ವಿಷಯಕ್ಕೆ ಹೋಗಿ

ಹ್ಯಾಪಿ ಮೇರಿ ಕ್ರಿಸ್ಮಸ್..

ಕ್ರಿಸ್ ಮಸ್ ಅಂದರೆ ಪಶ್ಚಿಮದ ದೇಶಗಳಲ್ಲಿ ಕ್ರೈಸ್ತ ಜಗತ್ತು. ಇಂಡಿಯಾದಲ್ಲಿ ಅದೊಂದು ಧಾರ್ಮಿಕ ಆಚರಣೆ ಅಲ್ಲ. ಪ್ರೀತಿ, ಸ್ನೇಹ, ಸೌಹಾರ್ದತೆಯ ಸಂಭ್ರಮ. ಡಿಸೆಂಬರ್ 24ರಿಂದಲೇ ಕೇಕ್ ಸುಗ್ಗಿ ಶುರುವಾಗಿಬಿಡುತ್ತದೆ. ಬೆಂಗಳೂರಿನ ನೀಲಗಿರಿಸ್ ಕೇಕ್, ಕೇಕ್ ಶೋ.. ಕ್ರೈಸ್ತೇತರರೇ ಜಾಸ್ತಿ ಇರುವ ಕಮರ್ಷಿಯಲ್ ಸ್ಟ್ರೀಟ್, ಎಂ.ಜಿ, ಬ್ರಿಗೇಡ್ ರೋಡ್, ಪ್ರತಿ ಶಾಪಿಂಗ್ ಮಾಲುಗಳಲ್ಲಿ ಕ್ರಿಸ್ ಮಸ್ ಕಳೆಕಟ್ಟುತ್ತದೆ. ಬೆಳಕಿನ ಭವ್ಯತೆ, ಬಣ್ಣ ಬಣ್ಣದ ಸ್ಟಾರ್, ಅಬ್ಬರದ ಸಂಗೀತ... ಥೇಟು ಗಣಪನ ಹಬ್ಬದಂಥ ವಾತಾವರಣ ಸೃಷ್ಟಿಯಾಗಿರುತ್ತದೆ. ಹೌದು ಅಷ್ಟಕ್ಕೂ ಇಂಡಿಯಾ ತುಂಬ ಕ್ರೈಸ್ತರೇ ತುಂಬಿಕೊಂಡಿದ್ದಾರಾ! ಎಂದು ಪಶ್ಚಿಮದ ಕ್ರೈಸ್ತರೂ ನಾಚುವಂಥ ಕ್ರಿಸ್ ಮಸ್ ಇಲ್ಲಿ ವಿಜೃಂಭಿಸುತ್ತದೆ.
ಧಾರವಾಡದ ಕಿಟೆಲ್ ಸೈನ್ಸ್ ಕಾಲೇಜಿನಲ್ಲಿ ನಾನು ಪದವಿ ಓದುತ್ತಿದ್ದಾಗ ಕ್ರಿಸ್ ಮಸ್ ಬಂತೆಂದರೆ ನಮಗೆಲ್ಲ ಈವೆಂಟು, ರಜಾಕಾಲ. ನಾನೂ ಕಾಲೇಜಿನ ಗ್ರೂಪ್ ಸಾಂಗ್ ಟೀಂನಲ್ಲಿ ಹಾಡುಗಾರನಾಗುತ್ತಿದ್ದೆ. ಎಲ್ಲ ಚರ್ಚ್ ಸಂಗೀತದ ಧುನ್ ಗಳೇ. ಕೆಲ ಕ್ರೈಸ್ತ ಹುಡುಗರು ನನ್ನನ್ನು ಅದೆಷ್ಟು ಬಾರಿ ಪಿಯಾನೊ, ವಯೊಲಿನ್, ಗಿಟಾರ್ ಕಲಿಸ್ತೀನಿ ಬಾ ಎಂದು