದೆ). ಒಂದೇ ಹೆಂಗಸಿನ ಜತೆ 24 ಗಂಟೆಗಳಲ್ಲಿ 82 ಬಾರಿ ಸಂಭೋಗ ನಡೆಸಬಲ್ಲ 'ಕಾಮಪಟುತ್ವ'ದ ಸಾಹಸಗಳನ್ನೂ ಮಾಡಬಲ್ಲ. ಇದನ್ನು ಪುರುಷಪರಾಕ್ರಮದ ನೆಲೆಯಲ್ಲಿ ನೋಡೋದಾ? ಇಲ್ಲಾ ನಿಸರ್ಗ ಸಹಜ ಸಾಧ್ಯತೆಯ ನೆಲೆಯಲ್ಲಿ ನೋಡುವುದಾ?... - ಇದು ಒಂದು ರೀತಿಯ ವಿಕ್ಷಿಪ್ತ ಮನೋಧರ್ಮದ, ಸೈನ್ಸ್ ಫಿಕ್ಷನ್ ಕಾದಂಬರಿಯ ಸಂಕ್ಷಿಪ್ತ ನೋಟ. ಅಲ್ಫ್ರೆಡ್ ಜೆರಿ ಉತ್ತಮ ನಾಟಕಕಾರನೂ ಹೌದು. ಆತನ 'ಉಬು ರೊಯ್' ಹೆಸರಾಂತ ನಾಟಕಗಳಲ್ಲೊಂದು.    * * * ಜೆರಿ ಬಗ್ಗೆ ಓದುತ್ತಿದ್ದ ಹೊತ್ತಲ್ಲಿ ಹಿಜಡಾವೊಬ್ಬರ ಆತ್ಮಕಥನ ಆಧರಿಸಿದ "ಬದುಕು-ಬಯಲು" ಎನ್ನುವ ನಾಟಕ ವೀಕ್ಷಣೆಗೆ ತಿಪಟೂರಿನ ರಂಗ ಗೆಳೆಯ ನೀನಾಸಂ ಚಂದ್ರು ಆಹ್ವಾನ ನೀಡಿದರು.  ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ ನೋಡಿದೆ. ಅದಕ್ಕೂ ಮುಂಚೆ ನಾಟಕದ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಸಿ.ಎಸ್. ದ್ವಾರಕಾನಾಥ್, ಗೌರಿ ಲಂಕೇಶ್ ಮತ್ತಿತರ ಚಿಂತಕರ ವಿ