ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ನಾರ್ವೆ ರಾಜಧಾನಿ ಒಸ್ಲೊ ನೆಲಕ್ಕಿಳಿದಾಗ...

ನಾರ್ವೆ ರಾಜಧಾನಿ ಒಸ್ಲೊಗೆ ಪ್ಯಾರಿಸ್ ನಿಂದ ಪಯಣ ಶುರುವಾಯ್ತು. ಈ ಸಲ ನನ್ನವ್ವನಿಗೆ ಕಿಟಕಿ ಇರುವ ಸೀಟು ಸಿಕ್ಕಿತು. ಫ್ಲೈಟ್ ಟೇಕಾಫ್ ಆಗುವ ಮಜಾ ಅವಳಿಗೆ ಮೊದಲ ಸಲ ಸಿಕ್ಕಿರಲಿಲ್ಲ. ಈ ಸಲ ಅವಳು ಥ್ರಿಲ್ ಆದಳು. ಭೂಮಿಯಿಂದ ಮೇಲಕ್ಕೆ ಹಾರುವ ಹಕ್ಕಿಯಂಥ ಅನುಭವ ಆಕೆಗೆ ಆಗಿರಲೇಬೇಕು. ಅಮ್ಮಾ! ಜಮೀನ್, ರಸ್ತಾ, ಘರ್ ಕಿತನೆ ಛೋಟೆ ಲಗ ರಹೇ ಹೈ, ವೋ ದೇಖೋ ಆಸ್ಮಾನ್, ಬಾದಲ್, ಸೂರಜ್... ಗಾಂವ್ ಮೇ ಉಡತಾ ಹುವಾ ಹವಾಯಿಜಹಾಜ್ ಸಿರ್ಫ್ ದೇಖತೆ ಥೇ, ಆಜ್ ಅಸಲಿ ಎಹಸಾಸ್ ಹುವಾ, ಹಮಾರಿ ಬೇಟಿ ಸಪನಾ ಸಚ್ ಕರ್ ದೀ...  ನನ್ನವ್ವನ ಮಾತುಗಳಿವು. ಭೂಮಿ, ಆಕಾಶ, ರಸ್ತೆ, ಮನೆ... ಎಲ್ಲ ಎಷ್ಟು ಸಣ್ಣ ಜಗತ್ತು! ಎಲ್ಲ ಅದೆಷ್ಟು ಹತ್ತಿರ! ನಮ್ಮೂರ ಆಕಾಶದಲ್ಲಿ ಹಾರುತ್ತಿದ್ದ ವಿಮಾನವನ್ನು ದೂರದಿಂದಲೇ ನೋಡಿ ದಂಗಾಗುತ್ತಿದ್ದೆವು... ಅದರಲ್ಲಿ ಹತ್ತುವ ಕನಸು ಮೂಡುತ್ತಿತ್ತು...  ಆ ಕನಸನ್ನು ಮಗಳು ಈಗ ನನಸು ಮಾಡಿಬಿಟ್ಟಳು... ಅವಳ ಕೈಗೆ ಕ್ಯಾಮೆರಾ ಕೊಟ್ಟೆ. ಸಂಕೋಚದಿಂದಲೇ ಕ್ಲಿಕ್ ಮಾಡಲೆತ್ನಿಸಿದಳು. ಅವಳು ತಡಕಾಡುತ್ತಿರುವುದನ್ನೆಲ್ಲ ಅವಳ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಯುರೋಪ್ ಹುಡುಗಿ ಗಮನಿಸಿ ನಗುತ್ತಿದ್ದಳು. ನನ್ನತ್ತ ನೋಡಿ ದೊಡ್ಡದಾಗಿ ನಕ್ಕಳು. ಮೈ ಮಾಮ್ ಎಂದೆ, ಯಾ ಐ ಕ್ಯಾನ್ ಅಂಡರಸ್ಟ್ಯಾಂಡ್ ಎಂದು ನಕ್ಕಳು. ನನ್ನವ್ವನನ್ನೇ ನೋಡುತ್ತಿದ್ದಳು, ಕಡೆಗೂ ಆಕೆ ಒಂದಷ್ಟು ಕ್ಲಿಕ್ಕಿಸಿದಳು... ಯಾ ಸೀ...

ಪ್ಯಾರಿಸ್ ತಲುಪಿದಾಗ...

ನಮ್ಮ ನೆಲದಿಂದ ಮತ್ತೊಂದು ನೆಲಕ್ಕೆ ನಮ್ಮೆಲ್ಲರನ್ನು ಸುರಕ್ಷಿತವಾಗಿ ತಂದಿಳಿಸಿದ ಏರ್ ಫ್ರಾನ್ಸ್ ವಿಮಾನ ಪ್ಯಾರಿಸ್ ನಿಲ್ದಾಣದಲ್ಲಿ... ಪ್ಯಾರಿಸ್ ವಿಮಾನ ನಿಲ್ದಾಣದಲ್ಲಿ ನನ್ನಮ್ಮನನ್ನು ವ್ಹೀಲ್ ಚೇರಿನಲ್ಲಿ ಕರೆತಂದು, ಅವಳ ಜತೆ ನಮ್ಮನ್ನೂ ಕನೆಕ್ಟಿಂಗ್ ಫ್ಲೈಟಿಗೆ ಸಾಗಿಸುತ್ತಿರುವ ಆಫ್ರಿಕನ್ ಯುವಕ ಮತ್ತು ಕಾರು ಓಡಿಸುತ್ತಿರುವ ಬಿಳಿ ಚೆಲುವೆ. ನನ್ನ ಅವ್ವ ಮತ್ತು ತಂಗಿಯ ಅತ್ತೆ, ಇಲ್ಲಿನ ಹೆಣ್ಣುಮಕ್ಕಳು ಭರ್ರನೇ ಕಾರು ಓಡಿಸುವದ ಕಂಡು ದಂಗಾಗಿದ್ದರು. ಆಕೆ ಭರ್ತಿ ಸ್ಪೀಡಿನಲ್ಲಿ ನಮ್ಮನ್ನು ಮುಂದಿನ ವಿಮಾನವಿರುವ ಟರ್ಮಿನಲ್ ಗೆ ಕರೆತಂದಳು. ಅಲ್ಲಿಗೆ ತಲುಪುತ್ತಿದ್ದಂತೆ ಆಕೆ ಹ್ಯಾಪಿ ಜರ್ನಿ ಎಂದಳು. ನಾನೊಂದು ಹೆಮ್ಮೆಯ ಸೆಲ್ಯುಟ್ ಹೇಳಿದೆ. ಆಕೆ ಸುಂದರ ಸ್ಮೈಲ್ ಕೊಟ್ಟಳು... ಪ್ಯಾರಿಸ್ ವಿಮಾನ ನಿಲ್ದಾಣದ ಸೊಬಗನ್ನು ಸವಿಯುತ್ತಿರುವ ನನ್ನವ್ವ ಮತ್ತು ತಂಗಿಯ ಅತ್ತೆ... ನಮ್ಮ ಮೆಜೆಸ್ಟಿಕ್ ನಲ್ಲಿ ಸಿಬಿಟಿ ಬಸ್ ಗಳ ಹಾಗೆ ಸಾಲಂಕೃತವಾಗಿ ನಿಂತ ಡೊಮೆಸ್ಟಿಕ್ ಫ್ಲೈಟ್ ಗಳು. ಪ್ಯಾರಿಸ್ ವಿಮಾನ ನಿಲ್ದಾಣದ ಡೊಮೆಸ್ಟಿಕ್ ಟರ್ಮಿನಲ್ ಗಳಲ್ಲಿ ಒಂದು ಟರ್ಮಿನಲ್ ಇದು. ಇಲ್ಲಿಂದಲೇ ನಾವು ಒಸ್ಲೊ ಗೆ ಪ್ರಯಾಣ ಬೆಳೆಸಿದ್ದು. ಇಲ್ಲೂ ನಾವು ಸರಿ ನಾಲ್ಕು ಗಂಟೆ ಕಾಯಬೇಕಾಗಿ ಬಂತು. ಇಡೀ ಟರ್ಮಿನಲ್ ಸುತ್ತು ಹಾಕಿ ಬಂದೆ. ಕೆಲವೆಡೆ ಫೊಟೊಗ್ರಾಫ್ ತೆಗೆದುಕೊಳ್ಳಲು ಅನುಮತಿ ಇರಲಿಲ್ಲ. ಇಲ್ಲಿನ ಶಾಪ್ ಗಳಲ್ಲೂ ಒಂದು ಸುತ್ತುಹಾಕಿ ಬಂದೆ. ಎಲ್ಲವೂ ...

ಸ್ಕಾಯಲಾರ್ಕ್ ಹಕ್ಕಿಯಂತಾಗಿದ್ದಳು ನನ್ನಮ್ಮಾ...

ಮೊದಲ ಬಾರಿಗೆ ಸ್ಕಾಯಲಾರ್ಕ್ ಹಕ್ಕಿಯಾಗಿದ್ದಳು ನನ್ನಮ್ಮಾ... ವಿಮಾನದ ಗುಂಯ್ ಗುಡುವ ಸದ್ದಿಗೆ, ಒಳಗಿನ ಚಳಿಗೆ, ತಣ್ಣನೆಯ ಟೀಗೆ, ಸಪ್ಪೆ ಊಟಕ್ಕೆ ಸುಸ್ತಾಗಿ ಹೋಗಿದ್ದಳು... ಮೊದಲ ಸಲ ಆಕಾಶಕ್ಕೆ ನೆಗೆದಾಗ ಅಮ್ಮಾ ಎಂದು ದಂಗಾದವಳು... ಮಗಳ ಕಾಣುವ ತವಕದಲ್ಲಿ ವಿಮಾನದ ಸಂಭ್ರಮವನ್ನೂ ಲೆಕ್ಕಿಸದವಳು.. ಮಗಳ ಮಡಿಲಲ್ಲಿ ಹೊಸ ಜೀವವೊಂದು ನಲಿದಾಡುವುದನ್ನು ಕಾಣುವ ಕನಸಲ್ಲಿ ಮುಳುಗಿಹೋದಾಕೆ... ಅಮ್ಮನನ್ನು ನೋಡಿದಾಗೆಲ್ಲ ಒಂದು ಮುಗ್ಧ ಮಗುವನ್ನು ನೋಡಿದ ಹಾಗೆನಿಸುತ್ತಿತ್ತು... ನಾನದರ ತಾಯಿ ಅನಿಸುತ್ತಿತ್ತು... ಇಬ್ಬರೂ ಮಕ್ಕಳಂತಾಗಿದ್ದರು. ಯಾವುದನ್ನೂ ತಿನ್ನದ ಮತ್ತು ಕುಡಿಯದ ಇಬ್ಬರಿಗೂ ಬರಿಯ ಬಿಸಿನೀರು ಮಾತ್ರ ಆಹಾರವಾಗಿತ್ತು. ಅದನ್ನು ನೀಡುತ್ತಿದ್ದ ಪರಂಗಿ ಹೆಣ್ಣುಗಳು ಮಾತ್ರ ಇವರಿಗೆ ಅಚ್ಚುಮೆಚ್ಚಾಗಿದ್ದರು. ಇವರನ್ನು ಕಂಡರೆ ಅವರಿಗೂ ಬಲು ಅಕ್ಕರೆ... ಅವರ ನಗೆ, ನಯ, ವಿನಯ, ವೈಯ್ಯಾರ ಇಬ್ಬರಿಗೂ ಇಷ್ಟವಾಗಿತ್ತು. ಇವರ ವೇಷಭೂಷಣ, ಮುಗ್ಧತೆ ಅವರಿಗೂ ಅಚ್ಚುಮೆಚ್ಚಾಗಿತ್ತು. ಕಂಡಾಗೆಲ್ಲ ತಲೆಬಾಗಿ ನಮಸ್ತೆ ಎನ್ನುತ್ತಿದ್ದುದು ಅಪ್ಯಾಯಮಾನವೆನಿಸುತ್ತಿತ್ತು.. ಕಿಟಕಿಯಿಂದ ತೂರಿ ಬಂದ ಬೆಳಕು ಇಬ್ಬರನ್ನು ಸುಸ್ತು ಮಾಡಿಹಾಕಿತ್ತು. ಪ್ಯಾರಿಸ್ ಬಂದಾಗಲೇ ಕಣ್ಣು ತೆರೆದದ್ದು... ಏರ್ ಫ್ರಾನ್ಸ್ ವಿಮಾನದ ಒಳನೋಟ... ವಿಮಾನದ ಕ್ಯಾಮೆರಾ ಭೂಮಿಯ ಚಿತ್ರಣ ಕಟ್ಟಿಕೊಡುತ್ತಿತ್ತು ... ವಿಮಾನ ಹಾರುವ ಸ್ಥಿತಿ ಗತಿ ಮುಂದಿನ ಸೀಟಿಗಂಟಿಸಿದ ಪರದೆ...

