ವಿಷಯಕ್ಕೆ ಹೋಗಿ

ನನ್ನನ್ನು ಹೀಗೆ ಕಾಡಿತ್ತು "ಲೈಫ್ ಆಫ್ ಪೈ" ಮಾಯೆ...


ಒಂದು ಕೈವಾರ ತೆಗೆದುಕೊಂಡು ಒಂದು ವರ್ತುಳ ಮೂಡಿಸುತ್ತೇನೆ. ಕೈವಾರದ ಕೇಂದ್ರ ಬಿಂದುವಿನಿಂದ ಎಳೆದ ವೃತ್ತಾಕಾರ ಗೆರೆಯ ಒಂದು ಬದಿವರೆಗೆ ಸರಳ ರೇಖೆ ಎಳೆದೆನೆಂದರೆ ಅದು ಅರ್ಧ ವ್ಯಾಸ. ಪೂರ್ತಿ ಅಂದರೆ ಎರಡೂ ಬದಿ ಎಳೆದರೆ ಅಡ್ಡಳತೆ. ಅದನ್ನು ವ್ಯಾಸ ಅಂತಲೂ ಕರೆಯುತ್ತಾರೆ. ಅರ್ಥಾತ್ ವರ್ತುಲವನ್ನು ಅಡ್ಡ ಸೀಳಿದಂತೆ.


 ಈಗ ಈ ಅಡ್ಡಳತೆ ಅಂದರೆ ವರ್ತುಳದ ವ್ಯಾಸವಿದೆಯಲ್ಲ ಇದರ ಮೂರು ಪಟ್ಟಿಗಿಂತ ತುಸು ಹೆಚ್ಚು ಇಡೀ ವರ್ತುಳದ ಪರಿಧಿ ಇರುತ್ತದೆ ಎನ್ನುತ್ತದೆ ಗಣಿತ. ಇದರ ಒಂದು ಅನುಪಾತವೇ 'ಪೈ' ಅಥವಾ 'ಪಾಯ್'. ಇದೊಂದು ಮ್ಯಾಥೆಮ್ಯಾಟಿಕಲ್ ಕಾನಸ್ಟಂಟ್.  | | ಹೀಗೆರಡು ಗೀಟೆಳೆದು ಇವೆರಡರ ಮೇಲೊಂದು __ ಇಂಥ ಗೀಟೆಳೆದರೆ ಅದೇ ಪೈ ಅಥವಾ ಪಾಯ್ ಸಿಂಬಲ್ ಆಗುತ್ತದೆ.


* * *
  ತಲೆ ತಿಂದೆ ಅಲ್ಲವೇ?. ಇಂಥ ತರ್ಕಬದ್ಧ ನಾಲೇಡ್ಜ್ ಅಥವಾ ಇದನ್ನು ಮೀರಿದ ಇತರ ಲೆಕ್ಕಾಚಾರಗಳು, ಕೌತುಕಗಳು ಮತ್ತು ಕುತೂಹಲಗಳತ್ತ ಗಮನವಹಿಸುವ ಶಾಲಾ ಬಾಲಕನ (ಪೈಸಿನ್ ಮಾಲಿಟಾರ್ ಪಟೇಲ್ ಅರ್ಥಾತ್ ಶಾರ್ಟ್ ಆಗಿ 'ಪೈ' ಎಂದು ಹೆಸರಿಟ್ಟುಕೊಂಡವ) ಮೂಲಕ ಇಡೀ ಬದುಕಿನ ಅಸಲು ಪರಿಧಿಯನ್ನು ತನ್ನ ಮಿತಿಯಲ್ಲಿ ಕಟ್ಟಿಕೊಡಲು ಯತ್ನಿಸಿದ ಚಲನಚಿತ್ರ 'ಲೈಫ್ ಆಫ್ ಪೈ'.
  ಅಮೆರಿಕ ನಿವಾಸಿ ಆ್ಯಂಗ್ ಲೀ ಚಿತ್ರದ ನಿರ್ದೇಶಕ. ಈಚೆಗೆ ಚಿತ್ರ ನಾಲ್ಕು ಆಸ್ಕರ್ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಚಿತ್ರ ನೋಡಿದ ತಕ್ಷಣಕ್ಕೆ ಇದು ಆಸ್ಕರ್ ತರುವ ಮೂವ್ಹೀ ಅಂತ ಅನಿಸಿತ್ತು. ಇಂಡಿಯಾದಿಂದ ಆಸ್ಕರ್ ಹೊತ್ತೊಯ್ಯುವ ಏಕೋದ್ದೇಶದಿಂದ ಅಮೆರಿಕನ್ ಸಿನಿ ನಿರ್ದೇಶಕರು ಇಲ್ಲಿಗೆ ದಾಂಗುಡಿ ಇಡುತ್ತಿರುವುದು ಮೇಲ್ನೋಟಕ್ಕೆ ಕೆಣಕುವ ವಿದ್ಯಮಾನ. ಈ  ಅಸಮಾಧಾನದ ನಡುವೆಯೂ ಚಿತ್ರ ಸೊಗಸಾಗಿದೆ, ಇಂಟಲೆಕ್ಚುಯಲ್ ಆಗಿದೆ, ಸೂಕ್ಷ್ಮಮನೋಧರ್ಮವನ್ನು ಹೊಂದಿದೆ ಎನ್ನುವುದೇ ಮುಖ್ಯ.  ಚಿತ್ರ ಬಿಡುಗಡೆಗೊಂಡ ದಿನವೇ ಮಂತ್ರಿ ಮಾಲ್ ನ ಐನಾಕ್ಸ್ ನಲ್ಲಿ ರಾತ್ರಿ ಶೋ ನೋಡಿದ್ದೆ. ಪೈ ಕಾಡುತ್ತಲೇ ಇದ್ದ.


