ವಿಷಯಕ್ಕೆ ಹೋಗಿ

ನಾನು ಓದಿದ ಒಂದು ಸಿನಿಮಾ

ಸಾವಿನ ನಾಲಗೆಯ ಚಲನೆ ನಯವಾದ ದನಿಯಲ್ಲಿ ಕೇಳಿಸುತ್ತಿದೆ. ‘ನಾನು ಎಲ್ಲೆಂದರಲ್ಲಿ ಹೀಗೆ ಬಂದೆರಗುವೆನು. ಬದುಕಿನ ಯಾವ ಕ್ಷಣದಲ್ಲೂ, ಯಾವ ಪಯಣದಲ್ಲೂ  ..  ಪ್ರತಿ ಜೀವವನ್ನು ಬೆನ್ನಟ್ಟುವುದೇ ನನ್ನ ಕಾಯಕ...’
-
ಪರದೆಯ ತುಂಬ ದಟ್ಟ ಬೆಳ್ಮೋಡಗಳು. ನಿಧಾನಕ್ಕೆ ಅದರೊಳಗಿಂದ ಕ್ಯಾಮೆರಾ ಕಣ್ಣು ತೂರಿಕೊಂಡಾಗ ದಕ್ಕಿದ್ದು  ದಟ್ಟವಾಗಿ ಹಿಮ ಸುರಿದ ಬೆಟ್ಟಗಳು. ನಡುವೆ ಮೈಚಾಚಿ ಮಲಗಿದ ಹಳಿಗಳು. ಅದರ ಮೇಲೆ ರೈಲೊಂದು ಹೊಗೆಯುಗುಳುತ್ತ ಶರವೇಗದಲ್ಲಿ ಸಾಗುತ್ತಿದೆ. ಪಯಣದಲ್ಲಿರುವ ರೈಲಿನ ಹೊಗೆ ಮೋಡಗಳ ಜತೆ ಸೇರಿ ಆಕಾಶವನ್ನೇ ವ್ಯಾಪಿಸಿಕೊಂಡಂತಿದೆ. ಇಡೀ ಮೂಡ್ ಮನುಷ್ಯನ ಹುಟ್ಟು, ಬದುಕು ಮತ್ತು ಸಾವು ಇದರ ನಡುವಣ ಪಯಣ... ಎಲ್ಲ ಪರಸ್ಪರ ಹೊಂದಿದ ಅವಿನಾಭಾವ ಸಂಬಂಧದಂತೆ, ಒಂದು ಮತ್ತೊಂದರ ಪ್ರತಿರೂಪದಂತೆ.
 ವಿಷಾದದ ಛಾಯೆಯಂತೆ ಇಡೀ ಸ್ಕ್ರೀನ್ ಒಂದಷ್ಟು ಕ್ಷಣ ದಿವ್ಯ ಮೌನಿ. ಕ್ಯಾಮೆರಾ ಮೆಲ್ಲಗೆ ರೈಲಿನ ಬೋಗಿಯೊಳಕ್ಕೆ ತೂರಿಕೊಳ್ಳುತ್ತದೆ. ತೂಕಡಿಸುತ್ತ, ಕೆಮ್ಮುತ್ತ, ಚಳಿಗೆ ಮುದುಡಿ ಕುಳಿತ ಪ್ರಯಾಣಿಕರ ದರ್ಶನ ಮಾಡಿಸುತ್ತದೆ. ಪ್ಯಾನ್ ಮಾಡುತ್ತ ಬಾಲೆಯೊಂದರ ಪ್ರೊಫೈಲ್ ಸೆರೆ ಹಿಡಿದು ಕ್ಷಣ ನಿಲ್ಲುತ್ತದೆ. ನುಣುಪಾದ ಕೆನ್ನೆ, ಮುಗ್ಧ ನಗೆಯ ಇವಳ ಹೆಸರು ಲೀಸಲ್. ಮುಖವನ್ನು ಕೊಂಚ ಬಲಕ್ಕೆ ತಿರುಗಿಸಿ ಕುಳಿತ ಲೀಸಲ್ ಈಗಷ್ಟೇ ಅರಳಿ ನಿಂತ ಗುಲಾಬಿ. ಓಹ್! ಅವಳ ಬಿರಿದ ತೆಳು ಗುಲಾಬಿ ರಂಗಿನ ಕೋಮಲ ತುಟಿ, ಕಣ್ಣುಗಳಲ್ಲಿನ ಜೀವಚೈತನ್ಯ, ಮುಗ್ಧ ಪ್ರಭೆ...
 ಸಾವಿನ ದನಿಯೊಂದನ್ನು ಆಲಿಸಿಕೊಳ್ಳುತ್ತಿರುವವಳಂತೆ ಕುಳಿತಿದ್ದಾಳೆ. ಸಾವಿನ  ದನಿ ಅವಳನ್ನು ಕುರಿತಾಗಿ ಹೇಳಹೊರಟಂತೆ ಅನ್ನಿಸುತ್ತಲೇ ಎಲ್ಲರಿಗೂ ಹೇಳಿದಂತೆಯೂ ಅನಿಸುತ್ತದೆ. ಲೀಸಲ್ ಬದುಕಿನ ಅದೆಂಥದೋ ಚೈತನ್ಯಕ್ಕಾಗಿ ನಿರುಕಿಸುವವಳಂತೆ ಅನಿಸುತ್ತಿದ್ದಾಳೆ. ಆಕೆ ಮುನ್ಸೂಚನೆಯೊಂದನ್ನು  ಗ್ರಹಿಸಿದವಳಂತೆ ಆತಂಕದಲ್ಲೂ ಇದ್ದಾಳೆ. ಅವಳಲ್ಲಿ ವಯಸ್ಸಿಗೂ ಮೀರಿದ ಉತ್ಕಟಾಕಾಂಕ್ಷೆ. ಸ್ಥಿತಪ್ರಜ್ಞಳಂತಿರುವ ಆಕೆಯ ಅಮ್ಮನ ಮಡಿಲಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ತಮ್ಮ ಮಲಗಿದ್ದಾನೆ. ತಮ್ಮನ ಮೂಗಿನಿಂದ ರಕುತ ಬುಳು ಬುಳು ಹೊರಬರುತ್ತಿರುವುದನ್ನು ಕಾಣುತ್ತಾಳೆ. ಅಮ್ಮನಿಗೂ ತೋರಿಸುತ್ತಾಳೆ.

