ವಿಷಯಕ್ಕೆ ಹೋಗಿ

ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ.... ಭಾಗ 4

1944. ಆಗ ಅಬ್ಬಾಗೆ ಇಪ್ಪತ್ತರ ಹರೆಯ. ಸಿರಾಜುದ್ದೀನ್ ಅಹ್ಮದ್ ಸಾಹೇಬ್ ಮತ್ತು ತಾಲೀಮುನ್ನೀಸಾ ಅವರ ಮಗಳು ಬಿಲ್ಖೀಸ್ ಅವರನ್ನು ಅಬ್ಬಾ (ಮೊಹಮ್ಮದ್ ರಫೀ) ವಿವಾಹವಾದರು. ನನಗಿದ್ದ ಮಾಹಿತಿಯಂತೆ ಸಿರಾಜುದ್ದೀನ್ ಅವರಿಗೆ ನಾಲ್ವರು ಹೆಂಡತಿಯರು ಮತ್ತು ಒಂಭತ್ತು ಮಕ್ಕಳು. ಹೆಂಡತಿಯರ ಪೈಕಿ ಮೂವರು ಒಬ್ಬರ ನಂತರ ಒಬ್ಬರಂತೆ ಅತ್ಯಂತ ಕಡಿಮೆ ಅಂತರದ ಅವಧಿಯಲ್ಲೇ ನಿಧನರಾಗಿದ್ದರು. ನಾಲ್ಕನೇ ಹೆಂಡತಿಯೇ ತಾಲೀಮುನ್ನೀಸಾ. ದಂಪತಿಗೆ ಇಬ್ಬರು ಹೆಣ್ಣುಮಕ್ಕಳು ಮತ್ತು ಮೂವರು ಗಂಡುಮಕ್ಕಳು. ಅವರಲ್ಲಿ ಬಿಲ್ಖೀಸ್ ಕೂಡ ಒಬ್ಬರು.
ಅಮ್ಮಾಗೆ (ಬಿಲ್ಖೀಸ್) ಆಗ ಕೇವಲ ಹದಿಮೂರರ ವಯಸ್ಸು. ಮದುವೆ ಬಗ್ಗೆ ಏನೂ ತಿಳಿಯದ ವಯಸ್ಸು. 'ಒಂದು ದಿನ ನಾನು ಶಾಲೆಯಿಂದ ವಾಪಸ್ ಬಂದೆ. ಅದೇ ದಿನ ನನಗೆ ಮದುವೆ ಅಂತ ಹೇಳಿದರು. ಮದುವೆ ಗಂಡು ಈ ನಿನ್ನ ಅಬ್ಬಾ. ನಾನಾಗ ನಿನ್ನ ಅಬ್ಬಾನನ್ನು ಭಾಯ್ ಎಂದು ಕರೆಯುತ್ತಿದ್ದೆ' ಎಂದು ಅವರು ಆಗಾಗ ನನ್ನ ಬಳಿ ನೆನಪಿಸಿಕೊಳ್ಳುತ್ತಿದ್ದರು..
ಹಮೀದ್ ಭಾಯ್ ಅಬ್ಬಾ ಅವರ  ಎಲ್ಲಾ ವೃತ್ತೀಯ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರು. ಹಮೀದ್ ಭಾಯ್ ಕೂಡ ಸಿರಾಜುದ್ದೀನರ ಮಗಳು ಮೆಹರುನ್ನೀಸಾಳನ್ನು ಮದುವೆಯಾದರು. ಈಕೆ ಸಿರಾಜುದ್ದೀನ್ ಅವರ ಮೊದಲ ಪತ್ನಿಯ ಮಗಳು. ಹಮೀದ್ ಭಾಯ್ ಅಬ್ಬಾ ಜತೆ 1950ರವರೆಗೂ ಇದ್ದರು. ಆನಂತರದಲ್ಲಿ ಅವರು ತಮ್ಮ ಪರಿವಾರ ಸಮೇತ ಬೆಂಗಳೂರಿಗೆ ಸ್ಥಳಾಂತರಗೊಂಡರು. ಆಗ ಅಬ್ಬಾ ವ್ಯವಹಾರಗಳನ್ನೆಲ್ಲಾ ಅಮ್ಮಾ ಸಹೋದರ ಜಹೀರ್ ಬಾರಿ ನೋಡಿಕೊಳ್ಳತೊಡಗಿದರು.