ಗೋಗರೆಯುತ್ತಿದ್ದರು. ಅದರಲ್ಲಿನ ಕೆಲ ಗೆಳೆಯರು ಈಗ ರಾಜ್ಯದ ವಿವಿಧ ಭಾಗಗಳಲ್ಲಿ ಪಾದ್ರಿಗಳಾಗಿದ್ದಾರೆ. ಮ್ಯಾಡ್ಸ್ MADS ಎನ್ನುವ ನಮ್ಮ ಗೆಳೆಯರ ಗುಂಪಿನ ಮೊದಲ  ಅಕ್ಷರ M ಅಂದರೆ ಮ್ಯಾಥ್ಯು ನಮ್ಮ ಅಕ್ಕರೆಯ ಮಿತ್ರ. ಆತ ಬಹುಶಃ ಎಲ್ಲಾ ಇನಸ್ಟ್ರುಮೆಂಟ್ಸ್ ನುಡಿಸಬಲ್ಲ ನಿಪುಣನಾಗಿದ್ದ. ಒಳ್ಳೆಯ ಮಾತುಗಾರ, ಪೇಂಟರ್ ಕೂಡ. ಅವನಿಂದ ಕ್ರೈಸ್ತರ ಹಲವು ವಿಷಯಗಳು ನಮಗೆ ಪರಿಚಯವಾಗಿದ್ದವು. ಕ್ರಿಸ್ ಮಸ್ ಬಂದಾಗೆಲ್ಲ ಅವನ ಜತೆ ನಾವೆಲ್ಲ ಕೇಕ್ ಹಂಚಿಕೊಂಡ ನೆನಪು ಈಗಲೂ ಹಸಿರಾಗಿದೆ. ಈ ಸಲವೂ ತುಂಬ ಸ್ಪೇಶಲ್ ಫ್ರೆಂಡ್ ಜತೆ ತುಂಬ ವಿಶಿಷ್ಠವಾಗಿ ಕೇಕ್ ಕತ್ತರಿಸಿ ಕ್ರಿಸ್ ಮಸ್ ಸವಿದೆ. ಪ್ರೀತಿ ಹಂಚಿಕೊಂಡೆ.
ಜೀಸಸ್ ನಲ್ಲಿ ನನದೊಂದು ಮನವಿ:
ಜೀಸಸ್ ನೀನೊಬ್ಬ ಪ್ರವಾದಿ. ಕ್ರೈಸ್ತರಷ್ಟೇ ಅಲ್ಲ, ಮುಸಲ್ಮಾನರೂ ನಿನ್ನ ಈಸಾ ಅಲೆ ಸಲಾಂ ಎಂದು ಒಪ್ಪಿಕೊಳ್ಳುತ್ತಾರೆ. ಮತ್ತೆ ಇಡೀ ಜಗತ್ತೇ ಒಪ್ಪಿಕೊಂಡಿದೆ ನಿನ್ನ. ಇಂಡಿಯಾ ಕೂಡ. ನಿನ್ನ ಜತೆ ನನಗೇನೂ ತಕರಾರಿಲ್ಲ. ಸಿಕ್ಕಾಪಟ್ಟೆ ಡಿಮ್ಯಾಂಡುಗಳಿವೆ. ಅವನ್ನೆಲಾ ಕಿವಿಬಿಚ್ಚಿ ಕೇಳಿಸಿಕೊಳ್ಳೋದಾದರೆ ಹೇಳ್ತಿನಪ್ಪಾ... (ಕಳೆದ ರಂಜಾನ್ ನಲ್ಲಿ ಅಲ್ಲಾಗೂ ಇಂಥದೇ ದುವಾ ಮಾಡಿದ್ದೆ)
ಈ ಸಲ ಜಗತ್ತಿಗೆ ನಿನ್ನ ಗಿಫ್ಟ್ ಏನು? ಎಂದು ಪ್ರೀತಿಯಿಂದ ಕೇಳೋಣ ಅನಿಸುತ್ತಿದೆ.