* * *
ಕ್ರೈಸ್ತರ ರುದ್ರಭೂಮಿ. ಮಂಜಿನಿಂದ ತುಂಬಿ ಹೋಗಿದೆ. ಸಮಾಧಿಗಳ ಮೇಲೆ ನಿಲ್ಲಿಸಿದ ಶಿಲುಬೆಗಳು ಮಾತ್ರ ಅಲ್ಲಲ್ಲಿ ಕಾಣಿಸುತ್ತಿವೆ. ಮಗುವಿನ ಹೆಣವನ್ನು ಬಟ್ಟೆಯಲ್ಲಿ ಸುತ್ತಿಡಲಾಗಿದೆ. ಪಕ್ಕದಲ್ಲಿ ಗೋರಿ ತೋಡಲಾಗಿದೆ. ಪಾದ್ರಿ ‍ಪ್ರಾರ್ಥನೆ ಹೇಳುತ್ತಿದ್ದಾನೆ. ಅಮ್ಮ ಕಣ್ಣೀರು ಬತ್ತಿ ಹೋಗುವಷ್ಟು ಅತ್ತು ಸುಸ್ತಾದಂತೆ ನಿಶ್ಚಲವಾಗಿ ನಿಂತಿದ್ದಾಳೆ. ಗೋರಿ ತೋಡಿದವ ಅದನ್ನು ಮುಚ್ಚಲನುವಾಗುತ್ತಾನೆ. ಕಮ್ಯುನಿಸ್ಟ್ ಧೋರಣೆಯ ತಾಯಿ ಹಿಂತಿರುಗಿ ನೋಡದೇ ಸರ ಸರನೇ ನಡೆದುಬಿಡುತ್ತಾಳೆ. ಅವಳ ಸಿಟ್ಟು, ಆಕ್ರೋಶ, ಬೇಸರ ಮಗು ಸತ್ತ ಕಾರಣಕ್ಕಷ್ಟೇ ಅಲ್ಲ. ಇಡೀ ವ್ಯವಸ್ಥೆಯ ವಿರೋಧಿ ಮತ್ತು ಧಿಕ್ಕಾರದ ನಿಲುವು ಅದು. ನಿರ್ಲಿಪ್ತ, ಸ್ಥಿತಪ್ರಜ್ಞ  ಸ್ಥಿತಿಯೂ ಹೌದು. ಮುಗ್ಧ ಲೀಸಲ್ ಏನೂ ತೋಚದ ಸ್ಥಿತಿಯಲ್ಲಿ ಮತ್ತು ಮರುಕ್ಷಣದಲ್ಲಿ ಏನನ್ನೋ ಗ್ರಹಿಸ ಹೊರಟಂತೆಯೂ ನಿಂತಿದ್ದಾಳೆ. ಗೋರಿ ಮುಚ್ಚುವವನ ಜೇಬಿನಿಂದ ಡೈರಿಯಂಥದೊಂದು ಪುಸ್ತಕ ನೆಲಕ್ಕೆ ಬೀಳುತ್ತದೆ. ಆತ ಅದನ್ನು ಗಮನಿಸದೇ ತನ್ನ ಕಾಯಕದಲ್ಲಿ ನಿರತನಾಗಿರುತ್ತಾನೆ. ಲೀಸಲ್ ಕಳ್ಳಿಯ ಹಾಗೆ ಆ ಡೈರಿ ಎತ್ತಿಕೊಂಡು ಸರ ಸರನೇ ನಡೆಯುತ್ತಾಳೆ. ....
* * *
ಜರ್ಮನಿಯ ಸಣ್ಣ ಪಟ್ಟಣದ ಓಣಿ. ಹಳೆಯದಾದ ಕಾರಿನಲ್ಲಿ ಲೀಸಲ್ ಕುಳಿತಿದ್ದಾಳೆ. ಅನಾಥ ಲೀಸಲ್‌ಗೆ ಆಸರೆ ಮತ್ತು ಇಳಿವಯಸ್ಸಿನ ದಂಪತಿಗೆ ಸಾಕು ಮಗು ಎನ್ನುವಂಥ ಮಾನವೀಯ ವ್ಯವಸ್ಥೆ ರೂಪುಗೊಳ್ಳುತ್ತಿರುವ ಒಂದು ಸ್ಥಿತಿ. ಸಂತಾನವಿಲ್ಲದ ಹನ್ಸ್‌ ಮತ್ತು ರೋಸಾ ಎನ್ನುವ ದಂಪತಿಯೊಬ್ಬರ ಮನೆಯ ಮುಂದೆ ಕಾರು ನಿಂತಿದೆ. ಸಾಕುಮಗುವಿಗಾಗಿ ಕಾತರ, ಕುತೂಹಲದಿಂದ ಕಾದು ನಿಂತ ಅವರ ಮುಖದಲ್ಲಿ ತಾಯ್ತನದ ಕಳೆ. ಲೀಸಲ್ ಮುಖದಲ್ಲಿ ಆಶಾಕಿರಣದ ನಿರೀಕ್ಷೆ.
  55ರ ಆಜೂಬಾಜು ವಯಸ್ಸಿನ ಗಂಡ ಹನ್ಸ್ ಮತ್ತು ಗಂಡನಿಗಿಂತ ಕೊಂಚ ಕಮ್ಮಿ ವಯಸ್ಸಿನ ಹೆಂಡತಿ ರೋಸಾ. ಹನ್ಸ್ ಕಟ್ಟಡಗಳಿಗೆ ಬಣ್ಣ ಬಳಿಯುವ ಮತ್ತು ನಗರದ ಮೇಯರ್ ಸೇರಿದಂತೆ ಇತರ ಗಣ್ಯರ ಬಟ್ಟೆಗಳನ್ನು ಒಗೆದು ಇಸ್ತ್ರಿ ಮಾಡಿಕೊಡುವಂಥ ಸಣ್ಣಪುಟ್ಟ ಕೆಲಸ ಮಾಡಿಕೊಂಡಿರುವಾತ. ಹೆಂಡತಿ ರೋಸಾ ಲಾಂಡ್ರಿ ಕೆಲಸಕ್ಕೆ ಗಂಡನಿಗೆ ನೆರವಾಗುವಾಕೆ.. ಸೀದಾ ಸಾದಾ ಜಿಂದಗೀ.
  ಹನ್ಸ್  ಕಾರಿನಲ್ಲಿ ಕುಳಿತ ಲೀಸಲ್ ಳನ್ನು ನೋಡುತ್ತಾನೆ. ಆ ಮುದ್ದು ಮುಖದಲ್ಲಿ ಮುಗ್ಧತೆ, ಮಾನವೀಯತೆಯ ಸಹಜತೆ ಬಿಟ್ಟರೆ ಮತ್ತೇನೂ ಅವನಿಗೆ ಕಾಣಿಸುವುದಿಲ್ಲ... ಲೀಸಲ್ ಗಾಬರಿಗೊಳ್ಳುವುದಿಲ್ಲ. ಭರವಸೆಯ ಬೆಳಕೊಂದನ್ನು ಅಪರಿಚಿತ ಹನ್ಸ್‌ ಕಣ್ಣಲ್ಲಿ ಕಾಣಲೆತ್ನಿಸುತ್ತಾಳೆ. ತಂದೆ ಎನ್ನುವ ಭಾವಕ್ಕೆ ಬಯಲಾಜಿಕಲ್ ತಂದೆಯೇ ಆಗಬೇಕೇನು? ಎನ್ನುವ ಭಾವದಲ್ಲಿ ಕಣ್ಣು ಮಿಟುಕಿಸಿ ‘ಬಾ ಮಗೂ’ ಎನ್ನುವ ಆಪ್ತ ಆಹ್ವಾನವೊಂದನ್ನು ಹನ್ಸ್ ನೀಡುತ್ತಾನೆ. ಲೀಸಲ್ ಮೆಲ್ಲಗೆ ಕಾರಿನಿಂದಿಳಿದು ನಿಲ್ಲುತ್ತಾಳೆ. ಆಕೆಯ ಬೆನ್ನ ಮೇಲೆ ಕೈ ಹಾಕಿ ನಡೆಯುತ್ತ ಲೀಸಲ್‌ಳನ್ನು ತುಂಬ ಪ್ರೀತಿಯಿಂದ ಮನೆಯೊಳಕ್ಕೆ ಸೇರಿಸಿಕೊಳ್ಳುತ್ತಾನೆ.
* * *
 ಹೆಂಡತಿ ರೋಸಾಗೆ ಆರಂಭದಲ್ಲಿ ಹೆಣ್ಣು ಸಹಜ ಮತ್ಸರದ ಮನೋಭಾವ. ಅದು ಲೀಸಲ್‌ಗೆ ಅಷ್ಟಾಗಿ ಹರ್ಟ್‌ ಮಾಡುವುದಿಲ್ಲ. ಮೊದಲ ದಿನ ಡೈನಿಂಗ್ ಟೇಬಲ್ ಮೇಲೆ ಸವಿಯುವ ಸೂಪ್ ಆಕೆಯ ಹಸಿವಿಗೆ/ಬದುಕಿಗೆ ತಕ್ಷಣದ ಎನರ್ಜಿ. ಅಲ್ಲಿಯವರೆಗೆ ಒಂದು ಮಾತನ್ನೂ ಆಡದ ಲೀಸಲ್ ಮೂಗಿಯೇ ಇರಬೇಕು ಎನ್ನುವುದು ರೋಸಾ ಅನುಮಾನ. ಹನ್ಸ್ ಸೂಪ್ ಹೇಗಿತ್ತು ಮಗಳೇ ಎಂದಾಗ ಗುಡ್ ಎಂದು ಲೀಸಲ್ ಸವಿದನಿಯಲ್ಲಿ ಉಸುರಿದಾಗಲೇ ರೋಸಾ ಮನಸಿಗೆ ಸಮಾಧಾನವೆನಿಸುತ್ತದೆ. ಓಹ್ ಮಾತೂ ಬರುತ್ತದೆ ಇದಕ್ಕೆ ಎಂದು ಕೊಂಕು ದನಿಯಲ್ಲೇ ನುಡಿದರೂ ಆಕೆಯೊಳಗಿನ ತಾಯಿ ಆಗಲೇ ಜಾಗೃತಗೊಂಡಂತೆನಿಸುತ್ತದೆ. ಮನುಷ್ಯ ಸಹಜ ಅಂತಃಕರಣವೂ ಒಮ್ಮೊಮ್ಮೆ ಸರಿ ಹೊತ್ತಿನಲ್ಲಿ ಜಾಗೃತಗೊಂಡರೆ ಅಮಾನವೀಯತೆಗೆ ಹೆಚ್ಚು ಅವಕಾಶವಿರುವುದಿಲ್ಲವೇನೋ...
* * *
 ಬಾಗಿಲು ಬಡಿವ ಸದ್ದು. ತೆರೆದರೆ ಒಬ್ಬ ಹದಿವಯಸ್ಸಿನ ಹುಡುಗ. ಲೀಸಲ್‌ ಸಾಕು ತಂದೆ-ತಾಯಿ ಮನೆ ಸೇರುವುದನ್ನು ಪಕ್ಕದ ಮನೆಯ ಈ  ಹುಡುಗ ಕಂಡಿರುತ್ತಾನೆ. ಆಗಿನಿಂದ ಇವನಲ್ಲಿ ಕುತೂಹಲ. ಮನೆಯೊಳಕ್ಕೆ ಇಣುಕಲು ಹವಣಿಸುವವನಂತೆ ವರ್ತಿಸುತ್ತಾನೆ. ಲೀಸಲ್‌ಳನ್ನು ಕಾಣುವ ತವಕದಲ್ಲೇ ಈ ಹುಡುಗನಿದ್ದಾನೆ ಎನ್ನುವುದು ರೋಸಾಗೆ ಸ್ಪಷ್ಟ. ‘ ಹುಷಾರು, ಆಕೆ ನನ್ನ ಮಗಳು’ ಎನ್ನುವ ಹಕ್ಕಿನ ಪ್ರೀತಿಯಿಂದಲೇ ಗದರುತ್ತಾಳೆ. ಲೀಸಲ್‌ ಮತ್ತು ಹುಡುಗನ ಪರಸ್ಪರ ಪರಿಚಯವೂ ನಡೆಯುತ್ತದೆ.
* * *
 ಲೀಸಲ್ ತಾನು ಗ್ರೇವಯಾರ್ಡ್‌ ನಿಂದ ಎತ್ತಿ ತಂದ ಆ ಡೈರಿಯಂಥ ಪುಸ್ತಕದ ಪುಟಗಳನ್ನು ತಿರುವುತ್ತ ಕುಳಿತಿದ್ದಾಳೆ. ಹನ್ಸ್‌ ಅದನ್ನು ಗಮನಿಸುತ್ತಾನೆ. ಪುಸ್ತಕ ತೆರೆದು ನೋಡುತ್ತಾನೆ. ಅದೊಂದು ಹ್ಯಾಂಡ್‌ಬುಕ್.  ಓದುವುದು ಅಂದರೆ ತುಂಬ ಇಷ್ಟಾನಾ ಮಗಾ ಎನ್ನುವರ್ಥದಲ್ಲಿ ಕೇಳುತ್ತಾನೆ. ಲೀಸಲ್‌ ತಲೆಯಾಡಿಸುತ್ತಾಳೆ.
* * *
 ಪಕ್ಕದ ಮನೆ ಹುಡುಗನ ಜತೆ ಲೀಸಲ್‌ ಸ್ಕೂಲ್ ಬದುಕು ಆರಂಭಗೊಂಡಿದೆಯಾದರು ಅವಳಿಗೆ ಬರೆಯುವುದಕ್ಕೆ ಬರುವುದಿಲ್ಲ ಎನ್ನುವ ಸತ್ಯ ತಿಳಿಯುತ್ತದೆ. ಅಪ್ಪ ಚಾರ್ಕೋಲ್, ಪೆನ್ಸಿಲ್ ತರುತ್ತಾನೆ. ಮನೆಯ ನೆಲಮಹಡಿಯಲ್ಲಿನ ವಿಶಾಲವಾದ ಗೋಡೆಗಳು ಈಗ  ಬ್ಲ್ಯಾಕ್‌ಬೋರ್ಡ್ ಆಗಿ ಬಳಕೆಯಾಗುತ್ತಿವೆ. ಅದರ ತುಂಬ ಎಲ್ಲೆಂದರಲ್ಲಿ ಅಕ್ಷರಗಳು.

