ವಿಷಯಕ್ಕೆ ಹೋಗಿ

ತಲಾಖ್ ತಲಾಖ್ ತಲಾಖ್ಒಟ್ಟಾಗಿ ಸಂಬಂಧವಾಗುತ್ತೇವೆ. ಸಂಬಂಧದಿಂದ ಒಟ್ಟಾಗುತ್ತೇವೆ. ಎರಡೂ ಸಾಧ್ಯವಿದೆ. ಬಂಧ ಗಟ್ಟಿಗೊಳ್ಳುವುದಕ್ಕೆ ಬೈಡಿಫಾಲ್ಟ್‌ ಆದ ಏನೂ ಇರುವುದಿಲ್ಲ. ಮನೆ ಕಟ್ಟಿಕೊಳ್ಳುವಂತೆ ಮನಸೂ ಕಟ್ಟಿಕೊಳ್ಳುವಂಥದು. ಒಂದು ತಂತು ತಂತಾನೇ ಎಲ್ಲ ನೋಡಿಕೊಳ್ಳಲು ಸಾಧ್ಯವಿದ್ದರೆ ಪ್ರಜ್ಞಾಪೂರ್ವಕವಾದ ಪ್ರಯತ್ನಗಳ ಅಗತ್ಯವಿರುತ್ತಿರಲಿಲ್ಲ. ಯಾರೂ ಯಾರ ಬದುಕಿಗೆ ಸುಮ್ಮನೇ ಸೇರುವುದಿಲ್ಲ.
 ಮನುಷ್ಯರ ನಡುವೆ ಫಲಾಪೇಕ್ಷೆಗಳ ಹಂಗಿಲ್ಲದ ಅಕಾರಣ ಸಂಬಂಧಗಳೂ ಇವೆ. ಆದರೆ ಮದುವೆ ಎನ್ನುವ ಖಾಸಗಿ ಸಂಬಂಧದಲ್ಲಿ ನಿರ್ದಿಷ್ಟ ನಿರೀಕ್ಷೆಗಳಿರುವುದರಿಂದ ಅದೊಂದು ಏರ್ಪಾಟು. ಇದನ್ನೇ ಕ್ರಮಬದ್ಧ ಶಿಸ್ತಿಗೊಳಪಡಿಸುವ ಜವಾಬುದಾರಿಯನ್ನು ಕುಲ, ಜಾತಿ, ಧರ್ಮಗಳು ಹೊತ್ತುಕೊಂಡು ಸಾಂಸ್ಥಿಕ ಸ್ವರೂಪದಲ್ಲಿ ನಿಯಂತ್ರಿಸುತ್ತಿವೆ. ನಾಗರಿಕತೆ ಕಟ್ಟಿಕೊಳ್ಳುವ ಪ್ರಕ್ರಿಯೆಯಲ್ಲಿ ಹುಟ್ಟಿಕೊಂಡ ಇಂಥ ವ್ಯವಸ್ಥೆಗಳು ಕಾಲಾಂತರದಲ್ಲೂ ಮುಂದುವರಿದಿವೆ.
  ಬುಡಕಟ್ಟುಗಳಲ್ಲಿ ಹಂಚಿಹೋಗಿದ್ದ ಅರೇಬಿಯನ್ನರನ್ನು ಒಗ್ಗೂಡಿಸಿ ನಿರಾಕಾರವಾದ ಏಕದೇವೋಪಾಸನೆ ವ್ಯಾಪ್ತಿಗೆ ತಂದಿದ್ದು ಪ್ರವಾದಿ ಮುಹಮ್ಮದ್‌ ನೇತೃತ್ವದ ಇಸ್ಲಾಂ. ಅದು ಅಪರೂಪದ ಅಸ್ಮಿತೆಯಾಗಿ ಇಂಡಿಯಾದಲ್ಲೂ ಹಬ್ಬಿದೆ. ಏಕದೇವೋಪಾಸನೆಗೆ ಪೂರಕ ಐದು ಮುಖ್ಯ ನೇಮಗಳನ್ನು ಇಸ್ಲಾಂ ರೂಪಿಸಿಕೊಂಡಿತು. ಕಲ್ಮಾ, ರೋಜಾ, ನಮಾಜ್‌, ಜಕಾತ್‌ ಮತ್ತು ಹಜ್‌. ಇವಕ್ಕೆಲ್ಲ ಕರಾರುವಾಕ್ಕಾದ ನೀತಿ ಸಂಹಿತೆಗಳನ್ನು ಅದು ರೂಪಿಸಿತು. ಹಾಗೆಯೇ ಸಾಮಾಜಿಕ ಬದುಕಿಗೂ. ಗಮನಿಸಬೇಕಿರುವ ಅಂಶ– ಇಸ್ಲಾಂನಲ್ಲಿ ದೇವೋಪಾಸನೆಗಿರುವಂತೆ ನಿರ್ದೇಶನಗಳು ಸಾಮಾಜಿಕ ಬದುಕಿಗೂ ಇವೆ.
 ವಿಗ್ರಹಾರಾಧನೆ ಹರಾಮ್‌ ಎನ್ನುವುದು ಇಸ್ಲಾಂನ ಸ್ಪಷ್ಟ ನಿಲುವು. ಆಹಾರದ ವಿಷಯದಲ್ಲಿ ಕೆಲವು ಪ್ರಾಣಿಗಳ ಮಾಂಸ ಹರಾಮ್‌. ತಾರತ್‌ ಅಂದರೆ ಶುಚಿತ್ವ (ವಿಶೇಷವಾಗಿ ಲಿಂಗಾಂಗಗಳು) ಇಟ್ಟುಕೊಳ್ಳದೇ ನಮಾಜ್‌ ಕುಬೂಲ್‌ ಆಗುವುದಿಲ್ಲ. ಹೆಣ್ಣಾಗಲಿ ಗಂಡಾಗಲಿ ಕುಳಿತೇ ಮೂತ್ರ ವಿಸರ್ಜನೆ ಅಪರೂಪದ ಸಮಾನತೆಯ ನಡೆ. ಹಾಗೆಯೇ ಹೆಣ್ಣು– ಗಂಡು ಪರಸ್ಪರ ಸೇರುವುದಕ್ಕೂ ನೀತಿ ಸಂಹಿತೆಗಳಿವೆ.
