ವಿಷಯಕ್ಕೆ ಹೋಗಿ

ಈ ಕವಿ ಜತೆ ಅದೆಷ್ಟು ಕಾವ್ಯ-ನೋವು ಮಣ್ಣಾಯಿತೋ!

ಈ ಇರುವೆಯ ಮೇಲೆ
ನನ್ನ ಭಾರದ ಹೆಜ್ಜೆಯನಿಟ್ಟೆ
ತುಸು ಕಾಲದ ನಂತರ ತೆಗೆದೆ
ಇರುವೆ ಮತ್ತೆ ಚಲಿಸುತ್ತಿದೆ
ಏ ಸೂಜಿಯ ಗಾತ್ರದ
ಜೀವವೇ
ನನ್ನ ಭಾರ ಹೊರುವ ನಿನ್ನ
ಬೆನ್ನಿಗೆ ಶರಣು...

... ಆ ಬೇಲಿಯ ದಡದಿ
ನಿಧಾನಕ್ಕೆ ತೆವಳುತ್ತಿರುವ
ಬಸವನ ಹುಳುವೇ
ನನ್ನ ಭಾರ ಹೊರಲಾರದ
ನಿನ್ನ ಮೃದುತ್ವಕ್ಕೂ
ಶರಣು...

ನಾಗತಿಹಳ್ಳಿ ರಮೇಶ್ ಒಂದೆರಡು ಪೆಗ್ ಏರಿಸಿ ಹೀಗೆ ಹಾಡುತ್ತಿದ್ದುದನ್ನು ಕೇಳಿದಾಗ, ಎನ್ಕೆ ಕಾವ್ಯದ ಈ ಪರಿಯ ಕಸುವಿಗೆ, ಮುಗ್ಧತೆಗೆ ಮನಸೋತಿದ್ದೆ. ರಮೇಶ್ ಭೇಟಿ ಮಾಡಿದಾಗೆಲ್ಲ ಮತ್ತೆ ಮತ್ತೆ ಈ ಹಾಡನ್ನು ಹೇಳುತ್ತಿದ್ದ. ತಾನೇ ಬರೆದಷ್ಟು ಖುಷಿಯಿಂದ ಅದನ್ನು ರಮೇಶ್ ಹಾಡುತ್ತಿದ್ದ.  ಹೀಗೆ ಕಾವ್ಯದ ಮೂಲಕವೇ ಎನ್. ಕೆ. ಹನುಮಂತಯ್ಯ ಪರಿಚಯವಾಯಿತು.  ಆ ನಂತರದ ಕೆಲ ಭೇಟಿಗಳಲ್ಲಿ ಕೆಲ ವಿಷಯಗಳ ಮೇಲೆ ಹರಟಿದ್ದೆವು.
  ಎಸ್.ವಿಷ್ಣುಕುಮಾರ್ ಮೂಲಕವೇ ಹನುಮಂತಯ್ಯ ಹೆಚ್ಚು ಆಪ್ತವಾಗಿ ಪರಿಚಯವಾಗಿದ್ದು. ಎಂಜಿ ರಸ್ತೆಗೆ ಒಂದೆರಡು ಬಾರಿ ಹನುಮಂತಯ್ಯ ಬಂದಿದ್ದರು. ಟೆಂಪ್ಟೇಷನ್ ಬಾರ್ ನಲ್ಲಿ (ವಿಷ್ಣೂವಿನ ಕಾಯಂ ಶೆಡ್ ಆಗಿತ್ತು) ಹನುಮಂತಯ್ಯ ಜತೆ ಕೆಲ ವಿಚಾರಗಳ ಬಗ್ಗೆ ಉತ್ತಮ ಚರ್ಚೆ ಕೂಡ ನಡೀತು. ಎಂಜಿ ರಸ್ತೆಯ ಹುಡುಗಿಯರು ಮತ್ತು ಅವರ ಬಿಂದಾಸ್ ಅಟಿಟ್ಯೂಡ್ ಅನ್ನು ನೋಡಿ ಹನುಮಂತಯ್ಯ ದಂಗಾಗುತ್ತಿದ್ದರು. ಪದೇ ಪದೇ  'ಇವರೆಲ್ಲ ಅದೆಷ್ಟು ಖುಷಿ ಖುಷಿಯಾಗಿ, ಸಲೀಸಾಗಿ ಪ್ರೀತಿ, ಪ್ರೇಮ, ಪ್ರಣಯ ಮಾಡ್ತಾರೆ! ಇವರ ಮಿಥುನವೂ ಇಷ್ಟೇ ಬಿಂದಾಸ್ ಇರಬಹುದಲ್ಲಾ ಗುರುವೇ... ನಾವದೇನೋ ಕಾವ್ಯ, ಸಾಹಿತ್ಯ ಅಂತ ಕಳೆದುಹೋಗಿದಿವಿ... ರಿಜಿಡ್ ಆಗಿ ಹೊರಟಿದ್ದೀವಿ...'  ಎನ್ನುತ್ತಿದ್ದರು.
ಜೆಕ್ ಬರಹಗಾರ ಮಿಲನ್ ಕುಂದೇರಾ ಕಥೆಗಳ ಬಗ್ಗೆ ತುಂಬ ಹೇಳಿದ್ದೆ ಅವತ್ತು. ಕುಂದೇರಾ ಬರೆದ 'ಐಡೆಂಟಿಟಿ' ನಾವೆಲ್ ಅನುವಾದದ ಗುಂಗು  ನನ್ನ ತಲೆತುಂಬಿಕೊಂಡಿತ್ತು ಆಗ. .... ಗಂಡ-ಹೆಂಡತಿಯರ ನಡುವೆ ಎಂಥದೋ ಒಂದು ಶುಷ್ಕ ವಾತಾವರಣ ಏರ್ಪಟ್ಟ ಹೊತ್ತಲ್ಲಿ, ಪರಸ್ಪರ ರಿಜೆನ್ಯುವೇಟ್ ಆಗೋದಕ್ಕೆ ಗಂಡ ಹುಡುಕಿಕೊಂಡ ಒಂದು ಮಾರ್ಗ ಅನಾಮಧೇಯ ಪ್ರೇಮ ಪತ್ರ ಬರೆಯೋದು. ಅದೂ ತನ್ನ ಹೆಂಡತಿಗೆ! ಅವಳು ಅದರಿಂದ ಪುಳಕಿತಗೊಳ್ಳುವುದು. ಮತ್ತು ತನ್ನೊಳಗಿನ ಎಂಥದೋ ಉನ್ಮಾದ ಕ್ಷಣಗಳಿಗಾಗಿ ಹುಡುಕಾಟ ನಡೆಸೋದು, ಖಾಲಿತನ ತುಂಬಿಕೊಳ್ಳಲು ಚಂಚಲಳಾಗೋದು... ಅದರಿಂದ ಗಂಡ ಕ್ಷಣ ಕ್ಷಣ ವಿಹ್ವಲಗೊಳ್ಳೋದು... ನಾವೆಲ್ ನ ಇಷ್ಟು ಕಥಾ ಹಂದರವನ್ನು ಹನುಮಂತಯ್ಯಗೆ ವಿವರಿಸಿದಾಗ ಸಖತ್ ಥ್ರಿಲ್ ಆಗಿದ್ದರು. 'ಏನು ಗುರುವೇ ಇದು. ಯಪ್ಪಾ... ಮಜವಾಗಿದೆ' ಎನ್ನುತ್ತಿದ್ದರು. ಆನಂತರ ಸಿಕ್ಕಾಗೆಲ್ಲ 'ಗುರುವೇ ನೀವು ಹೇಳಿದ ಕಥೆ ಚೆನ್ನಾಗಿತ್ತು. ಮೊನ್ನೆ ಪಾಠ ಮಾಡುವಾಗ ಇದನ್ನು ನೆನಪಿಸಿಕೊಂಡೆ' ಎಂದೆಲ್ಲ ಹೇಳುತ್ತಿದ್ದರು.
ಹೀಗೆ ಹನುಮಂತಯ್ಯ ಥ್ರಿಲ್ ಆಗುತ್ತಿದ್ದ ವಿಷಯಗಳನ್ನು ಗಮನಿಸಿದಾಗ ಅವರ ಆಸಕ್ತಿ ಮತ್ತು ಆತಂಕಗಳನ್ನು ತಟ್ಟನೆ ಗ್ರಹಿಸಬಹುದಾಗಿತ್ತು. ಅದೆಂಥದೋ ಉನ್ಮಾದ ಕ್ಷಣಗಳಿಗೆ ಅವರೂ ಹಾತೊರೆಯುತ್ತಿದ್ದಾರಾ! ಎನ್ನುವ ಅನುಮಾನ ಸಣ್ಣಗೆ ಕಾಡಿತ್ತು. ಅವರ ಆಸಕ್ತಿ ವಯೋಸಹಜವೂ ಆಗಿತ್ತು. ಮತ್ತು ಒಬ್ಬ ಬರಹಗಾರನಿಗೆ ಈ ಥರದ ತವಕ, ತಲ್ಲಣಗಳಿರುತ್ತವೆ ಕೂಡ.
ನೆಚ್ಚಿನ ಕವಿ ಎನ್ಕೆ...
'ಚಿತ್ರದ ಬೆನ್ನು' ಸಂಕಲನದಲ್ಲಿ ನೀವೇ ಬರಕೊಂಡ ಅದ್ಭುತ ಕಾವ್ಯದಂತೆ, ... ಮಹಾನದಿಯ ದನಿಯನ್ನು ನೀವು ಆಲಿಸಲೇ ಇಲ್ಲವೇನೋ ಅನಿಸಿತು.

