ವಿಷಯಕ್ಕೆ ಹೋಗಿ

‘ಪಲ್ಲಟ’ ಒಂದು ಪ್ರಾಮಾಣಿಕ ಪ್ರಯತ್ನ

  (ಇನ್ನೂ ತೆರೆ ಕಾಣದ ‘ಪಲ್ಲಟ’ ಕನ್ನಡ ಸಿನಿಮಾದ ಪ್ರೀಮಿಯರ್‌ ಶೋ ಬಗ್ಗೆ)

ಸಿನಿಮಾದ ಸೊಗಸೇ ಅಂಥದು. ಯಂತ್ರಗಳಿಂದ ಸೆರೆ ಹಿಡಿದ ಬದುಕು ತೆರೆಯ ಮೇಲೆ ಬಾಳುವಾಗ ಆ ಕ್ಷಣಕ್ಕೆ ಎಲ್ಲ ಹೊಸತೇ ಆಗಿ ಕಾಣಿಸುತ್ತದೆ. ಗತ ಬದುಕು ಹೊಸ ಬದುಕಿನಂತೆ ಹೊಳೆಯುತ್ತದೆ. ಪರದೆ ಮೇಲಿನ ಮೂರು ಗಂಟೆಯ ಬಾಳಲ್ಲಿ ಪ್ರೇಕ್ಷಕ ಅದರ ಅಸಲಿ ನೋವು, ನಲಿವುಗಳ ಬದುಕಿಗಿಳಿಯುತ್ತ ಮೆಲ್ಲಗೆ ಅದರ ಒಟ್ಟು ಹರವಿನಗುಂಟ ಸಾಗಬಹುದು. ಆ ಪುಟ್ಟ ಜರ್ನಿಯಲ್ಲಿ  ಅವನೊಳಗಿನ ಬದುಕಿಗೆ ಹೊಸ ಕಣ್ಣುಗಳು ಮೂಡಬಹುದು. ಅಂತಃಕರಣದ ಸೆಲೆಗಳು ಮತ್ತಷ್ಟು ಜಿನುಗಬಹುದು. ಸಿನಿಮಾದ ಸಾಧ್ಯತೆಗಳು, ಪರಿಣಾಮಗಳು ಹಲವು. ಸಿನಿಮಾಗೆ ಅದರ ಅಂತಃಸತ್ವ ಮುಖ್ಯ. ನೋಡಿ ತಿಳಿವ ಪ್ರಾಸೆಸ್‌ ಇದಾದ್ದರಿಂದ ವಿಶ್ಯುಯಲ್‌ ಟ್ರೀಟಮೆಂಟ್‌ ಕೂಡ ಮುಖ್ಯ.
 ‘ಪಲ್ಲಟ’ ಕನ್ನಡ ಸಿನಿಮಾದ ವಸ್ತು  ಸ್ಥಳೀಯ ಸಂಸ್ಕೃತಿಗಳ ಸ್ಥಿತ್ಯಂತರ ಹೇಗೆ ನಿಜ ಜೀವನದಲ್ಲಿ ಕೆಲವರ ಬದುಕನ್ನೇ ಮುಗಿಸಿಬಿಡುತ್ತದೆ ಎನ್ನುವುದು. ಇದು ಅಮಾನವೀಯ ಎನ್ನುವುದು ಚಿತ್ರದ ಒಳದನಿ. ಬಹುಕಾಲ ನಿಲ್ಲಬಲ್ಲ ಮತ್ತು ಕಾಡಬಲ್ಲ ಸಿನಿಮಾ ಆಗುವ ಅವಕಾಶವನ್ನು ಇದು ಸ್ವಲ್ಪದರಲ್ಲಿಯೇ ಕಳಕೊಂಡಿದೆ. ಇದರಾಚೆಗೂ ಚಿತ್ರ ಕೆಲವು ವಿಚಾರಗಳಿಗೆ ಸಂಬಂಧಿಸಿ ಚರ್ಚೆಗೆ ಯೋಗ್ಯವಾಗಿದೆ.
