ವಿಷಯಕ್ಕೆ ಹೋಗಿ

‘ನ್ಯೂಟನ್‌’ ಇಂಡಿಯಾದ ವಾಸ್ತವಿಕ ಚಿತ್ರ


ವ್ಯವಸ್ಥೆ ಸರಿಪಡಿಸುವ ಕೆಲಸ ಎಲ್ಲಿಂದ ಶುರು ಮಾಡೋದು? ಹೇಗೆ ಶುರು ಮಾಡೋದು? ಉತ್ತರ ತುಂಬ ಸುಲಭ. ಎಲ್ಲಿಂದಾದರೂ ಶುರು ಮಾಡಿ, ಹೇಗಾದರೂ ಶುರು ಮಾಡಿ. ಆದರೆ ಇಚ್ಛಾಶಕ್ತಿ ಮತ್ತದಕ್ಕೆ ಚಾಲನೆ ನೀಡುವ ಬದ್ಧತೆ ಬೇಕು. ಅದಕ್ಕೆ ಮುಖ್ಯವಾಗಿ ಎದೆಗಾರಿಕೆ ಬೇಕು. ಅದಕ್ಕೂ ಮುಖ್ಯವಾಗಿ ಕಾಯಕ ಯಾವುದಾದರೂ ಇರಲಿ. ಕಾರ್ಯಕ್ಷಮತೆ ಬೇಕು. ಜೀವಪರ ನ್ಯಾಯ ಬೇಕು. ನಮ್ಮ ನೆಲೆಯಿಂದಲೇ ವ್ಯವಸ್ಥೆ ಬದಲಾವಣೆಗೆ ಆರಂಭ ನೀಡಬಹುದಲ್ಲ!
ಒಂದು ಸೇಬು ಹಣ್ಣು ಮೇಲಕ್ಕೆ ಹಾರಿಸಿದರೆ ಅದು ಕೆಳಕ್ಕೇ ಬೀಳುತ್ತದೆ. ಮೇಲೆ ಎಸೆದ ಕಲ್ಲು ಗುಂಡು ಕೂಡ ಬೀಳುವುದು ಕೆಳಕ್ಕೇ. ಒಬ್ಬ ಚಹಾ ಮಾರುವವನು ಮತ್ತು ಅಂಬಾನಿಯಂಥ ಕರೋಡಪತಿ ಮೇಲಿನಿಂದ ನೆಗೆದರೆ ಇಬ್ಬರೂ ಬೀಳುವುದು ಕೇಳಕ್ಕೇ. ಗುರುತ್ವ ಶಕ್ತಿ ನೀಡಿದ ಮೊತ್ತ ಮೊದಲ ಸಮಾನತೆ ಸಂದೇಶ ಅದ್ಭುತ! ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಭೌತಿಕವಾಗಿ ಯಾವುದೂ ತಂತಾನೇ ಪರಿವರ್ತನೆ ಆಗುವುದಿಲ್ಲ ಎನ್ನುವುದು. ವಿಜ್ಞಾನಿ ಸರ್‌ ಐಸಾಕ್‌  ನ್ಯೂಟನ್‌ ಕಂಡುಕೊಂಡ ಈ ವೈಜ್ಞಾನಿಕ ಸತ್ಯವನ್ನು ಸಮಕಾಲೀನ ಸಾಮಾಜಿಕ, ರಾಜಕೀಯ ಸಂದರ್ಭಕ್ಕೂ ಸಮೀಕರಿಸಿದರೆ ಬದಲಾವಣೆ ಎನ್ನುವುದು ತಂತಾನೇ ಘಟಿಸುವುವಂಥದ್ದಲ್ಲ ಎನ್ನುವ ಸ್ಪಷ್ಟತೆ ಮೂಡುತ್ತದೆ. ಇಂಥ ವೈಜ್ಞಾನಿಕ ಮನೋ– ಧೋರಣೆ ಎಂಥ ಬದಲಾವಣೆಯನ್ನಾದರೂ ತರಬಲ್ಲುದು. ಅದಕ್ಕೆ ಕ್ರಿಯೆ ಅಥವಾ ಚಾಲನೆ ಮುಖ್ಯ ಅಷ್ಟೇ.  ‘ವಸ್ತುವಿಗೆ ತನ್ನದೇ ಸ್ಥಿರ ಸ್ಥಿತಿ (state of rest) ಇರುತ್ತದೆ. ಬಾಹ್ಯ ಪ್ರಚೋದನೆ ಅಥವಾ ಬಲಪ್ರಯೋಗ ಇಲ್ಲದೇ ಅದರ ಸ್ಥಾನಪಲ್ಲಟ ಆಗುವುದಿಲ್ಲ’–ಇದು ನ್ಯೂಟನ್‌ ಸಿದ್ಧಾಂತದ ಅತ್ಯಂತ ಸರಳ ವಿವರಣೆ.