ಮಹಾರಿನ ಮಹಾನದಿ
ನಮ್ಮ ನಿಮ್ಮ ಪ್ರಾಣನದಿ
ಅಕ್ಷರದ ಹನಿಹನಿಯಲು
ಉಕ್ಕಿ ಹರಿದ ಪ್ರೇಮನದಿ
ಬಿಡುಗಡೆಯ ಹಸಿರು ಉಸಿರ
ಬುದ್ಧ ನಗೆಯ ತಾಯಿನದಿ
ದನಿಯ ಆಲಿಸಿ, ನದಿಯ ದನಿಯ ಆಲಿಸಿ...

ಎಂದೆಲ್ಲ ಹೇಳಿದವರು ನೀವು ಎನ್ಕೆ.  ಆ ಮಹಾರಿನ ಮಹಾನದಿಯಂತೆ ಭೋರ್ಗರೆದು ಅಸಮಾನತೆಯ ಕೊಚ್ಚೆಯನ್ನು ಹಸನುಗೊಳಿಸುವ ಬದಲು, ಯಾವುದೋ ಕಷ್ಟಕ್ಕೆ ವಿಷದನದಿಗೇ ಹಾರಿಬಿಡುವುದೇ?

ಮಂಟಪದ ಕನ್ನಡಿಯಲ್ಲಿ ನೀವೇ ಬರೆದುಕೊಂಡ ಸಾಲುಗಳು
ಎದುರು ನಿಂತ ಸಾವಿಗೆ
ಶಿರವೊಡ್ಡುವುದು ಸರಳ

ಸಾವಿನ ಕಾರಣಗಳಿಂದ ದೂರವಾಗಬೇಕು ಕವನದಲ್ಲಿ
ನಮ್ಮ ಸುತ್ತ ಸತ್ತವರೇ
ಸುತ್ತುತ್ತಿದ್ದಾರೆ...