  ನಿಕಾಹ್‌ಗೊಳಪಡದೇ ಹೆಣ್ಣು–ಗಂಡು ದೈಹಿಕವಾಗಿ ಸೇರುವಂತಿಲ್ಲ. ಅಕ್ರಮ ಸಂಬಂಧ ಹರಾಮ್‌. ಯಾರೆಲ್ಲರನ್ನು ಮದುವೆಯಾಗಬಹುದು ಎನ್ನುವ ಸ್ಪಷ್ಟತೆ ಇಸ್ಲಾಂನಲ್ಲಿದೆ. ಕಾಫಿರ್‌  (ದೈವತ್ವ ನಿರಾಕರಣೆ) ಜೊತೆಗಿನ ನಿಕಾಹ್‌ ಅನ್ನು ಅದು ಒಪ್ಪುವುದಿಲ್ಲ.  ನಿಕಾಹ್‌ ಮಾಡಿಕೊಳ್ಳುವುದಾದರೆ ಅವನನ್ನು/ಅವಳನ್ನು ಕಾಫಿರಿಯತ್‌ನಿಂದ ಬಿಡಿಸಿಕೊಂಡೇ ಮುಂದುವರಿಯಬೇಕು. ಪ್ರೀತಿಸಿದ ಜೋಡಿಗೆ ಮುಂದಿನ ಎಲ್ಲವೂ ಮದುವೆ ನಂತರವೇ. ಅನ್ಯ ಧರ್ಮೀಯರನ್ನು ಪ್ರೀತಿಸುವ ಮುಸ್ಲಿಂ ಯುವಕ/ಯುವತಿ ಎದುರಿಸುವ ಸಂಕಷ್ಟ ಇದೇ. ಈ ಕಾರಣಕ್ಕೆ ಇಸ್ಲಾಂ ಧರ್ಮ ಸೇರುವುದು ಅನಿವಾರ್ಯವಾಗಿಬಿಡುತ್ತದೆ. ಪ್ರೇಮದ ನಾಟಕವಾಡಿ ಧರ್ಮಕ್ಕೆ ಎಳೆತರುವುದನ್ನು ಹರಾಮ್‌ ಎಂದೇ ಇಸ್ಲಾಂ ಪರಿಗಣಿಸುತ್ತದೆ.
 ಇಸ್ಲಾಂನಲ್ಲಿ ನಿಕಾಹ್‌ ಒಂದು ವ್ಯವಸ್ಥಿತ ಒಡಂಬಡಿಕೆ. ಹೆಣ್ಣು ಮತ್ತು ಗಂಡಿನ ಕಡೆಯ ವಕೀಲರು, ಸಾಕ್ಷಿಗಳು, ಕುಟುಂಬ ವರ್ಗ ಮತ್ತು ಧರ್ಮದ ಹಿರೀಕರ ಸಮ್ಮುಖದಲ್ಲಿ ಅಧಿಕೃತ ಮೊಹರು, ರುಜುಗಳೊಂದಿಗೆ ನಿಕಾಹ್‌ ನೆರವೇರುವಂಥದು. ಬಂಧ ಸುಮಧುರವಾಗಿರಲಿ ಎಂದು ನಿಯತ್‌ ಮಾಡುವುದು, ರುಜು, ದುವಾ ಮಾಡುವುದು ಎಂದರೆ ಅಲ್ಲಾಹುವಿನ ಮೇಲೆ ಪ್ರಮಾಣ ಮಾಡುವುದು ಎಂದೇ ಅರ್ಥ. ಮುರಿದುಕೊಳ್ಳುವ ಪ್ರಮೇಯ ಬಂದರೆ ಅದಕ್ಕೂ ನೀತಿ, ನೇಮಗಳಿವೆ. ಅದುವೇ ತಲಾಖ್‌ನಾಮಾ. ಗಂಡಸು ವಿಚ್ಛೇದನ ಬಯಸಿದರೆ ಅದು ತಲಾಖ್‌. ಹೆಣ್ಣು ಬಯಸಿದರೆ ಖುಲಾ.
 ನಿಕಾಹ್‌ ಸಂಬಂಧ ಮುಂದುವರಿಸುವಲ್ಲಿ ವಿಫಲವಾದರೆ ಅದರಿಂದ ಹೊರಬರುವುದಕ್ಕೆ ಅವಕಾಶವಿದೆ. ಅದೇ ತಲಾಖ್‌  ಯಾ ಖುಲಾ. ಇದೊಂದು ಮಾನವೀಯ ನೆಲೆಯಲ್ಲಿ ಉತ್ತಮ ಮಾರ್ಗ. ಒಟ್ಟು ಮೂರು ಬಾರಿ ತಲಾಖ್‌ ಹೇಳುವ ಅವಕಾಶವಿದೆ. ಪ್ರತಿ ಸಲ ಕಾಲಾವಕಾಶವಿರುತ್ತದೆ. ಮನಸು ಬದಲಾಯಿಸಿಕೊಂಡರೆ ಅದಕ್ಕೂ ಅವಕಾಶವಿದೆ.
