ವಿಷಯಕ್ಕೆ ಹೋಗಿ

ನನ್ನ ಜಿಲ್ಲೆ ನನ್ನ ಅಭಿಮತ: ಬಾಗಲಕೋಟೆ ಲೋಕಸಭೆ ಕ್ಷೇತ್ರದ ವಾಸ್ತವ

ಹೊಸಪೇಟೆಯಿಂದ ಬಾಗಲಕೋಟೆ ಮತ್ತಲ್ಲಿಂದ ವಿಜಾಪುರ, ಸೊಲ್ಲಾಪುರ ಸಂಪರ್ಕದ ಆಲಮಟ್ಟಿ ಹೆದ್ದಾರಿ ಅಂತರರಾಷ್ಟ್ರೀಯ ಗುಣಮಟ್ಟದ್ದು ಎನ್ನುವಷ್ಟು ಅಚ್ಚರಿ ಮೂಡಿಸುತ್ತದೆ. ರಸ್ತೆ, ರಸ್ತೆಗುಂಟ ಕಟ್ಟಿದ ಬೇಲಿ, ಟನಲ್.. ಎಲ್ಲವೂ ಹೌಹಾರುವಂತಿವೆ. ಇಂಡಿಯಾದಲ್ಲಿದೀವಾ ಫಾರೀನ್‌ನಲ್ಲಿದಿವಾ ಅನ್ನುವಷ್ಟು.


 ಬಾಗಲಕೋಟೆಯಿಂದ ಬೀಳಗಿ, ಮುಧೋಳ, ಜಮಖಂಡಿ, ವಿಜಾಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಇಡೀ ಭಾಗವನ್ನು ಬೇರೆಯದೇ ನೆಲೆಯಲ್ಲಿ ನೋಡುವಂತೆ ಪ್ರೇರೇಪಿಸುತ್ತವೆ. ರಸ್ತೆಯ ಇಕ್ಕೆಲಗಳಲ್ಲಿ ಕಬ್ಬು, ದ್ರಾಕ್ಷಿ, ದಾಳಿಂಬೆ ಮತ್ತು ಉಳ್ಳಾಗಡ್ಡಿ ಬೆಳೆ (ಈರುಳ್ಳಿ) ನಳನಳಿಸುತ್ತದೆ. ಜೋಳ, ಗೋಧಿಯ ನೆಲದಲ್ಲಿ ಈಗ ಕಮರ್ಷಿಯಲ್ ಕ್ರಾಪ್‌ಗಳದ್ದೇ ಕಾರುಬಾರು. ಮೇನ್ ರೋಡ್‌ನಿಂದ ಕೊಂಚ ದೂರದಲ್ಲೇ ಸಕ್ಕರೆ, ಸಿಮೆಂಟ್ ಕಾರ್ಖಾನೆಗಳು, ಗ್ರಾನೈಟ್ ಉದ್ಯಮ ಮತ್ತು ವೈನ್ ಪ್ಲ್ಯಾಂಟ್‌ಗಳು ಹೆಜ್ಜೆ ಹೆಜ್ಜೆಗೆ ಅನ್ನುವಷ್ಟಿವೆ. ರಸ್ತೆಗಳು ಮಿರಿ ಮಿರಿ ಮಿಂಚುವುದರ ಹಿಂದಿನ ಹಿಕ್ಮತ್ತು ಇಂಥ ಉದ್ಯಮಗಳದ್ದೇ.
 ಬೆಳೆಹಾನಿ, ಬಂಪರ್ ಬೆಲೆ, ಸಬ್ಸಿಡಿ ದಂಧೆ, ಸಾಲ ಮನ್ನಾ ಇಂಥದ್ದರಲ್ಲೇ ಮಿಂದೇಳುವ ಕೆಲ ಮೇಲ್ವರ್ಗದ ಶ್ರೀಮಂತ ರೈತರ ಕಾರು, ಜೀಪು ಮತ್ತು ಬೈಕ್  ಭರಗುಟ್ಟಲು ರೂಪಿಸಿದಂತಿರುವ ರಸ್ತೆಗಳೇ ಅಭಿವೃದ್ಧಿ ಎನ್ನುವ ಭ್ರಮೆ ಹುಟ್ಟಿಸಿವೆ.  ಪುಟ್ಟ ಜಮೀನು ಹೊಂದಿದ ರೈತರ ಎತ್ತಿನ ಗಾಡಿ, ಅಸಂಖ್ಯ ಭೂರಹಿತರು, ಕೂಲಿ ಕಾರ್ಮಿಕರು ಮತ್ತು ಪಾದಚಾರಿಗಳ ಓಡಾಟಕ್ಕೆ ಇದೆಲ್ಲ ಅಲ್ಲ ಅನ್ನುವುದು ಸ್ಪಷ್ಟ.
 ಒಟ್ಟಿನಲ್ಲಿ ಭೂಮಾಲೀಕರು ಶ್ರೀಮಂತ ಕಬ್ಬು ಬೆಳೆಗಾರರಿಗೆ, ಸಕ್ಕರೆ ಉದ್ಯಮಿಗಳಿಗೆ, ಗ್ರಾನೈಟ್/ಮೈನಿಂಗ್ ದೊರೆಗಳಿಗೆ ಮತ್ತು ಸಿಮೆಂಟ್ ಉದ್ಯಮಿಗಳಿಗೆ ಪೂರಕವಾಗಿ ಈ ರಸ್ತೆ ಮತ್ತು ನೀರಾವರಿ ಅಭಿವೃದ್ಧಿ ಮಾಯಾಜಾಲ ಹರಡಿಕೊಂಡಿದೆ. ಕಬ್ಬಿನ ದುಡ್ಡು, ಮೈನಿಂಗ್ ಮಾಫಿಯಾ, ದ್ರಾಕ್ಷಿ, ದಾಳಿಂಬೆ ತೋಟಗಳ ಮಾಲೀಕರ ವೈನ್ ಖಯಾಲಿ, ಎಕ್ಸ್‌ಪೋರ್ಟ್ ಬಿಸಿನೆಸ್ ರಾಜಾರೋಷ-  ಇದು ಇಲ್ಲಿನ ಅಭಿವೃದ್ಧಿ ಕೊಲಾಜ್. 
 ವಾಸ್ತವವಾಗಿ ಅಸಂಖ್ಯಾತ ಸಾಮಾನ್ಯ ಜನರ ಬದುಕು ಈಗಲೂ ತುಂಬ ದಯನೀಯ ಸ್ಥಿತಿಯಲ್ಲಿದೆ.  ಆಲಮಟ್ಟಿ ಹಿನ್ನೀರಿಗಾಗಿ ಕೃಷಿ ಭೂಮಿ ಮತ್ತು ಇದ್ದ ಸೂರುಗಳನ್ನು ಕಳಕೊಂಡ ಅಸಂಖ್ಯ ಬಡವರ ಬದುಕು ಪರಿಹಾರದ ಆಮಿಷದಲ್ಲಿ ಕೊಚ್ಚಿ ಹೋಗಿದೆ. ಬಾಗಲಕೋಟೆಗೆ ತುಂಬ ಹತ್ತಿರದಲ್ಲಿರುವ ಹಣ್ಣುಗಳ ತವರೂರು ಕಲಾದಗಿ, ಕಾತರಕಿ, ಕೊಪ್ಪ (ಎಸ್.ಕೆ.), ಉದಗಟ್ಟಿ ಮತ್ತಿತರ ಬೀಳಗಿ ತಾಲ್ಲೂಕಿನ ಫಲವತ್ತಾದ ಬಹುತೇಕ ಕೃಷಿ ಭೂಮಿ ಮುಳುಗಡೆಯಾಗುತ್ತಿದೆ. ಅನಾದಿ ಕಾಲದಿಂದ ಇಲ್ಲಿ ನೆಲೆಸಿದ್ದ ಸಾವಿರಾರು ಕುಟುಂಬಗಳು ಈಗ ನಿರ್ಗತಿಕವಾಗಿವೆ. ಪರಿಹಾರದ ಆಮಿಷದಲ್ಲಿ ಕೊಚ್ಚಿ ಹೋಗುತ್ತಿವೆ.
