ಭಾರತದಲ್ಲಿ ಜಾತಿ ವ್ಯವಸ್ಥೆ ಹೇಗೆ ಹುಟ್ಟಿತು ಎಂಬುದಕ್ಕೆ ಯಾವುದೇ ನಿರ್ಧಿಷ್ಟ ಥಿಯರಿ ಇಲ್ಲ. ಆದರೆ, ಇಲ್ಲಿನ ವರ್ಗ ಸೃಷ್ಟಿ ಮಾತ್ರ ಇರಾನ್ ವ್ಯವಸ್ಥೆಯಂತೇ ಇದೆ.
ಪುರಾತನ ಇರಾನಿನ ಚರಿತ್ರೆಯಲ್ಲಿ ಇಂಥದೊಂದು ವ್ಯವಸ್ಥೆ ಇತ್ತು. ಅದಕ್ಕೆ ಪಿಸ್ತ್ರಾಸ್ ಎನ್ನುತ್ತಾರೆ. ನಮ್ಮಲ್ಲಿ ಅದು ಚಾತುರ್ವರ್ಣವಾಗಿದೆ. ಅಲ್ಲಿ ಅಥ್ರವಾನ್ಸ್ (ಪ್ರೀಸ್ಟ್ ಕ್ಲಾಸ್), ರಥೈಸ್ತಾ (ವಾರಿಯರ್ಸ್), ವಸ್ತ್ರಿಯಾ (ಮರ್ಕಂಟೈಲ್ ಕ್ಲಾಸ್) ಮತ್ತು ಹ್ಯುತಿ (ಆರ್ಟಿಸನ್) ಎನ್ನುವ ವರ್ಗ ವ್ಯವಸ್ಥೆ ಇದೆ. ನಮ್ಮಲ್ಲಿ ಇದನ್ನು ಕಲ್ಪಿಸಿಕೊಂಡರೆ ಪುರೋಹಿತ ಅಥವಾ ಬ್ರಾಹ್ಮಣ (ಅಥ್ರವಾನ್ಸ್), ಕ್ಷತ್ರಿಯ (ರಥೈಸ್ತಾ), ವೈಶ್ಯ (ವಸ್ತ್ರಿಯಾ) ಮತ್ತು ಶೂದ್ರ (ಹ್ಯುತಿ) ಎಂದು ಅರ್ಥೈಸಿಕೊಳ್ಳಬಹುದು.
ಆದಿ ಕಾಲದ ಇರಾನಿಯನ್ ವ್ಯವಸ್ಥೆ ಹೀಗೇ ಇತ್ತು. ಅದೇ ನಾಲ್ಕು ವರ್ಗಗಳು ಭಾರತದಲ್ಲೂ ಈಗಲೂ ಚಾಲ್ತಿಯಲ್ಲಿವೆ. ಹೀಗೆ ಒಂದು ಇರಾನ್ ಸಂಬಂಧ ಭಾರತಕ್ಕಿದೆ. ಚರ್ಮದ ಬಣ್ಣ, ನಯ ನಾಜೂಕು, ಕಣ್ಣು, ಬುದ್ಧಿವಂತಿಕೆಯನ್ನು ಹೋಲಿಸಿದರೆ ಭಾರತದ ಅದರಲ್ಲೂ ಉತ್ತರ ಭಾರತದ ಕಾಶ್ಮೀರಿ ಪಂಡಿತರು, ಉತ್ತರ ಪ್ರದೇಶದ ಪಂಡಿತ್, ಚಿತ್ಪಾವನ ಬ್ರಾಹ್ಮಣರು, ನಮ್ಮ ಕರಾವಳಿ ಮತ್ತು ಉತ್ತರ ಕನ್ನಡದ ಹವ್ಯಕರು ಹೆಚ್ಚೂ ಕಮ್ಮಿ ಇರಾನಿಗಳನ್ನು ಹೋಲುತ್ತಾರೆ (ಮೇಲ್ನೋಟಕ್ಕೆ).
