ವಿಷಯಕ್ಕೆ ಹೋಗಿ

ನಾವೆಷ್ಟು ನಾಮರ್ದಗಳಾಗಿದ್ದೇವೆ?


ನಮ್ಮೆಲ್ಲ ಕನಸು, ಆಶಯಗಳ ಪ್ರತೀಕವಾಗಬೇಕಿದ್ದ ನಾವೇ ಆಯ್ಕೆ ಮಾಡಿದ ಸರ್ಕಾರಗಳು 'ಸೆಟ್-ಅಪ್' ಕಲ್ಚರಿಗೆ ಸರಿದು ನಿಂತಿವೆ. ಒಂದು ನಿರ್ಧಿಷ್ಟ ಕೋಮು, ಕಲ್ಟ್, ಜಾತಿ, ಧರ್ಮಕ್ಕೆ ಸೇರಿದವರು ಒಂದು ಗ್ಯಾಂಗ್ ಮಾಡಿಕೊಂಡು ರಾಜಕೀಯ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವದ ಹೆಸರಲ್ಲಿ ಬಲಿಷ್ಠ ಕೋಮುಗಳ ಸ್ವಯಂಘೋಷಿತ ರಾಜ್ಯ-ರಾಷ್ಟ್ರೀಯ ಲೀಡರ್ ಗಳು ಪವರ್ ಡೀಲರ್ ಗಳಾಗಿದ್ದಾರೆ. ಅವರನ್ನೆಲ್ಲಾ ನಾವು ಜನನಾಯಕರೆಂದು ನಂಬುತ್ತೇವೆ.


ಬಾಟಾ ಬಾಟಿಯ ವ್ಯಾಪಾರಿ ಬುದ್ಧಿ ಇಂದಿನ ಪಾಲಿಟಿಕಲ್ ಕ್ವಾಲಿಫಿಕೇಷನ್ ಆಗಿಹೋಗಿದೆ. ಜಾತಿವಾರು ಲೆಕ್ಕಾಚಾರ, ಸಂಖ್ಯಾಬಲದ ಜೋಡಣೆಗೆ ಫ್ರಂಟ್ ಲೈನ್ ಲೀಡರ್ ಗಳು ಬ್ರೋಕರ್ ಕೆಲಸದಲ್ಲಿ ತೊಡಗಿದ್ದಾರೆ. ಧರ್ಮ ಎನ್ನುವುದು ಇವರು ತೊಡುವ ಹವಾಯಿ ಚಪ್ಪಲಿಗಿಂತ ಕಡೆಯಾಗಿ ಹೋಗಿದೆ. ಯೂಸ್ ಅಂಡ್ ಥ್ರೋ ವಸ್ತುವಾಗಿದೆ. ಧಾರ್ಮಿಕ ನಾಯಕರೆಲ್ಲ ತಮ್ಮ ಅನುಯಾಯಿಗಳನ್ನು ರಾಜಕಾರಣಿಗಳ ಗುಲಾಮರನ್ನಾಗಿ ಪರಿವರ್ತಿಸತೊಡಗಿದ್ದಾರೆ. ಹೀಗೆ ರಾಜಕಾರಣಿಗಳು ಮತ್ತು ಧಾರ್ಮಿಕ ನಾಯಕರ ನಡುವೆ ಒಡಂಬಡಿಕೆಗಳು ಯಾವ ಎಗ್ಗಿಲ್ಲದೆ ನಡೆಯುತ್ತಿವೆ. ಯಾವ ಆಶಾಭಾವದಿಂದ ಇದನ್ನೆಲ್ಲ ಸಹಿಸಿಕೊಂಡಿರಬೇಕೋ...

