ವಿಷಯಕ್ಕೆ ಹೋಗಿ

ಹಾಡುಹಕ್ಕಿಗೆ ಬೇಕೆ ಬಿರುದು ಸನ್ಮಾನ...



ಉಪಖಂಡದ ಮಹಾನ್ ಗಾಯಕನ ಬಗ್ಗೆ ಅವರ ಸೊಸೆ ಬರೆದ ಪುಸ್ತಕ ಓದಿದೆ.  ಅಬ್ಬಾ (ತಂದೆ ಎಂದರ್ಥ. ಸೊಸೆಗೆ ಮಾವ, ತಂದೆಯಾಗೋದು ಎಂಥ ಅದ್ಭುತ ಭಾವನೆ..) ಎಂದೇ  ಆ ಗಾಯಕನನ್ನು ಗೌರವಿಸುವ ಸೊಸೆಯ ಅಭಿಮಾನ, ಅಂತಃಕರಣದ ಮಾನವೀಯ ಪರಿ ನನಗಂತೂ ಖುಷಿಕೊಟ್ಟಿತು. ಇಡೀ ಪುಸ್ತಕದ ತುಂಬ ಅಬ್ಬಾ ನಸುನಕ್ಕಿದ್ದಾರೆ. ಹೆಮ್ಮೆಯ ಭಾವದಲ್ಲಿ ಕಾಣುತ್ತಾರೆ. ನನ್ನ ಅಮ್ಮೀಗೂ ಈ ಗಾಯಕನ ಹಾಡುಗಳೆಂದರೆ ಪ್ರಾಣ. ಆಕೆಯ ಬಾಯಿಂದ ಹಲವು ಹಾಡುಗಳನ್ನು ಕೇಳಿಸಿಕೊಂಡಿದ್ದೇನೆ. ಕಲಿತಿದ್ದೇನೆ. ನನ್ನ ದೊಡ್ಡ ಮಾಮ (ಮಾಸ್ಟರ್ ಮೊಹಮ್ಮದ್ ಅಲೀ ಮುದ್ನಾಳ್) ಇವರನ್ನು ಹತ್ತಿರದಿಂದ ಕಂಡಿದ್ದರ ಬಗ್ಗೆ ಕೇಳಿ ರೋಮಾಂಚಿತಗೊಂಡಿದ್ದೆ.
 ಆ ಅಪ್ರತಿಮ ಗಾಯಕನ ಹಳೆಯ ಹಾಡು ಹಾಡುತ್ತ, ಅನುವಾದ ಮಾಡುತ್ತ ಅಂತೂ ಆತನ ಒಂದಿಡೀ ಚರಿತ್ರೆಯನ್ನು ಕಣ್ಮುಂದೆ ಕಂಡೆ. ಆನಂದಿಸಿದೆ. ಅವಾಕ್ಕಾದೆ. ಅಭಿಮಾನಪಟ್ಟೆ. ಅದನ್ನು ಹೀಗೆ ಬರೆದು ಬಿಟ್ಟೆ. ಇಡೀ ಪುಸ್ತಕದ ಅನುವಾದ ಮಾಡುತ್ತಿದ್ದೇನೆ. ಅದರ ಆಯ್ದ ಭಾಗಗಳನ್ನು ಇಲ್ಲಿ ನೀಡುತ್ತಿದ್ದೇನೆ. ಇಂದು ಗಾಯಕನ ಜನ್ಮದಿನ (ಡಿಸೆಂಬರ್ 24).



ಅಬ್ಬಾ...

ದೇಶ ವಿಭಜನೆಗೂ ಮುನ್ನ ಅಬ್ಬಾ ಕುಟುಂಬ ಲಾಹೋರಿನಲ್ಲಿತ್ತು. ಸ್ಥಿತಿವಂತ ಮತ್ತು ಧಾರ್ಮಿಕ ಸಂಪ್ರದಾಯಸ್ಥ ಕುಟುಂಬ ಅವರದ್ದಾಗಿತ್ತು. ಅಬ್ಬಾ ಹೊಂದಿದ್ದ ಲೈಫ್ ಸ್ಟೈಲ್ ಮತ್ತು ಗತ್ತು ಇದಕ್ಕೆ ಸಾಕ್ಷಿಯಂತೇ ಇತ್ತು. ತಂದೆ ಹಾಜಿ ಮೊಹಮ್ಮದ್ ಅಲೀ ಮತ್ತು ತಾಯಿ ಅಲ್ಲಾರಖೀ. ಈ ದಂಪತಿಗೆ ಒಟ್ಟು ಎಂಟು ಮಕ್ಕಳು. ಅದರಲ್ಲಿ ಆರು ಗಂಡು ಮಕ್ಕಳು. ಮೊಹಮ್ಮದ್ ಶಫೀ, ಮೊಹಮ್ಮದ್ ಇಬ್ರಾಹಿಂ, ಮೊಹಮ್ಮದ್ ದೀನ್, ಮೊಹಮ್ಮದ್ ಇಸ್ಮಾಯಿಲ್, ಮೊಹಮ್ಮದ್ ರಫೀ ಮತ್ತು ಮೊಹಮ್ಮದ್ ಸಿದ್ದಿಖಿ. ಇಬ್ಬರು ಹೆಣ್ಣುಮಕ್ಕಳು. ರೇಷ್ಮಾ ಬೀಬಿ ಮತ್ತು ಚಿರಾಗ್ ಬೀಬಿ. ಹೆಣ್ಣು ಮಕ್ಕಳೆಲ್ಲ ಹೆಚ್ಚು ಕಾಲ ಬದುಕಲಿಲ್ಲ.