ಮೊದಲ ವಿದೇಶ ಪಯಣ ಆರಂಭದ ಕ್ಷಣಗಳು...

ನಾರ್ವೆ ದೇಶಕ್ಕೆ ಹೊರಡುವ ನನ್ನ ತಯಾರಿ ಏನ್ ಕೇಳ್ತಿರಾ... ಚಂದ್ರಲೋಕಕ್ಕೆ ರಾಕೇಶ್ ಶರ್ಮಾ ಹೊರಡುವಾಗಲೂ ಇಷ್ಟು ಚಡಪಡಿಕೆ, ಹಿಂಜರಿಕೆ ಅನುಭವಿಸಿರಲಿಕ್ಕಿಲ್ಲ! ಜತೆಯಲ್ಲಿ ಅಮ್ಮ ಮತ್ತು ನನ್ನ ತಂಗಿಯ ಅತ್ತೆ ಕೂಡ ಹೊರಡಲಿದ್ದರು. ಚಳಿಗಾಲದಲ್ಲಿ ಯುರೋಪ ಹೊರಟುನಿಂತ ನಮ್ಮ ಸಾಹಸಕ್ಕೆ ಗೆಳೆಯರೂ ಬೆಚ್ಚಿದ್ದರು. ಪಾಸಪೋರ್ಟ್ ತೆಗೆಯಿಸಿಕೊಳ್ಳುವುದಕ್ಕೂ ಹಿಂಜರಿದಿದ್ದ ನಾನು ವಿಸಾ, ಟಿಕೆಟ್ ಅಂತೆಲ್ಲಾ ಹೆಣಗಾಡುವುದನ್ನು ನೆನೆದರೆ ನನಗೇ ನಗು ಬರುತ್ತಿತ್ತು. ವಿಮಾನ ಹತ್ತುವ ಮುಂಚಿನ ಕೆಲ ಕ್ಷಣಗಳಿವು... ಎಷ್ಟೋ ವರ್ಷಗಳ ನಂತರ ನನ್ನ ಕೇಶರಾಶಿ ಅಂತೂ ಒಂದು ಸಲೂನಿನ ಕತ್ತರಿ ರುಚಿ ಕಂಡಿತು... ನವದೆಹಲಿಯಲ್ಲಿನ ನಾರ್ವೆ ಕಾನ್ಸುಲೇಟ್ ಆಫೀಸಿನಲ್ಲಿ ವೀಸಾ ಸ್ಟ್ಯಾಂಪ್ ಮಾಡಿಸಿಕೊಂಡು ಪಾಸಪೋರ್ಟ್ ಪಡೆದುಕೊಂಡ ಕ್ಷಣ... ಅಯ್ಯೋ ಅದೊಂದು ಅತ್ಯಂತ ಕಠಿಣ ಸಮಯ! ಯುರೋಪ ಚಳಿಗೆ ಇಲ್ಲಿಂದಲೇ ತಯಾರಿ! ಕನ್ನಡಿ ಮುಂದೆ ನನ್ನ ಮೇಲೆ ನಾನೇ ಜೋಕು ಮಾಡಿಕೊಂಡು ನಕ್ಕಿದ್ದೇ ನಕ್ಕಿದ್ದು. ವೈಯಕ್ತಿಕವಾಗಿ ನಾನೆಂದೂ ವಿದೇಶದ ಸೊಲ್ಲೆತ್ತಿದವನಲ್ಲ. ಈ ಹಿಂದೆ ಒಂದು ಸಾರಿ ಪ್ಯಾರಿಸ್ ಮತ್ತು ದುಬೈ ಹೋಗುವ ಬಗ್ಗೆ ಆಫೀಸಿನ ಮೇಲಧಿಕಾರಿಯಾಗಿದ್ದ ಆರ್ ಪಿ ಜಗದೀಶ್ ಆಹ್ವಾನ ನೀಡಿದಾಗ ಪಾಸಪೋರ್ಟ್ ಇಲ್ಲ ಎನ್ನುವ ನೆವ ಹೇಳಿ ಬಚಾವಾಗಿದ್ದೆ. ಹಾಗೂ ಬೈಸಿಕೊಂಡಿದ್ದೆ. ಈಗ ನಾನು ವಿದೇಶಕ್ಕೆ ತೆರಳಲೇಬೇಕಾದ ಪ್ರಸಂಗ ಬಂದೇಬಿಟ್ಟಿತು. ಜತೆಯಲ್ಲಿ ಹೋಗೋ...

