ವಿಷಯಕ್ಕೆ ಹೋಗಿ

ಇಂಡಿಯಾದ ರಾಜಕೀಯ ಎದುರಿಸಲಿರುವ ಅಪಾಯದ ಮುನ್ಸೂಚನೆ


Theater Olympic 2018
Play: Gunamukha
Enacted bu NSD bengaluru
Direction: C Basavalingaiah C Basavalingaiah Basu
 
 
 ರೆ ಅಲೆಮಾರಿಯ ಮಗನೊಬ್ಬನಿಗೆ ಅಧಿಕಾರ, ದೌಲತ್‌ ಸುಖದ ಕಲ್ಪನೆಯಷ್ಟೇ ಆಗಿರಲಿಲ್ಲ. ಅದು ಒಟ್ಟೊವಿಯನ್‌ ಸಾಮ್ರಾಜ್ಯದ ವೈಭವವನ್ನು ಮೀರಿಸುವಂತೆ ಬೆಳೆದು ನಿಲ್ಲುವ ಕನಸು, ಛಲವೂ ಆಗಿತ್ತು. ಸಾಧಾರಣ ಗ್ಯಾಂಗ್‌ ಕಟ್ಟಿಕೊಂಡು ತನ್ನ ಕಾಲದ ಅರಸು ಮನೆತನಗಳ ಮೇಲೆ ಕಣ್ಣಿಟ್ಟು ಸೈನ್ಯ ಸೇರುವ ಆತ ಅದರ ನಾಯಕನೂ ಆಗುತ್ತಾನೆ. ದೊರೆಯಾಗಿ ರಾಜಕೀಯ ಮಹತ್ವಾಕಾಂಕ್ಷೆ ಈಡೇರಿಸಿಕೊಂಡು ಪರ್ಷಿಯಾ ಸೇರಿದಂತೆ ಜಾರ್ಜಿಯಾ, ರಷ್ಯದ ಹಲವು ಭಾಗಗಳನ್ನು ಆಗಲೇ ಆಕ್ರಮಿಸಿಕೊಳ್ಳುತ್ತಾನೆ. ಅವನು ಧೈರ್ಯಶಾಲಿ ನಾದಿರ್‌ ಷಾ.
  ಕೆಲ ಕಾಲ ಹಿಂದೂಸ್ತಾನದ ದೊರೆಯೂ ಆಗಿ ಮೆರೆದಿದ್ದು ಒಂದು ಆಕಸ್ಮಿಕ. ಪರ್ಷಿಯಾ ದೇಶಗಳ ಸಮೇತ ಆಪ್ಘನ್‌, ಲಾಹೋರ್‌ ಗೆಲ್ಲುತ್ತ ದೆಹಲಿಗೂ ಕಾಲಿಟ್ಟಾಗ ಇಲ್ಲಿದ್ದ ಮುಘಲ್‌ ಸೈನ್ಯ ದೈನೇಸಿ ಸ್ಥಿತಿಯಲ್ಲಿತ್ತು. ಸುಲ್ತಾನಗಿರಿಯೂ ಅವಸಾನದಂಚಿನಲ್ಲಿತ್ತು. ಮುಘಲ್‌ರನ್ನು ಮಣಿಸಿ ನಾದಿರ್‌ ಷಾ ದೆಹಲಿಯ ದೊರೆಯಾಗಿಬಿಡುತ್ತಾನೆ. ಮುಘಲ್‌ರನ್ನು ಸೋಲಿಸಬಹುದು ಎನ್ನುವ ಮೊದಲ ಸೂಚನೆಯನ್ನು ಈತ ಜಗತ್ತಿಗೆ ತೋರಿಸಿಕೊಡುತ್ತಾನೆ. ಹೀಗಾಗಿಯೇ ಫ್ರೆಂಚರು ಮತ್ತು ಬ್ರಿಟೀಷರಿಗೆ ಈತ ಹೀರೋ!
