ವಿಷಯಕ್ಕೆ ಹೋಗಿ

ಜನತಾ ಪರಿವಾರದ ಸಿದ್ದರಾಮಯ್ಯ ಈಗ ಕಾಂಗ್ರೆಸ್ ಸಿಎಂ...

ಸಿದ್ದರಾಮಯ್ಯ ಈಗ ಕಾಂಗ್ರೆಸ್ ಸಿಎಂ. ಹಿಂದುಳಿದ ವರ್ಗಕ್ಕೆ ಸೇರುವ ಗೌಡಕುರುಬ ಜನಾಂಗದಿಂದ ಉದಯಿಸಿದ ನಾಯಕ. ಜನತಾ ಪರಿವಾರ ಇವರ ರಾಜಕೀಯ ತಾಯಿ ಬೇರು. 1983ರಿಂದ 2006ರವರೆಗೆ  23 ವರ್ಷಗಳ ಕಾಲ ಪ್ರಭಲ ಕಾಂಗ್ರೆಸ್ ವಿರೋಧಿ ನೆಲೆಯಿಂದಲೇ ರಾಜಕೀಯದ ಕೆರಿಯರ್ ರೂಪಿಸಿಕೊಂಡು ಬಂದವರು.
  ಪಕ್ಷದ ಉನ್ನತ ಪದಾಧಿಕಾರಿಯಾಗಿ, ಮಂತ್ರಿಯಾಗಿ, ಉಪಮುಖ್ಯಮಂತ್ರಿಯಾಗಿ (ಎರಡು ಬಾರಿ) ಅಧಿಕಾರದ ಎಲ್ಲ ಮೇಲ್ ಸ್ತರಗಳನ್ನು ಏರಿದ್ದು ಜನತಾ ಪರಿವಾರದಲ್ಲಿದ್ದಾಗಲೇ. ಆಗ ಬಾಕಿ ಉಳಿದದ್ದು ಮುಖ್ಯಮಂತ್ರಿ ಪಟ್ಟ. ಅದನ್ನು ಕಾಂಗ್ರೆಸ್ ನಲ್ಲಿದ್ದುಕೊಂಡು ಸಾಧ್ಯವಾಗಿಸಿಕೊಂಡಿದ್ದಾರೆ. ಸತ್ಯದ ಹೆಸರಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನವನ್ನೂ ಸ್ವೀಕರಿಸಿದ್ದಾರೆ.
 ಸತ್ಯವೆಂದರೆ ಮುಖ್ಯಮಂತ್ರಿ ಆಗುವ ಒಂದಂಶದ ಕಾರ್ಯಕ್ರಮ ಇಟ್ಟುಕೊಂಡೇ ಅವರು ಕಾಂಗ್ರೆಸ್ ಸೇರಿದ್ದು. ಅಲ್ಪ ಅವಧಿಯಲ್ಲೇ (7ವರ್ಷ) ಅದು ಸಾಕಾರಗೊಂಡಿದ್ದು ಗಮನಾರ್ಹ ಅಂಶ. ಇದನ್ನು ರಾಜಕೀಯ ಚತುರತೆ ಅನ್ನಬೇಕೋ, ಅದೃಷ್ಟ ಅನ್ನಬೇಕೋ, ಪಟ್ಟದ ಹೋರಾಟಗಾರನೊಬ್ಬನಿಗೆ (ಮುಖ್ಯಮಂತ್ರಿ ಪಟ್ಟಕ್ಕೆ) ಸಂದ ಜಯ ಅನ್ನಬೇಕೋ?... ಏನೇ ಭಾವಿಸಿಕೊಂಡರೂ ಸಿದ್ದರಾಮಯ್ಯ ದಕ್ಷ ಆಡಳಿತಗಾರ, ಮುಖ್ಯಮಂತ್ರಿ ಪಟ್ಟಕ್ಕೆ ಈ ಸಂದರ್ಭದ ಸೂಕ್ತ ಅಭ್ಯರ್ಥಿ ಎನ್ನುವುದು ಸತ್ಯ.
 ಸಿದ್ದರಾಮಯ್ಯ 2006ರಿಂದ ಈಚೆಗಷ್ಟೇ ಪಕ್ಷ ಸೇರಿಕೊಂಡು, ಅತ್ಯಂತ ಕಡಿಮೆ ಅವಧಿಯಲ್ಲಿ ಕಾಂಗ್ರೆಸ್ ನಿಂದ ಸಿಎಂ ಪಟ್ಟ ಏರಿದ್ದು ರಾಜ್ಯದ ಮಟ್ಟಿಗೊಂದು ದಾಖಲೆ. ಮೂಲ ಕಾಂಗ್ರೆಸ್ಸಿಗರ ದೃಷ್ಟಿಯಲ್ಲಿ ಇದು ನುಂಗಲಾರದ ತುತ್ತು. ಅಷ್ಟೇ ಅಲ್ಲ, ಅನ್ಯಾಯ ಕೂಡ.
 ಸಿದ್ದರಾಮಯ್ಯನವರ ರಾಜಕಾರಣಕ್ಕೆ ಕಾಂಗ್ರೆಸ್ ವಿರೋಧಿ ನಿಲುವೇ ಮೂಲ ನೆಲೆಯಾಗಿತ್ತು. ಆ ನೆಲೆಯಿಂದ ಹೊರ ಬರುವ ಹೊತ್ತಿಗೆ (2006) ರಾಜ್ಯ ದೊಡ್ಡ ರಾಜಕೀಯ ಸ್ಥಿತ್ಯಂತರಕ್ಕೂ ಅಣಿಯಾಗಿತ್ತು. ಒಕ್ಕಲಿಗರು, ಲಿಂಗಾಯತರ ನಡುವೆ ರಾಜಕೀಯ ಅಧಿಕಾರ ಎನ್ನುವುದು ಕಾಲ್ಚೆಂಡಿನಂತಾಗಿತ್ತು. ಒಂದು ಹಂತದಲ್ಲಿ ಲಿಂಗಾಯತ-ಒಕ್ಕಲಿಗ ಕೈಜೋಡಿಸಿಬಿಟ್ಟರೆ ಅಹಿಂದಕ್ಕೆ ಅವಕಾಶವೇ ಇರುವುದಿಲ್ಲ ಎನ್ನುವ ಮನಸ್ಥಿತಿಗೆ ಉಭಯ ಕೋಮಿನ ನಾಯಕರುಗಳು ತಲುಪಿದ್ದರು  (20:20 ಎನ್ನುವ ಹಂಚಿಕೆ ಸೂತ್ರ ಅಂಥದೊಂದು ಸಾಧ್ಯತೆಯಾಗಿ ಗಮನ ಸೆಳೆದಿತ್ತು). ಇದನ್ನು ಅದುಮಿಡಬಲ್ಲ ಸಮತೋಲನದ ಹೊಸ ರಾಜಕೀಯ ಶಕ್ತಿಯೊಂದರ ಅನಿವಾರ್ಯತೆ ಎದ್ದು ಕಾಣುತ್ತಿತ್ತು. ಅಹಿಂದ ಮೂಲಕ ಅಂಥದೊಂದು ಸಾಧ್ಯತೆ ಇದೆ ಎನ್ನುವ ಅಂಶ  ಸ್ಪಷ್ಟವಾಗಿತ್ತು. ಸಿದ್ದರಾಮಯ್ಯ ಜನತಾ ಪರಿವಾರದಿಂದ ಹೊರಬಂದ ತಕ್ಷಣ ಗಮನ ಹರಿಸಿದ್ದು ಅದರತ್ತಲೇ.
 ಅಲ್ಪಸಂಖ್ಯಾತರು, ಹಿಂದುಳಿದ ವರ್ಗ ಮತ್ತು ದಲಿತರು ಒಂದೇ ಸೂರಿಗೆ ಬಂದರೆ ಪರ್ಯಾಯ ರಾಜಕೀಯ ಶಕ್ತಿಯಾಗುವ ಸಾಧ್ಯತೆ ಯಾವತ್ತೂ ಇದ್ದೇ ಇತ್ತು. ದೇವರಾಜ ಅರಸು ಅದನ್ನು ಪ್ರಜ್ಞಾಪೂರ್ವಕವಾಗೇ ಚಲಾವಣೆಗೆ ತಂದು ಕೊಂಚ ಯಶಸ್ಸನ್ನೂ ಕಂಡರು ಎನ್ನುವುದು ಇತಿಹಾಸ. ಇಂಥ ಇತಿಹಾಸದ ಬೆಳಕಿನಲ್ಲಿ ರಾಜ್ಯವನ್ನು ಕೊಂಡೊಯ್ಯಲು ನಿರ್ಧರಿಸಿಕೊಂಡಂತಿದ್ದ ಸಿದ್ದರಾಮಯ್ಯ  ಅಹಿಂದ ಸಂಘಟನೆ ಬಲಪಡಿಸುವುದಕ್ಕೆ ಮುಂದಾದರು. ಅದು ಹೊಸದೊಂದು ರಾಜಕೀಯ ಶಕ್ತಿಯಾಗಿ ರೂಪುಗೊಳ್ಳುವುದರ ಸಂಕೇತವಾಗಿಯೂ ಗಮನ ಸೆಳೆಯಿತು. ಅಹಿಂದ ಸಮಾವೇಶಗಳ ದಿಢೀರ್ ಯಶಸ್ಸಿನ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗದವರು ಅವರನ್ನು ಸ್ಟಾರ್ ಆಗಿಸಿದರು.
  ಅಹಿಂದ ರಾಜಕಾರಣಕ್ಕೆ ಸಂಬಂಧಿಸಿದಂತೆ 2013ರ ಚುನಾವಣೆ ನಿರ್ಣಾಯಕವಾಗಿತ್ತು. ಅಂದುಕೊಂಡಂತೆ 'ಅಹಿಂದ' ಕಾರ್ಡ್ ಬಳಕೆಯಾಗಿ ಭರ್ಜರಿ ಫಲಿತಾಂಶವನ್ನೂ ತಂದಿತು. ಅತ್ಯಂತ ಕ್ಷಿಪ್ರವಾಗಿ 'ಅ' ಮತ್ತು 'ದ' ಸರಿಸಿ ಈಗ 'ಹಿಂ' ಗೆ ಯಶಸ್ಸಿನ ಗರಿ ಕಟ್ಟಿಕೊಡಲಾಗಿದೆ. ಮುಖ್ಯಮಂತ್ರಿ ಗರಿ ಕಟ್ಟಿಕೊಂಡ ಹಿಂದುಳಿದ ವರ್ಗದ ಸಿದ್ದರಾಮಯ್ಯ ದಕ್ಷ ಆಡಳಿತಗಾರ ಎನ್ನುವುದರಲ್ಲಿ ಅನುಮಾನಗಳಿಲ್ಲ. ಈ ಹಿನ್ನೆಲೆಯಲ್ಲಿ ದಕ್ಷತೆಯ 'ಕೈ'ಗೆ ಅಧಿಕಾರದ ಸೂತ್ರ ನೀಡಿದ್ದು ಈ ಸಲದ ಬಹುಮುಖ್ಯ ಜನಾದೇಶ ಎಂದೆಲ್ಲ ವ್ಯಾಖ್ಯಾನಗಳು ಗರಿಗೆದರಿಕೊಂಡಿವೆ.