ವ್ಯವಸ್ಥೆ ಜಡತ್ವದಲ್ಲಿದ್ದರೆ ಅದು ತಂತಾನೇ ಸರಿ ಹೋಗಲಾರದು. ಅದನ್ನು ಬದಲಾಯಿಸಬೇಕಾಗುತ್ತದೆ. ಬದಲಾವಣೆಗೆ ಕ್ರಿಯೆ ನಡೆಯಬೇಕೆಂದರ್ಥ. ಕಾರ್ಯೋನ್ಮುಖ ಆಗಬೇಕಾದ್ದು ಯಾರು? ನಾವೇ! ಇದೆಷ್ಟು ಸಿಂಪಲ್‌  ಥಾಟ್...
ಆಧುನಿಕ ಯುಗದಲ್ಲೂ ದಂಡಕಾರಣ್ಯದ ಆದಿವಾಸಿ ಪ್ರದೇಶದಲ್ಲಿ ಚುನಾವಣೆ ನಡೆಸುವುದು ಸವಾಲು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ಇಷ್ಟು ದೊಡ್ಡ ಸವಾಲಾಗಲೇಬಾರದಿತ್ತು. ಆದರೆ, ನಕ್ಸಲ್‌ ಹೆಸರಲ್ಲಿ, ಭಯೋತ್ಪಾದನೆಯ ಹೆಸರಲ್ಲಿ ಸವಾಲನ್ನಾಗಿಯೇ ಉಳಿಸಿಕೊಂಡಿದ್ದು ರಾಜಕಾರಣ. ಇಂಥ ರಾಜಕಾರಣ, ವ್ಯವಸ್ಥೆಯ ಸ್ವರೂಪದಲ್ಲಿ ಪೋಷಿಸಲ್ಪಡುತ್ತ ಪ್ರಜಾಪ್ರಭುತ್ವವನ್ನೇ ದುರ್ಬಲಗೊಳಿಸಿದೆ. ಮತಯಂತ್ರ ಇದರ ಸಹಜ ಬಲಿಪಶು. ಈಗೀಗ ಅದನ್ನು ಆಟಿಕೆ ವಸ್ತುವಿನಂತೆ ಬಳಸಿ ಫಲಿತಾಂಶಗಳಲ್ಲಿ ಪವಾಡಗಳನ್ನೇ ಸೃಷ್ಟಿಸಲಾಗುತ್ತಿದೆ.