ನಾಗರಿಕತೆ ಎಂಬುದು ಜನರೇ ಸೃಜಿಸಿಕೊಂಡಿದ್ದು. ಆಯಾ ಜನಪ್ರದೇಶಗಳಲ್ಲಿ ಕಾಲದ ಅಗತ್ಯಗಳಿಗೆ ತಕ್ಕುದಾದ ವ್ಯವಸ್ಥೆಯೊಂದು ರೂಪುಗೊಂಡಿರುತ್ತದೆ. ಕೆಲವು ಸಾವಯವವಾಗಿ ಮತ್ತೆ ಕೆಲವೊಂದು ಪ್ರಜ್ಞಾಪೂರ್ವಕವಾಗಿ ಬೆಳೆಸಿಕೊಂಡು ಬಂದ ಪದ್ಧತಿಗಳು ಇದರೊಳಗೆ ಹಾಸುಹೊಕ್ಕಾಗಿರುತ್ತವೆ. ಸಂಸ್ಕೃತಿ, ಆಚರಣೆಗಳೆಲ್ಲವೂ ಇವುಗಳ ಒಂದು ಭಾಗ. ಕೆಲವು ಅನಿಷ್ಠ (ಜಾತಿಪದ್ಧತಿ) ಮತ್ತು ಕೆಲವು ಜೀವಪರ. ’ಪಲ್ಲಟ’ ಚಿತ್ರದಲ್ಲಿ ಆಯ ಎನ್ನುವುದು ಒಂದು ಪದ್ಧತಿ. ಒಂದೊಂದು ಸೇವೆಗೆ (ಕಸುಬು) ಇಂತಿಷ್ಟು ಸೇವಾ ಶುಲ್ಕ ಅದೂ ವರ್ಷಕ್ಕೊಮ್ಮೆ ಎನ್ನುವುದು ರಿವಾಜು. ಚಿತ್ರದ ನಾಯಕ ಪಾತ್ರ ರೂಢಿಗತವಾಗಿ ಇದನ್ನೇ ನಂಬಿ ಬದುಕುವಂಥದು. ಆತನ ಬದುಕು ಹಳ್ಳಿಯೊಂದರ ಜನಸಂಸ್ಕೃತಿಯ ಆಚರಣೆಗಳ ಆಧಾರದಲ್ಲೇ ಬಾಳಿಕೊಂಡು ಬಂದಿದ್ದು. ಜನಸಂಸ್ಕೃತಿ ದೊಡ್ಡ ಬದಲಾವಣೆಗೆ ತೆರಕೊಳ್ಳುವ ಉಮೇದಿಗೆ ಬಿದ್ದಾಗ ಬದುಕಿನಾಸರೆ ಕಳೆದು ಹೋಗಿ ಆತ ಕಾಣುವ ದಾರುಣ ಸ್ಥಿತಿಯನ್ನು ಚಿತ್ರ ಪ್ರಮುಖವಾಗಿ ಕಟ್ಟಿಕೊಡಲು ಯತ್ನಿಸಿದೆ.
 ಈ ಯತ್ನ ಅತ್ಯಂತ ಪ್ರಾಮಾಣಿಕ ಮತ್ತು ಪ್ರಾಂಜಲ ಮನಸ್ಥಿತಿಯಿಂದ ಕೂಡಿದೆ ಎನ್ನುವುದು ಚಿತ್ರಣದಿಂದಲೇ ಮನದಟ್ಟಾಗುತ್ತದೆ. ಮೇಕಿಂಗ್‌ ದೃಷ್ಟಿಯಿಂದ ಅಚ್ಚುಕಟ್ಟಾಗಿದೆ. ನಿರ್ದೇಶಕ ರಘು ಎಸ್‌.ಪಿ ಅವರ ಮೊದಲ ಯತ್ನದ ಚಿತ್ರವಿದು ಅಂತ ಎಲ್ಲೂ ಅನ್ನಿಸುವುದಿಲ್ಲ ಮತ್ತು ಅದು ಅಷ್ಟು ಮುಖ್ಯವೂ ಅಲ್ಲ. ಚಿತ್ರ ಅನುಭವಿ ನಿರ್ದೇಶಕನ ಪ್ರಸ್ತುತಿಯಂತಿದೆ. ಅನುಭವಿ ಎಂ.ಎನ್‌. ಸ್ವಾಮಿಯವರ ಸಂಕಲನ ಹದವಾಗಿದೆ. ಧ್ವನಿಗ್ರಹಣ (ಸಿಂಕ್‌ ಸೌಂಡ್‌– ಇಮ್ತಿಯಾಜ್‌ ಜುಮ್ನಾಲಕರ್‌) ಅದ್ಭುತವಾಗಿದೆ. ಸಿನಿಮಾಟೊಗ್ರಫಿ ಕೂಡ ತನ್ನ ಮಿತಿಯೊಳಗೆ ಇದರ ಒಟ್ಟು ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸಿದೆ. ಇದು ಸಿನಿಮಾಟೊಗ್ರಾಫರ್‌ ಲೋಕೇಶ್‌ ಮೊಸಳೆ ಅವರ ಮೊದಲ ಯತ್ನವೂ ಹೌದು. ಸೂಕ್ಷ್ಮ ಸಂವೇದನೆಯ ಸಂಭಾಷಣೆಗಳು ಚಿತ್ರದ ತೂಕವನ್ನು ಹೆಚ್ಚಿಸಿವೆ. ನಾಡಿನ ಪ್ರಮುಖ ಕವಿ ಆಲೂರು ದೊಡ್ಡನಿಂಗಪ್ಪ ಅವರಿಗೂ ಸಂಭಾಷಣಾಕಾರರಾಗಿ ಇದು ಮೊದಲ ಯತ್ನ. ಅಭಿಜಿತ್‌ ಉನ್ನಿ ಸಂಗೀತ ತಕ್ಕ ಸಾಥ್‌ ನೀಡಲೆತ್ನಿಸಿದೆ. ಚಿತ್ರದುದ್ದಕ್ಕೂ ಇಂಥ ತಾಜಾತನದ ಮಜವಿದೆ.