  ಆನಂತರದಲ್ಲಿ ಸಾಮ್ರಾಜ್ಯಷಾಹಿಯಾಗಿ ಮೆರೆದ ನಾದಿರ್‌ ಧರ್ಮ ಮತ್ತು ರಾಜಕಾರಣ ಬೆಸೆಯುವ ಯತ್ನದಲ್ಲಿ ತೊಳಲಾಡುತ್ತಾನೆ. ಸಾಮ್ರಾಜ್ಯ ವಿಸ್ತರಿಸಿ ಅದಮ್ಯ ಶಕ್ತಿಯಾದವನಿಗೆ ಜಗತ್ತಿನ ಭವಿಷ್ಯ ರೂಪಿಸುವ ಉಮೇದಿ ಬಂದುಬಿಡುತ್ತದೇನೋ... ನಾದಿರ್‌ ಧರ್ಮ ಮತ್ತು ರಾಜಕೀಯದಲ್ಲಿ ತನ್ನದೇ ಸುಧಾರಣೆಗಳನ್ನು ತರುವ ಸಾಹಸಕ್ಕಿಳಿಯುತ್ತಾನೆ. ಹಿಂದೂಸ್ತಾನದ ಇತಿಹಾಸದಲ್ಲಿ ಅಕ್ಬರ್‌ ಮಾಡಿದ ತಪ್ಪನ್ನೇ ಈತ ಮಾಡುತ್ತಾನೆ. ದೀನ್‌–ಎ–ಇಲಾಹಿ ಪುಸ್ತಕ ಬರೆದು ತನ್ನದೇ ಸುಧಾರಿತ ಧರ್ಮವನ್ನು ಇತರರು ಅನುಸರಿಸಬೇಕು ಎಂದು ಅಕ್ಬರ್‌ ಹಂಬಲಿಸಿದ್ದ. ಹಾಗೆಯೇ ನಾದಿರ್‌ ಷಾ ಜಫರಿ ಎನ್ನುವ ಹೊಸ ಧರ್ಮ ಕಲ್ಪನೆಯನ್ನು ರೂಪಿಸುತ್ತಾನೆ. ಇತರರು ಅದನ್ನು ಅನುಸರಿಸಲಿ ಎಂದು ಹಂಬಲಿಸುತ್ತಾನೆ. ಶಿಯಾ ಆಗಿದ್ದವನು ಸುನ್ನಿಯಾಗುತ್ತಾನೆ. ಆಗ ಒಟ್ಟಾವಿಯನ್‌ ದೊರೆಗಳ ನಿಯಂತ್ರಣದಲ್ಲಿ ಹಜ್‌ ಯಾತ್ರೆ ಇದ್ದುದರಿಂದ ಸುನ್ನಿಗಳ ಮನ ಗೆಲ್ಲುವುದು ಆತನಿಗೆ ಅನಿವಾರ್ಯವಾಗಿರುತ್ತದೆ.ಶಿಯಾ ನಾದಿರ್‌ ಕ್ರಮೇಣ ಸುನ್ನಿಯಾಗಿ ತನ್ನ ಮೂಲ ಶಿಯಾದಲ್ಲಿ ಹಲವು ಸುಧಾರಣೆಗಳನ್ನು ತರಲು ಪ್ರಯತ್ನಿಸುತ್ತಾನೆ, ಕಡೆಗೆ ತನ್ನದೇ ಸುಧಾರಿತ ಶಿಯಾ ಮತ್ತು ಸುನ್ನಿ ಮಿಶ್ರಿತ ಹೊಸ ಧರ್ಮ ಅಸ್ತಿತ್ವಕ್ಕೆ ತರಲು ಮುಂದಾಗುತ್ತಾನೆ. ಅದನ್ನು ಆತ ಜಫರಿ ಎಂದು ಬಣ್ಣಿಸುತ್ತಾನೆ. ಇಂಥ ಹಲವು ಹುಚ್ಚುತನದಲ್ಲಿ ಮುಳುಗಿದ ನಾದಿರ್‌ ಷಾಗೆ ತನ್ನ ಸುತ್ತಲೂ ನಡೆಯುವ ರಾಜಕೀಯ ಮತ್ತು ಅಧಿಕಾರದಿಂದ ಕೆಳಕ್ಕಿಳಿಸುವ ಪಿತೂರಿಗಳು ಗಮನಕ್ಕೆ ಬರತೊಡಗುತ್ತವೆ. ವಿಚಲಿತನಾಗಿ ಮಾನಸಿಕ ಕ್ಷೋಭೆಗೂ ಒಳಗಾಗುತ್ತಾನೆ. ಒಂದು ರಾತ್ರಿ ನಿದ್ರೆಯ ಸಮಯದಲ್ಲಿ ತನ್ನ ಸೇನಾ ಮುಖ್ಯಸ್ಥನಿಂದಲೇ ಹತ್ಯೆಯಾಗುತ್ತಾನೆ. ಇದು ಇತಿಹಾಸ.