* * *
ಮೂರ್ನಾಲ್ಕು ವರ್ಷ ಕಳೆದಿರಬೇಕು. ಅಬ್ಬಾಗೆ ಕೆ.ಎಲ್. ಸೈಗಲ್ ಅವರ ಜತೆ ಹಾಡುವ ಅವಕಾಶವೊಂದು ತಾನಾಗೇ ಒಲಿದು ಬಂದಿತು. ಈ ಅವಕಾಶಕ್ಕಾಗಿ ಅಬ್ಬಾ ಅದೆಷ್ಟು ವರ್ಷದಿಂದ ಕಾದು ಕೂತಿದ್ದರು. ನೌಶಾದ್ ಅವರು ಅದಾಗಲೇ ’ಷಹಜಹಾನ್’ ಚಿತ್ರಕ್ಕೆ ಸಂಗೀತ ನೀಡುತ್ತಿದ್ದರು. ’ಮೇರೆ ಸಪನೋಂಕೀ ರಾಣೀ ರೂಹೀ ರೂಹೀ..’ ಎನ್ನುವ ಹಾಡಿಗೆ ಅಬ್ಬಾ ದನಿ ಬಳಸಿಕೊಳ್ಳುವ ನಿರ್ಧಾರ ಕೈಗೊಂಡಿದ್ದರು. ಹತ್ತು ವರ್ಷ ವಯಸ್ಸಿನ ಹುಡುಗನಾಗಿದ್ದಾಗ ಇದೇ ಸೈಗಲ್ ಮುಂದೆ ಹಾಡಿ ಷಹಬ್ಬಾಸ್ ಅನ್ನಿಸಿಕೊಂಡಿದ್ದ ಅಬ್ಬಾ ಈಗ ಅದೇ ದಿಗ್ಗಜನೊಂದಿಗೆ ಹಾಡಿದರು. ಈಗಲೂ ಅದೇ ಷಹಬ್ಬಾಸ್ ಗಿರಿ ಸೈಗಲ್ ಅವರಿಂದ ಸಿಕ್ಕಿತ್ತು. ಈ ಹಾಡಿನ ದೃಶ್ಯದಲ್ಲಿ ಅಬ್ಬಾ ಸಣ್ಣ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು ಕೂಡ.
 ಸಮಕಾಲೀನ ಹಾಡುಗಾರರ ಪಡಿನೆರಳಲ್ಲಿ ಸಾಗುವುದಕ್ಕೆ ಅಬ್ಬಾಗೆ ಒಂದಿನಿತೂ ಇಷ್ಟವಿರಲಿಲ್ಲ. ಅಗ್ರ ಗಾಯಕರ ಶೈಲಿಯಲ್ಲೇ ಹಾಡಬೇಕೆನ್ನುವ ನಿರೀಕ್ಷೆಗಳು ಅಬ್ಬಾಗೆ ಸರಿ ಕಾಣುತ್ತಿರಲಿಲ್ಲ.  ಇದು ಅವರ ಅತ್ಯಂತ ಪೇಚಿನ ಸಮಯವಾಗಿತ್ತು. ಅವರು ತಮ್ಮದೇ ಶೈಲಿಯಲ್ಲಿ ಹಾಡಬಲ್ಲ ಸೋಪಜ್ಞ ಗಾಯಕರಾಗಿದ್ದರು. ಮುಂಚಿನಿಂದಲೂ ತಮ್ಮದೇ ಶೈಲಿಯಲ್ಲಿ ಹಾಡುತ್ತಿದ್ದರು. ಇಡೀ ಚಿತ್ರೋದ್ಯಮದಲ್ಲಿ ತಮ್ಮದೇ ಶೈಲಿ ಹೊಂದಿದ ಏಕಮಾತ್ರ ಗಾಯಕ ಇವರಾಗಿದ್ದರು. ಚಲನಚಿತ್ರ ಹಿನ್ನೆಲೆಗಾಯನಕ್ಕೆ ಅಬ್ಬಾ ಕಾಲಿಟ್ಟ ಸಂದರ್ಭದಲ್ಲಿ ಒಂದೇ ಸಪ್ತಕದ ಸ್ಕೇಲ್ ನಲ್ಲಿ ಹಾಡುವುದು ಚಿತ್ರಸಂಗೀತ ಕ್ಷೇತ್ರದ ವಾಡಿಕೆಯಂತಾಗಿತ್ತು. ಅಬ್ಬಾ ಒಂದೂವರೆ ಸಪ್ತಕದ ಸ್ಕೇಲ್ ನಲ್ಲಿ ಹಾಡುವ ಮೂಲಕ ಹೊಸದೊಂದು ಟ್ರೆಂಡ್ ಹುಟ್ಟು ಹಾಕಿದರು. ಇದು ಇಡೀ ಚಿತ್ರ ಸಂಗೀತ ಜಗತ್ತಿನಲ್ಲಿ ಬಹುದೊಡ್ಡ ಕ್ರಾಂತಿಕಾರಿ ಬದಲಾವಣೆ ತಂದಿತು.

* * *
ನೂರಜಹಾನ್ ಮತ್ತು ದಿಲೀಪಕುಮಾರ್ ಜೋಡಿಯ 'ಜುಗ್ನು' ಚಿತ್ರ ನಿರ್ಮಾಣದ ಹಂತದಲ್ಲಿತ್ತು. ಫಿರೋಜ್ ನಿಜಾಮಿ ಇದರ ಸಂಗೀತ ನಿರ್ದೇಶಕರಾಗಿದ್ದರು. ನಿಜಾಮಿ ಪರಿಚಯ ಮುಂಚಿನಿಂದಲೂ ಅಬ್ಬಾಗಿತ್ತು. ಈ ಹಿಂದೆ ಅವರ ಚಿತ್ರಗಳಲ್ಲಿ ಹಾಡಿದ್ದರು ಕೂಡ. ಆದರೀಗ ನೂರಜಹಾನ್ ಜತೆ ಯುಗಳ ಗೀತೆ ಹಾಡಿಸುವುದಕ್ಕೆ ಅವರು ಹಿಂದೇಟು ಹಾಕತೊಡಗಿದ್ದರು.  ನಿಜಾಮಿ ಕೂಡ ಉಸ್ತಾದ್ ಅಬ್ದುಲ್ ವಾಹೀದ್ ಖಾನ್ ಅವರ ಶಿಷ್ಯರಾಗಿದ್ದವರು. ಇಂಡಿಯಾದ ಅತ್ಯುತ್ತಮ ಸಂಗೀತ ನಿರ್ದೇಶಕರಲ್ಲಿ ಇವರೂ ಒಬ್ಬರಾಗಿದ್ದರು. ದೆಹಲಿ ಆಲ್ ಇಂಡಿಯಾ ರೇಡಿಯೋದಲ್ಲಿ ಸಂಗೀತ ವಿಭಾಗದ ಮುಖ್ಯಸ್ಥರೂ ಆಗಿದ್ದರು. ಅಬ್ಬಾ ದೆಹಲಿಯಲ್ಲಿ ಹಲವು ತಿಂಗಳುಗಳ ಕಾಲ ಫಿರೋಜ್ ನಿಜಾಮಿ ಅವರ ಜತೆ ತಂಗಿದ್ದರು. ಅವರಿಂದ ಕ್ಲಾಸಿಕಲ್ ಸಂಗೀತದ ಪಾಠವನ್ನೂ ಹೇಳಿಸಿಕೊಂಡಿದ್ದರು.
