ವಿಷಯಕ್ಕೆ ಹೋಗಿ

‘ಇಲ್ಲ.. ಅಂದರೆ.. ಇದೆ!’.. ಉತ್ತಮ ಪ್ರಯೋಗ


ಜೀನ್‌ ಬ್ಯಾಪ್ಟಿಸ್ಟ್‌ ಪೊಕ್ವೆಲಿನ್‌ ಅಲಿಯಾಸ್‌ ಮೊಲಿಯರ್‌ 18ನೇ ಶತಮಾನದ ಹೆಸರಾಂತ ಫ್ರೆಂಚ್‌ ನಾಟಕಕಾರ.  ಮೊಲಿಯರ್‌ ಎನ್ನುವುದು ಆತನ ರಂಗನಾಮ. ಕಾಮಿಡಿ ನಾಟಕಗಳಿಂದ ಹೆಸರಾದ ಈತ ಬದುಕಿನ ಸಣ್ಣ ಪುಟ್ಟ ಖುಷಿ ಕ್ಷಣಗಳು ಮತ್ತು ಹಾಸ್ಯದ ಪ್ರಸಂಗಗಳನ್ನೇ ಎತ್ತಿಕೊಂಡು ಇತರ ನಾಟಕೀಯ ಅಂಶಗಳೊಂದಿಗೆ  ಬದುಕಿನ ಬಹುದೊಡ್ಡ ವಿಷಣ್ಣತೆ. ವಿಷಾದವನ್ನು ನಾಟಕವಾಗಿ ಕಟ್ಟಿಕೊಟ್ಟಿದ್ದಾನೆ. ಆ ಮೂಲಕ ಬದುಕಿನ ಬಗ್ಗೆ ಚಿಂತನೆಗೆ ಹಚ್ಚಿದ್ದಾನೆ. ಪರಿಣಾಮಕಾರಿಯಾದ ಪ್ರಹಸನಗಳಿಂದಲೇ ಮೊಲಿಯರ್‌ ತುಂಬ ಖ್ಯಾತಿ ಗಳಿಸಿದ. ತಾರ್ತೂಫ್‌, ಬೂರ್ಜ್ವಾ ಜಂಟಲ್‌ಮನ್‌ ಮತ್ತಿತರ ನಾಟಕಗಳ ಮೂಲಕ ಅನನ್ಯ ರಂಗಾನುಭವಗಳನ್ನು ಪ್ರೇಕ್ಷಕರಿಗೆ ಕಟ್ಟಿಕೊಟ್ಟ ಮೊಲಿಯರ್‌, ನಮ್ಮ ನಡುವೆ ಮತ್ತು ಸಮಾಜದಲ್ಲಿ ಅಸಂಖ್ಯ ಪ್ರಹಸನಗಳು ನಡೆದಾಗೆಲ್ಲ ನೆನಪಾಗುತ್ತಾನೆ. 
ಕಳೆದ ಶನಿವಾರ ಸಂಜೆ, ಕೆ.ಎಚ್‌. ಕಲಾಸೌಧದಲ್ಲಿ ‘ಸೈಡ್‌ ವಿಂಗ್‌’ ತಂಡ ಏರ್ಪಡಿಸಿದ್ದ ‘ಇಲ್ಲ.. ಅಂದರೆ.. ಇದೆ!’  ಎನ್ನುವ ಕಾಮಿಡಿ ನಾಟಕದ ಪ್ರಯೋಗಕ್ಕೆ ಜಿ.ಎನ್‌. ಮೋಹನ್‌ ಅವರ ಜೊತೆ ನಾನೂ ಸಾಕ್ಷಿಯಾದೆ. ಮೊಲಿಯೊರ್‌ ಯಾಕೋ ನೆನಪಾದ.