ಇಂಥದೊಂದು ಸಾತ್ವಿಕ ಆಕ್ರೋಶ ಬಹುತೇಕ ಪ್ರಜ್ಞಾವಂತರಲ್ಲಿಯೂ ಮೂಡುತ್ತಿದೆ.
ಮತಾಂತರ ವಿರೋಧಿಸುವ ಪಕ್ಷದ ಸರ್ಕಾರ ಪಕ್ಷಾಂತರವನ್ನು ಆಪರೇಷನ್ ಕಮಲ್ ಎನ್ನುವ ಸೋಗಿನಲ್ಲಿ ನಡೆಸುತ್ತಿದೆ. ಯಾವ ನೈತಿಕ ನೆಲೆಯಲ್ಲಿ ಇದನ್ನು ಸಮರ್ಥಿಸಿಕೊಳ್ಳುತ್ತೊ...
ಮತಾಂತರ ಮತ್ತು ಪಕ್ಷಾಂತರ
ಒಬ್ಬ ವ್ಯಕ್ತಿ ಅಥವಾ ಒಂದು ಸಮೂಹ ಇರುವ ಸ್ಥಿತಿಯಿಂದ ಮತ್ತಷ್ಟು ಉತ್ತಮ ಸ್ಥಿತಿಗೆ ಏರಲು ಸಾಮಾಜಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಬದಲಾಗೋದು ಮತಾಂತರದಿಂದ ಸಾಧ್ಯ ಎನ್ನೋದಾದರೆ ಅದು ಹೇಗೆ ತಪ್ಪಾಗುತ್ತದೆ?
ಹಾಗೇ, ಒಂದು ಪಕ್ಷದ ಅನಾನುಕೂಲಗಳಿಂದ ಬೇಸತ್ತು ಅನುಕೂಲ ಇರುವ ಮತ್ತೊಂದಕ್ಕೆ ಹಾರುವುದು ಸಹಜ. ಅಥವಾ ಸಿದ್ಧಾಂತಗಳು ಬೇಸರವಾದಾಗ, ಅಸಹನೀಯ ರಿಜಿಡಿಟಿ ಎನಿಸಿದಾಗ ಎದ್ದು ಹೊರಡುವುದು ಸಹಜವಲ್ಲವೇ?
ಆದರೆ, ಆ ಹೆಸರಲ್ಲಿ ಕೆಲವರನ್ನು ಬಲವಂತವಾಗಿ, ಅನಾಮತ್ತಾಗಿ ಎತ್ತಿಕೊಂಡು ಹೋಗುವುದು ಅಥವಾ ಹಾಗೆ ಅವರನ್ನು ಅಸಹಾಯಕರನ್ನಾಗಿಸುವುದು ಶುದ್ಧ ಅನಾಗರಿಕತೆ. ಇಂಥದೊಂದು ಅನಾಗರಿಕ ವರ್ತನೆ ನಮ್ಮ ರಾಜಕೀಯ ರಂಗದಲ್ಲಿ ನಡೀತಾನೇ ಇದೆ. ಎಂಥ ನಾಚಿಕೆಗೇಡು?
ಇಂಥದೇ ಅವಘಡಗಳು ಧರ್ಮದ ವಿಷಯದಲ್ಲೂ ನಡೆಯುತ್ತಿವೆ. ಅದು ಖಂಡನೀಯ. ಧರ್ಮಕ್ಕೆ ಅವುಗಳದ್ದೇ ಆದ ಕಟ್ಟು ಪಾಡುಗಳು, ನಂಬಿಕೆಗಳು, ಸಂಪ್ರದಾಯಗಳಿವೆ. ಅವು ಬಹುತೇಕ ಅಲಿಖಿತ ಸಂವಿಧಾನಕ್ಕೊಳಪಟ್ಟಂಥವು. ಅದನ್ನು ನಿಭಾಯಿಸುವಲ್ಲಿ ಧಾರ್ಮಿಕ ನಾಯಕರು ನಂಬಿಕೆಗಳ ಆಧಾರದಲ್ಲಿ ಮಾತ್ರ ಯತ್ನಿಸಬಹುದಾಗಿದೆ. ಅದನ್ನು ಕಾನೂನಾಗಿಸಲು ಅವರಿಗೆ ಅವಕಾಶಗಳಿಲ್ಲ. ಬಹಿರಂಗವಾಗಿ ಒತ್ತಡ ಹೇರುವುದಾಗಲಿ, ಒತ್ತಡ ತರುವುದಾಗಲಿ ಅದಕ್ಕೆ ನಾಗರಿಕ ಸಮಾಜದಲ್ಲಿ ಅವಕಾಶವಿಲ್ಲ. ಆದರೂ ಕೆಲವೆಡೆ ಇದು ನಡೆಯುತ್ತದೆ.

ಧರ್ಮವಾಗಲಿ ಇಲ್ಲವೇ ರಾಜಕೀಯ ಪಕ್ಷವಾಗಲಿ ಅದರ ನಾಯಕತ್ವಕ್ಕೆ ತನ್ನ ಅನುಯಾಯಿಗಳ ಬಗ್ಗೆ ಸ್ಪಷ್ಟವಾದ ನಿಲುವುಗಳನ್ನು ನೈತಿಕ ನೆಲೆಯಲ್ಲಿ ಇಟ್ಟುಕೊಳ್ಳುವುದು ಕನಿಷ್ಠ ಶಿಸ್ತು. ಸಮಾನ ಅವಕಾಶ ಕಲ್ಪಿಸುವ ಡೆಮಾಕ್ರೆಟಿಕ್ ವ್ಯವಸ್ಥೆ ಪಕ್ಷದಲ್ಲಿ ಅಥವಾ ಧರ್ಮದಲ್ಲಿ ಇಲ್ಲವೆಂದ ಮೇಲೆ ಯಾರು ತಾನೆ ಅದರಲ್ಲೇ ಕೊಳೆಯಲು ಇಷ್ಟಪಡುತ್ತಾರೆ? ಇಂಥ ಸಂದರ್ಭದಲ್ಲಿ ಮತಾಂತರ ಅಥವಾ ಪಕ್ಷಾಂತರ ನ್ಯಾಯಸಮ್ಮತ. ಅದು ವೈಜ್ಞಾನಿಕ ಕೂಡ.
ಆದರೆ, ಒಂದು ಪಕ್ಷದಲ್ಲಿದ್ದುಕೊಂಡು ಅದು ಅಧಿಕಾರದಲ್ಲಿದ್ದಾಗ ಅಧಿಕಾರ ಮತ್ತು ಸವಲತ್ತು ಅನುಭವಿಸಿ ಅದು ಸೋಲುಂಡಾಗ ಮತ್ತೊಂದು ಪಕ್ಷಕ್ಕೆ ಕೇವಲ ಅಧಿಕಾರಕ್ಕಾಗಿ ಹಾರುವುದು ನಮಕ್ ಹರಾಮ್ ಕೆಲಸವಾಗುತ್ತದೆ. ಹೀಗೆ ನಮಕ್ ಹರಾಮ್ ಕೆಲಸ ಮಾಡುವವರು ರಾಜಕೀಯ ಚತುರ ಎಂದೆನಿಸಿಕೊಳ್ಳುವುದೂ ಇದೆ. ಇದಕ್ಕೆಲ್ಲ ಅವರ ಬೆಂಬಲಿಗರೇ ಅವಕಾಶ ಮಾಡಿಕೊಡುವುದು ನಾಮರ್ದ್ ಗಿರಿ ಅಲ್ಲದೆ ಇನ್ನೇನು?