ನೂರಜಹಾನ್ ಆ ಕಾಲದ ಅದ್ಭುತ ನಟಿ ಮತ್ತು ಹಾಡುಗಾರ್ತಿ. ಆಕೆ ನಿಜಾಮಿ ಬಳಿ ಅಬ್ಬಾ ಪರವಾಗಿ ಪ್ರೋತ್ಸಾಹದ ಮಾತುಗಳನ್ನಾಡಿ ತುಂಬ ಕಾಳಜಿ ವ್ಯಕ್ತಪಡಿಸಿದರು. ’ಈ ಹೊಸ ಪ್ರತಿಭೆಯ ಜತೆ ಹಾಡಲು ನಾನು ಹಲವು ಸಲ ರಿಹರ್ಸಲ್ ಮಾಡಬೇಕಾಗಿ ಬಂದರೂ ತೊಂದರೆ ಇಲ್ಲ. ನಾನದನ್ನು ಸಂತೋಷದಿಂದ ನಿಭಾಯಿಸುತ್ತೇನೆ’ ಎಂದು ಅಬ್ಬಾ ಜತೆ ಹಾಡುವ ವಿಷಯದಲ್ಲಿ ತಮಗಾವುದೇ ತೊಂದರೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಅಬ್ಬಾ ತಮ್ಮ ಉತ್ತಮ ಗಾಯನ ಸಾಮರ್ಥ್ಯವನ್ನು ಸಾಬೀತುಪಡಿಸಲು ಇಂಥದೇ ಒಂದು ಅವಕಾಶಕ್ಕಾಗಿ ಎದುರು ನೋಡುತ್ತಿದ್ದರು. ನೂರಜಹಾನ್‌ಳ ಈ ಕಾಳಜಿಯನ್ನು ಅಬ್ಬಾ ತುಂಬ ಗೌರವದಿಂದ ಆಗಾಗ ಸ್ಮರಿಸಿಕೊಳ್ಳುತ್ತಿದ್ದರು.
 ’ಹಾಡುವಾಗ ಯಾವತ್ತೂ ಮುಖ ಕಿವುಚಿಕೊಂಡು ಹಾಡಬೇಡ’- ಇದು ಅಬ್ಬಾಗೆ ನೂರಜಹಾನ್ ಹೇಳಿದ ಕಿವಿ ಮಾತು. ’ಹೌದು ನೂರಜಹಾನ್ ಅವರು ಹೇಳಿದ್ದು ಸೂಕ್ತವಾಗಿದೆ ಎಂದು ನಾನೀಗ ದೈರ್ಯದಿಂದ ಹೇಳಬಲ್ಲೆ. ನನ್ನ ಅಭಿಪ್ರಾಯದಲ್ಲಿ ಯಾವುದೇ ಹಾಡುಗಾರ ಹಾಡುವಾಗ ಮುಖದ ಸ್ನಾಯುಗಳನ್ನು ಹುರಿಗೊಳಿಸಿ ಹಾಡುವುದು ಒಳ್ಳೆಯದಲ್ಲ’ ಎಂದು ಅಬ್ಬಾ ನೂರಜಹಾನ್ ರನ್ನು ಹೆಮ್ಮೆಯಿಂದ ಸ್ಮರಿಸಿಕೊಳ್ಳುತ್ತಿದ್ದರು.
ನೂರಜಹಾನ್ ಲಂಡನ್ ಟಿವಿಯ ಏಷ್ಯ ಚಾನೆಲ್ ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ’ರಫೀ ಯಾವತ್ತಿನಿಂದ ಹಾಡಲು ಶುರುಮಾಡಿದರೋ ಅದ್ಭುತವನ್ನೇ ಸೃಷ್ಟಿಸತೊಡಗಿದರು’ (ರಫೀ ನೆ ಜಬ್ ಸೇ ಗಾನಾ ಶುರೂ ಕಿಯಾ, ಪತ್ತಿಯ್ಞಾ ತೋಡ್ ದೀ) ಎಂದು ಉದ್ಗರಿಸಿದ್ದರು.