ನಾವು ನಮ್ಮದೇ ಬದುಕಿನ ನಿಜದ ನೆಲೆಗಳ ಹುಡುಕಾಟಕ್ಕೆ ಇಳಿದಾಗ ವಾಸ್ತವಾಂಶಗಳು ಅನಾವರಣಗೊಳ್ಳುತ್ತವೆ. ಮನುಷ್ಯ ಸಂಬಂಧಗಳಲ್ಲಿ ಅಂದರೆ ಗಂಡು–ಹೆಣ್ಣು, ಸಮಾಜದ ಜೊತೆಗಿನ ಮನುಷ್ಯನ ಸಂಬಂಧಗಳು ಅಂದರೆ ಸಾಮಾಜಿಕ ಸಂಬಂಧ ಇದೆಲ್ಲದರ ಜೊತೆ ನಮ್ಮ ಸ್ಪಂದನೆ ಏನು? ಕಂಡುಕೊಂಡ ಸತ್ಯಗಳ ನೆಲೆಯಲ್ಲಿ ಆತ್ಮವಿಮರ್ಶೆಗಿಳಿದಾಗ ಆಗುವ ದರ್ಶನವನ್ನು ಎದುರಿಸುವುದು ಹೇಗೆ?  ನಗುವಲ್ಲಿ ಬದುಕಿನ ದೊಡ್ಡ ವಿಷಾದ ಮರೆಮಾಚುವುದು ಪಾಸಿಟಿವ್‌ ಸೈಡ್‌ ಆಫ್‌ ದಿ ಲೈಫ್‌. ಮತ್ತೊಂದೆಡೆ ತರತಮದ ಕ್ಷುಲ್ಲಕ ಕಾರಣಗಳಿಗೆ ಬದುಕನ್ನೇ ನರಕವಾಗಿಸಿಕೊಳ್ಳುವುದು ಇಗೋಯಿಸಂ ಅನ್ನಿಸಬಹುದು. ಇದೆಲ್ಲ ಬದುಕಲ್ಲಿ ಕಾಣುವ ಸ್ಥಿತಿ. ಅದನ್ನು ಫೇಟಲಿಸಂಗೆ ಸಮೀಕರಿಸಿ ನೋಡುವುದಲ್ಲ. ಒಂದು ಸ್ಥಿತಿಯಿಂದ ಮತ್ತೊಂದು ಉತ್ತಮ ಸ್ಥಿತಿಗೆ ಮಾನಸಿಕವಾಗಿ, ವೈಚಾರಿಕವಾಗಿ ಪರಿವರ್ತನೆಯಾಗುವುದು ಮುಖ್ಯ. ಹೀಗೆ ಬದಲಾಗುವಾಗ ಹಿಂದಿನದನ್ನು ಖಂಡಿಸುವ ಮತ್ತು ಧಿಕ್ಕರಿಸುವ ಆತ್ಮಸ್ಥೈರ್ಯ ಮೆರೆಯಲೇಬೇಕು. ಆ ಆತ್ಮಸ್ಥೈರ್ಯ ನಿರ್ಭಯಾ, ದಾನವ್ವ... ಅಂಥವರ ಸ್ಥಿತಿಗೆ ಕಾರಣರಾದವರ ಸದ್ದಡಗಿಸಿ ಅವರನ್ನು ಶಾಶ್ವತ ಷಂಡರನ್ನಾಗಿಸಲು ಸಾಧ್ಯ ಎನ್ನುವ ಬಹುದೊಡ್ಡ ಒಡಲುರಿಯ ಮೂಸೆಯಿಂದ ಬಂದ ಆಕ್ರೋಶವನ್ನು ಒಂದೇ ಒಂದು ಪರಿಣಾಮಕಾರಿ ದೃಶ್ಯದಲ್ಲಿ ನಿರೂಪಿಸಿದ ನಾಟಕಕಾರ/ನಿರ್ದೇಶಕ ಶೈಲೇಶಕುಮಾರ್‌ ನಿಜಕ್ಕೂ ದಿಟ್ಟ ಮನೋಧರ್ಮವನ್ನೇ ಮೆರೆದರು. ಪೊಸಿಟಿವಿಟಿ ಕಡೆ ಹೇಗೆ ಮುಖ ಮಾಡಬಹುದೆನ್ನುವುದನ್ನೂ ಕಕ್ಕುಲಾತಿಯಿಂದ ಕಟ್ಟಿಕೊಟ್ಟರು.
