ವಿಷಯಕ್ಕೆ ಹೋಗಿ

ಸೇವಾಮನೋಭಾವ, ಕಾಯಕ ಮತ್ತು ನಾವು-ಅವರು

ಯಾವುದೇ ಕೆಲಸವಾಗಿರಲಿ, ಅದಕ್ಕೆ ಡಿಗ್ನಿಟಿ ಆಫ್ ಲೇಬರ್ ಮನೋಧರ್ಮ ಮುಖ್ಯ. ಕಾಯಕ ಸಂಸ್ಕೃತಿಯ ಧರ್ಮವೆಂದರೆ ಅಲ್ಲಿ ಯಾವುದೂ ದೊಡ್ಡದಿರುವುದಿಲ್ಲ ಮತ್ತು ಯಾವುದೂ ಚಿಕ್ಕದಿರುವುದಿಲ್ಲ. ಇಲ್ಲಿ ಯಾರೂ ಅಮುಖ್ಯರಲ್ಲ... ಕುವೆಂಪು ಹೇಳಿದ್ದೂ ಅದನ್ನೇ ಅಲ್ಲವೇ. ಜನಜೀವನದ ವಿಷಯಕ್ಕೆ ಸಂಬಂಧಿಸಿದಂತೆ ನಮ್ಮ ಮತ್ತು ಯುರೋಪಿಯನ್ನರ ನಡುವೆ ಕೆಲವು ಬಹುಮುಖ್ಯವಾದ ಭಿನ್ನತೆಗಳಿವೆ. ಯುರೋಪಿಯನ್ನರು ಅದರಲ್ಲೂ ನಾರ್ವೆಜಿಯನ್ನರು ಯಾವ ಕೆಲಸವನ್ನು ಲಘುವೆಂದು ಪರಿಗಣಿಸುವುದಿಲ್ಲ. ಅದರಲ್ಲೇ ಬಹುದೊಡ್ಡ ಸಮಾಧಾನ ಮತ್ತು ಸಾರ್ಥ್ಯಕ್ಯವನ್ನು ಕಾಣಲೆತ್ನಿಸುತ್ತಾರೆ. ಅವರಿಗದು ಒಂದು ಕಾಯಕವೂ ಹೌದು ಧ್ಯಾನವೂ ಹೌದು. ಅವರಿಗದು ಸ್ಪಿರಿಚುಯಾಲಿಟಿ ಮನೋಧರ್ಮದಿಂದ ಸಾಧ್ಯವಾಗಿದೆ ಎಂದು ನನಗನ್ನಿಸುತ್ತದೆ. ಮಾತು ಮಾತಿಗೂ ಅವರು ಗಾಡ್ ಬ್ಲೆಸ್ ಯು ಎನ್ನುವುದು ಸುಮ್ಮನೇ ಒಂದು ತೋರಿಕೆಯಲ್ಲ ಅನಿಸುತ್ತದೆ. ರಿಲಿಜಿಯಸ್ ಲೈಫಿನಿಂದ ಅವರ ಸ್ಪಿರಿಚುಯಲ್ ಲೈಫ್ ಕೂಡ ರೂಪುಗೊಂಡಿದ್ದರೂ ಅದನ್ನವರು ನಿಜ ಜೀವನದಲ್ಲಿ ಸಿವಿಕ್ ಸೆನ್ಸ್ ಮನೋಧರ್ಮದಲ್ಲಿ ತರಲು ಯತ್ನಿಸುತ್ತಾರೆ. ಇದಕ್ಕೆ ಅಪವಾದಗಳೂ ಇರಬಹುದು.
ನಮ್ಮ ದೇಶದ ಅತಿ ಅಮಾನುಷವಾದ ಜಾತಿ ಪದ್ಧತಿಯಿಂದಾಗಿ ಕಾಯಕ ಎನ್ನುವುದು ಒಂದು ಕೆಲಸವಾಗಷ್ಟೇ ಕಾಣುತ್ತದೆ. ಮೇಲು, ಕೀಳು ಎನ್ನುವುದನ್ನು ಕೆಲಸಕ್ಕೆ ಸಂಬಂಧಿಸಿಯೂ ಕಾಣುವಂಥ ಬಹು ಕೆಟ್ಟದಾದ ಚಾಳಿ ನಮ್ಮದಾಗಿದೆ. ಇದರಿಂದ ನಾವು ಹೊರಬರುವುದು ಯಾವಾಗ? ಇನ್ನೆಷ್ಟು ಅಂಬೇಡ್ಕರ್ ಹೋರಾಟಗಳು ನಮ್ಮ ನೆಲದಲ್ಲಿ ಸಿಡಿದೇಳಬೇಕೋ?
