ವಿಷಯಕ್ಕೆ ಹೋಗಿ

ಭಾರತೀಯ ರಂಗಭೂಮಿಯ ವಿಭಿನ್ನ ರಂಗಸಾಹಸಿ ಹುಸೇನ್

ರಾಮಾಯಣ ವಿಶ್ವದ ಒಂದು ದೊಡ್ಡ ಕಥೆ . ಅಂಥ ಕಥೆಯನ್ನು ರಂಗದ ಮೇಲೆ ಭವ್ಯವಾಗಿ ಹೇಳುವುದು ಒಂದು ರಂಗಸಾಹಸ. ನಾಟಕ ಎಂದರೆ ಕಥೆಯನ್ನೇ ಹೇಳಬೇಕಿಲ್ಲ. ಯಥಾವತ್ ಆಗಿ ಕಥೆಯನ್ನು ರಂಗದ ಮೇಲಿಡುವುದೂ ಅಲ್ಲ. ಒಂದು ವಸ್ತು ಪ್ರತಿ ಸಾರಿ ರಂಗದ ಮೇಲೆ ಬಂದಾಗ ಅದು ಹೊಸದೇ ಆಗಬೇಕು. ಹಾಗೆ ಹೊಸದಾಗಿಸುವುದಕ್ಕೆ ರಂಗಭೂಮಿಗೆ ಸಾಧ್ಯವಿದೆ. ಮತ್ತೆ ಇಡೀ ಇತಿಹಾಸ, ಪುರಾಣ ಅಥವಾ ಕಾದಂಬರಿಯ ಕಥೆಯನ್ನು ಅದರ ಪರಿಸರ ಸಮೇತ ಮರುಸೃಷ್ಟಿ ಮಾಡೋದು ಕೂಡ ಒಂದು ದೊಡ್ಡ ಸಾಹಸ. ಒಟ್ಟಿನಲ್ಲಿ ವಿಭಿನ್ನ ರಂಗಾನುಭವ ನೀಡುವ ಯತ್ನ ಪ್ರಶಂಸೆಗೆ ಪಾತ್ರವಾಗುತ್ತದೆ.

'ದಿ ಲೆಜೆಂಡ್ ಆಫ್ ರಾಮ'

ಟಿವಿಯಲ್ಲಿ ರಾಮಾಯಣ ಕಥಾಮಂಜರಿ ಪುಸ್ತಕಗಳಲ್ಲಿ ಬರುತ್ತಿದ್ದ ರಾಮಾಯಣ ಕಥಾನಕದ ಯಥಾವತ್ ಸೃಷ್ಟಿಯಂತೇ ಕಾಣಿಸಿತು. ಚಿಕ್ಕಂದಿನಿಂದ ಕಂಡ ಪ್ರಿಂಟೆಡ್ ರಾಮನ ಚಿತ್ರವೇ ಪರದೆ ಮೇಲೆ ಮಾತಾಡುತ್ತಿದೆ ಎನಿಸಿತು. ರಾಮಾಯಣ ಚಿತ್ರಗಳಲ್ಲಿ ಜೀವಂತವಾಗಿ ಇದ್ದಂತೆ ತೆರೆಯ ಮೇಲೆ ಇರಲಿಲ್ಲ. ಪ್ರಿಂಟೆಡ್ ಚಿತ್ರಣದ ತಾಜಾತನ ತೆರೆಯ ಮೇಲಿನ ದೃಶ್ಯಗಳಲ್ಲಿ ಕಾಣೆಯಾಗಿತ್ತು. ಆದರೂ ಜನ ಅದನ್ನು ಸಾಕ್ಷಾತ್ ಶ್ರೀರಾಮಚಂದ್ರನ ದರುಶನದಂತೇ ಭಾವಿಸಿದರು. ಭ್ರಮಿಸಿದರು. ಪೂಜಿಸಿದರು. ಮುದೇನೂರು ಸಂಗಣ್ಣ ಅವರ 'ಚಿತ್ರಪಟ' ನಾಟಕದಂಥ ರಾಮಾಯಣದ ವಿಭಿನ್ನ ನೋಟವಾಗಿ ರಮಾನಂದ ಸಾಗರ್ ಅವರ ರಾಮಾಯಣ ಡಿಡಿಯಲ್ಲಿ ಕಾಣಿಸಲಿಲ್ಲ. ಯಥಾವತ್ ಚಿತ್ರಣದ ಉದ್ದೇಶವಾಗಿದ್ದರಿಂದ ಅದು ಸಾಧ್ಯವೂ ಇರಲಿಲ್ಲ. ಆದರೆ, ಅದೊಂದು ಚಿತ್ರಸಹಿತ ಪುರಾಣ, ಪ್ರವಚನದಂತೆ ಅನಿಸಿದ್ದು ಅದರ ದೊಡ್ಡ ಮಿತಿ. ಡ್ರಾಮ್ಯಾಟಿಕ್ ಎಲಿಮೆಂಟ್ಸ್ ರಿಚ್ ಆಗಿದ್ದ ಕಾರಣದಿಂದ ಹೆಚ್ಚು ಕಸರತ್ತಿನ ಅಗತ್ಯವೂ ದೃಶ್ಯ ಸಂಯೋಜನೆಗೆ ಬೇಕಾಗಲಿಲ್ಲ. ಕ್ಯಾಮೆರಾ ಮತ್ತಿತರ ತಂತ್ರಜ್ಞಾನದ ಯಥೇಚ್ಚ ನೆರವೂ ಇತ್ತು. ಹೀಗಾಗಿ ರಮಾನಂದ ಸಾಗರ್ ಕೆಲಸ ಸುಲಭವಿತ್ತು. ತಂತ್ರಜ್ಞಾನದ ಚಮತ್ಕಾರಕ್ಕೆ ಎಲ್ಲವೂ ದಕ್ಕಿಬಿಟ್ಟಿತ್ತು. ಆದರೆ ಅದೇ ಕಥೆ ರಂಗದ ಮೇಲೆ ತರಬೇಕಾದರೆ ದೃಶ್ಯದಲ್ಲಿ ಭವ್ಯತೆ ತರೋದು ತುಸು ತ್ರಾಸಿನ ಕೆಲಸವೇ.
ಇಂಥೆಲ್ಲ ಯೋಚನೆಗಳ ತಾಕಲಾಟದಿಂದ ರಂಗದ ಮೇಲೊಂದು ಭವ್ಯ ರಾಮಾಯಣ ಮೂಡಿಸುವ ಉಮೇದಿ ಹೊತ್ತ ದೆಹಲಿಯ ರಂಗಕರ್ಮಿಯೊಬ್ಬರು 'ದಿ ಲೆಜೆಂಡ್ ಆಫ್ ರಾಮ' ಪ್ರಯೋಗದ ಸಾಹಸಕ್ಕಿಳಿದರು. ಅದಕ್ಕೆ ಅವರು ಆಯ್ದುಕೊಂಡಿದ್ದು ಪ್ರೊಸೀನಿಯಂ ಥಿಯೇಟರ್ ಒಂದನ್ನಲ್ಲ. ಮೂರು ಎಕರೆ ಭೂಮಿಯನ್ನೇ ರಾಮಾಯಣದ ಬ್ಯಾಟಲ್ ಫೀಲ್ಡ್ ಆಗಿ ಮರುಸೃಷ್ಟಿ ಮಾಡುವ ಸಾಹಸಕ್ಕಿಳಿದರು. ಒಂದು ಬೃಹತ್ ಕಥಾಹಂದರವನ್ನು 19 ಸೆಟ್ ನಿರ್ಮಿಸಿ, 35 ಕ್ಯಾರೆಕ್ಟರುಗಳ ಮೂಲಕ ಕಟ್ಟಿಕೊಡುವ ಯತ್ನ ಮಾಡಿದರು. ಅದಕ್ಕೆ ಕನಿಷ್ಠ 100 ಮಂದಿ ರಂಗತಂತ್ರಜ್ಞರು ತಮ್ಮ ಸೃಜನಶೀಲತೆಯನ್ನು ಧಾರೆ ಎರೆದರು. ಅದರ ನೆರವಿನಿಂದಲೇ ಇಡೀ ಭಾರತ ಮತ್ತು ವಿಶ್ವವೇ ಹುಬ್ಬೇರಿಸುವಂಥ ಪ್ರಯೋಗ ನಡೆದೇ ಹೋಯಿತು. ಈ ಪ್ರಯೋಗ ಸಾಕಾರಗೊಂಡು ವರ್ಷಗಳೇ ಸಂದಿವೆ.