  ಸಿದ್ದರಾಮಯ್ಯ ಕೇವಲ 7 ವರ್ಷದ ಕಾಂಗ್ರೆಸ್ ಜೀವನದಲ್ಲಿ ಕನಸಿನ ಮುಖ್ಯಮಂತ್ರಿ ಗದ್ದುಗೆ ಅಲಂಕರಿಸಿದರು! ಇದು ಸಿದ್ದು ಪವಾಡವೂ ಹೌದು. ಅಹಿಂದ ಶಕ್ತಿಯೂ ಹೌದು. ಕಾಂಗ್ರೆಸ್ ನ ಸದ್ಯದ ರಾಜಕೀಯ ಅನಿವಾರ್ಯತೆಯೂ ಹೌದು. ಜೀವನಪೂರ್ತಿ ಕಾಂಗ್ರೆಸ್ ಮಣ್ಣು ಹೊತ್ತ ದಲಿತ ವರ್ಗದ ಮಿಸ್ಟರ್ ಕ್ಲೀನ್ ಮಲ್ಲಿಕಾರ್ಜುನ ಖರ್ಗೆ, ಮುಸ್ಲಿಂ ಸಮುದಾಯದ ದಕ್ಷ, ಮುತ್ಸದ್ದಿ ರಾಜಕಾರಣಿ ಜಾಫರ್ ಷರೀಫ್ ಅಂಥವರ ದುರಾದೃಷ್ಟವೂ ಹೌದು.
ಈ ಹಿನ್ನೆಲೆಯಲ್ಲಿ ರಾಜ್ಯದ ಪ್ರಸ್ತುತ ರಾಜಕಾರಣ ಅದರಲ್ಲೂ ಕಾಂಗ್ರೆಸ್ ಮತ್ತಿತರ ಪಕ್ಷಗಳ ರಾಜಕೀಯ ನಡೆಯ ಬಗ್ಗೆ ಗಮನ ಹರಿಸಿದಾಗ ನನಗೆ ದಕ್ಕಿದ ವಾಸ್ತವಾಂಶಗಳು ಮತ್ತು ಒಳನೋಟಗಳನ್ನು ಇಲ್ಲಿ ಹಿಡಿದಿಡಲು ಯತ್ನಿಸುತ್ತಿದ್ದೇನೆ.

ಕಾಂಗ್ರೆಸ್ ದೂರದೃಷ್ಟಿ  ಮತ್ತು ಈ ಸಲದ ರಾಜಕೀಯ ಟಾರ್ಗೆಟ್:
  • ಮುಖ್ಯವಾಗಿ ರಾಜ್ಯದ ದೊಡ್ಡ ಲಿಂಗಾಯತ ಮತಬ್ಯಾಂಕ್ ಅನ್ನು  ಬಿಜೆಪಿಯಿಂದ ಬೇರ್ಪಡಿಸುವುದು. 
  • 2004 ಮತ್ತು 2008ರ ವಿಧಾನಸಭೆ ಚುನಾವಣೆಯಲ್ಲಿ ದೊಡ್ಡ ಯಶಸ್ಸನ್ನು ಕಂಡ ಬಿಜೆಪಿ, ಹಿಂದೂತ್ವದ ಕಾರ್ಡ್ ಇಟ್ಟುಕೊಂಡು ಹಿಂದು ಪೊಲರೈಸೇಷನ್ ಯತ್ನದ ಮೂಲಕ  ರಾಜ್ಯದಲ್ಲಿ ಭದ್ರ ಬುನಾದಿ ಹಾಕಿಕೊಳ್ಳುವತ್ತ ಸಾಗಿತ್ತು. ಹಿಂದೂ ಪಾಕೆಟ್ ನಲ್ಲಿರುವ ಬಹುದೊಡ್ಡ ಸಂಖ್ಯೆಯ ಹಿಂದುಳಿದ ವರ್ಗಗಳನ್ನು ಬೇರ್ಪಡಿಸುವ ಮೂಲಕ ಆ ಸಾಧ್ಯತೆಯನ್ನು ತಪ್ಪಿಸುವುದು. 
  • ಒಕ್ಕಲಿಗ ಸಮುದಾಯದಲ್ಲಿ ದೇವೇಗೌಡ, ಕುಮಾರಸ್ವಾಮಿಯವರ ಪ್ರಭಾವ ದಟ್ಟವಾಗುತ್ತ ಸಾಗುವುದನ್ನು ತಡೆಯುವುದು. 
ಈ ಮೂರು ಮುಖ್ಯ ಗುರಿಗಳನ್ನು ಹಾಕಿಕೊಂಡಿದ್ದ ಕಾಂಗ್ರೆಸ್ ತುಂಬ ಜಾಣತನದಿಂದ 2013ರ ಚುನಾವಣೆಯಷ್ಟೊತ್ತಿಗೆ ಇವೆಲ್ಲವನ್ನು ಸಾಧಿಸಿತು ಎನ್ನುವುದು ನನ್ನ ಅಭಿಪ್ರಾಯ.
 ಮೊದಲಿಗೆ ಅದು ರೆಡ್ಡಿ, ಯಡಿಯೂರಪ್ಪಗೆ ಹಗರಣಗಳ ಕುಣಿಕೆ ತೋರಿಸುವ ಮೂಲಕ ಬಿಜೆಪಿಯ ಅಧಿಕಾರ ದರ್ಪವನ್ನು ಡೈಲೂಟ್ ಮಾಡಿತು. ರೆಡ್ಡಿ ಜೈಲು ಪಾಲಾದರು. ಮತ್ತೊಂದು ಹಗರಣದ ಹಿನ್ನೆಲೆಯಲ್ಲಿ ಯಡಿಯೂರಪ್ಪ ಬಿಜೆಪಿ ತೊರೆಯಲೇಬೇಕಾದಂಥ ವಾತಾವರಣ ಸೃಷ್ಟಿಯಾಯಿತು. ಬಿಜೆಪಿ ಹೈಕಮಾಂಡ್ ಹಾಗೂ ರಾಜ್ಯ ಘಟಕದಲ್ಲಿನ ಮಹತ್ವಾಕಾಂಕ್ಷಿ ನಾಯಕರ 'ಕೇಂಗಣ್ಣಿಗೆ' (ಕೇಸರಿ ಕಣ್ಣಿಗೆ) ಗುರಿಯಾದ ಯಡಿಯೂರಪ್ಪ ಅಧಿಕಾರ ಕಳೆದುಕೊಂಡರು. ಲಿಂಗಾಯತರನ್ನು ಬಿಜೆಪಿ ಮತಬ್ಯಾಂಕ್ ಆಗಿಸಲು ಬೇಕಾಗಿದ್ದ ಯಡಿಯೂರಪ್ಪ ಮುಂದೆ ಬಿಜೆಪಿಗೆ ಬೇಡವಾದರು. ಆ ಮೂಲಕ ಲಿಂಗಾಯತರಲ್ಲಿ ಬಿಜೆಪಿ ಬಗ್ಗೆ ಸಹಜವಾಗಿಯೇ ಅಸಮಧಾನ ಮೂಡುವಂಥ ರಾಜಕೀಯ ವಾತಾವರಣ ರೂಪುಗೊಂಡಿತು. ಕಾಂಗ್ರೆಸ್ ಮನಸು ಮಾಡಿದ್ದರೆ ರೆಡ್ಡಿಗೆ ಮಾಡಿದ ಹಾಗೆ ಯಡಿಯೂರಪ್ಪನವರನ್ನೂ ಬಹುಕಾಲ ಜೈಲಿಗಟ್ಟಬಹುದಾಗಿತ್ತು. ಬದಲಾಗಿ ಯಡಿಯೂರಪ್ಪ ಬಳಸಿಕೊಂಡು ಬಿಜೆಪಿ ಅನ್ನು ದುರ್ಬಲಗೊಳಿಸುವುದು ಸುಲಭ ಎನ್ನುವ ನಿಲುವಿಗೆ ಅದು ಬಂದಿತು. ಕಾಂಗ್ರೆಸ್ ಗೆ ಇದೆಲ್ಲ ರಾಜಕೀಯ ತುರ್ತಾಗಿತ್ತು ಕೂಡ.
 ಜತೆಗೆ ರೆಡ್ಡಿ ಸಾಥೀ ಶ್ರೀರಾಮುಲು ಅವರನ್ನು ಗಣಿ ಹಗರಣದ ಕುಣಿಕೆಯಿಂದ ದೂರಕ್ಕಿಡಲಾಯಿತು. ಒಮ್ಮೆ ಸೋನಿಯಾ ಪ್ರತಿನಿಧಿಸಿದ್ದರಿಂದ ಬಳ್ಳಾರಿ ಕಾಂಗ್ರೆಸ್ ನ ಪ್ರತಿಷ್ಠಿತ ಪ್ರದೇಶವೂ ಹೌದು. ಅಲ್ಲಿ ಪೊಗದಸ್ತಾಗಿ ಬೆಳೆದಿದ್ದ ಬಿಜೆಪಿ ಕಮಲವನ್ನು ಶ್ರೀರಾಮುಲು ಮೂಲಕ ಬೇರು ಸಮೇತ ಕಿತ್ತೆಸೆಯುವ ಯತ್ನವನ್ನು ಕಾಂಗ್ರೆಸ್ ಯಶಸ್ವಿಯಾಗಿಯೇ ನಿರ್ವಹಿಸಿತು. ಈ ಸಲದ ಚುನಾವಣೆಯಲ್ಲಿ ಶ್ರೀರಾಮುಲು ನೇತೃತ್ವದ ಬಿ.ಎಸ್.ಆರ್ ಪಕ್ಷ ಕಾಂಗ್ರೆಸ್ ನಿರೀಕ್ಷಿಸಿದಷ್ಟನ್ನು ಮಾಡುವಲ್ಲಿ ಭಾಗಶಃ ಯಶಸ್ವಿಯಾಗಿದೆ.
 ಬಹುಕಾಲದಿಂದ ಕಾಂಗ್ರೆಸ್ ಗೆ ಮತ್ತೊಂದು ದೊಡ್ಡ ಸವಾಲು ಎಂದರೆ ದೇವೇಗೌಡ ಫ್ಯಾಕ್ಟರ್.  ಗೌಡರ ಪಾಳೆಯದ ಬಹುದೊಡ್ಡ ಶಕ್ತಿ ಸಿದ್ದರಾಮಯ್ಯ. ಕುರುಬರು ರಾಜ್ಯದ ಮತ್ತೊಂದು ದೊಡ್ಡ ಸಮುದಾಯ. ಆ ಸಮುದಾಯದ ದೊಡ್ಡ ನಾಯಕ ಸಿದ್ದರಾಮಯ್ಯ ತಾವಾಗೇ ಜೆಡಿಎಸ್ ನಿಂದ ಹೊರಬಂದು, ತನ್ನ ಬಾಗಿಲು ತಟ್ಟಿದ್ದು ಕಾಂಗ್ರೆಸ್ ಗೆ ವರದಾನವೇ ಆಯ್ತು. ಅಹಿಂದ ಕಾರ್ಡ್ ಆಟಕ್ಕೆ ಸಿದ್ದು ಸೂಕ್ತ ಎಂದು ಮನಗಂಡ ಕಾಂಗ್ರೆಸ್ ಜಾಣತನದಿಂದ ಅವರನ್ನು ಒಳಕ್ಕೆ ಬಿಟ್ಟುಕೊಂಡಿತು. ಅದು ನಿರೀಕ್ಷಿತ ಫಲ ನೀಡಿತು ಕೂಡ. ಕಳೆದ ಬಾರಿ ಈಶ್ವರಪ್ಪ ಕುರುಬ ಸಮುದಾಯದ ಮೇಲೆ ಒಂದು ಮಟ್ಟಿನ ಹಿಡಿತ ಸಾಧಿಸಿದ್ದರು. ಹೀಗಾಗಿ ಸಿದ್ದು ಎಂಬ ಒಂದೇ ಕಲ್ಲಿನಿಂದ ದೇವೇಗೌಡ, ಬಿಜೆಪಿ ಎಂಬ ಹಕ್ಕಿಗಳನ್ನು ಕೊಡವಿ ಹಾಕಲು ಸಿದ್ದು ಫ್ಯಾಕ್ಟರ್ ಅನ್ನು ಬಲವಾಗಿ ನೆಚ್ಚಿಕೊಂಡಿತು.
