ವಿಷಯಕ್ಕೆ ಹೋಗಿ

ಡ್ರಾಮಾಕ್ರಸಿ-3: ಕನ್ನಡದ ಸಂಬಂಜ ಅನ್ನೋದು ದೊಡ್ಡದು ಕನಾ...


ಎಡ್ಡ: ಮನ್ನಿ ‘ಮೊದಲು ಅರಿ ಆಮೇಲೆ ಇರಿ’ ಅಂತೆಲ್ಲಾ ಚಂಪಾ ಡೈಲಾಗ್ ಹೊಡದಿ. ಅಂಥ ಬಂಡಾಯದ ಬರಹಗಾರರು ಚಿಂತಕರು ಇಂಥಾ ಸಂದಿಗ್ಧ ಪರಿಸ್ಥಿತಿಯೊಳಗೂ ಮಂಕಾಗಿ ಕೂತಾರಲೇ ಏನ್‌ ಮಾಡೂನ ಇದಕ್ಕ.
ಗಿಡ್ಡ: ನಾನೂ ಅದನ್ನ ಹೇಳೂದು. ಅರ್ಧ ಸತ್ಯದ ಹುಡುಗಿ ಗುಂಗಿನಾಗ ಅದಾರ್ರಿ ಅವ್ರಿನ್ನೂ. ಅಕಿ ಸತ್ ಸ್ವರ್ಗಾ ಸೇರಿಳೋ, ನರಕದಾಗ ಅದಾಳೋ ಗೊತ್ತಿಲ್ಲ. ಸತ್ತದ್ದಂತೂ ಖರೇ. ರಾಜಬಬ್ಬರ್ ಅಕಿನ್ ಮರತು ಜಮಾನಾನ ಆತು.
ಎಡ್ಡ: ಸೈದ್ಧಾಂತಿಕ ಜಗಳದೊಳಗ ಹೆಚ್ಚು ಕಾಲ ಕಳದ ಚಂಪಾ ಸಾಹಿತ್ಯ ರಚನಾದಿಂದ ದೂರ ಸರದ ಭಾಳ ವರ್ಷನ ಆತು. ಅವ್ರ ಹೋರಾಟ, ಬಂಡಾಯದ ಮೊನಚು ಯಾಕೋ ಕಮ್ಮಿ ಆತು. ಅದ್ಭುತ ಅಸಂಗತ ನಾಟಕಗಳನ್ನ ಕೊಟ್ಟ ಮನಶ್ಯಾ ಸಾಹಿತ್ಯದೊಳಗ ಇನ್ನೂ ಎಂಥಾ ಅದ್ಭುತ ಸೃಷ್ಟಿ ಮಾಡಬಹುದಾಗಿತ್ತು. ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕಸಾಪ, ಸ್ವಾಭಿಮಾನಿ ಕರ್ನಾಟಕ ಅಂತೆಲ್ಲ ಅವ್ರೂ ರಗಡ ಖಟಪಟಿ ಮಾಡಿದ್ರು ಖರೆ. ಏನಾತು? ಪಾಟೀಲ ಪುಟ್ಟಪ್ಪ ಅಂದ್ರ ನಮ್ ‘ಪಾಪು’ ಕಿತ್ತೂರ ಚೆನ್ನಮ್ಮ ಸರ್ಕಲ್‌ನಿಂದ ಹೆಂಗ್ ಆಚೆ ಬರಲೇ ಇಲ್ಲಲಾ, ಹಾಂಗ ಇವ್ರು ಕನ್ನಡ ಕನ್ನಡ ಬರ್ರಿ ನಮ್ಮ ಸಂಗಡ ಅನ್ನೂದ ಬಿಟ್ಟ ಬ್ಯಾರೆ ಏನೂ ಖಡಕ್ ಆಗಿ ಮಾಡಲೇ ಇಲ್ಲ.