1948. ಅಬ್ಬಾಗೆ ಆಗ ಇಪ್ಪತ್ತರ ಹರೆಯ. ಆಗಲೇ ತಮ್ಮ ತಾಯಿಯನ್ನು ಕಳೆದುಕೊಂಡರು. ತಂದೆ ಹಾಜಿ ಮೊಹಮ್ಮದ್ ಅಲೀ ಅವರು ಲಾಹೋರಿನ ಭಾಟಿ ಗೇಟ್ ನಲ್ಲಿ ವಾಸವಾಗಿದ್ದರು. ಭರ್ಜರಿ ಕೇಟರಿಂಗ್ ಬಿಸಿನೆಸ್ ನಲ್ಲಿ ತೊಡಗಿಸಿಕೊಂಡಿದ್ದವರು. ರುಚಿಕಟ್ಟಾದ ಆಹಾರ ಸರಬರಾಜು ಮಾಡುವಲ್ಲಿ ಎತ್ತಿದ ಕೈ. ಹೀಗಾಗಿ ಇಡೀ ಪ್ರದೇಶದಲ್ಲಿ ಇವರದೇ ಹೆಸರಾಂತ ಕೇಟೆರಿಂಗ್ ಕಂಪೆನಿ.

ಅಬ್ಬಾ ಜನಿಸಿದ್ದು (1924, ಡಿಸೆಂಬರ್ 24) ಕೋಟ್ಲಾ ಸುಲ್ತಾನ್ ಸಿಂಗ್ ನಲ್ಲಿ. ಪಂಜಾಬ್ ನ ಅಮೃತಸರ ಸಮೀಪದ ಒಂದು ಪುಟ್ಟ ಹಳ್ಳಿ. ಅವರ ತಾಯಿ ತಮ್ಮ ಸಂಬಂಧಿಕರನ್ನು ಭೇಟಿ ಮಾಡಲೆಂದು ಆಗಾಗ ಇಲ್ಲಿಗೆ ಬರುತ್ತಿದ್ದರಂತೆ. ಅಷ್ಟನ್ನು ಬಿಟ್ಟರೆ ಈ ಹಳ್ಳಿಯ ಜತೆಗಿನ ಅವರ ಒಡನಾಟ ಅಷ್ಟಕ್ಕಷ್ಟೇ. ಈ ಸಂಬಂಧಿಕರು ಯಾರು? ಇವರೆಲ್ಲ ಸುಲ್ತಾನ್ ಕೋಟ್‌ನಲ್ಲಿ ವಾಸಿಸುತ್ತಿದ್ದ ಮನೆ ಎಲ್ಲಿದೆ? ಅಲ್ಲಿ ಯಾರೆಲ್ಲ ಇರುತ್ತಿದ್ದರು?... ಇದಾವುದರ ವಿವರಗಳನ್ನು ಅಬ್ಬಾ ಯಾರ ಬಳಿಯೂ ಅಷ್ಟೊಂದಾಗಿ ಹೇಳಿಕೊಂಡಿದ್ದಿಲ್ಲ. ಸ್ವತಃ ಮಕ್ಕಳಲ್ಲೂ ಹೇಳಿಕೊಂಡಿಲ್ಲ.

ಹೀಗಾಗಿ ಅಬ್ಬಾ ಜನ್ಮದೂರಿನ ಬಗ್ಗೆ ಇಡೀ ಕುಟುಂಬದಲ್ಲಿ ಊಹಾಪೋಹಗಳೇ ತುಂಬಿಕೊಂಡಿದ್ದವು. ಕೋಟ್ಲಾ ಸುಲ್ತಾನ್ ಸಿಂಗ್ ತನ್ನ ಜನ್ಮಸ್ಥಳವೆಂದು ಅಬ್ಬಾ ಆಗಾಗ ಹೇಳುತ್ತಿದ್ದುದು ನನಗಿನ್ನೂ ನೆನಪಿದೆ. ಆದರೆ, ಲಾಹೋರಿನ ಭಾಟಿ ಗೇಟ್ ಅವರ ಜನ್ಮಸ್ಥಳ  ಎಂದು ಕುಟುಂಬ ಹೇಳಿಕೊಳ್ಳುತ್ತಿತ್ತು.

