ವಿಷಯಕ್ಕೆ ಹೋಗಿ

ಭಾರತದ ರಾಜಕೀಯದಲ್ಲಿ ಹೆಣ್ಣು!

ನಮ್ಮ ದೇಶದಲ್ಲಿ ಗಂಡಸರಂತೆ ವರ್ತಿಸುವ ಹೆಣ್ಣುಮಕ್ಕಳನ್ನು "ಗಂಡೆದೆ" ಎಂದು ಮೆಚ್ಚಿಕೊಳ್ಳುತ್ತಾರೆ. ಇಂದಿರಾಗಾಂಧಿಯನ್ನು "ಕಾಂಗ್ರೆಸ್ಸಿನಲ್ಲಿರುವ ಏಕೈಕ ಗಂಡಸು" ಎಂದೇ ಬಣ್ಣಿಸಲಾಗುತ್ತಿತ್ತು. ಸುಂದರಿಯೂ, ದಿಟ್ಟೆಯೂ ಆಗಿದ್ದ ಇಂದಿರಾ ಆ ಕಾಲದ ಬಹುತೇಕ ಕಾಂಗ್ರೆಸ್ಸಿಗರಿಗೆ "ಆತ್ಮೀಯ ಮೇಡಂ" ಆಗಿದ್ದರು. ಗಂಡ ಫಿರೋಜ್ ಸಾವಿನ ನಂತರ ವಿಧವೆ ಎನ್ನುವ ಹಿಂಜರಿಕೆಗಳಿಂದ ಮುಕ್ತವಾಗಿದ್ದ ಇಂದಿರಾ, ಅಪ್ಪ ನೆಹರೂ ಹಬ್ಬಿಸಿಟ್ಟಿದ್ದ ಪಾಲಿಟಿಕ್ಸ್ ನಲ್ಲಿ ಬೆಳೆಯುವುದಕ್ಕೆ ಸಾಕಷ್ಟು ಅವಕಾಶದ ಅಂಗಳ ತೆರಕೊಂಡೇ ಇತ್ತು. ಅದನ್ನು ಅಷ್ಟೂ ತುಂಬಿಕೊಂಡ ಇಂದಿರಾ ತುಳುಕಿದರು. ಆಲದ ಮರದಂತೆ ಹಬ್ಬಿಕೊಂಡರು. ಪಕ್ಕದಲ್ಲಿ ಯಾವ ಬಳ್ಳಿಯೂ ಚಿಗುರೊಡೆಯದಂತೆ ನೋಡಿಕೊಂಡರು.


ಚಾಣಾಕ್ಷತೆ, ನೆಹರೂ ಮಗಳೆನ್ನುವ ಟ್ಯಾಗಲೈನ್ ಮತ್ತು ಗಾಂಧಿ ಎನ್ನುವ ಹೆಸರಿನ ವಜನ್ನು ಇಂದಿರಾಗೆ ಪಕ್ಷ ರಾಜಕಾರಣದಲ್ಲಿ ಜಾಗ ಗಟ್ಟಿಗೊಳಿಸಿತ್ತು. ಆ ಕಾಲದ ಜನಸಾಮಾನ್ಯರಲ್ಲಿ ಆಕೆ ಹೆಂಗಸು, ಅದರಲ್ಲೂ ವಿಧವೆ ಎನ್ನುವ ಅನುಕಂಪ ಮನೆ-ಮನದ ಮಾತಾಗಿತ್ತು. ಆ ಸ್ನಿಗ್ಧ ಸೌಂದರ್ಯ, ನಿಲುವು ಕೂಡ ಸೆಳೆದಿತ್ತು. ಪ್ರಧಾನಿ ಪಟ್ಟದಲ್ಲಿ ಆಕೆ ವಿರಾಜಿಸುತ್ತಿದ್ದುದು ಹೇಗೆ ನೋಡಿದರೂ ಚಂದವಾಗೇ ಕಾಣಿಸುತ್ತಿತ್ತು. ದೇಶ ವಿದೇಶದ ಪ್ರಧಾನಿ, ರಾಷ್ಟ್ರಪತಿ, ರಾಯಭಾರಿಗಳಿಗೆಲ್ಲ ಹಸ್ತಲಾಘವ ನೀಡುತ್ತ ನಕ್ಕಳೆಂದರೆ ಸಾಕು ಇಡೀ ಭಾರತದ ಹೆಂಗಸರು ಪುಳಕಗೊಳ್ಳುತ್ತಿದ್ದರು. ಮತಗಟ್ಟೆ ಮುಂದೆ ನಿಂತ ಹೆಂಗಸರ ಮುಖದಲ್ಲೆಲ್ಲ ಇಂದಿರಾ ನಗೆಯ ಮೋಡಿ, ದಿಟ್ಟತನ ಮೂಡಿಸುತ್ತಿದ್ದ ಖುಷಿ ಮತವಾಗಿ ಮಾರ್ಪಡುತ್ತಿತ್ತು. ಅದೊಂದು ಭಾರತೀಯ ರಾಜಕೀಯ ರಂಗದ ರೋಚಕ ಅಧ್ಯಾಯ ಎಂದು ಹಿಂದಿನವರು ಬಣ್ಣಿಸುವುದನ್ನು ಕೇಳಿದ್ದೇನೆ.

ಕಾಶ್ಮೀರಿ ಬ್ರಾಹ್ಮಣ ಸಮುದಾಯದ ಇಂದಿರಾ ನಂತರ ಬೇರಾವ ಹೆಣ್ಣು ಭಾರತೀಯ ರಾಜಕೀಯದಲ್ಲಿ ಅಷ್ಟು ಪ್ರಭಾವ ಬೀರಲಾಗಲಿಲ್ಲ. ಪ್ರಯತ್ನ ಪಟ್ಟರೆ ಮೊಮ್ಮಗಳು ಪ್ರಿಯಾಂಕಾರನ್ನು ಆ ಹಂತಕ್ಕೇರಿಸಬಲ್ಲಂಥ ಚಾನ್ಸ್ ಇತ್ತು. ಮೊಮ್ಮಗ ರಾಹುಲ್ ಮತ್ತೊಬ್ಬ ರಾಜೀವ್ ಆಗಲಿ ಎನ್ನುವ ಅವನ ಹೆತ್ತೊಡಲ (ಸೋನಿಯಾ) ಕೂಗೋ ಏನೋ ಕಾಂಗ್ರೆಸ್ ಕಾನಸಂಟ್ರೇಷನ್ ಪ್ರಿಯಾಂಕಾ ಮಲೆ ಅಷ್ಟಾಗಿ ಬೀಳಲಿಲ್ಲ.