ಬಹುಶಃ ಹೀಗೂ ಆಗಿರಬಹುದು, ಆಗ ಇರಾನ್ ನಲ್ಲಿ ಕ್ರೈಸ್ತ ಮತ್ತು ಇಸ್ಲಾಂ ಮುಂಚೆಯೂ ಹಲವಾರು ಸುಧಾರಣಾವಾದಿಗಳ ಅಥವಾ ಬಂಡುಕೋರರ ದಂಗೆಗಳು ನಡೆದಿರಬಹುದು. ಅಥವಾ ಅಲ್ಲಿ ಎದ್ದ ಭಾರಿ ಪ್ರತಿಭಟನಾ ಚಳವಳಿಗಳು ಇವರೆಲ್ಲ ಇರಾನ್ ಮತ್ತಿತರ ಹತ್ತಿರದ ಪ್ರದೇಶಗಳಿಂದ ಜಾಗ ಖಾಲಿ ಮಾಡುವಂತೆ ಮಾಡಿರಬಹುದು. ಹಾಗೆ ಬಂದವರೆಲ್ಲ ಹೆಚ್ಚಾಗಿ ಪರ್ಶಿಯಾ, ಹಿಮಾಲಯದ ಶೃಂಗಸಾಲುಗಳ ಮೂಲಕ ಇಲ್ಲಿಗೆ ವಲಸೆ ಬಂದಿರಬಹುದು. ಅವರೇ ಇಲ್ಲಿ ಅಂದರೆ ಭಾರತದಂಥ ಪ್ರದೇಶದಲ್ಲಿ ಹರವಿಕೊಂಡು ತಮ್ಮ ಸಂತತಿ ಬೆಳೆಸಿಕೊಂಡಿರಬಹುದು. ಕೆಲವೆಡೆ ಕ್ರಾಸ್ ಬ್ರೀಡ್ ಕೂಡ ಬೆಳೆದಿರಬಹುದು. ಇವರೆಲ್ಲ ಸೇರಿ ತಮಗೆ ಅನುಕೂಲವಾಗಬಲ್ಲ ವ್ಯವಸ್ಥೆಯೊಂದನ್ನು ಪುನರ್ ಸ್ಥಾಪಿಸಿರಲೂಬಹುದು!
ಈಗ ಜಾತಿ ವ್ಯವಸ್ಥೆಯ ಮೇಲಷ್ಟು ಗಮನ ಹರಿಸೋಣ.
ಜಾತಿಯ ವ್ಯವಸ್ಥೆ: ಕೃಷಿ ನಾಗರಿಕತೆಯಲ್ಲಿ ನಂಬಿಕೆಗಳ ಪರಂಪರೆ ಬೆಳೆದು ಬಂದಿತ್ತು. ಅದರ ಆಧಾರದಲ್ಲಿ ಕೆಲಸಕ್ಕೆ ಸಂಬಂಧಿಸಿದಂತೆ ಶ್ರೇಣೀಕೃತ ವ್ಯವಸ್ಥೆಯೊಂದು ಅಸ್ತಿತ್ವದಲ್ಲಿತ್ತು ಎಂದು ಜಾರ್ಜ್ ಎಲ್ ಹಾರ್ಟ್ ತನ್ನ 'ಅರ್ಲಿ ಎವಿಡೆನ್ಸ್ ಫಾರ್ ಕ್ಯಾಸ್ಟ್ ಇನ್ ಸೌತ್ ಇಂಡಿಯಾ' ಸಂಶೋಧನಾ ಅಧ್ಯಯನದಲ್ಲಿ ಕಂಡುಕೊಂಡಿದ್ದಾನೆ.
ಆ ನಂತರದಲ್ಲಿ ಈ ಶ್ರೇಣೀಕೃತ ವ್ಯವಸ್ಥೆಯನ್ನು ಬ್ರಾಹ್ಮಣರು ಅಥವಾ ಹಿಂದೂ ಮೂಲಭೂತವಾದಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ತಿರುಚಿಕೊಂಡು ತಮ್ಮ ಮೇಲ್ಮಹಿಮೆ ಉಳಿಸಿಕೊಂಡೇ ಇದನ್ನು ಬೆಳೆಸಿಕೊಂಡು ಬಂದರು ಎನ್ನುತ್ತಾನೆ.
'ಹುಟ್ಟಿನಲ್ಲಿ ಎಲ್ಲರೂ ಸಮಾನರೇ...' ಎನ್ನುವ ಅರ್ಥದಲ್ಲಿ ತಮಿಳು ಸಂತಕವಿ ತಿರು ವಳ್ಳುವಾರ್ ತಮ್ಮ ತತ್ವಪದದಲ್ಲಿ ಹೇಳುತ್ತಾರೆ. ಆ ಮಾತು ಬೇರೆ.