 ಒಕ್ಕಲಿಗ ಸಮುದಾಯಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಡಿಗೆ ತುಂಬ ನಾಜೂಕಿನದಾಗಿದೆ. ಎಸ್.ಎಂ. ಕೃಷ್ಟ, ಡಿ.ಕೆ. ಶಿವಕುಮಾರ್ ಮತ್ತು ಇತರ ಸಾಧ್ಯತೆಗಳ ಮೂಲಕ ಒಕ್ಕಲಿಗರಲ್ಲಿ ದೇವೇಗೌಡರ ಪ್ರಭಾವವನ್ನು ತಕ್ಕಮಟ್ಟಿಗೆ ನಿಯಂತ್ರಿಸುವುದು ಕಾಂಗ್ರೆಸ್ ಗೆ ಸಾಧ್ಯವಾಗಿದೆ. ಅಲ್ಲದೇ ಇತರೆ ನಾಯಕರನ್ನು ಬೆಳೆಸುವ ಮೂಲಕ ಸಮುದಾಯದಲ್ಲಿ ಕಾಂಗ್ರೆಸ್ ಒಲುಮೆಯನ್ನು ಉಳಿಸಿಕೊಳ್ಳುವ ತಂತ್ರವನ್ನೂ ಅದು ಬಳಸಿಕೊಳ್ಳುತ್ತಲೇ ಬಂದಿದೆ. ಲಿಂಗಾಯತರ ವಿಷಯದಲ್ಲೂ ಇಂಥದೇ ತಂತ್ರವನ್ನು ಅದು ಬಳಸಿಕೊಳ್ಳುತ್ತದೆ.
* * *
 ದಲಿತರ ವಿಷಯಕ್ಕೆ ಬಂದರೆ ಖರ್ಗೆ ಅವರ ಕನಸಿನಂತೆ ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನವನ್ನು ಕಾಂಗ್ರೆಸ್ ಈ ಬಾರಿ ದಯಪಾಲಿಸಿತು. 371ನೇ ಕಲಂ ಎನ್ನುವ ಬಂಪರ್ ಬಹುಮಾನಕ್ಕೆ ಭಾಜನರಾದ ಹೈ-ಕ ಜನತೆ 'ಕೈ' ಹಿಡಿಯುತ್ತಾರೆ ಎಂಬ ಭರವಸೆ ಪಕ್ಷಕ್ಕೆ ಇದ್ದೇ ಇತ್ತು. ಖರ್ಗೆ ಮೂಲಕ ಈ ಅವಕಾಶವನ್ನು ಪಕ್ಷ ಸಮರ್ಪಕವಾಗಿ ಬಳಸಿಕೊಂಡಿತು. ಆ ಭಾಗದಿಂದ ಕಾಂಗ್ರೆಸ್ ಗೆ ಅತಿ ಹೆಚ್ಚು ಸೀಟುಗಳನ್ನು ಗೆಲ್ಲಿಸಿಕೊಡುವ ಮೂಲಕ ಮುಖ್ಯಮಂತ್ರಿ ಪಟ್ಟಕ್ಕೆ ಲಗ್ಗೆ ಇಡುವ ಉದ್ದೇಶ ಖರ್ಗೆ ಅವರದ್ದೂ ಆಗಿತ್ತು. ಆ ಭಾಗದಲ್ಲಿ ಖರ್ಗೆ ಚುರುಕಾಗಿ ಸುತ್ತಾಟ ನಡೆಸಿದ್ದೇ ಇದಕ್ಕೆ ಸಾಕ್ಷಿ. ಮುಖ್ಯಮಂತ್ರಿ ಹುದ್ದೆಗೆ ಪೈಪೋಟಿಯ ನಡುವೆಯೂ ಕಡೆಕ್ಷಣದಲ್ಲಿ ದಲಿತರಿಗೆ ಅವಕಾಶ ಒದಗಿಬರಬಹುದೆಂಬ ಆಶಯ ಮತ್ತು ವಿಶ್ವಾಸವೂ ಅವರಲ್ಲಿತ್ತು. ಇತರ ಮೂಲಗಳಿಂದ ಅದಕ್ಕೊಂದು ಪಕ್ಕಾ ಸಿದ್ಧತೆಯನ್ನು ಮಾಡಿಕೊಳ್ಳುವತ್ತ ಅವರು ಗಮನ ಹರಿಸಲೇ ಇಲ್ಲ.  (ಸಿದ್ದು ತಮ್ಮ ಪರವಾಗಿ ಪ್ರಗತಿಪರರು ಮತ್ತು ಸಾಹಿತಿಗಳು ವಕಾಲತ್ತು ವಹಿಸುವಂಥ ವರ್ಚಸ್ಸನ್ನು ಹೊಂದಿದ್ದರು.) ಅನ್ಯ ಮೂಲಗಳ ಮೂಲಕ ಪೂರ್ವ ಸಿದ್ಧತೆ ಮಾಡಿಕೊಳ್ಳುವ ವರ್ಚಸ್ಸು ಖರ್ಗೆ ಅವರಲ್ಲಿರಲಿಲ್ಲ. ಅಂಥ ಮನಸ್ಥಿತಿ ಖರ್ಗೆ ಅವರದ್ದಲ್ಲ ಕೂಡ. ಈ ದೃಷ್ಟಿಯಲ್ಲಿ ಅವರದು ಕಟ್ಟಾ ಕಾಂಗ್ರೆಸ್ ಮನೋಧರ್ಮ.

ಮತ್ತೊಬ್ಬ ದಲಿತ ವರ್ಗದ ನಾಯಕ ಪರಮೇಶ್ವರ್ ಸೋಲುವಂಥ ವಾತಾವರಣ ಸೃಷ್ಟಿಯಾಗಿದ್ದು ಕೂಡ ಇನ್ನೊಂದು ಬಗೆಯ ರಾಜಕೀಯ ಆಟ. ಪರಮೇಶ್ವರ್ ಅತಿಯಾದ ಆತ್ಮವಿಶ್ವಾಸದಲ್ಲಿದ್ದರು ಅನಿಸುತ್ತದೆ. ಕೆಪಿಸಿಸಿ ಅಧ್ಯಕ್ಷ ಹುದ್ದೆ ಎಂದರೆ ಸಿಎಂ ಗದ್ದುಗೆಗೆ ಒಂದೇ ಮೆಟ್ಟಿಲು ಎನ್ನುವ ಸಾಂಪ್ರದಾಯಿಕ ನಂಬಿಕೆಯಲ್ಲಿ ಅವರಿದ್ದಂತಿತ್ತು. ಪಕ್ಷದೊಳಗೆ ಮಹತ್ವಾಕಾಂಕ್ಷಿಗಳ ದೊಡ್ಡ ದಂಡೇ ಇದೆ, ಅದು ತಂತ್ರ, ಪ್ರತಿತಂತ್ರಗಳಲ್ಲಿ ಸದಾ ಮುಳುಗಿರುತ್ತದೆ ಎನ್ನುವ ಸೂಕ್ಷ್ಮದ ಬಗ್ಗೆ ಅವರು ಗಮನ ಹರಿಸಲಿಲ್ಲ. ತಮ್ಮ ಹಿಂದೆ ನಡೆಯುವ ಮಸಲತ್ತುಗಳಲ್ಲಿ ಅವರನ್ನು ಸೋಲಿಸುವ ಗುರಿ ಅತ್ಯಂತ ಪ್ರಮುಖದ್ದಾಗಿರುತ್ತದೆ ಎನ್ನುವುದರ ಅರಿವು ಇದ್ದೂ ಅದನ್ನು ನಿರ್ಲ್ಯಕ್ಷಿಸಿದರು ಎಂದು ಕಾಣುತ್ತದೆ. ಚಾಣಾಕ್ಷತೆಯನ್ನು ಬಳಸಿಕೊಂಡು ಈ ಸಲದ ಚುನಾವಣೆಯಲ್ಲಿ ಸ್ಪರ್ಧಿಸದೇ, ಇಡೀ ರಾಜ್ಯದ ಅಭ್ಯರ್ಥಿಗಳನ್ನು ಗೆಲ್ಲಿಸುವ ಜವಾಬ್ದಾರಿಯನ್ನು ನಾನೇ ವಹಿಸಿಕೊಳ್ಳುತ್ತೇನೆ ಎಂದು ಸಾರಿಕೊಂಡಿದ್ದರೆ ಈಗಿನ ಸ್ಥಿತಿಯಲ್ಲಿ ದೊಡ್ಡ ಬದಲಾವಣೆ ನಿರೀಕ್ಷಿಸಬಹುದಿತ್ತು. ಫಲಿತಾಂಶದ ನಂತರ ಯಾವುದಾದರೂ ಒಂದು ಕ್ಷೇತ್ರವನ್ನು ತೆರವುಗೊಳಿಸಿಕೊಂಡು ಚುನಾವಣೆ ಎದುರಿಸಿ ಗೆದ್ದು ಬರುವ ಸಾಧ್ಯತೆಯೂ ಇತ್ತಲ್ಲವೇ? ಇಂಥ ಚಾಣಾಕ್ಷ ನಡೆಗಳು ರಾಜಕೀಯದಲ್ಲಿ ಹೊಸದೇನೂ ಅಲ್ಲ. ಇದೊಂದು ಸಾಧ್ಯತೆ ಎಂದಷ್ಟೇ ಹೇಳಬಲ್ಲೆ.