ನಿನ್ನ ಅನುಯಾಯಿಗಳು ಜಗತ್ತಿನ ತುಂಬ ಬಾಂಬು, ಯುದ್ಧಗಳನ್ನು ಶಾಂತಿ ಹೆಸರಲ್ಲೇ ಪ್ರತಿಪಾದಿಸುತ್ತಿದ್ದಾರೆ. ನಿನ್ನ ಬಹುವಾಗಿ ಅಪ್ಪಿಕೊಂಡ ಅಮೆರಿಕನ್ನರು ಜಗತ್ತಿನ ಶಾಂತಿ, ಸಂಪತ್ತಿಗೆ ಕನ್ನ ಹಾಕುವ ಕೆಲಸವನ್ನೇ ಮಾಡಿಕೊಂಡು ಬರುತ್ತಿದ್ದಾರೆ. ಈ ಯುದ್ಧಕೋರರಿಗೆ ಸದ್ಬುದ್ಧಿ ಕೊಡುವಿಯಾ..
ಇಂಡಿಯಾದಲ್ಲಿ ಮುಗ್ಧ ಮಗುವನ್ನೇ ಬಲಿಕೊಡುವಂಥ ಅನಿಷ್ಠರು ಈಗಲೂ ಇದ್ದಾರೆ. ಅವರಿಗೆ ಸದ್ಗತಿ ತೋರಿಸುತ್ತಿಯಾ... ಯೋಚಿಸು.
ಹೆಣ್ಣು-ಗಂಡು ದೇವರ ಸನ್ನಿಧಾನದಲ್ಲಿ ಸಮಾನರು ಎನ್ನುವ ನಿನ್ನ ಬೋಧನೆಯನ್ನು ಪುನರುಚ್ಛರಿಸುತ್ತಲೇ ಅವರಿಬ್ಬರನ್ನು ಪ್ರತ್ಯೇಕ ದ್ವೀಪವನ್ನಾಗಿಸಿ ವಸ್ತುಗಳ ಮೋಹ ಅಂಟಿಸುತ್ತಿರುವ ಮಾರುಕಟ್ಟೆ ಬುದ್ಧಿಗೆ ತಕ್ಕ ಶಾಸ್ತಿ ಮಾಡಿಸ್ತಿಯಾ ನೋಡು...
ಹಬ್ಬ ಎಂದರೆ ಬರಿಯ ವ್ಯಾಪಾರ, ದೇವರೆಂದರೆ ಭಯ ಹುಟ್ಟಿಸುವ ಮಂದಿಗೆ ನೀನೇ ದಾರಿ ತೋರಿಸ್ತಿಯಾ..
ಅನ್ಯ ಧರ್ಮದ ಬಗ್ಗೆ ನಿನ್ನ ಹೆಸರಲ್ಲಿ ಪ್ರತ್ಯೇಕ ಜಗತ್ತನ್ನೇ ರೂಪಿಸಿಕೊಂಡಂತಿರುವ ಮತಾಂಧ ಅನುಯಾಯಿಗಳು ವೆಬ್, ಬ್ಲಾಗುಗಳು, ಮೀಡಿಯಾ ಮೂಲಕ ದ್ವೇಷ ಹರಡುತ್ತಿರುವುದರ ಬಗ್ಗೆ ಏನಾದರೂ ಮಾಡುತ್ತಿಯಾ...
ಈಗಲೂ ಹಿಡಿ ಅನ್ನಕ್ಕಾಗಿ ದೇಹ ಮಾರಿಕೊಳ್ಳುವವರಿದ್ದಾರೆ. ದೇಹದ ಬಂಡವಾಳದಲ್ಲೇ ಬದುಕು ಸಾಗಿಸುವವರೂ ಇದ್ದಾರೆ. ಇವರಿಗೆಲ್ಲ ಸದ್ಬುದ್ಧಿ ಕೊಡು ಎಂದು ಪ್ರಾರ್ಥಿಸುತ್ತಿಯಾ...