  ಕ್ಷೋಭೆಗೊಳಗಾದ ಸಂದರ್ಭದ ನಾದಿರ್‌ ಷಾ ಚಿತ್ರಣವನ್ನು ‘ಗುಣಮುಖ’ ಕೃತಿಯಲ್ಲಿ ಕಟ್ಟಿಕೊಡುವ ಯತ್ನವನ್ನು ಪಿ. ಲಂಕೇಶರು ಮಾಡಿದ್ದರು. ಆ ಮೂಲಕ ಇಡೀ ಅಧಿಕಾರ ರಾಜಕಾರಣದ ಮಿತಿ ಮತ್ತದರ ಅವಸಾನಗಳನ್ನು ತತ್ವಜ್ಞಾನದ ನೆಲೆಯಲ್ಲಿ ವಿವೇಚನಾಪೂರ್ವಕ ಚರ್ಚೆಗೆ ಅವಕಾಶ ಕಲ್ಪಿಸಿಕೊಟ್ಟಿದ್ದರು. ಇದೊಂದು ಅನುಭಾವ ಕಥನವೂ ಹೌದು. 
 ನಾದಿರ್‌ ಷಾ ಕಾಯಿಲೆಗೊಳಗಾದಾಗ ಆತನಿಗೆ ಸುತ್ತಲಿನ ತನ್ನವರೇ ಕುರಿಯಂತೆನಿಸತೊಡಗುತ್ತಾರೆ! ಅಧಿಕಾರ ಗಳಿಸುವುದು ಒಂದಾದರೆ ಅದನ್ನುಳಿಸಿಕೊಳ್ಳುವುದು ಮತ್ತೊಂದು. ಉಳಿಸಿಕೊಳ್ಳಬೇಕೆನ್ನುವ ಹುಂಬತನಕ್ಕೆ ಎಲ್ಲದರಲ್ಲೂ ರಕ್ತವೇ ಕಾಣಿಸತೊಡಗುತ್ತದೆ. ಕೊಲೆಯಲ್ಲೇ ಎಲ್ಲದರ ಫಲಿತಾಂಶ ದಕ್ಕುತ್ತದೆ ಎನ್ನುವ ಕ್ರೌರ್ಯದಲ್ಲಿ ಆತ ಬಂಧಿಯಾಗುತ್ತಾನೆ. ಜಗದೇಕವೀರನಾಗುವ ಕನಸು, ದರ್ಪ, ಅಧಿಕಾರಗಳ ಮದ ನೆತ್ತಿಗೇರಿ ಅದುವೇ ತೀವ್ರ ಕಾಯಿಲೆಯಂತಾಗುತ್ತದೆ. ದೇಹಕ್ಕಿಂತ ಮನಸು ಮತ್ತು ಬುದ್ಧಿಗೇ ಅಂಟಿಕೊಳ್ಳುವ ಮದ್ದೇ ಇಲ್ಲದ ಕಾಯಿಲೆ ಇದು. ನಾದಿರ್‌ ಷಾನ ಯಾತನಾಮಯ ಘಟ್ಟವನ್ನು ಸೂಕ್ಷ್ಮವಾಗಿ ಗ್ರಹಿಸಿದ ಪಿ. ಲಂಕೇಶರು ಅದನ್ನೇ ‘ಗುಣಮುಖ’ ನಾಟಕವಾಗಿಸಿ ಸಮಕಾಲೀನ ಸಂದರ್ಭಕ್ಕೂ ಸಂವಾದಿಯಂತೆ ಕಟ್ಟಿಕೊಟ್ಟಿದ್ದರು.
