ವಿಷಯಕ್ಕೆ ಹೋಗಿ

ಮುಸ್ಸಂಜೆಯ ಮುಲುಕು...

ರವೀಂದ್ರ ಕಲಾಕ್ಷೇತ್ರ-50, ಸುವರ್ಣ ಸಂಭ್ರಮ ನಾಟಕೋತ್ಸವ
ಸೋಮವಾರ, 2 ಡಿಸೆಂಬರ್ 2013, ಸಂಜೆ 7.00
ನಾಟಕ: ಮುಸ್ಸಂಜೆ ಕಥಾಪ್ರಸಂಗ
(ಪಿ. ಲಂಕೇಶ್ ಕೃತಿ ಆಧಾರಿತ)

 ಟಿಕೆಟ್: ರೂ. 50

ರಂಗರೂಪ: ಬಸವರಾಜ್ ಸೂಳೇರಿಪಾಳ್ಯ
ಅಭಿನಯ: ರೂಪಾಂತರ ತಂಡ, ಬೆಂಗಳೂರು
ನಿರ್ದೇಶನ: ಕೆ.ಎಸ್.ಡಿ.ಎಲ್ ಚಂದ್ರು




ಬರ್ತೊಲ್ಟ ಬ್ರೆಕ್ಟನ 'ಎ ಗುಡ್ ವುಮನ್ ಆಫ್ ಶೇಜುವಾನ್', 'ಮದರ್ ಕರೇಜ್' ಹಾಗೂ ಮೆಕ್ಸಿಂ ಗೋರ್ಕಿಯ 'ತಾಯಿ'... ಈ ಎಲ್ಲ ಕೃತಿಗಳ ತಾಯಿ ಜೀವವನ್ನು ನೆನಪಿಸುವ "ಮುಸ್ಸಂಜೆಯ ಕಥಾಪ್ರಸಂಗ" ಪಿ.ಲಂಕೇಶ್ ಅವರ ಅದ್ಭುತ ಕೃತಿ. ಅದು ರಂಗದ ಮೇಲೆ ಪಾತ್ರಗಳಾಗಿ ಹರಡಿಕೊಂಡಾಗ ಒಂದರೆಕ್ಷಣ ಮನಸು ವಾವ್ ಅಂದಿತು. .
* * *
ಕೃತಿಯ ಪ್ಲಾಟ್ ನಲ್ಲಿ ಬಹುಮುಖ್ಯವಾಗಿ ಧ್ವನಿಸುವ ಬ್ಯಾಡರ ಹುಡುಗ ಮಂಜ, ಲಿಂಗಾಯತರ ಹುಡುಗಿಯ ಪ್ರೇಮ ಪ್ರಕರಣ, ಸಮುದಾಯವನ್ನು ರೊಚ್ಚಿಗೆಬ್ಬಿಸುವುದು ಇಂಡಿಯನ್ ಸೋಶಿಯಲ್ ಪರಿಸ್ಥಿತಿಯಲ್ಲಿ ಸಹಜ. ಹುಂಬತನದ ಕ್ರಾಂತಿಯಿಂದ ಇದನ್ನು ಎದುರಿಸುವುದು ಅನಗತ್ಯ ಹಿಂಸೆಗೆ ಇಂಬುಕೊಟ್ಟಂತಾಗುತ್ತದೆ. ಬದಲಾಗಿ ಜೀವಪರ ಆಶಯಕ್ಕೆಆರೋಗ್ಯಕರ ಭವಿಷ್ಯ ಕಟ್ಟಿಕೊಡಲು ಕ್ರಾಂತಿಕಾರಕ ಪ್ರಜ್ಞೆಯಿಂದ ದಿಟ್ಟ ಹೆಜ್ಜೆ ಇಡಬೇಕಾಗುತ್ತದೆ. ನಿರ್ಣಾಯಕ ಹಂತದಲ್ಲಿ ಜೀವಪರ ನಿಲುವನ್ನು ತಾಳಬೇಕಾಗುತ್ತದೆ. ಸಾಮುದಾಯಿಕ ಜವಾಬ್ದಾರಿಯಿರುವುದು ಇಂಥ ಮನುಷ್ಯ ಸಹಜ ಪ್ರೇಮ ನಡೆಯಲ್ಲಿ. ಧರ್ಮಕರ್ಮಠದ ಪಾಲನೆಯಲ್ಲಲ್ಲ . ಇದು ಎಲ್ಲ ಧರ್ಮ, ಜಾತಿಗಳಿಗೂ ಅನ್ವಯಿಸುವಂಥದು.
* * *
ಬ್ಯಾಡರ ಹುಡಗ ಮತ್ತು ಲಿಂಗಾಯತರ ಹುಡುಗಿ ಪರಸ್ಪರ ಪ್ರೇಮಿಸಿದ ಮಾತ್ರಕ್ಕೆ ಒಂದು ಕ್ರಾಂತಿ ನಡೆದುಹೋಗಲ್ಲ. ಅದನ್ನು ಸಮುದಾಯಗಳು ಪರಸ್ಪರ ಗೌರವಾದರದಿಂದ ಕಂಡಾಗ ಮಾತ್ರ ನಿಜವಾದ ಅರ್ಥದಲ್ಲಿ ಕ್ರಾಂತಿ ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಈ ಪ್ರೇಮಿಗಳ ಪ್ರೇಮ ಪ್ರಕರಣಕ್ಕೆ ಪ್ರತಿಯಾಗಿ ಲಿಂಗಾಯತ ಸಮುದಾಯದ ಕೆಲ ಕಿಡಿಗೇಡಿಗಳಿಂದ ಕಿತಾಪತಿಗಳೇನೋ ನಡೆಯುತ್ತವೆ. ಆದರದು ನೈತಿಕ ತಳಹದಿಯ ಮೇಲೆ ನಿಂತ ಸಾಮಾಜಿಕ ಸವಾಲೇನಲ್ಲ.

