ವಿಷಯಕ್ಕೆ ಹೋಗಿ

ವಾಚ್ ಕೊಟ್ಟ ಮಾಮನ ಸಮಯ ನಿಂತುಹೋದ ಹೊತ್ತು...

ನಾನಿನ್ನೂ ಸ್ಕೂಲ್ ನಲ್ಲಿ ಓದುತ್ತಿದ್ದೆ. ಕೈಗೆ ಇಂಪೋರ್ಟೆಡ್ ಕ್ಯಾಸಿಯೊ ವಾಚ್ ಕಟ್ಟುತ್ತಿದ್ದೆ. ಅದರಲ್ಲಿ ಏಳು ಬಗೆಯ ಮ್ಯುಜಿಕಲ್ ಅಲಾರಾಂ ಇತ್ತು. ನನ್ನ ಜನ್ಮದಿನದಂದು ಅದು ಹ್ಯಾಪಿ ಬರ್ತಡೇ ಸಂಗೀತ ಹೇಳುತ್ತಿತ್ತು. ಬರ್ತಡೇ ದಿನ ತಾಸಿಗೊಂದು ಬಾರಿ ಇಡೀ ದಿನ ಅಲಾರಾಂ ಮೊಳಗುವಂತೆ ಮಾಡಬಲ್ಲ ವ್ಯವಸ್ಥೆ ಅದರಲ್ಲಿತ್ತು. ನನ್ನ ಓರಿಗೆಯ ಹುಡುಗರಲ್ಲಿ ಅದು ಮೂಡಿಸಿದ ಕುತೂಹಲ ಅಷ್ಟಿಷ್ಟಲ್ಲ. ಓದುತ್ತಿದ್ದ ಸ್ಕೂಲಿನಿಂದ ಹಿಡಿದು ಇಡೀ ಸುತ್ತಮುತ್ತಲಿನ ಜನಕ್ಕೂ ನಾನೊಂದು ಸ್ಪೆಶಲ್ ಪರ್ಸನ್ ಆಗಿಬಿಟ್ಟಿದ್ದೆ. ಬಟನ್ ಒತ್ತಿದರೆ ಒಂದು ಸಣ್ಣ ಟಾರ್ಚಿನಷ್ಟು ಬೆಳಕು ಮೂಡುತ್ತಿತ್ತು. ರಾತ್ರಿ ಕರೆಂಟ್ ಹೋದಾಗ ಒಳ್ಳೆ ಓದುವ ಧಿಮಾಕು ತೋರಿಸುವಂತೆ ವಾಚ್ ಹಿಡಿದುಕೊಂಡು ಓದುವ ಸಾಹಸ ಮಾಡುತ್ತಿದ್ದೆ.
  ಆ ವಾಚು ನನ್ನ ಕಾಲೇಜು ದಿನಗಳವರೆಗೂ ಇತ್ತು. ಕೆಲ ಗೆಳೆಯರು ಎಲ್ಲಾದರೂ ಊರಿಗೆ ಹೋಗುವುದಿದ್ದರೆ ನನ್ನ ವಾಚ್ ಕಟ್ಟಿಕೊಂಡೇ ಹೋಗುತ್ತಿದ್ದರು. ಅದೆಷ್ಟು ಜನರ ಮುಂದೆ ಮ್ಯುಜಿಕಲ್ ಖುಷಿ ಮೂಡಿಸಿತೋ! ಅದರ ಸೆಲ್ ಒಮ್ಮೆ ಖಾಲಿಯಾಯ್ತು. ಅದಕ್ಕಾಗಿ ನಾನು ಪರಿದಾಡಿದ್ದು