 ಅಲ್ಪಸಂಖ್ಯಾತರು ಅದರಲ್ಲೂ ಮುಸ್ಲೀಮರ ಸ್ಥಿತಿಯ ಬಗ್ಗೆ ಹೇಳುವುದಾದರೆ, ಸಿಎಂ ಹುದ್ದೆಗೆ ಆ ಸಮುದಾಯದ ಏಕಮಾತ್ರ ಎಲಿಜಿಬಲ್ ಕ್ಯಾಂಡಿಡೇಟ್ ಜಾಫರ್ ಷರೀಫ್. ಅವರ ದುರಾದೃಷ್ಟವೆಂದರೆ ತಮ್ಮದೇ ಸಮುದಾಯದ ಸಿ.ಎಂ. ಇಬ್ರಾಹಿಂ ಅವರಂಥ ದೂರದೃಷ್ಟಿ ಇಲ್ಲದ ರಾಜಕಾರಣಿಯಿಂದಾಗಿ ಲೋಕಸಭೆ ಚುನಾವಣೆ ಸೋತರು. ಜೆಡಿಎಸ್ ನಿಂದ ಕಣಕ್ಕಿಳಿಸಲ್ಪಟ್ಟ ಇಬ್ರಾಹಿಂ, ಕ್ಷೇತ್ರದ ಮುಸ್ಲಿಂ ಮತಗಳನ್ನು ಒಡೆದುಬಿಟ್ಟರು. ಇದೊಂದು ತರಹದ ರಾಜಕೀಯ ಕಿಡಿಗೇಡಿತನ. ಇಬ್ಬರ ಜಗಳ ಮೂರನೇಯವನಿಗೆ ಲಾಭ ಎನ್ನುವಂತೆ ಬಿಜೆಪಿಯ ಸಾಂಗ್ಲಿಯಾನ ಗೆದ್ದುಬಿಟ್ಟರು. ಆನಂತರದಲ್ಲಿ ನಡೆದ ಮತ್ತೊಂದು ಚುನಾವಣೆಯಲ್ಲೂ ಬಿಜೆಪಿಯ ಚಂದ್ರೇಗೌಡರ ವಿರುದ್ಧ ಷರೀಫ್  ಸೋತರು. ಬಿಜೆಪಿ ಅಲೆಯಿಂದಾಗಿ ಸೋಲಿಲ್ಲದ ಈ ಸರದಾರನ ಸೋಲಿನ ಸರಪಣಿ ಬೆಳೆಯತೊಡಗಿತು. ಮೊಮ್ಮಕ್ಕಳು, ಸಂಬಂಧಿಯ ಮೂಲಕವಾದರೂ ವಿಧಾನಸಭೆಯಲ್ಲಿ ವಜನ್ ಉಳಿಸಿಕೊಳ್ಳಬೇಕೆನ್ನುವ ಅವರ ಹಂಬಲವೂ ನೆರವೇರಲಿಲ್ಲ. ಷರೀಫರ ಹಿನ್ನಡೆ, ಡೌನ್ ಫಾಲ್ ಕಾಂಗ್ರೆಸ್ ಸೇರಿದಂತೆ ಎಲ್ಲ ಪಕ್ಷಗಳಿಗೂ ಬೇಕಿತ್ತು. ಅವರೊಬ್ಬ ಮುಖ್ಯಮಂತ್ರಿ ಪಟ್ಟಕ್ಕೆ ಅಲ್ಪಸಂಖ್ಯಾತ ಸಮುದಾಯದ ಅತ್ಯಂತ ಸೂಕ್ತ ವ್ಯಕ್ತಿಯಾಗಿದ್ದು ಸ್ವತಃ ಹಳೆಯ ಕಾಂಗ್ರೆಸ್ಸಿಗರಿಗೂ ನುಂಗಲಾರದ ತುತ್ತಾಗಿತ್ತು. ಇನ್ನು ಸಿದ್ದು ಚಡ್ಡಿ ದೋಸ್ತ ಮಲ್ಲೂ ಇಬ್ರಾಹಿಂಗೆ ತಾನು ಬೆಳೆಯುವುದಕ್ಕೆ ಷರೀಫ್ ರಾಜಕೀಯದ ಕೆರಿಯರ್ ಮುಗಿಸುವುದು ಮುಖ್ಯ ಎನ್ನಿಸಿದ್ದರಲ್ಲಿ ಅಚ್ಚರಿ ಏನಿದೆ? ಈ ಮಲೆಯಾಳಿ ತಲೆಗೆ ಇಷ್ಟೂ ಹೋಗದಿದ್ದರೆ ಹೇಗೆ? ಇದು ರಾಜ್ಯ ಅಲ್ಪಸಂಖ್ಯಾತರ ನಿಜವಾದ ದೌರ್ಭಾಗ್ಯ.



ಸಿದ್ದರಾಮಯ್ಯ ರಾಜಕೀಯ ನಡಿಗೆ
  • 1983ರಲ್ಲಿ ಒಂದು ಅನಿರೀಕ್ಷಿತ ಗೆಲುವಿನ ಮೂಲಕ ಸಿದ್ದರಾಮಯ್ಯ ವಿಧಾನಸಭೆ ಪ್ರವೇಶಿಸಿದರು. ಭಾರತೀಯ ಲೋಕ ದಳ  ಅಭ್ಯರ್ಥಿಯಾಗಿ (ಚಾಮುಂಡೇಶ್ವರಿ ಕ್ಷೇತ್ರ) ಅವರು ಎದುರಿಸಿದ ಮೊದಲ ಚುನಾವಣೆ ಇದಾಗಿತ್ತು.
    * * *
  •  ಜನತಾ ಪಾರ್ಟಿ ಸೇರುವ ಮೂಲಕ ಒಂದರ್ಥದಲ್ಲಿ ಪಕ್ಷಾಂತರಕ್ಕೆ ತೆರಕೊಂಡರು. ಇದೇ ಸಂದರ್ಭದಲ್ಲಿ ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿ ಗಮನ ಸೆಳೆದರು.
  • 1985ರ ಮಧ್ಯಂತರ ಚುನಾವಣೆಯಲ್ಲಿ ಜನತಾ ಪಕ್ಷದ ಅಭ್ಯರ್ಥಿಯಾಗಿ ಚಾಮುಂಡೇಶ್ವರಿಯಿಂದಲೇ ಪುನರಾಯ್ಕೆಗೊಂಡರು. ರಾಮಕೃಷ್ಣ ಹೆಗಡೆ ನೇತೃತ್ವದ ಸರ್ಕಾರದಲ್ಲಿ ಪಶುಸಂಗೋಪನಾ ಖಾತೆ ಸಚಿವರಾದರು. ಸಾರಿಗೆ, ರೇಷ್ಮೆ ಖಾತೆಗಳನ್ನೂ ನಿರ್ವಹಿಸಿದವರು.
  • 1989ರಲ್ಲಿ ಕಾಂಗ್ರೆಸ್ ನ ರಾಜಶೇಖರ ಮೂರ್ತಿ ಎದುರು ಸೋತರು. ಇದು ಅವರ ಮೊದಲ ಸೋಲು.
    * * *
    • ಜನತಾಪಕ್ಷ: ಈ ಜನತಾ ಪಕ್ಷ ರಾಷ್ಟ್ರಮಟ್ಟದಲ್ಲಿ ರೂಪುಗೊಂಡಿದ್ದರಿಂದ ಆದದ್ದೇನು? ಒಬ್ಬ ನೀಲಿಕಣ್ಣಿನ ಚಿತ್ಪಾವನ ಬ್ರಾಹ್ಮಣ ರಾಜಕಾರಣಿ ಮುರಾರ್ಜಿ ದೇಸಾಯಿ ಪ್ರಧಾನಿ ಆದರು. ಕರ್ನಾಟಕದ ನೀಲಿಕಣ್ಣಿನ ಹವ್ಯಕ ಬ್ರಾಹ್ಮಣ ರಾಜಕಾರಣಿ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿ ಆದರು ಅಷ್ಟೇ. ಮುರಾರ್ಜಿ ಕಾಂಗ್ರೆಸ್ ನಲ್ಲಿ ಇದ್ದಿದ್ದರೆ ಇಂದಿರಾ ಗಾಂಧಿ ಪ್ರಧಾನಿ ಆಗಲು ಬಿಡುತ್ತಿದ್ದರೆ? ಹೀಗಾಗಿ ತುರ್ತು ಪರಿಸ್ಥಿತಿ ವಿರೋಧಿ ನೆಪ ಮಾಡಿಕೊಂಡು ಕಾಂಗ್ರೆಸ್ ನಿಂದ ಹೊರಬಂದ ಮುರಾರ್ಜಿ, ಪ್ರಧಾನಿ ಪಟ್ಟಕ್ಕೇರಲು ಜನತಾ ಪಕ್ಷವನ್ನು ಪೀಠಿಕೆಯಾಗಿಸಿಕೊಂಡರು. ರಾಜ್ಯದಲ್ಲೂ ದೇವೇಗೌಡ, ಬಂಗಾರಪ್ಪ ಮತ್ತಿತರರ ಕ್ರಾಂತಿರಂಗದ ಹೋರಾಟಕ್ಕೆ ಸಂದ ಜಯದಿಂದ ಶಕ್ತಿ ಪಡಕೊಂಡ ಜನತಾ ಪರಿವಾರಕ್ಕೆ ರಾಮಕೃಷ್ಣ ಹೆಗಡೆ (ಇವರೂ ಕಾಂಗ್ರೆಸ್ ತೊರೆದವರೇ) ಎನ್ನುವ ಅಚ್ಚರಿಯ ಹೆಸರು ಮುಖ್ಯಮಂತ್ರಿ ಪಟ್ಟಕ್ಕೆ ಸೂಚಿಸಲ್ಪಟ್ಟಿತು. ಇದಷ್ಟೇ ರಾಜ್ಯಕ್ಕೆ ಜನತಾಪಕ್ಷದಿಂದ ಆದ ಬಹುದೊಡ್ಡ ಸಾಧನೆ. 
    • ಜನತಾಪಕ್ಷ ಮುಂದೆ ಕೇಂದ್ರ ಮತ್ತು ರಾಜ್ಯದಲ್ಲಿ ರಾಜಕೀಯ ಅಸ್ತಿತ್ವವನ್ನೇ ಉಳಿಸಿಕೊಳ್ಳಲಿಲ್ಲ. ಬದಲಾಗಿ ಬೇರೆ ಬೇರೆ ರೂಪಗಳನ್ನು ಕಂಡಿತು. ಈ ಪರಿವಾರದ ಕೆಲವು ಮಹಾತ್ವಾಕಾಂಕ್ಷಿಗಳು ಬೇರೆ ರಾಜಕೀಯ ನೆಲೆಗಳಿಗೆ ಯತ್ನಿಸಿದರು. ಕಾಂಗ್ರೆಸ್ಸೇತರ ಶಕ್ತಿಗಳು ಮತ್ತು ಸಂಘಪರಿವಾರದ ಜತೆ ಕೈಜೋಡಿಸಿ ಕೆಲವರು ತಕ್ಕಮಟ್ಟಿನ ಯಶಸ್ಸನ್ನೂ ಕಂಡರು. ಇನ್ನು ಕೆಲವರು ಸ್ಥಳೀಯ ಆದ್ಯತೆ ಮತ್ತು ಸಾಧ್ಯತೆಗಳನ್ನು ನೋಡಿಕೊಂಡು ಪ್ರಾದೇಶಿಕ ರಾಜಕೀಯ ಶಕ್ತಿಗಳಾಗಿ ರೂಪುಗೊಂಡರು.
      * * *
    • ಜನತಾ ಪಕ್ಷದ ದರ್ಬಾರು ಮುಗಿದು ಜನತಾದಳ ರೂಪುಗೊಂಡಿತು. 1992ರಲ್ಲಿ ಸಿದ್ದರಾಮಯ್ಯ ಜನತಾದಳದ ಪ್ರಧಾನ ಕಾರ್ಯದರ್ಶಿಗಳಾದರು. ಹೆಗಡೆ-ದೇವೇಗೌಡ ಪರಸ್ಪರ ಕೈಜೋಡಿಸಿದ್ದರಿಂದ ರಾಜ್ಯದಲ್ಲಿ ಜನತಾದಳ ಭರ್ಜರಿಯಾಗೇ ಹೊಸ ರಾಜಕೀಯ ಮನ್ವಂತರಕ್ಕಿಳಿಯಿತು.
