ವಿಷಯಕ್ಕೆ ಹೋಗಿ

ಮುಸ್ಲಿಂ ಸಮುದಾಯ ತಂತ್ರಗಾರಿಕೆ ಬದಲಾಯಿಸಿಕೊಳ್ಳುವುದು ಅನಿವಾರ್ಯ


ಎಂಟು ನೂರು ವರ್ಷಗಳ ಕಾಲ ಮುಸ್ಲಿಂ ದೊರೆಗಳು, ಇನ್ನೂರೈವತ್ತು ವರ್ಷಗಳ ಕಾಲ ಕ್ರೈಸ್ತರು ಅಧಿಕಾರದಲ್ಲಿದ್ದರು. ಪ್ರವಾದಿತನ ನಂಬಿಕೆಯ ಸಮುದಾಯಗಳಿವು. ಎರಡರ ನಡುವೆ ರಾಜಕೀಯ ಸಂಘರ್ಷವಿದೆ. ಇವುಗಳ ರಾಜಕೀಯ ನೀತಿ ಮತ್ತು ಸಂಸ್ಕೃತಿಗಳ ಪ್ರಭಾವದಿಂದ ಸಿಂಧೂ ನಾಗರಿಕತೆ ಮತ್ತು ದ್ರಾವಿಡರ ಜೀವನಶೈಲಿಯಲ್ಲಿ ಮಹತ್ತರ ಬದಲಾವಣೆಗಳಾದವು. ಆಡಳಿತದ ಮಾದರಿಗಳಾಗಿದ್ದ ಈ ಸಮುದಾಯಗಳ ಅನುಯಾಯಿಗಳು ಅದೇ ನೆಲದಲ್ಲಿ ರಾಜಕೀಯ ನಿರ್ಲಕ್ಷ್ಯಕ್ಕೊಳಗಾಗಿ ಅಸುರಕ್ಷತಾ ಭಾವ ಎದುರಿಸುವಂತಾಗಿರುವುದು ಈ ಕ್ಷಣದ ವಾಸ್ತವ.
 ನೆಹರೂ ಕಾಲದಲ್ಲಿ ವಿಭಜನೆಯ ಹಿಂಸೆ ಇನ್ನೂ ಇತ್ತು. ಭೌಗೋಳಿಕ ಕಾರಣಕ್ಕಾಗಿ ಇಂಡಿಯಾದಲ್ಲಿಯೇ ನೆಲೆ ನಿಂತ ಬಹು ನಂಬಿಕೆಗಳ ಜನರಿಗೆ ಘಾಸಿಯಾಗದಂತೆ ಎಚ್ಚರಿಕೆಯ ನಡೆ ರೂಪಿಸಿಕೊಳ್ಳಬೇಕಾದ ಪರಿಸ್ಥಿತಿಯಲ್ಲಿ ಅವರ ರಾಜಕೀಯ ಇತ್ತು. ಸೆಕ್ಯುಲರಿಸಂ ತತ್ವದಡಿ ಸಮಾಜವಾದಿ ಪ್ರಜಾಪ್ರಭುತ್ವ ನೆಲೆಗೊಳಿಸುವ ಯತ್ನ ನಡೆಯಿತು.  ಇಂದಿರಾಗಾಂಧಿ ಇದನ್ನೇ ಮುಂದುವರಿಸಿದರು. ಆಧುನಿಕ ಇಂಡಿಯಾದ ರಾಜಕೀಯ ಇತಿಹಾಸ ಕಣ್ಣಾಡಿಸಿದರೆ ದಕ್ಕುವ ಮುಖ್ಯ ಅಂಶವಿದು.
 ಇಂದಿರಾ ಗಾಂಧಿ ‘ಗರೀಬಿ ಹಟಾವೋ’ ಘೋಷಣೆ ಮೊಳಗಿಸಿದರು. ಬ್ಯಾಂಕ್‌ ರಾಷ್ಟ್ರೀಕರಣ, ಭೂಸುಧಾರಣೆಯಂಥ ದಿಟ್ಟ ಕ್ರಮಗಳ ಜೊತೆ ಕುಟುಂಬ ಕಲ್ಯಾಣ ಜಾರಿಗೊಳಿಸಿದರು. ಜನಸಂಖ್ಯೆ ನಿಯಂತ್ರಣದಂಥ ಕ್ರಮಗಳು ಧರ್ಮ ವಿವೇಚನೆಯ (Divine reason) ನೆಲೆಯಲ್ಲಿ ಸಮುದಾಯವೊಂದರ ನಂಬುಗೆಗಳನ್ನು ಮುಜುಗರಕ್ಕೀಡುಮಾಡುವಷ್ಟು ಆಕ್ರಮಣಕಾರಿ ಎನಿಸಿದರೂ ಚಕಾರವೆತ್ತದ ಸಮುದಾಯ ಶಾಬಾನು ಪ್ರಕರಣದಲ್ಲಿ ಬೀದಿಗಿಳಿಯಿತು. ನಿಕಾಹ್‌, ತಲಾಖ್‌ನಂಥ ಸಮುದಾಯದ ಆಂತರಿಕ ಸಮಸ್ಯೆಗಳನ್ನು ಇಡೀ ದೇಶದ ಸಾಮಾಜಿಕ ಸ್ಥಿತಿಗೆ ಸಮೀಕರಿಸಿದ ಕೆಟ್ಟ ರಾಜಕಾರಣದಿಂದ ಸಾಮರಸ್ಯ ಕದಡಿತು.
  ಇಂದಿರಾ ವಿರುದ್ಧ ಹುಟ್ಟಿದ ರಾಜಕೀಯ ದಾಳಗಳು ಹಲವು. ಫ್ಯುಡಲ್‌ ಪ್ರದೇಶದಿಂದ ಬಂದ ಜೆಪಿ ಚಳವಳಿಗಿಳಿದರು. ತುರ್ತು ಪರಿಸ್ಥಿತಿ ಮುಂದುಮಾಡಿ ಮುರಾರ್ಜಿ ಪ್ರಧಾನಿಯಾದರು, ಖಲಿಸ್ತಾನ್‌ ಹೋರಾಟ ಭುಗಿಲೆದ್ದಿತು. 1984ರಲ್ಲಿ ಇಂದಿರಾ ಆ ರಾಜಕೀಯಕ್ಕೆ ಹತ್ಯೆಯಾದರು. ಅನುಕಂಪದಲ್ಲಿ ರಾಜೀವ್‌ ಗದ್ದುಗೆ ಏರಿದರು. ಬೊಫೋರ್ಸ್‌ ಹಗರಣ ಸುದ್ದಿಯಾಗಿ ವ್ಹಿ ಪಿ ಸಿಂಗ್‌ ನೇತೃತ್ವದ ರಾಷ್ಟ್ರೀಯ ರಂಗ ಅಧಿಕಾರಕ್ಕೆ ಬಂತು. ಕಾಂಗ್ರೆಸ್‌ ವಿರೋಧಿ ಚಂದ್ರಶೇಖರ್‌ ಅದರ ಬೆಂಬಲದೊಂದಿಗೆ ಪ್ರಧಾನಿ ಹುದ್ದೆಗೆ ಏರಿದ್ದೂ ನಡೆಯಿತು.