ಹೆಣ್ಣು ಎನ್ನುವ ಟ್ಯಾಗಲೈನ್ ಹೊರತುಪಡಿಸಿಯೂ ಇಂದಿರಾರನ್ನು ಗೌರವಿಸಿದ, ಆದರಿಸಿದ ಜನ ಕ್ರಮವಾಗಿ ಅವರ ಮಗ ರಾಜೀವ್ ಮತ್ತು ಸೊಸೆ ಸೋನಿಯಾ ಗಾಂಧಿಯ ಕೈಬಿಡಲಿಲ್ಲ. ಒಂದು ಅವಧಿಗೆ ಪ್ರಧಾನಿಯೂ ಆಗಿದ್ದ ರಾಜೀವ್ ಭೀಕರ ಹತ್ಯೆಗೊಳಗಾದರು. ನಂತರ ಕಾಂಗ್ರೆಸ್ ಅನುಕಂಪದ ಅಲೆಯಲ್ಲಿ ಮತ್ತೆ ಅಧಿಕಾರ ದಕ್ಕಿಸಿಕೊಂಡಿತ್ತು. ದಕ್ಷಿಣದ ಬ್ರಾಹ್ಮಣ ಸಮುದಾಯವೊಂದಕ್ಕೆ ಸೇರಿದ ಪಿ.ವಿ. ನರಸಿಂಹರಾವ್ ಹಸಿದ ಬ್ರಾಹ್ಮಣ ಗಡದ್ದಾಗಿ ಉನ್ನುವಂತೆ ಅಧಿಕಾರದ ದಾಹವನ್ನು ತೀರಿಸಿಕೊಂಡರು. ಇಂದಿರಾ ಕೋಠ್ರಿ ಪಾಲಿಟಿಕ್ಸ್ ಜಮಾನಾದಲ್ಲಿ ಸಾಕಷ್ಟು ಹಿಂಸೆ, ಅವಮಾನ ಅನುಭವಿಸಿದ್ದ ರಾವ್, ಅಧಿಕಾರ ಸಿಕ್ಕೊಡನೆ ತನಗೆ ಸವಾಲೆನಿಸಿದವರನ್ನೆಲ್ಲ ಹುಡುಕಿ ರಾಜಕೀಯ ಸೇಡು ತೀರಿಸಿಕೊಂಡು ಕೆಲವರನ್ನು ಕಡೆಗಣಿಸಿಬಿಟ್ಟರು. ತಮ್ಮ ಅವಧಿಯಲ್ಲೇ ನಡೆದ ಬಾಬ್ರಿ ಮಸೀದಿ ಧ್ವಂಸದಂಥ ಕೃತ್ಯಕ್ಕೆ ರಾವ್ ಪರೋಕ್ಷ ಬೆಂಬಲವಾಗಿ ನಿಂತರೆನ್ನುವ ಆರೋಪ ದಟ್ಟವಾಗೇ ಕೇಳಿಬಂತು. ತನ್ನ ನಂತರ ಬೇರಾರೂ ಕಾಂಗ್ರೆಸ್ ನಿಂದ ಪ್ರಧಾನಿ ಪಟ್ಟವನ್ನೇರಬಾರದು, ಕಾಂಗ್ರೆಸ್ ಕಥೆ ತನ್ನೊಂದಿಗೇ ಮುಗಿಯಬೇಕು ಎಂದುಕೊಂಡವರಂತೆ ವರ್ತಿಸಿದರು. ಹೀಗಾಗಿ ಅವರು ನಿಧನರಾದಾಗ ಎಐಸಿಸಿ ಕಛೇರಿಗೆ ಅವರ ಹೆಣ ತರುವುದಕ್ಕೂ ಅವಕಾಶ ಮಾಡಿಕೊಡಲಿಲ್ಲ. ಆ ನಂತರದ ಕಾಂಗ್ರೆಸ್ ನೆಲಕಚ್ಚುತ್ತಲೇ ಸಾಗಿತ್ತು. ಕಾಂಗ್ರೆಸ್ ವಿರೋಧಿ ಶಕ್ತಿಗಳು, ಬಿಜೆಪಿ ಬಲಿತುಕೊಂಡುಬಿಟ್ಟಿದ್ದವು. ಹಾಗೆ ನೆಲಕಚ್ಚಿದ್ದ ಕಾಂಗ್ರೆಸ್ 'ಕೈ' ಹಿಡಿದು ಮೇಲೆತ್ತುವ ಹೊಣೆ ಸೋನಿಯಾ ಹೆಗಲಿಗೇರಿತು.ಸೋನಿಯಾ

ಸೋನಿಯಾ ಕೂಡ ಇಂದಿರಾರಂತೆ ಖಾನದಾನಿ ಕೋಠ್ರಿ ಪಾಲಿಟಿಕ್ಸ್ ಮಾಡುತ್ತ ಪಕ್ಷದ ಮೇಲೊಂದು ಪಕಡ್ ಸಾಧಿಸಿಟ್ಟುಕೊಂಡರು. ಅವರಿಗೆ ಬೆಂಗಾವಲಾಗಿ ಅಹ್ಮದ್ ಪಟೇಲರಂಥ ಅದೆಷ್ಟೊ ಒಳ್ಳೆಯ ಮನಸುಗಳು ಅತ್ಯಂತ ಸೂಕ್ತ ಮಾರ್ಗದರ್ಶನಗಳನ್ನು, ಸಲಹೆಗಳನ್ನು ನೀಡುತ್ತಾ ಇಂದಿರಾರಂಥದೊಂದು ಇಮೇಜ್ ಅನ್ನು ಅವರಲ್ಲಿ ತುಂಬಲು ನೋಡಿದರು. ಅದು ಅಷ್ಟು ಪರಿಣಾಮಕಾರಿಯಾದಂಥ ಫಲಿತಾಂಶ ತರಲಿಲ್ಲವಾದರೂ, ಸೋನಿಯಾಗೊಂದು ಸೂಕ್ತ ತರಬೇತಿಯಂತೂ ಆಯ್ತು. ಈಗ ಕಾಂಗ್ರೆಸ್ಸಿನ ಅನಿವಾರ್ಯದ ನಾಯಕಿಯಾಗಿ ಅವರು ಹೊರಹೊಮ್ಮಿದ್ದಾರೆ ಎನ್ನುವುದು ಮಾತ್ರ ಎದ್ದು ಕಾಣುವ ಅಂಶ. ಸೋನಿಯಾ ಕೂಡ ವಿಧವೆ. ಆ ಮುಜುಗರವನ್ನು ಅತ್ತೆಯಂತೆ ಅವರೂ ತೊರೆದಿದ್ದು ಸಕ್ರಿಯ ರಾಜಕಾರಣಕ್ಕೆ ನೆರವಾಗಿದೆ. ಇಂದಿರಾ ಸೊಸೆ, ವಿದೇಶಿ ಅದರಲ್ಲೂ ಅತ್ಯಂತ ಕಡಿಮೆ ವಯಸ್ಸಿನಲ್ಲೇ ವಿಧವೆಯಾಗಿ (ಅದೂ ಗಂಡ ರಾಜೀವ್ ಗಾಂಧಿ ಭೀಕರ ಹತ್ಯೆಯ ಹಿನ್ನೆಲೆಯಲ್ಲಿ) ಯಾವ ಒಂದೇ ಒಂದು ಕಪ್ಪುಚುಕ್ಕೆಯನ್ನು ವೈಯಕ್ತಿಕ ಬದುಕಿಗೆ ಅಂಟಿಸಿಕೊಳ್ಳದೇ ತುಂಬ ಡಿಗ್ನಿಫೈಡ್ ಆಗಿ ಬದುಕನ್ನು ಮತ್ತೆ ಕಟ್ಟಿಕೊಂಡರು. ಪಾಲಿಟಿಕಲ್ ಬದುಕನ್ನು ಗಟ್ಟಿ ಮಾಡಿಕೊಂಡರು. ಜನತೆ ಸೋನಿಯಾ ವಿಧವೆ, ಕ್ಲೀನ್ ಮತ್ತು ಹೆಣ್ಣು ಎನ್ನುವ ಅಂಶಗಳನ್ನು ಭಾವುಕ ನೆಲೆಯಲ್ಲೂ ಕಂಡರೆಂದೆನಿಸುತ್ತದೆ. ಒಂದು ಸೂಕ್ಷ್ಮ ಮತ್ತು ಮಹತ್ವದ ಸಂದರ್ಭದಲ್ಲಿ ತಮಗೇ ಒಲಿದುಬಂದಿದ್ದ ಅಧಿಕಾರವನ್ನು ಎಡಗಾಲಿಂದ ಒದ್ದು ಮನಮೋಹನ ಸಿಂಗ್ ಎನ್ನುವ ಸೀದಾ, ಸಾದಾ ವ್ಯಕ್ತಿಯನ್ನಿಟ್ಟುಕೊಂಡು ಒಂದು ದೊಡ್ಡ ದೇಶವನ್ನು ಸಂಭಾಳಿಸಿದ್ದು ಎಲ್ಲರ ಗಮನ ಸೆಳೆಯಿತು. ಅತ್ತೆ ಇಂದಿರಾ ಸಿಖ್ ಸಮುದಾಯಕ್ಕೆ ಸಂಬಂಧಿಸಿದಂತೆ ರಾಜಕೀಯವಾಗಿ ಅಪಾಯಕಾರಿ ಹೆಜ್ಜೆಯನ್ನಿಟ್ಟು ಜೀವ ಕಳಕೊಂಡರು. ಅದಕ್ಕೆ ಪ್ರತಿಯಾಗಿ ಸಿಖ್ ಜನಾಂಗದ ಮಾರಣ ಹೋಮವೇ ನಡೆಯಿತು. ಅದೆಲ್ಲದರಿಂದ ಒಂದು ದಾರ್ಮಿಕ ಅಲ್ಪಸಂಖ್ಯಾತ ಸಮುದಾಯವೇ ಕಾಂಗ್ರೆಸ್ ನಿಂದ ದೂರ ಉಳಿಯತೊಡಗಿತ್ತು. ಅದೆಲ್ಲವನ್ನು ಮರೆತು ಸಿಖ್ ಜನಾಂಗಕ್ಕೆ ಸೇರಿದ ಮನಮೋಹನ ಸಿಂಗ್ ಅವರನ್ನು ಪ್ರಧಾನಿ ಪಟ್ಟಕ್ಕೇರಿಸುವ ಮೂಲಕ ಸೋನಿಯಾ ಹೊಸ ಆಶಯ ಬಿತ್ತ ಲುಕಾರಣರಾದರು. ಹಿಂದೂತ್ವದ ಹೂಂಕಾರ ಎತ್ತಿದ ದೊಡ್ಡ ಬಾಯಿಗಳನ್ನು ಮುಚ್ಚಿಸುವಂತೆ ಒಬ್ಬ ನಾನ್ ಹಿಂದೂ ಸಿಖ್ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ಪ್ರಧಾನಿ ಪಟ್ಟಕ್ಕೇರಿಸಿದರು. ಪ್ರಜಾಪ್ರಭುತ್ವದ ಚಮತ್ಕಾರವಾಗಿ, ಅಲ್ಪಸಂಖ್ಯಾತರ ಮನೋಬಲಕ್ಕೆ ಮತ್ತೆ ಜೀವ ತುಂಬುವ ಯತ್ನವಾಗಿ ಅದು ಕಂಡಿತು. ಜನಮಾನಸದಲ್ಲಿ ಸೋನಿಯಾ ಒಂದು ಬೇರೆಯದೇ ವ್ಯಕ್ತಿತ್ವವಾಗಿ ಕಾಣಿಸತೊಡಗಿದರು. ಮೂಲತಃ ಕ್ಯಾಥೊಲಿಕ್ ರೋಮನ್ ಕ್ರೈಸ್ತಳಾದ ಅವರಲ್ಲಿ  ಜೀಸಸ್ ನ ತ್ಯಾಗ, ಸಹನಾಗುಣ ಮತ್ತು ಕ್ಷಮಾಗುಣ ಮನೆಮಾಡಿದೆ ಎಂದೇ ನನ್ನ ಭಾವನೆ. ಇದು ಒಂದು ವಿಧದ ಸೊಫೆಸ್ಟಿಕೇಟೆಡ್ ಪ್ಯಾಟರ್ನ್.