ಜ್ಞಾನಪೀಠದ ಮೇಲೆ ಸಿರಿಸಂಪಿಗೆ!

ಸಿರಿಸಂಪಿಗೆ ನನ್ನ ಮೆಚ್ಚಿನ ನಾಟಕ. ಅದರ ದೀಪದಮೊಲ್ಲೆ ನನ್ನ ಮನಸಿನ ತುಂಬ ಕಾಡುವ ನಲ್ಲೆ! ನಾಟಕದ ಕರ್ತೃ ಮತ್ತು ಮಹಾಕವಿ ಕಂಬಾರರ ಜತೆ ಒಂದು ವಿಶೇಷ ಸಂದರ್ಭದಲ್ಲಿ ಅವರ ಹುಟ್ಟೂರಿಗೆ ಭೇಟಿ ಕೊಡುವ ಅವಕಾಶ ಒದಗಿಬಂದಿತ್ತು. ಅವರೊಂದಿಗೆ ಒಂದಿಡೀ ದಿನ ನಡೆಸಿದ ಮಾತುಕತೆ, ಅವರನ್ನು ಹತ್ತಿರದಿಂದ ಕಂಡ ರೀತಿ ಮತ್ತು ಅವರ ದೈವ ಪ್ರೀತಿಯ ಬಗ್ಗೆ ತುಂಬ ದಿನಗಳ ಹಿಂದೆ ಬರೆಯಬೇಕೆಂದುಕೊಂಡಿದ್ದೆ. ಆಗಲಿಲ್ಲ. ಅವರ ಹತ್ತಾರು ಚಿತ್ರಗಳನ್ನು ಸೆರೆಹಿಡಿದ ಮೊಬೈಲ್ ಕಳಕೊಂಡೆ ಹೀಗಾಗಿ ಅದನ್ನು ಇಲ್ಲಿ ದಾಖಲಿಸಲಾಗಲಿಲ್ಲ. ಅವರೊಂದಿಗಿನ ಸ್ವಾರಸ್ಯಕರ ಚರ್ಚೆಯೂ ಅದರಲ್ಲಿ ರೆಕಾರ್ಡ್ ಮಾಡಿದ್ದೆ. ತುಂಬ ಮುಖ್ಯವಾದ ದಾಖಲೆಯೇ ಕಾಣೆಯಾಗಿದ್ದು ನನ್ನಲ್ಲಿ ಮರೆಯದ ನೋವು. ಆ ಎರಡು ದಿನದಲ್ಲಿ ಅವರನ್ನು ಕಂಡ ಪರಿಯ ಬಗ್ಗೆ ಇಷ್ಟರಲ್ಲೇ ಇಲ್ಲಿ ಹಂಚಿಕೊಳ್ಳುತ್ತೇನೆ. ಅವರಿಗೆ ಜ್ಞಾನಪೀಠ ಪ್ರಶಸ್ತಿ ಬಂದಿದ್ದು ಖುಷಿಯ ಸಂಗತಿ. ಕಂಬಾರರಿಗೆ ಅಭಿನಂದನೆಗಳು.