ಅಷ್ಟಿಷ್ಟಲ್ಲ. ಆಗಷ್ಟೇ ಕ್ವಾರ್ಟ್ಜ ವಾಚುಗಳು ದೇಶಕ್ಕೆ ದಾಂಗುಡಿ ಇಡುತ್ತಿದ್ದವು. ಕಡೆಗೆ ಅದರ ಸೆಲ್ ಬೆಳಗಾವಿಯಲ್ಲಿ ಸಿಕ್ಕಿತು. ಆಗ ಅದು ದುಬಾರಿಯಾಗಿತ್ತು. ಆರಂಭದ ಕೆಲ ವರ್ಷಗಳತನಕ ಸೆಲ್ ಡೌನ್ ಆಗೇ ಇರಲಿಲ್ಲ. ಆನಂತರದಲ್ಲಿ ಹತ್ತಾರು ಬಾರಿ ಸೆಲ್ ಚೇಂಜ್ ಮಾಡಿದೆ. ಮ್ಯುಜಿಕ್ ಬಟನ್, ಡೇಟ್ ಬಟನ್, ಲೈಟ್ ಬಟನ್ ಎಷ್ಟು ಬಳಸಿದೆನೆಂದರೆ ಕಡೆ ಕಡೆಗೆ ಅದರ ಎಲ್ಲಾ ಬಟನ್ ಗಳು ಲೂಜ್ ಆಗಿ ಕಳಚಿಬಿಟ್ಟವು. ಆದರೂ ಅದರ ನಾದ ಬಿಡಲಿಲ್ಲ. ಕಡ್ಡಿ ಒತ್ತಿಯಾದರೂ ಅದರ ಮ್ಯೂಜಿಕ್ ಸವಿಯುತ್ತಿದ್ದೆ. ಅದರ ಬಾಡಿ ಸಿಂಥೆಟಿಕ್ ಮಟೀರಿಯಲ್ ನಿಂದ ಮಾಡಿದ್ದು ಸೊಗಸಾಗಿತ್ತು. ಮೇಲಿನ ಗ್ಲಾಸ್ ಒಂದಷ್ಟೂ ಹೊಳಪು ಕಳಕೊಂಡಿರಲಿಲ್ಲ. ಕಡ್ಡಿ ಬಳಸಿದ್ದರಿಂದ ಅದರ ಸೆನ್ಸರಿಯೇ ಡ್ಯಾಮೇಜ್ ಆಗಿ ಹೋಗಿತ್ತು. ಆ ಮೇಲೆ ಅದನ್ನು ರಿಪೇರಿ ಮಾಡದಷ್ಟು ಕೆಡಿಸಿಬಿಟ್ಟೆ.
  ನನ್ನ ಕೈಗೆ ಮತ್ತೊಂದು ವಾಚ್ ಬಂತು. ಅದು ಸ್ವಿಸ್ ಮೇಡ್. ಬಂಗಾರಬಣ್ಣದ ಆ ರಿಸ್ಟ್ ವಾಚ್ ನೋಡುಗರೆಲ್ಲರ ಗಮನಸೆಳೆಯುವಂತಿತ್ತು. ಅದು ನನ್ನ ಕೈಯಿಂದ ಒಂದಷ್ಟು ಬಾರಿ ಕಳಚಿಬಿದ್ದು ಅದರ ಲಿವ್ಹರ್ ಹೊರಟು ಹೋಗಿತ್ತು. ಇಂಪೋರ್ಟೆಡ್ ವಾಚ್ ಆದ್ದರಿಂದ ಅದರ ಲಿವ್ಹರ್ ಸಿಕ್ಕಲೇ ಇಲ್ಲ. ಅದೂ ಮೂಲೆಗುಂಪಾಯಿತು.