ಚುನಾವಣಾ ಆಯೋಗ ತನ್ನ ನಿಜವಾದ ಸ್ವಾಯತ್ತತೆಯನ್ನು ಮೆರೆದು ಮತಯಂತ್ರವನ್ನು ಕಬಂಧ ಬಾಹುಗಳಿಂದ ರಕ್ಷಿಸಲೆಂದೇ ರೂಪುಗೊಂಡ ವ್ಯವಸ್ಥೆ. ಅತಿಸೂಕ್ಷ್ಮ ಎಂದೇ ಹಣೆಪಟ್ಟಿ ಹಚ್ಚಿಸಿಕೊಂಡ ಆದಿವಾಸಿ ಪ್ರದೇಶದಲ್ಲಿ ಚುನಾವಣೆ ನಡೆಸಲು ನಿಯೋಜನೆಗೊಂಡ ಯುವಕನೊಬ್ಬ ದೊಡ್ಡ ಸಾಹಸವನ್ನೇ ಮಾಡುತ್ತಾನೆ. ತಾನು ಫಿಜಿಕ್ಸ್‌ ಓದುವಿನಲ್ಲಿ ಕಲಿತ ನ್ಯೂಟನ್‌ ಸಿದ್ಧಾಂತವನ್ನು ಕಾರ್ಯರೂಪಕ್ಕಿಳಿಸಿ ಬಂದೂಕಿನಿಂದ ಹೆದರಿಸಿ ದೂರವಿಟ್ಟ ಮತದಾರರನ್ನು ಬೂತ್‌ಗೆ ಕರೆತಂದು ಮತ ಹಾಕುವಂತೆ ಮಾಡುತ್ತಾನೆ. ತನ್ನ ಜೀವ ಪಣಕ್ಕಿಟ್ಟು ಇಂಥದೊಂದು ಕ್ರಿಯೆಗೆ ಮುಂದಾಗುತ್ತಾನೆ.ಯಶಸ್ವಿಯೂ ಆಗುತ್ತಾನೆ. ಈ ರೋಚಕ ಪ್ಲಾಟ್‌ ಇಟ್ಟುಕೊಂಡು ಪಾಲಿಟಿಕಲ್‌ ಸಟೈರ್‌ ಕಟ್ಟಿಕೊಟ್ಟ ‘ನ್ಯೂಟನ್‌’ ಅತ್ಯಂತ ವಾಸ್ತವಿಕ ಚಿತ್ರ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಷ್ಕ್‌ ಕೆ ಇಮ್ತೆಹಾನ್‌ ಔರ್‌ ಭೀ ಹೈ’.. ಇಮ್ರಾನ್‌ ಖಾನ್‌!

ಪಾಕಿಸ್ತಾನದ ಬಗ್ಗೆ ಮಾತನಾಡುವುದು ಮಹಾ ಪಾಪದ ಕೆಲಸವೇನಲ್ಲ. ಹಾಗೆ ಭಾವಿಸಬೇಕಿಲ್ಲ. ಅದು ಒಪ್ಪಿತವೊ ಇಲ್ಲವೋ, ಅದರ ಬಗ್ಗೆ ಅಲಕ್ಷ್ಯವೋ ನಿರ್ಲಕ್ಷ್ಯವೊ ಏನೇ ಆದರೂ ಅದು ಒಂದು ದೇಶ. ನೆರೆಯ ರಾಷ್ಟ್ರ. ‘ಪಡೋಸಿ...’ ಸಂಬಂಧದಲ್ಲಿ ನಮ್ಮದೇ ಕರುಳಬಳ್ಳಿ. ಭಾಷೆ, ಜನಜೀವನ ಶೈಲಿಯಲ್ಲಿ ಬದಲಾದರೂ ಮನುಷ್ಯ ಭಾವ, ಬದುಕುವ ಸಾಮಾನ್ಯ ಕಾಳಜಿ  ಒಂದೇ. ಹಾಗೆ ನೋಡಿದರೆ ಸಾಂಸ್ಕೃತಿಕವಾಗಿ ಎರಡೂ ದೇಶಗಳು ಅಭಿನ್ನ. ನಮ್ಮಲ್ಲಿರುವ ಹಾಗೆ ಅಲ್ಲಿಯೂ ಪ್ರಜಾಪ್ರಭುತ್ವ ಇದೆ. ಅಲ್ಲಿ ನಡೆಯುವುದು ಇಲ್ಲೂ ನಡೆಯುತ್ತದೆ. ಅಲ್ಲಿ ನಡೆಯಲೇಬಾರದ್ದು ಇಲ್ಲೂ ನಡೆಯಲೇಬಾರದು.  