* * *
’ಜುಗ್ನು’ ಚಿತ್ರ 1947ರಲ್ಲಿ ರಿಲೀಜ್ ಆಯ್ತು. ನೂರಜಹಾನ್ ಮತ್ತು ರಫೀ ಹಾಡಿದ ಯುಗಳ ಗೀತೆ ಜನಪ್ರಿಯಗೊಂಡಿತು. ’ಯಹ್ಞಾಂ ಬದ್ಲಾ ವಫಾ ಕಾ, ಬೇವಫಾ ಕೆ ಸಿವಾ ಕ್ಯಾ ಹೈ...’  ಎನ್ನುವ ’ಜುಗ್ನು’ ಚಿತ್ರದ ಈ ಹಾಡು ಅಬ್ಬಾ ಇಲ್ಲಿಯವರೆಗೆ ಹಾಡಿದ ಎಲ್ಲ ಹಾಡುಗಳಿಗಿಂತ ಅತ್ಯಂತ ಯಶಸ್ವಿ ಹಾಡಾಗಿತ್ತು. ಇದೇ ಚಿತ್ರದ ಮತ್ತೊಂದು ಹಾಡಿನ ದೃಶ್ಯವೊಂದರಲ್ಲಿ ಅಬ್ಬಾ, ದಿಲೀಪಕುಮಾರ್ ಜತೆ ತೆರೆಯ ಮೇಲೆ ಕಾಣಿಸಿಕೊಂಡರು.  ಅಬ್ಬಾ ತೆರೆಯ ಮೇಲೆ ಕಾಣಿಸಿಕೊಂಡ ಕಡೆಯ ಚಿತ್ರ ಇದಾಗಿತ್ತು. ’ವೋ ಅಪ್ನೀ ಯಾದ್ ದಿಲಾನೇ ಕೋ, ಏಕ್ ಇಷ್ಕ್ ಕಿ ದುನಿಯಾ ಛೋಡ್ ಗಯೇ...’ ಎನ್ನುವ ಈ ಸಾಲುಗಳಿಗೆ ಅಬ್ಬಾ ಅಭಿನಯಿಸಿದ್ದರು.  ಈ ಹಾಡು ಅತಿಹೆಚ್ಚು ಪ್ರಶಂಸೆಗೊಳಪಟ್ಟಿತು. ಅಬ್ಬಾಗೆ ದೊಡ್ಡ ಗೌರವ ತಂದುಕೊಟ್ಟಿತು. ಗಾಯಕನ ಭವ್ಯ ಭವಿಷ್ಯಕ್ಕೆ ಭದ್ರ ಬುನಾದಿ ಒದಗಿಸಿತು.
ಅಬ್ಬಾಗೆ ಅಭಿನಯದಲ್ಲಿ ಅಷ್ಟು ಆಸಕ್ತಿ ಇರಲಿಲ್ಲ. ಅಭಿನಯವನ್ನು ಅವರೆಂದೂ ಖುಷಿಯಿಂದ ನಿರ್ವಹಿಸಲಿಲ್ಲ. ಅಭಿನಯಕ್ಕೆ ಒಪ್ಪಿಕೊಂಡದ್ದೆಲ್ಲ ಆ ಸಂದರ್ಭದ ಅನಿವಾರ್ಯತೆಗಷ್ಟೇ. ಜುಗ್ನು ನಂತರ ಅಭಿನಯದ ಮತ್ತಾವ ಅವಕಾಶವನ್ನು ಅವರು ಒಪ್ಪಿಕೊಳ್ಳಲಿಲ್ಲ.
 1947. ಅಬ್ಬಾ ಬದುಕಿನಲ್ಲಿ ಮತ್ತೊಂದು ಸಂಭ್ರಮ ದಾಖಲಾಯಿತು. ಅವರ ಮೊದಲ ಮಗಳು ಪರ್ವೀನ್ ಹುಟ್ಟಿದ್ದು ಇದೇ ವರ್ಷದಲ್ಲಿ.