* * *
  ಯಾವುದೇ ಪ್ರದೇಶದ ಬದುಕಿನ ಅಳು, ನಗು, ಹಸಿವು, ಗೋಳು, ದಾರುಣ ಹೆಚ್ಚೂ ಕಮ್ಮಿ ಒಂದೇ. ಅದಕ್ಕೆ ಕಾರಣಗಳು ಮತ್ತು ಅದನ್ನು ಪಡಕೊಳ್ಳುವ, ಹೊಂದುವ ಯಾ ಎದುರಿಸುವ ಸ್ಥಿತಿ ಆಯಾ ಕಾಲ, ಸಾಮಾಜಿಕ ಪರಿಸರ ಮತ್ತು ಸಂದರ್ಭಗಳನ್ನು ಅವಲಂಭಿಸಿರುತ್ತದೆ. ಬಡತನ ಶಾಪ ಎನ್ನುವ ಕರ್ಮಠವೇ ಗ್ರಾಮಪ್ರದೇಶದ ಕೆಲವರ ಬದುಕಿನ ದಾರುಣ ಸ್ಥಿತಿಗೆ ಬಲವಾದ ಕಾರಣ.  ಅದನ್ನು ಮೀರುವುದಕ್ಕೆ ರಾಜಕೀಯ ಅರ್ಥನೀತಿ, ಸಾಮಾಜಿಕ ನ್ಯಾಯದ ಪರಿಕಲ್ಪನೆ ಬೇಕು. ಗ್ರಾಮ ರಾಜಕೀಯದಲ್ಲಿ ಇದೆಲ್ಲ ವೈಜ್ಞಾನಿಕವಾಗಿ ಜಾರಿಗೊಳ್ಳುವ ಅವಕಾಶಗಳು ಕಮ್ಮಿ. ಮುಂಚೆ ಇದು ಸ್ಥಳೀಯ ಆಡಳಿತಗಾರನ ವೈಯಕ್ತಿಕ ಸಾತ್ವಿಕತೆ, ಮಾನವೀಯತೆಯನ್ನು ಆಧರಿಸಿತ್ತು. ಪಂಚಾಯತ ರಾಜ್ ವ್ಯವಸ್ಥೆ  ಸರಿಪಡಿಸುವ ಯತ್ನವನ್ನೇನೋ ಮಾಡಿತು. ಸೋಲು ಕಂಡಿತು. ಈಗಿನ ಗ್ರಾಮ, ತಾಲ್ಲೂಕು, ಜಿಲ್ಲಾ ಪಂಚಾಯತ ರಾಜಕಾರಣ ಹಾದಿ ತಪ್ಪಿದೆ. ಆ ಮಾತು ಬೇರೆ.
ಸಾಮಾನ್ಯವಾಗಿ ನಮ್ಮ ಸಿನೆಮಾಗಳಲ್ಲಿ ಚಿತ್ರಿಸುವಂತೆ ನಾಗರಿಕತೆ ಮತ್ತು ಬಡತನವನ್ನು ನಾವು ರೋಮ್ಯಾಂಟಿಕ್‌ ನೆಲೆಯಲ್ಲೇ ಕಾಣಬೇಕಿಲ್ಲ. ಅದನ್ನು ಸಮಾಜೋ–ವೈಜ್ಞಾನಿಕ ನೆಲೆಯಲ್ಲಿ ಗ್ರಹಿಸುವುದು ಅಗತ್ಯ.  ಒಂದು ಪರಿಪೂರ್ಣ ನಾಗರಿಕತೆ ಎನ್ನುವುದು ಇನ್ನೂ ಎಲ್ಲೂ ಬೆಳೆದು ನಿಂತಿಲ್ಲ. ಅದು ನಿರಂತರ ಪ್ರಕ್ರಿಯೆ. ಹಾಗಾದಾಗ ಸ್ಥಿತ್ಯಂತರ ಸಹಜ ಎಂದೇ ಭಾವಿಸಬೇಕಾಗುತ್ತದೆ. ಬದಲಾವಣೆ ಜಗದ ನಿಯಮ. ‘ಚೇಂಜ್‌ ಈಸ್‌ ಪರ್ಮನೆಂಟ್‌’ ಎಂದೂ ಹೇಳುತ್ತಾರೆ.
  ಕಥಾನಾಯಕನ ಸಾವಿನ ದೃಶ್ಯದಿಂದ ಚಿತ್ರ ಶುರುವಾಗುತ್ತದೆ. ಇಲ್ಲಿ ಅಂತ್ಯಸಂಸ್ಕಾರ ಕೂಡ ಭಿನ್ನ. ಕಲ್ಲುಬಾನ ಅಥವಾ ಕಲ್ಬಾನ ಎನ್ನುವ ಒಂದು ಶವಸಂಸ್ಕಾರ ಪದ್ಧತಿಯ ಚಿತ್ರಣ ಇಂಟರೆಸ್ಟಿಂಗ್‌ ಆಗಿದೆ. ಇದು ಮನ ಕಲಕುವಂಥದು. ಕೆಳವರ್ಗದವರು ಅಥವಾ ಅಸ್ಪೃಶ್ಯರ ಸಾವಾದಾಗ ಹೂಳುವುದಕ್ಕೆ ಅವರಿಗೆ ಮಣ್ಣು ಕೂಡ ನಸೀಬಿಲ್ಲ! ಏಕೆಂದರೆ ಅವರಿಗೆ ಭೂಮಿ ಮೇಲೆ ಹಕ್ಕಿಲ್ಲ. ಸುಡಲು ಕಟ್ಟಿಗೆ ಬೇಕು. ಆದರೆ ಅದನ್ನು ಕೊಳ್ಳುವ ಆರ್ಥಿಕ ಸಾಮರ್ಥ್ಯ ದಕ್ಕದ ಹಾಗೆ ಜಾತಿ ವ್ಯವಸ್ಥೆ ನೋಡಿಕೊಂಡಿದೆ. ಹೀಗಾಗಿ ಹೆಣವನ್ನು ದೂರ ಗುಡ್ಡದ ಮೇಲೆ ಕಲ್ಲುಬಂಡೆಗಳ ನಡುವೆ ಇಟ್ಟು ಸುತ್ತ ಕಲ್ಲುಗಳನ್ನು ಒಟ್ಟಿಬಿಡುತ್ತಾರೆ. ಹದ್ದು ಕಾಗೆಗಳು ತಿಂದು ಹಾಕಲಿ ಎಂದು. ಅದರ ಬಳಿ ಒಂದಷ್ಟು ನೀರು ಕೂಡ ಇಟ್ಟು ಬರುತ್ತಾರೆ. ಅಷ್ಟೇ. ಇದು ಕಲ್ಬಾನ. ಒಂದು ಸಂಸ್ಕಾರದಂತೆ ಇದೆಲ್ಲ ಚಿತ್ರಿತವಾಗಿದ್ದರಿಂದ ಅದರ ಹಿನ್ನೆಲೆ ಮತ್ತದರ ಅಮಾನವೀಯ ಮುಖ ಇನ್ನೂ ಸ್ಪಷ್ಟವಾಗಬೇಕಿತ್ತು. ಮುಖ್ಯವಾಗಿ ಇದು ಕಾಡುವಂಥ ವಿಷಯ. ಇಲ್ಲಿ ಅದು ಕಾಡಲಿಲ್ಲ. ಇಡೀ ಚಿತ್ರಣಕ್ಕೆ ಇಂಥದೊಂದು ಧ್ವನಿ ದಕ್ಕಿದ್ದರೆ...