ಒಮ್ಮೊಮ್ಮೆ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದೆಲ್ಲ ಬುಡಮೇಲು ಆಗುವುದೂ ಇದೆ. ಇತ್ತೀಚೆಗಿನ ಉಪಚುನಾವಣೆ ಈ ಮಾತನ್ನು ರುಜುವಾತು ಪಡಿಸಿದೆ ಕೂಡ. ಜಾತಿಯೊಂದನ್ನು ನಂಬಿಕೊಂಡು ಮತದಾರರ ಅಭಿಪ್ರಾಯಗಳ ಜತೆ ಆಟವಾಡಲು ಹೋದರೆ ಎಂಥ ಶಾಸ್ತಿಯಾಗುತ್ತದೆ ಎನ್ನುವುದಕ್ಕೆ ಈ ಸಲದ ಉಪ ಚುನಾವಣೆ ದೊಡ್ಡ ಸಾಕ್ಷಿ. ಬೆಂಗಳೂರಿನ ಗೋವಿಂದರಾಜ ನಗರ ಉಪಚುನಾವಣೆ ಇದಕ್ಕೆ ತಾಜಾ ಉದಾಹರಣೆ. ಆಡಳಿದಲ್ಲಿರುವ ಪಕ್ಷದ ಜಾತಿವಾದ ಹೊಡೆಯಲು ಪ್ರತಿಪಕ್ಷ ಬಳಸಿದ್ದು ಕೂಡ ಜಾತಿವಾದವನ್ನೇ!
ಸದ್ಯಕ್ಕೆ ಹಣಬಲ ಕರಾಮತ್ತು ಮಾಡಬಲ್ಲ ಬಹುದೊಡ್ಡ ಅಸ್ತ್ರ. ಆಡಳಿತದಲ್ಲಿರುವ ಪಕ್ಷ ಆಡಳಿತ ಯಂತ್ರ ಮತ್ತು ಹಣವನ್ನು ಬಳಸಿಕೊಂಡು ಉಪಚುನಾವಣೆ ಗೆಲ್ಲುವುದು ಹೊಸದೇನೂ ಅಲ್ಲ. ಆದರೆ, ಜಾತಿ ಧ್ರುವೀಕರಣ ಈ ಪರಿಯಲ್ಲಿ ನಡೆದಿದ್ದು ಇದೇ ಮೊದಲು.

ನಮ್ಮ ಸಂವಿಧಾನದ ಆಶಯಗಳು ಈಗ ಬರಿಯ ಗ್ರಂಥಕ್ಕೆ ಸೀಮಿತಗೊಂಡಿವೆ. ಜಾತ್ಯತೀತ ಸ್ವರೂಪದ ನಮ್ಮ ದೇಶದ ಉನ್ನತ ಕಾನೂನಿನ ಉಲ್ಲಂಘನೆ ನಿರಂತರ ನಡೆಯುತ್ತಿದೆ. ಪ್ರಜಾಸತ್ತಾತ್ಮಕ ಕ್ರಮಗಳಲ್ಲೇ ಆಯ್ಕೆಗೊಂಡು ಸರ್ಕಾರ ರಚಿಸುವ ರಾಜಕೀಯ ಪಕ್ಷದ ನಾಯಕರಿಗೆ ಕನಿಷ್ಠ ಸಂವಿಧಾನದ ಜಾತ್ಯತೀತ ನಿಲುವಿನ ಕರ್ತವ್ಯಗಳು ನೆನಪಿರಬೇಕು. ಮುಖ್ಯಮಂತ್ರಿ ಅಥವಾ ಮಂತ್ರಿ ಪದವಿ ಹೊಂದಿದವರು ತಾವು ಮಾಡುವ ಬಹಿರಂಗ ನಡಾವಳಿಗಳು ಹೇಗಿರಬೇಕು ಎನ್ನುವುದು ಅವರಿಗೇ ಸ್ಪಷ್ಟವಾಗಿರಬೇಕು. ಜಾತ್ಯತೀತ ನಿಲುವಿನ ಅಧಿಕಾರ ಧರ್ಮನಿರಪೇಕ್ಷ ಆಗಿರಲೇಬೇಕು. ವೈಯಕ್ತಿಕವಾಗಿ ಅವರು ಯಾವ ಧರ್ಮ ಅಥವಾ ನಂಬಿಕೆಗಳಿಗೆ ಒಳಪಡಲಿ ಅದು ಮುಖ್ಯವಾಗೋದಿಲ್ಲ. ಆದರೆ ಅಧಿಕಾರದಲ್ಲಿದ್ದುಕೊಂಡು ಸರ್ಕಾರದ ಜವಾಬ್ದಾರಿಯುತ ಪ್ರತಿನಿಧಿಯಾಗಿ ಕಂಡ ಕಂಡ ದೇವಸ್ಥಾನಗಳು, ಚರ್ಚ್, ದರ್ಗಾಕ್ಕೆ ಭೇಟಿ ಕೊಡುವುದು, ಧಾರ್ಮಿಕ ನಾಯಕರುಗಳ, ಪೂಜ್ಯರ ಕಾಲಿಗೆರಗುವುದು ಯಾವ ಪ್ರಜಾಸತ್ತಾತ್ಮಕ ನಡಾವಳಿ? ಅದಾವ ಜಾತ್ಯತೀತ ನಿಲುವು...?