   90ರ ದಶಕವನ್ನು ಗಮನಿಸಿ. 84ರಲ್ಲಿ ಇಂದಿರಾ ಗಾಂಧಿ ರಾಜಕೀಯ ಕಾರಣಕ್ಕೆ ಬಲಿಯಾದಂತೆ ರಾಜೀವಗಾಂಧಿ ಎಲ್‌ಟಿಟಿಇ ಜನಾಂಗಿಕ ವಾದದ ಹಿನ್ನೆಲೆಯಲ್ಲಿ ಪ್ರತೀಕಾರಕ್ಕೆ (1991, ಮೇ 21) ಹತರಾಗಿ ಇಂಡಿಯಾ ರಕ್ತ ರಾಜಕಾರಣ ಚರಿತ್ರೆಯ ಮತ್ತೊಂದು ಅಧ್ಯಾಯವಾದರು. ರಾಜೀವ್‌ ಹತ್ಯೆಯ ಅನುಕಂಪದಲ್ಲಿ ಕಾಂಗ್ರೆಸ್‌ ಪಿವ್ಹಿಎನ್‌ ನೇತೃತ್ವದಲ್ಲಿ ಸರ್ಕಾರ ರಚಿಸಿತು. ಎರಡೇ ವರ್ಷದಲ್ಲಿ (1992) ಬಾಬರಿ ಮಸೀದಿ ಧ್ವಂಸಗೊಂಡಿತು. ಪಿವ್ಹಿಎನ್‌ ಮೌನ!. ಮುಸ್ಲಿಂ ಸಮುದಾಯ ಎದುರಿಸಿದ ಬಹುದೊಡ್ಡ ಆಘಾತ ಇದಾಗಿತ್ತು. ಒಂದರ್ಥದಲ್ಲಿ ಇದು ಮತೀಯವಾದಿಗಳಿಂದ ನಡೆದ ಸೆಕ್ಯುಲರ್‌ ತತ್ವದ ಧ್ವಂಸವೇ ಆಗಿತ್ತು. ಇಲ್ಲಿಂದಲೇ ಸಮುದಾಯ ಮತ್ತು ರಾಜಕೀಯ ಪಕ್ಷವೊಂದರ ನಡುವಿನ ದೋಸ್ತಿ ಸ್ಪಷ್ಟ ಸಡಿಲಗೊಳ್ಳತೊಡಗಿತು. ಈ ಉದ್ದೇಶಕ್ಕೆಂದೇ ಬಾಬರಿ ಧ್ವಂಸಗೊಳಿಸಿದ್ದು ವಾಸ್ತವ. ಈ ಅಂಶವನ್ನು ತೆಳುವಾಗಿಸಿ ಧರ್ಮ ಸಂಘರ್ಷದ ಕಿಡಿ ಧಗ ಧಗಿಸುವಂತೆ ನೋಡಿಕೊಂಡ ಮಾಧ್ಯಮ ಇಡೀ ಪರಿಸ್ಥಿತಿಯನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತು. ನೆಲೆ ಕಂಡುಕೊಳ್ಳಲು ಹೆಣಗುತ್ತಿದ್ದ ಪಕ್ಷವೊಂದು ಮತ್ತಷ್ಟು ‘ಬಲ’ಗೊಳ್ಳುವುದಕ್ಕೆ ನೆರವಾಯಿತು.
 ಸಮ್ಮಿಶ್ರ ಸರ್ಕಾರದ ಪ್ರಯೋಗ ಇದಕ್ಕೊಂದು ಸಾಂತ್ವನದಂತೆ ಅಸ್ತಿತ್ವಕ್ಕೆ ಬಂದಿತು. ದೇವೇಗೌಡ, ಗುಜ್ರಾಲ್‌ ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳುವ ಉತ್ಸಾಹದಲ್ಲಿರುವಾಗಲೇ ಇವರ ನೇತೃತ್ವದ ಸರ್ಕಾರಗಳನ್ನು ಉರುಳಿಸಲಾಯಿತು. ಬಾಬರಿ ಧ್ವಂಸದ ಫಲಶ್ರುತಿಯಂತೆ ಬಲಪಂಥೀಯ ಎನ್‌ಡಿಎ ಅಧಿಕಾರದ ಗದ್ದುಗೆ ಏರಿ ಸಹಸ್ರಮಾನದ ಆರಂಭಿಕ ವರ್ಷಗಳನ್ನು ಆಳಿತು. ಗುಜರಾತ್‌ ಗೋಧ್ರಾ ಹಿಂಸೆ ಈ ಅವಧಿಯಲ್ಲೇ ನಡೆದು ಸಾವಿರಾರು ಅಮಾಯಕರ ಹೆಣಗಳು ಉರುಳಿದವು. ರಾಜಧರ್ಮ ಪಾಲನಾ ನಾಟಕವೂ ನಡೆಯಿತು.
 ಆರ್ಥಿಕ ವಿಷಯಗಳು ಮುಂಚೂಣಿಗೆ ಬಂದು ಅರ್ಥತಜ್ಞ ಮನಮೋಹನ ಸಿಂಗ್‌ ರಾಜಕೀಯವಾಗಿಯೂ ಉತ್ತುಂಗಕ್ಕೇರಿದರು. ಮಸೀದಿ ಧ್ವಂಸ ಪ್ರಕರಣದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಕಳಕೊಂಡ ವರ್ಚಸ್ಸನ್ನು  ಸುಧಾರಿಸಲು ಯತ್ನಿಸಿದರು. ಸಮಚಿತ್ತಭಾವದ ಸೋನಿಯಾ ನೇತೃತ್ವದಲ್ಲಿ ಸಾಮಾಜಿಕ ನ್ಯಾಯದ ಯತ್ನಗಳು ಪ್ರಾಮಾಣಿಕವಾಗಿದ್ದವು. ದೂರದೃಷ್ಟಿಯ ಅಭಿವೃದ್ಧಿ ಕಲ್ಪನೆಯ ಯೋಜನೆಗಳಿಗೆ ಒಲವಿದ್ದರಿಂದ ಗತಿಯೂ ಭಿನ್ನವಾಗಿತ್ತು. ಕನಿಷ್ಠ ಸೌಹಾರ್ದಯುತ ಬದುಕಿಗೆ ಸಂಬಂಧಿಸಿದಂತೆ ದೇಶ ನೆಮ್ಮದಿಯಲ್ಲಿತ್ತು. ಸೋನಿಯಾ ಮತ್ತು ಸಿಂಗ್‌ ಕಾಂಬಿನೇಷನ್‌ನಲ್ಲಿ ಕಸಬುದಾರಿಕೆಗೂ ಭಿನ್ನ ಎನ್ನಬಹುದಾದ ರಾಜಕೀಯ ಪ್ರಯೋಗ ನಡೆಯಿತು.
