ವಿಷಯಕ್ಕೆ ಹೋಗಿ

ಡಿಯರ್‌ ಜಿಂದಗೀ... ನವಿರು ಭಾವನೆಯ ಆತ್ಮಶೋಧ ಯತ್ನ

Directed byGauri Shinde

Starring

CinematographyLaxman Utekar ಸಂಭಾಷಣೆಗಳಿಂದ ಉಪದೇಶ ಅನಿಸಿದರೂ, ನಿರೂಪಣೆಯಲ್ಲಿ ವಸ್ತುವನ್ನು ಮನದಟ್ಟು ಮಾಡುವ ಸೊಗಸುಗಾರಿಕೆ ಇದೆ. ಸಮಕಾಲೀನ ಯುವ ಸಮಸ್ಯೆಯೊಂದನ್ನು ನೇರವಾಗಿ ಮತ್ತು ಅಷ್ಟೇ ನವಿರಾಗಿ ಬಿಚ್ಚಿಟ್ಟು ಪರಿಹಾರವನ್ನೂ ಸೂಚಿಸುವ ಯತ್ನವಿದೆ. ಹೀಗಾಗಿ ಇಡೀ ಚಿತ್ರ ಟಚೀ ಅನಿಸುತ್ತದೆ.
 ಆಲಿಯಾ ಭಟ್‌  ಸಮಕಾಲೀನ ಹೆಣ್ಣುಗಳ ಚಿತ್ರಣವನ್ನು ಅಭಿನಯದಲ್ಲಿ ಸಮರ್ಥವಾಗಿ ಕಟ್ಟಿಕೊಡುತ್ತಾರೆ. ಶಾರುಕ್‌ ಖಾನ್‌ ಹೀರೋಯಿಸಂನಿಂದ ಹೊರಬಂದು ಒಂದು ಪಾತ್ರವಾಗಿ ಗುಡ್‌ ಹ್ಯುಮನ್‌ ಬೀಯಿಂಗ್‌ ತರಹ ಕಾಣಿಸಿಕೊಂಡ ಪರಿ ಸೊಗಸಾಗಿದೆ.  ಯಾವ ಹಮ್ಮು ಬಿಮ್ಮು ಇಲ್ಲದ ಒಬ್ಬ ಮನೋವೈದ್ಯನ ಪಾತ್ರವನ್ನು ಆಪ್ತವೆನಿಸುವಂತೆ ಕಟ್ಟಿಕೊಟ್ಟಿದ್ದು ಖುಷಿ ಕೊಡುವಂಥದು.
 ಚಿತ್ರದ ಆಶಯ
ಪ್ರೀತಿ, ಪ್ರೇಮ ಸಂಬಂಧಗಳು, ಕೆರಿಯರ್‌, ನಿರೀಕ್ಷೆಗಳು ಅಸಹಿಷ್ಣುತೆಯಿಂದ ನರಳಿ ಎಲ್ಲ ಒಂದಕ್ಕೊಂದು ಭಿನ್ನ ದಿಕ್ಕಿಗೆಳೆಯುತ್ತ ಸಮಕಾಲೀನ ಜನ ಬದುಕೇ ಸೂತ್ರವಿಲ್ಲದ ಗಾಳಿಪಟದಂತಾಗಿದೆ. ತಪ್ಪಿದ ತಾಳವನ್ನು ಸರಿಪಡಿಸಿಕೊಳ್ಳಲಾಗದು ಎನ್ನುವ ಮೌಢ್ಯವೂ ಜೊತೆ ಸೇರಿಕೊಂಡಿದೆ. ಇಂಥದೊಂದು ಸಾಮಾಜಿಕ ಸಂಕೀರ್ಣ ಸ್ಥಿತಿಗೆ ತಲುಪಿದ ಹೆಣ್ಣೊಂದರ ಕೇಸ್‌ ಸ್ಟಡಿಯಂಥ ವಸ್ತುವನ್ನಿಟ್ಟುಕೊಂಡು ಪರಿಹಾರಗಳನ್ನು ಕಂಡುಕೊಳ್ಳುವ ಆಶಯ ಈ ಚಿತ್ರದ್ದು.
 ಮಾಡಿದ ತಪ್ಪುಗಳಿಗೆ ಸದಾ ಪರಿತಪಿಸಿ ಬದುಕನ್ನೇ ನರಕವಾಗಿಸಿಕೊಳ್ಳುವ ಅಪಾಯದ ಬದಲು ಒಂದು ಪುಟ್ಟ ಆಪ್ತ ಸಲಹೆಯಿಂದ ಮತ್ತೆ ಸಹಜ ಹೊನಲಿಗೆ ಬರುವ ಉಪಾಯ ಕಂಡುಕೊಳ್ಳುವುದು ಜೀವಪರ. ಇದೂ ಒಂದು ಮಾನವೀಯ ಸಾಧ್ಯತೆ ಆಗಬಹುದಲ್ಲ! .. ಚಿತ್ರ ತನ್ನ ಒಡಲಲ್ಲಿ ಇಂಥ ಜೀವಜಲವನ್ನೇ ಹೊಂದಿದೆ. ಚಿತ್ರ ಸಕಾಲಿಕ ಕೂಡ.
ಚಿತ್ರದ ಹರವು
  ಒಳಗಿನಿಂದಲೇ ಕಾಡುವ ತಿರಸ್ಕಾರದ ಭಾವನೆಗಳನ್ನು ಹೊತ್ತು ಅಟಿಟ್ಯೂಡ್‌ ಮೂಲಕ ಅವನ್ನು ವ್ಯಕ್ತಪಡಿಸುವ  ಕೆಲ ಯುವತಿಯರಿದ್ದಾರೆ. ಸ್ವತಃ ಹೆತ್ತೊಡಲು ಮತ್ತು ದುರ್ಬಲ ಪೋಷಣೆ ಇದಕ್ಕೆ ಮುಖ್ಯ ಕಾರಣವಾಗಿರುತ್ತದೆ. ಈ ಕಹಿ ಸತ್ಯ ಇಂದು ಎಲ್ಲರ ಮನೆ ಮನೆ ಕತೆಯೇ. ಮಕ್ಕಳನ್ನು ಹೆರುವ ಬಾಡಿಗೆ ತಾಯಿಗಿಂತ ಭಿನ್ನವೆನಿಸದ ಇಂದಿನ ಬಹುತೇಕ ತಾಯಂದಿರು, ಪೌರುಷಕ್ಕೊಂದು ಸಾಕ್ಷಿಯಾಗಿ ಮಗುವಿಗೆ ತಂದೆ ಆದೆ ಎನ್ನುವ ಅಹಂಕಾರಿ ಅಪ್ಪಂದಿರು ಮಕ್ಕಳ ಬಾಲ್ಯದ ನವಿರು ಭಾವನೆಗಳ ಮೇಲೆ ಎಳೆ ಹೃದಯಗಳ ಮೇಲೆ ದೊಡ್ಡ ಬರೆ ಎಳೆದು ಬಿಡುತ್ತಾರೆ. ಪ್ರೀತಿ ವಂಚಿತ ಮಕ್ಕಳು ಅದರಲ್ಲೂ ಹೆಣ್ಣು ಅನ್ನುವ ಕಾರಣಕ್ಕೆ ನಿರ್ಲಕ್ಷ್ಯಕ್ಕೊಳಗಾದ ಮಕ್ಕಳು ಬದುಕಿಡೀ ಒಂದು ವಿಚಿತ್ರ ಮಾನಸಿಕ  ಹಿಂಸೆಯಿಂದ ನರಳುವ  ಸ್ಥಿತಿಗೆ ತಲುಪುತ್ತಾರೆ. ಅಮ್ಮ, ಅಪ್ಪ ತಮ್ಮ ಮಕ್ಕಳ ಬಾಲ್ಯದ ಮಧುರ ಕ್ಷಣಗಳನ್ನು ಅವಿಸ್ಮರಣೀಯಗೊಳಿಸುವ ಒಂದು ಸಣ್ಣ ಯತ್ನವನ್ನೂ ಮಾಡುವುದಿಲ್ಲ. ತಮ್ಮ ನಿತ್ಯದ ಕೆಲಸ, ಕೆರಿಯರ್ ಪರಪಂಚದಲ್ಲೇ ಮುಳುಗಿ ಮಕ್ಕಳ ಜತೆಗಿನ ಮಧುರ ಕ್ಷಣಗಳಿಂದ ಸ್ವತಃ ವಂಚಿತರಾಗುತ್ತಾರೆ. ಆಪ್ತ ಭಾವವನ್ನು ಹೆತ್ತವರಿಂದ ಸವಿಯದ ಮಕ್ಕಳು ಅಜ್ಜ, ಅಜ್ಜಿಯರಿಂದ ಸಾಂತ್ವನದ ರೂಪದಲ್ಲಿ ಪಡೆಯುತ್ತಾರೆ. ಹರೆಯಕ್ಕೆ ಕಾಲಿಟ್ಟ ಮರುಕ್ಷಣವೇ ‘ಗಂಡಸು’ ಎನ್ನುವವನೊಬ್ಬ (ಸಿದ್ದು ಪಾತ್ರ) ಹೆಗಲಾಗುತ್ತಾನೆ. ಅವಳು ಬದುಕಿನ ಹಸಿ ಹಗಲಿಗೆ ಕತ್ತಲನ್ನೇ ತುಂಬಿಕೊಳ್ಳುತ್ತಾಳೆ. ಒಂದು ಮರೆಯಲು ಇನ್ನೊಂದು (ರಘು) ಹೆಗಲು, ಮತ್ತೊಂದು (ಸಂಗೀತಗಾರ) ... ಮುಂದಿನದೆಲ್ಲ ಬರಿಯ ಕರಾಳ ನೆನಪುಗಳ ಕರಿ ನೆರಳಷ್ಟೇ.

 ಕೈರಾ (ಆಲಿಯಾ ಭಟ್‌) ಎನ್ನುವ ಪಾತ್ರವೊಂದರ ಇಂಥ ಚಿತ್ರಣ ಆರಂಭದಲ್ಲಿ ಅತಿ ಎನಿಸುವಂತೆ ಇದೆ. ಕ್ರಮೇಣ ಈ ಪಾತ್ರ ಸೂಸುವ  ಭಾವನೆ ಸಾಂದ್ರಗೊಳ್ಳುತ್ತಾ ಸಾಗಿದಂತೆಲ್ಲ ಕುಟುಂಬದ  ಮತ್ತು ಒಟ್ಟು ಸಮಾಜದ ತಪ್ಪಿತಸ್ಥ ಮನೋಭಾವನೆಯ ಬಿಕ್ಕಳಿಕೆ ಸ್ಪಷ್ಟವಾಗಿ ಕೇಳಿಸತೊಡಗುತ್ತದೆ. ಅದರೊಳಗೆ ನಮ್ಮದೂ ಪಾಲಿದೆಯಾ? ಎನ್ನುವ ಪ್ರಶ್ನೆ ಕಾಡತೊಡಗುತ್ತದೆ.
 ಇಂಟರ್ವಲ್‌ ಹೊತ್ತಿಗೆ ಡಾ. ಜಹಂಗೀರ್‌ ಖಾನ್‌ (ಶಾರುಕ್‌ ಖಾನ್‌) ಎನ್ನುವ ಮನೋವೈದ್ಯನ ಪಾತ್ರ ಎಂಟ್ರಿಯಾಗುತ್ತಿದ್ದಂತೆ ಕೈರಾ ಸಮಸ್ಯೆಗೆ ಪರಿಹಾರದ ಸಾಧ್ಯತೆಗಳು ಬಿಚ್ಚಿಕೊಳ್ಳಲಾರಂಭಿಸುತ್ತವೆ. ಇದರಲ್ಲಿ ಸಮಾಜಕ್ಕಿಂತ ವೈಯಕ್ತಿಕ ಜವಾಬ್ದಾರಿಗಳ ಬಗ್ಗೆ ಅರಿವು ಹೆಚ್ಚಿಸುವ ಮನೋವೈದ್ಯನ ಯತ್ನ ಅರ್ಥಪೂರ್ಣ ಎನಿಸುತ್ತದೆ.