ಗಿಡ್ಡ: ಅರ್ಧಾ ಜೀವನಾ ‘ಒಕ್ಕಣ್ಣಿನ ರಾಕ್ಷಸ’ ಅಂತ ಲಂಕೇಶ್‌ ಮ್ಯಾಲ ಲೇವಡಿ ಮಾಡೂದರಾಗ ಕಳೀತು. ಇನ್ನರ್ಧಾ ಜೀವನಾ ಕನ್ನಡ ಹೋರಾಟ. ಈ ಹೋರಾಟಕ್ಕರೇ ಸೀರಿಯಸ್ ಆಗಿ ಸರಿಯಾದ ದಿಕ್ಕು ದೆಸಿ ತೋರಿಸ್ಬಹುದಾಗಿತ್ತು. ಅದೂ ಮಾಡ್ಲಿಲ್ಲ. ಪ್ರಾಧಿಕಾರದೊಳಗಿದ್ದಾಗ ರಬ್ಬರ್‌ ಸ್ಟ್ಯಾಂಪ್ ಮುಟಗೋಲ ಹಾಕ್ಕೋಳ್ಳೂದು, ಇಂಗ್ಲಿಷ್ ಬೋರ್ಡಿಗೆ ಮಸಿ ಬಳಿಯೂದು ಇದಷ್ಟ ಸಾಧ್ಯಾತು. ರಾಜಕಾರಣಿ ವಾಟಾಳದ್ದ ಕನ್ನಡ ಓರಾಟ ಒಂದು ನಮೂನಿ ಸುಡಗಾಡ ಸಿದ್ರ ಆಟ ಆಗಿಹೋದ್ರ ಚಂಪಾ ಅವ್ರದು ಅರಣ್ಯರೋದನ. ಬೇಜಾರದ ವಿಷ್ಯ ಅಂದ್ರ ರಾಜ್ಯದ ಕನ್ನಡ ನಸೀಬಕ್ಕ ಇದ್ಯಾವುದೂ ಉಪಯೋಗಕ್ಕ ಬರಲಿಲ್ಲ.
ಎಡ್ಡ: ಕನ್ನಡದ ಎದೀ ಮ್ಯಾಲ ಅಂದ್ರ ರಾಜಧಾನಿ ಬೆಂಗಳೂರಾಗ ಹೇಳಾಕ ದೊಡ್ಡ ದೊಡ್ಡ ಸಾಫ್ಟ್‌ವೇರ್ ಕಂಪನಿಗಳು. ಅಲ್ಲಿ ಕೆಲಸಾ ಮಾತ್ರ  ಹೊರರಾಜ್ಯದವ್ರಿಗೆ. ಬಿಟ್ರ ಫಾರೀನ್‌ ಮಂದಿಗೆ. ನೆಲಾ ನಮ್ದು, ಜಲ ನಮ್ದು, ಸಂಪನ್ಮೂಲ ನಮ್ದು. ಆಡಳಿತ ಏನಿದ್ರೂ ಹೊರಗಿನವ್ರದ. ನಮ್ಮವರಿಗೆ ಚಪರಾಸಿ ತಪ್ಪಿದರ ಹೊರಗಿಂದ ಹೊರಗ ದೇಖರೇಖಿ ಕೆಲಸಾ. ಒಳಕ್ಕ ಬಿಟ್ಕೊಳ್ಳಾವ್ರ ಇಲ್ಲ. ಕನ್ನಡಿಗರು ಟ್ಯಾಕ್ಸಿ ಓಡಿಸ್ಕೋಂತರೇ ಇರತೀವಂದ್ರ ‘ಮೇರು’ ಮತ್ ‘ಒಲಾ’ ಅಂಥವರು ಅದಕ್ಕೂ ನೀರ ಸುರದಬಿಟ್ರು. ಚಂಪಾ ಅಂಥವರು ಏನ ಮಾಡಾಕ್ಕಾಕ್ಕೈತಿ?