(ಮುಂದುವರಿಯುವುದು)
ಅಮರ ಗಾಯಕನ ಸೊಸೆ ಇಡೀ ಪುಸ್ತಕವನ್ನು ಅತ್ಯಂತ ಸರಳ ಭಾಷೆಯಲ್ಲಿ ಬರೆದಿದ್ದಾರೆ.
 ನಿರೂಪಣೆ ತುಂಬ ಸರಳ ಮತ್ತು ಸಹಜ. ಅವರದೇ ಸರಳ ಭಾಷೆಯಲ್ಲಿ  ಪರ್ಫೆಕ್ಟ್ ಡಾಕ್ಯುಮೆಂಟರಿ ಆಗಿದ್ದರಿಂದ ಬದಲಾವಣೆ, ನಮ್ಮದೇ ಕೃತಕ ಜೋಡಣೆ ಬೇಡ ಅನಿಸಿತು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಷ್ಕ್‌ ಕೆ ಇಮ್ತೆಹಾನ್‌ ಔರ್‌ ಭೀ ಹೈ’.. ಇಮ್ರಾನ್‌ ಖಾನ್‌!

ಪಾಕಿಸ್ತಾನದ ಬಗ್ಗೆ ಮಾತನಾಡುವುದು ಮಹಾ ಪಾಪದ ಕೆಲಸವೇನಲ್ಲ. ಹಾಗೆ ಭಾವಿಸಬೇಕಿಲ್ಲ. ಅದು ಒಪ್ಪಿತವೊ ಇಲ್ಲವೋ, ಅದರ ಬಗ್ಗೆ ಅಲಕ್ಷ್ಯವೋ ನಿರ್ಲಕ್ಷ್ಯವೊ ಏನೇ ಆದರೂ ಅದು ಒಂದು ದೇಶ. ನೆರೆಯ ರಾಷ್ಟ್ರ. ‘ಪಡೋಸಿ...’ ಸಂಬಂಧದಲ್ಲಿ ನಮ್ಮದೇ ಕರುಳಬಳ್ಳಿ. ಭಾಷೆ, ಜನಜೀವನ ಶೈಲಿಯಲ್ಲಿ ಬದಲಾದರೂ ಮನುಷ್ಯ ಭಾವ, ಬದುಕುವ ಸಾಮಾನ್ಯ ಕಾಳಜಿ  ಒಂದೇ. ಹಾಗೆ ನೋಡಿದರೆ ಸಾಂಸ್ಕೃತಿಕವಾಗಿ ಎರಡೂ ದೇಶಗಳು ಅಭಿನ್ನ. ನಮ್ಮಲ್ಲಿರುವ ಹಾಗೆ ಅಲ್ಲಿಯೂ ಪ್ರಜಾಪ್ರಭುತ್ವ ಇದೆ. ಅಲ್ಲಿ ನಡೆಯುವುದು ಇಲ್ಲೂ ನಡೆಯುತ್ತದೆ. ಅಲ್ಲಿ ನಡೆಯಲೇಬಾರದ್ದು ಇಲ್ಲೂ ನಡೆಯಲೇಬಾರದು.  ತೀವ್ರವಾದ ನಮ್ಮಲ್ಲಿನದಕ್ಕಿಂತ ಅಲ್ಲಿ ತುಸು ಹೆಚ್ಚು ಸವಾರಿಗೆ ಹವಣಿಸಿದೆ. ಅಲ್ಲಿನ ಮಿಲಿಟರಿ ಅತಿರೇಕದ್ದು. ಅಕ್ಷಮ್ಯ. ಮತ್ತೆ ದೇಶ ಪುಟ್ಟದಾದಷ್ಟು ಅದಕ್ಕೆ ಭಯಗಳು ಜಾಸ್ತಿ. ಮಿಲಿಟರಿ ಕವಚದಲ್ಲಿ ಅದು ಸುರಕ್ಷಾ ಭಾವವನ್ನು ಕಲ್ಪಿಸಿಕೊಳ್ಳುತ್ತದೆ. ಅದೊಂದು ತರಹದ ಸಮಾಧಾನ. ಆದರೆ ಭ್ರಮೆಯಿಂದ ಕೂಡಿದ್ದು. ಭಯೋತ್ಪಾದನೆ ಕೂಡ ಒಂದರ್ಥದಲ್ಲಿ ಪುಕ್ಕಲುತನವೇ ಆಗುತ್ತದೆ. ಹಿಂಸಾ ಪ್ರವೃತ್ತಿಗೆ ಹೆದರಿಸುವುದೇ ಕೆಲಸ. ಹೆದರಿಸುವವರು ಶೂರರು, ಧೀರರು ಮತ್ತು ಜೀನಿಯಸ್‌ ಆಗಿರಲು ಹೇಗೆ ಸಾಧ್ಯ? ಮುಖ್ಯವಾಗಿ ಅಲ್ಲಿನ ವಿದ್ಯಮಾನಗಳನ್ನು ಗಮನಿಸುವುದಾದರೆ, ಮಿಲಿಟರಿ, ಮತಾಂಧರು, ಭಯೋತ್ಪಾದಕರು, ಭ್ರಷ್ಟರು ಇದೆಲ್ಲದರಿಂದ ಪಾಕಿ ತುಂಬ ರೋಸಿ ಹೋಗಿದ್ದಾನೆ. ಒಂದು ಸೂಕ್ತ ಪರ್ಯಾಯಕ್ಕಾಗಿ ಹಂಬಲಿಸಿದ್...

ನಾನು ನೀನಾಸಂ ಪದವೀಧರನಲ್ಲ...

ನೀನಾಸಂ ಪದವಿ ನನ್ನ ತಲೆಗೆ ಅನಗತ್ಯ ಭಾರ ಸ್ವಾಮೀ. ಅಷ್ಟು ಕಪ್ಪು ಸುಂದರಿಯರ ಭಾರವೇ ನನ್ನ ತಲೆಗೆ ಸಾಕಾಗಿ ಹೋಗಿದೆ. ಇನ್ನು ಇಷ್ಟು 'ವಜನ್' ಪದವಿ ಕಿರೀಟ ಬೇಡವೇ ಬೇಡ. ಸುಮ್ಮನೇ ಖಾಸಗಿಯಾಗಿ ಡೈರಿಯ ಹಾಗೆ ಬೆಚ್ಚಗೆ ನನ್ನ ಜತೆಗೆ ಸದಾ ಇರಲಿ ಎಂದುಕೊಂಡು ಈ ಬ್ಲಾಗ್ ರೂಪಿಸಿದ್ದೇನಷ್ಟೇ. ಅವಧಿ ಬ್ಲಾಗ್ ನನ್ನ ಈ ಪುಟ್ಟ ಯತ್ನಕ್ಕೆ ಬೆನ್ನು ತಟ್ಟಿದ್ದು ಸಂತೋಷವೇ. ಆದರೆ, ನನ್ನ ಬಗ್ಗೆ ಬೆನ್ನುತಟ್ಟುವ ಸಾಲುಗಳ ಬರೆಯುತ್ತ ನೀನಾಸಂ ಪದವೀಧರ ಎನ್ನುವ ಒಂದು ತಪ್ಪು ಮಾಹಿತಿ ಕೂಡ ನುಸುಳಿಕೊಂಡಿದೆ. ಸ್ವಾಮೀ ನಾನೀ ನೀನಾಸಂ ಸುದ್ದಿಗೇ ಹೋದವನಲ್ಲ. ಅಲ್ಲಿ ಕಲಿತು ಬಂದವರ ಜತೆ 'ಬೇಜಾನ್' ಜಗಳ ಮಾಡಿದಿನಿ ಅಷ್ಟೇ.