ನಾನು ಪಿಜಿ ಸೇರುವಷ್ಟೊತ್ತಿಗೆ ಮತ್ತೊಂದು ವಾಚ್ ಕೈಸೇರಿತು. ಮತ್ತೆ ಕ್ಯಾಸಿಯೊ ವಾಚ್! ಅದೀಗ ಸ್ಟೀಲ್ ಕೇಸ್ ಹೊಂದಿತ್ತು. ಅದರಲ್ಲೂ ಅಲರಾಂ ಇತ್ತು. ಜತೆಗೆ ಕ್ಯಾಲ್ಕುಲೇಟರ್! ಸಣ್ಣ ಸಣ್ಣ ಲೆಕ್ಕಕ್ಕೆಲ್ಲ ಆ ಕ್ಯಾಲ್ಕುಲೇಟರ್ ಬಳಸುವುದು ಚಟವೇ ಆದಂತಾಗಿತ್ತು. ಅದರಲ್ಲೂ ಮ್ಯೂಜಿಕ್, ಲೈಟ್, ಅಲರಾಂ ಎಲ್ಲವೂ ಇತ್ತು. ಆ ವಾಚು ತುಂಬ ಜತನದಿಂದ ಕಾಯ್ದುಕೊಂಡು ಬಂದಿದ್ದೆ. ಬೆಂಗಳೂರಿಗೆ ಬಂದಾಗಲೂ ನನ್ನ ಕೈಯಲ್ಲಿದ್ದದ್ದು ಅದೇ ವಾಚು. ಬೆಂಗಳೂರಿನಲ್ಲಿ ಆರಂಭದ ಸಮಯ ಚೆನ್ನಾಗೇ ಇತ್ತು. ಗಾಡಿ ತಗೊಂಡೆ. ಅದರ ಹಿಂದೆ ಸೀಟು ಯಾವತ್ತೂ ಖಾಲಿ ಇರತಾನೇ ಇರಲಿಲ್ಲ! ತುಂಬ ಹಾಯಾಗಿದ್ದೆ. ಜಾಲಿಯಾಗಿದ್ದೆ. ಗಾಡಿ ಹಿಂದಿನ ಸೀಟು ಖಾಲಿ ಮಾಡಿ ಮನೆ ಸೇರುತ್ತಿದ್ದಾಗ ಅದಾವ ವಕ್ರದೃಷ್ಟಿ ನನ್ನ ಮೇಲಿತ್ತೋ... ಒಂದು ಕಾರು ನನ್ನೆದುರಿಗೆ ಇದ್ದಕ್ಕಿದ್ದಂತೆ ಹೆಡ್ ಲೈಟ್ ಆನ್ ಮಾಡಿಕೊಂಡಿತು. ನೋಡ ನೋಡುತ್ತಿದ್ದಂತೆ ಅದು ನನ್ನ ಮೇಲೆ ಎಗರಿ ಬಂತು. ಯೋಚಿಸುವದಕ್ಕೂ ಸಮಯ ಕೊಡದೇ ನನ್ನನ್ನು ಗುದ್ದಿಕೊಂಡು ಹೋಯಿತು. ಆಯತಪ್ಪಿ ನೆಲಕ್ಕೊರಗಿದೆ. ಆಸ್ಪತ್ರೆ ಸೇರಿದಾಗ ನನ್ನ ಕಾಲು ತುಂಬ ಡ್ಯಾಮೇಜ್ ಆಗಿತ್ತು. ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿದ್ದೆ. ಕಾಲು ರಿಪೇರಿಯಾಯ್ತು. ಗಾಡಿ, ಅದರ ಹಿಂದಿನ ಸೀಟೂ ಖಾಲಿ! ನೋವು ಹಾಗೇ ಉಳಿದುಕೊಂಡಿತು. ಕ್ಯಾಸಿಯೊ ವಾಚು ಉಜ್ಜಿಹೋಗಿ ಅಪ್ಪಚ್ಚಿಯಾಗಿತ್ತು. ನನಗೆ ಪ್ರಜ್ಞೆ ಬಂದಾಗ ವಾಚನ್ನು ನನ್ನ ಕೈಗಿತ್ತರು. ಕಣ್ಣಲ್ಲಿ ನೀರಾಡಿತ್ತು. ಆ ನಜ್ಜುಗುಜ್ಜಾದ ವಾಚು ನನ್ನ ಗುಜರಿಯಲ್ಲಿನ್ನೂ ಇದೆ.