ಅಬ್ಬಾ ತಮ್ಮ  ಒಂಭತ್ತನೇ ವಯಸ್ಸಿನವರೆಗೆ ಆಡಿ ಬೆಳೆದಿದ್ದು ಇದೇ ಭಾಟಿ ಗೇಟ್ ನಲ್ಲಿ. ಆನಂತರದಲ್ಲಿ ಅವರ ಕುಟುಂಬ ಲಾಹೋರಿನ ಬಿಲಾಲ್ ಗಂಜ್ ಗೆ ಸ್ಥಳಾಂತರಗೊಂಡಿತು. ಬಾಲ್ಯದ ದಿನಗಳಿಂದ ಅವರಿಗೆ ಸಂಗೀತದಲ್ಲೇ ಹೆಚ್ಚು ಆಸಕ್ತಿ. 'ನನಗೆ ಮುಂಚಿನಿಂದಲೂ ಸಂಗೀತವೆಂದರೆ ಪ್ರಾಣ. ನನ್ನ ಮನಸು ಸಂಗೀತ ಬಿಟ್ಟು ಬೇರೇನನ್ನು ಬಯಸುತ್ತಿರಲಿಲ್ಲ. ಅಲ್ಲಾಹು ನನಗೆಂದೇ ಈ ವಿಶೇಷ ಪ್ರತಿಭೆ ಧಾರೆ ಎರೆದಿದ್ದಾನೆ ಎನ್ನುವುದು ನನ್ನ ಬಲವಾದ ನಂಬಿಕೆಯಾಗಿತ್ತು' ಎಂದು ಅಬ್ಬಾ ಎಷ್ಟೋ ಸಾರಿ ಹೇಳಿಕೊಂಡಿದ್ದಿದೆ.

ಇಡೀ ಚೌಧರಿ ಖಾನದಾನ್ ನಲ್ಲಿ ಯಾರಲ್ಲೂ ಸಂಗೀತದ ಹುಚ್ಚು ಇಷ್ಟು ತೀವ್ರವಾಗಿ ಆವರಿಸಿಕೊಂಡಿರಲಿಲ್ಲ. ಇದು ಅಬ್ಬಾ ಅವರದೇ ಸ್ವಯಂ ಪ್ರೇರಣೆಯ  ಆಸಕ್ತಿಯಾಗಿತ್ತು. ಆಗ ಅವರ ವಯಸ್ಸು ಇನ್ನೂ ಹತ್ತು. ಮೊಹಲ್ಲಾಗೆ ಆಗಾಗ ಒಬ್ಬ ಫಕೀರ  ಬರುತ್ತಿದ್ದ. ಫಕೀರನ ಹಾಡುಗಳು ಇವರನ್ನು ತುಂಬ ಸೆಳೆಯುತ್ತಿದ್ದವು. 'ಖೇದಾನೇ ದೇ ದಿನ್ ಚಾರ್...' ಎನ್ನುವ  ಫಕೀರನ  ಒಂದು ಹಾಡು ಅಬ್ಬಾ ಅವರನ್ನು ತೀವ್ರವಾಗಿ ಕಾಡಿತ್ತು. ಅವನಂತೆಯೇ ಹಾಡುವುದನ್ನು ಅಭ್ಯಾಸ ಮಾಡತೊಡಗಿದರು. ಮುಂದೆ ಫಕೀರ ಬಂದಾಗಲೆಲ್ಲ ಆತನ ಜತೆ ದನಿಗೂಡಿಸಿ ಹಾಡಲಾರಂಭಿಸಿದರು. ಅಬ್ಬಾ ಕಂಠಸಿರಿಗೆ ಮನಸೋಲುತ್ತಿದ್ದ ಫಕೀರ, ಬಳಿಗೆ ಕರೆದು ತಲೆ ನೇವರಿಸಿ ದುವಾ ಮಾಡುತ್ತಿದ್ದ.