ಗಿಡ್ಡ: ಕನ್ನಡದ ಕೆಲಸಾ ಮಾಡಾಕ ಚಂಪಾಗ ವಯಸ್ಸೂ ಆತು. ಈಗೇನಿದ್ರೂ ಕರವೇ, ಜಕ, ಕಸೇ... ಯುವಕರ ಬಿಸಿ ರಕ್ತ ಕನ್ನಡಕ್ಕಾಗಿ ಕೊತ ಕೊತ ಕುದಿಯಾಕಹತ್ತೈತಿ. ಮುಂದ ನೋಡಬೇಕ ಏನೇನಾಕ್ಕೈತೋ? ಅಲ್ರೀ ಭಾಷಾವಾರು ಪ್ರಾಂತ ರಚನಾ ಆದ್ರು ಯಾಕ್ ಮಾಡಬೇಕಿತ್ತು? ನಮ್ದು ಪ್ರಜಾಪ್ರಭುತ್ವ, ಸೋಶಿಯೋ ಡೆಮಾಕ್ರಟಿಕ್ ಸೆಟ್‌ ಅಪ್, ಒಕ್ಕೂಟ ವ್ಯವಸ್ಥೆ ಅಂತೆಲ್ಲ ಕೊಚ್ಚಿಕೋತೀವು. ಅದಕ್ಕೊಂದು ನೀತಿ. ನೇಮಾ ಬ್ಯಾಡಂತೀರೇನು?
ಎಡ್ಡ: ಭಾಷಾ ಅನ್ನದು ಮಾತಾಡಕ ಮತ್‌ ಬರಿಯಾಕ, ಓದಾಕ ಅಷ್ಟ ಅಂತ ತಿಳಕೊಂಡೀವು. ಅದ ನಮ್ ದೊಡ್ಡ ದಡ್ಡತನ. ಅದು ನಮ್ ಜೀವನ ಕ್ರಮಾ, ಅನ್ನದ ಮೂಲನೂ ಆಗುವಂಥದ್ದು. ಮತ್ ನಿಜದ ಸಂಸ್ಕೃತಿನೂ ಹೌದು ಅಂತನ್ನೋ ಕಲ್ಪನಾನ ನಮಗಿಲ್ಲ. ಭಕ್ತಿ ಅಂದರ ಏನು? ಕಾಯಕಾ ಅಂದ್ರ ಏನು? ಜಾತ್ಯತೀತ ಅಂದ್ರ ಏನು? ಅಂತೆಲ್ಲ ಬಸವಣ್ಣ, ವಚನಕಾರರು, ಸೂಫಿಗಳು ಸರಳ ಕನ್ನಡದೊಳಗ ಎಲ್ಲಾ ಹೇಳೀರು. ಅಂದ್ರ ಕಾಯಕದ ಭಾಷಾಕ್ಕನ ಅವ್ರು ಒತ್ತು ಕೊಟ್ರು. ನಾವು ಕಾಯಕದ ಭಾಷಾ ಮರತು ಬರೀ ಮಾತಾಡುವ, ಬರೆಯುವ ಮತ್ ಓದುವ ಭಾಷಾಕ್ಕ ಜೋತ್‌ ಬಿದ್ದ ಬಿಟ್ಟೀವಿ. ಪರಿಣಾಮ ಏನಾತು? ಅದಕ್ಕ ಬರೀ ಕಾಮಾ, ಫುಲ್ ಸ್ಟಾಪ್, ಅಲ್ಪ ಪ್ರಾಣ, ಮಹಾಪ್ರಾಣ ಮತ್ ಒತ್ತಕ್ಷರದೊಳಗ ಮುಳುಗಿಹೋದ್ವಿ. ಅದ್ರಾಗ ಗಿರಕಿ ಹೊಡಕೋತ ಅಕ್ಯಾಡೆಮಿ, ಪ್ರಶಸ್ತಿ, ಪುರಸ್ಕಾರ, ಜ್ಞಾನ ಪೀಠನ ನಮ್ ಅಂತಿಮ ಗುರಿ ಆಗಿಸಿಕೊಂಡವರ್ಹಂಗ ನಡಕೋಳಾಕ ಹತ್ತೀವು. ಸಾಹಿತ್ಯ ರಚನಾ ಒಂದರಿಂದ ಭಾಷಾ ಸಮಸ್ಯೆ ಮತ್ ಭಾಷಿಕರ ಅನ್ನದ ಸಮಸ್ಯೆ ಬಗೀ ಹರೀತೈತೇನಲೇ?