 ಪೂರ್ಣ ತಲಾಖ್‌ ಪಡೆದುಕೊಂಡ ನಂತರ ಅದೇ ಜೋಡಿ ಮತ್ತೆ ವಿವಾಹ ಬಂಧನಕ್ಕೊಳಪಡುವುದಾದಲ್ಲಿ ಷರತ್ತುಗಳಿವೆ. ಇದರಲ್ಲಿ ಕೆಲವು ನೈತಿಕ ಅಂಶಗಳನ್ನು ಗಮನಿಸಬೇಕು. ಮನುಷ್ಯ ಮಾಡುವ ಸಹಜ ತಪ್ಪುಗಳಿಗೆ ಒಂದು ಮಟ್ಟಿನ ಕ್ಷಮಾಪಣೆ ಇರುತ್ತದೆ. ತಪ್ಪಿಸಬಹುದಾದ ಮತ್ತು ಮಾನವೀಯ ನೆಲೆಯಲ್ಲಿ ಮಾಡಲೇಬಾರದಂಥ ತಪ್ಪುಗಳನ್ನು ಮಾಡಿದಲ್ಲಿ ಅದಕ್ಕೆ ಸಜೆ ಸ್ವಾಭಾವಿಕ ನ್ಯಾಯವಲ್ಲವೇ? ಸಂಬಂಧಗಳಲ್ಲಿ ಮನಸೋ ಇಚ್ಛೆ ನಡೆದುಕೊಳ್ಳುವುದು ಅಲ್ಲಾಹುವಿನ ಎದುರು ಉದ್ಧಟತನ ತೋರಿದಷ್ಟೇ ದೊಡ್ಡ ತಪ್ಪಾಗುತ್ತದೆ. ತಪ್ಪುಗಳ ಪುನರಾವರ್ತನೆ ತಡೆಯಲು ಕಠಿಣ ಅಥವಾ ಮುಜುಗರ ಎನಿಸುವ ವಿಧಾನವಿದೆ. ಹೆಣ್ಣು ತನ್ನ ಮೊದಲ ಗಂಡನನ್ನೇ ಪುನಃ ಪತಿಯನ್ನಾಗಿ ಹೊಂದುವುದಾದರೆ, ಮೊದಲ ಪತ್ನಿಯನ್ನೇ ಪತಿ ಮತ್ತೆ ತನ್ನವಳನ್ನಾಗಿಸಿಕೊಳ್ಳುವುದಾದರೆ ಆಕೆ ಬೇರೊಬ್ಬನ ಜೊತೆ ನಿಕಾಹ್‌ ಮಾಡಿಕೊಂಡ ನಂತರ ತಲಾಖ್‌ ಪಡೆದು ಮರುವಿವಾಹ ಮಾಡಿಕೊಳ್ಳಬೇಕಾಗುತ್ತದೆ. ಅಂಥ ಸಂದರ್ಭದಲ್ಲಿ ಅವನಲ್ಲಿ/ಅವಳಲ್ಲಿ ಉಂಟಾಗುವ ಪ್ರಾಯಶ್ಚಿತದ ಮನೋಭಾವನೆ ನೈತಿಕವಾಗಿ ಮುಖ್ಯವಾಗುತ್ತದೆ. ಸೂಕ್ಷ್ಮವಾಗಿ ಗಮನಿಸಿದರೆ ಇದೊಂದು ಮಿತಿಯನ್ನರಿತು ಬಾಳಲು ನೈತಿಕ ಶಕ್ತಿ ತುಂಬುವ ಯತ್ನ ಎನ್ನುವರ್ಥದ ಸಜೆ. ಇದನ್ನು ಬಿದ್ದತ್‌ ಎನ್ನುವ ಹೆಸರಲ್ಲಿ ಮಾಡುತ್ತಾರೆ. ಬಿದ್ದತ್‌ ಅಂದರೆ ಆವಿಷ್ಕಾರ ಎಂದರ್ಥ. ಇದು ಪ್ರವಾದಿ ಮತ್ತು ಸಹಾಬಿಗಳ ನಡೆಯಾಗಿರಲಿಲ್ಲ. ಕೆಲವರು ಕಾಲಾಂತರದಲ್ಲಿ ಮಾಡಿಕೊಂಡ ಒಂದು ಹೊಂದಾಣಿಕೆಯರ್ಥದ ಆವಿಷ್ಕಾರವಷ್ಟೇ.
