ವಿಷಯಕ್ಕೆ ಹೋಗಿ

ಹರೆಯ ಬಯಸುವುದು ತಾಜಾ ತಾಜಾ ಹವಾ..





ಟರ್ಕಿ ಪರಿಪೂರ್ಣ ಇಸ್ಲಾಮಿಕ್‌ ರಾಷ್ಟ್ರವಾಗುಳಿದಿಲ್ಲ. ಸಂಪೂರ್ಣ ಆಧುನಿಕವೂ ಅಲ್ಲ. ಅದರ ಒಂದು ಕಾಲು ಪೂರ್ವ ಯುರೋಪ್‌ನಲ್ಲಿದ್ದರೆ ಮತ್ತೊಂದು ಪಶ್ಚಿಮ ಏಷ್ಯದಲ್ಲಿದೆ. ಐತಿಹಾಸಿಕವಾಗಿ ಅತ್ಯಂತ ಭಿನ್ನ ಮತ್ತು ಹಲವು ಸಂಸ್ಕೃತಿಗಳಿಗೆ ತೆರಕೊಂಡುದದರ ಜೊತೆಗೆ ಸಂಘರ್ಷಗಳಿಗೂ, ಆಕ್ರಮಣಗಳಿಗೂ ಒಳಗಾದ ದೇಶ. ಜೂಲಿಯಸ್‌ ಸೀಜರ್‌ ಅಮಾಸ್ಯದ ಬಳಿ ಆಕ್ರಮಣ ಮಾಡಿದ. ಬೈಜಂಟೈನ್‌ ಕ್ರೈಸ್ತರು ಚರ್ಚ್‌ಗಳನ್ನು ಕಟ್ಟಿದರು. ಒಟ್ಟೊಮನ್‌ ಸುಲ್ತಾನರಂತೂ ಇಸ್ತಾನಬುಲ್‌ನಲ್ಲಿ ಟಾಪ್‌ಕ್ಯಾಪ್‌ ಅರಮನೆಗಳನ್ನು ಕಟ್ಟಿಸಿ ವೈಭವದ ರಾಜ್ಯಭಾರ ನಡೆಸಿದರು (ಅವರ ಸಾಮ್ರಾಜ್ಯ ಬುಡಾಪೆಸ್ಟ್‌ನಿಂದ ಕಾಬೂಲಿನವರೆಗೂ ವ್ಯಾಪಿಸಿತ್ತು). ರೋಮನ್‌ರ ಅಟ್ಟಹಾಸಕ್ಕೆ ಕಡಿವಾಣ ಬಿದ್ದದ್ದು ಇಲ್ಲಿಯೇ. ಮಧ್ಯಯುಗೀನ ಅರ್ಮೇನಿಯನ್ನರು ಚರ್ಚ್‌ಗಳನ್ನು ಕಟ್ಟಿದ್ದು, ಅನುಭಾವ ಪರಪಂಚದ ಸೂಫಿಗಳು ಬಹುಕಾಲ ನೆಲೆ ಕಂಡುಕೊಂಡಿದ್ದು ಇಲ್ಲೇ. ಪ್ರಾಚೀನ ಗ್ರೀಕ್‌ ಸಂಸ್ಕೃತಿಯಿಂದ ಹಿಡಿದು, ಪರ್ಷಿಯನ್‌, ರೋಮ್‌, ಬೈಜಂಟೈನ್‌ ಮತ್ತು ಒಟ್ಟೊಮನ್‌ ಸಾಮ್ರಾಜ್ಯ... ಹೀಗೆ ಒಟ್ಟು ಎಲ್ಲದರಿಂದ ಒಂದೊಂದಷ್ಟು ಪಡಕೊಂಡ ಟರ್ಕಿ ಸಂಸ್ಕೃತಿ ಮಿಸಳ್‌ ಭಾಜೀಯಂತೆ. ಇಸ್ತಾನಬುಲ್‌ ಈಗಂತೂ ಅತ್ಯಂತ ಕಾಸ್ಮೊಪಾಲಿಟನ್‌. ಕ್ರೈಸ್ತರ ಚರ್ಚ್‌, ಇಸ್ಲಾಂನ ನೀಲಿ ಮಸೀದಿಗಳು ಇಲ್ಲಿನ ಭವ್ಯ ಮತ್ತು ದಿವ್ಯ ತಾಣಗಳು.
‘ಒಂದು ಲೋಟ ಕಾಫೀ ಒಂದರಿಂದ ನಲವತ್ತು ವರ್ಷದ ಸ್ನೇಹಕ್ಕೆ ಅಣಿಗೊಳಿಸಿಬಿಡುತ್ತದೆ’ ಎನ್ನುವುದು ಇಲ್ಲಿನ ಜನಪ್ರಿಯ ನಾಣ್ಣುಡಿ. ಹಾಲು ಮತ್ತು ಕಾಫಿಪುಡಿ ಬೆರೆತು ಹದಗೊಂಡ ಪೇಯದಂತಾಗುವ ಹಾಗೆ ಜನ ಪರಸ್ಪರ ಬೆರೆತಾಗ ಬಾಂಧವ್ಯ ಬೆಸೆದುಕೊಳ್ಳುವುದು ಸುಲಭ ಎನ್ನುವುದು ಇದರರ್ಥ. ಒಂದು ಸಂಸ್ಕೃತಿಯೊಳಕ್ಕೆ ಮತ್ತೊಂದು ಸೇರಿಕೊಳ್ಳುವುದು ಇಲ್ಲಿನ ನಾಗರಿಕತೆಯ ಸಹಜತೆ.