ಗಿಡ್ಡ: ಅಂಥ ದೊಡ್ಡ ಸಮಾಜೋ-ವೈಜ್ಞಾನಿಕ ಚಿಂತನೆ ಮಾಡೋರು ನಮ್ಮಲ್ಲಿ ಯಾರ ಅದಾರೀ?
ಎಡ್ಡ: ನೀ ಹೇಳೂದು ಖರೇ. ನಮ್ಮಲ್ಲಿ ಬರೀ ಸಂಸ್ಕೃತಿ ಚಿಂತಕರು ಅಂತ ಅದಾರು. ಅವ್ರು ವೈಜ್ಞಾನಿಕ ದೃಷ್ಟಿಕೋನ ಇಲ್ಲದ ಏನೇನೋ ಮಾತಾಡ್ತಾರು. ಇತಿಹಾಸದಿಂದ ಅರ್ಧಂಬರ್ಧ ತಗೊಂಡು ಒಳ್ಳೆಯ ಹಿಪೊಕ್ರೇಟ್ಸ್ ಥರಾ ಆಡ್ತಾರು. ಅವ್ರನ್ನ ನಾವ್ ನಂಬ್ಕೊಂಡೀವಿ. ಹಿಂಗಾಗಿ ಸಂ-ಶೋಧಕ ಛೀ ಮೂ ಏನ್ ಹೇಳ್ತಾರು ಅದ ಖರೇ.
ಗಿಡ್ಡ: ಮೊದ್ಲು ನಮ್ ಭಾಷಾ ಮಹಾರಾಷ್ಟ್ರ, ಆಂಧ್ರ... ಮತ್ತಿನ್ನೆಲ್ಲೆಲ್ಲೋ ಇತ್ತಂತಲ್ರೀ. ಛೀ ಮೂ ಇದರ ಮ್ಯಾಲ ಭಾಳ ಮಾತಾಡ್ತಾರ್ ಬಿಡ್ರಿ.
ಎಡ್ಡ: ಹೌದು. ಆಗ ಅವ್ರ ಕಣ್ಣು ಶಾರ್ಪ್ ಇದ್ವು. ಬೆಂಗಳೂರಿನಿಂದ ಕಾಶ್ಮೀರ, ಮಧ್ಯಪ್ರಾಚ್ಯ ಹಂಗ ಮುಂದ ಯುರೋಪ್... ಮತ್ ಎಲ್ಲೆಲ್ಲಿ, ಎಷ್ಟು ದೂರ ದೃಷ್ಟಿ ಹರೀತಿತ್ತು ಅಷ್ಟ ದೂರಕ್ಕ ಕನ್ನಡನ ಕಾಣತಿತ್ತ ಅವ್ರಿಗೆ. ಅಮೇರಿಕಾ ಅಕ್ಕನ ಕಥೀ ಗೊತ್ತಲ್ಲ.
ಗಿಡ್ಡ: ಗೊತ್ತಲ್ರೀ ವರ್ಷಕ್ಕೊಮ್ಮೆ ಅಕ್ಕನ ಪಕ್ಕ ಕೂತ್ಕೊಳ್ಳಾಕ ದೊಡ್ಡ ಸರ್ಕಸ್ ನಡೀತೈತಲ್ರೀ.
ಎಡ್ಡ: ಅದೂ ಒಂದ್ ನಮೂನಿ  ಕನ್ನಡದ ಶೋಕೀ.