ಹುಡುಗಿಯ ತಾಯಿ ರಂಗವ್ವ ವಿಧವೆ. ಸಮುದಾಯದವರ ಕಾಮುಕ ನೋಟ, ಕೊಂಕು ಮಾತುಗಳಿಂದ ರೋಸಿ ಹೋದವಳು. ಅನ್ಯ ಜಾತಿಯ ಹುಡುಗನೊಟ್ಟಿಗೆ ಮಗಳ ಪ್ರೇಮ ಸಲ್ಲಾಪದ ಬಗ್ಗೆ ತಿಳಿದು ಗದರಿಸುವಳಾದರೂ ಹಟಕ್ಕೆ ಬಿದ್ದು ಅವರಿಬ್ಬರ ಬದುಕಲ್ಲಿ ಹುಳಿ ಹಿಂಡುವ ಮನಸ್ಥಿತಿಯವಳಲ್ಲ. ವೈಧವ್ಯದ ನಂತರದಲ್ಲೂ ಪ್ರೀತಿಗಾಗಿ ಹಂಬಲಿಸಿದವಳು ಕೂಡ. ಹೀಗಾಗಿ ಬದುಕಿನ ಜೀವಪ್ರೀತಿ ಮಗಳ ಬದುಕಿನಲ್ಲಾದರೂ ಹಸನಾಗಿ ಹಬ್ಬಿ ಬಾಳಲಿ ಎನ್ನುವ ನಿಲುವಿಗೆ ಬಂದು ನಿಂತವಳು. ಸಮುದಾಯದ ಪ್ರತಿರೋಧಗಳನ್ನು ದಕ್ಕಿಸಿಕೊಂಡು, ಕಿಡಿಗೇಡಿಗಳನ್ನು ಎದುರಿಸಿ ನಿಂತು ಮಗಳ ಪ್ರೇಮ ಬದುಕಿಗೆ ಹೊಸ ಸೂರಾಗುತ್ತಾಳಲ್ಲ! ಅದು ನಿಜವಾದ ಕ್ರಾಂತಿಕಾರಕ ಪ್ರಜ್ಞೆ. ಇಡೀ ಕೃತಿಯ ಆಶಯದಲ್ಲಿ ಕ್ರಾಂತಿ ಮಗಳ ಪ್ರೇಮವಲ್ಲ. ಅದನ್ನು ಒಪ್ಪಿಕೊಂಡು ಮಗಳ ಪ್ರೇಮ ಬದುಕಿಗಾಗಿ ತಾಯಿಯೊಬ್ಬಳು ಸಂಘರ್ಷ ಎದುರಿಸಿ ಗೆಲ್ಲುತ್ತಾಳಲ್ಲ ಅದು ನಿಜವಾದ ಕ್ರಾಂತಿ. ಆದರೆ ರಂಗ ಪ್ರಯೋಗ ಈ ಆಶಯವನ್ನು ಸಶಕ್ತವಾಗಿ ಬದುಕಲಿಲ್ಲ.
* * *
ಪ್ರಯೋಗ, ಬ್ಯಾಡರ ಹುಡುಗ-ಲಿಂಗಾಯತರ ಹುಡುಗಿ ಪ್ರೇಮವನ್ನು ರೋಚಕವಾಗಿ ಕಂಡಿತಷ್ಟೇ. ಹೀಗಾಗಿ ಪ್ರೇಮ ಎನ್ನುವುದು ಬರಿಯ ಮನೋಕಾಮನೆಯ ಹಂಬಲವಾಗಷ್ಟೇ ಕಾಣಿಸಿಕೊಂಡಿತು. ಲಸ್ಟ್ ಮುದವೆನಿಸತೊಡಗಿತು. ಪ್ರೇಮ- ಕಾಮ ಅಂತಃ ಸಂಬಂದ ಮತ್ತು ಹಾದರದ ತೆಳು ಸ್ಥರವನ್ನು ಸೂಕ್ಷ್ಮವಾಗಿ ಗ್ರಹಿಸದ ನಡೆಯಿಂದಾಗಿ ಇಡೀ ಪ್ರಸಂಗ ವಲ್ಗರ್ ಅನ್ನಿಸತೊಡಗಿತು. 'ಎ' ಮಾರ್ಕಿನ ಮಲೆಯಾಳಿ ಟೆಂಟ್ ಸಿನಿಮಾದ ಚೀಪ್ ಎಂಟರಟೇನ್ಮೆಂಟ್ ಮನಸ್ಥಿತಿಗೆ ಜಾರಿದಂತೆನಿಸಿತು. ಇದಕ್ಕೆ ಪೂರಕವಾಗಿ ಬಹುತೇಕ ಸಂದರ್ಭದಲ್ಲಿ ಹೊಮ್ಮಿದ ಪ್ರೇಕ್ಷಕರ ಚಪ್ಪಾಳೆ, ಸಿಳ್ಳೆಗಳು ರಂಗಾಸಕ್ತರ ಎಂದಿನ ಜೀವೋತ್ಸಾಹಕ್ಕೆ ಹತ್ತಿರದವು ಎಂದೆನಿಸಲಿಲ್ಲ.