ಸ್ವಾತಂತ್ರ್ಯ... ಶ್ರಮ ಯಾರದೋ, ಸಿರಿ ಯಾರಿಗೋ!

ನಾವು ಕಂಡೇ ಕಾಣುತ್ತೇವೆ...

ಕಾಲದ ಅನಂತತೆಯ ಸ್ಲೇಟಿನ ಮೇಲೆ ಬರೆದ ಶಾಶ್ವತ ಸತ್ಯಶಾಸನ ನಿಜವಾಗುವುದ ನಾವು ಕಂಡೇ ಕಾಣುತ್ತೇವೆ... ನಿರಂಕುಶ ಪ್ರಭುತ್ವದ ಅಪರಿಮಿತ ಮಹಾಪರ್ವತ ರೌದಿಯಾಗಿ ಹಾರಾಡುವುದನ್ನು, ಪ್ರಭುಗಳ ನೆತ್ತಿ ಮೇಲೆ ಸಿಡಿಲು ಅಪ್ಪಳಿಸುವುದನ್ನು ನಾವು ಕಂಡೇ ಕಾಣುತ್ತೇವೆ... ಎಲ್ಲ ಕಿರೀಟಗಳು, ಮುಕುಟಮಣಿಗಳು ಕಿತ್ತೆಸೆಯಲ್ಪಡುವುದನ್ನು, ದರ್ಪದ ಸಿಂಹಾಸನಗಳೆಲ್ಲ ಸಮಾಧಿ ಸೇರುವುದನ್ನು ನಾವು ಕಂಡೇ ಕಾಣುತ್ತೇವೆ... ಸುಳ್ಳಾಡುವ ಮುಸುಡಿಗಳು ಮರೆಯಾಗಿ ನಮ್ಮಂಥ ನಿರ್ಲಕ್ಷಿತ ಜೀವಂತ ಮುಖಗಳು ನಿರಾಕರಿಸಲ್ಪಟ್ಟ ಗದ್ದುಗೆಗಳನೇರುವುದನ್ನು ನಾವು ಕಂಡೇ ಕಾಣುತ್ತೇವೆ... ನಾನೂ ಇರುವೆನಿಲ್ಲಿ, ನೀವೂ ಇರುವಿರಿ ಇದೆಲ್ಲ ನಿಜವಾಗುವುದನ್ನು ನಾವು ಕಂಡೇ ಕಾಣುತ್ತೇವೆ... ಮೂಲ: ಫೈಜ್ ಅಹ್ಮದ್ ಫೈಜ್ ಕನ್ನಡಕ್ಕೆ: ದಿಲ್

ಭಾರತದ ರಾಜಕೀಯದಲ್ಲಿ ಹೆಣ್ಣು!