ಪೈ ಯಲ್ಲೊಂದು ಪಯಣ.
 ಇದು ಹೈಪರ್ ಆ್ಯಕ್ಟಿವ್ ಜನರೇಶನ್ ಅನ್ನು ದೃಷ್ಟಿಯಲ್ಲಿಟ್ಟುಕೊಂಡು ನಿರ್ಮಾಣಗೊಂಡ ಚಿತ್ರವೆನ್ನಬಹುದು.
ಓದು ಅಥವಾ ನಾವಂದುಕೊಳ್ಳುವ ಗಣಿತ, ವಿಜ್ಞಾನ, ಸೈಕಾಲಜಿ, ಸೋಷಿಯಲ್ ಸೈನ್ಸ್, ಭಾಷೆ, ರಿಲಿಜನ್... ಎಲ್ಲವನ್ನೂ ನಿಕಷಕ್ಕೊಡ್ಡುವುದಷ್ಟೇ ಅಲ್ಲ ಅದರ ಎಲ್ಲ ಆಳ ಅಗಲಗಳನ್ನು ಬದುಕುವ ಉಮೇದಿ ಈಗಿನ ಪೀಳಿಗೆಯದ್ದು. ಅಂಥದೊಂದು ಪೀಳಿಗೆಯ 'ಪೈ' ಎನ್ನುವ ಕ್ಯಾರೆಕ್ಟರ್ ಸುತ್ತ ಹೆಣೆದ ಇಂಟೆಲ್* (ಅಡಿಟಿಪ್ಪಣಿ ನೋಡಿ)  ಚಿತ್ರವಿದು. ಬಹುದೊಡ್ಡ ಇಂಟಲೆಕ್ಚುಯಲ್ ಹರವಿನ ಈ ಚಿತ್ರದ ಕೇಂದ್ರಬಿಂದು 'ಪೈ'.
 ಪೈ ಮುಸ್ಲಿಮನಲ್ಲ, ಕ್ರೈಸ್ತನೂ ಅಲ್ಲ. ಆದರೂ, ತನ್ನ ಕುಟುಂಬ ನಂಬಿಕೆಗಳಿಗೆ ಹೊರತಾದ ಮುಸ್ಲಿಂ, ಕ್ರೈಸ್ತರ ನಡೆ, ವಿಚಾರ, ಆಚರಣೆಗಳನ್ನು ಬದುಕಲು ನೋಡಿದವನು.ಆ ಮೂಲಕ ರಿಲಿಜನ್ ಗಳ ಒಳ್ಳೆಯ ಮೌಲ್ಯಗಳೆಲ್ಲವನ್ನು ತನ್ನೊಳಕ್ಕೆ ಆಹ್ವಾಹಿಸಿಕೊಳ್ಳಬೇಕು ಎಂದುಕೊಂಡವನು. ಹಾಗೆ ಅವುಗಳನ್ನು ಬದುಕಲು ಸಾಧ್ಯವಾಗಬೇಕು ಎನ್ನುವ ಮನಸ್ಥಿತಿಯವನೂ ಹೌದು. ಇದೊಂದು ಅರ್ಥದ ಆರೋಗ್ಯಕರ ಹೊಸ ಸಮಾಜದ ಪ್ರಮುಖ ಹಂತ ಎನ್ನಬಹುದು. ಗ್ಲೋಬಲ್ ಸಿಟಿಜನ್, ಗ್ಲೋಬಲ್ ಪರಸ್ಪೆಕ್ಟಿವ್ ಅರ್ಥದಲ್ಲಿ. ಇದಕ್ಕೂ ಹೆಚ್ಚಾಗಿ ಆತ ಬದುಕಿನ ಎಲ್ಲ ಸವಾಲುಗಳಿಗೆ ಎದೆಯೊಡ್ಡಿಕೊಂಡು ಅದನ್ನು ಅನುಭವಿಸಿ ಮುಂದೆ ಸಾಗಬೇಕೆನ್ನುವ ಸಾಹಸಿಗ.
* * *
 ಸಿನಿಮಾದ ಪ್ಲಾಟ್: ಪುದುಚೇರಿಯ ಪಕ್ಕಾ ಕಂಟ್ರಿ ಕಲ್ಚರಿನ ನಡುವೆ ಒಂದು ಫ್ಯಾಮಿಲಿ ನೆಲೆಸಿರುತ್ತದೆ. ಖಾಸಗಿ ಝೂ ನಡೆಸುತ್ತಿದ್ದ ಈ ಕುಟುಂಬ ನಷ್ಟಕ್ಕೆ ಸಿಲುಕಿ ಅದನ್ನು ಮಾರಿ,  ಕೆನಡಾಕ್ಕೆ ವಲಸೆ ಹೋಗುವ ನಿರ್ಧಾರ ಕೈಗೊಂಡಿರುತ್ತದೆ. ವಿವಿಧ ಸಂಸ್ಥೆಗಳಿಗೆ ಪ್ರಾಣಿಗಳನ್ನು ಮಾರಾಟ ಮಾಡಿ, ಝೂ ನ ಅಳಿದುಳಿದ ಪ್ರಾಣಿಗಳನ್ನು ಹಡಗಿನಲ್ಲಿ ಹಾಕಿಕೊಂಡು ಇಡೀ ಕುಟುಂಬ ಸಾಗರ ಮಾರ್ಗವಾಗಿ ಪ್ರಯಾಣಕ್ಕಿಳಿಯುತ್ತದೆ. ಸಾಗರದಲ್ಲಿ ಚಂಡಮಾರುತಕ್ಕೆ ಇವರು ಪಯಣಿಸುತ್ತಿದ್ದ ಹಡಗು ಸಿಲುಕುತ್ತದೆ.
 ಒಂದು ಹುಲಿ, ಕತ್ತೆಕಿರುಬ ಮತ್ತು ಜಿಬ್ರಾ ಜತೆಗೆ ಬಾಲಕನೊಬ್ಬನನ್ನು ಬಿಟ್ಟು ಎಲ್ಲರ ಮತ್ತು ಎಲ್ಲದರ ಬದುಕು ಮುಳುಗಿದ ಹಡಗಿನ ಜತೆಗೇ ಮುಳುಗಿಬಿಡುತ್ತದೆ. ಮುಂದೆ?! ...... ಮುಂದೆ?! ಎನ್ನುವ ಕುತೂಹಲವೇ ಚಿತ್ರಕಥೆಯ ವ್ಯಾಪ್ತಿ.
  ವಸ್ತು ಅಥವಾ ಕಥೆಗೆ ಸಂಬಂಧಿಸಿದ ಸಹಜ ಕುತೂಹಲಗಳ  ಸೀಮಿತ ವ್ಯಾಪ್ತಿಗಳನ್ನು ಮೀರುವುದೇ ಸಿನಿಮಾ. ಅದನ್ನೇ ಈ  ಸಿನಿಮಾ ಮಾಡಿದ್ದು.
* * *
  ರೇಖಾಗಣಿತದ ತತ್ವ ಪ್ರತಿಪಾದನೆ- It is impossible to square the circle.... ಅನ್ನೋದನ್ನು Its very difficult or impossible to frame the life... ಎಂದು ನಾನು ಅರ್ಥ ಮಾಡಿಕೊಳ್ಳುತ್ತೇನೆ. ಯಾವುದನ್ನೇ ಆಗಲಿ ಡಿ-ಫ್ರೇಮ್ ನೆಲೆಯಲ್ಲಿ ನೋಡುವುದು ಒಂದು ರೀತಿಯ ಮಜ ನೀಡುತ್ತದೆ. ಇದು ನಮ್ಮೊಳಗಣ ಜಗತ್ತನ್ನು ಮತ್ತಷ್ಟು ವಿಸ್ತರಿಸುತ್ತದೆ ಎಂದು ನಂಬಿಕೊಂಡವನು ನಾನು. ಯಾವುದೇ ಸೃಜನಶೀಲ ಕೆಲಸದ ಬಹುಮುಖ್ಯ ಆಶಯಕ್ಕೆ ಅರ್ಥ ಬರೋದು ವಸ್ತುವನ್ನು ಡಿ-ಫ್ರೇಮ್ ಮಾಡಿ ನೋಡುವುದರಿಂದಲೇ. ಡಿ-ಫ್ರೇಮ್ ಮನಸ್ಥಿತಿ ಸೃಜನಶೀಲ ಕೃತಿಯಲ್ಲಿ ಕೆಲಸ ಮಾಡಿದ್ದಾದರೆ ಅದು ಕೊಡುವ ಖುಷಿಯೇ ಬೇರೆ. ಈ ನೆಲೆಯಲ್ಲಿ 'ಲೈಫ್ ಆಫ್ ಪೈ' ಚಿತ್ರ ನನ್ನೊಳಗೆ ಹಬ್ಬಿಕೊಳ್ಳಲು, ಹರವಿಕೊಳ್ಳಲು ನೋಡಿತು. ಅದನ್ನಿಲ್ಲಿ ಇಡಲು ಯತ್ನಿಸುತ್ತಿದ್ದೇನೆ.
* * * 
ಸಿನಿಮಾದ ನಾಯಕ ಪಿಸ್ಸಿನ್ ಮಾಲಿಟಾರ್ ಉರೂಫ್ ಪೈ.  ಈ ಹೆಸರಿಗೂ ಒಂದು ಹಿನ್ನೆಲೆ ಇದೆ. ಅದೇನೆಂದರೆ, ಪಿಸ್ಸಿನ್ ಮಾಲಿಟಾರ್** (ಅಡಿಟಿಪ್ಪಣಿ ನೋಡಿ)  ಎನ್ನುವುದು ಪ್ಯಾರಿಸ್ ನ ಒಂದು ಸ್ವಿಮಿಂಗ್ ಪೂಲ್ ಕಾಂಪ್ಲೆಕ್ಸ್ ಗೆ ಇಟ್ಟ ಹೆಸರು. ಅದರ ಸ್ಮರಣಾರ್ಥವಾಗಿ ಚಿತ್ರದಲ್ಲಿ ಪೈ ನ ತಂದೆ  ಈ ಹೆಸರನ್ನು ಮಗನಿಗೆ ಇಟ್ಟಿದ್ದು.
 ಹೀಗೆ ಕೆಲವು ಹಿನ್ನೆಲೆಗಳನ್ನು ಲೈಫ್ ಆಫ್ ಪೈ ಚಿತ್ರ ತನ್ನೊಳಕ್ಕೆಳಕೊಂಡಿದೆ. ಪಿಸ್ಸಿನ್ ಮಾಲಿಟರ್ ಭವ್ಯ ಪರಂಪರೆಯ ಹೆಸರನ್ನು ಅಪಭ್ರಂಶಗೊಳಿಸಿ ಆತನ ಸಹಪಾಠಿಗಳು ಇವನನ್ನು ಪಿಸ್ಸಿಂಗ್ ಪಟೇಲ್ ಎಂದು ಲೇವಡಿ ಮಾಡುತ್ತಿರುತ್ತಾರೆ. ಇದರಿಂದ ಒಂದು ರೀತಿಯ ಹಿಂಸೆ ಅನುಭವಿಸುತ್ತಿದ್ದ ಹುಡುಗ ತನ್ನ ಹೆಸರನ್ನು ಶಾರ್ಟ್ ಅಂಡ್ ಸ್ವೀಟ್ ಆಗಿ ಪೈ ಎಂದಷ್ಟೇ ಇಟ್ಟುಕೊಂಡಿರುತ್ತಾನೆ. ಅವನನ್ನು ಕೇಂದ್ರವಾಗಿಟ್ಟುಕೊಂಡು ಒಟ್ಟು ಬದುಕಿನ ಒಂದು ದೊಡ್ಡ ಪಯಣವನ್ನೇ ಈ ಚಿತ್ರ ಕಟ್ಟಿಕೊಟ್ಟಿದೆ.
* * *
pi is irrational number... ಪೈ ಅನ್ನೋದು ಗಣಿತದಲ್ಲಿ ಒಂದು ತರ್ಕಹೀನ ಸಂಖ್ಯೆಯೂ ಹೌದು. ಅದಕ್ಕೆ ಅಸಂಬದ್ಧ ಅಥವಾ ಯಾವ ಕಟ್ಟಳೆಗೂ ಸಿಕ್ಕದ ಎನ್ನುವ ಅರ್ಥವೂ ಇದೆ. 'ಲೈಫ್ ಆಫ್ ಪೈ' ಚಿತ್ರದ ಆರಂಭಿಕ ದೃಶ್ಯಗಳಲ್ಲಿ ಪೈ ಎನ್ನುವ ಉತ್ಸಾಹಿ ಹುಡುಗ ತನ್ನ ಕುಟುಂಬಕ್ಕೆ ಅಸಂಬದ್ಧ ಎನಿಸುತ್ತಾನೆ. ಆತ ತಂದೆಯ ಮುಂದೆ ಎತ್ತುವ ಪ್ರಶ್ನೆಗಳು, ವಿಷಯದ ಮಿತಿಗಳ ಆಚೆಗೂ ಯೋಚಿಸುವ ಕುತೂಹಲಗಳು ಆತನಿಗೆ ತಿಕ್ಕಲು ಎನ್ನುವರ್ಥಗಳನ್ನು ಕುಟುಂಬದ ಯಜಮಾನನಿಗೆ (ಪ್ರೇಕ್ಷಕನಾದ ನನಗೂ) ಕಲ್ಪಿಸಿಕೊಟ್ಟಂತೆ ಅನ್ನಿಸುತ್ತದೆ.
 ಪೈ ನ ಕುತೂಹಲಗಳು ಹೇಗಿವೆ ಎನ್ನುವುದಕ್ಕೆ ಒಂದು ಸ್ಯಾಂಪಲ್- ಹುಲಿಯ ಭೀಭತ್ಸ್ಯ ಚಿತ್ರಣವನ್ನು ಕೇಳಿದ್ದ ಪೈ ಗೆ ಅದನ್ನು ಹತ್ತಿರದಿಂದ ನೋಡುವ ಕಾತರ. ಅಥವಾ ಹುಲಿಯೊಳಗೆ ನಾವಂದುಕೊಂಡಂತೆ ಬರಿಯ ಆಕ್ರಮಣದ ಮತ್ತು ಎರಗುವ ಗುಣವಷ್ಟೇ ಇದೆಯಾ? ಎನ್ನುವುದನ್ನು ಪರೀಕ್ಷೆ ಮಾಡಿ ತಿಳಿಯುವ ತವಕ.
 ಇಂಥದೊಂದು ಸಾಹಸಕ್ಕೆ ಇಳಿದ ಮಗನ ಕುತೂಹಲಕ್ಕೆ ಅವಾಕ್ಕಾಗುವ ತಂದೆ, ಹುಲಿಯ ಭೀಭತ್ಸ್ಯ ಚಿತ್ರಣ ಕಟ್ಟಿಕೊಡಲು, ಹುಲಿಯ ಬೋನಿಗೆ ಒಂದು ಮೇಕೆಯನ್ನು ಕಟ್ಟುತ್ತಾನೆ. ಅದು ಮೇಕೆಯನ್ನು ಅತ್ಯಂತ ರಭಸವಾಗಿ ಬೋನಿನೊಳಕ್ಕೆ ಎಳೆದುಕೊಳ್ಳುತ್ತದೆ. ಹೀಗೆ ಹಸಿದ ಹುಲಿಯ ಹಸಿವಿನ ಭೀಕರತೆಯನ್ನು ಪೈ ಕಣ್ಣಿಗೆ ಕಟ್ಟುವಂತೆ ನಿರೂಪಿಸುವ ತಂದೆಗೆ ಮಗನ ಇಂಥ ಕುತೂಹಲ ಅದೇಕೊ ಅತಿ ಅನ್ನಿಸಿಬಿಡುತ್ತದೆ. ಹೀಗಾಗಿ ಮಗನ ಮೇಲೆ ಸದಾ ರೇಗಾಡುತ್ತಾನೆ ಮತ್ತು ಲೇವಡಿ ಮಾಡುತ್ತಿರುತ್ತಾನೆ.
 ಆದರೆ ಪೈ ತನ್ನ ಕುತೂಹಲ ಮತ್ತು ಎಲ್ಲವನ್ನು ಪ್ರಶ್ನಿಸುವ ಮನೋಧರ್ಮ ಮುಂದುವರಿಸುವುದರಿಂದ ಕ್ರಮೇಣ ಅನುಭಾವಿಯಂತೆ ಅನ್ನಿಸತೊಡಗುತ್ತಾನೆ. ಅವನೊಳಗೆ ಅನುಭಾವಿಯೊಬ್ಬನಿಗಿರಬಹುದಾದ ವಿಶಾಲನೋಟ, ಮುನಿಸು, ಕೋಪ, ತುಡಿತಗಳು, ಕುತೂಹಲ, ತುಮುಲಗಳಿಗೆ ಒತ್ತಾಸೆಯಾಗುವಂಥ ತಾಯಿ ನೆರವಿಗಿರುತ್ತಾಳೆ. ಚಿತ್ರ ನೋಡುವ ಪ್ರಕ್ರಿಯೆಯಲ್ಲಿ ಆತನೊಂದಿಗೆ ಆ ತಾಯ್ತನ ಕೂಡ ನನ್ನೊಳಕ್ಕೂ ಇಳಿದುಬಿಟ್ಟಿತು. ಪೈ ಜತೆಗಿನ ಪಯಣದಲ್ಲಿ ನನ್ನೊಳಗಿನ ತಾಯಿ ಹಿಗ್ಗುತ್ತಲೇ ಇರುತ್ತಾಳೆ... ಅವನು ನನ್ನ ಜಗತ್ತನ್ನು ಹಿಗ್ಗಿಸುತ್ತಲೇ ಸಾಗುತ್ತಾನೆ...