* * *
 ರೆಡ್ಡಿ (ಆಡು ಮಾತಿನಲ್ಲಿ ರಡ್ಡ್ಯಾರು) ಎನ್ನುವ ಪ್ರಬಲ ಕೋಮು ಮತ್ತು ಅಷ್ಟೇ ಸಂಖ್ಯೆಯ ಗಾಣಿಗರು ಹಾಗೂ ಕುರುಬರನ್ನು ಹೊಂದಿದ ಬಾಗಲಕೋಟೆ ಲೋಕಸಭಾ ಮತಕ್ಷೇತ್ರ ಬಹುಕಾಲದಿಂದ ಉಳ್ಳವರ ಕಪಿ ಮುಷ್ಠಿಯಲ್ಲಿದೆ. ಅಧಿಕಾರದ ಗದ್ದುಗೆಗೆ ರೆಡ್ಡಿಗಳು ತಪ್ಪಿದರೆ ಗಾಣಿಗರು. ಇವೆರಡು ಕೋಮುಗಳ ಪ್ರಾಬಲ್ಯದಲ್ಲಿ ಮಿಕ್ಕವರೆಲ್ಲ ಕಡೆಗಣಿಸಲ್ಪಟ್ಟಿದ್ದಾರೆ.
 ರೆಡ್ಡಿ, ಗಾಣಿಗ ಈ ಎರಡೂ ಕೋಮಿನ ಜನಜೀವನ ಗಮನಿಸಿದರೆ ಮೇಲು ನೋಟಕ್ಕೆ ಇವರೆಲ್ಲ ಲಿಂಗಾಯತ ಮತಾನುಯಾಯಿಗಳು ಎಂದೆನಿಸುತ್ತದೆ. ವಾಸ್ತವದಲ್ಲಿ ರೆಡ್ಡಿಗಳಿಗೆ ಅಂತಿಮವಾಗಿ ವೇಮನ ಮತ್ತು ಹೇಮರಡ್ಡಿ ಮಲ್ಲಮ್ಮ ದೈವಗಳೇ ಅವರ ಸರ್ವಶ್ರೇಷ್ಠ ಧಾರ್ಮಿಕ ನಂಬಿಕೆ. ಲಿಂಗಾಯತ ಮತ್ತಿತರ ಸ್ಥಳೀಯ ಸಂಸ್ಕೃತಿಯೊಂದಗಿನ ರೆಡ್ಡಿಗಳ ಒಡನಾಟ ತುಂಬ ಡಿಪ್ಲೊಮ್ಯಾಟಿಕ್ ಆಗಿದೆ. ಕೆಲವೆಡೆ ಸಹಜವೂ ಹೌದು. ಶ್ರೀಶೈಲಕ್ಕೆ ಪಾದಯಾತ್ರೆ ಮತ್ತು ತಿರುಪತಿಗೆ ಮುಡಿ ಒಪ್ಪಿಸುವುದು ಇವರ ಧಾರ್ಮಿಕ ಆಚರಣೆಗಳಲ್ಲಿ ಪ್ರಮುಖವಾದ್ದು.
 ಗಾಣಿಗರನ್ನು ಲಿಂಗಾಯತ ಒಳಪಂಗಡದ ಮಿತಿಯಲ್ಲೇ ಈಗಲೂ ಕಾಣಲಾಗುತ್ತಿದೆ. ಬಣಜಿಗರು ಮತ್ತಿತರ ಒಳಪಂಗಡಗಳು ಬೇರೆ. ಐನೋರು (ಐನಾರು ಗ್ರಾಮ್ಯ ಧಾಟಿಯಲ್ಲಿ) ಎನ್ನುವ ಪಂಗಡವೇ ಬೇರೆ. ಎಣ್ಣೆ ತೆಗೆಯುವ ಮತ್ತು ಕೃಷಿಯಲ್ಲಿ ಹೆಚ್ಚಾಗಿ ತೊಡಗಿರುವ ಗಾಣಿಗರು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
 ಬಾಗಲಕೋಟೆಯಿಂದ ಕೂಗಳತೆಯಲ್ಲಿ ಕೂಡಲ ಸಂಗಮವಿದೆ. ಇದು ಬಸವಾನುಯಾಯಿಗಳಿಗೆ ಪವಿತ್ರ ಕ್ಷೇತ್ರ. ಆದರೆ ಬಸವಣ್ಣ ಇಲ್ಲಿ ಸಾಮಾಜಿಕ ನ್ಯಾಯ ಎನ್ನುವ ತತ್ವದ ನೆಲೆಯಲ್ಲಿ ಕೇವಲ ಸಾಂಕೇತಿಕವಾಗಿ ಬಳಕೆಯಾಗುತ್ತಾನೆ. ಅಲ್ಲಲ್ಲಿ ಬಸವೇಶ್ವರ್ ಸರ್ಕಲ್ ರೂಪುಗೊಂಡಿದ್ದರಿಂದ ಆತ ಬರಿಯ ಪ್ರತಿಮೆಯಾಗಿದ್ದಾನೆ. ಬಸವನ ಆಶಯ ಜೀವಗಂಗೆಯಾಗದೇ ಜಲಾಶಯದಲ್ಲಿ ಕೂಡಿಟ್ಟ ನೀರಿನಂತಾಗಿದೆ. ಕೂಡಲ ಸಂಗಮಕ್ಕೆ ತುಂಬ ಹತ್ತಿರದಲ್ಲಿ ಸ್ಥಾವರ ಬೇಡವೆಂದವನ ಅನುಯಾಯಿಗಳು ಗೋಲಗುಂಬಜದಂಥ ಬೃಹದಾಕಾರದಲ್ಲಿ ಶಿವನ ಮೂರ್ತಿ ಸೃಷ್ಟಿಸಿ ಅಭಿಷೇಕ ಮಾಡುತ್ತಾರೆ. ಅದನ್ನೇ ಪಿಕ್ನಿಕ್ ಸ್ಪಾಟ್ ಅನ್ನಾಗಿಸುತ್ತಾರೆ.