ಭಾರತೀಯ ಬುಡಕಟ್ಟು ಮತ್ತು ಕೆಳ ಜಾತಿ ಜನಸಮೂಹವನ್ನು ಒಂದೇ ವಂಶವಾಹಿ ಪರಂಪರೆಯಿಂದ ಅರ್ಥೈಸಿದ ಟಿ.ಕಿವಿಸಿಲ್ಡ್ ಎನ್ನುವ ಸಂಶೋಧಕ, ಭಾರತದ ಬಹುತೇಕ ಕೆಳ ಜಾತಿಗಳು ಒಂದೇ ವಂಶವಾಹಿ ಪರಂಪರೆ ಹೊಂದಿವೆ. ಇವು ಹೊರಗಿನಿಂದ ವಂಶವಾಹಿ ತೆಗೆದುಕೊಂಡಿದ್ದಿಲ್ಲ ಅಥವಾ ಮಿಕ್ಸಡ್ ಜೀನ್ ಅಲ್ಲ ಎಂದು ಸ್ಪಷ್ಟಪಡಿಸುತ್ತಾನೆ.
ಉತ್ತಾಹ್ ವಿಶ್ವವಿದ್ಯಾಲಯದ ಮೈಕಲ್ ಬಾಮ್ ಶೆಡ್ 2001ರಲ್ಲಿ ಜೆನೆಟಿಕ್ ಮೇಲೆ ನಡೆಸಿದ ಸಂಶೋಧನೆಯಲ್ಲಿ ಭಾರತೀಯ ಮೇಲ್ಜಾತಿಗೂ (ಇತ್ತೀಚೆಗೆ ಅಪಗ್ರೇಡ್ ಆದ ಕೆಲ ಮೇಲ್ಜಾತಿಗಳಲ್ಲ) ಮತ್ತು ಯುರೋಪಿಯನ್ನರಿಗೂ ಇರುವ ಸಾಮ್ಯತೆಯನ್ನು ಪ್ರತಿಪಾದಿಸಿದ್ದಾನೆ.
'ಭಾರತೀಯ ಮೇಲ್ಜಾತಿಯವರು ಮತ್ತು ಯುರೋಪಿಯನ್ನರ ನಡುವೆ ತುಂಬ ಹೋಲಿಕೆ ಇದೆ. ನಾರ್ತ್ ವೆಸ್ಟ್ ಪ್ರದೇಶದಿಂದ ಇಂಡೋ-ಆರ್ಯನ್ನರು ಭಾರತಕ್ಕೆ ಪ್ರವೇಶ ಮಾಡಿದರು. ಅವರೇ ಇಲ್ಲಿ ಜಾತಿ ವ್ಯವಸ್ಥೆಯೊಂದನ್ನು ಹುಟ್ಟು ಹಾಕಿ ತಾವು ಶ್ರೇಷ್ಠರಾಗಿ ಉಳಿಯುವಂಥ ವ್ಯವಸ್ಥೆಯನ್ನು ವ್ಯವಸ್ಥಿತವಾಗೇ ರೂಪಿಸಿಕೊಂಡರು' ಎನ್ನುತ್ತಾನೆ.