  ಪಲ್ಲಟದ ಮುಖ್ಯ ಪ್ಲಾಟ್‌ನಲ್ಲಿ ಊರೊಂದು  ಸ್ಥಳೀಯವಾದ ಆಡಳಿತ ಸಮಸ್ಯೆಯ ಕಾರಣಕ್ಕೆ ಆಯ ಕೊಡುವುದನ್ನು ನಿಲ್ಲಿಸಿಬಿಡುತ್ತದೆ. ಹಳೆಯ ಪದ್ಧತಿಗಳನ್ನು ಮುಂದುವರಿಸಿಕೊಂಡು ಹೋಗಬೇಕೆನ್ನುವ ಊರ ಪ್ರಮುಖ ಮತ್ತು ಹೊಸತನ ಬಯಸುವ ಹುಡುಗರ ನಡುವೆ ಸಂಘರ್ಷ ಭುಗಿಲೇಳುತ್ತದೆ. ಊರ ಪ್ರಮುಖ ಒಳ್ಳೆಯವನಂತೆಯೇ ಇದ್ದಾನೆ. ಊರ ಯುವಕರು ಹೊಸ ಬದುಕಿಗೆ ಹಾತೊರೆಯುತ್ತಿದ್ದಾರೆ. ಅವರಿಗೆ ಊರಿನ ಆಡಳಿತ ಮತ್ತು ಆಚರಣೆಗಳಲ್ಲಿ ಹೊಸತನ ತರುವ ಉಮೇದಿ. ಅವರು ಯಾರನ್ನೋ ಸರ್ವನಾಶ ಮಾಡಲೇಬೇಕು ಎಂದು ಪಣತೊಟ್ಟು ನಿಂತವರೇನಲ್ಲ. ಆ ಭರಾಟೆಯಲ್ಲಿ ಅವರಿಗೆ ಸಾಮಾಜಿಕ ನ್ಯಾಯದ ಪರಿಕಲ್ಪನೆ ಅರಿವಿಗೇ ಬರುವುದಿಲ್ಲ. ಈ ಹುಡುಗರ ಪೈಕಿ ಒಬ್ಬನಿಗೆ ತನ್ನ ಮಗಳನ್ನು ಗೊತ್ತು ಮಾಡಿದ ಊರ ಪ್ರಮುಖ ಅಸಹಾಯಕ. ಯಾವುದೇ ರೂಪದ ಅಸಹಾಯಕತೆಗಳು ಆಡಳಿತವನ್ನು ದುರ್ಬಲಗೊಳಿಸಿಬಿಡುತ್ತವೆ. ಅದರ ಪ್ರಜಾಸತ್ತಾತ್ಮಕ ನ್ಯಾಯದ ಮುಖವನ್ನೂ ಮುಚ್ಚಿಬಿಡುತ್ತವೆ ಅಲ್ಲವೇ?

