ವಿಷಯಕ್ಕೆ ಹೋಗಿ

ನಾರ್ವೆ ರಾಜಧಾನಿ ಒಸ್ಲೊ ನೆಲಕ್ಕಿಳಿದಾಗ...

ನಾರ್ವೆ ರಾಜಧಾನಿ ಒಸ್ಲೊಗೆ ಪ್ಯಾರಿಸ್ ನಿಂದ ಪಯಣ ಶುರುವಾಯ್ತು. ಈ ಸಲ ನನ್ನವ್ವನಿಗೆ ಕಿಟಕಿ ಇರುವ ಸೀಟು ಸಿಕ್ಕಿತು. ಫ್ಲೈಟ್ ಟೇಕಾಫ್ ಆಗುವ ಮಜಾ ಅವಳಿಗೆ ಮೊದಲ ಸಲ ಸಿಕ್ಕಿರಲಿಲ್ಲ. ಈ ಸಲ ಅವಳು ಥ್ರಿಲ್ ಆದಳು. ಭೂಮಿಯಿಂದ ಮೇಲಕ್ಕೆ ಹಾರುವ ಹಕ್ಕಿಯಂಥ ಅನುಭವ ಆಕೆಗೆ ಆಗಿರಲೇಬೇಕು. ಅಮ್ಮಾ! ಜಮೀನ್, ರಸ್ತಾ, ಘರ್ ಕಿತನೆ ಛೋಟೆ ಲಗ ರಹೇ ಹೈ, ವೋ ದೇಖೋ ಆಸ್ಮಾನ್, ಬಾದಲ್, ಸೂರಜ್... ಗಾಂವ್ ಮೇ ಉಡತಾ ಹುವಾ ಹವಾಯಿಜಹಾಜ್ ಸಿರ್ಫ್ ದೇಖತೆ ಥೇ, ಆಜ್ ಅಸಲಿ ಎಹಸಾಸ್ ಹುವಾ, ಹಮಾರಿ ಬೇಟಿ ಸಪನಾ ಸಚ್ ಕರ್ ದೀ... 
ನನ್ನವ್ವನ ಮಾತುಗಳಿವು. ಭೂಮಿ, ಆಕಾಶ, ರಸ್ತೆ, ಮನೆ... ಎಲ್ಲ ಎಷ್ಟು ಸಣ್ಣ ಜಗತ್ತು! ಎಲ್ಲ ಅದೆಷ್ಟು ಹತ್ತಿರ! ನಮ್ಮೂರ ಆಕಾಶದಲ್ಲಿ ಹಾರುತ್ತಿದ್ದ ವಿಮಾನವನ್ನು ದೂರದಿಂದಲೇ ನೋಡಿ ದಂಗಾಗುತ್ತಿದ್ದೆವು... ಅದರಲ್ಲಿ ಹತ್ತುವ ಕನಸು ಮೂಡುತ್ತಿತ್ತು...  ಆ ಕನಸನ್ನು ಮಗಳು ಈಗ ನನಸು ಮಾಡಿಬಿಟ್ಟಳು...
ಅವಳ ಕೈಗೆ ಕ್ಯಾಮೆರಾ ಕೊಟ್ಟೆ. ಸಂಕೋಚದಿಂದಲೇ ಕ್ಲಿಕ್ ಮಾಡಲೆತ್ನಿಸಿದಳು. ಅವಳು ತಡಕಾಡುತ್ತಿರುವುದನ್ನೆಲ್ಲ ಅವಳ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಯುರೋಪ್ ಹುಡುಗಿ ಗಮನಿಸಿ ನಗುತ್ತಿದ್ದಳು. ನನ್ನತ್ತ ನೋಡಿ ದೊಡ್ಡದಾಗಿ ನಕ್ಕಳು. ಮೈ ಮಾಮ್ ಎಂದೆ, ಯಾ ಐ ಕ್ಯಾನ್ ಅಂಡರಸ್ಟ್ಯಾಂಡ್ ಎಂದು