ಗಿಡ್ಡ: ಅದ ಬಿಡ್ರಿ. ಹಳೀದ ತೊಗೊಂಡ ಹಿತ್ಲದಾಗ ಅತ್ರಂತ. ಹೊಸಾ ವಿಚಾರ ಅತಂದ್ರ ದೇವನೂರು ಮಹಾದೇವ್ರದು ನೋಡ್ರಿ. ಅಲ್ರೀ ಕನ್ನಡಾ ಮಿಡಿಯಂ ಕಂಪಲ್ಸರೀ ಮಾಡಲಿಲ್ಲಾ ಅಂತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷಗಿರಿ ಆಮಂತ್ರಣಾನ ಎಡಗಾಲಿಲೆ ಒದ್ದಬಿಟ್ಟರಲ್ರಿ ...
 ಎಡ್ಡ: ಇಷ್ಟ ವರ್ಷದೊಳಗ ಎಂತಿಂಥ ಕನ್ನಡ ಸಾಹಿತಿ, ಉದ್ಧಾಮ ಪಂಡಿತರು ತೋರಿಸದ ಸ್ವಾಭಿಮಾನಾನ ಮಹಾದೇವ ಅತ್ಯಂತ ಪರಿಣಾಮಕಾರಿಯಾಗಿ ತೋರಿಸಿದ್ರು. ಖರೇ ಗಂಡಗಬರೂ ಅಂದ್ರ ನಮ್ ದೇವನೂರು ಮಹಾದೇವ್! ಈ ಮನಷ್ಯಾನ ಮಾತಿಗಿಂತ ಕೃತಿ ಶಕ್ತಿಶಾಲಿ. ಮತ್ ಅವ್ರದು ವೈಜ್ಞಾನಿಕ ದೃಷ್ಟಿಕೋನ. ಮಹಾದೇವ ಅನ್ನೂ ಜಿಗಟ ಕನ್ನಡ ಬದುಕಿನ ಹದಾ ಹೆಚ್ಚಿಸೂದಷ್ಟ ಅಲ್ಲ, ಅದಕ್ಕೊಂದು ದೊಡ್ಡ ದಿಕ್ಕು ತೋರಿಸೂ ಸಾಧ್ಯತಾ ಅಂತೂ ನಿಕ್ಕೀ ಐತಿ. ಕನ್ನಡಿಗರು ಮತ್ತು ಕನ್ನಡದ ಸಂಬಂಜ ಅನ್ನೋದು ದೊಡ್ಡದು ಕನಾ...

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮನುಷ್ಯ ಜಾತಿ ತಾನೊಂದೇ ವಲಂ...

ಭಾರತದಲ್ಲಿ ಜಾತಿ ವ್ಯವಸ್ಥೆ ಹೇಗೆ ಹುಟ್ಟಿತು ಎಂಬುದಕ್ಕೆ ಯಾವುದೇ ನಿರ್ಧಿಷ್ಟ ಥಿಯರಿ ಇಲ್ಲ. ಆದರೆ, ಇಲ್ಲಿನ ವರ್ಗ ಸೃಷ್ಟಿ ಮಾತ್ರ ಇರಾನ್ ವ್ಯವಸ್ಥೆಯಂತೇ ಇದೆ.  