ಇಸ್ಲಾಮಿನ ತತ್ವಾದರ್ಶಗಳು, ಸೂಫಿ ಪರಂಪರೆಯ ಅನುಭಾವ ಪರಪಂಚ ಹಾಗೂ ಕ್ರೈಸ್ತರ ಮುಕ್ತ ನಡೆಗಳು ಇಲ್ಲಿನವರ ಧಾರ್ಮಿಕತೆ, ಅಧ್ಯಾತ್ಮ  ಮತ್ತು ಜನಸಂಸ್ಕೃತಿ. ಇದು ಕೊಡುಕೊಳ್ಳುವಿಕೆಯಂಥ ವ್ಯವಹಾರಿಕ ಪ್ರಜ್ಞೆಯಂತೆಯೂ ಹಬ್ಬಿಕೊಂಡಿದೆ. ಈಗೀಗ ಸ್ವೇಚ್ಛೆಯೂ ತನ್ನ ಹರವನ್ನು ಹಬ್ಬಿಸಿಕೊಂಡಿದೆ. ಇದರಿಂದ ಇಕ್ಕಟ್ಟಿಗೆ ಸಿಕ್ಕುವ ಇಸ್ಲಾಂ ಕಟ್ಟರ್‌ ಪಂಥ ತನ್ನ ಜನಾಂಗವನ್ನು ಧಾರ್ಮಿಕ ಆದರ್ಶಗಳಲ್ಲಿ ಕಟ್ಟಿ ಹಾಕಲು ನೋಡುತ್ತದೆ. ಅತ್ತ ಯುರೋಪ್‌ನ ಮುಕ್ತ ಸಂಸ್ಕೃತಿ ಟರ್ಕಿಗಳನ್ನು  ಚುಂಬಕದಂತೆ ಸೆಳೆಯುತ್ತದೆ. ಇದರ ನಡುವೆ ಗುದಮುರಗಿಯಲ್ಲಿರುವ ಹೊಸ ತಲೆಮಾರು ಸಮಾಜೋ-ಧಾರ್ಮಿಕ ಮಿತಿಗಳನ್ನು ಮೀರಲು ಹಾತೊರೆಯುತ್ತಿದೆ. ಕಾಲದ ಒತ್ತಡ.
ಇಷ್ಟು ಪ್ರಸ್ತಾವನೆ ಸಿನಿಮಾವೊಂದಕ್ಕೆ ಬ್ಯಾಕ್‌ಡ್ರಾಪ್‌ ಅಷ್ಟೇ. ಅತ್ಯಂತ ಸಂಕೀರ್ಣ ಸ್ಥಿತಿಯಲ್ಲಿರುವ ಟರ್ಕಿಯಂಥ ದೇಶಗಳ ಪ್ರಸ್ತುತ ಯುವ ಜನಾಂಗ ಅದರಲ್ಲೂ ಹೆಣ್ಣು ಮಕ್ಕಳು ಎದುರಿಸುತ್ತಿರುವ ಸವಾಲುಗಳೇನು ಎನ್ನುವುದು ಸಹಜವಾಗಿಯೇ ಕುತೂಹಲದ ವಸ್ತು. ‘ಮಸ್ತಾಂಗ್‌’ ಎನ್ನುವ ಸಿನಿಮಾ ಇಂಥದೊಂದು ಹಾಟ್‌ ವಸ್ತುವನ್ನು ಹರವಿಕೊಂಡು ಜೀವಪರ ಸಂವಾದಕ್ಕೆ ದಾರಿ ಮಾಡಿಕೊಟ್ಟಿದೆ. ಇತ್ತೀಚೆಗೆ ನಡೆದ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಹೆಚ್ಚು ಗಮನ ಸೆಳೆದ ಚಿತ್ರ ಇದಾಗಿತ್ತು.

ಒಬ್ಬ ಅಜ್ಜಿ, ಅಂಕಲ್‌ ಮತ್ತು ಐವರು ಹೆಣ್ಣು ಮಕ್ಕಳು ಇರುವ ಒಂದು ಮುಸ್ಲಿಂ ಕುಟುಂಬ. ಕರಾವಳಿ ತೀರದ ಗುಡ್ಡಗಾಡು ಪ್ರದೇಶದಲ್ಲಿ ಮನೆ. ಅಜ್ಜಿಗೆ ಈ ಹೆಣ್ಣು ಮಕ್ಕಳ ಮೇಲೆ ಪ್ರೀತಿ. ಜಾಲಿಯಾಗಿ ಬೆಳೆಯಲಿ ಎನ್ನುವುದು ಅವಳಾಸೆ. ಆ ಹೆಣ್ಣುಮಕ್ಕಳು ಕೂಡ ವಯೋಸಹಜವಾಗಿ ತುಂಟಿಯರೇ. ತಮ್ಮ ಗುಪ್ತಾಂಗಗಳ ಬಗ್ಗೆ ಹರೆಯದ ಹುಡುಗರ ಬಗ್ಗೆ ಬೋಲ್ಡ್‌ ಆಗಿ ತಮ್ಮೊಳಗೇ ಮಾತನಾಡಿಕೊಳ್ಳುತ್ತ ಖುಷಿ ಪಡುವ, ಅವಕಾಶ ಸಿಕ್ಕರೆ ಹುಡುಗರೊಂದಿಗೆ ಮಜಾ ಮಾಡುವ ಚಾಲಾಕಿಯರು. ಒಟ್ಟಿನಲ್ಲಿ ಅದು ಅವರ ಹರೆಯದ ಹಕ್ಕು. ಅಂಕಲ್‌ಗೋ ಈ ಹೆಣ್ಣು ಮಕ್ಕಳ ಮದುವೆ ಮಾಡಿಸಿ ಸಾಗಹಾಕುವ ಅನಿವಾರ್ಯತೆ. ಹೆಣ್ಣು ಮಕ್ಕಳು ದೊಡ್ಡವರಾದರೆ ಸಾಕು ನಿಕಾಹ್‌ (ಮದುವೆ) ಕಡ್ಡಾಯ ಎನ್ನುವಂಥ ಜನಸಂಸ್ಕೃತಿಯಲ್ಲಿ ನಂಬಿಕೆ ಇಟ್ಟುಕೊಂಡ ಸಮಾಜ ಅದು. ಈ ಹೆಣ್ಣು ಮಕ್ಕಳದು ಸರದಿಯಂತೆ  ನಿಕಾಹ್‌ ನಡೆಯತೊಡಗುತ್ತದೆ. ಹಿರಿಯ ಹೆಣ್ಣುಮಗಳಿಗೆ ಹೆಚ್ಚು ಆಯ್ಕೆಗಳಿಲ್ಲ. ಅವಳಲ್ಲಿ ಸದ್ಯಕ್ಕೆ ಮದುವೆ ಬೇಡ ಎನ್ನುವುದು ಮಾತ್ರ ಇದೆ. ಅವಳು ಹೊರಕ್ಕೆ ಇಣುಕುವುದನ್ನು ಕೊಂಚ ಕಲಿತವಳಾಗಿದ್ದಾಳೆ. ಎರಡು ಮತ್ತು ಮೂರನೆಯವರಿಗೂ ಅಂಥದೇ ಆಸಕ್ತಿ. ಆದರೆ ನಿಕಾಹ್‌ ತಪ್ಪಿಸಿಕೊಳ್ಳಲು ಅವರಿಂದಲೂ ಸಾಧ್ಯವಾಗುವುದಿಲ್ಲ. ಇದರ ನಡುವೆ ಒಬ್ಬಳು ಸತ್ತೇ ಹೋಗುತ್ತಾಳೆ. ಇದು ಉಳಿದ ಇಬ್ಬರು ಕಡೆಯ ಹೆಣ್ಣುಮಕ್ಕಳ ಮೇಲೆ ದೊಡ್ಡ ಪರಿಣಾಮವನ್ನೇ ಬೀರುತ್ತದೆ. ಅದರಲ್ಲಿ ಅತ್ಯಂತ ಕಿರಿಯವಳಿಗೆ ಇದೆಲ್ಲವನ್ನು ಮೀರುವ ಉಮೇದಿ. ಕಿರಿಯ ಹುಡುಗಿ ಮನೆಯವರ ಕಣ್ತಪ್ಪಿಸಿ ಒಬ್ಬನಿಂದ ಕಾರು ಓಡಿಸುವುದನ್ನು ಕಲಿತುಕೊಳ್ಳುತ್ತಾಳೆ. ಈಕೆಗೆ ಒಟ್ಟಾರೆ ಇಸ್ತಾನ್‌ಬುಲ್‌ (ಟರ್ಕಿಯ ಅತ್ಯಂತ ಕಾಸ್ಮೊಪಾಲಿಟನ್‌ ಶಹರು)ಗೆ ಹೋಗುವ ಆಸೆ. ಅದು ಅಂತಿಮ ಗುರಿ. ಇವಳ ಇಷ್ಟದ ಟೀಚರ್‌ ಇರುವುದೇ ಅಲ್ಲಿ. ಸ್ಕೂಲ್‌ ಮುಗಿಸಿ ಬರುವಾಗ ಎಲ್ಲರಂತೆ ಟೀಚರ್‌ ವಿಳಾಸ ಪಡೆದುಕೊಂಡು ಬಂದವಳು. ನಿಮಗಿಷ್ಟದ ಬದುಕನ್ನು ನಿರ್ಭಿಡೆಯಿಂದ ಬದುಕಿ ಎನ್ನುವಂಥ ಮಾತುಗಳೊಂದಿಗೆ ಅಗತ್ಯ ಬಿದ್ದರೆ ನನ್ನ ಸಂಪರ್ಕಿಸಿ ಎಂದ ಟೀಚರ್‌ ನೀಡಿದ್ದ ಅಭಯ ಇವಳ ನೆನಪಲ್ಲಿದೆ.
ಇವರೆಲ್ಲ ರಾತ್ರಿ ಎಲ್ಲರ ಕಣ್ತಪ್ಪಿಸಿ ಹೊರಗೆ ಸುತ್ತಾಡಿ ಫುಟ್ಬಾಲ್‌ ಮ್ಯಾಚ್‌ ಇತ್ಯಾದಿ ಮೋಜು ಅನುಭವಿಸಿದವರೇ. ಒಂದಿಬ್ಬರು ಗುಟ್ಟಾಗಿ ಬಾಯ್‌ಫ್ರೆಂಡ್‌ ಇಟ್ಟುಕೊಂಡು ಆಡಿದ ಕಣ್ಣಾ ಮುಚ್ಚಾಲೆ ಆಟ ಗೊತ್ತಾಗಿ ಮನೆ ಅಕ್ಷರಶಃ ಪಂಜರವಾಗಿಬಿಡುತ್ತದೆ. ಇಷ್ಟ ಇದೆಯೋ ಇಲ್ಲವೋ ನಮ್ಮ ಆಯ್ಕೆಯನ್ನೇ ಒಪ್ಪಿಕೊಳ್ಳಬೇಕು. ಬಲವಂತ ಮಾಡುವುದು ಕೂಡ ನಮ್ಮ ಹಕ್ಕು ಎನ್ನುವಂಥ ಹಿರೀಕರ ಕರ್ಮಠದ ಮನಸ್ಥಿತಿಯ ಅಣಕವಿದು.

