ವಿಷಯಕ್ಕೆ ಹೋಗಿ

ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ... ಭಾಗ 5

1968ರಲ್ಲಿ ರಫೀ ಕುಟುಂಬದ ಮೊತ್ತ ಮೊದಲ ಮದುವೆ ಸಮಾರಂಭ. ಮೊದಲ ಮಗಳು ಪರ್ವೀನ್ ಹಸೆಮಣೆ ಹತ್ತುವ ಸಂಭ್ರಮ. ಆ ಸಂದರ್ಭದಲ್ಲೇ ’ನೀಲ್ ಕಮಲ್’ ಚಿತ್ರದ  ’ಬಾಬುಲ್ ಕಿ ದುವಾಯ್ಞೆ ಲೇತಿ ಜಾ...’ ಹಾಡಿನ ರೆಕಾರ್ಡಿಂಗ್ ನಡೆಯಿತು.  ಹಸೆಮಣೆ ಏರಿದ ಮಗಳನ್ನು ತವರು ಮನೆಯಿಂದ ಬೀಳ್ಕೊಡುವ ಸಂದರ್ಭಕ್ಕೆಂದು ಬರೆದ ಹಾಡು ಅದಾಗಿತ್ತು. ಈ ಹಾಡಿನ ರೆಕಾರ್ಡಿಂಗ್ ಸಂದರ್ಭದಲ್ಲೆಲ್ಲ ಅಬ್ಬಾ ಮಗಳ ಬಿದಾಯಿಯನ್ನೇ ನೆನಪಿಸಿಕೊಂಡು ತುಂಬ ಭಾವುಕರಾಗುತ್ತಿದ್ದರು. ಹಾಡಿನ ಪ್ರತಿಯೊಂದು ಪದ ತಂದೆಯೊಬ್ಬನ  ಬಾವತೀವ್ರತೆಯನ್ನು ಧ್ವನಿಸುತ್ತಿತ್ತು.  ಇವತ್ತಿಗೂ ಈ ಹಾಡು ಕೇಳಿದಾಗೆಲ್ಲ ನನ್ನ ಕಣ್ಣುಗಳು ತೇವವಾಗುತ್ತವೆ. ಹಾಡಿನ ರೆಕಾರ್ಡಿಂಗ್ ಕ್ಷಣಗಳನ್ನು ಮೆಲುಕು ಹಾಕುವಾಗಲೆಲ್ಲ ಅಬ್ಬಾ ದನಿ ತಡವರಿಸುತ್ತಿತ್ತು. ಅದರಲ್ಲಿ ತಂದೆಯೊಬ್ಬನ ಮಗಳ ಬಗೆಗಿನ ಕಕ್ಕುಲಾತಿ ಭಾವನೆ ಮಿಡಿಯುತ್ತಿತ್ತು. 1968ರಲ್ಲಿ ಅಬ್ಬಾಗೆ ಇದೇ ಹಾಡಿಗಾಗಿ ನ್ಯಾಷನಲ್ ಅವಾರ್ಡ್ ಅರಸಿ ಬಂತು. ’ಹಮ್ ಕಿಸೀಸೆ ಕಮ್ ನಹೀ’ ಚಿತ್ರದ  ’ಕ್ಯಾ ಹುವಾ ತೇರಾ ವಾದಾ...’ ಎನ್ನುವ ಅದ್ಭುತ ಹಾಡಿಗೆ 1977ರಲ್ಲಿ ಮತ್ತೊಂದು ನ್ಯಾಷನಲ್ ಅವಾರ್ಡ್ ಅಬ್ಬಾ ಮುಡಿಗೇರಿತು.