ಇಡೀ ಕೃತಿಯನ್ನು ರಂಗಕ್ಕೆ ಅಳವಡಿಸುವಲ್ಲಿ ಬಸವರಾಜ ಸೂಳೇರಿಪಾಳ್ಯ ಅವರ ಶ್ರದ್ಧೆ ಎದ್ದು ಕಾಣಿಸುವಂಥದು. ಸಂಭಾಷಣೆಗಳು ಮೊನಚಾಗಿವೆ. ಕೆಲವು ಹೃದಯಸ್ಪರ್ಶಿಯಾಗಿವೆ. ಆದರೆ ನಿರ್ದೇಶನದ (ಕೆ.ಎಸ್.ಡಿ.ಎಲ್ ಚಂದ್ರು) ಟ್ರೀಟಮೆಂಟ್ ಪ್ರಯೋಗಕ್ಕೆ ಪೂರಕವಾಗುವಲ್ಲಿ ಎಡವಿದೆ. ಹನುಮಕ್ಕನ ಪರಿಪಕ್ವ ಅಭಿನಯ ಪ್ರಯೋಗಕ್ಕೆ ಘನತೆ ಮತ್ತು ತೂಕ ಕಟ್ಟಿಕೊಟ್ಟಿದ್ದು ಬಿಟ್ಟರೆ, ಮಿಕ್ಕವರೆಲ್ಲರು ಸೆನ್ಸ್ ಆಫ್ ಹ್ಯೂಮರ್ ನಲ್ಲೇ ಮುಳುಗಿ ಹೋದಂತಿದ್ದರು. ಕೆಲವರ ಅಭಿನಯದಲ್ಲಿ ಉತ್ಸಾಹವೇನೋ ಕಾಣಿಸಿತಾದರೂ ಪಾತ್ರಗಳ ಮಹತ್ವವನ್ನು ಅದು ಬಯಸುವ ಆಳ ಮತ್ತು ಸೂಕ್ಷ್ಮತೆಯನ್ನು ನಟವರ್ಗ ಗ್ರಹಿಸಬೇಕಿತ್ತೆನಿಸಿತು. ವಿನ್ಯಾಸವೂ ಜಾಳು ಜಾಳು. ನಾಟಕವನ್ನು ಬ್ಯಾಡರ ಹುಡುಗ-ಲಿಂಗಾಯತರ ಹುಡುಗಿ ಪ್ರೇಮ ಪ್ರಕರಣದ ಮೇಲಿನ ಕಾನಸಂಟ್ರೇಷನ್ ಮೂಲಕ ಕಟ್ಟಿಕೊಳ್ಳುವ ಬದಲಿಗೆ ರಂಗವ್ವನ ಮೂಲಕ ಕಟ್ಟಿಕೊಂಡಿದ್ದರೆ ಪ್ರಯೋಗಕ್ಕೆ ತುಂಬ ಅರ್ಥಪೂರ್ಣ ಆಯಾಮ ದಕ್ಕಬಹುದಿತ್ತು. ನಿರ್ದೇಶಕನ ಲಿಬರ್ಟಿ ಪ್ರಶ್ನಿಸುವ ಶ್ರೂಡನೆಸ್ ಇದು ಅನಿಸಲೂಬಹುದು. ಹಾಗೆನಿಸಿದರೆ ಅದಕ್ಕೊಂದು ಕ್ಷಮೆ ಇರಲಿ. ಆದರೆ ಭರವಸೆಯ ನಿರ್ದೇಶಕ ಚಂದ್ರು ಈ ನಿಟ್ಟಿನಲ್ಲಿ ಕೊಂಚ ಗಮನಹರಿಸಬಹುದಾಗಿತ್ತು ಎನ್ನುವುದು ಕಾಳಜಿ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಷ್ಕ್‌ ಕೆ ಇಮ್ತೆಹಾನ್‌ ಔರ್‌ ಭೀ ಹೈ’.. ಇಮ್ರಾನ್‌ ಖಾನ್‌!