ತೀವ್ರವಾದ ನಮ್ಮಲ್ಲಿನದಕ್ಕಿಂತ ಅಲ್ಲಿ ತುಸು ಹೆಚ್ಚು ಸವಾರಿಗೆ ಹವಣಿಸಿದೆ. ಅಲ್ಲಿನ ಮಿಲಿಟರಿ ಅತಿರೇಕದ್ದು. ಅಕ್ಷಮ್ಯ. ಮತ್ತೆ ದೇಶ ಪುಟ್ಟದಾದಷ್ಟು ಅದಕ್ಕೆ ಭಯಗಳು ಜಾಸ್ತಿ. ಮಿಲಿಟರಿ ಕವಚದಲ್ಲಿ ಅದು ಸುರಕ್ಷಾ ಭಾವವನ್ನು ಕಲ್ಪಿಸಿಕೊಳ್ಳುತ್ತದೆ. ಅದೊಂದು ತರಹದ ಸಮಾಧಾನ. ಆದರೆ ಭ್ರಮೆಯಿಂದ ಕೂಡಿದ್ದು. ಭಯೋತ್ಪಾದನೆ ಕೂಡ ಒಂದರ್ಥದಲ್ಲಿ ಪುಕ್ಕಲುತನವೇ ಆಗುತ್ತದೆ. ಹಿಂಸಾ ಪ್ರವೃತ್ತಿಗೆ ಹೆದರಿಸುವುದೇ ಕೆಲಸ. ಹೆದರಿಸುವವರು ಶೂರರು, ಧೀರರು ಮತ್ತು ಜೀನಿಯಸ್‌ ಆಗಿರಲು ಹೇಗೆ ಸಾಧ್ಯ? ಮುಖ್ಯವಾಗಿ ಅಲ್ಲಿನ ವಿದ್ಯಮಾನಗಳನ್ನು ಗಮನಿಸುವುದಾದರೆ, ಮಿಲಿಟರಿ, ಮತಾಂಧರು, ಭಯೋತ್ಪಾದಕರು, ಭ್ರಷ್ಟರು ಇದೆಲ್ಲದರಿಂದ ಪಾಕಿ ತುಂಬ ರೋಸಿ ಹೋಗಿದ್ದಾನೆ. ಒಂದು ಸೂಕ್ತ ಪರ್ಯಾಯಕ್ಕಾಗಿ ಹಂಬಲಿಸಿದ್...

ನಾನು ನೀನಾಸಂ ಪದವೀಧರನಲ್ಲ...

ನೀನಾಸಂ ಪದವಿ ನನ್ನ ತಲೆಗೆ ಅನಗತ್ಯ ಭಾರ ಸ್ವಾಮೀ. ಅಷ್ಟು ಕಪ್ಪು ಸುಂದರಿಯರ ಭಾರವೇ ನನ್ನ ತಲೆಗೆ ಸಾಕಾಗಿ ಹೋಗಿದೆ. ಇನ್ನು ಇಷ್ಟು 'ವಜನ್' ಪದವಿ ಕಿರೀಟ ಬೇಡವೇ ಬೇಡ. ಸುಮ್ಮನೇ ಖಾಸಗಿಯಾಗಿ ಡೈರಿಯ ಹಾಗೆ ಬೆಚ್ಚಗೆ ನನ್ನ ಜತೆಗೆ ಸದಾ ಇರಲಿ ಎಂದುಕೊಂಡು ಈ ಬ್ಲಾಗ್ ರೂಪಿಸಿದ್ದೇನಷ್ಟೇ. ಅವಧಿ ಬ್ಲಾಗ್ ನನ್ನ ಈ ಪುಟ್ಟ ಯತ್ನಕ್ಕೆ ಬೆನ್ನು ತಟ್ಟಿದ್ದು ಸಂತೋಷವೇ. ಆದರೆ, ನನ್ನ ಬಗ್ಗೆ ಬೆನ್ನುತಟ್ಟುವ ಸಾಲುಗಳ ಬರೆಯುತ್ತ ನೀನಾಸಂ ಪದವೀಧರ ಎನ್ನುವ ಒಂದು ತಪ್ಪು ಮಾಹಿತಿ ಕೂಡ ನುಸುಳಿಕೊಂಡಿದೆ. ಸ್ವಾಮೀ ನಾನೀ ನೀನಾಸಂ ಸುದ್ದಿಗೇ ಹೋದವನಲ್ಲ. ಅಲ್ಲಿ ಕಲಿತು ಬಂದವರ ಜತೆ 'ಬೇಜಾನ್' ಜಗಳ ಮಾಡಿದಿನಿ ಅಷ್ಟೇ.