ರಫೀ ಸಾಹೇಬರ ಮಾತೃಭಾಷೆ ಪಂಜಾಬಿ. ಉರ್ದು  ಮಾತನಾಡುವಾಗಲೂ ಅದರಲ್ಲಿ ಪಂಜಾಬಿ ಸೊಗಡೇ ಧ್ವನಿಸುತ್ತಿತ್ತು. ಮನೆಯಲ್ಲಿ ಮಕ್ಕಳ ಜತೆ ಅಬ್ಬಾ ಉರ್ದುವಿನಲ್ಲೇ ಮಾತನಾಡುತ್ತಿದ್ದರು. ಕಾರಣ ಇಷ್ಟೇ, ಅಮ್ಮಾಗೆ ಪಂಜಾಬಿ ಭಾಷೆ ಅರ್ಥವಾಗುತ್ತಿರಲಿಲ್ಲ. ಅಬ್ಬಾ ಎಲ್ಲಾ ಭಾಷೆಗಳಲ್ಲಿ ಹಾಡುವ ಲಾಲಿತ್ಯ ಹೊಂದಿದ್ದರು. ಅವರು ಯಾವುದೇ ಭಾಷೆಯಲ್ಲಿ ಹಾಡಲಿ, ಅದು ಅವರದೇ ಮಾತೃಭಾಷೆಯ ಹಾಡು ಅನ್ನಿಸಿಬಿಡುವಷ್ಟು ಸಹಜತೆಯನ್ನು ಮೆರೆಯುತ್ತಿದ್ದರು. ಅವರ ಒಟ್ಟು 39 ವರ್ಷಗಳ ಗಾಯನದ ಸುದೀರ್ಘ ಬದುಕಿನಲ್ಲಿ ಹಿಂದಿ, ಇಂಗ್ಲಿಷ್, ಮರಾಠಿ, ಪಂಜಾಬಿ, ಗುಜರಾತಿ, ಸಿಂಧಿ, ತಮಿಳು, ಬಂಗಾಳಿ, ಪುರ್ವಾಬಿಯಾ, ಪಾಶ್ತೊ, ಪರ್ಷಿಯನ್, ಅರಬ್ಬೀ ಮತ್ತಿತರ ಹಲವಾರು ಭಾಷೆಗಳಲ್ಲಿ ಹಾಡಿದ್ದಾರೆ. ಕನ್ನಡದಲ್ಲಿಯೂ ಹಾಡಿದ್ದಾರೆ. ನೀನೆಲ್ಲಿ ನಡೆವೆ ದೂರ, ಎಲ್ಲೆಲ್ಲೂ ಲೋಕವೇ... ಎನ್ನುವ 'ಒಂದೇ ಬಳ್ಳಿಯ ಹೂಗಳು' ಚಿತ್ರಕ್ಕೆ (ಸಾಹಿತ್ಯ: ಗೀತಪ್ರಿಯ) ರಫೀ ಹಾಡಿದ ಕನ್ನಡ ಹಾಡು ಅತ್ಯಂತ ಜನಪ್ರಿಯ.

Mohd Rafi

1947ರಲ್ಲಿ ಇಂಡಿಯಾ ವಿಭಜನೆಯಾದಾಗ ಅಬ್ಬಾ ಮುಂಬೈನಲ್ಲೇ ಉಳಿಯುವ ನಿರ್ಧಾರ ಕೈಗೊಂಡರು. ಒಂದೆಡೆ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಸಂಭ್ರಮ. ಮತ್ತೊಂದೆಡೆ ತನ್ನ ತಾಯ್ನಾಡಿನ ಕರುಳಬಳ್ಳಿಯ ನಂಟಿನಿಂದ ದೂರಾಗುವ ನೋವು. ಇದೇ ಸಂದರ್ಭದಲ್ಲಿ ಹೆಮ್ಮೆಯ ಅವಕಾಶವೊಂದು ಅವರನ್ನು ಅರಸಿ ಬಂದಿತು. ಅದು ಆಗಸ್ಟ್ 15, 1947. ದೆಹಲಿಯ ಕೆಂಪುಕೋಟೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದ ದಿನ. ದೇಶದ ಹೆಸರಾಂತ ಸಂಗೀತಗಾರರನ್ನು ಕೆಂಪುಕೋಟೆಯ ಆ ಸಮಾರಂಭಕ್ಕೆ ವಿಶೇಷವಾಗಿ ಆಹ್ವಾನಿಸಲಾಗಿತ್ತು. ದೆಹಲಿಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ  ಸಂಗೀತಗಾರರ ತಂಡವನ್ನು ಅಬ್ಬಾ ಸೇರಿಕೊಂಡರು. ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದರು.  ಅಂಥದೊಂದು ಭವ್ಯ ಸಮಾರಂಭದಲ್ಲಿ ದೇಶದ ಮೊದಲ ಪ್ರಧಾನಿ ಎದುರು ತನಗೂ ಹಾಡು ಹೇಳುವ ಅವಕಾಶ ಸಿಗಬಹುದೆನ್ನುವ ನಿರೀಕ್ಷೆಯಲ್ಲಿ ಅಬ್ಬಾ ತುಂಬ ಭಾವುಕರಾಗಿದ್ದರು. ಅವಕಾಶ ಒದಗಿ ಬಂದಿತು ಕೂಡ. ಅದೂ ಕೇವಲ ಮೂರು ನಿಮಿಷಗಳ ಕಾಲ ಹಾಡುವ ಅವಕಾಶ. ಏನೇ ಆಗಲಿ ಪಂಡಿತ್ ಜವಾಹರಲಾಲ್ ನೆಹರು ಸಮ್ಮುಖದಲ್ಲಿ ಹಾಡಲು ಅವಕಾಶ ಸಿಕ್ಕಿತಲ್ಲ! ಎನ್ನುವ ಸಂಭ್ರಮದಲ್ಲಿ ಅಬ್ಬಾ ತುಂಬ ಖುಷಿಯಾಗಿದ್ದರು. 'ಲೆಹರಾವೋ ತಿರಂಗಾ ಲೆಹರಾವೋ..' ಎಂದು ಅಬ್ಬಾ ಹಾಡಲು ಪ್ರಾರಂಭಿಸುತ್ತಿದ್ದಂತೆ ನೆರೆದ ಜನಸ್ತೋಮ ಶಾಂತಚಿತ್ತದಿಂದ ಹಾಡನ್ನು ಆಲಿಸುತ್ತ, ತಲೆದೂಗತೊಡಗಿತು. ಇನ್ನೂ ಒಂದಷ್ಟು ಹಾಡುಗಳನ್ನು ಹಾಡುವಂತೆ ಸಭಿಕರಿಂದ ಕರತಾಡನದೊಂದಿಗೆ ಬೇಡಿಕೆ ಬರತೊಡಗಿತು. ಅಬ್ಬಾ ಹಾಡು ಮುಂದುವರಿಸಬೇಕಾಯಿತು. ರಫೀ ಆ ಸಮಾರಂಭದಲ್ಲಿ ಒಟ್ಟು ಇಪ್ಪತ್ತೈದು ನಿಮಿಷಗಳ ಕಾಲ ಸುಶ್ರಾವ್ಯವಾಗಿ ಹಾಡಿದರು. ಅಬ್ಬಾ ಗಾಯನ ಆಲಿಸಿದ ಪಂಡಿತ್ ನೆಹರೂ ತುಂಬ ಖುಷಿಪಟ್ಟರು. ಅಭಿಮಾನದಿಂದ ರಫೀ ಬೆನ್ನು ತಟ್ಟಿ ಭೇಷ್ ಅಂದರು. ಖುಷಿಯಿಂದ ಬಾಚಿ ಬಿಗಿಯಾಗಿ ತಬ್ಬಿಕೊಂಡರು. ತೀನ್ ಮೂರ್ತಿ ಭವನದಲ್ಲಿ ಗಾಯನ ಪ್ರಸ್ತುತಪಡಿಸುವಂತೆ ಆಹ್ವಾನಿಸಿದರು. ಇದು ರಫೀ ಬದುಕಿನ ಅವಿಸ್ಮರಣೀಯ ಕ್ಷಣಗಳಲ್ಲಿ ಒಂದು. ಅಬ್ಬಾ  ನಮ್ಮ ಜತೆ ಈ ಸಂಭ್ರಮದ ಕ್ಷಣವನ್ನು ಆಗಾಗ ಮೆಲುಕು ಹಾಕುತ್ತಿದ್ದರು.
(ಮುಂದುವರಿಯುವುದು)
ಅಮರ ಗಾಯಕನ ಸೊಸೆ ಇಡೀ ಪುಸ್ತಕವನ್ನು ಅತ್ಯಂತ ಸರಳ ಭಾಷೆಯಲ್ಲಿ ಬರೆದಿದ್ದಾರೆ.
 ನಿರೂಪಣೆ ತುಂಬ ಸರಳ ಮತ್ತು ಸಹಜ. ಅವರದೇ ಸರಳ ಭಾಷೆಯಲ್ಲಿ  ಪರ್ಫೆಕ್ಟ್ ಡಾಕ್ಯುಮೆಂಟರಿ ಆಗಿದ್ದರಿಂದ ಬದಲಾವಣೆ, ನಮ್ಮದೇ ಕೃತಕ ಜೋಡಣೆ ಬೇಡ ಅನಿಸಿತು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮನುಷ್ಯ ಜಾತಿ ತಾನೊಂದೇ ವಲಂ...

