ವಿಷಯಕ್ಕೆ ಹೋಗಿ

ಸಾವು...

ಕವಿ ಜಿ.ಎಸ್. ಶಿವರುದ್ರಪ್ಪ ಕಾವ್ಯ ಕಟ್ಟಿದರು. ಅದನ್ನು ಎದೆ ತುಂಬಿ ಹಾಡಿದವರೆಷ್ಟೋ. ಅವರು ಪ್ರೇಮ, ಪ್ರೀತಿಯ ಮಾತು ಹೇಳಿದರು. ಅದೆಷ್ಟೋ ಮಾನವ ಪ್ರೇಮಿಗಳು ಎದೆಗಿಳಿಸಿಕೊಂಡರು. ಕಾವ್ಯ, ಹಾಡು, ಪ್ರೇಮ ... ನಿರಂತರ.   ಇವು ಎಂದೂ ನಿಲ್ಲದ ಧಾರೆಗಳು. ಕವಿತೆಗೆ ಸಾವಿಲ್ಲ, ಕವಿಗೂ...
* * *
 ಬದುಕಿನೊಟ್ಟಿಗಿನ ಸಂಬಂಧವನ್ನು ಪದ್ಯ, ಗದ್ಯಗಳಲ್ಲಿ ಹಿಡಿದಿಡುವ ಯತ್ನ ಮನುಷ್ಯ ಸೂಕ್ಷ್ಮದ ಸಹಜ ನಡೆ. ಅವನಿಟ್ಟ ಹೆಜ್ಜೆ, ಆಡಿದ ನುಡಿ, ಕನಸಿದ ಭಾವ  ಎಲ್ಲದರ ಪಡಿನೆರಳನ್ನು ಪದ ಪದಗಳಲ್ಲೂ ವಿಸ್ಮಯದಂತೆ ಮೂಡಿಸುವುದು ಕಾವ್ಯಕ್ಕೆ ಸಾಧ್ಯವಿದೆ. ಸಾಲು, ಸಾಲುಗಳ ನಡುವಿನುಸಿರು, ಪಸೆ ಮತ್ತು ಎಲ್ಲ ಎಲ್ಲದರ ಗುಟ್ಟನ್ನು ಒಡಲಲ್ಲಿಟ್ಟುಕೊಂಡ ಕುತೂಹಲ ಧಾರೆಯಂತೆ ಹರಿದು ನಮ್ಮೊಳಗೂ ಇಳಿದಾಗ ಆಗುವ ಅನುಭೂತಿ ...
ಭಾವುಕ ಜಗತ್ತನ್ನು ಕಲಾತ್ಮಕಗೊಳಿಸಿದ ಕವಿ ಜಿಎಸ್ಎಸ್ ಜೀವಪ್ರೀತಿಯನ್ನೇ ನೆಚ್ಚಿಕೊಂಡಿದ್ದರು. ಅಂತಃಕರಣ, ಸಹಜತೆ, ಸರಳತೆ ಮತ್ತು ಮುಗ್ಧತೆಯನ್ನು ಕಾವ್ಯಕ್ಕಿಳಿಸಿ ಮಾನವ ಪ್ರೇಮದ ಹೊನಲಾಗಿಸಿದರು.
ಕಾವ್ಯ ಒಳಗಿನದೆಲ್ಲವನು ಬಟಾಬಯಲುಗೊಳಿಸಿಕೊಳ್ಳುವ ಕ್ರಿಯೆಯೂ ಹೌದು. ತಮ್ಮ ಮನದಾಳದ ಮಾನವ ಪ್ರೇಮವನ್ನು ಅವರೆಂದೂ ಬಚ್ಚಿಟ್ಟುಕೊಂಡವರಲ್ಲ. ಧಾರೆ ಎರೆದವರು. 'ಪ್ರೀತಿ ಇಲ್ಲದ ಮೇಲೆ...' ಇಲ್ಲಾವುದೂ, ಏನೂ ಇಲ್ಲ  ಎನ್ನುವುದರಲ್ಲಿ ದೊಡ್ಡ ನಂಬಿಕೆ ಇಟ್ಟುಕೊಂಡೇ ಮೊನ್ನೆ ಹೊರಟು ಹೋದರು. ಕಾಣದ ಕಡಲಿನತ್ತ...
* * *