* * *
 ಅಭಿವೃದ್ಧಿ ಎಂದರೆ ರಸ್ತೆ ಮತ್ತು ನೀರಾವರಿ ಕಾಲುವೆಗಳು. ಇವೆರಡೂ ಪ್ರಬಲ ಕೋಮಿನ ಶ್ರೀಮಂತ ಕೃಷಿಕರ ಅಣತಿಯಂತೆ ನಿರ್ಮಾಣಗೊಳ್ಳುತ್ತಿರುವುದು ಇಲ್ಲಿನ ಸತ್ಯ. ಇದ್ದುದರಲ್ಲೇ ಇಸ್ಲಾಂ ಅನ್ನು ಐಡೆಂಟಿಟಿಗೆ ಬಳಸಿಕೊಂಡ ಬಾಗವಾನರು ಎನ್ನುವ ವ್ಯಾಪಾರಿ ಕೋಮು ಉತ್ತಮ ಸ್ಥಿತಿಯಲ್ಲಿದೆ. ರೆಡ್ಡಿಗಳ ಭೂಮಿ ಮತ್ತಲ್ಲಿನ ಉತ್ಪನ್ನಗಳ ಮಾರುಕಟ್ಟೆಗೆ ಸಂಬಂಧಿಸಿದಂತೆ ಅವರ ಜತೆ ಒಂದು ಕೃತಕ ಸೌಹಾರ್ದ ಸಂಬಂಧವನ್ನು ಈ ಬಾಗವಾನರು ಹೊಂದಿದ್ದರಿಂದ ಇದು ಸಾಧ್ಯವಾಗಿದೆ. ದೇಸೀ ವ್ಯಾವಹಾರಿಕ ಪ್ರಜ್ಞೆಯಲ್ಲಿ ಸಹಜವೆನಿಸುತ್ತಿದ್ದ ಬಾಗವಾನರ ವ್ಯಾಪಾರದ ಪರಿಗೆ ಈಗ ಕರಾವಳಿ, ಮಾರ್ವಾಡಿಗಳ ವ್ಯಾವಹಾರಿಕ ಬುದ್ಧಿಯಂಥದೂ ಕಾಣಿಸಿಕೊಳ್ಳುತ್ತಿರುವುದು ಇತ್ತೀಚಿನ ಬೆಳವಣಿಗೆ. (ಆಲಮಟ್ಟಿ ಹೆದ್ದಾರಿಯ ಸುತ್ತ ಈಗ ಕೇರಳ ಕರಾವಳಿ ಹೊಟೇಲುಗಳು ನಾಯಿ ಕೊಡೆಗಳಂತೆ ಹಬ್ಬುತ್ತಿವೆ) ಮಿಕ್ಕುಳಿದಂತೆ ಸಣ್ಣ ಪುಟ್ಟ ಹಣ್ಣು ವ್ಯಾಪಾರಿಗಳ ಸ್ಥಿತಿ ಹೇಳಿಕೊಳ್ಳುವಂಥದ್ದೇನಲ್ಲ.
 ಕೃಷಿಗೆ ಸಂಬಂಧಿಸಿದ ಮಾರುಕಟ್ಟೆ ಕೂಡ ಪ್ರಬಲ ಕೋಮುಗಳ ಹಿಡಿತದಲ್ಲೇ ಇದೆ. ಅಗ್ರೋ ಪ್ರಾಡಕ್ಟ್ಸ್, ರಸಗೊಬ್ಬರ ಅಂಗಡಿ, ಪಂಪ್‌ಸೆಟ್, ಪೈಪುಗಳ ಮಾರಾಟ ಇತ್ಯಾದಿ. ವಾಹನ, ಗ್ಯಾಸ್, ಸಿಮೆಂಟ್, ಸಕ್ಕರೆ ಮತ್ತಿತರ ಏಜೆನ್ಸಿಗಳು ಕೂಡ ಇವರದ್ದೇ ಹಿಡತದಲ್ಲಿವೆ.
 ಜನಸಾಮಾನ್ಯರ ಭಾಷೆಯಲ್ಲಿ ರಾಜಕಾರಣಿಗಳು ಎಂದರೆ ಕೆಲಸ ಮಾಡಿಸಿಕೊಡುವವರು. ಅಂದರೆ ತಮ್ಮ ಕೋಮಿನವರಿಗೆ ಏಜನ್ಸಿಗಳನ್ನು ಕೊಡಿಸುವುದು, ಸರ್ಕಾರಿ ಕೆಲಸ ಕೊಡಿಸುವುದು, ಪಾಳುಬಿದ್ದ ಬೇನಾಮಿ ಜಾಗವನ್ನು ಆಕ್ರಮಿಸಿಕೊಳ್ಳಲು ಅಗತ್ಯ ಸೌಲಭ್ಯ ಮಾಡಿಸಿಕೊಡುವುದೇ ರಾಜಕಾರಣಿಗಳ ಸಾರ್ವಜನಿಕ ಸೇವೆ ಎನ್ನುವಂಥ ಸೀಮಿತ ಪ್ರಜ್ಞೆ ಇಲ್ಲಿದೆ.
 ಮೊಬೈಲ್, ಕರೆನ್ಸಿ, ಗೂಡಂಗಡಿಯಂಥ ವ್ಯವಹಾರಗಳು ಕೂಡ ಉಳ್ಳವರ ಸ್ವತ್ತಾಗಿವೆ. ದಲಿತ, ಅಲ್ಪಸಂಖ್ಯಾತ ಮತ್ತು ಕೆಳ ಕೋಮಿನವರಿಗೆ ಇಂಥ ಸಣ್ಣ ಪುಟ್ಟ ಆರ್ಥಿಕ ಮೂಲಗಳನ್ನು ಹೊಂದುವುದಕ್ಕೂ ಕಷ್ಟವಿದೆ. ಒಂದಷ್ಟು ಕಡೆ ಅಪರೂಪದ ಪರಿಸ್ಥಿತಿ ಇರಬಹುದು. ಇದಾವ ಪ್ರಜಾಪ್ರಭುತ್ವ ವ್ಯವಸ್ಥೆಯೋ?
 ಚಹ ಕುಡಿಯಲು ಲೋಟ ಸೆಪರೇಟ್ ಆಗಿಡುವ ಅಮಾನುಷ ಪದ್ಧತಿ ಬೇರೆ ರೂಪದಲ್ಲಿ ಈಗಲೂ ಈ ಭಾಗದಲ್ಲಿ ಇದೆ. ದಲಿತರ ಮತಗಳನ್ನು ಹಾಕಿಸಿಕೊಳ್ಳುವಾಗ ಮತರಾಜಕಾರಣಕ್ಕೆ ಈ ಅಸ್ಪೃಶ್ಯ ಭಾವನೆ ಇರೋದಿಲ್ಲ. ಕೂಡಿ ಬಾಳುವುದು ಎಂದಾಗ ಇದು ಮುನ್ನೆಲೆಗೆ ಬಂದು ಬಿಡುತ್ತದೆ. ಇಲೆಕ್ಷನ್ ಗಳ ಉದ್ದೇಶವಾದರೂ ಏನು? ಸಹಜ ಬದುಕಿನಲ್ಲಿ ಸಮಾನತೆಯೇ ಸಾಧ್ಯವಾಗುತ್ತಿಲ್ಲ ಎಂದಾದರೆ ಅದನ್ನು ಸರಿಪಡಿಸುವ ಕೆಲಸವನ್ನು ಶಾಸನ ವ್ಯವಸ್ಥೆಯಾದರೂ ಮಾಡಬೇಕಲ್ಲ. ಜನಪ್ರತಿನಿಧಿ ಈ ನಿಟ್ಟಿನಲ್ಲಿ ಏನು ಮಾಡಿದ್ದಾರೆ? ಎಂದು ಕೇಳಿದರೆ, ಸಮುದಾಯ ಭವನ ಕಟ್ಟಿಸಕೊಟ್ಟಿದ್ದೇನೆ, ಅನುದಾನ ಬಿಡುಗಡೆ ಮಾಡಿದ್ದೇನೆ ಎನ್ನುವ ಹಾರಿಕೆ ಉತ್ತರಗಳು ಜನಪ್ರತಿನಿಧಿಗಳಿಂದ ಬರುತ್ತವೆ. ಇದನ್ನೆಲ್ಲ ಪರಾಮರ್ಶಿಸುವ ಮಾಧ್ಯಮ ಇಲ್ಲ.
* * *
  ಕೈಗಾರಿಕೆಗಳು ಇಡೀ ಕ್ಷೇತ್ರದುದ್ದಕ್ಕೂ ಆಕ್ರಮಿಸಿಕೊಂಡಿವೆ. ಸಕ್ಕರೆ, ಸಿಮೆಂಟು ಮತ್ತು ವೈನ್ ಘಟಕಗಳು ಪ್ರಮುಖ ಇದರಲ್ಲಿ ಪ್ರಮುಖ.  ಕ್ಷೇತ್ರದ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಉದ್ಯಮಿಗಳ ನಡುವಿನ ಜಟಾಪಟಿ ಒಂದೆಡೆ. ಬೆಳೆಗಾರ-ಉದ್ಯಮದ ನಡುವಿನ ಹೊಂದಾಣಿಕೆಗಳು ಹಾಗೂ ರೈತರಿಗೆ ಬೆಂಬಲ ಬೆಲೆ ನಿಗದಿಪಡಿಸುವ ಸರ್ಕಾರದ ನೀತಿಗಳಲ್ಲಿನ ಅವೈಜ್ಞಾನಿಕ ಕ್ರಮಗಳು ಮತ್ತೊಂದೆಡೆ.  ಇಲ್ಲಿನ ಕೈಗಾರಿಕೆಗಳಲ್ಲಿ ಕೆಲಸಕ್ಕಿರುವ ಕಾರ್ಮಿಕರಿಗೆ ಕೆಲಸದ ಅಭದ್ರತೆಯ ಭಯವಿದೆ. ಅವರಿಗೆ ಆರೋಗ್ಯ, ಶಿಕ್ಷಣ ಮತ್ತು ಸೂರಿನ ಕನಿಷ್ಠ ಭದ್ರತೆಗಳೇ ಅಪರೂಪ. ಇಂಥ ಪರಿಸ್ಥಿತಿಗಳು ಇಡೀ ಕ್ಷೇತ್ರವನ್ನು ಅಡ್ಜಸ್ಟ್‌ಮೆಂಟ್ ರಾಜಕಾರಣಕ್ಕೆ ಸಜ್ಜುಗೊಳಿಸಿಬಿಟ್ಟಿವೆ.
ಇಲ್ಲಿ ಬೆಳೆಸಾಲ, ಬೆಳೆಹಾನಿ, ಬೋರವೆಲ್ ಮತ್ತು ಪಂಪ್‌ಸೆಟ್‌ಗಳಿಗೆ ಸರ್ಕಾರ ನೀಡುವ ಸಹಾಯಧನವನ್ನು ಒಂದು ಸ್ಕೀಂನಂತೆ ದುರುಪಯೋಗ ಮಾಡಿಕೊಳ್ಳುವುದು ಸಹಜ ಧರ್ಮ, ಸಂಸ್ಕೃತಿ ಎಂದೆನಿಸಿಕೊಂಡಿದೆ. ಯಾವ ಪಾಪಪ್ರಜ್ಞೆ ಮತ್ತು ನೈತಿಕ ಮೌಲ್ಯಗಳಿಲ್ಲದ ಇಂಥ ಅನಾಗರಿಕ, ಬೇಜವಾಬ್ದಾರಿ ಮತ್ತು ನೈತಿಕ ಮನೋಧರ್ಮವೇ ಇಲ್ಲದ ವರ್ತನೆ ಈ ಭಾಗದ ಜನಜೀವನದ ಸಹಜ ನಡೆ ಎಂತಾಗಿದ್ದು ನೀತಿರಹಿತ ರಾಜಕಾರಣದ ಒಟ್ಟು ಔಟ್‌ಗ್ರೂಥ್.
* * *
 ಬಾಗಲಕೋಟೆ ಕ್ಷೇತ್ರಕ್ಕೆ ಈ ಸಲ ಜನತಾ ಪರಿವಾರದಿಂದ ಬಂದ ಇಬ್ಬರು ಅಭ್ಯರ್ಥಿಗಳು ಪರಸ್ಪರ ಪೈಪೋಟಿಯಲ್ಲಿದ್ದಾರೆ. ಒಬ್ಬರು ಬಿಜೆಪಿಯ ಗದ್ದಿಗೌಡರು ಹಾಲಿ ಸದಸ್ಯರು. ಮೋದಿ ಮೋಡಿ ಮತ್ತು ತಮ್ಮದೇ ಗಾಣಿಗ ಸಮಾಜದ ವೋಟು ಬ್ಯಾಂಕ್‌ ಅನ್ನು ಬಲವಾಗಿ ನಂಬಿ ಹ್ಯಾಟ್ರಿಕ್ ನಿರೀಕ್ಷೆಯಲ್ಲಿದ್ದಾರೆ. ಮತ್ತೊಬ್ಬರು ಕಾಂಗ್ರೆಸ್‌ನ ಸರನಾಯಕ್. ಈ ಮಾಜಿ ಸಚಿವರು ತಮ್ಮದೇ ರೆಡ್ಡಿ ಮತಗಳನ್ನೇ ಅಡಿಪಾಯವಾಗಿಟ್ಟುಕೊಂಡಿದ್ದಾರೆ. ಮುಸಲ್ಮಾನರು, ದಲಿತರು ಮತ್ತು ಇತರ ಹಿಂದುಳಿದವರ ಸಾಂಪ್ರದಾಯಿಕ ಜಾತ್ಯತೀತ ಮತಗಳನ್ನು  ಸೌಹಾರ್ದ ಸಂಬಂಧದ ನೆಲೆಯಲ್ಲಿ ನಂಬಿಕೊಂಡಿದ್ದಾರೆ. ಆ ಮೂಲಕ ಲೋಕಸಭೆಗೆ ಹಾದಿ ಮಾಡಿಕೊಳ್ಳುವ ಉಮೇದಿಯಲ್ಲಿದ್ದಾರೆ.
 ಇಬ್ಬರೂ ಅಭ್ಯರ್ಥಿಗಳ ಬಗ್ಗೆ ಅಂಥ ಕಪ್ಪು ಚುಕ್ಕೆಗಳಿಲ್ಲ. ಜಾತಿ ರಾಜಕಾರಣದಲ್ಲಿ ಸುಸ್ಥಿತಿಯಲ್ಲಿದ್ದಾರೆ ಅಷ್ಟೇ. ಸರನಾಯಕ್ ಸ್ವಭಾವತಃ ಒಳ್ಳೆಯ ವ್ಯಕ್ತಿ. ಒಳ್ಳೆಯ ಶಿಕ್ಷಣ ಹೊಂದಿದವರು. ಸ್ವಭಾವದಲ್ಲಿ ಜಾತ್ಯತೀತರೂ ಹೌದು. ಶಾಸಕರಾಗಿ, ಸಚಿವರಾಗಿ ಅಧಿಕಾರದ ಅನುಭವ ಹೊಂದಿದವರೂ ಹೌದು.