2006ರಲ್ಲಿ ಸೆಂಟರ್ ಫಾರ್ ಸೆಲ್ಯುಲರ್ ಅಂಡ್ ಮಾಲಿಕ್ಯುಲರ್ ಬಯಾಲಜಿ (ಇಂಡಿಯಾ)ಯ ಇಸ್ಮಾಯಿಲ್ ಥಾನ್ಸೀಮ್ ಪ್ರಕಾರ, 'ಶ್ರೇಣೀಕೃತ ಬುಡಕಟ್ಟು ವ್ಯವಸ್ಥೆಯ ಅಡಿಯಲ್ಲೇ ಕೆಳವರ್ಗಗಳು ಹುಟ್ಟಿಕೊಂಡಿದ್ದವು. ನಿಯೊಲಿಥಿಕ್ ಕೃಷಿಕರ ಗುಂಪುಗಳಲ್ಲಿ ಈ ಥರದ ಒಂದು ಕೆಳಗುಂಪು ಸೃಷ್ಟಿಸಲಾಗಿತ್ತು. ಕೃಷಿ ವ್ಯವಸ್ಥೆಗೆ ಒಂದು ಪೂರಕ ವ್ಯವಸ್ಥೆಯಾಗಿ ಅದು ರೂಪುಗೊಂಡಿದ್ದಿರಬೇಕು. ಇದು ಆರ್ಯನ್ನರು ಇಲ್ಲಿಗೆ ಬರುವ ಮುನ್ನವೇ ಇದ್ದ ವ್ಯವಸ್ಥೆಯಾಗಿತ್ತು. ಆದರೆ, ಇಂಡೋ-ಯುರೋಪಿಯನ್ನರು ಇದನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಜಾತಿ ವ್ಯವಸ್ಥೆಯನ್ನಾಗಿಸಿದರು. ಜಾತಿ ಸ್ವರೂಪದ ವರ್ಗವನ್ನು ಅವರು ಸಂಪೂರ್ಣ ಜಾತಿಯ ವ್ಯವಸ್ಥೆಯಾಗಿ ಮಾರ್ಪಡಿಸಿ ತಾವೇ ಶ್ರೇಷ್ಠ ಜಾತಿಯಾಗಿ ಪ್ರತಿಷ್ಠಾಪಿತಗೊಂಡರು.
ಇಂಡೋ-ಆರ್ಯನ್ನರು/ಯುರೋಪಿಯನ್ನರು ಬರುವ ಮುಂಚೆ ಜೀವವಿರೋಧಿಯಲ್ಲದ ಒಂದು ಮಟ್ಟಿನ ವರ್ಗ ವ್ಯವಸ್ಥೆ ಇಲ್ಲಿತ್ತಾದರೂ ಅವರು ಬಂದ ನಂತರ ಅದು ಸ್ಪಷ್ಟ ಜಾತೀಯ ಕ್ರೂರ ವ್ಯವಸ್ಥೆಯಾಯಿತು ಎನ್ನುವುದನ್ನು ಇಂಥ ಹಲವಾರು ಅಧ್ಯಯನಗಳು ಸ್ಪಷ್ಟಪಡಿಸಿವೆ.
ಇಷ್ಟೆಲ್ಲ ಅಧ್ಯಯನಕ್ಕೆ ಕಾಡಿದ್ದು ಮತ್ತು ಹೇಳಬೇಕೆನಿಸಿದ್ದು ದೇಶದ ಹೆಸರಾಂತ ರಂಗಕರ್ಮಿ ಸಿ. ಬಸವಲಿಂಗಯ್ಯ ಪ್ರಸ್ತುತ ಪಡಿಸಿದ 'ಮನುಷ್ಯ ಜಾತಿ ತಾನೊಂದೇ ವಲಂ' ಎನ್ನುವ ರಂಗ ಪ್ರಯೋಗ ನೋಡಿದಾಗ.
(ರಾಜ್ಯ ವಾರ್ತಾ ಇಲಾಖೆಯ ಎನ್.ಆರ್. ವಿಶುಕುಮಾರ್ ನೀಡಿದ ಪರಿಕಲ್ಪನೆಗೆ ಕೋಟಗಾನಹಳ್ಳಿ ರಾಮಯ್ಯ, ಲಕ್ಷ್ಮಿಪತಿ ಕೋಲಾರ್ ಮತ್ತು ಡಾ. ಕೆ.ವೈ. ನಾರಾಯಣಸ್ವಾಮಿ ಸಾಹಿತ್ಯದ ಸಾಥ್ ನೀಡಿದ್ದಾರೆ. ಹಂಸಲೇಖ ಸಂಗೀತವಿದೆ.)
ಮೇಲಿನ ಆಧುನಿಕ ಮತ್ತು ಪುರಾತನ ಥೀಸಿಸ್, ಆ್ಯಂಟಿಥೀಸಿಸ್ ಹಿನ್ನೆಲೆಯಲ್ಲಿ ರೂಪುಗೊಂಡ 'ಮನುಷ್ಯ ಜಾತಿ ತಾನೊಂದೇ ವಲಂ' ನಿಜಕ್ಕೂ ಪ್ರಶಂಸಾರ್ಹ ಯತ್ನ. ಆದರೆ, ಇದು ಹಿಂದೂ ಎನ್ನುವ ಪರಿಕಲ್ಪನೆಯ ಸುತ್ತ ಹೆಚ್ಚು ಗಿರಕಿ ಹೊಡೆದಿದೆ. ಇಡೀ ಮನುಷ್ಯ ಕುಲದ ಇತಿಹಾಸಕ್ಕೆ ಕೈ ಹಾಕುವ ದೊಡ್ಡ ಯತ್ನವೆನಿಸಿದರೂ ಹಲವು ಕೊರತೆಗಳು, ಇತಿಮಿಗಳಲ್ಲಿ ಇದರ ಹರವು ಸೀಮಿತಗೊಂಡಿದೆ.