   ಊರ ದೇವಿ ಜಾತ್ರೆ ಸನ್ನಿವೇಶ ಈ ಚಿತ್ರದ ಪ್ರಮುಖ ಘಟ್ಟ. ಊರಿನ ಯಾವುದೇ ಶುಭ ಕಾರ್ಯಗಳಿಗೆ ತಮಟೆ ಬಾರಿಸುತ್ತಿದ್ದ ಚಿತ್ರದ ಕಥಾನಾಯಕನಿಗೆ ಹುಡುಗರ ನೇತೃತ್ವದ ಜಾತ್ರೆಯಲ್ಲಿ ಅವಮಾನವಾಗುತ್ತದೆ. ಹುಡುಗರಿಗೆ ಅದೇ ಹಲಗೆ, ಪಟ ಕುಣಿತ, ಸೋಮನ ಕುಣಿತ ಬೇಡವಾಗಿ ದಾಂಡಿಯ ರಸ, ಡಿಜೆ ಇಂಥೆಲ್ಲ ಹೊಸ ಬಗೆಯ ಮನರಂಜನೆ ಬೇಕಿದೆ. ಇದರಿಂದ ಜಾತ್ರೆಯಲ್ಲಿ ಕಥಾನಾಯಕನ ತಮಟೆಗೆ ಅವಕಾಶ ಕಮ್ಮಿ. ಆದರೂ ಹೊಟ್ಟೆಪಾಡು ಅದಕ್ಕೆ ಸಂಬಂಧಿಸಿದ ತತ್ವ, ಬದ್ಧತೆಗಳನ್ನು ಬಿಟ್ಟುಕೊಡದೇ  ಹೊಸ ಸವಾಲಿನ ಜೊತೆ ಪೈಪೋಟಿಗಿಳಿಯುತ್ತಾನೆ. ಮೇಳ ಸಾರಾಸಗಟಾಗಿ ನಿರಾಕರಿಸಿದಾಗ ಊರ ಪ್ರಮುಖ, ಹುಡುಗರು ಮತ್ತು ಸಾರ್ವಜನಿಕರು ಆಕ್ಷೇಪಿಸುವುದಿಲ್ಲ. ಬದಲು ಊರ ಪ್ರಮುಖ ಆತನನ್ನೇ ತಳ್ಳಿದಾಗ ತೀವ್ರ ಅವಮಾನಿತನಾಗುತ್ತಾನೆ. ಅವಮಾನ ಹೃದಯದ ತಮಟೆ ಸದ್ದನ್ನೇ ಮುಗಿಸಿಬಿಡುತ್ತದೆ. ಇವನ ನಂಬಿ ಬದುಕುತ್ತಿದ್ದ ಮತ್ತು ಹೊಸ ಬದುಕಿನ ದಾರಿಯ ಹಂಬಲದ ಕಾಲೇಜು ಓದಿನ ಮಗಳು ತಬ್ಬಲಿಯಾಗುತ್ತಾಳೆ.
ಯಾವುದೇ ಅಭಿವೃದ್ಧಿ ಅಥವಾ ಬದಲಾವಣೆ ಎಲ್ಲರನ್ನು ಒಳಗೊಳ್ಳದೇ exclusiveness ಅಷ್ಟನ್ನೇ ಮೈಗೂಡಿಸಿಕೊಂಡರೆ ದುರ್ಬಲರು ಮುಗಿದೇ ಹೋಗುತ್ತಾರೆ ಎನ್ನುವುದಕ್ಕೆ ಇದೊಂದು ರೂಪಕ. ಚಿತ್ರ ಇಷ್ಟನ್ನು ಕಟ್ಟಿಕೊಡುವುದರ ನಡುವೆ ಇನ್ನೂ ಕೆಲವು ಸೂಕ್ಷ್ಮಗಳನ್ನು ತನ್ನೊಳಕ್ಕಿಳಿಸಿಕೊಳ್ಳಬಹುದಿತ್ತು.
  ಬಡತನದ ದಾರುಣ ಸ್ಥಿತಿಯಿಂದ ಹೊರಬರಲು ಶಿಕ್ಷಣವೇ ಸರಿಯಾದ ಮಾರ್ಗ ಎಂದುಕೊಂಡ ಮತ್ತದನ್ನು ಸಾಧಿಸುವುದಕ್ಕೆ ತನ್ನ ಮಿತಿಯೊಳಗೆ ಸಾಕಷ್ಟು ಹೆಣಗುವ ಮಗಳ ಪಾತ್ರದಲ್ಲಿ ಅಕ್ಷತಾ ಪಾಂಡವಪುರ ಅಭಿನಯ ಉತ್ತಮ. ನಟನೆಯ ದೃಷ್ಟಿಯಿಂದ ತಕ್ಕ ಮಟ್ಟಿಗೆ ಪಾತ್ರದ ಆಳಕ್ಕಿಳಿಯುವ ಯತ್ನ ಮಾಡಿದ್ದಾರೆ. ಭರವಸೆ ಹುಟ್ಟಿಸಬಲ್ಲ ಅಭಿನೇತ್ರಿ. ಕಥಾನಾಯಕನಾಗಿ ಅನಿಲ್‌  ಅನುಭವಿ ನಟ. ಅವರು ತಮ್ಮ ಪಾತ್ರವನ್ನು ನಿಭಾಯಿಸಿದ ಪರಿ, ಅಭಿನಯ ಮೆಚ್ಚುಗೆಯಾಯಿತು. ಆದರೆ ಪಾತ್ರದ ಆಳಕ್ಕೆ ಇನ್ನೂ ಇಳಿಯಬಹುದಿತ್ತು. ಕಥಾನಾಯಕ ಆಯವನ್ನೇ ನಂಬಿ ಬದುಕಿದರೂ ಸಹಜ ಮೌಲ್ಯಯುತ ಬಾಳಿನ ಹಂಬಲದವನು. ನ್ಯಾಯ, ನೀತಿಗಳ ನಂಬುವವನು. ಅದಕ್ಕೆ ಬದ್ಧತೆಗಳನ್ನು ಅಷ್ಟೇ ಸಹಜವಾಗಿ ಮೈಗೂಡಿಸಿಕೊಂಡಿದ್ದವನು, ಮಗಳ ಜವಾಬ್ದಾರಿ ಇದ್ದರೂ ಸರಳ ಬದುಕಿನ ಹಂಬಲದಿಂದ ವಿಚಲಿತನಾಗುವಂಥವನಲ್ಲ ಎನ್ನುವ ಆ ಪಾತ್ರದ ಒಟ್ಟು ಭಾವಸಾಂದ್ರತೆ ಇನ್ನೂ ಅರ್ಥಪೂರ್ಣವಾಗಿ ಧ್ವನಿಸಬಹುದಿತ್ತು. ಉಳಿದಂತೆ ಮಂಜುನಾಥ ಪಿ, ಆಲೂರು ದೊಡ್ಡ ನಿಂಗಪ್ಪ, ರೋಹಿಣಿ, ಗೌಡನ ಪಾತ್ರಧಾರಿ ಮತ್ತಿತರರು ಅಭಿಯನದಲ್ಲಿ ಸಹಜತೆಯನ್ನು ಕಾಪಾಡಿಕೊಂಡಿದ್ದಾರೆ.