ಪಾಕಿಸ್ತಾನದ ಬಗ್ಗೆ ಮಾತನಾಡುವುದು ಮಹಾ ಪಾಪದ ಕೆಲಸವೇನಲ್ಲ. ಹಾಗೆ ಭಾವಿಸಬೇಕಿಲ್ಲ. ಅದು ಒಪ್ಪಿತವೊ ಇಲ್ಲವೋ, ಅದರ ಬಗ್ಗೆ ಅಲಕ್ಷ್ಯವೋ ನಿರ್ಲಕ್ಷ್ಯವೊ ಏನೇ ಆದರೂ ಅದು ಒಂದು ದೇಶ. ನೆರೆಯ ರಾಷ್ಟ್ರ. ‘ಪಡೋಸಿ...’ ಸಂಬಂಧದಲ್ಲಿ ನಮ್ಮದೇ ಕರುಳಬಳ್ಳಿ. ಭಾಷೆ, ಜನಜೀವನ ಶೈಲಿಯಲ್ಲಿ ಬದಲಾದರೂ ಮನುಷ್ಯ ಭಾವ, ಬದುಕುವ ಸಾಮಾನ್ಯ ಕಾಳಜಿ  ಒಂದೇ. ಹಾಗೆ ನೋಡಿದರೆ ಸಾಂಸ್ಕೃತಿಕವಾಗಿ ಎರಡೂ ದೇಶಗಳು ಅಭಿನ್ನ. ನಮ್ಮಲ್ಲಿರುವ ಹಾಗೆ ಅಲ್ಲಿಯೂ ಪ್ರಜಾಪ್ರಭುತ್ವ ಇದೆ. ಅಲ್ಲಿ ನಡೆಯುವುದು ಇಲ್ಲೂ ನಡೆಯುತ್ತದೆ. ಅಲ್ಲಿ ನಡೆಯಲೇಬಾರದ್ದು ಇಲ್ಲೂ ನಡೆಯಲೇಬಾರದು.  ತೀವ್ರವಾದ ನಮ್ಮಲ್ಲಿನದಕ್ಕಿಂತ ಅಲ್ಲಿ ತುಸು ಹೆಚ್ಚು ಸವಾರಿಗೆ ಹವಣಿಸಿದೆ. ಅಲ್ಲಿನ ಮಿಲಿಟರಿ ಅತಿರೇಕದ್ದು. ಅಕ್ಷಮ್ಯ. ಮತ್ತೆ ದೇಶ ಪುಟ್ಟದಾದಷ್ಟು ಅದಕ್ಕೆ ಭಯಗಳು ಜಾಸ್ತಿ. ಮಿಲಿಟರಿ ಕವಚದಲ್ಲಿ ಅದು ಸುರಕ್ಷಾ ಭಾವವನ್ನು ಕಲ್ಪಿಸಿಕೊಳ್ಳುತ್ತದೆ. ಅದೊಂದು ತರಹದ ಸಮಾಧಾನ. ಆದರೆ ಭ್ರಮೆಯಿಂದ ಕೂಡಿದ್ದು. ಭಯೋತ್ಪಾದನೆ ಕೂಡ ಒಂದರ್ಥದಲ್ಲಿ ಪುಕ್ಕಲುತನವೇ ಆಗುತ್ತದೆ. ಹಿಂಸಾ ಪ್ರವೃತ್ತಿಗೆ ಹೆದರಿಸುವುದೇ ಕೆಲಸ. ಹೆದರಿಸುವವರು ಶೂರರು, ಧೀರರು ಮತ್ತು ಜೀನಿಯಸ್‌ ಆಗಿರಲು ಹೇಗೆ ಸಾಧ್ಯ? ಮುಖ್ಯವಾಗಿ ಅಲ್ಲಿನ ವಿದ್ಯಮಾನಗಳನ್ನು ಗಮನಿಸುವುದಾದರೆ, ಮಿಲಿಟರಿ, ಮತಾಂಧರು, ಭಯೋತ್ಪಾದಕರು, ಭ್ರಷ್ಟರು ಇದೆಲ್ಲದರಿಂದ ಪಾಕಿ ತುಂಬ ರೋಸಿ ಹೋಗಿದ್ದಾನೆ. ಒಂದು ಸೂಕ್ತ ಪರ್ಯಾಯಕ್ಕಾಗಿ ಹಂಬಲಿಸಿದ್...