ಎಂದಿರಿ. ಈ ನಿಮ್ಮ ಭ್ರಮನಿರಸನದ ಭಾವನೆಯನ್ನು ಕೊಂಚ ಮಟ್ಟಿಗೆ ನಾನೂ ಒಪ್ಪುತ್ತೇನೆ. ನಮ್ಮ ಸುತ್ತ ನಿಜಕ್ಕೂ ನರಸತ್ತವರ ದೊಡ್ಡ ಸಂತೆಯೇ ನೆರೆದಿರುತ್ತದೆ. ಎಷ್ಟೊ ಸಂದರ್ಭದಲ್ಲಿ ಸಾಂಘಿಕ ಆಶಯದ ಹೋರಾಟಕ್ಕೂ ಇವರ ಅನಾಸಕ್ತಿ, ಅನಾದರಗಳಿರುತ್ತವೆ. ಇವು ನಿಜಕ್ಕೂ ಕಂಗೆಡಿಸುತ್ತವೆ. ನಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ತವಕದ ಕ್ಷಣಗಳಲ್ಲಿ, ನಾಜೂಕು ಘಳಿಗೆಯಲ್ಲಿ ಇವರ್ಯಾರೂ ಸಾಥ್ ನೀಡೋದೇ ಇಲ್ಲ. ಪ್ರೀತಿ-ಪ್ರೇಮ-ಕಾಮದ ವಿಷಯ ಬಂದಾಗೆಲ್ಲ ಬಹುತೇಕರು ವಿಷ ಕಕ್ಕುವುದೇ ಹೆಚ್ಚು.
ನೋವಿಗೆ, ಬೇಗುದಿಗೆ ಮತ್ತು ಮೈಮೇಲೆಳೆದುಕೊಂಡ ಕಷ್ಟಗಳಿಗೆ ನೆರವಾಗೋರು ಇಲ್ಲವೆನ್ನುವ ಭಾವನೆ ನಿಮ್ಮನ್ನು ಕಾಡಿರಬೇಕು. ನಿಮ್ಮ ಎಡವಟ್ಟುಗಳನ್ನು ಕ್ಷಮಿಸುವ ವಿಶಾಲ ಮನಸುಗಳ  ನೆರವಿಗೆ ಹಂಬಲಿಸಿದ್ದು ನಿಮ್ಮ ಗೆಳೆಯರ ಮಾತುಗಳನ್ನು ಕೇಳಿದಾಗ ಅನಿಸುತ್ತದೆ.
ಇದ್ದಿಲಾಗುವ ಆಲಿ ಕವನದಲ್ಲಿ
ಹೊಳೆಯಾಗಿ ಹರಿಯುವ ಮಳೆ
ಕಡಲಾಗಿ ಉಕ್ಕುವ ಮಳೆ
ಹಸಿರು ನಾಲಗೆಯಾಗಿ ಬಿಸಿಲ ನೆಕ್ಕುವ ಮಳೆ
ನನ್ನೊಡಲ ಮೇಲೇಕೆ ಹನಿಯುತ್ತಿಲ್ಲ...?
 ಎಂದು ಪ್ರಶ್ನಿಸುವಲ್ಲಿ ನೋವಿನ ಒಡಲುರಿ ಅಗಾಧ. ಅದು ಯಾವ ಮಳೆಗೂ ಆರುವಂಥ ಉರಿ ಅಲ್ಲ.
ಇಲ್ಲಿ ಪಕ್ಷಿ ಪಾದವನಿಟ್ಟು
ಬೂದಿಯಾಗುವುದು
ಬಿದ್ದ ಆಲಿಯಕಲ್ಲು ಇದ್ದಿಲಾಗುವುದು...

ಅದಕ್ಕೇ ಒಂದು ದೊಡ್ಡ ಮಳೆ ಬೇಕು. ಬರಿಯ ಆಲಿಕಲ್ಲು ಸುರಿಸುವ ಮಳೆಯಲ್ಲ, ಒಂದಿಡೀ ಹಿಮಾಲಯ ಪರ್ವತವನ್ನೇ ಹೆರುವ ಮಳೆ ಬೇಕು! ನಿಮ್ಮ ನಿರೀಕ್ಷೆ ಸಹಜವೇ...

ಮಳೆಯೇ ಹೆರಲಾರೆಯಾ
ನನ್ನೊಡಲ ಮೇಲೊಂದು
ಇದ್ದಿಲಾಗದ ಹಿಮಾಲಯವ
ಅದರಡಿ ತಣ್ಣಗೆ ಕಣ್ಮುಚ್ಚಬೇಕು
ಮತ್ತೆ ಎಚ್ಚೆತ್ತು
ನೀರಾಗಿ ಹರಿಯಬೇಕು..