ಕೈರಾ ಬದುಕಿಗೆ ಸಿದ್‌ನಿಂದ ಜಹಂಗೀರ್‌ ಖಾನ್‌ ತನಕ ಬರುವ ಗಂಡಸರಲ್ಲಿ ಅಸಹಜ ಎನಿಸುವಂಥದ್ದೇನೂ ಇಲ್ಲ. ಅವರ ಪೈಕಿ ಕೆಲವರೊಂದಿಗೆ ಕೈರಾ ಮಾಡುವ ಪ್ರೇಮ, ಕಾಮದಲ್ಲಿ ಸಹಜತೆಯೇ ಇದೆ. ಆದರೆ ಗಂಡು ಪಾತ್ರಗಳೆಲ್ಲ ಸೂಸುವ ‘ಗಂಡಸು’ ಎನ್ನುವ ಶೇಡ್‌ ಇದೆಯಲ್ಲ ಅದರಲ್ಲಿ ವ್ಯತ್ಯಾಸಗಳಿವೆ. ಇದು ಸಿಗುವ  ಅವಕಾಶಗಳ ಬಳಸಿಕೊಳ್ಳುವ ಮತ್ತು ಸುಲಭದ ಅವಕಾಶಗಳನ್ನು ಬಿಟ್ಟು ಪ್ರಜ್ಞಾವಂತಿಕೆಯನ್ನು ಮೆರೆಯುವ ಮನೋಧರ್ಮಗಳಲ್ಲಿನ ಭಿನ್ನತೆ. ಕೈರಾ ತಾನು ನಡೆಸುವ  ಪಯಣದಲ್ಲೇ ಈ ಭಿನ್ನತೆಗಳಲ್ಲಿನ ಅರ್ಥಪೂರ್ಣತೆ ಮತ್ತು ನಿರರ್ಥಕತೆಗಳನ್ನು ಕಂಡುಕೊಳ್ಳುವ ಪರಿ ಅತ್ಯಂತ ಜಾಗರೂಕವಾಗಿ ನಿರೂಪಣೆಗೊಂಡಿದೆ. ನಿರ್ದೇಶನದ ಕುರ್ಚಿಯ ಮೇಲೆ ಕೂತವರು ಸ್ವತಃ ಹೆಣ್ಣಾಗಿದ್ದರಿಂದ (ನಿ. ಗೌರಿ ಶಿಂಧೆ) ಇಂಥದೊಂದು ನವಿರು/ಜಾಗರೂಕತೆಯ ಸ್ಪರ್ಶ ಸಾಧ್ಯವಾಗಿದೆ.
ಕಾಡುವ ಪ್ರಶ್ನೆ
ಇದರಾಚೆಗೂ ಕಾಡುವ ಮತ್ತು ಕೇಳಬಹುದಾದ ಪ್ರಶ್ನೆಗಳು ಹಲವು. ಕೈರಾ ಬಾಲ್ಯ ಅಷ್ಟೊಂದು ಕಹಿಯಾಗುವುದಕ್ಕೆ ಪಾಲಕರ ನಿರ್ಲಕ್ಷ್ಯ ಕಾರಣವಾಗುವುದನ್ನು ಒಂದು ಮಟ್ಟಿಗೆ ಒಪ್ಪಬಹುದು. ಆದರೆ ಅವರು ಕುಟುಂಬ ನಿರ್ವಹಣೆಗಾಗಿ  ಪಡುವ ಪರಿಪಾಡು ಏನು ಕಮ್ಮಿನಾ? ಆದರೆ, ಪಾಲಕರ ಮೇಲೆ ಸೇಡು ತೀರಿಸಿಕೊಳ್ಳುವ ಹಾಗೆ ತನ್ನನ್ನು ತಾನೇ ವಿಪರ್ಯಾಸಗಳಿಗೆ ಒಡ್ಡಿಕೊಳ್ಳುವ ಕೈರಾ ವರ್ತನೆ ಎಷ್ಟು ಸರಿ?

 ಇನ್ನು ಗಂಡಸರ ಜೊತೆ ಒಡನಾಡುವ ಕೈರಾ ನಡೆಗೆ ಸಂಬಂಧಿಸಿದಂತೆ ಹೇಳುವುದಾದರೆ, ಅವಳ ವರ್ತನೆಯೇ ಅತಿರೇಕದ್ದೆನಿಸುತ್ತದೆ. ಕೈರಾ ತಾನಾಗೇ ಬಿಸಿನೆಸ್‌ ಮ್ಯಾನ್‌ ಸಿದ್‌ ಬದುಕಿಗೆ ಹೋಗುತ್ತಾಳೆ. ಹಾಗೆಯೇ ತಾನು ಕಲಿತ ಸಿನಿಮಾಟೊಗ್ರಫೀ ಹುಚ್ಚಿಗಾಗಿ ಕೆರಿಯರ್‌ ಟೇಕ್‌ ಆಫ್‌ ಪಡೆಯಲು ರಘು ಎನ್ನುವವನ ಸಹವಾಸ ಮಾಡುತ್ತಾಳೆ.  ಅವನೊಂದಿಗೆ ಅನುರಕ್ತವಾಗುತ್ತಾಳೆ. ಒಮ್ಮೆ ಶೂಟಿಂಗ್‌ ಮುಗಿಸಿ ಸಿದ್‌ನ ಭೇಟಿ ಮಾಡುವ ಕೈರಾ  ತಾನು ರಘು ಜೊತೆ ಹಾಸಿಗೆ ಹಂಚಿಕೊಂಡಿದ್ದನ್ನು (ನಾನು ರಘು ಜೊತೆ ಮಲಗಿದೆ) ನೇರವಾಗಿ ಹೇಳುತ್ತಾಳೆ. ಸಿದ್‌ ಕಸಿವಿಸಿಗೊಳ್ಳುತ್ತಾನಷ್ಟೇ. ತಕ್ಷಣ ವ್ಯತಿರಿಕ್ತ ಪ್ರತಿಕ್ರಿಯಿಸದೇ ಮೌನದಲ್ಲೇ ಸಹಿಸಿಕೊಳ್ಳುತ್ತಾನೆ.  ಕೈರಾಳದು  ನಾನು ಏನ್‌ ಮಾಡಿದರೂ ಸರಿ. ಮುಚ್ಚಿಕೊಂಡು ಸುಮ್ಮನಿರಬೇಕ್‌ ಎನ್ನುವ ಅಟಿಟ್ಯುಡಾ?