ಈ ಸಮಾಜದ ಧಾರ್ಮಿಕ ನಾಯಕರ ಸೇವಾ ಕ್ಷೇತ್ರವೇ ಬೇರೆ. ಧಾರ್ಮಿಕ ಬದುಕಿನ ಸುಧಾರಣೆಗೆ ಹೆಚ್ಚು ಒತ್ತು ಕೊಟ್ಟು ಕೆಲಸ ಮಾಡಬೇಕಾದ್ದೇ ಅವರ ನಿಜಧರ್ಮ. ಆದರೆ, ಅವರು ಸರ್ಕಾರದ ರಚನೆಯಲ್ಲಿ, ಮತ್ತು ಅದನ್ನು ಉರುಳಿಸುವಲ್ಲಿ ಪರೋಕ್ಷ ಯತ್ನ ನಡೆಸುವಂಥ ಮಟ್ಟಕೆ ಬರಬಾರದು. ಹಾಗೆ ಯತ್ನಿಸಿದರೆ ಅದೇ ಅಧರ್ಮ.

ರಾಜಕೀಯದ್ದೂ ಒಂದು ಧರ್ಮವಿದೆ. ಅದು ಜನಪರ ಅಭಿವೃದ್ಧಿ. ಮಾನವೀಯ ಬದುಕನ್ನು ಮತ್ತಷ್ಟು ಎತ್ತರಕ್ಕೆ ಏರಿಸುವುದು ಮತ್ತು ಜನಗಳ ಆರ್ಥಿಕ, ಸಾಮಾಜಿಕ ಬದುಕನ್ನು ಮತ್ತಷ್ಟು ಉತ್ತಮಗೊಳಿಸಲು ಕಾರ್ಯಕ್ರಮಗಳನ್ನು ರೂಪಿಸುವುದು. ಆಡಳಿತ ಯಂತ್ರದ ಮೂಲಕ ಅದನ್ನು ಕಾರ್ಯಗತಗೊಳಿಸುವುದು. ಯಾವುದೇ ಸೆಕ್ಟ್, ಜಾತಿ, ಧರ್ಮ ಭಾಷೆ ಮತ್ತು ಪ್ರಾಂತಗಳ ಮರ್ಜಿ ಕಾಯದೇ ಸಮಾನತೆಯ ಮನೋಧರ್ಮದಡಿ ಜನತೆಗೆ ಯೋಜನೆಗಳನ್ನು ಮುಟ್ಟಿಸುವುದೇ ನಿಜಧರ್ಮ ಅಲ್ಲವೇ?

ಒಬ್ಬ ಅಧಿಕಾರದಲ್ಲಿರುವುವನಿಗೆ ನಾಡಿನ ಪ್ರಜೆಗಳೆಲ್ಲ ಸಮಾನರು. ಅವರೆಲ್ಲರ ವೈವಿಧ್ಯಮಯ ಬದುಕು, ಸಂಸ್ಕೃತಿಗಳನ್ನು ಮತ್ತು ನಂಬಿಕೆಗಳನ್ನು ಸಮಾನಾಂತರದಿಂದ ಕಾಣಬೇಕಾಗುತ್ತದೆ. ಸಂವಿಧಾನದಲ್ಲಿ ಇರದ ವಿಷಯಗಳನ್ನು ಕಾರ್ಯರೂಪದಲ್ಲಿ ತರೋದು ಸಂವಿಧಾನಕ್ಕೆ ಬಗೆಯುವ ದ್ರೋಹವೇ ಆಗುತ್ತದೆ. ಸರ್ಕಾರದ ಮುಖ್ಯಸ್ಥರಾದವರು ಮಠಗಳಿಗೆ, ಸಾಧು ಸನ್ಯಾಸಿಗಳಿಗೆ, ದರ್ಗಾ, ಚರ್ಚ್ ಮುಖ್ಯಸ್ಥರಿಗೆ ತಲೆಬಾಗಿ ನಮಸ್ಕರಿಸಬೇಕು, ಅವರಿಗೆ ವಿಧೇಯರಾಗಿರಬೇಕು ಎಂದು ಎಲ್ಲಾದರೂ ಬರೆದಿದೆಯೇ_ ಹಾಗೆ ಮಾಡುವ ಮೂಲಕವೇ ವಿಧೇಯತೆಯನ್ನು ಪ್ರದರ್ಶಿಸುವ ಕಸರತ್ತಾದರೂ ಏಕೆ? ಸರ್ಕಾರದ ಮುಖ್ಯಸ್ಥನ ಹುದ್ದೆಯೂ ಪವಿತ್ರವೇ. ಸರ್ಕಾರದ ಕೆಲಸ ದೇವರ ಕೆಲಸ ಎನ್ನುವುದು ನಮ್ಮ ಮನೋಧರ್ಮವಲ್ಲವೇ?