ಭಾರತದಲ್ಲಿ ಜಾತಿ ವ್ಯವಸ್ಥೆ ಹೇಗೆ ಹುಟ್ಟಿತು ಎಂಬುದಕ್ಕೆ ಯಾವುದೇ ನಿರ್ಧಿಷ್ಟ ಥಿಯರಿ ಇಲ್ಲ. ಆದರೆ, ಇಲ್ಲಿನ ವರ್ಗ ಸೃಷ್ಟಿ ಮಾತ್ರ ಇರಾನ್ ವ್ಯವಸ್ಥೆಯಂತೇ ಇದೆ.  ಪುರಾತನ ಇರಾನಿನ ಚರಿತ್ರೆಯಲ್ಲಿ ಇಂಥದೊಂದು ವ್ಯವಸ್ಥೆ ಇತ್ತು. ಅದಕ್ಕೆ ಪಿಸ್ತ್ರಾಸ್ ಎನ್ನುತ್ತಾರೆ. ನಮ್ಮಲ್ಲಿ ಅದು ಚಾತುರ್ವರ್ಣವಾಗಿದೆ. ಅಲ್ಲಿ ಅಥ್ರವಾನ್ಸ್ (ಪ್ರೀಸ್ಟ್ ಕ್ಲಾಸ್), ರಥೈಸ್ತಾ (ವಾರಿಯರ್ಸ್), ವಸ್ತ್ರಿಯಾ (ಮರ್ಕಂಟೈಲ್ ಕ್ಲಾಸ್) ಮತ್ತು ಹ್ಯುತಿ (ಆರ್ಟಿಸನ್) ಎನ್ನುವ ವರ್ಗ ವ್ಯವಸ್ಥೆ ಇದೆ. ನಮ್ಮಲ್ಲಿ ಇದನ್ನು ಕಲ್ಪಿಸಿಕೊಂಡರೆ ಪುರೋಹಿತ ಅಥವಾ ಬ್ರಾಹ್ಮಣ (ಅಥ್ರವಾನ್ಸ್), ಕ್ಷತ್ರಿಯ  (ರಥೈಸ್ತಾ), ವೈಶ್ಯ  (ವಸ್ತ್ರಿಯಾ) ಮತ್ತು ಶೂದ್ರ (ಹ್ಯುತಿ) ಎಂದು ಅರ್ಥೈಸಿಕೊಳ್ಳಬಹುದು.  ಆದಿ ಕಾಲದ ಇರಾನಿಯನ್ ವ್ಯವಸ್ಥೆ ಹೀಗೇ ಇತ್ತು. ಅದೇ ನಾಲ್ಕು ವರ್ಗಗಳು ಭಾರತದಲ್ಲೂ ಈಗಲೂ ಚಾಲ್ತಿಯಲ್ಲಿವೆ. ಹೀಗೆ ಒಂದು ಇರಾನ್ ಸಂಬಂಧ ಭಾರತಕ್ಕಿದೆ. ಚರ್ಮದ ಬಣ್ಣ, ನಯ ನಾಜೂಕು, ಕಣ್ಣು, ಬುದ್ಧಿವಂತಿಕೆಯನ್ನು ಹೋಲಿಸಿದರೆ ಭಾರತದ ಅದರಲ್ಲೂ ಉತ್ತರ ಭಾರತದ ಕಾಶ್ಮೀರಿ ಪಂಡಿತರು, ಉತ್ತರ ಪ್ರದೇಶದ ಪಂಡಿತ್, ಚಿತ್ಪಾವನ ಬ್ರಾಹ್ಮಣರು, ನಮ್ಮ ಕರಾವಳಿ ಮತ್ತು ಉತ್ತರ ಕನ್ನಡದ ಹವ್ಯಕರು ಹೆಚ್ಚೂ ಕಮ್ಮಿ ಇರಾನಿಗಳನ್ನು ಹೋಲುತ್ತಾರೆ (ಮೇಲ್ನೋಟಕ್ಕೆ).  ಬಹುಶಃ ಹೀಗೂ ಆಗಿರಬಹುದು, ಆಗ ಇರಾನ್ ನಲ್ಲಿ ಕ್ರೈಸ್ತ ಮತ್ತು ಇಸ್ಲಾಂ ಮುಂಚೆಯೂ ಹಲವಾರು ಸುಧಾರಣಾವಾದಿಗಳ ಅಥವಾ ಬಂಡುಕೋರರ

"ಮಣೆಗಾರ" ಬಸಿದಿಟ್ಟ ಒಡಲಾಳದ ನೋವು ನೆನೆದು...