ಎರಡೇ ಎರಡು ಪಾತ್ರಗಳ ಮೂಲಕ ಹಲವು ಪಾತ್ರಗಳನ್ನು ಸೃಷ್ಟಿಸಿ ಇಬ್ಬರು ಹೆಣ್ಣು ಮಕ್ಕಳ ಬದುಕಿನ ಕೇಸ್‌ ಸ್ಟಡಿಯನ್ನು ಹೈಪಥೀಸಿಸ್‌ನಂತೆ ಎತ್ತಿಕೊಂಡು ಅದನ್ನು ಒಟ್ಟು ಮನುಷ್ಯ ಸಂಬಂಧಗಳಿಗೆ ಪ್ರಯೋತ್ಮಕವಾಗಿ ಸಮೀಕರಿಸಿ, ನಿಕಷಕ್ಕೊಡ್ಡಿ ಅಂತಿಮ ಫಲಿತಾಂಶವನ್ನು ಒಂದು ಪರಿಹಾರದಂತೆ ನಿರೂಪಿಸುವ ವೈಜ್ಞಾನಿಕ ವಿಧಾನ ಅನುಸರಿಸಿದ ನಾಟಕಕಾರ ಶೈಲೇಶಕುಮಾರ್‌ ಮೆಚ್ಚುಗೆಯಾದರು. ಸಂಭಾಷಣೆಗಳು ತುಂಬ ಕ್ರಿಸ್ಪ್‌ ಮತ್ತು ಸಟೈರಿಕ್‌ ಆಗಿವೆ. ಸಭ್ಯ, ದುಷ್ಟ, ವಂಚಕ, ಕಿರಾತಕ, ರೋಮ್ಯಾಂಟಿಕ್‌, ಫ್ಲರ್ಟ್‌.. ಎಲ್ಲವೂ ನಮ್ಮೊಳಗಿನ ಭಿನ್ನ ಶೇಡ್‌ಗಳೇ ಎನ್ನುವ ರೀತಿಯಲ್ಲಿ ಲೀಲಾಜಾಲವಾಗಿ ಅವನ್ನೆಲ್ಲ ನಿರೂಪಿಸಿದ ಆ ಇಬ್ಬರು ಹೆಣ್ಣು ಮಕ್ಕಳ ಅಭಿನಯ ಸಿಂಪ್ಲೀ ಸುಪರ್ಬ್‌. ರಂಗವಿನ್ಯಾಸ ಮತ್ತು ದೃಶ್ಯ ಜೋಡಣಾ ಶೈಲಿಯನ್ನು ಕೊಂಚ ಪಾಲಿಶ್‌ ಮಾಡಿಕೊಂಡರೆ ಪ್ರಯೋಗವನ್ನು ಮತ್ತಷ್ಟು ಹದಗೊಳಿಸಬಹುದು. ಈಗಿನ ಸ್ಥಿತಿಯಲ್ಲಿಯೂ ಇದೊಂದು ಉತ್ತಮ ಪ್ರಯೋಗ.
(ಅವತ್ತು ಸಂಜೆ ರಂಗದ ಮೇಲೆ ಮಾತನಾಡಿದ್ದರ ವಿಸ್ತೃತ ರೂಪವಿದು)

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನಾನು ನೀನಾಸಂ ಪದವೀಧರನಲ್ಲ...

ನೀನಾಸಂ ಪದವಿ ನನ್ನ ತಲೆಗೆ ಅನಗತ್ಯ ಭಾರ ಸ್ವಾಮೀ. ಅಷ್ಟು ಕಪ್ಪು ಸುಂದರಿಯರ ಭಾರವೇ ನನ್ನ ತಲೆಗೆ ಸಾಕಾಗಿ ಹೋಗಿದೆ. ಇನ್ನು ಇಷ್ಟು 'ವಜನ್' ಪದವಿ ಕಿರೀಟ ಬೇಡವೇ ಬೇಡ. ಸುಮ್ಮನೇ ಖಾಸಗಿಯಾಗಿ ಡೈರಿಯ ಹಾಗೆ ಬೆಚ್ಚಗೆ ನನ್ನ ಜತೆಗೆ ಸದಾ ಇರಲಿ ಎಂದುಕೊಂಡು ಈ ಬ್ಲಾಗ್ ರೂಪಿಸಿದ್ದೇನಷ್ಟೇ. ಅವಧಿ ಬ್ಲಾಗ್ ನನ್ನ ಈ ಪುಟ್ಟ ಯತ್ನಕ್ಕೆ ಬೆನ್ನು ತಟ್ಟಿದ್ದು ಸಂತೋಷವೇ. ಆದರೆ, ನನ್ನ ಬಗ್ಗೆ ಬೆನ್ನುತಟ್ಟುವ ಸಾಲುಗಳ ಬರೆಯುತ್ತ ನೀನಾಸಂ ಪದವೀಧರ ಎನ್ನುವ ಒಂದು ತಪ್ಪು ಮಾಹಿತಿ ಕೂಡ ನುಸುಳಿಕೊಂಡಿದೆ. ಸ್ವಾಮೀ ನಾನೀ ನೀನಾಸಂ ಸುದ್ದಿಗೇ ಹೋದವನಲ್ಲ. ಅಲ್ಲಿ ಕಲಿತು ಬಂದವರ ಜತೆ 'ಬೇಜಾನ್' ಜಗಳ ಮಾಡಿದಿನಿ ಅಷ್ಟೇ.