  ಇಂಡಿಯಾ ಕಂಡ ಅದ್ಭುತ ರಂಗನಿರ್ದೇಶಕ ಸಿ. ಬಸವಲಿಂಗಯ್ಯ, ‘ಗುಣಮುಖ’ ನಾಟಕವನ್ನು ಪ್ರಸ್ತುತ ಇಂಡಿಯಾಕ್ಕೆ ತೀವ್ರ ಸಂವಾದಿಯಾಗುವಂತೆ ಪ್ರಯೋಗವಾಗಿಸಿದ್ದಾರೆ. ಅಪ್ರೋಚ್‌ ತುಂಬ ಶಾರ್ಪ್‌ ಆಗಿದೆ. ಮಿಸ್ಟಿಕ್‌ ಪೊಯಟ್ರಿಯಂತೆ ಇಡೀಯ ನಾಟಕವನ್ನು ಅವರು ಪರಿಭಾವಿಸಿದ್ದಾರೆ. ಬ್ಯಾಕ್‌ಡ್ರಾಪ್‌ನಲ್ಲಿ ಶವಾಗಾರವನ್ನು (ಸೆಟ್‌: ಶಶಿಧರ ಅಡಪ) ಒಂದು ಮೆಟಾಫರ್‌ನಂತೆ ಬಳಸಿಕೊಂಡು ನಾದಿರ್‌ ಎನ್ನುವ ದೊರೆಯ ದೇಹ, ಮನಸು ಮತ್ತು ಬುದ್ಧಿಯನ್ನು ಅದಕ್ಕೆ ಸಮೀಕರಿಸಿದ ಪರಿ ಅತ್ಯಂತ ಮಾರ್ಮಿಕ. ಆತನ ಪಂಚೇಂದ್ರಿಯಗಳೆಲ್ಲ ಸ್ಥಿಮಿತ ಕಳಕೊಂಡಿದುದರ ಸಂಕೇತವಾಗಿ ನಾದಿರ್‌ ಮನಸ್ಥಿತಿಯ ರಿಫ್ಲೆಕ್ಷನ್‌ಗಳನ್ನು ಎರಡು ತದ್ರೂಪಗಳು ಮತ್ತು ಶವಾಗಾರ ಚಿತ್ರಿಕೆಯ ಮೂಲಕ ನಿರೂಪಿಸಿದ್ದಾರೆ. 
 ಅಧಿಕಾರದ ಮದ ಮತ್ತು ಧರ್ಮ ರಾಜಕಾರಣದ ಉಸಾಬರಿಯಲ್ಲಿ ತಾನೊಬ್ಬ ಪ್ರಜಾ ರಕ್ಷಕ ಮತ್ತು ಸೇವಕ ಎನ್ನುವ ವಿನಯವನ್ನೇ ಮರೆತ ಬರಿಯ ಮಹತ್ವಾಕಾಂಕ್ಷಿಯೊಬ್ಬನ ಚಿತ್ರಣದಂತೆ ಇದು ರೂಪುಗೊಂಡಿದೆ. ಈ ಮನಸ್ಥಿತಿಯ ನಾದಿರ್‌ ಕೊಲೆ, ದ್ವೇಷ ಎನ್ನುವ ರಕ್ತದ ಮಡುವಿನಲ್ಲಿ ನಿಂತು ಶಾಂತಿ, ನೆಮ್ಮದಿ ಎಂದು ಹಲುಬುತ್ತಾನೆ. ಒಬ್ಬ ದೊರೆ ಉಪಚಾರಕ್ಕಾಗಿ ಒಬ್ಬ ಫಿಲಾಸಫರ್‌ ಹಕೀಮ ಅಲಾವಿಖಾನ್‌ನ ಮುಂದೆ ಅಸಹಾಯಕನಾಗಿ ಗೋಗರೆಯುವಂತಾಗುವ ವ್ಯಂಗ್ಯವನ್ನು ನಾಟಕೀಯವಾಗಿ ಹೇಳಿದ್ದು ಅದ್ಭುತ ಸಟೈರ್‌ನಂತಿದೆ. ಇಂಡಿಯಾದ ರಾಜಕೀಯ ಎದುರಿಸಲಿರುವ ಅಪಾಯದ ಮುನ್ಸೂಚನೆಯಂತೆಯೂ ಇದು ಕಾಡುತ್ತದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