ಕೆಲಸ ಎನ್ನುವುದನ್ನು ಒಪ್ಪಿಕೊಂಡರೂ ಅದಕ್ಕೆ ಪೂರಕವಾದ ಸಂಬಳದಲ್ಲಿ ಭಾರೀ ತಾರತಮ್ಯ  ಇರುವುದು ಅತ್ಯಂತ ಅಸಹನೀಯವಾದುದು. ಮತ್ತೆ, ಒಂದು ಕೆಲಸ ಬಯಸುವ ಶಕ್ತಿ, ಸಾಮರ್ಥ್ಯ, ಸಂಯಮ ತುಂಬಿಕೊಳ್ಳಲು ಕೆಲಸಗಾರರಿಗೆ ನಾವೆಲ್ಲಿ ಅನುಕೂಲ ಮಾಡಿಕೊಡುತ್ತೇವೆ? ಆಳುವವರ ಮಕ್ಕಳು ಆಳುತ್ತಲೇ ಇರಬೇಕು, ದುಡಿಯುವ ಜೀವಗಳು ದುಡಿಯುತ್ತಲೇ ಇರಬೇಕು... ಎನ್ನುವುದು ನಮ್ಮ ವ್ಯವಸ್ಥೆಯಾಗಿ ರೂಪುಗೊಂಡಿದ್ದಾದರೂ ಹೇಗೋ? ಅದನ್ನು ನಾವು ಸಹಿಸಿಕೊಳ್ಳುತ್ತಲೇ ಬಂದಿರುವುದಾದರೂ ಯಾಕೋ?
ಕೆಲಸಕ್ಕೆ ಸಂಬಂಧಿಸಿದಂತೆ ಇರುವ ಸಂಬಳ ನೀತಿ ನಮ್ಮ ಸಮಾಜವನ್ನು ಭ್ರಷ್ಟಗೊಳಿಸಿಬಿಟ್ಟಿದೆ. ಮಾನಸಿಕ, ಸಾಮಾಜಿಕ ಮತ್ತು ಆರ್ಥಿಕ ಭ್ರಷ್ಟತೆ ಒಂದು ಇನ್ನೊಂದರಲ್ಲಿ ತಳಕು ಹಾಕಿಕೊಂಡಿವೆ. ಕೆಲಸಕ್ಕೆ ತಕ್ಕ ಸಂಬಳ ದೊರಕದೇ ಹೋದರೆ ಆರ್ಥಿಕ ಭ್ರಷ್ಟತೆ ತಂತಾನೇ ಶುರುವಾಗಿಬಿಡುತ್ತದೆ. ನಮ್ಮಲ್ಲಿ ಅತ್ಯಂತ ಜವಾಬ್ದಾರಿಯುತ ಕೆಲಸವಾಗಿರುವ ಪೊಲೀಸ್, ಕಂಡಕ್ಟರ್, ಲೈನಮನ್, ಮಾಲಿ, ಪೌರಕಾರ್ಮಿಕರು, ಹಮಾಲಿಗಳು... ಇಂಥವರನ್ನೆಲ್ಲ ನಾವು ಕಾಣುವುದು ಮತ್ತು ನಡೆಸಿಕೊಳ್ಳುವುದು ಹೇಗೆ? ಇವರಿಗೆ ನೀಡುವ ಸಂಬಳದ ಬಗ್ಗೆ ನಾವೆಂದಾದರೂ ಯೋಚಿಸಿದ್ದೇವಾ? ದೇಹವನ್ನು ಇಡೀಯಾಗಿ ದಂಡಿಸುತ್ತಲೇ ಇರುವ ಇದರಲ್ಲಿನ ಹಲವು ಕೆಲಸಗಳಿಗೆ ಸಂಬಂಧಿಸಿದಂತೆ ಕೆಲಸಗಾರರ ಕೈಗೆ ದಕ್ಕುವುದಾದರೂ ಎಷ್ಟು?

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಮಗೆ ವ್ಹೀಲ್ ಚೇರ್ ವ್ಯವಸ್ಥೆ ಬೇಕಿತ್ತು. ಅದಕ್ಕೆ ನಿಲ್ದಾಣದವರೇ ವ್ಯವಸ್ಥೆ ಮಾಡಿಕೊಡುತ್ತಾರೆ. ಯಾವುದೇ ಪ್ರತ್ಯೇಕ ಶುಲ್ಕವಿರುವುದಿಲ್ಲ. ಇದಕ್ಕೆಂದೇ ನಿಯೋಜಿಸಲ್ಪಟ್ಟವರು ಪ್ರಯಾಣಿಕರನ್ನು ವ್ಹೀಲ್ ಚೇರಿನಲ್ಲಿ ಕೂರಿಸಿ, ಅವರ ಲಗೇಜುಗಳನ್ನೆಲ್ಲ ಹೊತ್ತುಕೊಂಡು ವಿಮಾನದ ಪ್ರವೇಶದ್ವಾರದವರೆಗೂ ತಲುಪಿಸುತ್ತಾರೆ. ಅದು ಅತ್ಯಂತ ಸೌಜನ್ಯದ ಮತ್ತು ಡಿಗ್ನಿಟಿ ಆಫ್ ಲೇಬರ್ ಮನೋಧರ್ಮ ಬಯಸುವಂಥ ಕಾಯಕ. ಸೇವಾ ಮನೋಭಾವನೆಯೇ ದೊಡ್ಡದೆಂದು ಭಾವಿಸುವವರು ಇದನ್ನು ಒಂದು ಹಂತದಲ್ಲಿ ಅತ್ಯಂತ ಗೌರವ ಭಾವದಿಂದ ಮಾಡಿಕೊಂಡು ಬರುತ್ತಾರೇನೋ... ನಮಗೆ ಮೇಲಿನ ಚಿತ್ರದಲ್ಲಿರುವ ಈ ಇಬ್ಬರು ಸಹಾಯಕರಾಗಿ ನಿಯೋಜಿತಗೊಂಡಿದ್ದರು. ನನ್ನವ್ವ ಮತ್ತು ತಂಗಿಯ ಅತ್ತೆಗೆ ಇವರು ನೆರವಾದರು. ಟರ್ಮಿನಲ್ ತಲುಪಿಸಿದರು. ವಿಮಾನ ನಾಲ್ಕು ಗಂಟೆ ತಡವಾದ್ದರಿಂದ ಇವರು ಆ ಹೊತ್ತಿಗೆ ಸರಿಯಾಗಿ ಮತ್ತೆ ಅಲ್ಲಿಗೆ ಬಂದು ವಿಮಾನದ ಪ್ರವೇಶದ್ವಾರದವರೆಗೆ ತಲುಪಿಸಿ ಹೋಗಬೇಕಿತ್ತು. ನಾನು ಇಬ್ಬರಿಗೂ ಕೇಳಿದೆ. ಏನಾದರೂ ಕೊಡಬೇಕೆಂದು ಬಯಸುತ್ತೀರಾ ಎಂದು. ಅದಕ್ಕವರು ಸಾರ್, ಏನೋ ನಿಮ್ಮ ಖುಷಿ, ಕೊಟ್ಟರೆ ಉಪಕಾರವಾಗುತ್ತೆ ಎಂದರು. ನಾನು ಪರ್ಸ್ ಗೆ ಕೈ ಹಾಕಿದೆ. ಸಾರ್ ಇಲ್ಲಿ ಬೇಡ, ಕ್ಯಾಮೆರಾಗಳಿವೆ, ಟಾಯ್ಲೆಟ್ ನಲ್ಲಿ ಕೊಡಿ ಎಂದರು. ನಾನವರ ಕೈಗೆ ಒಂದಷ್ಟು ನೂರು ರೂಪಾಯಿಗಳನ್ನಿತ್ತೆ. ಅವರು ನಮ್ಮ ಟರ್ಮಿನಲ್ ನತ್ತ ಮತ್ತೆ ಕಾಣಲಿಲ್ಲ. ಬೆಳಗಿನ ಜಾವ ನಾವೇ ಹೊರಡಲನುವಾಗುತ್ತಿದ್ದಂತೆ, ನಮಗೆ ಬೋರ್ಡಿಂಗ್ ಪಾಸ್ ಇಶ್ಯು ಮಾಡಿದ್ದ ಹೆಣ್ಣುಮಗಳೊಬ್ಬಳು ಅಲ್ಲಿಗೆ ಬಂದು ನಮ್ಮನ್ನು ವಿಚಾರಿಸಿದಳು. ವ್ಹೀಲ್ ಚೇರ್ ಗಾಗಿ. ಮತ್ತೆ ಯಾರನ್ನೋ ಅರೇಂಜ್ ಮಾಡಿಸಿಕೊಟ್ಟಳು.
ಆದರೆ, ಪ್ಯಾರಿಸ್ ನಲ್ಲಿ ನಮಗೆ ವ್ಹೀಲ್ ಚೇರ್ ವ್ಯವಸ್ಥೆ ಮತ್ತೆ ಬೇಕಿತ್ತು. ನಾನು ಬೋರ್ಡ್ ಆದ ತಕ್ಷಣವೇ ಗಗನಸಖಿಯರಿಗೆ ಸೂಚನೆ ನೀಡಬೇಕಿತ್ತು. ಅದನ್ನು ಮಾಡಿರಲಿಲ್ಲ. ಪ್ಯಾರಿಸ್ ತಲುಪಿದ ಮೇಲೆ ನಾನು ಗಗನಸಖಿಗೆ ವಿಷಯ ತಿಳಿಸಿದೆ. ನೀವು ಅಲ್ಲೇ ಹೇಳಬೇಕಿತ್ತು ಎಂದಳಾಕೆ. ಹಾಗೆ ನೋಡಿದರೆ ಟಿಕೆಟ್ ಮಾಡಿಸುವಾಗಲೇ ವ್ಹೀಲ್ ಚೇರ್ ಬೇಕೆಂದು ಕೇಳಿಕೊಂಡಿದ್ದೆ. ಏಜೆಂಟ್ ಅದನ್ನು ಟಿಕೆಟ್ ನಲ್ಲೇ ನಮೂದಿಸಬೇಕಿತ್ತು. ಆತ ಹಾಗೆ ಮಾಡಿರಲಿಲ್ಲ. ಬಹುಶಃ ನನ್ನ ಟಿಕೆಟ್ ದಿನಾಂಕ ಚೇಂಜ್ ಮಾಡುವ ಭರಾಟೆಯಲ್ಲಿ ಎರಡನೇ ಬಾರಿ ಟಿಕೆಟ್ ಕೊಡುವಾಗ ಆತ ಅದನ್ನು ಮರೆತನೇನೋ? ಹೀಗಾಗಿ ನಮಗೆ ಪ್ಯಾರಿಸ್ ನಲ್ಲಿ ಕೊಂಚ ಗಲಿಬಿಲಿಯಾಯ್ತು. ಆದರೂ ಒಬ್ಬ ಬಿಳಿಯ ಗಗನಸಖಿ, ವೇಟ್ ಐ ವಿಲ್ ಅರೆಂಜ್ ಸಮ್ ಥಿಂಗ್ ಫಾರ್ ಯು ಎಂದಳು. ನಮ್ಮ ಪುಟ್ಟ ಬೋರ್ಡ್ ಲಗೇಜುಗಳನ್ನು ಎತ್ತಿ ಸಾಗಿಸಲು ನೆರವಾದಳು. ಒಬ್ಬ ಬಿಳಿಯ ನಮ್ಮನ್ನು ವಿಮಾನದಿಂದ ಲಿಫ್ಟ್ ಮೂಲಕ ಕೆಳಕ್ಕಿಳಿಸಿ ವ್ಹೀಲ್ ಚೇರ್ ಇರುವ ವ್ಯವಸ್ಥೆ ಎಡೆಗೆ ಕರೆತಂದ. ಅಲ್ಲಿ ಆಫ್ರಿಕನ್ ಒಂದೇ ವ್ಹೀಲ್ ಚೇರ್ ಸಮೇತ ನಿಂತುಕೊಂಡಿದ್ದ. ನನಗೆ ಎರಡು ವ್ಹೀಲ್ ಚೇರ್ ಬೇಕಿತ್ತು ಅಂದೆ. ಇದು ತುರ್ತು ವ್ಯವಸ್ಥೆಯಾದ್ದರಿಂದ ಸಿಬ್ಬಂದಿ ಜಾಸ್ತಿ ಇರಲ್ಲ ಎಂದು ಆತ ನಯವಾಗೇ ಹೇಳಿದ. ನನ್ನವ್ವ ಕೊಂಚ ಹೆವ್ವಿ ಇರುವುದರಿಂದ ಮತ್ತು ಆಕೆಗೆ ಬಿಪಿ ಸಮಸ್ಯೆಯೂ ಇರುವುದುರಿಂದ ಅವಳನ್ನೇ ವ್ಹೀಲ್ ಚೇರ್ ಮೇಲೆ ಕುಳಿತುಕೊಳ್ಳುವಂತೆ ಸ್ಪೆಸಿಫಿಕ್ ಆಗಿ ಹೇಳಿದ. ನಾನೂ ಹಾಗೇ ಮಾಡಿದೆ. ಆತ ಬಗಲಿಗೆರಡು ಬ್ಯಾಗ್, ಕೈಲೊಂದು ವ್ಹೀಲ್ ಬ್ಯಾಗ್ ಹಿಡಿದುಕೊಂಡು ವ್ಹೀಲ್ ಚೇರ್ ತಳ್ಳಿಕೊಂಡು ಸಾಗತೊಡಗಿದ. ನಾನೂ ಎರಡೂ ಬ್ಯಾಗ್ ಬಗಲಿಗೇರಿಸಿಕೊಂಡು ಅವನನ್ನು ಫಾಲೊ ಮಾಡಿದೆ. ಆತ ನಮ್ಮನ್ನು ಇಮಿಗ್ರೇಷನ್ ಮತ್ತಿತರ ಎಲ್ಲ ತಪಾಸಣಾ ವಿಧಾನಗಳ ಮೂಲಕ ಟರ್ಮಿನಲ್ ತಲುಪಿಸಿ, ಕೂರಲು ಜಾಗ ತೋರಿಸಿ, ನಿಮ್ಮ ವಿಮಾನ  ನಾಲ್ಕು ಗಂಟೆ ತಡವಾಗಿದೆ, ಸಾರಿ ನೀವು ತುಂಬ ಹೊತ್ತು ಕಾಯಬೇಕಾಗಿ ಬಂತು ಎಂದು ವಿಷಾದ ವ್ಯಕ್ತಪಡಿಸಿದ. ವಿಮಾನ ಹೊರಡಲು ಅರ್ಧ ಗಂಟೆ ಇರುವಾಗಲೇ ಮತ್ತೆ ಹಾಜರಾಗುವುದಾಗಿ ಹೇಳಿ ಹೋದ. ಆತ ಹಾಗೇ ಮಾಡಿದ. ಬಂದವನೇ ವ್ಹೀಲ್ ಚೇರ್ ಓಪನ್ ಮಾಡಿ, ನನ್ನ ತಾಯಿಯನ್ನು ಅದರಲ್ಲಿ ಕೂರಿಸಿಕೊಂಡು ಮತ್ತದೇ ಸಜ್ಜನಿಕೆಯ ವರ್ತನೆ ಮತ್ತು ನಗುಮೊಗದಿಂದ ನಮ್ಮನ್ನು ವಿಮಾನದ ಪ್ರವೇಶದ್ವಾರದತ್ತ ಕರೆತಂದ. ಇನ್ನು ನನ್ನ ಕೆಲಸ ಇಲ್ಲಿಗೆ ಮುಗಿಯಿತು, ನನ್ನಿಂದ ಸೇವೆಗೆ ಸಂಬಂಧಿಸಿದಂತೆ ಏನಾದರೂ ಕೊರತೆಯಾಗಿದ್ದಲ್ಲಿ ಕ್ಷಮೆ ಇರಲಿ, ನಿಮ್ಮ ಪ್ರಯಾಣ ಸುಖಕರವಾಗಿರಲಿ ಎಂದು ವಿಶ್ ಮಾಡಿದ. ನಾನವನ ಪಕ್ಕಕ್ಕೆ ಕರೆದು ಡು ಯು ಎಕ್ಸಪೆಕ್ಟ್ ಸಮ್ ಥಿಂಗ್ ಫ್ರಮ್ ಅಸ್ ಎಂದೆ, ಯೂ ಮೀನ್ ಮನಿ ಎಂದವನೇ ತುಂಬ ಕೆಂಡಾಮಂಡಲನಾದ. ಡೋಂಟ್ ಡೂ ದ್ಯಾಟ್ ಸಿನ್, ಅಲ್ಲಾಹ್ ವಿಲ್ ನೆವರ್ ಫಾರ್ಗಿವ್, ಐ ಆ್ಯಮ್ ಹಿಯರ್ ಫಾರ್ ಸರ್ವಿಸ್, ಇಟ್ ಗಿವ್ಸ್ ಮೀ ಸೆನ್ಸ್ ಆಫ್ ಸ್ಯಾಟಿಸ್ಫ್ಯಾಕ್ಷನ್ ಎನ್ ಡಿಗ್ನಿಟಿ,,, ಎಂದು ತುಂಬ ಸಮಾಧಾನದಿಂದಲೇ ಹೇಳಿದ. ಮೇ ಐ ನೋ ಯುವರ್ ನೇಮ್ ಪ್ಲೀಸ್ ಅಂದೆ... ಸೈದು ಎಸ್ ಒ ಐ ಡಿ ಒ ಯು ಎಂದ... ನಾನವನ ಕೈಕುಲುಕಿದೆ. ನೈಸ್ ಮೀಟಿಂಗ್ ಯು, ಯು ಇಂಡಿಯನ್ಸ್ ಆರ್ ನೈಸ್ ಪೀಪಲ್, ಇನ್ ಶಾ ಅಲ್ಲಾಹ್ ವಿಲ್ ಮೀಟ್ ಅಗೇನ್... ಖುದಾ ಹಫೀಜ್ ಎಂದವನೇ ನಮ್ಮೆಲ್ಲರನ್ನೊಮ್ಮೆ ನಗುಮೊಗದಿಂದ ನೋಡಿ, ಕೈಬೀಸಿ ಮರೆಯಾದ... ಪ್ಯಾರಿಸ್ ನ ದಟ್ಟ ಮಂಜು ಕವಿದ ಆ ವಾತಾವರಣದಲ್ಲೂ ಅವನೊಬ್ಬ ಸೂರ್ಯನಂತೆ ಪ್ರಜ್ವಲಿಸಿ ಭ್ರಮೆಗಳನ್ನೆಲ್ಲ ಕರಗಿಸಿ ನನ್ನೊಳಗೊಂದು ಹೊಸ ಬೆಳಕು ಉಣಿಸಿ ಹೋದ... 
ಒಸ್ಲೊವಿನಲ್ಲೂ ಆಫ್ರೊ ಯುರೋಪಿಯನ್ ಹುಡುಗನೊಬ್ಬ ನಮ್ಮ ನೆರವಿಗೆ ಬಂದ. ಅವನದೂ ಅತ್ಯಂತ ಸಜ್ಜನಿಕೆಯ ವರ್ತನೆ. ಎಲ್ಲ ಸಾಮಾನುಗಳನ್ನು ಆತನೇ ಹೊತ್ತು ಸಾಗಿಸಿದ. ಲಗೇಜು ಇರುವ ಜಾಗಕ್ಕೂ ಕರೆದುಕೊಂಡು ಹೋಗಿ ಅವನ್ನೆಲ್ಲ ಒಂದು ಟ್ರಾಲಿಗೇರಿಸಿ, ವ್ಹೀಲ್ ಚೇರ್ ಅನ್ನೂ ತಳ್ಳಿಕೊಂಡು ನಮ್ಮನ್ನು ಮೇನ್ ಗೇಟ್ ವರೆಗೂ ತಲುಪಿಸಿದ. ನಾನವನ ಜತೆಗೂ ಒಂದಷ್ಟು ಮಾತನಾಡಿದೆ. ನನಗಿದಕ್ಕೆ ಸಿಗುವ ಸಂಬಳದಲ್ಲಿ ನಾನು ತೃಪ್ತನಾಗಿದ್ದೇನೆ. ಅದಕ್ಕೂ ಹೆಚ್ಚಾಗಿ ನನಗೆ ಸಿಕ್ಕ ಈ ಸೇವಾಭಾಗ್ಯ ಗಾಡ್ ಕೊಟ್ಟ ವರದಾನ. ನನಗಿದು ಆತ ನೀಡಿದ್ದನೆನ್ನುವುದಕ್ಕಿಂತ ನಾನೇ ಮನಸಾರೆ ಆಯ್ದುಕೊಂಡ ಕಾಯಕ. ನನಗಿದರಲ್ಲೇ ಸ್ವರ್ಗವಿದೆ ಎಂದ. ಮನುಷ್ಯ ಮನುಷ್ಯರ ನಡುವಿನ ಪ್ರೀತಿಯ ಕೊಡು ಕೊಳ್ಳುವಿಕೆಗಿಂತ ದೊಡ್ಡ ಭಾಗ್ಯವುಂಟೆ? ಮನುಷ್ಯ ಸಂಬಂಧಗಳಿಗಿಂತ ಮನೀ ದೊಡ್ಡದಾ ಬ್ರದರ್ ಎಂದನಾತ. ನಾನು ಮಾತುಬರದವನಾದೆ. ನಮ್ಮ ಬಸವ, ಅಂಬೇಡ್ಕರ್, ದೇವನೂರು ಮಹದೇವರೆಲ್ಲ ಇವರಲ್ಲೇ ಎಷ್ಟು ನೆಮ್ಮದಿಯಿಂದ ಇದ್ದಾರಲ್ಲ!...

