ವಿಷಯಕ್ಕೆ ಹೋಗಿ

‘ಬಲ’ಗೊಳ್ಳುತ್ತಿರುವ ರಾಹುಲ್‌


ನೆಹರೂ ನೇತೃತ್ವದ ಕಾಂಗ್ರೆಸ್‌ ತೊರೆದ ಇಂದಿರಾ ಗಾಂಧಿ ಹೊಸ ಕಾಂಗ್ರೆಸ್‌ ಕಟ್ಟಿಕೊಂಡರು. ರಾಜೀವ್‌ ಅದನ್ನೇ ಮುಂದುವರಿಸಿದರು. ಇಬ್ಬರೂ ಕೊಲೆಯಾದರು. ಅಲ್ಲಿಯವರೆಗೂ ಭವ್ಯವಾಗಿದ್ದ ಕಾಂಗ್ರೆಸ್‌ ಎನ್ನುವ ಮಹಲಿಗೆ ಮುದಿ ರಾಜಕಾರಣಿಯೊಬ್ಬ ಹೊಕ್ಕುಬಿಟ್ಟ. ಧ್ವಂಸದ ಅಧ್ಯಾಯ ಆರಂಭಿಸಿ, ‘ಬಳು ಹೊಕ್ಕ ಮನೀ ಅಳು’ ಎನ್ನುವಂತೆ ಕಾಂಗ್ರೆಸ್‌ ಅವಸಾನಕ್ಕೆ ನಾಂದಿ ಹಾಡಿದ. ಅಲ್ಲಿಂದಾಚೆಗೆ ಕಾಂಗ್ರೆಸ್‌  ಶೈತಾನ್‌ ಹೊಕ್ಕ ಮಹಲ್‌ ಆಗಿತ್ತು. ಅಕ್ಷರಶಃ ಭೂತ ಬಂಗಲೆಯಾಗಿತ್ತು.

 ತೀವ್ರ ಒತ್ತಡದಲ್ಲಿದ್ದ ಸೋನಿಯಾ ಅಳುಕುತ್ತಲೇ ಮಹಲು ಹೊಕ್ಕರು. ಗಾಂಧಿ ಮನೆತನದ ಸೊಸೆ, ಮೂಲ ಇಟಲಿಯ ಸಮಚಿತ್ತದ ಹೆಣ್ಣುಮಗಳು ಹಲ್ಲಿ, ಬಾವಲಿ, ಹಾವುಗಳಿಂದ ತುಂಬಿದ ಮಹಲನ್ನು ಸ್ವಚ್ಛಗೊಳಿಸಿ ಮತ್ತೆ ವಾಸ ಯೋಗ್ಯವಾಗಿಸಿಕೊಂಡರು. ಅಳಿದುಳಿದ ವಫಾದಾರ್‌ಗಳು ಕೋಠ್ರಿ ಹೊಕ್ಕರು. ಕೆಲವರು ಅಕ್ಷರಶಃ ಕಾವಲಾದರು. ಧ್ವಂಸದಲ್ಲಿ ಹೋದ ಮಹಲಿನ ಮಾನ ಉಳಿಸಿದರು. ರಾಜಕೀಯ ಮತ್ಸರಿಯರ ಮಸಲತ್ತುಗಳ ನಡುವೆಯೂ ಯಶಸ್ಸು ಕಾಲಬುಡಕ್ಕೇ ಬಂದಾಗ ಧಿಕ್ಕರಿಸಿ ಸರದಾರನೊಬ್ಬನಿಗೆ ದೇಶದ ಭವಿಷ್ಯ ಕಟ್ಟುವ ಕೆಲಸ ವಹಿಸಿ ಬೆನ್ನಿಗೆ ನಿಂತರು. ಮನೆಯ ಹಿರಿಯಕ್ಕನಂತೆ ನಿಂತು ಕುಸಿಯಲಿದ್ದ ಮಹಲನ್ನು ಹೆಗಲು ಕೊಟ್ಟು ತಡೆದರು.  ಹಗರಣದ ಆರೋಪ, ಪ್ರತ್ಯಾರೋಪಗಳ ಬೆಂಕಿಮಳೆಗೆ ಮಹಲು ಮತ್ತೆ ತುತ್ತಾಯಿತು.