ವಿಷಾದವೆಂದರೆ ಅಷ್ಟು ಸಹಜ ಮತ್ತು ಸರಳತೆಯ ಮನುಷ್ಯನೊಬ್ಬ ಬದುಕಿನ ಜಾತ್ರೆ ಮುಗಿಸಿದಾಗ 'ಸಾವನ್ನು ಸಂಭ್ರಮಿಸುವ ರೀತಿಯಲ್ಲಿ' ಆತನ ಅಂತ್ಯಸಂಸ್ಕಾರ ನಡೆದದ್ದು ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಸಾಂಸ್ಕೃತಿಕ ಲೋಕದಲ್ಲಿ ದೊಡ್ಡ ಚರ್ಚೆ ನಡೆಯುತ್ತಿದೆ. ಈ ನಡೆಗೆ ಸೂಕ್ಷ್ಮ ಸಂವೇದನೆಯ ಕಲಾವಿದರು, ಬರಹಗಾರರು ಮತ್ತು ಬುದ್ಧಿಜೀವಿಗಳಿಂದ ದೊಡ್ಡ ವಿರೋಧವೇ ವ್ಯಕ್ತವಾಗಿದೆ. ಕಲಾಕ್ಷೇತ್ರ, ವಿಶ್ವವಿದ್ಯಾಲಯ ಇವೆಲ್ಲ ಯಾರನ್ನೂ ದೊಡ್ಡವರು, ಸಣ್ಣವರು ಎಂದು ನಿರ್ಧರಿಸುವ ತಾಣಗಳಲ್ಲ. ಲಿಖಿತ ಸಂವಿಧಾನ ಹೊಂದಿರುವ ಈ ದೇಶದ ಸರ್ಕಾರಗಳಿಗಂತೂ ಎಲ್ಲ ಸರಿ ಸಮಾನರು. ಯಾರೂ ಕೀಳಲ್ಲ, ಯಾರೂ ಮೇಲಲ್ಲ. ಧರ್ಮ, ದೈವತ್ವದ ನಂಬಿಕೆಗಳ ಪ್ರಕಾರವೂ ಮನುಷ್ಯ ಅತೀತನಲ್ಲ. ಮನುಷ್ಯ  ದೇವರಲ್ಲ..  ಕವಿ ಇದಕ್ಕೆ ಹೊರತಲ್ಲ.
ಸಾವು ಎಂದರೆ ಅದು ಸಾವೇ. ಕವಿಯಾಗಿದ್ದವ ಸತ್ತರೂ, ಹುಲು ಮಾನವ ಸತ್ತರೂ...
ಲೆಬನಾನಿನ ದಾರ್ಶನಿಕ ಕವಿ ಖಲೀಲ್ ಗಿಬ್ರಾನ್ ಸಾವಿನ ಬಗ್ಗೆ ಹೇಳುವ  ಈ ಅರ್ಥಪೂರ್ಣ ಮಾತುಗಳನ್ನು ಪುನರುಚ್ಛರಿಸಬೇಕೆನಿಸಿತು.


ನೀವು ಸಾವಿನ ರಹಸ್ಯ ತಿಳಿಯಲು ಸಂಶೋಧನೆ ನಡೆಸಬಹುದು.
ಆದರೆ, ಆತ್ಮಶೋಧನೆ ಇಲ್ಲದೇ ಮೃತ್ಯುವಿನ ದರುಶನ ಹೇಗಾದೀತು?
ಇರುಳಿಗೆ ಬದ್ಧ ಗೂಬೆ ಕಣ್ಣುಗಳು ಹಗಲು ತೆರಕೊಳ್ಳುವುದೇ ಇಲ್ಲ,
ಬೆಳಕಿನ ಬಣ್ಣಗಳ ರಹಸ್ಯವ ಅದು ಹೇಗೆ ಪ್ರಕಟಿಸೀತು...!

ನಿಮಗೆ ಮೃತ್ಯುವಿನ ನಿಜಸ್ವರೂಪದ ದರುಶನವಾಗಬೇಕೆ?
ಹಾಗಿದ್ದರೆ ತೆರೆದುಕೊಳ್ಳಲಿ ನಿಮ್ಮ ಹೃದಯ ಅನಂತದವರೆಗೆ,
ಅದು ಲೀನವಾಗಲಿ ಬದುಕಿನ ಶರೀರದೊಳಗೆ...
ಏಕೆಂದರೆ ನದಿ ಮತ್ತು ಸಾಗರದಂತೆ, ಬದುಕು ಮತ್ತು ಸಾವು ಅಭಿನ್ನ.