'ಅನಭಿಜ್ಞ ಶಾಕುಂತಲ': ನೆನಪು ಮರೆವಿನಾಟ

 ಜೀವನವೇ ಒಂದು ನಾಟಕವೆಂದಾದರೆ. ಸಂಬಂಧ ಅನ್ನೋದು ಕಟ್ಟಿಕೊಂಡ ಆಟ. ಅಂದರೆ ನಾಟಕದಂತೆ ಬದುಕು ಕೂಡ ಆಟ ಕಟ್ಟುವ ಕ್ರಿಯೆ. ಇಲ್ಲಿ ಗುರಿ ಎಂದರೆ ಸುಖದ ಅಥವಾ ಸಾರ್ಥಕತೆಯ ದಡ ಸೇರುವುದು. ಈ ಆಟದ ಒಂದು ಹಂತದಲ್ಲಿ ಕಷ್ಟದ ಅಡವಿ ಸೇರುವುದೂ ಇದೆ! 'ಆಡಾಡ್ತ ಅಡವಿ ಸೇರುವುದು' ಅಂತಾರಲ್ಲ ಹಾಗೆ. ಅಡವಿ ಅಂದರೆ ಇಲ್ಲಿ ಸಂಕೀರ್ಣತೆ, ಸಂಕಷ್ಟ ಅವಘಡ, ಸಂದಿಗ್ಧತೆ ಎಂದು ಭಾವಿಸಿಕೊಳ್ಳಬಹುದು. ಬದುಕಿನ ದಾರಿಯಲ್ಲಿ ಒಮ್ಮೆ ಈ 'ಅಡವಿ' ಎದುರಾಗೇ ಆಗುತ್ತದೆ ಎನ್ನುವುದು ವಿಧಿಲಿಖಿತವೇ? ಗೊತ್ತಿಲ್ಲ. ಪ್ರೀತಿ-ಪ್ರೇಮ-ಕಾಮ ಎನ್ನುವ ಬದುಕಿನ ಒಟ್ಟಾರೆ ಆಟ- ಕೂಟದಲ್ಲಿ ಪಡಕೊಳ್ಳುವುದೆಲ್ಲ ಜೀವಕಾರುಣ್ಯವಷ್ಟೇ ಅಲ್ಲ. ಸಂಕಷ್ಟ ಮತ್ತು ಸಂದಿಗ್ಧತೆಯೂ ಜತೆಯಲ್ಲಿರುತ್ತದೆ ಎನ್ನುವುದು ಸಹಜ ಮನೋಧರ್ಮ.  ಬದುಕಿನ ಆಟಕ್ಕೆ ತೆರಕೊಂಡವರಲ್ಲಿ ಹಲವರು ಅನುಭವಿಸಿದ ಮಧುರ ಘಳಿಗೆಗಳನ್ನು ಕಡೆತನಕ ನೆನಪಿಟ್ಟುಕೊಳ್ಳುತ್ತಾರೆ. ಕೆಲವರು ಮರೆತೇ ಬಿಡುತ್ತಾರೆ!?..  ಕಾಳಿದಾಸನ ಮಹಾಕಾವ್ಯ ಶಾಕುಂತಲೆಯಲ್ಲಿ ಈ ಬದುಕು, ಮನುಷ್ಯ ಪ್ರೀತಿ ಪಯಣದ ನೆನಪು ಮತ್ತು ಮರೆವಿನಾಟ ಮನಮಿಡಿಯುವಂತೆ ಚಿತ್ರಣಗೊಂಡಿದೆ. ಈ ಕಾವ್ಯದಲ್ಲಿ ಎಲ್ಲವನ್ನು ವಿಧಿಯೇ ನಿರ್ಧರಿಸಿದಂತೆನಿಸುತ್ತದೆ. ಫೇಟಲಿಸಂ ವಾದಕ್ಕೆ ಪೂರಕವಾದ ಚಿಂತನೆ ಇದೆನ್ನಬಹುದು. ಆಧುನಿಕ ಯುಗದ ಶೇಕ್ಸಪಿಯರ್ ನ ಹಲವು ನಾಟಕಗಳಲ್ಲಿಯೂ ಈ ಫೇಟಲಿಸಂ ಪ್ರಧಾನ ಪಾತ್ರದಂತೆ ವರ್ತಿಸುವುದನ್ನು ಗಮನಿಸಬಹುದು. * ...

"ಮಣೆಗಾರ" ಬಸಿದಿಟ್ಟ ಒಡಲಾಳದ ನೋವು ನೆನೆದು...