ನಮ್ಮ ದೇಶದಲ್ಲಿ ಗಂಡಸರಂತೆ ವರ್ತಿಸುವ ಹೆಣ್ಣುಮಕ್ಕಳನ್ನು "ಗಂಡೆದೆ" ಎಂದು ಮೆಚ್ಚಿಕೊಳ್ಳುತ್ತಾರೆ. ಇಂದಿರಾಗಾಂಧಿಯನ್ನು "ಕಾಂಗ್ರೆಸ್ಸಿನಲ್ಲಿರುವ ಏಕೈಕ ಗಂಡಸು" ಎಂದೇ ಬಣ್ಣಿಸಲಾಗುತ್ತಿತ್ತು. ಸುಂದರಿಯೂ, ದಿಟ್ಟೆಯೂ ಆಗಿದ್ದ ಇಂದಿರಾ ಆ ಕಾಲದ ಬಹುತೇಕ ಕಾಂಗ್ರೆಸ್ಸಿಗರಿಗೆ "ಆತ್ಮೀಯ ಮೇಡಂ" ಆಗಿದ್ದರು. ಗಂಡ ಫಿರೋಜ್ ಸಾವಿನ ನಂತರ ವಿಧವೆ ಎನ್ನುವ ಹಿಂಜರಿಕೆಗಳಿಂದ ಮುಕ್ತವಾಗಿದ್ದ ಇಂದಿರಾ, ಅಪ್ಪ ನೆಹರೂ ಹಬ್ಬಿಸಿಟ್ಟಿದ್ದ ಪಾಲಿಟಿಕ್ಸ್ ನಲ್ಲಿ ಬೆಳೆಯುವುದಕ್ಕೆ ಸಾಕಷ್ಟು ಅವಕಾಶದ ಅಂಗಳ ತೆರಕೊಂಡೇ ಇತ್ತು. ಅದನ್ನು ಅಷ್ಟೂ ತುಂಬಿಕೊಂಡ ಇಂದಿರಾ ತುಳುಕಿದರು. ಆಲದ ಮರದಂತೆ ಹಬ್ಬಿಕೊಂಡರು. ಪಕ್ಕದಲ್ಲಿ ಯಾವ ಬಳ್ಳಿಯೂ ಚಿಗುರೊಡೆಯದಂತೆ ನೋಡಿಕೊಂಡರು. ಚಾಣಾಕ್ಷತೆ, ನೆಹರೂ ಮಗಳೆನ್ನುವ ಟ್ಯಾಗಲೈನ್ ಮತ್ತು ಗಾಂಧಿ ಎನ್ನುವ ಹೆಸರಿನ ವಜನ್ನು ಇಂದಿರಾಗೆ ಪಕ್ಷ ರಾಜಕಾರಣದಲ್ಲಿ ಜಾಗ ಗಟ್ಟಿಗೊಳಿಸಿತ್ತು. ಆ ಕಾಲದ ಜನಸಾಮಾನ್ಯರಲ್ಲಿ ಆಕೆ ಹೆಂಗಸು, ಅದರಲ್ಲೂ ವಿಧವೆ ಎನ್ನುವ ಅನುಕಂಪ ಮನೆ-ಮನದ ಮಾತಾಗಿತ್ತು. ಆ ಸ್ನಿಗ್ಧ ಸೌಂದರ್ಯ, ನಿಲುವು ಕೂಡ ಸೆಳೆದಿತ್ತು. ಪ್ರಧಾನಿ ಪಟ್ಟದಲ್ಲಿ ಆಕೆ ವಿರಾಜಿಸುತ್ತಿದ್ದುದು ಹೇಗೆ ನೋಡಿದರೂ ಚಂದವಾಗೇ ಕಾಣಿಸುತ್ತಿತ್ತು. ದೇಶ ವಿದೇಶದ ಪ್ರಧಾನಿ, ರಾಷ್ಟ್ರಪತಿ, ರಾಯಭಾರಿಗಳಿಗೆಲ್ಲ ಹಸ್ತಲಾಘವ ನೀಡುತ್ತ ನಕ್ಕಳೆಂದರೆ ಸಾಕು ಇಡೀ ಭಾರತದ ಹೆಂಗಸರು ಪುಳಕಗೊಳ್ಳುತ್ತಿದ್ದರು. ಮತಗಟ್ಟ...

ಇದು ಹಕ್ಕಿನ ಹಬ್ಬ...