ಪುರಾತನ ಇರಾನಿನ ಚರಿತ್ರೆಯಲ್ಲಿ ಇಂಥದೊಂದು ವ್ಯವಸ್ಥೆ ಇತ್ತು. ಅದಕ್ಕೆ ಪಿಸ್ತ್ರಾಸ್ ಎನ್ನುತ್ತಾರೆ. ನಮ್ಮಲ್ಲಿ ಅದು ಚಾತುರ್ವರ್ಣವಾಗಿದೆ. ಅಲ್ಲಿ ಅಥ್ರವಾನ್ಸ್ (ಪ್ರೀಸ್ಟ್ ಕ್ಲಾಸ್), ರಥೈಸ್ತಾ (ವಾರಿಯರ್ಸ್), ವಸ್ತ್ರಿಯಾ (ಮರ್ಕಂಟೈಲ್ ಕ್ಲಾಸ್) ಮತ್ತು ಹ್ಯುತಿ (ಆರ್ಟಿಸನ್) ಎನ್ನುವ ವರ್ಗ ವ್ಯವಸ್ಥೆ ಇದೆ. ನಮ್ಮಲ್ಲಿ ಇದನ್ನು ಕಲ್ಪಿಸಿಕೊಂಡರೆ ಪುರೋಹಿತ ಅಥವಾ ಬ್ರಾಹ್ಮಣ (ಅಥ್ರವಾನ್ಸ್), ಕ್ಷತ್ರಿಯ  (ರಥೈಸ್ತಾ), ವೈಶ್ಯ  (ವಸ್ತ್ರಿಯಾ) ಮತ್ತು ಶೂದ್ರ (ಹ್ಯುತಿ) ಎಂದು ಅರ್ಥೈಸಿಕೊಳ್ಳಬಹುದು.  ಆದಿ ಕಾಲದ ಇರಾನಿಯನ್ ವ್ಯವಸ್ಥೆ ಹೀಗೇ ಇತ್ತು. ಅದೇ ನಾಲ್ಕು ವರ್ಗಗಳು ಭಾರತದಲ್ಲೂ ಈಗಲೂ ಚಾಲ್ತಿಯಲ್ಲಿವೆ. ಹೀಗೆ ಒಂದು ಇರಾನ್ ಸಂಬಂಧ ಭಾರತಕ್ಕಿದೆ. ಚರ್ಮದ ಬಣ್ಣ, ನಯ ನಾಜೂಕು, ಕಣ್ಣು, ಬುದ್ಧಿವಂತಿಕೆಯನ್ನು ಹೋಲಿಸಿದರೆ ಭಾರತದ ಅದರಲ್ಲೂ ಉತ್ತರ ಭಾರತದ ಕಾಶ್ಮೀರಿ ಪಂಡಿತರು, ಉತ್ತರ ಪ್ರದೇಶದ ಪಂಡಿತ್, ಚಿತ್ಪಾವನ ಬ್ರಾಹ್ಮಣರು, ನಮ್ಮ ಕರಾವಳಿ ಮತ್ತು ಉತ್ತರ ಕನ್ನಡದ ಹವ್ಯಕರು ಹೆಚ್ಚೂ ಕಮ್ಮಿ ಇರಾನಿಗಳನ್ನು ಹೋಲುತ್ತಾರೆ (ಮೇಲ್ನೋಟಕ್ಕೆ).  ಬಹುಶಃ ಹೀಗೂ ಆಗಿರಬಹುದು, ಆಗ ಇರಾನ್ ನಲ್ಲಿ ಕ್ರೈಸ್ತ ಮತ್ತು ಇಸ್ಲಾಂ ಮುಂಚೆಯೂ ಹಲವಾರು ಸುಧಾರಣಾವಾದಿಗಳ ಅಥವಾ ಬಂಡುಕೋರರ

"ಮಣೆಗಾರ" ಬಸಿದಿಟ್ಟ ಒಡಲಾಳದ ನೋವು ನೆನೆದು...