ಇದೇ ರಾಮನನ್ನು ರೈಲ್ವೆ ಟ್ರ್ಯಾಕ್ ಮೇಲೆ ತರುವ ಸಾಹಸವೂ ನಡೆಯಿತು. ವಿವಿಧ ಸೆಟ್ ಗಳು ರೈಲು ಹಳಿಗಳ ಮೇಲೆ ಚಲಿಸಿದವು. ಪ್ರೇಕ್ಷಕರು ದೃಶ್ಯದಿಂದ ದೃಶ್ಯಕ್ಕೆ ಫಿಜಿಕಲ್ ಆಗಿ ಶಿಫ್ಟ್ ಆಗುತ್ತಿದ್ದರು. ಆಸನದ ವ್ಯವಸ್ಥೆಯೂ ರೈಲುಗಳ ಹಳಿ ಮೇಲಿತ್ತು. ಇಂಥದೊಂದು ಸಾಹಸಕ್ಕೆ ಕೆಲ ಕೋಟಿ ರೂಪಾಯಿಗಳು ಖರ್ಚಾಗಿತ್ತು.

'ಷಹನಷಾನಾಮಾ'

ಇದೇ ರಂಗಕರ್ಮಿ ಮತ್ತೊಂದು ವಸ್ತುವನ್ನು ಎತ್ತಿಕೊಂಡರು. ಅದು ಭಾರತದ ಬಹುಮುಖ್ಯವಾದ ಇತಿಹಾಸ. 'ಷಹನಷಾನಾಮಾ' ಎನ್ನುವ ಮೊಘಲ್ ಸಾಮ್ರಾಜ್ಯದ ವೈಭವ, ದುರಂತ ಮತ್ತು ರಾಜಕೀಯ ಹೇಳುವ ನಾಟಕವದು. ಇಡೀ ಮೊಘಲ್ ಕಾಲದ ವಾತಾವರಣದ ಮರುಸೃಷ್ಟಿಯ ಕಠಿಣ ಸಾಹಸ ಅದಾಗಿತ್ತು. ಕೋಟೆ ಎಂದರೆ ಕೋಟೆಯೇ, ಸಿಂಹಾಸನವೆಂದರೆ ಆ ಕಾಲದ ಸಿಂಹಾಸನವೇ. ... ಎಲ್ಲ ಅದದೇ ಆಗಿ ಕಾಣಿಸುವ ದೊಡ್ಡ ಸಾಹಸ! ಒಂದು ನಾಟಕ ಯಾವುದೋ ಕಟ್ಟಡದ ಸೀಮಿತ ಜಾಗೆಯಲ್ಲಿ ಸಿಕ್ಕು ಸಾಂಕೇತಿಕವಾಗುವುದಕ್ಕಿಂತ ಹೀಗೆ ತಾನೇ ತಾನಾಗಿ ಒಂದುಕಡೆ ಮರುಸೃಷ್ಟಿಯಾಗಿ ಬಿಡೋದು ಈ ಥರದ ರಂಗಸಾಹಸದ ವೈಶಿಷ್ಠ್ಯ.