 * * *
ಪೈ ಆಗಾಗ ಎತ್ತುವ ಪ್ರಶ್ನೆಗಳು ಮತ್ತು ಅದಕ್ಕೆ ಪೂರಕವಾಗಿ ಹುಟ್ಟಿಕೊಳ್ಳುವ ತಮಾಷೆಗಳು ಆರಂಭದಲ್ಲಿ ಚಿತ್ರವನ್ನು ಪ್ಲೇಫುಲ್ ಆಗಿಸಿವೆ. ಇಡೀ ಕುಟುಂಬ ಕೆನಡಾಕ್ಕೆ ವಲಸೆ ಹೊರಡುವುದು ಮತ್ತು ಹಡಗು ಚಂಡಮಾರುತಕ್ಕೆ ಸಿಕ್ಕೋದು. ಇದು ಹೊಸ ಬದುಕಿನ ಪಯಣ ಅಥವಾ ಅಸಲಿ ಬದುಕಿನ ಪಯಣದ ಮತ್ತೊಂದು ಆರಂಭದಂತೆ. ಚಿತ್ರದ ಆಶಯ ಇಲ್ಲಿಂದ ಬದುಕಲು ಆರಂಭಿಸುತ್ತದೆ. ಅಥವಾ ಸಿನಿಮಾ ಸಿನೆಮಿಕ್ ಆಗಿ ತೆರೆದುಕೊಳ್ಳಲು ಹವಣಿಸುವುದು ಇಲ್ಲಿಂದಲೇ.
 ಹಡಗು ಭಯಂಕರ ಚಂಡಮಾರುತಕ್ಕೆ ಸಿಲುಕುವ ಮತ್ತು ಮುಳುಗುವ ಭೀತಿ ಎದುರಿಸುವ ಮೂಲಕ ಚಿತ್ರಕ್ಕೆ ಅದ್ಭುತ ವೇಗವೊಂದು ದಕ್ಕುತ್ತದೆ. ಪೈ ತನ್ನದೇ ವಿಚಿತ್ರ ಕುತೂಹಲಗಳ ಚಡಪಡಿಕೆಯ ಹುಡುಗ. ಹೀಗಾಗಿ ಚಂಡಮಾರುತಕ್ಕೆ ಸಿಕ್ಕ ಹಡಗಿನ ಮೇಲ್ಮಹಡಿಗೆ ಬಂದಿರುತ್ತಾನೆ. ಹಡಗು ಭಯಂಕರ ದುರಂತಕ್ಕೆ ಅಣಿಯಾಗುತ್ತಿದೆ ಎನ್ನುವ ವಿಷಯ ಅವನ ಅನುಭವಕ್ಕೂ ಬರತೊಡಗಿರುತ್ತದೆ. ಅವನ ಮಟ್ಟಿಗೆ ಚಂಡಮಾರುತದ ಭೀಕರತೆ, ಕಡಲಿನ ಭೋರ್ಗರೆತ, ಅಪಾಯ, ಸಂಕಷ್ಟದ ಅಸಲಿ ಅನುಭವ!.. ಇಂಥ ಆಪತ್ತು ಕಣ್ಣಾರೆ ನೋಡುವುದು ಮತ್ತು ಅದಕ್ಕೆ ಒಡ್ಡಿಕೊಳ್ಳುವ ವಿಷಯಕ್ಕೆ ಸಂಬಂಧಿಸಿದಂತೆ ಅವನ ಕುತೂಹಲ, ಇದನ್ನೊಂದು ಅಪೂರ್ವ ಅವಕಾಶವೆಂದೇ ಭಾವಿಸಿಕೊಳ್ಳುತ್ತದೆ.
 ಓಹ್! ಬದುಕು ಕೂಡ ಇಂಥದೊಂದು ಸಾಹಸಕ್ಕೆ ಒಡ್ಡಿಕೊಳ್ಳುವದೇ ಆಗಿದೆ ಎನ್ನುವುದನ್ನು ಅಕ್ಷರಶಃ ರಿಯಲೈಜೇಶನ್ ಮಾಡಿಕೊಳ್ಳಲೇನು... ಎನ್ನುವ ಮನಸ್ಥಿತಿಯಲ್ಲಿ ಪೈ ಇರುವಾಗಲೇ ಹಡಗಿನ ಸಿಬ್ಬಂದಿ ಆತನನ್ನು ಎತ್ತಿ ಲೈಫ್ ಸೇವಿಂಗ್ ಬೋಟಿಗೆ ಹಾಕುತ್ತದೆ. ಆತ ಹೇಗೂ ಪ್ರಾಣಾಪಾಯದಿಂದ ಪಾರಾಗುತ್ತಾನೆ. ಆದರೆ ಇಡೀ ಕುಟುಂಬ ಹಡಗಿನ ಜತೆಗೇ ಕಣ್ಮುಚ್ಚುತ್ತದೆ. ಆತನ ಕಣ್ಮುಂದೆಯೇ!
 ಪೈ ಇಲ್ಲಿ ಅಸಹಾಯಕ.  ಸಹಜಗತಿಯಲ್ಲಿದ್ದ ಮನುಷ್ಯನನ್ನು ಹೀಗೆ ಒಂದು ಆಕಸ್ಮಿಕ ತಿರುವಿಗೆ ಸಿಕ್ಕಿಸಿ ಅಸಹಾಯಕತೆಗೆ ಒಡ್ಡುವ ಒಟ್ಟು ಬದುಕಿನ ಸವಾಲಿನ ಪರಿ ಇದೆಯಲ್ಲ! ಅದು ಆತನನ್ನು ಹೀಗೆ ಅಧೀರನನ್ನಾಗಿಸುತ್ತದೆ ಆ ಕ್ಷಣಕ್ಕೆ. ಆದರೆ, ಪೈ ಬದುಕಿನ ಈ ಸವಾಲನ್ನು ಎದುರಿಸಿ ತನ್ನ ಪಯಣ ಮುಂದುವರಿಸುತ್ತಾನೆ. ಇಲ್ಲಿಂದ ಆತನದೇ ಅನಿಸುವ ಅಸಲಿ ದುನಿಯಾ ಶುರುವಾಗುತ್ತದೆ. ಬದುಕು ಎನ್ನುವುದು ಇಂಥ ಹಲವು ಅನಿರೀಕ್ಷಿತ ತಿರುವುಗಳನ್ನು ಹೊಂದಿರುವಂಥ ಸಂಕೀರ್ಣ ಗುಣದ್ದು ಎನ್ನುವ ಸಹಜ ಗುಣಕ್ಕೆ ಪೈ ತಂತಾನೇ ಜಾರಿಕೊಳ್ಳುತ್ತಾನೆ. ಮುಂದಿನ ಎಲ್ಲ ಅವಘಡಗಳು, ಆಕಸ್ಮಿಕಗಳು, ಸಾಹಸಗಳು ಈಗ ಜೀವನ ಎನ್ನುವ ಸಾಗರದಲ್ಲಿ "ಈಜಬೇಕು ಇದ್ದು ಜೈಸಬೇಕು" ಎನ್ನುವ ನಿಲುವಿಗೆ ಪಯಣಿಸಿಬಿಡುತ್ತವೆ.
* * *
ದೋಣಿ ಮತ್ತದರಿಂದ ಹೊರಕ್ಕೆಇರುವ ಅಸೀಮ ಸಾಗರ, ಮೇಲೆ ವರ್ತುಲದಂತೆ ಕಾಣಿಸುವ ಕ್ಷಿತಿಜ! ತಾನೊಂದು ಕೇಂದ್ರ ಬಿಂದು ಎಂದುಕೊಳ್ಳುವ ಪೈ, ಈಗ ಈ ಕಷ್ಟದಿಂದ ಪಾರಾಗುವುದಕ್ಕೆ ತನ್ನದೇ ಸಾಹಸಗಳ ಕೈವಾರ ತೆಗೆದುಕೊಳ್ಳುತ್ತಾನೆ. ತನಗೆ ತೋಚುವ ಮಾರ್ಗಗಳನ್ನು ಕಂಡುಕೊಳ್ಳುತ್ತಾನೆ. ಈ ಬದುಕಿನ ಪರಿಧಿ ಅದೆಷ್ಟು ದೊಡ್ಡದಿದೆ! ಇಲ್ಲಿ ನಾವು ನಮಗೆ ತೋಚಿದಷ್ಟು ಎಳಕೊಂಡು ಅಡ್ಡಳತೆಗಳಲ್ಲಿ ಸಿಕ್ಕಿದ್ದನ್ನು ಅಪ್ಪಿಕೊಂಡು ನಮ್ಮದೇ ದಡ ಸೇರುವ ತವಕದಲ್ಲಿ ಬದುಕುತ್ತೇವೆ ಅಷ್ಟೇ ಎನ್ನುವ ಸತ್ಯ ನಮ್ಮೊಳಗಣ ಜಗತ್ತಿಗೆ ಅನಿಸಲಾರಂಭಿಸುತ್ತದೆ. ಚಿತ್ರದ ಬಹುಮುಖ್ಯ ಜೀವದ್ರವ್ಯಕ್ಕೆ ಇದೂ ಒಂದು ಅಮೂಲ್ಯ ತೊಟ್ಟು.
  * * *