ಇಷ್ಕ್‌ ಕೆ ಇಮ್ತೆಹಾನ್‌ ಔರ್‌ ಭೀ ಹೈ’.. ಇಮ್ರಾನ್‌ ಖಾನ್‌!

ಪಾಕಿಸ್ತಾನದ ಬಗ್ಗೆ ಮಾತನಾಡುವುದು ಮಹಾ ಪಾಪದ ಕೆಲಸವೇನಲ್ಲ. ಹಾಗೆ ಭಾವಿಸಬೇಕಿಲ್ಲ. ಅದು ಒಪ್ಪಿತವೊ ಇಲ್ಲವೋ, ಅದರ ಬಗ್ಗೆ ಅಲಕ್ಷ್ಯವೋ ನಿರ್ಲಕ್ಷ್ಯವೊ ಏನೇ ಆದರೂ ಅದು ಒಂದು ದೇಶ. ನೆರೆಯ ರಾಷ್ಟ್ರ. ‘ಪಡೋಸಿ...’ ಸಂಬಂಧದಲ್ಲಿ ನಮ್ಮದೇ ಕರುಳಬಳ್ಳಿ. ಭಾಷೆ, ಜನಜೀವನ ಶೈಲಿಯಲ್ಲಿ ಬದಲಾದರೂ ಮನುಷ್ಯ ಭಾವ, ಬದುಕುವ ಸಾಮಾನ್ಯ ಕಾಳಜಿ  ಒಂದೇ. ಹಾಗೆ ನೋಡಿದರೆ ಸಾಂಸ್ಕೃತಿಕವಾಗಿ ಎರಡೂ ದೇಶಗಳು ಅಭಿನ್ನ. ನಮ್ಮಲ್ಲಿರುವ ಹಾಗೆ ಅಲ್ಲಿಯೂ ಪ್ರಜಾಪ್ರಭುತ್ವ ಇದೆ. ಅಲ್ಲಿ ನಡೆಯುವುದು ಇಲ್ಲೂ ನಡೆಯುತ್ತದೆ. ಅಲ್ಲಿ ನಡೆಯಲೇಬಾರದ್ದು ಇಲ್ಲೂ ನಡೆಯಲೇಬಾರದು.  ತೀವ್ರವಾದ ನಮ್ಮಲ್ಲಿನದಕ್ಕಿಂತ ಅಲ್ಲಿ ತುಸು ಹೆಚ್ಚು ಸವಾರಿಗೆ ಹವಣಿಸಿದೆ. ಅಲ್ಲಿನ ಮಿಲಿಟರಿ ಅತಿರೇಕದ್ದು. ಅಕ್ಷಮ್ಯ. ಮತ್ತೆ ದೇಶ ಪುಟ್ಟದಾದಷ್ಟು ಅದಕ್ಕೆ ಭಯಗಳು ಜಾಸ್ತಿ. ಮಿಲಿಟರಿ ಕವಚದಲ್ಲಿ ಅದು ಸುರಕ್ಷಾ ಭಾವವನ್ನು ಕಲ್ಪಿಸಿಕೊಳ್ಳುತ್ತದೆ. ಅದೊಂದು ತರಹದ ಸಮಾಧಾನ. ಆದರೆ ಭ್ರಮೆಯಿಂದ ಕೂಡಿದ್ದು. ಭಯೋತ್ಪಾದನೆ ಕೂಡ ಒಂದರ್ಥದಲ್ಲಿ ಪುಕ್ಕಲುತನವೇ ಆಗುತ್ತದೆ. ಹಿಂಸಾ ಪ್ರವೃತ್ತಿಗೆ ಹೆದರಿಸುವುದೇ ಕೆಲಸ. ಹೆದರಿಸುವವರು ಶೂರರು, ಧೀರರು ಮತ್ತು ಜೀನಿಯಸ್‌ ಆಗಿರಲು ಹೇಗೆ ಸಾಧ್ಯ? ಮುಖ್ಯವಾಗಿ ಅಲ್ಲಿನ ವಿದ್ಯಮಾನಗಳನ್ನು ಗಮನಿಸುವುದಾದರೆ, ಮಿಲಿಟರಿ, ಮತಾಂಧರು, ಭಯೋತ್ಪಾದಕರು, ಭ್ರಷ್ಟರು ಇದೆಲ್ಲದರಿಂದ ಪಾಕಿ ತುಂಬ ರೋಸಿ ಹೋಗಿದ್ದಾನೆ. ಒಂದು ಸೂಕ್ತ ಪರ್ಯಾಯಕ್ಕಾಗಿ ಹಂಬಲಿಸಿದ್...