    • ನೋಡ ನೋಡುತ್ತಿದ್ದಂತೆ ಜನತಾದಳ ಕೂಡ ಇಬ್ಭಾಗವಾಯಿತು. ಹೆಗಡೆ-ಗೌಡ ಬೇರೆಯಾದರು. ಸಿ.ಎಂ. ಇಬ್ರಾಹಿಂ ಅವರನ್ನು ರಾಜ್ಯಾಧ್ಯಕ್ಷ ಮಾಡಿ ಹೆಗಡೆ ಅವರನ್ನು ದಳದಿಂದ ಹೊರಹಾಕಿದ ದೇವೇಗೌಡರ ರಾಜಕೀಯ ನಡೆ ಆಗ ಬಹುಚರ್ಚೆಗೊಳಗಾಯಿತು. ಇಂಥ ರಾಜಕೀಯ ಕಿಡಿಗೇಡಿತನಕ್ಕೆ ಇಬ್ರಾಹಿಂ ಬಳಕೆಯಾಗುತ್ತಲೇ ಹೋದರು. ದೇವೇಗೌಡರ ಜತೆಗಿನ ಜಿದ್ದಾಜಿದ್ದಿ, ಮತ್ಸರ, ಟೆಲಿಫೋನ್ ಕದ್ದಾಲಿಕೆ ಮತ್ತಿತರ ಹಗರಣಗಳ ಮೂಲಕ ಹೆಗಡೆ ರಾಜಕೀಯವಾಗಿ ಮೂಲೆಗುಂಪಾದರು. ದೇವೇಗೌಡ  ನೇತೃತ್ವದಲ್ಲಿ ಜನತಾದಳ (ಎಸ್) ಸಶಕ್ತವಾಗಿ ರೂಪುಗೊಂಡಿತು.
      * * *
      • 1994 ರಲ್ಲಿ ಸಿದ್ದರಾಮಯ್ಯ ಜನತಾದಳದಿಂದ ಸ್ಪರ್ಧಿಸಿ ವಿಧಾನಸಭೆಗೆ ಆಯ್ಕೆಯಾದರು. ದೇವೇಗೌಡರ ನೇತೃತ್ವದಲ್ಲಿ ಜನತಾದಳ ಸರ್ಕಾರವೂ ರೂಪುಗೊಂಡಿತು.
      • 1996ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಭಾರಿ ಏಟು ನೀಡಿದ ಜನತಾದಳ, ಸಂಸತ್ತಿಗೆ ದೊಡ್ಡ ಸಂಖ್ಯೆಯಲ್ಲಿ ಲಗ್ಗೆ ಇಟ್ಟಿತು. ಅನಿರೀಕ್ಷಿತ ಬೆಳೆವಣಿಗೆಯಲ್ಲಿ ದೇವೇಗೌಡ ಪ್ರಧಾನಿ ಪಟ್ಟಕ್ಕೇರಿದರು. ರಾಜ್ಯದ ಚುಕ್ಕಾಣಿಯನ್ನು ಜೆ.ಎಚ್. ಪಟೇಲ್ ಅವರಿಗೆ ವಹಿಸಿಕೊಟ್ಟರು. ಪಟೇಲ್ ನೇತೃತ್ವದ ಸರ್ಕಾರದಲ್ಲಿ ಸಿದ್ದು ಉಪಮುಖ್ಯಮಂತ್ರಿಯಾದರು. ಆಗಲೇ ಅವರಿಗೆ ಸಿಎಂ ಕುರ್ಚಿಯ ಗರಂ ಹವಾ ಬಡಿಯತೊಡಗಿತ್ತು. ಅವರು ದೇವೇಗೌಡರ ಮೇಲೆ ಗರಂ ಆಗಲು ಆರಂಭಿಸಿದ್ದು ಆಗಿನಿಂದಲೇ. ಸಿದ್ದು ಆ ಹೊತ್ತಿನಲ್ಲಿ ಸಿಎಂ ಹುದ್ದೆಯ ಪ್ರಭಲ ಆಕಾಂಕ್ಷಿ. ಆದರೆ ಸೇವಾ ಹಿರಿತನದ ದೃಷ್ಟಿಯಿಂದ ಲಿಂಗಾಯತ ಕೋಮಿನ ಜೆ.ಎಚ್. ಪಟೇಲ್ ಗೆ ಸಿಎಂ ಪಟ್ಟ ಬಿಟ್ಟುಕೊಡುವ ನಿರ್ಧಾರವನ್ನು ದೇವೇಗೌಡ ಕೈಗೊಂಡರು. ಪಾಲಿಟಿಕಲಿ ಕರೆಕ್ಟ್ ಡಿಸಿಷನ್ ಇದಾಗಿದ್ದರೂ ಗೌಡರು ಭಾರಿ ವಿರೋಧವನ್ನು ಎದುರಿಸಬೇಕಾಯ್ತು. ಸಿದ್ದು ಅಂತೂ ದೇವೇಗೌಡರ ವಿರುದ್ಧ ಕೆಂಡಾಮಂಡಲವಾದರು.
      • ಪಟೇಲ್-ಗೌಡ ಮುಸುಕಿನ ಗುದ್ದಾಟವೂ ನಡೆಯಿತು. ಹೆಗಡೆ-ಗೌಡ ಇರಿಸು ಮುರಿಸುಗಳ ಜಮಾನಾ ತಾರಕಕ್ಕೇರಿದ ಸಂದರ್ಭವೂ ಅದಾಗಿತ್ತು. ಗೌಡರು ಪ್ರಧಾನಿಯಾಗಲು ಪ್ರಮುಖ ಬೆಂಬಲವಾಗಿದ್ದ ಕಾಂಗ್ರೆಸ್ ಇದ್ದಕ್ಕಿದ್ದಂತೆ ಬೆಂಬಲ ವಾಪಸ್ ಪಡೆದುಕೊಂಡಿತು. ಪ್ರಧಾನಿ ಗದ್ದುಗೆಯನ್ನು ಗುಜ್ರಾಲ್ ಗೆ ಕಳಕೊಂಡ ಗೌಡರು ನಿರಾಶರಾಗಿದ್ದರು. ಕಾಂಗ್ರೆಸ್ ವಿರುದ್ಧ ಗೌಡರು ಮತ್ತೆ ಕತ್ತಿ ಮಸೆಯಲು ಶುರುವಿಟ್ಟುಕೊಂಡರು. ಇಬ್ರಾಹಿಂ, ಸಿದ್ದು ಗೌಡರ ಎಡಗೈ, ಬಲಗೈ ಆಗಿ ಆಗಲೂ ಜತೆಯಲ್ಲೇ ಇದ್ದರು.
      • 1999ರಲ್ಲಿ ಜನತಾದಳ ಕೂಡ ಇಬ್ಭಾಗವಾಯಿತು. ಪಟೇಲ್ ಪಾಳೆಯದವರು ಆಗ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಎನ್.ಡಿ.ಎ ಪರ ನಿಂತು ಜನತಾದಳ (ಯು) ಆದರೆ, ಇತ್ತ ದೇವೇಗೌಡರು ಸೆಕ್ಯುಲರ್ ಕಾರ್ಡ್ ಇಟ್ಟುಕೊಂಡು ಜನತಾದಳ (ಎಸ್) ರೂಪಿಸಿದರು. ಸಿದ್ದರಾಮಯ್ಯ ರಾಜ್ಯ ಘಟಕದ ಅಧ್ಯಕ್ಷರಾದರು. ಗೌಡರ ರಾಜಕೀಯದ ಗುರಿ, ಕಾಂಗ್ರೆಸ್ ನ ಸೆಕ್ಯುಲರ್ ಕಾರ್ಡ್ ತಳಪಾಯವನ್ನು ಅಲುಗಾಡಿಸಿ ತನ್ನತ್ತ ಸೆಳೆದುಕೊಳ್ಳುವುದಾಯ್ತು.
      • 1999ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಸೋತರು. ಇದು ಅವರ ಎರಡನೇ ಸೋಲು.
      • 2004ರಲ್ಲಿ ಜೆಡಿಎಸ್ ನಿಂದ ಮತ್ತೆ ಗೆಲುವು ಕಂಡರು.
      • 2004ರಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಸೇರಿ ರೂಪಿಸಿದ ಧರ್ಮಸಿಂಗ್ ನೇತೃತ್ವದ ಸರ್ಕಾರದಲ್ಲಿ ಸಿದ್ದರಾಮಯ್ಯ ಮತ್ತೊಮ್ಮೆ ಉಪಮುಖ್ಯಮಂತ್ರಿ ಪಟ್ಟಕ್ಕೇರಿದರು. ಸಿದ್ದರಾಮಯ್ಯ ಸಿಎಂ ಪಟ್ಟದ ಪ್ರಮುಖ ಆಕಾಂಕ್ಷಿಯಾಗಿದ್ದರು. ಜೆಡಿಎಸ್ ಗೇ ಮುಖ್ಯಮಂತ್ರಿ ಪಟ್ಟ ಬೇಕೆಂದು ಪಟ್ಟು ಹಿಡಿಯಲು ಗೌಡರ ಮೇಲೆ ಒತ್ತಡಗಳಿದ್ದವು. ಆಗಿನ ಸ್ಥಿತಿಯಲ್ಲಿ ಗೌಡರು ಮನಸು ಮಾಡಿದ್ದರೆ ಸಿದ್ದೂಗೆ ಸಿಎಂ ಪಟ್ಟ ಕಟ್ಟಬಹುದಾಗಿತ್ತು ಕೂಡ. ಅಂಥ ಸಾಧ್ಯತೆ ಇತ್ತಾದರೂ ಯತ್ನ ಸಮರ್ಪಕವಾಗಿರಲಿಲ್ಲ. ಅದಾಗಲೇ ಜೆಡಿಎಸ್ ನಲ್ಲಿ ಕುಮಾರಸ್ವಾಮಿ ಪ್ರಭಾವ ಹೆಚ್ಚಾಗತೊಡಗಿತ್ತು. ಇದು ಇಬ್ರಾಹಿಂ, ಸಿದ್ದರಾಮಯ್ಯ ಅವರನ್ನು ಕಂಗೆಡಿಸಿತ್ತು. ಸಿದ್ದರಾಮಯ್ಯ ಕೋಪಿಸಿಕೊಳ್ಳುವುದೂ ನಡೆದಿತ್ತು. ಧರ್ಮಸಿಂಗ್ ಸರ್ಕಾರ ಪತನಗೊಂಡಿತು. ಪ್ರಮುಖವಾಗಿ ಇಬ್ರಾಹಿಂ ಹವಾ ಹಾಕಿ, ಸಿದ್ದು ಅವರನ್ನು ಜೆಡಿಎಸ್ ನಿಂದ ಹೊರತಂದರು.
      • ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮೇಲೆ ಮುನಿಸಿಕೊಂಡಿದ್ದ ಎಸ್. ಬಂಗಾರಪ್ಪ ಬಿಜೆಪಿ ಸೇರಿಕೊಂಡಿದ್ದರಿಂದ ಬಿಜೆಪಿ ರಾಜ್ಯದಲ್ಲಿ ದೊಡ್ಡ ಶಕ್ತಿ ಪಡಕೊಂಡಿತ್ತು. ಅತ್ತ ಅಧಿಕಾರ ಕಳಕೊಂಡ ಕಾಂಗ್ರೆಸ್ ಶಕ್ತಿಹೀನವಾಗಿತ್ತು. ಇತ್ತ ದೇವೇಗೌಡ ಮತ್ತವರ ಮಕ್ಕಳ ಮೇಲೆ ಸಿದ್ದು-ಇಬ್ರಾಹಿಂ ಗ್ಯಾಂಗ್ ಟೀಕೆಗಳ ವಾರ್ ಶುರುವಿಟ್ಟುಕೊಂಡಿತ್ತು. ಬಿಜೆಪಿಗೆ ಅತ್ಯಂತ ಸೂಕ್ತ ವಾತಾವರಣ ರಾಜ್ಯದಲ್ಲಿ ರೂಪುಗೊಂಡಿತು. 2006ರಷ್ಟೊತ್ತಿಗೆ ಅದು ತುಂಬ ಬೆಳೆದು ನಿಂತಿತು.