 ಚಿತ್ರ ಪ್ರಮುಖ ಹಂತಕ್ಕೆ ಬಂದಾಗ ಪುಟ್ಟ ದೋಣಿಯಲ್ಲಿ ಈಗ ಬದುಕುಳಿದಿದ್ದು ಒಂದಷ್ಟು ಎಮರ್ಜೆನ್ಸಿ ಆಹಾರದ ಪೊಟ್ಟಣಗಳು, ಹೈನಾ ಅಂದರೆ ಕತ್ತೆಕಿರುಬ ಜೆಬ್ರಾ, ಹುಲಿ (ರಿಚರ್ಡ್ ಪಾರ್ಕರ್, ಬೆಂಗಾಲದ ಹುಲಿಗೆ ಇಟ್ಟ ಹೆಸರು) ಜತೆಗೆ ಈತ. ಈಗ ಆಹಾರ ಸರಪಳಿಯ ಚಿತ್ರಣ ಬಿಚ್ಚಿಕೊಳ್ಳಲಾರಂಭಿಸುವುದು ಹೈನಾ ತನ್ನ ಹಸಿವಿನಿಂದ ಜೆಬ್ರಾದ ಮೇಲೆರಗುವ ಮೂಲಕ. ಹೈನಾ ಎಲ್ಲ ಪ್ರತಿರೋಧಗಳ ನಡುವೆಯೂ ಜೆಬ್ರಾವನ್ನು ಆಹಾರವನ್ನಾಗಿಸಿಕೊಳ್ಳುತ್ತದೆ.
 ಅಲ್ಲಿಯತನಕ ಮಲಗೇ ಇದ್ದ ಹುಲಿಗೂ ಈಗ ಹಸಿವು. ನಾವಂದುಕೊಂಡ ಹಾಗೆ ಜಿಬ್ರಾಗೆ ಯಾವುದೋ ಪ್ರಾಣಿಗೆ (ಹೈನಾ) ಆಹಾರವಾಗೋದೇ ಕೆಲಸವಲ್ಲ. ಹಾಗೇ ಹುಲಿಯಂಥ ಪ್ರಾಣಿಗೆ ಅನ್ಯ ಪ್ರಾಣಿಗಳನ್ನು ತಿನ್ನುವುದೇ ಕೆಲಸವೇನಲ್ಲ. ಆಹಾರವನ್ನು ವ್ಯವಸ್ಥೆ ಮಾಡಿಕೊಳ್ಳುವ ಅನಿವಾರ್ಯದ ವಿಧಾನ ಅಥವಾ ಅವುಗಳ ಹಸಿವಿನ ಸಹಜ ಪರಿ ಇದು. ಹುಲಿಗೆ ಹೊಟ್ಟೆ ತುಂಬಿದ ಸಂದರ್ಭಗಳಲ್ಲಿ ಯಾವುದೇ ಪ್ರಾಣಿ ಹತ್ತಿರದಲ್ಲಿದ್ದರೂ ಅದಕ್ಕೆ ಅದು ಬೇಟೆಯಾಗಿ ಕಾಣಿಸೋದೇ ಇಲ್ಲ. ಆದರೆ ಹಸಿವಾದೊಡೆ? ಎದುರಿಗಿರುವುದೆಲ್ಲ ಮೃಷ್ಟಾನ್ನ ಭೋಜನಕ್ಕೊಂದು ಬೇಟೆ. ಇದು ನಿಸರ್ಗ ನಿಯಮ. ಹೀಗಾಗಿ ಹೈನಾ ತನ್ನ ಹಸಿವು ನೀಗಿಸಲು ಜಿಬ್ರಾವನ್ನು ತಿಂದು ಮುಗಿಸಿದರೆ, ಹುಲಿಗೆ ಈ ಹೈನಾ ಒಂದು ಸಹಜ ಬೇಟೆ. ಅದು ಹೈನಾವನ್ನು ಆಹಾರವನ್ನಾಗಿಸಿಕೊಳ್ಳುತ್ತದೆ.
* * *
 ಹಸಿವು ಹಿಂಗಿದ ನಂತರ ಕೆಲಹೊತ್ತು ಮೌನವಾಗುವ ರಿಚರ್ಡ್ ಪಾರ್ಕರ್ ಗೆ ಮತ್ತೆ ಹಸಿವು! ಈಗ ದೋಣಿಯಲ್ಲಿ ಅದಕ್ಕೆ ಬೇಟೆಗಳೇ ಇಲ್ಲ.  ದೋಣಿಯಲ್ಲಿ ಈಗ ಇರೋದು ಪಾರ್ಕರ್ ಮತ್ತು ಪೈ... ಇಬ್ಬರ ನಡುವೆ ಅದೆಂಥ ಜಟಾಪಟಿ ನಡೆಯಬಹುದು... ಎನ್ನುವುದು ನಮ್ಮ ಸಹಜ ಕುತೂಹಲವಾಗಿಬಿಡುತ್ತದೆ. ಸರ್ವೈವಲ್ ಆಫ್ ದಿ ಫಿಟೆಸ್ಟ್... ಡಾರ್ವಿನ್ ಸಿದ್ಧಾಂತ ಇಲ್ಲಿ ತಟ್ಟನೆ ನೆನಪಾಯಿತು. ಮುಗ್ಧ ಪ್ರಾಣಿಗಳಿಗೆ ನಿಸರ್ಗ ಸಹಜ ಬೆಳೆಗಳು ಆಹಾರವಾದರೆ ಇವುಗಳ ನಿಯಂತ್ರಣಕ್ಕೆ ಎಂಬಂತೆ ವನ್ಯಪ್ರಾಣಿಗಳಿಗೆ ಇವೇ ಆಹಾರವಾಗುವುದು ಈ ಸಿದ್ಧಾಂತದ ಒಂದು ಕ್ರೌರ್ಯವೂ ಹೌದು. ಸಹಜ ಧರ್ಮವೂ ಹೌದು. ಹಾಗೆಯೇ ನಿಸರ್ಗಕ್ಕೆ ಎಲ್ಲವನ್ನು ಸಲಹುವ ಗುಣವಿದೆ ಎಂದು ಹೇಳಲು ಹಸಿದ ಪಾರ್ಕರ್ ಮತ್ತು ಪೈ ಗೆ ಪಯಣದ ನಡುವೆ ಹಾರುವ ಮೀನುಗಳು ಎದುರಾಗುತ್ತವೆ. ಅವೇ ಈಗ ಹಸಿದ ಹುಲಿಗೂ ಮತ್ತು ಪೈಗೂ ಆಹಾರ. ಮಳೆ ನೀರು ಬಾಯಾರಿಕೆಯ ದಾಹ ತಣಿಸುತ್ತದೆ. ತಟ್ಟನೆ ನೆನಪಾಗಿದ್ದು ಈ ಸಾಲು-  'ಅಡಿಗಡಿಗೆ ಅನ್ನವನಿಕ್ಕವನ್ಯಾರೋ?...' ಇದು ನಿಸರ್ಗದ ಜೀವಕಾರುಣ್ಯ. ನಮ್ಮನ್ನು ಕೂಡ ಸಲಹುತ್ತಿರುವುದು ಇದೇ ಜೀವಕಾರುಣ್ಯವಲ್ಲವೇ?