ಹಾಲ್ಕುರಿಕೆ ಥಿಯೇಟರ್ ಕಾನ್ಸೆಪ್ಟ್ ಕನ್ನಡ ರಂಗಭೂಮಿಯಲ್ಲಿ ಹೊಸದೊಂದು ಸಂಚಲನವನ್ನುಂಟು ಮಾಡುತ್ತಿದೆ. ಒಟ್ಟಾರೆ ಭಾರತೀಯ ರಂಗಭೂಮಿ ಕಾಣುತ್ತಿರುವ ಹೊಸತನಕ್ಕೆ ಇದು ಮುಖ್ಯವಾದ ಸಾಕ್ಷಿ. ಅತ್ಯಂತ ಕ್ರಿಯಾಶೀಲ ತುಡಿತದ ರಂಗಕರ್ಮಿ ಹಾಲ್ಕುರಿಕೆ ಶಿವಶಂಕರ (ನಿರ್ದೇಶಕ/ನಾಟಕಕಾರ) ಇತ್ತೀಚೆಗೆ "ಮಣೆಗಾರ" (ತುಂಬಾಡಿ ರಾಮಯ್ಯನವರ ಆತ್ಮಕಥೆ) ಎನ್ನುವ ದಲಿತ ಕಥಾನಕವೊಂದನ್ನು ರಂಗದ ಮೇಲೆ ಅನಾವರಣಗೊಳಿಸಿದರು. ಪ್ರಯೋಗದ ದೃಷ್ಟಿಯಿಂದ ಕೆಲವು ಕೊರತೆಗಳು, ದೋಷಗಳು ಇವೆ. ಅದು ಯಾವುದೇ ಪ್ರಯೋಗಕ್ಕೆ ಇರುವಂಥವೇ. ಆದರೆ ಸಮುದಾಯವೊಂದರ ಒಡಲಾಳದ ನೋವನ್ನು ರಂಗದ ಮೇಲೆ ಬಸಿದಿಟ್ಟಾಗ  ಬೆಚ್ಚಿ ಬೀಳುವಂತಾಯಿತು. ವಿಶೇಷವಾಗಿ ದಲಿತೇತರಲ್ಲಿ ಸಾಮಾಜಿಕ ಪ್ರಜ್ಞೆ, ಜವಾಬ್ದಾರಿಯನ್ನು ಬಡಿದೆಬ್ಬಿಸುವಂಥ ಕಥಾನಕವದು. "ಮಣೆಗಾರ" ಪ್ರೊಸಿನಿಯಂಗಿಂತ ಆಪ್ತರಂಗಭೂಮಿಗೆ ಸೂಕ್ತವಾದ ವಸ್ತು. ಪ್ರಯೋಗ ಒಟ್ಟಾರೆ ಮನುಷ್ಯ ಬದುಕಿನ ನಡುವಿರುವ ಗ್ರೇ ಏರಿಯಾವೊಂದರ ದರುಶನ ಮಾಡಿಸಿತು. ಮೇಲ್ವರ್ಗ ಸಹಮಾನವರನ್ನು ಅದು ಹೇಗೆ ಅಸ್ಪೃಶ್ಯರು ಎಂದು ದೂರಕ್ಕಿಟ್ಟಿತ್ತು, ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿತ್ತು ಎನ್ನುವುದು ಇದರ ಮೂಲ ಸಂಕಟ. ಇಡೀ ನಾಟಕದಲ್ಲಿ ಬದುಕಿಗಾಗೇ ಸಂಘರ್ಷವಿದೆ. ಆಹಾರಕ್ಕಾಗಿ ಹಾಹಾಕಾರವಿದೆ. socio-cultural  ನೆಲೆಯಲ್ಲಿ ದೊಡ್ಡ ಸಂಘರ್ಷವಿದೆ. ಇದು ರಾಜಕೀಯ ಆಯಾಮದಲ್ಲೂ ಬಹುಮುಖ್ಯವಾದ ಸಂಘರ್ಷವೇ. ಶಿಕ್ಷಣ ಮತ್ತು ಅದರ ಆಧಾರದಲ್ಲಿ ಹುಟ

"ಬದುಕು-ಬಯಲು" ನಾಟಕ ಮತ್ತು ಮಾನವೀಯ ನೆಲೆಯ ಹುಡುಕಾಟ