        * * *
        • 2006 ಚುನಾವಣೆ ಕರ್ನಾಟಕದ ಮಟ್ಟಿಗೆ ಅತ್ಯಂತ ಮಹತ್ವದ ಚುನಾವಣೆಯಾಗಿತ್ತು. ದಕ್ಷಿಣದಲ್ಲಿ ಕಣ್ಣು ತೆರೆಯುವದಕ್ಕೇ ಕಷ್ಟಪಡುತ್ತಿದ್ದ ಬಿಜೆಪಿ ತುಂಬ ಬೆಳೆದು ನಿಂತಿತ್ತು. ಫಲಿತಾಶ ವಿಧಾನಸಭೆಯನ್ನು ಅತಂತ್ರ ಸ್ಥಿತಿಗೆ ನೂಕಿತ್ತು. ಜೆಡಿಎಸ್ ಸರ್ಕಾರ ರೂಪಿಸುವುದಕ್ಕೆ ಏನೆಲ್ಲ ಕಸರತ್ತುಗಳನ್ನು ನಡೆಸಿತ್ತು. ದಿಢೀರನೇ ಆದ ಬೆಳವಣಿಗೆಯಲ್ಲಿ "20:20 ಫಾರ್ಮುಲಾ" ಮೊತ್ತ ಮೊದಲ ಬಾರಿಗೆ ರಾಜ್ಯ ರಾಜಕಾರಣಕ್ಕೆ ಪರಿಚಯಗೊಂಡಿತು. ಇದರ ರೂವಾರಿಗಳಾದ ಕುಮಾರಸ್ವಾಮಿ-ಯಡಿಯೂರಪ್ಪ ತಲಾ 20 ತಿಂಗಳ ಅಧಿಕಾರ ಹಂಚಿಕೆಯ ಷರತ್ತಿನೊಂದಿಗೆ ಸಮ್ಮಿಶ್ರ ಸರ್ಕಾರ ರೂಪಿಸಿಕೊಂಡರು. 20ರ ಇನಿಂಗ್ಸ್  ಮುಗಿಸಿದ ಕುಮಾರಸ್ವಾಮಿ ಮುಂದಿನ ಇನಿಂಗ್ಸ್ ಅನ್ನು ಯಡಿಯೂರಪ್ಪಗೆ ಬಿಟ್ಟಕೊಡಲಿಲ್ಲ. ರಾಜಕೀಯವಾಗಿ ಇದೊಂದು ಪಾಲಿಟಿಕಲಿ ಕರೆಕ್ಟ್ ನಡೆ ಅನಿಸಿದರೂ "ವಚನಭ್ರಷ್ಟ" ಎನಿಸಿಕೊಂಡರು. ಸರ್ಕಾರ ಪತನಗೊಂಡಿತು.
        •  ಸಿಎಂ ಖುರ್ಚಿ ಮೇಲೆ ಕಣ್ಣಿಟ್ಟು ಕುಳಿತಿದ್ದ ಸಿದ್ದರಾಮಯ್ಯ ವಿಪರೀತ ಮುನಿಸಿಕೊಂಡಿದ್ದರು. ಸಿಎಂ ಖುರ್ಚಿ ಗರಂ ಹವಾ ಹಂಬಲ ಸಿದ್ದರಾಮಯ್ಯ ಅವರನ್ನು ಜೆಡಿಎಸ್ ನಿಂದ ಹೊರ ಹೋಗುವಂತೆ ಮಾಡಿತ್ತು. ವಚನಭ್ರಷ್ಟ ಗುಮ್ಮನಿಂದ ಮತ್ತು ಸಿದ್ದು-ಇಬ್ರಾಹಿಂ ವಾಕ್ ಸಮರದಿಂದ ಜೆಡಿಎಸ್ ತತ್ತರಿಸಿ ಹೋಗಿತ್ತು. ಕಾಂಗ್ರೆಸ್ ಸರ್ಕಾರ ರಚಿಸುವಷ್ಟರಮಟ್ಟಿಗೆ ಚೇತರಿಸಿಕೊಳ್ಳಲಿಲ್ಲ. 2008ರ ಚುನಾವಣೆಯಲ್ಲಿ ಬಿಜೆಪಿ ಬಿರುಗಾಳಿ ಬೀಸಿತು. ಯಡಿಯೂರಪ್ಪ ಪರ ಅನುಕಂಪದ ಅಲೆಯೂ ಅಪ್ಪಳಿಸಲಾರಂಭಿಸಿತು. ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನು ಬುಟ್ಟಿಗಿಳಿಸಿಕೊಂಡು ಏಕೈಕ ದೊಡ್ಡ ಪಕ್ಷವಾಗಿ ಹೊಮ್ಮಿತು. ಆಪರೇಷನ್ ಕಮಲ ಮುಂತಾದ ಅಪಾಯಕಾರಿ ರಾಜಕೀಯ ಆಟದ ಮೂಲಕ ಸರ್ಕಾರವನ್ನು ಗಟ್ಟಿಗೊಳಿಸಿಕೊಂಡಿತು.
        • 2008 ಯಡಿಯೂರಪ್ಪ ಅನುಕಂಪದ ಅಲೆಯಿಂದ ಬಿಜೆಪಿ ಮೊತ್ತಮೊದಲ ಬಾರಿಗೆ ದಕ್ಷಿಣದಲ್ಲಿ ಅಧಿಕಾರದ ಖಾತೆ ತೆರಕೊಂಡಿತು.
          * * *
          ಸಿದ್ದರಾಮಯ್ಯ ಕಾಂಗ್ರೆಸ್ ಕೆರಿಯರ್ (2006-2013)
        • 2006ರಲ್ಲಿ ಸಿದ್ದರಾಮಯ್ಯ ಜೆಡಿಎಸ್ ತೊರೆದರು. ಜೆಡಿಎಸ್ ಅಪ್ಪ-ಮಕ್ಕಳ ಪಕ್ಷ ಎನ್ನುವ ಪುಕಾರು ಎದ್ದ ಹಿನ್ನೆಲೆಯಲ್ಲಿ ಮತ್ತು ಸಿಎಂ ಹುದ್ದೆ ಮಹಾತ್ವಾಕಾಂಕ್ಷೆ ಈಡೇರಿಸಿಕೊಳ್ಳುವ ಉದ್ದೇಶದಿಂದ  ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿ ಚಾಮುಂಡೇಶ್ವರಿ ಉಪಚುನಾವಣೆಯಲ್ಲಿ ಅತ್ಯಲ್ಪ ಮತಗಳಿಂದ ಗೆದ್ದರು.
        • 2008 ಕುಮಾರಸ್ವಾಮಿ 'ವಚನಭ್ರಷ್ಟ' ಎಂಬ ಗೋಡೆಬರಹ ಹಾಕಿಕೊಂಡು ನಡೆಸಿದ ಚಳವಳಿಯ ಮೂಲಕ ಯಡಿಯೂರಪ್ಪ ರಾಜ್ಯದಲ್ಲಿ ಬಿಜೆಪಿಗೆ ಮೊದಲ ಬಾರಿಗೆ ಮೂರಂಕಿ ದರ್ಶನ ಮಾಡಿಸಿದರು. ಆಪರೇಷನ್ ಕಮಲ ಇತ್ಯಾದಿ ಮೂಲಕ ಸರ್ಕಾರ ಭದ್ರಪಡಿಸಿಕೊಂಡರು. ಹಗರಣಗಳ ಮೇಲೆ ಹಗರಣ, ಗಣಿ ಉಪಟಳದ ನಡುವೆಯೂ ಮೂರು ವರ್ಷ ಅಧಿಕಾರ ನಡೆಸಿದರು.
        • ಇದೇ ಸಂದರ್ಭದಲ್ಲಿ ಅಹಿಂದ ಚಳವಳಿ ಪರಾಕಾಷ್ಠೆಗೆ ತಲುಪಿತ್ತು. ಸಿದ್ದರಾಮಯ್ಯ ಇದರ ರಿಯಲ್ ಹೀರೋ ಆಗಿ ಹೊರಹೊಮ್ಮಿದರು.
        • ರಾಜ್ಯದಲ್ಲಿ ಮೊದಲು ಜನತಾಪಕ್ಷ, ಆನಂತರದಲ್ಲಿ ಜನತಾದಳ ಹಾಗೂ 2004 ಮತ್ತು 2008ರ ಚುನಾವಣೆಯಲ್ಲಿ  ಬಿಜೆಪಿ ನೀಡಿದ ಏಟುಗಳಿಂದ ಕಾಂಗ್ರೆಸ್ ಬೇಸತ್ತುಕೊಂಡಿತ್ತು. ಈ ಎಲ್ಲ ಏಟುಗಳ ಹಿಂದೆ ದೇವೇಗೌಡರ ಕಾಂಗ್ರೆಸ್ ವಿರೋಧಿ ನಿಲುವು, ಸೆಕ್ಯುಲರ್ ರಾಜಕಾರಣದ ಮೇಲಿನ ಅವರ ಕರಾಮತ್ತು ಎದ್ದು ಕಾಣಿಸುತ್ತಿತ್ತು. ಬಿಜೆಪಿ ಬೆಳೆಯುವುದಕ್ಕೂ ಕುಮಾರಸ್ವಾಮಿ ಮೂಲಕ ದೇವೇಗೌಡ ಪರೋಕ್ಷ ಕಾರಣ ಎನ್ನುವ ಅಂಶ ಕಾಂಗ್ರೆಸ್ ಗೂ ಮನವರಿಕೆಯಾಗಿತ್ತು. ಹೀಗಾಗಿ ಕಾಂಗ್ರೆಸ್ ವಿರೋಧಿ ಫ್ಯಾಕ್ಟರ್ ಅನ್ನು ಹತ್ತಿಕ್ಕಲು ಕಾಂಗ್ರೆಸ್ ಗೆ ಒಂದು ಲಾಂಚಿಂಗ್ ವೆಹಿಕಲ್  ತಕ್ಷಣಕ್ಕೆ ಬೇಕಿತ್ತು. ಆಗ ತಾನಾಗೇ ಕೈಗೆ ಸಿಕ್ಕಿದ್ದು ಸಿದ್ದರಾಮಯ್ಯ. ಅದೂ ವಿರೋಧಿ ಪಾಳೆಯದ ನೆಲೆಯಿಂದಲೇ! ಅವರ ಹೆಗಲ ಮೇಲೆ ಅಹಿಂದ ಅಸ್ತ್ರವನ್ನಿಟ್ಟು ಕಾಂಗ್ರೆಸ್ ತನ್ನ ಕೆಲಸವನ್ನು ಪೂರೈಸಿಕೊಂಡಿತು. ಜನಾರ್ಧನ ರೆಡ್ಡಿ ಎನ್ನುವ ದೊಡ್ಡ ವಿಕೇಟ್ ಹಾಕುವ ಮೂಲಕ ಬಿಜೆಪಿಗೆ ದೊಡ್ಡ ಶಾಕ್ ನೀಡಲು ಕಾಂಗ್ರೆಸ್ ಗೆ ಸಾಧ್ಯವಾಯಿತು. ಇಂಥ ನಿರ್ಣಾಯಕ ಹೋರಾಟಕ್ಕೆ ಸಿದ್ದು ನೆರವಾದರು. ಪ್ರತಿಪಕ್ಷದ ಹೊಣೆಯನ್ನು ಸಿದ್ದರಾಮಯ್ಯಗೆ ನೀಡುವ ಮೂಲಕ ಬಿಜೆಪಿ ಮತ್ತು ಜೆಡಿಎಸ್ ಅನ್ನು ಏಕಕಾಲಕ್ಕೆ ಹಣಿಯುವ ತಂತ್ರವನ್ನು ಕಾಂಗ್ರೆಸ್ ಯಶಸ್ವಿಯಾಗೇ ನಿರ್ವಹಿಸಿತು.