ನಿಮ್ಮ ಆಸೆ, ಆಕಾಂಕ್ಷೆಗಳ ಆಳದಲ್ಲೇ ಪರಲೋಕದ ಮೌನ ಚೇತನ ಮಿಸುಕಾಡುತ್ತಿರುತ್ತದೆ.
ಮತ್ತು ನಿಮ್ಮ ಹೃದಯ, ಮಂಜಿನೊಳಗೆ ಹೂತ ಬೀಜದಂತೆ
ವಸಂತದ ಕನಸು ಕಾಣುತ್ತಿರುತ್ತದೆ.
ಇಂಥ ಕನಸುಗಳ ಮೇಲೆ ನಂಬಿಕೆಯಿಡಿ;
ಏಕೆಂದರೆ, ಇಲ್ಲೇ ಇದೆ ದ್ವಾರ,
ಅನಂತದೆಡೆಗೆ ತೆರಕೊಳ್ಳುವ ಹಾದಿ ಸೇರಲು!

ಸಾಯುವುದರರ್ಥ ಗಾಳಿಯಲ್ಲಿ ಲೀನವಾಗುವುದು, ಬಿಸಿಲಲ್ಲಿ ಕರಗುವುದು ಎಂದೇ ಅಲ್ಲವೇ?
ನಿಮ್ಮ ಪ್ರಾಣವಾಯುವಿಗೆ ಅಶಾಂತ ಬಿರುಗಾಳಿಯಿಂದ ಮುಕ್ತಿ ಸಿಗುವುದು,
ಮತ್ತು ಎತ್ತರೆತ್ತರಕ್ಕೆ ಏರಿ ವಿಸ್ತಾರ ಪಡಕೊಳ್ಳುತ್ತ ಮುಕ್ತಿಮಾರ್ಗ ಹಿಡಿದು
ಸೃಷ್ಟಿಕರ್ತನ ಸೇರಿಕೊಳ್ಳುವುದು...
ಇಷ್ಟೇ ಅಲ್ಲವೇ ಉಸಿರು ಸ್ತಬ್ದವಾಗುವುದರರ್ಥ?

ನೀವು ನಿಜವಾಗಲೂ ಹಾಡೋದು ಪ್ರಶಾಂತ ನದಿಯ ಜಲ ಕುಡಿದಾಗಲೇ !
ಶಿಖರ-ಪರ್ವತಗಳ ತುದಿ ತಲುಪಿದ ಮೇಲೇ ನಿಜವಾದ ಆರೋಹಣ ಶುರುವಾಗೋದು...

-ದಿಲ್
ಮೂಲ: ಖಲೀಲ್ ಗಿಬ್ರಾನ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಷ್ಕ್‌ ಕೆ ಇಮ್ತೆಹಾನ್‌ ಔರ್‌ ಭೀ ಹೈ’.. ಇಮ್ರಾನ್‌ ಖಾನ್‌!