-2-
 ಜರ್ಮನಿಯ ಬೀದಿ ಬೀದಿಗಳಲ್ಲಿ ನಾಜಿ ಚಳವಳಿಯ ಕಾವು ಹೆಚ್ಚಿದೆ. ಎಲ್ಲೆಲ್ಲೂ ಭರ್ಜರಿ ಸಾರ್ವಜನಿಕ ಸಮಾವೇಶಗಳು. ಆವೇಶಭರಿತ ಭಾಷಣಗಳು. ಯಹೂದಿಯರನ್ನು ಬುಡಸಮೇತ ಕಿತ್ತೆಸೆಯುವ ಮಾತುಗಳು. ನಮ್ಮ ನೆಲದಲ್ಲಿ ನೆಲೆಯೂರಿದ ಈ ಕ್ರೂರ ಸಂತತಿಯನ್ನು ಕಿತ್ತೆಸೆಯೋಣ, ಇವರು ರೂಪಿಸಿದ ಪುಸ್ತಕಗಳು, ಸಿನಿಮಾಗಳು, ಧ್ವನಿಮುದ್ರಿಕೆಗಳು, ಭಾಷಣಗಳು, ಸಂಗೀತ... ಎಲ್ಲವನ್ನು ಗುಡಿಸಿ ಹಾಕುವ ಸಂಕಲ್ಪ ಮಾಡೋಣ...’ ಎನ್ನುವ ಒಂದು ಕ್ರಾಂತಿಕಾರಿ ಬಾಷಣಕ್ಕೆ ಜನ ವೀರಾವೇಷದಲ್ಲಿ ಸ್ಪಂದಿಸುತ್ತಿದ್ದಾರೆ. ಈಕೆಯೂ ಆ ಜನಸಾಗರದಲ್ಲಿ ನಿಂತಿದ್ದಾಳೆ. ಎಲ್ಲರೂ ಪುಸ್ತಕಗಳನ್ನು ಗುಡ್ಡೆ ಹಾಕಿ ಅದಕ್ಕೆ ಬೆಂಕಿ ಹಚ್ಚುತ್ತಾರೆ. ಬೆಂಕಿಯಲ್ಲಿ ಬೆಂದು ಹೋಗುವ ಪುಸ್ತಕಗಳನ್ನು ಕಂಡ ಲೀಸಲ್‌ ಒಡಲಲ್ಲಿ ಕರುಳು ಹಿಂಡಿದಂಥ ಯಾತನೆ. ಪುಸ್ತಕವೊಂದನ್ನು ಬೆಂಕಿಯಿಂದ ರಕ್ಷಿಸಿ ಎದೆಗವುಚಿಕೊಳ್ಳುತ್ತಾಳೆ. ದೂರದಿಂದಲೇ ಇದನ್ನು ಮೇಯರ್ ಪತ್ನಿ ಗಮನಿಸುತ್ತಾಳೆ.* * *
 ಇಸ್ತ್ರಿ ಮಾಡಿದ ಬಟ್ಟೆಗಳನ್ನು ನೀಡಲು ಲೀಸಲ್‌ ಮೇಯರ್ ಮನೆಗೆ ಹೋಗುತ್ತಾಳೆ. ಮೇಯರ್‌ ಪತ್ನಿ ಒಳಕ್ಕೆ ಕರೆಯುತ್ತಾಳೆ. ಪುಸ್ತಕಗಳೆಂದರೆ ನಿನಗಿಷ್ಟ ಎಂದು ಕಾಣುತ್ತದೆ ಎಂದಾಗ ಲೀಸಲ್ ತಲೆ ಅಲ್ಲಾಡಿಸುತ್ತಾಳೆ. ಮೇಯರ್ ಹೆಂಡತಿ ಪಕ್ಕದ ಒಂದು ಕೋಣೆಗೆ ಕರೆದೊಯ್ಯುತ್ತಾಳೆ. ಅದೊಂದು ಪುಟ್ಟ ಲೈಬ್ರರಿ. ಲೀಸಲ್‌ ತುಂಬ ಖುಷಿಪಡುತ್ತಾಳೆ. ಮೇಯರ್ ಇದನ್ನು ಗಮನಿಸುತ್ತಾನೆ. ಲೀಸಲ್‌ ಹೆದರಿ ಹೊರ ನಡೆಯುತ್ತಾಳೆ. ಕೋಪದಲ್ಲಿರುವ ಮೇಯರ್ ಲೈಬ್ರರಿ ಕೊಠಡಿ ಬಾಗಿಲನ್ನು ಎಳೆದುಕೊಳ್ಳುತ್ತಾನೆ.
 ಇದ್ದ ಒಬ್ಬ ಮಗ ಈ ಓದಿನ ಹುಚ್ಚಿನಲ್ಲಿದ್ದವನು. ಅವನ ಪ್ರೀತಿಯ ಲೈಬ್ರರಿ ಇದು. ಅವನನ್ನು ಕಳಕೊಂಡ ಮೇಲೆ ಆತನ ಪ್ರೀತಿಯ ಈ ಲೈಬ್ರರಿ ದಿಟ್ಟಿಸುವುದು ಕೂಡ ಹಿಂಸೆ ಎನ್ನುವಂಥ ಕೊರಗು ಅದು. ಆ ನಂತರದಲ್ಲಿ ಒಮ್ಮೆ ಲೀಸಲ್ ಈ ಲೈಬ್ರರಿಯ ಒಂದೆರಡು ಪುಸ್ತಕಗಳನ್ನು ಕದ್ದೊಯ್ಯುತ್ತಾಳೆ.
* * *
ಅದೊಂದು ದಿನ ನಾಜಿ ಸೈನಿಕರು ಓಣಿಯ ಒಬ್ಬ  ಯಹೂದಿಯನ್ನು  ಮನೆಯಿಂದ ಹೊರಕ್ಕೆಳೆದು ವ್ಯಾನಿಗೆ ತುಂಬಿಕೊಳ್ಳುತ್ತಿರುತ್ತಾರೆ. ಆತ ‘ಅಯ್ಯೋ ನನ್ನ ಕಾಪಾಡಿ. ನಿಮಗಾವ ತೊಂದರೆಯನ್ನೂ ಕೊಡದೆ ನಾನು ನಿಮ್ಮೊಂದಿಗೆ ಇಷ್ಟು ದಿನ ಸಹಬಾಳುವೆ ಮಾಡಿದ್ದೇನೆ. ಯಾರಾದರೂ ನನ್ನ ರಕ್ಷಿಸಿ’ ಎನ್ನುವರ್ಥದಲ್ಲಿ ಗೋಗರೆಯುತ್ತಿದ್ದಾನೆ. ಎಲ್ಲರೂ ಅಸಹಾಯಕರಂತೆ ನಿಂತಿದ್ದಾರೆ. ಹನ್ಸ್‌ ಇದನ್ನು ಕಂಡೂ ಕಾಣದಂತಿರಲು ಯತ್ನಿಸುವುದಿಲ್ಲ. ಬದಲಾಗಿ ಪ್ರತಿಭಟಿಸುತ್ತಾನೆ. ‘ಆತ ಒಳ್ಳೆಯ ವ್ಯಕ್ತಿ. ಅವನಿಗ್ಯಾಕೆ ಈ ಶಿಕ್ಷೆ. ಇಷ್ಟು ವರ್ಷ ನಮ್ಮ ನಡುವೆಯೇ ಇದ್ದು ನಮ್ಮೊಂದಿಗೇ ಬೆರೆತವನು. ನಮ್ಮನ್ನು ನಮ್ಮ ಒಟ್ಟಾರೆ ಬದುಕನ್ನು ಅವನು ಯಾವತ್ತೂ ಇಕ್ಕಟ್ಟಿಗೆ ನೂಕಿದವನಲ್ಲ’ ಎನ್ನುವರ್ಥದಲ್ಲಿ ಹನ್ಸ್‌ ಆ ಯಹೂದಿಯನ್ನು ಸಮರ್ಥಿಸಿಕೊಳ್ಳಲು ನೋಡುತ್ತಾನೆ. ಆತನನ್ನು ಸೈನಿಕರು ನೂಕುತ್ತಾರೆ. ಕೆಳಕ್ಕೆ ದೊಪ್ಪನೆ ಬೀಳುತ್ತಾನೆ. ‘ಯಾವ ಮನೆಯೂ ಯಹೂದಿಗಳಿಗೆ ಆಶ್ರಯ ತಾಣಗಳಾಗದಂತೆ ಎಚ್ಚರ ವಹಿಸಬೇಕು’ ಎಂದು ನಾಜಿ ಪಡೆಗಳು ಫರ್ಮಾನು ಹೊರಡಿಸುತ್ತವೆ. ತಕ್ಷಣಕ್ಕೆ ಪ್ರತಿ ಮನೆಯ ನೆಲಮಾಳಿಗೆಗಳನ್ನು ಜಾಲಾಡುವ ಕೆಲಸದಲ್ಲಿ ಸೈನಿಕರು ತೊಡಗಿಕೊಳ್ಳುತ್ತಾರೆ.
* * *
 ವಿಪರೀತ ಚಳಿ ಮತ್ತು ಮಂಜು ಸುರಿವ ಒಂದು ರಾತ್ರಿ. ಬಾಗಿಲು ಬಡಿದ ಸದ್ದು. ದಂಪತಿ ಗಾಬರಿಯಿಂದಲೇ ಬಾಗಿಲು ತೆರೆಯುತ್ತಿದ್ದಂತೆ ಒಬ್ಬ ಯುವಕ ಮನೆಯೊಳಕ್ಕೆ ದೊಪ್ಪನೆ ಬೀಳುತ್ತಾನೆ. ನೋಡಿದರೆ ಕುರುಚಲು ಗಡ್ಡದ ಯುವಕ. ತುಸು  ನಿತ್ರಾಣಗೊಂಡಿದ್ದಾನೆ. ಹನ್ಸ್‌  ಆತನನನ್ನು ಸಂತೈಸುತ್ತಾನೆ. ‘ನಾಜಿ ಪಡೆಗಳು ಯಹೂದಿಗಳನ್ನು ಅಟ್ಟಾಡಿಸಿಕೊಂಡು ಎಲ್ಲೆಂದರಲ್ಲಿ ಹುಡುಕಿ ಹೊರಕ್ಕೆಳೆದು ಕೊಲ್ಲುತ್ತಿದ್ದಾರೆ. ಜೀವಭಯದಿಂದ ಇಲ್ಲಿಗೆ ಬಂದೆ. ಚಳಿ ಮತ್ತು ಮಂಜು ಕಡಿಮೆಯಾಗುತ್ತಿದ್ದಂತೆ ಹೊರಡುವೆ’ ಎಂದು ಯುವಕ ದೈನ್ಯತೆಯಿಂದ ಹೇಳುತ್ತಾನೆ. ಹನ್ಸ್‌ ಮತ್ತು ರೋಸಾ ತಕ್ಷಣಕ್ಕೆ ಅಧೀರರಂತೆನಿಸಿದರೂ ಈ ಮನುಷ್ಯ ಜೀವಕ್ಕೊಂದು ಆಸರೆಯಾಗಲೇಬೇಕೆನ್ನುವ ನಿರ್ಧಾರಕ್ಕೆ ಬರುತ್ತಾರೆ. ನೆಲಮಹಡಿಯಲ್ಲಿ ತಂಗುವುದಕ್ಕೊಂದು ಜಾಗ ಮಾಡಿಕೊಡುತ್ತಾರೆ. ಈಗ ಲೀಸಲ್‌ ಜತೆ ಯಹೂದಿ ಯುವಕನೂ ಸೇರಿಕೊಳ್ಳುತ್ತಾನೆ. ಬರುವ ಸಣ್ಣ ಪುಟ್ಟ ಆದಾಯದಲ್ಲೇ ಇಡೀ ಮನೆ ನೋಡಿಕೊಳ್ಳುವ ಈ ದಂಪತಿ ದತ್ತು‍ಪುತ್ರಿಯ ಜತೆ ಈ ಅತಿಥಿಯನ್ನು ಕೂಡ ನೋಡಿಕೊಳ್ಳುವುದಷ್ಟೇ ಅಲ್ಲ ಆತನ ಜೀವಕ್ಕೆ ರಕ್ಷಣೆಯಾಗುವ ಅಪಾಯಕಾರಿ ನಿರ್ಧಾರವನ್ನು ಕೈಗೊಳ್ಳುತ್ತಾರೆ. ಈ ಬಡ ದಂಪತಿಯದು ಅದ್ಭುತ ಮಾನವೀಯ ಅಂತಃಕರಣ. ನೈಜ ಮಾನವೀಯ ನಿಲುವು.
 ಯಹೂದಿ ಯುವಕ ಕಣ್ಮರೆಯಾಗಿದ್ದರ ಜಾಡನ್ನು ಹಿಡಿದು ನಾಜಿ ಪಡೆ ಎಲ್ಲೆಲ್ಲೂ ತಲಾಶ್‌ ನಡೆಸುತ್ತ ಈ ಮನೆಯನ್ನೂ ಪ್ರವೇಶಿಸುತ್ತದೆ. ಅಷ್ಟು ದೊಡ್ಡ ರಿಸ್ಕ್ ನಡುವೆಯೂ ದಂಪತಿ ದಿಟ್ಟತನದಿಂದ ನಾಜೂಕು ಸ್ಥಿತಿ ಮತ್ತು ಸಂದರ್ಭವನ್ನು ಎದುರಿಸುತ್ತದೆ. ನಾಜಿ ಧ್ವಜದ ಹಿಂದೆ ಆ ಯುವಕ ಉಸಿರು ಬಿಗಿಹಿಡಿದು ಕೂತಿರುವಾಗ ನಾಜಿ ಸೈನಿಕ ಇಡೀ ನೆಲಮಹಡಿಯನ್ನು ಜಾಲಾಡುತ್ತಾನೆ. ದಂಪತಿ ಕೊಂಚವೂ ಅಧೀರರಾಗದೇ ಆ ಸನ್ನಿವೇಶವನ್ನು ನಿಭಾಯಿಸುತ್ತಾರೆ.
* * *
 ಆ ಯಹೂದಿ ಯುವಕ ತನ್ನ ಕೈಯಲ್ಲಿ ಯಾವತ್ತೂ ಒಂದು ಪುಸ್ತಕ ಇಟ್ಟುಕೊಂಡೇ ಮಲಗುತ್ತಾನೆ. ಪಕ್ಕದ ಬೆಡ್‌ನಲ್ಲಿ ಮಲಗುವ ಲೀಸಲ್‌ ಕುತೂಹಲಕ್ಕೆ ಆ ಪುಸ್ತಕ ತೆಗೆದುಕೊಳ್ಳುತ್ತಾಳೆ. ಓದಲು ಯತ್ನಿಸುತ್ತಾಳೆ. ಆ ಪುಸ್ತಕದ ಪುಟಗಳನ್ನು ತಿರುವುತ್ತಾ ನಿದ್ರೆಯಲ್ಲಿದ್ದವನಂತೆ ಮಲಗಿದ ಅವನನ್ನು ಓದಲು ಶುರು ಮಾಡುತ್ತಾಳೆ. ಇಬ್ಬರ ನಡುವೊಂದು ಅದ್ಭುತ ಮಾನವೀಯ ಅಂತಃಕರಣದ ಸೆಲೆ ಹುಟ್ಟಿ ಹರಿದಾಡತೊಡಗುತ್ತದೆ. ಅದೊಂದು ನಿಷ್ಕಲ್ಮಷ ಜೀವ ಸೆಲೆ. ಈಗ ಅವನು ಬರೆಯುವ, ಓದುವ ಬಗ್ಗೆ ಮತ್ತು ಒಟ್ಟಾರೆ ಮನುಷ್ಯ ಬದುಕಿನ ಬಗೆಗೆ ಅವಳ ಅಂತರಂಗದೊಂದಿಗೆ ಸಂವಹನಕ್ಕಿಳಿಯುತ್ತಾನೆ. ಅವಳು ಇದನ್ನು ಮನಸಿನ ಭಾಷೆಯಲ್ಲಿ, ಅಂತರಂಗದ ಕಣ್ಣುಗಳಿಂದ ಓದುತ್ತಾಳೆ. ಆಳಕ್ಕಿಳಿಸಿಕೊಳ್ಳುತ್ತಾಳೆ.
 * * *
 ನಾಜಿ ಪಡೆಗಳಿಂದ ಯಹೂದಿಗಳ ಹುಡುಕಾಟ ತೀವ್ರವಾಗುತ್ತ ಸಾಗುತ್ತದೆ. ಅದೊಂದು ಚಳಿಯ ರಾತ್ರಿ. ಯಹೂದಿ ಯುವಕನನ್ನು ನಾಜಿ ಪಡೆಗಳಿಂದ ಬಚಾವು ಮಾಡಲು ನಿರ್ಧರಿಸುವ ಹನ್ಸ್‌ ಮತ್ತು ರೋಸಾ  ಸುರಕ್ಷಿತ ತಾಣಕ್ಕೆ ಆತನ ಸಾಗಿಸುವ ವ್ಯವಸ್ಥೆ ಮಾಡುತ್ತಾರೆ. ಆ ರಾತ್ರಿ ಯಹೂದಿ ಯುವಕನನ್ನು ಮನೆಯಿಂದ ಬೀಳ್ಕೊಡುತ್ತಾರೆ. ಬೆಳೆದ ಮನೆಯ ಮಗ ಮನೆಬಿಟ್ಟು ಹೊರಟು ನಿಂತ ಸಂದರ್ಭದಲ್ಲಿ ತಂದೆ-ತಾಯಿ ಪಡುವ ಯಾತನೆಯಂಥ ಸಂಕಟ ಇಬ್ಬರಲ್ಲೂ. ಕಗ್ಗತ್ತಲು. ನಿರ್ಜನದಂತಿರುವ ಸ್ಥಿತಿ. ನೀರವ ಮೌನ ಎಲ್ಲೆಲ್ಲೂ ನೆಲೆಗೊಂಡಂತಿದ್ದ ಹೊತ್ತಲ್ಲಿ ಮನೆಯಿಂದ ಹೊರ ನಡೆಯುತ್ತಾನೆ. ಲೀಸಲ್‌ ಸಣ್ಣ ಕಿಟಕಿಯಿಂದ ಆತ ಹೋಗುವುದನ್ನು ನೋಡುತ್ತ ತೀವ್ರ ಸಂಕಟ ಪಡುತ್ತಾಳೆ. ನಾಜಿ ಸೈನಿಕರ ವಾಹನದ ಸದ್ದು, ಯಹೂದಿಗಳ ಹೊತ್ತು ವ್ಯಾನಿಗೆ ತುಂಬುವ ತುಣುಕು ದೃಶ್ಯಗಳು ಮಾಂಟೇಜ್ ಶಾಟ್‌ನಂತೆ ಬಂದು ಹೋಗುತ್ತವೆ. ಮಾರನೆಯ ದಿನ ನಾಡಿನ ಸೇವೆಗೆ ಕಡ್ಡಾಯವಾಗಿ ಬರುವಂತೆ ನಾಜಿ ಸೈನ್ಯ ಕರೆ ನೀಡುತ್ತದೆ. ಹನ್ಸ್‌ ಮಿಲಿಟರಿ ಧಿರಿಸು ಹಾಕಿಕೊಂಡು ಹೊರಟು ನಿಲ್ಲುತ್ತಾನೆ.
* * *
 ಯಹೂದಿ ಯುವಕನ ಕೈಯಿಂದ ಎತ್ತಿಕೊಂಡ ಆ ಪುಸ್ತಕವನ್ನು ಎದೆಗವುಚಿಕೊಂಡೇ ಇರುವ ಲೀಸಲ್‌ ಪಕ್ಕದ ಮನೆಯ ಹುಡುಗನ ಜತೆ ಒಂದು ಮೇಲ್ಸೇತುವೆ ಮೇಲೆ ನಿಂತಿದ್ದಾಳೆ. ಆ ಹುಡುಗನಿಗೆ ಇವಳನ್ನು ಮುತ್ತಿಕ್ಕುವ ಹಂಬಲ. ಅದೆಷ್ಟೋ ಬಾರಿ ಮನದ ನಿವೇದನೆ ಮಾಡಿಕೊಂಡಿದ್ದಾನೆ ಕೂಡ. ಸಲುಗೆಯ ಕ್ಷಣಗಳು ಗರಿಗೆದರುವ ಹೊತ್ತಲ್ಲೇ ಸಹಪಾಠಿಯೂ ಆಗಿರುವ ನಾಜಿ ದರ್ಪದ ಹುಡುಗ ಇಬ್ಬರನ್ನೂ ಕಾಣುತ್ತಾನೆ. ಕೆಂಡವಾಗುತ್ತಾನೆ. ಲೀಸಲ್‌ ಸಂಗ ಇವನಿಗಷ್ಟೇ ಮೀಸಲೇನು ಎನ್ನುವರ್ಥದಲ್ಲಿ. ಇಬ್ಬರ ನಡುವೊಂದು ಸಣ್ಣ ಗುದ್ದಾಟ. ಲೀಸಲ್‌ ಕೈಯಲ್ಲಿನ ಪುಸ್ತಕ ಸೇತುವೆ ಕೆಳಗಿನ ನೀರಿಗೆ ಬೀಳುತ್ತದೆ. ಲೀಸಲ್‌ ತುಂಬ ನೋವು, ಸಂಕಟದಿಂದ ನರಳತೊಡಗುತ್ತಾಳೆ. ಹುಡುಗ ಸೇತುವೆಯಿಂದ ಕೆಳಕ್ಕೆ ಓಡುತ್ತಾನೆ. ಲೀಸಲ್‌ ಅವನ ಬೆನ್ನು ಹತ್ತುತ್ತಾಳೆ. ಕೊರೆವ ಚಳಿ, ಹಿಮಗಟ್ಟುವಂಥ ನೀರಿನಲ್ಲಿ ಬಿದ್ದ ಆ ಪುಸ್ತಕವನ್ನೆತ್ತಿ ಕೊಡಲು ಹುಡುಗ ನೀರಿಗಿಳಿಯಲನುವಾಗುತ್ತಾನೆ. ಲೀಸಲ್‌ ಅವನ ತಡೆಯಲೆತ್ನಿಸುತ್ತಾಳೆ. ಆದರೂ ಹುಡುಗ ನೀರಿಗೆ ಹಾರುತ್ತಾನೆ. ಕ್ಷಣಕಾಲ ಆತ ಮೇಲಕ್ಕೇ ಬರುವುದಿಲ್ಲ. ಲೀಸಲ್‌ ಅಧೀರಳಾಗುತ್ತಾಳೆ. ಆತ ಒಂದಷ್ಟು ಹೊತ್ತಿನ ಮೇಲೆ ಮುಳುಗಿದ ಪುಸ್ತಕವನ್ನು ಎತ್ತಿಕೊಂಡೇ ಮೇಲಕ್ಕೆ ಬರುತ್ತಾನೆ.
 ಇಬ್ಬರೂ ಒಂದು ಕೊಳಕ್ಕೆ ಬರುತ್ತಾರೆ. ದೋಣಿಯಲ್ಲಿ ಒಂದಷ್ಟು ಕಾಲ ವಿಹರಿಸುತ್ತಾರೆ. ನಿರ್ಜನ ಪ್ರದೇಶ, ಪ್ರಶಾಂತ ವಾತಾವರಣ. ‘ಹಿಟ್ಲರ್ ಯೂ ಬಾಸ್ಟರ್ಡ್’ ಎನ್ನುವರ್ಥದಲ್ಲಿ ಜೋರಾಗಿ ಕೂಗುತ್ತಾರೆ. ಮನುಷ್ಯ ಜೀವದ ಮೇಲೆ ನಡೆಸುವ ಸೈನಿಕ ದೌರ್ಜನ್ಯಕ್ಕೆ ಧಿಕ್ಕಾರ ಹೇಳುವ ಮತ್ತು ತಮ್ಮೊಳಗಿನ ಆಕ್ರೋಶದ ದನಿಯಾಗಿ ಅದು ಮಾರ್ದನಿಸುತ್ತದೆ.