ಪ್ರಯೋಗದಲ್ಲಿ ಮತ್ತೆ ಮತ್ತೆ ಕೇಳಿಬರುವ ಬ್ರಾಹ್ಮಣರ ಮೇಲಿನ ಆಕ್ರೋಶ ಸೂಕ್ತವಾಗೇ ಇದೆ. ಆ ಸಮುದಾಯ ಇಡೀ ಸಮಾಜದ ಬದುಕನ್ನು ನರಕವನ್ನಾಗಿಸಿದ್ದು ರೂಪಕದಲ್ಲಿ ಪದೇ ಪದೇ ಸ್ಪಷ್ಟಗೊಳ್ಳುತ್ತಾ ಸಾಗುತ್ತದೆ. ನಾನು ನೋಡಿದ ಪ್ರಯೋಗ ಲಾಲ್ ಬಾಗ್ ನ ಅಂಗಳದಲ್ಲಿ ಮಾಡಿದ್ದು. ಇಡೀ ರಂಗವಿನ್ಯಾಸ ಪ್ರಯೋಗದ ಒಟ್ಟಾರೆ ಅಂಡರ್ ಕರೆಂಟ್ ಪ್ರತಿನಿಧಿಸುತ್ತಿತ್ತು. ಮತ್ತು ರಂಗವನ್ನು ನಟ, ನಟಿಯರು ಬಳಸಿಕೊಳ್ಳುವ ರೀತಿಯೂ ತುಂಬ ಶಿಸ್ತಿನಿಂದ ಕೂಡಿತ್ತು. ಹೆಚ್ಚಾಗಿ ಒಂದು ಸಮೂಹವಾಗೇ ನಟ, ನಟಿಯರು ರಂಗಕ್ಕೆ ನುಗ್ಗುವುದು ಸಹಜವಾಗಿ ಚಂದವಾಗೇ ಕಾಣಿಸುತ್ತಿತ್ತು. ಕೆಳವರ್ಗದ ಒಂದು ಫೋರ್ಸ್ ಅನ್ನು ಕೂಡ ಇದು ಧ್ವನಿಸುತ್ತಿತ್ತು. ಪ್ರವಾಹದಂತೆ ನುಗ್ಗುವ ಜನಸಮೂಹ ಈ ದೇಶದ ದಲಿತರ, ಶೋಷಣೆಗೊಳಗಾದವರ ಒಡಲುರಿ ಹೇಳುತ್ತಿತ್ತು. ಕೆಲವು ಕಾಂಪೊಜಿಷನ್ ಗಳು ನಿಜಕ್ಕೂ ಪೊಯಟಿಕ್.
ನನಗೆ ಇಡೀ ಪ್ರಯೋಗದಲ್ಲಿ ಕಾಡಿದ್ದು ಹಲವು ಕೊರತೆಗಳು. ಹನ್ನೆರಡನೇ ಶತಮಾನದಲ್ಲಿ ಬಸವಣ್ಣ, ಆಧುನಿಕ ಯುಗದ ಅಂಬೇಡ್ಕರ್ ಅವರುಗಳ ಸಾಮಾಜಿಕ ಕ್ರಾಂತಿಯೊಂದು ಈ ನೆಲದ ಮೇಲೆ ಆಗದೇ ಹೋಗಿದ್ದರೆ?! ಕುವೆಂಪು, ದೇವನೂರು ಅವರಂಥ ಸಾಹಿತಿಗಳ ಸಾಹಿತ್ಯ ಸಮಾನತೆಯ ಆಶಯ ಹೊಂದದೇ ಹೋಗಿದ್ದರೆ? ಮತ್ತು ಅದು ಇಷ್ಟು ದೊಡ್ಡ ಪ್ರಮಾಣದಲ್ಲಿ ಪ್ರಭಾವ ಬೀರದೇ ಹೋಗಿದ್ದರೆ?!... ಈ ನೆಲದ ಮೇಲಿನ ಬದುಕು ಇನ್ನೂ ಅಸಹನೀಯ ಮತ್ತು ಅಸಹ್ಯವಾಗಿರುತ್ತಿತ್ತು. ಇದೆಲ್ಲ ಸರಿ.