  ಈ ಮೂರೂ ವಾಚುಗಳನ್ನು ನನಗೆ ಕೊಟ್ಟಿದ್ದು ನನ್ನ ಚಿಕ್ಕ ಮಾಮ ಅಜೀಜ್ ಮುದ್ನಾಳ್. ತಾಯಿಯ ಅಣ್ಣ. ಅವರು 35 ವರ್ಷಗಳ ಕಾಲ ಕುವೈತ್ ನಲ್ಲಿದ್ದವರು. ಪ್ರತಿಬಾರಿ ಬಂದಾಗೆಲ್ಲ ನನಗೆ ಇಂಪೋರ್ಟೆಡ್ ವಾಚ್, ಬಟ್ಟೆ ಕೊಡುತ್ತಿದ್ದ ಮಾಮನ ಸಮಯ ಕೆಲ ದಿನಗಳಿಂದ ಚೆನ್ನಾಗಿರಲಿಲ್ಲ. ಅವರು ನನಗೆ ಕೊಟ್ಟ ವಾಚ್ ಗಳ ಕಡ್ಡಿ ಅಲುಗದೇ ಹಾಗೇ ನಿಂತುಕೊಂಡಂತೆ ಇವತ್ತು ಅವರ ಹಾರ್ಟ್ ಬೀಟ್ ಕೂಡ ನಿಂತುಹೋಯ್ತು. ಈ ಬೆಳಗ್ಗೆ (ಮಂಗಳವಾರ, 24, ಜುಲೈ 2012) ಅವರ ಬದುಕಿನ ಸಮಯ ಮುಗಿದ ಸುದ್ದಿ ನನ್ನ ಕಿವಿಗಪ್ಪಳಿಸಿತು. ಸಮಯದ ಕಡ್ಡಿ ಅಲುಗಾಡದ ವಾಚ್, ಮ್ಯೂಜಿಕ್ ನಿಂತು ಹೋದ ವಾಚ್, ಲೆಕ್ಕ ಮಾಡಲಾಗದ ಆ ವಾಚ್... ಎಲ್ಲ ನನ್ನ ಜತೆಗೇ ಇವೆ. ಅವರೇ ಇಲ್ಲ. ತುಂಬ ಅವರ ನೆನಪಾಗುತ್ತಿದೆ. ನನ್ನ ದಿಲ್ ಬೀಟ್ ನಿಲ್ಲುವವರೆಗೆ ನಾನೂ ಹೀಗೆ ಸಮಯದ ಸಹಜ ನಡಿಗೆಯ ಜತೆಗೇ ಇರುತ್ತೇನೆ. ನನ್ನ ಮಾಮನಿಗೆ ನನ್ನದೊಂದು ಆಖರೀ ಸಲಾಂ. ದಿಲ್ ಸೇ...

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

'ಅನಭಿಜ್ಞ ಶಾಕುಂತಲ': ನೆನಪು ಮರೆವಿನಾಟ

 ಜೀವನವೇ ಒಂದು ನಾಟಕವೆಂದಾದರೆ. ಸಂಬಂಧ ಅನ್ನೋದು ಕಟ್ಟಿಕೊಂಡ ಆಟ. ಅಂದರೆ ನಾಟಕದಂತೆ ಬದುಕು ಕೂಡ ಆಟ ಕಟ್ಟುವ ಕ್ರಿಯೆ. ಇಲ್ಲಿ ಗುರಿ ಎಂದರೆ ಸುಖದ ಅಥವಾ ಸಾರ್ಥಕತೆಯ ದಡ ಸೇರುವುದು. ಈ ಆಟದ ಒಂದು ಹಂತದಲ್ಲಿ ಕಷ್ಟದ ಅಡವಿ ಸೇರುವುದೂ ಇದೆ! 