 ಅತ್ತ ರಘು ಜೊತೆ ನ್ಯೂಯಾರ್ಕ್‌ ಪ್ರಾಜೆಕ್ಟ್‌ಗೆ ತಯಾರಿ ನಡೆಸುವಾಗಲೇ ಕೈರಾಗೆ ರಘು ಎಂಗೇಜ್‌ಮೆಂಟ್‌ ಬಗ್ಗೆ  ( ಆತನದೂ ಒಂದು ಬ್ರೇಕಅಪ್‌  ಇತಿಹಾಸ ಇರುತ್ತದೆ) ಒಂದು  ಮಾಹಿತಿ ದಕ್ಕುತ್ತದೆ. ಅದರ ಸತ್ಯಾಸತ್ಯತೆಯನ್ನು ಪ್ರಮಾಣಿಸಿ ನೋಡುವ ಯತ್ನವನ್ನೂ ಮಾಡದ ಕೈರಾ ವಿಚಲಿತಳಾಗುತ್ತಾಳೆ.  ಖಿನ್ನತೆಗೆ ಜಾರುತ್ತಾಳೆ. ರಘು ತಪ್ಪೇನು?  ಇದಕ್ಕೂ ಮುಂಚಿನ ಸಿದ್‌ ತಪ್ಪೇನು?
 ಇದೆಲ್ಲದಕ್ಕೂ ಗಂಡಸರನ್ನೇ ದೂರುವ ಕೈರಾ ತನ್ನ ಖಿನ್ನತೆಗೊಂದು ಪರಿಹಾರಕ್ಕಾಗಿ ಮತ್ತೊಬ್ಬ ಗಂಡಸಿನ ಬಳಿಯೇ ಹೋಗುತ್ತಾಳೆ. ಆತ ಡಾ. ಜಹಂಗೀರ್‌ ಖಾನ್‌ (ಶಾರುಕ್‌) ಎನ್ನುವ ಮನೋವೈದ್ಯ. ಅವನು ನೀಡುವ ಮನೋಚಿಕಿತ್ಸೆ ಎಂಥದು? ಕುರ್ಚಿ ಬದಲಾಯಿಸುವುದು! ಲೈಫ್‌ ಈಸ್‌ ಮ್ಯುಸಿಕಲ್‌ ಚೀರ್‌ ಎನ್ನುವ ಫಿಲಾಸಫಿಯ ನೆಲೆಯಿಂದ ಒಂದಷ್ಟು ಸಲಹೆಗಳನ್ನು ನೀಡುತ್ತಾನೆ. ಒಂದು ಕುರ್ಚಿ ಕೊಳ್ಳುವಾಗ ಅದರ ಬಗ್ಗೆ ಏನೆಲ್ಲ ಯೋಚಿಸುತ್ತೇವೆ. ಕಾಲು ನೆಟ್ಟಗಿದೆಯಾ, ಕೂರಲು ಆರಾಮಾಗಿದೆಯಾ, ಗಟ್ಟಿ ಮುಟ್ಟಾಗಿದೆಯಾ, ಗುಣಮಟ್ಟದ್ದಾ ವಗೈರೆ ವಗೈರೆ... ಆದರೆ ಬದುಕಿಗೊಬ್ಬ ಸಂಗಾತಿ ಬೇಕೆಂದಾಗ ಈ ಚೌಕಾಶಿ ಯಾಕೆ ಮಾಡಲ್ಲ?  ಮನುಷ್ಯ ಕೂರುವುದು ಮುಖ್ಯ. ಅದಕ್ಕೆ ಒಂದು ಕುರ್ಚಿ ಬೇಕು. ಕೂರುವ ಸುಖಕ್ಕಾಗಿ ಸೂಕ್ತ ಕುರ್ಚಿ ಆಯ್ಕೆ ಜಾಣ ನಡೆ ಅಲ್ಲವೇ ಎನ್ನುವರ್ಥದಲ್ಲಿ ಖಾನ್‌ ಸಲಹೆಗಳಿವೆ. ಒಬ್ಬನ ಜೊತೆಗಿನ ಸಂಬಂಧ ಸರಿ ಹೊಂದಲಿಲ್ಲ ಎಂದರೆ ಅವನ ಬಿಟ್ಟು ಮತ್ತೊಬ್ಬನಲ್ಲಿ ಆ ಕೊರತೆ ತುಂಬಿಸಿಕೊಳ್ಳುವುದರಲ್ಲಿ ಏನು ತಪ್ಪಿದೆ ಎನ್ನುವ ಹಾಗೂ ಒಂದು ಸರಳರ್ಥವಾಗಬಹುದಲ್ಲವೇ ಇದು? ಖಾನ್‌ ಸಲಹೆಯಂತೆ ಕೈರಾ ಒಂದು ‘ಹೊಸ ಕುರ್ಚಿ’ ಹುಡುಕಿಕೊಳ್ಳುತ್ತಾಳೆ. ಆತ ಒಬ್ಬ ಸಂಗೀತಗಾರ. ಅವನಿಗೆ ಸಂಗೀತವೇ ಎಲ್ಲಾ. ಅದು ಅವಳಿಗೆ ಬೋರು ಹೊಡೆಸುತ್ತದೆ. ಇದನ್ನು ಈಗೋ ಎನ್ನಬೇಕಾ ಇಲ್ಲ ಹೆಣ್ಣಿನ ಸಹಜ ತುಮುಲ ಅಂದುಕೊಳ್ಳಬೇಕಾ? ಇವಳಿಗಾದರೋ ಸಿನಿಮಾಟಾಗ್ರಫಿಯಲ್ಲಿ ಅವಕಾಶಗಳು ಬೇಕು. ಅದರಲ್ಲಿ ಕೆರಿಯರ್‌ ಮಾಡಿಕೊಳ್ಳಬೇಕು. ಅದಕ್ಕೆ ಏನೂ ಮಾಡಬಹುದು. ಅದು ಕೆರಿಯರ್‌ ಮೈಂಡ್‌ಸೆಟ್‌ ಅನಿಸುವುದಿಲ್ಲಾ. ಆದರೆ ಸಂಗೀತಗಾರನ ಸಂಗೀತ ಹುಚ್ಚು ಕೆರಿಯರ್‌ ಕಾನ್ಸಿಯಸ್‌ನೆಸ್‌ ಅಷ್ಟೇ ಆಗುತ್ತದಾ? ಕೈರಾಗೆ ತನ್ನನ್ನೇ ಪ್ರಪಂಚವನ್ನಾಗಿಸಿಕೊಳ್ಳುವ ಗಂಡಸು ಬೇಕಿತ್ತೊ ಹೇಗೆ?  ಇದು ಸ್ವಾರ್ಥದ ಪರಮಾವಧಿ ಅನಿಸುವುದಿಲ್ಲವೇ?
 ಇಡೀ ಸಿನಿಮಾದಲ್ಲಿ ತಂದೆ ತಾಯಿಯರ ನಿಷ್ಕಾಳಜಿಯೇ ದೊಡ್ಡ ತಪ್ಪು ಎಂದು ಧ್ವನಿಸಲಾಗಿದೆ.  ಕೈರಾ ಮನೋದೈಹಿಕ ಬಯಕೆಗಳಿಗೆಲ್ಲಾ ಸ್ಪಂದಿಸಿದ ಗಂಡಸರದು ದೊಡ್ಡ ತಪ್ಪು. ಆದರೆ ಎಲ್ಲರನ್ನು ಬಳಸಿಕೊಂಡು ಎಲ್ಲರಿಂದ ಸುಖ–ದುಃಖದ ಅನುಭವ ಪಡೆದು ಕಡೆಗೊಮ್ಮೆ ನಿರಾಳವಾಗುವ ಕೈರಾ ಎನ್ನುವ ಹೆಣ್ಣಿನದು ಯಾವ ತಪ್ಪೇ ಇಲ್ಲ!? ಅಥವಾ ಅಂಥ ತಪ್ಪು ತಪ್ಪೇ ಅಲ್ಲ...
ನೈತಿಕತೆ
 ಡಾ. ಖಾನ್‌ ಸ್ವತಃ ಬದುಕಿನಲ್ಲಿ ಮುಗ್ಗರಿಸಿದವ. ಡಿವೋರ್ಸಿ. ಕೈರಾ ಘಾಸಿಗೊಂಡ ಹೃದಯಿ. ಒಂದು ಹಂತದಲ್ಲಿ ಅವರಿಬ್ಬರ ಒಡನಾಟ ಪರಸ್ಪರ ಸಾಂತ್ವನದಂತೆಯೇ ಅನಿಸುತ್ತದೆ. ಕೈರಾ ಅಂತಿಮವಾಗಿ ಖಾನ್‌ಗೆ ಮನಸೋತಿರುತ್ತಾಳೆ . ಅದನ್ನು ಮನಸಾರೆ ಖುಲ್ಲಂ ಖುಲ್ಲಾ ಆಗಿ ವ್ಯಕ್ತಪಡಿಸಿಯೂ ಬಿಡುತ್ತಾಳೆ. ಖಾನ್‌ ತನ್ನ ವೃತ್ತಿಯ ನೈತಿಕ ಮೌಲ್ಯಗಳನ್ನು ಮುಂದೊಡ್ಡಿ ಅದನ್ನು ನಿರಾಕರಿಸುತ್ತಾನೆ. ಒಳಗಿನಿಂದ ಆಸಕ್ತಿ ಇದ್ದಂತಿದ್ದರೂ ವೃತ್ತಿ ಘನತೆಯನ್ನು ಆಯ್ದುಕೊಳ್ಳುತ್ತಾನೆ. ಆದರೆ, ಕೈರಾ ಒಳಗೊಂದು ಆಪ್ತ ಮತ್ತು ಅವಿಸ್ಮರಣೀಯವಾದ ಅನುಭೂತಿ ಇದೆ. ಖಾನ್‌ ಬಗ್ಗೆ ಒಲವು ಮೂಡಿದೆ. ಗಂಡಿನೊಳಗಿನ ನವಿರು ಭಾವನೆಗೆ ಖಾನ್‌ ಒಂದು ರೂಪಕವಾಗಿ ಅವಳ ಮನದೊಳಗೆ ನೆಲೆಗೊಂಡಿರುತ್ತಾನೆ. ಗಂಡಸಿನ ನೈತಿಕತೆಗೊಂದು ಮಾದರಿ ಹಾಗನ್ನಿಸುತ್ತಾನೆ. ಕೈರಾಗೆ ಬೇಕಾದ ಸಾಂತ್ವನ ಮತ್ತು ಪುರುಷನ ಬಗ್ಗೆ ಸ್ಪಷ್ಟತೆಯೊಂದು ಹೀಗೆ ದಕ್ಕುತ್ತದೆ.