ಆ್ಯಡಂ ಅಂಡ್ ಈವ್ ಇತಿಹಾಸದಿಂದ ಆದಿಮ ಕಾಲ, ಯಹೂದಿ, ಕ್ರೈಸ್ತ, ಇಸ್ಲಾಂ, ಸಿಖ್.. ಧರ್ಮದ ಕಲ್ಪನೆಗಳು ಬೆಳೆದು ನಿಂತಾಗಿನ ಮತ್ತು ನಂತರದ ಮನುಷ್ಯ ಚರಿತ್ರೆ, ನಾಗರಿಕತೆ... ಇವೆಲ್ಲವುಗಳನ್ನೊಳಗೊಂಡ ಸಮಗ್ರ ಮನುಷ್ಯ ಬದುಕಿನ ಚರಿತ್ರೆ ಮತ್ತು ಕಡೇಪಕ್ಷ ಸಮಗ್ರ ಭಾರತೀಯ ಪರಂಪರೆಯ ಹರವನ್ನು ಪ್ರಯೋಗದ ಮೂಲವಸ್ತು ಪಡಕೊಂಡಿದ್ದರೆ... ಖಂಡಿತ ವಿಶಾಲ ಮನೋಧರ್ಮ ಇದಕ್ಕೆ ದಕ್ಕುತ್ತಿತ್ತು. ಭಾರತದಲ್ಲಿ ಜಾತಿ ವ್ಯವಸ್ಥೆ ಎಷ್ಟು ಮುಖ್ಯವೋ ಅಷ್ಟೇ ಧರ್ಮಗಳೂ ಮುಖ್ಯ. ಅದರಿಂದ ಹೊರತುಪಡಿಸಿದ ಮನುಷ್ಯ ಚರಿತ್ರೆ ವಿಶ್ಲೇಷಣೆಗೆ ಅಷ್ಟು ಸುಲಭದಲ್ಲಿ ದಕ್ಕುವುವಂಥದ್ದಲ್ಲ. ಮತ್ತು ಸುಲಭವೂ ಅಲ್ಲ ಕೂಡ. ಈ ದೃಷ್ಟಿಯಲ್ಲಿ 'ಮನುಷ್ಯ ಜಾತಿ ತಾನೊಂದೇ ವಲಂ' ಪ್ರಯೋಗದ ಮನುಷ್ಯ ಜಾತಿಯ ಇತಿಹಾಸ ಹೇಳುವ ಕಥನ ವ್ಯಾಪ್ತಿ ಸೀಮಿತಗೊಂಡಂತೆನಿಸುತ್ತದೆ.