ನಕ್ಕಳು. ನನ್ನವ್ವನನ್ನೇ ನೋಡುತ್ತಿದ್ದಳು, ಕಡೆಗೂ ಆಕೆ ಒಂದಷ್ಟು ಕ್ಲಿಕ್ಕಿಸಿದಳು... ಯಾ ಸೀ ಗಾಟ್ ದಿ ಪಿಕ್ಸ್ ಅಂದಳಾಕೆ... ಅವಳಿಗೆ ಕ್ಯಾಮೆರಾದ ಮಾನಿಟಾರ್ ನಲ್ಲಿ ಪ್ರಿವೀವ್ ತೋರಿಸಿದೆ. ಯಾ ವ್ಹೇರಿ ವ್ಹೇರಿ ನೈಸ್ ಅಂದಳು. ಒಸ್ಲೊ ಬರುವತನಕ ಆಕೆ ನಮ್ಮನ್ನೇ ಗಮನಿಸುತ್ತಿದ್ದಳು. ನಾನು ಪೇಪರ್ ವಿನ್ಯಾಸದಲ್ಲಿ ಮುಳುಗಿದ್ದೆ. ಇಳಿಯುವ ಮುನ್ನ ಆಕೆ, ಯಾ ನೈಸ್ ಮೀಟಿಂಗ್ ಯು, ಹ್ಯಾವ್ ಅ ನೈಸ್ ಟ್ರಿಪ್, ಸಿ ಯು ಬಾಯ್ ಎಂದು ಕೈಕುಲುಕಿದಳು. ಲಗೇಜ್ ತೆಗೆದುಕೊಳ್ಳುವ ಭರಾಟೆಯಲ್ಲಿ ಅವಳನ್ನು ಮತ್ತೆ ಕಾಣುವಷ್ಟೊತ್ತಿಗೆ ಆಕೆ ಮುಂದೆ ಸಾಗಿದ್ದಳು, ಆದರೂ ಒಮ್ಮೆ ಹಿಂತಿರುಗಿ ಕೈ ಮಾಡಿ, ಸ್ಮೈಲ್ ಕೊಡುವುದ ಮರೆಯಲಿಲ್ಲ. ಲಗೇಜ್ ತೆಗೆದುಕೊಳ್ಳುವ ಸಂದರ್ಭ ಮತ್ತೆ ಆಕೆಯೇ ನೋಡಿ ಮಾತನಾಡಿಸಿದಳು. ಏನು ಇಲ್ಲಿ ಬಂದಿದ್ದು ಅಂದಳು, ನಾನವಳಿಗೆ ವಿವರಿಸಿದೆ. ಆಕೆ ಇಲ್ಲೇ ಒಸ್ಲೊದಲ್ಲಿ ಅಧ್ಯಯನಕ್ಕಾಗಿ ದೂರದ ಚೀನಾದಿಂದ ಬಂದವಳು ಎನ್ನುವುದು ಗೊತ್ತಾಯಿತು. ನಿಮ್ಮನ್ನು ಯುರೋ ಹುಡುಗಿ ಅಂದುಕೊಂಡಿದ್ದೆ ಅಂದೆ. ಯಾ ಐ ಆ್ಯಮ್ ಫ್ರಾಮ್ ಯುರೋಪ್ ಒನ್ಲಿ, ಬಟ್ ಮೈ ಪೇರೆಂಟ್ಸ್ ಮೈಗ್ರೆಟೆಡ್ ಟು ಚೈನಾ... ಎಂದಳು. ಆಕೆಗೊಂದು ವಿಸಿಟಿಂಗ್ ಕಾರ್ಡ್ ಕೊಡೋಣ ಎಂದರೆ ಜೇಬಲ್ಲಿ ವಿಸಿಟಿಂಗ್ ಕಾರ್ಡ್ ಸಿಕ್ಕಲೇ ಇಲ್ಲ. ವಿಲ್ ಮೀಟ್ ಇನ್ ಒಸ್ಲೊ ಇಫ್ ಪಾಸಿಬಲ್ ಎಂದೆ. ಶೂರ್ ಎಂದಳಾಕೆ.  ನನ್ನವ್ವ ಕ್ಲಿಕ್ಕಿಸಿದ ಮೊದಲ ಚಿತ್ರಗಳಿವು...