ಸಾಮಾನ್ಯವಾಗಿ ನಮ್ಮ ನಾಯಕರು ಕಂಡ ಕಂಡ ದೇವಸ್ಥಾನಗಳು, ಚರ್ಚ್, ದರ್ಗಾ ಮತ್ತಿತರ ತಾಣಗಳಿಗೆ ಭೇಟಿ ಕೊಡುತ್ತಾರೆ. ಅಧಿಕೃತ ಭೇಟಿಯೂ ಆಗುವುದಿದೆ. ಹಲವಾರು ಧಾರ್ಮಿಕ ಆಚರಣೆಗಳಲ್ಲಿ ನೇರವಾಗಿ ಪಾಲ್ಗೊಳ್ಳುವುದೂ ಇದೆ. ದಸರಾದಂಥ ಆಚರಣೆಗಳಲ್ಲಿ ನಾಡಹಬ್ಬದ ಹೆಸರಲ್ಲಿ ಇಡೀ ಸರ್ಕಾರ ಪಾಲ್ಗೊಳ್ಳುವುದು ಅದು ಹೇಗೆ ಜಾತ್ಯತೀತ ಮನೋಧರ್ಮದ ಪ್ರತೀಕವಾಗುತ್ತದೆ? ಹಾಗಿದ್ದರೆ ಬೆಂಗಳೂರಿನಲ್ಲಿ ನಡೆಯುವ ಮೇರಿಯಮ್ಮ ಜಾತ್ರೆ ಮತ್ತು ಗುಲ್ಬರ್ಗದಲ್ಲಿ ನಡೆಯುವ ಖ್ವಾಜಾ ಬಂದೇನವಾಜ್ ಉರುಸು ಯಾಕೆ ನಾಡಹಬ್ಬದಂಥ ಆಚರಣೆಗಳಾಗೋದಿಲ್ಲ ?... ಅವುಗಳಲ್ಲೇಕೆ ಸರ್ಕಾರ ನೇರವಾಗಿ ಪಾಲ್ಗೊಳ್ಳುವುದಿಲ್ಲ?... ಅದರ ನಂಬಿಕೆಗಳಲ್ಲಿರುವ ಪ್ರಜೆಗಳು ಸರ್ಕಾರಕ್ಕೆ ಹೊರಗಿನವರಾಗುತ್ತಾರೇನು?... ಇದಾವ ಧರ್ಮನಿರಪೇಕ್ಷ ತತ್ವ ಸರ್ಕಾರಗಳದ್ದು... ?

ನಮ್ಮ ಬಹುತೇಕ ಸರ್ಕಾರಿ ಕಚೇರಿಗಳಲ್ಲಿ ಲಕ್ಷ್ಮೀ, ಸರಸ್ವತಿ ಭಾವಚಿತ್ರಗಳು ರಾರಾಜಿಸುತ್ತವೆ. ಆಯಾ ಸಂದರ್ಭಗಳಲ್ಲಿ ಅವುಗಳ ಪೂಜೆ ಅಧೀಕೃತವಾಗೇ ನಡೆಯುತ್ತದೆ. ರಾಮನವಮಿ, ಬಲಿಪಾಡ್ಯಮಿ, ಗಣೇಶ ಹಬ್ಬ ಮತ್ತಿತರ ಸಂದರ್ಭಗಳಲ್ಲಿ ಸರ್ಕಾರಿ ಕಚೇರಿಗಳ ಆವರಣದಲ್ಲಿ ನೌಕರರಿಗೆ ಅಂಥ ಆಚರಣೆಗಳಿಗೆ ಅವಕಾಶ ನೀಡಲಾಗುತ್ತದೆ. ಅದೇ ಮುಸ್ಲೀಮರಿಗೆ ರಂಜಾನ್, ಕ್ರೈಸ್ತರಿಗೆ ಕ್ರಿಸ್ ಮಸ್ ಬಹಿರಂಗವಾಗೇ ಕಚೇರಿಗಳ ಆವರಣದಲ್ಲಿ ಆಚರಿಸೋದಕ್ಕೆ ಅವಕಾಶವಿದೆಯೇ...?

ಸರ್ಕಾರಿ ಶಾಲೆಗಳಲ್ಲಿ ಸರಸ್ವತಿ ಪೂಜೆ, ಗಣೇಶ ಪೂಜೆ(ಮೊದಲು ಇದು ಉತ್ತರ ಕರ್ನಾಟಕದಲ್ಲಂತೂ ಅತಿಯಾಗಿತ್ತು), ಪಂಚಾಂಗ ಪಠಣ ಅದರಲ್ಲೂ ಹಿಂದೂ ಕ್ಯಾಲೆಂಡರ್ ಬಳಸುವ ಶುಕ್ಲ ಪಕ್ಷ, ಕೃಷ್ಣ ಪಕ್ಷ ಎಂದೆಲ್ಲ ಹೇಳುವುದು ಇದೆ. ಇದಕ್ಕೆಲ್ಲ ಅದು ಹೇಗೆ ಅವಕಾಶ ಮಾಡಿಕೊಡಲಾಗುತ್ತದೆ...?