ಕಾಮೆಂಟ್‌ಗಳು

ಜಿ.ತಿಪ್ಪೆಸ್ವಾಮಿಹೇಳಿದ್ದಾರೆ…
ನಾವು ಖಾಲಿ ಕುದುರೆಯನ್ನು ಕಳುಹಿಸಿರಲಿಲ್ಲ.ಅದು ಓಡುವ ಕುದುರೆಯಾಗಿತ್ತು.ನೋಡುವ ಕುದುರೆಯಾಗಿತ್ತು. ಪರಿಭಾವಿಸುವ ಜೀವವಾಗಿತ್ತು.ಕನ್ನಡ ಜಗತ್ತನ್ನು ತನ್ನೊಳಗೆ ತುಂಬಿಕೊಂಡು ಓಸ್ಲೋದ ಛಿನಾಲಿ ಛಳಿಯನ್ನು ತಬ್ಬಿಕೊಂಡಿತ್ತು.ಅದು ಕಚಗುಳಿಇಟ್ಟರೂ ನಗಲಿಲ್ಲ. ಬದಲಾಗಿ ಎದೆಯಲ್ಲಿ ಕನ್ನಡದ ಮೋಚಿಗಳು ಅಂಗಡಿಯ ಮುಂದೆ ಕುಳಿತು ಓಡಾಡುವವರ ಕಾಲುಗಳನ್ನು ಆಸೆಯಿಂದ ನೋಡುವ ಚಿತ್ರ ತುಂಬಿಕೊಳ್ಳುತ್ತಿತ್ತು. ಓಸ್ಲೋ ಸುಂದರಿಯರ ಅನ್ ರೊಮಾಂಟಿಕ್ ನಗು ಅಥ೵ ಕಳೆದುಕೊಂಡಿತ್ತು. ಕುದುರೆ ಸಾಗುತ್ತಿತ್ತು. ಅದು ಖಾಲಿ ಕುದುರೆಯಲ್ಲ. ಜೀವದ ಕುದುರೆ.

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮನುಷ್ಯ ಜಾತಿ ತಾನೊಂದೇ ವಲಂ...

ಭಾರತದಲ್ಲಿ ಜಾತಿ ವ್ಯವಸ್ಥೆ ಹೇಗೆ ಹುಟ್ಟಿತು ಎಂಬುದಕ್ಕೆ ಯಾವುದೇ ನಿರ್ಧಿಷ್ಟ ಥಿಯರಿ ಇಲ್ಲ. ಆದರೆ, ಇಲ್ಲಿನ ವರ್ಗ ಸೃಷ್ಟಿ ಮಾತ್ರ ಇರಾನ್ ವ್ಯವಸ್ಥೆಯಂತೇ ಇದೆ.  ಪುರಾತನ ಇರಾನಿನ ಚರಿತ್ರೆಯಲ್ಲಿ ಇಂಥದೊಂದು ವ್ಯವಸ್ಥೆ ಇತ್ತು. ಅದಕ್ಕೆ ಪಿಸ್ತ್ರಾಸ್ ಎನ್ನುತ್ತಾರೆ. ನಮ್ಮಲ್ಲಿ ಅದು ಚಾತುರ್ವರ್ಣವಾಗಿದೆ. ಅಲ್ಲಿ ಅಥ್ರವಾನ್ಸ್ (ಪ್ರೀಸ್ಟ್ ಕ್ಲಾಸ್), ರಥೈಸ್ತಾ (ವಾರಿಯರ್ಸ್), ವಸ್ತ್ರಿಯಾ (ಮರ್ಕಂಟೈಲ್ ಕ್ಲಾಸ್) ಮತ್ತು ಹ್ಯುತಿ (ಆರ್ಟಿಸನ್) ಎನ್ನುವ ವರ್ಗ ವ್ಯವಸ್ಥೆ ಇದೆ. ನಮ್ಮಲ್ಲಿ ಇದನ್ನು ಕಲ್ಪಿಸಿಕೊಂಡರೆ ಪುರೋಹಿತ ಅಥವಾ ಬ್ರಾಹ್ಮಣ (ಅಥ್ರವಾನ್ಸ್), ಕ್ಷತ್ರಿಯ  (ರಥೈಸ್ತಾ), ವೈಶ್ಯ  (ವಸ್ತ್ರಿಯಾ) ಮತ್ತು ಶೂದ್ರ (ಹ್ಯುತಿ) ಎಂದು ಅರ್ಥೈಸಿಕೊಳ್ಳಬಹುದು.  