ಒಸ್ಲೊ ಏರ್ ಪೋರ್ಟ್ ತಲುಪಿದಾಗ!... ತುಂಬ ನೀಟಾದ ವಿಮಾನ ನಿಲ್ದಾಣವಿದು. ಅಚ್ಚುಕಟ್ಟಾದ ವ್ಯವಸ್ಥೆ. ಪ್ಯಾರಿಸ್ ನಷ್ಟು ದೊಡ್ಡ ಏರ್ ಪೋರ್ಟ್ ಅಲ್ಲವಾದರೂ, ಸುಸಜ್ಜತೆ ಮತ್ತು ನೀಟನೆಸ್ ದೃಷ್ಟಿಯಲ್ಲಿ ಅದಕ್ಕೂ ಕಮ್ಮಿ ಏನಲ್ಲ.  ಇಲ್ಲಿಂದಲೂ ಯುರೋಪ್ ಮತ್ತಿತರ ಕಡೆಗೆ ಸಾಕಷ್ಟು ವಿಮಾನಗಳು ಹಾರಾಡುತ್ತವೆ. ನಿಲ್ದಾಣದಲ್ಲಿ ಎಲ್ಲಿ ನೋಡಿದಲ್ಲಿ ಸ್ವಚ್ಛತೆ, ಸಭ್ಯತೆ, ಇನಫ್ರಾಸ್ಟ್ರಕ್ಚರ್ ಮನ ಸೆಳೆಯುತ್ತಿತ್ತು.
ಅಂತೂ ನಾವು ಸೇರಬೇಕಿದ್ದ ಜಾಗ ಸೇರಿಕೊಂಡೆವು. ಒಸ್ಲೊ ಏರ್ ಪೋರ್ಟ್ ನಲ್ಲಿ ನಮ್ಮನ್ನು ಸ್ವಾಗತಿಸಲು ಭಾವ ಖಾನ್ ಕಾದು ಕುಳಿತಿದ್ದರು. ಅವರ ಕೈಯಲ್ಲೊಂದು ಸುಂದರ ಹೂಗುಚ್ಛವಿತ್ತು. ಮುಖದಲ್ಲಿ ಸಮಾಧಾನದ ನಗುವಿತ್ತು. ನಾವು ಸುರಕ್ಷಿತವಾಗಿ ಬಂದು ತಲುಪಿದ್ದು ಅವರಿಗೂ ಖುಷಿ ತಂದಿತ್ತು. ಅಂತೂ ಎರಡು ಹಿರಿಯ ಜೀವಗಳನ್ನು ಸುರಕ್ಷಿತವಾಗಿ ಒಸ್ಲೊ ತಲುಪಿಸಿದ ಸಮಾಧಾನ ನನಗೂ. ನನ್ನ ಮೊದಲ ವಿದೇಶ ಪಯಣದ ಒಂದು ಹಂತದ ಕೆಲಸ ಅತ್ಯಂತ ಯಶಸ್ವಿಯಾಗಿತ್ತು.
ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗುವುದೊಂದೇ ಪಯಣ ಅನಿಸುವುದೇ?... ಒಂದು ವಾತಾವರಣದಿಂದ ಮತ್ತೊಂದು ವಾತಾವರಣಕ್ಕೆ, ಒಂದು ಸಂಸ್ಕೃತಿಯಿಂದ ಮತ್ತೊಂದು ಸಂಸ್ಕೃತಿಗೆ, ಒಂದು ಭಾವ ತೀರದಿಂದ ಮತ್ತೊಂದು ಭಾವ ತೀರಕ್ಕೆ ಬಂದು ನಿಲ್ಲುವ ಮತ್ತು ಒಂದಷ್ಟು ಬೆರೆಯುವ, ಕೊಡಕೊಳ್ಳುವ ಹಾಗೂ ಆಮೂಲಕ ಒಂದಷ್ಟು ಅನುಭವದ ಹರವು ಹಬ್ಬಿಸಿಕೊಳ್ಳುವ ಪರಿಯೇ ಒಂದು ಪುಟ್ಟ ಪಯಣವಾದೀತು! ಅಥವಾ ಒಟ್ಟು ಬದುಕೆಂಬ ಪಯಣದಲ್ಲಿ ಇದೊಂದು ಪುಟ್ಟ ನೆನಪಾಗುಳಿದೀತು ಅಷ್ಟೇ... ಅಲ್ಲವೇ?