* 3 *
 ಯಹೂದಿಗಳನ್ನು ಮನೆಯಿಂದ ಹೊರಕ್ಕೆಳೆದು ಕಾನಸಂಟ್ರೇಷನ್ ಕ್ಯಾಂಪಿಗೆ ಸಾಗಿಸುವ ಕೆಲಸ ಬಿರುಸಾಗಿಯೇ ಸಾಗುತ್ತಿದೆ. ಕೆಲವು ಯಹೂದಿಗಳನ್ನು ಬೀದಿಯಲ್ಲಿ ನಡೆಸಿಕೊಂಡು ಸೈನಿಕರು ಸಾಗುತ್ತಿದ್ದಾರೆ. ಲೀಸಲ್‌ ಗುಂಪಿನ ನಡುವಿಂದ  ಆ ಯಹೂದಿ ಯುವಕನ ಹೆಸರನ್ನು ಜೋರಾಗಿ ಕೂಗುತ್ತ ಸಾಗಿ ಬರುತ್ತಿದ್ದಾಳೆ. ರೋಸಾ ಈಕೆಯನ್ನು ಹಿಂಬಾಲಿಸಿಕೊಂಡು ಓಡಿ ಬರುತ್ತಿದ್ದಾಳೆ. ಲೀಸಲ್‌ನನ್ನು ಎತ್ತಿಕೊಂಡು ಗುಂಪಿನಿಂದ ಪಕ್ಕಕ್ಕೆ ಸರಿಯುತ್ತಾಳೆ. ಲೀಸಲ್‌ ಆ ಯುವಕನ ನೆನೆದು ಜೋರಾಗಿ ಕೂಗುತ್ತಾಳೆ. ರೋಧಿಸುತ್ತಾಳೆ. ಗುಂಪು ತನ್ನ ಪಾಡಿಗೆ ತಾನು ಸಾಗಿ ಮುನ್ನಡೆಯುತ್ತದೆ.
 ಹನ್ಸ್‌ ಸೈನ್ಯ ಸೇವೆಯಿಂದ ಮನೆಗೆ ವಾಪಸ್ ಆಗುತ್ತಾನೆ. ಸೇನಾ ವ್ಯಾನಿನಿಂದ ಆತ ಕೆಳಕ್ಕಿಳಿಯುತ್ತಿದ್ದಂತೆ ಲೀಸಲ್‌ ಅವನನ್ನು ಕಂಡು... ಡ್ಯಾಡೀ ಎಂದು ಜೋರಾಗಿ ಕೂಗುತ್ತಾ ಅವನ ಬಾಚಿ ತಬ್ಬುತ್ತಾಳೆ. ಲೀಸಲ್‌ ಅಳುತ್ತಲೇ ಇದ್ದಾಳೆ. ಹನ್ಸ್‌ ಸಂತೈಸುತ್ತಲೇ ಅವಳನ್ನು ಬಾಚಿ ತಬ್ಬಿದ್ದಾನೆ. ಬಹುಕಾಲ ಹಿಂಡನಗಲಿದ ಎಳೆಗರು ತಾಯಿ, ಹಸುವನ್ನು ಕೂಡಿದ ಹಾಗೆ. ಹನ್ಸ್‌ ಕಂಗಳು ತುಂಬಿ ಬಂದಿವೆ. ಮತ್ತೆ ಮತ್ತೆ ಅಪ್ಪಿಕೊಳ್ಳುತ್ತಾರೆ. ಲೀಸಲ್‌ ಮತ್ತು ಹನ್ಸ್‌  ಅಪ್ಪುಗೆ ತಂದೆ ಮತ್ತು ಮಗಳ ಅಂತಃಕರಣಕ್ಕೆ ಹೊಸ ಭಾಷ್ಯ ಬರೆದಂತೆನಿಸುತ್ತದೆ.