 ಯುಪಿಎ ಭಾಗ 1 ಮತ್ತು 2 ಉತ್ತಮ ಮಾದರಿಯ ಸಮ್ಮಿಶ್ರ ಸರ್ಕಾರಗಳೇ ಆಗಿದ್ದವು. ಎರಡರಲ್ಲೂ ಸೋನಿಯಾ ಗಾಂಧಿ ಸ್ವತಃ ಪ್ರಧಾನಿ ಆಗಬಹುದಾಗಿತ್ತಾದರೂ ದೂರ ಉಳಿದರು. ಗಾಂಧಿ ಕುಟುಂಬದ ಕುಡಿ (ರಾಹುಲ್‌) ಯನ್ನಾದರೂ ಗದ್ದುಗೆ ಏರಿಸಬಹುದಿತ್ತು. ಹಾಗೆ ಮಾಡದೇ ಧೀಮಂತಿಕೆ ಮೆರೆದರು. ಮೊತ್ತಮೊದಲ ಬಾರಿಗೆ ಹಿಂದೂಯೇತರ ಸಮುದಾಯಕ್ಕೆ ಸೇರಿದ ಮನಮೋಹನ ಸಿಂಗ್‌ ಅವರನ್ನು ಅಧಿಕಾರದ ಕುರ್ಚಿಗೇರಿಸಿದರು. ಸತತ ಎರಡು ಅವಧಿಗೆ! ಈ ಅಂಶವೇ ಭವಿಷ್ಯದ ಬಹುದೊಡ್ಡ ಅಪಾಯದ ಘಂಟೆಯಂತೆ ಹಿಂದೂತ್ವ ಪ್ರತಿಪಾದಕ ಪಕ್ಷ, ಸಂಸ್ಥೆಗಳಿಗೆ ಧ್ವನಿಸಿದ್ದು. ತೀವ್ರ ಚಡಪಡಿಸಿದವು. ಆ ಚಡಪಡಿಕೆ ಭವಿಷ್ಯದಲ್ಲಿ ಸಿಖ್‌ರ ಹಾಗೆ ಮುಸ್ಲಿಂ ಮತ್ತಿತರ ಅಲ್ಪಸಂಖ್ಯಾತರು ಅಧಿಕಾರ ರಾಜಕಾರಣದಲ್ಲಿ ಬೆಳೆಯದಂತೆ ನೋಡಿಕೊಳ್ಳುವ ಸಂಕಲ್ಪವಾಗಿ ಮಾರ್ಪಟ್ಟಿತು. ಆ ಮಾತು ಹಾಗಿರಲಿ.
  ಈ ಸರದಾರಜೀ ಪಿವ್ಹಿಎನ್‌ ಕಾಲದಿಂದಲೂ ಸರ್ಕಾರಿ ಉದ್ಯಮಗಳಿಗೆ ಕುತ್ತು ತಂದರಾದರೂ ದೇಶದಲ್ಲಿ ಹೊಸ ಆರ್ಥಿಕ ನೀತಿಗಳ ರೂಪಿಸುವ ಪ್ರಯತ್ನ ಮಾಡಿದ್ದರು. ಪ್ರಧಾನಿ ಆದ ನಂತರವೂ ಅದೇ ಜಾಡಿನಲ್ಲಿ ಕೆಲಸ ಮಾಡಿದರು. ಯಶಸ್ವಿಯಾದರು. ಇದು ಮುಂದುವರಿಯದಂತೆ ನೋಡಿಕೊಳ್ಳಲೆಂದೇ 2ಜಿ ಎನ್ನುವ ಕಲ್ಪಿತ ಹಗರಣವೊಂದಕ್ಕೆ ರೆಕ್ಕೆ ಪುಕ್ಕ ಹಚ್ಚಿ ಮಾಧ್ಯಮಗಳ ಮೂಲಕ ಹಾರಿ ಬಿಡಲಾಯಿತು. ಸಿಂಗ್‌ ತತ್ತರಿಸಿದರು. ಹೊಂಚು ಹಾಕಿ ಕುಳಿತಿದ್ದ ಪಕ್ಷವೊಂದು ಗುಜರಾತ್‌ ಪ್ರಯೋಗಾಲಯದ ಯಶಸ್ವಿ ಕೂಸನ್ನು ದೊಡ್ಡಾಟಕ್ಕೆ ಸಜ್ಜುಗೊಳಿಸಿತು. ಮತೀಯ ಮತ್ತು ದೈತ್ಯ ಆರ್ಥಿಕ ಶಕ್ತಿಗಳು ಕೈಜೋಡಿಸಿದ ಕರಾಮತ್ತಿಗೆ ದೇಶದ ನಾಯಕತ್ವ ತೀವ್ರವಾದಿಗೆ ದಕ್ಕಿತು. ಪರಿಣಾಮ ನಮ್ಮ ಕಣ್ಮುಂದಿದೆ.
 ಮನಮೋಹನ ಸಿಂಗ್‌ ಪ್ರಧಾನಿಯಾಗಿ ಎರಡು ಅವಧಿ ಮುಗಿಸಿದರಾದರೂ 2ಜಿ ಹಗರಣದ ಹರಲಿಯಿಂದಾಗಿ ಮೌನಕ್ಕೆ ಸರಿದು ಸೇಫ್‌ ಝೋನ್‌ ಸೇರಿಕೊಂಡರು. ಅವಮಾನ. ಮುಜುಗರಗಳನ್ನು ಸೋನಿಯಾ ಗಾಂಧಿ, ಪುತ್ರ ರಾಹುಲ್‌ ಗಾಂಧಿ ಹಾಗೂ ಆಪ್ತ ವಲಯದವರೇ ಎದುರಿಸಬೇಕಾಯಿತು. ಸಿಂಗ್‌ ಸದನದಲ್ಲಿ ಒಂದೆರಡು ಬಾರಿ ಬಾಯಿಬಿಟ್ಟರಷ್ಟೇ.
 ದಶಕಗಳ ಕಾಲ ಅಧಿಕಾರದಲ್ಲಿದ್ದ ಕಾಂಗ್ರೆಸ್‌ ಪಕ್ಷ ಘಂಟೆಗೆ 60 ಕಿ.ಮೀ ವೇಗದಲ್ಲಷ್ಟೇ ಸಾಗಲು ಶಕ್ತವಾಗಿತ್ತು ನಿಜ. ಆಗಿನ ಅಗತ್ಯಗಳಿಗೆ ತಕ್ಕ ಅಭಿವೃದ್ಧಿ ಅದಾಗಿತ್ತು ಎನ್ನುವುದು ವಾಸ್ತವ. ಅಭಿವೃದ್ಧಿಯೇ ಆಗಿಲ್ಲ ಎನ್ನುವರ್ಥದ ಮೂದಲಿಕೆಗಳು ವಾಸ್ತವಕ್ಕೆ ಮಾಡಿದ ಅಪಚಾರ. ಸರ್ಕಾರಿ ಮಾದರಿ ಪ್ರಾಥಮಿಕ, ಮಾಧ್ಯಮಿಕ ಶಾಲೆಗಳು, ಕಾಲೇಜುಗಳು, ವಿಶ್ವವಿದ್ಯಾಲಯಗಳು, ಯುಜಿಸಿ, ಇಸ್ರೊ, ಎಚ್‌ಎಎಲ್‌, ಎನ್‌ಎಎಲ್‌, ಎಚ್‌ಎಂಟಿ, ಬಾಬಾ ಅಣು ಸಂಶೋಧನಾ ಸಂಸ್ಥೆ, ಐಐಟಿ, ಮೆಡಿಕಲ್‌ ಕಾಲೇಜುಗಳು, ಸಂಶೋಧನಾ ಸಂಸ್ಥೆಗಳು, ಇಂಡಿಯನ್‌ ಇನಸ್ಟಿಟ್ಯೂಟ್‌ ಆಫ್‌ ಸೈನ್ಸ್, ಡಿಆರ್‌ಡಿಒ, ಉದ್ಯಮಗಳು, ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳು, ರೈಲು ನಿಲ್ದಾಣಗಳು, ಮೆಟ್ರೊ ರೈಲು, ಫ್ಲೈ ಓವರ್‌, ಮಾಹಿತಿ ತಂತ್ರಜ್ಞಾನ, ದೂರ ಸಂಪರ್ಕ.. ಯಾವರ್ಥದ ಅಭಿವೃದ್ಧಿ ಆಗಿರಲಿಲ್ಲ?