 ಗಂಡನನ್ನು ಕಳಕೊಂಡ ಅಥವಾ ಗಂಡನಿಂದ ದೂರವಾದ ಅಸಹಾಯ ಹೆಣ್ಣಿಗೆ ಗೌರವಯುತ ಬಾಳು ಕೊಡುವಷ್ಟು ಮಾನವೀಯ ಮೌಲ್ಯಗಳನ್ನು ಸಹಜ ಎಂಬಂತೆ ಎಲ್ಲ ಗಂಡಸರಲ್ಲೂ ಕಾಣಲು ಕಷ್ಟವಿದೆ. ವಿವಾಹ ಬಂಧನಕ್ಕೊಳಪಡುವ ಯಾವ ಗಂಡಸು ಇಂಥ ಸ್ಥಿತಿಯ ಹೆಣ್ಣನ್ನು ಬಾಳಸಂಗಾತಿಯಾಗಿಸಿಕೊಂಡಾನು? ಅದನ್ನು ಸಹಜ ನ್ಯಾಯದಂತೆ ಸಾಧ್ಯವಾಗಿಸಿದ್ದು ಇಸ್ಲಾಂ. ಆ ಕಾರಣಕ್ಕೇ ಧರ್ಮ ಮಾನವೀಯ. ಪ್ರವಾದಿ ಮುಹಮ್ಮದ್‌ ತಮಗಿಂತ ಕನಿಷ್ಠ ಇಪ್ಪತ್ತು ವರ್ಷ ಹಿರಿಯಳು ಮತ್ತು ಗಂಡನನ್ನು ಕಳಕೊಂಡ ಖದೀಜಾರನ್ನು ನಿಕಾಹ್‌ ಮಾಡಿಕೊಳ್ಳುತ್ತಾರೆ. ಇಂಥ ಸಾಮಾಜಿಕ ಸನ್ನಡೆಗಳನ್ನು ಪರಿಪಾಲಿಸುವವನಿಗೆ ಅಲ್ಲಾಹು ಸವಾಬ್‌ (ಫಲ)ನ ಭರವಸೆ ನೀಡಿದ್ದಾನೆ. ಹೆಣ್ಣಿನ ಮರುವಿವಾಹ ಮತ್ತು ಬಹುಪತ್ನಿತ್ವವನ್ನು ಇಸ್ಲಾಂ ಒಪ್ಪಿಕೊಂಡಿದ್ದು ಈ ನೆಲೆಯಲ್ಲಿ. ದೈಹಿಕ ಚಪಲದ ಏಕೋದ್ದೇಶಕ್ಕಾಗಿ ಅಲ್ಲ. ಇದನ್ನು ಅರ್ಥ ಮಾಡಿಕೊಳ್ಳದೇ ತಪ್ಪು ಆಚರಣೆಗಳ ದೆಸೆಯಿಂದ ಧರ್ಮವನ್ನೇ ದೂರಲಾಗದು. ತಪ್ಪಾಗಿ ಅನುಸರಿಸುವವರು ಶಿಕ್ಷೆಗೆ ಅರ್ಹರು.
 ಅರೇಬಿಯನ್‌ ಪ್ರದೇಶದಲ್ಲಿ ಇಸ್ಲಾಂ ಪ್ರವರ್ಧಮಾನಕ್ಕೆ ಬರುವ ಹೊತ್ತು ಅನ್ಯ ಕೋಮಿನವರು ಇಸ್ಲಾಂ ಅಪ್ಪಿಕೊಳ್ಳುವುದು ಒಂದು ಚಳವಳಿಯಂತೆ ನಡೆಯಿತು. ಗಂಡನಿಂದ ಪರಿತ್ಯಕ್ತ ಅಥವಾ ಗಂಡನನ್ನು ಕಳಕೊಂಡ ಅಸಹಾಯಕ ಹೆಂಗಸರು ಕೂಡ ಇಸ್ಲಾಂಗೆ ದೊಡ್ಡ ಪ್ರಮಾಣದಲ್ಲೇ ಸೇರಿಕೊಂಡರು. ಅವರಿಗೊಂದು ಸಾಮಾಜಿಕ ಘನತೆಯ ಬದುಕನ್ನು ಕಟ್ಟಿಕೊಡುವುದು ಧರ್ಮದ ಜವಾಬುದಾರಿಯೇ ಆಗಿತ್ತಾದ್ದರಿಂದ ಮರುವಿವಾಹದ ಅವಕಾಶವನ್ನು ಆರ್ಥಿಕವಾಗಿ ಸಬಲ, ದೈಹಿಕ, ಮಾನಸಿಕ ಆರೋಗ್ಯವಂತ ಮತ್ತು ಧರ್ಮವಂತರಾಗಿ ಬಾಳುತ್ತಿದ್ದವರಿಗೆ ನೀಡಲಾಯಿತು. ಇಂಥ ಮಾನವೀಯ ನಡೆಯುಳ್ಳವನೇ ಇಮಾನ್‌ದಾರ (ಧರ್ಮೀಯ) ಆಗುತ್ತಾನೆ. ಅಂಥವರಿಗೆ ಜನ್ನತ್‌ ಕಲ್ಪನೆ, ಸವಾಬ್‌ಗಳ ಅಭಯವನ್ನು ಧರ್ಮ ನೀಡುತ್ತದೆ. ಬಹುಪತ್ನಿತ್ವಕ್ಕೆ ಸಮಾಜೋ–ಧಾರ್ಮಿಕ ಆಯಾಮವಿದೆ.  ಬಹುಪತ್ನಿತ್ವದಂಥ ಅನುಕೂಲಗಳನ್ನು ಬಳಸಿಕೊಳ್ಳುವ ಇರಾದೆಯಿಂದಲೇ ಇಸ್ಲಾಂ ಅಪ್ಪಿಕೊಂಡವರಿದ್ದಾರೆ. ಅನುಕೂಲಗಳನ್ನು ಮಾತ್ರ ಬಳಸಿಕೊಂಡು ಜವಾಬುದಾರಿಗಳಿಂದ ದೂರ ಉಳಿದವರು ಕಾಫಿರ್‌ಗಿಂತ ಕಮ್ಮಿ ಏನಲ್ಲ. ಇಂಥವರಿಂದಲೇ ಒಂದು ವೈಜ್ಞಾನಿಕ ಮನೋಧರ್ಮದ ಧರ್ಮವೊಂದು ಮುಜುಗರಕ್ಕೊಳಗಾಗುತ್ತದೆ.