ನಾನು ನೀನಾಸಂ ಪದವೀಧರನಲ್ಲ...

ನೀನಾಸಂ ಪದವಿ ನನ್ನ ತಲೆಗೆ ಅನಗತ್ಯ ಭಾರ ಸ್ವಾಮೀ. ಅಷ್ಟು ಕಪ್ಪು ಸುಂದರಿಯರ ಭಾರವೇ ನನ್ನ ತಲೆಗೆ ಸಾಕಾಗಿ ಹೋಗಿದೆ. ಇನ್ನು ಇಷ್ಟು 'ವಜನ್' ಪದವಿ ಕಿರೀಟ ಬೇಡವೇ ಬೇಡ. ಸುಮ್ಮನೇ ಖಾಸಗಿಯಾಗಿ ಡೈರಿಯ ಹಾಗೆ ಬೆಚ್ಚಗೆ ನನ್ನ ಜತೆಗೆ ಸದಾ ಇರಲಿ ಎಂದುಕೊಂಡು ಈ ಬ್ಲಾಗ್ ರೂಪಿಸಿದ್ದೇನಷ್ಟೇ. ಅವಧಿ ಬ್ಲಾಗ್ ನನ್ನ ಈ ಪುಟ್ಟ ಯತ್ನಕ್ಕೆ ಬೆನ್ನು ತಟ್ಟಿದ್ದು ಸಂತೋಷವೇ. ಆದರೆ, ನನ್ನ ಬಗ್ಗೆ ಬೆನ್ನುತಟ್ಟುವ ಸಾಲುಗಳ ಬರೆಯುತ್ತ ನೀನಾಸಂ ಪದವೀಧರ ಎನ್ನುವ ಒಂದು ತಪ್ಪು ಮಾಹಿತಿ ಕೂಡ ನುಸುಳಿಕೊಂಡಿದೆ. ಸ್ವಾಮೀ ನಾನೀ ನೀನಾಸಂ ಸುದ್ದಿಗೇ ಹೋದವನಲ್ಲ. ಅಲ್ಲಿ ಕಲಿತು ಬಂದವರ ಜತೆ 'ಬೇಜಾನ್' ಜಗಳ ಮಾಡಿದಿನಿ ಅಷ್ಟೇ.