'ಆಡಾಡ್ತ ಅಡವಿ ಸೇರುವುದು' ಅಂತಾರಲ್ಲ ಹಾಗೆ. ಅಡವಿ ಅಂದರೆ ಇಲ್ಲಿ ಸಂಕೀರ್ಣತೆ, ಸಂಕಷ್ಟ ಅವಘಡ, ಸಂದಿಗ್ಧತೆ ಎಂದು ಭಾವಿಸಿಕೊಳ್ಳಬಹುದು. ಬದುಕಿನ ದಾರಿಯಲ್ಲಿ ಒಮ್ಮೆ ಈ 'ಅಡವಿ' ಎದುರಾಗೇ ಆಗುತ್ತದೆ ಎನ್ನುವುದು ವಿಧಿಲಿಖಿತವೇ? ಗೊತ್ತಿಲ್ಲ. ಪ್ರೀತಿ-ಪ್ರೇಮ-ಕಾಮ ಎನ್ನುವ ಬದುಕಿನ ಒಟ್ಟಾರೆ ಆಟ- ಕೂಟದಲ್ಲಿ ಪಡಕೊಳ್ಳುವುದೆಲ್ಲ ಜೀವಕಾರುಣ್ಯವಷ್ಟೇ ಅಲ್ಲ. ಸಂಕಷ್ಟ ಮತ್ತು ಸಂದಿಗ್ಧತೆಯೂ ಜತೆಯಲ್ಲಿರುತ್ತದೆ ಎನ್ನುವುದು ಸಹಜ ಮನೋಧರ್ಮ.  ಬದುಕಿನ ಆಟಕ್ಕೆ ತೆರಕೊಂಡವರಲ್ಲಿ ಹಲವರು ಅನುಭವಿಸಿದ ಮಧುರ ಘಳಿಗೆಗಳನ್ನು ಕಡೆತನಕ ನೆನಪಿಟ್ಟುಕೊಳ್ಳುತ್ತಾರೆ. ಕೆಲವರು ಮರೆತೇ ಬಿಡುತ್ತಾರೆ!?..  ಕಾಳಿದಾಸನ ಮಹಾಕಾವ್ಯ ಶಾಕುಂತಲೆಯಲ್ಲಿ ಈ ಬದುಕು, ಮನುಷ್ಯ ಪ್ರೀತಿ ಪಯಣದ ನೆನಪು ಮತ್ತು ಮರೆವಿನಾಟ ಮನಮಿಡಿಯುವಂತೆ ಚಿತ್ರಣಗೊಂಡಿದೆ. ಈ ಕಾವ್ಯದಲ್ಲಿ ಎಲ್ಲವನ್ನು ವಿಧಿಯೇ ನಿರ್ಧರಿಸಿದಂತೆನಿಸುತ್ತದೆ. ಫೇಟಲಿಸಂ ವಾದಕ್ಕೆ ಪೂರಕವಾದ ಚಿಂತನೆ ಇದೆನ್ನಬಹುದು. ಆಧುನಿಕ ಯುಗದ ಶೇಕ್ಸಪಿಯರ್ ನ ಹಲವು ನಾಟಕಗಳಲ್ಲಿಯೂ ಈ ಫೇಟಲಿಸಂ ಪ್ರಧಾನ ಪಾತ್ರದಂತೆ ವರ್ತಿಸುವುದನ್ನು ಗಮನಿಸಬಹುದು. *

ಇಷ್ಕ್‌ ಕೆ ಇಮ್ತೆಹಾನ್‌ ಔರ್‌ ಭೀ ಹೈ’.. ಇಮ್ರಾನ್‌ ಖಾನ್‌!