ಜಯಾ-ಮಾಯಾ

ಎರಡನೇ ಪ್ಯಾಟರ್ನನಲ್ಲಿ ಅತ್ಯಂತ ರಾಜಕೀಯ ಮಹತ್ವದ ಮಹಿಳಾ ಜೋಡಿ ಎಂದರೆ ದಕ್ಷಿಣದ ಅಯ್ಯಂಗಾರಿ ಬ್ರಾಹ್ಮಣ ಕನ್ಯೆ(!) ಜಯಲಲಿತಾ ಮತ್ತು ಉತ್ತರಪ್ರದೇಶದ ದಲಿತ ಹೆಣ್ಣುಮಗಳು ಕುಮಾರಿ ಮಾಯಾವತಿ. ಇಬ್ಬರಿಗೂ ಒಂದು ಸಾಮ್ಯತೆ ಏನೆಂದರೆ ಇವರು ಕಮಾರಿಯರು. ಮತ್ತು ಗಾಡಫಾದರ್ ಗಳ ಕೃಪೆಗೆ ಪಾತ್ರರಾಗಿ ಪಾಲಿಟಿಕ್ಸ್ ಗೆ ಬಂದವರು. ಆ ಹಿನ್ನೆಲೆಯಲ್ಲೇ ಇಬ್ಬರ ವೈಯಕ್ತಿಕ ಬದುಕುಗಳ ಬಗ್ಗೆ ವರ್ಣರಂಜಿತ ಚರ್ಚೆಗಳೇ ಇವೆ. ಜಯಾ-ಎಂಜಿಆರ್ ಮತ್ತು ಮಾಯಾ-ಕಾನ್ಶಿರಾಂ ಸಂಬಂಧಗಳ ಬಗ್ಗೆ ಸಾಕಷ್ಟು ಪುಕಾರುಗಳಿದ್ದವು. ಇಬ್ಬರೂ ಈಗಲೂ ಮದುವೆಯಾಗದೇ ಉಳಿದ ಕನ್ಯೆಯರು ಬೇರೆ! ಜನತೆಗೆ ಸಾರ್ವಜನಿಕ ಬದುಕಿನ ಇಂಥ ಹೆಣ್ಣುಗಳ ಬಗ್ಗೆ ಏನೋ ಆಕರ್ಷಣೆ, ಕುತೂಹಲ, ಅನುಕಂಪ ಮತ್ತು ಅಚ್ಚರಿಗಳಿರುತ್ತವೆ. ಇವೇ ಒಂದು ರೀತಿಯ ಸೆಳೆತ ಮತ್ತು ಅಭಿಮಾನ ಮೂಡಿಸುತ್ತವೆ. ಇವನ್ನು ಎನಕ್ಯಾಶ್ ಮಾಡುವ ಶಕ್ತಿಗಳು ಇಬ್ಬರ ಸುತ್ತಲೂ ಸಾಕಷ್ಟಿವೆ. ಜನರ ಮೇಲೆ ಪ್ರಭಾವ ಬೀರಿ ಆ ಸೆಳೆತ, ಅಭಿಮಾನವನ್ನು ಮತಶಕ್ತಿಯಾಗಿ ಪರಿವರ್ತಿಸುವ ವರ್ಚಸ್ಸು ಮತ್ತು ಆಕರ್ಷಣೆಗಳನ್ನು ಈ ಕುಮಾರಿಯರು ಕಾಯ್ದುಕೊಂಡು ಬಂದಿದ್ದಾರೆ. ಇಬ್ಬರೂ ವ್ಯಕ್ತಿತ್ವದಲ್ಲಿ ತುಂಬ ಅಗ್ರೆಸ್ಸಿವ್. ಗ್ಲಾಮರಸ್ ಜಯಾ