ಪಾಕಿಸ್ತಾನದ ಬಗ್ಗೆ ಮಾತನಾಡುವುದು ಮಹಾ ಪಾಪದ ಕೆಲಸವೇನಲ್ಲ. ಹಾಗೆ ಭಾವಿಸಬೇಕಿಲ್ಲ. ಅದು ಒಪ್ಪಿತವೊ ಇಲ್ಲವೋ, ಅದರ ಬಗ್ಗೆ ಅಲಕ್ಷ್ಯವೋ ನಿರ್ಲಕ್ಷ್ಯವೊ ಏನೇ ಆದರೂ ಅದು ಒಂದು ದೇಶ. ನೆರೆಯ ರಾಷ್ಟ್ರ. ‘ಪಡೋಸಿ...’ ಸಂಬಂಧದಲ್ಲಿ ನಮ್ಮದೇ ಕರುಳಬಳ್ಳಿ. ಭಾಷೆ, ಜನಜೀವನ ಶೈಲಿಯಲ್ಲಿ ಬದಲಾದರೂ ಮನುಷ್ಯ ಭಾವ, ಬದುಕುವ ಸಾಮಾನ್ಯ ಕಾಳಜಿ  ಒಂದೇ. ಹಾಗೆ ನೋಡಿದರೆ ಸಾಂಸ್ಕೃತಿಕವಾಗಿ ಎರಡೂ ದೇಶಗಳು ಅಭಿನ್ನ. ನಮ್ಮಲ್ಲಿರುವ ಹಾಗೆ ಅಲ್ಲಿಯೂ ಪ್ರಜಾಪ್ರಭುತ್ವ ಇದೆ. ಅಲ್ಲಿ ನಡೆಯುವುದು ಇಲ್ಲೂ ನಡೆಯುತ್ತದೆ. ಅಲ್ಲಿ ನಡೆಯಲೇಬಾರದ್ದು ಇಲ್ಲೂ ನಡೆಯಲೇಬಾರದು.  ತೀವ್ರವಾದ ನಮ್ಮಲ್ಲಿನದಕ್ಕಿಂತ ಅಲ್ಲಿ ತುಸು ಹೆಚ್ಚು ಸವಾರಿಗೆ ಹವಣಿಸಿದೆ. ಅಲ್ಲಿನ ಮಿಲಿಟರಿ ಅತಿರೇಕದ್ದು. ಅಕ್ಷಮ್ಯ. ಮತ್ತೆ ದೇಶ ಪುಟ್ಟದಾದಷ್ಟು ಅದಕ್ಕೆ ಭಯಗಳು ಜಾಸ್ತಿ. ಮಿಲಿಟರಿ ಕವಚದಲ್ಲಿ ಅದು ಸುರಕ್ಷಾ ಭಾವವನ್ನು ಕಲ್ಪಿಸಿಕೊಳ್ಳುತ್ತದೆ. ಅದೊಂದು ತರಹದ ಸಮಾಧಾನ. ಆದರೆ ಭ್ರಮೆಯಿಂದ ಕೂಡಿದ್ದು. ಭಯೋತ್ಪಾದನೆ ಕೂಡ ಒಂದರ್ಥದಲ್ಲಿ ಪುಕ್ಕಲುತನವೇ ಆಗುತ್ತದೆ. ಹಿಂಸಾ ಪ್ರವೃತ್ತಿಗೆ ಹೆದರಿಸುವುದೇ ಕೆಲಸ. ಹೆದರಿಸುವವರು ಶೂರರು, ಧೀರರು ಮತ್ತು ಜೀನಿಯಸ್‌ ಆಗಿರಲು ಹೇಗೆ ಸಾಧ್ಯ? ಮುಖ್ಯವಾಗಿ ಅಲ್ಲಿನ ವಿದ್ಯಮಾನಗಳನ್ನು ಗಮನಿಸುವುದಾದರೆ, ಮಿಲಿಟರಿ, ಮತಾಂಧರು, ಭಯೋತ್ಪಾದಕರು, ಭ್ರಷ್ಟರು ಇದೆಲ್ಲದರಿಂದ ಪಾಕಿ ತುಂಬ ರೋಸಿ ಹೋಗಿದ್ದಾನೆ. ಒಂದು ಸೂಕ್ತ ಪರ್ಯಾಯಕ್ಕಾಗಿ ಹಂಬಲಿಸಿದ್...

ನಾನು ನೀನಾಸಂ ಪದವೀಧರನಲ್ಲ...

ನೀನಾಸಂ ಪದವಿ ನನ್ನ ತಲೆಗೆ ಅನಗತ್ಯ ಭಾರ ಸ್ವಾಮೀ. ಅಷ್ಟು ಕಪ್ಪು ಸುಂದರಿಯರ ಭಾರವೇ ನನ್ನ ತಲೆಗೆ ಸಾಕಾಗಿ ಹೋಗಿದೆ. ಇನ್ನು ಇಷ್ಟು 'ವಜನ್' ಪದವಿ ಕಿರೀಟ ಬೇಡವೇ ಬೇಡ. ಸುಮ್ಮನೇ ಖಾಸಗಿಯಾಗಿ ಡೈರಿಯ ಹಾಗೆ ಬೆಚ್ಚಗೆ ನನ್ನ ಜತೆಗೆ ಸದಾ ಇರಲಿ ಎಂದುಕೊಂಡು ಈ ಬ್ಲಾಗ್ ರೂಪಿಸಿದ್ದೇನಷ್ಟೇ. ಅವಧಿ ಬ್ಲಾಗ್ ನನ್ನ ಈ ಪುಟ್ಟ ಯತ್ನಕ್ಕೆ ಬೆನ್ನು ತಟ್ಟಿದ್ದು ಸಂತೋಷವೇ. ಆದರೆ, ನನ್ನ ಬಗ್ಗೆ ಬೆನ್ನುತಟ್ಟುವ ಸಾಲುಗಳ ಬರೆಯುತ್ತ ನೀನಾಸಂ ಪದವೀಧರ ಎನ್ನುವ ಒಂದು ತಪ್ಪು ಮಾಹಿತಿ ಕೂಡ ನುಸುಳಿಕೊಂಡಿದೆ. ಸ್ವಾಮೀ ನಾನೀ ನೀನಾಸಂ ಸುದ್ದಿಗೇ ಹೋದವನಲ್ಲ. ಅಲ್ಲಿ ಕಲಿತು ಬಂದವರ ಜತೆ 'ಬೇಜಾನ್' ಜಗಳ ಮಾಡಿದಿನಿ ಅಷ್ಟೇ.