ಶಾಲೆ, ಕಾಲೇಜುಗಳಲ್ಲಿ ಹಿಂದೂ ಗಳು ಹಣೆಗೆ ತಿಲಕ, ಕುಂಕುಮ, ನಾಮ, ವಿಭೂತಿ ಬಳಿದುಕೊಂಡು ಬರಬಹುದು. ಆದರೆ, ಮುಸ್ಲಿಂ ಹುಡುಗಿಯೊಬ್ಬಳು ತನ್ನ ಧರ್ಮದ ಬುರ್ಖಾ ಹಾಕಿಕೊಳ್ಳುವುದು ಹೆಚ್ಚು ಕೆಂಗಣ್ಣಿಗೆ ಗುರಿಯಾಗುತ್ತದೆ... ! ಇದನ್ನು ತಡೆಯಲೆಂದೇ ಡ್ರೆಸ್ ಕೋಡ್ ಎನ್ನುವ ಕಡಿವಾಣ ಜಾರಿಗೊಳ್ಳುತ್ತದೆ! ಎಲ್ಕೆಜಿ ಯುಕೆಜಿ ಗಳಲ್ಲಿ ಪುಟಾಣಿ ಮಕ್ಕಳಿಗೆ ಅವರು ಯಾವ ಧರ್ಮಕ್ಕಾದರೂ ಸೇರಿರಲಿ ಅವರಿಗೆ ಸಂಸ್ಕೃತ ಶ್ಲೋಕಗಳು, ಬಸವಣ್ಣನವರ ವಚನಗಳು ಮತ್ತು ತಾಯಿ ಶಾರದೆ ಸ್ತುತಿಸುವ ಹಾಡುಗಳನ್ನು ಕಲಿಸಲಾಗುತ್ತದೆ. ಬೈಬಲ್ಲಿನ ಶ್ಲೋಕ, ಕುರಾನ್ ಉಕ್ತಿಗಳನ್ನೂ ಕಲಿಸಬಹುದಿತ್ತಲ್ಲ?

ಜಾತ್ಯತೀತ ಸಂವಿಧಾನ ಅದರಲ್ಲೂ ಎಲ್ಲವೂ ಲಿಖಿತ ಡಾಕ್ಯುಮೆಂಟ್ ಇಟ್ಟುಕೊಂಡು ಮತ್ತು ಅದನ್ನು ಪಾಲಿಸುವುದಕ್ಕೆ ಕಾನೂನುಗಳನ್ನಿಟ್ಟುಕೊಂಡು ನಮ್ಮ ದೇಶದಲ್ಲಿ ಈಗಲೂ ಜಾತೀಯ ತಾರತಮ್ಯ, ಧರ್ಮದ ಆಧಾರದಲ್ಲಿ ತಾರತಮ್ಯ ನಡೆಯುತ್ತಿದೆ! ಪ್ರಜ್ಞಾವಂತರಾದ ನಾವೇ ಸಣ್ಣ ಲಾಭಗಳಿಗಾಗಿ ಇದನ್ನೆಲ್ಲ ಸಹಿಸಿಕೊಳ್ಳುತ್ತೇವೆ. ಮೌನಸಮ್ಮತಿ ಸೂಚಿಸುತ್ತೇವೆ. ಎಂಥ ನಾಮರ್ದಗಿರಿ!

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮನುಷ್ಯ ಜಾತಿ ತಾನೊಂದೇ ವಲಂ...