‘ಪಲ್ಲಟ’ ಒಂದು ಪ್ರಾಮಾಣಿಕ ಪ್ರಯತ್ನ

  (ಇನ್ನೂ ತೆರೆ ಕಾಣದ ‘ಪಲ್ಲಟ’ ಕನ್ನಡ ಸಿನಿಮಾದ ಪ್ರೀಮಿಯರ್‌ ಶೋ  ಬಗ್ಗೆ ) ಸಿನಿಮಾದ ಸೊಗಸೇ ಅಂಥದು. ಯಂತ್ರಗಳಿಂದ ಸೆರೆ ಹಿಡಿದ ಬದುಕು ತೆರೆಯ ಮೇಲೆ ಬಾಳುವಾಗ ಆ ಕ್ಷಣಕ್ಕೆ ಎಲ್ಲ ಹೊಸತೇ ಆಗಿ ಕಾಣಿಸುತ್ತದೆ. ಗತ ಬದುಕು ಹೊಸ ಬದುಕಿನಂತೆ ಹೊಳೆಯುತ್ತದೆ. ಪರದೆ ಮೇಲಿನ ಮೂರು ಗಂಟೆಯ ಬಾಳಲ್ಲಿ ಪ್ರೇಕ್ಷಕ ಅದರ ಅಸಲಿ ನೋವು, ನಲಿವುಗಳ ಬದುಕಿಗಿಳಿಯುತ್ತ ಮೆಲ್ಲಗೆ ಅದರ ಒಟ್ಟು ಹರವಿನಗುಂಟ ಸಾಗಬಹುದು. ಆ ಪುಟ್ಟ ಜರ್ನಿಯಲ್ಲಿ  ಅವನೊಳಗಿನ ಬದುಕಿಗೆ ಹೊಸ ಕಣ್ಣುಗಳು ಮೂಡಬಹುದು. ಅಂತಃಕರಣದ ಸೆಲೆಗಳು ಮತ್ತಷ್ಟು ಜಿನುಗಬಹುದು. ಸಿನಿಮಾದ ಸಾಧ್ಯತೆಗಳು, ಪರಿಣಾಮಗಳು ಹಲವು. ಸಿನಿಮಾಗೆ ಅದರ ಅಂತಃಸತ್ವ ಮುಖ್ಯ. ನೋಡಿ ತಿಳಿವ ಪ್ರಾಸೆಸ್‌ ಇದಾದ್ದರಿಂದ ವಿಶ್ಯುಯಲ್‌ ಟ್ರೀಟಮೆಂಟ್‌ ಕೂಡ ಮುಖ್ಯ.  ‘ಪಲ್ಲಟ’ ಕನ್ನಡ ಸಿನಿಮಾದ ವಸ್ತು  ಸ್ಥಳೀಯ ಸಂಸ್ಕೃತಿಗಳ ಸ್ಥಿತ್ಯಂತರ ಹೇಗೆ ನಿಜ ಜೀವನದಲ್ಲಿ ಕೆಲವರ ಬದುಕನ್ನೇ ಮುಗಿಸಿಬಿಡುತ್ತದೆ ಎನ್ನುವುದು. ಇದು ಅಮಾನವೀಯ ಎನ್ನುವುದು ಚಿತ್ರದ ಒಳದನಿ. ಬಹುಕಾಲ ನಿಲ್ಲಬಲ್ಲ ಮತ್ತು ಕಾಡಬಲ್ಲ ಸಿನಿಮಾ ಆಗುವ ಅವಕಾಶವನ್ನು ಇದು ಸ್ವಲ್ಪದರಲ್ಲಿಯೇ ಕಳಕೊಂಡಿದೆ. ಇದರಾಚೆಗೂ ಚಿತ್ರ ಕೆಲವು ವಿಚಾರಗಳಿಗೆ ಸಂಬಂಧಿಸಿ ಚರ್ಚೆಗೆ ಯೋಗ್ಯವಾಗಿದೆ. ನಾಗರಿಕತೆ ಎಂಬುದು ಜನರೇ ಸೃಜಿಸಿಕೊಂಡಿದ್ದು. ಆಯಾ ಜನಪ್ರದೇಶಗಳಲ್ಲಿ ಕಾಲದ ಅಗತ್ಯಗಳಿಗೆ ತಕ್ಕುದಾದ ವ್ಯವಸ್ಥೆಯೊಂದು ರೂಪುಗೊಂಡಿರುತ್ತದ...