ದಿ ಫಿಫ್ಟಿ ಡೇ ವಾರ್

ಕಾರ್ಗಿಲ್ ಯುದ್ಧದ ಸಂದರ್ಭ ದೇಶಪ್ರೇಮ ಉಗ್ರ ಭಕ್ತಿಯ ಸ್ವರೂಪ ತಾಳಿದ್ದ ಸಮಯವದು. '1947ರ ನಂತರ ಇಡೀ ಭಾರತ ಒಗ್ಗಟ್ಟಾಗಿ ದೇಶಕ್ಕಾಗಿ ಬೆಂಬಲಕ್ಕೆ ನಿಂತಿದ್ದು ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ' ಎನ್ನುವುದು ಈ ರಂಗಕರ್ಮಿಯ ವಾದ. ಇರಬಹುದು. ಯುದ್ಧದ ವಸ್ತುವನ್ನಿಟ್ಟುಕೊಂಡು ಪ್ರಾಣತೆತ್ತ ಯೋಧರ ಸ್ಮರಣೆಗಾಗಿ ರಂಗಪ್ರಯೋಗವೊಂದು ನಡೆಯಿತು. ಮೆಹ್ರೋಲಿಯಲ್ಲಿ ಆರು ಎಕರೆ ಪ್ರದೇಶ ಕಾರ್ಗಿಲ್ ಯುದ್ಧದ ಮರುಸೃಷ್ಟಿಗೆ ಸಜ್ಜಾಯಿತು. ಪ್ರೇಕ್ಷಕರು ದೃಶ್ಯದಿಂದ ದೃಶ್ಯಕ್ಕೆ ಸ್ಥಳಾಂತರಗೊಳ್ಳಲು ಟ್ರ್ಯಾಕ್ ರೂಪಿಸಲಾಯಿತು. ಅಲ್ಲಲ್ಲಿ ಹಿಮಾಲಯ ವರ್ವತವೇ ನಾಚುವಂಥ ಮಂಜಿನ ಪರ್ವತಗಳು ಸೃಷ್ಟಿಯಾದವು, ನಕಲಿ ಹೆಲಿಕಾಪ್ಟರ್ ಗಳು ಥೇಟು ಯುದ್ಧ ವಿಮಾನಗಳಂತೆ ಆರ್ಭಟಿಸಿದವು. ಗನ್ ಪೌಡರ್ ನಿಂದ ಮದ್ದು, ಗುಂಡು, ರಾಕೆಟ್ ಲಾಂಚರ್ ಗಳು ಅಬ್ಬರಿಸಿದವು. ಇಡೀ ರಂಗಭೂಮಿ ಯುದ್ಧಭೂಮಿಯ ರೌದ್ರಾವತಾರ ತಾಳಿತ್ತು. ಸೈನಿಕರ ವೀರಾವೇಶ, ಗಾಯಗೊಂಡ ಯೋಧರ ಆಕ್ರಂದನ, ಯುದ್ಧದ ಭೀಕರತೆ ನೆರೆದ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿರಲೇಬೇಕು... ಹೀಗೆ 'ದಿ ಫಿಫ್ಟಿ ಡೇ ವಾರ್' ರಂಗಪ್ರಯೋಗ ನಡೆದು ಹಲವಾರು ಪ್ರದರ್ಶನಗಳನ್ನು ಅಲ್ಲೇ ಕಂಡಿತು.

ಇಂಥ ಅನೇಕ ಸಾಹಸಗಳನ್ನು ಮಾಡಿದ ದೆಹಲಿಯ ರಂಗಕರ್ಮಿ ಭಾರತೀಯ ರಂಗಭೂಮಿಯನ್ನು ಒಂದು ಹೊಸ ಆಯಾಮಕ್ಕೆ ಕೊಂಡೊಯ್ದರು. ಅವರೇ ಅಮೀರ್ ರಜಾ ಹುಸೇನ್.
ವಿಶೇಷವಾಗಿ ದೆಹಲಿ ರಂಗಭೂಮಿಗೆ ಅತ್ಯಂತ ಪರಿಚಿತ ಹೆಸರು. ನೂರಾರು ನಾಟಕಗಳನ್ನು ನಿರ್ದೇಶಿಸಿದ, ಸ್ವತಃ ನಾಟಕಕಾರರೂ ಆದ ಅಮೀರ್ ರಜಾ ಹುಸೇನ್ ಇಂಥ ಅದೆಷ್ಟು ಸಾಹಸಗಳನ್ನು ಮಾಡುತ್ತಲೇ ಇರುತ್ತಾರೆ. ಹುಸೇನ್, ರಂಗಭೂಮಿಯನ್ನೇ ತಮ್ಮ ಬದುಕಿನ ಬಹುದೊಡ್ಡ ಕನಸಾಗಿಸಿಕೊಂಡಿದ್ದು, ಮಾರ್ಗವಾಗಿಸಿಕೊಂಡಿದ್ದೊಂದು ರೋಚಕ ಇತಿಹಾಸ. ಇವರು ಕೋಟಿ ಹುಸೇನ್ ಎಂದೇ ಭಾರತೀಯ ರಂಗಭೂಮಿಯಲ್ಲಿ ಪರಿಚಿತರು.