ಫಕೀರನ  ಎಲ್ಲಾ ಹಾಡುಗಳನ್ನು ಗುನುಗುಟ್ಟುತ್ತಿದ್ದ ಅಬ್ಬಾ, ಕ್ರಮೇಣ ಸೊಗಸಾಗಿ ಹಾಡತೊಡಗಿದ್ದರು. ಫಕೀರನಂಥ ಅನುಭಾವಿಗಳ ದುವಾ ಅಂದರೆ ಅದೊಂದು ವರ. ಅಂಥವರ ಸೇವೆ ಮಾಡಿ, ಆದರಿಸಿದರೆ ಫಲ ಕಟ್ಟಿಟ್ಟ ಬುತ್ತಿ ಎನ್ನುವ ನಂಬಿಕೆ ಅವರಲ್ಲಿ ಬಲವಾಗಿತ್ತು. ಯಾರ ಮನಸಿಗೂ ನೋವಾಗದಂತೆ ಅವರು ನಡೆದುಕೊಳ್ಳುತ್ತಿದ್ದರು. ಕ್ರಮೇಣ ಇವರೊಬ್ಬ ಅಲ್ಲಾಹು ಕರುಣಿಸಿದ ಹಾಡುಗಾರ ಎಂದು ಮನೆಯವರೆಲ್ಲ ನಂಬತೊಡಗಿದರು. ಆದರೂ ಹಾಡು ಮತ್ತು ಸಂಗೀತವಾದ್ಯ ನುಡಿಸುವುದಕ್ಕೆ ಮನೆಯಲ್ಲಿ ತೀವ್ರ ವಿರೋಧವಿತ್ತು. ಕುಟುಂಬ ಪರಿಪಾಲಿಸುತ್ತಿದ್ದ ಧರ್ಮದ (ಇಸ್ಲಾಂ) ಪ್ರಕಾರ ಇದು ಹರಾಮ್. ನಿಷಿದ್ಧ. ಸಂಗೀತಾಭ್ಯಾಸಕ್ಕಂತೂ ಮನೆಯಲ್ಲಿ ಪ್ರೋತ್ಸಾಹದ ಸಾಧ್ಯತೆಯೇ ಇರಲಿಲ್ಲ. ಇದೆಲ್ಲ ಅಬ್ಬೇಪಾರಿಗಳಿಗೆ ಸೂಕ್ತವಾಗುವಂಥ ಕಲೆ ಎನ್ನುವುದು ಮನೆಯವರ ಅಭಿಪ್ರಾಯವಾಗಿತ್ತು. ಆದರೆ ಸಂಗೀತಗಾರನಾಗುವ ಛಲವನ್ನು ಮಾತ್ರ ಅಬ್ಬಾ ಬಿಟ್ಟುಕೊಡಲಿಲ್ಲ. ಇವರ ಸಂಗೀತಾಸಕ್ತಿಗೆ ನೆರವಾಗಿ ನಿಂತವರು ಹಿರಿಯಣ್ಣ ಮೊಹಮ್ಮದ್ ದೀನ್ ಮಾತ್ರ. ಮೊಹಮ್ಮದ್ ದೀನ್ ಲಾಹೋರಿನಲ್ಲಿ ಹೇರ್ ಕಟಿಂಗ್ ಸಲೂನ್ ಇಟ್ಟುಕೊಂಡಿದ್ದರು. ಇದೇ ವೃತ್ತಿಯಲ್ಲಿ ತಮ್ಮನೂ ಮುಂದುವರಿಯಲಿ ಎನ್ನುವ ಉದ್ದೇಶದಿಂದ ಸಲೂನಿಗೆ ಜತೆಯಲ್ಲಿ ಕರೆದೊಯ್ಯುತ್ತಿದ್ದರು. ಆದರೆ ಅಬ್ಬಾ ಮನಸ್ಸು ಈ ವೃತ್ತಿಗೆ ಒಗ್ಗಿಕೊಳ್ಳುವಂಥದ್ದಿರಲಿಲ್ಲ. ಸಲೂನಿನಲ್ಲೂ ಹಾಡು ಮುಂದುವರಿಯಿತು. ಸಲೂನಿನ ಯಾವ ವಸ್ತುವೇ ಇರಲಿ, ಕೈಗೆ ಸಿಕ್ಕರೆ ವಾದ್ಯವಾಗಿಬಿಡುತ್ತಿತ್ತು. ಹಾಡುತ್ತಿದ್ದರು. ಒಟ್ಟಿನಲ್ಲಿ ಹಾಡು, ಹಾಡು ಮತ್ತು ಹಾಡು...

ಸಂಗೀತಗಾರನಾಗುವ ತಮ್ಮನ ದೃಢ ನಿಲುವನ್ನು ಮೆಚ್ಚಿಕೊಂಡ ಹಿರಿಯಣ್ಣ, ಆತನಿಗೆ ಏನಾದರೊಂದು ದಾರಿ ತೋರಿಸುವ ಸಂಕಲ್ಪ ಮಾಡಿಕೊಂಡರು. ಕುಟುಂಬದ ಸ್ನೇಹಿತ ತಾಜ್ ಮಲಿಕ್ ಕೂಡ ಕೈಜೋಡಿಸಿದರು. ಅಂತೂ ಅಬ್ಬಾಗೆ ಉಸ್ತಾದ್ ಬರ್ಕತ್ ಅಲೀ ಖಾನ್ ಸಾಹೇಬ್ ಬಳಿ ಸಂಗೀತದ ಮೊದಲ ಪಾಠ ಶುರುವಾಯಿತು. ಛೋಟೇ ಗುಲಾಂ ಅಲೀ ಬಳಿ ಅಭ್ಯಾಸದ ಅವಕಾಶವೂ ಲಭಿಸಿತು. ಕಿರಾಣಾ ಘರಾನಾದ ಉಸ್ತಾದ್ ಅಬ್ದುಲ್ ವಾಹೀದ್ ಖಾನ್ ಸಾಹೇಬ್, ಬಡೇ ಗುಲಾಂ ಅಲೀ ಖಾನ್ ಸಾಹೇಬ್, ಜೀವ್ ಲಾಲ್ ಮುಟ್ಟೋ ಮತ್ತವರ ಮಗ ಜವಾಹರ ಲಾಲ್ ಮುಟ್ಟೋ ಹಾಗೂ ಫಿರೋಜ್ ನಿಜಾಮಿ ಅವರಂಥ ದಿಗ್ಗಜರ ಸಾಂಗತ್ಯವೂ ದಕ್ಕಿತು. ಈ ದಿಗ್ಗಜರಿಂದಲೂ ಸಂಗೀತಾಭ್ಯಾಸದ ಭಾಗ್ಯ ದೊರಕಿತು.