‘ಪಲ್ಲಟ’ ಒಂದು ಪ್ರಾಮಾಣಿಕ ಪ್ರಯತ್ನ

  (ಇನ್ನೂ ತೆರೆ ಕಾಣದ ‘ಪಲ್ಲಟ’ ಕನ್ನಡ ಸಿನಿಮಾದ ಪ್ರೀಮಿಯರ್‌ ಶೋ  ಬಗ್ಗೆ ) ಸಿನಿಮಾದ ಸೊಗಸೇ ಅಂಥದು. ಯಂತ್ರಗಳಿಂದ ಸೆರೆ ಹಿಡಿದ ಬದುಕು ತೆರೆಯ ಮೇಲೆ ಬಾಳುವಾಗ ಆ ಕ್ಷಣಕ್ಕೆ ಎಲ್ಲ ಹೊಸತೇ ಆಗಿ ಕಾಣಿಸುತ್ತದೆ. ಗತ ಬದುಕು ಹೊಸ ಬದುಕಿನಂತೆ ಹೊಳೆಯುತ್ತದೆ. ಪರದೆ ಮೇಲಿನ ಮೂರು ಗಂಟೆಯ ಬಾಳಲ್ಲಿ ಪ್ರೇಕ್ಷಕ ಅದರ ಅಸಲಿ ನೋವು, ನಲಿವುಗಳ ಬದುಕಿಗಿಳಿಯುತ್ತ ಮೆಲ್ಲಗೆ ಅದರ ಒಟ್ಟು ಹರವಿನಗುಂಟ ಸಾಗಬಹುದು. ಆ ಪುಟ್ಟ ಜರ್ನಿಯಲ್ಲಿ  ಅವನೊಳಗಿನ ಬದುಕಿಗೆ ಹೊಸ ಕಣ್ಣುಗಳು ಮೂಡಬಹುದು. ಅಂತಃಕರಣದ ಸೆಲೆಗಳು ಮತ್ತಷ್ಟು ಜಿನುಗಬಹುದು. ಸಿನಿಮಾದ ಸಾಧ್ಯತೆಗಳು, ಪರಿಣಾಮಗಳು ಹಲವು. ಸಿನಿಮಾಗೆ ಅದರ ಅಂತಃಸತ್ವ ಮುಖ್ಯ. ನೋಡಿ ತಿಳಿವ ಪ್ರಾಸೆಸ್‌ ಇದಾದ್ದರಿಂದ ವಿಶ್ಯುಯಲ್‌ ಟ್ರೀಟಮೆಂಟ್‌ ಕೂಡ ಮುಖ್ಯ.  ‘ಪಲ್ಲಟ’ ಕನ್ನಡ ಸಿನಿಮಾದ ವಸ್ತು  ಸ್ಥಳೀಯ ಸಂಸ್ಕೃತಿಗಳ ಸ್ಥಿತ್ಯಂತರ ಹೇಗೆ ನಿಜ ಜೀವನದಲ್ಲಿ ಕೆಲವರ ಬದುಕನ್ನೇ ಮುಗಿಸಿಬಿಡುತ್ತದೆ ಎನ್ನುವುದು. ಇದು ಅಮಾನವೀಯ ಎನ್ನುವುದು ಚಿತ್ರದ ಒಳದನಿ. ಬಹುಕಾಲ ನಿಲ್ಲಬಲ್ಲ ಮತ್ತು ಕಾಡಬಲ್ಲ ಸಿನಿಮಾ ಆಗುವ ಅವಕಾಶವನ್ನು ಇದು ಸ್ವಲ್ಪದರಲ್ಲಿಯೇ ಕಳಕೊಂಡಿದೆ. ಇದರಾಚೆಗೂ ಚಿತ್ರ ಕೆಲವು ವಿಚಾರಗಳಿಗೆ ಸಂಬಂಧಿಸಿ ಚರ್ಚೆಗೆ ಯೋಗ್ಯವಾಗಿದೆ. ನಾಗರಿಕತೆ ಎಂಬುದು ಜನರೇ ಸೃಜಿಸಿಕೊಂಡಿದ್ದು. ಆಯಾ ಜನಪ್ರದೇಶಗಳಲ್ಲಿ ಕಾಲದ ಅಗತ್ಯಗಳಿಗೆ ತಕ್ಕುದಾದ ವ್ಯವಸ್ಥೆಯೊಂದು ರೂಪುಗೊಂಡಿರುತ್ತದ...