  ದೇಶದ ಒಂದು ಮೂಲೆಯಲ್ಲಿ ಕೋಮು ಗಲಭೆ, ಹಿಂಸೆ. ಪ್ರತಿಹಿಂಸೆ ಎಬ್ಬಿಸಿ ಅದರ ಕಾವನ್ನು ಎಲ್ಲೆಡೆ ಹಬ್ಬಿಸಿದವರು ಈಗ ರಾಜಕೀಯವಾಗಿಯೂ ದೈತ್ಯಾಕಾರದಲ್ಲಿ ಎದ್ದು ನಿಂತಿದ್ದರು. ಹಿಂದೂ ಮಹಾಸಾಗರ, ಅರಬ್ಬೀ ಸಮುದ್ರದಂಥ ಆ ಸಣ್ಣದೊಂದು ಅಲೆ ಕ್ರಮೇಣ ಅಬ್ಬರಿಸಿ ಸುತ್ತುವರಿದು ಇದೀಗ ಪುರಾನೀ ಮಹಲನ್ನೇ ಅಲ್ಲಾಡಿಸಿ ಭಾಗಶಃ ಕೆಡವಿ ಹಾಕಿತು. ಆಘಾತ ತಡಕೊಂಡು ಅಳುದುಳಿದ ಅವಶೇಷಗಳಿಂದ ಮತ್ತೆ ಮಹಲಿನ ರಿಪೇರಿ ಮಾಡುತ್ತ ಸುಸ್ತಾದ ಸೋನಿಯಾ, ಮಹಲಿನ ಜವಾಬುದಾರಿಯನ್ನು ಖಾನ್‌ದಾನಿನ ಕೊನೆಯ ಕುಡಿ ರಾಹುಲ್‌ಗೆ ವಹಿಸಲು ನಿರ್ಧರಿಸಿದರು. ಅದನ್ನು ತುಂಬ ಜವಾಬುದಾರಿಯಿಂದಲೇ ಸ್ವೀಕರಿಸಿರುವ ರಾಹುಲ್‌, ಇತ್ತೀಚೆಗಿನ ಉತ್ತರದ ಅಗ್ನಿಪರೀಕ್ಷೆಯಲ್ಲಿ ಯಾಕೋ ಬೆಂದುಹೋದ. ಮಸಲತ್ತುಗಳ ಮಹಾಪೂರಕ್ಕೆ ಕೊಚ್ಚಿ ಹೋದ. ಅಲ್ಲಿನ ಕಹಿಯಿಂದ ಪಾಠ ಕಲಿತು ಅಲೆಗೆ ಎದೆಯೊಡ್ಡಿ ನಿಲ್ಲುವ ತಾಕತ್‌ ಅನ್ನು ಕಡೆಗೂ ಕಂಡುಕೊಂಡ. ಅರಬೀ ಸಮುದ್ರಕ್ಕೆ ಎದುರುನಿಂತ. ರಭಸದ ಅಲೆಗಳಿಗೆ ಎದೆಯೊಡ್ಡಿದ. ಅದೂ ಏಕಾಂಗಿಯಾಗಿ.
 ಈ ನಲವತ್ತೇಳರ ಯುವಕ ತನ್ನ ಪೆಪ್ಪರ್‌ ಸಾಲ್ಟ್‌ ದಾಡಿ ಟ್ರಿಮ್‌ ಮಾಡಿಕೊಳ್ಳಲು ಟೈಮಿಲ್ಲದಂತೆ ಪೂರ್ವದ ಗುಜರಾತ್ ರಾಜ್ಯವನ್ನು ಸುತ್ತಿ ಪಕ್ಷವನ್ನು ಮತ್ತೆ ಬಲಪಡಿಸಿದ. ತನ್ನನ್ನು ತಾನು ಕಟ್ಟಿಕೊಂಡ. ಪಯಣದಲ್ಲಿ ಎದುರಾದ ಪಾಟೀದಾರ್ ಸಮಾಜದ ಹೋರಾಟಗಾರ ಹಾರ್ದಿಕ್‌ ಮತ್ತು ದಲಿತ ಲೋಕದ ಜಿಗ್ನೇಶ್‌ ಮೇವಾನಿ ಮತ್ತಿತರ ಉದಯೋನ್ಮುಖ ಆಶಾಕಿರಣಗಳನ್ನು ಜೋಡಿದಾರ್‌ ಆಗಿಸಿಕೊಂಡ. ದಲಿತ ಪ್ರಜ್ಞೆ ಮತ್ತು ಸುಸ್ಥಿಯಲ್ಲಿರುವ ಪಾಟೀದಾರ್ ಸಮುದಾಯದ ಮೀಸಲಾತಿ ದನಿ ಮತ್ತಿತರ ನಿರೀಕ್ಷೆಗಳನ್ನು ಸಮಚಿತ್ತ ಭಾವದಲ್ಲಿ ಕಂಡು ದಿಟ್ಟ ನಡೆಯನ್ನೇ ರೂಪಿಸಿದ. ಜನರ ಭಾವನೆಗಳಿಗೆ ಸ್ಪಂದಿಸಿದ. ಅವರ ಕಷ್ಟ ಸುಖ ಕೇಳಿದ. ಅವರಿಗೆ ಹತ್ತಿರವಾದ. ಗೆದ್ದೆತ್ತಿನ ಬಾಲ ಹಿಡಿವ ಮಾಧ್ಯಮಗಳ ದಿವ್ಯ ನಿರ್ಲಕ್ಷ್ಯ ನಡೆಯ ನಡುವೆಯೂ!
 ಎಲ್ಲಿ ನೋಡಿದಲ್ಲಿ ‘ಕಾಂಗ್ರೆಸ್‌ ಮುಕ್ತ’ ಎನ್ನುವ ಜಾಲಿಮುಳ್ಳುಗಳ ಬೇಲಿಗಳನ್ನೇ ಜಡಿಯಲಾಗಿತ್ತು. ಧೈರ್ಯದಿಂದ ಮುನ್ನುಗ್ಗಿದ ರಾಹುಲ್, ಬೇಲಿ ಭೇದಿಸಿ ಮರುಭೂಮಿಯಲ್ಲಿ ಹೊಸ ಭರವಸೆಯ ಹಸ್ತ ಬೀಸಿದ. ಭಾಯಿಚಾರಾದ ಗುಲಾಬಿಯನ್ನರಳಿಸುವ ಹಂಬಲವನ್ನು ಮತ್ತೆ  ಬಿತ್ತಿದ. ಇನ್ನೇನು ಫಸಲು ಕೈಗೆ ಬರುವ ಹೊತ್ತು. ಆಗಲೇ ಶಕುನದ ಹಕ್ಕಿಗಳು ರಾಹುಲ್‌ ಮಟ್ಟಿಗೆ ಅಪಶಕುನವನ್ನೇ ನುಡಿಯುತ್ತಿವೆ. ಫಲಿತಾಂಶ ಏನೇ ಬರಲಿ. ಒಂದೊಮ್ಮೆ ಸೋಲು ಕಂಡರೆ ಅದೊಂದು ವೀರೋಚಿತ ಸೋಲು. ಆದರೆ, ಮುಂಬರುವ ಮಹಾಚುನಾವಣೆಗೆ ಸಜ್ಜಾಗುವ ದೊಡ್ಡ ಭರವಸೆ ಮೂಡಿಸುವಷ್ಟರಮಟ್ಟಿಗೆ ಸಾಮರಸ್ಯದ ಶಕ್ತಿಗಳ ಬಲಪಡಿಸಿದ್ದು ದೊಡ್ಡ ಗೆಲುವೇ.