ಕೊನೆಯ ದೃಶ್ಯದಲ್ಲಿ ನಾಲ್ಕನೇಯ ಹುಡುಗಿಗೆ ನಿಕಾಹ್‌ ಗೊತ್ತಾಗುತ್ತದೆ. ಆಕೆಗದು ಇಷ್ಟವಿಲ್ಲ. ನಿಕಾಹ್‌ ತಡೆಯಲು ಕೊನೆಯವಳು ನೆರವಾಗಿ ನಿಲ್ಲುತ್ತಾಳೆ. ಪರಿಸ್ಥಿತಿ ಕೈಮೀರುವ ಹಂತಕ್ಕೆ ಬರುತ್ತದೆ. ಹುಡುಗನ ಕಡೆಯವರು ಬಾಗಿಲಿಗೇ ಬಂದು ನಿಂತಿದ್ದಾರೆ. ಈ ಇಬ್ಬರು ಮನೆಯ ಎಲ್ಲ ಬಾಗಿಲುಗಳನ್ನು ಭದ್ರಪಡಿಸಿಕೊಂಡುಬಿಡುತ್ತಾರೆ. ಮೆಲೆ ಒಂದು ಸಣ್ಣ ಕಿಟಕಿಯ ಮೂಲಕ ಹೊರಬಂದು ಅಂಕಲ್‌ ಕಾರು ಎಗರಿಸಿಕೊಂಡು ಪರಾರಿಯಾಗುತ್ತಾರೆ. ಕಾರು ಓಡಿಸುವುದನ್ನು ಕಲಿಸಿದವನ ನೆರವು ಪಡೆಯುತ್ತಾರೆ. ಆತ ಇವರನ್ನು ಇಸ್ತಾನಬುಲ್‌ ಬಸ್‌ ಹತ್ತಿಸುವ ವ್ಯವಸ್ಥೆ ಮಾಡುತ್ತಾನೆ. ಅಂತೂ ಕೊನೆಯವಳು ಮೆಚ್ಚಿನ  ಟೀಚರ್‌ ಭೇಟಿ ಮಾಡುತ್ತಾಳೆ. ಅಲ್ಲಿಗೆ ಸಿನಿಮಾ ಮುಗಿಯುವುದಾದರೂ ಅದು ನಮ್ಮೊಳಗೆ ಬೆಳೆಯುತ್ತಲೇ ಹೋಗುತ್ತದೆ. ಅಂತ್ಯ ಕಾಣದ ಮತ್ತು ನಿರ್ದಿಷ್ಟ ಗುರಿಯೇ ಇಲ್ಲದ ಪಯಣ (ಜರ್ನಿ)ವಾಗಿ. ಎಲ್ಲರ ಮನದೊಳಗೆ ಹೀಗೊಂದು ಪರಾರಿ ಮನಸ್ಥಿತಿ ಇರುತ್ತದೆ. ಅದು ಕೊಲೆಗಡುಕ ಮುಖ ಮುಚ್ಚಿಕೊಳ್ಳಲು ಮಾಡುವ ಪರಾರಿಯಂತಲ್ಲ. ತನಗನ್ನಿಸಿದ ಬದುಕೊಂದನ್ನು ಬದುಕಲು ಇರುವ ಕರ್ಮಠ ಮತ್ತು ಉಸಿರುಗಟ್ಟಿಸುವ ವಾತಾವರಣದಂಥ ತಡೆಗಳಿಂದ ಹೊರ ಬರಲು ಅನಿವಾರ್ಯವಾಗಿ ಮಾಡಲೇಬೇಕಾದ ಪರಾರಿ.
ಯಾವುದೇ ದೇಶ, ಸಮಾಜ ಅಥವಾ ಕಾಲದ ಹೆಣ್ಣು ಮಕ್ಕಳು ಓಡಿ ಹೋಗುವ ವಿದ್ಯಮಾನ ಅತ್ಯಂತ ರೋಚಕ. ಹೆಣ್ಣಿಗೆ ಅಥವಾ ಹರೆಯದ ಹುಡುಗಿಯರಿಗೆ ಧರ್ಮ ರೂಪಿಸಿದ ನೀತಿ ಸಂಹಿತೆಗಳು ನಾಗರಿಕತೆಯ ಮೂಲಕ ಪಂಜರದಂತಾದರೆ ಅದನ್ನು ಭೇದಿಸಿ ಹೊಸ ಗಾಳಿಗೆ ಅವಳ ಮುಖವೊಡ್ಡಿಸುವ ಸಾಂಸ್ಕೃತಿಕ ಯತ್ನ ಒಂದು ಅರ್ಥದಲ್ಲಿ ಮುನ್ನೋಟ. ಮತ್ತೊಂದರ್ಥದಲ್ಲಿ ಸಂಘರ್ಷ. ಒಂದು ಕಾಲದಲ್ಲಿ ಇಂಥದೇ ಪರಾರಿ ಮನಸ್ಥಿತಿಗಳು ಸ್ವೇಚ್ಛೆಯನ್ನೇ ಬದುಕಾಗಿಸಿಕೊಂಡು ನಾಗರಿಕತೆಗಳ ಅವಸಾನಕ್ಕೆ ಕಾರಣವಾಗಿದ್ದೂ ಇದೆ ಎಂದು ವಾದಿಸುವ ಧರ್ಮಗಳು ಅದರಿಂದ ಜನರನ್ನು ಹೊರತಂದು ಹೊಸ ನಾಗರಿಕತೆಗಳನ್ನು ಕಟ್ಟುವ ಸಾಹಸ ಕೈಗೊಂಡವು. ಕಾಲಾಂತರದಲ್ಲಿ ಧರ್ಮವನ್ನು ತಮಗೆ ತಕ್ಕಂತೆ ಬದಲಿಸಿಕೊಂಡ ಪಟ್ಟಭದ್ರ ಶಕ್ತಿಗಳು ಅತ್ಯಂತ ಕಠೋರ ಎನ್ನಿಸಬಹುದಾದ ಮಿತಿಗಳನ್ನು ಜನರ ಮೇಲೆ ಹೇರಿದವು. ಕ್ರಮೇಣ ಅವು ಜನಸಂಸ್ಕೃತಿಗೇ ಮುಳುವಾಗುವಂಥ ಸ್ಥಿತಿಗೆ ಬಂದವು. ಇದರ ಪರಿಣಾಮ ಸಂಘರ್ಷ ನಿರಂತರ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಮನುಷ್ಯನ ಒಟ್ಟು ಬದುಕು ಹಿಂಸೆಯ ಆವರಣದೊಳಕ್ಕೆ ಬಂಧಿಯಾಗಿದ್ದು ಮಾತ್ರ ವಿಪರ್ಯಾಸ. ‘ಮಸ್ತಾಂಗ್‌’ ಚಿತ್ರ ಒಟ್ಟಾರೆಯಾಗಿ ಟರ್ಕಿಯ ನಾಗರಿಕತೆಯನ್ನು ಲೇವಡಿ ಮಾಡುತ್ತಲೇ ಧರ್ಮಗಳ ಕರ್ಮಠತೆಯನ್ನೂ ಪ್ರಶ್ನಿಸಿದೆ. ಅದು ಎಲ್ಲ ನಾಗರಿಕತೆಗಳ, ಧರ್ಮ ಕರ್ಮಠಗಳ ಮೇಲಿನ ಲೇವಡಿಯೂ ಹೌದು.
ಮತ್ತೊಂದು ಮಾತು- ಸ್ವಾತಂತ್ರ್ಯ ಮತ್ತು ಸ್ವೇಚ್ಛೆ ನಡುವಣ ವ್ಯತ್ಯಾಸ ಅಗಾಧ. ಆದರೆ, ಸ್ವಾತಂತ್ರ್ಯದ ಪರಾಕಾಷ್ಠೆ ಸ್ವೇಚ್ಛೆ ಆದಲ್ಲಿ ಪರಿಣಾಮ ಮಾತ್ರ ಅಸಹನೀಯ. ಹರೆಯದ ಮನಸುಗಳು ಸ್ವಾತಂತ್ರ್ಯದಿಂದ ಸ್ವೇಚ್ಛೆಗೆ ಹಾರುವ ಅಪಾಯ ಇಲ್ಲದಿಲ್ಲ. ಇದನ್ನು ತಡೆಯುವ ಯತ್ನವಾಗಿ ಧರ್ಮಗಳು ಇದರ ಮೇಲೆ ಹೆಚ್ಚು ಒತ್ತು ಕೊಟ್ಟು ಒಂದು ಸಹನೀಯ ಬದುಕಿಗಾಗಿ ಕೆಲ ನೀತಿ ಸಂಹಿತೆಗಳನ್ನು ನೈತಿಕತೆಯ ನೆಲೆಯಲ್ಲಿ ರೂಪಿಸಿಟ್ಟಿವೆ. ಪುರೋಹಿತಷಾಹಿ ಮನಸುಗಳು ಅದನ್ನೇ ಅಸ್ತ್ರದಂತೆ ಬಳಸಲು ನೋಡುತ್ತವೆ. ಮಸ್ತಾಂಗ್‌ ಚಿತ್ರದ ಕಥೆಯಲ್ಲಿ ಮುಸ್ಲಿಂ ಕುಟುಂಬ ವರ್ತಿಸುವುದು ಈ ನೆಲೆಯಲ್ಲಿಯೇ. ಮತ್ತು ಇದು ಪೂರ್ವ ಮತ್ತು ಪಶ್ಚಿಮ ದೇಶಗಳ ನಡುವಣ ಧರ್ಮ ತಿಕ್ಕಾಟವೂ ಹೌದು. ಪೂರ್ವದ ದೇಶಗಳಲ್ಲಿ ಕ್ರೈಸ್ತೇತರ ಧರ್ಮಗಳ ಪ್ರಭುತ್ವ ಇದ್ದರೆ ಪಶ್ಚಿಮದಲ್ಲಿ ಕ್ರೈಸ್ತ ಧರ್ಮದ್ದೇ ದರ್ಬಾರು. ಪಶ್ಚಿಮದ ಈ ದರ್ಬಾರಿಗೆ ದೊಡ್ಡ ಸೆಡ್ಡು ಹೊಡೆಯಬಲ್ಲ ಪ್ರತಿಶಕ್ತಿ ಇಸ್ಲಾಂ ಧರ್ಮ. ಈ ನೆಲೆಯಲ್ಲಿಯೂ ಮಸ್ತಾಂಗ್‌ ಚಿತ್ರದ ವಸ್ತುವನ್ನು ನೋಡಬೇಕಾಗುತ್ತದೆ. ಪೂರ್ವದ ದೇಶಗಳ ಯುವ ಜನಾಂಗದಲ್ಲಿ ಈಗ ಪಶ್ಚಿಮ ಸಂಸ್ಕೃತಿಯ ಬಗ್ಗೆ ಕುತೂಹಲ ಮತ್ತು ಆಸಕ್ತಿ ಹೆಚ್ಚುತ್ತಿದೆ ಎಂದು ಧ್ವನಿಸಲು ಮಸ್ತಾಂಗ್‌ ಯತ್ನಿಸಿದಂತೆಯೂ ಅನ್ನಿಸುತ್ತದೆ. ಇದರ ಹೊರತಾಗಿಯೂ ಯೋಚಿಸಿದರೆ, ಇಂಥ ಯಾವ ಗೋಜಿಗೆ ಬೀಳದ ಯುವ ಮನಸುಗಳು ತಮ್ಮ ಹರೆಯದ ಹಕ್ಕನ್ನು, ಪ್ರೀತಿಯ ಬಯಕೆಯನ್ನು ಪಡೆಯುವುದಕ್ಕೆ ಯಾವ ಅಥವಾ ಯಾರಪ್ಪಣೆಯಾದರೂ ಯಾಕೆ ಬೇಕು ಎಂದು ಪ್ರಶ್ನಿಸುವ ಸೂಕ್ಷ್ಮವಿದೆಯಲ್ಲ ಅದನ್ನು ಕಡೆಗಣಿಸುವುದಾದರೂ ಹೇಗೆ? ಹೀಗಾಗಿ ಚಿತ್ರದ ವಸ್ತು ಏಕಕಾಲಕ್ಕೆ ಸ್ಥಳೀಯ ಮತ್ತು ಜಾಗತಿಕ ಮಟ್ಟದ ಧರ್ಮ-ಸಂಸ್ಕೃತಿ ಸಂಘರ್ಷವೇ. ಆದರೆ ಸಿನಿಮಾ ಈ ಸೂಕ್ಷ್ಮಗಳನ್ನು ನೇರವಾಗಿ ಹರವಿಕೊಳ್ಳದೇ ಪರೋಕ್ಷವಾಗಿ ಅತ್ಯಂತ ನಾಜೂಕಿನಿಂದ ನಿಭಾಯಿಸಿದೆ. ಇರುವ ಸ್ಥಿತಿಯನ್ನು ಫೇಸ್‌ಬುಕ್‌ ಗೋಡೆ ಮೇಲೆ ಹಾಕುವ ಒಂದು ಸ್ಟೇಟಸ್‌ ರೀತಿಯಲ್ಲಿ ತೆರೆಯ ಮೇಲಿಟ್ಟಂತೆನಿಸುತ್ತದೆ. ಆದರೆ ತುಂಬ ಲೈಟಾಗಿ ಪೂರ್ವ ಪಶ್ಚಿಮಗಳ ತಿಕ್ಕಾಟ ಕೆಣಕುತ್ತಲೇ ಹರೆಯದ ಹಕ್ಕಿನ ಪರ ನಿಲ್ಲುವ ಮೂಲಕ ಜೀವಪರ ಆಶಯಕ್ಕೆ ಉಸಿರಾಗಲು ಹಂಬಲಿಸಿದ್ದಂತೂ ಎದ್ದು ಕಾಣಿಸುತ್ತದೆ. ಬದುಕು ಮುಖ್ಯ ಎಂದು ಭಾವಿಸುವ ದಿಲ್‌ಗೆ ಅನ್ನಿಸುವುದಿಷ್ಟೇ- ಹರೆಯ ಬಯಸುವುದು ತಾಜಾ ತಾಜಾ ಹವಾ..

ಚಿತ್ರ: ಮಸ್ತಾಂಗ್
ನಿರ್ದೇಶನ: ಡೆನಿಜ್ ಗ್ಯಾಮ್ಜೆ ಎರ್ವೆನ್‌ (Deniz Gamze Ergüven)


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮನುಷ್ಯ ಜಾತಿ ತಾನೊಂದೇ ವಲಂ...

ಭಾರತದಲ್ಲಿ ಜಾತಿ ವ್ಯವಸ್ಥೆ ಹೇಗೆ ಹುಟ್ಟಿತು ಎಂಬುದಕ್ಕೆ ಯಾವುದೇ ನಿರ್ಧಿಷ್ಟ ಥಿಯರಿ ಇಲ್ಲ. ಆದರೆ, ಇಲ್ಲಿನ ವರ್ಗ ಸೃಷ್ಟಿ ಮಾತ್ರ ಇರಾನ್ ವ್ಯವಸ್ಥೆಯಂತೇ ಇದೆ.  ಪುರಾತನ ಇರಾನಿನ ಚರಿತ್ರೆಯಲ್ಲಿ ಇಂಥದೊಂದು ವ್ಯವಸ್ಥೆ ಇತ್ತು. ಅದಕ್ಕೆ ಪಿಸ್ತ್ರಾಸ್ ಎನ್ನುತ್ತಾರೆ. ನಮ್ಮಲ್ಲಿ ಅದು ಚಾತುರ್ವರ್ಣವಾಗಿದೆ. ಅಲ್ಲಿ ಅಥ್ರವಾನ್ಸ್ (ಪ್ರೀಸ್ಟ್ ಕ್ಲಾಸ್), ರಥೈಸ್ತಾ (ವಾರಿಯರ್ಸ್), ವಸ್ತ್ರಿಯಾ (ಮರ್ಕಂಟೈಲ್ ಕ್ಲಾಸ್) ಮತ್ತು ಹ್ಯುತಿ (ಆರ್ಟಿಸನ್) ಎನ್ನುವ ವರ್ಗ ವ್ಯವಸ್ಥೆ ಇದೆ. ನಮ್ಮಲ್ಲಿ ಇದನ್ನು ಕಲ್ಪಿಸಿಕೊಂಡರೆ ಪುರೋಹಿತ ಅಥವಾ ಬ್ರಾಹ್ಮಣ (ಅಥ್ರವಾನ್ಸ್), ಕ್ಷತ್ರಿಯ  (ರಥೈಸ್ತಾ), ವೈಶ್ಯ  (ವಸ್ತ್ರಿಯಾ) ಮತ್ತು ಶೂದ್ರ (ಹ್ಯುತಿ) ಎಂದು ಅರ್ಥೈಸಿಕೊಳ್ಳಬಹುದು.  