ಜಯಾ ಸೊಗಸಾದ ಇಂಗ್ಲಿಷ್ ಮಾತುಗಾರ್ತಿ. ಸುಂದರಿ. ಒಂದು ಕಾಲದ ಮಾದಕ ನಟಿ. ತಮಿಳುನಾಡಿನ ಕಪ್ಪು ಮುಖಗಳು ಜಯಾರ ಇನ್ನೂ ಫಳ ಫಳ ಹೊಳೆಯುವ ಮುಖದಿಂದ ಹೊಮ್ಮುವ ಮಿಂಚಿಗೆ ಮನಸೋಲುತ್ತವೆ ಎಂದರೆ, ಅದು ಗತಕಾಲದ ಮಧುರ ನೆನಪಿನ ಮಹಿಮೆ. ತಮ್ಮ ಬಿಳಿಚರ್ಮದ ಎಂಜಿಆರ್ ಜತೆ ಜಯಾರನ್ನು ಆಪ್ತವಾಗಿ ಕಂಡ ತಮಿಳರು ಆ ಜೋಡಿಯ ಮೋಡಿಯನ್ನು ಇನ್ನೂ ಮರೆತಿಲ್ಲ. ಹೀಗಾಗಿ ಜನಮಾನಸದ ರಜತಪರದೆಯ ಮೇಲೆ ಈಗಲೂ ಜಯಾ-ಎಂಜಿಆರ್ ಡ್ಯೂಯೆಟ್ ಸಾಂಗ್ ಗಳು ಮೂಡುತ್ತ ಮೋಡಿ ಮಾಡುತ್ತಿರುತ್ತವೆ. ಎರಡೆಲೆ ಲೊಗೊದ ಜಯಾ ಟಿವಿ ಈ ಎಲಿಮೆಂಟ್ ಅನ್ನು ಸೊಗಸಾಗೇ ಬಳಸಿಕೊಳ್ಳುತ್ತಿದೆ. ಕರುಣಾನಿಧಿಗೆ ಪರ್ಯಾಯವಾಗಿ ಮತ್ತಾವುದೂ ತಮಿಳರಿಗೆ ತೋಚುತ್ತಲೇ ಇಲ್ಲ. ಹೀಗಾಗಿ ಜನ ಅನಿವಾರ್ಯವಾಗಿ ಅಮ್ಮನ ಮುಖದಲ್ಲಿ ಆ ಕಾಲದ ಮೋಡಿಯ ನಗೆಯನ್ನೇ ನೆನಪಿಸಿಕೊಂಡು  "ಜೈ" ಎಂದು ಆಕೆಗೆ ಶರಣಾಗುತ್ತಿದ್ದಾರೆ. ಕಳೆಗುಂದಿದ ರಜನೀಕಾಂತ್, ತಡವಾಗಿ ಪಾಲಿಟಿಕ್ಸ್ ನಲ್ಲಿ ಮಿಂಚತೊಡಗಿದ ವಿಜಯಕಾಂತ್... ಇದೆಲ್ಲ ಜಯಾಗೆ ಹಾದಿ ಸುಗಮಗೊಳಿಸಿರುವ ಕೆಲ ಅಂಶಗಳು. ಇದೇ ತಮಿಳು ರಾಜಕೀಯದ ಸ್ಪೆಶಾಲಿಟಿ.
ಈ ಅಯ್ಯಂಗಾರಿ ಕನ್ಯೆಗೆ ತಮಿಳರ ಪಲ್ಸ್, ವೀಕನೆಸ್ ಚೆನ್ನಾಗೇ ಗೊತ್ತು. ಜಯಾ ರಾಜ್ಯದಲ್ಲಿ ಅಂಥದ್ದೇನು ಘನಂದಾರಿ ರಾಜಕೀಯ ಬದಲಾವಣೆಗಳನ್ನಾಗಲಿ, ಅಭಿವೃದ್ಧಿಯನ್ನಾಗಲಿ ತಂದವರಲ್ಲ. ಎಂಜಿಆರ್ ಮನಗೆದ್ದಿದ್ದ ಲಕ್ಷಣವಾಗಿರುವ ಹೆಣ್ಣು, ಅದೂ ಒಂಟಿಹೆಣ್ಣು ಎನ್ನುವ ಅನುಕಂಪವೇ ಮತ್ತೆ ಮತ್ತೆ ಜನರನ್ನು ಸೆಳೆಯುತ್ತ ಬಂದಿದೆ. ಎಂಜಿಆರ್ ನೆನಪು, ಸಿನಿಮಾ ಪ್ರೀತಿ ಉಕ್ಕುಕ್ಕಿ ಬಂದಾಗ, ಯಾರದೋ ಮೇಲಿಟ್ಟ ರಾಜಕೀಯ ನಿರೀಕ್ಷೆಗಳು ಹುಸಿಯಾದಾಗ ಮೂಡಿದ ಪ್ರೇಮ, ಸಿಟ್ಟು, ಅಸಮಧಾನ ಮತ್ತು ಮುಖ್ಯವಾಗಿ ಪರ್ಯಾಯ ಕಲ್ಪಿಸಿಕೊಳ್ಳದ ದರಿದ್ರತನ ಇಲ್ಲಿ ಅಮ್ಮನ ಪಾಲಿಗೆ ಮತವಾಗುತ್ತಿದೆ. ತಮಿಳುನಾಡಿನ ಮತ್ತು ಕರ್ನಾಟಕದ ಅಯ್ಯಂಗಾರಿ/ಮೇಲ್ವರ್ಗದ ಮೀಡಿಯಾಂಗನೆಯರಂತೂ ಮಾಧ್ಯಮಗಳಲ್ಲಿ ಅಮ್ಮನ ಪುತ್ಥಳಿಯನ್ನು ನಿತ್ಯ ಸಿಂಗರಿಸುವ ಕೆಲಸ ಮಾಡುತ್ತಲೇ ಇರುತ್ತಾರೆ. ಜಯಾಗಿದು ತಮಿಳುನಾಡಷ್ಟೆ ಅಲ್ಲ, ಆಲ್ ಇಂಡಿಯಾದಲ್ಲಿ ಇಮೇಜ್ ಕಟ್ಟಿಕೊಳ್ಳಲು ನೆರವಾಗುತ್ತಿದೆ. ಇದರ ನಡುವೆಯೂ ಪೆರಿಯಾರ್ ಕ್ರಾಂತಿಯ ಈ ನೆಲದಲ್ಲಿ ಕರುಣಾನಿಧಿಗೂ ದೊಡ್ಡ ಜಾಗವಿದೆ ಎನ್ನುವುದು ಸಮಾಧಾನದ ವಿಷಯವಾಗಿತ್ತು. ಆದರೆ ಈ ಶೂದ್ರ ಪ್ರತಿಭೆಗೆ 2ಜಿ ಭೂತದ ಜತೆ ಸ್ವಜನ ಮೋಹವೇಕಾದರೂ ಶನಿಯಂತೆ ಕಾಡಿತೋ? ಈ ಚುನಾವಣೆಯಲ್ಲಂತೂ ಕುಮಾರಿಯಮ್ಮನಿಗೆ ಈ ಅಂಶವೇ ವರವಾಗಿ ಪರಿಣಮಿಸಿತು! ಅದು ಬಿಟ್ಟರೆ ಜಯಾ ಐಡಿಯಾಲಾಜಿಕಲ್ ಅಥವಾ ಅಡ್ಮಿನಿಸ್ಟ್ರೇಟಿವ್ ನೆಲೆಯಲ್ಲಿ ಒಂದು ಮಾಡಲ್ ಎನ್ನಬಹುದಾದ ಪಾಲಿಟಿಕಲ್ ಫಿಗರ್ ಅಲ್ಲವೇ ಅಲ್ಲ. ಒಂದು ರೀತಿಯ ಗ್ಲಾಮರ್ ಫಿಗರ್ ಅಷ್ಟೇ.

ಮಾಯಾ ಮೋಡಿಭಾರತಕ್ಕೊಮ್ಮೆಯಾದರೂ ಮಾಯಾವತಿಯಂಥ ಹೆಣ್ಣು ಪ್ರಧಾನಿ ಬೇಕೇ ಬೇಕು. ಡೇರ್ ಡೆವಿಲ್ ಮಾಯಾವತಿ ಉತ್ತರ ಪ್ರದೇಶದಂಥ ದೊಡ್ಡ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ನಿರ್ವಹಿಸುತ್ತಿರುವುದು ಭಾರತೀಯ ರಾಜಕೀಯ ರಂಗದಲ್ಲಿ ದಲಿತ ಹೆಣ್ಣುಮಗಳೊಬ್ಬಳು ಮೂಡಿಸಿದ ಬಹುದೊಡ್ಡ ಹೆಜ್ಜೆ. ಕಾನ್ಶೀರಾಂ ಅವರು ಬಹುಜನ ಸಮಾಜ ಪಕ್ಷವನ್ನು ರೂಪಿಸಿ ತಮಗೆ ತುಂಬ ಆಪ್ತಳಾದ ಮಾಯಾವತಿ ಹೆಗಲಿಗೆ ಪಕ್ಷದ ಜವಾಬ್ದಾರಿ ಕಟ್ಟಿ ಕಣ್ಣುಮುಚ್ಚಿದರು. ಮಾಯಾ ಮನದಲ್ಲಿ ಈಗಲೂ ಕಾನ್ಶಿರಾಂ ಒಂದು 'ಮಾಯೆ'. ಕಾನ್ಶೀರಾಂ ಕಂಡ ಕನಸು ಈಗ ಉತ್ತರಪ್ರದೇಶದಲ್ಲಿ ನನಸಾಗತೊಡಗಿದೆ. ದಲಿತರಿಗೊಂದು ಸ್ವಾಭಿಮಾನಿ ಬದುಕು ಕಟ್ಟಿಕೊಡುವ ದೊಡ್ಡ ಕನಸನ್ನು ಬಿತ್ತಿಹೋದ ಅಂಬೇಡ್ಕರ್, ಕಾನ್ಶೀರಾಂ ಆದರ್ಶಕ್ಕೆ ಹತ್ತಿರದಲ್ಲೇ ಮಾಯಾ ಯೋಚಿಸಲೆತ್ನಿಸುತ್ತಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆಕೆ ಇಡೀ ರಾಜ್ಯದ ತುಂಬ ಎಲ್ಲೆಲ್ಲಿ ಸಾಧ್ಯವೊ ಅಲ್ಲೆಲ್ಲ ಅಂಬೇಡ್ಕರ್, ಕಾನ್ಶಿರಾಂ ಜತೆ ತಮ್ಮ ಪ್ರತಿಮೆಗಳನ್ನು ಅನಾವರಣಗೊಳಿಸುತ್ತಿದ್ದಾರೆ. ಇದು ಸಾಕಷ್ಟು ಮೇಲ್ವರ್ಗದ ಜನರ ಕಣ್ಣು ಕೆಂಪಾಗಿಸಿದೆ. ಅಂಬೇಡ್ಕರ್ ನಂತರ ಸಮಕಾಲೀನ ಬದುಕಿನ ದಲಿತ ರಾಜಕೀಯಕ್ಕೆ ಸಂಬಂಧಿಸಿದಂತೆ ಕಾನ್ಶೀರಾಂ ಹೇಗೋ ಮಾಯಾವತಿ ಕೂಡ ಬಹುಮುಖ್ಯವಾದ ವ್ಯಕ್ತಿತ್ವ ಎನ್ನುವುದು ವಾಸ್ತವ ಸತ್ಯ. ದಮನಕ್ಕೊಳಗಾದ ಜನಾಂಗಕ್ಕೆ ಹೀಗೂ ಒಂದು ಐಡೆಂಟಿಟಿ ಕಟ್ಟಿಕೊಡುವಂಥ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಇದು ಆ ವರ್ಗದ ಜನರಲ್ಲಿ ಬಹುದೊಡ್ಡ ಆತ್ಮವಿಶ್ವಾಸ ತುಂಬಬಲ್ಲುದು ಎನ್ನುವುದು ಮಾಯಾ ಬಳಗದ ಆಶಯ.