 ಬೊಫೋರ್ಸ್‌ ಹಗರಣದಂತೆ 2ಜಿ ಮತ್ತು ಕಲ್ಲಿದ್ದಲು ಹಗರಣಗಳನ್ನು ಎಳೆದಾಡಲಾಯಿತು. ಬೊಫೋರ್ಸ್‌ ರಾಜೀವ್‌ ಗಾಂಧಿ ನೇತೃತ್ವದ ಕಾಂಗ್ರೆಸ್‌ ಸರಕಾರದ ಸಾಧನೆಯನ್ನು ಬಲಿ ಪಡೆದರೆ, 2ಜಿ ಹಗರಣ ಯುಪಿಎ ಸಾಧನೆಗಳನ್ನು ಗೌನವಾಗಿಸಿತು. ಪರಿಸ್ಥಿತಿಯ ಲಾಭಕ್ಕಿಳಿದ ಪ್ರತಿಪಕ್ಷ ಬದಲಾವಣೆಗೆ ಪ್ರಚೋದಿಸಿ ಮತೀಯ ತೀವ್ರವಾದದತ್ತ ದೇಶವನ್ನು ಹೊರಳಿಸಿತು. ಸೆಕ್ಯುಲರ್‌ ಪಕ್ಷ ಕೈ ಚೆಲ್ಲಿತು.
  ಅರವತ್ತು ವರ್ಷಗಳಲ್ಲಿ ಮಾಡಲಾಗದ್ದನ್ನು ಆರು ತಿಂಗಳಲ್ಲೇ ಮಾಡುವ ನಾಯಕನೊಬ್ಬನ‌ ಅತಿಭಾವುಕ ಮಾತುಗಳೇನಾದವು? ಕಪ್ಪು ರಂಧ್ರದಷ್ಟೇ ಕುತೂಹಲಕಾರಿಯಾಗಿ ಕಟ್ಟಿದ ಕಪ್ಪು ಹಣದ ಕತೆ ಏನಾಯಿತು? ಪ್ರತಿಯೊಬ್ಬನ ಖಾತೆಗೆ ಹದಿನೈದು ಲಕ್ಷ ರೂಪಾಯಿ ಹಣ ವಾವತಿಸುವ ಭಾಷೆ ಏನಾಯಿತು? ಇದೆಲ್ಲವನ್ನು ಮರೆಮಾಚಿ ನೋಟ್‌ ಅಮಾನ್ಯೀಕರಣಗೊಳಿಸಿ ಸಹಜ ಬದುಕನ್ನು ಮತ್ತಷ್ಟು ಕಷ್ಟಕ್ಕೆ ನೂಕಲಾಯಿತು. ದೇಶದ ಹೆಸರಲ್ಲಿ ಅಂಧಶ್ರದ್ಧೆ, ಉನ್ಮಾದ ಸೃಷ್ಟಿಸಿ ನೆಮ್ಮದಿಯನ್ನೇ ಛಿದ್ರಗೊಳಿಸಲಾಯಿತು. ದಲಿತರು. ಅಲ್ಪಸಂಖ್ಯಾತರು ಅದರಲ್ಲೂ ಮುಸ್ಲೀಮರನ್ನು ಅಭದ್ರತೆಯಲ್ಲಿಡಲು ಚೇಲಾಗಳನ್ನು ‘ಬಲ’ಪಡಿಸಲಾಯಿತು. ಹಿಂದಿನ ಸರ್ಕಾರದ ಯೋಜನೆಗಳ ಮರುನಾಮಕರಣವೇ ಅಭಿವೃದ್ಧಿ ಎನಿಸಿಕೊಂಡಿತು. ಮುಸ್ಲೀಮರ ಸ್ಥಿತಿಯಂತೂ ಮತ್ತಷ್ಟು ಆತಂಕಕ್ಕೀಡಾಯಿತು.
  ಮತೀಯ ಭಾವನೆಗಳು ಉನ್ಮತ್ತಗೊಂಡವು. ಒಂದೇ ನಾಡಿನ ಮಕ್ಕಳು ಪರಸ್ಪರ ಸತಾಯಿಸುವ, ಸಾಯಿಸುವ ಹತಾಶೆಗಿಳಿದರು. ಯುವಕರೆದೆಗಳಲ್ಲಿ ಕೋಮು ದ್ವೇಷದ ಕಿಡಿಗಳನ್ನು ಹೊತ್ತಿಸುವ ಸಂಚು ನಡೆಯಿತು. ‘ಬುದ್ಧಿವಂತ’ರು ಬ್ರಿಗೇಡ್‌ಗಳ ನಾಯಕತ್ವ ವಹಿಸಿ ನರಿ ಕೂಗು ಹಾಕಿ ಸುರಕ್ಷಿತ ಬಿಲಗಳನ್ನು ಸೇರಿ ದೇಶಭಕ್ತರಾದರು. ವಾಸ್ತವಾಂಶಗಳ ಬಿಚ್ಚಿಟ್ಟವರು ದೇಶದ್ರೋಹಿಗಳಾದರು. ಉದ್ಯೋಗ ಸೃಷ್ಟಿ ಇಲ್ಲದೇ ಯುವಕರೆಲ್ಲ ನಿರುದ್ಯೋಗಿಗಳಾದರು. ‘ಮೇಕ್‌ ಇನ್‌ ಇಂಡಿಯಾ’ ಅಬ್ಬರದ ಪ್ರಚಾರದಲ್ಲಿ ಬಂಡವಾಳ ಯಾರಿಂದ? ಮೇಕಿಂಗ್‌ ಯಾರಿಂದ? ಯಾವ ವರ್ಗದ ಜನರಿಗೆ ಉದ್ಯೋಗ ದಕ್ಕಿದೆ ಎನ್ನುವುದು ನಿಗೂಢ.
  ಆಯಾ ಕಾಲಘಟ್ಟದಲ್ಲಿ ಆದ ಸಾಮಾಜಿಕ, ಧಾರ್ಮಿಕ  ಕ್ರಾಂತಿಯ ಹಿನ್ನೆಲೆಯಲ್ಲಿ ಹೊಸ ಬದುಕು ಕಟ್ಟಿಕೊಂಡವರನ್ನು ಗುರಿಯಾಗಿಸಿ ದೇಶಭಕ್ತಿ ಹೆಸರಲ್ಲಿ ಅವರ ಮೇಲೆ ದೌರ್ಜನ್ಯ ನಡೆಸುತ್ತಿರುವುದರ ಉದ್ದೇಶ ಸ್ಪಷ್ಟವಾಗಿದೆ. ಅಲ್ಪಸಂಖ್ಯಾತರು ಅದರಲ್ಲೂ ಮುಸ್ಲೀಮರು ರಾಜಕೀಯ ಅಧಿಕಾರಕ್ಕೆ ಬರುವಂತಾಗಬಾರದು ಅಷ್ಟೇ. ಕಾಂಗ್ರೆಸ್‌ ಮುಕ್ತ ಎನ್ನುವ ಘೋಷಣೆಯ ಒತ್ತು ಆ ಪಕ್ಷದ ಜೊತೆ ಗುರುತಿಸಿಕೊಂಡ ಮುಸ್ಲೀಮರ ಮೇಲಿತ್ತು. ಬಂಧವನ್ನು ಸಡಿಲಗೊಳಿಸುವ ಉದ್ದೇಶದ್ದಾಗಿತ್ತು. ಈ ಯತ್ನ ಭಾಗಶಃ ಯಶಸ್ವಿಯಾಗಿದೆ. ಹೀಗಾಗಿಯೇ ಮುಸ್ಲೀಮರ ಮತಗಳ ಅಗತ್ಯವಿಲ್ಲ ಎಂಬ ಬಹಿರಂಗ ಹೇಳಿಕೆಯನ್ನು ಒಂದು ಪಕ್ಷ ನೀಡುತ್ತಿದೆ. ಪಕ್ಷದ ದೃಷ್ಟಿಯಿಂದ ಅದು ಸಹಜದ ನಡೆ ಎಂದೇ ಭಾವಿಸೋಣ.