ಭಾರತದಲ್ಲಿ ಜಾತಿ ವ್ಯವಸ್ಥೆ ಹೇಗೆ ಹುಟ್ಟಿತು ಎಂಬುದಕ್ಕೆ ಯಾವುದೇ ನಿರ್ಧಿಷ್ಟ ಥಿಯರಿ ಇಲ್ಲ. ಆದರೆ, ಇಲ್ಲಿನ ವರ್ಗ ಸೃಷ್ಟಿ ಮಾತ್ರ ಇರಾನ್ ವ್ಯವಸ್ಥೆಯಂತೇ ಇದೆ.  ಪುರಾತನ ಇರಾನಿನ ಚರಿತ್ರೆಯಲ್ಲಿ ಇಂಥದೊಂದು ವ್ಯವಸ್ಥೆ ಇತ್ತು. ಅದಕ್ಕೆ ಪಿಸ್ತ್ರಾಸ್ ಎನ್ನುತ್ತಾರೆ. ನಮ್ಮಲ್ಲಿ ಅದು ಚಾತುರ್ವರ್ಣವಾಗಿದೆ. ಅಲ್ಲಿ ಅಥ್ರವಾನ್ಸ್ (ಪ್ರೀಸ್ಟ್ ಕ್ಲಾಸ್), ರಥೈಸ್ತಾ (ವಾರಿಯರ್ಸ್), ವಸ್ತ್ರಿಯಾ (ಮರ್ಕಂಟೈಲ್ ಕ್ಲಾಸ್) ಮತ್ತು ಹ್ಯುತಿ (ಆರ್ಟಿಸನ್) ಎನ್ನುವ ವರ್ಗ ವ್ಯವಸ್ಥೆ ಇದೆ. ನಮ್ಮಲ್ಲಿ ಇದನ್ನು ಕಲ್ಪಿಸಿಕೊಂಡರೆ ಪುರೋಹಿತ ಅಥವಾ ಬ್ರಾಹ್ಮಣ (ಅಥ್ರವಾನ್ಸ್), ಕ್ಷತ್ರಿಯ  (ರಥೈಸ್ತಾ), ವೈಶ್ಯ  (ವಸ್ತ್ರಿಯಾ) ಮತ್ತು ಶೂದ್ರ (ಹ್ಯುತಿ) ಎಂದು ಅರ್ಥೈಸಿಕೊಳ್ಳಬಹುದು.  ಆದಿ ಕಾಲದ ಇರಾನಿಯನ್ ವ್ಯವಸ್ಥೆ ಹೀಗೇ ಇತ್ತು. ಅದೇ ನಾಲ್ಕು ವರ್ಗಗಳು ಭಾರತದಲ್ಲೂ ಈಗಲೂ ಚಾಲ್ತಿಯಲ್ಲಿವೆ. ಹೀಗೆ ಒಂದು ಇರಾನ್ ಸಂಬಂಧ ಭಾರತಕ್ಕಿದೆ. ಚರ್ಮದ ಬಣ್ಣ, ನಯ ನಾಜೂಕು, ಕಣ್ಣು, ಬುದ್ಧಿವಂತಿಕೆಯನ್ನು ಹೋಲಿಸಿದರೆ ಭಾರತದ ಅದರಲ್ಲೂ ಉತ್ತರ ಭಾರತದ ಕಾಶ್ಮೀರಿ ಪಂಡಿತರು, ಉತ್ತರ ಪ್ರದೇಶದ ಪಂಡಿತ್, ಚಿತ್ಪಾವನ ಬ್ರಾಹ್ಮಣರು, ನಮ್ಮ ಕರಾವಳಿ ಮತ್ತು ಉತ್ತರ ಕನ್ನಡದ ಹವ್ಯಕರು ಹೆಚ್ಚೂ ಕಮ್ಮಿ ಇರಾನಿಗಳನ್ನು ಹೋಲುತ್ತಾರೆ (ಮೇಲ್ನೋಟಕ್ಕೆ).  ಬಹುಶಃ ಹೀಗೂ ಆಗಿರಬಹುದು, ಆಗ ಇರಾನ್ ನಲ್ಲಿ ಕ್ರೈಸ್ತ ಮತ್ತು ಇಸ್ಲಾಂ ಮುಂಚೆಯೂ ಹಲವಾರು ಸುಧಾರಣಾವಾದಿಗಳ ಅಥವಾ ಬಂಡುಕೋರರ

"ಮಣೆಗಾರ" ಬಸಿದಿಟ್ಟ ಒಡಲಾಳದ ನೋವು ನೆನೆದು...

ಹಾಲ್ಕುರಿಕೆ ಥಿಯೇಟರ್ ಕಾನ್ಸೆಪ್ಟ್ ಕನ್ನಡ ರಂಗಭೂಮಿಯಲ್ಲಿ ಹೊಸದೊಂದು ಸಂಚಲನವನ್ನುಂಟು ಮಾಡುತ್ತಿದೆ. ಒಟ್ಟಾರೆ ಭಾರತೀಯ ರಂಗಭೂಮಿ ಕಾಣುತ್ತಿರುವ ಹೊಸತನಕ್ಕೆ ಇದು ಮುಖ್ಯವಾದ ಸಾಕ್ಷಿ. ಅತ್ಯಂತ ಕ್ರಿಯಾಶೀಲ ತುಡಿತದ ರಂಗಕರ್ಮಿ ಹಾಲ್ಕುರಿಕೆ ಶಿವಶಂಕರ (ನಿರ್ದೇಶಕ/ನಾಟಕಕಾರ) ಇತ್ತೀಚೆಗೆ "ಮಣೆಗಾರ" (ತುಂಬಾಡಿ ರಾಮಯ್ಯನವರ ಆತ್ಮಕಥೆ) ಎನ್ನುವ ದಲಿತ ಕಥಾನಕವೊಂದನ್ನು ರಂಗದ ಮೇಲೆ ಅನಾವರಣಗೊಳಿಸಿದರು. ಪ್ರಯೋಗದ ದೃಷ್ಟಿಯಿಂದ ಕೆಲವು ಕೊರತೆಗಳು, ದೋಷಗಳು ಇವೆ. ಅದು ಯಾವುದೇ ಪ್ರಯೋಗಕ್ಕೆ ಇರುವಂಥವೇ. ಆದರೆ ಸಮುದಾಯವೊಂದರ ಒಡಲಾಳದ ನೋವನ್ನು ರಂಗದ ಮೇಲೆ ಬಸಿದಿಟ್ಟಾಗ  ಬೆಚ್ಚಿ ಬೀಳುವಂತಾಯಿತು. ವಿಶೇಷವಾಗಿ ದಲಿತೇತರಲ್ಲಿ ಸಾಮಾಜಿಕ ಪ್ರಜ್ಞೆ, ಜವಾಬ್ದಾರಿಯನ್ನು ಬಡಿದೆಬ್ಬಿಸುವಂಥ ಕಥಾನಕವದು. "ಮಣೆಗಾರ" ಪ್ರೊಸಿನಿಯಂಗಿಂತ ಆಪ್ತರಂಗಭೂಮಿಗೆ ಸೂಕ್ತವಾದ ವಸ್ತು. ಪ್ರಯೋಗ ಒಟ್ಟಾರೆ ಮನುಷ್ಯ ಬದುಕಿನ ನಡುವಿರುವ ಗ್ರೇ ಏರಿಯಾವೊಂದರ ದರುಶನ ಮಾಡಿಸಿತು. ಮೇಲ್ವರ್ಗ ಸಹಮಾನವರನ್ನು ಅದು ಹೇಗೆ ಅಸ್ಪೃಶ್ಯರು ಎಂದು ದೂರಕ್ಕಿಟ್ಟಿತ್ತು, ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿತ್ತು ಎನ್ನುವುದು ಇದರ ಮೂಲ ಸಂಕಟ. ಇಡೀ ನಾಟಕದಲ್ಲಿ ಬದುಕಿಗಾಗೇ ಸಂಘರ್ಷವಿದೆ. ಆಹಾರಕ್ಕಾಗಿ ಹಾಹಾಕಾರವಿದೆ. socio-cultural  ನೆಲೆಯಲ್ಲಿ ದೊಡ್ಡ ಸಂಘರ್ಷವಿದೆ. ಇದು ರಾಜಕೀಯ ಆಯಾಮದಲ್ಲೂ ಬಹುಮುಖ್ಯವಾದ ಸಂಘರ್ಷವೇ. ಶಿಕ್ಷಣ ಮತ್ತು ಅದರ ಆಧಾರದಲ್ಲಿ ಹುಟ