ತೀವ್ರವಾದ ಮನು ವಿರೋಧಿ ನಿಲುವು ಹೊಂದಿರುವುದರ ನಡುವೆಯೂ ಮಾಯಾ ಬ್ರಾಹ್ಮಣರನ್ನು ಅತ್ಯಂತ ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ. ಸಾಕಷ್ಟು ಸಂಖ್ಯೆಯ ಮುಸ್ಲೀಮರನ್ನೂ ಜತೆಗಿಟ್ಟುಕೊಂಡಿದ್ದಾರೆ. ಆಕೆಯ ಈ ಹಿಂದಿನ ಬಿಜೆಪಿ ನಂಟು ಮಾತ್ರ ಭಾರತೀಯ ರಾಜಕಾರಣದ ಅತ್ಯಂತ ನೀತಿಗೆಟ್ಟ ಕೂಡಾವಳಿ. ಇದನ್ನು ಮರೆಮಾಚುವಂತೆ "ಸರ್ವಜನ ಸುಖಾಯ, ಸರ್ವಜನ ಹಿತಾಯ" ಎನ್ನುವ ಸ್ಲೋಗನ್ ಇಟ್ಟುಕೊಂಡ ಮಾಯಾ ಈ ಬಾರಿ ಪರಿಪಕ್ವ ರಾಜಕಾರಣದತ್ತ ಮುಖಮಾಡಿದಂತೆನಿಸಿದರು. ಮುಖ್ಯಮಂತ್ರಿಯೂ ಆದರು. ಅಷ್ಟು ದೊಡ್ಡ ರಾಜ್ಯವನ್ನು ಈಗ ಸಮರ್ಥವಾಗೇ ಪ್ರತಿನಿಧಿಸುತ್ತಿದ್ದಾರೆ. ಮಾಯಾ ಏನು ಮಾಡಿದರೂ ಮಾಧ್ಯಮಗಳು ಮಾತ್ರ ಟೀಕಿಸುವುದನ್ನು ನಿಲ್ಲಿಸುತ್ತಿಲ್ಲ. ಒಬ್ಬ ದಲಿತ ಮಹಿಳೆ ತುಂಬ ಮೇಲಕ್ಕೇರುವುದನ್ನು ಮಾಧ್ಯಮದಲ್ಲಿ ತುಂಬಿ ತುಳುಕುತ್ತಿರುವ ಮತ್ತು ಡಾಮಿನನ್ಸಿ ಕಾಯ್ದುಕೊಂಡಿರುವ ಬ್ರಾಹ್ಮಣ ಮತ್ತಿತರ ಮೇಲ್ಜಾತಿಯವರು ಸಹಿಸುತ್ತಿಲ್ಲ. ಆಕೆಯ ವಿರುದ್ಧದ ಏನೆಲ್ಲ ಅಂಶಗಳನ್ನು ಹಿಡಿದುಕೊಂಡು ವರ್ಚಸ್ಸನ್ನು ತಗ್ಗಿಸುವುದಕ್ಕೆ ಇವೆಲ್ಲ ಹಾತೊರೆಯುತ್ತಲೇ ಇರುತ್ತವೆ. ಮಾಯಾವತಿಯಂಥ ದಿಟ್ಟ ಹೆಣ್ಣು, ದಮನಕ್ಕೊಳಗಾದವರು ಮತ್ತು ನಿಜವಾದರ್ಥದ ಗ್ರಾಮೀಣ ಮಹಿಳೆಯರಿಗೊಂದು ಆಶಾಕಿರಣ, ಪ್ರೇರಣೆ.