 ಆದರೆ, ಒಂದೊಮ್ಮೆ ಅಲೀಘಡ ವಿಶ್ವ ವಿದ್ಯಾಲಯದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ‘ಮುಸ್ಲೀಮರನ್ನೂ ಈ ದೇಶದ ಪ್ರದಾನಿಯಾಗಿಸುವ ಶಕ್ತಿ ನಮ್ಮ ಪ್ರಜಾಪ್ರಭುತ್ವಕ್ಕಿದೆ’ ಎಂದು ಪ್ರತಿಪಾದಿಸಿದ್ದ ರಾಹುಲ್‌ ಗಾಂಧಿ ಕೂಡ ಇನ್ನೇನಿದ್ದರೂ ‘ಸಾಫ್ಟ್‌ ಹಿಂದೂತ್ವ ರಾಜಕಾರಣ’ ಅನಿವಾರ್ಯ ಎನ್ನುವ ಮನಸ್ಥಿತಿ ರೂಪಿಸಿಕೊಳ್ಳುತ್ತಿರುವುದು ಆತಂಕಕರ. ನಮ್ಮದೇನು ಮುಸ್ಲಿಂ ಪಾರ್ಟಿನಾ ಎಂದು ಸೋನಿಯಾ ಕೂಡ ನೇರ ಮಾತುಗಳನ್ನಾಡಿದ್ದು ಅಚ್ಚರಿ ಮೂಡಿಸುವಂಥದು. ಸಾಂದರ್ಭಿಕ ಅನಿವಾರ್ಯತೆ ಎದುರಿಸುವಾಗ ಮತ್ತು ಆ ಕ್ಷಣದ ಒತ್ತಡ ನಿಭಾಯಿಸಲು ಇಬ್ಬರೂ ಹೀಗೆ ವರ್ತಿಸಿರಬಹುದು. ಹಿಂದೂತ್ವ ಎನ್ನುವ ಪುಕಾರು ದೇಶದುದ್ದಕ್ಕೂ ದಟ್ಟವಾಗಿ ಕೇಳಿಸುತ್ತಿರುವುದರ ಹಿನ್ನೆಲೆಯಲ್ಲಿ ಆ ಭಾವನೆಗಳನ್ನು ಗೌರವಿಸುವ ಭರದಲ್ಲಿ ಹೀಗೆ ನಡೆದುಕೊಂಡಿರಲೂಬಹುದು. ಆದರೆ, ಮುಸ್ಲಿಂ ಅಲ್ಪಸಂಖ್ಯಾತರಿಗೆ ಸಂಬಂಧಿಸಿದಂತೆ ಇದು ರಾಜಕೀಯವಾಗಿ ಆಘಾತಕಾರಿ ಎನ್ನಿಸಬಹುದಾದ ಬೆಳವಣಿಗೆ.
 ಸೆಕ್ಯುಲರ್‌ ನೀತಿಯನ್ನು ಅತ್ಯಂತ ಹಗುರವಾಗಿ ಕಾಣಲಾಗುತ್ತಿದೆ. ಅಂಥ ನೀತಿಯನ್ನೇ ದಮನ ಮಾಡ ಹೊರಟ ಶಕ್ತಿಗಳ ಕೈಯಲ್ಲಿ ಬಹುಸಂಖ್ಯಾತ ವರ್ಗ ಸಿಕ್ಕಿ ಹಾಕಿಕೊಂಡಿದೆ. ಭಾವಾತಿರೇಕದಲ್ಲಿ ಕಟ್ಟಿಹಾಕಲ್ಪಟ್ಟ ದೊಡ್ಡ ಸಮುದಾಯವಿದು. ಇದೀಗ ಮತಬ್ಯಾಂಕ್‌ ಆಗಿ ಪರಿವರ್ತನೆಗೊಂಡ ಈ ಬಹುಗಣವೇ ತೀವ್ರ ಬಲಪಂಥೀಯವಾದ ರಾಜಕಾರಣದ ಬಂಡವಾಳ. ಈ ರಾಜಕಾರಣಕ್ಕೆ ಪರ್ಯಾಯ ರಾಜಕೀಯ ದಾಳವನ್ನು ಕಂಡುಕೊಳ್ಳುವಲ್ಲಿ ಹಿನ್ನಡೆ ಕಾಣುತ್ತಿರುವ ಕಾಂಗ್ರೆಸ್‌ ಅನಿವಾರ್ಯವಾಗಿ ಇಂಥ ಸಂಕಲ್ಪ ತಾಳಿದಂತಿದೆ. ತನ್ನಿಂದ ಅಲ್ಪಸಂಖ್ಯಾತರನ್ನು ಬೇರ್ಪಡಿಸಿದ ಪಕ್ಷವೊಂದಕ್ಕೆ ಅದೇ ಮಾದರಿಯ ಟಾಂಗ್‌ ನೀಡಬೇಕೆನ್ನುವ ಉಮೇದಿಯೂ ಕಾಂಗ್ರೆಸ್‌ಗೆ ಇದ್ದಂತಿದೆ. ಪ್ರತ್ಯುತ್ತರದ ನಡೆಯಾಗಿ ಇದನ್ನು ಪರಿಭಾವಿಸಿಕೊಂಡರೂ ಪಕ್ಷಕ್ಕೆ ಇದರ ಅಗತ್ಯವೇನಿಲ್ಲ. ಕಾಂಗ್ರೆಸ್‌ ಯಾವತ್ತೂ ಬಹುಸಂಖ್ಯಾತ ವಿರೋಧಿ ನಿಲುವನ್ನು ಉದ್ದೇಶಪೂರ್ವಕವಾಗಿ ಆಗಲಿ, ತೋರಿಕೆಗಾಗಲಿ ತಾಳಿಯೇ ಇಲ್ಲ. ಕಾಂಗ್ರೆಸ್‌ನಲ್ಲೂ ರಾಜಕೀಯದ ಉನ್ನತ ಸ್ಥಾನಗಳನ್ನು ಬಹುತೇಕ ಅನುಭವಿಸಿದ್ದು ಬಹುಸಂಖ್ಯಾತರೇ ಎನ್ನುವುದು ವಾಸ್ತವವಲ್ಲವೇ? ಹೀಗಾಗಿ ಬಹುಸಂಖ್ಯಾತ ವಿರೋಧಿ ಎನ್ನುವ ಹಣೆಪಟ್ಟಿ ಅಸಮಂಜಸ. ಅಂತೆಯೇ ಅಲ್ಪಸಂಖ್ಯಾತರ ಓಲೈಕೆ ಎನ್ನುವ ಹೀಯಾಳಿಕೆಗೂ ಅರ್ಥವಿಲ್ಲ.