ಹೀಗೆ ಸಂಗೀತಾಭ್ಯಾಸದ ಹಾದಿಯಲ್ಲಿ ಹಲವು ವರ್ಷಗಳು ಕಳೆದುಹೋದವು. ಗಾಯನ ಪಕ್ವಗೊಂಡಿತು. ಇನ್ನು ಹಾಡುವುದಕ್ಕೆ ಅವಕಾಶವಷ್ಟೇ ಬಾಕಿ. ತುಂಬ ಸಮಯ ಕಾಯುವ ಅಗತ್ಯವೇ ಇರಲಿಲ್ಲ. ಒಂದು ಬ್ರೇಕ್ ಬೇಕಿತ್ತು ಅಷ್ಟೇ.

ಅದು 1937. ಅಬ್ಬಾ ಜೀವನದಲ್ಲೊಂದು ಹೊಸ ತಿರುವು. ಅವರಿಗೆ ಆಗಿನ್ನೂ ಹದಿಮೂರರ ವಯಸ್ಸು. ಲಾಹೋರಿನಲ್ಲಿ ಪಾನ್-ಇಂಡಿಯಾ ಪ್ರದರ್ಶನ ನಡೆಯುತ್ತಿತ್ತು. ಅಲ್ಲಿ ಹೆಸರಾಂತ ಗಾಯಕರ ಸಂಗೀತ ಕಚೇರಿಯೂ ಆಯೋಜನಗೊಂಡಿತ್ತು. ಕುಂದನ್ ಲಾಲ್ ಸೈಗಲ್ ಮತ್ತು ಜೋಹ್ರಾಬಾಯಿ ಅಂಬಾಲೆವಾಲೀ ಅವರ ಗಾಯನದ ಕಾರ್ಯಕ್ರಮವಿತ್ತು. ಇವರೊಂದಿಗೆ ಹಲವಾರು ಉದಯೋನ್ಮಖರೂ ಹಾಡುವವರಿದ್ದರು. ಸಾವಿರಾರು ಸಂಗೀತ ಪ್ರೇಮಿಗಳು ಅಲ್ಲಿ ನೆರೆದಿದ್ದರು. ಕೆ.ಎಲ್. ಸೈಗಲ್ ಅಂದರೆ ಅಬ್ಬಾಗೂ ತುಂಬ  ಪ್ರಾಣ. ಕೆಎಲ್ ಹಾಡುವುದನ್ನು ಕೇಳುವ, ನೋಡುವ ಕಾತರ. ಅಂತೂ ಹಿರಿಯಣ್ಣನೊಂದಿಗೆ ಕಾರ್ಯಕ್ರಮಕ್ಕೆ ಹಾಜರ್. ಕೆ.ಎಲ್. ಸೈಗಲ್ ಹಾಡತೊಡಗಿದ್ದರು. ಇದ್ದಕ್ಕಿದ್ದಂತೆ ಕರೆಂಟ್ ಹೋಯ್ತು. ಧ್ವನಿವರ್ಧಕವಿಲ್ಲದೇ ಸೈಗಲ್ ಹಾಡು ಕೇಳುವುದು ಪ್ರೇಕ್ಷಕರಿಗೆ ದುಸ್ತರವೆನಿಸತೊಡಗಿತು. ಪ್ರೇಕ್ಷಕರಿಂದ ಚೀರಾಟ, ಕೂಗಾಟ, ಗದ್ದಲ ಶುರುವಾಯ್ತು. ಅದೇ ಸಮಯಕ್ಕೆ ಸರಿಯಾಗಿ ಯಾರೋ ಅಬ್ಬಾನನ್ನು ಸ್ಟೇಜ್ ಗೆ ಎಳೆತಂದರು. ಇಂಥದೊಂದು ಅವಕಾಶಕ್ಕಾಗಿ ಹಾತೊರೆಯುತ್ತಿದ್ದ ಅಬ್ಬಾ ಸಿಕ್ಕ ಅವಕಾಶವನ್ನು ಚೆನ್ನಾಗಿಯೇ ಬಳಸಿಕೊಂಡರು. ತಮ್ಮ ಅದ್ಭುತ ಕಂಠ ಸಿರಿಯಲ್ಲಿ ಪಂಜಾಬಿ ಜಾನಪದ ಹಾಡೊಂದನ್ನು ಪ್ರಸ್ತುತಪಡಿಸಿದರು. ಅಲ್ಲಿಯವರೆಗೆ ಕೂಗಾಟದಲ್ಲಿ ನಿರತವಾಗಿದ್ದ ಪ್ರೇಕ್ಷಕ ಸಮೂಹ, ಈ ಚಿನ್ನದ ದನಿಗೆ ಶರಣಾಯ್ತು. ಧ್ವನಿವರ್ಧಕವಿಲ್ಲದೇ ಹಾಡಿದ ಹಾಡಿಗೆ ಇಡೀ ಸಭಾಂಗಣ ಮೂಕ ವಿಸ್ಮಿತ. ಈ ಚಿನ್ನದ ದನಿಯ ಹುಡುಗನ ಹಾಡಿಗೆ ಸಭಾಂಗಣದ ತುಂಬ ಕರತಾಡನ, ಮೆಚ್ಚುಗೆಯ ಮಾತುಗಳು ರಿಂಗಣಿಸಿದವು.
ಕೆ.ಎಲ್. ಸೈಗಲ್ ಕೂಡ ಹುಡುಗನ ದನಿಗೆ ಮಾರುಹೋದರು. ಬೆನ್ನು ತಟ್ಟಿ ಭೇಷ್ ಎಂದರು. 'ಮುಂದೊಂದು ದಿನ ಈ ಹುಡುಗ ಅಪ್ರತಿಮ ಹಾಡುಗಾರನಾಗುತ್ತಾನೆ' ಎಂದು ಆಗಲೇ ಭವಿಷ್ಯ ನುಡಿದರು.
(ಮುಂದುವರಿಯುವುದು)