ಮತ್ತೆ ಎಚ್ಚೆತ್ತುಕೊಳ್ಳಬೇಕು... ನೀರಾಗಿ ಹರಿಯುತ್ತಲೇ ಸಾಗಬೇಕು. ನದಿಯಂತೆ ಸಮುದ್ರ ಸೇರುವ ತವಕದಲ್ಲಿ ಭೂರ್ಗರೆಯುತ್ತಲೇ ಇರಬೇಕು ಎನ್ನುವ ನಿಮ್ಮ ಚಲನಶೀಲ ಗುಣ,  ಆಶಾವಾದ , ನಿರೀಕ್ಷೆ, ಜೀವಂತಿಕೆಯನ್ನೆಲ್ಲ ಆ  ವಿಷದನದಿ ಮುಂದೆ ನಿಂತಾಗ  ಯಾಕೆ ಮರೆತಿರಿ ಎನ್ಕೆ?
ನಿಮ್ಮ ಬದುಕಿನ ಅಂತ್ಯದ ಬಗ್ಗೆ ನನಗನ್ನಿಸುವುದು ಇಷ್ಟು:
ನೀರಿನಿಂದಲೇ ದೂರವಿಟ್ಟ ವರ್ಗವೊಂದರ ಸಂವೇದನಶೀಲ ಮನಸು ನೀರು ಸಿಕ್ಕ ಮೇಲೆ ಏನು ಮಾಡಬೇಕಿತ್ತು? ಪೂಜಿಸಬೇಕಿತ್ತು... ಹಾಗಂತ ಪುರೋಹಿತಷಾಹಿ ಮನಸ್ಥಿತಿ ಹೇಳಬಹುದು. ಆದರೆ, ನನಗನ್ನಿಸುವುದನ್ನು ಹೇಳೋದಾದರೆ, ನೀರು ಸಿಕ್ಕಾಗ ಅದರ ಜತೆ ವಿಸ್ಕಿ ಸೇರಿಸಿ ಕುಡಿಯುವ ಮುನ್ನ ಯೋಚಿಸಬೇಕು... ವಿಷ ಬೆರೆಸಿ ಗಟಕ್ಕನೇ ಕುಡಿದು ಚಡಪಡಿಸುವ ಮುನ್ನ ಬದುಕಿನ ಒಟ್ಟು ಗುರಿಯ ಬಗ್ಗೆ, ಮಹತ್ವದ ಬಗ್ಗೆ, ಅರ್ಥದ ಬಗ್ಗೆ ಅದೆಷ್ಟು ಸಾರಿ ಯೋಚಿಸಬೇಕು... ಎನ್ನುವ ಪ್ರಜ್ಞೆ ಇರೋದು ಮುಖ್ಯ ಅಲ್ವೆ?
ಕೇರಿ ಹುಡುಗರು ಮೇಲ್ವರ್ಗದ ಮನೆಗಳತ್ತ ಕಣ್ಣು ಹಾಯಿಸುವುದೂ ಮಹಾಪಾಪ ಎನಿಸಿದ್ದ ಹೊತ್ತಲ್ಲೇ ಅಲ್ಲಿಂದಲೇ ಹೆಣ್ಣೊಂದು ತಾನಾಗೇ ಕೇರಿ ಕಡೆ ಹಾರಿ ಬರಲಿ ಅನ್ನೋದು ಸಹಜ ಅಭಿಲಾಷೆ ಏನೋ ಹೌದು. ಆದರೆ, ಹಾಗೆ ಒಲಿದು ಬಂದವಳು ಮನ-ಮನೆ ತುಂಬಿಕೊಂಡಾಗ ಬದುಕಿನ ಬೆಳಕೇ ಬೆಳೆಯಬೇಕು. ಅದೂ ಕೂಡ ಸಹಜ ನಿರೀಕ್ಷೆಯೇ. ಅದೊಂದು ಸಾಧನೆ ಎಂದಷ್ಟೇ ಬೀಗೋದು ಆಗಬಾರದು. ಅಥವಾ ಏನೋ ದೈವಬಲ ಎನ್ನುವ ಫೇಟಲಿಸಂ ಕೂಡ ಆಗಬಾರದು. ಅದು ಮನೋಧರ್ಮವಾಗಬೇಕಾದ್ದು ಮುಖ್ಯ. ಮನೋಧರ್ಮ ರೂಪಿಸಿಕೊಳ್ಳುವಂಥದು. ನಾವಿರುವ ಸ್ಥಿತಿಯಿಂದ ಮತ್ತಷ್ಟು ಉತ್ತಮ ಸ್ಥಿತಿಗೆ ಹೋಗೋದು ನಿಜಕ್ಕೂ ಒಂದು ಅರ್ಥಪೂರ್ಣ ಪಯಣ.
ಆರೋಗ್ಯಕರ ಮಾನಸಿಕ ಸ್ಥಿತಿಯಿಂದ ರೂಪಿಸಿಕೊಂಡ ಸಾಂಸಾರಿಕ ಬದುಕಿನಲ್ಲಿ ಸಹಜತೆ ಮುಖ್ಯ. ಅಲ್ಲಿ ಸುಖವೆನ್ನುವುದು ಸದಾ ಹುಡುಕಾಟ. ಸುಖಿಸುವುದು ಅಲ್ಲಿ ಸಹಜಕ್ರಿಯೆ. ಅದೇ ಚಟವಲ್ಲ.
ಆದರೆ, ಸುಖಲೋಲುಪ ಜಗತ್ತಿನಲ್ಲಿ ಸುಖಿಸುವುದು ಒಂದು ಕೆಲಸ. ರಾಜನಿಗೆ ಖಾಲಿ ಸಮಯ ಎಂದರೆ ಅಂತಃಪುರದಲ್ಲಿ ನಿತ್ಯ ಬಣ್ಣದೋಕುಳಿ. ಉಣ್ಣೋದು, ಸರಿಸೋದು... ಅದೊಂದು ಕಾಯಕ.  ಸುಖಕ್ಕಾಗಿ ಆತ ಹೆಣ್ಣುಗಳನ್ನು ಬದಲಿಸುತ್ತಲೇ ಇರಬೇಕಾಗುತ್ತಿತ್ತು. ಅದು ವ್ಯವಸ್ಥೆಗೆ ಸರಿ ಇತ್ತೇನೋ?!
ಆದರೆ, ನಮ್ಮ ಸಹಜ ಜೀವನದಲ್ಲಿ ಇದು ಅನಾರೋಗ್ಯಕರ ಮನೋದೈಹಿಕ ಸ್ಥಿತಿ. ಇದು ಮನುಷ್ಯನನ್ನು ಉನ್ಮತ್ತಲೋಕದಲ್ಲಿ ವಿಹರಿಸುವಂತೆ ಮಾಡುವ ವ್ಯವಸ್ಥೆ. ಇದರ ಮೋಹಕ್ಕೆ ಬಿದ್ದವರೆಲ್ಲ ರಾಜ್ಯ ಕಳಕೊಂಡರು, ದೇಶ ಕಳಕೊಂಡರು, ಕೊನೆಗೆ ಬದುಕನ್ನೇ ಕಳಕೊಂಡರು. ನೀವ್ಯಾಕೋ ಆ  ಹಾದಿ ಹಿಡಿದಿದ್ದಿರೇನೋ ಅನಿಸಿತು ಹನುಮಂತಯ್ಯ...