ಪಾಕಿಸ್ತಾನದ ಬಗ್ಗೆ ಮಾತನಾಡುವುದು ಮಹಾ ಪಾಪದ ಕೆಲಸವೇನಲ್ಲ. ಹಾಗೆ ಭಾವಿಸಬೇಕಿಲ್ಲ. ಅದು ಒಪ್ಪಿತವೊ ಇಲ್ಲವೋ, ಅದರ ಬಗ್ಗೆ ಅಲಕ್ಷ್ಯವೋ ನಿರ್ಲಕ್ಷ್ಯವೊ ಏನೇ ಆದರೂ ಅದು ಒಂದು ದೇಶ. ನೆರೆಯ ರಾಷ್ಟ್ರ. ‘ಪಡೋಸಿ...’ ಸಂಬಂಧದಲ್ಲಿ ನಮ್ಮದೇ ಕರುಳಬಳ್ಳಿ. ಭಾಷೆ, ಜನಜೀವನ ಶೈಲಿಯಲ್ಲಿ ಬದಲಾದರೂ ಮನುಷ್ಯ ಭಾವ, ಬದುಕುವ ಸಾಮಾನ್ಯ ಕಾಳಜಿ  ಒಂದೇ. ಹಾಗೆ ನೋಡಿದರೆ ಸಾಂಸ್ಕೃತಿಕವಾಗಿ ಎರಡೂ ದೇಶಗಳು ಅಭಿನ್ನ. ನಮ್ಮಲ್ಲಿರುವ ಹಾಗೆ ಅಲ್ಲಿಯೂ ಪ್ರಜಾಪ್ರಭುತ್ವ ಇದೆ. ಅಲ್ಲಿ ನಡೆಯುವುದು ಇಲ್ಲೂ ನಡೆಯುತ್ತದೆ. ಅಲ್ಲಿ ನಡೆಯಲೇಬಾರದ್ದು ಇಲ್ಲೂ ನಡೆಯಲೇಬಾರದು.  ತೀವ್ರವಾದ ನಮ್ಮಲ್ಲಿನದಕ್ಕಿಂತ ಅಲ್ಲಿ ತುಸು ಹೆಚ್ಚು ಸವಾರಿಗೆ ಹವಣಿಸಿದೆ. ಅಲ್ಲಿನ ಮಿಲಿಟರಿ ಅತಿರೇಕದ್ದು. ಅಕ್ಷಮ್ಯ. ಮತ್ತೆ ದೇಶ ಪುಟ್ಟದಾದಷ್ಟು ಅದಕ್ಕೆ ಭಯಗಳು ಜಾಸ್ತಿ. ಮಿಲಿಟರಿ ಕವಚದಲ್ಲಿ ಅದು ಸುರಕ್ಷಾ ಭಾವವನ್ನು ಕಲ್ಪಿಸಿಕೊಳ್ಳುತ್ತದೆ. ಅದೊಂದು ತರಹದ ಸಮಾಧಾನ. ಆದರೆ ಭ್ರಮೆಯಿಂದ ಕೂಡಿದ್ದು. ಭಯೋತ್ಪಾದನೆ ಕೂಡ ಒಂದರ್ಥದಲ್ಲಿ ಪುಕ್ಕಲುತನವೇ ಆಗುತ್ತದೆ. ಹಿಂಸಾ ಪ್ರವೃತ್ತಿಗೆ ಹೆದರಿಸುವುದೇ ಕೆಲಸ. ಹೆದರಿಸುವವರು ಶೂರರು, ಧೀರರು ಮತ್ತು ಜೀನಿಯಸ್‌ ಆಗಿರಲು ಹೇಗೆ ಸಾಧ್ಯ? ಮುಖ್ಯವಾಗಿ ಅಲ್ಲಿನ ವಿದ್ಯಮಾನಗಳನ್ನು ಗಮನಿಸುವುದಾದರೆ, ಮಿಲಿಟರಿ, ಮತಾಂಧರು, ಭಯೋತ್ಪಾದಕರು, ಭ್ರಷ್ಟರು ಇದೆಲ್ಲದರಿಂದ ಪಾಕಿ ತುಂಬ ರೋಸಿ ಹೋಗಿದ್ದಾನೆ. ಒಂದು ಸೂಕ್ತ ಪರ್ಯಾಯಕ್ಕಾಗಿ ಹಂಬಲಿಸಿದ್ದಾನೆ. ಸಹಜ

ಮನುಷ್ಯ ಜಾತಿ ತಾನೊಂದೇ ವಲಂ...