* * *
 ಚಿತ್ರದ ಮುಂದಿನ ಹಂತದಲ್ಲಿ ಮತ್ತೆ ವರ್ತುಲದ ಸಿದ್ಧಾಂತ, ಸಹಬಾಳ್ವೆ, ಸಹಿಷ್ಣುತೆ ಮತ್ತು ನಿಸರ್ಗದ ತರ್ಕಗಳು ಬಿಚ್ಚಿಕೊಳ್ಳುತ್ತವೆ.  ಪಾರ್ಕರ್ ಈಗ ಪೈಗೆ ಸವಾಲಾಗುವಂತೆ ಬೆಳೆದು ನಿಂತಿದ್ದಾನೆ. ಮತ್ತೆ ಹಸಿವು ಅವನ ಕಂಗೆಡಿಸಿರುತ್ತದೆ. ಅಥವಾ ಈ ಅತಂತ್ರ ಬದುಕಿನಿಂದ ಮುಕ್ತಿಗಾಗಿ ಅದು ಕಾತರದಿಂದ ಕಾದು ನಿಂತಿರುತ್ತದೆ. ಪೈ ಸ್ಥಿತಿಯೂ ಇದಕ್ಕೆ ಭಿನ್ನವಲ್ಲ. ಪೈ ಈಗ ಹುಲಿಯನ್ನು ಕೊಂದು ತಾನೊಬ್ಬನೇ ದೋಣಿಯಲ್ಲಿ ತೇಲಿ ಹೋಗಬಹುದಿತ್ತು. ಆದರೆ ಈ ಪರಿಸರದಲ್ಲಿ ಮನುಷ್ಯ ಪ್ರಾಣಿಯ ಉದ್ದೇಶಗಳನ್ನು ಹೇಳುವುದು ಚಿತ್ರದ ಉದ್ದೇಶವಿದ್ದಂತಿದೆ.  ಹೀಗಾಗಿ ನಿರ್ದೇಶಕ ಒಟ್ಟು ಜೀವಪರಿಸರದಲ್ಲಿ ಮನುಷ್ಯನ ಜವಾಬ್ದಾರಿಗಳನ್ನು ಸೂಕ್ಷ್ಮವಾಗಿ ಹೇಳಲೆತ್ನಿಸಿದ್ದಾನೆ ಎನ್ನುವುದು ಇಲ್ಲಿ ಸ್ಪಷ್ಟವಾಗುತ್ತದೆ.


ಒಂಟಿ ಪಯಣಕ್ಕಿಂತ ಅಪಾಯಕಾರಿಯಾದರೂ ಸರಿ ಹುಲಿಯಂಥದೊಂದು ಪ್ರಾಣಿ ಸಾಥ್ ಇದೆಯಲ್ಲ ಎನ್ನುವುದು ಆ ಸಾಗರದ ಅಲೆಗಳ ಮೇಲೆ ತೇಲುವುದಕ್ಕೆ ಒಂದು ಧೈರ್ಯ ಎನ್ನುವುದು ಪೈ ನ ಮತ್ತೊಂದು ತರ್ಕ. ಪೈ ಆ ದೋಣಿಯಿಂದ ಹೊರಕ್ಕೆ ಬೇರೆ ವ್ಯವಸ್ಥೆ ಮಾಡಿಕೊಂಡು ಅದರಲ್ಲಿ ತೇಲಲಾರಂಭಿಸುತ್ತಾನೆ. ಆದರೂ ದೋಣಿಯ ಅಟ್ಯಾಚಮೆಂಟ್ ಅವನಿಗೆ ಬೇಕೇ ಬೇಕು. ಪಾರ್ಕರ್ ಅಲ್ಲಿದ್ದಾನೆ ಎನ್ನುವ ಧೈರ್ಯವೂ ಒಂದೆಡೆ. ಇಬ್ಬರಲ್ಲೂ ಒಂದರ್ಥದ ಹೊಂದಾಣಿಕೆ, ಸಹಬಾಳ್ವೆಯ ಮಹತ್ವ ಅರ್ಥವಾದಂತಿದೆ ಎಂತಲೂ ಅನಿಸುತ್ತದೆ. ಒಂದು ಖಾಸಗಿ ಝೂ ಮಾಲೀಕನ ಮಗನಾಗಿ ಬೆಳೆದಿದ್ದರಿಂದ ಪ್ರಾಣಿಗಳ ಜತೆಗಿನ ಪೈ ಬದುಕು ಅತ್ಯಂತ ಸಹಜವಾದ್ದು. ಪಾರ್ಕರ್ ಪಳಗಿಸುವ ವಿದ್ಯೆಯೂ ಪೈಗೆ ಗೊತ್ತು. ಹೀಗಾಗಿ ಅದನ್ನು ಪಳಗಿಸಿ ಸಹಜೀವನಕ್ಕೆ ಪ್ರೇರೇಪಿಸುವ ಆತನ ಯತ್ನ  ಇಲ್ಲಿ ಒಂದು ಮನೋಜ್ಞತೆಯನ್ನು ಕಟ್ಟಿಕೊಟ್ಟಿದೆ.