ಬುದ್ಧ ಬಿಟ್ಟು ಬಂದ ಆ ಸುಖಲೋಲುಪ ಜಾಗಕ್ಕೆ ವಾಪಸ್ ಹೋಗುತ್ತಿದ್ದೀರೇನೋ ಅನಿಸ್ತು... ಅವನ ಅಂತಿಮ ಗುರಿ ಬದುಕಿನ ಸಾಕ್ಷಾತ್ಕಾರ. ಅದಕ್ಕೆಂದೇ ಆ ಸುಖವನ್ನಲ್ಲೇ ಬಿಟ್ಟು ಬಂದ ಸಿದ್ಧಾರ್ಥ. ನೀವು ಆ ಸುಖವೆನ್ನುವ ಹೇಸಿಗೆ ಮೇಲೆ ಕಾಲಿಟ್ಟು ಜಾರಿಬಿಟ್ಟಿರೇನೋ... ಮೈತುಂಬ ಅದರದೇ ವಾಸನೆ... ನಿಮ್ಮನ್ನು ಎತ್ತ ಬಂದವರೆಲ್ಲ ಆ ವಾಸನೆಗೇ ಹಿಂದಕ್ಕೆ ಹೆಜ್ಜೆ ಹಾಕಿದರೇನೋ. ನೀವಲ್ಲೇ ಕೊಳೆತು ಹೋದಿರಿ.
ಮತ್ತೆ ಹೀಗೂ ಅನಿಸುತ್ತೆ...
 'ದಾಟು'ವಿನ ಮನಸ್ಥಿತಿಯವರು ಕಂಪೌಂಡು, ರಂಗೋಲಿ ದಾಟಿ ಬರುವವರು, ಸೀಮೋಲಂಘನ ಮಾಡುವವರು ಅನಿವಾರ್ಯತೆಗಳಿಗಾಗಿ, ಫಾರ್ ದಿ ಸೇಕ್ ಆಫ್ ಚೇಂಜ್, ಅಥವಾ ಥ್ರಿಲ್ ಗಾಗಿ ಅಷ್ಟೇ ಬರಬಾರದು.... ಅಥವಾ ತಾವಿದ್ದ ವ್ಯವಸ್ಥೆಯಿಂದ ಬೇಸತ್ತವರು, ಹೊಸತನಕ್ಕಾಗಿ ಹಾತೊರೆವ ಮನಸಿನ ಹಟಕ್ಕೆ ಬಿದ್ದು ತಟ್ಟನೆ ಎದ್ದು ಬರುವಂಥವರಿಂದಲೂ ಒಮ್ಮೊಮ್ಮೆ ಅಪಾರ ಹಿಂಸೆಯೂ ಆಗುವ ಸಾಧ್ಯತೆ ಇರುತ್ತದೆ. ಮತ್ತೆ ಮತ್ತೆ ತಾನು ಕೈಗೊಂಡ ಸಾಹಸ ಹೇಳಿ ಹೀಯಾಳಿಸುವುದೂ ಇರುತ್ತದೆ. ತಾವೇ ಭ್ರಮಿಸಿಕೊಂಡ ಉಚ್ಛ ವರ್ಗದಿಂದ ಬಂದ ಹೆಣ್ಣುಗಳಲ್ಲಂತೂ (ಗಂಡೂ ಇದಕ್ಕೆ ಹೊರತಲ್ಲ) ಇಂಥ ಮೇಲ್ಮಹಿಮೆಗಳು ತುಂಬಿಕೊಂಡಿದ್ದು ನನ್ನ ಎಷ್ಟೋ ಸ್ನೇಹಿತರ ಪ್ರೇಮ ಪ್ರಕರಣಗಳಿಂದ ತಿಳಿದಿದ್ದೇನೆ. ನೀನು ದಲಿತ, ಹಿಂದುಳಿದವ, ಅನ್ಯಧರ್ಮೀಯ ಅಂತ ಗೊತ್ತಿದ್ದೂ ನಾನು ನನ್ನ ಉಚ್ಛ ಕುಲಬಿಟ್ಟು ಬಂದೆ... ಏನೇನೋ ಕನಸು ಕಂಡು ಬಂದೆ ಇಲ್ಲಿ ನೋಡಿದರೆ ಕೇರಿಗಳ ಬಗ್ಗೆ, ಇಂಥ ಸಂಸ್ಕೃತಿಯ ಇಲ್ಲಿನ ಸ್ಥಿತಿ ಬಗ್ಗೆ ಜನ ಉಗಿಯೋದರಲ್ಲಿ ತಪ್ಪೇನಿಲ್ಲ ಅನಿಸುತ್ತೆ ಎನ್ನುವಂಥ ಮಾತುಗಳೇನಾದರೂ ಕೇಳಿಸಿದರೆ ಅವು ತುಂಬ ಇರಿಯುತ್ತವೆ.
ಪ್ರೀತಿಸಿದ ಒಂದೇ ಕಾರಣಕ್ಕೆ ಅವಳು ಹೇಗೆ ಮನೆಬಿಟ್ಟು ಹೊರಬರುತ್ತಾಳೋ ಕೇರಿಯ ಹುಡುಗನೂ ಕೇರಿ, ಮೋಹಲ್ಲಾ ಬಿಟ್ಟು ಹೊರಬರುವಂಥ ಸ್ಥಿತಿ ನಿರ್ಮಾಣಗೊಂಡು ಬಿಡುತ್ತೆ. ಅಲ್ಲಿಂದಲೇ ಆತನ ಸಂಬಂಧಗಳಲ್ಲೂ ಬಿರುಕುಗಳು, ಅಸಮಾಧಾನದ ಹೊಗೆ  ಶುರುವಾಗತೊಡಗುತ್ತದೆ. ಕಾಲಾಂತರದಲ್ಲಿ ಕಳಚಿಕೊಂಡ  ಬೇರುಗಳ ಸೆಳೆತ, ಅದರ ಮಹತ್ವ ಮೆಲ್ಲಗೆ ಅರಿವಿಗೆ ಜಾರತೊಡಗುತ್ತಿರುತ್ತದೆ. ಹಿಂದಣ ಹೆಜ್ಜೆಗಳು ಕಾಡತೊಡಗುತ್ತವೆ. ಪರಿಣಾಮಗಳು ಎದೆ ಝಲ್ಲೆನಿಸತೊಡಗುತ್ತವೆ...