 ಮಾರುದ್ದ ಬಟ್ಟೆಯಿಲ್ಲದೇ ಬೀದಿಗೆ ಬೀಳುವ ಅಸಂಖ್ಯರಿಗೆ ನೀನು ಮೈತುಂಬಾ ಹೊದ್ದುಕೊಂಡ ಅಷ್ಟೊಂದು ದೊಡ್ಡ ಬಟ್ಟೆಯಲ್ಲಿನ ಒಂದು ತುಂಡನ್ನಾದರೂ ಕೊಡಬಹುದಾ ನೋಡು...
ಇವೆಲ್ಲ ನಿಂಗೆ ಗೊತ್ತು. ನಿನಗೆ ಗೊತ್ತಿಲ್ಲದ್ದೇನಿದ್ದೀತು... ಕ್ರಿಸ್ ಮಸ್ ದಿನ ನಿನ್ನ ಮುಂದೆ ಕತ್ತರಿಸುವ ಅಸಂಖ್ಯ ಕೇಕ್ ಗಳಲ್ಲಿ ಅದೆಷ್ಟೊ ಬಡವರ ಹಸಿವಿಗೆ ಅನ್ನವಿದೆ! ನಿತ್ಯ ನಿನ್ನ ಮುಂದೆ ಸುಡುವ ಕ್ಯಾಂಡೆಲ್ ಗಳಲ್ಲಿ ಎಷ್ಟೊಂದು ಕತ್ತಲಿದೆ!.. ಬಡವರ ಮನೆಯಲ್ಲಿ ಬುಡ್ಡಿ ದೀಪಕ್ಕಿಂತ ಹೆಚ್ಚಾಗಿ ಅವರ ಹೊಟ್ಟೆ ಉರಿಯುತ್ತದೆ!! ಗೊತ್ತಲ್ಲ. ನಿನ್ನ ಅನುಯಾಯಿಗಳ ಹುಲಿಲೊಯ್ ಹುಲಿಲೊಯ್ ಎನ್ನುವ ನಿನಾದದಲ್ಲಿ ದೀನ ದಲಿತರ ಆರ್ತನಾದವೂ ಇದೆ...
ಇದೆಲ್ಲ ನಿನಗೆ ಗೊತ್ತಿದ್ದದ್ದೇ. ಆದರೂ ನಿನ್ನ ಕರ್ತನ ಬಳಿ ಮತ್ತೆ ಪ್ರೇಯರ್ ಮಾಡು ಪ್ಲೀಸ್.
ಐ ವಿಶ್ ಯು ಅಂಡ ಆಲ್ ಎ ಹ್ಯಾಪಿ ಮೇರಿ ಕ್ರಿಸ್ಮಸ್.
ಆಮೆನ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮನುಷ್ಯ ಜಾತಿ ತಾನೊಂದೇ ವಲಂ...