ಹಾಲ್ಕುರಿಕೆ ಥಿಯೇಟರ್ ಕಾನ್ಸೆಪ್ಟ್ ಕನ್ನಡ ರಂಗಭೂಮಿಯಲ್ಲಿ ಹೊಸದೊಂದು ಸಂಚಲನವನ್ನುಂಟು ಮಾಡುತ್ತಿದೆ. ಒಟ್ಟಾರೆ ಭಾರತೀಯ ರಂಗಭೂಮಿ ಕಾಣುತ್ತಿರುವ ಹೊಸತನಕ್ಕೆ ಇದು ಮುಖ್ಯವಾದ ಸಾಕ್ಷಿ. ಅತ್ಯಂತ ಕ್ರಿಯಾಶೀಲ ತುಡಿತದ ರಂಗಕರ್ಮಿ ಹಾಲ್ಕುರಿಕೆ ಶಿವಶಂಕರ (ನಿರ್ದೇಶಕ/ನಾಟಕಕಾರ) ಇತ್ತೀಚೆಗೆ "ಮಣೆಗಾರ" (ತುಂಬಾಡಿ ರಾಮಯ್ಯನವರ ಆತ್ಮಕಥೆ) ಎನ್ನುವ ದಲಿತ ಕಥಾನಕವೊಂದನ್ನು ರಂಗದ ಮೇಲೆ ಅನಾವರಣಗೊಳಿಸಿದರು. ಪ್ರಯೋಗದ ದೃಷ್ಟಿಯಿಂದ ಕೆಲವು ಕೊರತೆಗಳು, ದೋಷಗಳು ಇವೆ. ಅದು ಯಾವುದೇ ಪ್ರಯೋಗಕ್ಕೆ ಇರುವಂಥವೇ. ಆದರೆ ಸಮುದಾಯವೊಂದರ ಒಡಲಾಳದ ನೋವನ್ನು ರಂಗದ ಮೇಲೆ ಬಸಿದಿಟ್ಟಾಗ  ಬೆಚ್ಚಿ ಬೀಳುವಂತಾಯಿತು. ವಿಶೇಷವಾಗಿ ದಲಿತೇತರಲ್ಲಿ ಸಾಮಾಜಿಕ ಪ್ರಜ್ಞೆ, ಜವಾಬ್ದಾರಿಯನ್ನು ಬಡಿದೆಬ್ಬಿಸುವಂಥ ಕಥಾನಕವದು. "ಮಣೆಗಾರ" ಪ್ರೊಸಿನಿಯಂಗಿಂತ ಆಪ್ತರಂಗಭೂಮಿಗೆ ಸೂಕ್ತವಾದ ವಸ್ತು. ಪ್ರಯೋಗ ಒಟ್ಟಾರೆ ಮನುಷ್ಯ ಬದುಕಿನ ನಡುವಿರುವ ಗ್ರೇ ಏರಿಯಾವೊಂದರ ದರುಶನ ಮಾಡಿಸಿತು. ಮೇಲ್ವರ್ಗ ಸಹಮಾನವರನ್ನು ಅದು ಹೇಗೆ ಅಸ್ಪೃಶ್ಯರು ಎಂದು ದೂರಕ್ಕಿಟ್ಟಿತ್ತು, ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿತ್ತು ಎನ್ನುವುದು ಇದರ ಮೂಲ ಸಂಕಟ. ಇಡೀ ನಾಟಕದಲ್ಲಿ ಬದುಕಿಗಾಗೇ ಸಂಘರ್ಷವಿದೆ. ಆಹಾರಕ್ಕಾಗಿ ಹಾಹಾಕಾರವಿದೆ. socio-cultural  ನೆಲೆಯಲ್ಲಿ ದೊಡ್ಡ ಸಂಘರ್ಷವಿದೆ. ಇದು ರಾಜಕೀಯ ಆಯಾಮದಲ್ಲೂ ಬಹುಮುಖ್ಯವಾದ ಸಂಘರ್ಷವೇ. ಶಿಕ್ಷಣ...