 ಕಾಂಗ್ರೆಸ್‌ ಇಷ್ಟನ್ನು ಮಾಡಬಹುದು

ಹಿಂದೂತ್ವದ ಅಬ್ಬರ ಸೃಷ್ಟಿಸಿದ ರಾಜಕೀಯ ವಾತಾವರಣದ ಸಂದರ್ಭದಲ್ಲಿ ಕಾಂಗ್ರೆಸ್‌ ಮೇಲೆ ಸೆಕ್ಯುಲರಿಸಂಗೆ ಸಂಬಂಧಿಸಿದಂತೆ ಹೆಚ್ಚಿನ ನೈತಿಕ ಜವಾಬ್ದಾರಿಗಳಿವೆ. ಕಾಂಗ್ರೆಸ್‌ ಜವಾಬ್ದಾರಿಯುತವಾಗಿ ಮುಸ್ಲೀಮರ ಬಗೆಗಿನ ಈತನಕದ ರಾಜಕೀಯ ನಿಲುವಿನಿಂದ ತನಗಾದ ಲಾಭವೇನು?  ತನ್ನ ಜಾತ್ಯತೀತ ನಿಲುವಿನಿಂದ ಮುಸ್ಲೀಮರಿಗೆ ಎಷ್ಟು ಲಾಭವಾಗುತ್ತಿದೆ? ಅಧಿಕಾರದ ಹಂಚಿಕೆಯಲ್ಲಿ ಅವರ ಪಾಲಿಗೆ ಸೇರುತ್ತಿರುವುದೇನು? ಎನ್ನುವ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕಿತ್ತು. ಓಲೈಕೆ ರಾಜಕಾರಣ ಎಂದು ಪ್ರತಿಪಕ್ಷಗಳು ಬೊಬ್ಬೆ ಹೊಡೆಯುತ್ತಿರುವುದಕ್ಕೆ ಸ್ಪಷ್ಟವಾದ ಅಂಕಿ ಅಂಶಗಳ ಸಮೇತ ವಾಸ್ತವವನ್ನು ಬಿಚ್ಚಿಡಬೇಕಿತ್ತು. ವಾಸ್ತವಾಂಶಗಳನ್ನು ದೇಶದ ಮುಂದಿಟ್ಟಲ್ಲಿ ಎಲ್ಲರ ಅನುಮಾನ ಮತ್ತು ಅಸಮಧಾನಗಳಿಗೆ ಒಂದು ಪರಿಹಾರವಾದರೂ ದಕ್ಕಿದಂತಾಗುತ್ತದೆ. ಮುಸ್ಲೀಮರನ್ನು ಓಲೈಸುವ ಭರದಲ್ಲಿ ದೇಶದ ಇತರರ ಅಭಿವೃದ್ಧಿಗೆ ಅದು ಹೇಗೆ ತಡೆಯುಂಟಾಯಿತು ಅಥವಾ ಆಗಿಲ್ಲ ಎನ್ನುವ ವಿವರ ನೀಡಿದಂತಾಗುತ್ತದೆ.
 ಈ ಹಿಂದೆ ಬಾಬರಿ ಮಸೀದಿ ಧ್ವಂಸದಂಥ ಐತಿಹಾಸಿಕ ಪ್ರಮಾದ ನಡೆದ ಸಂದರ್ಭ ಆಗಿನ ಪ್ರಧಾನಿ ಪಿವ್ಹಿಎನ್‌ ನಡೆದುಕೊಂಡ ಬಗೆಯನ್ನು ಸಮುದಾಯ ಮರೆಯುವುದಾದರೂ ಹೇಗೆ? ಆಗ ಮುಂದೆ ಸಂಭವಿಸಬಹುದಾದ ಅನಾಹುತಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ದೂರದರ್ಶಿತ್ವದ ಆಲೋಚನೆಗಳನ್ನು ತಕ್ಷಣಕ್ಕೆ ಮಾಡಲಿಲ್ಲ. ಕನಿಷ್ಠ ಸಾಂತ್ವನಕ್ಕಾದರೂ ಮುಸ್ಲೀಮರ ಜೊತೆ ಗಂಭೀರವಾಗಿ ಚರ್ಚಿಸಬೇಕಿತ್ತು. ಪಕ್ಷದ ಜೊತೆ ಮುಸ್ಲೀಮರು ಮತ್ತು ಇತರ ಅಲ್ಪಸಂಖ್ಯಾತರು ನಿಲ್ಲಲೇಬೇಕಾದ ಅನಿವಾರ್ಯತೆ, ಅವಶ್ಯಕತೆಯನ್ನು ಮನವರಿಕೆ ಮಾಡಿಕೊಡಬೇಕಿತ್ತು. ಹಾಗಾಗಲಿಲ್ಲ. ಇದರಿಂದ ಒಟ್ಟಾರೆ ಅಲ್ಪಸಂಖ್ಯಾತ ಪ್ಯಾಕೇಜ್‌ನಲ್ಲಿರುವ ಅತ್ಯಂತ ದೊಡ್ಡ ಸಂಖ್ಯೆಯ ಮುಸ್ಲಿಂ ಸಮುದಾಯದ ಒಲವು–ನಿಲುವು ಹರಿದು ಹಂಚಿಹೋದವು. ಸಮುದಾಯದ ಸ್ವಹಿತಾಸಕ್ತಿಯ ಮತ್ತು ಇತರ ರಾಜಕೀಯ ಅವಕಾಶವಾದಿಗಳು ಅನ್ಯಾಯವಾಗಿ ಮುಸ್ಲೀಮರ ರಾಜಕೀಯ ಅಸ್ತಿತ್ವವನ್ನೇ ದುರ್ಬಲಗೊಳಿಸಿದರು.
 ಈ ಹಿಂದೆ ಮತ್ತು ಈಗ ನಿರ್ಲಕ್ಷಿಸಲ್ಪಡುತ್ತಿರುವ ಇಂಥ ಸೂಕ್ಷ್ಮಗಳನ್ನು ಕಾಂಗ್ರೆಸ್‌ ಗಂಭೀರವಾಗಿ ಪರಿಗಣಿಸಬೇಕು. ಮುಸ್ಲೀಮರು ಕೂಡ ತಮ್ಮ ಸಾಮಾಜಿಕ ಮತ್ತು ರಾಜಕೀಯ ನಿಲುವುಗಳಲ್ಲಿ ಆದ ಮತ್ತು ಆಗುತ್ತಿರುವ ತಪ್ಪುಗಳನ್ನು ಪರಾಮರ್ಶೆಗೊಳಪಡಿಸಿ ಸರಿಪಡಿಸಿಕೊಳ್ಳಬೇಕು.

ಮುಸ್ಲೀಮರು ಏನು ಮಾಡಬಹುದು?