ಭಾರತದಲ್ಲಿ ಜಾತಿ ವ್ಯವಸ್ಥೆ ಹೇಗೆ ಹುಟ್ಟಿತು ಎಂಬುದಕ್ಕೆ ಯಾವುದೇ ನಿರ್ಧಿಷ್ಟ ಥಿಯರಿ ಇಲ್ಲ. ಆದರೆ, ಇಲ್ಲಿನ ವರ್ಗ ಸೃಷ್ಟಿ ಮಾತ್ರ ಇರಾನ್ ವ್ಯವಸ್ಥೆಯಂತೇ ಇದೆ.  ಪುರಾತನ ಇರಾನಿನ ಚರಿತ್ರೆಯಲ್ಲಿ ಇಂಥದೊಂದು ವ್ಯವಸ್ಥೆ ಇತ್ತು. ಅದಕ್ಕೆ ಪಿಸ್ತ್ರಾಸ್ ಎನ್ನುತ್ತಾರೆ. ನಮ್ಮಲ್ಲಿ ಅದು ಚಾತುರ್ವರ್ಣವಾಗಿದೆ. ಅಲ್ಲಿ ಅಥ್ರವಾನ್ಸ್ (ಪ್ರೀಸ್ಟ್ ಕ್ಲಾಸ್), ರಥೈಸ್ತಾ (ವಾರಿಯರ್ಸ್), ವಸ್ತ್ರಿಯಾ (ಮರ್ಕಂಟೈಲ್ ಕ್ಲಾಸ್) ಮತ್ತು ಹ್ಯುತಿ (ಆರ್ಟಿಸನ್) ಎನ್ನುವ ವರ್ಗ ವ್ಯವಸ್ಥೆ ಇದೆ. ನಮ್ಮಲ್ಲಿ ಇದನ್ನು ಕಲ್ಪಿಸಿಕೊಂಡರೆ ಪುರೋಹಿತ ಅಥವಾ ಬ್ರಾಹ್ಮಣ (ಅಥ್ರವಾನ್ಸ್), ಕ್ಷತ್ರಿಯ  (ರಥೈಸ್ತಾ), ವೈಶ್ಯ  (ವಸ್ತ್ರಿಯಾ) ಮತ್ತು ಶೂದ್ರ (ಹ್ಯುತಿ) ಎಂದು ಅರ್ಥೈಸಿಕೊಳ್ಳಬಹುದು.  ಆದಿ ಕಾಲದ ಇರಾನಿಯನ್ ವ್ಯವಸ್ಥೆ ಹೀಗೇ ಇತ್ತು. ಅದೇ ನಾಲ್ಕು ವರ್ಗಗಳು ಭಾರತದಲ್ಲೂ ಈಗಲೂ ಚಾಲ್ತಿಯಲ್ಲಿವೆ. ಹೀಗೆ ಒಂದು ಇರಾನ್ ಸಂಬಂಧ ಭಾರತಕ್ಕಿದೆ. ಚರ್ಮದ ಬಣ್ಣ, ನಯ ನಾಜೂಕು, ಕಣ್ಣು, ಬುದ್ಧಿವಂತಿಕೆಯನ್ನು ಹೋಲಿಸಿದರೆ ಭಾರತದ ಅದರಲ್ಲೂ ಉತ್ತರ ಭಾರತದ ಕಾಶ್ಮೀರಿ ಪಂಡಿತರು, ಉತ್ತರ ಪ್ರದೇಶದ ಪಂಡಿತ್, ಚಿತ್ಪಾವನ ಬ್ರಾಹ್ಮಣರು, ನಮ್ಮ ಕರಾವಳಿ ಮತ್ತು ಉತ್ತರ ಕನ್ನಡದ ಹವ್ಯಕರು ಹೆಚ್ಚೂ ಕಮ್ಮಿ ಇರಾನಿಗಳನ್ನು ಹೋಲುತ್ತಾರೆ (ಮೇಲ್ನೋಟಕ್ಕೆ).  ಬಹುಶಃ ಹೀಗೂ ಆಗಿರಬಹುದು, ಆಗ ಇರಾನ್ ನಲ್ಲಿ ಕ್ರೈಸ್ತ ಮತ್ತು ಇಸ್ಲಾಂ ಮುಂಚೆಯೂ ಹಲವಾರು ಸುಧಾರಣಾವಾದಿಗಳ ಅಥವಾ ಬಂಡುಕೋರರ

"ಮಣೆಗಾರ" ಬಸಿದಿಟ್ಟ ಒಡಲಾಳದ ನೋವು ನೆನೆದು...