 ಖಾನ್‌ ತನ್ನ ಪ್ರೇಮಾಭಿಲಾಷೆಯನ್ನು ನಿರಾಕರಿಸಿದ್ದರಿಂದ ಆ ಕ್ಷಣಕ್ಕಾದ ನಿರಾಸೆಯನ್ನು ಅವಳು ಖಾನ್‌ ಮನೆ ಬಾಗಿಲಲ್ಲೇ ಮನಸಾರೆ ಹಗುರ ಮಾಡಿಕೊಳ್ಳುತ್ತಾಳೆ. ಕೆರಿಯರ್‌ ಏಣಿಗಳನ್ನು ಹತ್ತುತ್ತಾಳೆ. ಜೊತೆಗೆ ಒಂದು ಖಾಯಂ ‘ಕುರ್ಚಿ’ಯನ್ನೂ ಪಡಕೊಳ್ಳುತ್ತಾಳೆ. ಸ್ವಾತಂತ್ರ್ಯ ಮತ್ತು ಸ್ವೇಚ್ಛೆಯ ನಡುವೊಂದರ ತೆಳು ಗೆರೆ ಈಗವಳಿಗೆ ಸ್ಪಷ್ಟವಾಗಿದೆ. ಕಾಳಜಿ ಮತ್ತು ನಿಷ್ಕಾಳಜಿಗಳ ನಡುವೆ ಮಾನವ ಸಹಜ ದೌರ್ಬಲ್ಯಗಳು ಮಾಡುವ ಎಡವಟ್ಟನ್ನು ಅರ್ಥ ಮಾಡಿಕೊಂಡು ಆದ ತಪ್ಪಿಗೊಂದು ದಿವ್ಯ ನಿರ್ಲಕ್ಷ್ಯ ತಾಳಿ ಬದುಕನ್ನು ಆಪ್ತವಾಗಿಸಿಕೊಳ್ಳಲು ಸರಿ ಹಾದಿಗಿಳಿಯುವುದು ಕೂಡ ಒಂದು ನೈತಿಕತೆ. ಗೌರಿ ಶಿಂಧೆಯ ನವಿರಾದ ವಸ್ತುವಿಗೆ ಅಷ್ಟೇ ನವಿರಾದ ಕ್ಯಾಮೆರಾ ಚಾಲನೆ ಸಾಥಿಯಾಗಿದೆ. ಶಾರುಕ್‌ ಪ್ರಬುದ್ಧತೆ ಮತ್ತು ಆಲಿಯಾ ಉತ್ಸಾಹ ಪಾತ್ರಗಳನ್ನು ಜೀವಂತಗೊಳಿಸಿವೆ. ಸಂಗೀತ ತನ್ನ ಮಿತಿಯಲ್ಲಿದೆ. ಇದೆಲ್ಲವೂ ಹದವಾಗಿ ಬೆರೆತು ಒಂದು ನವಿರಾದ ಮತ್ತು ಆಪ್ತವಾದ ಬದುಕು ತೆರೆಯ ಮೇಲೆ ಮೂಡಲು ನೆರವಾಗಿವೆ. ‘ಡಿಯರ್‌ ಜಿಂದಗೀ’ ತುಝೆ ದಿಲ್‌ ಸೇ ಉಮ್ಮಾ.
 ‘ದಿ ಎಂಡ್‌’ ವಿತ್‌ ಧಿಸ್‌ ನೋಟ್:
ಸಿಂಗಲ್‌ ಸ್ಟೇಟಸ್‌ ಇರುವ ಉದ್ಯೋಗಸ್ಥ ಮತ್ತು ಕೆರಿಯರ್‌ ಕಟ್ಟಿಕೊಳ್ಳಲು ಹೆಣಗುವ ಹೆಣ್ಣುಗಳ ಬಗ್ಗೆ ಕಾಳಜಿ/ಸಹಾನುಭೂತಿ ವ್ಯಕ್ತಪಡಿಸುತ್ತಲೇ ಅವರಿಗೆಂದೇ ಮಾರುಕಟ್ಟೆ ಸಂಸ್ಕೃತಿಯೊಂದು ಸೃಷ್ಟಿಯಾಗಿದೆ. ನನಗೇಕೋ ಅದರ ಲಾಬಿ ಮೇಲೆ ಗುಮಾನಿ. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

'ಅನಭಿಜ್ಞ ಶಾಕುಂತಲ': ನೆನಪು ಮರೆವಿನಾಟ

 ಜೀವನವೇ ಒಂದು ನಾಟಕವೆಂದಾದರೆ. ಸಂಬಂಧ ಅನ್ನೋದು ಕಟ್ಟಿಕೊಂಡ ಆಟ. ಅಂದರೆ ನಾಟಕದಂತೆ ಬದುಕು ಕೂಡ ಆಟ ಕಟ್ಟುವ ಕ್ರಿಯೆ. ಇಲ್ಲಿ ಗುರಿ ಎಂದರೆ ಸುಖದ ಅಥವಾ ಸಾರ್ಥಕತೆಯ ದಡ ಸೇರುವುದು. ಈ ಆಟದ ಒಂದು ಹಂತದಲ್ಲಿ ಕಷ್ಟದ ಅಡವಿ ಸೇರುವುದೂ ಇದೆ! 'ಆಡಾಡ್ತ ಅಡವಿ ಸೇರುವುದು' ಅಂತಾರಲ್ಲ ಹಾಗೆ. ಅಡವಿ ಅಂದರೆ ಇಲ್ಲಿ ಸಂಕೀರ್ಣತೆ, ಸಂಕಷ್ಟ ಅವಘಡ, ಸಂದಿಗ್ಧತೆ ಎಂದು ಭಾವಿಸಿಕೊಳ್ಳಬಹುದು. ಬದುಕಿನ ದಾರಿಯಲ್ಲಿ ಒಮ್ಮೆ ಈ 'ಅಡವಿ' ಎದುರಾಗೇ ಆಗುತ್ತದೆ ಎನ್ನುವುದು ವಿಧಿಲಿಖಿತವೇ? ಗೊತ್ತಿಲ್ಲ. ಪ್ರೀತಿ-ಪ್ರೇಮ-ಕಾಮ ಎನ್ನುವ ಬದುಕಿನ ಒಟ್ಟಾರೆ ಆಟ- ಕೂಟದಲ್ಲಿ ಪಡಕೊಳ್ಳುವುದೆಲ್ಲ ಜೀವಕಾರುಣ್ಯವಷ್ಟೇ ಅಲ್ಲ. ಸಂಕಷ್ಟ ಮತ್ತು ಸಂದಿಗ್ಧತೆಯೂ ಜತೆಯಲ್ಲಿರುತ್ತದೆ ಎನ್ನುವುದು ಸಹಜ ಮನೋಧರ್ಮ.  