 ರಾಜ್ಯದಲ್ಲಿ ಈಗ ನಡೆಯುತ್ತಿರುವ ವಿಧಾನಸಭೆ ಚುನಾವಣೆ ಮತ್ತು  2019ರಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆ ಮುಸ್ಲಿಂ ಸಮುದಾಯಕ್ಕೆ ಅತ್ಯಂತ ಮಹತ್ವದ್ದಾಗಿದೆ. ಸಮುದಾಯದ ಸಮಾಜೋ–ರಾಜಕೀಯ ನೆಲೆಯನ್ನು ಇದು ಹೊಸದಾಗಿ ಕಟ್ಟಿಕೊಡುವುದಾಗಿದೆ. ಮುಸ್ಲಿಂ ಸಮುದಾಯ ಪ್ರಸ್ತುತ ನೆಲದ ರಾಜಕೀಯವನ್ನು ಸೂಕ್ಷ್ಮವಾಗಿ ಗ್ರಹಿಸಿ ಸ್ಪಷ್ಟ ನಿಲುವು ಮತ್ತು ಎಚ್ಚರಿಕೆಯೊಂದಿಗೆ ಹೆಜ್ಜೆ ಇಡಬೇಕಿದೆ. ಯಾವುದೇ ಲಘು ಆಮಿಷಗಳಿಗೊಳಗಾಗದೇ ಯಾರ ಜೊತೆ ಕೈ ಜೋಡಿಸಬೇಕು, ಯಾರ ಜೊತೆ ನಿಲ್ಲಬೇಕು ಎನ್ನುವ ರಾಜಕೀಯ ನಿರ್ಧಾರವನ್ನು ಅತ್ಯಂತ ಜಾಗರೂಕವಾಗಿ ತೆಗೆದುಕೊಳ್ಳಬೇಕಿದೆ..

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

'ಅನಭಿಜ್ಞ ಶಾಕುಂತಲ': ನೆನಪು ಮರೆವಿನಾಟ

 ಜೀವನವೇ ಒಂದು ನಾಟಕವೆಂದಾದರೆ. ಸಂಬಂಧ ಅನ್ನೋದು ಕಟ್ಟಿಕೊಂಡ ಆಟ. ಅಂದರೆ ನಾಟಕದಂತೆ ಬದುಕು ಕೂಡ ಆಟ ಕಟ್ಟುವ ಕ್ರಿಯೆ. ಇಲ್ಲಿ ಗುರಿ ಎಂದರೆ ಸುಖದ ಅಥವಾ ಸಾರ್ಥಕತೆಯ ದಡ ಸೇರುವುದು. ಈ ಆಟದ ಒಂದು ಹಂತದಲ್ಲಿ ಕಷ್ಟದ ಅಡವಿ ಸೇರುವುದೂ ಇದೆ! 'ಆಡಾಡ್ತ ಅಡವಿ ಸೇರುವುದು' ಅಂತಾರಲ್ಲ ಹಾಗೆ. ಅಡವಿ ಅಂದರೆ ಇಲ್ಲಿ ಸಂಕೀರ್ಣತೆ, ಸಂಕಷ್ಟ ಅವಘಡ, ಸಂದಿಗ್ಧತೆ ಎಂದು ಭಾವಿಸಿಕೊಳ್ಳಬಹುದು. ಬದುಕಿನ ದಾರಿಯಲ್ಲಿ ಒಮ್ಮೆ ಈ 'ಅಡವಿ' ಎದುರಾಗೇ ಆಗುತ್ತದೆ ಎನ್ನುವುದು ವಿಧಿಲಿಖಿತವೇ? ಗೊತ್ತಿಲ್ಲ. ಪ್ರೀತಿ-ಪ್ರೇಮ-ಕಾಮ ಎನ್ನುವ ಬದುಕಿನ ಒಟ್ಟಾರೆ ಆಟ- ಕೂಟದಲ್ಲಿ ಪಡಕೊಳ್ಳುವುದೆಲ್ಲ ಜೀವಕಾರುಣ್ಯವಷ್ಟೇ ಅಲ್ಲ. ಸಂಕಷ್ಟ ಮತ್ತು ಸಂದಿಗ್ಧತೆಯೂ ಜತೆಯಲ್ಲಿರುತ್ತದೆ ಎನ್ನುವುದು ಸಹಜ ಮನೋಧರ್ಮ.  ಬದುಕಿನ ಆಟಕ್ಕೆ ತೆರಕೊಂಡವರಲ್ಲಿ ಹಲವರು ಅನುಭವಿಸಿದ ಮಧುರ ಘಳಿಗೆಗಳನ್ನು ಕಡೆತನಕ ನೆನಪಿಟ್ಟುಕೊಳ್ಳುತ್ತಾರೆ. ಕೆಲವರು ಮರೆತೇ ಬಿಡುತ್ತಾರೆ!?..  ಕಾಳಿದಾಸನ ಮಹಾಕಾವ್ಯ ಶಾಕುಂತಲೆಯಲ್ಲಿ ಈ ಬದುಕು, ಮನುಷ್ಯ ಪ್ರೀತಿ ಪಯಣದ ನೆನಪು ಮತ್ತು ಮರೆವಿನಾಟ ಮನಮಿಡಿಯುವಂತೆ ಚಿತ್ರಣಗೊಂಡಿದೆ. ಈ ಕಾವ್ಯದಲ್ಲಿ ಎಲ್ಲವನ್ನು ವಿಧಿಯೇ ನಿರ್ಧರಿಸಿದಂತೆನಿಸುತ್ತದೆ. ಫೇಟಲಿಸಂ ವಾದಕ್ಕೆ ಪೂರಕವಾದ ಚಿಂತನೆ ಇದೆನ್ನಬಹುದು. ಆಧುನಿಕ ಯುಗದ ಶೇಕ್ಸಪಿಯರ್ ನ ಹಲವು ನಾಟಕಗಳಲ್ಲಿಯೂ ಈ ಫೇಟಲಿಸಂ ಪ್ರಧಾನ ಪಾತ್ರದಂತೆ ವರ್ತಿಸುವುದನ್ನು ಗಮನಿಸಬಹುದು. *

ಇಷ್ಕ್‌ ಕೆ ಇಮ್ತೆಹಾನ್‌ ಔರ್‌ ಭೀ ಹೈ’.. ಇಮ್ರಾನ್‌ ಖಾನ್‌!