ಫ್ರಾನ್ಸ್ ನ ಬರಹಗಾರ ಅಲ್ಫ್ರೆಡ್ ಜೆರಿ ಬರೆದ 'ದಿ ಸೂಪರ್ ಮೇಲ್' ಎನ್ನುವ ಕಾದಂಬರಿಯ ಪ್ರೊಟಗಾನಿಸ್ಟ್ ಆ್ಯಂಡ್ರಿ ಮಾರ್ಕೆಲ್ ಒಬ್ಬ ಜಂಟಲ್ ಮನ್, ವಿಜ್ಞಾನಿ ಕೂಡ. ಅವನಿಗೆ ಮಾನವ ಸಾಮರ್ಥ್ಯಕ್ಕೆ ಮಿತಿ ಎಂಬುದೇ ಇಲ್ಲ ಎನ್ನುವುದರಲ್ಲಿ ಬಲವಾದ ನಂಬಿಕೆ. ಆತ ಉಗಿಬಂಡಿ ಜತೆಗೂ ಯಾವುದೇ ವಿಶ್ರಾಂತಿ ಮತ್ತು ತ್ರಾಸಿಲ್ಲದೇ ಕ್ರಮಿಸಿ  ರೇಸ್ ಗೆಲ್ಲಬಲ್ಲ (ಕಾದಂಬರಿಯಲ್ಲಿ ರೈಲು ಮತ್ತು ಸೈಕ್ಲಿಸ್ಟ್ ನಡುವೆ ಒಂದು ರೇಸ್ ನಡೆಯುತ್ತದೆ). ಒಂದೇ ಹೆಂಗಸಿನ ಜತೆ 24 ಗಂಟೆಗಳಲ್ಲಿ 82 ಬಾರಿ ಸಂಭೋಗ ನಡೆಸಬಲ್ಲ 'ಕಾಮಪಟುತ್ವ'ದ ಸಾಹಸಗಳನ್ನೂ ಮಾಡಬಲ್ಲ. ಇದನ್ನು ಪುರುಷಪರಾಕ್ರಮದ ನೆಲೆಯಲ್ಲಿ ನೋಡೋದಾ? ಇಲ್ಲಾ ನಿಸರ್ಗ ಸಹಜ ಸಾಧ್ಯತೆಯ ನೆಲೆಯಲ್ಲಿ ನೋಡುವುದಾ?... - ಇದು ಒಂದು ರೀತಿಯ ವಿಕ್ಷಿಪ್ತ ಮನೋಧರ್ಮದ, ಸೈನ್ಸ್ ಫಿಕ್ಷನ್ ಕಾದಂಬರಿಯ ಸಂಕ್ಷಿಪ್ತ ನೋಟ. ಅಲ್ಫ್ರೆಡ್ ಜೆರಿ ಉತ್ತಮ ನಾಟಕಕಾರನೂ ಹೌದು. ಆತನ 'ಉಬು ರೊಯ್' ಹೆಸರಾಂತ ನಾಟಕಗಳಲ್ಲೊಂದು.    * * * ಜೆರಿ ಬಗ್ಗೆ ಓದುತ್ತಿದ್ದ ಹೊತ್ತಲ್ಲಿ ಹಿಜಡಾವೊಬ್ಬರ ಆತ್ಮಕಥನ ಆಧರಿಸಿದ "ಬದುಕು-ಬಯಲು" ಎನ್ನುವ ನಾಟಕ ವೀಕ್ಷಣೆಗೆ ತಿಪಟೂರಿನ ರಂಗ ಗೆಳೆಯ ನೀನಾಸಂ ಚಂದ್ರು ಆಹ್ವಾನ ನೀಡಿದರು.  ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ ನೋಡಿದೆ. ಅದಕ್ಕೂ ಮುಂಚೆ ನಾಟಕದ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಸಿ.ಎಸ್. ದ್ವಾರಕಾನಾಥ್, ಗೌರಿ ಲಂಕೇಶ್ ಮತ್ತಿತರ ಚಿಂತಕರ ವಿ