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮನುಷ್ಯ ಜಾತಿ ತಾನೊಂದೇ ವಲಂ...

ಭಾರತದಲ್ಲಿ ಜಾತಿ ವ್ಯವಸ್ಥೆ ಹೇಗೆ ಹುಟ್ಟಿತು ಎಂಬುದಕ್ಕೆ ಯಾವುದೇ ನಿರ್ಧಿಷ್ಟ ಥಿಯರಿ ಇಲ್ಲ. ಆದರೆ, ಇಲ್ಲಿನ ವರ್ಗ ಸೃಷ್ಟಿ ಮಾತ್ರ ಇರಾನ್ ವ್ಯವಸ್ಥೆಯಂತೇ ಇದೆ.  ಪುರಾತನ ಇರಾನಿನ ಚರಿತ್ರೆಯಲ್ಲಿ ಇಂಥದೊಂದು ವ್ಯವಸ್ಥೆ ಇತ್ತು. ಅದಕ್ಕೆ ಪಿಸ್ತ್ರಾಸ್ ಎನ್ನುತ್ತಾರೆ. ನಮ್ಮಲ್ಲಿ ಅದು ಚಾತುರ್ವರ್ಣವಾಗಿದೆ. ಅಲ್ಲಿ ಅಥ್ರವಾನ್ಸ್ (ಪ್ರೀಸ್ಟ್ ಕ್ಲಾಸ್), ರಥೈಸ್ತಾ (ವಾರಿಯರ್ಸ್), ವಸ್ತ್ರಿಯಾ (ಮರ್ಕಂಟೈಲ್ ಕ್ಲಾಸ್) ಮತ್ತು ಹ್ಯುತಿ (ಆರ್ಟಿಸನ್) ಎನ್ನುವ ವರ್ಗ ವ್ಯವಸ್ಥೆ ಇದೆ. ನಮ್ಮಲ್ಲಿ ಇದನ್ನು ಕಲ್ಪಿಸಿಕೊಂಡರೆ ಪುರೋಹಿತ ಅಥವಾ ಬ್ರಾಹ್ಮಣ (ಅಥ್ರವಾನ್ಸ್), ಕ್ಷತ್ರಿಯ  (ರಥೈಸ್ತಾ), ವೈಶ್ಯ  (ವಸ್ತ್ರಿಯಾ) ಮತ್ತು ಶೂದ್ರ (ಹ್ಯುತಿ) ಎಂದು ಅರ್ಥೈಸಿಕೊಳ್ಳಬಹುದು.  ಆದಿ ಕಾಲದ ಇರಾನಿಯನ್ ವ್ಯವಸ್ಥೆ ಹೀಗೇ ಇತ್ತು. ಅದೇ ನಾಲ್ಕು ವರ್ಗಗಳು ಭಾರತದಲ್ಲೂ ಈಗಲೂ ಚಾಲ್ತಿಯಲ್ಲಿವೆ. ಹೀಗೆ ಒಂದು ಇರಾನ್ ಸಂಬಂಧ ಭಾರತಕ್ಕಿದೆ. ಚರ್ಮದ ಬಣ್ಣ, ನಯ ನಾಜೂಕು, ಕಣ್ಣು, ಬುದ್ಧಿವಂತಿಕೆಯನ್ನು ಹೋಲಿಸಿದರೆ ಭಾರತದ ಅದರಲ್ಲೂ ಉತ್ತರ ಭಾರತದ ಕಾಶ್ಮೀರಿ ಪಂಡಿತರು, ಉತ್ತರ ಪ್ರದೇಶದ ಪಂಡಿತ್, ಚಿತ್ಪಾವನ ಬ್ರಾಹ್ಮಣರು, ನಮ್ಮ ಕರಾವಳಿ ಮತ್ತು ಉತ್ತರ ಕನ್ನಡದ ಹವ್ಯಕರು ಹೆಚ್ಚೂ ಕಮ್ಮಿ ಇರಾನಿಗಳನ್ನು ಹೋಲುತ್ತಾರೆ (ಮೇಲ್ನೋಟಕ್ಕೆ).  ಬಹುಶಃ ಹೀಗೂ ಆಗಿರಬಹುದು, ಆಗ ಇರಾನ್ ನಲ್ಲಿ ಕ್ರೈಸ್ತ ಮತ್ತು ಇಸ್ಲಾಂ ಮುಂಚೆಯೂ ಹಲವಾರು ಸುಧಾರಣಾವಾದಿಗಳ ಅಥವಾ ಬಂಡುಕೋರರ