ಭಾರತದಲ್ಲಿ ಜಾತಿ ವ್ಯವಸ್ಥೆ ಹೇಗೆ ಹುಟ್ಟಿತು ಎಂಬುದಕ್ಕೆ ಯಾವುದೇ ನಿರ್ಧಿಷ್ಟ ಥಿಯರಿ ಇಲ್ಲ. ಆದರೆ, ಇಲ್ಲಿನ ವರ್ಗ ಸೃಷ್ಟಿ ಮಾತ್ರ ಇರಾನ್ ವ್ಯವಸ್ಥೆಯಂತೇ ಇದೆ.  ಪುರಾತನ ಇರಾನಿನ ಚರಿತ್ರೆಯಲ್ಲಿ ಇಂಥದೊಂದು ವ್ಯವಸ್ಥೆ ಇತ್ತು. ಅದಕ್ಕೆ ಪಿಸ್ತ್ರಾಸ್ ಎನ್ನುತ್ತಾರೆ. ನಮ್ಮಲ್ಲಿ ಅದು ಚಾತುರ್ವರ್ಣವಾಗಿದೆ. ಅಲ್ಲಿ ಅಥ್ರವಾನ್ಸ್ (ಪ್ರೀಸ್ಟ್ ಕ್ಲಾಸ್), ರಥೈಸ್ತಾ (ವಾರಿಯರ್ಸ್), ವಸ್ತ್ರಿಯಾ (ಮರ್ಕಂಟೈಲ್ ಕ್ಲಾಸ್) ಮತ್ತು ಹ್ಯುತಿ (ಆರ್ಟಿಸನ್) ಎನ್ನುವ ವರ್ಗ ವ್ಯವಸ್ಥೆ ಇದೆ. ನಮ್ಮಲ್ಲಿ ಇದನ್ನು ಕಲ್ಪಿಸಿಕೊಂಡರೆ ಪುರೋಹಿತ ಅಥವಾ ಬ್ರಾಹ್ಮಣ (ಅಥ್ರವಾನ್ಸ್), ಕ್ಷತ್ರಿಯ  (ರಥೈಸ್ತಾ), ವೈಶ್ಯ  (ವಸ್ತ್ರಿಯಾ) ಮತ್ತು ಶೂದ್ರ (ಹ್ಯುತಿ) ಎಂದು ಅರ್ಥೈಸಿಕೊಳ್ಳಬಹುದು.  ಆದಿ ಕಾಲದ ಇರಾನಿಯನ್ ವ್ಯವಸ್ಥೆ ಹೀಗೇ ಇತ್ತು. ಅದೇ ನಾಲ್ಕು ವರ್ಗಗಳು ಭಾರತದಲ್ಲೂ ಈಗಲೂ ಚಾಲ್ತಿಯಲ್ಲಿವೆ. ಹೀಗೆ ಒಂದು ಇರಾನ್ ಸಂಬಂಧ ಭಾರತಕ್ಕಿದೆ. ಚರ್ಮದ ಬಣ್ಣ, ನಯ ನಾಜೂಕು, ಕಣ್ಣು, ಬುದ್ಧಿವಂತಿಕೆಯನ್ನು ಹೋಲಿಸಿದರೆ ಭಾರತದ ಅದರಲ್ಲೂ ಉತ್ತರ ಭಾರತದ ಕಾಶ್ಮೀರಿ ಪಂಡಿತರು, ಉತ್ತರ ಪ್ರದೇಶದ ಪಂಡಿತ್, ಚಿತ್ಪಾವನ ಬ್ರಾಹ್ಮಣರು, ನಮ್ಮ ಕರಾವಳಿ ಮತ್ತು ಉತ್ತರ ಕನ್ನಡದ ಹವ್ಯಕರು ಹೆಚ್ಚೂ ಕಮ್ಮಿ ಇರಾನಿಗಳನ್ನು ಹೋಲುತ್ತಾರೆ (ಮೇಲ್ನೋಟಕ್ಕೆ).  ಬಹುಶಃ ಹೀಗೂ ಆಗಿರಬಹುದು, ಆಗ ಇರಾನ್ ನಲ್ಲಿ ಕ್ರೈಸ್ತ ಮತ್ತು ಇಸ್ಲಾಂ ಮುಂಚೆಯೂ ಹಲವಾರು ಸುಧಾರಣಾವಾದಿಗಳ ಅಥವಾ ಬಂಡುಕೋರರ