‘ಪಲ್ಲಟ’ ಒಂದು ಪ್ರಾಮಾಣಿಕ ಪ್ರಯತ್ನ

  (ಇನ್ನೂ ತೆರೆ ಕಾಣದ ‘ಪಲ್ಲಟ’ ಕನ್ನಡ ಸಿನಿಮಾದ ಪ್ರೀಮಿಯರ್‌ ಶೋ  ಬಗ್ಗೆ ) ಸಿನಿಮಾದ ಸೊಗಸೇ ಅಂಥದು. ಯಂತ್ರಗಳಿಂದ ಸೆರೆ ಹಿಡಿದ ಬದುಕು ತೆರೆಯ ಮೇಲೆ ಬಾಳುವಾಗ ಆ ಕ್ಷಣಕ್ಕೆ ಎಲ್ಲ ಹೊಸತೇ ಆಗಿ ಕಾಣಿಸುತ್ತದೆ. ಗತ ಬದುಕು ಹೊಸ ಬದುಕಿನಂತೆ ಹೊಳೆಯುತ್ತದೆ. ಪರದೆ ಮೇಲಿನ ಮೂರು ಗಂಟೆಯ ಬಾಳಲ್ಲಿ ಪ್ರೇಕ್ಷಕ ಅದರ ಅಸಲಿ ನೋವು, ನಲಿವುಗಳ ಬದುಕಿಗಿಳಿಯುತ್ತ ಮೆಲ್ಲಗೆ ಅದರ ಒಟ್ಟು ಹರವಿನಗುಂಟ ಸಾಗಬಹುದು. ಆ ಪುಟ್ಟ ಜರ್ನಿಯಲ್ಲಿ  ಅವನೊಳಗಿನ ಬದುಕಿಗೆ ಹೊಸ ಕಣ್ಣುಗಳು ಮೂಡಬಹುದು. ಅಂತಃಕರಣದ ಸೆಲೆಗಳು ಮತ್ತಷ್ಟು ಜಿನುಗಬಹುದು. ಸಿನಿಮಾದ ಸಾಧ್ಯತೆಗಳು, ಪರಿಣಾಮಗಳು ಹಲವು. ಸಿನಿಮಾಗೆ ಅದರ ಅಂತಃಸತ್ವ ಮುಖ್ಯ. ನೋಡಿ ತಿಳಿವ ಪ್ರಾಸೆಸ್‌ ಇದಾದ್ದರಿಂದ ವಿಶ್ಯುಯಲ್‌ ಟ್ರೀಟಮೆಂಟ್‌ ಕೂಡ ಮುಖ್ಯ.  ‘ಪಲ್ಲಟ’ ಕನ್ನಡ ಸಿನಿಮಾದ ವಸ್ತು  ಸ್ಥಳೀಯ ಸಂಸ್ಕೃತಿಗಳ ಸ್ಥಿತ್ಯಂತರ ಹೇಗೆ ನಿಜ ಜೀವನದಲ್ಲಿ ಕೆಲವರ ಬದುಕನ್ನೇ ಮುಗಿಸಿಬಿಡುತ್ತದೆ ಎನ್ನುವುದು. ಇದು ಅಮಾನವೀಯ ಎನ್ನುವುದು ಚಿತ್ರದ ಒಳದನಿ. ಬಹುಕಾಲ ನಿಲ್ಲಬಲ್ಲ ಮತ್ತು ಕಾಡಬಲ್ಲ ಸಿನಿಮಾ ಆಗುವ ಅವಕಾಶವನ್ನು ಇದು ಸ್ವಲ್ಪದರಲ್ಲಿಯೇ ಕಳಕೊಂಡಿದೆ. ಇದರಾಚೆಗೂ ಚಿತ್ರ ಕೆಲವು ವಿಚಾರಗಳಿಗೆ ಸಂಬಂಧಿಸಿ ಚರ್ಚೆಗೆ ಯೋಗ್ಯವಾಗಿದೆ. ನಾಗರಿಕತೆ ಎಂಬುದು ಜನರೇ ಸೃಜಿಸಿಕೊಂಡಿದ್ದು. ಆಯಾ ಜನಪ್ರದೇಶಗಳಲ್ಲಿ ಕಾಲದ ಅಗತ್ಯಗಳಿಗೆ ತಕ್ಕುದಾದ ವ್ಯವಸ್ಥೆಯೊಂದು ರೂಪುಗೊಂಡಿರುತ್ತದ...