 ರಾಹುಲ್‌ ನಿಜಕ್ಕೂ ಮುಗ್ಧ. ಅಷ್ಟೇ ಅಗಾಧ ಕಾಳಜಿಯುಳ್ಳ ನೇತಾರ. ಆತನ ಮುಗ್ಧತೆಯಲ್ಲಿ ಕಪಟವಿಲ್ಲ. ತೀರ ಮಳ್ಳತನವಿಲ್ಲ. ಮಗುವಿನ ಮನಸಿದೆ. ಮಂದಿರ–ಮಸೀದಿ ಕಲ್ಪನೆಗಳ ಬಗ್ಗೆ ಮತಾಂಧತೆ ಇಲ್ಲ. ಆದರೂ ಪ್ರದೇಶದ ಪ್ರಭಾವದಿಂದ, ಕಾಲದ ಒತ್ತಡದಿಂದ ಮಂದಿರ, ದರ್ಗಾ ಸುತ್ತಿದ್ದಾನೆ. ಮಾಲೆ ಧರಿಸಿದ್ದಾನೆ. ಗರ್ಭಗುಡಿಗಳಿಗೆ ತಲೆಬಾಗಿದ್ದಾನೆ. ಮಂಡಿಯೂರಿದ್ದಾನೆ. ಮುಸ್ಲೀಮರ ನಿರ್ಲಕ್ಷ್ಯದ ದಿವ್ಯ ಮಂತ್ರವೊಂದು  ರಿಂಗಣಿಸಿದಾಗೆಲ್ಲ ಸುಮ್ಮನೇ ಆಲಿಸಿ ಮುಂದೆ ಸಾಗಿದ್ದಾನೆ. ಮೊಹಲ್ಲಾಗಳಿಗಿಂತ ಹೆಚ್ಚಾಗಿ ದಲಿತರ ಹಟ್ಟಿಗಳಿಗೆ, ಜೋಡಿದಾರ್‌ಗಳ ಸಮುದಾಯಗಳ ಝೋಪಡಿಗಳಿಗೆ ಎಡತಾಕಿದ್ದಾನೆ. ಇದಕ್ಕೆ ಅಸಹಾಯಕ ಎಂದು ತಮ್ಮನ್ನು ತಾವು ಯಾವತ್ತೂ ಭಾವಿಸದ ಮುಸ್ಲೀಮರೂ ಬೇಸರಿಸಿಲ್ಲ. ಏನೇ ಆಗಲಿ ರಾಹುಲ್‌ ಸಾಕಷ್ಟು ಬದಲಾಗಿದ್ದಾನೆ. ರಾಜಕಾರಣಿಯಾಗಿ ಪಕ್ವಗೊಳ್ಳುತ್ತಿದ್ದಾನೆ ಎಂದೇ ಎಲ್ಲ ಹರಸುತ್ತಿದ್ದಾರೆ.

 ಸಮರ್ಥ ನಾಯಕನಾಗಬಲ್ಲ ಎಲ್ಲ ಗುಣಗಳು ರಾಹುಲ್‌ನಲ್ಲಿವೆ. ತನ್ನೆಲ್ಲ ಶಕ್ತಿ ಒಂದುಮಾಡಿಕೊಂಡು ಎದ್ದು ನಿಲ್ಲಬೇಕಿತ್ತಷ್ಟೇ. ನಿಂತಿದ್ದಾನೆ. ಜೊತೆಯಲ್ಲಿ ಹೊಸ ಹುರುಪಿನ ಯುವ ನಾಯಕರ ಪಡೆ ರೂಪಿಸಿಕೊಳ್ಳುತ್ತಿದ್ದಾನೆ. ಅಜ್ಜಿ. ಅಪ್ಪ ಮತ್ತು ಅಮ್ಮ ಕಟ್ಟಿದ್ದ ಕಾಂಗ್ರೆಸ್‌ನಲ್ಲಿ ಈಗೀಗ ಉಳಿದಿತ್ತಾದರೂ ಏನು? ಮುದಿ ನಾಯಕರು, ತರಲೆಗಳು ಮತ್ತು ತಲೆಹಿಡುಕರಿಂದಲೇ ತುಂಬಿಹೋಗಿದ್ದ ಸೊರಗಿದ ಪಕ್ಷವಾಗಿತ್ತಷ್ಟೇ. ಅದನ್ನೇ ಬಳುವಳಿಯಾಗಿ ಪಡಕೊಂಡ ರಾಹುಲ್‌ಗೆ ಒಂದು ಜೀವಂತ ಆಪ್ತ ಪಡೆ, ಕ್ರಿಯಾಶೀಲ ಮನಸುಳ್ಳ ಕಾರ್ಯಕರ್ತರ ದಂಡು ಕಟ್ಟಿಕೊಳ್ಳುವ ದೊಡ್ಡ ಸವಾಲಿತ್ತು. ಸಮಾಧಾನದಿಂದಲೇ ಸವಾಲನ್ನು ಕೈಗೆತ್ತಿಕೊಂಡಿದ್ದಾನೆ. ಮುಜುಗರ, ಟೀಕೆ, ಅವಮಾನ, ಅಪಹಾಸ್ಯಗಳನ್ನು ಎದುರಿಸಿದ್ದಾನೆ. ಒಳಗೆಲ್ಲೊ ಮಿಸುಕಾಡುತ್ತಿದ್ದ ನಾಯಕತ್ವ ಗುಣಕ್ಕೆ ಇದೆಲ್ಲದರಿಂದ ಟಾನಿಕ್‌ ಪಡೆದುಕೊಂಡಿದ್ದಾನೆ.