ಕಲೆ ಮತ್ತು ನೈತಿಕತೆ

ಕಲಾವಿದನೊಬ್ಬನ ಕಲೆಯ ಬಗೆಗಿನ ಅನುರಾಗ, ಶ್ರದ್ಧೆ, ವಿಶ್ವಾಸಾರ್ಹತೆ ಮತ್ತು ಧ್ಯಾನ ಎಲ್ಲವೂ ಬದ್ಧತೆಯಿಂದ ಕೂಡಿರುತ್ತದೆ. ಅವನೊಳಗೇ ಒಂದು ಸ್ವರ್ಗ ಸಮಾನವಾದ ಜಗತ್ತೊಂದು ರೂಪುಗೊಂಡಿರುತ್ತದೆ. ಅದನ್ನು ಬೇಕಿದ್ದರೆ ಕಾವ್ಯದ  ಅಂತಃದೃಷ್ಟಿ, ಅಂತಃಪ್ರಜ್ಞೆ ಅಥವಾ ಅಂತಃ ಸೂಕ್ಷ್ಮತೆ ಅಂತ ಅನ್ನಿ. ಕಾವ್ಯ ಎಂದಾಕ್ಷಣ ಅಕ್ಷರಗಳ ಕಲಾಕೃತಿ ಅಲ್ಲ. ಕಾವ್ಯ ಅಥವಾ ಪೊಯಟ್ರಿ ಅನ್ನೋದು ಎಲ್ಲದರೊಳಗೂ ಇರುವ ಅವ್ಯಕ್ತ ಸೂಕ್ಷ್ಮ. ಅದನ್ನು ಅಭಿವ್ಯಕ್ತಿಸಲು ನಾವು ಕಂಡುಕೊಳ್ಳುವ ಮಾರ್ಗಗಳಲ್ಲಿ ಅಕ್ಷರ, ಶಬ್ದ, ಧ್ವನಿ, ಚಿತ್ರ, ಅಭಿನಯ.. ಎಲ್ಲವೂ ಒಂದು ಮಾಧ್ಯಮ. ಕಲಾವಿದ ಅಥವಾ ಕವಿ ತಾನು ಸೃಜಿಸಹೊರಟ ಕೃತಿಯಲ್ಲಿ ಇದೆಲ್ಲವನ್ನು ಪ್ರಯೋಗಕ್ಕೊಳಪಡಿಸಿ ಅದರ ಸಾರವನ್ನೇ ಅಭಿವ್ಯಕ್ತಿಯಲ್ಲಿ ಎರಕಹೊಯ್ಯುತ್ತಾನೆ. ಹಾಗಾದಾಗ ಆ ಕಲಾಕೃತಿಯಲ್ಲಿ ಧ್ವನಿಸುತ್ತಿರುವುದು ಅವನ ದೃಷ್ಟಿ, ಪ್ರಜ್ಞೆ, ತತ್ವ, ಅಭಿಪ್ರಾಯ ಆಗುತ್ತದೆ. ಇದಕ್ಕೂ ಮಿಗಿಲಾಗಿ ಅದು ಆತನ ಅನುಭಾವ ಪರಪಂಚವೇ ಆಗುತ್ತದೆ. ಪ್ರತಿನಿಧಿಸುವ ತತ್ವ ಅವನದೇ ಆಗಬಹುದು. ಅದಕ್ಕವನು ಬದ್ಧನೂ ಆಗಬಹುದು. ಇಲ್ಲವೇ ಅರಾಜಕತೆಯ ಹಾಗೊಂದು ಭಾವದಲ್ಲಿ ತನಗೂ ತನ್ನ ಕಲಾಕೃತಿಗೂ ಸಂಬಂಧವೇ ಇಲ್ಲ ಎಂದು ವಾದಿಸಬಹುದು. ಅರಾಜಕತೆಯಿಂದ ಕೂಡಿದ ಯಾವುದೂ ಬಹುಕಾಲ ಬಾಳಿ ಬದುಕುವಂಥದ್ದಲ್ಲ ಎನ್ನುವ ಎಚ್ಚರ ಕೂಡ ಮುಖ್ಯ.   ಮತ್ತೆ ಕಲಾವಿದನ ಅಭಿವ್ಯಕ್ತಿಯನ್ನು ಬರಿಯ ಸಾಂಸ್ಕೃತಿಕ ನೆಲೆಯಲ್ಲಿ ಮಾತ್ರ ಕಾಣಬೇಕಿಲ್ಲ. ಅದು ಸಮ...