ಆದಿ ಕಾಲದ ಇರಾನಿಯನ್ ವ್ಯವಸ್ಥೆ ಹೀಗೇ ಇತ್ತು. ಅದೇ ನಾಲ್ಕು ವರ್ಗಗಳು ಭಾರತದಲ್ಲೂ ಈಗಲೂ ಚಾಲ್ತಿಯಲ್ಲಿವೆ. ಹೀಗೆ ಒಂದು ಇರಾನ್ ಸಂಬಂಧ ಭಾರತಕ್ಕಿದೆ. ಚರ್ಮದ ಬಣ್ಣ, ನಯ ನಾಜೂಕು, ಕಣ್ಣು, ಬುದ್ಧಿವಂತಿಕೆಯನ್ನು ಹೋಲಿಸಿದರೆ ಭಾರತದ ಅದರಲ್ಲೂ ಉತ್ತರ ಭಾರತದ ಕಾಶ್ಮೀರಿ ಪಂಡಿತರು, ಉತ್ತರ ಪ್ರದೇಶದ ಪಂಡಿತ್, ಚಿತ್ಪಾವನ ಬ್ರಾಹ್ಮಣರು, ನಮ್ಮ ಕರಾವಳಿ ಮತ್ತು ಉತ್ತರ ಕನ್ನಡದ ಹವ್ಯಕರು ಹೆಚ್ಚೂ ಕಮ್ಮಿ ಇರಾನಿಗಳನ್ನು ಹೋಲುತ್ತಾರೆ (ಮೇಲ್ನೋಟಕ್ಕೆ).  ಬಹುಶಃ ಹೀಗೂ ಆಗಿರಬಹುದು, ಆಗ ಇರಾನ್ ನಲ್ಲಿ ಕ್ರೈಸ್ತ ಮತ್ತು ಇಸ್ಲಾಂ ಮುಂಚೆಯೂ ಹಲವಾರು ಸುಧಾರಣಾವಾದಿಗಳ ಅಥವಾ ಬಂಡುಕೋರರ

"ಮಣೆಗಾರ" ಬಸಿದಿಟ್ಟ ಒಡಲಾಳದ ನೋವು ನೆನೆದು...

ಹಾಲ್ಕುರಿಕೆ ಥಿಯೇಟರ್ ಕಾನ್ಸೆಪ್ಟ್ ಕನ್ನಡ ರಂಗಭೂಮಿಯಲ್ಲಿ ಹೊಸದೊಂದು ಸಂಚಲನವನ್ನುಂಟು ಮಾಡುತ್ತಿದೆ. ಒಟ್ಟಾರೆ ಭಾರತೀಯ ರಂಗಭೂಮಿ ಕಾಣುತ್ತಿರುವ ಹೊಸತನಕ್ಕೆ ಇದು ಮುಖ್ಯವಾದ ಸಾಕ್ಷಿ. ಅತ್ಯಂತ ಕ್ರಿಯಾಶೀಲ ತುಡಿತದ ರಂಗಕರ್ಮಿ ಹಾಲ್ಕುರಿಕೆ ಶಿವಶಂಕರ (ನಿರ್ದೇಶಕ/ನಾಟಕಕಾರ) ಇತ್ತೀಚೆಗೆ "ಮಣೆಗಾರ" (ತುಂಬಾಡಿ ರಾಮಯ್ಯನವರ ಆತ್ಮಕಥೆ) ಎನ್ನುವ ದಲಿತ ಕಥಾನಕವೊಂದನ್ನು ರಂಗದ ಮೇಲೆ ಅನಾವರಣಗೊಳಿಸಿದರು. ಪ್ರಯೋಗದ ದೃಷ್ಟಿಯಿಂದ ಕೆಲವು ಕೊರತೆಗಳು, ದೋಷಗಳು ಇವೆ. ಅದು ಯಾವುದೇ ಪ್ರಯೋಗಕ್ಕೆ ಇರುವಂಥವೇ. ಆದರೆ ಸಮುದಾಯವೊಂದರ ಒಡಲಾಳದ ನೋವನ್ನು ರಂಗದ ಮೇಲೆ ಬಸಿದಿಟ್ಟಾಗ  ಬೆಚ್ಚಿ ಬೀಳುವಂತಾಯಿತು. ವಿಶೇಷವಾಗಿ ದಲಿತೇತರಲ್ಲಿ ಸಾಮಾಜಿಕ ಪ್ರಜ್ಞೆ, ಜವಾಬ್ದಾರಿಯನ್ನು ಬಡಿದೆಬ್ಬಿಸುವಂಥ ಕಥಾನಕವದು. "ಮಣೆಗಾರ" ಪ್ರೊಸಿನಿಯಂಗಿಂತ ಆಪ್ತರಂಗಭೂಮಿಗೆ ಸೂಕ್ತವಾದ ವಸ್ತು. ಪ್ರಯೋಗ ಒಟ್ಟಾರೆ ಮನುಷ್ಯ ಬದುಕಿನ ನಡುವಿರುವ ಗ್ರೇ ಏರಿಯಾವೊಂದರ ದರುಶನ ಮಾಡಿಸಿತು. ಮೇಲ್ವರ್ಗ ಸಹಮಾನವರನ್ನು ಅದು ಹೇಗೆ ಅಸ್ಪೃಶ್ಯರು ಎಂದು ದೂರಕ್ಕಿಟ್ಟಿತ್ತು, ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿತ್ತು ಎನ್ನುವುದು ಇದರ ಮೂಲ ಸಂಕಟ. ಇಡೀ ನಾಟಕದಲ್ಲಿ ಬದುಕಿಗಾಗೇ ಸಂಘರ್ಷವಿದೆ. ಆಹಾರಕ್ಕಾಗಿ ಹಾಹಾಕಾರವಿದೆ. socio-cultural  ನೆಲೆಯಲ್ಲಿ ದೊಡ್ಡ ಸಂಘರ್ಷವಿದೆ. ಇದು ರಾಜಕೀಯ ಆಯಾಮದಲ್ಲೂ ಬಹುಮುಖ್ಯವಾದ ಸಂಘರ್ಷವೇ. ಶಿಕ್ಷಣ ಮತ್ತು ಅದರ ಆಧಾರದಲ್ಲಿ ಹುಟ