ನಮ್ಮ ನಾಡಿನ ಲೇಖಕ ಕುವೆಂಪು ಅವರ 'ಮಲೆಗಳಲ್ಲಿ ಮದುಮಗಳು' ಕಾದಂಬರಿ ಒಂದು ದೊಡ್ಡ ಸಾಹಿತ್ಯ ಕೃತಿ. ಅದನ್ನು ರಂಗದ ಮೇಲೆ ಪಾತ್ರಗಳ ಮೂಲಕ ನಡೆದಾಡಲು ಬಿಡುವ ಸಾಹಸಕ್ಕೆ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ಪದವೀಧರ ಸಿ. ಬಸವಲಿಂಗಯ್ಯ ಇಳಿದಿದ್ದಾರೆ.
ಹೊಸತನದ ಕೊರತೆಯಿಂದ ಕಳೆಗುಂದಿದ ನಮ್ಮ ರಂಗಭೂಮಿಗೆ ಇಂಥ ಸಾಹಸದ ಅಗತ್ಯ ಇತ್ತು. ಆದರೂ ಹುಸೇನ್ ಥರ ಕೋಟಿ ಕೋಟಿ ಸುರಿಯುವ ಕಾಸ್ಟ್ಲೀ ರಂಗಭೂಮಿ ಬೇಕಿತ್ತಾ? ಎನ್ನುವ ಪ್ರಶ್ನೆಯೂ ಅರ್ಥಪೂರ್ಣ ಮತ್ತು ಮಹತ್ವದ್ದೇ. ನಾಟಕ ನೋಡುವ ಮತ್ತು ಇಂಥ ರಂಗಸಾಹಸಗಳ ಬಗ್ಗೆ ಕುತೂಹಲ ನನಗೂ ಇದೆ. ನೋಡೋಣ. ಒಟ್ಟಾರೆ ಬಸು ಇಂಥದೊಂದು ಸಾಹಸಕ್ಕೆ ಕೈಹಾಕಿದ್ದು ಕೇಳಿದಾಗ ಅಮೀರ್ ರಜಾ ಹುಸೇನ್ ಸಾಹಸದ ರಂಗಭೂಮಿ ತಟ್ಟನೆ ನೆನಪಾಯ್ತು.
ಮಲೆಗಳಲ್ಲಿ ಮದುಮಗಳನ್ನು ಕಂಡು ಬರುತ್ತೇನೆ. ಸಾಧ್ಯವಾದರೆ ಪ್ರಯೋಗದ ಬಗ್ಗೆ ಇಲ್ಲಿ ಬರೀತೀನಿ.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನಾನು ನೀನಾಸಂ ಪದವೀಧರನಲ್ಲ...

ನೀನಾಸಂ ಪದವಿ ನನ್ನ ತಲೆಗೆ ಅನಗತ್ಯ ಭಾರ ಸ್ವಾಮೀ. ಅಷ್ಟು ಕಪ್ಪು ಸುಂದರಿಯರ ಭಾರವೇ ನನ್ನ ತಲೆಗೆ ಸಾಕಾಗಿ ಹೋಗಿದೆ. ಇನ್ನು ಇಷ್ಟು 'ವಜನ್' ಪದವಿ ಕಿರೀಟ ಬೇಡವೇ ಬೇಡ. ಸುಮ್ಮನೇ ಖಾಸಗಿಯಾಗಿ ಡೈರಿಯ ಹಾಗೆ ಬೆಚ್ಚಗೆ ನನ್ನ ಜತೆಗೆ ಸದಾ ಇರಲಿ ಎಂದುಕೊಂಡು ಈ ಬ್ಲಾಗ್ ರೂಪಿಸಿದ್ದೇನಷ್ಟೇ. ಅವಧಿ ಬ್ಲಾಗ್ ನನ್ನ ಈ ಪುಟ್ಟ ಯತ್ನಕ್ಕೆ ಬೆನ್ನು ತಟ್ಟಿದ್ದು ಸಂತೋಷವೇ. ಆದರೆ, ನನ್ನ ಬಗ್ಗೆ ಬೆನ್ನುತಟ್ಟುವ ಸಾಲುಗಳ ಬರೆಯುತ್ತ ನೀನಾಸಂ ಪದವೀಧರ ಎನ್ನುವ ಒಂದು ತಪ್ಪು ಮಾಹಿತಿ ಕೂಡ ನುಸುಳಿಕೊಂಡಿದೆ. ಸ್ವಾಮೀ ನಾನೀ ನೀನಾಸಂ ಸುದ್ದಿಗೇ ಹೋದವನಲ್ಲ. ಅಲ್ಲಿ ಕಲಿತು ಬಂದವರ ಜತೆ 'ಬೇಜಾನ್' ಜಗಳ ಮಾಡಿದಿನಿ ಅಷ್ಟೇ.

ಇಷ್ಕ್‌ ಕೆ ಇಮ್ತೆಹಾನ್‌ ಔರ್‌ ಭೀ ಹೈ’.. ಇಮ್ರಾನ್‌ ಖಾನ್‌!