 ಗುಜರಾತ್‌ ಚುನಾವಣೆ ರಾಹುಲ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ ಏನೋ ಹೌದು. EVM ಪ್ರಾಂಜಲವಾಗಿದ್ದಲ್ಲಿ ‘ಕಾಂಗ್ರೆಸ್‌ ಮುಕ್ತ’ದ ಮಾತು ಸಧ್ಯಕ್ಕೆ ಅಸಾಧ್ಯ ಎನ್ನುವ ಸಂದೇಶವನ್ನಾದರೂ ಈ ಫಲಿತಾಂಶ ಹೊತ್ತು ತರಲಿದೆ. ಪ್ರಚಂಡ ಬಹುಮತದ ಸರ್ಕಾರ ಯಾವ ಪಕ್ಷಕ್ಕೂ ಕಷ್ಟ. ಸರಳ ಬಹುಮತ ಸಾಧ್ಯವಾಗಬಹುದು ಅಷ್ಟೇ. ಇತರೆ ಸಂಖ್ಯೆಗಳು ವೃದ್ಧಿಯಾಗಿ, ಅವುಗಳ ನೆರವಿನಿಂದ ಒಂದು ಸರಳ ಬಹುಮತದ ಸರ್ಕಾರ ರೂಪಿಸುವ ಸಾಮರ್ಥ್ಯ ಉಭಯ ಪಕ್ಷಗಳಿಗೂ ಸಾಧ್ಯವಾಗಿಸುವ ಫಲಿತಾಂಶ ಬಂದರೇ?! ಹಾಗೆಯೇ ಆಗಲಿ ಎಂದು ಆಶಿಸೋಣ. Absolute majority ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಿ ಸರ್ವಾಧಿಕಾರತ್ವಕ್ಕೆ ಹಾದಿ ರೂಪಿಸುತ್ತದೆ!