‘ಪಲ್ಲಟ’ ಒಂದು ಪ್ರಾಮಾಣಿಕ ಪ್ರಯತ್ನ

  (ಇನ್ನೂ ತೆರೆ ಕಾಣದ ‘ಪಲ್ಲಟ’ ಕನ್ನಡ ಸಿನಿಮಾದ ಪ್ರೀಮಿಯರ್‌ ಶೋ  ಬಗ್ಗೆ ) ಸಿನಿಮಾದ ಸೊಗಸೇ ಅಂಥದು. ಯಂತ್ರಗಳಿಂದ ಸೆರೆ ಹಿಡಿದ ಬದುಕು ತೆರೆಯ ಮೇಲೆ ಬಾಳುವಾಗ ಆ ಕ್ಷಣಕ್ಕೆ ಎಲ್ಲ ಹೊಸತೇ ಆಗಿ ಕಾಣಿಸುತ್ತದೆ. ಗತ ಬದುಕು ಹೊಸ ಬದುಕಿನಂತೆ ಹೊಳೆಯುತ್ತದೆ. ಪರದೆ ಮೇಲಿನ ಮೂರು ಗಂಟೆಯ ಬಾಳಲ್ಲಿ ಪ್ರೇಕ್ಷಕ ಅದರ ಅಸಲಿ ನೋವು, ನಲಿವುಗಳ ಬದುಕಿಗಿಳಿಯುತ್ತ ಮೆಲ್ಲಗೆ ಅದರ ಒಟ್ಟು ಹರವಿನಗುಂಟ ಸಾಗಬಹುದು. ಆ ಪುಟ್ಟ ಜರ್ನಿಯಲ್ಲಿ  ಅವನೊಳಗಿನ ಬದುಕಿಗೆ ಹೊಸ ಕಣ್ಣುಗಳು ಮೂಡಬಹುದು. ಅಂತಃಕರಣದ ಸೆಲೆಗಳು ಮತ್ತಷ್ಟು ಜಿನುಗಬಹುದು. ಸಿನಿಮಾದ ಸಾಧ್ಯತೆಗಳು, ಪರಿಣಾಮಗಳು ಹಲವು. ಸಿನಿಮಾಗೆ ಅದರ ಅಂತಃಸತ್ವ ಮುಖ್ಯ. ನೋಡಿ ತಿಳಿವ ಪ್ರಾಸೆಸ್‌ ಇದಾದ್ದರಿಂದ ವಿಶ್ಯುಯಲ್‌ ಟ್ರೀಟಮೆಂಟ್‌ ಕೂಡ ಮುಖ್ಯ.  ‘ಪಲ್ಲಟ’ ಕನ್ನಡ ಸಿನಿಮಾದ ವಸ್ತು  ಸ್ಥಳೀಯ ಸಂಸ್ಕೃತಿಗಳ ಸ್ಥಿತ್ಯಂತರ ಹೇಗೆ ನಿಜ ಜೀವನದಲ್ಲಿ ಕೆಲವರ ಬದುಕನ್ನೇ ಮುಗಿಸಿಬಿಡುತ್ತದೆ ಎನ್ನುವುದು. ಇದು ಅಮಾನವೀಯ ಎನ್ನುವುದು ಚಿತ್ರದ ಒಳದನಿ. ಬಹುಕಾಲ ನಿಲ್ಲಬಲ್ಲ ಮತ್ತು ಕಾಡಬಲ್ಲ ಸಿನಿಮಾ ಆಗುವ ಅವಕಾಶವನ್ನು ಇದು ಸ್ವಲ್ಪದರಲ್ಲಿಯೇ ಕಳಕೊಂಡಿದೆ. ಇದರಾಚೆಗೂ ಚಿತ್ರ ಕೆಲವು ವಿಚಾರಗಳಿಗೆ ಸಂಬಂಧಿಸಿ ಚರ್ಚೆಗೆ ಯೋಗ್ಯವಾಗಿದೆ. ನಾಗರಿಕತೆ ಎಂಬುದು ಜನರೇ ಸೃಜಿಸಿಕೊಂಡಿದ್ದು. ಆಯಾ ಜನಪ್ರದೇಶಗಳಲ್ಲಿ ಕಾಲದ ಅಗತ್ಯಗಳಿಗೆ ತಕ್ಕುದಾದ ವ್ಯವಸ್ಥೆಯೊಂದು ರೂಪುಗೊಂಡಿರುತ್ತದ...