 ತುಂಬ ದಿನಗಳ ನಂತರ ಹನ್ಸ್‌, ರೋಸಾ ಮತ್ತು ಲೀಸಲ್‌ ಒಟ್ಟಿಗೆ ಸೇರಿದ್ದಾರೆ. ಹೀಗಾಗಿ ರಾತ್ರಿ ಡಿನ್ನರ್ ಎಂದಿಗಿಂತ ಸವಿಯಾಗಿದೆ. ಎಲ್ಲ ಸಂತೋಷವಾಗಿ ಉಂಡು ಮಲಗಿದ್ದಷ್ಟೇ. ವಿಮಾನಗಳಿಂದ ಬೃಹತ್ ಬಾಂಬುಗಳ ಮೊರೆತದ ಸದ್ದು.  ರಾತ್ರಿಯಿಡೀ ಊರ ತುಂಬ ವೈಮಾನಿಕ ದಾಳಿ. ಬಾಂಬ್, ಶೆಲ್ ಗಳ ಸುರಿಮಳೆ.

ಬೆಳಗಾಗುವಷ್ಟೊತ್ತಿಗೆ  ಇಡೀ ಜನವಸತಿ ಪ್ರದೇಶ ಒಂದು ಸ್ಮಶಾನದಂತೆ. ಎಲ್ಲೆಲ್ಲೂ ದಟ್ಟ ಹೊಗೆ, ಬೆಂಕಿ. ಮನೆಗಳುರುಳಿವೆ. ಬದುಕುಳಿದವರಿಗಾಗಿ ಹುಡುಕಾಟ. ಎಲ್ಲೆಡೆ ನೋವಿನ ಆಕ್ರಂದನ. ಅವಶೇಷಗಳಡಿಯಿಂದ ಈ ಲೀಸಲ್‌ ನನ್ನು ಪರಿಹಾರ ಕಾರ್ಯದ ಸದಸ್ಯರು ಹೊರಕ್ಕೆಳೆದು ಬಚಾವು ಮಾಡುತ್ತಾರೆ. ಆಕೆ ಸುಧಾರಿಸಿಕೊಂಡು ನೋಡಿದರೆ ಅಲ್ಲಿ ಹನ್ಸ್‌ ಮುಖ ಕಾಣಿಸುತ್ತದೆ. ಯಾರೋ ಆತನ ದೇಹವನ್ನು ಹೊರಕ್ಕೆಳೆದು ಮಲಗಿಸಿದ್ದಾರೆ. ಪಕ್ಕದಲ್ಲೇ ರೋಸಾ ದೇಹ. ಲೀಸಲ್‌ ರೋದನೆ ಕರುಳು ಹಿಂಡುವಂಥದು. ಕಣ್ಣೆತ್ತಿ ನೋಡಿದರೆ ಪಕ್ಕದ ಮನೆ ಹುಡುಗನನ್ನು ಎತ್ತಿ ಒಂದೆಡೆ ಮಲಗಿಸಲಾಗುತ್ತಿದೆ. ಅವನಿನ್ನೂ ಮಿಸುಕಾಡುತ್ತಿದ್ದಾನೆ. ಲೀಸಲ್‌ ಅವನ ಬಳಿ ಸಂತೈಸಲು ಸಾಗುತ್ತಾಳೆ. ಕೈ ಹಿಡಿದು "ಏಳು, ಪ್ಲೀಸ್ ಎದ್ದೇಳು, ಮಾತಾಡು" ಎಂದು ಜೋರಾಗಿ ಕೂಗುತ್ತಾಳೆ. ಕಣ್ಣು ತೆರೆಯಲು ಸಾಕಷ್ಟು ಪರದಾಡುವ ಆ ಹುಡುಗ ಸಂಪೂರ್ಣ ನಿತ್ರಾಣಗೊಂಡಿದ್ದಾನೆ. ನಿನ್ನ ಮುತ್ತಿಕ್ಕುವ ಆಸೆಯೊಂದು ಉಳಿದೇಹೋಯಿತು ನೋಡು ಎನ್ನುವಂಥ ಅವನ ಮಾತು, ಇನ್ನೇನು ಆರಿ ಹೋಗುವ ತುಟಿಯಂಚಿನಿಂದ ಕೊನೆಯ ಆಸೆಯಂತೆ ಹೊರಹೊಮ್ಮಿದಂತಿದೆ. ಲೀಸಲ್‌ ಅವನ ತಲೆಯನ್ನು ತೊಡೆಯ ಮೇಲಿರಿಸಿಕೊಳ್ಳುತ್ತಾಳೆ. ತಾಯಿ ಮಗುವನ್ನು ಸಂತೈಸುವ ಹಾಗೆ ಅವನ ತಲೆ ಸವರುತ್ತಾಳೆ. ಒಣಗಿದ ತುಟಿಗಳನ್ನು ಬೆರಳುಗಳಿಂದ ನೇವರಿಸಿ ಚೈತನ್ಯ ತುಂಬಲು ನೋಡುತ್ತಾಳೆ. ನಿಷ್ಕರುಣ ಯುದ್ಧ ಅವನ ಜೀವಸೆಲೆಯನ್ನು ಹೀರಿ ಬೀಸಾಕಿದಂತಿದೆ. ಆತ ಕೊನೆಯ ಸಲ ಒಮ್ಮೆ ಕಣ್ತೆರೆದು ಮುಚ್ಚದೇ ಹಾಗೇ ನಿಶ್ಚಲನಾಗುತ್ತಾನೆ. ‘ತಗೊಳ್ಳೊ ನಿನ್ನ ಕನಸಿನ ಸಿಹಿ ಮುತ್ತು’ ಎನ್ನುತ್ತ ಅವನ ಆರಿದ ತಣ್ಣನೆಯ ತುಟಿಗಳನ್ನು ಲೀಸಲ್ ತನ್ನ ತುಟಿಗಳಿಂದ ದೀರ್ಘವಾಗಿ ಚುಂಬಿಸುತ್ತಾಳೆ.