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

'ಅನಭಿಜ್ಞ ಶಾಕುಂತಲ': ನೆನಪು ಮರೆವಿನಾಟ

 ಜೀವನವೇ ಒಂದು ನಾಟಕವೆಂದಾದರೆ. ಸಂಬಂಧ ಅನ್ನೋದು ಕಟ್ಟಿಕೊಂಡ ಆಟ. ಅಂದರೆ ನಾಟಕದಂತೆ ಬದುಕು ಕೂಡ ಆಟ ಕಟ್ಟುವ ಕ್ರಿಯೆ. ಇಲ್ಲಿ ಗುರಿ ಎಂದರೆ ಸುಖದ ಅಥವಾ ಸಾರ್ಥಕತೆಯ ದಡ ಸೇರುವುದು. ಈ ಆಟದ ಒಂದು ಹಂತದಲ್ಲಿ ಕಷ್ಟದ ಅಡವಿ ಸೇರುವುದೂ ಇದೆ! 'ಆಡಾಡ್ತ ಅಡವಿ ಸೇರುವುದು' ಅಂತಾರಲ್ಲ ಹಾಗೆ. ಅಡವಿ ಅಂದರೆ ಇಲ್ಲಿ ಸಂಕೀರ್ಣತೆ, ಸಂಕಷ್ಟ ಅವಘಡ, ಸಂದಿಗ್ಧತೆ ಎಂದು ಭಾವಿಸಿಕೊಳ್ಳಬಹುದು. ಬದುಕಿನ ದಾರಿಯಲ್ಲಿ ಒಮ್ಮೆ ಈ 'ಅಡವಿ' ಎದುರಾಗೇ ಆಗುತ್ತದೆ ಎನ್ನುವುದು ವಿಧಿಲಿಖಿತವೇ? ಗೊತ್ತಿಲ್ಲ. ಪ್ರೀತಿ-ಪ್ರೇಮ-ಕಾಮ ಎನ್ನುವ ಬದುಕಿನ ಒಟ್ಟಾರೆ ಆಟ- ಕೂಟದಲ್ಲಿ ಪಡಕೊಳ್ಳುವುದೆಲ್ಲ ಜೀವಕಾರುಣ್ಯವಷ್ಟೇ ಅಲ್ಲ. ಸಂಕಷ್ಟ ಮತ್ತು ಸಂದಿಗ್ಧತೆಯೂ ಜತೆಯಲ್ಲಿರುತ್ತದೆ ಎನ್ನುವುದು ಸಹಜ ಮನೋಧರ್ಮ.  ಬದುಕಿನ ಆಟಕ್ಕೆ ತೆರಕೊಂಡವರಲ್ಲಿ ಹಲವರು ಅನುಭವಿಸಿದ ಮಧುರ ಘಳಿಗೆಗಳನ್ನು ಕಡೆತನಕ ನೆನಪಿಟ್ಟುಕೊಳ್ಳುತ್ತಾರೆ. ಕೆಲವರು ಮರೆತೇ ಬಿಡುತ್ತಾರೆ!?..  ಕಾಳಿದಾಸನ ಮಹಾಕಾವ್ಯ ಶಾಕುಂತಲೆಯಲ್ಲಿ ಈ ಬದುಕು, ಮನುಷ್ಯ ಪ್ರೀತಿ ಪಯಣದ ನೆನಪು ಮತ್ತು ಮರೆವಿನಾಟ ಮನಮಿಡಿಯುವಂತೆ ಚಿತ್ರಣಗೊಂಡಿದೆ. ಈ ಕಾವ್ಯದಲ್ಲಿ ಎಲ್ಲವನ್ನು ವಿಧಿಯೇ ನಿರ್ಧರಿಸಿದಂತೆನಿಸುತ್ತದೆ. ಫೇಟಲಿಸಂ ವಾದಕ್ಕೆ ಪೂರಕವಾದ ಚಿಂತನೆ ಇದೆನ್ನಬಹುದು. ಆಧುನಿಕ ಯುಗದ ಶೇಕ್ಸಪಿಯರ್ ನ ಹಲವು ನಾಟಕಗಳಲ್ಲಿಯೂ ಈ ಫೇಟಲಿಸಂ ಪ್ರಧಾನ ಪಾತ್ರದಂತೆ ವರ್ತಿಸುವುದನ್ನು ಗಮನಿಸಬಹುದು. *

ಇಷ್ಕ್‌ ಕೆ ಇಮ್ತೆಹಾನ್‌ ಔರ್‌ ಭೀ ಹೈ’.. ಇಮ್ರಾನ್‌ ಖಾನ್‌!