"ಬದುಕು-ಬಯಲು" ನಾಟಕ ಮತ್ತು ಮಾನವೀಯ ನೆಲೆಯ ಹುಡುಕಾಟ

ಫ್ರಾನ್ಸ್ ನ ಬರಹಗಾರ ಅಲ್ಫ್ರೆಡ್ ಜೆರಿ ಬರೆದ 'ದಿ ಸೂಪರ್ ಮೇಲ್' ಎನ್ನುವ ಕಾದಂಬರಿಯ ಪ್ರೊಟಗಾನಿಸ್ಟ್ ಆ್ಯಂಡ್ರಿ ಮಾರ್ಕೆಲ್ ಒಬ್ಬ ಜಂಟಲ್ ಮನ್, ವಿಜ್ಞಾನಿ ಕೂಡ. ಅವನಿಗೆ ಮಾನವ ಸಾಮರ್ಥ್ಯಕ್ಕೆ ಮಿತಿ ಎಂಬುದೇ ಇಲ್ಲ ಎನ್ನುವುದರಲ್ಲಿ ಬಲವಾದ ನಂಬಿಕೆ. ಆತ ಉಗಿಬಂಡಿ ಜತೆಗೂ ಯಾವುದೇ ವಿಶ್ರಾಂತಿ ಮತ್ತು ತ್ರಾಸಿಲ್ಲದೇ ಕ್ರಮಿಸಿ  ರೇಸ್ ಗೆಲ್ಲಬಲ್ಲ (ಕಾದಂಬರಿಯಲ್ಲಿ ರೈಲು ಮತ್ತು ಸೈಕ್ಲಿಸ್ಟ್ ನಡುವೆ ಒಂದು ರೇಸ್ ನಡೆಯುತ್ತದೆ). ಒಂದೇ ಹೆಂಗಸಿನ ಜತೆ 24 ಗಂಟೆಗಳಲ್ಲಿ 82 ಬಾರಿ ಸಂಭೋಗ ನಡೆಸಬಲ್ಲ 'ಕಾಮಪಟುತ್ವ'ದ ಸಾಹಸಗಳನ್ನೂ ಮಾಡಬಲ್ಲ. ಇದನ್ನು ಪುರುಷಪರಾಕ್ರಮದ ನೆಲೆಯಲ್ಲಿ ನೋಡೋದಾ? ಇಲ್ಲಾ ನಿಸರ್ಗ ಸಹಜ ಸಾಧ್ಯತೆಯ ನೆಲೆಯಲ್ಲಿ ನೋಡುವುದಾ?... - ಇದು ಒಂದು ರೀತಿಯ ವಿಕ್ಷಿಪ್ತ ಮನೋಧರ್ಮದ, ಸೈನ್ಸ್ ಫಿಕ್ಷನ್ ಕಾದಂಬರಿಯ ಸಂಕ್ಷಿಪ್ತ ನೋಟ. ಅಲ್ಫ್ರೆಡ್ ಜೆರಿ ಉತ್ತಮ ನಾಟಕಕಾರನೂ ಹೌದು. ಆತನ 'ಉಬು ರೊಯ್' ಹೆಸರಾಂತ ನಾಟಕಗಳಲ್ಲೊಂದು.    * * * ಜೆರಿ ಬಗ್ಗೆ ಓದುತ್ತಿದ್ದ ಹೊತ್ತಲ್ಲಿ ಹಿಜಡಾವೊಬ್ಬರ ಆತ್ಮಕಥನ ಆಧರಿಸಿದ "ಬದುಕು-ಬಯಲು" ಎನ್ನುವ ನಾಟಕ ವೀಕ್ಷಣೆಗೆ ತಿಪಟೂರಿನ ರಂಗ ಗೆಳೆಯ ನೀನಾಸಂ ಚಂದ್ರು ಆಹ್ವಾನ ನೀಡಿದರು.  ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ ನೋಡಿದೆ. ಅದಕ್ಕೂ ಮುಂಚೆ ನಾಟಕದ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಸಿ.ಎಸ್. ದ್ವಾರಕಾನಾಥ್, ಗೌರಿ ಲಂಕೇಶ್ ಮತ್ತಿತರ ಚಿಂತಕರ ವಿ