 ಜಾಗತಿಕ ಯುದ್ಧದಲ್ಲಿ ನಾಜಿ ಪಡೆಗೆ ಸೋಲಾಗಿದೆ. ಹಿಟ್ಲರ್‌ನಿಲ್ಲದ ಜರ್ಮನಿಯಲ್ಲಿ ಈಗ ಅಮೆರಿಕದ ಸೈನಿಕರ ಬೂಟು, ವಾಹನಗಳ ಸದ್ದು. ಶಾಂತಿಯ ಹೆಸರಲ್ಲಿ ಆ ನಾಜಿ ಸೈನ್ಯ ಸರಿದು ಈ ಹೊಸ ಸೈನ್ಯ ಕಾಲಿಟ್ಟಿದೆ...
* * *
 ಹನ್ಸ್‌, ರೋಸಾ, ಹುಡುಗ ಮತ್ತು ಯಹೂದಿ ಯುವಕ.. ಎಲ್ಲರನ್ನೂ ಕಳಕೊಂಡು ಅನಾಥಪ್ರಜ್ಞೆಯಲ್ಲಿರುವ ಲೀಸಲ್‌ಗೆ  ಮತ್ತೊಂದು ಆಸರೆಯ ನಿರೀಕ್ಷೆ... ಅವತ್ತೊಂದು ದಿನ ಯಹೂದಿ ಯುವಕ ಇದ್ದಕ್ಕಿದ್ದಂತೆ ಪ್ರತ್ಯಕ್ಷನಾಗುತ್ತಾನೆ. ಭರವಸೆಯನ್ನೇ ಕಳೆದುಕೊಂಡ ಬದುಕಲ್ಲಿ ಹೊಸ ಜೀವಸೆಲೆ ಉಕ್ಕಿ ಬಂದ ಹಾಗೆ. ಲೀಸಲ್‌ ಅವನ ಬಾಚಿ ತಬ್ಬುತ್ತಾಳೆ. ಯಹೂದಿ ಯುವಕ ಅವಳನ್ನು  ಎದೆಗವುಚಿಕೊಳ್ಳುತ್ತಾನೆ.
 ಯುದ್ಧ ಎಲ್ಲ ಮುಗಿಸ ಹೊರಟಂತೆ ಅಬ್ಬರಿಸಬಹುದು. ಆದರೆ ಮನುಷ್ಯ ಪ್ರೀತಿ ಮಾತ್ರ ಯುದ್ಧಕ್ಕೆ ಅಷ್ಟು ಸುಲಭದ ತುತ್ತಾಗುವಂಥದ್ದಲ್ಲ. ಮನುಷ್ಯ ಪ್ರೀತಿ ಯುದ್ಧದೊಂದಿಗೆ ತನ್ನ ಸಂಘರ್ಷವನ್ನು ಹೀಗೆ ಮುಂದುವರಿಸಿತು ಎನ್ನುವುದಕ್ಕೆ ಸಾಕ್ಷಿಯಂತಿದೆ ಆ  ಆಲಿಂಗನ.
 THE END

ದಿಲ್ ಸೇ: ಇತಿಹಾಸ ಪುಸ್ತಕದ ಪುಟಗಳನ್ನು ತಿರುವಿ ಹಾಕಿ ಎಲ್ಲೆಂದರಲ್ಲಿ ಬರಿ ತಪ್ಪು ಗ್ರಹಿಸಿ ಅಬ್ಬರಿಸುವುದು ಖಂಡಿತ ಓದು ಅಲ್ಲ. ಅದರೊಳಗಿನ ಬದುಕನ್ನು ಓದುವುದು ಮುಖ್ಯ. ಒಂದು ಸಿನಿಮಾ ಓದು ಹೀಗೆ ದಿಲ್ಗಿಳಿಯಿತು. ಗೋಧ್ರಾ, ಫಲಿಸ್ತಾನ್, ಇರಾಕ್ ಕೂಡ ಕಾಣಿಸಿ ಕಾಡಿತು. ಈ ಸಿನಿಮಾ ಓದು ಮನಸನ್ನು ತೋಯಿಸಿತು. 
* * *
 ನಾಜಿ ಸಂಘರ್ಷ, ಯಹೂದಿಗಳ ಬಗ್ಗೆ ಅನುಕಂಪ, ಆತ್ಮ ಮರುಕತನ ಎಲ್ಲ ಇಲ್ಲಿ ಮುಖ್ಯಧಾರೆಯಾಗಿ ಒಂದೇ ವೇಗದಲ್ಲಿ ಹರಿಯುತ್ತವೆ. ಇವನ್ನು ತೂಗಿ ಒಂದು ತಾತ್ವಿಕ ನಿಲುವು ಪ್ರಕಟಿಸುವುದು ಯಾವುದೇ ನೈಜ ಸೃಜನಶೀಲ ಚಟುವಟಿಕೆಯ ಉದ್ದೇಶ ಆಗಬಾರದು. ಅದು ಕೂಡ ಒಂದರ್ಥದ ಪ್ರತಿ ಫರ್ಮಾನು ಹೊರಡಿಸುವ ಬಗೆಯೇ ಆಗುತ್ತದೆ ಎನ್ನುವುದು ನನ್ನ ಅಭಿಪ್ರಾಯ. ಮನುಷ್ಯ ಪ್ರೀತಿ ಗೆಲುವು ಅಂದರೆ ಇಲ್ಲಿ ಯಹೂದಿಗಳ ಬದುಕಿನ ಗೆಲುವು ಎಂದರ್ಥವಲ್ಲ. ನಾಜಿಗಳ ಸೋಲು ದುಷ್ಟಶಿಕ್ಷೆ ಎನ್ನುವ ಕಪಟ ಸಿದ್ಧಾಂತವೂ ಅಲ್ಲ. ಎಂಥದೇ ಘನಂದಾರಿ ಉದ್ದೇಶ ಹೊಂದಿದ ಯುದ್ಧ ಸೋಲನ್ನೇ ಕಾಣಬೇಕು ಎನ್ನುವುದು ನನ್ನ ನಿಲುವು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

'ಅನಭಿಜ್ಞ ಶಾಕುಂತಲ': ನೆನಪು ಮರೆವಿನಾಟ

 ಜೀವನವೇ ಒಂದು ನಾಟಕವೆಂದಾದರೆ. ಸಂಬಂಧ ಅನ್ನೋದು ಕಟ್ಟಿಕೊಂಡ ಆಟ. ಅಂದರೆ ನಾಟಕದಂತೆ ಬದುಕು ಕೂಡ ಆಟ ಕಟ್ಟುವ ಕ್ರಿಯೆ. ಇಲ್ಲಿ ಗುರಿ ಎಂದರೆ ಸುಖದ ಅಥವಾ ಸಾರ್ಥಕತೆಯ ದಡ ಸೇರುವುದು. ಈ ಆಟದ ಒಂದು ಹಂತದಲ್ಲಿ ಕಷ್ಟದ ಅಡವಿ ಸೇರುವುದೂ ಇದೆ! 'ಆಡಾಡ್ತ ಅಡವಿ ಸೇರುವುದು' ಅಂತಾರಲ್ಲ ಹಾಗೆ. ಅಡವಿ ಅಂದರೆ ಇಲ್ಲಿ ಸಂಕೀರ್ಣತೆ, ಸಂಕಷ್ಟ ಅವಘಡ, ಸಂದಿಗ್ಧತೆ ಎಂದು ಭಾವಿಸಿಕೊಳ್ಳಬಹುದು. ಬದುಕಿನ ದಾರಿಯಲ್ಲಿ ಒಮ್ಮೆ ಈ 'ಅಡವಿ' ಎದುರಾಗೇ ಆಗುತ್ತದೆ ಎನ್ನುವುದು ವಿಧಿಲಿಖಿತವೇ? ಗೊತ್ತಿಲ್ಲ. ಪ್ರೀತಿ-ಪ್ರೇಮ-ಕಾಮ ಎನ್ನುವ ಬದುಕಿನ ಒಟ್ಟಾರೆ ಆಟ- ಕೂಟದಲ್ಲಿ ಪಡಕೊಳ್ಳುವುದೆಲ್ಲ ಜೀವಕಾರುಣ್ಯವಷ್ಟೇ ಅಲ್ಲ. ಸಂಕಷ್ಟ ಮತ್ತು ಸಂದಿಗ್ಧತೆಯೂ ಜತೆಯಲ್ಲಿರುತ್ತದೆ ಎನ್ನುವುದು ಸಹಜ ಮನೋಧರ್ಮ.  ಬದುಕಿನ ಆಟಕ್ಕೆ ತೆರಕೊಂಡವರಲ್ಲಿ ಹಲವರು ಅನುಭವಿಸಿದ ಮಧುರ ಘಳಿಗೆಗಳನ್ನು ಕಡೆತನಕ ನೆನಪಿಟ್ಟುಕೊಳ್ಳುತ್ತಾರೆ. ಕೆಲವರು ಮರೆತೇ ಬಿಡುತ್ತಾರೆ!?..  ಕಾಳಿದಾಸನ ಮಹಾಕಾವ್ಯ ಶಾಕುಂತಲೆಯಲ್ಲಿ ಈ ಬದುಕು, ಮನುಷ್ಯ ಪ್ರೀತಿ ಪಯಣದ ನೆನಪು ಮತ್ತು ಮರೆವಿನಾಟ ಮನಮಿಡಿಯುವಂತೆ ಚಿತ್ರಣಗೊಂಡಿದೆ. ಈ ಕಾವ್ಯದಲ್ಲಿ ಎಲ್ಲವನ್ನು ವಿಧಿಯೇ ನಿರ್ಧರಿಸಿದಂತೆನಿಸುತ್ತದೆ. ಫೇಟಲಿಸಂ ವಾದಕ್ಕೆ ಪೂರಕವಾದ ಚಿಂತನೆ ಇದೆನ್ನಬಹುದು. ಆಧುನಿಕ ಯುಗದ ಶೇಕ್ಸಪಿಯರ್ ನ ಹಲವು ನಾಟಕಗಳಲ್ಲಿಯೂ ಈ ಫೇಟಲಿಸಂ ಪ್ರಧಾನ ಪಾತ್ರದಂತೆ ವರ್ತಿಸುವುದನ್ನು ಗಮನಿಸಬಹುದು. *

ಇಷ್ಕ್‌ ಕೆ ಇಮ್ತೆಹಾನ್‌ ಔರ್‌ ಭೀ ಹೈ’.. ಇಮ್ರಾನ್‌ ಖಾನ್‌!