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

'ಅನಭಿಜ್ಞ ಶಾಕುಂತಲ': ನೆನಪು ಮರೆವಿನಾಟ

 ಜೀವನವೇ ಒಂದು ನಾಟಕವೆಂದಾದರೆ. ಸಂಬಂಧ ಅನ್ನೋದು ಕಟ್ಟಿಕೊಂಡ ಆಟ. ಅಂದರೆ ನಾಟಕದಂತೆ ಬದುಕು ಕೂಡ ಆಟ ಕಟ್ಟುವ ಕ್ರಿಯೆ. ಇಲ್ಲಿ ಗುರಿ ಎಂದರೆ ಸುಖದ ಅಥವಾ ಸಾರ್ಥಕತೆಯ ದಡ ಸೇರುವುದು. ಈ ಆಟದ ಒಂದು ಹಂತದಲ್ಲಿ ಕಷ್ಟದ ಅಡವಿ ಸೇರುವುದೂ ಇದೆ! 'ಆಡಾಡ್ತ ಅಡವಿ ಸೇರುವುದು' ಅಂತಾರಲ್ಲ ಹಾಗೆ. ಅಡವಿ ಅಂದರೆ ಇಲ್ಲಿ ಸಂಕೀರ್ಣತೆ, ಸಂಕಷ್ಟ ಅವಘಡ, ಸಂದಿಗ್ಧತೆ ಎಂದು ಭಾವಿಸಿಕೊಳ್ಳಬಹುದು. ಬದುಕಿನ ದಾರಿಯಲ್ಲಿ ಒಮ್ಮೆ ಈ 'ಅಡವಿ' ಎದುರಾಗೇ ಆಗುತ್ತದೆ ಎನ್ನುವುದು ವಿಧಿಲಿಖಿತವೇ? ಗೊತ್ತಿಲ್ಲ. ಪ್ರೀತಿ-ಪ್ರೇಮ-ಕಾಮ ಎನ್ನುವ ಬದುಕಿನ ಒಟ್ಟಾರೆ ಆಟ- ಕೂಟದಲ್ಲಿ ಪಡಕೊಳ್ಳುವುದೆಲ್ಲ ಜೀವಕಾರುಣ್ಯವಷ್ಟೇ ಅಲ್ಲ. ಸಂಕಷ್ಟ ಮತ್ತು ಸಂದಿಗ್ಧತೆಯೂ ಜತೆಯಲ್ಲಿರುತ್ತದೆ ಎನ್ನುವುದು ಸಹಜ ಮನೋಧರ್ಮ.  ಬದುಕಿನ ಆಟಕ್ಕೆ ತೆರಕೊಂಡವರಲ್ಲಿ ಹಲವರು ಅನುಭವಿಸಿದ ಮಧುರ ಘಳಿಗೆಗಳನ್ನು ಕಡೆತನಕ ನೆನಪಿಟ್ಟುಕೊಳ್ಳುತ್ತಾರೆ. ಕೆಲವರು ಮರೆತೇ ಬಿಡುತ್ತಾರೆ!?..  ಕಾಳಿದಾಸನ ಮಹಾಕಾವ್ಯ ಶಾಕುಂತಲೆಯಲ್ಲಿ ಈ ಬದುಕು, ಮನುಷ್ಯ ಪ್ರೀತಿ ಪಯಣದ ನೆನಪು ಮತ್ತು ಮರೆವಿನಾಟ ಮನಮಿಡಿಯುವಂತೆ ಚಿತ್ರಣಗೊಂಡಿದೆ. ಈ ಕಾವ್ಯದಲ್ಲಿ ಎಲ್ಲವನ್ನು ವಿಧಿಯೇ ನಿರ್ಧರಿಸಿದಂತೆನಿಸುತ್ತದೆ. ಫೇಟಲಿಸಂ ವಾದಕ್ಕೆ ಪೂರಕವಾದ ಚಿಂತನೆ ಇದೆನ್ನಬಹುದು. ಆಧುನಿಕ ಯುಗದ ಶೇಕ್ಸಪಿಯರ್ ನ ಹಲವು ನಾಟಕಗಳಲ್ಲಿಯೂ ಈ ಫೇಟಲಿಸಂ ಪ್ರಧಾನ ಪಾತ್ರದಂತೆ ವರ್ತಿಸುವುದನ್ನು ಗಮನಿಸಬಹುದು. *

ಇಷ್ಕ್‌ ಕೆ ಇಮ್ತೆಹಾನ್‌ ಔರ್‌ ಭೀ ಹೈ’.. ಇಮ್ರಾನ್‌ ಖಾನ್‌!