ಬದುಕಿನ ಆಟಕ್ಕೆ ತೆರಕೊಂಡವರಲ್ಲಿ ಹಲವರು ಅನುಭವಿಸಿದ ಮಧುರ ಘಳಿಗೆಗಳನ್ನು ಕಡೆತನಕ ನೆನಪಿಟ್ಟುಕೊಳ್ಳುತ್ತಾರೆ. ಕೆಲವರು ಮರೆತೇ ಬಿಡುತ್ತಾರೆ!?..  ಕಾಳಿದಾಸನ ಮಹಾಕಾವ್ಯ ಶಾಕುಂತಲೆಯಲ್ಲಿ ಈ ಬದುಕು, ಮನುಷ್ಯ ಪ್ರೀತಿ ಪಯಣದ ನೆನಪು ಮತ್ತು ಮರೆವಿನಾಟ ಮನಮಿಡಿಯುವಂತೆ ಚಿತ್ರಣಗೊಂಡಿದೆ. ಈ ಕಾವ್ಯದಲ್ಲಿ ಎಲ್ಲವನ್ನು ವಿಧಿಯೇ ನಿರ್ಧರಿಸಿದಂತೆನಿಸುತ್ತದೆ. ಫೇಟಲಿಸಂ ವಾದಕ್ಕೆ ಪೂರಕವಾದ ಚಿಂತನೆ ಇದೆನ್ನಬಹುದು. ಆಧುನಿಕ ಯುಗದ ಶೇಕ್ಸಪಿಯರ್ ನ ಹಲವು ನಾಟಕಗಳಲ್ಲಿಯೂ ಈ ಫೇಟಲಿಸಂ ಪ್ರಧಾನ ಪಾತ್ರದಂತೆ ವರ್ತಿಸುವುದನ್ನು ಗಮನಿಸಬಹುದು. *

ಇಷ್ಕ್‌ ಕೆ ಇಮ್ತೆಹಾನ್‌ ಔರ್‌ ಭೀ ಹೈ’.. ಇಮ್ರಾನ್‌ ಖಾನ್‌!

ಪಾಕಿಸ್ತಾನದ ಬಗ್ಗೆ ಮಾತನಾಡುವುದು ಮಹಾ ಪಾಪದ ಕೆಲಸವೇನಲ್ಲ. ಹಾಗೆ ಭಾವಿಸಬೇಕಿಲ್ಲ. ಅದು ಒಪ್ಪಿತವೊ ಇಲ್ಲವೋ, ಅದರ ಬಗ್ಗೆ ಅಲಕ್ಷ್ಯವೋ ನಿರ್ಲಕ್ಷ್ಯವೊ ಏನೇ ಆದರೂ ಅದು ಒಂದು ದೇಶ. ನೆರೆಯ ರಾಷ್ಟ್ರ. ‘ಪಡೋಸಿ...’ ಸಂಬಂಧದಲ್ಲಿ ನಮ್ಮದೇ ಕರುಳಬಳ್ಳಿ. ಭಾಷೆ, ಜನಜೀವನ ಶೈಲಿಯಲ್ಲಿ ಬದಲಾದರೂ ಮನುಷ್ಯ ಭಾವ, ಬದುಕುವ ಸಾಮಾನ್ಯ ಕಾಳಜಿ  ಒಂದೇ. ಹಾಗೆ ನೋಡಿದರೆ ಸಾಂಸ್ಕೃತಿಕವಾಗಿ ಎರಡೂ ದೇಶಗಳು ಅಭಿನ್ನ. ನಮ್ಮಲ್ಲಿರುವ ಹಾಗೆ ಅಲ್ಲಿಯೂ ಪ್ರಜಾಪ್ರಭುತ್ವ ಇದೆ. ಅಲ್ಲಿ ನಡೆಯುವುದು ಇಲ್ಲೂ ನಡೆಯುತ್ತದೆ. ಅಲ್ಲಿ ನಡೆಯಲೇಬಾರದ್ದು ಇಲ್ಲೂ ನಡೆಯಲೇಬಾರದು.  ತೀವ್ರವಾದ ನಮ್ಮಲ್ಲಿನದಕ್ಕಿಂತ ಅಲ್ಲಿ ತುಸು ಹೆಚ್ಚು ಸವಾರಿಗೆ ಹವಣಿಸಿದೆ. ಅಲ್ಲಿನ ಮಿಲಿಟರಿ ಅತಿರೇಕದ್ದು. ಅಕ್ಷಮ್ಯ. ಮತ್ತೆ ದೇಶ ಪುಟ್ಟದಾದಷ್ಟು ಅದಕ್ಕೆ ಭಯಗಳು ಜಾಸ್ತಿ. ಮಿಲಿಟರಿ ಕವಚದಲ್ಲಿ ಅದು ಸುರಕ್ಷಾ ಭಾವವನ್ನು ಕಲ್ಪಿಸಿಕೊಳ್ಳುತ್ತದೆ. ಅದೊಂದು ತರಹದ ಸಮಾಧಾನ. ಆದರೆ ಭ್ರಮೆಯಿಂದ ಕೂಡಿದ್ದು. ಭಯೋತ್ಪಾದನೆ ಕೂಡ ಒಂದರ್ಥದಲ್ಲಿ ಪುಕ್ಕಲುತನವೇ ಆಗುತ್ತದೆ. ಹಿಂಸಾ ಪ್ರವೃತ್ತಿಗೆ ಹೆದರಿಸುವುದೇ ಕೆಲಸ. ಹೆದರಿಸುವವರು ಶೂರರು, ಧೀರರು ಮತ್ತು ಜೀನಿಯಸ್‌ ಆಗಿರಲು ಹೇಗೆ ಸಾಧ್ಯ? ಮುಖ್ಯವಾಗಿ ಅಲ್ಲಿನ ವಿದ್ಯಮಾನಗಳನ್ನು ಗಮನಿಸುವುದಾದರೆ, ಮಿಲಿಟರಿ, ಮತಾಂಧರು, ಭಯೋತ್ಪಾದಕರು, ಭ್ರಷ್ಟರು ಇದೆಲ್ಲದರಿಂದ ಪಾಕಿ ತುಂಬ ರೋಸಿ ಹೋಗಿದ್ದಾನೆ. ಒಂದು ಸೂಕ್ತ ಪರ್ಯಾಯಕ್ಕಾಗಿ ಹಂಬಲಿಸಿದ್ದಾನೆ. ಸಹಜ

ಮನುಷ್ಯ ಜಾತಿ ತಾನೊಂದೇ ವಲಂ...