 ಹಜರತ್‌ ಉಮರ್‌ ಫಾರೂಖ್‌ (ರಜೀ ಅಲ್ಲಾತಾಲಾ ಅನ್‌ಹು) ಅವರು ಖಲೀಫಾ ಆಗಿದ್ದ ಅವಧಿಯಲ್ಲಿ ಇಸ್ಲಾಂ ತೆಕ್ಕೆಯೊಳಕ್ಕೆ ಅನ್ಯರ ಆಗಮನ ಹೆಚ್ಚಿತು. ಹೆಣ್ಣು– ಗಂಡಿನ ಸಂಬಂಧಕ್ಕೆ ಹೊಸ ಅರ್ಥ ತಂದುಕೊಟ್ಟ ಇಸ್ಲಾಂ ಸಹಜವಾಗಿ ಸೂಜಿಗಲ್ಲಿನಂತೆ ಅವರನ್ನು ಸೆಳೆಯಿತು. ಮೆಹರ್‌ ಮತ್ತಿತರ ಲಾಭಗಳ ಮೇಲೆ ಕಣ್ಣಿಟ್ಟ ಹೆಂಗಸರೂ ಅದರಲ್ಲಿದ್ದರು. ಗಂಡನಿಂದ ಪರಿತ್ಯಕ್ತ ಹೆಣ್ಣುಗಳು ಇಸ್ಲಾಮಿನ ಬಹುಪತ್ನಿತ್ವದ ಲಾಭಗಳಿಗಾಗಿ ಹಾತೊರೆದರು. ಕೆಲವರು ಗಂಡಸರಂತೆ ಬಹುಪತಿತ್ವ ಯಾಕೆ ಬೇಡ ಎಂದು ಪ್ರಶ್ನಿಸಿದರು. ಪುರುಷ ಪ್ರಾಬಲ್ಯದ ಸಾಮಾಜಿಕ ಚಳವಳಿಯಲ್ಲಿ ಹೆಣ್ಣುಮಕ್ಕಳು ಎತ್ತಿದ ಪ್ರಶ್ನೆ ನ್ಯಾಯಸಮ್ಮತವೇ ಆಗಿತ್ತು. ಆದರೆ ಹೆಣ್ಣಿಗೂ ಬಹುಪತಿತ್ವದ ಅಭಯ ನೀಡುವುದಕ್ಕೆ ಆಗ ಧಾರ್ಮಿಕ ಕಾರಣಗಳು ಅವರಿಗೆ ತೋಚದೇ ಹೋಗಿರಬಹುದು.
 ಬಹುಪತಿತ್ವದಲ್ಲಿ ತೊಡಗಿದ ಸ್ತ್ರೀಯರಿಂದ ಮುಕ್ತಿ ಪಡೆಯಲು ಹೊಸ ನೀತಿ ಸಂಹಿತೆಗಳಿಗಾಗಿ ಪುರುಷರಿಂದ ಒತ್ತಡ ಬಂದಿತು. ಮೆಹರ್‌ ಮತ್ತು ತಲಾಖ್‌ನಿಂದ ದಕ್ಕುವ ಪರಿಹಾರಕ್ಕೆ ಹಾತೊರೆವ ಹೆಣ್ಣುಗಳ ಸಂಖ್ಯೆ ಹೆಚ್ಚಿದ್ದರಿಂದ ಮತ್ತು ಅಂಥವರಿಂದಲೂ ತಕ್ಷಣಕ್ಕೆ ಮುಕ್ತವಾಗಲು ಕ್ಷಿಪ್ರ ತಲಾಖ್‌ನ ಅವಕಾಶ ನೀಡಲಾಯಿತು. ಅದುವೇ ತ್ರಿವಳಿ ತಲಾಖ್‌. ಮೂರು ಸಾರಿ ಉಲಿದು ಅಧಿಕೃತ ಬಿಡುಗಡೆ ಹೊಂದುವ ಆಕ್ರಮಣಕಾರಿ ಎನ್ನಿಸುವ ವ್ಯವಸ್ಥೆ ಆಗಿನ ಸಾಮಾಜಿಕ ಸಂದರ್ಭದ ಕಾರಣಕ್ಕೆ ಜಾರಿಗೊಂಡಿರಬಹುದು.
 ಸಮಕಾಲೀನ ಸಂದರ್ಭದಲ್ಲಿ ಹೆಣ್ಣು ಗಂಡಿನ ನಡುವಣ ಅಸಮಾನತೆ ತಕ್ಕಮಟ್ಟಿಗೆ ತಗ್ಗಿದೆ. ಗಂಡಸಿಗಿರುವ ಅನುಕೂಲಗಳು ಬಹುತೇಕವಾಗಿ ಹೆಣ್ಣು ಮಕ್ಕಳಿಗೂ ಇರುವ ಕಾಲಘಟ್ಟವಿದು. ಈಗಲೂ ತ್ರಿವಳಿ ತಲಾಖ್‌ ಹೆಣ್ಣಿನ ಶೋಷಣೆಗೆ ಹಾದಿ ಮಾಡಿಕೊಡುವ ಅಪಾಯ ಇದೆ ಎನ್ನುವುದು ಒಂದು ವಾದ. ಇದರ ನಿಷೇಧದಿಂದ ಬಹುಪತ್ನಿತ್ವಕ್ಕೆ ಪರೋಕ್ಷ ಕುತ್ತು ಬಂದು ಮರುವಿವಾಹದ ಅವಕಾಶವನ್ನು ಮಹಿಳೆ ಕಳೆದುಕೊಳ್ಳುವ ಅಪಾಯವೂ ಇದೆ ಎನ್ನುವುದು ಮತ್ತೊಂದು ವಾದ. ಸಾಮಾಜಿಕ ಮತ್ತು ಧಾರ್ಮಿಕ ಆಯಾಮಗಳಲ್ಲಿ ಸರ್ವಸಮ್ಮತ ಅಭಿಪ್ರಾಯ ರೂಪಿಸಿಕೊಂಡೇ ಇಂಥದೊಂದು ವ್ಯವಸ್ಥೆಯನ್ನು ಮುಂದುವರಿಸುವ, ತಡೆಯುವ ಇಲ್ಲವೇ ಸುಧಾರಣೆ ತರುವ ಕಾನೂನಾತ್ಮಕ ಕೆಲಸವಾಗಬೇಕು. ಇದನ್ನು ನೆಲದ ಆಡಳಿತ ವ್ಯವಸ್ಥೆ ಮಾಡಬೇಕೆ? ಧರ್ಮದ ಚೌಕಟ್ಟಿನಲ್ಲಿ ನಿರ್ದಿಷ್ಟ ಸಂಸ್ಥೆ ಮಾಡಬೇಕೆ ಎನ್ನುವುದು ಪ್ರಶ್ನೆ. ನೆಲದ ಆಡಳಿತ ಇದಕ್ಕೊಂದು ಕಾನೂನು ರೂಪಿಸ ಹೊರಟಿದೆ.  