ಪಾಕಿಸ್ತಾನದ ಬಗ್ಗೆ ಮಾತನಾಡುವುದು ಮಹಾ ಪಾಪದ ಕೆಲಸವೇನಲ್ಲ. ಹಾಗೆ ಭಾವಿಸಬೇಕಿಲ್ಲ. ಅದು ಒಪ್ಪಿತವೊ ಇಲ್ಲವೋ, ಅದರ ಬಗ್ಗೆ ಅಲಕ್ಷ್ಯವೋ ನಿರ್ಲಕ್ಷ್ಯವೊ ಏನೇ ಆದರೂ ಅದು ಒಂದು ದೇಶ. ನೆರೆಯ ರಾಷ್ಟ್ರ. ‘ಪಡೋಸಿ...’ ಸಂಬಂಧದಲ್ಲಿ ನಮ್ಮದೇ ಕರುಳಬಳ್ಳಿ. ಭಾಷೆ, ಜನಜೀವನ ಶೈಲಿಯಲ್ಲಿ ಬದಲಾದರೂ ಮನುಷ್ಯ ಭಾವ, ಬದುಕುವ ಸಾಮಾನ್ಯ ಕಾಳಜಿ  ಒಂದೇ. ಹಾಗೆ ನೋಡಿದರೆ ಸಾಂಸ್ಕೃತಿಕವಾಗಿ ಎರಡೂ ದೇಶಗಳು ಅಭಿನ್ನ. ನಮ್ಮಲ್ಲಿರುವ ಹಾಗೆ ಅಲ್ಲಿಯೂ ಪ್ರಜಾಪ್ರಭುತ್ವ ಇದೆ. ಅಲ್ಲಿ ನಡೆಯುವುದು ಇಲ್ಲೂ ನಡೆಯುತ್ತದೆ. ಅಲ್ಲಿ ನಡೆಯಲೇಬಾರದ್ದು ಇಲ್ಲೂ ನಡೆಯಲೇಬಾರದು.  ತೀವ್ರವಾದ ನಮ್ಮಲ್ಲಿನದಕ್ಕಿಂತ ಅಲ್ಲಿ ತುಸು ಹೆಚ್ಚು ಸವಾರಿಗೆ ಹವಣಿಸಿದೆ. ಅಲ್ಲಿನ ಮಿಲಿಟರಿ ಅತಿರೇಕದ್ದು. ಅಕ್ಷಮ್ಯ. ಮತ್ತೆ ದೇಶ ಪುಟ್ಟದಾದಷ್ಟು ಅದಕ್ಕೆ ಭಯಗಳು ಜಾಸ್ತಿ. ಮಿಲಿಟರಿ ಕವಚದಲ್ಲಿ ಅದು ಸುರಕ್ಷಾ ಭಾವವನ್ನು ಕಲ್ಪಿಸಿಕೊಳ್ಳುತ್ತದೆ. ಅದೊಂದು ತರಹದ ಸಮಾಧಾನ. ಆದರೆ ಭ್ರಮೆಯಿಂದ ಕೂಡಿದ್ದು. ಭಯೋತ್ಪಾದನೆ ಕೂಡ ಒಂದರ್ಥದಲ್ಲಿ ಪುಕ್ಕಲುತನವೇ ಆಗುತ್ತದೆ. ಹಿಂಸಾ ಪ್ರವೃತ್ತಿಗೆ ಹೆದರಿಸುವುದೇ ಕೆಲಸ. ಹೆದರಿಸುವವರು ಶೂರರು, ಧೀರರು ಮತ್ತು ಜೀನಿಯಸ್‌ ಆಗಿರಲು ಹೇಗೆ ಸಾಧ್ಯ? ಮುಖ್ಯವಾಗಿ ಅಲ್ಲಿನ ವಿದ್ಯಮಾನಗಳನ್ನು ಗಮನಿಸುವುದಾದರೆ, ಮಿಲಿಟರಿ, ಮತಾಂಧರು, ಭಯೋತ್ಪಾದಕರು, ಭ್ರಷ್ಟರು ಇದೆಲ್ಲದರಿಂದ ಪಾಕಿ ತುಂಬ ರೋಸಿ ಹೋಗಿದ್ದಾನೆ. ಒಂದು ಸೂಕ್ತ ಪರ್ಯಾಯಕ್ಕಾಗಿ ಹಂಬಲಿಸಿದ್ದಾನೆ. ಸಹಜ

ಮನುಷ್ಯ ಜಾತಿ ತಾನೊಂದೇ ವಲಂ...

ಭಾರತದಲ್ಲಿ ಜಾತಿ ವ್ಯವಸ್ಥೆ ಹೇಗೆ ಹುಟ್ಟಿತು ಎಂಬುದಕ್ಕೆ ಯಾವುದೇ ನಿರ್ಧಿಷ್ಟ ಥಿಯರಿ ಇಲ್ಲ. ಆದರೆ, ಇಲ್ಲಿನ ವರ್ಗ ಸೃಷ್ಟಿ ಮಾತ್ರ ಇರಾನ್ ವ್ಯವಸ್ಥೆಯಂತೇ ಇದೆ.  ಪುರಾತನ ಇರಾನಿನ ಚರಿತ್ರೆಯಲ್ಲಿ ಇಂಥದೊಂದು ವ್ಯವಸ್ಥೆ ಇತ್ತು. ಅದಕ್ಕೆ ಪಿಸ್ತ್ರಾಸ್ ಎನ್ನುತ್ತಾರೆ. ನಮ್ಮಲ್ಲಿ ಅದು ಚಾತುರ್ವರ್ಣವಾಗಿದೆ. ಅಲ್ಲಿ ಅಥ್ರವಾನ್ಸ್ (ಪ್ರೀಸ್ಟ್ ಕ್ಲಾಸ್), ರಥೈಸ್ತಾ (ವಾರಿಯರ್ಸ್), ವಸ್ತ್ರಿಯಾ (ಮರ್ಕಂಟೈಲ್ ಕ್ಲಾಸ್) ಮತ್ತು ಹ್ಯುತಿ (ಆರ್ಟಿಸನ್) ಎನ್ನುವ ವರ್ಗ ವ್ಯವಸ್ಥೆ ಇದೆ. ನಮ್ಮಲ್ಲಿ ಇದನ್ನು ಕಲ್ಪಿಸಿಕೊಂಡರೆ ಪುರೋಹಿತ ಅಥವಾ ಬ್ರಾಹ್ಮಣ (ಅಥ್ರವಾನ್ಸ್), ಕ್ಷತ್ರಿಯ  (ರಥೈಸ್ತಾ), ವೈಶ್ಯ  (ವಸ್ತ್ರಿಯಾ) ಮತ್ತು ಶೂದ್ರ (ಹ್ಯುತಿ) ಎಂದು ಅರ್ಥೈಸಿಕೊಳ್ಳಬಹುದು.  ಆದಿ ಕಾಲದ ಇರಾನಿಯನ್ ವ್ಯವಸ್ಥೆ ಹೀಗೇ ಇತ್ತು. ಅದೇ ನಾಲ್ಕು ವರ್ಗಗಳು ಭಾರತದಲ್ಲೂ ಈಗಲೂ ಚಾಲ್ತಿಯಲ್ಲಿವೆ. ಹೀಗೆ ಒಂದು ಇರಾನ್ ಸಂಬಂಧ ಭಾರತಕ್ಕಿದೆ. ಚರ್ಮದ ಬಣ್ಣ, ನಯ ನಾಜೂಕು, ಕಣ್ಣು, ಬುದ್ಧಿವಂತಿಕೆಯನ್ನು ಹೋಲಿಸಿದರೆ ಭಾರತದ ಅದರಲ್ಲೂ ಉತ್ತರ ಭಾರತದ ಕಾಶ್ಮೀರಿ ಪಂಡಿತರು, ಉತ್ತರ ಪ್ರದೇಶದ ಪಂಡಿತ್, ಚಿತ್ಪಾವನ ಬ್ರಾಹ್ಮಣರು, ನಮ್ಮ ಕರಾವಳಿ ಮತ್ತು ಉತ್ತರ ಕನ್ನಡದ ಹವ್ಯಕರು ಹೆಚ್ಚೂ ಕಮ್ಮಿ ಇರಾನಿಗಳನ್ನು ಹೋಲುತ್ತಾರೆ (ಮೇಲ್ನೋಟಕ್ಕೆ).  ಬಹುಶಃ ಹೀಗೂ ಆಗಿರಬಹುದು, ಆಗ ಇರಾನ್ ನಲ್ಲಿ ಕ್ರೈಸ್ತ ಮತ್ತು ಇಸ್ಲಾಂ ಮುಂಚೆಯೂ ಹಲವಾರು ಸುಧಾರಣಾವಾದಿಗಳ ಅಥವಾ ಬಂಡುಕೋರರ