ಭಾರತದಲ್ಲಿ ಜಾತಿ ವ್ಯವಸ್ಥೆ ಹೇಗೆ ಹುಟ್ಟಿತು ಎಂಬುದಕ್ಕೆ ಯಾವುದೇ ನಿರ್ಧಿಷ್ಟ ಥಿಯರಿ ಇಲ್ಲ. ಆದರೆ, ಇಲ್ಲಿನ ವರ್ಗ ಸೃಷ್ಟಿ ಮಾತ್ರ ಇರಾನ್ ವ್ಯವಸ್ಥೆಯಂತೇ ಇದೆ.  ಪುರಾತನ ಇರಾನಿನ ಚರಿತ್ರೆಯಲ್ಲಿ ಇಂಥದೊಂದು ವ್ಯವಸ್ಥೆ ಇತ್ತು. ಅದಕ್ಕೆ ಪಿಸ್ತ್ರಾಸ್ ಎನ್ನುತ್ತಾರೆ. ನಮ್ಮಲ್ಲಿ ಅದು ಚಾತುರ್ವರ್ಣವಾಗಿದೆ. ಅಲ್ಲಿ ಅಥ್ರವಾನ್ಸ್ (ಪ್ರೀಸ್ಟ್ ಕ್ಲಾಸ್), ರಥೈಸ್ತಾ (ವಾರಿಯರ್ಸ್), ವಸ್ತ್ರಿಯಾ (ಮರ್ಕಂಟೈಲ್ ಕ್ಲಾಸ್) ಮತ್ತು ಹ್ಯುತಿ (ಆರ್ಟಿಸನ್) ಎನ್ನುವ ವರ್ಗ ವ್ಯವಸ್ಥೆ ಇದೆ. ನಮ್ಮಲ್ಲಿ ಇದನ್ನು ಕಲ್ಪಿಸಿಕೊಂಡರೆ ಪುರೋಹಿತ ಅಥವಾ ಬ್ರಾಹ್ಮಣ (ಅಥ್ರವಾನ್ಸ್), ಕ್ಷತ್ರಿಯ  (ರಥೈಸ್ತಾ), ವೈಶ್ಯ  (ವಸ್ತ್ರಿಯಾ) ಮತ್ತು ಶೂದ್ರ (ಹ್ಯುತಿ) ಎಂದು ಅರ್ಥೈಸಿಕೊಳ್ಳಬಹುದು.  ಆದಿ ಕಾಲದ ಇರಾನಿಯನ್ ವ್ಯವಸ್ಥೆ ಹೀಗೇ ಇತ್ತು. ಅದೇ ನಾಲ್ಕು ವರ್ಗಗಳು ಭಾರತದಲ್ಲೂ ಈಗಲೂ ಚಾಲ್ತಿಯಲ್ಲಿವೆ. ಹೀಗೆ ಒಂದು ಇರಾನ್ ಸಂಬಂಧ ಭಾರತಕ್ಕಿದೆ. ಚರ್ಮದ ಬಣ್ಣ, ನಯ ನಾಜೂಕು, ಕಣ್ಣು, ಬುದ್ಧಿವಂತಿಕೆಯನ್ನು ಹೋಲಿಸಿದರೆ ಭಾರತದ ಅದರಲ್ಲೂ ಉತ್ತರ ಭಾರತದ ಕಾಶ್ಮೀರಿ ಪಂಡಿತರು, ಉತ್ತರ ಪ್ರದೇಶದ ಪಂಡಿತ್, ಚಿತ್ಪಾವನ ಬ್ರಾಹ್ಮಣರು, ನಮ್ಮ ಕರಾವಳಿ ಮತ್ತು ಉತ್ತರ ಕನ್ನಡದ ಹವ್ಯಕರು ಹೆಚ್ಚೂ ಕಮ್ಮಿ ಇರಾನಿಗಳನ್ನು ಹೋಲುತ್ತಾರೆ (ಮೇಲ್ನೋಟಕ್ಕೆ).  ಬಹುಶಃ ಹೀಗೂ ಆಗಿರಬಹುದು, ಆಗ ಇರಾನ್ ನಲ್ಲಿ ಕ್ರೈಸ್ತ ಮತ್ತು ಇಸ್ಲಾಂ ಮುಂಚೆಯೂ ಹಲವಾರು ಸುಧಾರಣಾವಾದಿಗಳ ಅಥವಾ ಬಂಡುಕೋರರ