ನ್ಯಾಯದೇವತೆ ಪ್ರತಿಷ್ಠಾಪನೆಯ ನೆಪದಲ್ಲಿ ಭಿನ್ನ ನಂಬಿಕೆಗಳ ಮೇಲೆ ನಿರಂತರ ಪ್ರಹಾರ ನಿರಂಕುಶ ಪ್ರಭುತ್ವದ ಧೋರಣೆಯಾಗುತ್ತದೆ ಎನ್ನುವ ಎಚ್ಚರ ಆಡಳಿತಕ್ಕೂ ಇರಬೇಕು. ವ್ಯಕ್ತಿ ಸ್ವಾತಂತ್ರ್ಯ ಮತ್ತು ಸರಕಾರದ ಅಧಿಕಾರಗಳಲ್ಲಿ ಹಲವು ಸಲ ವಿರೋಧ ಕಂಡುಬರುತ್ತದೆ. ಅದು ಸ್ವಾಭಾವಿಕ. ಸರಕಾರದ ಅಧಿಕಾರಗಳು ಹೆಚ್ಚಿದಂತೆ ವ್ಯಕ್ತಿ ಸ್ವಾತಂತ್ರ್ಯ ಕಡಿಮೆ ಆಗುತ್ತದೆ. ಸರಕಾರವು ವ್ಯಕ್ತಿ ಸ್ವಾತಂತ್ರ್ಯಕ್ಕೆ ಅಡ್ಡಿಯನ್ನುಂಟು ಮಾಡದಂತೆ ನೋಡಿಕೊಳ್ಳುವುದು ವಿಹಿತ. ಹಾಗೆಯೇ ಹೆಣ್ಣಿನ ಆತ್ಮ ಸಮ್ಮಾನಕ್ಕೆ ಒತ್ತು ಕೊಟ್ಟ ಇಸ್ಲಾಂ, ಬದಲಾಗುವ ಕಾಲದ ಅಗತ್ಯಕ್ಕೆ ತಕ್ಕಂತೆ ಪೂರಕ ಸುಧಾರಣೆಗಳನ್ನು ಆಂತರಿಕವಾಗಿಯೂ ತರುವ ನಿಟ್ಟಿನಲ್ಲಿ ಯೋಚಿಸಬೇಕು. ಈ ಸಮಸ್ಯೆಗೆ ಕಾನೂನಾತ್ಮಕ ಪರಿಹಾರದ ವ್ಯವಸ್ಥೆ ಆಗುವುದೇ ಆದರೆ ಸಾಮರಸ್ಯದ ನೆಲೆಯಿಂದಲೇ ಆಗಲಿ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

'ಅನಭಿಜ್ಞ ಶಾಕುಂತಲ': ನೆನಪು ಮರೆವಿನಾಟ

 ಜೀವನವೇ ಒಂದು ನಾಟಕವೆಂದಾದರೆ. ಸಂಬಂಧ ಅನ್ನೋದು ಕಟ್ಟಿಕೊಂಡ ಆಟ. ಅಂದರೆ ನಾಟಕದಂತೆ ಬದುಕು ಕೂಡ ಆಟ ಕಟ್ಟುವ ಕ್ರಿಯೆ. ಇಲ್ಲಿ ಗುರಿ ಎಂದರೆ ಸುಖದ ಅಥವಾ ಸಾರ್ಥಕತೆಯ ದಡ ಸೇರುವುದು. ಈ ಆಟದ ಒಂದು ಹಂತದಲ್ಲಿ ಕಷ್ಟದ ಅಡವಿ ಸೇರುವುದೂ ಇದೆ! 'ಆಡಾಡ್ತ ಅಡವಿ ಸೇರುವುದು' ಅಂತಾರಲ್ಲ ಹಾಗೆ. ಅಡವಿ ಅಂದರೆ ಇಲ್ಲಿ ಸಂಕೀರ್ಣತೆ, ಸಂಕಷ್ಟ ಅವಘಡ, ಸಂದಿಗ್ಧತೆ ಎಂದು ಭಾವಿಸಿಕೊಳ್ಳಬಹುದು. ಬದುಕಿನ ದಾರಿಯಲ್ಲಿ ಒಮ್ಮೆ ಈ 'ಅಡವಿ' ಎದುರಾಗೇ ಆಗುತ್ತದೆ ಎನ್ನುವುದು ವಿಧಿಲಿಖಿತವೇ? ಗೊತ್ತಿಲ್ಲ. ಪ್ರೀತಿ-ಪ್ರೇಮ-ಕಾಮ ಎನ್ನುವ ಬದುಕಿನ ಒಟ್ಟಾರೆ ಆಟ- ಕೂಟದಲ್ಲಿ ಪಡಕೊಳ್ಳುವುದೆಲ್ಲ ಜೀವಕಾರುಣ್ಯವಷ್ಟೇ ಅಲ್ಲ. ಸಂಕಷ್ಟ ಮತ್ತು ಸಂದಿಗ್ಧತೆಯೂ ಜತೆಯಲ್ಲಿರುತ್ತದೆ ಎನ್ನುವುದು ಸಹಜ ಮನೋಧರ್ಮ.  ಬದುಕಿನ ಆಟಕ್ಕೆ ತೆರಕೊಂಡವರಲ್ಲಿ ಹಲವರು ಅನುಭವಿಸಿದ ಮಧುರ ಘಳಿಗೆಗಳನ್ನು ಕಡೆತನಕ ನೆನಪಿಟ್ಟುಕೊಳ್ಳುತ್ತಾರೆ. ಕೆಲವರು ಮರೆತೇ ಬಿಡುತ್ತಾರೆ!?..  