ಒಟ್ಟಾರೆಯಾಗಿ ಹೇಳುವುದಾದರೆ ಇದು ಒಟ್ಟು ಮನುಷ್ಯ ಜಾತಿಗೆ ಬದಲು ಒಂದು ಧರ್ಮದ ಜಾತಿಯ ವ್ಯವಸ್ಥೆಯನ್ನಷ್ಟೇ ಪ್ರಧಾನವಾಗಿಟ್ಟುಕೊಂಡು ವಿಶ್ಲೇಷಿಸುವ ಯತ್ನ. ಈ ಯತ್ನ ಕನ್ನಡ ನಾಡಿನ ಈಗಿನ ರಾಜಕೀಯ ಸಂದರ್ಭದಲ್ಲಿ ಅತ್ಯಂತ ಮುಖ್ಯವಾದದ್ದೇ. ಈ ಯತ್ನಕ್ಕೆ 12ನೇ ಶತಮಾನದ ಬಸವಣ್ಣ, ದಾಸ ಪರಂಪರೆಯ ಕನಕ, ಪುರಂದರ, ಅನುಭಾವ ಪರಪಂಚದ ಮಂಟೇಸ್ವಾಮಿ, ಶಿಶುನಾಳ ಶರೀಫ್ ಸಾಹೇಬರು, ಕ್ರಾಂತಿಪುರುಷ ಅಂಬೇಡ್ಕರ್ ವಿಚಾರಧಾರೆಗಳು, ಪಂಪನ ಕಾವ್ಯ ಸ್ಫೂರ್ತಿಯ, ಕುವೆಂಪು ನೇರ ನುಡಿಗಳ ಗಟ್ಟಿ ಥರವಿದೆ. ಆದರೆ, ಇದರ ಒಟ್ಟು ಹರವು ಒಂದು ನಿರ್ಧಿಷ್ಟ ಸೀಮೆ. ಹೀಗಾಗಿ ಇದು ಹಿಂದೂ ಧರ್ಮ (?) ಮತ್ತು ಅದರೊಳಗಿನ ತಪ್ಪುಗಳನ್ನು ಸರಿಪಡಿಸುವ ಯತ್ನವಾಗಿ ಕಾಣಿಸಿತಷ್ಟೇ. ಆ ಮೂಲಕ ಹಿಂದೂ ಸಂಘಟನೆಯ ಯತ್ನವೂ ಅನಿಸುತ್ತದೆ. ಒಟ್ಟು ದೇಶದ ಬಹುಮುಖಿ ಸಂಸ್ಕೃತಿ ಮತ್ತು ಜಾತ್ಯತೀತ ಎನ್ನುವ ವಿಶಾಲ ಹರವಿಗೆ ಪೂರಕ ಶಕ್ತಿ ಎನಿಸುವುದಿಲ್ಲ. ಹೀಗೆ ಹಿಂದೂ ಸಂಘಟನೆಯ ಆಶಯ ವ್ಯಕ್ತಪಡಿಸುತ್ತಾ ಅನ್ಯ ಧರ್ಮೀಯರನ್ನು (ಕ್ರೈಸ್ತ, ಇಸ್ಲಾಂ, ಸಿಖ್...) ಮನುಷ್ಯ ಕುಲದ ಆಚೆ ಇಟ್ಟಂತೆಯೂ ಅನಿಸಿಬಿಡುತ್ತದೆ. ರೂಪಕದಲ್ಲಿ ಬರುವ ಶಿಶುನಾಳ ಶರೀಫರು, ಸೂಫಿ ಸಂತರು ಇಸ್ಲಾಂಗೂ ಒಂದರ್ಥದಲ್ಲಿ ಹೊರಗಿನವರೇ! ಹೀಗಾಗಿ ಕ್ರೈಸ್ತ, ಇಸ್ಲಾಂ ಮತ್ತಿತರ ಧರ್ಮೀಯರಿಗೆ ಇಲ್ಲಿ ಜಾಗವಿಲ್ಲ, ಸಮಾನತೆಯ ಕನ್ನಡ ನೆಲ ಅಥವಾ ಭಾರತವನ್ನು ಇವರನ್ನೆಲ್ಲ ಹೊರಗಿಟ್ಟೇ ನೋಡಲು ಸಾಧ್ಯ ಎಂದರ್ಥವೇನು? ಆದರೆ, ಭಾರತದ ಧ್ವಜ ತೋರಿಸುತ್ತ, ದಂಗೆ, ಮತೀಯ ಗಲಭೆಗಳನ್ನು ತೋರಿಸುವಾಗ ಮಾತ್ರ ನಮಾಜು ಟೋಪಿ ಹಾಕಿದ ಮುಸ್ಲೀಮರು, ಕ್ರಾಸ್ ಹಾಕಿಕೊಂಡ ಕ್ರೈಸ್ತರು ರಂಗದ ಮೇಲೆ ಕಾಣಿಸಿಕೊಳ್ಳುತ್ತಾರೆ! ಇದೇನು?