ಪಾಕಿಸ್ತಾನದ ಬಗ್ಗೆ ಮಾತನಾಡುವುದು ಮಹಾ ಪಾಪದ ಕೆಲಸವೇನಲ್ಲ. ಹಾಗೆ ಭಾವಿಸಬೇಕಿಲ್ಲ. ಅದು ಒಪ್ಪಿತವೊ ಇಲ್ಲವೋ, ಅದರ ಬಗ್ಗೆ ಅಲಕ್ಷ್ಯವೋ ನಿರ್ಲಕ್ಷ್ಯವೊ ಏನೇ ಆದರೂ ಅದು ಒಂದು ದೇಶ. ನೆರೆಯ ರಾಷ್ಟ್ರ. ‘ಪಡೋಸಿ...’ ಸಂಬಂಧದಲ್ಲಿ ನಮ್ಮದೇ ಕರುಳಬಳ್ಳಿ. ಭಾಷೆ, ಜನಜೀವನ ಶೈಲಿಯಲ್ಲಿ ಬದಲಾದರೂ ಮನುಷ್ಯ ಭಾವ, ಬದುಕುವ ಸಾಮಾನ್ಯ ಕಾಳಜಿ  ಒಂದೇ. ಹಾಗೆ ನೋಡಿದರೆ ಸಾಂಸ್ಕೃತಿಕವಾಗಿ ಎರಡೂ ದೇಶಗಳು ಅಭಿನ್ನ. ನಮ್ಮಲ್ಲಿರುವ ಹಾಗೆ ಅಲ್ಲಿಯೂ ಪ್ರಜಾಪ್ರಭುತ್ವ ಇದೆ. ಅಲ್ಲಿ ನಡೆಯುವುದು ಇಲ್ಲೂ ನಡೆಯುತ್ತದೆ. ಅಲ್ಲಿ ನಡೆಯಲೇಬಾರದ್ದು ಇಲ್ಲೂ ನಡೆಯಲೇಬಾರದು.  ತೀವ್ರವಾದ ನಮ್ಮಲ್ಲಿನದಕ್ಕಿಂತ ಅಲ್ಲಿ ತುಸು ಹೆಚ್ಚು ಸವಾರಿಗೆ ಹವಣಿಸಿದೆ. ಅಲ್ಲಿನ ಮಿಲಿಟರಿ ಅತಿರೇಕದ್ದು. ಅಕ್ಷಮ್ಯ. ಮತ್ತೆ ದೇಶ ಪುಟ್ಟದಾದಷ್ಟು ಅದಕ್ಕೆ ಭಯಗಳು ಜಾಸ್ತಿ. ಮಿಲಿಟರಿ ಕವಚದಲ್ಲಿ ಅದು ಸುರಕ್ಷಾ ಭಾವವನ್ನು ಕಲ್ಪಿಸಿಕೊಳ್ಳುತ್ತದೆ. ಅದೊಂದು ತರಹದ ಸಮಾಧಾನ. ಆದರೆ ಭ್ರಮೆಯಿಂದ ಕೂಡಿದ್ದು. ಭಯೋತ್ಪಾದನೆ ಕೂಡ ಒಂದರ್ಥದಲ್ಲಿ ಪುಕ್ಕಲುತನವೇ ಆಗುತ್ತದೆ. ಹಿಂಸಾ ಪ್ರವೃತ್ತಿಗೆ ಹೆದರಿಸುವುದೇ ಕೆಲಸ. ಹೆದರಿಸುವವರು ಶೂರರು, ಧೀರರು ಮತ್ತು ಜೀನಿಯಸ್‌ ಆಗಿರಲು ಹೇಗೆ ಸಾಧ್ಯ? ಮುಖ್ಯವಾಗಿ ಅಲ್ಲಿನ ವಿದ್ಯಮಾನಗಳನ್ನು ಗಮನಿಸುವುದಾದರೆ, ಮಿಲಿಟರಿ, ಮತಾಂಧರು, ಭಯೋತ್ಪಾದಕರು, ಭ್ರಷ್ಟರು ಇದೆಲ್ಲದರಿಂದ ಪಾಕಿ ತುಂಬ ರೋಸಿ ಹೋಗಿದ್ದಾನೆ. ಒಂದು ಸೂಕ್ತ ಪರ್ಯಾಯಕ್ಕಾಗಿ ಹಂಬಲಿಸಿದ್...