* * *
  ಪೈ ಸಾಗರದ ಮೇಲೆ ತೇಲುತ್ತ ಮೇಲೆ ಆಕಾಶವನ್ನು ದಿಟ್ಟಿಸುತ್ತಾನೆ. ಅಗಣಿತ ತಾರಾಗಣಗಳ ನಡುವೆ... ತಾನಿರುವಂತೆ ಕಲ್ಪಸಿಕೊಳ್ಳಲು ಅವನಿಗಿಲ್ಲಿ ಅವಕಾಶವಿದೆ. ಅದೆಷ್ಟು ಅಸಂಖ್ಯ ನಕ್ಷತ್ರಗಳು! ನಾವು ಕಾಣುತ್ತಿರುವ ಆಕಾಶಕ್ಕೂ ಮಿಗಿಲಾದ್ದು ಈ ಯೂನಿವರ್ಸ ನಲ್ಲಿ ಇನ್ನೂ ಏನೇನೋ ಇದೆ. ನಮಗೆ ಕಾಣಿಸುವ ಸೂರ್ಯನಂಥ ಹಲವಾರು ನಕ್ಷತ್ರಗಳು, ನಕ್ಷತ್ರಪುಂಜಗಳು, ಸೂರ್ಯರಶ್ಮಿ ಅಲ್ಲಿವೆ. ನಮ್ಮ ಕಣ್ಣಿಗೆ ಬೀಳುವ ಚುಕ್ಕೆ, ಚಂದ್ರಮರೂ ಇನ್ನೂ ಹಲವಾರು. ನಮ್ಮ ಕಲ್ಪನೆಗೂ ನಿಲುಕದ್ದು ಇದು.
ಪೈ ತನ್ನ ಓದಿನಿಂದ ಕಂಡ ಆಕಾಶಕ್ಕೂ ಅನುಭವದಿಂದ ಕಂಡುಕೊಂಡ ಆಕಾಶಕ್ಕೂ ಎಂಥ ವ್ಯತ್ಯಾಸ! ಅಸಲಿಯಲ್ಲಿರುವ ಆಕಾಶ ಎಷ್ಟು ಅದ್ಭುತ. ನಮ್ಮ ಶಿಕ್ಷಣದ ಚೌಕಟ್ಟಿನಲ್ಲಿ ಕಟ್ಟಿಕೊಡುವ ಆಕಾಶ ಅದೆಷ್ಟು ಕುಬ್ಜ.
 ನಾವು ಕಾಣದ ಅಥವಾ ಅನುಭವಕ್ಕೆ ಬಾರದ ಪರಿಸರದ ಜೀವವೈವಿಧ್ಯ ಅದೆಷ್ಟು ಇನ್ನೂ ಈ ಭೂಮಿ ಮೇಲಿದೆ... ಸಾಗರದ ಆಳ, ಅದರೊಡಲಲ್ಲಿ ಜಲ್ಲಿ ಫಿಶ್ ಮತ್ತಿತರ ಜಲಚರ ಪ್ರಾಣಿಗಳ ವೈವಿಧ್ಯ ಲೋಕ... ಓಹ್ ಇಂಥ ಅದ್ಭುತ ರಮ್ಯಲೋಕವೊಂದು ಚಿತ್ರದ ಈ ಹಂತದಲ್ಲಿ ಬಂದು ಹೋಗುತ್ತದೆ. ಸಾಗರದ ಆಳ ತೋರಿಸುವಾಗ, ಕಾರ್ನಿವ್ಹೋರಸ್ ವೈವಿಧ್ಯ ತೋರಿಸುವ ದೃಶ್ಯಗಳಲ್ಲಿ ಡಿಜಿಟಲ್, ಗ್ರಾಫಿಕ್ಸ್ ತಂತ್ರಜ್ಞಾನದ ಬಳಕೆ ಕಲಾತ್ಮಕವಾಗಿರುವುದರಿಂದ ಚಿತ್ರ ಆಪ್ತವಾಗುತ್ತ ಸಾಗುತ್ತದೆ.


* * *
 ಕಡೆಯ ದೃಶ್ಯದಲ್ಲಿ 227 (ಪೈ ಬೆಲೆ 22/7 ಮತ್ತು ಸಂಖ್ಯೆ  227 ಅನ್ನು ಗಮನಿಸಿ) ದಿನಗಳನ್ನು ನೀರಿನಲ್ಲೇ ಕಳೆಯುವ ಪೈ ಅಂತೂ ದಡ ಸೇರಿಕೊಳ್ಳುತ್ತಾನೆ. ಬೆಂಗಾಲ್ ಟೈಗರ್ ರಿಚರ್ಡ್ ಪಾರ್ಕರ್ ಗೆ ಅದರ ಕಾಡು ಸಿಗುತ್ತದೆ. ಇವರಿಬ್ಬರನ್ನು ನೀರಿನ ಅಲೆಗಳಲ್ಲಿ ತೇಲಿಸಿಕೊಂಡು ಬಂದ ದೋಣಿ, ದಡದಲ್ಲೇ ಇದೆ.  ನೀರು, ಆಕಾಶ ಅವುಗಳ ಜಾಗದಲ್ಲಿ ಹಾಗೇ ಇವೆ. ಮನುಷ್ಯ ಮತ್ತು ಪ್ರಾಣಿ ತಮ್ಮ ಜತೆಗೆ ಅವನ್ನು ಸಂಬಂಧಿಸಿಕೊಂಡಾಗ ಮಾತ್ರ ಅವುಗಳ ಅಸ್ತಿತ್ವಕ್ಕೆ ಬೇರೆಯದೇ ಆಯಾಮ ಬಂದುಬಿಡುತ್ತದೆ.
 ಹೇಗೆ ಗಣಿತದ ಪ್ರಕಾರ ಪೈ (22/7) ಗೆ ಸಾಮಾನ್ಯವಾದ ಫ್ರ್ಯಾಕ್ಷನ್ ಇಲ್ಲವೋ (ಅದರ ಮೌಲ್ಯ ಅಥವಾ ಶೇಷ 3.14..... ಎಂದಷ್ಟೇ ಗಣಿತ ಸೂತ್ರಗಳಲ್ಲಿ ಇದು ಬಳಕೆಯಾಗುತ್ತದೆ.) ಹಾಗೆಯೇ ಜೀವಸಂಕುಲ ಮತ್ತು ನಿಸರ್ಗಕ್ಕೆ ಅಂತ್ಯವೆನ್ನುವುದು ಇಲ್ಲ. ಬದುಕೂ ಕೂಡ ಹೀಗೇ. ಅದಕ್ಕೆ ಇಂಥದೇ ಅನ್ನುವಂಥ ಫ್ರೇಮ್ ಅಥವಾ ಚೌಕಟ್ಟು ಇಲ್ಲ. ನಾವೆಳೆದುಕೊಂಡ (ವರ್ತುಲಕ್ಕೆ ಎಳೆಯುವ ವ್ಯಾಸದಂತೆ) ಸೀಮಿತದಲ್ಲಿ ಅದನ್ನು ನೋಡಲೆತ್ನಿಸುತ್ತೇವೆ, ಅಥವಾ ಬದುಕು ಇಷ್ಟೇ ಎನ್ನುವ ಮಿತಿಗೊಳಪಟ್ಟುಕೊಳ್ಳುತ್ತೇವೆ. ನಮ್ಮ ಮಿತಿಯ ಒಟ್ಟು ಬದುಕೆಂಬ ಪರಿಧಿಗೆ ನಾವು ನಮ್ಮದೇ ಚೌಕಟ್ಟು ಕಟ್ಟಿಕೊಳ್ಳಲು ಹೆಣಗುತ್ತೇವೆ ಅಷ್ಟೇ. ನಾವಂದುಕೊಂಡ ಸೀಮಿತ ಪರಿಧಿಯಾಚೆಗೂ ಬದುಕಿನ ವಿಸ್ತಾರವಿದೆ. ಹೇಗೆ ವರ್ತುಲಕ್ಕೆ ಚಚೌಕ ಕಟ್ಟಲಾಗದೋ (It is impossible to square the circle) ಹಾಗೆಯೇ ಬದುಕಿಗೆ ನಮ್ಮದೇ ಫ್ರೇಮ್ ಹಾಕುವುದು ಅಸಾಧ್ಯ. ಇದೊಂದು Mysticism ಅನಿಸಲೂಬಹುದು. ನಾಗರಿಕತೆಗಳು, ದೇಶ, ಕಾಲ, ಸಾಮಾಜಿಕ ಮೌಲ್ಯಗಳು, ಶಿಕ್ಷಣ, ಎಕಾನಮಿ, ಧರ್ಮಗಳು ಕೂಡ ಫ್ರೇಮಿಂಗ್ ಕಾನ್ಸೆಪ್ಟ್ ಗಳೇ. ಇವೆಲ್ಲ ಈತನಕ ಚಚೌಕ (ಫ್ರೇಮ್) ಹಾಕುವ ಕೆಲಸ ಮಾಡಿಕೊಂಡೇ ಬರುತ್ತಿವೆ. ನಿಸ್ಸಂಧೇಹವಾಗಿ ಇದು ಒಂದರ್ಥದ Rigidity ಅಲ್ಲವೇ?  ಇಂಥ ರಿಜಿಡಿಟಿ ಮತ್ತು ಫ್ರೇಮ್ ಗಳೆಲ್ಲವನ್ನು ಈ ಚಿತ್ರ ಡಿ-ಫ್ರೇಮ್ ಮಾಡುತ್ತದೆ.