ಪಾಕಿಸ್ತಾನದ ಬಗ್ಗೆ ಮಾತನಾಡುವುದು ಮಹಾ ಪಾಪದ ಕೆಲಸವೇನಲ್ಲ. ಹಾಗೆ ಭಾವಿಸಬೇಕಿಲ್ಲ. ಅದು ಒಪ್ಪಿತವೊ ಇಲ್ಲವೋ, ಅದರ ಬಗ್ಗೆ ಅಲಕ್ಷ್ಯವೋ ನಿರ್ಲಕ್ಷ್ಯವೊ ಏನೇ ಆದರೂ ಅದು ಒಂದು ದೇಶ. ನೆರೆಯ ರಾಷ್ಟ್ರ. ‘ಪಡೋಸಿ...’ ಸಂಬಂಧದಲ್ಲಿ ನಮ್ಮದೇ ಕರುಳಬಳ್ಳಿ. ಭಾಷೆ, ಜನಜೀವನ ಶೈಲಿಯಲ್ಲಿ ಬದಲಾದರೂ ಮನುಷ್ಯ ಭಾವ, ಬದುಕುವ ಸಾಮಾನ್ಯ ಕಾಳಜಿ  ಒಂದೇ. ಹಾಗೆ ನೋಡಿದರೆ ಸಾಂಸ್ಕೃತಿಕವಾಗಿ ಎರಡೂ ದೇಶಗಳು ಅಭಿನ್ನ. ನಮ್ಮಲ್ಲಿರುವ ಹಾಗೆ ಅಲ್ಲಿಯೂ ಪ್ರಜಾಪ್ರಭುತ್ವ ಇದೆ. ಅಲ್ಲಿ ನಡೆಯುವುದು ಇಲ್ಲೂ ನಡೆಯುತ್ತದೆ. ಅಲ್ಲಿ ನಡೆಯಲೇಬಾರದ್ದು ಇಲ್ಲೂ ನಡೆಯಲೇಬಾರದು.  ತೀವ್ರವಾದ ನಮ್ಮಲ್ಲಿನದಕ್ಕಿಂತ ಅಲ್ಲಿ ತುಸು ಹೆಚ್ಚು ಸವಾರಿಗೆ ಹವಣಿಸಿದೆ. ಅಲ್ಲಿನ ಮಿಲಿಟರಿ ಅತಿರೇಕದ್ದು. ಅಕ್ಷಮ್ಯ. ಮತ್ತೆ ದೇಶ ಪುಟ್ಟದಾದಷ್ಟು ಅದಕ್ಕೆ ಭಯಗಳು ಜಾಸ್ತಿ. ಮಿಲಿಟರಿ ಕವಚದಲ್ಲಿ ಅದು ಸುರಕ್ಷಾ ಭಾವವನ್ನು ಕಲ್ಪಿಸಿಕೊಳ್ಳುತ್ತದೆ. ಅದೊಂದು ತರಹದ ಸಮಾಧಾನ. ಆದರೆ ಭ್ರಮೆಯಿಂದ ಕೂಡಿದ್ದು. ಭಯೋತ್ಪಾದನೆ ಕೂಡ ಒಂದರ್ಥದಲ್ಲಿ ಪುಕ್ಕಲುತನವೇ ಆಗುತ್ತದೆ. ಹಿಂಸಾ ಪ್ರವೃತ್ತಿಗೆ ಹೆದರಿಸುವುದೇ ಕೆಲಸ. ಹೆದರಿಸುವವರು ಶೂರರು, ಧೀರರು ಮತ್ತು ಜೀನಿಯಸ್‌ ಆಗಿರಲು ಹೇಗೆ ಸಾಧ್ಯ? ಮುಖ್ಯವಾಗಿ ಅಲ್ಲಿನ ವಿದ್ಯಮಾನಗಳನ್ನು ಗಮನಿಸುವುದಾದರೆ, ಮಿಲಿಟರಿ, ಮತಾಂಧರು, ಭಯೋತ್ಪಾದಕರು, ಭ್ರಷ್ಟರು ಇದೆಲ್ಲದರಿಂದ ಪಾಕಿ ತುಂಬ ರೋಸಿ ಹೋಗಿದ್ದಾನೆ. ಒಂದು ಸೂಕ್ತ ಪರ್ಯಾಯಕ್ಕಾಗಿ ಹಂಬಲಿಸಿದ್ದಾನೆ. ಸಹಜ

ಮನುಷ್ಯ ಜಾತಿ ತಾನೊಂದೇ ವಲಂ...