          ಸಿದ್ದು ನಾಯಕತ್ವ ಬೆಳವಣಿಗೆ ಯತ್ನಕ್ಕೆ ಪೂರಕ ಅಂಶಗಳು:
        • ಸಿದ್ದರಾಮಯ್ಯ ಅವರ ಮೂಲಕ ದೇವೇಗೌಡರನ್ನು ನಿಯಂತ್ರಿಸುವ ಕಾಂಗ್ರೆಸ್ ತಂತ್ರ ಆರಂಭದಿಂದಲೇ ಮಿಶ್ರಫಲ ಕೊಡುತ್ತಾ ಸಾಗಿತ್ತು. ಇದಕ್ಕೆ ನಿದರ್ಶನ ಎಂಬಂತೆ ಸ್ವಂತ ಬಲದಿಂದ ಸರ್ಕಾರ ರಚಿಸುವ ಸಂಕಲ್ಪದೊಂದಿಗೆ ಎದುರಿಸಿದ 2004 ಮತ್ತು 2008ರ ಚುನಾವಣೆಗಳು ಜೆಡಿಎಸ್ ಪಕ್ಷವನ್ನು ನಿರಾಶೆಗೊಳಿಸಿದವು. 
        • 2008ರಲ್ಲಿ ಗಣಿ ಧಣಿಗಳ ವಿರುದ್ಧ ಅಹಿಂದದ ಸಮರ ಪ್ರಭಾವ ಬೀರಿತು. ಅದು ಸಿದ್ದರಾಮಯ್ಯ ಅವರನ್ನು ಮತ್ತಷ್ಟು ಬಲಗೊಳಿಸಿತು. ಹಿಂದುಳಿದ ವರ್ಗಗಳ ಪ್ರಭಾವದ ಅಹಿಂದ ಸಂಘಟನೆ ಸಿದ್ದರಾಮಯ್ಯನವರಿಗೆ ದೊಡ್ಡ ಸಾಥ್ ಕೊಟ್ಟಿತು. ಅವರು ರಿಯಲ್ ಹೀರೋ ಆಗಿ ಬೆಳೆದು ನಿಂತರು. ಬಿಜೆಪಿ ಮತ್ತು ಗೌಡರನ್ನು ಮಣಿಸುವ ಬಹುತೇಕ ತಂತ್ರಗಳನ್ನು ಸಿದ್ದು ಮೂಲಕ ಸಾಧಿಸಿದ್ದು ಕಾಂಗ್ರೆಸ್ ನ ಬಹುಮುಖ್ಯ ರಣತಂತ್ರ.
        • ಸಿದ್ದು ನಾಯಕತ್ವ ಬೆಳವಣಿಗೆಗೆ ಅವಕಾಶವಾಗುವಂತೆ ರಾಜ್ಯ ಅಖಾಡಾದಿಂದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಎತ್ತಿಕೊಂಡ ಕಾಂಗ್ರೆಸ್, ಕೇಂದ್ರದಲ್ಲಿ ಕ್ಯಾಬಿನೆಟ್ ಹುದ್ದೆ ನೀಡಿ ಕಟ್ಟಿಹಾಕಿತು. 
        • ರಾಜ್ಯದಲ್ಲಿ ಪ್ರತಿಪಕ್ಷ ನಾಯಕರಾಗಿ ಸಿದ್ದು ಬೆಳೆಯುವುದಕ್ಕೂ ಕಾಂಗ್ರೆಸ್ ಅವಕಾಶ ಮಾಡಿಕೊಟ್ಟಿತು. ಇದರಿಂದ ಪಕ್ಷದೊಳಗೆ ದಟ್ಟವಾಗುತ್ತ ಸಾಗಿದ ಹೊರಗಿನವರು-ಒಳಗಿನವರು ಎನ್ನುವ ಆಂತರಿಕ ಕಚ್ಚಾಟವನ್ನು ಕಾಂಗ್ರೆಸ್ ನಾಜೂಕಾಗಿ ನಿಭಾಯಿಸಿತು.

          ದೊಡ್ಡ ಕನಸು: ನಿರ್ಣಾಯಕ ಚುನಾವಣೆ
          2013ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಮತ್ತೆ ಗೆದ್ದರು. ವರುಣಾ ಕ್ಷೇತ್ರದ ಜನತೆಗೆ ಸಿಎಂ ಅಭ್ಯರ್ಥಿಯೊಬ್ಬರನ್ನು ಆಯ್ಕೆ ಮಾಡುತ್ತಿರುವ ವಿಷಯ ಪಕ್ಕಾ ಆಗಿತ್ತೇನೋ.  ಅದರಲ್ಲೂ 'ಇದು ಕಡೆಯ ಚುನಾವಣೆ' ಎಂದ  ಸಿದ್ದರಾಮಯ್ಯ ಅವರನ್ನು ಅಲ್ಲಿನ ಜನ ಭಾರಿ ಮತಗಳಿಂದ ಗೆಲ್ಲಿಸಿದರು.
        • ರಾಜ್ಯದಲ್ಲಿ ಬಿಜೆಪಿ ಭ್ರಷ್ಟಾಚಾರದಿಂದ ಜನ ಬೇಸತ್ತಿದ್ದರು. ಬಿಜೆಪಿ ಆಡಳಿತ ವಿರೋಧಿ ಅಲೆಯೂ ಜೋರಾಗೇ ಬೀಸಿತು. ತಕ್ಷಣದಲ್ಲೇ ಬಂದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶಗಳು ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆಯನ್ನೆಬ್ಬಿಸಿದವು.
        • ಸಿದ್ದು ಅದೃಷ್ಟಕ್ಕೆ ಈ ಸಲ ಅಲ್ಪಸಂಖ್ಯಾತ ವರ್ಗದ ಯಾವ ಪ್ರಭಾವಿ ನಾಯಕರು ಮಿಂಚಲಿಲ್ಲ. ಮುಖ್ಯಮಂತ್ರಿ ಹುದ್ದೆಗೆ ಹೇಳಿ ಮಾಡಿಸಿದಂತಿದ್ದ ಜಾಫರ್ ಷರೀಫ್ ಎನ್ನುವ ಹಳೆಯ ಹುಲಿ ಕನಿಷ್ಠ ತನ್ನಿಬ್ಬರು ಸಂಬಂಧಿಗಳನ್ನು ಗೆಲ್ಲಿಸಲಾಗಲಿಲ್ಲ. ಅಥವಾ ಹಾಗಾಗುವಂತೆ ಪಕ್ಷ/ಸಮುದಾಯದ ಕೆಲ ರಾಜಕೀಯ ಶಕ್ತಿಗಳು ನೋಡಿಕೊಂಡವೋ?  ಷರೀಫ್ ಈ ಬಾರಿ ಮೊಮ್ಮಗನ ಬದಲಿಗೆ ಸ್ವತಃ ವಿಧಾನಸಭೆ ಸ್ಪರ್ಧೆಗಿಳಿದಿದ್ದರೆ ಪರಿಸ್ಥಿತಿ ಬೇರೆಯದೇ ಆಗಿರುತ್ತಿತ್ತು. ಷರೀಫ್ ಅದನ್ನೂ ಮಾಡಲಿಲ್ಲ.
        • ಕೊರಟಗೆರೆಯಲ್ಲಿ ಸಿಎಂ ಆಕಾಂಕ್ಷಿ ಅಭ್ಯರ್ಥಿ ಜಿ. ಪರಮೇಶ್ವರ್ ಸೋಲು ಕಾಣಬೇಕಾಯಿತೆಂದರೆ ಏನರ್ಥ? ಇನ್ನು ಆಸ್ಕರ್ ಫರ್ನಾಂಡಿಸ್ ಕೇಂದ್ರದಲ್ಲಿ ದೊಡ್ಡ ಪ್ರಭಾವ ಹೊಂದಿದವರು.ಕಾಂಗ್ರೆಸ್ ಹೈಕಮಾಂಡ್ ಅವರತ್ತ ಮನಸು ಮಾಡಲಿಲ್ಲ. ಲಕೋಟೆಗಳು ದೆಹಲಿಯಿಂದ ಬರುವಂಥ ಪ್ರಮೇಯವೇ ಬರಲಿಲ್ಲ. ಹೀಗಾಗಿ ಸಿದ್ದು ಕನಸಿನ ಹಾದಿ ಸುಗಮವಾಯ್ತು.

          ಒಂದೇ ಸವಾಲು ಖರ್ಗೆ:
        • ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಮಾನ್ಯತೆ ತಂದು ಆ ಭಾಗದಲ್ಲಿ ಭರ್ಜರಿ ಗೆಲುವು ತಂದುಕೊಟ್ಟವರು ಖರ್ಗೆ. ಎದುರಿಸಿದ ಎಲ್ಲ ಚುನಾವಣೆಗಳನ್ನು ಬಹುತೇಕ ಗೆದ್ದ ಖರ್ಗೆ ಯಾವತ್ತೂ ಪಕ್ಷಾಂತರ ಮಾಡಿದವರಲ್ಲ. ಕಟ್ಟಾ ಕಾಂಗ್ರೆಸ್ಸಿಗರಾಗಿ ಪಕ್ಷದಲ್ಲೇ ಉಳಿದವರು. ಮಂತ್ರಿಯಾಗಿ ಗೃಹ ಖಾತೆ ಸೇರಿ ಹಲವು ಪ್ರಮುಖ ಹುದ್ದೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದವರು. ವೈಯಕ್ತಿಕ ವರ್ಚಸ್ಸು ಲೆಕ್ಕಿಸದೇ 40 ವರ್ಷಗಳ ಕಾಲ ಸತತ ಕಾಂಗ್ರೆಸ್ ಯಶಸ್ವಿಗೆ ಶ್ರಮಿಸಿದವರು. ಆದರೆ ಇದೆಲ್ಲ ಸಿಎಂ ಹಾದಿಗೆ ಸಾಕಾಗಲಿಲ್ಲ! ಸಿದ್ದು ಸ್ಟಾರ್ ಗಿರಿ ಎಲ್ಲವನ್ನೂ ಮಂಕಾಗಿಸಿತು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಮಣೆಗಾರ" ಬಸಿದಿಟ್ಟ ಒಡಲಾಳದ ನೋವು ನೆನೆದು...