 ಗದ್ದಿಗೌಡರು ಏನು ಮಾಡಿದ್ದಾರೆ? ಎನ್ನುವುದು ಇಲ್ಲಿನ ಬಹುತೇಕರ ಪ್ರಶ್ನೆ. ಮುಧೋಳ, ಜಮಖಂಡಿ, ಬಾದಾಮಿ, ನರಗುಂದ  ಮತ್ತಿತರ ತಾಲ್ಲೂಕು ಪ್ರದೇಶದ ಬಹುತೇಕರು ಈ ಸಂಸದರನ್ನು ನೋಡಿಯೇ ಇಲ್ಲ. ಮತ ಕೇಳಲು ಬಂದವರು ಲೋಕಸಭೆ ಚುನಾವಣೆ ನಂತರ ನಾಪತ್ತೆ ಎನ್ನುವ ದೂರುಗಳೇ ಇಲ್ಲಿ ಸಾಮಾನ್ಯ. ಈಗ ಮೋದಿ ಮೋಡಿ ಎನ್ನುವ ಏಕಮಾತ್ರ ಭರವಸೆಯೊಂದಿಗೆ ಇವರು ಚುನಾವಣೆಗಿಳಿಯಬೇಕಷ್ಟೇ. ಯುವ ಮತದಾರರಲ್ಲಿ ಕೆಲವರ ಅಬ್ಬರದ ವರ್ತನೆಗಳಿಂದ ಮೋದಿ ಮೋಹ ಹೆಚ್ಚಿದೆ ಎನ್ನುವುದು ಮೇಲ್ನೋಟಕ್ಕೆ ಅನಿಸುತ್ತದೆ.
 ಅಭ್ಯರ್ಥಿಗಳಿಬ್ಬರಲ್ಲಿ ಯಾರು ಗೆದ್ದರೂ ಅದು ಅಭ್ಯರ್ಥಿಗಳ ಗೆಲುವಾಗದೇ ಜಾತಿಯ ಗೆಲುವಾಗಿ ಕಾಣಿಸುವುದು ಕ್ಷೇತ್ರದ ದೌರ್ಭಾಗ್ಯ. ಮತದಾರರನ್ನು ಆಯಾ ಸಮುದಾಯದ ರಾಜಕಾರಣ ಸಜ್ಜುಗೊಳಿಸುವುದಾರೆ ಇತರೆ ವರ್ಗದ ಜನತೆಗೆ ತಮಗೆ ಇರುವುದರಲ್ಲೇ ಆಪ್ತ ಸಮುದಾಯಕ್ಕೆ ಸಹಕಾರ ನೀಡುವುದೊಂದೇ ಆಯ್ಕೆ ಎಂದಷ್ಟೇ ಹೇಳಬಹುದು.
* * *
ಬಾಗಲಕೋಟೆ ನಗರ ಮುಂಚಿನಿಂದ ಸಂಘ ಪರಿವಾರದ ಚಟುವಟಿಕೆಗಳಿಗೆ ಹೆಸರಾಗಿದೆ. ಹಳೆಯ ಬಾಗಲಕೋಟೆಯ ಪಂಖಾ ಮಸೀದಿ ಸುತ್ತಲಿನ ಮಾರುಕಟ್ಟೆಯಲ್ಲಿನ ಮುಸಲ್ಮಾನರ ಪ್ರಾಭಲ್ಯ,  ಮೇನ್ ಬಜಾರ್‌ ನಲ್ಲಿ ಇತರ ಕೋಮಿನ ಪ್ರಾಭಲ್ಯ ಮತ್ತು ಆರ್‌ಎಸ್‌ಎಸ್‌ ಚಟುವಟಿಕೆಗಳು ಕೊಂಚ ಬಿಗುವಿನ ವಾತಾವರಣಕ್ಕೆ ಆಗಾಗ ಕಾರಣವಾಗುವುದೂ ಇದೆ. ನಗರದಲ್ಲಿ ಹೋಳಿ ಹುಣ್ಣಿಮೆಯ ಸಂದರ್ಭ ಕೆಲವು ತಿಕ್ಕಾಟಗಳು ನಡೆದರೂ ಒಟ್ಟಾರೆ ಜಿಲ್ಲಾ ಕೇಂದ್ರ ಶಾಂತವಾಗೇ ಇರುತ್ತದೆ.
 ಒಟ್ಟು ಕ್ಷೇತ್ರದ 15 ಲಕ್ಷ ಮತದಾರರ ಪೈಕಿ ಗಾಣಿಗರು ಮತ್ತು ರೆಡ್ಡಿಗಳು ಸಮಬಲದಲ್ಲಿ ಒಟ್ಟು ಸೇರಿದರೂ 4 ಲಕ್ಷ 50 ಸಾವಿರ ದಾಟುವುದಿಲ್ಲ. ಅದೇ ದಲಿತರು (ಎಸ್‌ಸಿ/ಎಸ್‌ಟಿ) 3 ಲಕ್ಷ 50 ಸಾವಿರಕ್ಕೂ ಹೆಚ್ಚಿದ್ದಾರೆ. ಕುರುಬರು ಕಮ್ಮಿ ಎಂದರೂ 2 ರಿಂದ ಮೂರು ಲಕ್ಷ. ಇನ್ನು ಮುಸಲ್ಮಾನರು (ಪಿಂಜಾರ, ನದಾಫ್, ಬಾಗವಾನರೂ ಸೇರಿ) 2 ರಿಂದ ಎರಡೂವರೆ ಲಕ್ಷ ಸಂಖ್ಯೆಯಲ್ಲಿದ್ದಾರೆ. ಅಂದರೆ ಪ್ರಬಲ ಗಾಣಿಗರು ಮತ್ತು ರೆಡ್ಡಿಗಳು ಒಟ್ಟು ಸೇರಿದರೂ ಅಹಿಂದದ ಹತ್ತಿರಕ್ಕೂ ಬರುವುದಿಲ್ಲ. ಆದರೆ ಈ ಅಹಿಂದ ಒಟ್ಟುಗೂಡಿಸುವ ತಾಕತ್ತಿನ ನಾಯಕತ್ವ  ಇಲ್ಲ. ಈ ವರ್ಗದಲ್ಲಿ ನಾಯಕತ್ವಕ್ಕೇ ದೊಡ್ಡ ಬರವಿದೆ. ಒಬ್ಬ ದಲಿತನಾಗಲಿ ಇಲ್ಲವೇ ಮುಸಲ್ಮಾನನಾಗಲಿ ಅಥವಾ ಕುರುಬನಾಗಲಿ ಈ ಮೂರೂ ಸಮುದಾಯಗಳನ್ನು ಒಂದೇ ಸೂರಿನಡಿ ನಿಲ್ಲಿಸಿ ಜಾತ್ಯತೀತ ಕ್ಷೇತ್ರ ಕಟ್ಟಬಲ್ಲ ಒಬ್ಬನೇ ಒಬ್ಬನಿಲ್ಲ. ಈ ವರ್ಗದ ಪುಡಿ ಪುಡಾರಿಗಳೇ ಸಮುದಾಯಗಳ ನಾಯಕರಾಗಿದ್ದಾರೆ. ಸಣ್ಣ ಪುಟ್ಟ ಆಸ್ತಿ, ಭಾರೀ ದುಡ್ಡು ಮಾಡಿಕೊಳ್ಳಲು ಸಮುದಾಯದ ಆಶಯಗಳನ್ನೇ ಬಲಿ ಕೊಡುತ್ತಿದ್ದಾರೆ ಅಷ್ಟೇ.