ಆದಿ ಕಾಲದ ಇರಾನಿಯನ್ ವ್ಯವಸ್ಥೆ ಹೀಗೇ ಇತ್ತು. ಅದೇ ನಾಲ್ಕು ವರ್ಗಗಳು ಭಾರತದಲ್ಲೂ ಈಗಲೂ ಚಾಲ್ತಿಯಲ್ಲಿವೆ. ಹೀಗೆ ಒಂದು ಇರಾನ್ ಸಂಬಂಧ ಭಾರತಕ್ಕಿದೆ. ಚರ್ಮದ ಬಣ್ಣ, ನಯ ನಾಜೂಕು, ಕಣ್ಣು, ಬುದ್ಧಿವಂತಿಕೆಯನ್ನು ಹೋಲಿಸಿದರೆ ಭಾರತದ ಅದರಲ್ಲೂ ಉತ್ತರ ಭಾರತದ ಕಾಶ್ಮೀರಿ ಪಂಡಿತರು, ಉತ್ತರ ಪ್ರದೇಶದ ಪಂಡಿತ್, ಚಿತ್ಪಾವನ ಬ್ರಾಹ್ಮಣರು, ನಮ್ಮ ಕರಾವಳಿ ಮತ್ತು ಉತ್ತರ ಕನ್ನಡದ ಹವ್ಯಕರು ಹೆಚ್ಚೂ ಕಮ್ಮಿ ಇರಾನಿಗಳನ್ನು ಹೋಲುತ್ತಾರೆ (ಮೇಲ್ನೋಟಕ್ಕೆ).  ಬಹುಶಃ ಹೀಗೂ ಆಗಿರಬಹುದು, ಆಗ ಇರಾನ್ ನಲ್ಲಿ ಕ್ರೈಸ್ತ ಮತ್ತು ಇಸ್ಲಾಂ ಮುಂಚೆಯೂ ಹಲವಾರು ಸುಧಾರಣಾವಾದಿಗಳ ಅಥವಾ ಬಂಡುಕೋರರ

"ಮಣೆಗಾರ" ಬಸಿದಿಟ್ಟ ಒಡಲಾಳದ ನೋವು ನೆನೆದು...

ಹಾಲ್ಕುರಿಕೆ ಥಿಯೇಟರ್ ಕಾನ್ಸೆಪ್ಟ್ ಕನ್ನಡ ರಂಗಭೂಮಿಯಲ್ಲಿ ಹೊಸದೊಂದು ಸಂಚಲನವನ್ನುಂಟು ಮಾಡುತ್ತಿದೆ. ಒಟ್ಟಾರೆ ಭಾರತೀಯ ರಂಗಭೂಮಿ ಕಾಣುತ್ತಿರುವ ಹೊಸತನಕ್ಕೆ ಇದು ಮುಖ್ಯವಾದ ಸಾಕ್ಷಿ. ಅತ್ಯಂತ ಕ್ರಿಯಾಶೀಲ ತುಡಿತದ ರಂಗಕರ್ಮಿ ಹಾಲ್ಕುರಿಕೆ ಶಿವಶಂಕರ (ನಿರ್ದೇಶಕ/ನಾಟಕಕಾರ) ಇತ್ತೀಚೆಗೆ "ಮಣೆಗಾರ" (ತುಂಬಾಡಿ ರಾಮಯ್ಯನವರ ಆತ್ಮಕಥೆ) ಎನ್ನುವ ದಲಿತ ಕಥಾನಕವೊಂದನ್ನು ರಂಗದ ಮೇಲೆ ಅನಾವರಣಗೊಳಿಸಿದರು. ಪ್ರಯೋಗದ ದೃಷ್ಟಿಯಿಂದ ಕೆಲವು ಕೊರತೆಗಳು, ದೋಷಗಳು ಇವೆ. ಅದು ಯಾವುದೇ ಪ್ರಯೋಗಕ್ಕೆ ಇರುವಂಥವೇ. ಆದರೆ ಸಮುದಾಯವೊಂದರ ಒಡಲಾಳದ ನೋವನ್ನು ರಂಗದ ಮೇಲೆ ಬಸಿದಿಟ್ಟಾಗ  ಬೆಚ್ಚಿ ಬೀಳುವಂತಾಯಿತು. ವಿಶೇಷವಾಗಿ ದಲಿತೇತರಲ್ಲಿ ಸಾಮಾಜಿಕ ಪ್ರಜ್ಞೆ, ಜವಾಬ್ದಾರಿಯನ್ನು ಬಡಿದೆಬ್ಬಿಸುವಂಥ ಕಥಾನಕವದು. "ಮಣೆಗಾರ" ಪ್ರೊಸಿನಿಯಂಗಿಂತ ಆಪ್ತರಂಗಭೂಮಿಗೆ ಸೂಕ್ತವಾದ ವಸ್ತು. ಪ್ರಯೋಗ ಒಟ್ಟಾರೆ ಮನುಷ್ಯ ಬದುಕಿನ ನಡುವಿರುವ ಗ್ರೇ ಏರಿಯಾವೊಂದರ ದರುಶನ ಮಾಡಿಸಿತು. ಮೇಲ್ವರ್ಗ ಸಹಮಾನವರನ್ನು ಅದು ಹೇಗೆ ಅಸ್ಪೃಶ್ಯರು ಎಂದು ದೂರಕ್ಕಿಟ್ಟಿತ್ತು, ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿತ್ತು ಎನ್ನುವುದು ಇದರ ಮೂಲ ಸಂಕಟ. ಇಡೀ ನಾಟಕದಲ್ಲಿ ಬದುಕಿಗಾಗೇ ಸಂಘರ್ಷವಿದೆ. ಆಹಾರಕ್ಕಾಗಿ ಹಾಹಾಕಾರವಿದೆ. socio-cultural  ನೆಲೆಯಲ್ಲಿ ದೊಡ್ಡ ಸಂಘರ್ಷವಿದೆ. ಇದು ರಾಜಕೀಯ ಆಯಾಮದಲ್ಲೂ ಬಹುಮುಖ್ಯವಾದ ಸಂಘರ್ಷವೇ. ಶಿಕ್ಷಣ ಮತ್ತು ಅದರ ಆಧಾರದಲ್ಲಿ ಹುಟ

"ಬದುಕು-ಬಯಲು" ನಾಟಕ ಮತ್ತು ಮಾನವೀಯ ನೆಲೆಯ ಹುಡುಕಾಟ

ಫ್ರಾನ್ಸ್ ನ ಬರಹಗಾರ ಅಲ್ಫ್ರೆಡ್ ಜೆರಿ ಬರೆದ 'ದಿ ಸೂಪರ್ ಮೇಲ್' ಎನ್ನುವ ಕಾದಂಬರಿಯ ಪ್ರೊಟಗಾನಿಸ್ಟ್ ಆ್ಯಂಡ್ರಿ ಮಾರ್ಕೆಲ್ ಒಬ್ಬ ಜಂಟಲ್ ಮನ್, ವಿಜ್ಞಾನಿ ಕೂಡ. ಅವನಿಗೆ ಮಾನವ ಸಾಮರ್ಥ್ಯಕ್ಕೆ ಮಿತಿ ಎಂಬುದೇ ಇಲ್ಲ ಎನ್ನುವುದರಲ್ಲಿ ಬಲವಾದ ನಂಬಿಕೆ. ಆತ ಉಗಿಬಂಡಿ ಜತೆಗೂ ಯಾವುದೇ ವಿಶ್ರಾಂತಿ ಮತ್ತು ತ್ರಾಸಿಲ್ಲದೇ ಕ್ರಮಿಸಿ  ರೇಸ್ ಗೆಲ್ಲಬಲ್ಲ (ಕಾದಂಬರಿಯಲ್ಲಿ ರೈಲು ಮತ್ತು ಸೈಕ್ಲಿಸ್ಟ್ ನಡುವೆ ಒಂದು ರೇಸ್ ನಡೆಯುತ್ತದೆ). ಒಂದೇ ಹೆಂಗಸಿನ ಜತೆ 24 ಗಂಟೆಗಳಲ್ಲಿ 82 ಬಾರಿ ಸಂಭೋಗ ನಡೆಸಬಲ್ಲ 'ಕಾಮಪಟುತ್ವ'ದ ಸಾಹಸಗಳನ್ನೂ ಮಾಡಬಲ್ಲ. ಇದನ್ನು ಪುರುಷಪರಾಕ್ರಮದ ನೆಲೆಯಲ್ಲಿ ನೋಡೋದಾ? ಇಲ್ಲಾ ನಿಸರ್ಗ ಸಹಜ ಸಾಧ್ಯತೆಯ ನೆಲೆಯಲ್ಲಿ ನೋಡುವುದಾ?... - ಇದು ಒಂದು ರೀತಿಯ ವಿಕ್ಷಿಪ್ತ ಮನೋಧರ್ಮದ, ಸೈನ್ಸ್ ಫಿಕ್ಷನ್ ಕಾದಂಬರಿಯ ಸಂಕ್ಷಿಪ್ತ ನೋಟ. ಅಲ್ಫ್ರೆಡ್ ಜೆರಿ ಉತ್ತಮ ನಾಟಕಕಾರನೂ ಹೌದು. ಆತನ 'ಉಬು ರೊಯ್' ಹೆಸರಾಂತ ನಾಟಕಗಳಲ್ಲೊಂದು.    * * * ಜೆರಿ ಬಗ್ಗೆ ಓದುತ್ತಿದ್ದ ಹೊತ್ತಲ್ಲಿ ಹಿಜಡಾವೊಬ್ಬರ ಆತ್ಮಕಥನ ಆಧರಿಸಿದ "ಬದುಕು-ಬಯಲು" ಎನ್ನುವ ನಾಟಕ ವೀಕ್ಷಣೆಗೆ ತಿಪಟೂರಿನ ರಂಗ ಗೆಳೆಯ ನೀನಾಸಂ ಚಂದ್ರು ಆಹ್ವಾನ ನೀಡಿದರು.  ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ ನೋಡಿದೆ. ಅದಕ್ಕೂ ಮುಂಚೆ ನಾಟಕದ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಸಿ.ಎಸ್. ದ್ವಾರಕಾನಾಥ್, ಗೌರಿ ಲಂಕೇಶ್ ಮತ್ತಿತರ ಚಿಂತಕರ ವಿ