"ಮಣೆಗಾರ" ಬಸಿದಿಟ್ಟ ಒಡಲಾಳದ ನೋವು ನೆನೆದು...

ಹಾಲ್ಕುರಿಕೆ ಥಿಯೇಟರ್ ಕಾನ್ಸೆಪ್ಟ್ ಕನ್ನಡ ರಂಗಭೂಮಿಯಲ್ಲಿ ಹೊಸದೊಂದು ಸಂಚಲನವನ್ನುಂಟು ಮಾಡುತ್ತಿದೆ. ಒಟ್ಟಾರೆ ಭಾರತೀಯ ರಂಗಭೂಮಿ ಕಾಣುತ್ತಿರುವ ಹೊಸತನಕ್ಕೆ ಇದು ಮುಖ್ಯವಾದ ಸಾಕ್ಷಿ. ಅತ್ಯಂತ ಕ್ರಿಯಾಶೀಲ ತುಡಿತದ ರಂಗಕರ್ಮಿ ಹಾಲ್ಕುರಿಕೆ ಶಿವಶಂಕರ (ನಿರ್ದೇಶಕ/ನಾಟಕಕಾರ) ಇತ್ತೀಚೆಗೆ "ಮಣೆಗಾರ" (ತುಂಬಾಡಿ ರಾಮಯ್ಯನವರ ಆತ್ಮಕಥೆ) ಎನ್ನುವ ದಲಿತ ಕಥಾನಕವೊಂದನ್ನು ರಂಗದ ಮೇಲೆ ಅನಾವರಣಗೊಳಿಸಿದರು. ಪ್ರಯೋಗದ ದೃಷ್ಟಿಯಿಂದ ಕೆಲವು ಕೊರತೆಗಳು, ದೋಷಗಳು ಇವೆ. ಅದು ಯಾವುದೇ ಪ್ರಯೋಗಕ್ಕೆ ಇರುವಂಥವೇ. ಆದರೆ ಸಮುದಾಯವೊಂದರ ಒಡಲಾಳದ ನೋವನ್ನು ರಂಗದ ಮೇಲೆ ಬಸಿದಿಟ್ಟಾಗ  ಬೆಚ್ಚಿ ಬೀಳುವಂತಾಯಿತು. ವಿಶೇಷವಾಗಿ ದಲಿತೇತರಲ್ಲಿ ಸಾಮಾಜಿಕ ಪ್ರಜ್ಞೆ, ಜವಾಬ್ದಾರಿಯನ್ನು ಬಡಿದೆಬ್ಬಿಸುವಂಥ ಕಥಾನಕವದು. "ಮಣೆಗಾರ" ಪ್ರೊಸಿನಿಯಂಗಿಂತ ಆಪ್ತರಂಗಭೂಮಿಗೆ ಸೂಕ್ತವಾದ ವಸ್ತು. ಪ್ರಯೋಗ ಒಟ್ಟಾರೆ ಮನುಷ್ಯ ಬದುಕಿನ ನಡುವಿರುವ ಗ್ರೇ ಏರಿಯಾವೊಂದರ ದರುಶನ ಮಾಡಿಸಿತು. ಮೇಲ್ವರ್ಗ ಸಹಮಾನವರನ್ನು ಅದು ಹೇಗೆ ಅಸ್ಪೃಶ್ಯರು ಎಂದು ದೂರಕ್ಕಿಟ್ಟಿತ್ತು, ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿತ್ತು ಎನ್ನುವುದು ಇದರ ಮೂಲ ಸಂಕಟ. ಇಡೀ ನಾಟಕದಲ್ಲಿ ಬದುಕಿಗಾಗೇ ಸಂಘರ್ಷವಿದೆ. ಆಹಾರಕ್ಕಾಗಿ ಹಾಹಾಕಾರವಿದೆ. socio-cultural  ನೆಲೆಯಲ್ಲಿ ದೊಡ್ಡ ಸಂಘರ್ಷವಿದೆ. ಇದು ರಾಜಕೀಯ ಆಯಾಮದಲ್ಲೂ ಬಹುಮುಖ್ಯವಾದ ಸಂಘರ್ಷವೇ. ಶಿಕ್ಷಣ ಮತ್ತು ಅದರ ಆಧಾರದಲ್ಲಿ ಹುಟ