 ಈ ಭಾಗದ ಕುರುಬರಿಗೆ ಇದ್ದಕ್ಕಿದ್ದಂತೆ ವಿಪರೀತ ಜಾತಿಪ್ರಜ್ಞೆ ಬೆಳೆದು ನಿಂತಿದೆ. ಮೀಸಲಾತಿ ಇದ್ದೂ ದಲಿತರಿಗೆ ಜಡತ್ವದಿಂದ ಹೊರಬರಲಾಗುತ್ತಿಲ್ಲ. ಮುಸಲ್ಮಾನರಿಗೆ ರಾಜಕೀಯದಲ್ಲೇ ನಿರಾಸಕ್ತಿ. ಮುಸಲ್ಮಾನರ ಪೈಕಿ ಸೌದಾಗರ, ಮುಧೋಳದ ಅಂಬಿ ವಕೀಲ ಅಂಥವರು ಅಲ್ಲೊಬ್ಬರು ಇಲ್ಲೊಬ್ಬರು ಸಮುದಾಯದ ನಾಯಕತ್ವಕ್ಕೆ ಒಲವು ತೋರಿಸುತ್ತಿದ್ದಾರೆ ಎನ್ನುವುದನ್ನು ಬಿಟ್ಟರೆ ಅವರೂ ಇಡೀ ಕ್ಷೇತ್ರ ಸಂಚರಿಸಿ ಜನರನ್ನು ಒಗ್ಗೂಡಿಸುವ ದೂರದೃಷ್ಟಿಯ ವ್ಯಕ್ತಿತ್ವ ಹೊಂದುವುದಕ್ಕೆ ಯತ್ನಿಸುತ್ತಿಲ್ಲ. ಕುರುಬ ಜನಾಂಗದ ಎಚ್.ವೈ. ಮೇಟಿ ಪ್ರಬಲ ಕೋಮಿನ ದರ್ಪಕ್ಕೆ ಹೆದರಿಕೊಂಡವರಂತೆಯೇ ಅನಿಸುತ್ತಾರೆ. 
 ಇಷ್ಟಿದ್ದೂ ಕೋಮುವಾದ ಎನಿಸಿಕೊಳ್ಳದ ಈ ಕ್ಷೇತ್ರದ ಜಾತಿ ರಾಜಕಾರಣ ಸಾಮಾನ್ಯ ವರ್ಗದ ಜನರ ಮೇಲೆ ಮತ್ತು ಜಾತಿ ಗೊಡವೆಯೇ ಇಲ್ಲದೇ ಬದುಕುತ್ತಿರುವ ಅಸಂಖ್ಯರ ಮೇಲೆ, ರೈತ, ಕಾರ್ಮಿಕರು, ಯುವಕರು ಹಾಗೂ ಮಹಿಳೆಯರ ಮೇಲೆ ಒಂದರ್ಥದ ಶೋಷಣೆ ಮತ್ತು ಪರೋಕ್ಷ ದರ್ಪವನ್ನೇ ಮಾಡುತ್ತ ಬಂದಿದೆ. ಇದೊಂದು ಅನಿವಾರ್ಯದ ಹೇರಿಕೆಯಂತೆಯೇ.

 ದಲಿತರು, ಮುಸಲ್ಮಾನರು, ರೈತರು ಮತ್ತು ಮಹಿಳೆಯರನ್ನು ಶ್ರಮಿಕ ವರ್ಗದ ವಿಶಾಲ ತಳಹದಿಯಲ್ಲಿ ಒಗ್ಗೂಡಿಸಿ ದೊಡ್ಡ ಶಕ್ತಿಯನ್ನಾಗಿಸುವ ಯತ್ನವನ್ನು ರೈತ ಚಳವಳಿ, ದಲಿತ ಚಳವಳಿ ಅಥವಾ ಎಡರಂಗವೂ ಗಂಭೀರ ನೆಲೆಯಲ್ಲಿ ಮಾಡುತ್ತಿಲ್ಲ.
* * *
 ಆರ್ಥಿಕ ಮದದಲ್ಲಿ ನಶೆಯನ್ನೇ ಬದುಕಾಗಿಸಿಕೊಳ್ಳುತ್ತಿರುವ ಸ್ಥಿತಿವಂತ ರೈತಾಪಿ ಜನರು, ಶ್ರೀಮಂತರು, ಭೂಮಾಲೀಕರು ಪ್ರತಿಷ್ಠೆಗೆ ಕಾರು ಖರೀದಿಸುವುದು, ವೈಷಮ್ಯಕ್ಕೆ ತಲೆಗಳನ್ನು ಉರುಳಿಸುವುದು, ವೇಶ್ಯಾವಾಟಿಕೆ, ಜೂಜು ಮೋಜಿನಲ್ಲಿ ಮುಳುಗುವುದು ಮತ್ತು ಮಧ್ಯಮ ವರ್ಗದ ಲಂಚಗುಳಿತನ... ಇವೆಲ್ಲ ಇಲ್ಲಿನ ಒಟ್ಟು ಜನಸಂಸ್ಕೃತಿಯನ್ನೇ ಭ್ರಷ್ಟವನ್ನಾಗಿಸಿವೆ. ರೈತರ ಸಾಲದ ಯೋಜನೆಗಳ ಬಹುಪಾಲು ದುಡ್ಡು ಕಾರು ಖರೀದಿ ಮತ್ತು ಇಲ್ಲಿನ ಬಾರ್ ರೆಸ್ಟೋರೆಂಟ್‌ಗಳಿಗೆ ಸೇರುತ್ತಿರುವುದು ಕಟು ವಾಸ್ತವ. ಬಾಗಲಕೋಟೆ, ಬೀಳಗಿ, ಬಾದಾಮಿ, ಮುದ್ದೇಬಿಹಾಳ, ಜಮಖಂಡಿ, ಮುಧೋಳ, ಲೋಕಾಪುರ, ಮಹಾಲಿಂಗಪುರ, ರಬಕವಿ, ಬನಹಟ್ಟಿ, ಗದ್ದನಕೇರಿ, ಕಾತರಕಿ ಪುಟ್ಟ ಪಟ್ಟಣಗಳು ಹಾಗೂ ಹೆದ್ದಾರಿಗೆ ಹತ್ತಿರದಲ್ಲಿನ ಬಹುತೇಕ ಬಾರ್ ರೆಸ್ಟೋರೆಂಟ್‌ಗಳು, ದಾಬಾಗಳಲ್ಲಿನ ಜನನಿಬಿಡವೇ ಇದಕ್ಕೆ ಸಾಕ್ಷಿ.
ಇದು ಬಿಟ್ಟರೆ ರಾತ್ರಿಯಿಡೀ ರೈತನ ಶ್ರಮದ ಕಬ್ಬನ್ನು ಅರೆಯುವ ಸಕ್ಕರೆ ಕಾರ್ಖಾನೆಗಳ, ರಕ್ತ, ಬೆವರು ಹರಿಸಿ ಬೆಳೆಸಿದ ದ್ರಾಕ್ಷಿಗಳ ರಸ ಹೀರಿ ವೈನಾಗಿಸುವ ಮತ್ತು  ನೆಲದಿಂದ ಬಗಿದ ಕಲ್ಲನ್ನೇ ಅರಗಿಸಿ ಸಿಮೆಂಟ್ ಮಾಡುವ ಯಂತ್ರಗಳ ಸದ್ದು ಇಲ್ಲಿನ ಬಡವರ, ಶ್ರಮಿಕರ ನರನಾಡಿಗಳನ್ನು ಹಿಂಡುತ್ತಿರುವುದರ ಸಂಕೇತವಾಗಿ ಕಾಡುತ್ತವೆ.