ಹಾಲ್ಕುರಿಕೆ ಥಿಯೇಟರ್ ಕಾನ್ಸೆಪ್ಟ್ ಕನ್ನಡ ರಂಗಭೂಮಿಯಲ್ಲಿ ಹೊಸದೊಂದು ಸಂಚಲನವನ್ನುಂಟು ಮಾಡುತ್ತಿದೆ. ಒಟ್ಟಾರೆ ಭಾರತೀಯ ರಂಗಭೂಮಿ ಕಾಣುತ್ತಿರುವ ಹೊಸತನಕ್ಕೆ ಇದು ಮುಖ್ಯವಾದ ಸಾಕ್ಷಿ. ಅತ್ಯಂತ ಕ್ರಿಯಾಶೀಲ ತುಡಿತದ ರಂಗಕರ್ಮಿ ಹಾಲ್ಕುರಿಕೆ ಶಿವಶಂಕರ (ನಿರ್ದೇಶಕ/ನಾಟಕಕಾರ) ಇತ್ತೀಚೆಗೆ "ಮಣೆಗಾರ" (ತುಂಬಾಡಿ ರಾಮಯ್ಯನವರ ಆತ್ಮಕಥೆ) ಎನ್ನುವ ದಲಿತ ಕಥಾನಕವೊಂದನ್ನು ರಂಗದ ಮೇಲೆ ಅನಾವರಣಗೊಳಿಸಿದರು. ಪ್ರಯೋಗದ ದೃಷ್ಟಿಯಿಂದ ಕೆಲವು ಕೊರತೆಗಳು, ದೋಷಗಳು ಇವೆ. ಅದು ಯಾವುದೇ ಪ್ರಯೋಗಕ್ಕೆ ಇರುವಂಥವೇ. ಆದರೆ ಸಮುದಾಯವೊಂದರ ಒಡಲಾಳದ ನೋವನ್ನು ರಂಗದ ಮೇಲೆ ಬಸಿದಿಟ್ಟಾಗ  ಬೆಚ್ಚಿ ಬೀಳುವಂತಾಯಿತು. ವಿಶೇಷವಾಗಿ ದಲಿತೇತರಲ್ಲಿ ಸಾಮಾಜಿಕ ಪ್ರಜ್ಞೆ, ಜವಾಬ್ದಾರಿಯನ್ನು ಬಡಿದೆಬ್ಬಿಸುವಂಥ ಕಥಾನಕವದು. "ಮಣೆಗಾರ" ಪ್ರೊಸಿನಿಯಂಗಿಂತ ಆಪ್ತರಂಗಭೂಮಿಗೆ ಸೂಕ್ತವಾದ ವಸ್ತು. ಪ್ರಯೋಗ ಒಟ್ಟಾರೆ ಮನುಷ್ಯ ಬದುಕಿನ ನಡುವಿರುವ ಗ್ರೇ ಏರಿಯಾವೊಂದರ ದರುಶನ ಮಾಡಿಸಿತು. ಮೇಲ್ವರ್ಗ ಸಹಮಾನವರನ್ನು ಅದು ಹೇಗೆ ಅಸ್ಪೃಶ್ಯರು ಎಂದು ದೂರಕ್ಕಿಟ್ಟಿತ್ತು, ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿತ್ತು ಎನ್ನುವುದು ಇದರ ಮೂಲ ಸಂಕಟ. ಇಡೀ ನಾಟಕದಲ್ಲಿ ಬದುಕಿಗಾಗೇ ಸಂಘರ್ಷವಿದೆ. ಆಹಾರಕ್ಕಾಗಿ ಹಾಹಾಕಾರವಿದೆ. socio-cultural  ನೆಲೆಯಲ್ಲಿ ದೊಡ್ಡ ಸಂಘರ್ಷವಿದೆ. ಇದು ರಾಜಕೀಯ ಆಯಾಮದಲ್ಲೂ ಬಹುಮುಖ್ಯವಾದ ಸಂಘರ್ಷವೇ. ಶಿಕ್ಷಣ ಮತ್ತು ಅದರ ಆಧಾರದಲ್ಲಿ ಹುಟ

"ಬದುಕು-ಬಯಲು" ನಾಟಕ ಮತ್ತು ಮಾನವೀಯ ನೆಲೆಯ ಹುಡುಕಾಟ