‘ಪಲ್ಲಟ’ ಒಂದು ಪ್ರಾಮಾಣಿಕ ಪ್ರಯತ್ನ

  (ಇನ್ನೂ ತೆರೆ ಕಾಣದ ‘ಪಲ್ಲಟ’ ಕನ್ನಡ ಸಿನಿಮಾದ ಪ್ರೀಮಿಯರ್‌ ಶೋ  ಬಗ್ಗೆ ) ಸಿನಿಮಾದ ಸೊಗಸೇ ಅಂಥದು. ಯಂತ್ರಗಳಿಂದ ಸೆರೆ ಹಿಡಿದ ಬದುಕು ತೆರೆಯ ಮೇಲೆ ಬಾಳುವಾಗ ಆ ಕ್ಷಣಕ್ಕೆ ಎಲ್ಲ ಹೊಸತೇ ಆಗಿ ಕಾಣಿಸುತ್ತದೆ. ಗತ ಬದುಕು ಹೊಸ ಬದುಕಿನಂತೆ ಹೊಳೆಯುತ್ತದೆ. ಪರದೆ ಮೇಲಿನ ಮೂರು ಗಂಟೆಯ ಬಾಳಲ್ಲಿ ಪ್ರೇಕ್ಷಕ ಅದರ ಅಸಲಿ ನೋವು, ನಲಿವುಗಳ ಬದುಕಿಗಿಳಿಯುತ್ತ ಮೆಲ್ಲಗೆ ಅದರ ಒಟ್ಟು ಹರವಿನಗುಂಟ ಸಾಗಬಹುದು. ಆ ಪುಟ್ಟ ಜರ್ನಿಯಲ್ಲಿ  ಅವನೊಳಗಿನ ಬದುಕಿಗೆ ಹೊಸ ಕಣ್ಣುಗಳು ಮೂಡಬಹುದು. ಅಂತಃಕರಣದ ಸೆಲೆಗಳು ಮತ್ತಷ್ಟು ಜಿನುಗಬಹುದು. ಸಿನಿಮಾದ ಸಾಧ್ಯತೆಗಳು, ಪರಿಣಾಮಗಳು ಹಲವು. ಸಿನಿಮಾಗೆ ಅದರ ಅಂತಃಸತ್ವ ಮುಖ್ಯ. ನೋಡಿ ತಿಳಿವ ಪ್ರಾಸೆಸ್‌ ಇದಾದ್ದರಿಂದ ವಿಶ್ಯುಯಲ್‌ ಟ್ರೀಟಮೆಂಟ್‌ ಕೂಡ ಮುಖ್ಯ.  ‘ಪಲ್ಲಟ’ ಕನ್ನಡ ಸಿನಿಮಾದ ವಸ್ತು  ಸ್ಥಳೀಯ ಸಂಸ್ಕೃತಿಗಳ ಸ್ಥಿತ್ಯಂತರ ಹೇಗೆ ನಿಜ ಜೀವನದಲ್ಲಿ ಕೆಲವರ ಬದುಕನ್ನೇ ಮುಗಿಸಿಬಿಡುತ್ತದೆ ಎನ್ನುವುದು. ಇದು ಅಮಾನವೀಯ ಎನ್ನುವುದು ಚಿತ್ರದ ಒಳದನಿ. ಬಹುಕಾಲ ನಿಲ್ಲಬಲ್ಲ ಮತ್ತು ಕಾಡಬಲ್ಲ ಸಿನಿಮಾ ಆಗುವ ಅವಕಾಶವನ್ನು ಇದು ಸ್ವಲ್ಪದರಲ್ಲಿಯೇ ಕಳಕೊಂಡಿದೆ. ಇದರಾಚೆಗೂ ಚಿತ್ರ ಕೆಲವು ವಿಚಾರಗಳಿಗೆ ಸಂಬಂಧಿಸಿ ಚರ್ಚೆಗೆ ಯೋಗ್ಯವಾಗಿದೆ. ನಾಗರಿಕತೆ ಎಂಬುದು ಜನರೇ ಸೃಜಿಸಿಕೊಂಡಿದ್ದು. ಆಯಾ ಜನಪ್ರದೇಶಗಳಲ್ಲಿ ಕಾಲದ ಅಗತ್ಯಗಳಿಗೆ ತಕ್ಕುದಾದ ವ್ಯವಸ್ಥೆಯೊಂದು ರೂಪುಗೊಂಡಿರುತ್ತದ...