ಮತದಾನದ ಸಮಯ ಹತ್ತಿರ ಬರುತ್ತಿರುವ ಈ ಹೊತ್ತಲ್ಲಿ ಕ್ಷೇತ್ರದ ವಾಸ್ತವ ಚಿತ್ರಣ ಕಣ್ಮುಂದೆ ತಂದುಕೊಂಡರೆ ನಿರಾಶೆ ಮೂಡಬಹುದು. ಆದರೆ ಮತಗಟ್ಟೆಯಲ್ಲಿ ನಿಂತು ಮತದಾನ ಮಾಡುವಾಗ ನಾವು ಕೈಗೊಳ್ಳುವ ನಿರ್ಧಾರ ಕ್ಷೇತ್ರವಷ್ಟೇ ಅಲ್ಲ ದೇಶದ ರಾಜಕೀಯ ಗತಿಯನ್ನೇ ಬದಲಿಸಬಹುದು ಎನ್ನುವ ಪರಿಜ್ಞಾನ ನಮಗಾದಲ್ಲಿ ಅದೇ ಅರ್ಥಪೂರ್ಣ ಅಭಿವೃದ್ಧಿಯಾದೀತು. ಜಾತಿ ಮಿತಿಯನ್ನು ಮೀರುವ ನಡೆ ಇಂದಿನ ಅಗತ್ಯ. ಈ ಚುನಾವಣೆ ಅದಕ್ಕೊಂದು ನಾಂದಿಯಾಗಲಿ. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

'ಅನಭಿಜ್ಞ ಶಾಕುಂತಲ': ನೆನಪು ಮರೆವಿನಾಟ

 ಜೀವನವೇ ಒಂದು ನಾಟಕವೆಂದಾದರೆ. ಸಂಬಂಧ ಅನ್ನೋದು ಕಟ್ಟಿಕೊಂಡ ಆಟ. ಅಂದರೆ ನಾಟಕದಂತೆ ಬದುಕು ಕೂಡ ಆಟ ಕಟ್ಟುವ ಕ್ರಿಯೆ. ಇಲ್ಲಿ ಗುರಿ ಎಂದರೆ ಸುಖದ ಅಥವಾ ಸಾರ್ಥಕತೆಯ ದಡ ಸೇರುವುದು. ಈ ಆಟದ ಒಂದು ಹಂತದಲ್ಲಿ ಕಷ್ಟದ ಅಡವಿ ಸೇರುವುದೂ ಇದೆ! 'ಆಡಾಡ್ತ ಅಡವಿ ಸೇರುವುದು' ಅಂತಾರಲ್ಲ ಹಾಗೆ. ಅಡವಿ ಅಂದರೆ ಇಲ್ಲಿ ಸಂಕೀರ್ಣತೆ, ಸಂಕಷ್ಟ ಅವಘಡ, ಸಂದಿಗ್ಧತೆ ಎಂದು ಭಾವಿಸಿಕೊಳ್ಳಬಹುದು. ಬದುಕಿನ ದಾರಿಯಲ್ಲಿ ಒಮ್ಮೆ ಈ 'ಅಡವಿ' ಎದುರಾಗೇ ಆಗುತ್ತದೆ ಎನ್ನುವುದು ವಿಧಿಲಿಖಿತವೇ? ಗೊತ್ತಿಲ್ಲ. ಪ್ರೀತಿ-ಪ್ರೇಮ-ಕಾಮ ಎನ್ನುವ ಬದುಕಿನ ಒಟ್ಟಾರೆ ಆಟ- ಕೂಟದಲ್ಲಿ ಪಡಕೊಳ್ಳುವುದೆಲ್ಲ ಜೀವಕಾರುಣ್ಯವಷ್ಟೇ ಅಲ್ಲ. ಸಂಕಷ್ಟ ಮತ್ತು ಸಂದಿಗ್ಧತೆಯೂ ಜತೆಯಲ್ಲಿರುತ್ತದೆ ಎನ್ನುವುದು ಸಹಜ ಮನೋಧರ್ಮ.  ಬದುಕಿನ ಆಟಕ್ಕೆ ತೆರಕೊಂಡವರಲ್ಲಿ ಹಲವರು ಅನುಭವಿಸಿದ ಮಧುರ ಘಳಿಗೆಗಳನ್ನು ಕಡೆತನಕ ನೆನಪಿಟ್ಟುಕೊಳ್ಳುತ್ತಾರೆ. ಕೆಲವರು ಮರೆತೇ ಬಿಡುತ್ತಾರೆ!?..  ಕಾಳಿದಾಸನ ಮಹಾಕಾವ್ಯ ಶಾಕುಂತಲೆಯಲ್ಲಿ ಈ ಬದುಕು, ಮನುಷ್ಯ ಪ್ರೀತಿ ಪಯಣದ ನೆನಪು ಮತ್ತು ಮರೆವಿನಾಟ ಮನಮಿಡಿಯುವಂತೆ ಚಿತ್ರಣಗೊಂಡಿದೆ. ಈ ಕಾವ್ಯದಲ್ಲಿ ಎಲ್ಲವನ್ನು ವಿಧಿಯೇ ನಿರ್ಧರಿಸಿದಂತೆನಿಸುತ್ತದೆ. ಫೇಟಲಿಸಂ ವಾದಕ್ಕೆ ಪೂರಕವಾದ ಚಿಂತನೆ ಇದೆನ್ನಬಹುದು. ಆಧುನಿಕ ಯುಗದ ಶೇಕ್ಸಪಿಯರ್ ನ ಹಲವು ನಾಟಕಗಳಲ್ಲಿಯೂ ಈ ಫೇಟಲಿಸಂ ಪ್ರಧಾನ ಪಾತ್ರದಂತೆ ವರ್ತಿಸುವುದನ್ನು ಗಮನಿಸಬಹುದು. *

ಇಷ್ಕ್‌ ಕೆ ಇಮ್ತೆಹಾನ್‌ ಔರ್‌ ಭೀ ಹೈ’.. ಇಮ್ರಾನ್‌ ಖಾನ್‌!