‘ಪಲ್ಲಟ’ ಒಂದು ಪ್ರಾಮಾಣಿಕ ಪ್ರಯತ್ನ

  (ಇನ್ನೂ ತೆರೆ ಕಾಣದ ‘ಪಲ್ಲಟ’ ಕನ್ನಡ ಸಿನಿಮಾದ ಪ್ರೀಮಿಯರ್‌ ಶೋ  ಬಗ್ಗೆ ) ಸಿನಿಮಾದ ಸೊಗಸೇ ಅಂಥದು. ಯಂತ್ರಗಳಿಂದ ಸೆರೆ ಹಿಡಿದ ಬದುಕು ತೆರೆಯ ಮೇಲೆ ಬಾಳುವಾಗ ಆ ಕ್ಷಣಕ್ಕೆ ಎಲ್ಲ ಹೊಸತೇ ಆಗಿ ಕಾಣಿಸುತ್ತದೆ. ಗತ ಬದುಕು ಹೊಸ ಬದುಕಿನಂತೆ ಹೊಳೆಯುತ್ತದೆ. ಪರದೆ ಮೇಲಿನ ಮೂರು ಗಂಟೆಯ ಬಾಳಲ್ಲಿ ಪ್ರೇಕ್ಷಕ ಅದರ ಅಸಲಿ ನೋವು, ನಲಿವುಗಳ ಬದುಕಿಗಿಳಿಯುತ್ತ ಮೆಲ್ಲಗೆ ಅದರ ಒಟ್ಟು ಹರವಿನಗುಂಟ ಸಾಗಬಹುದು. ಆ ಪುಟ್ಟ ಜರ್ನಿಯಲ್ಲಿ  ಅವನೊಳಗಿನ ಬದುಕಿಗೆ ಹೊಸ ಕಣ್ಣುಗಳು ಮೂಡಬಹುದು. ಅಂತಃಕರಣದ ಸೆಲೆಗಳು ಮತ್ತಷ್ಟು ಜಿನುಗಬಹುದು. ಸಿನಿಮಾದ ಸಾಧ್ಯತೆಗಳು, ಪರಿಣಾಮಗಳು ಹಲವು. ಸಿನಿಮಾಗೆ ಅದರ ಅಂತಃಸತ್ವ ಮುಖ್ಯ. ನೋಡಿ ತಿಳಿವ ಪ್ರಾಸೆಸ್‌ ಇದಾದ್ದರಿಂದ ವಿಶ್ಯುಯಲ್‌ ಟ್ರೀಟಮೆಂಟ್‌ ಕೂಡ ಮುಖ್ಯ.  ‘ಪಲ್ಲಟ’ ಕನ್ನಡ ಸಿನಿಮಾದ ವಸ್ತು  ಸ್ಥಳೀಯ ಸಂಸ್ಕೃತಿಗಳ ಸ್ಥಿತ್ಯಂತರ ಹೇಗೆ ನಿಜ ಜೀವನದಲ್ಲಿ ಕೆಲವರ ಬದುಕನ್ನೇ ಮುಗಿಸಿಬಿಡುತ್ತದೆ ಎನ್ನುವುದು. ಇದು ಅಮಾನವೀಯ ಎನ್ನುವುದು ಚಿತ್ರದ ಒಳದನಿ. ಬಹುಕಾಲ ನಿಲ್ಲಬಲ್ಲ ಮತ್ತು ಕಾಡಬಲ್ಲ ಸಿನಿಮಾ ಆಗುವ ಅವಕಾಶವನ್ನು ಇದು ಸ್ವಲ್ಪದರಲ್ಲಿಯೇ ಕಳಕೊಂಡಿದೆ. ಇದರಾಚೆಗೂ ಚಿತ್ರ ಕೆಲವು ವಿಚಾರಗಳಿಗೆ ಸಂಬಂಧಿಸಿ ಚರ್ಚೆಗೆ ಯೋಗ್ಯವಾಗಿದೆ. ನಾಗರಿಕತೆ ಎಂಬುದು ಜನರೇ ಸೃಜಿಸಿಕೊಂಡಿದ್ದು. ಆಯಾ ಜನಪ್ರದೇಶಗಳಲ್ಲಿ ಕಾಲದ ಅಗತ್ಯಗಳಿಗೆ ತಕ್ಕುದಾದ ವ್ಯವಸ್ಥೆಯೊಂದು ರೂಪುಗೊಂಡಿರುತ್ತದ...