ಅಡಿ ಟಿಪ್ಪಣಿ:
* (ಇಂಟಲೆಕ್ಚುಯಲ್, ಇಂಟೆಲಿಜೆಂಟ್ ಅನ್ನೋದಕ್ಕೆ ಹೀಗೊಂದು ಪದ ಬಳಕೆ)  

** ಪಿಸ್ಸಿನ್ ಮಾಲಿಟಾರ್:  ಆರ್ಕಿಟೆಕ್ಟರ್ ಲೂಸಿಯಾನ್ ಪೊಲೆಟ್ ಈ ಸ್ವಿಮ್ಮಿಂಗ್ ಪೂಲ್ ಅನ್ನು 1929ರಲ್ಲಿ ರೂಪಿಸಿದ್ದು. ಫ್ರಾನ್ಸ್ ನಲ್ಲಿ ಹಲವು ಸಾರ್ವಜನಿಕ ಈಜುಕೊಳಗಳು 1920 ಮತ್ತು 30ರ ದಶಕದಲ್ಲಿ ದಂಡಿಯಾಗಿ ರೂಪುಗೊಂಡವಂತೆ. ಆಗ ಫ್ರಾನ್ಸ್ ನ ಎಷ್ಟೋ ಮನೆಗಳಲ್ಲಿ ಸ್ನಾನದ ಕೋಣೆಗಳೇ ಇರಲಿಲ್ಲವಂತೆ! ಹೀಗಾಗಿ ಈ ಈಜುಕೊಳಗಳಲ್ಲಿ ಸಾರ್ವಜನಿಕರಿಗೆ ಸ್ನಾನದ ಅವಕಾಶವೂ ಇತ್ತಂತೆ. ಹಾಗಂತ ಒಂದು ಪುಟ್ಟ ಇತಿಹಾಸ ಹೇಳುತ್ತದೆ. 1989ರಿಂದ ಈ ಪಿಸ್ಸಿನ್ ಮಾಲಿಟಾರ್ ಈಜುಕೊಳ ಕಾಂಪ್ಲೆಕ್ಸ್ ಮುಚ್ಚಿತ್ತು. ಅದೀಗ ರಾಷ್ಟ್ರೀಯ ಪರಂಪರೆಯ ಪ್ರತೀಕವೂ ಆಗಿದೆ. ಅಲ್ಲಿನ ಸರ್ಕಾರ ಅದನ್ನು ಸ್ಮಾರಕ ಎಂದೂ ಘೋಷಿಸಿತ್ತು. ಆದರೆ ಈಗ ಇದರ ನವೀಕರಣದ ಯೋಜನೆಯೂ ಜಾರಿಯಲ್ಲಿದೆ. ಪ್ಯಾರಿಸ್ ಮೇಯರ್ ಇದಕ್ಕೆ ಸಂಬಂಧಿಸಿದ ಯೋಜನೆಯನ್ನು ಅಕರ್ ಬಾಯಗೊಸ್ ಎನ್ನುವ ಕನಸ್ಟ್ರಕ್ಷನ್ ಕಂಪೆನಿಗೆ 67 ದಶಲಕ್ಷ ಪೌಂಡ್ ಬಜೆಟ್ ನಿಗದಿಗೊಳಿಸಿ ಮಂಜೂರಾತಿ ಕೂಡ ನೀಡಿದ್ದಾರೆ. 2012ರಲ್ಲಿ ಇದು ಸಂಪೂರ್ಣ ನವೀಕರಣಗೊಳ್ಳುವ ಮೂಲಕ ಹೊಸದೊಂದು ನಾಗರಿಕತೆಗೆ ಸಾಕ್ಷಿಯಾಗಬೇಕೆಂಬುದು ಯೋಜನೆಯ ಉದ್ದೇಶವಾಗಿತ್ತು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮನುಷ್ಯ ಜಾತಿ ತಾನೊಂದೇ ವಲಂ...

ಭಾರತದಲ್ಲಿ ಜಾತಿ ವ್ಯವಸ್ಥೆ ಹೇಗೆ ಹುಟ್ಟಿತು ಎಂಬುದಕ್ಕೆ ಯಾವುದೇ ನಿರ್ಧಿಷ್ಟ ಥಿಯರಿ ಇಲ್ಲ. ಆದರೆ, ಇಲ್ಲಿನ ವರ್ಗ ಸೃಷ್ಟಿ ಮಾತ್ರ ಇರಾನ್ ವ್ಯವಸ್ಥೆಯಂತೇ ಇದೆ.  ಪುರಾತನ ಇರಾನಿನ ಚರಿತ್ರೆಯಲ್ಲಿ ಇಂಥದೊಂದು ವ್ಯವಸ್ಥೆ ಇತ್ತು. ಅದಕ್ಕೆ ಪಿಸ್ತ್ರಾಸ್ ಎನ್ನುತ್ತಾರೆ. ನಮ್ಮಲ್ಲಿ ಅದು ಚಾತುರ್ವರ್ಣವಾಗಿದೆ. ಅಲ್ಲಿ ಅಥ್ರವಾನ್ಸ್ (ಪ್ರೀಸ್ಟ್ ಕ್ಲಾಸ್), ರಥೈಸ್ತಾ (ವಾರಿಯರ್ಸ್), ವಸ್ತ್ರಿಯಾ (ಮರ್ಕಂಟೈಲ್ ಕ್ಲಾಸ್) ಮತ್ತು ಹ್ಯುತಿ (ಆರ್ಟಿಸನ್) ಎನ್ನುವ ವರ್ಗ ವ್ಯವಸ್ಥೆ ಇದೆ. ನಮ್ಮಲ್ಲಿ ಇದನ್ನು ಕಲ್ಪಿಸಿಕೊಂಡರೆ ಪುರೋಹಿತ ಅಥವಾ ಬ್ರಾಹ್ಮಣ (ಅಥ್ರವಾನ್ಸ್), ಕ್ಷತ್ರಿಯ  (ರಥೈಸ್ತಾ), ವೈಶ್ಯ  (ವಸ್ತ್ರಿಯಾ) ಮತ್ತು ಶೂದ್ರ (ಹ್ಯುತಿ) ಎಂದು ಅರ್ಥೈಸಿಕೊಳ್ಳಬಹುದು.  ಆದಿ ಕಾಲದ ಇರಾನಿಯನ್ ವ್ಯವಸ್ಥೆ ಹೀಗೇ ಇತ್ತು. ಅದೇ ನಾಲ್ಕು ವರ್ಗಗಳು ಭಾರತದಲ್ಲೂ ಈಗಲೂ ಚಾಲ್ತಿಯಲ್ಲಿವೆ. ಹೀಗೆ ಒಂದು ಇರಾನ್ ಸಂಬಂಧ ಭಾರತಕ್ಕಿದೆ. ಚರ್ಮದ ಬಣ್ಣ, ನಯ ನಾಜೂಕು, ಕಣ್ಣು, ಬುದ್ಧಿವಂತಿಕೆಯನ್ನು ಹೋಲಿಸಿದರೆ ಭಾರತದ ಅದರಲ್ಲೂ ಉತ್ತರ ಭಾರತದ ಕಾಶ್ಮೀರಿ ಪಂಡಿತರು, ಉತ್ತರ ಪ್ರದೇಶದ ಪಂಡಿತ್, ಚಿತ್ಪಾವನ ಬ್ರಾಹ್ಮಣರು, ನಮ್ಮ ಕರಾವಳಿ ಮತ್ತು ಉತ್ತರ ಕನ್ನಡದ ಹವ್ಯಕರು ಹೆಚ್ಚೂ ಕಮ್ಮಿ ಇರಾನಿಗಳನ್ನು ಹೋಲುತ್ತಾರೆ (ಮೇಲ್ನೋಟಕ್ಕೆ).  ಬಹುಶಃ ಹೀಗೂ ಆಗಿರಬಹುದು, ಆಗ ಇರಾನ್ ನಲ್ಲಿ ಕ್ರೈಸ್ತ ಮತ್ತು ಇಸ್ಲಾಂ ಮುಂಚೆಯೂ ಹಲವಾರು ಸುಧಾರಣಾವಾದಿಗಳ ಅಥವಾ ಬಂಡುಕೋರರ

"ಮಣೆಗಾರ" ಬಸಿದಿಟ್ಟ ಒಡಲಾಳದ ನೋವು ನೆನೆದು...