   ಅಲ್ಲಲ್ಲಿ ಚಿತ್ರಣ ತುಂಬ ಸಜೆಸ್ಟಿವ್‌ ಆಗಿದೆ. ಇಡೀ ಗ್ರಾಮ ಬದುಕು ಇನ್ನೂ ಸಾವಯವವಾಗಿ ಬೆಳೆಯಬಹುದಿತ್ತು. ಊರ ಪಡ್ಡೆ ಹುಡುಗರ ನಡುವಿನ ಆ ಅಂತಃಸಂಬಂಧ (ಅಂತ್ರಪಾಲಜಿ) ಉಳಿದ ಪಾತ್ರಗಳ ನಡುವೆ ಕಾಣಲಿಲ್ಲ.  ಇಡೀ ಊರು ಒಂದು ಕಥನಕ್ಕೆ ಸಾಕ್ಷಿಯಾಗಿ ನಿಂತಂತಿದೆ. ಅದನ್ನು ಬಳಸಿಕೊಂಡ ಬಗೆಯೂ ಚೆನ್ನಾಗಿದೆ. ಅದರೊಂದಿಗೆ ಗ್ರಾಮ ಬದುಕು ಸಹಜವಾಗಿ ಬಿಚ್ಚಿಕೊಂಡು, ಹರಡಿಕೊಂಡು ನಡುವೆ ಈ ಕಥೆ ಸಾಂದ್ರಗೊಳ್ಳುತ್ತ, ಮುಖ್ಯ ವಸ್ತುವಿನ ಕರುಳಬಳ್ಳಿ ಮೀಟುವ ಚಿತ್ರ ಯತ್ನ ಪ್ರಾಮಾಣಿಕವಾಗಿದೆ. ಸಿನಿಮಾ ನಿರ್ದೇಶಕನ ಮಾಧ್ಯಮ. ‘ಪಲ್ಲಟ’ದ ನಿರ್ದೇಶಕ ಗ್ರಾಮ ಬದುಕಿನ ಸಾಂಸ್ಕೃತಿಕ ಪಲ್ಲಟವನ್ನು ಸಹಜವಾಗಿ ಬಿಚ್ಚಿಡಲು ನೋಡಿದ್ದಾರೆ. ಲೋ ಪೇಸ್‌ ಅಲ್ಲೇ ಆಟವಾಡಲು ನೋಡಿದಂತಿದೆ. ಆದರೆ ಪ್ರೇಕ್ಷಕನಾಗಿ ನೋಡುವಾಗ ಯಾಕೊ ಪೇಸ್‌ ಕೊಂಚ ಮಂದ ಅನ್ನಿಸಿತು. ಒಟ್ಟಾರೆ ರಘು ಮತ್ತವರ ತಂಡದ ಯತ್ನ ಪ್ರಾಮಾಣಿಕವಾಗಿದೆ. ಚಿತ್ರದ ಒಂದು ಮಟ್ಟಿನ ಗೆಲುವಿಗೆ ಇದು ಸಾಕಷ್ಟು ನೆರವಾಗಿದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮನುಷ್ಯ ಜಾತಿ ತಾನೊಂದೇ ವಲಂ...

ಭಾರತದಲ್ಲಿ ಜಾತಿ ವ್ಯವಸ್ಥೆ ಹೇಗೆ ಹುಟ್ಟಿತು ಎಂಬುದಕ್ಕೆ ಯಾವುದೇ ನಿರ್ಧಿಷ್ಟ ಥಿಯರಿ ಇಲ್ಲ. ಆದರೆ, ಇಲ್ಲಿನ ವರ್ಗ ಸೃಷ್ಟಿ ಮಾತ್ರ ಇರಾನ್ ವ್ಯವಸ್ಥೆಯಂತೇ ಇದೆ.  ಪುರಾತನ ಇರಾನಿನ ಚರಿತ್ರೆಯಲ್ಲಿ ಇಂಥದೊಂದು ವ್ಯವಸ್ಥೆ ಇತ್ತು. ಅದಕ್ಕೆ ಪಿಸ್ತ್ರಾಸ್ ಎನ್ನುತ್ತಾರೆ. ನಮ್ಮಲ್ಲಿ ಅದು ಚಾತುರ್ವರ್ಣವಾಗಿದೆ. ಅಲ್ಲಿ ಅಥ್ರವಾನ್ಸ್ (ಪ್ರೀಸ್ಟ್ ಕ್ಲಾಸ್), ರಥೈಸ್ತಾ (ವಾರಿಯರ್ಸ್), ವಸ್ತ್ರಿಯಾ (ಮರ್ಕಂಟೈಲ್ ಕ್ಲಾಸ್) ಮತ್ತು ಹ್ಯುತಿ (ಆರ್ಟಿಸನ್) ಎನ್ನುವ ವರ್ಗ ವ್ಯವಸ್ಥೆ ಇದೆ. ನಮ್ಮಲ್ಲಿ ಇದನ್ನು ಕಲ್ಪಿಸಿಕೊಂಡರೆ ಪುರೋಹಿತ ಅಥವಾ ಬ್ರಾಹ್ಮಣ (ಅಥ್ರವಾನ್ಸ್), ಕ್ಷತ್ರಿಯ  (ರಥೈಸ್ತಾ), ವೈಶ್ಯ  (ವಸ್ತ್ರಿಯಾ) ಮತ್ತು ಶೂದ್ರ (ಹ್ಯುತಿ) ಎಂದು ಅರ್ಥೈಸಿಕೊಳ್ಳಬಹುದು.  