ಪಾಕಿಸ್ತಾನದ ಬಗ್ಗೆ ಮಾತನಾಡುವುದು ಮಹಾ ಪಾಪದ ಕೆಲಸವೇನಲ್ಲ. ಹಾಗೆ ಭಾವಿಸಬೇಕಿಲ್ಲ. ಅದು ಒಪ್ಪಿತವೊ ಇಲ್ಲವೋ, ಅದರ ಬಗ್ಗೆ ಅಲಕ್ಷ್ಯವೋ ನಿರ್ಲಕ್ಷ್ಯವೊ ಏನೇ ಆದರೂ ಅದು ಒಂದು ದೇಶ. ನೆರೆಯ ರಾಷ್ಟ್ರ. ‘ಪಡೋಸಿ...’ ಸಂಬಂಧದಲ್ಲಿ ನಮ್ಮದೇ ಕರುಳಬಳ್ಳಿ. ಭಾಷೆ, ಜನಜೀವನ ಶೈಲಿಯಲ್ಲಿ ಬದಲಾದರೂ ಮನುಷ್ಯ ಭಾವ, ಬದುಕುವ ಸಾಮಾನ್ಯ ಕಾಳಜಿ  ಒಂದೇ. ಹಾಗೆ ನೋಡಿದರೆ ಸಾಂಸ್ಕೃತಿಕವಾಗಿ ಎರಡೂ ದೇಶಗಳು ಅಭಿನ್ನ. ನಮ್ಮಲ್ಲಿರುವ ಹಾಗೆ ಅಲ್ಲಿಯೂ ಪ್ರಜಾಪ್ರಭುತ್ವ ಇದೆ. ಅಲ್ಲಿ ನಡೆಯುವುದು ಇಲ್ಲೂ ನಡೆಯುತ್ತದೆ. ಅಲ್ಲಿ ನಡೆಯಲೇಬಾರದ್ದು ಇಲ್ಲೂ ನಡೆಯಲೇಬಾರದು.  ತೀವ್ರವಾದ ನಮ್ಮಲ್ಲಿನದಕ್ಕಿಂತ ಅಲ್ಲಿ ತುಸು ಹೆಚ್ಚು ಸವಾರಿಗೆ ಹವಣಿಸಿದೆ. ಅಲ್ಲಿನ ಮಿಲಿಟರಿ ಅತಿರೇಕದ್ದು. ಅಕ್ಷಮ್ಯ. ಮತ್ತೆ ದೇಶ ಪುಟ್ಟದಾದಷ್ಟು ಅದಕ್ಕೆ ಭಯಗಳು ಜಾಸ್ತಿ. ಮಿಲಿಟರಿ ಕವಚದಲ್ಲಿ ಅದು ಸುರಕ್ಷಾ ಭಾವವನ್ನು ಕಲ್ಪಿಸಿಕೊಳ್ಳುತ್ತದೆ. ಅದೊಂದು ತರಹದ ಸಮಾಧಾನ. ಆದರೆ ಭ್ರಮೆಯಿಂದ ಕೂಡಿದ್ದು. ಭಯೋತ್ಪಾದನೆ ಕೂಡ ಒಂದರ್ಥದಲ್ಲಿ ಪುಕ್ಕಲುತನವೇ ಆಗುತ್ತದೆ. ಹಿಂಸಾ ಪ್ರವೃತ್ತಿಗೆ ಹೆದರಿಸುವುದೇ ಕೆಲಸ. ಹೆದರಿಸುವವರು ಶೂರರು, ಧೀರರು ಮತ್ತು ಜೀನಿಯಸ್‌ ಆಗಿರಲು ಹೇಗೆ ಸಾಧ್ಯ? ಮುಖ್ಯವಾಗಿ ಅಲ್ಲಿನ ವಿದ್ಯಮಾನಗಳನ್ನು ಗಮನಿಸುವುದಾದರೆ, ಮಿಲಿಟರಿ, ಮತಾಂಧರು, ಭಯೋತ್ಪಾದಕರು, ಭ್ರಷ್ಟರು ಇದೆಲ್ಲದರಿಂದ ಪಾಕಿ ತುಂಬ ರೋಸಿ ಹೋಗಿದ್ದಾನೆ. ಒಂದು ಸೂಕ್ತ ಪರ್ಯಾಯಕ್ಕಾಗಿ ಹಂಬಲಿಸಿದ್ದಾನೆ. ಸಹಜ

ಮನುಷ್ಯ ಜಾತಿ ತಾನೊಂದೇ ವಲಂ...

ಭಾರತದಲ್ಲಿ ಜಾತಿ ವ್ಯವಸ್ಥೆ ಹೇಗೆ ಹುಟ್ಟಿತು ಎಂಬುದಕ್ಕೆ ಯಾವುದೇ ನಿರ್ಧಿಷ್ಟ ಥಿಯರಿ ಇಲ್ಲ. ಆದರೆ, ಇಲ್ಲಿನ ವರ್ಗ ಸೃಷ್ಟಿ ಮಾತ್ರ ಇರಾನ್ ವ್ಯವಸ್ಥೆಯಂತೇ ಇದೆ.  ಪುರಾತನ ಇರಾನಿನ ಚರಿತ್ರೆಯಲ್ಲಿ ಇಂಥದೊಂದು ವ್ಯವಸ್ಥೆ ಇತ್ತು. ಅದಕ್ಕೆ ಪಿಸ್ತ್ರಾಸ್ ಎನ್ನುತ್ತಾರೆ. ನಮ್ಮಲ್ಲಿ ಅದು ಚಾತುರ್ವರ್ಣವಾಗಿದೆ. ಅಲ್ಲಿ ಅಥ್ರವಾನ್ಸ್ (ಪ್ರೀಸ್ಟ್ ಕ್ಲಾಸ್), ರಥೈಸ್ತಾ (ವಾರಿಯರ್ಸ್), ವಸ್ತ್ರಿಯಾ (ಮರ್ಕಂಟೈಲ್ ಕ್ಲಾಸ್) ಮತ್ತು ಹ್ಯುತಿ (ಆರ್ಟಿಸನ್) ಎನ್ನುವ ವರ್ಗ ವ್ಯವಸ್ಥೆ ಇದೆ. ನಮ್ಮಲ್ಲಿ ಇದನ್ನು ಕಲ್ಪಿಸಿಕೊಂಡರೆ ಪುರೋಹಿತ ಅಥವಾ ಬ್ರಾಹ್ಮಣ (ಅಥ್ರವಾನ್ಸ್), ಕ್ಷತ್ರಿಯ  (ರಥೈಸ್ತಾ), ವೈಶ್ಯ  (ವಸ್ತ್ರಿಯಾ) ಮತ್ತು ಶೂದ್ರ (ಹ್ಯುತಿ) ಎಂದು ಅರ್ಥೈಸಿಕೊಳ್ಳಬಹುದು.  ಆದಿ ಕಾಲದ ಇರಾನಿಯನ್ ವ್ಯವಸ್ಥೆ ಹೀಗೇ ಇತ್ತು. ಅದೇ ನಾಲ್ಕು ವರ್ಗಗಳು ಭಾರತದಲ್ಲೂ ಈಗಲೂ ಚಾಲ್ತಿಯಲ್ಲಿವೆ. ಹೀಗೆ ಒಂದು ಇರಾನ್ ಸಂಬಂಧ ಭಾರತಕ್ಕಿದೆ. ಚರ್ಮದ ಬಣ್ಣ, ನಯ ನಾಜೂಕು, ಕಣ್ಣು, ಬುದ್ಧಿವಂತಿಕೆಯನ್ನು ಹೋಲಿಸಿದರೆ ಭಾರತದ ಅದರಲ್ಲೂ ಉತ್ತರ ಭಾರತದ ಕಾಶ್ಮೀರಿ ಪಂಡಿತರು, ಉತ್ತರ ಪ್ರದೇಶದ ಪಂಡಿತ್, ಚಿತ್ಪಾವನ ಬ್ರಾಹ್ಮಣರು, ನಮ್ಮ ಕರಾವಳಿ ಮತ್ತು ಉತ್ತರ ಕನ್ನಡದ ಹವ್ಯಕರು ಹೆಚ್ಚೂ ಕಮ್ಮಿ ಇರಾನಿಗಳನ್ನು ಹೋಲುತ್ತಾರೆ (ಮೇಲ್ನೋಟಕ್ಕೆ).  ಬಹುಶಃ ಹೀಗೂ ಆಗಿರಬಹುದು, ಆಗ ಇರಾನ್ ನಲ್ಲಿ ಕ್ರೈಸ್ತ ಮತ್ತು ಇಸ್ಲಾಂ ಮುಂಚೆಯೂ ಹಲವಾರು ಸುಧಾರಣಾವಾದಿಗಳ ಅಥವಾ ಬಂಡುಕೋರರ