ಹಾಲ್ಕುರಿಕೆ ಥಿಯೇಟರ್ ಕಾನ್ಸೆಪ್ಟ್ ಕನ್ನಡ ರಂಗಭೂಮಿಯಲ್ಲಿ ಹೊಸದೊಂದು ಸಂಚಲನವನ್ನುಂಟು ಮಾಡುತ್ತಿದೆ. ಒಟ್ಟಾರೆ ಭಾರತೀಯ ರಂಗಭೂಮಿ ಕಾಣುತ್ತಿರುವ ಹೊಸತನಕ್ಕೆ ಇದು ಮುಖ್ಯವಾದ ಸಾಕ್ಷಿ. ಅತ್ಯಂತ ಕ್ರಿಯಾಶೀಲ ತುಡಿತದ ರಂಗಕರ್ಮಿ ಹಾಲ್ಕುರಿಕೆ ಶಿವಶಂಕರ (ನಿರ್ದೇಶಕ/ನಾಟಕಕಾರ) ಇತ್ತೀಚೆಗೆ "ಮಣೆಗಾರ" (ತುಂಬಾಡಿ ರಾಮಯ್ಯನವರ ಆತ್ಮಕಥೆ) ಎನ್ನುವ ದಲಿತ ಕಥಾನಕವೊಂದನ್ನು ರಂಗದ ಮೇಲೆ ಅನಾವರಣಗೊಳಿಸಿದರು. ಪ್ರಯೋಗದ ದೃಷ್ಟಿಯಿಂದ ಕೆಲವು ಕೊರತೆಗಳು, ದೋಷಗಳು ಇವೆ. ಅದು ಯಾವುದೇ ಪ್ರಯೋಗಕ್ಕೆ ಇರುವಂಥವೇ. ಆದರೆ ಸಮುದಾಯವೊಂದರ ಒಡಲಾಳದ ನೋವನ್ನು ರಂಗದ ಮೇಲೆ ಬಸಿದಿಟ್ಟಾಗ  ಬೆಚ್ಚಿ ಬೀಳುವಂತಾಯಿತು. ವಿಶೇಷವಾಗಿ ದಲಿತೇತರಲ್ಲಿ ಸಾಮಾಜಿಕ ಪ್ರಜ್ಞೆ, ಜವಾಬ್ದಾರಿಯನ್ನು ಬಡಿದೆಬ್ಬಿಸುವಂಥ ಕಥಾನಕವದು. "ಮಣೆಗಾರ" ಪ್ರೊಸಿನಿಯಂಗಿಂತ ಆಪ್ತರಂಗಭೂಮಿಗೆ ಸೂಕ್ತವಾದ ವಸ್ತು. ಪ್ರಯೋಗ ಒಟ್ಟಾರೆ ಮನುಷ್ಯ ಬದುಕಿನ ನಡುವಿರುವ ಗ್ರೇ ಏರಿಯಾವೊಂದರ ದರುಶನ ಮಾಡಿಸಿತು. ಮೇಲ್ವರ್ಗ ಸಹಮಾನವರನ್ನು ಅದು ಹೇಗೆ ಅಸ್ಪೃಶ್ಯರು ಎಂದು ದೂರಕ್ಕಿಟ್ಟಿತ್ತು, ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿತ್ತು ಎನ್ನುವುದು ಇದರ ಮೂಲ ಸಂಕಟ. ಇಡೀ ನಾಟಕದಲ್ಲಿ ಬದುಕಿಗಾಗೇ ಸಂಘರ್ಷವಿದೆ. ಆಹಾರಕ್ಕಾಗಿ ಹಾಹಾಕಾರವಿದೆ. socio-cultural  ನೆಲೆಯಲ್ಲಿ ದೊಡ್ಡ ಸಂಘರ್ಷವಿದೆ. ಇದು ರಾಜಕೀಯ ಆಯಾಮದಲ್ಲೂ ಬಹುಮುಖ್ಯವಾದ ಸಂಘರ್ಷವೇ. ಶಿಕ್ಷಣ ಮತ್ತು ಅದರ ಆಧಾರದಲ್ಲಿ ಹುಟ

"ಬದುಕು-ಬಯಲು" ನಾಟಕ ಮತ್ತು ಮಾನವೀಯ ನೆಲೆಯ ಹುಡುಕಾಟ

ಫ್ರಾನ್ಸ್ ನ ಬರಹಗಾರ ಅಲ್ಫ್ರೆಡ್ ಜೆರಿ ಬರೆದ 'ದಿ ಸೂಪರ್ ಮೇಲ್' ಎನ್ನುವ ಕಾದಂಬರಿಯ ಪ್ರೊಟಗಾನಿಸ್ಟ್ ಆ್ಯಂಡ್ರಿ ಮಾರ್ಕೆಲ್ ಒಬ್ಬ ಜಂಟಲ್ ಮನ್, ವಿಜ್ಞಾನಿ ಕೂಡ. ಅವನಿಗೆ ಮಾನವ ಸಾಮರ್ಥ್ಯಕ್ಕೆ ಮಿತಿ ಎಂಬುದೇ ಇಲ್ಲ ಎನ್ನುವುದರಲ್ಲಿ ಬಲವಾದ ನಂಬಿಕೆ. ಆತ ಉಗಿಬಂಡಿ ಜತೆಗೂ ಯಾವುದೇ ವಿಶ್ರಾಂತಿ ಮತ್ತು ತ್ರಾಸಿಲ್ಲದೇ ಕ್ರಮಿಸಿ  ರೇಸ್ ಗೆಲ್ಲಬಲ್ಲ (ಕಾದಂಬರಿಯಲ್ಲಿ ರೈಲು ಮತ್ತು ಸೈಕ್ಲಿಸ್ಟ್ ನಡುವೆ ಒಂದು ರೇಸ್ ನಡೆಯುತ್ತದೆ). ಒಂದೇ ಹೆಂಗಸಿನ ಜತೆ 24 ಗಂಟೆಗಳಲ್ಲಿ 82 ಬಾರಿ ಸಂಭೋಗ ನಡೆಸಬಲ್ಲ 'ಕಾಮಪಟುತ್ವ'ದ ಸಾಹಸಗಳನ್ನೂ ಮಾಡಬಲ್ಲ. ಇದನ್ನು ಪುರುಷಪರಾಕ್ರಮದ ನೆಲೆಯಲ್ಲಿ ನೋಡೋದಾ? ಇಲ್ಲಾ ನಿಸರ್ಗ ಸಹಜ ಸಾಧ್ಯತೆಯ ನೆಲೆಯಲ್ಲಿ ನೋಡುವುದಾ?... - ಇದು ಒಂದು ರೀತಿಯ ವಿಕ್ಷಿಪ್ತ ಮನೋಧರ್ಮದ, ಸೈನ್ಸ್ ಫಿಕ್ಷನ್ ಕಾದಂಬರಿಯ ಸಂಕ್ಷಿಪ್ತ ನೋಟ. ಅಲ್ಫ್ರೆಡ್ ಜೆರಿ ಉತ್ತಮ ನಾಟಕಕಾರನೂ ಹೌದು. ಆತನ 'ಉಬು ರೊಯ್' ಹೆಸರಾಂತ ನಾಟಕಗಳಲ್ಲೊಂದು.    * * * ಜೆರಿ ಬಗ್ಗೆ ಓದುತ್ತಿದ್ದ ಹೊತ್ತಲ್ಲಿ ಹಿಜಡಾವೊಬ್ಬರ ಆತ್ಮಕಥನ ಆಧರಿಸಿದ "ಬದುಕು-ಬಯಲು" ಎನ್ನುವ ನಾಟಕ ವೀಕ್ಷಣೆಗೆ ತಿಪಟೂರಿನ ರಂಗ ಗೆಳೆಯ ನೀನಾಸಂ ಚಂದ್ರು ಆಹ್ವಾನ ನೀಡಿದರು.  ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ ನೋಡಿದೆ. ಅದಕ್ಕೂ ಮುಂಚೆ ನಾಟಕದ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಸಿ.ಎಸ್. ದ್ವಾರಕಾನಾಥ್, ಗೌರಿ ಲಂಕೇಶ್ ಮತ್ತಿತರ ಚಿಂತಕರ ವಿ