ಪಾಕಿಸ್ತಾನದ ಬಗ್ಗೆ ಮಾತನಾಡುವುದು ಮಹಾ ಪಾಪದ ಕೆಲಸವೇನಲ್ಲ. ಹಾಗೆ ಭಾವಿಸಬೇಕಿಲ್ಲ. ಅದು ಒಪ್ಪಿತವೊ ಇಲ್ಲವೋ, ಅದರ ಬಗ್ಗೆ ಅಲಕ್ಷ್ಯವೋ ನಿರ್ಲಕ್ಷ್ಯವೊ ಏನೇ ಆದರೂ ಅದು ಒಂದು ದೇಶ. ನೆರೆಯ ರಾಷ್ಟ್ರ. ‘ಪಡೋಸಿ...’ ಸಂಬಂಧದಲ್ಲಿ ನಮ್ಮದೇ ಕರುಳಬಳ್ಳಿ. ಭಾಷೆ, ಜನಜೀವನ ಶೈಲಿಯಲ್ಲಿ ಬದಲಾದರೂ ಮನುಷ್ಯ ಭಾವ, ಬದುಕುವ ಸಾಮಾನ್ಯ ಕಾಳಜಿ  ಒಂದೇ. ಹಾಗೆ ನೋಡಿದರೆ ಸಾಂಸ್ಕೃತಿಕವಾಗಿ ಎರಡೂ ದೇಶಗಳು ಅಭಿನ್ನ. ನಮ್ಮಲ್ಲಿರುವ ಹಾಗೆ ಅಲ್ಲಿಯೂ ಪ್ರಜಾಪ್ರಭುತ್ವ ಇದೆ. ಅಲ್ಲಿ ನಡೆಯುವುದು ಇಲ್ಲೂ ನಡೆಯುತ್ತದೆ. ಅಲ್ಲಿ ನಡೆಯಲೇಬಾರದ್ದು ಇಲ್ಲೂ ನಡೆಯಲೇಬಾರದು.  ತೀವ್ರವಾದ ನಮ್ಮಲ್ಲಿನದಕ್ಕಿಂತ ಅಲ್ಲಿ ತುಸು ಹೆಚ್ಚು ಸವಾರಿಗೆ ಹವಣಿಸಿದೆ. ಅಲ್ಲಿನ ಮಿಲಿಟರಿ ಅತಿರೇಕದ್ದು. ಅಕ್ಷಮ್ಯ. ಮತ್ತೆ ದೇಶ ಪುಟ್ಟದಾದಷ್ಟು ಅದಕ್ಕೆ ಭಯಗಳು ಜಾಸ್ತಿ. ಮಿಲಿಟರಿ ಕವಚದಲ್ಲಿ ಅದು ಸುರಕ್ಷಾ ಭಾವವನ್ನು ಕಲ್ಪಿಸಿಕೊಳ್ಳುತ್ತದೆ. ಅದೊಂದು ತರಹದ ಸಮಾಧಾನ. ಆದರೆ ಭ್ರಮೆಯಿಂದ ಕೂಡಿದ್ದು. ಭಯೋತ್ಪಾದನೆ ಕೂಡ ಒಂದರ್ಥದಲ್ಲಿ ಪುಕ್ಕಲುತನವೇ ಆಗುತ್ತದೆ. ಹಿಂಸಾ ಪ್ರವೃತ್ತಿಗೆ ಹೆದರಿಸುವುದೇ ಕೆಲಸ. ಹೆದರಿಸುವವರು ಶೂರರು, ಧೀರರು ಮತ್ತು ಜೀನಿಯಸ್‌ ಆಗಿರಲು ಹೇಗೆ ಸಾಧ್ಯ? ಮುಖ್ಯವಾಗಿ ಅಲ್ಲಿನ ವಿದ್ಯಮಾನಗಳನ್ನು ಗಮನಿಸುವುದಾದರೆ, ಮಿಲಿಟರಿ, ಮತಾಂಧರು, ಭಯೋತ್ಪಾದಕರು, ಭ್ರಷ್ಟರು ಇದೆಲ್ಲದರಿಂದ ಪಾಕಿ ತುಂಬ ರೋಸಿ ಹೋಗಿದ್ದಾನೆ. ಒಂದು ಸೂಕ್ತ ಪರ್ಯಾಯಕ್ಕಾಗಿ ಹಂಬಲಿಸಿದ್ದಾನೆ. ಸಹಜ

ಮನುಷ್ಯ ಜಾತಿ ತಾನೊಂದೇ ವಲಂ...