"ಬದುಕು-ಬಯಲು" ನಾಟಕ ಮತ್ತು ಮಾನವೀಯ ನೆಲೆಯ ಹುಡುಕಾಟ

ಫ್ರಾನ್ಸ್ ನ ಬರಹಗಾರ ಅಲ್ಫ್ರೆಡ್ ಜೆರಿ ಬರೆದ 'ದಿ ಸೂಪರ್ ಮೇಲ್' ಎನ್ನುವ ಕಾದಂಬರಿಯ ಪ್ರೊಟಗಾನಿಸ್ಟ್ ಆ್ಯಂಡ್ರಿ ಮಾರ್ಕೆಲ್ ಒಬ್ಬ ಜಂಟಲ್ ಮನ್, ವಿಜ್ಞಾನಿ ಕೂಡ. ಅವನಿಗೆ ಮಾನವ ಸಾಮರ್ಥ್ಯಕ್ಕೆ ಮಿತಿ ಎಂಬುದೇ ಇಲ್ಲ ಎನ್ನುವುದರಲ್ಲಿ ಬಲವಾದ ನಂಬಿಕೆ. ಆತ ಉಗಿಬಂಡಿ ಜತೆಗೂ ಯಾವುದೇ ವಿಶ್ರಾಂತಿ ಮತ್ತು ತ್ರಾಸಿಲ್ಲದೇ ಕ್ರಮಿಸಿ  ರೇಸ್ ಗೆಲ್ಲಬಲ್ಲ (ಕಾದಂಬರಿಯಲ್ಲಿ ರೈಲು ಮತ್ತು ಸೈಕ್ಲಿಸ್ಟ್ ನಡುವೆ ಒಂದು ರೇಸ್ ನಡೆಯುತ್ತದೆ). ಒಂದೇ ಹೆಂಗಸಿನ ಜತೆ 24 ಗಂಟೆಗಳಲ್ಲಿ 82 ಬಾರಿ ಸಂಭೋಗ ನಡೆಸಬಲ್ಲ 'ಕಾಮಪಟುತ್ವ'ದ ಸಾಹಸಗಳನ್ನೂ ಮಾಡಬಲ್ಲ. ಇದನ್ನು ಪುರುಷಪರಾಕ್ರಮದ ನೆಲೆಯಲ್ಲಿ ನೋಡೋದಾ? ಇಲ್ಲಾ ನಿಸರ್ಗ ಸಹಜ ಸಾಧ್ಯತೆಯ ನೆಲೆಯಲ್ಲಿ ನೋಡುವುದಾ?... - ಇದು ಒಂದು ರೀತಿಯ ವಿಕ್ಷಿಪ್ತ ಮನೋಧರ್ಮದ, ಸೈನ್ಸ್ ಫಿಕ್ಷನ್ ಕಾದಂಬರಿಯ ಸಂಕ್ಷಿಪ್ತ ನೋಟ. ಅಲ್ಫ್ರೆಡ್ ಜೆರಿ ಉತ್ತಮ ನಾಟಕಕಾರನೂ ಹೌದು. ಆತನ 'ಉಬು ರೊಯ್' ಹೆಸರಾಂತ ನಾಟಕಗಳಲ್ಲೊಂದು.    * * * ಜೆರಿ ಬಗ್ಗೆ ಓದುತ್ತಿದ್ದ ಹೊತ್ತಲ್ಲಿ ಹಿಜಡಾವೊಬ್ಬರ ಆತ್ಮಕಥನ ಆಧರಿಸಿದ "ಬದುಕು-ಬಯಲು" ಎನ್ನುವ ನಾಟಕ ವೀಕ್ಷಣೆಗೆ ತಿಪಟೂರಿನ ರಂಗ ಗೆಳೆಯ ನೀನಾಸಂ ಚಂದ್ರು ಆಹ್ವಾನ ನೀಡಿದರು.  ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ ನೋಡಿದೆ. ಅದಕ್ಕೂ ಮುಂಚೆ ನಾಟಕದ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಸಿ.ಎಸ್. ದ್ವಾರಕಾನಾಥ್, ಗೌರಿ ಲಂಕೇಶ್ ಮತ್ತಿತರ ಚಿಂತಕರ ವಿ