ಸಂಬಂಧ ಹಳಸಲಾದೆಂತೆನಿಸಿದಾಗ ಎಲ್ಲ ಭ್ರಮೆ ಎನಿಸಿತೊಡಗಿರುತ್ತದೆ. ಮಿಥುನದ ಕ್ಷಣಗಳಲ್ಲಿ ಮೊದಲಿನ ಮಜ ಮುಗಿದುಹೋಗಿರುತ್ತದೆ. ತೋರಿಕೆಯ ಬದುಕಿನಿಂದ ಬೇಸರ ಮೂಡಿರುತ್ತದೆ. ಅಂದುಕೊಂಡ ಸುಖದ ಕಲ್ಪನೆಗಳು ಮತ್ತೆ ಮತ್ತೆ ಕಾಡತೊಡಗಿದಾಗ ಮೇಲ್ ಚಾವಿನಿಸ್ಟ್ ಮನಸ್ಥಿತಿಯ ಮನುಷ್ಯನಿಂದ ಎಡವಟ್ಟುಗಳು ಶುರುವಿಟ್ಟುಕೊಳ್ಳುತ್ತವೆ. ಹಾದರದ ಹೊಂಡ ಪ್ರಶಾಂತ ಎನಿಸಿತೊಡಗುತ್ತದೆ. ಅಲ್ಲಿಗೆ ವಿಹಾರ ಆರಂಭಗೊಳ್ಳುತ್ತದೆ. ಹಾಗೆ ಬಂದು ಹೀಗೆ ಹೋಗೋದು ಸಲೀಸು ಅನಿಸಿದರೂ ಒಂದು ಭದ್ರವಾದ ಬಂಧ ಮತ್ತೆ ಬೇಕೆನಿಸತೊಡಗುತ್ತದೆ. ಬಾಯಾರಿಕೆಗೆ ಬಳಲಿ ಬಂದ ಹಕ್ಕಿಗಳು ಅಲ್ಲೇ ಮರ ಹುಡುಕಿಕೊಂಡು ಹಾಯಾಗಿರುವಂತೆ ಮನಸು ಅಂಥದೊಂದು ಮರಕ್ಕೆ  ಜೋತು  ಬೀಳುತ್ತದೆ.  ಉನ್ಮತ್ತ ಲೋಕದ ಪಯಣ ಶುರುವಾಗುತ್ತದೆ. ಇಂಥ ಹುಚ್ಚು ಕುದುರೆ ಏರಿದಾಗ ಜವಾಬುದಾರಿಗಳ ಅರಿವಾದರೂ ಎಲ್ಲಿರುತ್ತೆ?
  ಬದುಕೆಂಬ ಜರ್ನಿಯಲ್ಲಿ ಕಲಿಯೋದು ಇಷ್ಟೇನಾ?...
ಬುದ್ಧನ ಹಾದಿ ಎಂದರೆ ಆಸೆ, ದುರಾಸೆಗಳಿಂದ ಮುಕ್ತಗೊಳ್ಳುವುದು. ಬದುಕಿನಿಂದಲೇ ನಿರ್ಗಮಿಸುವುದಲ್ಲ... ಸಿದ್ಧಾರ್ಥ ತೊರೆದದ್ದು ಸುಖಲೋಲುಪತೆ ತರುವ ಹಿಂಸೆಯನ್ನು, ಅಹಮಿಕೆಯಿಂದ ಹುಟ್ಟುವ ಅಮಾನವೀಯ ಗುಣಗಳನ್ನು, ಹೆಣ್ಣು ಒಂದು ಸುಖಿಸಬಹುದಾದ ವಸ್ತುವೆನ್ನುವ ಪೌರುಷದ ಚಪಲವನ್ನು... ಈ ಎಲ್ಲ ಸಂಕೀರ್ಣತೆಗಳು, ಧಿಮಾಕು, ಸೋಲುಗಳಿಂದ ಹೊರಬಂದು ಹೊಸ ಮಾರ್ಗ ಹಿಡಿಯುವ ಹಂಬಲದಿಂದಲೇ ಸಿದ್ದಾರ್ಥ ಧ್ಯಾನದ ಸ್ಥಿತಿಗೆ ತಲುಪಿದ್ದು. ಅರಿವಿನ ಮಾರ್ಗ ಅರಸಲು ಮಾಡುವ ಧ್ಯಾನವದು. ರಿಲ್ಯಾಕ್ಸ್ ಆಗುವ ತಂತ್ರವಲ್ಲ... ಆರ್ಟ್ ಆಫ್ ಲಿವಿಂಗ್ ನ ದುಡ್ಡು ಕೊಟ್ಟು ಕಲಿವ ಪಾಠದಂಥ ಧ್ಯಾನವಲ್ಲ. ಪರಮಾನಂದ, ನಿತ್ಯಾನಂದದ ಮಾರ್ಗವಲ್ಲ. ಸಾಕ್ಷಾತ್ಕಾರದ ಬೊಗಳೆಯೂ ಅಲ್ಲ... ಬದುಕಿನ ಅರ್ಥದ ಹುಟುಕಾಟ ಅದು.
ಆದರೆ ನಿಮ್ಮದು?
ನೀರೇ ಕುಡಿಯಲು ಗತಿ ಇಲ್ಲದ  ಸ್ಥಿತಿಯಿಂದ  ನೀರು ಸಿಕ್ಕು ಅದರ ಜತೆ ವಿಸ್ಕಿ, ರಮ್ ಬೆರೆಸಿ ಕುಡಿಯುವ ಹಂತಕ್ಕೆ ತಲುಪಿದ ಸ್ಥಿತಿ. ಆದರೆ ಇದರ ನಡುವೆ ಮಾಡಿದ ಜರ್ನಿಯೊಂದಿತ್ತಲ್ಲ... ಅದರಿಂದ ಕಲಿಯೋದು  ಇಷ್ಟೇನಾ? ....
ಜೀವ ಬಿಟ್ಟುಬಿಡಬೇಕೆನ್ನುವ ಕಠಿಣ ನಿರ್ಧಾರದ ಹಿಂದೆ ಅದಾವ ಕಠೋರ ಸತ್ಯ ಅಡಗಿರುತ್ತೊ? ಅದನ್ನು ಎದುರಿಸಿದವರಿಗಷ್ಟೇ ಗೊತ್ತಿರಬೇಕು. ಆದರೆ, ಈ ಕವಿಯ ಅಂತ್ಯ ಗಮನಿಸಿದಾಗ, ಅವರ ಪ್ರತಿ ಕಾಳಜಿ, ನಿರೀಕ್ಷೆಗಳ ಜಯಾಪಜಯಗಳಿಗೆ ಸಂಬಂಧಿಸಿದಂತೆ ಹೊಮ್ಮಿದ ಸಾತ್ವಿಕ ಆಕ್ರೋಶ ಒಂದಷ್ಟು ಅತಿರೇಕದ ವರ್ತನೆಗೆ ಸರಿದಿದ್ದು, ಇಗೋ ಸೆಂಟ್ರಿಕ್ ಆಗಿದ್ದು ದೊಡ್ಡ ಪ್ರಮಾದವಾಯಿತೇನೋ?!