ಹಾಲ್ಕುರಿಕೆ ಥಿಯೇಟರ್ ಕಾನ್ಸೆಪ್ಟ್ ಕನ್ನಡ ರಂಗಭೂಮಿಯಲ್ಲಿ ಹೊಸದೊಂದು ಸಂಚಲನವನ್ನುಂಟು ಮಾಡುತ್ತಿದೆ. ಒಟ್ಟಾರೆ ಭಾರತೀಯ ರಂಗಭೂಮಿ ಕಾಣುತ್ತಿರುವ ಹೊಸತನಕ್ಕೆ ಇದು ಮುಖ್ಯವಾದ ಸಾಕ್ಷಿ. ಅತ್ಯಂತ ಕ್ರಿಯಾಶೀಲ ತುಡಿತದ ರಂಗಕರ್ಮಿ ಹಾಲ್ಕುರಿಕೆ ಶಿವಶಂಕರ (ನಿರ್ದೇಶಕ/ನಾಟಕಕಾರ) ಇತ್ತೀಚೆಗೆ "ಮಣೆಗಾರ" (ತುಂಬಾಡಿ ರಾಮಯ್ಯನವರ ಆತ್ಮಕಥೆ) ಎನ್ನುವ ದಲಿತ ಕಥಾನಕವೊಂದನ್ನು ರಂಗದ ಮೇಲೆ ಅನಾವರಣಗೊಳಿಸಿದರು. ಪ್ರಯೋಗದ ದೃಷ್ಟಿಯಿಂದ ಕೆಲವು ಕೊರತೆಗಳು, ದೋಷಗಳು ಇವೆ. ಅದು ಯಾವುದೇ ಪ್ರಯೋಗಕ್ಕೆ ಇರುವಂಥವೇ. ಆದರೆ ಸಮುದಾಯವೊಂದರ ಒಡಲಾಳದ ನೋವನ್ನು ರಂಗದ ಮೇಲೆ ಬಸಿದಿಟ್ಟಾಗ  ಬೆಚ್ಚಿ ಬೀಳುವಂತಾಯಿತು. ವಿಶೇಷವಾಗಿ ದಲಿತೇತರಲ್ಲಿ ಸಾಮಾಜಿಕ ಪ್ರಜ್ಞೆ, ಜವಾಬ್ದಾರಿಯನ್ನು ಬಡಿದೆಬ್ಬಿಸುವಂಥ ಕಥಾನಕವದು. "ಮಣೆಗಾರ" ಪ್ರೊಸಿನಿಯಂಗಿಂತ ಆಪ್ತರಂಗಭೂಮಿಗೆ ಸೂಕ್ತವಾದ ವಸ್ತು. ಪ್ರಯೋಗ ಒಟ್ಟಾರೆ ಮನುಷ್ಯ ಬದುಕಿನ ನಡುವಿರುವ ಗ್ರೇ ಏರಿಯಾವೊಂದರ ದರುಶನ ಮಾಡಿಸಿತು. ಮೇಲ್ವರ್ಗ ಸಹಮಾನವರನ್ನು ಅದು ಹೇಗೆ ಅಸ್ಪೃಶ್ಯರು ಎಂದು ದೂರಕ್ಕಿಟ್ಟಿತ್ತು, ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿತ್ತು ಎನ್ನುವುದು ಇದರ ಮೂಲ ಸಂಕಟ. ಇಡೀ ನಾಟಕದಲ್ಲಿ ಬದುಕಿಗಾಗೇ ಸಂಘರ್ಷವಿದೆ. ಆಹಾರಕ್ಕಾಗಿ ಹಾಹಾಕಾರವಿದೆ. socio-cultural  ನೆಲೆಯಲ್ಲಿ ದೊಡ್ಡ ಸಂಘರ್ಷವಿದೆ. ಇದು ರಾಜಕೀಯ ಆಯಾಮದಲ್ಲೂ ಬಹುಮುಖ್ಯವಾದ ಸಂಘರ್ಷವೇ. ಶಿಕ್ಷಣ...

ಮನುಷ್ಯ ಜಾತಿ ತಾನೊಂದೇ ವಲಂ...

ಭಾರತದಲ್ಲಿ ಜಾತಿ ವ್ಯವಸ್ಥೆ ಹೇಗೆ ಹುಟ್ಟಿತು ಎಂಬುದಕ್ಕೆ ಯಾವುದೇ ನಿರ್ಧಿಷ್ಟ ಥಿಯರಿ ಇಲ್ಲ. ಆದರೆ, ಇಲ್ಲಿನ ವರ್ಗ ಸೃಷ್ಟಿ ಮಾತ್ರ ಇರಾನ್ ವ್ಯವಸ್ಥೆಯಂತೇ ಇದೆ.  ಪುರಾತನ ಇರಾನಿನ ಚರಿತ್ರೆಯಲ್ಲಿ ಇಂಥದೊಂದು ವ್ಯವಸ್ಥೆ ಇತ್ತು. ಅದಕ್ಕೆ ಪಿಸ್ತ್ರಾಸ್ ಎನ್ನುತ್ತಾರೆ. ನಮ್ಮಲ್ಲಿ ಅದು ಚಾತುರ್ವರ್ಣವಾಗಿದೆ. ಅಲ್ಲಿ ಅಥ್ರವಾನ್ಸ್ (ಪ್ರೀಸ್ಟ್ ಕ್ಲಾಸ್), ರಥೈಸ್ತಾ (ವಾರಿಯರ್ಸ್), ವಸ್ತ್ರಿಯಾ (ಮರ್ಕಂಟೈಲ್ ಕ್ಲಾಸ್) ಮತ್ತು ಹ್ಯುತಿ (ಆರ್ಟಿಸನ್) ಎನ್ನುವ ವರ್ಗ ವ್ಯವಸ್ಥೆ ಇದೆ. ನಮ್ಮಲ್ಲಿ ಇದನ್ನು ಕಲ್ಪಿಸಿಕೊಂಡರೆ ಪುರೋಹಿತ ಅಥವಾ ಬ್ರಾಹ್ಮಣ (ಅಥ್ರವಾನ್ಸ್), ಕ್ಷತ್ರಿಯ  (ರಥೈಸ್ತಾ), ವೈಶ್ಯ  (ವಸ್ತ್ರಿಯಾ) ಮತ್ತು ಶೂದ್ರ (ಹ್ಯುತಿ) ಎಂದು ಅರ್ಥೈಸಿಕೊಳ್ಳಬಹುದು.  ಆದಿ ಕಾಲದ ಇರಾನಿಯನ್ ವ್ಯವಸ್ಥೆ ಹೀಗೇ ಇತ್ತು. ಅದೇ ನಾಲ್ಕು ವರ್ಗಗಳು ಭಾರತದಲ್ಲೂ ಈಗಲೂ ಚಾಲ್ತಿಯಲ್ಲಿವೆ. ಹೀಗೆ ಒಂದು ಇರಾನ್ ಸಂಬಂಧ ಭಾರತಕ್ಕಿದೆ. ಚರ್ಮದ ಬಣ್ಣ, ನಯ ನಾಜೂಕು, ಕಣ್ಣು, ಬುದ್ಧಿವಂತಿಕೆಯನ್ನು ಹೋಲಿಸಿದರೆ ಭಾರತದ ಅದರಲ್ಲೂ ಉತ್ತರ ಭಾರತದ ಕಾಶ್ಮೀರಿ ಪಂಡಿತರು, ಉತ್ತರ ಪ್ರದೇಶದ ಪಂಡಿತ್, ಚಿತ್ಪಾವನ ಬ್ರಾಹ್ಮಣರು, ನಮ್ಮ ಕರಾವಳಿ ಮತ್ತು ಉತ್ತರ ಕನ್ನಡದ ಹವ್ಯಕರು ಹೆಚ್ಚೂ ಕಮ್ಮಿ ಇರಾನಿಗಳನ್ನು ಹೋಲುತ್ತಾರೆ (ಮೇಲ್ನೋಟಕ್ಕೆ).  ಬಹುಶಃ ಹೀಗೂ ಆಗಿರಬಹುದು, ಆಗ ಇರಾನ್ ನಲ್ಲಿ ಕ್ರೈಸ್ತ ಮತ್ತು ಇಸ್ಲಾಂ ಮುಂಚೆಯೂ ಹಲವಾರ...

'ಅನಭಿಜ್ಞ ಶಾಕುಂತಲ': ನೆನಪು ಮರೆವಿನಾಟ

 ಜೀವನವೇ ಒಂದು ನಾಟಕವೆಂದಾದರೆ. ಸಂಬಂಧ ಅನ್ನೋದು ಕಟ್ಟಿಕೊಂಡ ಆಟ. ಅಂದರೆ ನಾಟಕದಂತೆ ಬದುಕು ಕೂಡ ಆಟ ಕಟ್ಟುವ ಕ್ರಿಯೆ. ಇಲ್ಲಿ ಗುರಿ ಎಂದರೆ ಸುಖದ ಅಥವಾ ಸಾರ್ಥಕತೆಯ ದಡ ಸೇರುವುದು. ಈ ಆಟದ ಒಂದು ಹಂತದಲ್ಲಿ ಕಷ್ಟದ ಅಡವಿ ಸೇರುವುದೂ ಇದೆ! 'ಆಡಾಡ್ತ ಅಡವಿ ಸೇರುವುದು' ಅಂತಾರಲ್ಲ ಹಾಗೆ. ಅಡವಿ ಅಂದರೆ ಇಲ್ಲಿ ಸಂಕೀರ್ಣತೆ, ಸಂಕಷ್ಟ ಅವಘಡ, ಸಂದಿಗ್ಧತೆ ಎಂದು ಭಾವಿಸಿಕೊಳ್ಳಬಹುದು. ಬದುಕಿನ ದಾರಿಯಲ್ಲಿ ಒಮ್ಮೆ ಈ 'ಅಡವಿ' ಎದುರಾಗೇ ಆಗುತ್ತದೆ ಎನ್ನುವುದು ವಿಧಿಲಿಖಿತವೇ? ಗೊತ್ತಿಲ್ಲ. ಪ್ರೀತಿ-ಪ್ರೇಮ-ಕಾಮ ಎನ್ನುವ ಬದುಕಿನ ಒಟ್ಟಾರೆ ಆಟ- ಕೂಟದಲ್ಲಿ ಪಡಕೊಳ್ಳುವುದೆಲ್ಲ ಜೀವಕಾರುಣ್ಯವಷ್ಟೇ ಅಲ್ಲ. ಸಂಕಷ್ಟ ಮತ್ತು ಸಂದಿಗ್ಧತೆಯೂ ಜತೆಯಲ್ಲಿರುತ್ತದೆ ಎನ್ನುವುದು ಸಹಜ ಮನೋಧರ್ಮ.  ಬದುಕಿನ ಆಟಕ್ಕೆ ತೆರಕೊಂಡವರಲ್ಲಿ ಹಲವರು ಅನುಭವಿಸಿದ ಮಧುರ ಘಳಿಗೆಗಳನ್ನು ಕಡೆತನಕ ನೆನಪಿಟ್ಟುಕೊಳ್ಳುತ್ತಾರೆ. ಕೆಲವರು ಮರೆತೇ ಬಿಡುತ್ತಾರೆ!?..  ಕಾಳಿದಾಸನ ಮಹಾಕಾವ್ಯ ಶಾಕುಂತಲೆಯಲ್ಲಿ ಈ ಬದುಕು, ಮನುಷ್ಯ ಪ್ರೀತಿ ಪಯಣದ ನೆನಪು ಮತ್ತು ಮರೆವಿನಾಟ ಮನಮಿಡಿಯುವಂತೆ ಚಿತ್ರಣಗೊಂಡಿದೆ. ಈ ಕಾವ್ಯದಲ್ಲಿ ಎಲ್ಲವನ್ನು ವಿಧಿಯೇ ನಿರ್ಧರಿಸಿದಂತೆನಿಸುತ್ತದೆ. ಫೇಟಲಿಸಂ ವಾದಕ್ಕೆ ಪೂರಕವಾದ ಚಿಂತನೆ ಇದೆನ್ನಬಹುದು. ಆಧುನಿಕ ಯುಗದ ಶೇಕ್ಸಪಿಯರ್ ನ ಹಲವು ನಾಟಕಗಳಲ್ಲಿಯೂ ಈ ಫೇಟಲಿಸಂ ಪ್ರಧಾನ ಪಾತ್ರದಂತೆ ವರ್ತಿಸುವುದನ್ನು ಗಮನಿಸಬಹುದು. * ...