ಬ್ರಾಹ್ಮಣ ಕನ್ಯೆ ಮಮತಾ ಪಶ್ಚಿಮ ಬಂಗಾಳದಲ್ಲಿ ರಾಧಿ ಎನ್ನುವ ಶ್ರೇಷ್ಠ ಬ್ರಾಹ್ಮಣ ಕುಲವೊಂದಿದೆ. ಬಂಡೋಪಾಧ್ಯಾಯ, ಮುಖ್ಯೋಪಾಧ್ಯಾಯ,  ಚಟರ್ಜಿ, ಭಟ್ಟಾಚಾರ್ಯ, ಗಂಗೂಲಿ ಇವೆಲ್ಲ ಆ ಕುಲದ ಟಾಪ್ ಬ್ರಾಹ್ಮಣ ಹೆಸರುಗಳು. ಬ್ಯಾನರ್ಜಿ ಕೂಡ ಇದೇ ಸಾಲಿಗೆ ಸೇರಿದ ಟಾಪ್ ಬ್ರಾಹ್ಮಣ ಹೆಸರು. ಮಮತಾ ಬ್ಯಾನರ್ಜಿ ಅಪ್ಪಟ ಟಾಪ್ ಬ್ರಾಹ್ಮಣ ಕನ್ಯೆ! ಸ್ಪಿನ್ಸ್ಟರ್ ಬೇರೆ. ಮಾಧ್ಯಮಗಳಲ್ಲಿ ರಾರಾಜಿಸಲು ಇಷ್ಟು ಕ್ವಾಲಿಫಿಕೇಷನ್ ಬೇಜಾನಾಯ್ತು. ಮಮತಾ ತನ್ನ ಕಾಲೇಜು ದಿನಗಳಲ್ಲೇ ತುಂಬ ಬೋಲ್ಡ್ ಮತ್ತು ಆಕ್ಟಿವ್ ಆಗಿದ್ದವರು. ಜಯಪ್ರಕಾಶ ನಾರಾಯಣ ಅವರಂಥ ಕ್ರಾಂತಿಪುರುಷರ ಕಾರಿನ ಬೋನೆಟ್ ಮೇಲೆ ನಿಂತು ಕುಣಿದಾಡಿದ ದಿಟ್ಟೆ ಇವಳು. ಕಾಂಗ್ರೆಸ್ ಮೂಲಕ ಹೆಚ್ಚು ರಾಜಕೀಯವಾಗಿ ಗುರುತಿಸಿಕೊಂಡು, ಶಾಸಕಿಯಾಗಿ, ಎಂಪಿಯಾಗಿ ಅಧಿಕಾರದ ಒಂದೊಂದು ಮೆಟ್ಟಿಲನ್ನು ಏರುತ್ತಲೇ ಸಾಗಿದ ಸೀಜನ್ಡ್ ಪಾಲಿಟಿಸಿಯನ್. ಎನ್ ಡಿ ಎ ಸಂಗವನ್ನೂ ಮಾಡಿ ಸಚಿವೆಯಾದವರು. ಯಾವಾಗ ತೃಣಮೂಲ ಕಾಂಗ್ರೆಸ್ ಕಟ್ಟಿ ಬೆಳೆಸುವ ಎದೆಗಾರಿಕೆ ತೋರಿದರೋ, ಬಂಗಾಳದ ಜನತೆಗೆ ಒಂದು ಲೇಡಿ ಲೀಡರ್ ನನ್ನು ಅವಳಲ್ಲಿ ಕಂಡಿತು. ಅದೇ ಟಾಪ್ ಬ್ರಾಹ್ಮಣರ ಕೈಯಲ್ಲಿರುವ ಎಡರಂಗ, ಉದ್ಯೋಗ ಸೃಷ್ಟಿಯ ಭರಾಟೆಯಲ್ಲಿ ಬಂಡವಾಳಷಾಹಿ ಜತೆ ಗುರುತಿಸಿಕೊಳ್ಳಲೆತ್ನಿಸುತ್ತಿದೆ ಎನ್ನುವ ಸಂಶಯ ಮೂಡಿಸಿಕೊಂಡಿತು. ಭೂಸುಧಾರಣೆಯಂಥ ದಿಟ್ಟ ಕ್ರಮಗಳಿಂದಾಗಿ ರೈತಾಪಿ ಜನತೆಯ ಮನದಲ್ಲಿ ಸದಾ ತೊನೆದಾಡುತ್ತಿತ್ತು ಎಡರಂಗದ ಕೆಂಬಾವುಟ ಈಗ್ಯಾಕೋ ಸ್ತಬ್ಧವಾದಂತೆನಿಸುತ್ತಿದೆ . ಇಲ್ಲಿ ಬಹುದೊಡ್ಡ ಸಂಖ್ಯೆಯಲ್ಲೇ ಇರುವ ಮುಸಲ್ಮಾನರು ಅದೇನೋ ಕಮ್ಯುನಿಸ್ಟರನ್ನು ಕಚ್ಚಿಕೊಂಡುಬಿಟ್ಟಿದ್ದರು. ಹೀಗಾಗಿ ಎಡರಂಗ ಸುಭದ್ರವಾಗಿತ್ತು.  ಕಾಲದ ಹೊಡೆತ. ಇಲ್ಲಿನ ಮುಸಲ್ಮಾನರು, ರೈತರು, ಕಾರ್ಮಿಕರು ಕೊಂಚ ಬದಲಾವಣೆ ಬೇಕೆಂದು ಎಡರಂಗದ ಮೇಲೆ ಮುನಿಸಿಕೊಂಡರೇನೋ? ಅದೆಷ್ಟೊ ಬಂಗಾಲಿಗಳು ಐಟಿ ಬಿಟಿ ಹುಚ್ಚಿಗೆ ಬಿದ್ದು ಬೆಂಗಳೂರಿನಂಥ ಶಹರಿಗೂ ವಕ್ಕರಿಸಿದರು. ದೇಶ, ವಿದೇಶದಲ್ಲಿ ನೆಲೆ ಕಂಡುಕೊಂಡರು. ಇದ್ದಲ್ಲಿಯೇ ಇದ್ದ ರೈತಾಪಿ, ಕಾರ್ಮಿಕ ಕುಟುಂಬಗಳಲ್ಲೂ ಹೊಸ ಬದುಕಿನ ಕನಸುಗಳು ಗರಿಗೆದರಿರಲಿಕ್ಕೂ ಸಾಕು.  ಎಡರಂಗ ಮತ್ತದೇ ಸಬ್ಸಿಡಿ, ಸಹಾಯ ಎನ್ನುತ್ತ ಇಷ್ಟು ಕಾಲ ಬಾಳಿತು. ರೈತ, ಕಾರ್ಮಿಕರ ಪ್ರಿಯಾರಿಟಿಗಳಲ್ಲೂ ಈಗ ಬದಲಾವಣೆ ಆಗಿದೆ ಎನ್ನುವ ಪರಿವೆಯೇ ಎಡರಂಗಕ್ಕಿರಲಿಲ್ಲವೇನೋ!..  ಈ ಕಾರಣಕ್ಕೆ ಒಂದು ಬದಲಾವಣೆಯನ್ನಂತೂ ಬಂಗಾಳಿಗಳು ಬಯಸಿದ್ದರು. ಇದು ಸಹಜ ಕೂಡ. ಪರ್ಯಾಯ ಶಕ್ತಿ ಆಂಥ ಬೇರಾವುದೂ ಬಂಗಾಲಿಗಳಿಗೆ ಕಾಣಿಸಲಿಲ್ಲ. ಈ ಸಂದರ್ಭಕ್ಕಾಗೇ ಕಾದು ನಿಂತಂತಿದ್ದ ಮತ್ತು ಕಮ್ಯುನಿಸ್ಟರಂತೆ ಏರು ದನಿಯಲ್ಲಿ ಆರ್ಭಟಿಸುವ ಹೆಣ್ಣೊಂದು ರೈತರ ಮೇಲೆ ಗೋಲಿಬಾರ್ ನಡೆಸಿದ್ದ ಎಡರಂಗದ ವಿರುದ್ಧ ಕೂಗು ಎಬ್ಬಿಸಿತ್ತು. ಅದು ಜನತೆಯ ಗಮನ ಸೆಳೆಯಿತು. ಕೇಂದ್ರದಲ್ಲಿ ರೈಲ್ವೆ ಸಚಿವೆಯಾಗಿ ರಾಜ್ಯಕ್ಕೆ ಹಿಗ್ಗಾಮುಗ್ಗಾ ರೈಲು ಸವಲತ್ತುಗಳನ್ನು ಬೇರೆ ಪೂರೈಸಿ ಜನಪ್ರಿಯಗೊಂಡ ಮಮತಾಗೆ ಕಾಂಗ್ರೆಸ್ ಕೂಡ ಮುಕ್ತ ಬೆಂಬಲ ನೀಡಿತು. ಯಾಕೆ? ಬಂಗಾಳದಲ್ಲಿ ಎಡರಂಗ ಮಣಿಸುವ ಏಕೋದ್ದೇಶ ಹೊಂದಿದಂತಿರುವ ಕಾಂಗ್ರೆಸ್ ಅನಿವಾರ್ಯವಾಗಿ ಮಮತಾರನ್ನು ಬೆಂಬಲಿಸಲೇಬೇಕಿತ್ತಲ್ಲವೇ?

ಈಗೀಗ ಎಡರಂಗದ ಕೆಲ ರಾಜಕೀಯ ಬದಲಾವಣೆಗಳು ಸ್ವಯಂಕೃತ ಅಪರಾಧದಂತೆ ಕಾಣಿಸತೊಡಗಿದ್ದವು. ಆದರೂ ಹೆಚ್ಚೂ ಕಮ್ಮಿ ನಾಲ್ಕು ದಶಕಗಳ ಕಾಲ ರಾಜ್ಯಭಾರ ಮಾಡಿದ್ದ ಎಡರಂಗ ಈ ಪರಿ ಹೀನಾಯವಾಗಿ ಸೋಲು ಕಂಡಿದ್ದು ಮಾತ್ರ ವಿಪರ್ಯಾಸ.

ಶೀಲಾ, ಉಮಾ, ವಸು, ಸುಷ್ಮಾ ಮತ್ತು ರಾಬ್ಡಿ

ದೆಹಲಿಯ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಹ್ಯಾಟ್ರಿಕ್ ವೀರವನಿತೆ, ವಿಧವೆ. ಉಮಾ ಭಾರತಿ, ವಸುಂಧರಾ ಕೂಡ ಮುಖ್ಯಮಂತ್ರಿ ಗದ್ದುಗೆಯ ಮೇಲೆ ಕೂತು ಅಧಿಕಾರದ ಬಿಸಿಯುಂಡ ಮಹಿಳೆಯರು. ಇವರಿಬ್ಬರೂ ಮದುವೆಯಾಗದ ಕನ್ಯಾಕುವರಿಯರು. ದೀಕ್ಷಿತ್ ದೆಹಲಿ ಗದ್ದುಗೆಗೇರಿದ್ದರಲ್ಲಿ ಅಂಥ ವಿಶೇಷವೇನಿಲ್ಲ. ಸುಷ್ಮಾ ಎನ್ನುವ ಮತ್ತೊಬ್ಬ ಬ್ರಾಹ್ಮಣ ಹೆಣ್ಣು ಸೋನಿಯಾಗೆ ಪರ್ಯಾಯ ಎಂದು ಬಿಂಬಿಸಹೊರಟಂತೆಲ್ಲ ಬಿಜೆಪಿ ಗ್ರಾಫ್ ಅರಬ್ಬಿ ಸಮುದ್ರ ನೋಡುತ್ತದೆ. ಯಾವ ಅಂಥ ಪಾಲಿಟಿಕಲ್ ಜ್ಞಾನ ಈಕೆಗಿದೆಯೋ? ಇವರನ್ನು ನೋಡಿದಾಗೆಲ್ಲ ನಮ್ಮ ಸಣ್ಣಪುಟ್ಟ ನಗರದ ಲೇಡಿ ಕಾರ್ಪೋರೇಟರ್ ಒಬ್ಬರನ್ನು ಕಂಡಂತಾಗುತ್ತದಷ್ಟೇ. ಉಮಾ ಭಾರತಿ ಕೊಂಚ ಸಾಹಸ ಮಾಡಿ, ಬಂಡಾಯಗಾರ್ತಿಯಾಗಿ ಬಿಜೆಪಿಯಲ್ಲಿ "ಬೆಂಕಿ ಮಹಿಳೆ" ಎಂದೆನಿಸಿಕೊಂಡವರು. ಮುಖ್ಯಮಂತ್ರಿ ಅಧಿಕಾರದ ರುಚಿ ಕಂಡವರು. ಗೋವಿಂದಾಚಾರ್ಯರಂಥ ಗಂಡಸರ ಜತೆಗಿನ ಸಲುಗೆಯ ರಸಸುದ್ದಿಯಲ್ಲೂ ಮಿಂಚಿದಾಕೆ.