ಹಾಲ್ಕುರಿಕೆ ಥಿಯೇಟರ್ ಕಾನ್ಸೆಪ್ಟ್ ಕನ್ನಡ ರಂಗಭೂಮಿಯಲ್ಲಿ ಹೊಸದೊಂದು ಸಂಚಲನವನ್ನುಂಟು ಮಾಡುತ್ತಿದೆ. ಒಟ್ಟಾರೆ ಭಾರತೀಯ ರಂಗಭೂಮಿ ಕಾಣುತ್ತಿರುವ ಹೊಸತನಕ್ಕೆ ಇದು ಮುಖ್ಯವಾದ ಸಾಕ್ಷಿ. ಅತ್ಯಂತ ಕ್ರಿಯಾಶೀಲ ತುಡಿತದ ರಂಗಕರ್ಮಿ ಹಾಲ್ಕುರಿಕೆ ಶಿವಶಂಕರ (ನಿರ್ದೇಶಕ/ನಾಟಕಕಾರ) ಇತ್ತೀಚೆಗೆ "ಮಣೆಗಾರ" (ತುಂಬಾಡಿ ರಾಮಯ್ಯನವರ ಆತ್ಮಕಥೆ) ಎನ್ನುವ ದಲಿತ ಕಥಾನಕವೊಂದನ್ನು ರಂಗದ ಮೇಲೆ ಅನಾವರಣಗೊಳಿಸಿದರು. ಪ್ರಯೋಗದ ದೃಷ್ಟಿಯಿಂದ ಕೆಲವು ಕೊರತೆಗಳು, ದೋಷಗಳು ಇವೆ. ಅದು ಯಾವುದೇ ಪ್ರಯೋಗಕ್ಕೆ ಇರುವಂಥವೇ. ಆದರೆ ಸಮುದಾಯವೊಂದರ ಒಡಲಾಳದ ನೋವನ್ನು ರಂಗದ ಮೇಲೆ ಬಸಿದಿಟ್ಟಾಗ  ಬೆಚ್ಚಿ ಬೀಳುವಂತಾಯಿತು. ವಿಶೇಷವಾಗಿ ದಲಿತೇತರಲ್ಲಿ ಸಾಮಾಜಿಕ ಪ್ರಜ್ಞೆ, ಜವಾಬ್ದಾರಿಯನ್ನು ಬಡಿದೆಬ್ಬಿಸುವಂಥ ಕಥಾನಕವದು. "ಮಣೆಗಾರ" ಪ್ರೊಸಿನಿಯಂಗಿಂತ ಆಪ್ತರಂಗಭೂಮಿಗೆ ಸೂಕ್ತವಾದ ವಸ್ತು. ಪ್ರಯೋಗ ಒಟ್ಟಾರೆ ಮನುಷ್ಯ ಬದುಕಿನ ನಡುವಿರುವ ಗ್ರೇ ಏರಿಯಾವೊಂದರ ದರುಶನ ಮಾಡಿಸಿತು. ಮೇಲ್ವರ್ಗ ಸಹಮಾನವರನ್ನು ಅದು ಹೇಗೆ ಅಸ್ಪೃಶ್ಯರು ಎಂದು ದೂರಕ್ಕಿಟ್ಟಿತ್ತು, ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿತ್ತು ಎನ್ನುವುದು ಇದರ ಮೂಲ ಸಂಕಟ. ಇಡೀ ನಾಟಕದಲ್ಲಿ ಬದುಕಿಗಾಗೇ ಸಂಘರ್ಷವಿದೆ. ಆಹಾರಕ್ಕಾಗಿ ಹಾಹಾಕಾರವಿದೆ. socio-cultural  ನೆಲೆಯಲ್ಲಿ ದೊಡ್ಡ ಸಂಘರ್ಷವಿದೆ. ಇದು ರಾಜಕೀಯ ಆಯಾಮದಲ್ಲೂ ಬಹುಮುಖ್ಯವಾದ ಸಂಘರ್ಷವೇ. ಶಿಕ್ಷಣ ಮತ್ತು ಅದರ ಆಧಾರದಲ್ಲಿ ಹುಟ

"ಬದುಕು-ಬಯಲು" ನಾಟಕ ಮತ್ತು ಮಾನವೀಯ ನೆಲೆಯ ಹುಡುಕಾಟ