ಕಾಳಿದಾಸನ ಮಹಾಕಾವ್ಯ ಶಾಕುಂತಲೆಯಲ್ಲಿ ಈ ಬದುಕು, ಮನುಷ್ಯ ಪ್ರೀತಿ ಪಯಣದ ನೆನಪು ಮತ್ತು ಮರೆವಿನಾಟ ಮನಮಿಡಿಯುವಂತೆ ಚಿತ್ರಣಗೊಂಡಿದೆ. ಈ ಕಾವ್ಯದಲ್ಲಿ ಎಲ್ಲವನ್ನು ವಿಧಿಯೇ ನಿರ್ಧರಿಸಿದಂತೆನಿಸುತ್ತದೆ. ಫೇಟಲಿಸಂ ವಾದಕ್ಕೆ ಪೂರಕವಾದ ಚಿಂತನೆ ಇದೆನ್ನಬಹುದು. ಆಧುನಿಕ ಯುಗದ ಶೇಕ್ಸಪಿಯರ್ ನ ಹಲವು ನಾಟಕಗಳಲ್ಲಿಯೂ ಈ ಫೇಟಲಿಸಂ ಪ್ರಧಾನ ಪಾತ್ರದಂತೆ ವರ್ತಿಸುವುದನ್ನು ಗಮನಿಸಬಹುದು. *

ಇಷ್ಕ್‌ ಕೆ ಇಮ್ತೆಹಾನ್‌ ಔರ್‌ ಭೀ ಹೈ’.. ಇಮ್ರಾನ್‌ ಖಾನ್‌!

ಪಾಕಿಸ್ತಾನದ ಬಗ್ಗೆ ಮಾತನಾಡುವುದು ಮಹಾ ಪಾಪದ ಕೆಲಸವೇನಲ್ಲ. ಹಾಗೆ ಭಾವಿಸಬೇಕಿಲ್ಲ. ಅದು ಒಪ್ಪಿತವೊ ಇಲ್ಲವೋ, ಅದರ ಬಗ್ಗೆ ಅಲಕ್ಷ್ಯವೋ ನಿರ್ಲಕ್ಷ್ಯವೊ ಏನೇ ಆದರೂ ಅದು ಒಂದು ದೇಶ. ನೆರೆಯ ರಾಷ್ಟ್ರ. ‘ಪಡೋಸಿ...’ ಸಂಬಂಧದಲ್ಲಿ ನಮ್ಮದೇ ಕರುಳಬಳ್ಳಿ. ಭಾಷೆ, ಜನಜೀವನ ಶೈಲಿಯಲ್ಲಿ ಬದಲಾದರೂ ಮನುಷ್ಯ ಭಾವ, ಬದುಕುವ ಸಾಮಾನ್ಯ ಕಾಳಜಿ  ಒಂದೇ. ಹಾಗೆ ನೋಡಿದರೆ ಸಾಂಸ್ಕೃತಿಕವಾಗಿ ಎರಡೂ ದೇಶಗಳು ಅಭಿನ್ನ. ನಮ್ಮಲ್ಲಿರುವ ಹಾಗೆ ಅಲ್ಲಿಯೂ ಪ್ರಜಾಪ್ರಭುತ್ವ ಇದೆ. ಅಲ್ಲಿ ನಡೆಯುವುದು ಇಲ್ಲೂ ನಡೆಯುತ್ತದೆ. ಅಲ್ಲಿ ನಡೆಯಲೇಬಾರದ್ದು ಇಲ್ಲೂ ನಡೆಯಲೇಬಾರದು.  ತೀವ್ರವಾದ ನಮ್ಮಲ್ಲಿನದಕ್ಕಿಂತ ಅಲ್ಲಿ ತುಸು ಹೆಚ್ಚು ಸವಾರಿಗೆ ಹವಣಿಸಿದೆ. ಅಲ್ಲಿನ ಮಿಲಿಟರಿ ಅತಿರೇಕದ್ದು. ಅಕ್ಷಮ್ಯ. ಮತ್ತೆ ದೇಶ ಪುಟ್ಟದಾದಷ್ಟು ಅದಕ್ಕೆ ಭಯಗಳು ಜಾಸ್ತಿ. ಮಿಲಿಟರಿ ಕವಚದಲ್ಲಿ ಅದು ಸುರಕ್ಷಾ ಭಾವವನ್ನು ಕಲ್ಪಿಸಿಕೊಳ್ಳುತ್ತದೆ. ಅದೊಂದು ತರಹದ ಸಮಾಧಾನ. ಆದರೆ ಭ್ರಮೆಯಿಂದ ಕೂಡಿದ್ದು. ಭಯೋತ್ಪಾದನೆ ಕೂಡ ಒಂದರ್ಥದಲ್ಲಿ ಪುಕ್ಕಲುತನವೇ ಆಗುತ್ತದೆ. ಹಿಂಸಾ ಪ್ರವೃತ್ತಿಗೆ ಹೆದರಿಸುವುದೇ ಕೆಲಸ. ಹೆದರಿಸುವವರು ಶೂರರು, ಧೀರರು ಮತ್ತು ಜೀನಿಯಸ್‌ ಆಗಿರಲು ಹೇಗೆ ಸಾಧ್ಯ? ಮುಖ್ಯವಾಗಿ ಅಲ್ಲಿನ ವಿದ್ಯಮಾನಗಳನ್ನು ಗಮನಿಸುವುದಾದರೆ, ಮಿಲಿಟರಿ, ಮತಾಂಧರು, ಭಯೋತ್ಪಾದಕರು, ಭ್ರಷ್ಟರು ಇದೆಲ್ಲದರಿಂದ ಪಾಕಿ ತುಂಬ ರೋಸಿ ಹೋಗಿದ್ದಾನೆ. ಒಂದು ಸೂಕ್ತ ಪರ್ಯಾಯಕ್ಕಾಗಿ ಹಂಬಲಿಸಿದ್ದಾನೆ. ಸಹಜ

ಮನುಷ್ಯ ಜಾತಿ ತಾನೊಂದೇ ವಲಂ...