ವಸುಂಧರಾ

ಸುಂದರಿ ವಸುಂಧರಾಗೆ ರಾಜಮನೆತನದ ಶ್ರೀರಕ್ಷೆ ಕೆಲಸ ಮಾಡಿತ್ತು. ಈ ಯಮ್ಮಾ, ಬಯೊಕಾನ್ ಕಿರಣ್ ಮಜುಮದಾರ್ ತುಟಿಗೆ ತುಟಿ ಬೆರೆಸಿ ಉಮ್ಮಾ ಎಂದು ಆಧುನಿಕ ಹೆಣ್ಣಿನ ಲೆಸ್ಬಿಯನಿಸಂ ನೆನಪಿಸುವಂತೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದೊಂದು ರೋಚಕ ನೆನಪು.ಈ ಮೇಲಿನ ಎಲ್ಲ ಹೆಣ್ಣುಗಳಲ್ಲಿ ವಿಶೇಷವಾಗಿ ಗಮನಿಸುವುದಾದರೆ ಇವರೆಲ್ಲ ಒಂದೋ ಮದುವೆಯಾಗದ ಏಕಾಂಗಿಗಳು, ಇಲ್ಲ ವಿಧವೆಯರು. ಇವರ ಗತ ಬದುಕಿಗೆ ವರ್ಣರಂಜಿತ ಕಥೆಗಳ ಪುಕ್ಕ ಬೇರೆ. ಒಂದು ರೀತಿಯ ಸಾಂಘಿಕ ಬದುಕಿನಿಂದ ಹೊರಗೇ ಇದ್ದವರು ವೈಯಕ್ತಿಕವಾಗಿ. ಇನ್ನು ಒಂದು ದೇಶ, ರಾಜ್ಯವೆಂದರೆ ಸಾಂಘಿಕ  ಬದುಕಿನ ನೆಲೆಯಲ್ಲೇ ಇರೋದಲ್ಲವೇ? ಒಟ್ಟಿನಲ್ಲಿ ಭಾರತದ ಮನಸ್ಥಿತಿಯಲ್ಲಿ ಮದುವೆಯಾಗಿ ಮತ್ತು ಆಗದೇ ಹೀಗೆ ಇಂಟರೆಸ್ಟಿಂಗ್ ಆಗಿರುವ ಒಂಟಿ ಹೆಣ್ಣು  ಎಂದು ಬದುಕುತ್ತಿರುವವರ ಬಗ್ಗೆ ವಿಶೇಷ ಅನುಕಂಪ, ಕಾಳಜಿ, ಆಕರ್ಷಣೆಯಾಗುಳಿದಿದದ್ದು ಮಾತ್ರ ವಿಶೇಷ ಎನಿಸುತ್ತದೆ. ಇವರೆಲ್ಲರ ಪೈಕಿ ನನಗೆ ಲಲ್ಲೂ ಪ್ರಸಾದ್ ಯಾದವ್ ಹೆಂಡತಿ ರಾಬ್ಡಿದೇವಿ ಬಿಹಾರ ಮುಖ್ಯಮಂತ್ರಿಯಾಗಿ ದರ್ಬಾರು ನಡೆಸಿದ್ದು ತುಂಬ ಮಜವಾಗಿ ಕಾಣಿಸುತ್ತದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

'ಅನಭಿಜ್ಞ ಶಾಕುಂತಲ': ನೆನಪು ಮರೆವಿನಾಟ

 ಜೀವನವೇ ಒಂದು ನಾಟಕವೆಂದಾದರೆ. ಸಂಬಂಧ ಅನ್ನೋದು ಕಟ್ಟಿಕೊಂಡ ಆಟ. ಅಂದರೆ ನಾಟಕದಂತೆ ಬದುಕು ಕೂಡ ಆಟ ಕಟ್ಟುವ ಕ್ರಿಯೆ. ಇಲ್ಲಿ ಗುರಿ ಎಂದರೆ ಸುಖದ ಅಥವಾ ಸಾರ್ಥಕತೆಯ ದಡ ಸೇರುವುದು. ಈ ಆಟದ ಒಂದು ಹಂತದಲ್ಲಿ ಕಷ್ಟದ ಅಡವಿ ಸೇರುವುದೂ ಇದೆ! 'ಆಡಾಡ್ತ ಅಡವಿ ಸೇರುವುದು' ಅಂತಾರಲ್ಲ ಹಾಗೆ. ಅಡವಿ ಅಂದರೆ ಇಲ್ಲಿ ಸಂಕೀರ್ಣತೆ, ಸಂಕಷ್ಟ ಅವಘಡ, ಸಂದಿಗ್ಧತೆ ಎಂದು ಭಾವಿಸಿಕೊಳ್ಳಬಹುದು. ಬದುಕಿನ ದಾರಿಯಲ್ಲಿ ಒಮ್ಮೆ ಈ 'ಅಡವಿ' ಎದುರಾಗೇ ಆಗುತ್ತದೆ ಎನ್ನುವುದು ವಿಧಿಲಿಖಿತವೇ? ಗೊತ್ತಿಲ್ಲ. ಪ್ರೀತಿ-ಪ್ರೇಮ-ಕಾಮ ಎನ್ನುವ ಬದುಕಿನ ಒಟ್ಟಾರೆ ಆಟ- ಕೂಟದಲ್ಲಿ ಪಡಕೊಳ್ಳುವುದೆಲ್ಲ ಜೀವಕಾರುಣ್ಯವಷ್ಟೇ ಅಲ್ಲ. ಸಂಕಷ್ಟ ಮತ್ತು ಸಂದಿಗ್ಧತೆಯೂ ಜತೆಯಲ್ಲಿರುತ್ತದೆ ಎನ್ನುವುದು ಸಹಜ ಮನೋಧರ್ಮ.  ಬದುಕಿನ ಆಟಕ್ಕೆ ತೆರಕೊಂಡವರಲ್ಲಿ ಹಲವರು ಅನುಭವಿಸಿದ ಮಧುರ ಘಳಿಗೆಗಳನ್ನು ಕಡೆತನಕ ನೆನಪಿಟ್ಟುಕೊಳ್ಳುತ್ತಾರೆ. ಕೆಲವರು ಮರೆತೇ ಬಿಡುತ್ತಾರೆ!?..  ಕಾಳಿದಾಸನ ಮಹಾಕಾವ್ಯ ಶಾಕುಂತಲೆಯಲ್ಲಿ ಈ ಬದುಕು, ಮನುಷ್ಯ ಪ್ರೀತಿ ಪಯಣದ ನೆನಪು ಮತ್ತು ಮರೆವಿನಾಟ ಮನಮಿಡಿಯುವಂತೆ ಚಿತ್ರಣಗೊಂಡಿದೆ. ಈ ಕಾವ್ಯದಲ್ಲಿ ಎಲ್ಲವನ್ನು ವಿಧಿಯೇ ನಿರ್ಧರಿಸಿದಂತೆನಿಸುತ್ತದೆ. ಫೇಟಲಿಸಂ ವಾದಕ್ಕೆ ಪೂರಕವಾದ ಚಿಂತನೆ ಇದೆನ್ನಬಹುದು. ಆಧುನಿಕ ಯುಗದ ಶೇಕ್ಸಪಿಯರ್ ನ ಹಲವು ನಾಟಕಗಳಲ್ಲಿಯೂ ಈ ಫೇಟಲಿಸಂ ಪ್ರಧಾನ ಪಾತ್ರದಂತೆ ವರ್ತಿಸುವುದನ್ನು ಗಮನಿಸಬಹುದು. *

ಇಷ್ಕ್‌ ಕೆ ಇಮ್ತೆಹಾನ್‌ ಔರ್‌ ಭೀ ಹೈ’.. ಇಮ್ರಾನ್‌ ಖಾನ್‌!