ಫ್ರಾನ್ಸ್ ನ ಬರಹಗಾರ ಅಲ್ಫ್ರೆಡ್ ಜೆರಿ ಬರೆದ 'ದಿ ಸೂಪರ್ ಮೇಲ್' ಎನ್ನುವ ಕಾದಂಬರಿಯ ಪ್ರೊಟಗಾನಿಸ್ಟ್ ಆ್ಯಂಡ್ರಿ ಮಾರ್ಕೆಲ್ ಒಬ್ಬ ಜಂಟಲ್ ಮನ್, ವಿಜ್ಞಾನಿ ಕೂಡ. ಅವನಿಗೆ ಮಾನವ ಸಾಮರ್ಥ್ಯಕ್ಕೆ ಮಿತಿ ಎಂಬುದೇ ಇಲ್ಲ ಎನ್ನುವುದರಲ್ಲಿ ಬಲವಾದ ನಂಬಿಕೆ. ಆತ ಉಗಿಬಂಡಿ ಜತೆಗೂ ಯಾವುದೇ ವಿಶ್ರಾಂತಿ ಮತ್ತು ತ್ರಾಸಿಲ್ಲದೇ ಕ್ರಮಿಸಿ  ರೇಸ್ ಗೆಲ್ಲಬಲ್ಲ (ಕಾದಂಬರಿಯಲ್ಲಿ ರೈಲು ಮತ್ತು ಸೈಕ್ಲಿಸ್ಟ್ ನಡುವೆ ಒಂದು ರೇಸ್ ನಡೆಯುತ್ತದೆ). ಒಂದೇ ಹೆಂಗಸಿನ ಜತೆ 24 ಗಂಟೆಗಳಲ್ಲಿ 82 ಬಾರಿ ಸಂಭೋಗ ನಡೆಸಬಲ್ಲ 'ಕಾಮಪಟುತ್ವ'ದ ಸಾಹಸಗಳನ್ನೂ ಮಾಡಬಲ್ಲ. ಇದನ್ನು ಪುರುಷಪರಾಕ್ರಮದ ನೆಲೆಯಲ್ಲಿ ನೋಡೋದಾ? ಇಲ್ಲಾ ನಿಸರ್ಗ ಸಹಜ ಸಾಧ್ಯತೆಯ ನೆಲೆಯಲ್ಲಿ ನೋಡುವುದಾ?... - ಇದು ಒಂದು ರೀತಿಯ ವಿಕ್ಷಿಪ್ತ ಮನೋಧರ್ಮದ, ಸೈನ್ಸ್ ಫಿಕ್ಷನ್ ಕಾದಂಬರಿಯ ಸಂಕ್ಷಿಪ್ತ ನೋಟ. ಅಲ್ಫ್ರೆಡ್ ಜೆರಿ ಉತ್ತಮ ನಾಟಕಕಾರನೂ ಹೌದು. ಆತನ 'ಉಬು ರೊಯ್' ಹೆಸರಾಂತ ನಾಟಕಗಳಲ್ಲೊಂದು.    * * * ಜೆರಿ ಬಗ್ಗೆ ಓದುತ್ತಿದ್ದ ಹೊತ್ತಲ್ಲಿ ಹಿಜಡಾವೊಬ್ಬರ ಆತ್ಮಕಥನ ಆಧರಿಸಿದ "ಬದುಕು-ಬಯಲು" ಎನ್ನುವ ನಾಟಕ ವೀಕ್ಷಣೆಗೆ ತಿಪಟೂರಿನ ರಂಗ ಗೆಳೆಯ ನೀನಾಸಂ ಚಂದ್ರು ಆಹ್ವಾನ ನೀಡಿದರು.  ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ ನೋಡಿದೆ. ಅದಕ್ಕೂ ಮುಂಚೆ ನಾಟಕದ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಸಿ.ಎಸ್. ದ್ವಾರಕಾನಾಥ್, ಗೌರಿ ಲಂಕೇಶ್ ಮತ್ತಿತರ ಚಿಂತಕರ ವಿ