ಭಾರತದಲ್ಲಿ ಜಾತಿ ವ್ಯವಸ್ಥೆ ಹೇಗೆ ಹುಟ್ಟಿತು ಎಂಬುದಕ್ಕೆ ಯಾವುದೇ ನಿರ್ಧಿಷ್ಟ ಥಿಯರಿ ಇಲ್ಲ. ಆದರೆ, ಇಲ್ಲಿನ ವರ್ಗ ಸೃಷ್ಟಿ ಮಾತ್ರ ಇರಾನ್ ವ್ಯವಸ್ಥೆಯಂತೇ ಇದೆ.  ಪುರಾತನ ಇರಾನಿನ ಚರಿತ್ರೆಯಲ್ಲಿ ಇಂಥದೊಂದು ವ್ಯವಸ್ಥೆ ಇತ್ತು. ಅದಕ್ಕೆ ಪಿಸ್ತ್ರಾಸ್ ಎನ್ನುತ್ತಾರೆ. ನಮ್ಮಲ್ಲಿ ಅದು ಚಾತುರ್ವರ್ಣವಾಗಿದೆ. ಅಲ್ಲಿ ಅಥ್ರವಾನ್ಸ್ (ಪ್ರೀಸ್ಟ್ ಕ್ಲಾಸ್), ರಥೈಸ್ತಾ (ವಾರಿಯರ್ಸ್), ವಸ್ತ್ರಿಯಾ (ಮರ್ಕಂಟೈಲ್ ಕ್ಲಾಸ್) ಮತ್ತು ಹ್ಯುತಿ (ಆರ್ಟಿಸನ್) ಎನ್ನುವ ವರ್ಗ ವ್ಯವಸ್ಥೆ ಇದೆ. ನಮ್ಮಲ್ಲಿ ಇದನ್ನು ಕಲ್ಪಿಸಿಕೊಂಡರೆ ಪುರೋಹಿತ ಅಥವಾ ಬ್ರಾಹ್ಮಣ (ಅಥ್ರವಾನ್ಸ್), ಕ್ಷತ್ರಿಯ  (ರಥೈಸ್ತಾ), ವೈಶ್ಯ  (ವಸ್ತ್ರಿಯಾ) ಮತ್ತು ಶೂದ್ರ (ಹ್ಯುತಿ) ಎಂದು ಅರ್ಥೈಸಿಕೊಳ್ಳಬಹುದು.  ಆದಿ ಕಾಲದ ಇರಾನಿಯನ್ ವ್ಯವಸ್ಥೆ ಹೀಗೇ ಇತ್ತು. ಅದೇ ನಾಲ್ಕು ವರ್ಗಗಳು ಭಾರತದಲ್ಲೂ ಈಗಲೂ ಚಾಲ್ತಿಯಲ್ಲಿವೆ. ಹೀಗೆ ಒಂದು ಇರಾನ್ ಸಂಬಂಧ ಭಾರತಕ್ಕಿದೆ. ಚರ್ಮದ ಬಣ್ಣ, ನಯ ನಾಜೂಕು, ಕಣ್ಣು, ಬುದ್ಧಿವಂತಿಕೆಯನ್ನು ಹೋಲಿಸಿದರೆ ಭಾರತದ ಅದರಲ್ಲೂ ಉತ್ತರ ಭಾರತದ ಕಾಶ್ಮೀರಿ ಪಂಡಿತರು, ಉತ್ತರ ಪ್ರದೇಶದ ಪಂಡಿತ್, ಚಿತ್ಪಾವನ ಬ್ರಾಹ್ಮಣರು, ನಮ್ಮ ಕರಾವಳಿ ಮತ್ತು ಉತ್ತರ ಕನ್ನಡದ ಹವ್ಯಕರು ಹೆಚ್ಚೂ ಕಮ್ಮಿ ಇರಾನಿಗಳನ್ನು ಹೋಲುತ್ತಾರೆ (ಮೇಲ್ನೋಟಕ್ಕೆ).  ಬಹುಶಃ ಹೀಗೂ ಆಗಿರಬಹುದು, ಆಗ ಇರಾನ್ ನಲ್ಲಿ ಕ್ರೈಸ್ತ ಮತ್ತು ಇಸ್ಲಾಂ ಮುಂಚೆಯೂ ಹಲವಾರು ಸುಧಾರಣಾವಾದಿಗಳ ಅಥವಾ ಬಂಡುಕೋರರ