ಭಾರತದಲ್ಲಿ ಜಾತಿ ವ್ಯವಸ್ಥೆ ಹೇಗೆ ಹುಟ್ಟಿತು ಎಂಬುದಕ್ಕೆ ಯಾವುದೇ ನಿರ್ಧಿಷ್ಟ ಥಿಯರಿ ಇಲ್ಲ. ಆದರೆ, ಇಲ್ಲಿನ ವರ್ಗ ಸೃಷ್ಟಿ ಮಾತ್ರ ಇರಾನ್ ವ್ಯವಸ್ಥೆಯಂತೇ ಇದೆ.  ಪುರಾತನ ಇರಾನಿನ ಚರಿತ್ರೆಯಲ್ಲಿ ಇಂಥದೊಂದು ವ್ಯವಸ್ಥೆ ಇತ್ತು. ಅದಕ್ಕೆ ಪಿಸ್ತ್ರಾಸ್ ಎನ್ನುತ್ತಾರೆ. ನಮ್ಮಲ್ಲಿ ಅದು ಚಾತುರ್ವರ್ಣವಾಗಿದೆ. ಅಲ್ಲಿ ಅಥ್ರವಾನ್ಸ್ (ಪ್ರೀಸ್ಟ್ ಕ್ಲಾಸ್), ರಥೈಸ್ತಾ (ವಾರಿಯರ್ಸ್), ವಸ್ತ್ರಿಯಾ (ಮರ್ಕಂಟೈಲ್ ಕ್ಲಾಸ್) ಮತ್ತು ಹ್ಯುತಿ (ಆರ್ಟಿಸನ್) ಎನ್ನುವ ವರ್ಗ ವ್ಯವಸ್ಥೆ ಇದೆ. ನಮ್ಮಲ್ಲಿ ಇದನ್ನು ಕಲ್ಪಿಸಿಕೊಂಡರೆ ಪುರೋಹಿತ ಅಥವಾ ಬ್ರಾಹ್ಮಣ (ಅಥ್ರವಾನ್ಸ್), ಕ್ಷತ್ರಿಯ  (ರಥೈಸ್ತಾ), ವೈಶ್ಯ  (ವಸ್ತ್ರಿಯಾ) ಮತ್ತು ಶೂದ್ರ (ಹ್ಯುತಿ) ಎಂದು ಅರ್ಥೈಸಿಕೊಳ್ಳಬಹುದು.  ಆದಿ ಕಾಲದ ಇರಾನಿಯನ್ ವ್ಯವಸ್ಥೆ ಹೀಗೇ ಇತ್ತು. ಅದೇ ನಾಲ್ಕು ವರ್ಗಗಳು ಭಾರತದಲ್ಲೂ ಈಗಲೂ ಚಾಲ್ತಿಯಲ್ಲಿವೆ. ಹೀಗೆ ಒಂದು ಇರಾನ್ ಸಂಬಂಧ ಭಾರತಕ್ಕಿದೆ. ಚರ್ಮದ ಬಣ್ಣ, ನಯ ನಾಜೂಕು, ಕಣ್ಣು, ಬುದ್ಧಿವಂತಿಕೆಯನ್ನು ಹೋಲಿಸಿದರೆ ಭಾರತದ ಅದರಲ್ಲೂ ಉತ್ತರ ಭಾರತದ ಕಾಶ್ಮೀರಿ ಪಂಡಿತರು, ಉತ್ತರ ಪ್ರದೇಶದ ಪಂಡಿತ್, ಚಿತ್ಪಾವನ ಬ್ರಾಹ್ಮಣರು, ನಮ್ಮ ಕರಾವಳಿ ಮತ್ತು ಉತ್ತರ ಕನ್ನಡದ ಹವ್ಯಕರು ಹೆಚ್ಚೂ ಕಮ್ಮಿ ಇರಾನಿಗಳನ್ನು ಹೋಲುತ್ತಾರೆ (ಮೇಲ್ನೋಟಕ್ಕೆ).  ಬಹುಶಃ ಹೀಗೂ ಆಗಿರಬಹುದು, ಆಗ ಇರಾನ್ ನಲ್ಲಿ ಕ್ರೈಸ್ತ ಮತ್ತು ಇಸ್ಲಾಂ ಮುಂಚೆಯೂ ಹಲವಾರು ಸುಧಾರಣಾವಾದಿಗಳ ಅಥವಾ ಬಂಡುಕೋರರ