ಆದಿ ಕಾಲದ ಇರಾನಿಯನ್ ವ್ಯವಸ್ಥೆ ಹೀಗೇ ಇತ್ತು. ಅದೇ ನಾಲ್ಕು ವರ್ಗಗಳು ಭಾರತದಲ್ಲೂ ಈಗಲೂ ಚಾಲ್ತಿಯಲ್ಲಿವೆ. ಹೀಗೆ ಒಂದು ಇರಾನ್ ಸಂಬಂಧ ಭಾರತಕ್ಕಿದೆ. ಚರ್ಮದ ಬಣ್ಣ, ನಯ ನಾಜೂಕು, ಕಣ್ಣು, ಬುದ್ಧಿವಂತಿಕೆಯನ್ನು ಹೋಲಿಸಿದರೆ ಭಾರತದ ಅದರಲ್ಲೂ ಉತ್ತರ ಭಾರತದ ಕಾಶ್ಮೀರಿ ಪಂಡಿತರು, ಉತ್ತರ ಪ್ರದೇಶದ ಪಂಡಿತ್, ಚಿತ್ಪಾವನ ಬ್ರಾಹ್ಮಣರು, ನಮ್ಮ ಕರಾವಳಿ ಮತ್ತು ಉತ್ತರ ಕನ್ನಡದ ಹವ್ಯಕರು ಹೆಚ್ಚೂ ಕಮ್ಮಿ ಇರಾನಿಗಳನ್ನು ಹೋಲುತ್ತಾರೆ (ಮೇಲ್ನೋಟಕ್ಕೆ).  ಬಹುಶಃ ಹೀಗೂ ಆಗಿರಬಹುದು, ಆಗ ಇರಾನ್ ನಲ್ಲಿ ಕ್ರೈಸ್ತ ಮತ್ತು ಇಸ್ಲಾಂ ಮುಂಚೆಯೂ ಹಲವಾರು ಸುಧಾರಣಾವಾದಿಗಳ ಅಥವಾ ಬಂಡುಕೋರರ

"ಮಣೆಗಾರ" ಬಸಿದಿಟ್ಟ ಒಡಲಾಳದ ನೋವು ನೆನೆದು...

ಹಾಲ್ಕುರಿಕೆ ಥಿಯೇಟರ್ ಕಾನ್ಸೆಪ್ಟ್ ಕನ್ನಡ ರಂಗಭೂಮಿಯಲ್ಲಿ ಹೊಸದೊಂದು ಸಂಚಲನವನ್ನುಂಟು ಮಾಡುತ್ತಿದೆ. ಒಟ್ಟಾರೆ ಭಾರತೀಯ ರಂಗಭೂಮಿ ಕಾಣುತ್ತಿರುವ ಹೊಸತನಕ್ಕೆ ಇದು ಮುಖ್ಯವಾದ ಸಾಕ್ಷಿ. ಅತ್ಯಂತ ಕ್ರಿಯಾಶೀಲ ತುಡಿತದ ರಂಗಕರ್ಮಿ ಹಾಲ್ಕುರಿಕೆ ಶಿವಶಂಕರ (ನಿರ್ದೇಶಕ/ನಾಟಕಕಾರ) ಇತ್ತೀಚೆಗೆ "ಮಣೆಗಾರ" (ತುಂಬಾಡಿ ರಾಮಯ್ಯನವರ ಆತ್ಮಕಥೆ) ಎನ್ನುವ ದಲಿತ ಕಥಾನಕವೊಂದನ್ನು ರಂಗದ ಮೇಲೆ ಅನಾವರಣಗೊಳಿಸಿದರು. ಪ್ರಯೋಗದ ದೃಷ್ಟಿಯಿಂದ ಕೆಲವು ಕೊರತೆಗಳು, ದೋಷಗಳು ಇವೆ. ಅದು ಯಾವುದೇ ಪ್ರಯೋಗಕ್ಕೆ ಇರುವಂಥವೇ. ಆದರೆ ಸಮುದಾಯವೊಂದರ ಒಡಲಾಳದ ನೋವನ್ನು ರಂಗದ ಮೇಲೆ ಬಸಿದಿಟ್ಟಾಗ  ಬೆಚ್ಚಿ ಬೀಳುವಂತಾಯಿತು. ವಿಶೇಷವಾಗಿ ದಲಿತೇತರಲ್ಲಿ ಸಾಮಾಜಿಕ ಪ್ರಜ್ಞೆ, ಜವಾಬ್ದಾರಿಯನ್ನು ಬಡಿದೆಬ್ಬಿಸುವಂಥ ಕಥಾನಕವದು. "ಮಣೆಗಾರ" ಪ್ರೊಸಿನಿಯಂಗಿಂತ ಆಪ್ತರಂಗಭೂಮಿಗೆ ಸೂಕ್ತವಾದ ವಸ್ತು. ಪ್ರಯೋಗ ಒಟ್ಟಾರೆ ಮನುಷ್ಯ ಬದುಕಿನ ನಡುವಿರುವ ಗ್ರೇ ಏರಿಯಾವೊಂದರ ದರುಶನ ಮಾಡಿಸಿತು. ಮೇಲ್ವರ್ಗ ಸಹಮಾನವರನ್ನು ಅದು ಹೇಗೆ ಅಸ್ಪೃಶ್ಯರು ಎಂದು ದೂರಕ್ಕಿಟ್ಟಿತ್ತು, ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿತ್ತು ಎನ್ನುವುದು ಇದರ ಮೂಲ ಸಂಕಟ. ಇಡೀ ನಾಟಕದಲ್ಲಿ ಬದುಕಿಗಾಗೇ ಸಂಘರ್ಷವಿದೆ. ಆಹಾರಕ್ಕಾಗಿ ಹಾಹಾಕಾರವಿದೆ. socio-cultural  ನೆಲೆಯಲ್ಲಿ ದೊಡ್ಡ ಸಂಘರ್ಷವಿದೆ. ಇದು ರಾಜಕೀಯ ಆಯಾಮದಲ್ಲೂ ಬಹುಮುಖ್ಯವಾದ ಸಂಘರ್ಷವೇ. ಶಿಕ್ಷಣ ಮತ್ತು ಅದರ ಆಧಾರದಲ್ಲಿ ಹುಟ

"ಬದುಕು-ಬಯಲು" ನಾಟಕ ಮತ್ತು ಮಾನವೀಯ ನೆಲೆಯ ಹುಡುಕಾಟ

ಫ್ರಾನ್ಸ್ ನ ಬರಹಗಾರ ಅಲ್ಫ್ರೆಡ್ ಜೆರಿ ಬರೆದ 'ದಿ ಸೂಪರ್ ಮೇಲ್' ಎನ್ನುವ ಕಾದಂಬರಿಯ ಪ್ರೊಟಗಾನಿಸ್ಟ್ ಆ್ಯಂಡ್ರಿ ಮಾರ್ಕೆಲ್ ಒಬ್ಬ ಜಂಟಲ್ ಮನ್, ವಿಜ್ಞಾನಿ ಕೂಡ. ಅವನಿಗೆ ಮಾನವ ಸಾಮರ್ಥ್ಯಕ್ಕೆ ಮಿತಿ ಎಂಬುದೇ ಇಲ್ಲ ಎನ್ನುವುದರಲ್ಲಿ ಬಲವಾದ ನಂಬಿಕೆ. ಆತ ಉಗಿಬಂಡಿ ಜತೆಗೂ ಯಾವುದೇ ವಿಶ್ರಾಂತಿ ಮತ್ತು ತ್ರಾಸಿಲ್ಲದೇ ಕ್ರಮಿಸಿ  ರೇಸ್ ಗೆಲ್ಲಬಲ್ಲ (ಕಾದಂಬರಿಯಲ್ಲಿ ರೈಲು ಮತ್ತು ಸೈಕ್ಲಿಸ್ಟ್ ನಡುವೆ ಒಂದು ರೇಸ್ ನಡೆಯುತ್ತದೆ). ಒಂದೇ ಹೆಂಗಸಿನ ಜತೆ 24 ಗಂಟೆಗಳಲ್ಲಿ 82 ಬಾರಿ ಸಂಭೋಗ ನಡೆಸಬಲ್ಲ 'ಕಾಮಪಟುತ್ವ'ದ ಸಾಹಸಗಳನ್ನೂ ಮಾಡಬಲ್ಲ. ಇದನ್ನು ಪುರುಷಪರಾಕ್ರಮದ ನೆಲೆಯಲ್ಲಿ ನೋಡೋದಾ? ಇಲ್ಲಾ ನಿಸರ್ಗ ಸಹಜ ಸಾಧ್ಯತೆಯ ನೆಲೆಯಲ್ಲಿ ನೋಡುವುದಾ?... - ಇದು ಒಂದು ರೀತಿಯ ವಿಕ್ಷಿಪ್ತ ಮನೋಧರ್ಮದ, ಸೈನ್ಸ್ ಫಿಕ್ಷನ್ ಕಾದಂಬರಿಯ ಸಂಕ್ಷಿಪ್ತ ನೋಟ. ಅಲ್ಫ್ರೆಡ್ ಜೆರಿ ಉತ್ತಮ ನಾಟಕಕಾರನೂ ಹೌದು. ಆತನ 'ಉಬು ರೊಯ್' ಹೆಸರಾಂತ ನಾಟಕಗಳಲ್ಲೊಂದು.    * * * ಜೆರಿ ಬಗ್ಗೆ ಓದುತ್ತಿದ್ದ ಹೊತ್ತಲ್ಲಿ ಹಿಜಡಾವೊಬ್ಬರ ಆತ್ಮಕಥನ ಆಧರಿಸಿದ "ಬದುಕು-ಬಯಲು" ಎನ್ನುವ ನಾಟಕ ವೀಕ್ಷಣೆಗೆ ತಿಪಟೂರಿನ ರಂಗ ಗೆಳೆಯ ನೀನಾಸಂ ಚಂದ್ರು ಆಹ್ವಾನ ನೀಡಿದರು.  ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ ನೋಡಿದೆ. ಅದಕ್ಕೂ ಮುಂಚೆ ನಾಟಕದ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಸಿ.ಎಸ್. ದ್ವಾರಕಾನಾಥ್, ಗೌರಿ ಲಂಕೇಶ್ ಮತ್ತಿತರ ಚಿಂತಕರ ವಿ