ಪಾಕಿಸ್ತಾನದ ಬಗ್ಗೆ ಮಾತನಾಡುವುದು ಮಹಾ ಪಾಪದ ಕೆಲಸವೇನಲ್ಲ. ಹಾಗೆ ಭಾವಿಸಬೇಕಿಲ್ಲ. ಅದು ಒಪ್ಪಿತವೊ ಇಲ್ಲವೋ, ಅದರ ಬಗ್ಗೆ ಅಲಕ್ಷ್ಯವೋ ನಿರ್ಲಕ್ಷ್ಯವೊ ಏನೇ ಆದರೂ ಅದು ಒಂದು ದೇಶ. ನೆರೆಯ ರಾಷ್ಟ್ರ. ‘ಪಡೋಸಿ...’ ಸಂಬಂಧದಲ್ಲಿ ನಮ್ಮದೇ ಕರುಳಬಳ್ಳಿ. ಭಾಷೆ, ಜನಜೀವನ ಶೈಲಿಯಲ್ಲಿ ಬದಲಾದರೂ ಮನುಷ್ಯ ಭಾವ, ಬದುಕುವ ಸಾಮಾನ್ಯ ಕಾಳಜಿ  ಒಂದೇ. ಹಾಗೆ ನೋಡಿದರೆ ಸಾಂಸ್ಕೃತಿಕವಾಗಿ ಎರಡೂ ದೇಶಗಳು ಅಭಿನ್ನ. ನಮ್ಮಲ್ಲಿರುವ ಹಾಗೆ ಅಲ್ಲಿಯೂ ಪ್ರಜಾಪ್ರಭುತ್ವ ಇದೆ. ಅಲ್ಲಿ ನಡೆಯುವುದು ಇಲ್ಲೂ ನಡೆಯುತ್ತದೆ. ಅಲ್ಲಿ ನಡೆಯಲೇಬಾರದ್ದು ಇಲ್ಲೂ ನಡೆಯಲೇಬಾರದು.  ತೀವ್ರವಾದ ನಮ್ಮಲ್ಲಿನದಕ್ಕಿಂತ ಅಲ್ಲಿ ತುಸು ಹೆಚ್ಚು ಸವಾರಿಗೆ ಹವಣಿಸಿದೆ. ಅಲ್ಲಿನ ಮಿಲಿಟರಿ ಅತಿರೇಕದ್ದು. ಅಕ್ಷಮ್ಯ. ಮತ್ತೆ ದೇಶ ಪುಟ್ಟದಾದಷ್ಟು ಅದಕ್ಕೆ ಭಯಗಳು ಜಾಸ್ತಿ. ಮಿಲಿಟರಿ ಕವಚದಲ್ಲಿ ಅದು ಸುರಕ್ಷಾ ಭಾವವನ್ನು ಕಲ್ಪಿಸಿಕೊಳ್ಳುತ್ತದೆ. ಅದೊಂದು ತರಹದ ಸಮಾಧಾನ. ಆದರೆ ಭ್ರಮೆಯಿಂದ ಕೂಡಿದ್ದು. ಭಯೋತ್ಪಾದನೆ ಕೂಡ ಒಂದರ್ಥದಲ್ಲಿ ಪುಕ್ಕಲುತನವೇ ಆಗುತ್ತದೆ. ಹಿಂಸಾ ಪ್ರವೃತ್ತಿಗೆ ಹೆದರಿಸುವುದೇ ಕೆಲಸ. ಹೆದರಿಸುವವರು ಶೂರರು, ಧೀರರು ಮತ್ತು ಜೀನಿಯಸ್‌ ಆಗಿರಲು ಹೇಗೆ ಸಾಧ್ಯ? ಮುಖ್ಯವಾಗಿ ಅಲ್ಲಿನ ವಿದ್ಯಮಾನಗಳನ್ನು ಗಮನಿಸುವುದಾದರೆ, ಮಿಲಿಟರಿ, ಮತಾಂಧರು, ಭಯೋತ್ಪಾದಕರು, ಭ್ರಷ್ಟರು ಇದೆಲ್ಲದರಿಂದ ಪಾಕಿ ತುಂಬ ರೋಸಿ ಹೋಗಿದ್ದಾನೆ. ಒಂದು ಸೂಕ್ತ ಪರ್ಯಾಯಕ್ಕಾಗಿ ಹಂಬಲಿಸಿದ್ದಾನೆ. ಸಹಜ

ಮನುಷ್ಯ ಜಾತಿ ತಾನೊಂದೇ ವಲಂ...

ಭಾರತದಲ್ಲಿ ಜಾತಿ ವ್ಯವಸ್ಥೆ ಹೇಗೆ ಹುಟ್ಟಿತು ಎಂಬುದಕ್ಕೆ ಯಾವುದೇ ನಿರ್ಧಿಷ್ಟ ಥಿಯರಿ ಇಲ್ಲ. ಆದರೆ, ಇಲ್ಲಿನ ವರ್ಗ ಸೃಷ್ಟಿ ಮಾತ್ರ ಇರಾನ್ ವ್ಯವಸ್ಥೆಯಂತೇ ಇದೆ.  ಪುರಾತನ ಇರಾನಿನ ಚರಿತ್ರೆಯಲ್ಲಿ ಇಂಥದೊಂದು ವ್ಯವಸ್ಥೆ ಇತ್ತು. ಅದಕ್ಕೆ ಪಿಸ್ತ್ರಾಸ್ ಎನ್ನುತ್ತಾರೆ. ನಮ್ಮಲ್ಲಿ ಅದು ಚಾತುರ್ವರ್ಣವಾಗಿದೆ. ಅಲ್ಲಿ ಅಥ್ರವಾನ್ಸ್ (ಪ್ರೀಸ್ಟ್ ಕ್ಲಾಸ್), ರಥೈಸ್ತಾ (ವಾರಿಯರ್ಸ್), ವಸ್ತ್ರಿಯಾ (ಮರ್ಕಂಟೈಲ್ ಕ್ಲಾಸ್) ಮತ್ತು ಹ್ಯುತಿ (ಆರ್ಟಿಸನ್) ಎನ್ನುವ ವರ್ಗ ವ್ಯವಸ್ಥೆ ಇದೆ. ನಮ್ಮಲ್ಲಿ ಇದನ್ನು ಕಲ್ಪಿಸಿಕೊಂಡರೆ ಪುರೋಹಿತ ಅಥವಾ ಬ್ರಾಹ್ಮಣ (ಅಥ್ರವಾನ್ಸ್), ಕ್ಷತ್ರಿಯ  (ರಥೈಸ್ತಾ), ವೈಶ್ಯ  (ವಸ್ತ್ರಿಯಾ) ಮತ್ತು ಶೂದ್ರ (ಹ್ಯುತಿ) ಎಂದು ಅರ್ಥೈಸಿಕೊಳ್ಳಬಹುದು.  ಆದಿ ಕಾಲದ ಇರಾನಿಯನ್ ವ್ಯವಸ್ಥೆ ಹೀಗೇ ಇತ್ತು. ಅದೇ ನಾಲ್ಕು ವರ್ಗಗಳು ಭಾರತದಲ್ಲೂ ಈಗಲೂ ಚಾಲ್ತಿಯಲ್ಲಿವೆ. ಹೀಗೆ ಒಂದು ಇರಾನ್ ಸಂಬಂಧ ಭಾರತಕ್ಕಿದೆ. ಚರ್ಮದ ಬಣ್ಣ, ನಯ ನಾಜೂಕು, ಕಣ್ಣು, ಬುದ್ಧಿವಂತಿಕೆಯನ್ನು ಹೋಲಿಸಿದರೆ ಭಾರತದ ಅದರಲ್ಲೂ ಉತ್ತರ ಭಾರತದ ಕಾಶ್ಮೀರಿ ಪಂಡಿತರು, ಉತ್ತರ ಪ್ರದೇಶದ ಪಂಡಿತ್, ಚಿತ್ಪಾವನ ಬ್ರಾಹ್ಮಣರು, ನಮ್ಮ ಕರಾವಳಿ ಮತ್ತು ಉತ್ತರ ಕನ್ನಡದ ಹವ್ಯಕರು ಹೆಚ್ಚೂ ಕಮ್ಮಿ ಇರಾನಿಗಳನ್ನು ಹೋಲುತ್ತಾರೆ (ಮೇಲ್ನೋಟಕ್ಕೆ).  ಬಹುಶಃ ಹೀಗೂ ಆಗಿರಬಹುದು, ಆಗ ಇರಾನ್ ನಲ್ಲಿ ಕ್ರೈಸ್ತ ಮತ್ತು ಇಸ್ಲಾಂ ಮುಂಚೆಯೂ ಹಲವಾರು ಸುಧಾರಣಾವಾದಿಗಳ ಅಥವಾ ಬಂಡುಕೋರರ