ಭಾರತದಲ್ಲಿ ಜಾತಿ ವ್ಯವಸ್ಥೆ ಹೇಗೆ ಹುಟ್ಟಿತು ಎಂಬುದಕ್ಕೆ ಯಾವುದೇ ನಿರ್ಧಿಷ್ಟ ಥಿಯರಿ ಇಲ್ಲ. ಆದರೆ, ಇಲ್ಲಿನ ವರ್ಗ ಸೃಷ್ಟಿ ಮಾತ್ರ ಇರಾನ್ ವ್ಯವಸ್ಥೆಯಂತೇ ಇದೆ.  ಪುರಾತನ ಇರಾನಿನ ಚರಿತ್ರೆಯಲ್ಲಿ ಇಂಥದೊಂದು ವ್ಯವಸ್ಥೆ ಇತ್ತು. ಅದಕ್ಕೆ ಪಿಸ್ತ್ರಾಸ್ ಎನ್ನುತ್ತಾರೆ. ನಮ್ಮಲ್ಲಿ ಅದು ಚಾತುರ್ವರ್ಣವಾಗಿದೆ. ಅಲ್ಲಿ ಅಥ್ರವಾನ್ಸ್ (ಪ್ರೀಸ್ಟ್ ಕ್ಲಾಸ್), ರಥೈಸ್ತಾ (ವಾರಿಯರ್ಸ್), ವಸ್ತ್ರಿಯಾ (ಮರ್ಕಂಟೈಲ್ ಕ್ಲಾಸ್) ಮತ್ತು ಹ್ಯುತಿ (ಆರ್ಟಿಸನ್) ಎನ್ನುವ ವರ್ಗ ವ್ಯವಸ್ಥೆ ಇದೆ. ನಮ್ಮಲ್ಲಿ ಇದನ್ನು ಕಲ್ಪಿಸಿಕೊಂಡರೆ ಪುರೋಹಿತ ಅಥವಾ ಬ್ರಾಹ್ಮಣ (ಅಥ್ರವಾನ್ಸ್), ಕ್ಷತ್ರಿಯ  (ರಥೈಸ್ತಾ), ವೈಶ್ಯ  (ವಸ್ತ್ರಿಯಾ) ಮತ್ತು ಶೂದ್ರ (ಹ್ಯುತಿ) ಎಂದು ಅರ್ಥೈಸಿಕೊಳ್ಳಬಹುದು.  ಆದಿ ಕಾಲದ ಇರಾನಿಯನ್ ವ್ಯವಸ್ಥೆ ಹೀಗೇ ಇತ್ತು. ಅದೇ ನಾಲ್ಕು ವರ್ಗಗಳು ಭಾರತದಲ್ಲೂ ಈಗಲೂ ಚಾಲ್ತಿಯಲ್ಲಿವೆ. ಹೀಗೆ ಒಂದು ಇರಾನ್ ಸಂಬಂಧ ಭಾರತಕ್ಕಿದೆ. ಚರ್ಮದ ಬಣ್ಣ, ನಯ ನಾಜೂಕು, ಕಣ್ಣು, ಬುದ್ಧಿವಂತಿಕೆಯನ್ನು ಹೋಲಿಸಿದರೆ ಭಾರತದ ಅದರಲ್ಲೂ ಉತ್ತರ ಭಾರತದ ಕಾಶ್ಮೀರಿ ಪಂಡಿತರು, ಉತ್ತರ ಪ್ರದೇಶದ ಪಂಡಿತ್, ಚಿತ್ಪಾವನ ಬ್ರಾಹ್ಮಣರು, ನಮ್ಮ ಕರಾವಳಿ ಮತ್ತು ಉತ್ತರ ಕನ್ನಡದ ಹವ್ಯಕರು ಹೆಚ್ಚೂ ಕಮ್ಮಿ ಇರಾನಿಗಳನ್ನು ಹೋಲುತ್ತಾರೆ (ಮೇಲ್ನೋಟಕ್ಕೆ).  ಬಹುಶಃ ಹೀಗೂ ಆಗಿರಬಹುದು, ಆಗ ಇರಾನ್ ನಲ್ಲಿ ಕ್ರೈಸ್ತ ಮತ್ತು ಇಸ್ಲಾಂ ಮುಂಚೆಯೂ ಹಲವಾರು ಸುಧಾರಣಾವಾದಿಗಳ ಅಥವಾ ಬಂಡುಕೋರರ