ಎನ್ಕೆ ಭೌತಿಕ ಶರೀರ ಮಣ್ಣು ಸೇರುವಾಗ ನೆರೆದ ಕೆಲ ಗೆಳೆಯರು ಬೈಯ್ದುಕೊಳ್ಳುತ್ತಿದ್ದರು... ಮರುಗುತ್ತಿದ್ದರು... ಕಣ್ಣೀರು ಹಾಕುತ್ತಿದ್ದರು... ಕಾವ್ಯ ಹೊಗಳುತ್ತಿದ್ದರು, ಕವಿಯನ್ನು ಶಪಿಸುತ್ತಿದ್ದರು...      ಈ ಕವಿ  ಜತೆ ಅದೆಷ್ಟು ಕಾವ್ಯ-ನೋವು  ಮಣ್ಣಾಯಿತೋ!

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮನುಷ್ಯ ಜಾತಿ ತಾನೊಂದೇ ವಲಂ...

ಭಾರತದಲ್ಲಿ ಜಾತಿ ವ್ಯವಸ್ಥೆ ಹೇಗೆ ಹುಟ್ಟಿತು ಎಂಬುದಕ್ಕೆ ಯಾವುದೇ ನಿರ್ಧಿಷ್ಟ ಥಿಯರಿ ಇಲ್ಲ. ಆದರೆ, ಇಲ್ಲಿನ ವರ್ಗ ಸೃಷ್ಟಿ ಮಾತ್ರ ಇರಾನ್ ವ್ಯವಸ್ಥೆಯಂತೇ ಇದೆ.  ಪುರಾತನ ಇರಾನಿನ ಚರಿತ್ರೆಯಲ್ಲಿ ಇಂಥದೊಂದು ವ್ಯವಸ್ಥೆ ಇತ್ತು. ಅದಕ್ಕೆ ಪಿಸ್ತ್ರಾಸ್ ಎನ್ನುತ್ತಾರೆ. ನಮ್ಮಲ್ಲಿ ಅದು ಚಾತುರ್ವರ್ಣವಾಗಿದೆ. ಅಲ್ಲಿ ಅಥ್ರವಾನ್ಸ್ (ಪ್ರೀಸ್ಟ್ ಕ್ಲಾಸ್), ರಥೈಸ್ತಾ (ವಾರಿಯರ್ಸ್), ವಸ್ತ್ರಿಯಾ (ಮರ್ಕಂಟೈಲ್ ಕ್ಲಾಸ್) ಮತ್ತು ಹ್ಯುತಿ (ಆರ್ಟಿಸನ್) ಎನ್ನುವ ವರ್ಗ ವ್ಯವಸ್ಥೆ ಇದೆ. ನಮ್ಮಲ್ಲಿ ಇದನ್ನು ಕಲ್ಪಿಸಿಕೊಂಡರೆ ಪುರೋಹಿತ ಅಥವಾ ಬ್ರಾಹ್ಮಣ (ಅಥ್ರವಾನ್ಸ್), ಕ್ಷತ್ರಿಯ  (ರಥೈಸ್ತಾ), ವೈಶ್ಯ  (ವಸ್ತ್ರಿಯಾ) ಮತ್ತು ಶೂದ್ರ (ಹ್ಯುತಿ) ಎಂದು ಅರ್ಥೈಸಿಕೊಳ್ಳಬಹುದು.  ಆದಿ ಕಾಲದ ಇರಾನಿಯನ್ ವ್ಯವಸ್ಥೆ ಹೀಗೇ ಇತ್ತು. ಅದೇ ನಾಲ್ಕು ವರ್ಗಗಳು ಭಾರತದಲ್ಲೂ ಈಗಲೂ ಚಾಲ್ತಿಯಲ್ಲಿವೆ. ಹೀಗೆ ಒಂದು ಇರಾನ್ ಸಂಬಂಧ ಭಾರತಕ್ಕಿದೆ. ಚರ್ಮದ ಬಣ್ಣ, ನಯ ನಾಜೂಕು, ಕಣ್ಣು, ಬುದ್ಧಿವಂತಿಕೆಯನ್ನು ಹೋಲಿಸಿದರೆ ಭಾರತದ ಅದರಲ್ಲೂ ಉತ್ತರ ಭಾರತದ ಕಾಶ್ಮೀರಿ ಪಂಡಿತರು, ಉತ್ತರ ಪ್ರದೇಶದ ಪಂಡಿತ್, ಚಿತ್ಪಾವನ ಬ್ರಾಹ್ಮಣರು, ನಮ್ಮ ಕರಾವಳಿ ಮತ್ತು ಉತ್ತರ ಕನ್ನಡದ ಹವ್ಯಕರು ಹೆಚ್ಚೂ ಕಮ್ಮಿ ಇರಾನಿಗಳನ್ನು ಹೋಲುತ್ತಾರೆ (ಮೇಲ್ನೋಟಕ್ಕೆ).  ಬಹುಶಃ ಹೀಗೂ ಆಗಿರಬಹುದು, ಆಗ ಇರಾನ್ ನಲ್ಲಿ ಕ್ರೈಸ್ತ ಮತ್ತು ಇಸ್ಲಾಂ ಮುಂಚೆಯೂ ಹಲವಾರು ಸುಧಾರಣಾವಾದಿಗಳ ಅಥವಾ ಬಂಡುಕೋರರ

"ಮಣೆಗಾರ" ಬಸಿದಿಟ್ಟ ಒಡಲಾಳದ ನೋವು ನೆನೆದು...