ಇಂಥ ಸೂಕ್ಷ್ಮ ದೋಷಗಳನ್ನು, ಕೊರತೆಗಳನ್ನು ಪ್ರಮುಖವಾಗಿ ಸರಿಪಡಿಸಿಕೊಂಡಿದ್ದರೆ, ಅಥವಾ ವಿಶಾಲಮನೋಧರ್ಮ ಹೊಂದಿದ್ದರೆ ಇದೊಂದು ಅತ್ಯದ್ಭುತ ಯತ್ನವಾಗುವ ಸಾಧ್ಯತೆ ಇತ್ತು. ಮನುಷ್ಯ ಜಾತಿ ಎನ್ನುವ ವಿಶಾಲ ಹರವು ಪಡೆದುಕೊಳ್ಳಲು ಸಾಧ್ಯವಿತ್ತು ಅನಿಸುತ್ತದೆ. ಆದರೆ, ಹಿಂದೂ ಧರ್ಮ ಸುಧಾರಣೆ ಅಥವಾ ಸಂಘಟನೆ ಎನ್ನುವ ಹಟಕ್ಕೆ ಜೋತುಬೀಳುವಂಥ ಸೀಮಿತ ಆಶಯಗಳನ್ನಿಟ್ಟುಕೊಂಡಿದ್ದರಿಂದ ಇಡೀ ಯತ್ನವೇ ವಿಕಾಸದಂತೆ ಕಾಣಿಸುವುದಿಲ್ಲ.
ದೃಶ್ಯ ಸಂಯೋಜನೆ, ರಂಗವಿನ್ಯಾಸ, ಬೆಳಕು ವಿನ್ಯಾಸ ಮತ್ತು ಸಂಗೀತ ಅದ್ಭುತವಾಗಿತ್ತು. ಆದರೆ, ಬಹುಮುಖಿ ಸಂಸ್ಕೃತಿಯನ್ನು ಒಪ್ಪಿಕೊಂಡ ಸಂವಿಧಾನಬದ್ಧ ಸರ್ಕಾರವೊಂದರ ಇಲಾಖೆಯ ಒಟ್ಟು ಕಾರ್ಯಕ್ರಮದ ಕಾಳಜಿಯ ವಿನ್ಯಾಸಕ್ಕೆ ಸೀಮಿತ ಚೌಕಟ್ಟು ಮೀರುವ ತಾಕತ್ತು ಇರಬೇಕಾಗಿತ್ತಲ್ಲವೇ? ಚೌಕಟ್ಟು ಮೀರಿದಾಗಲೇ ಅದು ಸೃಜನಶೀಲವಾಗಿ ನಮ್ಮೊಳಗಿನ ಭಾವನೆಗಳಿಗೆ ಒಂದು ಅರ್ಥವ್ಯಾಪ್ತಿ ದಕ್ಕಿಸಿಕೊಡಲು ಸಾಧ್ಯವಿದೆ. ಗುಮಾನಿ, ಗೊಂದಲಗಳಿಗೆ ಉತ್ತರ ಹುಡುಕುವುದಕ್ಕೆ ಪ್ರೇರೇಪಿಸಲೂ ಸಾಧ್ಯ. ಕಲೆಯ ಉದ್ದೇಶವೂ ಕೂಡ ಇದೇ...
(ಕಳೆದ ಕೆಲ ತಿಂಗಳು ಹಿಂದೆ ರಾಜ್ಯ ವಾರ್ತಾ ಮತ್ತು ಪ್ರಚಾರ ಇಲಾಖೆ ಈ ಪ್ರಯೋಗವನ್ನು ನಾಡಿನಾದ್ಯಂತ ಸುಮಾರು ಮುನ್ನೂರು ಕಲಾವಿದರನ್ನು ಹಾಕಿಕೊಂಡು ರೂಪಿಸಿತ್ತು. ಹೆಸರಾಂತ ರಂಗನಿರ್ದೇಶಕ ಸಿ.ಬಸವಲಿಂಗಯ್ಯ ನಿರ್ದೇಶಿಸಿದ್ದರು. ಆ ಪ್ರಯೋಗದ ನೆನಪಿಗೆ ಇದನ್ನು ಬರಕೊಂಡಿದ್ದು ತುಂಬ ಹಿಂದೆಯೇ. ಈಗ ಹಂಚಿಕೊಳ್ಳುತ್ತಿದ್ದೇನಷ್ಟೇ. ಇದಷ್ಟು ವಿಚಾರಗಳು ಹಂಚಿಕೊಳ್ಳುವ ಉದ್ದೇಶದಿಂದ ಬರೆದಿದ್ದು. ಚರ್ಚೆ ಮಾಡೋಣ. ಅನಗತ್ಯ ವಿವಾದಗಳು ಬೇಡ.)
ಕಾಮೆಂಟ್‌ಗಳು