ಪಾಕಿಸ್ತಾನದ ಬಗ್ಗೆ ಮಾತನಾಡುವುದು ಮಹಾ ಪಾಪದ ಕೆಲಸವೇನಲ್ಲ. ಹಾಗೆ ಭಾವಿಸಬೇಕಿಲ್ಲ. ಅದು ಒಪ್ಪಿತವೊ ಇಲ್ಲವೋ, ಅದರ ಬಗ್ಗೆ ಅಲಕ್ಷ್ಯವೋ ನಿರ್ಲಕ್ಷ್ಯವೊ ಏನೇ ಆದರೂ ಅದು ಒಂದು ದೇಶ. ನೆರೆಯ ರಾಷ್ಟ್ರ. ‘ಪಡೋಸಿ...’ ಸಂಬಂಧದಲ್ಲಿ ನಮ್ಮದೇ ಕರುಳಬಳ್ಳಿ. ಭಾಷೆ, ಜನಜೀವನ ಶೈಲಿಯಲ್ಲಿ ಬದಲಾದರೂ ಮನುಷ್ಯ ಭಾವ, ಬದುಕುವ ಸಾಮಾನ್ಯ ಕಾಳಜಿ  ಒಂದೇ. ಹಾಗೆ ನೋಡಿದರೆ ಸಾಂಸ್ಕೃತಿಕವಾಗಿ ಎರಡೂ ದೇಶಗಳು ಅಭಿನ್ನ. ನಮ್ಮಲ್ಲಿರುವ ಹಾಗೆ ಅಲ್ಲಿಯೂ ಪ್ರಜಾಪ್ರಭುತ್ವ ಇದೆ. ಅಲ್ಲಿ ನಡೆಯುವುದು ಇಲ್ಲೂ ನಡೆಯುತ್ತದೆ. ಅಲ್ಲಿ ನಡೆಯಲೇಬಾರದ್ದು ಇಲ್ಲೂ ನಡೆಯಲೇಬಾರದು.  ತೀವ್ರವಾದ ನಮ್ಮಲ್ಲಿನದಕ್ಕಿಂತ ಅಲ್ಲಿ ತುಸು ಹೆಚ್ಚು ಸವಾರಿಗೆ ಹವಣಿಸಿದೆ. ಅಲ್ಲಿನ ಮಿಲಿಟರಿ ಅತಿರೇಕದ್ದು. ಅಕ್ಷಮ್ಯ. ಮತ್ತೆ ದೇಶ ಪುಟ್ಟದಾದಷ್ಟು ಅದಕ್ಕೆ ಭಯಗಳು ಜಾಸ್ತಿ. ಮಿಲಿಟರಿ ಕವಚದಲ್ಲಿ ಅದು ಸುರಕ್ಷಾ ಭಾವವನ್ನು ಕಲ್ಪಿಸಿಕೊಳ್ಳುತ್ತದೆ. ಅದೊಂದು ತರಹದ ಸಮಾಧಾನ. ಆದರೆ ಭ್ರಮೆಯಿಂದ ಕೂಡಿದ್ದು. ಭಯೋತ್ಪಾದನೆ ಕೂಡ ಒಂದರ್ಥದಲ್ಲಿ ಪುಕ್ಕಲುತನವೇ ಆಗುತ್ತದೆ. ಹಿಂಸಾ ಪ್ರವೃತ್ತಿಗೆ ಹೆದರಿಸುವುದೇ ಕೆಲಸ. ಹೆದರಿಸುವವರು ಶೂರರು, ಧೀರರು ಮತ್ತು ಜೀನಿಯಸ್‌ ಆಗಿರಲು ಹೇಗೆ ಸಾಧ್ಯ? ಮುಖ್ಯವಾಗಿ ಅಲ್ಲಿನ ವಿದ್ಯಮಾನಗಳನ್ನು ಗಮನಿಸುವುದಾದರೆ, ಮಿಲಿಟರಿ, ಮತಾಂಧರು, ಭಯೋತ್ಪಾದಕರು, ಭ್ರಷ್ಟರು ಇದೆಲ್ಲದರಿಂದ ಪಾಕಿ ತುಂಬ ರೋಸಿ ಹೋಗಿದ್ದಾನೆ. ಒಂದು ಸೂಕ್ತ ಪರ್ಯಾಯಕ್ಕಾಗಿ ಹಂಬಲಿಸಿದ್ದಾನೆ. ಸಹಜ

ಮನುಷ್ಯ ಜಾತಿ ತಾನೊಂದೇ ವಲಂ...

ಭಾರತದಲ್ಲಿ ಜಾತಿ ವ್ಯವಸ್ಥೆ ಹೇಗೆ ಹುಟ್ಟಿತು ಎಂಬುದಕ್ಕೆ ಯಾವುದೇ ನಿರ್ಧಿಷ್ಟ ಥಿಯರಿ ಇಲ್ಲ. ಆದರೆ, ಇಲ್ಲಿನ ವರ್ಗ ಸೃಷ್ಟಿ ಮಾತ್ರ ಇರಾನ್ ವ್ಯವಸ್ಥೆಯಂತೇ ಇದೆ.  ಪುರಾತನ ಇರಾನಿನ ಚರಿತ್ರೆಯಲ್ಲಿ ಇಂಥದೊಂದು ವ್ಯವಸ್ಥೆ ಇತ್ತು. ಅದಕ್ಕೆ ಪಿಸ್ತ್ರಾಸ್ ಎನ್ನುತ್ತಾರೆ. ನಮ್ಮಲ್ಲಿ ಅದು ಚಾತುರ್ವರ್ಣವಾಗಿದೆ. ಅಲ್ಲಿ ಅಥ್ರವಾನ್ಸ್ (ಪ್ರೀಸ್ಟ್ ಕ್ಲಾಸ್), ರಥೈಸ್ತಾ (ವಾರಿಯರ್ಸ್), ವಸ್ತ್ರಿಯಾ (ಮರ್ಕಂಟೈಲ್ ಕ್ಲಾಸ್) ಮತ್ತು ಹ್ಯುತಿ (ಆರ್ಟಿಸನ್) ಎನ್ನುವ ವರ್ಗ ವ್ಯವಸ್ಥೆ ಇದೆ. ನಮ್ಮಲ್ಲಿ ಇದನ್ನು ಕಲ್ಪಿಸಿಕೊಂಡರೆ ಪುರೋಹಿತ ಅಥವಾ ಬ್ರಾಹ್ಮಣ (ಅಥ್ರವಾನ್ಸ್), ಕ್ಷತ್ರಿಯ  (ರಥೈಸ್ತಾ), ವೈಶ್ಯ  (ವಸ್ತ್ರಿಯಾ) ಮತ್ತು ಶೂದ್ರ (ಹ್ಯುತಿ) ಎಂದು ಅರ್ಥೈಸಿಕೊಳ್ಳಬಹುದು.  ಆದಿ ಕಾಲದ ಇರಾನಿಯನ್ ವ್ಯವಸ್ಥೆ ಹೀಗೇ ಇತ್ತು. ಅದೇ ನಾಲ್ಕು ವರ್ಗಗಳು ಭಾರತದಲ್ಲೂ ಈಗಲೂ ಚಾಲ್ತಿಯಲ್ಲಿವೆ. ಹೀಗೆ ಒಂದು ಇರಾನ್ ಸಂಬಂಧ ಭಾರತಕ್ಕಿದೆ. ಚರ್ಮದ ಬಣ್ಣ, ನಯ ನಾಜೂಕು, ಕಣ್ಣು, ಬುದ್ಧಿವಂತಿಕೆಯನ್ನು ಹೋಲಿಸಿದರೆ ಭಾರತದ ಅದರಲ್ಲೂ ಉತ್ತರ ಭಾರತದ ಕಾಶ್ಮೀರಿ ಪಂಡಿತರು, ಉತ್ತರ ಪ್ರದೇಶದ ಪಂಡಿತ್, ಚಿತ್ಪಾವನ ಬ್ರಾಹ್ಮಣರು, ನಮ್ಮ ಕರಾವಳಿ ಮತ್ತು ಉತ್ತರ ಕನ್ನಡದ ಹವ್ಯಕರು ಹೆಚ್ಚೂ ಕಮ್ಮಿ ಇರಾನಿಗಳನ್ನು ಹೋಲುತ್ತಾರೆ (ಮೇಲ್ನೋಟಕ್ಕೆ).  ಬಹುಶಃ ಹೀಗೂ ಆಗಿರಬಹುದು, ಆಗ ಇರಾನ್ ನಲ್ಲಿ ಕ್ರೈಸ್ತ ಮತ್ತು ಇಸ್ಲಾಂ ಮುಂಚೆಯೂ ಹಲವಾರು ಸುಧಾರಣಾವಾದಿಗಳ ಅಥವಾ ಬಂಡುಕೋರರ