ಇದು ಹಕ್ಕಿನ ಹಬ್ಬ... ಗಣರಾಜ್ಯೋತ್ಸವದ ಶುಭಾಶಯಗಳು

ನಾ ತುಕಾರಾಂ ಅಲ್ಲ: ಇಳಿಹೊತ್ತಿನಲ್ಲಿ ಕಳೆದುಹೋದ ಕಾಲದ ಮೆಲುಕು

ನಾ ತುಕಾರಾಂ ಅಲ್ಲ ಮೂಲ: ಹೆರ್ಬ್ ಗಾರ್ಡನರ್ ಅವರ   ಐ ಯಾಮ್ ನಾಟ್ ರಾಪಪೋರ್ಟ್ ಕನ್ನಡಕ್ಕೆ:   ಸುರೇಂದ್ರನಾಥ್ ನಾಟಕ ಅಂದರೆ ಕೇವಲ ಸಂಭಾಷಣೆಯೇ? ಅಭಿನಯ ಅನ್ನೋದು ಕೂತಲ್ಲಿಂದಲೇ ಬರಿಯ ಕಾಗೆ ಹಾರಿಸೋದಾ? ಇಲ್ಲಿ ಎರಡು ಪಾತ್ರಗಳು ಹೆಚ್ಚಾಗಿ ಮಾಡೋದು ಇದನ್ನೇ. ಇಬ್ಬರೂ ಪ್ರತಿಭಾನ್ವಿತರು. ಒಬ್ಬರಂತೂ ಅಭಿನಯ ಪಯಣದಲ್ಲಿ ಅನೇಕ ಮೇರು ಕೃತಿಗಳ ಪ್ರಮುಖ ಪಾತ್ರಗಳನ್ನು ತುಂಬ ಸೊಗಸಾಗಿ ಅಭಿನಯಿಸಿದವರು. ಸಾಮಾನ್ಯವಾಗಿ 'ನಾ ತುಕಾರಾಂ ಅಲ್ಲ' ತರಹದ ನಾಟಕಗಳಲ್ಲಿ ವಸ್ತುವಿನ ಭಾವಸಾಂದ್ರತೆಯ ಹರವು ಅಷ್ಟು ವ್ಯಾಪಕವಾಗಿರೋದಿಲ್ಲ. ಒಂದು ಭಾವುಕ ನೆಲೆಯಲ್ಲಿ ಪ್ರೇಕ್ಷಕನಿಗೆ ಏನನ್ನೋ ನೆನಪಿಸಿಕೊಡುವ, ತಲುಪಿಸುವ ಸಣ್ಣ ಹಟಕ್ಕೆ ಇಂಥ ನಾಟಕಗಳು ಬೀಳೋದೇ ಹೆಚ್ಚು. ನಮ್ಮ ನಿಜಜೀವನದ ಅಂದರೆ ನಿತ್ಯಬದುಕಿನ ಬವಣೆಯ ಒಂದಿಷ್ಟು ಪಾಕ ಬಳಸಿಕೊಂಡು, ರಂಗದ ಮೇಲೆ ಅದನ್ನೆಲ್ಲ ಪಾತ್ರಗಳ ಮೂಲಕ ಹರಿಯಬಿಟ್ಟು ಪ್ರೇಕ್ಷಕರ ಮೆಚ್ಚುಗೆ, ಒಂದಷ್ಟು ಕಂಬನಿ, ಮರುಕತನ, ಚಪ್ಪಾಳೆಯನ್ನಷ್ಟೇ ನಿರೀಕ್ಷಿಸುವ ಇಂಥ ನಾಟಕಗಳಿಂದ ಅರಿವಿನ ವಿಸ್ತಾರವಾಗಲಿ, ಭಾವಸಂಘರ್ಷವನ್ನಾಗಲಿ ಅತ್ಯಂತ ಆಳವಾಗಿ ಅಥವಾ ದಟ್ಟವಾಗಿ ಅನುಭವಿಸಲು ಸಾಧ್ಯವಾಗುವುದಿಲ್ಲ. ಮೇಲ್ಪದರದಲ್ಲಿಯೇ ವಸ್ತು ಕ್ಷಣ ಕಾಲ ಕಾಡಿ ಮತ್ತೆ ಮರೆವಿಗೆ ಸಂದಾಯವಾಗಿಬಿಡುತ್ತದೆ. ಅನುಭವದ ಜತೆಗಿನ ಅನುಸಂಧಾನ ಪ್ರೇಕ್ಷಕರಿಗೆ ಅಷ್ಟು ಸಾಧ್ಯವಾಗುವುದಿಲ್ಲ. ಟಿಕೆಟ್ ಕೊಟ್ಟು ಇಂಥ ನಾಟಕಗಳನ್ನು ನೋಡುವುದಾದರ...