"ಬದುಕು-ಬಯಲು" ನಾಟಕ ಮತ್ತು ಮಾನವೀಯ ನೆಲೆಯ ಹುಡುಕಾಟ

ಫ್ರಾನ್ಸ್ ನ ಬರಹಗಾರ ಅಲ್ಫ್ರೆಡ್ ಜೆರಿ ಬರೆದ 'ದಿ ಸೂಪರ್ ಮೇಲ್' ಎನ್ನುವ ಕಾದಂಬರಿಯ ಪ್ರೊಟಗಾನಿಸ್ಟ್ ಆ್ಯಂಡ್ರಿ ಮಾರ್ಕೆಲ್ ಒಬ್ಬ ಜಂಟಲ್ ಮನ್, ವಿಜ್ಞಾನಿ ಕೂಡ. ಅವನಿಗೆ ಮಾನವ ಸಾಮರ್ಥ್ಯಕ್ಕೆ ಮಿತಿ ಎಂಬುದೇ ಇಲ್ಲ ಎನ್ನುವುದರಲ್ಲಿ ಬಲವಾದ ನಂಬಿಕೆ. ಆತ ಉಗಿಬಂಡಿ ಜತೆಗೂ ಯಾವುದೇ ವಿಶ್ರಾಂತಿ ಮತ್ತು ತ್ರಾಸಿಲ್ಲದೇ ಕ್ರಮಿಸಿ  ರೇಸ್ ಗೆಲ್ಲಬಲ್ಲ (ಕಾದಂಬರಿಯಲ್ಲಿ ರೈಲು ಮತ್ತು ಸೈಕ್ಲಿಸ್ಟ್ ನಡುವೆ ಒಂದು ರೇಸ್ ನಡೆಯುತ್ತದೆ). ಒಂದೇ ಹೆಂಗಸಿನ ಜತೆ 24 ಗಂಟೆಗಳಲ್ಲಿ 82 ಬಾರಿ ಸಂಭೋಗ ನಡೆಸಬಲ್ಲ 'ಕಾಮಪಟುತ್ವ'ದ ಸಾಹಸಗಳನ್ನೂ ಮಾಡಬಲ್ಲ. ಇದನ್ನು ಪುರುಷಪರಾಕ್ರಮದ ನೆಲೆಯಲ್ಲಿ ನೋಡೋದಾ? ಇಲ್ಲಾ ನಿಸರ್ಗ ಸಹಜ ಸಾಧ್ಯತೆಯ ನೆಲೆಯಲ್ಲಿ ನೋಡುವುದಾ?... - ಇದು ಒಂದು ರೀತಿಯ ವಿಕ್ಷಿಪ್ತ ಮನೋಧರ್ಮದ, ಸೈನ್ಸ್ ಫಿಕ್ಷನ್ ಕಾದಂಬರಿಯ ಸಂಕ್ಷಿಪ್ತ ನೋಟ. ಅಲ್ಫ್ರೆಡ್ ಜೆರಿ ಉತ್ತಮ ನಾಟಕಕಾರನೂ ಹೌದು. ಆತನ 'ಉಬು ರೊಯ್' ಹೆಸರಾಂತ ನಾಟಕಗಳಲ್ಲೊಂದು.    * * * ಜೆರಿ ಬಗ್ಗೆ ಓದುತ್ತಿದ್ದ ಹೊತ್ತಲ್ಲಿ ಹಿಜಡಾವೊಬ್ಬರ ಆತ್ಮಕಥನ ಆಧರಿಸಿದ "ಬದುಕು-ಬಯಲು" ಎನ್ನುವ ನಾಟಕ ವೀಕ್ಷಣೆಗೆ ತಿಪಟೂರಿನ ರಂಗ ಗೆಳೆಯ ನೀನಾಸಂ ಚಂದ್ರು ಆಹ್ವಾನ ನೀಡಿದರು.  ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ ನೋಡಿದೆ. ಅದಕ್ಕೂ ಮುಂಚೆ ನಾಟಕದ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಸಿ.ಎಸ್. ದ್ವಾರಕಾನಾಥ್, ಗೌರಿ ಲಂಕೇಶ್ ಮತ್ತಿತರ ಚಿಂತಕರ ವಿ