ಫ್ರಾನ್ಸ್ ನ ಬರಹಗಾರ ಅಲ್ಫ್ರೆಡ್ ಜೆರಿ ಬರೆದ 'ದಿ ಸೂಪರ್ ಮೇಲ್' ಎನ್ನುವ ಕಾದಂಬರಿಯ ಪ್ರೊಟಗಾನಿಸ್ಟ್ ಆ್ಯಂಡ್ರಿ ಮಾರ್ಕೆಲ್ ಒಬ್ಬ ಜಂಟಲ್ ಮನ್, ವಿಜ್ಞಾನಿ ಕೂಡ. ಅವನಿಗೆ ಮಾನವ ಸಾಮರ್ಥ್ಯಕ್ಕೆ ಮಿತಿ ಎಂಬುದೇ ಇಲ್ಲ ಎನ್ನುವುದರಲ್ಲಿ ಬಲವಾದ ನಂಬಿಕೆ. ಆತ ಉಗಿಬಂಡಿ ಜತೆಗೂ ಯಾವುದೇ ವಿಶ್ರಾಂತಿ ಮತ್ತು ತ್ರಾಸಿಲ್ಲದೇ ಕ್ರಮಿಸಿ  ರೇಸ್ ಗೆಲ್ಲಬಲ್ಲ (ಕಾದಂಬರಿಯಲ್ಲಿ ರೈಲು ಮತ್ತು ಸೈಕ್ಲಿಸ್ಟ್ ನಡುವೆ ಒಂದು ರೇಸ್ ನಡೆಯುತ್ತದೆ). ಒಂದೇ ಹೆಂಗಸಿನ ಜತೆ 24 ಗಂಟೆಗಳಲ್ಲಿ 82 ಬಾರಿ ಸಂಭೋಗ ನಡೆಸಬಲ್ಲ 'ಕಾಮಪಟುತ್ವ'ದ ಸಾಹಸಗಳನ್ನೂ ಮಾಡಬಲ್ಲ. ಇದನ್ನು ಪುರುಷಪರಾಕ್ರಮದ ನೆಲೆಯಲ್ಲಿ ನೋಡೋದಾ? ಇಲ್ಲಾ ನಿಸರ್ಗ ಸಹಜ ಸಾಧ್ಯತೆಯ ನೆಲೆಯಲ್ಲಿ ನೋಡುವುದಾ?... - ಇದು ಒಂದು ರೀತಿಯ ವಿಕ್ಷಿಪ್ತ ಮನೋಧರ್ಮದ, ಸೈನ್ಸ್ ಫಿಕ್ಷನ್ ಕಾದಂಬರಿಯ ಸಂಕ್ಷಿಪ್ತ ನೋಟ. ಅಲ್ಫ್ರೆಡ್ ಜೆರಿ ಉತ್ತಮ ನಾಟಕಕಾರನೂ ಹೌದು. ಆತನ 'ಉಬು ರೊಯ್' ಹೆಸರಾಂತ ನಾಟಕಗಳಲ್ಲೊಂದು.    * * * ಜೆರಿ ಬಗ್ಗೆ ಓದುತ್ತಿದ್ದ ಹೊತ್ತಲ್ಲಿ ಹಿಜಡಾವೊಬ್ಬರ ಆತ್ಮಕಥನ ಆಧರಿಸಿದ "ಬದುಕು-ಬಯಲು" ಎನ್ನುವ ನಾಟಕ ವೀಕ್ಷಣೆಗೆ ತಿಪಟೂರಿನ ರಂಗ ಗೆಳೆಯ ನೀನಾಸಂ ಚಂದ್ರು ಆಹ್ವಾನ ನೀಡಿದರು.  ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ ನೋಡಿದೆ. ಅದಕ್ಕೂ ಮುಂಚೆ ನಾಟಕದ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಸಿ.ಎಸ್. ದ್ವಾರಕಾನಾಥ್, ಗೌರಿ ಲಂಕೇಶ್ ಮತ್ತಿತರ ಚಿಂತಕರ ವಿ