ಹಾಲ್ಕುರಿಕೆ ಥಿಯೇಟರ್ ಕಾನ್ಸೆಪ್ಟ್ ಕನ್ನಡ ರಂಗಭೂಮಿಯಲ್ಲಿ ಹೊಸದೊಂದು ಸಂಚಲನವನ್ನುಂಟು ಮಾಡುತ್ತಿದೆ. ಒಟ್ಟಾರೆ ಭಾರತೀಯ ರಂಗಭೂಮಿ ಕಾಣುತ್ತಿರುವ ಹೊಸತನಕ್ಕೆ ಇದು ಮುಖ್ಯವಾದ ಸಾಕ್ಷಿ. ಅತ್ಯಂತ ಕ್ರಿಯಾಶೀಲ ತುಡಿತದ ರಂಗಕರ್ಮಿ ಹಾಲ್ಕುರಿಕೆ ಶಿವಶಂಕರ (ನಿರ್ದೇಶಕ/ನಾಟಕಕಾರ) ಇತ್ತೀಚೆಗೆ "ಮಣೆಗಾರ" (ತುಂಬಾಡಿ ರಾಮಯ್ಯನವರ ಆತ್ಮಕಥೆ) ಎನ್ನುವ ದಲಿತ ಕಥಾನಕವೊಂದನ್ನು ರಂಗದ ಮೇಲೆ ಅನಾವರಣಗೊಳಿಸಿದರು. ಪ್ರಯೋಗದ ದೃಷ್ಟಿಯಿಂದ ಕೆಲವು ಕೊರತೆಗಳು, ದೋಷಗಳು ಇವೆ. ಅದು ಯಾವುದೇ ಪ್ರಯೋಗಕ್ಕೆ ಇರುವಂಥವೇ. ಆದರೆ ಸಮುದಾಯವೊಂದರ ಒಡಲಾಳದ ನೋವನ್ನು ರಂಗದ ಮೇಲೆ ಬಸಿದಿಟ್ಟಾಗ  ಬೆಚ್ಚಿ ಬೀಳುವಂತಾಯಿತು. ವಿಶೇಷವಾಗಿ ದಲಿತೇತರಲ್ಲಿ ಸಾಮಾಜಿಕ ಪ್ರಜ್ಞೆ, ಜವಾಬ್ದಾರಿಯನ್ನು ಬಡಿದೆಬ್ಬಿಸುವಂಥ ಕಥಾನಕವದು. "ಮಣೆಗಾರ" ಪ್ರೊಸಿನಿಯಂಗಿಂತ ಆಪ್ತರಂಗಭೂಮಿಗೆ ಸೂಕ್ತವಾದ ವಸ್ತು. ಪ್ರಯೋಗ ಒಟ್ಟಾರೆ ಮನುಷ್ಯ ಬದುಕಿನ ನಡುವಿರುವ ಗ್ರೇ ಏರಿಯಾವೊಂದರ ದರುಶನ ಮಾಡಿಸಿತು. ಮೇಲ್ವರ್ಗ ಸಹಮಾನವರನ್ನು ಅದು ಹೇಗೆ ಅಸ್ಪೃಶ್ಯರು ಎಂದು ದೂರಕ್ಕಿಟ್ಟಿತ್ತು, ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿತ್ತು ಎನ್ನುವುದು ಇದರ ಮೂಲ ಸಂಕಟ. ಇಡೀ ನಾಟಕದಲ್ಲಿ ಬದುಕಿಗಾಗೇ ಸಂಘರ್ಷವಿದೆ. ಆಹಾರಕ್ಕಾಗಿ ಹಾಹಾಕಾರವಿದೆ. socio-cultural  ನೆಲೆಯಲ್ಲಿ ದೊಡ್ಡ ಸಂಘರ್ಷವಿದೆ. ಇದು ರಾಜಕೀಯ ಆಯಾಮದಲ್ಲೂ ಬಹುಮುಖ್ಯವಾದ ಸಂಘರ್ಷವೇ. ಶಿಕ್ಷಣ ಮತ್ತು ಅದರ ಆಧಾರದಲ್ಲಿ ಹುಟ

"ಬದುಕು-ಬಯಲು" ನಾಟಕ ಮತ್ತು ಮಾನವೀಯ ನೆಲೆಯ ಹುಡುಕಾಟ

ಫ್ರಾನ್ಸ್ ನ ಬರಹಗಾರ ಅಲ್ಫ್ರೆಡ್ ಜೆರಿ ಬರೆದ 'ದಿ ಸೂಪರ್ ಮೇಲ್' ಎನ್ನುವ ಕಾದಂಬರಿಯ ಪ್ರೊಟಗಾನಿಸ್ಟ್ ಆ್ಯಂಡ್ರಿ ಮಾರ್ಕೆಲ್ ಒಬ್ಬ ಜಂಟಲ್ ಮನ್, ವಿಜ್ಞಾನಿ ಕೂಡ. ಅವನಿಗೆ ಮಾನವ ಸಾಮರ್ಥ್ಯಕ್ಕೆ ಮಿತಿ ಎಂಬುದೇ ಇಲ್ಲ ಎನ್ನುವುದರಲ್ಲಿ ಬಲವಾದ ನಂಬಿಕೆ. ಆತ ಉಗಿಬಂಡಿ ಜತೆಗೂ ಯಾವುದೇ ವಿಶ್ರಾಂತಿ ಮತ್ತು ತ್ರಾಸಿಲ್ಲದೇ ಕ್ರಮಿಸಿ  ರೇಸ್ ಗೆಲ್ಲಬಲ್ಲ (ಕಾದಂಬರಿಯಲ್ಲಿ ರೈಲು ಮತ್ತು ಸೈಕ್ಲಿಸ್ಟ್ ನಡುವೆ ಒಂದು ರೇಸ್ ನಡೆಯುತ್ತದೆ). ಒಂದೇ ಹೆಂಗಸಿನ ಜತೆ 24 ಗಂಟೆಗಳಲ್ಲಿ 82 ಬಾರಿ ಸಂಭೋಗ ನಡೆಸಬಲ್ಲ 'ಕಾಮಪಟುತ್ವ'ದ ಸಾಹಸಗಳನ್ನೂ ಮಾಡಬಲ್ಲ. ಇದನ್ನು ಪುರುಷಪರಾಕ್ರಮದ ನೆಲೆಯಲ್ಲಿ ನೋಡೋದಾ? ಇಲ್ಲಾ ನಿಸರ್ಗ ಸಹಜ ಸಾಧ್ಯತೆಯ ನೆಲೆಯಲ್ಲಿ ನೋಡುವುದಾ?... - ಇದು ಒಂದು ರೀತಿಯ ವಿಕ್ಷಿಪ್ತ ಮನೋಧರ್ಮದ, ಸೈನ್ಸ್ ಫಿಕ್ಷನ್ ಕಾದಂಬರಿಯ ಸಂಕ್ಷಿಪ್ತ ನೋಟ. ಅಲ್ಫ್ರೆಡ್ ಜೆರಿ ಉತ್ತಮ ನಾಟಕಕಾರನೂ ಹೌದು. ಆತನ 'ಉಬು ರೊಯ್' ಹೆಸರಾಂತ ನಾಟಕಗಳಲ್ಲೊಂದು.    * * * ಜೆರಿ ಬಗ್ಗೆ ಓದುತ್ತಿದ್ದ ಹೊತ್ತಲ್ಲಿ ಹಿಜಡಾವೊಬ್ಬರ ಆತ್ಮಕಥನ ಆಧರಿಸಿದ "ಬದುಕು-ಬಯಲು" ಎನ್ನುವ ನಾಟಕ ವೀಕ್ಷಣೆಗೆ ತಿಪಟೂರಿನ ರಂಗ ಗೆಳೆಯ ನೀನಾಸಂ ಚಂದ್ರು ಆಹ್ವಾನ ನೀಡಿದರು.  ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ ನೋಡಿದೆ. ಅದಕ್ಕೂ ಮುಂಚೆ ನಾಟಕದ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಸಿ.ಎಸ್. ದ್ವಾರಕಾನಾಥ್, ಗೌರಿ ಲಂಕೇಶ್ ಮತ್ತಿತರ ಚಿಂತಕರ ವಿ